ಆರಾಧ್ಯ ವಸ್ತುಗಳ ಬಗ್ಗೆ ದೇವರ ನೋಟವೇನು?
ಬೈಬಲಿನ ದೃಷ್ಟಿಕೋನ
ಆರಾಧ್ಯ ವಸ್ತುಗಳ ಬಗ್ಗೆ ದೇವರ ನೋಟವೇನು?
ಪ್ರಾರ್ಥನೆಯಲ್ಲಿ ಆರಾಧ್ಯ ವಸ್ತುಗಳನ್ನು ಬಳಸುವುದು ಬೌದ್ಧ, ಹಿಂದೂ, ಇಸ್ಲಾಂ, ಯೆಹೂದಿ, ರೋಮನ್ ಕ್ಯಾಥೊಲಿಕ್ ಧರ್ಮಗಳಲ್ಲಿ ಮತ್ತು ಪ್ರಾಚ್ಯ ಆಚಾರಗಳಲ್ಲಿ ಸಾಮಾನ್ಯ. ಆದುದರಿಂದ ಬಹುಮಟ್ಟಿಗೆ ಎಲ್ಲ ದೇಶಗಳ ಲಕ್ಷಾಂತರ ಜನರು ದೇವರನ್ನು ಆರಾಧಿಸಲು, ಆತನ ಮೆಚ್ಚಿಗೆಯನ್ನು ಗಳಿಸಿ ಆಶೀರ್ವಾದಗಳನ್ನು ಪಡೆಯಲು ಆರಾಧ್ಯ ವಸ್ತುಗಳು ಇರಲೇಬೇಕೆಂದು ನಂಬುತ್ತಾರೆ. ಆದರೆ ಬೈಬಲ್ ಏನನ್ನು ಬೋಧಿಸುತ್ತದೆ?
ಪೂಜ್ಯವಸ್ತುಗಳ ಮೂಲಕ ದೇವರಿಗೆ ಪ್ರಾರ್ಥನೆ ಮಾಡುವುದು ಸಾವಿರಾರು ವರ್ಷಗಳಷ್ಟು ಹಿಂದಿನಿಂದಲೂ ಬಂದ ವಾಡಿಕೆ. ಉದಾಹರಣೆಗೆ ಪ್ರಾಕ್ತನ ಶಾಸ್ತ್ರಜ್ಞರಿಗೆ ಪುರಾತನ ನಿನೆವೆಯ ನಿವೇಶನದಲ್ಲಿ, “ರೆಕ್ಕೆಗಳುಳ್ಳ ಇಬ್ಬರು ಹೆಂಗಸರು ಎಡಗೈಯಲ್ಲಿ ಒಂದು ಜಪಮಾಲೆಯನ್ನು ಹಿಡಿದು ಪವಿತ್ರ ವೃಕ್ಷದ ಮುಂದೆ ಪ್ರಾರ್ಥನಾಪರರಾಗಿ ನಿಂತಿರುವ ಪ್ರತಿಮೆ” ಸಿಕ್ಕಿತು.— ದ ಕ್ಯಾಥಲಿಕ್ ಎನ್‌ಸೈಕ್ಲಪೀಡಿಯ.
ಪ್ರಾರ್ಥನೆಯಲ್ಲಿ ಜಪಸರಗಳನ್ನು ಬಳಸುವ ಉದ್ದೇಶವೇನು? ಅದೇ ಎನ್‌ಸೈಕ್ಲಪೀಡಿಯ ಹೇಳುವುದು: “ಯಾವುದೇ ಪ್ರಾರ್ಥನೆಯನ್ನು ಅನೇಕಾವರ್ತಿ ಜಪಿಸಲೇಬೇಕಾದ ಸಂದರ್ಭದಲ್ಲಿ ಬೆರಳೆಣಿಕೆಯಲ್ಲಿ ಲೆಕ್ಕಿಸುವುದಕ್ಕಿಂತ ಒಂದು ಭೌತಿಕ ಸಾಧನದ ಮೂಲಕ ಎಣಿಕೆ ಮಾಡುವುದು ಹೆಚ್ಚು ಸುಲಭವೆಂದು ಜನರು ನೆನಸುತ್ತಾರೆ.”
ಪ್ರಾರ್ಥನಾಚಕ್ರಗಳು ಪ್ರಾರ್ಥನೆಯ ಪುನರುಚ್ಚಾರವನ್ನು ಇನ್ನಷ್ಟು ಸುಲಭವನ್ನಾಗಿ ಮಾಡುತ್ತವೆ. ಅದನ್ನು ಬಳಸುವವನು ಪ್ರತಿಸಾರಿ ಕೈ, ಗಾಳಿ, ನೀರು ಇಲ್ಲವೆ ವಿದ್ಯುತ್ತಿನಿಂದ ಅದನ್ನು ತಿರುಗಿಸುವಾಗ ಅದನ್ನು ಒಂದು ಪ್ರಾರ್ಥನೆಯಾಗಿ ಎಣಿಸುತ್ತಾನೆ. ಮಂತ್ರಪಠನ, ರಹಸ್ಯಾತ್ಮಕ ಸೂತ್ರಗಳು ಮತ್ತು ಶ್ಲೋಕಗಳನ್ನು ಹೇಳುವಾಗ ಪ್ರಾರ್ಥನಾಚಕ್ರಗಳನ್ನು ಕೆಲವರು ಸುತ್ತು ತಿರುಗಿಸುತ್ತಾರೆ. ಆದರೆ ಇಂಥ ವಿಷಯಗಳ ಬಗ್ಗೆ ದೇವರ ನೋಟವೇನೆಂದು ಪರಿಗಣಿಸೋಣ.
‘ಹೇಳಿದ್ದನ್ನೇ ಸುಮ್ಮಸುಮ್ಮನೆ ಹೇಳಬೇಡಿ’
ಕ್ರೈಸ್ತರಲ್ಲದ ಲಕ್ಷಾಂತರ ಜನರಿಂದಲೂ ದೇವರ ಪ್ರವಾದಿಯಾಗಿ ಪರಿಗಣಿಸಲ್ಪಡುವ ಯೇಸು ಕ್ರಿಸ್ತನು, ಪುನರುಚ್ಚರಿಸುವ ಪ್ರಾರ್ಥನೆಯ ಕುರಿತ ದೇವರ ದೃಷ್ಟಿಕೋನವನ್ನು ವಿವರಿಸುತ್ತಾ ಹೇಳಿದ್ದು: “ಪ್ರಾರ್ಥನೆಮಾಡುವಾಗ ಅಜ್ಞಾನಿಗಳ ಹಾಗೆ ಹೇಳಿದ್ದನ್ನೇ ಸುಮ್ಮಸುಮ್ಮನೆ ಹೇಳಬೇಡ; ಅವರು ಬಹಳ ಮಾತುಗಳನ್ನಾಡಿದರೆ ತಮ್ಮ ಪ್ರಾರ್ಥನೆಯನ್ನು ದೇವರು ಕೇಳುತ್ತಾನೆಂದು ನೆನಸುತ್ತಾರೆ.” *—ಮತ್ತಾಯ 6:7.
ನಾವು ‘ಹೇಳಿದ್ದನ್ನೇ ಸುಮ್ಮಸುಮ್ಮನೆ ಹೇಳುವುದನ್ನು’ ದೇವರು ಮೆಚ್ಚುವುದಿಲ್ಲವೆಂದಾದರೆ, ಅಂಥ ಪ್ರಾರ್ಥನೆಗಳಲ್ಲಿ ಬಳಸಲಾಗುವ ಆರಾಧ್ಯ ವಸ್ತುಗಳನ್ನು ಸಹ ಆತನು
ಮೆಚ್ಚುವುದಿಲ್ಲ ಎಂದಾಗದೇ? ಸತ್ಯದೇವರ ನಂಬಿಗಸ್ತ ಸೇವಕರು ಜಪಮಾಲೆಗಳನ್ನು, ಪ್ರಾರ್ಥನಾಚಕ್ರಗಳನ್ನು ಅಥವಾ ಇತರ ಆರಾಧ್ಯ ವಸ್ತುಗಳನ್ನು ಬಳಸಿದ್ದರೆಂಬ ಒಂದೇ ಒಂದು ಉಲ್ಲೇಖವೂ ಬೈಬಲಿನಲ್ಲಿ ಇಲ್ಲ. ಪ್ರಾರ್ಥನೆ ಎಂದರೇನು ಮತ್ತು ಅದರ ಉದ್ದೇಶವೇನೆಂದು ಅರ್ಥಮಾಡಿಕೊಂಡಾಗ, ಆರಾಧ್ಯ ವಸ್ತುಗಳನ್ನು ನಾವೇಕೆ ಉಪಯೋಗಿಸಬಾರದು ಎಂಬುದಕ್ಕಿರುವ ಕಾರಣಗಳು ಇನ್ನಷ್ಟು ಸ್ಪಷ್ಟವಾಗುತ್ತವೆ.ದೇವರು ಮೆಚ್ಚುವಂಥ ಪ್ರಾರ್ಥನೆ
ಯೇಸು ಕಲಿಸಿದ ಪ್ರಾರ್ಥನೆಯಲ್ಲಿ ಆತನು ದೇವರನ್ನು “ನಮ್ಮ ತಂದೆಯೇ” ಎಂದು ನಿರ್ದಿಷ್ಟವಾಗಿ ಕರೆದನು. ಹೌದು, ನಮ್ಮ ನಿರ್ಮಾಣಿಕನು ಮಂತ್ರಪಠನ, ಆಚಾರಪದ್ಧತಿ ಇಲ್ಲವೆ ಜಪಗಳ ಮೂಲಕ ಖುಷಿಪಡಿಸಬೇಕಾದ ನಿರಾಸಕ್ತಿಯ ನಿಗೂಢ ಶಕ್ತಿಯಲ್ಲ. ಬದಲಿಗೆ ಪ್ರೀತಿಪರ ತಂದೆಯಾಗಿದ್ದಾನೆ. ನಾವು ಆತನನ್ನು ತಂದೆಯಾಗಿ ಅಂಗೀಕರಿಸಿ ಪ್ರೀತಿಸಬೇಕೆಂದೇ ಆತನ ಅಪೇಕ್ಷೆ. “ನಾನು ತಂದೆಯನ್ನು ಪ್ರೀತಿಸುತ್ತೇನೆ” ಎಂದನು ಯೇಸು. (ಯೋಹಾನ 14:31) ಪುರಾತನ ಇಸ್ರಾಯೇಲಿನ ಪ್ರವಾದಿಯೊಬ್ಬನು ಹೇಳಿದ್ದು: “ಯೆಹೋವನೇ, ನೀನು ನಮ್ಮ ತಂದೆಯಾಗಿದ್ದೀ.”—ಯೆಶಾಯ 64:8.
ಹಾಗಾದರೆ ನಮ್ಮ ಆಧ್ಯಾತ್ಮಿಕ ತಂದೆಯಾದ ಯೆಹೋವನಿಗೆ ನಾವು ಹೇಗೆ ಹತ್ತಿರವಾಗಬಲ್ಲೆವು? (ಯಾಕೋಬ 4:8) ಯಾವುದೇ ಒಂದು ಸಂಬಂಧದಲ್ಲಿ ಹೇಗೊ ಹಾಗೆ ಇಬ್ಬದಿಯ ಸಂವಾದದ ಮೂಲಕ ನಾವು ದೇವರೊಂದಿಗೆ ಆಪ್ತ ಸಂಬಂಧಕ್ಕೆ ಬರುತ್ತೇವೆ. ತನ್ನ ಲಿಖಿತ ವಾಕ್ಯವಾದ ಬೈಬಲಿನ ಮೂಲಕ ದೇವರು ನಮ್ಮೊಂದಿಗೆ ‘ಮಾತಾಡುತ್ತಾನೆ.’ ಅದರಲ್ಲಿ ತನ್ನ ಕೆಲಸಗಳನ್ನು, ವ್ಯಕ್ತಿತ್ವವನ್ನು ಮತ್ತು ನಮಗಾಗಿ ತನ್ನ ಉದ್ದೇಶವನ್ನು ಪ್ರಕಟಪಡಿಸುತ್ತಾನೆ. (2 ತಿಮೊಥೆಯ 3:16) ಪ್ರತಿಯಾಗಿ, ನಾವು ಪ್ರಾರ್ಥನೆಯ ಮೂಲಕ ಅಂದರೆ ಪೂಜ್ಯಭಾವದಿಂದ ಆತನೊಂದಿಗೆ ಮಾತಾಡುತ್ತೇವೆ. ಆದರೆ ಅಂಥ ಪ್ರಾರ್ಥನೆಯು ಪ್ರಾಮಾಣಿಕವೂ ಆತ್ಮೀಯವೂ ಆಗಿರಬೇಕು, ವಿಧಿಬದ್ಧವೂ ಕೇವಲ ರೂಢಿಯದ್ದೂ ಆಗಿರಬಾರದು.
ಪರಿಗಣಿಸಿ: ಆತ್ಮೀಯವೂ ಪ್ರೀತಿಪರವೂ ಆದ ಕುಟುಂಬದಲ್ಲಿ ಸಾಧಾರಣ ಎಲ್ಲಾ ಮಕ್ಕಳು ತಮ್ಮ ಹೆತ್ತವರೊಂದಿಗೆ ಹೇಗೆ ಮಾತಾಡುತ್ತಾರೆ? ಅವರು ಸುಮ್ಮನೆ ಹೇಳಿದ್ದನ್ನೇ ಪದೇ ಪದೇ ಹೇಳುತ್ತಿರುತ್ತಾರೋ? ಯಾವುದಾದರೊಂದು ಸಾಧನದ ಮೂಲಕ ಪುನರುಚ್ಚರಿಸುತ್ತಾ ಅದನ್ನು ಲೆಕ್ಕಿಸುತ್ತಿರುತ್ತಾರೋ? ಖಂಡಿತವಾಗಿಯೂ ಇಲ್ಲ! ಬದಲಾಗಿ ಅವರು ಮನದಾಳದಿಂದ ಅರ್ಥಭರಿತವಾಗಿ ಗೌರವದಿಂದ ಮಾತಾಡುತ್ತಾರೆ.
ದೇವರಿಗೆ ನಾವು ಮಾಡುವ ಪ್ರಾರ್ಥನೆಯು ಸಹ ಅದೇ ರೀತಿಯಲ್ಲಿರಬೇಕು. ನಾವು ದೇವರೊಂದಿಗೆ ಮಾತಾಡುವಾಗ ನಮಗಿರುವ ಯಾವುದೇ ಸುಖದುಃಖಗಳನ್ನು ಹೇಳಿಕೊಳ್ಳಬಲ್ಲೆವು ನಿಶ್ಚಯ. “ಯಾವ ಸಂಬಂಧವಾಗಿಯೂ ಚಿಂತೆಮಾಡದೆ ಸರ್ವವಿಷಯದಲ್ಲಿ ದೇವರ ಮುಂದೆ ಕೃತಜ್ಞತಾಸ್ತುತಿಯನ್ನೂ ಪ್ರಾರ್ಥನೆವಿಜ್ಞಾಪನೆಗಳನ್ನೂ ಮಾಡುತ್ತಾ ನಿಮಗೆ ಬೇಕಾದದ್ದನ್ನು ತಿಳಿಯಪಡಿಸಿರಿ. ಆಗ ಎಲ್ಲಾ ಗ್ರಹಿಕೆಯನ್ನು ಮೀರುವ ದೇವಶಾಂತಿಯು ನಿಮ್ಮ ಹೃದಯಗಳನ್ನೂ ಯೋಚನೆಗಳನ್ನೂ . . . ಕಾಯುವದು” ಎಂದು ಫಿಲಿಪ್ಪಿ 4:6, 7 ತಿಳಿಸುತ್ತದೆ. ಯಾವುದಾದರೂ ಚಿಂತೆ ನಮ್ಮನ್ನು ಕಾಡುತ್ತಿರುವಾಗ ನಾವು ಅನೇಕಸಾರಿ ಆ ಬಗ್ಗೆ ಪ್ರಾರ್ಥಿಸಬಹುದು ನಿಜ. ಆದರೆ ಅದು ಶಬ್ದಶಃ ಹೇಳಿದ್ದನ್ನೇ ಹೇಳಿ ಪ್ರಾರ್ಥನೆ ಮಾಡುವುದನ್ನು ಸೂಚಿಸುವುದಿಲ್ಲ.—ಮತ್ತಾಯ 7:7-11.
ಬೈಬಲಿನಲ್ಲಿ ದೇವರು ಮೆಚ್ಚುವ ಪ್ರಾರ್ಥನೆಗಳ ಅನೇಕ ಮಾದರಿಗಳಿವೆ. ಅದರಲ್ಲಿ ಕೀರ್ತನೆಗಳು ಮತ್ತು ಯೇಸು ತಾನೇ ಮಾಡಿದ ಪ್ರಾರ್ಥನೆಗಳು ಸೇರಿವೆ. * (ಕೀರ್ತನೆಗಳು 17 ಮತ್ತು 86, ಮೇಲ್ಬರಹಗಳು; ಲೂಕ 10:21, 22; 22:40-44) ಯೇಸುವಿನ ಪ್ರಾರ್ಥನೆಗಳಲ್ಲಿ ಒಂದನ್ನು ಯೋಹಾನ 17ನೆಯ ಅಧ್ಯಾಯದಲ್ಲಿ ನಾವು ನೋಡುತ್ತೇವೆ. ಕೆಲವು ನಿಮಿಷ ತಕ್ಕೊಂಡು ಅದನ್ನು ದಯವಿಟ್ಟು ಓದಿ. ಯೇಸು ಹೇಗೆ ತನ್ನ ಹೃದಯವನ್ನು ದೇವರಿಗೆ ತೋಡಿಕೊಂಡನು ಎಂಬುದನ್ನು ಓದುವಾಗ ಗಮನಿಸಿ. ಅವನ ಪ್ರಾರ್ಥನೆಯಲ್ಲಿದ್ದ ನಿಸ್ವಾರ್ಥಭಾವವು ತನ್ನ ಹಿಂಬಾಲಕರಲ್ಲಿ ಅವನಿಗಿದ್ದ ಗಾಢ ಪ್ರೀತಿಯನ್ನು ಹೇಗೆ ಪ್ರತಿಬಿಂಬಿಸಿತ್ತು ಎಂದು ನೋಡಿರಿ. ‘ಪವಿತ್ರನಾದ ತಂದೆಯೇ, ಕೆಡುಕನಾದ [ಸೈತಾನನಿಂದ] ಇವರನ್ನು ತಪ್ಪಿಸಿ ಕಾಪಾಡಬೇಕೆಂದು ಕೇಳಿಕೊಳ್ಳುತ್ತೇನೆ’ ಎಂದವನು ಪ್ರಾರ್ಥಿಸಿದನು.—ಯೋಹಾನ 17:11, 15.
ಯೇಸು ತನ್ನ ಪ್ರಾರ್ಥನೆಯಲ್ಲಿ ಭಾವಶೂನ್ಯ ವ್ಯಕ್ತಿಯೊಂದಿಗೆ ಮಾತಾಡಿದನೋ? ಅಥವಾ ಯಾವುದೇ ಯಾಂತ್ರಿಕ ಆಚಾರಗಳನ್ನು ಉಪಯೋಗಿಸಿದನೋ? ಖಂಡಿತ ಇಲ್ಲ! ಆತನು ಎಂಥ ಒಳ್ಳೆಯ ಮಾದರಿಯನ್ನು ನಮಗೆ ಇಟ್ಟಿರುತ್ತಾನೆ! ಹೌದು, ಸತ್ಯ ದೇವರೊಂದಿಗೆ ಆಪ್ತ ಸಂಬಂಧಕ್ಕೆ ಬರಲು ಬಯಸುವವರೆಲ್ಲರೂ ಆತನನ್ನು ವ್ಯಕ್ತಿಯೋಪಾದಿ ನಿಷ್ಕೃಷ್ಟವಾಗಿ ತಿಳಿಯಬೇಕು. ಅನಂತರ ಆ ಜ್ಞಾನದಲ್ಲಿ ಆಧಾರಿತವಾದ ಪ್ರೀತಿಯಿಂದ ಪ್ರಚೋದಿತರಾಗಿ ದೇವರು ಮೆಚ್ಚದ ಧಾರ್ಮಿಕ ಪದ್ಧತಿಗಳನ್ನು ಮತ್ತು ಆಚಾರಗಳನ್ನು ಅವರು ತೊರೆಯಬೇಕು. ಅಂಥವರಿಗೆ ಯೆಹೋವನು ಅನ್ನುವುದು: “ನಾನು ನಿಮ್ಮನ್ನು ಸೇರಿಸಿಕೊಂಡು ನಿಮಗೆ ತಂದೆಯಾಗಿರುವೆನು; ನೀವು ನನಗೆ ಕುಮಾರ ಕುಮಾರಿಯರು ಆಗಿರುವಿರಿ.”—2 ಕೊರಿಂಥ 6:17, 18. (g 11/08)
[ಪಾದಟಿಪ್ಪಣಿಗಳು]
^ ತನ್ನ ಮಾದರಿ ಪ್ರಾರ್ಥನೆಯಲ್ಲಿ ಯೇಸು, “ಆದದರಿಂದ ನೀವು ಈ ಪ್ರಾರ್ಥನೆಮಾಡತಕ್ಕದ್ದು” ಎಂದು ಹೇಳಲಿಲ್ಲ. ಒಂದು ವೇಳೆ ಹಾಗೆ ಹೇಳಿದ್ದಲ್ಲಿ, ಮೇಲೆ ಅವನು ನುಡಿದ ಮಾತುಗಳಿಗೆ ಅದು ವಿರುದ್ಧವಾಗಿರುತ್ತಿತ್ತು. ಬದಲಾಗಿ ಅವನು “ನೀವು ಹೀಗೆ ಪ್ರಾರ್ಥನೆಮಾಡತಕ್ಕದ್ದು” ಎಂದು ಹೇಳಿದನು. (ಮತ್ತಾಯ 6:9-13) ಯೇಸು ಹಾಗೆ ಹೇಳಿದ್ದೇಕೆ? ಏಕೆಂದರೆ ಅವನ ಮಾದರಿ ಪ್ರಾರ್ಥನೆಯು ತೋರಿಸುವಂತೆ ನಾವು ಭೌತಿಕ ವಿಷಯಗಳಿಗಿಂತ ಆಧ್ಯಾತ್ಮಿಕ ವಿಷಯಗಳಿಗೆ ಆದ್ಯತೆ ಕೊಡಬೇಕೆಂದೆ.
^ ಕೀರ್ತನೆಗಳು ಬೇರೆ ಬೇರೆ ಸಂದರ್ಭಗಳಲ್ಲಿ ಹಾಡಲ್ಪಡುತ್ತಿದ್ದವಾದರೂ ಅವುಗಳನ್ನು ಮಂತ್ರಗಳಂತೆ ಪದೇ ಪದೇ ಪಠಿಸುತ್ತಿರಲಿಲ್ಲ ಇಲ್ಲವೆ ಅವುಗಳೊಂದಿಗೆ ಜಪಸರ ಅಥವಾ ಪ್ರಾರ್ಥನಾಚಕ್ರಗಳನ್ನು ಉಪಯೋಗಿಸುವ ಆಚಾರಗಳು ರೂಢಿಯಲ್ಲಿರಲಿಲ್ಲ.
ನೀವೇನು ಹೇಳುತ್ತೀರಿ?
◼ ಹೇಳಿದ್ದನ್ನೇ ಹೇಳುವ ಪ್ರಾರ್ಥನೆಯ ವಿಷಯದಲ್ಲಿ ಯೇಸು ನೀಡಿದ ಸಲಹೆಯು ಜಪಮಾಲೆ ಮತ್ತು ಪ್ರಾರ್ಥನಾಚಕ್ರಗಳ ಉಪಯೋಗಕ್ಕೂ ಅನ್ವಯಿಸುತ್ತದೋ?—ಮತ್ತಾಯ 6:7.
◼ ನಮ್ಮ ಪ್ರಾರ್ಥನೆಗಳು ದೇವರನ್ನು ನಾವು ಹೇಗೆ ವೀಕ್ಷಿಸುತ್ತೇವೆಂದು ತೋರಿಸಿಕೊಡಬೇಕು?—ಯೆಶಾಯ 64:8.
◼ ಧಾರ್ಮಿಕ ಸುಳ್ಳು ಆಚಾರಗಳನ್ನು ನಾವು ತೊರೆಯುವಲ್ಲಿ ದೇವರು ನಮ್ಮನ್ನು ಹೇಗೆ ವೀಕ್ಷಿಸುವನು?—2 ಕೊರಿಂಥ 6:17, 18.