ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಭೂಮಿಯ ಭವಿಷ್ಯತ್ತು—ಯಾರ ಕೈಯಲ್ಲಿ?

ಭೂಮಿಯ ಭವಿಷ್ಯತ್ತು—ಯಾರ ಕೈಯಲ್ಲಿ?

ಭೂಮಿಯ ಭವಿಷ್ಯತ್ತು—ಯಾರ ಕೈಯಲ್ಲಿ?

“ಭೂಮಿ ಬಿಸಿಯೇರುವಿಕೆಯು ಮಾನವರಾದ ನಮ್ಮ ಮುಂದಿರುವ ಒಂದು ಅತಿ ದೊಡ್ಡ ಸಮಸ್ಯೆ” ಎಂದು ಅಕ್ಟೋಬರ್‌ 2007ರ ನ್ಯಾಷನಲ್‌ ಜಿಯಾಗ್ರಾಫಿಕ್‌ ಪತ್ರಿಕೆಯು ಹೇಳಿತು. ಆ ಸಮಸ್ಯೆಯನ್ನು ನಾವು ಯಶಸ್ವಿಕರವಾಗಿ ನಿಭಾಯಿಸಬೇಕಾದರೆ “ಸಮಾಜ ಅಥವಾ ಜನಾಂಗವಾಗಿ ನಾವು ಹಿಂದೆಂದೂ ತೋರಿಸದ ಪ್ರೌಢ ವಿವೇಚನೆಯೊಂದಿಗೆ ಅತಿ ಶೀಘ್ರವೇ ದೃಢನಿರ್ಧಾರವನ್ನು ಮಾಡುವ” ಅಗತ್ಯವಿದೆ ಎಂದೂ ಅದು ತಿಳಿಸಿತು.

ಆದರೆ ಮಾನವರು ಪ್ರೌಢ ವಿವೇಚನೆಯಿಂದ ಈ ಸಮಸ್ಯೆಯನ್ನು ನಿಭಾಯಿಸಶಕ್ತರೋ? ಇದಕ್ಕೆ ಅನೇಕ ಅಡೆತಡೆಗಳಿವೆ: ಔದಾಸೀನ್ಯ, ದುರಾಶೆ, ಅಜ್ಞಾನ, ಸ್ವಹಿತಾಸಕ್ತಿ, ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಹಣಕ್ಕಾಗಿ ಹಿಗ್ಗಾಮುಗ್ಗಾ ಹೋರಾಟ ಮತ್ತು ಎಂದಿನಂತೆ ನಡೆಸುವ ಐಷಾರಾಮದ ಜೀವನಶೈಲಿಯನ್ನು ಬಿಟ್ಟುಕೊಡೆವು ಎಂಬ ಮಿಲ್ಯಾಂತರ ಜನರ ಧ್ಯೇಯಮಂತ್ರ ಇವೇ ಕೆಲವು ತಡೆಗಟ್ಟುಗಳು.

ನಮ್ಮ ನೈತಿಕ, ಸಾಮಾಜಿಕ ಹಾಗೂ ಸರಕಾರೀಯ ಸಮಸ್ಯೆಗಳನ್ನು ನಿಭಾಯಿಸುವುದಕ್ಕೆ ನಮಗಿರುವ ಸಾಮರ್ಥ್ಯದ ಕುರಿತು ದೇವರ ಪ್ರವಾದಿಯೊಬ್ಬನು ನೈಜ ವಿವೇಚನೆಯನ್ನು ನಮಗೆ ಕೊಡುತ್ತಾನೆ. ಅವನಂದದ್ದು: “ಮಾನವನ ಮಾರ್ಗವು ಅವನ ಸ್ವಾಧೀನದಲ್ಲಿಲ್ಲವೆಂದು ನನಗೆ ಗೊತ್ತು; ಮನುಷ್ಯನು ನಡೆದಾಡುತ್ತಾ ಸರಿಯಾದ ಕಡೆಗೆ ತನ್ನ ಹೆಜ್ಜೆಯನ್ನಿಡಲಾರನು.” (ಯೆರೆಮೀಯ 10:23) ಮಾನವಕುಲದ ದುರಂತಮಯ ಇತಿಹಾಸವು ಆ ಮಾತುಗಳು ಸತ್ಯವೆಂದು ತೋರಿಸುತ್ತವೆ. ಇಂದು ವೈಜ್ಞಾನಿಕವಾಗಿ ಮತ್ತು ತಾಂತ್ರಿಕವಾಗಿ ಗಮನಾರ್ಹ ಪ್ರಗತಿಯಾಗಿರುವುದಾದರೂ ನಾವು ಹಿಂದೆಂದೂ ಕಾಣದಿರುವ ಹಾಗೂ ಅತೀ ಜಟಿಲವಾಗಿರುವ ಅಪಾಯಗಳನ್ನು ಎದುರಿಸುತ್ತಿದ್ದೇವೆ. ಹೀಗಿರುವಾಗ ನಾಳಿನ ದಿನವು ಸುದಿನವೆಂದು ನಾವು ಹೇಗೆ ತಾನೇ ಭರವಸೆ ಇಡಬಲ್ಲೆವು?

ಹವಾಮಾನದ ಏರುಪೇರು ಮತ್ತು ಇತರ ವಿಪತ್ತುಗಳನ್ನು ನಿಭಾಯಿಸುವ ಬಗ್ಗೆ ಬಹಳ ಮಾತುಕತೆಗಳು ಆಗಿವೆಯಾದರೂ ಮಾಡಿದ್ದೇನೂ ಇಲ್ಲ. ಉದಾಹರಣೆಗೆ, 2007ರಲ್ಲಿ ವಾಯುವ್ಯ ಹಡಗುಮಾರ್ಗವು ಸಮುದ್ರಯಾನಕ್ಕಾಗಿ ಮೊತ್ತಮೊದಲಾಗಿ ತೆರೆಯಲ್ಪಟ್ಟಾಗ ರಾಷ್ಟ್ರಗಳ ಪ್ರತಿಕ್ರಿಯೆ ಏನಾಗಿತ್ತು? ನ್ಯೂ ಸೈಅಂಟಿಸ್ಟ್‌ ಪತ್ರಿಕೆಯ ಸಂಪಾದಕೀಯ ಹೇಳುವುದು: “ಇನ್ನಷ್ಟು ತೈಲ ಮತ್ತು ಅನಿಲವನ್ನು ಅಗೆದು ತೆಗೆಯಲಿಕ್ಕಾಗಿ ಆ ಭೂಖಂಡದ ತೆರೆದ ಜಾಗವನ್ನು ಕೈವಶ ಮಾಡಿಕೊಳ್ಳಲು ರಾಷ್ಟ್ರಗಳು ಅನುಚಿತ ನೂಕುನುಗ್ಗಾಟಗಳನ್ನು ನಡೆಸಿದವು.”

ಮಾನವರು ಲೋಕನಾಶಕರಾಗಿ ಪರಿಣಮಿಸುವರೆಂದು ಸುಮಾರು 2,000 ವರ್ಷಗಳ ಹಿಂದೆಯೇ ಬೈಬಲ್‌ ನಿಖರವಾಗಿ ಮುಂತಿಳಿಸಿತ್ತು. (ಪ್ರಕಟನೆ 11:18) ನಿಜವಾಗಿಯೂ ಲೋಕಕ್ಕೆ ವಿವೇಕಿಯೂ ಶಕ್ತಿಸಂಪನ್ನನೂ ಆಗಿರುವ ಒಬ್ಬ ನಾಯಕನು ಬೇಕಾಗಿದ್ದಾನೆ ಸ್ಪುಟ. ಆಗ ಮಾತ್ರ ಅಪೇಕ್ಷಿತ ಗುರಿಗಳನ್ನು ಮುಟ್ಟಲು ಮತ್ತು ಅವನಿಗೆ ಅಧೀನರಾಗುವ ಪ್ರಜೆಗಳನ್ನು ಹೊಂದಲು ಸಾಧ್ಯ. ಒಬ್ಬ ಪ್ರಾಮಾಣಿಕ ಹಾಗೂ ಪ್ರತಿಭಾವಂತ ರಾಜಕಾರಣಿ ಅಥವಾ ವಿಜ್ಞಾನಿಗೆ ಆ ಪಾತ್ರವಹಿಸಲು ಸಾಧ್ಯವೋ? ಬೈಬಲ್‌ ಉತ್ತರಿಸುವುದು: “ಪ್ರಭುಗಳಲ್ಲಿ ಭರವಸವಿಡಬೇಡಿರಿ; ಮಾನವನನ್ನು ನೆಚ್ಚ​ಬೇಡಿರಿ, ಅವನು ಸಹಾಯ​ಮಾಡ ಶಕ್ತನಲ್ಲ.”​—⁠ಕೀರ್ತನೆ 146:⁠3.

ಭೂಮಿಯ ಭವಿಷ್ಯತ್ತು—ಸುದೃಢ ಹಸ್ತದಲ್ಲಿ!

ಲೋಕವು ಎದುರಿಸುತ್ತಿರುವ ಸಮಸ್ಯೆಗಳನ್ನು ಯಶಸ್ವಿಕರವಾಗಿ ನಿಭಾಯಿಸಲು ಏಕೈಕ ನಾಯಕನು ಮಾತ್ರವೇ ಶಕ್ತನಾಗಿದ್ದಾನೆ. ಅವನ ಕುರಿತು ಬೈಬಲ್‌ ಮುಂತಿಳಿಸಿದ್ದು: “[ಅವನ] ಮೇಲೆ ಜ್ಞಾನವಿವೇಕದಾಯಕ ಆತ್ಮ, ಆಲೋಚನಪರಾಕ್ರಮಗಳನ್ನು ಹುಟ್ಟಿಸುವ ಆತ್ಮ, ತಿಳುವಳಿಕೆಯನ್ನೂ ಯೆಹೋವನ ಭಯವನ್ನೂ ಉಂಟುಮಾಡುವ ಆತ್ಮ, ಅಂತು ಯೆಹೋವನ ಆತ್ಮವೇ ನೆಲೆಗೊಂಡಿರುವದು; . . . ಲೋಕದ ದೀನರಿಗೋಸ್ಕರ ಧರ್ಮವಾಗಿ ನಿರ್ಣಯಿಸುವನು; . . . ದುಷ್ಟರನ್ನು ತನ್ನ ಬಾಯುಸುರಿನಿಂದ ಕೊಲ್ಲುವನು.”​—⁠ಯೆಶಾಯ 11:​2-5.

ಆತನು ಯಾರು? ಯೇಸು ಕ್ರಿಸ್ತನೇ ಆತನು. ನಮಗಾಗಿ ತನ್ನ ಜೀವವನ್ನು ಪ್ರೀತಿಯಿಂದ ಅರ್ಪಿಸಿದಾತನು ಆತನೇ. (ಯೋಹಾನ 3:16) ಈಗ ಪರಾಕ್ರಮಿಯಾದ ಆತ್ಮಜೀವಿಯಾಗಿರುವ ಯೇಸುವು ಭೂಲೋಕವನ್ನು ಆಳಲು ದೇವರಿಂದ ಅಧಿಕಾರವನ್ನೂ ಶಕ್ತಿಯನ್ನೂ ಹೊಂದಿರುತ್ತಾನೆ.​—⁠ದಾನಿಯೇಲ 7:​13, 14; ಪ್ರಕಟನೆ 11:⁠15.

ಯೇಸು ಭೂಮಿಗೆ ಬರುವ ಮುಂಚೆ ದೇವರ ಸೃಷ್ಟಿಯ ಬಗ್ಗೆ ಪಡೆದ ಅಪಾರ ಜ್ಞಾನವು ಈ ಪಾತ್ರವನ್ನು ನಿರ್ವಹಿಸಲು ಅವನನ್ನು ಅರ್ಹನನ್ನಾಗಿ ಮಾಡುತ್ತದೆ. ನಿಜವಾಗಿ, ಬಹಳ ಕಾಲದ ಹಿಂದೆ ದೇವರು ಈ ಭೌತಿಕ ವಿಶ್ವವನ್ನು ರೂಪಿಸಿದಾಗ ಯೇಸು ಆತನ “ಕುಶಲ ಶಿಲ್ಪಿ” ಆಗಿದ್ದನು. (ಜ್ಞಾನೋಕ್ತಿ 8:​22-31, NIBV) ಇದರ ಕುರಿತು ತುಸು ಯೋಚಿಸಿರಿ: ಈ ಭೂಮಿಯನ್ನೂ ಅದರ ಎಲ್ಲಾ ಜೀವಿಗಳನ್ನೂ ನಿರ್ಮಿಸಲು ನೆರವಾದ ಯೇಸು ತಾನೇ ಮಾನವರ ಸ್ವಾರ್ಥಪರ ದುರಾಡಳಿತೆಯಿಂದ ಉಂಟಾದ ಹಾನಿಯನ್ನು ಸರಿ​ಪಡಿಸಲು ಮುಂದಾಳತ್ವವನ್ನು ವಹಿಸುವನು.

ಕ್ರಿಸ್ತನ ಪ್ರಜೆಗಳು ಯಾರಾಗಿರುವರು? ಅವರು ನಿಜವಾಗಿಯೂ ದೀನರೂ ನೀತಿವಂತರೂ ಆಗಿರುವ ಜನರಾಗಿದ್ದು ಸತ್ಯದೇವರಾದ ಯೆಹೋವನನ್ನು ತಿಳಿದವರೂ ಅರಸನಾದ ಯೇಸು ಕ್ರಿಸ್ತನಿಗೆ ವಿಧೇಯರಾಗುವವರೂ ಆಗಿರುವರು. (ಕೀರ್ತನೆ 37:​11, 29; 2 ಥೆಸಲೊನೀಕ 1:​7, 8) ಅವರು, ಉದ್ಯಾನವನದ ಹಾಗಿರುವ ಪರದೈಸ್‌ ಆಗಿ ಮಾರ್ಪಡಲಿರುವ “ಭೂಮಿಗೆ ಬಾಧ್ಯರಾಗುವರು” ಎಂದು ಯೇಸು ಹೇಳಿದನು.​—⁠ಮತ್ತಾಯ 5:5; ಯೆಶಾಯ 11:​6-9; ಲೂಕ 23:⁠43.

ಬೈಬಲಿನ ಆ ವಾಗ್ದಾನಗಳ ನೆರವೇರಿಕೆಯಲ್ಲಿ ಪಾಲಿಗರಾಗಲು ಶಕ್ತರಾಗುವಂತೆ ನೀವೇನು ಮಾಡಬಲ್ಲಿರಿ? ಯೇಸು ತಾನೇ ಉತ್ತರಿಸುವುದು: “ಒಬ್ಬನೇ ಸತ್ಯದೇವರಾಗಿರುವ ನಿನ್ನನ್ನೂ ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನನ್ನೂ ತಿಳಿಯುವದೇ ನಿತ್ಯಜೀವವು.”​—⁠ಯೋಹಾನ 17:⁠3.

ಹೌದು, ನಮ್ಮ ಭೂಗ್ರಹವು ಅಪಾಯದಲ್ಲಿರುವಂತೆ ಕಾಣುತ್ತಿರಬಹುದು. ಆದರೆ ಅದು ಮಾನವಕುಲದ ಬೀಡಾಗಿ ಸದಾ ಅಸ್ತಿತ್ವದಲ್ಲಿರುವುದೆಂಬ ವಿಷಯದಲ್ಲಿ ಮಾತ್ರ ಸಂದೇಹವಿಲ್ಲ. ಬದಲಾಗಿ ದೇವರ ಸೃಷ್ಟಿಗೆ ಅಗೌರವ ತೋರಿಸುವುದನ್ನು ಮುಂದುವರಿಸುವವರಿಗೆ ಮತ್ತು ಯೇಸು ಕ್ರಿಸ್ತನಿಗೆ ವಿಧೇಯರಾಗಲು ನಿರಾಕರಿಸುವವರಿಗೆ ಅಪಾಯವು ಕಾದಿದೆ. ಆದುದರಿಂದ ನಿತ್ಯಜೀವಕ್ಕೆ ನಡಿಸುವ ಜ್ಞಾನವನ್ನು ನೀವು ಪಡೆದುಕೊಳ್ಳುವಂತೆ ಯೆಹೋವನ ಸಾಕ್ಷಿಗಳು ನಿಮ್ಮನ್ನು ಉತ್ತೇಜಿಸುತ್ತಾರೆ. (g 8/08)

[ಪುಟ 8ರಲ್ಲಿರುವ ಚೌಕ]

ವಿಜ್ಞಾನದ ನಿಲುಕಿಗೆ ಮೀರಿದ್ದು

ಉಲ್ಲಾಸಬರಿಸುವ ಅಮಲೌಷಧದ ಬಳಕೆ, ಮದ್ಯದ ದುರುಪಯೋಗ ಮತ್ತು ತಂಬಾಕು ಸೇವನೆ ಮುಂತಾದವುಗಳು ಹಾನಿಕರವೆಂಬ ಪೂರ್ಣ ಅರಿವಿದ್ದರೂ ಲಕ್ಷಾಂತರ ಜನರು ಅವನ್ನು ಸೇವಿಸಿ ತಮ್ಮ ಮನಸ್ಸನ್ನೂ ದೇಹವನ್ನೂ ಅಪಾಯಕ್ಕೊಡ್ಡುತ್ತಾರೆ. ಅವರು ಜೀವವನ್ನು ದೇವರ ಪವಿತ್ರ ಉಡುಗೊರೆಯಾಗಿ ವೀಕ್ಷಿಸುವುದಿಲ್ಲ. (ಕೀರ್ತನೆ 36:9; 2 ಕೊರಿಂಥ 7:⁠1) ಅಂತೆಯೇ, ಭೂಮಿಯು ದೇವರ ಉಡುಗೊರೆ ಎಂದು ಅನೇಕರು ಭಾವಿಸದಿರುವುದು ವಿಷಾದಕರ. ಅದರಿಂದಾಗಿ ಪರಿಸರೀಯ ಸಮಸ್ಯೆಗಳೇ ಮುಂತಾದ ಭೂಮಿಯ ಸಂಕಟಗಳಿಗೆ ನೆರವಾಗುವ ವಿಷಯಗಳನ್ನು ಅವರು ಮಾಡುತ್ತಾರೆ.

ಹಾಗಾದರೆ ಪರಿಹಾರವೇನು? ವಿಜ್ಞಾನದಲ್ಲಿ ಅಥವಾ ಲೌಕಿಕ ಶಿಕ್ಷಣದಲ್ಲಿ ಪರಿಹಾರವನ್ನು ನಾವು ಕಾಣಬಲ್ಲೆವೋ? ಖಂಡಿತವಾಗಿ ಇಲ್ಲ. ಆಧ್ಯಾತ್ಮಿಕ ಸಮಸ್ಯೆಗೆ ಆಧ್ಯಾತ್ಮಿಕ ಪರಿಹಾರವೇ ಮದ್ದು. ಯೆಹೋವನು ಭೂಮಿಯನ್ನು ಹೇಗೆ ವೀಕ್ಷಿಸುತ್ತಾನೋ ಹಾಗೆ ಜನರು ವೀಕ್ಷಿಸದೆ ಇರುವುದೇ ಸಮಸ್ಯೆಗೆ ಮುಖ್ಯ ಕಾರಣವಾದ್ದರಿಂದ ದೇವರ ಕುರಿತ ಜ್ಞಾನವನ್ನು ಹೆಚ್ಚಿಸುವ ಅಗತ್ಯ ಜನರಿಗಿದೆ. ಬೈಬಲ್‌ ಈ ನಿಜತ್ವವನ್ನು ಒಪ್ಪುತ್ತದೆ. ಆದುದರಿಂದ ಭೂಮಿಗೆ “ಯಾರೂ ಕೇಡು ಮಾಡುವದಿಲ್ಲ” ಅದನ್ನು “ಯಾರೂ ಹಾಳುಮಾಡುವದಿಲ್ಲ” ಯಾಕೆಂದರೆ “ಸಮುದ್ರದಲ್ಲಿ ನೀರು ಹೇಗೋ ಹಾಗೆಯೇ ಭೂಮಿಯಲ್ಲಿ ಯೆಹೋವನ ಜ್ಞಾನವು ತುಂಬಿಕೊಂಡಿರುವ” ಸಮಯವು ಬರಲಿದೆ ಎಂದು ಬೈಬಲ್‌ ವಾಗ್ದಾನ ನೀಡುತ್ತದೆ.​—⁠ಯೆಶಾಯ 11:⁠9.

[ಪುಟ 8, 9ರಲ್ಲಿರುವ ಚಿತ್ರ]

ಕ್ರಿಸ್ತನ ಆಳ್ವಿಕೆಯ ಕೆಳಗೆ ನೀತಿವಂತರು ಇಡೀ ಭೂಮಿಯನ್ನು ಪರದೈಸ್‌ ಮಾಡುವುದರಲ್ಲಿ ಪಾಲಿಗರಾಗುವರು