ಗಬಾನ್ ವನ್ಯಜೀವಿಗಳ ಆಶ್ರಯತಾಣ
ಗಬಾನ್ ವನ್ಯಜೀವಿಗಳ ಆಶ್ರಯತಾಣ
ಗಬಾನ್‌ನ ಎಚ್ಚರ! ಲೇಖಕರಿಂದ
ಉಷ್ಣವಲಯದ ಒಂದು ಸಮುದ್ರತೀರದಲ್ಲಿ ಆನೆಗಳು ಮೇಯುವುದನ್ನು, ನೀರಾನೆಗಳು ಈಜುತ್ತಿರುವುದನ್ನು, ತಿಮಿಂಗಿಲಗಳು ಹಾಗೂ ಡಾಲ್ಫಿನ್‌ಗಳು ದಡದಲ್ಲಿ ಒಟ್ಟುಸೇರಿರುವುದನ್ನು ನೀವು ಕಲ್ಪಿಸಿಕೊಳ್ಳಬಲ್ಲಿರೋ? ಆಫ್ರಿಕಾದ ಕರಾವಳಿಯಲ್ಲಿ 100 ಕಿಲೊಮೀಟರ್‌ಗಳಷ್ಟು ಉದ್ದಕ್ಕೂ ಇಂಥ ದೃಶ್ಯಗಳು ಸರ್ವಸಾಮಾನ್ಯ.
ಇಂಥ ದೃಶ್ಯಗಳನ್ನು ಭವಿಷ್ಯದಲ್ಲಿ ಆನಂದಿಸಸಾಧ್ಯವಾಗುವಂತೆ ಈ ಅಪೂರ್ವ ಕರಾವಳಿ ಪ್ರದೇಶವನ್ನು ಅತಿ ಜಾಗರೂಕತೆಯಿಂದ ಕಾಪಾಡಬೇಕು. ಸಂತೋಷಕರವಾಗಿ 2002 ರ ಸೆಪ್ಟೆಂಬರ್ 4 ರಂದು ಈ ಪ್ರದೇಶದ ಸಂರಕ್ಷಣೆಗಾಗಿ ಏರ್ಪಾಡುಗಳನ್ನು ಮಾಡಲಾಯಿತು. ಅಂದು ಗಬಾನ್ ದೇಶದ ಅಧ್ಯಕ್ಷರು, ನಿರ್ಮಲವಾಗಿರುವ ಕರಾವಳಿತೀರಗಳನ್ನೂ ಸೇರಿಸಿ ಗಬಾನ್‌ನ 10 ಪ್ರತಿಶತ ಪ್ರದೇಶವನ್ನು ರಾಷ್ಟ್ರೀಯ ಉದ್ಯಾನವನಗಳಿಗಾಗಿ ಬದಿಗಿರಿಸಲಾಗುವುದೆಂದು ಘೋಷಿಸಿದರು.
ಬೆಲ್ಜಿಯಮ್ ದೇಶದ ಗಾತ್ರಕ್ಕೆ ಹೋಲುವ, ಸುಮಾರು 30,000 ಕಿಲೊಮೀಟರ್‌ಗಳಷ್ಟು ವ್ಯಾಪಿಸಿರುವ ಈ ಅರಣ್ಯ ಕ್ಷೇತ್ರಗಳಲ್ಲಿ ಇನ್ನೂ ಅನೇಕ ನೈಸರ್ಗಿಕ ಅದ್ಭುತಗಳಿವೆ. ಅಧ್ಯಕ್ಷ ಓಮಾರ್ ಬೊಂಗೊ ಒಂಡಿಂಬಾ ಹೇಳಿದ್ದು: “ಭೂಮಿಯ ಮೇಲೆ ಉಳಿದಿರುವ ಕೊನೆಯ ನೈಸರ್ಗಿಕ ಅದ್ಭುತಗಳನ್ನು ನೋಡಲು ಪ್ರಪಂಚದ ಎಲ್ಲೆಡೆಯಿಂದ ಪ್ರವಾಸಿಗರನ್ನು ಸೆಳೆಯುವ ಮೂಲಕ ಗಬಾನ್ ಒಂದು ನೈಸರ್ಗಿಕ ಯಾತ್ರಾಸ್ಥಳವಾಗುವ ಸಾಧ್ಯತೆಯಿದೆ.”
ಈ ಮೀಸಲು ಪ್ರದೇಶಗಳು ಅಷ್ಟು ಮಹತ್ವಪೂರ್ಣವಾಗಿರುವುದು ಏಕೆ? ಗಬಾನ್‌ನ 85 ಪ್ರತಿಶತದಷ್ಟು ಭಾಗ ಕಾಡು ಪ್ರದೇಶವಾಗಿದೆ ಮತ್ತು ಅದರಲ್ಲಿರುವ ಸುಮಾರು 20 ಪ್ರತಿಶತ ಸಸ್ಯವರ್ಗಗಳು ಭೂಮಿಯಲ್ಲಿ ಬೇರೆಲ್ಲೂ ಕಾಣಸಿಗುವುದಿಲ್ಲ. ಅಷ್ಟುಮಾತ್ರವಲ್ಲ ಕೆಳನಾಡಿನ ಗೊರಿಲ್ಲಗಳು, ಚಿಂಪಾಂಜಿಗಳು, ಕಾಡಾನೆಗಳು ಮತ್ತು ಅಳಿವಿನಂಚಿನಲ್ಲಿರುವ ಇನ್ನೂ ಅನೇಕ ಪ್ರಾಣಿಗಳಿಗೆ ಇಲ್ಲಿರುವ ಸಮಭಾಜಕವೃತ್ತದ ಕಾಡುಗಳು ಆಶ್ರಯಸ್ಥಾನವಾಗಿವೆ. ಇತ್ತೀಚೆಗೆ ನಿರ್ಮಿಸಲ್ಪಟ್ಟ ಈ ಉದ್ಯಾನವನಗಳು ಗಬಾನ್ ಅನ್ನು ಆಫ್ರಿಕದ ಜೀವವೈವಿಧ್ಯತೆಯ ಪ್ರಮುಖ ಸಂರಕ್ಷಕ ದೇಶವನ್ನಾಗಿ ಮಾಡುತ್ತವೆ.
ಲೊಆಂಗೋ—ಅಪ್ರತಿಮ ಸಮುದ್ರತೀರ
ಆಫ್ರಿಕದ ವನ್ಯಜೀವಿಗಳನ್ನು ವೀಕ್ಷಿಸಲಿಕ್ಕಾಗಿ ಅಲ್ಲಿರುವಂಥ ಅತ್ಯಂತ ಎದ್ದುಕಾಣುವ ಗಮ್ಯಸ್ಥಾನಗಳಲ್ಲಿ ಲೊಆಂಗೋ ರಾಷ್ಟ್ರೀಯ ಉದ್ಯಾನವನವು ಒಂದಾಗಿರಸಾಧ್ಯ. ಇದು ಸಿಹಿನೀರಿನ ಸರೋವರಗಳು ಮತ್ತು ದಟ್ಟವಾದ ಸಮಭಾಜಕವೃತ್ತದ ಕಾಡುಗಳಿಂದ ಕೂಡಿರುವ ಹಲವು ಕಿಲೊಮೀಟರ್‌ಗಳಷ್ಟು ಉದ್ದದ ನಿರ್ಮಲ ಸಮುದ್ರತೀರಗಳನ್ನು ಸಂರಕ್ಷಿಸುತ್ತದೆ. ಆದರೆ ಲೊಆಂಗೋವಿನ ಈ ಸಮುದ್ರತೀರಗಳನ್ನು ನಿಜಕ್ಕೂ ಅದ್ವಿತೀಯವನ್ನಾಗಿಸುವುದು ಮರಳಿನುದ್ದಕ್ಕೂ ಅಡ್ಡಾಡುವ ನೀರಾನೆಗಳು, ಕಾಡಾನೆಗಳು, ಕಾಡುಕೋಣಗಳು, ಚಿರತೆಗಳು ಮತ್ತು ಗೊರಿಲ್ಲಗಳೇ.
ಈ ಕಾಡುಪ್ರಾಣಿಗಳನ್ನು ಸಮುದ್ರತೀರವು ಆಕರ್ಷಿಸುವುದೇಕೆ? ಏಕೆಂದರೆ ಲೊಆಂಗೋವಿನ ಬಿಳಿಮರಳಿನ ಸಮುದ್ರತೀರಗಳ ಸುತ್ತಲೂ ನೀರಾನೆ ಮತ್ತು ಕಾಡುಕೋಣಗಳಿಗೆ ಮೇಯಲು ಹುಲ್ಲುಗಾವಲುಗಳಿವೆ. ಸಮುದ್ರತೀರದ ಹತ್ತಿರ ಬೆಳೆಯುವ ಆಫ್ರಿಕದ ಪಾಮೈರಾ ಪಾಮ್ ಎಂಬ ತಾಳೆಮರಗಳು ಯಥೇಷ್ಟವಾಗಿ ಫಲಗಳನ್ನು ಉತ್ಪಾದಿಸುತ್ತವೆ. ಮಕ್ಕಳನ್ನು ಐಸ್‌ಕ್ರೀಮ್ ಆಕರ್ಷಿಸುವಂತೆ ಇವು ಕಾಡಾನೆಗಳನ್ನು ಆಕರ್ಷಿಸುತ್ತವೆ. ಆದರೆ ಎಲ್ಲಕ್ಕಿಂತ ಮುಖ್ಯವಾದುದು ಇಲ್ಲಿ ದೊರೆಯುವ ಏಕಾಂತತೆಯೇ. ಇಲ್ಲಿ ಮರಳಿನ ಮೇಲೆ ಕಂಡುಬರುವ ಹೆಜ್ಜೆಗುರುತುಗಳು ಕೇವಲ ಪ್ರಾಣಿಗಳದ್ದು ಮಾತ್ರ.
ಮಾನವನ ಹಸ್ತಕ್ಷೇಪ ಇಲ್ಲಿ ಕಡಿಮೆಯಿರುವುದರಿಂದ, ಅಪಾಯದಂಚಿನಲ್ಲಿರುವ ಲೆದರ್‌ಬ್ಯಾಕ್ ಆಮೆಗಳು ಮೊಟ್ಟೆಯಿಡಲಿಕ್ಕಾಗಿ ಈ ನಿರ್ಜನವಾದ ಸಮುದ್ರತೀರಗಳನ್ನು ಆಯ್ಕೆಮಾಡುತ್ತವೆ. ಗುಲಾಬಿ-ಬಣ್ಣದ ಭ್ರಮರಭಕ್ಷಕ ಎಂಬ ಹಕ್ಕಿಗಳು ಕೂಡಾ ಅದೇ ರೀತಿಯ ಸ್ಥಳಗಳಲ್ಲಿ ವಾಸಿಸುತ್ತವೆ. ಇವುಗಳ ಹಿಂಡು ಉಬ್ಬರದ ಸಮಯದಲ್ಲಿ ನೀರಿನ ಗರಿಷ್ಠಮಟ್ಟದಿಂದ ಕೊಂಚ ದೂರದ ಮರಳಲ್ಲಿ ಗೂಡು ಕಟ್ಟುತ್ತವೆ. ಬೇಸಿಗೆಯ ತಿಂಗಳುಗಳಲ್ಲಿ ಸಾವಿರಕ್ಕಿಂತಲೂ ಹೆಚ್ಚು ಹಂಪ್‌ಬ್ಯಾಕ್ ತಿಮಿಂಗಿಲಗಳು ಕೂಡಲಿಕ್ಕಾಗಿ ಲೊಆಂಗೋವಿನ ಪ್ರಶಾಂತ ನೀರಿನಲ್ಲಿ ಜೊತೆಸೇರುತ್ತವೆ.
ಎರಡು ಬಲು ದೊಡ್ಡ ಸಿಹಿನೀರಿನ ಸರೋವರಗಳು ಲೊಆಂಗೋ ಸಮುದ್ರತೀರಗಳನ್ನು ಸಮಭಾಜಕವೃತ್ತದ ಕಾಡುಗಳಿಂದ ಬೇರ್ಪಡಿಸುತ್ತವೆ. ಇವು ಮೊಸಳೆಗಳು ಮತ್ತು ನೀರಾನೆಗಳಿಗೆ ಅತ್ಯುತ್ತಮ ಇರುನೆಲೆಗಳಾಗಿವೆ. ಈ ಒಳನಾಡಿನ ಸರೋವರಗಳಲ್ಲಿ ಹೇರಳ ಮೀನುಗಳಿದ್ದು, ಅವುಗಳ ದಡಗಳಲ್ಲಿ ಸಾಲಾಗಿ ಮ್ಯಾಂಗ್ರೋವ್ ಕಾಡುಗಳಿವೆ. ಆಫ್ರಿಕದ ಮೀನು ಹದ್ದುಗಳು ಮತ್ತು ಕಡಲ ಹದ್ದುಗಳು ಸಿಹಿನೀರಿನ ಸರೋವರದಲ್ಲಿ ಆಹಾರವನ್ನು ಹುಡುಕುತ್ತಾ ನೀರಿನ ಮೇಲೆ ಹಾರಾಡುತ್ತಿರುತ್ತವೆ. ಅದೇ ವೇಳೆ ವಿವಿಧ ಜಾತಿಯ ಬಣ್ಣ ಬಣ್ಣದ ಮಿಂಚುಳ್ಳಿಗಳು ಆಳವಿಲ್ಲದ ನೀರಿನಲ್ಲಿ ಮೀನನ್ನು ಹುಡುಕುತ್ತಿರುತ್ತವೆ. ನೀರನ್ನು ಇಷ್ಟಪಡುವ ಆನೆಗಳು ಸಮುದ್ರತೀರವನ್ನು ತಲುಪಲು ಈ ಸಿಹಿನೀರಿನ ಸರೋವರಗಳನ್ನು ಸಂತೋಷದಿಂದ ಈಜಿಕೊಂಡು ಹೋಗುತ್ತವೆ. ಸಮುದ್ರತೀರದಲ್ಲಿ ಅವು ತಮ್ಮ ಅಚ್ಚುಮೆಚ್ಚಿನ ಪಾಮ್ ಫಲವನ್ನು ಹೊಟ್ಟೆಬಿರಿಯುವಷ್ಟು ತಿನ್ನುತ್ತವೆ.
ಸಮಭಾಜಕವೃತ್ತದ ಕಾಡುಗಳಲ್ಲಿ ಕೋತಿಗಳು ಕಾಡಿನ ಮೇಲ್ಮೈಯ ಕೊಂಬೆಗಳಲ್ಲಿ ಜಿಗಿಯುತ್ತಿರುತ್ತವೆ, ಬಣ್ಣ ಬಣ್ಣದ ಚಿಟ್ಟೆಗಳು ಪ್ರಜ್ವಲ ಬೆಳಕಿನಲ್ಲಿ ಹಾರುತ್ತಿರುತ್ತವೆ. ಹಣ್ಣು ಬಾವಲಿಗಳು ಹಗಲಿನಲ್ಲಿ ತಮ್ಮ ನೆಚ್ಚಿನ ಮರಗಳಲ್ಲಿ ಮಲಗಿರುತ್ತವೆ ಮತ್ತು ರಾತ್ರಿ ವೇಳೆಯಲ್ಲಿ ಕಾಡಿನಾದ್ಯಂತ ಬೀಜಗಳನ್ನು ಪಸರಿಸುತ್ತಾ ತಮ್ಮ ಪ್ರಾಮುಖ್ಯ ಕೆಲಸವನ್ನು ಮಾಡುತ್ತವೆ. ಕಾಡಿನಂಚಿನಲ್ಲಿ ಝಗಝಗಿಸುವ ಕದಿರು ಗಿಣಿಗಳು ಹೂಬಿಡುವ ಮರಗಳಿಂದ ಮತ್ತು ಬಳ್ಳಿಗಳಿಂದ ಮಕರಂದವನ್ನು ಹೀರುತ್ತಿರುತ್ತವೆ. ಹೀಗಿರುವುದರಿಂದಲೇ ಲೊಆಂಗೋ ಅನ್ನು “ಸಮಭಾಜಕವೃತ್ತದ ಆಫ್ರಿಕದಲ್ಲಿನ ವಾತಾವರಣವನ್ನು ಉತ್ತಮವಾಗಿ ಅನುಭವಿಸುವ ಸ್ಥಳ” ಎಂದು ಸೂಕ್ತವಾಗಿಯೇ ವರ್ಣಿಸಲಾಗಿದೆ.
ಲೋಪೆ—ಹೆಚ್ಚು ಗೊರಿಲ್ಲಗಳಿರುವ ಕೆಲವೇ ಸ್ಥಳಗಳಲ್ಲಿ ಒಂದು
ಲೋಪೆ ರಾಷ್ಟ್ರೀಯ ಉದ್ಯಾನವನದಲ್ಲಿ, ಮಾನವನು ಕೈಹಾಕಿರದ ವಿಶಾಲವಾದ ಮಳೆಕಾಡುಗಳಿವೆ ಮತ್ತು ವನಪ್ರದೇಶದ ಉತ್ತರಕ್ಕೆ ಅಲ್ಲಲ್ಲಿ ಹುಲ್ಲುಗಾಡುಗಳು ಹಾಗೂ ಗ್ಯಾಲರಿ ಕಾಡು (ಒಂದು ಕಾಲುವೆಯುದ್ದಕ್ಕೂ ಬೆಳೆದಿರುವ ಕಾಡು) ಇದೆ. ಕಾಡಿನಲ್ಲಿ ಗೊರಿಲ್ಲಗಳು, ಚಿಂಪಾಂಜಿಗಳು ಇಲ್ಲವೇ ಮ್ಯಾಂಡ್ರಿಲ್‌ಗಳನ್ನು ನೋಡಲು ಬಯಸುವ ಪರಿಸರ ಪ್ರೇಮಿಗಳಿಗೆ ಇದು ಯೋಗ್ಯ ಸ್ಥಳವಾಗಿದೆ. 5,000 ಕಿಲೊಮೀಟರುಗಳಷ್ಟಿರುವ ಈ ಸುರಕ್ಷಿತ ಪ್ರದೇಶದಲ್ಲಿ ಸುಮಾರು 3,000 ದಿಂದ 5,000 ದಷ್ಟು ಗೊರಿಲ್ಲಗಳು ಸುತ್ತಾಡುತ್ತಿರುತ್ತವೆ.
ಈ ಉದ್ಯಾನವನದ ಮಾಜಿ ಅಧಿಕಾರಿಯಾದ ಆಗಸ್ಟಿನ್ 2002 ರಲ್ಲಿ ಗೊರಿಲ್ಲಗಳನ್ನು ಅನಿರೀಕ್ಷಿತವಾಗಿ ಸಂಧಿಸಿದ್ದನ್ನು ಜ್ಞಾಪಿಸಿಕೊಳ್ಳುತ್ತಾರೆ. ಅವರು ಹೇಳುವುದು: “ಕಾಡಿನಲ್ಲಿ ನಡೆಯುತ್ತಿದ್ದಾಗ ನಾಲ್ಕು ಗೊರಿಲ್ಲಗಳ ಒಂದು ಸಂಸಾರ ಎದುರಾಯಿತು. ಸುಮಾರು 35 ವರ್ಷ ಪ್ರಾಯದ ಬಹುದೊಡ್ಡ ಸಿಲ್ವರ್‌ಬ್ಯಾಕ್ ಗಂಡು ಗೊರಿಲ್ಲ ನನ್ನೆದುರಿಗೆ ನಿಂತಿತು. ಅದರ ತೂಕ ನನಗಿಂತ ಕಡಿಮೆಪಕ್ಷ ಮೂರು ಪಟ್ಟು ಹೆಚ್ಚಿತ್ತು. ಶಿಫಾರಸುಮಾಡಿರುವ ವಿಧಾನವನ್ನು ಅನುಸರಿಸುತ್ತಾ ನಾನು ತಕ್ಷಣ ಕುಳಿತುಕೊಂಡು ತಲೆ ಬಗ್ಗಿಸಿದೆ ಮತ್ತು ಸೋತ ಭಂಗಿಯಲ್ಲಿ ನೆಲವನ್ನು ನೋಡತೊಡಗಿದೆ. ಗೊರಿಲ್ಲ ಬಂದು ನನ್ನ ಪಕ್ಕದಲ್ಲಿ ಕುಳಿತು ತನ್ನ ಕೈಗಳನ್ನು ನನ್ನ ಹೆಗಲ ಮೇಲಿಟ್ಟಿತು. ನಂತರ ನನ್ನ ಮುಷ್ಟಿಯನ್ನು ತೆರೆದು ಅಂಗೈಯನ್ನು ಪರೀಕ್ಷಿಸಿತು. ನನ್ನಿಂದ ಅದರ ಸಂಸಾರಕ್ಕೆ ಬೆದರಿಕೆಯಿಲ್ಲ ಎಂದು ಮನವರಿಕೆಯಾದಾಗ ನಿಧಾನವಾಗಿ ಹೆಜ್ಜೆಯಿಡುತ್ತಾ ಕಾಡಿನೊಳಗೆ ಹೊರಟುಹೋಯಿತು. ಆ ಸ್ಮರಣೀಯ ದಿನದಂದು, ನೈಸರ್ಗಿಕ ಇರುನೆಲೆಗಳಲ್ಲಿ ಪ್ರಾಣಿ ಸಂಪರ್ಕದ ಆಕರ್ಷಣೆಯೇನೆಂದು ತಿಳಿದುಕೊಂಡೆ. ಜನರು ಗೊರಿಲ್ಲಗಳನ್ನು ಮಾಂಸಕ್ಕಾಗಿ ಇಲ್ಲವೇ ಅವುಗಳು ಅಪಾಯಕಾರಿ ಎಂಬ ತಪ್ಪುಕಲ್ಪನೆಯಿಂದಾಗಿ ಕೊಲ್ಲುವುದಾದರೂ ಅವು ನಮ್ಮ ರಕ್ಷಣೆಗೆ ಅರ್ಹವಾದ ಶಾಂತ ಪ್ರಾಣಿಗಳಾಗಿವೆ.”
ಲೋಪೆಯಲ್ಲಿ ಮ್ಯಾಂಡ್ರಿಲ್‌ಗಳು ಅಂದರೆ ದೊಡ್ಡ ಕೋತಿಗಳು ಬಹಳ ದೊಡ್ಡ ಗುಂಪಾಗಿ, ಕೆಲವೊಮ್ಮೆ ಸಾವಿರಕ್ಕಿಂತ ಹೆಚ್ಚು ಸಂಖ್ಯೆಯಲ್ಲಿ ಒಟ್ಟು ಸೇರುತ್ತವೆ. ಪ್ರಪಂಚದ ಪ್ರಾಣಿವರ್ಗಗಳ ಅತಿ ದೊಡ್ಡ ಒಕ್ಕೂಟಗಳಲ್ಲಿ ಇದೂ ಒಂದು ಮತ್ತು ಇದು ಖಂಡಿತವಾಗಿ ಚೀರಾಟದಿಂದ ತುಂಬಿರುತ್ತದೆ. ಕ್ಯಾಮರೂನ್‌ನ ಸಂದರ್ಶಕನೊಬ್ಬನು ಇಂತಹ ಒಂದು ದೊಡ್ಡ ಗುಂಪಿನೊಂದಿಗೆ ತನಗಾದ ಅನುಭವವನ್ನು ವಿವರಿಸುತ್ತಾನೆ.
“ಅನೇಕ ಮ್ಯಾಂಡ್ರಿಲ್‌ಗಳಿಗೆ ಸಿಕ್ಕಿಸಲಾದ ರೇಡಿಯೋ ಕಾಲರ್‌ಗಳ ಸಹಾಯದಿಂದ ನಮ್ಮ ಗೈಡ್ ಅವುಗಳನ್ನು ಗುರುತಿಸಿದನು. ನಾವು ನಮ್ಮ ಗುಂಪಿನ ಮುಂಭಾಗಕ್ಕೆ ಹೋಗಿ ಮರೆಯಾದ ಪ್ರದೇಶದಲ್ಲಿ ಮ್ಯಾಂಡ್ರಿಲ್‌ಗಳಿಗಾಗಿ ಕಾಯುತ್ತಾ ನಿಂತೆವು. ಸುಮಾರು 20 ನಿಮಿಷಗಳ ತನಕ ಪಕ್ಷಿ ಹಾಗೂ ಕೀಟಗಳ ಸಂಗೀತವನ್ನು ಆಲಿಸಿದೆವು. ಈ ಶಾಂತತೆ ಮ್ಯಾಂಡ್ರಿಲ್‌ಗಳ ಹಿಂಡು ಹತ್ತಿರ ಬಂದಾಗ ಏಕಾಏಕಿಯಾಗಿ ಭಂಗವಾಯಿತು. ಲಟಲಟನೆ ಮುರಿಯುತ್ತಿರುವ ರೆಂಬೆಗಳ ಶಬ್ದ ಮತ್ತು ಪ್ರಾಣಿಗಳ ಗಟ್ಟಿಯಾದ ಕೂಗು ಇನ್ನೇನು ಬಲವಾದ
ಬಿರುಗಾಳಿ ಬೀಸುತ್ತದೋ ಎಂಬ ಅನಿಸಿಕೆಯನ್ನು ಕೊಟ್ಟಿತು. ಮುಂದಾಳತ್ವ ವಹಿಸುತ್ತಿರುವ ಮ್ಯಾಂಡ್ರಿಲ್‌ಗಳನ್ನು ನಾನು ನೋಡಿದಾಗ ಅವು ಸೇನೆಯ ಮುಂಗಾವಲು ಪಡೆಯಂತೆ ತೋರಿದವು. ದೊಡ್ಡ ಗಂಡು ಮ್ಯಾಂಡ್ರಿಲ್‌ಗಳು ಮುಂದಾಳತ್ವ ವಹಿಸುತ್ತಾ ಕಾಡು ನೆಲದಲ್ಲಿ ಸರಸರನೇ ನಡೆಯುತ್ತಿರುವಾಗ, ಹೆಣ್ಣು ಮ್ಯಾಂಡ್ರಿಲ್‌ಗಳು ಮತ್ತು ಮರಿಗಳು ರೆಂಬೆಯಿಂದ ರೆಂಬೆಗೆ ಹಾರುತ್ತಿದ್ದವು. ದೊಡ್ಡ ಗಂಡು ಮ್ಯಾಂಡ್ರಿಲ್‌ಗಳಲ್ಲಿ ಒಂದು, ಇದ್ದಕ್ಕಿದ್ದಹಾಗೆ ನಿಂತು ಸಂಶಯದಿಂದ ಸುತ್ತಲೂ ನೋಡತೊಡಗಿತು. ಕಾಡು ಮರಗಳ ರೆಂಬೆಗಳಲ್ಲಿ ಜಿಗಿದಾಡುತ್ತಿದ್ದ ಒಂದು ಚಿಕ್ಕ ಮ್ಯಾಂಡ್ರಿಲ್ ನಮ್ಮನ್ನು ನೋಡಿ ಎಚ್ಚರಿಕೆಯ ಚೀತ್ಕಾರವನ್ನು ಹೊರಡಿಸಿತು. ಇಡೀ ಗುಂಪು ನಡಿಗೆಯ ವೇಗವನ್ನು ಹೆಚ್ಚಿಸಿತು ಮತ್ತು ಗಟ್ಟಿಯಾಗಿ ಕಿರಿಚುವ ಮೂಲಕ ಸಿಟ್ಟನ್ನು ತೋರಿಸಿತು. ಇದರಿಂದ ಗದ್ದಲ ಇನ್ನೂ ಹೆಚ್ಚಾಯಿತು. ಕೆಲವೇ ಕ್ಷಣಗಳಲ್ಲಿ ಅವು ಮರೆಯಾದವು. ಸುಮಾರು 400 ಮ್ಯಾಂಡ್ರಿಲ್‌ಗಳು ನಮ್ಮ ಎದುರಲ್ಲೇ ಮುಂದಕ್ಕೆ ಹೋದವು ಎಂದು ನಮ್ಮ ಗೈಡ್ ಹೇಳಿದನು.”ಮ್ಯಾಂಡ್ರಿಲ್‌ಗಳಷ್ಟೇ ಶಬ್ದ ಮಾಡುವ ಚಿಂಪಾಂಜಿಗಳನ್ನು ಕಂಡುಕೊಳ್ಳುವುದು ಇನ್ನೂ ಕಷ್ಟ. ಏಕೆಂದರೆ ಅವು ಆಹಾರವನ್ನು ಅರಸುತ್ತಾ ಕಾಡಿನಲ್ಲಿ ವೇಗವಾಗಿ ಚಲಿಸುತ್ತವೆ. ಇನ್ನೊಂದು ಕಡೆಯಲ್ಲಿ, ಸಂದರ್ಶಕರು ಯಾವಾಗಲೂ ಚಿಕ್ಕ-ಮೂತಿಯ ಕೋತಿಗಳನ್ನು ಕಾಣಬಹುದು. ಅವು ಕೆಲವೊಮ್ಮೆ ಕಾಡಿನ ಅಂಚಿನಲ್ಲಿ ಹುಲ್ಲುಗಾಡಿನುದ್ದಕ್ಕೂ ಹಾರುತ್ತಿರುತ್ತವೆ. ಬಹುಶಃ ಲೋಪೆ ಉದ್ಯಾನವನದಲ್ಲಿರುವ ಜೀವಿಗಳಲ್ಲಿ ಅತ್ಯಂತ ಹೆಚ್ಚು ಏಕಾಂತವಾಸಿಯು, ಆ ಪ್ರದೇಶದಲ್ಲಿರುವ ಸೂರ್ಯ-ಬಾಲದ ಕೋತಿ ಆಗಿದೆ. ಇದನ್ನು ಕೇವಲ 20 ವರ್ಷಗಳ ಮುಂಚೆಯಷ್ಟೇ ಕಂಡುಹಿಡಿಯಲಾಯಿತು.
ಟುರಾಕೊಸ್ ಮತ್ತು ಹಾರ್ನ್‌ಬಿಲ್‌ಗಳಂಥ ಬಣ್ಣಬಣ್ಣದ ದೊಡ್ಡ ಕಾಡು ಪಕ್ಷಿಗಳು ಕರ್ಕಶ ಶಬ್ದಮಾಡುತ್ತಾ ತಮ್ಮ ಇರುವಿಕೆಯನ್ನು ಪ್ರಕಟಪಡಿಸುತ್ತವೆ. ಈ ವನಪ್ರದೇಶದೊಳಗೆ ಸುಮಾರು 400 ಜಾತಿಯ ಪಕ್ಷಿಗಳಿವೆಯೆಂದು ಅಧಿಕೃತವಾಗಿ ಎಣಿಸಲಾಗಿದೆ. ಆದ್ದರಿಂದ ಇದು ಪಕ್ಷಿವೀಕ್ಷಕರ ಒಂದು ಯಾತ್ರಾಸ್ಥಳವಾಗಿದೆ.
ಜೀವವೈವಿಧ್ಯತೆಗೆ ಆಶ್ರಯತಾಣ
ಲೊಆಂಗೋ ಮತ್ತು ಲೋಪೆ, ಗಬಾನ್‌ನಲ್ಲಿರುವ ಒಟ್ಟು 13 ರಾಷ್ಟ್ರೀಯ ಉದ್ಯಾನವನಗಳಲ್ಲಿ ಕೇವಲ ಎರಡಾಗಿವೆ. ಇತರ ಉದ್ಯಾನವನಗಳು ಮ್ಯಾಂಗ್ರೋವ್ ಕಾಡುಗಳನ್ನು ರಕ್ಷಿಸುತ್ತವೆ, ಅಪೂರ್ವ ಸಸ್ಯವರ್ಗವನ್ನು ಕಾಪಾಡುತ್ತವೆ ಮತ್ತು ವಲಸೆಬಂದ ಹಕ್ಕಿಗಳ ತಾಣಗಳನ್ನು ಸಂರಕ್ಷಿಸುತ್ತವೆ. ವನ್ಯಜೀವಿ ಸಂರಕ್ಷಣಾ ಸಂಘದ ಲೀ ವೈಟ್ ವಿವರಿಸುವುದು: “ಇಡೀ ದೇಶದಲ್ಲೇ ಅತ್ಯುತ್ತಮವಾದ ಪರಿಸರ ವ್ಯವಸ್ಥೆಗಳನ್ನು ಗಬಾನ್ ಸಂರಕ್ಷಿಸಿದೆ. ಸಂರಕ್ಷಿಸಲ್ಪಟ್ಟ ಪ್ರದೇಶಗಳ ಗಾತ್ರ ಮಾತ್ರವಲ್ಲ ಅದರ ಗುಣಮಟ್ಟ ಕೂಡ ಗಮನಾರ್ಹವಾಗಿದೆ. ಅವರು 2002 ರಲ್ಲಿ ತುಂಬ ಕಡಿಮೆ ಸಮಯದಲ್ಲಿ ದೇಶದ ಎಲ್ಲಾ ಜೀವವೈವಿಧ್ಯತೆಯಿರುವ ಅತ್ಯುತ್ತಮವಾದ ರಾಷ್ಟ್ರೀಯ ಉದ್ಯಾನವನ ವ್ಯವಸ್ಥೆಯನ್ನು ನಿರ್ಮಿಸಿದರು.”
ಅನೇಕ ಸವಾಲುಗಳು ಇನ್ನೂ ಉಳಿದಿವೆ ಎಂದು ಅಧ್ಯಕ್ಷರಾದ ಬೊಂಗೊ ಒಂಡಿಂಬಾ ಬಹಿರಂಗವಾಗಿ ಒಪ್ಪಿಕೊಳ್ಳುತ್ತಾರೆ. ಅವರು ಹೇಳುವುದು: “ನಾವು ಲೋಕವ್ಯಾಪಕ ಕಾರ್ಯಾಚರಣೆಯ ಬಗ್ಗೆ ಮಾತಾಡುತ್ತಿದ್ದೇವೆ. ಅದರಲ್ಲಿ ದೀರ್ಘಾವಧಿಯ ಹಾಗೂ ಅಲ್ಪಾವಧಿಯ ತ್ಯಾಗಗಳು ಒಳಗೂಡಿರುವುದು ನಿಸ್ಸಂಶಯವಾದರೂ, ಇದರಿಂದ ಪ್ರಕೃತಿಯ ಅದ್ಭುತಗಳನ್ನು ಭವಿಷ್ಯದ ಪೀಳಿಗೆಗಳಿಗಾಗಿ ಸಂರಕ್ಷಿಸಿಡಬೇಕೆಂಬ ನಮ್ಮ ಮಹದಾಶೆಯನ್ನು ಪೂರೈಸಸಾಧ್ಯವಿದೆ.” (g 1/08)
[ಪುಟ 17ರಲ್ಲಿರುವ ಭೂಪಟಗಳು]
(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)
ಆಫ್ರಿಕ
ಗಬಾನ್
ಗಬಾನ್‌ನ 13 ರಾಷ್ಟ್ರೀಯ ಉದ್ಯಾನವನಗಳು
ಲೋಪೆ ರಾಷ್ಟ್ರೀಯ ಉದ್ಯಾನವನ
ಲೊಆಂಗೋ ರಾಷ್ಟ್ರೀಯ ಉದ್ಯಾನವನ
[ಪುಟ 16, 17ರಲ್ಲಿರುವ ಚಿತ್ರಗಳು]
ಹಂಪ್‌ಬ್ಯಾಕ್ ತಿಮಿಂಗಿಲ ಮತ್ತು ಲೊಆಂಗೋವಿನ ವೈಮಾನಿಕ ನೋಟ
[ಕೃಪೆ]
ತಿಮಿಂಗಿಲ: Wildlife Conservation Society
[ಪುಟ 16, 17ರಲ್ಲಿರುವ ಚಿತ್ರಗಳು]
ಮ್ಯಾಂಡ್ರಿಲ್ (ಎಡ) ಮತ್ತು ಗೊರಿಲ್ಲ (ಬಲ)
[ಪುಟ 15ರಲ್ಲಿರುವ ಚಿತ್ರ ಕೃಪೆ]
Robert J. Ross