ಲೋಕವ್ಯಾಪಕ ನೈತಿಕ ಕುಸಿತ
ಲೋಕವ್ಯಾಪಕ ನೈತಿಕ ಕುಸಿತ
“ವಂಚನೆ ಎಲ್ಲೆಡೆಯೂ ವ್ಯಾಪಕವಾಗಿದೆ,” ಎಂದು ಮೋಸಮಾಡುವ ಸಂಸ್ಕೃತಿ (ಇಂಗ್ಲಿಷ್) ಎಂಬ ಪುಸ್ತಕವನ್ನು ಇತ್ತೀಚೆಗೆ ಬರೆದ ಲೇಖಕರಾದ ಡೇವಿಡ್ ಕಾಲಹಾನ್ ಹೇಳಿದರು. ಯುನೈಟೆಡ್ ಸ್ಟೇಟ್ಸ್ನಲ್ಲಿ ನಡೆಯುತ್ತಿರುವ “ಶಾಲಾ ಕಾಲೇಜು ವಿದ್ಯಾರ್ಥಿಗಳ ನಕಲು ಮಾಡುವಿಕೆ,” ಧ್ವನಿಮುದ್ರಣ ಮತ್ತು ಚಲನಚಿತ್ರಗಳ “ಕಳ್ಳಪ್ರತಿ ಮಾಡುವಿಕೆ,” “ಕೆಲಸದ ಸ್ಥಳದಲ್ಲಿನ ಕಳ್ಳತನ” ಅಂದರೆ ಸಮಯದ ದುರುಪಯೋಗ ಹಾಗೂ ಅಲ್ಲಿ ಸಿಗುವ ವಸ್ತುಗಳ ಕದಿಯುವಿಕೆ, “ದೊಡ್ಡ ಪ್ರಮಾಣದ ಆರೋಗ್ಯಾರೈಕೆಯ ಹಗರಣಗಳು” ಮತ್ತು ಕ್ರೀಡೆಗಳಲ್ಲಿ ಉದ್ದೀಪನ ಮದ್ದಿನ ಸೇವನೆ ಮುಂತಾದ ಇತರ ವಂಚನೆಗಳ ಕುರಿತು ಅವರು ಹೇಳಿದರು. “ಎಲ್ಲಾ ರೀತಿಯ ನೈತಿಕ ಮತ್ತು ಕಾನೂನು ಸಂಬಂಧಿತ ಅನುಚಿತ ವರ್ತನೆ ಹಾಗೂ ಉಲ್ಲಂಘನೆಗಳನ್ನು ಕೂಡಿ ಹಾಕುವಾಗ ಗಂಭೀರ ಮಟ್ಟದಲ್ಲಿ ಸಂಭವಿಸುತ್ತಿರುವ ನೈತಿಕ ಬಿಕ್ಕಟ್ಟು ತೋರಿಬರುತ್ತದೆ” ಎಂದು ಅವರು ಸಮಾಪ್ತಿಗೊಳಿಸಿದರು.
ಆಗಸ್ಟ್ 2005ರಲ್ಲಿ ಯುನೈಟೆಡ್ ಸ್ಟೇಟ್ಸ್ ಅನ್ನು ಕ್ಯಾಟ್ರೀನ ಚಂಡಮಾರುತವು ಅಪ್ಪಳಿಸಿದ ನಂತರ “ಅಧುನಿಕ ಇತಿಹಾಸದಲ್ಲೇ ಅತ್ಯಂತ ಅಸಾಮಾನ್ಯವಾದ ಹಗರಣಗಳು, ಒಳಸಂಚುಗಳು ಮತ್ತು ಸರ್ಕಾರದವರಿಂದಲೇ ನಡೆದ ದಂಗುಬಡಿಸುವ ತಿಳಿಗೇಡಿತನ ಅಥವಾ ಅಲಕ್ಷ್ಯದ ಉದಾಹರಣೆಗಳು ಕಾಣಸಿಕ್ಕಿದವು” ಎಂದು ದ ನ್ಯೂ ಯಾರ್ಕ್ ಟೈಮ್ಸ್ ವಾರ್ತಾ ಪತ್ರಿಕೆಯು ಹೇಳಿತು. ಯುನೈಟೆಡ್ ಸ್ಟೇಟ್ಸ್ನ ಶಾಸಕಾಂಗ ಸಭೆಯ ಸದಸ್ಯರೊಬ್ಬರು ವರದಿಸಿದ್ದು: “ನಡೆಸಲಾದ ನಿರ್ಲಜ್ಜ ವಂಚನೆಗಳು, ಹುಚ್ಚು ಧೈರ್ಯದ ಒಳಸಂಚುಗಳು, ಅಜಾಗರೂಕತೆಯಿಂದಾಗಿ ದೊಡ್ಡ ಮೊತ್ತದ ಹಣದ ಪೋಲುಮಾಡುವಿಕೆ; ಇವೆಲ್ಲವುಗಳ ಪ್ರಮಾಣವನ್ನು ನೋಡಿದಾಗ ಉಸಿರು ಕಟ್ಟಿಹೋಗುತ್ತದೆ.”
ವಿಷಯವು ಹಾಗಿರುವುದಾದರೂ, ನಿಸ್ವಾರ್ಥದಿಂದ ಮಾನವೀಯ ಕರುಣೆಯನ್ನು ತೋರಿಸುವ ಜನರ ಉದಾಹರಣೆಗಳು ಈಗಲೂ ಇವೆ. (ಅ. ಕೃತ್ಯಗಳು 27:3; 28:2) ಆದರೂ, ಈ ಮುಂದಿನ ಮಾತುಗಳು ನಮಗೆ ಹೆಚ್ಚಾಗಿ ಕೇಳಲು ಸಿಗುತ್ತವೆ: “ಇದನ್ನು ಮಾಡುವುದರಿಂದ ನನಗೇನು ಸಿಗುತ್ತದೆ? ನನಗಿದರಿಂದ ಏನು ಪ್ರಯೋಜನ?” ‘ನಾ-ಮೊದಲು’ ಎಂಬ ಸ್ವಾರ್ಥಚಿಂತನೆಯು ಇಂದು ಹೆಚ್ಚಾಗಿ ಚಾಲ್ತಿಯಲ್ಲಿದೆ.
ಇತಿಹಾಸದಲ್ಲಿ, ರೋಮನ್ ಸಾಮ್ರಾಜ್ಯದಂತಹ ನಾಗರಿಕತೆಗಳ ಅವನತಿಗೆ ಸ್ವಾರ್ಥಪರ ಹಾಗೂ ಲಜ್ಜಾಹೀನ ಅನೈತಿಕತೆಯು ಕಾರಣವಾಗಿತ್ತೆಂದು ದೂರಲಾಗುತ್ತದೆ. ಇಂದು ಸಂಭವಿಸುತ್ತಿರುವ ವಿಷಯಗಳು ಅಂತಹ ನಾಗರಿಕತೆಗಳ ಅವನತಿಗಿಂತ ಇನ್ನೂ ಗಮನಾರ್ಹವಾದ ವಿಷಯಕ್ಕೆ ಮುನ್ಸೂಚನೆಯಾಗಿರಬಹುದೋ? ‘ಅಧರ್ಮದ ಹೆಚ್ಚಾಗುವಿಕೆಯು’ ಈ ಸಂಪೂರ್ಣ ವಿಷಯವ್ಯವಸ್ಥೆಯ ಅಂತ್ಯದ ಗುರುತಾಗಿದೆಯೆಂದು ಬೈಬಲ್ ಮುಂತಿಳಿಸಿರುವಂತೆಯೇ ಲೋಕದ ಪ್ರತಿಯೊಂದು ಭಾಗವೂ ಇಂದು ಅಧರ್ಮದಿಂದ ಪ್ರಭಾವಿಸಲ್ಪಡುತ್ತಿದೆಯೋ?—ಮತ್ತಾಯ 24:3-8, 12-14; 2 ತಿಮೊಥೆಯ 3:1-5.
ಲೋಕವ್ಯಾಪಕ ಅವನತಿ
ಯುಗಾಂಡ ದೇಶದ ಒಂದು ಭಾಗದ ಕೊಳಚೆ ಪ್ರದೇಶದಲ್ಲಿ “ಲೈಂಗಿಕ ದೌರ್ಜನ್ಯ ಮತ್ತು ಅಶ್ಲೀಲ ಸಾಹಿತ್ಯದ ವಿಷಯದಲ್ಲಿ ನಡೆದ ಒಂದು ಕಾರ್ಯಗಾರದ” ಕುರಿತು 2006, ಜೂನ್ 22ರ ಆಫ್ರಿಕ ನ್ಯೂಸ್ ವರದಿಸಿದ್ದು: “ಆ ಪ್ರದೇಶದಲ್ಲಿ ವೇಶ್ಯಾವಾಟಿಕೆ ಹಾಗೂ ಮಾದಕ ಪದಾರ್ಥಗಳ ದುರುಪಯೋಗವು ಹೆಚ್ಚಾಗಲು, ಹೆತ್ತವರ ಅಲಕ್ಷ್ಯವೇ ಕಾರಣ.” ಆ ವಾರ್ತಾಪತ್ರಿಕೆಯು ಹೇಳಿದ್ದು: “ಮಕ್ಕಳ ಮತ್ತು ಕುಟುಂಬ ಸಂರಕ್ಷಣಾ ವಿಭಾಗದ, ಕಾವೆಂಪೆ ಪೊಲೀಸ್ ಠಾಣೆಯ ಮುಖ್ಯಸ್ಥರಾದ ಶ್ರೀ. ಡಾಬಾಂಜೆ ಸಲೊಂಗೋ ಅವರಿಗನುಸಾರ ಮಕ್ಕಳ ಮೇಲಿನ ದೌರ್ಜನ್ಯ ಮತ್ತು ಗೃಹಹಿಂಸಾಚಾರವು ಮಹತ್ತರವಾಗಿ ಹೆಚ್ಚಿದೆ.”
ಭಾರತದಲ್ಲಿರುವ ಒಬ್ಬ ವೈದ್ಯರಿಗನುಸಾರ, “ಸಮಾಜವು ತನ್ನ ಸಾಂಸ್ಕೃತಿಕ ಲಂಗರನ್ನು [ಅಂದರೆ ಸಾಂಸ್ಕೃತಿಕ ಪರಂಪರೆಗಳನ್ನು] ಕಳೆದುಕೊಳ್ಳುತ್ತಿದೆ.” ಒಬ್ಬ ಚಿತ್ರ ನಿರ್ದೇಶಕಿಯು ಹೇಳಿದ್ದು: “ಭಾರತವು ನಿಧಾನವಾಗಿ ‘ಪಾಶ್ಚಾತ್ಯ ದೇಶಗಳ ನೀತಿಗೆಟ್ಟ ಹಾಗೂ ಭ್ರಷ್ಟ ನಡವಳಿಕೆಗೆ’ ಇಳಿಯುತ್ತಿದೆ ಎಂಬುದನ್ನು ತೋರಿಸುವ ಇನ್ನೊಂದು ಸೂಚನೆಯು, ಹೆಚ್ಚಾಗುತ್ತಿರುವ ಮಾದಕ ಪದಾರ್ಥಗಳ ಉಪಯೋಗ ಮತ್ತು ಅತ್ಯಧಿಕವಾಗುತ್ತಿರುವ ಲೈಂಗಿಕ ಸ್ವೇಚ್ಛಾಚಾರವಾಗಿದೆ.”
ಬೀಜಿಂಗ್ನಲ್ಲಿರುವ, ಚೀನ ನೈತಿಕ ವಿಜ್ಞಾನ ಸಂಘದ ಸೆಕ್ರೆಟರಿ-ಜನರಲ್ ಹು ಪೈಚೆಂಗ್ ಹೇಳಿದ್ದು: “ಹಿಂದೆ ನಮ್ಮ ಸಮಾಜದಲ್ಲಿ ಸರಿ ಮತ್ತು ತಪ್ಪಿನ ಅರಿವಿತ್ತು. ಆದರೆ ಈಗ, ನಮ್ಮ ಮನಸ್ಸಿಗೆ ಸರಿತೋಚಿದಂತೆ ಮಾಡಬಹುದು.” ಚೈನಾ ಟುಡೇ ಪತ್ರಿಕೆಯಲ್ಲಿನ ಒಂದು ಲೇಖನವು ಈ ರೀತಿ ಹೇಳುತ್ತದೆ: “ವಿವಾಹಬಾಹಿರ ಸಂಬಂಧಗಳನ್ನು ಇಂದು ಸಮಾಜವು ಹಿಂದೆಂದಿಗಿಂತಲೂ ಹೆಚ್ಚಾಗಿ ಒಪ್ಪಿಕೊಳ್ಳುತ್ತಿದೆ.”
“ಪ್ರತಿಯೊಬ್ಬರೂ ತಮ್ಮ ಬಟ್ಟೆಬಿಚ್ಚಲು ಮುಂದಾಗುತ್ತಿದ್ದಾರೆ ಮತ್ತು ಯಾವುದೇ ವಸ್ತುವನ್ನು ಮಾರಲು ಕಾಮವನ್ನು ಒಂದು ಸಾಧನವಾಗಿ ಬಳಸಲು ಸಿದ್ಧರಾಗಿದ್ದಾರೆಂದು ತೋರುತ್ತದೆ” ಎಂದು ಇಂಗ್ಲೆಂಡಿನ ಯಾರ್ಕ್ಶರ್ ಪೋಸ್ಟ್ ಇತ್ತೀಚೆಗೆ ವರದಿಸಿತು. “ಕಳೆದ ಪೀಳಿಗೆಯವರ ಸಮಯದಲ್ಲಾಗಿದ್ದರೆ, ಆ ರೀತಿಯ ವರ್ತನೆಯು ಜನರನ್ನು ಉದ್ರಿಕ್ತಗೊಳಿಸಿರುತ್ತಿತ್ತು. ಆದರೆ ಇಂದು ಅನೇಕ ವಿಧಗಳಲ್ಲಿ ಮತ್ತು ನಾವು ಹೋದಲ್ಲೆಲ್ಲಾ ನಮ್ಮ ಮೇಲೆ ಲೈಂಗಿಕ ಹಾಡುಗಳ ಹಾಗೂ ಚಿತ್ರಗಳ ಸುರಿಮಳೆಯಾಗುತ್ತಿದೆ ಮತ್ತು ಅಶ್ಲೀಲ ಸಾಹಿತ್ಯವನ್ನು . . . ಸಮಾಜದಲ್ಲಿ ವ್ಯಾಪಕವಾಗಿ ಒಪ್ಪಿಕೊಳ್ಳಲಾಗುತ್ತಿದೆ.” ಆ ವಾರ್ತಾಪತ್ರಿಕೆಯು ಇನ್ನೂ ಕೂಡಿಸಿದ್ದು: “ಹಿಂದೊಮ್ಮೆ, ಕೇವಲ 18ಕ್ಕಿಂತ ಹೆಚ್ಚಿನ ಪ್ರಾಯದವರಿಗೆ ಮಾತ್ರ ಎಂದು ಎಣಿಸಲಾಗುತ್ತಿದ್ದ ಪುಸ್ತಕಗಳು, ಪತ್ರಿಕೆಗಳು ಮತ್ತು ಚಲನಚಿತ್ರಗಳು ಇಂದು ಕುಟುಂಬ ಮನೋರಂಜನೆಯ ಅವಿಭಾಜ್ಯ ಅಂಗವಾಗಿವೆ. ಅದರಲ್ಲೂ, ಅಶ್ಲೀಲ ಸಾಹಿತ್ಯ-ವಿರೋಧಿ
ಚಳುವಳಿಗಾರರಿಗನುಸಾರ ಹೆಚ್ಚಾಗಿ ಅಂತಹ ಮನೋರಂಜನೆಯು ನೇರವಾಗಿ ಮಕ್ಕಳನ್ನು ಮನಸ್ಸಿನಲ್ಲಿಟ್ಟುಕೊಂಡು ತಯಾರಿಸಲಾಗುತ್ತಿದೆ.”ದ ನ್ಯೂ ಯಾರ್ಕ್ ಟೈಮ್ಸ್ ಮ್ಯಾಗಜೀನ್ ಹೇಳಿದ್ದು: “ಕೆಲವು ಹದಿವಯಸ್ಕರಂತೂ, ಅವರು ಹೋಟೆಲಿನಲ್ಲಿ ಕುಳಿತು ಊಟಕ್ಕೆ ಏನು ಆರ್ಡರ್ ಮಾಡಬೇಕೆಂದು ಚರ್ಚಿಸುವಷ್ಟು ಆರಾಮವಾಗಿ, ತಾವು ಯಾರೊಂದಿಗೆ ಲೈಂಗಿಕತೆಯಲ್ಲಿ ಒಳಗೂಡಿದ್ದರೋ ಅದರ ಅನುಭವಗಳ ಕುರಿತು ಚರ್ಚಿಸುತ್ತಾರೆ.” “8ರಿಂದ 12 ವರ್ಷ ಪ್ರಾಯದ ಮಕ್ಕಳಿರುವ ಹೆತ್ತವರಿಗೆ ಮಾರ್ಗದರ್ಶಿ” ಪತ್ರಿಕೆಯಾದ ಟ್ವೀನ್ಸ್ ನ್ಯೂಸ್ ವರದಿಸಿದ್ದು: “ಒಬ್ಬಾಕೆ ಹುಡುಗಿಯು, ಚಿಕ್ಕ ಮಕ್ಕಳಂಥ ಬರವಣಿಗೆಯಲ್ಲಿ ಹೃದಯ ಹಿಂಡುವಂಥ ಈ ಸಂದೇಶವನ್ನು ಬರೆದಿದ್ದಳು: ‘ನನ್ನ ತಾಯಿ ನಾನು ಹೊರಗೆ ಹೋಗಿ ಹುಡುಗರ ಸಹವಾಸ ಮಾಡುವಂತೆ ಮತ್ತು ಅವರೊಂದಿಗೆ ಲೈಂಗಿಕ ಸಂಬಂಧವನ್ನಿಟ್ಟುಕೊಳ್ಳುವಂತೆ ಒತ್ತಾಯಿಸುತ್ತಿದ್ದಾಳೆ. ಆದರೆ ನಾನು ಇನ್ನೂ ಕೇವಲ 12 ವರ್ಷದವಳು . . . ದಯವಿಟ್ಟು ಸಹಾಯಮಾಡಿ!’”
ಕಾಲವು ಎಷ್ಟೊಂದು ಬದಲಾಗಿಬಿಟ್ಟಿದೆ! “ಪುರುಷ ಸಲಿಂಗ ಕಾಮಿಗಳು ಮತ್ತು ಸಲಿಂಗ ಸ್ತ್ರೀರತಿಯರು ಮುಚ್ಚುಮರೆಯಿಲ್ಲದೆ ಜೊತೆಯಾಗಿ ವಾಸಮಾಡುವುದು ಕೆಲವೇ ಸಮಯದ ಹಿಂದೆ ನೀತಿಗೆಟ್ಟ ವಿಷಯವಾಗಿತ್ತು” ಎಂದು ಕೆನಡಾದ ಟೊರಾಂಟೊ ಸ್ಟಾರ್ ಹೇಳಿತು. ಆದರೆ, ಓಟಾವ ಊರಿನ ಕಾರ್ಲ್ಟನ್ ವಿಶ್ವವಿದ್ಯಾನಿಲಯದ ಸಾಮಾಜಿಕ ಇತಿಹಾಸದ ಶಿಕ್ಷಕಿ ಹೇಳಿದ್ದು: “ಇಂದು ಜನರು ಹೇಳುವುದೇನೆಂದರೆ, ‘ನನ್ನ ಖಾಸಗಿ ಜೀವನವು ನನ್ನದಾಗಿದೆ. ಇತರರು ಇದರಲ್ಲಿ ತಲೆಹಾಕಬೇಕಾಗಿಲ್ಲ.’”
ಸ್ಪಷ್ಟವಾಗಿಯೇ, ಕಳೆದ ಕೆಲವು ದಶಕಗಳಲ್ಲಿ ನೈತಿಕ ಮೌಲ್ಯಗಳು ಲೋಕವ್ಯಾಪಕವಾಗಿ ಅನೇಕ ಸ್ಥಳಗಳಲ್ಲಿ ಹೆಚ್ಚಿನ ವೇಗದಲ್ಲಿ ಅಧೋಗತಿಗೆ ಇಳಿದಿವೆ. ಈ ರೀತಿಯ ಸಂಪೂರ್ಣ ಬದಲಾವಣೆಗೆ ಕಾರಣವೇನು? ವೈಯಕ್ತಿಕವಾಗಿ ಈ ವಿಷಯಗಳ ಕುರಿತು ನಿಮಗೇನನಿಸುತ್ತದೆ? ಮತ್ತು ಆಗಿರುವ ಬದಲಾವಣೆಗಳು ಭವಿಷ್ಯದ ಬಗ್ಗೆ ಯಾವ ಮುನ್ನೋಟವನ್ನು ಕೊಡುತ್ತಿವೆ? (g 4/07)