ನಾನು ಇಲೆಕ್ಟ್ರಾನಿಕ್ ಗೇಮ್ಸ್ ಆಡಬಹುದೋ?
ಯುವ ಜನರು ಪ್ರಶ್ನಿಸುವುದು
ನಾನು ಇಲೆಕ್ಟ್ರಾನಿಕ್ ಗೇಮ್ಸ್ ಆಡಬಹುದೋ?
ಇಲೆಕ್ಟ್ರಾನಿಕ್ ಗೇಮ್ಸ್ ಕೇವಲ ಉಚ್ಚ-ತಂತ್ರಜ್ಞಾನದ ಮನೋರಂಜನೆಯಷ್ಟೇ ಅಲ್ಲ. ಅವು ನಿಮ್ಮ ಕೌಶಲವನ್ನು ಪರೀಕ್ಷಿಸುತ್ತವೆ ಮತ್ತು ಬೇಸರವನ್ನು ನಿವಾರಿಸುತ್ತವೆ ನಿಜ. ಆದರೆ ಅವು ಅದಕ್ಕಿಂತಲೂ ಹೆಚ್ಚಿನದನ್ನು ಮಾಡುತ್ತವೆ. ಇಲೆಕ್ಟ್ರಾನಿಕ್ ಗೇಮ್ಸ್ ನಿಮ್ಮ ಪ್ರತಿಕ್ರಿಯಾತ್ಮಕ ಶಕ್ತಿಯನ್ನು ಚುರುಕುಗೊಳಿಸಬಲ್ಲವು ಮತ್ತು ಅಧ್ಯಯನಗಳು ತೋರಿಸುವುದೇನಂದರೆ ಅವು ದೃಷ್ಟಿಯನ್ನು ಕೇಂದ್ರೀಕರಿಸುವ ಸಾಮರ್ಥ್ಯವನ್ನು ಉತ್ತಮಗೊಳಿಸುತ್ತವೆ. ಅವುಗಳಲ್ಲಿ ಕೆಲವೊಂದು, ಗಣಿತಶಾಸ್ತ್ರ ಹಾಗೂ ವಾಚನದಲ್ಲಿ ನಿಮ್ಮ ಕೌಶಲವನ್ನು ಹೆಚ್ಚಿಸಲೂಬಹುದು. ಇದಲ್ಲದೆ ಶಾಲೆಯಲ್ಲಿ ಸಹಪಾಠಿಗಳ ಸಂಭಾಷಣೆಯು ಹೆಚ್ಚಾಗಿ ನವನವೀನ ಇಲೆಕ್ಟ್ರಾನಿಕ್ ಗೇಮ್ಸ್ ಕುರಿತಾಗಿರುತ್ತದೆ. ನೀವು ಆ ಗೇಮ್ ಆಡಿರುವಲ್ಲಿ ಮಾತ್ರ ಸಮಾನಸ್ಥರೊಂದಿಗೆ ಆ ಕುರಿತು ಸಂಭಾಷಿಸಬಲ್ಲಿರಿ.
ಇಲೆಕ್ಟ್ರಾನಿಕ್ ಗೇಮ್ಸ್ ಆಡಲು ನಿಮಗೆ ಅನುಮತಿ ಕೊಡಬೇಕೊ ಎನ್ನುವುದು ಹೆತ್ತವರು ನಿರ್ಣಯಿಸುವ ವಿಷಯ ನಿಶ್ಚಯ. (ಕೊಲೊಸ್ಸೆ 3:20) ಹಾಗೆ ಮಾಡುವಂತೆ ಅವರು ನಿಮಗೆ ಅನುಮತಿಸುವಲ್ಲಿ ಉತ್ತೇಜಕವೂ ನೈತಿಕವಾಗಿ ಸ್ವೀಕರಣೀಯವೂ ಆಗಿರುವ ಆಟವನ್ನು ಕಂಡುಕೊಳ್ಳಲು ನೀವು ಶಕ್ತರಾಗಿರಬೇಕು. ಆದರೂ ನೀವು ಬಹಳ ಎಚ್ಚರದಿಂದಿರುವುದು ಅವಶ್ಯ. ಏಕೆ?
ಅವುಗಳ ಕರಾಳ ಮುಖ!
ಹದಿನಾರು ವರ್ಷ ಪ್ರಾಯದ ಬ್ರಾಯನ್ ಹೇಳುವುದು, “ಕಂಪ್ಯೂಟರ್ ಗೇಮ್ಸ್ ಉತ್ತೇಜಕವೂ ಅಚ್ಚುಮೆಚ್ಚಿನವೂ ಆಗಿವೆ.” ಆದರೆ ಬಹುಶಃ ನಿಮಗೆ ಈಗಾಗಲೇ ತಿಳಿದಿರುವಂತೆ ಎಲ್ಲಾ ಗೇಮ್ಸ್ ಹಾನಿರಹಿತವಲ್ಲ. ಬ್ರಾಯನ್ ಒಪ್ಪಿಕೊಳ್ಳುವುದು: “ನೀವು ನಿಜ ಜೀವನದಲ್ಲಿ ಕಾರ್ಯತಃ ಮಾಡದ ವಿಷಯಗಳನ್ನು ಅಂದರೆ ಗಂಭೀರ ಸಮಸ್ಯೆಗಳಿಗೆ ಸಿಕ್ಕಿಸಿಹಾಕುವ ವಿಷಯಗಳನ್ನು ಈ ಗೇಮ್ಸ್‌ನಲ್ಲಿ ಮಾಡಬಲ್ಲಿರಿ.” ಈ ಗೇಮ್ಸ್ ಯಾವ ರೀತಿಯ ವರ್ತನೆಯನ್ನು ಉತ್ತೇಜಿಸುತ್ತವೆ?
ಕೀರ್ತನೆ 11:5; ಗಲಾತ್ಯ 5:19-21; ಕೊಲೊಸ್ಸೆ 3:8) ಕೆಲವೊಂದು ಗೇಮ್ಸ್ ಮಾಟಮಂತ್ರದ ಪದ್ಧತಿಗಳಿಗೆ ಮಹತ್ವ ಕೊಡುತ್ತವೆ. “ರೌಡಿ ತಂಡಗಳ ನಡುವಣ ಹೊಡೆದಾಟ, ಅಕ್ರಮ ಅಮಲೌಷಧಗಳ ಸೇವನೆ, ಮುಚ್ಚುಮರೆಯಿಲ್ಲದ ಲೈಂಗಿಕತೆ, ಅಶ್ಲೀಲ ಭಾಷೆ, ತೀಕ್ಷ್ಣ ಹಿಂಸಾಚಾರ, ರಕ್ತಸಿಕ್ತ ದೃಶ್ಯಗಳು” ಮುಂತಾದವು ಪ್ರಸಿದ್ಧವಾದ ಒಂದು ಆಟದ ವೈಶಿಷ್ಟ್ಯಗಳಾಗಿವೆಯೆಂದು 18 ವರ್ಷ ಪ್ರಾಯದ ಏಡ್ರೀಯನ್ ವಿವರಿಸುತ್ತಾನೆ. ಬಿಡುಗಡೆಯಾಗುವ ಪ್ರತಿ ಹೊಸ ಗೇಮ್‌ಗೆ ಹೋಲಿಸುವಾಗ ಹಳೆಯ ಗೇಮ್ ಸಪ್ಪೆಯಾಗಿ ತೋರುತ್ತದೆ. 19 ವರ್ಷ ಪ್ರಾಯದ ಜೇಮ್ಸ್ ಹೇಳುವುದೇನಂದರೆ, ಈ ಗೇಮ್ಸ್‌ನಲ್ಲಿ ಅತ್ಯಂತ ಪ್ರಸಿದ್ಧವಾದುದನ್ನು ಇಂಟರ್‌ನೆಟ್ ಮೂಲಕ ಇತರರೊಂದಿಗೆ ಆಡಬಹುದು. ಈ ಸೌಲಭ್ಯವು ವಿಡಿಯೋ ಗೇಮ್ಸ್ ಆಡುವುದನ್ನು ಸಂಪೂರ್ಣವಾಗಿ ಹೊಸ ಮಟ್ಟಕ್ಕೆ ಕೊಂಡೊಯ್ಯುತ್ತದೆ. ಜೇಮ್ಸ್ ಹೇಳುವುದು: “ನೀವು ನಿಮ್ಮ ಮನೆಯ ಕಂಪ್ಯೂಟರ್‌ನಿಂದ ಪ್ರಪಂಚದ ಇನ್ನೊಂದು ಮೂಲೆಯಲ್ಲಿರುವ ವ್ಯಕ್ತಿಯೊಂದಿಗೆ ಸ್ಪರ್ಧಿಸಬಹುದು.”
ಬೈಬಲ್ ಖಂಡಿಸುವಂಥ ವಿಷಯಗಳಾದ ಅನೈತಿಕತೆ, ದುರ್ಭಾಷೆ ಮತ್ತು ಹಿಂಸಾಚಾರವನ್ನು ಅನೇಕ ಗೇಮ್ಸ್ ಮುಚ್ಚುಮರೆಯಿಲ್ಲದೆ ಪ್ರೋತ್ಸಾಹಿಸುತ್ತವೆ. (ಪಾತ್ರನಟಿಸುವ ಗೇಮ್ಸ್ (ರೋಲ್ ಪ್ಲೇಯಿಂಗ್ ಗೇಮ್ಸ್) ಬಹಳಷ್ಟು ಜನಪ್ರಿಯಗೊಂಡಿವೆ. ಇದರಲ್ಲಿ ಪಾಲ್ಗೊಳ್ಳುವವರು ಮಾನವರ, ಪ್ರಾಣಿಗಳ ಅಥವಾ ಎರಡರ ಸೇರಿಕೆಯುಳ್ಳ ಪಾತ್ರಗಳನ್ನು ಆನ್-ಲೈನ್ ಸೃಷ್ಟಿಸುತ್ತಾರೆ. ಈ ಪಾತ್ರಗಳು ಕಂಪ್ಯೂಟರ್-ರಚಿತ ಆದರೆ ವಾಸ್ತವದಲ್ಲಿ ಅಸ್ತಿತ್ವದಲ್ಲಿಲ್ಲದ ಜಗತ್ತಿನಲ್ಲಿ ಸಾವಿರಾರು ಇತರ ಆಟಗಾರರು ಸೃಷ್ಟಿಸಿರುವ ಪಾತ್ರಗಳೊಂದಿಗೆ ನೆಲೆಸಿರುತ್ತವೆ. ನೈಜ ಜಗತ್ತಿನ ನಕಲುಪ್ರತಿಯೋಪಾದಿ ಈ ಆನ್-ಲೈನ್ ಜಗತ್ತಿನಲ್ಲಿ ಅಂಗಡಿಗಳು, ಕಾರುಗಳು, ಮನೆಗಳು, ನೈಟ್‌ಕ್ಲಬ್‌ಗಳು, ವೇಶ್ಯಾಗೃಹಗಳು ಇರುತ್ತವೆ. ಕಂಪ್ಯೂಟರ್‌ನಲ್ಲಿ ರಚಿತವಾದ ಅವರ ಪಾತ್ರಗಳು ಸಂವಾದಿಸಶಕ್ತವಾದ್ದರಿಂದ ಈ ಆಟಗಾರರು ಒಬ್ಬರಿಗೊಬ್ಬರು ಕ್ಷಣಮಾತ್ರದಲ್ಲಿ ಸಂದೇಶಗಳನ್ನು ಕಳುಹಿಸಬಹುದು.
ಈ ಕಂಪ್ಯೂಟರ್-ರಚಿತ ಜಗತ್ತಿನಲ್ಲಿ ಏನು ಸಂಭವಿಸುತ್ತದೆ? ಪತ್ರಕರ್ತರೊಬ್ಬರು ತಿಳಿಸುವುದು: “ಸಾಮಾನ್ಯ ಜನರು ತಾವು ನಿಜ ಜೀವನದಲ್ಲಿ ಎಂದೂ ಮಾಡದ ಅಥವಾ ಮಾಡಲಾಗದ ಚಟುವಟಿಕೆಗಳಲ್ಲಿ ಒಳಗೂಡುತ್ತಾರೆ.” ಅವರು ಕೂಡಿಸುವುದು: “ಲೈಂಗಿಕತೆ ಹಾಗೂ ವೇಶ್ಯಾವೃತ್ತಿ ಇಲ್ಲಿ ಸರ್ವಸಾಮಾನ್ಯ.” ಆಟಗಾರರು ಕೇವಲ ಕೆಲವೇ ಗುಂಡಿಗಳನ್ನು ಒತ್ತುವ ಮೂಲಕ ಅವರ ಪಾತ್ರಗಳು ಲೈಂಗಿಕ ಕೃತ್ಯಗಳಲ್ಲಿ ತೊಡಗುವಂತೆ ಮಾಡಬಲ್ಲರು. ಅದೇ ಸಮಯದಲ್ಲಿ ನಿಜವಾಗಿ ಯಾರು ಆ ಗೇಮ್ಸ್‌ಲ್ಲಿ ಭಾಗವಹಿಸುತ್ತಿದ್ದಾರೋ ಅವರು ಸಂದೇಶಗಳನ್ನು ಕಳುಹಿಸುವ ಮೂಲಕ ಲೈಂಗಿಕತೆಯ ಕುರಿತು ಮಾತನಾಡಿಕೊಳ್ಳುತ್ತಾರೆ. ಇದಕ್ಕೆ ಕೂಡಿಸುತ್ತಾ ನ್ಯೂ ಸೈಂಟಿಸ್ಟ್ ಪತ್ರಿಕೆಯು ತಿಳಿಸುವುದು, ಇಂತಹ ಜಗತ್ತಿನಲ್ಲಿ “ದುಷ್ಕೃತ್ಯಗಳು, ಮಾಫಿಯದಂತಹ ಅಪರಾಧ ತಂಡಗಳು, ವೇಶ್ಯಾವಾಟಿಕೆಯ ದಲ್ಲಾಳಿಗಳು, ಸುಲಿಗೆಗಾರರು, ಮೋಸಗಾರರು, ಮತ್ತು ಕೊಲೆಪಾತಕಿಗಳು” ತುಂಬಿರುತ್ತಾರೆ. ಇನ್ನೊಂದು ಪತ್ರಿಕೆಯು ವರದಿಸುವುದು: “ನಿಜ ಜೀವನದಲ್ಲಿ ಕಾನೂನುಬಾಹಿರ ಆಗಿರುವಂಥ ಚಟುವಟಿಕೆಗಳು ಅಂದರೆ ವೇಶ್ಯಾಗೃಹಗಳಲ್ಲಿ ಆಟಗಾರನು ವೇಶ್ಯೆಯನ್ನು ಬಲಾತ್ಕರಿಸುವುದು ಇಲ್ಲವೇ ಮಕ್ಕಳಂತೆ ಕಾಣುವ ಪಾತ್ರಧಾರಿಗಳನ್ನು ಲೈಂಗಿಕತೆಯಲ್ಲಿ ತೊಡಗಿಸುವ ಜನರ ಬಗ್ಗೆ ವಿಮರ್ಶಕರು ಚಿಂತೆ ವ್ಯಕ್ತಪಡಿಸಿದ್ದಾರೆ.”
ನಿಮ್ಮ ಆಯ್ಕೆ ಏಕೆ ಪ್ರಾಮುಖ್ಯ
ಅಂತಹ ಹಿಂಸಾತ್ಮಕ ಹಾಗೂ ಲೈಂಗಿಕತೆಯನ್ನು ಚಿತ್ರಿಸುವ ಗೇಮ್ಸ್ ಆಡುವವರು ಹೀಗೆ ಹೇಳಬಹುದು: “ಇದರಿಂದ ಯಾರಿಗೂ ಏನೂ ಹಾನಿ ಇಲ್ಲ. ಇದು ನಿಜ ಕೂಡಾ ಅಲ್ಲ. ಕೇವಲ ಆಟ ಅಷ್ಟೇ.” ಆದರೆ ಇಂಥ ಸುಳ್ಳು ತರ್ಕದಿಂದ ನಿಮ್ಮನ್ನು ನೀವೇ ಮೋಸಗೊಳಿಸಬೇಡಿರಿ!
ಬೈಬಲ್ ಹೇಳುವುದು: “ತನ್ನ ಕೆಲಸವು ಶುದ್ಧವೋ ಇಲ್ಲವೇ ನ್ಯಾಯವೋ ಎಂದು ತನ್ನ ಕ್ರಿಯೆಗಳಿಂದಲೇ ಬಾಲಕನು ತೋರ್ಪಡಿಸಿಕೊಳ್ಳುತ್ತಾನೆ.” (ಜ್ಞಾನೋಕ್ತಿ 20:11, NIBV) ಹಿಂಸಾತ್ಮಕ ಹಾಗೂ ಅನೈತಿಕವಾದ ಇಲೆಕ್ಟ್ರಾನಿಕ್ ಗೇಮ್ಸ್ ಆಡುವುದು ನಿಮ್ಮ ರೂಢಿಯಾಗಿರುವಲ್ಲಿ ನಿಮ್ಮ ಆಲೋಚನೆಗಳು ಶುದ್ಧವೂ ನ್ಯಾಯವೂ ಆಗಿವೆಯೆಂದು ಹೇಳಲು ಸಾಧ್ಯವೇ? ಅಧ್ಯಯನಗಳು ಪದೇ ಪದೇ ತೋರಿಸುವುದೇನಂದರೆ ಹಿಂಸಾತ್ಮಕ ಮನೋರಂಜನೆಯನ್ನು ವೀಕ್ಷಿಸುವುದು ಅವುಗಳನ್ನು ನೋಡುವವರಲ್ಲಿ ಆಕ್ರಮಣ ಪ್ರವೃತ್ತಿಯನ್ನು ಹೆಚ್ಚಿಸುತ್ತದೆ. ನ್ಯೂ ಸೈಂಟಿಸ್ಟ್ ಪತ್ರಿಕೆಯು ಇತ್ತೀಚೆಗೆ ಹೇಳಿದ್ದು: “ಪರಸ್ಪರ ಸಂವಾದಿಸುವಂತೆ ಮಾಡುವ ವಿಡಿಯೋ ಗೇಮ್ಸ್ ಟಿ.ವಿ. ಗಿಂತ ಗಾಢವಾದ ಪರಿಣಾಮ ಬೀರುತ್ತವೆ.”
ಹಿಂಸಾತ್ಮಕ ಇಲ್ಲವೇ ಅನೈತಿಕ ಗೇಮ್ಸ್ ಆಡಲು ಆಯ್ದುಕೊಳ್ಳುವುದು ವಿಕಿರಣಶೀಲ ತ್ಯಾಜ್ಯದೊಂದಿಗೆ ಆಟವಾಡಲು ಆಯ್ಕೆಮಾಡಿದಂತಿರುತ್ತದೆ. ಅದರ ಹಾನಿಕಾರಕ ಪರಿಣಾಮಗಳು ಒಡನೆಯೇ ವ್ಯಕ್ತವಾಗಲಿಕ್ಕಿಲ್ಲ, ಆದರೆ ಖಂಡಿತ ತಪ್ಪಲಾರವು. ಯಾವ ವಿಧಗಳಲ್ಲಿ? ಹೆಚ್ಚು ಪ್ರಮಾಣದ ವಿಕಿರಣಕ್ಕೆ ಒಡ್ಡಲ್ಪಡುವಿಕೆಯಿಂದ ಹೊಟ್ಟೆಯ ಒಳಪದರಕ್ಕೆ ಹಾನಿಯಾಗುತ್ತದೆ. ಆಗ ಬ್ಯಾಕ್ಟೀರಿಯಗಳು ಕರುಳಿನ ಮೂಲಕ ರಕ್ತಪ್ರವಾಹವನ್ನು ಹೊಕ್ಕಿ ರೋಗಗಳನ್ನು ಉಂಟುಮಾಡಬಲ್ಲವು. ಅದರಂತೆಯೇ ಸಚಿತ್ರ ಕಾಮ ಮತ್ತು ಭೀಕರ ಹಿಂಸಾಚಾರಕ್ಕೆ ಒಡ್ಡಲ್ಪಡುವುದು ನಿಮ್ಮ ನೈತಿಕ ಪ್ರಜ್ಞೆಯನ್ನು ಹಾನಿಗೊಳಪಡಿಸಿ ಶರೀರದ ಆಶೆಗಳು ನಿಮ್ಮ ಯೋಚನೆ ಹಾಗೂ ಕ್ರಿಯೆಗಳ ಮೇಲೆ ಮೇಲುಗೈ ಸಾಧಿಸುವಂತೆ ಮಾಡುವುದು.—ಎಫೆಸ 4:19; ಗಲಾತ್ಯ 6:7, 8.
ನಾನು ಯಾವ ಗೇಮ್ ಆಯ್ಕೆಮಾಡಬೇಕು?
ಹೆತ್ತವರು ನಿಮಗೆ ಯಾವುದೇ ಇಲೆಕ್ಟ್ರಾನಿಕ್ ಗೇಮ್ಸ್ ಆಡಬಹುದೆಂದು ಅನುಮತಿ ಕೊಡುವಲ್ಲಿ, ಯಾವುದನ್ನು ಆರಿಸಿಕೊಳ್ಳಬೇಕು ಮತ್ತು ಎಷ್ಟು ಸಮಯವನ್ನು ಅವುಗಳಿಗೆ ವ್ಯಯಿಸಬೇಕು ಎಂಬುದನ್ನು ಹೇಗೆ ತಿಳಿದುಕೊಳ್ಳಬಲ್ಲಿರಿ? ಮುಂದಿನ ಪ್ರಶ್ನೆಗಳನ್ನು ಸ್ವತಃ ಕೇಳಿಕೊಳ್ಳಿ:
◼ ನನ್ನ ಆಯ್ಕೆ ಯೆಹೋವನ ಮನಸ್ಸನ್ನು ನೋಯಿಸುವುದೊ? ನೀವು ಯಾವ ವಿಧದ ಗೇಮ್ ಆಯ್ಕೆ ಮಾಡುತ್ತೀರೋ ಅದು ದೇವರಿಗೆ ನಿಮ್ಮ ಕುರಿತು ಇರುವ ಅನಿಸಿಕೆಯನ್ನು ಪ್ರಭಾವಿಸಬಲ್ಲದು. “ಯೆಹೋವನು ನೀತಿವಂತನನ್ನು ಪರೀಕ್ಷಿಸುತ್ತಾನೆ; ಆದರೆ ದುಷ್ಟನನ್ನೂ ಬಲಾತ್ಕಾರ ಪ್ರಿಯನನ್ನೂ ಆತನ ಪ್ರಾಣವು ದ್ವೇಷಿಸುತ್ತದೆ” (NIBV) ಎನ್ನುತ್ತದೆ ಕೀರ್ತನೆ 11:5. ಮಾಟಮಂತ್ರದ ಪದ್ಧತಿಗಳಲ್ಲಿ ತೊಡಗುವವರ ಬಗ್ಗೆ ದೇವರ ವಾಕ್ಯ ಹೇಳುವುದು: “ಇಂಥ ಕೆಲಸಗಳನ್ನು ನಡಿಸುವವರು ಯೆಹೋವನಿಗೆ ಅಸಹ್ಯರಾಗಿದ್ದಾರೆ.” (ಧರ್ಮೋಪದೇಶಕಾಂಡ 18:10-12) ನಾವು ದೇವರ ಸ್ನೇಹಿತರಾಗಿರಲು ಬಯಸುವಲ್ಲಿ, “ಯೆಹೋವನನ್ನು ಪ್ರೀತಿಸುವವರೇ, ಕೆಟ್ಟತನವನ್ನು ಹಗೆಮಾಡಿರಿ” ಎಂಬ ಕೀರ್ತನೆ 97:10 ರಲ್ಲಿರುವ ಸಲಹೆಯನ್ನು ಅನುಸರಿಸಬೇಕು.
◼ ಈ ಆಟವು ನನ್ನ ಆಲೋಚನೆಗಳನ್ನು ಹೇಗೆ ಪ್ರಭಾವಿಸುವುದು? ನಿಮ್ಮನ್ನೇ ಹೀಗೆ ಕೇಳಿಕೊಳ್ಳಿ: ‘ಈ ಗೇಮ್ ಆಡುವುದು ನಾನು “ಜಾರತ್ವಕ್ಕೆ ದೂರವಾಗಿ ಓಡಿ” ಹೋಗುವುದನ್ನು ಸುಲಭವಾಗಿಸುತ್ತದೋ ಅಥವಾ ಕಷ್ಟಕರವಾಗಿಸುತ್ತದೋ?’ (1 ಕೊರಿಂಥ 6:18) ಲೈಂಗಿಕವಾಗಿ ಉದ್ರೇಕಿಸುವಂಥ ಚಿತ್ರಗಳು ಅಥವಾ ಸಂಭಾಷಣೆಗಳಿಗೆ ನಿಮ್ಮನ್ನೊಡ್ಡುವ ಗೇಮ್ಸ್ ಸತ್ಯವೂ ಮಾನ್ಯವೂ ನ್ಯಾಯವೂ ಶುದ್ಧವೂ ಸದ್ಗುಣವೂ ಆಗಿರುವಂಥವುಗಳ ಮೇಲೆ ಮನಸ್ಸಿಡಲು ಸಹಾಯಮಾಡುವುದಿಲ್ಲ. (ಫಿಲಿಪ್ಪಿ 4:8) 22 ವರ್ಷ ಪ್ರಾಯದ ಏಮಿ ಹೇಳುವುದು: “ಅನೇಕ ಗೇಮ್ಸ್ ಹಿಂಸೆ, ಅಶ್ಲೀಲ ಭಾಷೆ ಮತ್ತು ಅನೈತಿಕತೆಗಳಂಥ ವಿಷಯಗಳೆಡೆಗೆ ನಿಮ್ಮ ಸಂವೇದನ ಶಕ್ತಿಯನ್ನು ಜಡಗೊಳಿಸುತ್ತವೆ ಮತ್ತು ಜೀವನದ ಇತರ ಕ್ಷೇತ್ರಗಳಲ್ಲಿ ನೀವು ವಹಿಸುವ ಎಚ್ಚರಿಕೆಯನ್ನು ಸಡಿಲಿಸುವಂತೆ ಮಾಡುತ್ತವೆ. ಏನನ್ನು ಆಡಲು ಆಯ್ಕೆಮಾಡುತ್ತೀರೋ ಅದರಲ್ಲಿ ನೀವು ಬಹಳ ಜಾಗರೂಕರಾಗಿರಬೇಕು.”
◼ ಗೇಮ್ ಆಡಲು ನಾನೆಷ್ಟು ಸಮಯ ವ್ಯಯಿಸುವೆ? 18 ವರ್ಷದ ಡೆಬ್ರ ಹೇಳುವುದು: “ಎಲ್ಲಾ ಕಂಪ್ಯೂಟರ್ ಗೇಮ್ಸ್ ಕೆಟ್ಟವೆಂದು ನಾನೆಣಿಸುವುದಿಲ್ಲ. ಆದರೆ ಅವು ಚಟಹಿಡಿಸುವಂಥವುಗಳಾಗಿದ್ದು ತುಂಬಾ ಸಮಯವನ್ನು ಕಬಳಿಸಿಬಿಡಬಲ್ಲವು.” ಹಾನಿರಹಿತವಾಗಿರುವ ಇಲೆಕ್ಟ್ರಾನಿಕ್ ಗೇಮ್ಸ್ ಸಹ ಬಹಳಷ್ಟು ಸಮಯವನ್ನು ಕಬಳಿಸುತ್ತವೆ. ಆದ್ದರಿಂದ ಈ ಗೇಮ್ಸ್ ಆಡಲು ನೀವು ಎಷ್ಟು ಸಮಯ ವ್ಯಯಿಸುತ್ತೀರಿ ಎಂಬ ದಾಖಲೆಯನ್ನಿಟ್ಟು, ಅದನ್ನು ಇತರ ಹೆಚ್ಚು ಅವಶ್ಯಕ ಚಟುವಟಿಕೆಗಳಿಗೆ ವ್ಯಯಿಸುವ ಸಮಯದೊಂದಿಗೆ ಹೋಲಿಸಿನೋಡಿ. ಹೀಗೆ ಮಾಡುವುದರಿಂದ ನಿಮಗೆ ಹೆಚ್ಚು ಪ್ರಾಮುಖ್ಯ ಚಟುವಟಿಕೆಗಳಿಗೆ ಆದ್ಯತೆ ಕೊಡಲು ಸಹಾಯವಾಗುವುದು.—ಎಫೆಸ 5:15, 16.
ನಿಮ್ಮ ಇಡೀ ಜೀವನವನ್ನು, ಅಧ್ಯಯನಮಾಡುವುದರಲ್ಲಿ ಇಲ್ಲವೇ ಕೆಲಸದಲ್ಲಿ ವ್ಯಯಿಸಬೇಕೆಂದು ಬೈಬಲ್ ಹೇಳುವುದಿಲ್ಲ. “ನಗುವ ಸಮಯ . . . ಕುಣಿದಾಡುವ ಸಮಯ” ಇದೆಯೆಂದು ಅದು ನಮ್ಮೆಲ್ಲರಿಗೆ ನೆನಪುಹುಟ್ಟಿಸುತ್ತದೆ. (ಪ್ರಸಂಗಿ 3:4) ಇಲ್ಲಿ ‘ಕುಣಿದಾಡುವುದು’ ಎಂಬ ಅಭಿವ್ಯಕ್ತಿಯು ಕೇವಲ ಆಟವನ್ನಷ್ಟೇ ಅಲ್ಲ ಬದಲಾಗಿ ದೈಹಿಕ ಚಟುವಟಿಕೆಯನ್ನೂ ಒಳಗೂಡಿದೆ ಎನ್ನುವುದನ್ನು ಗ್ರಹಿಸುವುದು ಪ್ರಾಮುಖ್ಯ. ಆದ್ದರಿಂದ ಕಂಪ್ಯೂಟರ್ ಪರದೆಯ ಮುಂದೆ ಕುಳಿತುಕೊಳ್ಳುವ ಬದಲು ನಿಮ್ಮ ಬಿಡುವಿನ ತುಸು ವೇಳೆಯನ್ನು ದೈಹಿಕ ಚಟುವಟಿಕೆಯ ಆಟಗಳಲ್ಲಿ ಕಳೆಯಬಾರದೇಕೆ?
ವಿವೇಕಯುತವಾಗಿ ಆಯ್ಕೆಮಾಡಿರಿ
ನೀವು ನಿಪುಣ ಆಟಗಾರರಾಗಿರುವಲ್ಲಿ ಇಲೆಕ್ಟ್ರಾನಿಕ್ ಗೇಮ್ಸ್‌ನಿಂದ ನಿಮಗೆ ಮೋಜು ಸಿಗುವುದು ಖಂಡಿತ. ಇದು ತಾನೇ ನಿಮ್ಮ ಗೇಮ್ಸ್ ಅನ್ನು ವಿವೇಕಯುತವಾಗಿ ಆಯ್ಕೆಮಾಡಬೇಕು ಎಂಬುದಕ್ಕೆ ಪ್ರಧಾನ ಕಾರಣವಾಗಿದೆ. ನಿಮ್ಮನ್ನೇ ಕೇಳಿಕೊಳ್ಳಿ, ‘ಶಾಲೆಯಲ್ಲಿ ನನಗೆ ಯಾವ ವಿಷಯಗಳಲ್ಲಿ ಹೆಚ್ಚು ಅಂಕಗಳು ಸಿಗುತ್ತವೆ?’ ಸಾಮಾನ್ಯವಾಗಿ ನಿಮಗೆ ಆಸಕ್ತಿಯಿರುವ ವಿಷಯಗಳಲ್ಲೇ ಅಲ್ಲವೇ? ವಾಸ್ತವದಲ್ಲಿ ಸಂಭವಿಸುವುದೇನಂದರೆ, ನಿಮಗೆ ಯಾವ ವಿಷಯಗಳಲ್ಲಿ ಹೆಚ್ಚು ಆಸಕ್ತಿ ಇದೆಯೋ ಅವುಗಳು ನಿಮ್ಮ ಮೇಲೆ ಅಷ್ಟೇ ಹೆಚ್ಚು ಪರಿಣಾಮ ಬೀರುತ್ತವೆ. ಈಗ ನಿಮ್ಮನ್ನೇ ಕೇಳಿಕೊಳ್ಳಿ: ‘ಯಾವ ಇಲೆಕ್ಟ್ರಾನಿಕ್ ಗೇಮ್‌ನಲ್ಲಿ ನನಗೆ ಹೆಚ್ಚು ಆನಂದ ಸಿಗುತ್ತದೆ? ಯಾವ ನೈತಿಕ ಪಾಠಗಳನ್ನು ಈ ಗೇಮ್ ನನಗೆ ಕಲಿಸಿಕೊಡುತ್ತಿದೆ?’
ನೀವು ಆಡಲು ಬಯಸುವ ಪ್ರತಿಯೊಂದು ಆಟದ ಗುರಿ ಮತ್ತು ಅದನ್ನು ತಲಪಲು ಬಳಸುವ ವಿಧಾನಗಳ ಬಗ್ಗೆ ಸಂಕ್ಷಿಪ್ತ ಪುನರ್ವಿಮರ್ಶೆಯನ್ನು ಬರೆದಿಡಬಾರದೇಕೆ? ಆಗ ವಿವೇಕಯುತ ಆಯ್ಕೆಗಳನ್ನು ಮಾಡಲು ನಿಮಗೆ ಸಹಾಯ ಸಿಗುವುದು. ನಿಮ್ಮ ಪುನರ್ವಿಮರ್ಶೆಯನ್ನು ಈ ಲೇಖನದಲ್ಲಿ ಕೊಡಲಾಗಿರುವ ಬೈಬಲ್ ಮೂಲತತ್ತ್ವಗಳೊಂದಿಗೆ ಹೋಲಿಸಿ ನೋಡಿದ ನಂತರ ಆ ಆಟವು ಯೋಗ್ಯವೋ ಎಂದು ನಿರ್ಧರಿಸಿ.
ನಿಮ್ಮ ಸಮಾನಸ್ಥರು ಆಡುತ್ತಾರೆಂಬ ಕಾರಣಕ್ಕಾಗಿ ಮಾತ್ರ ಆಡದೇ ತಿಳುವಳಿಕೆಭರಿತ ಆಯ್ಕೆಮಾಡಲು ಸ್ಥೈರ್ಯವನ್ನು ಹೊಂದಿರಿ. ಎಲ್ಲಕ್ಕಿಂತ ಹೆಚ್ಚಾಗಿ, “ಕರ್ತನಿಗೆ ಮೆಚ್ಚಿಗೆಯಾದದ್ದು ಏನೆಂಬದನ್ನು ಪರಿಶೋಧಿಸಿ ತಿಳುಕೊಳ್ಳಿರಿ” ಎಂಬ ಬೈಬಲ್ ಸಲಹೆಯನ್ನು ಅನ್ವಯಿಸಿರಿ.—ಎಫೆಸ 5:10. (g 1/08)
“ಯುವ ಜನರು ಪ್ರಶ್ನಿಸುವುದು” ಲೇಖನಮಾಲೆಯ ಹೆಚ್ಚಿನ ಲೇಖನಗಳನ್ನು www.watchtower.org/ype ವೆಬ್‌ಸೈಟ್‌ನಲ್ಲಿ ಕಂಡುಕೊಳ್ಳಬಹುದು
ಇದರ ಕುರಿತು ಯೋಚಿಸಿ
◼ ಹಿಂಸಾತ್ಮಕ ಅಥವಾ ಅನೈತಿಕ ಇಲೆಕ್ಟ್ರಾನಿಕ್ ಗೇಮ್ಸ್ ಆಡುವಂತೆ ನಿಮ್ಮ ಸ್ನೇಹಿತನು ಆಮಂತ್ರಿಸುವಲ್ಲಿ ನೀವೇನು ಹೇಳುವಿರಿ?
◼ ಇಲೆಕ್ಟ್ರಾನಿಕ್ ಗೇಮ್ಸ್ ಆಡುವುದರಿಂದ ಹೆಚ್ಚು ಪ್ರಾಮುಖ್ಯ ಚಟುವಟಿಕೆಗಳಿಗೆ ಅಡ್ಡಿಯಾಗದಂತೆ ಹೇಗೆ ಖಚಿತಪಡಿಸಿಕೊಳ್ಳಬಲ್ಲಿರಿ?
[ಪುಟ 19ರಲ್ಲಿರುವ ಸಂಕ್ಷಿಪ್ತ ವಿವರಣೆ]
ಹಿಂಸಾತ್ಮಕ ಇಲ್ಲವೇ ಅನೈತಿಕ ಗೇಮ್ಸ್ ಆಡಲು ಆಯ್ದುಕೊಳ್ಳುವುದು ವಿಕಿರಣಶೀಲ ತ್ಯಾಜ್ಯದೊಂದಿಗೆ ಆಟವಾಡಲು ಆಯ್ಕೆಮಾಡಿದಂತಿರುತ್ತದೆ. ಅದರ ಹಾನಿಕಾರಕ ಪರಿಣಾಮಗಳು ಒಡನೆಯೇ ವ್ಯಕ್ತವಾಗಲಿಕ್ಕಿಲ್ಲ, ಆದರೆ ಖಂಡಿತ ತಪ್ಪಲಾರವು
[ಪುಟ 18ರಲ್ಲಿರುವ ಚೌಕ]
ನೀವು ಎಷ್ಟು ಬಾರಿ ಇಲೆಕ್ಟ್ರಾನಿಕ್ ಗೇಮ್ಸ್ ಆಡುತ್ತೀರಿ?
❑ ಅಪರೂಪವಾಗಿ
❑ ವಾರಕ್ಕೊಮ್ಮೆ
❑ ಪ್ರತಿದಿನ
ಒಂದು ಗೇಮ್ ಆಡಲು ಎಷ್ಟು ಸಮಯ ಕಳೆಯುತ್ತೀರಿ?
❑ ಕೆಲವೇ ನಿಮಿಷಗಳು
❑ ಒಂದು ತಾಸು ಅಥವಾ ಕಡಿಮೆ
❑ ಎರಡು ತಾಸಿಗಿಂತ ಹೆಚ್ಚು
ನೀವು ಹೆಚ್ಚಾಗಿ ಯಾವ ವಿಧದ ಗೇಮ್ಸ್ ಇಷ್ಟಪಡುತ್ತೀರಿ?
❑ ಕಾರ್ ರೇಸಿಂಗ್
❑ ಕ್ರೀಡೆ
❑ ಗುಂಡುಹಾರಿಸುವುದು
❑ ಇತರ
ಆಡಲು ಯೋಗ್ಯವಲ್ಲವೆಂದು ನಿಮಗೆ ತಿಳಿದ ಒಂದು ಇಲೆಕ್ಟ್ರಾನಿಕ್ ಗೇಮ್‌ನ ಹೆಸರನ್ನು ಇಲ್ಲಿ ಬರೆಯಿರಿ
..................
[ಪುಟ 20, 21ರಲ್ಲಿರುವ ಚೌಕ/ಚಿತ್ರ]
ಹೆತ್ತವರಿಗೆ ಸೂಚನೆ
ಹಿಂದಿನ ಲೇಖನವನ್ನು ಓದಿದ ನಂತರ, ಇಲೆಕ್ಟ್ರಾನಿಕ್ ಗೇಮ್ಸ್ ನೀವು ಹದಿಪ್ರಾಯದಲ್ಲಿರುವಾಗ ಇದ್ದ ಗೇಮ್ಸ್‌ಗಿಂತ ಬಹಳಷ್ಟು ಬದಲಾಗಿವೆ ಎಂಬ ತೀರ್ಮಾನಕ್ಕೆ ನೀವು ಬಂದಿರಬಹುದು. ನಿಮ್ಮ ಮಕ್ಕಳಿಗೆ ಎದುರಾಗುವ ಸಂಭಾವ್ಯ ಅಪಾಯಗಳನ್ನು ಗುರುತಿಸುವಂತೆ ಮತ್ತು ಅವುಗಳಿಂದ ತಪ್ಪಿಸಿಕೊಳ್ಳುವಂತೆ ಹೆತ್ತವರಾದ ನೀವು ಹೇಗೆ ಸಹಾಯ ಮಾಡಬಲ್ಲಿರಿ?
ಇಲೆಕ್ಟ್ರಾನಿಕ್ ಗೇಮ್ಸ್‌ನ ಇಡೀ ಉದ್ಯಮವನ್ನೇ ತೆಗಳುವ ಅಥವಾ ಅವುಗಳೆಲ್ಲವೂ ಕೇವಲ ಕಾಲಹರಣವಾಗಿವೆ ಎಂದು ಉದ್ಧಟತನದಿಂದ ಪ್ರತಿಪಾದಿಸುವ ಮೂಲಕ ಹೆಚ್ಚೇನೂ ಸಹಾಯವಾಗಲಾರದು. ನೆನಪಿಡಿ, ಎಲ್ಲಾ ಗೇಮ್ಸ್ ಹಾನಿಕರವಲ್ಲ. ಆದರೆ ಅವು ಚಟಹಿಡಿಸುವಂಥವೂ, ಸಮಯ ಕಬಳಿಸುವಂಥವೂ ಆಗಿರಬಲ್ಲವು. ಆದ್ದರಿಂದ ನಿಮ್ಮ ಮಕ್ಕಳು ಇಂತಹ ಗೇಮ್ಸ್ ಆಡುವುದರಲ್ಲಿ ಎಷ್ಟು ಸಮಯ ವ್ಯಯಿಸುತ್ತಾರೆಂಬುದನ್ನು ವಿಶ್ಲೇಷಿಸಲು ಸಮಯ ತೆಗೆದುಕೊಳ್ಳಿ. ಅಲ್ಲದೇ ನಿಮ್ಮ ಮಕ್ಕಳು ಯಾವ ಗೇಮ್ಸ್‌ಗೆ ಆಕರ್ಷಿತರಾಗಿದ್ದಾರೆಂಬುದನ್ನು ಪರಿಗಣಿಸಿ. ನೀವು ನಿಮ್ಮ ಮಕ್ಕಳಿಗೆ ಇಂತಹ ಕೆಲವು ಪ್ರಶ್ನೆಗಳನ್ನು ಸಹ ಕೇಳಬಹುದು:
◼ ನಿನ್ನ ಸಹಪಾಠಿಗಳಿಗೆ ಅತ್ಯಂತ ಇಷ್ಟದ ಗೇಮ್ ಯಾವುದು?
◼ ಆ ಗೇಮ್‌ನಲ್ಲಿ ಏನೆಲ್ಲಾ ಇದೆ?
◼ ಆ ಗೇಮ್ ಏಕೆ ಅಷ್ಟೊಂದು ಇಷ್ಟಕರವೆಂದು ನೀನು ಎಣಿಸುತ್ತೀ?
ನಿಮ್ಮ ಮಕ್ಕಳಿಗೆ ಇಲೆಕ್ಟ್ರಾನಿಕ್ ಗೇಮ್ಸ್ ಬಗ್ಗೆ ನೀವು ನೆನಸಿದ್ದಕ್ಕಿಂತಲೂ ಹೆಚ್ಚು ತಿಳಿದಿರುವುದನ್ನು ನೀವು ಗಮನಿಸಬಹುದು! ನೀವು ಆಕ್ಷೇಪಣೀಯವೆಂದೆಣಿಸುವ ಗೇಮ್ಸ್ ಅನ್ನು ಒಂದುವೇಳೆ ಅವರು ಆಡಿರಲೂಬಹುದು. ಹಾಗಿರುವಲ್ಲಿ ಮಿತಿಮೀರಿ ಪ್ರತಿಕ್ರಿಯಿಸದಿರಿ. ಜ್ಞಾನೇಂದ್ರಿಯಗಳನ್ನು ವಿಕಸಿಸಲು ನಿಮ್ಮ ಮಕ್ಕಳಿಗೆ ಸಹಾಯ ನೀಡುವ ಸಂದರ್ಭ ಇದಾಗಿದೆ.—ಇಬ್ರಿಯ 5:14.
ಅವರು ಆಕ್ಷೇಪಣೀಯ ಗೇಮ್‌ಗಳೆಡೆಗೆ ಏಕೆ ಆಕರ್ಷಿತರಾಗಿದ್ದಾರೆಂದು ತಿಳಿದುಕೊಳ್ಳಲು ನಿಮ್ಮ ಮಕ್ಕಳಿಗೆ ಪ್ರಶ್ನೆಗಳನ್ನು ಕೇಳಿರಿ. ಉದಾಹರಣೆಗೆ ನೀವು ಇಂತಹ ಪ್ರಶ್ನೆಗಳನ್ನು ಕೇಳಬಹುದು:
◼ ನಿರ್ದಿಷ್ಟ ಗೇಮ್ ಆಡಲು ಅನುಮತಿ ಇಲ್ಲದಿರುವುದರಿಂದ ನಿನಗೆ ಸಹಪಾಠಿಗಳಿಂದ ತೊರೆದು ಬಿಡಲ್ಪಟ್ಟ ಅನಿಸಿಕೆಯಾಗುತ್ತದೋ?
ಇದರ ಹಿಂದಿನ ಲೇಖನದ ಪ್ರಥಮ ಪುಟದಲ್ಲಿ ತಿಳಿಸಲ್ಪಟ್ಟಂತೆ ಯುವಕರು ತಮ್ಮ ಸಮಾನಸ್ಥರೊಂದಿಗೆ ಮಾತಾಡಲು ಯಾವುದಾದರೊಂದು ವಿಷಯವನ್ನು ಕಂಡುಕೊಳ್ಳಲಿಕ್ಕಾಗಿ ನಿರ್ದಿಷ್ಟ ಗೇಮ್ ಅನ್ನು ಆಡಬಹುದು. ಈ ಕಾರಣಕ್ಕಾಗಿ ನಿಮ್ಮ ಮಕ್ಕಳು ಆ ಗೇಮ್ ಆಡುತ್ತಿರುವಲ್ಲಿ, ಈ ಸನ್ನಿವೇಶವನ್ನು ನೀವು ನಿಭಾಯಿಸುವ ವಿಧ ಭಿನ್ನವಾಗಿರಬೇಕು. ಅಂದರೆ, ಅವರು ರಕ್ತಸಿಕ್ತ ಹಿಂಸಾಚಾರ ಅಥವಾ ಲೈಂಗಿಕತೆಯ ಗೇಮ್‌ಗಳೆಡೆಗೆ ಆಕರ್ಷಿತರಾಗಿರುವಲ್ಲಿ ನೀವು ಅವರನ್ನು ಹೇಗೆ ತಿದ್ದುವಿರೋ ಅದಕ್ಕಿಂತ ಭಿನ್ನವಾಗಿರಬೇಕು.—ಕೊಲೊಸ್ಸೆ 4:6.
ಒಂದು ವೇಳೆ ನಿಮ್ಮ ಮಕ್ಕಳು ಗೇಮ್‌ನ ಹಾನಿಕಾರಕ ಅಂಶಗಳ ಕಡೆಗೆ ಆಕರ್ಷಿತರು ಆಗಿರುವಲ್ಲಿ ಆಗೇನು? ಕಂಪ್ಯೂಟರ್-ರಚಿತ ಹಿಂಸಾಚಾರವು ತಮ್ಮ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲವೆಂದು ಕೆಲವು ಯುವ ಜನರು ಥಟ್ಟನೆ ಹೇಳಬಹುದು. ‘ನಾನದನ್ನು ಕಂಪ್ಯೂಟರ್ ಪರದೆಯ ಮೇಲೆ ಮಾಡುತ್ತೇನೆಂಬ ಕಾರಣಕ್ಕೆ ನಿಜ ಜೀವನದಲ್ಲೂ ಅದನ್ನೇ ಮಾಡುವೆನೆಂದು ಹೇಳಸಾಧ್ಯವಿಲ್ಲ,’ ಎಂದವರು ಸಮರ್ಥಿಸಬಹುದು. ನಿಮ್ಮ ಮಕ್ಕಳಿಗೂ ಅದೇ ರೀತಿ ಅನಿಸುವುದಾದರೆ ಇದರ ಜೊತೆ ಲೇಖನದ ಪುಟ 20 ರಲ್ಲಿ ಉಲ್ಲೇಖಿಸಲ್ಪಟ್ಟಿರುವ ಕೀರ್ತನೆ 11:5(NIBV)ರ ಕಡೆಗೆ ಅವರ ಗಮನವನ್ನು ತಿರುಗಿಸಿ. ಆ ವಚನವು ಸ್ಪಷ್ಟಪಡಿಸುವಂತೆ ಬಲಾತ್ಕಾರಿಗಳಾಗಿರುವುದು ಮಾತ್ರವಲ್ಲ ಬಲಾತ್ಕಾರವನ್ನು ಪ್ರೀತಿಸುವುದು ಸಹ ದೇವರ ಅಸಮ್ಮತಿಗೆ ನಡಿಸುತ್ತದೆ. ದೇವರ ವಾಕ್ಯವು ಖಂಡಿಸುವ ಲೈಂಗಿಕ ಅನೈತಿಕತೆ ಇಲ್ಲವೇ ಯಾವುದೇ ಇತರ ಅನೈತಿಕ ನಡತೆಗೆ ಇದೇ ಮೂಲತತ್ತ್ವವು ಅನ್ವಯವಾಗುತ್ತದೆ.—ಕೀರ್ತನೆ 97:10.
ಕೆಲವು ಪರಿಣತರು ಈ ಕೆಳಗಿನದ್ದನ್ನು ಶಿಫಾರಸ್ಸು ಮಾಡುತ್ತಾರೆ:
◼ ಮಲಗುವ ಕೋಣೆಗಳಂತಹ ಏಕಾಂತ ಸ್ಥಳಗಳಲ್ಲಿ ಇಲೆಕ್ಟ್ರಾನಿಕ್ ಗೇಮ್ಸ್ ಆಡಲು ಅನುಮತಿ ಕೊಡದಿರಿ.
◼ ನಿರ್ದಿಷ್ಟ ನಿಯಮಗಳನ್ನಿಡಿರಿ. (ಉದಾಹರಣೆಗೆ, ಹೋಮ್‌ವರ್ಕ್, ರಾತ್ರಿಯೂಟ ಇಲ್ಲವೇ ಇತರ ಅವಶ್ಯಕ ಚಟುವಟಿಕೆಗಳನ್ನು ಮುಗಿಸುವ ಮುಂಚೆ ಇಲೆಕ್ಟ್ರಾನಿಕ್ ಗೇಮ್ಸ್ ಆಡಲಿಕ್ಕಿಲ್ಲ.)
◼ ದೈಹಿಕ ಶ್ರಮವನ್ನು ಅಗತ್ಯಪಡಿಸುವ ಬದಲಿ ಚಟುವಟಿಕೆಗಳ ಪ್ರಯೋಜನಗಳನ್ನು ಒತ್ತಿಹೇಳಿ.
◼ ನಿಮ್ಮ ಮಕ್ಕಳು ಇಲೆಕ್ಟ್ರಾನಿಕ್ ಗೇಮ್ಸ್ ಆಡುವಾಗ ಗಮನಿಸಿ. ಕೆಲವೊಮ್ಮೆ ಅವರೊಂದಿಗೆ ಆಟವಾಡುವುದು ಇನ್ನೂ ಒಳ್ಳೆಯದು.
ಮನೋರಂಜನೆಯ ವಿಷಯದಲ್ಲಿ ನಿಮ್ಮ ಮಕ್ಕಳಿಗೆ ಮಾರ್ಗದರ್ಶನ ನೀಡಲಿಕ್ಕಾಗಿ ಮೊದಲು ನೀವು ಒಳ್ಳೇ ಮಾದರಿ ಇಡಬೇಕು. ಆದ್ದರಿಂದ ನಿಮ್ಮನ್ನೇ ಹೀಗೆ ಕೇಳಿಕೊಳ್ಳಿ, ‘ನಾನು ಯಾವ ರೀತಿಯ ಟಿವಿ ಕಾರ್ಯಕ್ರಮಗಳು ಮತ್ತು ಚಲನಚಿತ್ರಗಳನ್ನು ವೀಕ್ಷಿಸುತ್ತೇನೆ?’ ನಿಮಗೆ ಇಬ್ಬಗೆಯ ಮಟ್ಟಗಳಿರುವಲ್ಲಿ ನಿಮ್ಮ ಮಕ್ಕಳಿಗೆ ಅದು ತಿಳಿದಿದೆ! ಆದ್ದರಿಂದ ನಿಮ್ಮನ್ನೇ ಮೋಸಗೊಳಿಸದಿರಿ.