ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕಲಿಯಿರಿ ಕೌತುಕದ ಕವಾಟೀ ಕುರಿತು

ಕಲಿಯಿರಿ ಕೌತುಕದ ಕವಾಟೀ ಕುರಿತು

ಕಲಿಯಿರಿ ಕೌತುಕದ ಕವಾಟೀ ಕುರಿತು

ಬ್ರಸಿಲ್‌ನ ಎಚ್ಚರ! ಲೇಖಕರಿಂದ

ಅಕಸ್ಮಾತ್ತಾಗಿ ನೀವು ಒಂದು ಕಾಡು ಪ್ರದೇಶದಲ್ಲಿ ಅಡ್ಡಾಡುತ್ತಿದ್ದೀರಿ ಎಂದು ನೆನಸಿ. ಕವಾಟೀ ಎಂಬ ವಿಚಿತ್ರ ಪ್ರಾಣಿಯ ತಂಡವೊಂದು ಫಕ್ಕನೇ ನಿಮಗೆದುರಾಗಿ ಬರುತ್ತಿರುವುದನ್ನು ನೀವು ಕಾಣುತ್ತೀರಿ. ನಿಮ್ಮ ಮೇಲೆ ಹಾರಿ ಬೀಳುತ್ತವೋ ಎಂಬ ಭಯದಿಂದ ನಿಮಗೆ ದಿಗಿಲುತಪ್ಪುತ್ತದೆ. ಆದರೆ ಭಯಪಡಬೇಡಿ! ಕವಾಟೀಗಳು ಮನುಷ್ಯರನ್ನು ಕಚ್ಚುತ್ತವೆಂದು ಹೇಳಲಾಗುತ್ತದೆ. ಆದರೆ ಈ ವಿಚಿತ್ರ ಪ್ರಾಣಿಗಳ ಕಣ್ಣುಗಳು ಸುಳಿದಾಡುತ್ತಿರುವುದು ನಿಮ್ಮ ಕೈಯಲ್ಲಿರುವ ತಿಂಡಿಯ ಬ್ಯಾಗ್‌ನ ಮೇಲೆ. ಏಕೆ? ಏಕೆಂದರೆ ಅವುಗಳ ಮನಸ್ಸು ಯಾವಾಗಲೂ ಇರುವುದು ತಿನ್ನುವುದರಲ್ಲೇ. ಸಿಕ್ಕಿದ್ದೆಲ್ಲವನ್ನೂ ಅವು ತಿಂದುಬಿಡುತ್ತವೆ. ಹುಳಗಳಾಗಲಿ, ಹಲ್ಲಿಗಳಾಗಲಿ, ಜೇಡಗಳಾಗಲಿ, ಇಲಿಗಳಾಗಲಿ, ಹಣ್ಣುಗಳಾಗಲಿ, ಪಕ್ಷಿಯ ಮೊಟ್ಟೆಗಳೇ ಆಗಿರಲಿ ಎಲ್ಲವನ್ನೂ ಕಬಳಿಸಿಬಿಡುತ್ತವೆ.

ಕವಾಟೀಯು ಪುನುಗುಬೆಕ್ಕಿನ ನಂಟ. ಆದರೆ ಕವಾಟೀಗೆ ಉದ್ದ ಮೈ, ನೀಳವಾದ ಬಾಲ ಹಾಗೂ ಸಲಿಸಾಗಿ ತಿರುಗುವ ಉದ್ದ ಮೂತಿ ಇದೆ. 26 ಇಂಚು ಉದ್ದದ ಬಾಲವೂ ಇರುವ ಈ ವಿಚಿತ್ರ ಪ್ರಾಣಿಯು ಅಮೆರಿಕದ ಉಷ್ಣವಲಯದಲ್ಲಿ ಜೀವಿಸುವ ಸಸ್ತನಿ. ಇವು ಹೆಚ್ಚಾಗಿ ಕಾಣಸಿಗುವುದು ಅಮೆರಿಕದ ನೈರುತ್ಯ ಭಾಗದಿಂದ ಹಿಡಿದು ಉತ್ತರ ಅರ್ಜೆಂಟೀನ​ದಲ್ಲಿ.

ಹೆಣ್ಣು ಕವಾಟೀಗಳು ಹತ್ತಿಪ್ಪತ್ತರ ಗುಂಪಿನಲ್ಲಿ ಸಂಚರಿಸುತ್ತವೆ. ಆದರೆ ಗಂಡು ಕವಾಟೀಗಳು ಒಂಟಿ ಜೀವಿಗಳು. ಪ್ರತಿ ವರ್ಷ ಕೂಡುವ ಕಾಲದಲ್ಲಿ ಹೆಣ್ಣು ಕವಾಟೀಗಳ ತಂಡದಲ್ಲಿ ಒಂದು ಗಂಡು ಒಳಸೇರುತ್ತದೆ. ಎರಡು ಮೂರು ತಿಂಗಳುಗಳೊಳಗೆ ಹೆಣ್ಣು ಕವಾಟೀಗಳು ಬಸುರಾಗಿ ತಂಡವನ್ನು ಬಿಟ್ಟು ಮರಗಳ ಮೇಲೆ ಗೂಡು ಕಟ್ಟುತ್ತವೆ. ಪ್ರತಿ ಹೆಣ್ಣು ಕವಾಟೀ ಮೂರು-ನಾಲ್ಕು ಮರಿಗಳನ್ನು ಹಾಕುತ್ತದೆ. ಮರಿಹಾಕಿದ ಆರು ವಾರಗಳಲ್ಲಿ ತಾಯಂದಿರು ತಮ್ಮ ಮರಿಗಳೊಂದಿಗೆ ಪುನಃ ಹಿಂದೆ ಬಂದು ತಂಡವನ್ನು ಸೇರುತ್ತವೆ. ಈ ಪುಟಾಣಿ ಕವಾಟೀಗಳು ಓಲಾಡುವ ಚಿಕ್ಕ ಚಿಕ್ಕ ತುಪ್ಪಳ ಚೆಂಡುಗಳಂತೆ ಪುಟಿಯುತ್ತಾ ಅಂದವಾಗಿ ಕಾಣುತ್ತವೆ.

ಕವಾಟೀಗಳು ಕಾಡಿನಲ್ಲಿ ಅಲೆದಾಡುತ್ತಿರುವಾಗ ಅಡಿಗಡಿಗೆ ಗಾಳಿಯನ್ನು ಮೂಸುತ್ತಾ ತಮ್ಮ ಕಾಲುಗುರುಗಳಿಂದ ನೆಲವನ್ನು ಕೆದಕುತ್ತಾ ಇರುತ್ತವೆ. ಅವು ಪೈರಿನ ಹೊಲಗಳನ್ನು ಬೋಳಿಸಿ ಕೋಳಿಗೂಡುಗಳ ಮೇಲೆ ಹಾವಳಿಮಾಡುವುದರಿಂದ ರೈತರಿಗೆ ಅವನ್ನು ಕಂಡರೆ ಆಗದು. ಬೇಟೆಗಾರರಿಂದ ತಪ್ಪಿಸಿಕೊಳ್ಳುವುದರಲ್ಲಿ ಇವು ಬಲು ಚುರುಕು. ಈ ಜಾಣ ಪ್ರಾಣಿಗಳಿಗೆ ಮರಗಳ ಪೊಟರೆಗಳಲ್ಲಿ ಅಡಗಿಕೊಳ್ಳುವುದು ಹೇಗೆಂದು ಚೆನ್ನಾಗಿ ತಿಳಿದಿದೆ. ಈ ಪ್ರಾಣಿಗಳಿಗೆ ಬಚಾವಾಗುವ ಇನ್ನೊಂದು ವಿಧಾನವೂ ಗೊತ್ತಿದೆ. ಗುಂಡಿನ ಸದ್ದಾಗಲಿ ಕೈ ಚಪ್ಪಾಳೆಯಾಗಲಿ ಕಿವಿಗೆ ಬಿದ್ದಾಕ್ಷಣ ಅವು ಧಡಂ ಎಂದು ನೆಲಕ್ಕೆ ಬಿದ್ದು ಸತ್ತ ಹಾಗೆ ನಟಿಸುತ್ತವೆ. ಬೇಟೆಗಾರನು ಅವನ್ನು ಹಿಡಿಯಲು ಹತ್ತಿರ ಬಂದಂತೆ ಅವು ಛಂಗನೆ ನೆಗೆದು ಓಡಿಹೋಗುತ್ತವೆ!

ನೀವು ಬ್ರಸಿಲನ್ನು ಸಂದರ್ಶಿಸಿದಾಗ ಪ್ರಾಯಶಃ ಈ ಕವಾಟೀಗಳ ಗುಂಪು ನಿಮಗೆ ಎದುರಾದೀತು, ಆದರೆ ಭಯಪಡಬೇಡಿ. ಅವು ನಿಮಗೆ ಏನೂ ಹಾನಿಮಾಡಲಾರವು. ಆದರೂ ಕೆಲವು ರುಚಿಯಾದ ತಿಂಡಿತಿನಸುಗಳನ್ನು ಅವುಗಳೆಡೆಗೆ ನೀವು ಬಿಸಾಡಿದಲ್ಲಿ ನಿಶ್ಚಯವಾಗಿಯೂ ಅವನ್ನು ಸವಿದುನೋಡುವವು! (g 7/08)