ಒಳ್ಳೇ ಆರೋಗ್ಯ ಎಲ್ಲರಿಗೂ ಬೇಕು!
ಒಳ್ಳೇ ಆರೋಗ್ಯ ಎಲ್ಲರಿಗೂ ಬೇಕು!
‘ಯಾವ ನಿವಾಸಿಯೂ ತಾನು ಅಸ್ವಸ್ಥನು ಎಂದು ಹೇಳನು.’ ಕಾಯಿಲೆಗಳಿಲ್ಲದಿರುವ ಇಂಥ ಒಂದು ಕಾಲ ಭವಿಷ್ಯದಲ್ಲಿ ಬರಲಿದೆಯೆಂದು ಒಬ್ಬ ಭವಿಷ್ಯವಾದಿ 2,700 ವರ್ಷಕ್ಕಿಂತಲೂ ಹಿಂದೆ ಹೇಳಿದನು. ಯೆಶಾಯನೆಂಬ ಆ ಭವಿಷ್ಯವಾದಿಯ ಪುರಾತನ ಬರಹಗಳಲ್ಲಿರುವ ಈ ಭವಿಷ್ಯವಾಣಿಯು ನಮ್ಮೀ ದಿನಗಳ ವರೆಗೆ ಸಂರಕ್ಷಿಸಿಡಲ್ಪಟ್ಟಿದೆ. ಅವನು ಇನ್ನೂ ಕೂಡಿಸಿ ಹೇಳಿದನು: “ಆಗ ಕುರುಡರ ಕಣ್ಣು ಕಾಣುವದು, ಕಿವುಡರ ಕಿವಿ ಕೇಳುವದು, ಕುಂಟನು ಜಿಂಕೆಯಂತೆ ಹಾರುವನು, ಮೂಕನ ನಾಲಿಗೆಯು ಹರ್ಷಧ್ವನಿಗೈಯುವದು.” (ಯೆಶಾಯ 33:24; 35:5, 6) ಬೈಬಲಿನ ಬೇರೆ ಭವಿಷ್ಯವಾಣಿಗಳು ಸಹ ಇಂಥ ಭವಿಷ್ಯದ ಕುರಿತಾಗಿ ಮಾತಾಡುತ್ತವೆ. ಉದಾಹರಣೆಗೆ, ಬೈಬಲಿನಲ್ಲಿರುವ ಕೊನೆ ಪುಸ್ತಕವಾದ ಪ್ರಕಟನೆಯು, ದೇವರು ನೋವನ್ನು ಸಂಪೂರ್ಣವಾಗಿ ನಿವಾರಿಸಿಬಿಡುವ ಒಂದು ಕಾಲದ ಬಗ್ಗೆ ವರ್ಣಿಸುತ್ತದೆ.—ಪ್ರಕಟನೆ 21:4.
ಆದರೆ ಕೊಡಲಾಗಿರುವ ಈ ಎಲ್ಲ ಭರವಸೆಯ ಮಾತುಗಳು ನಿಜವಾಗಿ ಸಂಭವಿಸುವವೊ? ಇಡೀ ಮಾನವಜಾತಿಯು ಒಳ್ಳೇ ಆರೋಗ್ಯದಿಂದಿದ್ದು, ಕಾಯಿಲೆಗಳು ಇನ್ನೆಂದಿಗೂ ಇಲ್ಲದಿರುವ ಕಾಲ ಎಂದಾದರೂ ಬರುವುದೊ? ಹಿಂದಿನ ತಲೆಮಾರುಗಳಿಗೆ ಹೋಲಿಸುವಾಗ ಇಂದು ಮಾನವಕುಲದ ಒಂದು ದೊಡ್ಡ ವಿಭಾಗಕ್ಕೆ ಸೇರಿದವರಿಗೆ ಉತ್ತಮ ಆರೋಗ್ಯವಿದೆ ಎಂಬುದು ಒಪ್ಪತಕ್ಕ ಮಾತು. ಆದರೆ ಈ ಉತ್ತಮ ಆರೋಗ್ಯವು, ಅತಿ ಉತ್ತಮವಾದ ಆರೋಗ್ಯವಾಗಿದೆ ಎಂದು ಹೇಳಲಾಗದು. ಈಗಲೂ ಅನೇಕರು ಕಾಯಿಲೆಗಳಿಂದ ನರಳುತ್ತಾರೆ. ಕಾಯಿಲೆಬೀಳುವ ಭಯವೇ, ಬಹಳ ಚಿಂತೆಯನ್ನು ಉಂಟುಮಾಡುತ್ತದೆ. ಅಲ್ಲದೆ ಈ ಆಧುನಿಕ ಯುಗದಲ್ಲೂ ದೈಹಿಕ ಹಾಗೂ ಮಾನಸಿಕ ಕಾಯಿಲೆಗಳ ದಾಳಿಯಿಂದ ಯಾರೂ ಸಂಪೂರ್ಣವಾಗಿ ತಪ್ಪಿಸಿಕೊಳ್ಳಲಾರರೆಂಬುದು ಒಂದು ಕಠೋರ ಸತ್ಯವಾಗಿದೆ!
ನೀವು ತೆರುವ ಬೆಲೆ
ಅನಾರೋಗ್ಯವು ಭಿನ್ನಭಿನ್ನ ಪರಿಣಾಮಗಳನ್ನು ಬೀರುತ್ತದೆ. ಇವುಗಳಲ್ಲಿ ಅತಿ ಹೆಚ್ಚಿನ ಚಿಂತೆಯನ್ನು ಹುಟ್ಟಿಸುವಂಥ ಒಂದು ಪರಿಣಾಮವೇನೆಂದರೆ, ಅನಾರೋಗ್ಯದ ಆರ್ಥಿಕ ವೆಚ್ಚವು ಗಗನಕ್ಕೇರುತ್ತಿದೆ. ದೃಷ್ಟಾಂತಕ್ಕಾಗಿ ಇತ್ತೀಚಿನ ಒಂದು ವರ್ಷದಲ್ಲಿ, ಅನಾರೋಗ್ಯದ ನಿಮಿತ್ತ ಯೂರೋಪ್ನಲ್ಲಿ ಅಸ್ವಸ್ಥತೆಯ ಕಾರಣ 50 ಕೋಟಿ ಜನರು ಕೆಲಸಕ್ಕೆ ರಜೆಹಾಕಿದರು. ಅದರ ಅರ್ಥ ಒಂದು ವರುಷದಲ್ಲಿ ಅಷ್ಟು ದಿನಗಳ ಕೆಲಸ ನಷ್ಟವಾಯಿತು. ಬೇರೆ ಕಡೆಗಳಲ್ಲೂ ಪರಿಸ್ಥಿತಿಯು ಹೀಗೆಯೇ ಇದೆ. ಈ ಕಾರಣದಿಂದ ಕೆಲಸದ ಸ್ಥಳದಲ್ಲಿ ಉಂಟಾಗುವ ಕಡಿಮೆ ಉತ್ಪಾದನೆ ಮತ್ತು ಆರೋಗ್ಯಾರೈಕೆಯ ಹೆಚ್ಚಾಗುತ್ತಿರುವ ವೆಚ್ಚವು ಎಲ್ಲರ ಮೇಲೆ ಒಂದು ಆರ್ಥಿಕ ಹೊರೆಯನ್ನು ತರುತ್ತದೆ. ವ್ಯಾಪಾರ ಸಂಸ್ಥೆಗಳಿಗೆ ಮಾತ್ರವಲ್ಲದೆ ಸರಕಾರಗಳಿಗೂ ಹಣನಷ್ಟವಾಗುತ್ತದೆ. ಈ ವೆಚ್ಚಗಳನ್ನು ಭರಿಸಲಿಕ್ಕಾಗಿ ವ್ಯಾಪಾರ ಸಂಸ್ಥೆಗಳು ತಮ್ಮ ಉತ್ಪನ್ನಗಳ ಬೆಲೆಯೇರಿಸುತ್ತವೆ ಮತ್ತು ಸರಕಾರಗಳು ತೆರಿಗೆಗಳನ್ನು ಹೆಚ್ಚಿಸುತ್ತವೆ. ಕಟ್ಟಕಡೆಗೆ ಇದಕ್ಕೆಲ್ಲ ಹಣಕೊಡುವವರು ಯಾರು? ನೀವೇ!
ದುಃಖದ ಸಂಗತಿಯೇನೆಂದರೆ ಅನೇಕ ದೇಶಗಳಲ್ಲಿ ಬಡಜನರು ಸಾಕಷ್ಟು ಉತ್ತಮ ಗುಣಮಟ್ಟದ ಚಿಕಿತ್ಸೆ ಪಡೆದುಕೊಳ್ಳುವುದು ಬಹಳ ಕಷ್ಟಕರವಾಗಿದೆ. ಇದು ವಿಶೇಷವಾಗಿ ಅಭಿವೃದ್ಧಿಶೀಲ ದೇಶಗಳಲ್ಲಿರುವ ಮಿಲ್ಯಾಂತರ ಜನರ ದುಃಖಕರ ಪಾಡಾಗಿದೆ. ಅವರಿಗೆ ವೃತ್ತಿಪರ ಆರೋಗ್ಯ ಸೇವಾ ಸೌಲಭ್ಯಗಳು ಮಿತವಾಗಿ ಲಭ್ಯವಿವೆ ಇಲ್ಲವೆ ಲಭ್ಯವೇ ಇಲ್ಲ. ಶ್ರೀಮಂತ ದೇಶಗಳಲ್ಲೂ, ಲಭ್ಯವಿರುವ ನಿಪುಣ ವೈದ್ಯಕೀಯ ಆರೈಕೆಯಿಂದ ಪ್ರಯೋಜನಪಡೆಯಲಿಕ್ಕಾಗಿ ಕೆಲವರು ಹೆಣಗಾಡಬೇಕಾಗುತ್ತದೆ. ಆರೋಗ್ಯ ವಿಮೆಯಿಲ್ಲದಿರುವ 4,60,00,000 ಅಮೆರಿಕನರಲ್ಲಿ ಹೆಚ್ಚಿನವರ ವಿಷಯದಲ್ಲಿ ಇದು ಸತ್ಯವಾಗಿದೆ.
ಅನಾರೋಗ್ಯವು ಕೇವಲ ಹಣಕಾಸಿನ ಹೊರೆಯಾಗಿರುವುದಿಲ್ಲ. ಒಂದು ಮರಣಾಂತಿಕ ರೋಗದಿಂದ ಅನುಭವಿಸಬೇಕಾದ ದೈಹಿಕ ಯಾತನೆ, ದೀರ್ಘಾವಧಿಯ ವರೆಗೆ ನೋವನ್ನು ಸಹಿಸಿಕೊಳ್ಳುವ ಸಂಕಟ, ಗಂಭೀರ ರೀತಿಯಲ್ಲಿ ಕಾಯಿಲೆಬಿದ್ದಿರುವವರನ್ನು ನೋಡುವ ದುಃಖ ಮತ್ತು ಒಬ್ಬ ಪ್ರಿಯ ವ್ಯಕ್ತಿ ಕಾಯಿಲೆಗೆ ಬಲಿಯಾಗಿ ಸಾವನ್ನಪ್ಪುವುದನ್ನು ನೋಡುವಾಗ ಉಂಟಾಗುವ ಹತಾಶಭಾವನೆ—ಇವೆಲ್ಲವೂ ನಾವು ಕಟ್ಟಕಡೆಗೆ ತೆರುವ ಬೆಲೆಯಾಗಿದೆ.
ಎಲ್ಲರೂ ಒಳ್ಳೇ ಆರೋಗ್ಯವನ್ನು ಬಯಸುವುದರಿಂದ ಕಾಯಿಲೆಗಳಿಲ್ಲದ ಲೋಕವೊಂದರಲ್ಲಿ ಬದುಕುವ ನಿರೀಕ್ಷೆಯು ಮನಸ್ಸಿಗೆ ತುಂಬ ಹಿಡಿಸುತ್ತದೆ. ಈ ನಿರೀಕ್ಷೆಯು ನಂಬಲಸಾಧ್ಯವೆಂದು ತೋರಬಹುದು, ಆದರೆ ಅದು ನಿಜವೆಂದು ಅನೇಕರು ನಂಬುತ್ತಾರೆ. ಸಕಾಲದಲ್ಲಿ ಮಾನವ ತಂತ್ರಜ್ಞಾನದಿಂದಲೇ ಎಲ್ಲ ರೋಗರುಜಿನಗಳು ನಿರ್ಮೂಲವಾಗುವವೆಂಬ ಪೂರ್ಣ ಖಾತ್ರಿ ಕೆಲವರಿಗಿದೆ. ಇನ್ನೊಂದು ಬದಿಯಲ್ಲಿ ಬೈಬಲ್ನಲ್ಲಿ ಭರವಸೆಯಿಡುವವರು, ದೇವರು ಮಾತ್ರವೇ ಕಾಯಿಲೆಗಳಿಲ್ಲದ ಲೋಕದ ಕುರಿತಾದ ಪ್ರಾಚೀನ ಭವಿಷ್ಯವಾಣಿಗಳನ್ನು ನೆರವೇರಿಸುವನು ಎಂದು ನಂಬುತ್ತಾರೆ. ಹಾಗಾದರೆ, ಭವಿಷ್ಯದಲ್ಲಿ ಕಾಯಿಲೆಗಳಿಲ್ಲದ ಕಾಲವನ್ನು ಯಾರು ತರುವರು? ಮನುಷ್ಯರೊ? ದೇವರೊ? (g 1/07)