ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿದ್ರಿಸುತ್ತಿರುವ ದೈತ್ಯನ ನೆರಳಿನಲ್ಲಿ ವಾಸ

ನಿದ್ರಿಸುತ್ತಿರುವ ದೈತ್ಯನ ನೆರಳಿನಲ್ಲಿ ವಾಸ

ನಿದ್ರಿಸುತ್ತಿರುವ ದೈತ್ಯನ ನೆರಳಿನಲ್ಲಿ ವಾಸ

ಜ್ವಾಲಾಮುಖಿಗಳು ಯಾವಾಗಲೂ ರಹಸ್ಯಗಳ ಆಕರವಾಗಿದ್ದಿರುತ್ತವೆ. ದೈತ್ಯರಂತಿರುವ ಅವು ಶತಮಾನಗಳ ವರೆಗೆ ನಿದ್ರಿಸಿ, ಒಂದು ದಿನ ಥಟ್ಟನೆ ಏಳಬಹುದು. ಹೀಗಾಗುವಾಗ ಅದೊಂದು ಪ್ರೇಕ್ಷಣೀಯ ದೃಶ್ಯವಾಗಿರುತ್ತದೆ ಆದರೆ ಅದೇ ಸಮಯದಲ್ಲಿ ಮಾರಕವೂ ಆಗಿರುತ್ತದೆ. ಜ್ವಾಲಾಮುಖಿಯೊಂದರ ಸ್ಫೋಟವು ಕೆಲವೇ ನಿಮಿಷಗಳಲ್ಲಿ ಅದರ ಸುತ್ತಲಿರುವ ಪ್ರದೇಶವನ್ನು ಧ್ವಂಸಮಾಡಿ ಜೀವನಷ್ಟವನ್ನೂ ಉಂಟುಮಾಡುತ್ತದೆ.

ಜ್ವಾಲಾಮುಖಿಗಳು ಅಪಾಯಕಾರಿಯೆಂಬುದನ್ನು ಯಾರೂ ಅಲ್ಲಗಳೆಯರು. ಅವು ಕಳೆದ ಕೇವಲ ಮೂರು ಶತಮಾನಗಳಲ್ಲೇ ಲಕ್ಷಾಂತರ ಜೀವಗಳನ್ನು ಬಲಿತೆಗೆದುಕೊಂಡಿವೆ. ನಮ್ಮಲ್ಲಿ ಹೆಚ್ಚಿನವರು ನಿದ್ರಿಸುತ್ತಿರುವ ಈ ದೈತ್ಯರಿಂದ ದೂರವಾಗಿ ಸುರಕ್ಷಿತವಾದ ಸ್ಥಳದಲ್ಲಿ ಜೀವಿಸುತ್ತಿದ್ದೇವೆ ನಿಜ. ಆದರೆ, ಜಗತ್ತಿನ ಕೋಟ್ಯಾಂತರ ಜನರು ಜಾಗೃತ ಜ್ವಾಲಾಮುಖಿಗಳ ಹತ್ತಿರ ಜೀವಿಸುತ್ತಾರೆ. ಉದಾಹರಣೆಗಾಗಿ, ಎಕ್ವಡಾರ್‌ನ ರಾಜಧಾನಿಯಾಗಿರುವ ಕೀಟೋ ನಗರವನ್ನೇ ತೆಗೆದುಕೊಳ್ಳಿ. ಅದು ಪೀಚೀಂಚಾ ಎಂಬ ಜ್ವಾಲಾಮುಖಿ ಪ್ರದೇಶದಿಂದ ಸ್ವಲ್ಪವೇ ದೂರದಲ್ಲಿದೆ. ಈ ಜ್ವಾಲಾಮುಖಿಯು ನಗರದ ವಾಯುವ್ಯ ದಿಕ್ಕಿನಲ್ಲಿದೆ. ಪೋಪೋಕ್ಯಾಟಪೆಟ್ಲ್‌ ಎಂಬ ಅಗ್ನಿಪರ್ವತವು ಮೆಕ್ಸಿಕೋ ನಗರದಿಂದ ಸುಮಾರು 60 ಕಿಲೋಮೀಟರ್‌ ದೂರದಲ್ಲಿದೆ. ಆಸ್‌ಟೆಕ್‌ ಭಾಷೆಯಲ್ಲಿ ಪೊಪೊಕ್ಯಾಟಿಪೆಟ್ಲ್‌ ಎಂಬ ಹೆಸರಿನ ಅರ್ಥ “ಹೊಗೆಯಾಡುತ್ತಿರುವ ಪರ್ವತ” ಎಂದಾಗಿದೆ. ನ್ಯೂಸೀಲೆಂಡ್‌ನ ಆಕ್‌ಲೆಂಡ್‌ ಮತ್ತು ಇಟಲಿಯ ನೇಪ್‌ಲ್ಸ್‌ ಎಂಬ ದೊಡ್ಡ ದೊಡ್ಡ ನಗರಗಳು ಜ್ವಾಲಾಮುಖಿಗಳ ತಪ್ಪಲುಗಳಲ್ಲಿವೆ. ಒಟ್ಟಿನಲ್ಲಿ ಮಿಲ್ಯಾಂತರ ಜನರು, ನಿದ್ರಿಸುತ್ತಿರುವ ದೈತ್ಯನು ಮತ್ತೆ ಎದ್ದೇಳುವಂಥ ಅಂದರೆ ನೆಲದಡಿಯಲ್ಲಿರುವ ಶಕ್ತಿಗಳು ಭಯಂಕರ ಸದ್ದಿನೊಂದಿಗೆ ಸ್ಫೋಟಗೊಳ್ಳುವಂಥ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ.

ಒಬ್ಬ ಅಪಾಯಕಾರಿ ದೈತ್ಯ

ನೇಪ್‌ಲ್ಸ್‌ ಪ್ರದೇಶದ ನಿವಾಸಿಗಳು ಸುಮಾರು 3,000 ವರ್ಷಗಳಿಂದ ವೆಸೂವೀಯಸ್‌ ಪರ್ವತದ ಹತ್ತಿರ ವಾಸಿಸುತ್ತಿದ್ದಾರೆ. ಈ ಪರ್ವತವು ನೇಪ್‌ಲ್ಸ್‌ನಿಂದ ಕೇವಲ 11 ಕಿಲೋಮೀಟರ್‌ ದೂರದಲ್ಲಿದೆ. ನಿಜ ಹೇಳಬೇಕಾದರೆ ಇದು ಸಾಮಾ ಎಂಬ ಪುರಾತನ ಪರ್ವತದ ಸುತ್ತು ಅಂಚಿನೊಳಗಿರುವ ಶಂಕುವಿನಾಕಾರದ ಪರ್ವತವಾಗಿದೆ. ಲೋಕದಲ್ಲೇ ತುಂಬ ಅಪಾಯಕಾರಿ ಜ್ವಾಲಾಮುಖಿಗಳ ಪಟ್ಟಿಯಲ್ಲಿ ವೆಸೂವೀಯಸ್‌ ಕೂಡ ಸೇರಿದೆ. ಈ ಪರ್ವತವು ನಾವು ನೋಡಸಾಧ್ಯವಿರುವುದಕ್ಕಿಂತ ದೊಡ್ಡದಾಗಿದೆ. ಆದರೆ ಅದರ ತಳಭಾಗವು ಸಮುದ್ರಮಟ್ಟಕ್ಕಿಂತ ಕೆಳಗಿರುವುದರಿಂದ ಅದನ್ನು ಸಂಪೂರ್ಣವಾಗಿ ಕಾಣಸಾಧ್ಯವಿಲ್ಲ.

ವೆಸೂವೀಯಸ್‌ ಪರ್ವತಕ್ಕೆ ಜ್ವಾಲಾಮುಖಿ ಚಿಮ್ಮುವಿಕೆಗಳ ಒಂದು ಉದ್ದ ಚರಿತ್ರೆ ಇದೆ. ಇದು ಸಾ.ಶ. 79ರಲ್ಲಿ ಸ್ಫೋಟಿಸಿ ಪಾಂಪೇ ಮತ್ತು ಹರ್ಕ್ಯಲೇನ್ಯಮ್‌ ನಗರಗಳನ್ನೇ ನೆಲಸಮಮಾಡಿದ್ದಕ್ಕೆ ಹೆಸರುವಾಸಿಯಾಗಿದೆ. ಅಂದಿನಿಂದ ಹಿಡಿದು ಇದು 50ಕ್ಕಿಂತಲೂ ಹೆಚ್ಚು ಬಾರಿ ಸ್ಫೋಟಿಸಿದೆ. ಇಸವಿ 1631ರಲ್ಲಿ ಸಂಭವಿಸಿದ ಧ್ವಂಸಕಾರಿ ಸ್ಫೋಟದಿಂದಾಗಿ ಸುಮಾರು 4,000 ಜನರು ಮೃತಪಟ್ಟರು. ಆ ಸಮಯದಲ್ಲೇ “ಲಾವಾ” ಎಂಬ ಶಬ್ದವು ಪ್ರಯೋಗಕ್ಕೆ ಬಂತು. ಈ ಶಬ್ದವು ಲ್ಯಾಟಿನ್‌ ಭಾಷೆಯ ಲಾಬಿ ಎಂಬ ಪದದಿಂದ ಬಂದಿದೆ ಮತ್ತು ಇದರ ಅರ್ಥ “ಜಾರಿಕೊಂಡು ಹೋಗು” ಎಂದಾಗಿದೆ. ಇದು, ಲಾವಾರಸವು ವೆಸೂವೀಯಸ್‌ನ ಇಳಿಜಾರುಗಳಲ್ಲಿ ಹರಿಯುವ ರೀತಿಯನ್ನು ಸೂಕ್ತವಾಗಿಯೇ ವರ್ಣಿಸುತ್ತದೆ.

ಶತಮಾನಗಳಾದ್ಯಂತ ವೆಸೂವೀಯಸ್‌ ಪರ್ವತವು ನಿರಂತರವಾಗಿ ಲಾವಾರಸವನ್ನು ಕಾರುತ್ತಾ ಇದೆ. ಈ ಪರ್ವತವು 1944ರಲ್ಲಿ, IIನೇ ಲೋಕ ಯುದ್ಧದ ಸಮಯದಲ್ಲಿ ಸಿಡಿದು ಮಿತ್ರರಾಷ್ಟ್ರಗಳ ಸೈನ್ಯಗಳನ್ನು ಬೂದಿಯ ಸುರಿಮಳೆಯೊಂದಿಗೆ ಸ್ವಾಗತಿಸಿತು. ಆ ಸಮಯದಲ್ಲಿ ಹತ್ತಿರದ ಮಾಸಾ ಹಾಗೂ ಸಾನ್‌ಸೇಬಾಸ್ಟ್ಯಾನೋ ಪಟ್ಟಣಗಳು ಮತ್ತು “ಫೂನೀಕೂಲೀ, ಫೂನೀಕೂಲಾ” ಎಂಬ ಇಟಲಿಯ ಜನಪದ ಗೀತೆಯಿಂದಾಗಿ ಪ್ರಸಿದ್ಧವಾದಂತಹ ಪರ್ವತ ಪ್ರದೇಶದಲ್ಲಿರುವ ಫುನಿಕ್ಯುಲರ್‌ (ಹಗ್ಗದ) ರೈಲ್‌ ಬಂಡಿಗಳು ಸಹ ಬೂದಿಯಿಂದ ಆವರಿಸಲ್ಪಟ್ಟಿದ್ದವು.

ಇಂದು ನೇಪ್‌ಲ್ಸ್‌ನಲ್ಲಿ ಜೀವಿಸುತ್ತಿರುವ ಜನರು ತಮಗೆ ತೀರ ಹತ್ತಿರದಲ್ಲಿರುವ ಈ ಆಪತ್ತನ್ನು ಅಲಕ್ಷಿಸಿ ಜೀವನ ನಡೆಸುತ್ತಿದ್ದಾರೆಂಬಂತೆ ತೋರುತ್ತದೆ. ಅಲ್ಲಿನ ವಾಸ್ತುಶಿಲ್ಪ ಮತ್ತು ಐತಿಹಾಸಿಕ ಕಟ್ಟಡಗಳನ್ನು ಕಂಡು ಪ್ರವಾಸಿಗರು ವಿಸ್ಮಯಗೊಳ್ಳುತ್ತಾರೆ. ಅಂಗಡಿಗಳು ಮತ್ತು ಕೆಫೆಗಳಲ್ಲಿ ಜನಜಂಗುಳಿಯಿರುತ್ತದೆ ಮತ್ತು ನೇಪ್‌ಲ್ಸ್‌ನ ಕೊಲ್ಲಿಯಲ್ಲಿ ಬಿಳೀ ಚುಕ್ಕೆಗಳಂತೆ ತೋರುವ ಹಲವಾರು ದೋಣಿಗಳಿರುತ್ತವೆ. ವೆಸೂವೀಯಸ್‌ ಪರ್ವತ ತಾನೇ ಒಂದು ಜನಪ್ರಿಯ ಆಕರ್ಷಕ ತಾಣವಾಗಿದ್ದು, ಜನರು ಅದನ್ನು ನಿದ್ರಿಸುತ್ತಿರುವ ಒಂದು ಅಪಾಯಕಾರಿ ದೈತ್ಯನಾಗಿ ದೃಷ್ಟಿಸುವ ಬದಲು ಒಂದು ಸ್ನೇಹಿತನಾಗಿ ದೃಷ್ಟಿಸುತ್ತಾರೆ.

ಆಕ್‌ಲ್ಯಾಂಡ್‌​—⁠ಜ್ವಾಲಾಮುಖಿಗಳ ನಗರ

ನ್ಯೂಸೀಲೆಂಡ್‌ ದೇಶದ ಆಕ್‌ಲ್ಯಾಂಡ್‌ ಎಂಬ ಬಂದರು ನಗರದಾದ್ಯಂತ ಶಂಕುವಿನಾಕಾರದ ಅನೇಕ ಚಿಕ್ಕಚಿಕ್ಕ ಜ್ವಾಲಾಮುಖಿಗಳಿವೆ. ಸುಮಾರು 48 ಚಿಕ್ಕ ಜ್ವಾಲಾಮುಖಿಗಳಿರುವ ಈ ಪ್ರದೇಶದಲ್ಲಿ ಹತ್ತು ಲಕ್ಷಕ್ಕಿಂತಲೂ ಹೆಚ್ಚಿನ ಜನರು ವಾಸಿಸುತ್ತಿದ್ದಾರೆ. ಹಿಂದಿನ ಕಾಲದಲ್ಲಿ ಜ್ವಾಲಾಮುಖಿಗಳ ಚಟುವಟಿಕೆಯಿಂದಾಗಿ ತಗ್ಗುಗಳು ಉಂಟಾದವು, ಈ ತಗ್ಗುಗಳಿಂದಾಗಿ ಎರಡು ನೈಸರ್ಗಿಕ ಬಂದರು ಪ್ರದೇಶಗಳು ಉಂಟಾಗಿವೆ ಮತ್ತು ದ್ವೀಪಗಳು ಉದ್ಭವಿಸಿವೆ. ಈ ದ್ವೀಪಗಳಲ್ಲಿ 600 ವರ್ಷ ಹಿಂದೆ ಹುಟ್ಟಿಕೊಂಡ ರಾಂಗಿಟೋಟೋ ದ್ವೀಪ ಹೆಚ್ಚು ಗೋಚರವಾಗುತ್ತದೆ. ಏಕೆಂದರೆ ಅದು ಸಮುದ್ರದ ನೀರಿನಿಂದ ಮೇಲಕ್ಕೆ ತಲೆಯೆತ್ತಿ ನಿಂತಿದೆ ಮತ್ತು ಅದರ ಆಕಾರರೇಖೆ ವೆಸೂವೀಯಸ್‌ ಪರ್ವತದಂತಿದೆ. ಈ ದ್ವೀಪವು ಹುಟ್ಟಿದಾಗ, ಹತ್ತಿರವಿದ್ದ ಒಂದು ಮಓರಿ ಗ್ರಾಮವು ಬೂದಿಯಿಂದ ಮುಚ್ಚಿಹೋಯಿತು.

ಆಕ್‌ಲ್ಯಾಂಡ್‌ ವಾಸಿಗಳು ಜ್ವಾಲಾಮುಖಿಗಳೊಂದಿಗೆ ಜೀವಿಸಲು ಕಲಿತುಕೊಂಡಿದ್ದಾರೆ. ಮೌನ್‌ಗಾಕೀಕೀ ಎಂಬ ಜ್ವಾಲಾಮುಖಿಯು ಇಂದು ಆಕ್‌ಲ್ಯಾಂಡ್‌ ನಗರದ ಮಧ್ಯದಲ್ಲಿದ್ದು, ಸಾರ್ವಜನಿಕ ಉದ್ಯಾನವಾಗಿದೆ ಮತ್ತು ಕುರಿಪಾಲನಾ ಕೇಂದ್ರವಾಗಿದೆ. ಕೆಲವು ಜ್ವಾಲಾಮುಖಿಗಳು ಈಗ ಸರೋವರಗಳು, ಉದ್ಯಾನಗಳು ಅಥವಾ ಆಟದ ಮೈದಾನಗಳಾಗಿವೆ. ಅವುಗಳಲ್ಲೊಂದು ಸ್ಮಶಾನ ಭೂಮಿಯೂ ಆಗಿದೆ. ಸುತ್ತಲಿನ ಮನಮೋಹಕ ದೃಶ್ಯಗಳನ್ನು ನೋಡಲಿಕ್ಕಾಗಿ ಅನೇಕರು ಜ್ವಾಲಾಮುಖಿಗಳ ಇಳಿಜಾರು ಪ್ರದೇಶಗಳಲ್ಲಿ ಜೀವಿಸುತ್ತಾರೆ.

ಮೊತ್ತಮೊದಲು ಮಓರಿ ಜನರು ಮತ್ತು ತದನಂತರ ಅಂದರೆ 180 ವರ್ಷಗಳಿಗೆ ಹಿಂದೆ ಯೂರೋಪಿಯನರು ಆಕ್‌ಲ್ಯಾಂಡ್‌ನಲ್ಲಿ ನೆಲೆಯೂರಲು ಪ್ರಾರಂಭಿಸಿದಾಗ ಆ ಪ್ರದೇಶದಲ್ಲಿ ಜ್ವಾಲಾಮುಖಿಗಳು ಸ್ಫೋಟಿಸುವವು ಎಂಬುದರ ಬಗ್ಗೆ ಅವರು ಹೆಚ್ಚು ಯೋಚಿಸಿರಲಿಕ್ಕಿಲ್ಲ. ಆ ಪ್ರದೇಶವು ತಮಗೆ ಲಭ್ಯವಿದೆ, ಸಮುದ್ರಕ್ಕೆ ಹತ್ತಿರದಲ್ಲಿದೆ ಮತ್ತು ಫಲವತ್ತಾಗಿದೆ ಎಂಬುದನ್ನು ಮಾತ್ರ ನೋಡಿದರು. ಲೋಕದ ಇನ್ನಿತರ ಭಾಗಗಳಲ್ಲಿ ಸಹ ಜ್ವಾಲಾಮುಖಿಗಳಿಂದಾಗಿ ಭೂಮಿ ಫಲವತ್ತಾಗಿರುವುದನ್ನು ನಾವು ನೋಡಬಹುದು. ಉದಾಹರಣೆಗೆ ಇಂಡೋನೇಶ್ಯಾದಲ್ಲಿ, ಚೆನ್ನಾಗಿ ಬತ್ತ ಬೆಳೆಯುವ ಹೊಲಗದ್ದೆಗಳಲ್ಲಿ ಕೆಲವೊಂದು ಹೊಲಗದ್ದೆಗಳು ಜಾಗೃತ ಜ್ವಾಲಾಮುಖಿಗಳ ಸುತ್ತಮುತ್ತಲಿವೆ. ಪಶ್ಚಿಮ ಅಮೆರಿಕದ ಅತ್ಯುತ್ತಮವಾದ ವ್ಯವಸಾಯ ಕ್ಷೇತ್ರಗಳಲ್ಲಿರುವ ಮಣ್ಣು ಹೆಚ್ಚಾಗಿ ಈ ರೀತಿಯ ಜ್ವಾಲಾಮುಖಿಗಳಿಂದ ಬಂದಿದೆ. ಸೂಕ್ತವಾದ ಸನ್ನಿವೇಶಗಳಿರುವಲ್ಲಿ, ಲಾವಾರಸದಿಂದ ಮುಚ್ಚಲ್ಪಟ್ಟ ಪ್ರದೇಶದಲ್ಲಿ ಸಸ್ಯಗಳು ಬೆಳೆಯಬಲ್ಲವು. ಇದು, ಸ್ಫೋಟ ಸಂಭವಿಸಿದ ಒಂದು ವರ್ಷದೊಳಗೆ ಆಗಬಲ್ಲದು.

ಮುನ್ನೆಚ್ಚರಿಕೆಯ ವ್ಯವಸ್ಥೆಗಳು

‘ಜ್ವಾಲಾಮುಖಿಯ ಹತ್ತಿರದಲ್ಲಿ ಜೀವಿಸುವುದು ಅಪಾಯಕರವಲ್ಲವೇ?’ ಎಂದು ಅನೇಕರು ಕೇಳಬಹುದು. ಖಂಡಿತವಾಗಿಯೂ ಇದಕ್ಕೆ ಉತ್ತರವು ಹೌದು. ಆದರೆ ವಿಜ್ಞಾನಿಗಳು ಭೂಕಂಪ ಮತ್ತು ಜ್ವಾಲಾಮುಖಿ ಚಟುವಟಿಕೆಯನ್ನು ಈಗ ಸೂಕ್ಷ್ಮವಾಗಿ ಗಮನಿಸಲು ಶಕ್ತರಾಗಿದ್ದಾರೆ. ಉದಾಹರಣೆಗೆ, ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ ವಿಭಾಗದವರು ನೇಪ್‌ಲ್ಸ್‌ ಮತ್ತು ಆಕ್‌ಲ್ಯಾಂಡ್‌ನ (ಇಲ್ಲಿ ತುರ್ತು ಪರಿಸ್ಥಿತಿಗಾಗಿ ಈಗಾಗಲೇ ಯೋಜನೆಗಳನ್ನು ಮಾಡಲಾಗಿದೆ) ಸಮೇತ ಲೋಕದಾದ್ಯಂತವಿರುವ ಜಾಗೃತ ಜ್ವಾಲಾಮುಖಿಗಳನ್ನು ಗಮನಿಸುತ್ತಿರುತ್ತಾರೆ. 24 ತಾಸು ಕಾರ್ಯಮಾಡುವ ಗ್ಲೋಬಲ್‌ ಪೊಸಿಷನಿಂಗ್‌ ಸಿಸ್ಟಮ್‌ (G P S) ಉಪಗ್ರಹಗಳು ಮತ್ತು ಭೂಕಂಪ ಮಾಪಕಗಳ ಜಾಲಗಳನ್ನು ಬಳಸುತ್ತಾ ವಿಜ್ಞಾನಿಗಳು ಶಿಲಾದ್ರವಗಳ ಮತ್ತು ಭೂಗರ್ಭದಲ್ಲಿನ ಚಲನವಲನಗಳನ್ನು ಪತ್ತೆಹಚ್ಚಬಲ್ಲರು.

ವೆಸೂವೀಯಸ್‌ ಸದಾ ಕಣ್ಗಾವಲಿನಲ್ಲಿರುವ ಪ್ರದೇಶವಾಗಿದೆ. 1631ರಲ್ಲಿ ನಡೆದಂಥ ದೊಡ್ಡ ಪ್ರಮಾಣದ ಸ್ಫೋಟವು ಪುನಃ ಸಂಭವಿಸುವಲ್ಲಿ ಅದನ್ನು ನಿಭಾಯಿಸುವ ಸಲುವಾಗಿ ಇಟಲಿಯ ಅಧಿಕಾರಿಗಳು ತುರ್ತು ಪರಿಸ್ಥಿತಿಯ ಯೋಜನೆಗಳನ್ನು ಈಗಾಗಲೇ ಮಾಡಿದ್ದಾರೆ. ಇವು ಜನರನ್ನು ಅಪಾಯದಿಂದ ತಪ್ಪಿಸಲಿಕ್ಕಾಗಿ ಅವರು ತೆಗೆದುಕೊಂಡಿರುವ ಹೆಚ್ಚಿನ ಮುಂಜಾಗ್ರತಾ ಕ್ರಮಗಳಾಗಿವೆ. ತುಂಬ ಅಪಾಯಕರ ಸ್ಥಳಗಳಲ್ಲಿ ಜೀವಿಸುವ ಜನರನ್ನು ಸ್ಫೋಟ ಸಂಭವಿಸುವುದಕ್ಕೆ ಮುಂಚೆಯೇ ಎಚ್ಚರಿಸಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಸಾಧ್ಯವಿದೆ ಎಂದು ತಜ್ಞರು ಹೇಳಿಕೊಳ್ಳುತ್ತಾರೆ.

ಆಕ್‌ಲ್ಯಾಂಡ್‌ ನೆಲೆಸಿರುವ ಪ್ರದೇಶವನ್ನು ವಿಜ್ಞಾನಿಗಳು ‘ಮೊನೊಜೆನಿಟಿಕ್‌ ಜ್ವಾಲಾಮುಖಿ ಪ್ರದೇಶ’ವೆಂದು ಕರೆಯುತ್ತಾರೆ. ಇದರ ಅರ್ಥವು ಈಗಾಗಲೇ ಅಸ್ತಿತ್ವದಲ್ಲಿರುವ ಜ್ವಾಲಾಮುಖಿಯು ಸ್ಫೋಟಗೊಳ್ಳುವ ಬದಲಿಗೆ, ಬೇರೆ ಸ್ಥಳದಲ್ಲಿ ಸಂಪೂರ್ಣವಾಗಿ ಹೊಸದಾದ ಜ್ವಾಲಾಮುಖಿಯು ಹುಟ್ಟಿಕೊಳ್ಳಬಹುದು. ಆದರೆ ಇದು ಅನೇಕ ದಿವಸಗಳು ಇಲ್ಲವೆ ಹಲವು ವಾರಗಳವರೆಗೆ ನಡೆಯುವ ಭೂಕಂಪಗಳ ಅವಧಿಯ ನಂತರವೇ ಸಂಭವಿಸುವುದೆಂದು ತಜ್ಞರು ಹೇಳುತ್ತಾರೆ. ಆದುದರಿಂದ ಈ ಭೂಕಂಪಗಳಿಂದಾಗಿ ಸಿಗುವ ಮುನ್ನೆಚ್ಚರಿಕೆಯು ಜನರು ಸುರಕ್ಷಿತ ತಾಣಗಳಿಗೆ ಹೋಗುವಂತೆ ಸಾಕಷ್ಟು ಸಮಯವನ್ನು ಕೊಡುವುದು.

ಗಂಡಾಂತರಗಳನ್ನು ಗಮನದಲ್ಲಿಡುವುದು

ಜ್ವಾಲಾಮುಖಿಗಳನ್ನು ಗಮನಿಸುತ್ತಾ ಇರುವುದು ಒಂದು ಪ್ರಾಮುಖ್ಯ ಕೆಲಸವಾಗಿದೆ. ಆದರೆ ಕೊಡಲಾಗುವ ಮುನ್ನೆಚ್ಚರಿಕೆಗಳಿಗೆ ಯಾರೂ ಕಿವಿಗೊಡದೆಹೋದರೆ ಏನೂ ಪ್ರಯೋಜನವಿಲ್ಲ. ಇಸವಿ 1985ರಲ್ಲಿ ಕೊಲಂಬಿಯಾದ ಆರ್‌ಮೆರೊ ನಗರದಲ್ಲಿದ್ದ ಅಧಿಕಾರಿಗಳಿಗೆ, ನೇವಾಡೋ ಡೆಲ್‌ ರೂಈಸ್‌ ಎಂಬ ಜ್ವಾಲಾಮುಖಿಯು ಸ್ಫೋಟವಾಗಲಿದೆ ಎಂದು ಮುನ್ನೆಚ್ಚರಿಕೆಯನ್ನು ನೀಡಲಾಗಿತ್ತು. ಸುಮಾರು 50 ಕಿಲೋಮೀಟರ್‌ ದೂರದಲ್ಲಿದ್ದ ಪರ್ವತವು ನಡುಗುತ್ತಾ ಸ್ಪಷ್ಟವಾದ ಮುನ್ನೆಚ್ಚರಿಕೆ ಕೊಟ್ಟಿತ್ತಾದರೂ, ಅಲ್ಲಿನ ಜನರಿಗೆ ಶಾಂತರಾಗಿ ಉಳಿಯ ಬೇಕೆಂದಷ್ಟೇ ಹೇಳಲಾಯಿತು. ಇದರ ಪರಿಣಾಮವಾಗಿ, ನಗರವು ಮಣ್ಣಿನಿಂದ ಮುಚ್ಚಿಹೋದಾಗ 21,000ಕ್ಕಿಂತ ಹೆಚ್ಚಿನ ಜನರು ಪ್ರಾಣಕಳೆದುಕೊಂಡರು.

ಆ ರೀತಿಯ ದುರಂತಗಳು ಸಂಭವಿಸುವುದು ವಿರಳವಾದರೂ, ಸ್ಫೋಟಗಳ ನಡುವಿನ ಶಾಂತ ಅವಧಿಗಳನ್ನು ಹೆಚ್ಚಿನ ಸಂಶೋಧನೆ ಮತ್ತು ಪೂರ್ವ ಸಿದ್ಧತೆಗಾಗಿ ಬಳಸಲಾಗುತ್ತದೆ. ಹೀಗೆ ಸದಾ ಗಮನಕೊಡುತ್ತಾ, ಸಾಕಷ್ಟು ಪೂರ್ವಸಿದ್ಧತೆ ಮಾಡುತ್ತಾ ಸಾರ್ವಜನಿಕರಲ್ಲಿ ಅರಿವು ಮೂಡಿಸುತ್ತಾ ಇರುವುದು, ನಿದ್ರಿಸುತ್ತಿರುವ ದೈತ್ಯನ ನೆರಳಿನಲ್ಲಿ ವಾಸಿಸುತ್ತಿರುವವರಿಗೆ ಬರಬಹುದಾದ ಗಂಡಾಂತರಗಳನ್ನು ಕಡಿಮೆಗೊಳಿಸಬಲ್ಲದು. (g 2/07)

[ಪುಟ 24ರಲ್ಲಿರುವ ಚೌಕ/ಚಿತ್ರ]

ಪೂರ್ವ ಸಿದ್ಧರಾಗಿರಿ!

ನೈಸರ್ಗಿಕ ವಿಪತ್ತಿಗಾಗಿ ಸಿದ್ಧರಾಗಿದ್ದೀರೊ? ನಿಮ್ಮ ಪ್ರದೇಶದಲ್ಲಿ ಸಂಭವಿಸಬಹುದಾದ ವಿಪತ್ತುಗಳ ಕುರಿತು ತಿಳಿದವರಾಗಿರಿ. ತುರ್ತು ಪರಿಸ್ಥಿತಿಯಲ್ಲಿ ಒಂದುವೇಳೆ ಕುಟುಂಬ ಸದಸ್ಯರು ಚದುರಿಹೋದರೆ ಎಲ್ಲಿ ಒಟ್ಟು ಸೇರಬೇಕೆಂದು ಮತ್ತು ನೀವು ಎಲ್ಲಿದ್ದೀರೆಂಬುದನ್ನು ಯಾರಿಗೆ ತಿಳಿಸುವೀರೆಂಬುದನ್ನು ಮುಂದಾಗಿಯೇ ಯೋಜಿಸಿರಿ. ಅಂಥ ತುರ್ತು ಸಮಯಕ್ಕಾಗಿ ಆಹಾರ, ನೀರು, ಪ್ರಥಮ ಚಿಕಿತ್ಸೆ ಪೆಟ್ಟಿಗೆ, ಬಟ್ಟೆ, ರೇಡಿಯೋಗಳು, ವಾಟರ್‌ಪ್ರೂಫ್‌ ಟಾರ್ಚ್‌ಗಳು ಮತ್ತು ಹೆಚ್ಚಿನ ಬ್ಯಾಟರಿಗಳು ಮುಂತಾದವುಗಳನ್ನು ಇಟ್ಟುಕೊಂಡಿರಿ. ಇವೆಲ್ಲವೂ ಹಲವಾರು ದಿವಸಗಳಿಗೆ ಸಾಕಾಗುವಷ್ಟು ಇರಬೇಕು.

[ಪುಟ 23ರಲ್ಲಿರುವ ಚಿತ್ರ]

ಸಂದರ್ಶಕರು ವೆಸೂವೀಯಸ್‌ ಪರ್ವತದ ಪ್ರಧಾನ ಕುಂಡದ ಬಳಿ ನಡೆಯುತ್ತಿರುವುದು

[ಕೃಪೆ]

©Danilo Donadoni/Marka/age fotostock

[ಪುಟ 23ರಲ್ಲಿರುವ ಚಿತ್ರ]

ವೆಸೂವೀಯಸ್‌ ಪರ್ವತದ ಮುಂದಿರುವ ಇಟಲಿಯ ನೇಪ್‌ಲ್ಸ್‌ ನಗರ

[ಕೃಪೆ]

© Tom Pfeiffer

[ಪುಟ 23ರಲ್ಲಿರುವ ಚಿತ್ರ]

ಪಾಂಪೇ ಮತ್ತು ಹರ್ಕ್ಯಲೇನ್ಯಮ್‌ ನಗರಗಳನ್ನು ಧ್ವಂಸಗೊಳಿಸಿದ ಸಾ.ಶ. 79ರ ಅತಿ ದೊಡ್ಡ ಸ್ಫೋಟದ ಬಗ್ಗೆ ಕಲಾಕಾರನೊಬ್ಬನ ಚಿತ್ರಣ

[ಕೃಪೆ]

© North Wind Picture Archives

[ಪುಟ 24ರಲ್ಲಿರುವ ಚಿತ್ರ]

ಆಕ್‌ಲ್ಯಾಂಡ್‌ನಲ್ಲಿ ಜ್ವಾಲಾಮುಖಿಗಳಿಂದ ಉಂಟಾದ ಅನೇಕ ದ್ವೀಪಗಳಲ್ಲೊಂದಾದ ರಾಂಗಿಟೋಟೋ

[ಪುಟ 24, 25ರಲ್ಲಿರುವ ಚಿತ್ರಗಳು]

ಮೇಲೆ ಮತ್ತು ಬಲಕ್ಕೆ: ಪೊಪೊಕ್ಯಾಟೆಪ್ಟಲ್‌ ಪರ್ವತ, ಮೆಕ್ಸಿಕೊ

[ಕೃಪೆ]

AFP/Getty Images

Jorge Silva/AFP/Getty Images

[ಪುಟ 22ರಲ್ಲಿರುವ ಚಿತ್ರ ಕೃಪೆ]

USGS, Cascades Volcano Observatory