ಚಕಾರ್ ಹವಾಯಿಯಲ್ಲಿ ಆಗಂತುಕ
ಚಕಾರ್ ಹವಾಯಿಯಲ್ಲಿ ಆಗಂತುಕ
ಹವಾಯಿಯ ಮಾಯಿ ದ್ವೀಪವನ್ನು ಸಂದರ್ಶಿಸಲು ನಾನು ಮತ್ತು ನನ್ನ ಸ್ನೇಹಿತರು ತುದಿಗಾಲಲ್ಲಿ ನಿಂತಿದ್ದೆವು. ವಿಶೇಷವಾಗಿ 10,023 ಅಡಿ ಎತ್ತರದಲ್ಲಿರುವ ಹಾಲೇಆಕಾಲೆ ಜ್ವಾಲಾಮುಖಿಯ ಶಿಖರದಿಂದ ಸೂರ್ಯೋದಯವನ್ನು ನಾವು ನೋಡಬಯಸಿದೆವು. ಅದೊಂದು ರೋಮಾಂಚಕರ ಅನುಭವವಾಗಲಿದೆ ಎಂದು ನಮಗೆ ತಿಳಿಸಲ್ಪಟ್ಟಿತ್ತು. ಆದರೆ ನಾವು ತಂಗಿದ್ದ ಕಾಪಾಲೂಆದಿಂದ ದ್ವೀಪದ ಆಚೆಕಡೆಗೆ ತಲಪಲು ಬೆಳಗಾತ ಎರಡು ಗಂಟೆಗೇ ಎದ್ದು ಪ್ರಯಾಣಿಸಬೇಕಾಗಿತ್ತು. ಅನಂತರ ಕಾರಿನಲ್ಲಿ ಬೆಟ್ಟದ ಕಡಿದಾದ ಹಾದಿಯನ್ನು ನಾವು ಏರಬೇಕಾಗಿತ್ತು. ಅಂಥ ಅವೇಳೆಯಲ್ಲಿ ಅದು ತೀರ ಒಂಟಿ ಪ್ರಯಾಣವೆಂದು ನಮಗೆ ಅನಿಸಿತು. ಆದರೆ ವಿಷಯವು ಹಾಗಿರಲಿಲ್ಲ! ಆ ಶಿಖರಕ್ಕೆ ನಡೆಸುವ ಹೆದ್ದಾರಿಯ ತಿರುವಿನಲ್ಲಿ ಮೆಲ್ಲಮೆಲ್ಲನೆ ಏರುತ್ತಿರುವ ವಾಹನಗಳ ಸಾಲಿನಲ್ಲಿ ನಮ್ಮ ವಾಹನವೂ ಒಂದಾಗಿತ್ತು. ಶಿಖರದ ತುದಿ ತಲಪಿದಾಗ ಚಳಿಯು ಸ್ವಲ್ಪ ಹೆಚ್ಚೇ ಇತ್ತು. ಆದರೆ ಬೆಚ್ಚಗಾಗಿಡಲು ನಾವು ಕಂಬಳಿಗಳನ್ನು ತಂದಿದ್ದೆವು.
ನೂರಾರು ಜನರು ಸೂರ್ಯೋದಯಕ್ಕಾಗಿ ತಾಳ್ಮೆಯಿಂದ ಕಾಯುತ್ತಿದ್ದರು. ಆಗ ಸುಮಾರು ಆರು ಗಂಟೆಯಾಗಿತ್ತು. ಎಲ್ಲೆಡೆಯೂ ನಿರೀಕ್ಷೆಯು ತುಂಬಿತುಳುಕುತ್ತಿತ್ತು. ಈ ಬೆರಗುಗೊಳಿಸುವ ದೃಶ್ಯವನ್ನು ಸೆರೆಹಿಡಿಯಲು ಕ್ಯಾಮರಗಳು ಅಣಿಯಾಗಿದ್ದವು. ಆದರೆ ಅನಿರೀಕ್ಷಿತವಾಗಿ ಅದೇ ಕ್ಷಣದಲ್ಲಿ ದಟ್ಟ ಮೋಡಗಳು ಜ್ವಾಲಾಮುಖಿಯ ಕುಂಡದೊಳಕ್ಕೆ ಸರಿಯತೊಡಗಿದ್ದು ನಮ್ಮನ್ನು ದಿಗಿಲುಗೊಳಿಸಿತು. ಆ ಅತ್ಯಪೂರ್ವ ಚಿತ್ರಗಳನ್ನು ತೆಗೆಯುವ ನಮ್ಮ ಆಶೆ ನಿರಾಶೆಯಾಯಿತು! ಆದರೆ ಪೆಸೆಫಿಕ್ ಸಾಗರದ ಸಮೀಪವಿರುವ ಬೆಟ್ಟಗಳತ್ತ ಮೋಡಗಳು ಯಾವಾಗಲೂ ಒಟ್ಟು ಸೇರುವುದು ಸಂಭಾವ್ಯ. ನಮ್ಮ ನಿರಾಶೆಯನ್ನು ತಡೆಹಿಡಿದು, ಸೂರ್ಯನ ಬಿಸಿಲಿಗೆ ಮೋಡಗಳು ಮೆಲ್ಲಮೆಲ್ಲನೆ ತೇಲಿಹೋಗುವ ತನಕ ನಾವು ಕಾಯಬೇಕಾಗಿತ್ತು. ಆಗ ಇನ್ನೊಂದು ಆಶ್ಚರ್ಯ! ಪೂರ್ತಿ ಬರಿದಾದ ಜ್ವಾಲಾಮುಖಿಯ ಕುಂಡವು ಅಡ್ಡಡ್ಡ ಹಾಯ್ದಿರುವ ಹಾದಿಗಳಿಂದ ಕೂಡಿರುವ ಭೂದೃಶ್ಯ ನಮ್ಮ ಕಣ್ಣಿಗೆ ಬಿತ್ತು. ಆಶೆ ಪೂರ್ಣ ನಿರಾಶೆಯಾಗಲಿಲ್ಲ.
ತಕ್ಷಣ ಒಂದು ವಿಚಿತ್ರ ಶಬ್ದ ನಮ್ಮ ಕಿವಿಗೆ ಬಿತ್ತು. ಚಕಾರ್ ಚಕಾರ್ ಸ್ವರದಲ್ಲಿ ಕೊನೆಗೊಳ್ಳುವ ಭಿನ್ನವಾದ ಕ್ಲಕ್ ಕ್ಲಕ್ ಶಬ್ದಗಳ ಸರಮಾಲೆ. ಆ ಶಬ್ದದ ಮೂಲ ನಮಗೆ ಗೋಚರಿಸಿದ್ದು ಅನಂತರವೇ. ಅದೊಂದು ಕವುಜುಗ ಹಕ್ಕಿಜಾತಿಯ ಸುಂದರ ಯುರೇಷನ್ ಪಕ್ಷಿಯಾಗಿತ್ತು. ಅದರ ಲ್ಯಾಟಿನ್ ಹೆಸರು ಅಲೆಕ್ಟೊರಿಸ್ ಚಕಾರ್. ಮರಿಮಾಡುವಾಗ ಅದು ಹೆಚ್ಚಿನ ಸಮಯವನ್ನು ನೆಲದ ಮೇಲೆ ಕಳೆಯುತ್ತದೆ ಮತ್ತು ಅಲ್ಲಿಯೇ ಗೂಡು ಕಟ್ಟುತ್ತದೆ. ನಮ್ಮನ್ನು ನೋಡಿದೊಡನೆ ಅದು ಹಾರಿಹೋಗಲು ಪ್ರಯತ್ನಿಸದೆ ಓಡಿಹೋಯಿತು.
ಮಾಯಿಯ ಈ ರಮಣೀಯ ದ್ವೀಪಕ್ಕೆ ಈ ಬಗೆಯ ಹಕ್ಕಿ ಎಲ್ಲಿಂದ ಬಂತು? ಚಕಾರ್ ಹಕ್ಕಿಗಳು ಸ್ಥಳಿಕ ಹಕ್ಕಿಗಳಾಗಿರಲಿಲ್ಲ. ಅವುಗಳು ಉತ್ತರ ಅಮೇರಿಕಾದಲ್ಲಿ ಸಾಕಲ್ಪಟ್ಟು ಅನಂತರ ಜನರು ಬೇಟೆಯಾಡುವಂತೆ ಅರಣ್ಯಗಳಿಗೆ ಬಿಡಲ್ಪಡುತ್ತವೆ. ಈ ನಾಚುವ ಹಕ್ಕಿಯನ್ನು ಹತ್ತಿರದಿಂದ ವೀಕ್ಷಿಸುವ ಸಂದರ್ಭ ನಮಗೆ ದೊರೆಯಿತಲ್ಲಾ ಎಂದು ನಾವು ಹಿರಿಹಿಗ್ಗಿದೆವು.—ದತ್ತಲೇಖನ. (g 2/07)