ವಿವೇಚನೆಯಿಂದ ಹಣ ಬಳಸಿ
ವಿವೇಚನೆಯಿಂದ ಹಣ ಬಳಸಿ
“ಹಣ ಸಕಲವಿಧವಾದ ಕೆಟ್ಟತನಕ್ಕೆ ಮೂಲವಾಗಿದೆ” ಎಂಬ ನಾಣ್ಣುಡಿ ಬೈಬಲಿಗೆ ಸೇರಿದುದೆಂದು ಎಣಿಸಲಾಗುತ್ತದೆ. ಆದರೆ ಬೈಬಲ್ ನಿಜವಾಗಿ ಹೇಳುವುದೇನೆಂದರೆ, “ಹಣದಾಸೆಯು ಸಕಲವಿಧವಾದ ಕೆಟ್ಟತನಕ್ಕೆ ಮೂಲವಾಗಿದೆ.” (1 ತಿಮೊಥೆಯ 6:10) ಕೆಲವರಿಗೆ ಹಣದ ವ್ಯಾಮೋಹವೇ ಹಿಡಿದಿರುತ್ತದೆ. ಎಷ್ಟೆಂದರೆ ಹಣ ಕೂಡಿಸಿಡುವುದೇ ಅವರ ಉಪಾಸನೆ. ಕೆಲವರು ತಮ್ಮನ್ನು ಹಣದ ಗುಲಾಮರಾಗಿ ಮಾಡಿಕೊಂಡು ಶೋಚನೀಯ ಫಲಿತಾಂಶಗಳನ್ನು ಕೊಯ್ದಿರುತ್ತಾರೆ. ಆದರೆ ಹಣವನ್ನು ವಿವೇಕದಿಂದ ಬಳಸುವುದಾದರೆ ಅದೊಂದು ಉಪಯುಕ್ತ ಸಾಧನವಾಗಿರಬಲ್ಲದು. “ಹಣವು ಅನೇಕ ಸಮಸ್ಯೆಗಳನ್ನು ಬಗೆಹರಿಸುವುದು” ಎಂದು ತಿಳಿಸುತ್ತದೆ ಬೈಬಲ್.—ಪ್ರಸಂಗಿ 10:19, ಪರಿಶುದ್ಧ ಬೈಬಲ್. *
ಬೈಬಲ್ ಹಣಕಾಸಿನ ಕೈಪಿಡಿಯಲ್ಲವಾದರೂ ಹಣವನ್ನು ವಿವೇಕದಿಂದ ಖರ್ಚುಮಾಡುವ ವಿಷಯದಲ್ಲಿ ವ್ಯಾವಹಾರಿಕ ಸಲಹೆಯನ್ನು ಅದು ಕೊಡಬಲ್ಲದು. ಕೆಳಗಿನ ಐದು ಹೆಜ್ಜೆಗಳು ಆರ್ಥಿಕ ಸಲಹೆಗಾರರಿಂದ ಸಾಮಾನ್ಯವಾಗಿ ನೀಡಲ್ಪಡುವ ಸಲಹೆಗಳು. ಆದರೆ ಅವು ಬಹಳ ಹಿಂದೆಯೇ ಬೈಬಲ್‌ನಲ್ಲಿ ಕೊಡಲಾದ ಮೂಲಸೂತ್ರಗಳೊಂದಿಗೆ ಹೊಂದಿಕೆಯಲ್ಲಿವೆ.
ಉಳಿತಾಯಮಾಡಿ. ಉಳಿತಾಯಮಾಡುವ ಅಗತ್ಯವನ್ನು ಪುರಾತನ ಇಸ್ರಾಯೇಲ್ ಜನರಿಗೆ ಕಲಿಸಲಾಗಿತ್ತು ಎಂದು ಬೈಬಲ್ ತೋರಿಸುತ್ತದೆ. ಪ್ರತಿವರ್ಷ ಹಬ್ಬ-ಆಚರಣೆಗಳಿಗೆ ಹಾಜರಾಗಲಿಕ್ಕಾಗಿಯೇ ತಮ್ಮ ಆದಾಯದ ದಶಮ ಭಾಗವನ್ನು ಅವರು ಉಳಿಸಿಡಬೇಕಿತ್ತು. (ಧರ್ಮೋಪದೇಶಕಾಂಡ 14:22-27) ಅದೇ ರೀತಿಯಲ್ಲಿ ಕೊರತೆಯಲ್ಲಿರುವ ತಮ್ಮ ಜೊತೆವಿಶ್ವಾಸಿಗಳಿಗೆ ಸಹಾಯಮಾಡಲಿಕ್ಕಾಗಿ ಪ್ರತಿವಾರವೂ ಸ್ವಲ್ಪ ಹಣವನ್ನು ಬದಿಗಿರಿಸುವಂತೆ ಅಪೊಸ್ತಲ ಪೌಲನು ಆದಿಕ್ರೈಸ್ತರನ್ನು ಉತ್ತೇಜಿಸಿದ್ದನು. (1 ಕೊರಿಂಥ 16:1, 2) ಹೆಚ್ಚಿನ ಆರ್ಥಿಕ ಸಲಹೆಗಾರರು ಉಳಿತಾಯವನ್ನು ಪ್ರೋತ್ಸಾಹಿಸುತ್ತಾರೆ. ಉಳಿತಾಯಕ್ಕೆ ಆದ್ಯತೆ ಕೊಡುವುದು ಸೂಕ್ತ. ವೇತನ ಸಿಕ್ಕಿದೊಡನೆ ಉಳಿತಾಯ ಮಾಡಲು ನೀವು ಬಯಸುವ ಹಣವನ್ನು ಬ್ಯಾಂಕ್‌ನಲ್ಲಿ ಡಿಪಾಸಿಟ್ ಮಾಡಿರಿ ಅಥವಾ ಬೇರೆಕಡೆ ಸುರಕ್ಷಿತವಾಗಿ ಇಡಿ. ಹೀಗೆ ಮಾಡುವುದರಿಂದ ಉಳಿತಾಯದ ಹಣವನ್ನು ಖರ್ಚುಮಾಡಿಬಿಡುವ ಶೋಧನೆಯಿಂದ ತಪ್ಪಿಸಿಕೊಳ್ಳುವಿರಿ.
ಬಜೆಟ್‌ಮಾಡಿ. ನಿಮ್ಮ ಖರ್ಚುವೆಚ್ಚಗಳನ್ನು ನಿರ್ವಹಿಸಲು, ಕಡಿಮೆಮಾಡಲು ಅಥವಾ ಅಂಕೆಯಲ್ಲಿಡಲು ಇದೊಂದೇ ವ್ಯಾವಹಾರಿಕ ಮಾರ್ಗ. ನಿಮ್ಮ ಹಣ ಯಾವುದಕ್ಕೆಲ್ಲ ಖರ್ಚಾಗುತ್ತದೆ ಎಂದು ತಿಳಿಯಲು ಮತ್ತು ನಿಮ್ಮ ಹಣಕಾಸಿನ ಗುರಿಗಳನ್ನು ಮುಟ್ಟಲು ಒಂದು ಒಳ್ಳೇ ಬಜೆಟ್ ಸಹಾಯಕರ. ನಿಮ್ಮ ಆದಾಯವು ಎಷ್ಟೆಂದು ನಿಮಗೆ ತಿಳಿದಿರಲಿ. ಆಯಕ್ಕಿಂತ ವ್ಯಯ ಕಡಿಮೆಯಿರಲಿ. ನಿಮ್ಮ ಅಗತ್ಯ ಮತ್ತು ಅಪೇಕ್ಷೆಯ ನಡುವಣ ವ್ಯತ್ಯಾಸವನ್ನು ಕಲಿಯಿರಿ. ಯಾವುದೇ ಕೆಲಸಕ್ಕೆ ಕೈಹಾಕುವ ಮುಂಚೆ “ಅದಕ್ಕೆ ಎಷ್ಟು ಖರ್ಚು ಹಿಡಿದೀತು” ಎಂದು ಲೆಕ್ಕಮಾಡುವಂತೆ ಯೇಸು ತನ್ನ ಕೇಳುಗರನ್ನು ಉತ್ತೇಜಿಸಿದನು. (ಲೂಕ 14:28) ಅನಾವಶ್ಯಕವಾಗಿ ಸಾಲಗಳನ್ನು ಮಾಡದಂತೆ ಬೈಬಲ್ ಸಲಹೆ ನೀಡುತ್ತದೆ.—ಜ್ಞಾನೋಕ್ತಿ 22:7.
ಜ್ಞಾನೋಕ್ತಿ 21:5 (NIBV) “ಶ್ರದ್ಧೆಯುಳ್ಳವನ ಯೋಜನೆಗಳಿಂದ ಸಮೃದ್ಧಿ” ಎಂಬುದನ್ನು ನಮಗೆ ನೆನಪಿಸುತ್ತದೆ.
ಯೋಜನೆಮಾಡಿ. ನಿಮ್ಮ ಮುಂದಣ ಜೀವನಕ್ಕಾಗಿ ಅಗತ್ಯವಿರುವ ವಿಷಯಗಳನ್ನು ಜಾಗ್ರತೆಯಿಂದ ಯೋಜಿಸಿರಿ. ಉದಾಹರಣೆಗೆ, ಒಂದು ಮನೆ ಅಥವಾ ಅಪಾರ್ಟ್‌ಮೆಂಟನ್ನು ಖರೀದಿಸಲು ಯೋಜಿಸುವುದಾದರೆ ನ್ಯಾಯಸಮ್ಮತ ದರದಲ್ಲಿ ಲೋನ್ ತಕ್ಕೊಳ್ಳುವುದು ಒಳ್ಳೆಯ ನಿರ್ಣಯ. ತದ್ರೀತಿಯಲ್ಲಿ ಒಬ್ಬ ಗೃಹಸ್ಥನು ಜೀವವಿಮೆ, ಆರೋಗ್ಯವಿಮೆ, ವೈಕಲ್ಯವಿಮೆ ಅಥವಾ ಬೇರೆ ವಿಧದ ಇನ್ಷೂರೆನ್ಸ್ ಪಾಲಿಸಿಗಳನ್ನು ತನ್ನ ಕುಟುಂಬದ ಸುರಕ್ಷೆಗಾಗಿ ತಕ್ಕೊಳ್ಳಬಹುದು. ಭವಿಷ್ಯತ್ತಿನ ಅಗತ್ಯಗಳಿಗಾಗಿ ಯೋಜಿಸುವುದರಲ್ಲಿ ನಿಮ್ಮ ನಿವೃತ್ತಿಯ ಬಗ್ಗೆಯೂ ಯೋಜಿಸುವುದು ಸೇರಿದೆ.ಕಲಿಯಿರಿ. ಕೆಲವು ಕೌಶಲಗಳನ್ನು ಪಡೆದುಕೊಳ್ಳಲಿಕ್ಕಾಗಿ ಮತ್ತು ನಿಮ್ಮ ಶಾರೀರಿಕ, ಮಾನಸಿಕ ಸ್ವಾಸ್ಥ್ಯಕ್ಕಾಗಿ ಹಣ ವಿನಿಯೋಗಿಸಿರಿ. ಈ ವಿನಿಯೋಗಗಳು ನಂತರ ನಿಮಗೇ ಪ್ರತಿಫಲದಾಯಕ. ಕಲಿಕೆಯನ್ನು ಜೀವನಪರ್ಯಂತದ ಹವ್ಯಾಸವಾಗಿಟ್ಟುಕೊಳ್ಳಿ. ‘ಸುಜ್ಞಾನ ಮತ್ತು ಬುದ್ಧಿಗೆ’ ಅಂದರೆ ವ್ಯಾವಹಾರಿಕ ಜ್ಞಾನ ಮತ್ತು ಯೋಚನಾ ಸಾಮರ್ಥ್ಯಕ್ಕೆ ಬೈಬಲ್ ಹೆಚ್ಚು ಮಹತ್ವ ಕೊಡುತ್ತದೆ. ಆ ಗುಣಗಳನ್ನು ಬೆಳೆಸಿಕೊಳ್ಳುತ್ತಾ ಇರುವಂತೆ ಅದು ಉತ್ತೇಜಿಸುತ್ತದೆ.—ಜ್ಞಾನೋಕ್ತಿ 3:21, 22; ಪ್ರಸಂಗಿ 10:10.
ಸಮತೋಲನವಿರಲಿ. ಹಣಕ್ಕೆ ಅದರ ತಕ್ಕದಾದ ಸ್ಥಾನವಿರಲಿ. ಯಾರು ಹಣಕ್ಕಿಂತ ಹೆಚ್ಚಾಗಿ ಜನಕ್ಕೆ ಹೆಚ್ಚು ಪರಿಗಣನೆ ತೋರಿಸುತ್ತಾರೋ ಅವರು ಹೆಚ್ಚು ಸಂತೋಷಿತರು ಎಂದು ಎಷ್ಟೋ ಸರ್ವೆಗಳು ತೋರಿಸುತ್ತವೆ. ಕೆಲವರು ಅತ್ಯಾಶೆಯಿಂದಾಗಿ ತಮ್ಮ ಸಮತೋಲನವನ್ನು ಕಳೆದುಕೊಳ್ಳುತ್ತಾರೆ. ಹೇಗೆ? ತಮ್ಮ ಮೂಲಭೂತ ಅಗತ್ಯತೆಗಳನ್ನು ಸಾಕಷ್ಟು ಮಟ್ಟಿಗೆ ನೀಗಿಸಿಕೊಂಡ ಮೇಲೆ ಅವರು ಐಶ್ವರ್ಯದ ಬೆನ್ನುಹತ್ತುತ್ತಾರೆ. ಆದರೂ ಊಟ, ಬಟ್ಟೆ, ಮನೆಯ ಹೊರತು ಒಬ್ಬ ಮನುಷ್ಯನಿಗೆ ನಿಜವಾಗಿ ಹೆಚ್ಚೇನು ಬೇಕು? ಈ ಲೇಖನದ ಆರಂಭದಲ್ಲಿ ಉಲ್ಲೇಖಿಸಲಾದ ಬೈಬಲ್ ಲೇಖಕನು, “ನಮಗೆ ಅನ್ನವಸ್ತ್ರಗಳಿದ್ದರೆ ಸಾಕು” ಎಂದೂ ಹೇಳಿದ್ದರಲ್ಲಿ ಆಶ್ಚರ್ಯವೇನಿಲ್ಲ. (1 ತಿಮೊಥೆಯ 6:8) ಸಂತೃಪ್ತಿಯನ್ನು ಬೆಳೆಸಿಕೊಳ್ಳುವುದು ಹಣದ ವ್ಯಾಮೋಹದಿಂದಲೂ ಅದರೊಂದಿಗೆ ಬರುವ ಸಕಲ ಸಮಸ್ಯೆಗಳಿಂದಲೂ ನಮ್ಮನ್ನು ತಪ್ಪಿಸುತ್ತದೆ.
ಹಣದಾಸೆಯು ನಿಜವಾಗಿಯೂ ಅನೇಕ ಕೆಟ್ಟತನಕ್ಕೆ ಮೂಲ. ಒಂದು ವೇಳೆ ನೀವು ಬಿಟ್ಟುಕೊಟ್ಟಲ್ಲಿ ದುಡ್ಡೇ ನಿಮ್ಮ ಸರ್ವಸ್ವವಾಗುತ್ತದೆ. ಆದರೆ ಹಣವನ್ನು ನೀವು ಯೋಗ್ಯವಾಗಿ ಬಳಸುವಲ್ಲಿ ಅದು ಜೀವಿತದ ಹೆಚ್ಚು ಮಹತ್ವದ ವಿಷಯಗಳನ್ನು ಅಂದರೆ ಕುಟುಂಬ, ಸ್ನೇಹಿತರು ಮತ್ತು ದೇವರೊಂದಿಗಿನ ಆಪ್ತ ಸಂಬಂಧವನ್ನು ಕಟ್ಟಲು ದಾರಿಮಾಡುತ್ತದೆ. ಹಾಗಿದ್ದರೂ ಈ ಲೋಕದಲ್ಲಿ ಹಣದ ಚಿಂತೆಗಳಿಂದ ಪೂರ್ಣವಾಗಿ ಮುಕ್ತರಾಗಲು ಅಸಾಧ್ಯ ನಿಜ. ಧನವು ಯಾವಾಗಲೂ ಅಂಥ ಚಿಂತೆ ಕಳವಳಗಳ ಮೂಲವಾಗಿರುವುದೋ? ಬಡತನವು ಕೊನೆಗೊಳ್ಳುವುದು ಎಂಬುದಕ್ಕೆ ನಿರೀಕ್ಷೆಯಿದೆಯೋ? ಈ ಪ್ರಶ್ನೆಗಳ ಉತ್ತರವು ಮುಂದಿನ ಲೇಖನದಲ್ಲಿದೆ. (g 3/09)
[ಪಾದಟಿಪ್ಪಣಿ]
^ Taken from the HOLY BIBLE: Kannada EASY-TO-READ VERSION © 1997 by World Bible Translation Center, Inc. and used by permission.
[ಪುಟ 5ರಲ್ಲಿರುವ ಸಂಕ್ಷಿಪ್ತ ವಿವರಣೆ]
ನಿಮ್ಮ ಆದಾಯವು ಎಷ್ಟೆಂದು ನಿಮಗೆ ತಿಳಿದಿರಲಿ, ಆಯಕ್ಕಿಂತ ವ್ಯಯ ಕಡಿಮೆಯಿರಲಿ
[ಪುಟ 5ರಲ್ಲಿರುವ ಸಂಕ್ಷಿಪ್ತ ವಿವರಣೆ]
ಅಗತ್ಯ ಮತ್ತು ಅಪೇಕ್ಷೆಯ ನಡುವಣ ವ್ಯತ್ಯಾಸವನ್ನು ಕಲಿಯಿರಿ
[ಪುಟ 6ರಲ್ಲಿರುವ ಸಂಕ್ಷಿಪ್ತ ವಿವರಣೆ]
ಊಟ, ಬಟ್ಟೆ, ಮನೆಯ ಹೊರತು ಒಬ್ಬ ಮನುಷ್ಯನಿಗೆ ನಿಜವಾಗಿ ಹೆಚ್ಚೇನು ಬೇಕು?
[ಪುಟ 7ರಲ್ಲಿರುವ ಚೌಕ/ಚಿತ್ರ]
ಹಣದ ಸದುಪಯೋಗವನ್ನು ಮಕ್ಕಳಿಗೆ ಕಲಿಸಿ
ಇಂದು ಅನೇಕ ಪ್ರಾಪ್ತವಯಸ್ಕರು ಹಣಕಾಸಿನ ತೊಂದರೆಗೆ ಈಡಾಗಿದ್ದಾರೆ. ಆದ್ದರಿಂದ ಹೆತ್ತವರು ತಮ್ಮ ಮಕ್ಕಳಿಗೆ ಚಿಕ್ಕಂದಿನಿಂದಲೇ ದುಡ್ಡಿನ ಮೌಲ್ಯದ ಬಗ್ಗೆ ಕಲಿಸುವಂತೆ ಪರಿಣತರು ಉತ್ತೇಜಿಸುತ್ತಿದ್ದಾರೆ. ಹಣ ಎಲ್ಲಿಂದ ಬರುತ್ತದೆ ಎಂದು ಮಕ್ಕಳನ್ನು ಕೇಳಿದರೆ ಹೆಚ್ಚಿನವರು “ಅಪ್ಪ ತರುತ್ತಾರೆ” ಅಥವಾ “ಬ್ಯಾಂಕ್ ಕೊಡುತ್ತದೆ” ಎಂದು ಹೇಳುತ್ತಾರೆ. ಮಕ್ಕಳಿಗೆ ಹಣದ ಮೌಲ್ಯದ ಕುರಿತು ನೀವೇ ಕಲಿಸಿರಿ. ಅಗತ್ಯ ಮತ್ತು ಅಪೇಕ್ಷೆಗಳ ನಡುವಣ ವ್ಯತ್ಯಾಸ, ಉಳಿತಾಯ ಮಾಡುವುದು ಹೇಗೆ, ಹಣ ವಿನಿಯೋಗಿಸುವುದು ಹೇಗೆ ಎಂಬುದನ್ನು ಕಲಿಸುವುದಾದರೆ ಮುಂದೆಬರುವ ಸಾಲದ ಹೊರೆ ಮತ್ತು ದುಡ್ಡಿನ ದಾಸ್ಯದ ಮನೋವೇದನೆಯಿಂದ ತಪ್ಪಿಸಿಕೊಳ್ಳಲು ನೆರವಾಗುವಿರಿ. ಕೆಳಗೆ ಕೆಲವು ಸಲಹೆಗಳಿವೆ.
1. ಒಳ್ಳೇ ಮಾದರಿಯಿಡಿರಿ. ನಿಮ್ಮ ಮಕ್ಕಳು ಸಾಮಾನ್ಯವಾಗಿ ನಿಮ್ಮ ನಡೆಯನ್ನು ಹೆಚ್ಚು ಅನುಕರಿಸುತ್ತಾರೆಯೇ ಹೊರತು ನಿಮ್ಮ ನುಡಿಯನ್ನಲ್ಲ.
2. ಖರ್ಚಿಗೆ ಮಿತಿಯನ್ನಿಡಿ. ನೀವು ಮತ್ತು ನಿಮ್ಮ ಮಕ್ಕಳು ಎಷ್ಟು ಖರ್ಚುಮಾಡಬಹುದು ಎಂದು ಮೊದಲೇ ಚರ್ಚಿಸಿ. ಬೇಡವಾದದ್ದನ್ನು ಖರೀದಿಸಬೇಡಿ, ಮಕ್ಕಳಿಗೂ ಅದೇ ನಿಯಮವಿರಲಿ.
3. ಮಕ್ಕಳು ಹಣ ನಿರ್ವಹಿಸುವಂತೆ ಬಿಡಿ. ಅವರ ಖರ್ಚಿಗಾಗಿ ನೀವು ಹಣ ಕೊಡುವಲ್ಲಿ ಅಥವಾ ಅವರು ಕೆಲಸ ಮಾಡಿ ಹಣಗಳಿಸುವಲ್ಲಿ ಅದನ್ನು ನಿರ್ವಹಿಸಲು ಮಾರ್ಗದರ್ಶಿಸಿರಿ. ಅನಂತರ ಅವರೇ ಕೆಲವು ನಿರ್ಣಯಗಳನ್ನು ಮಾಡಲು ಬಿಡಿ.
4. ಹಂಚಿಕೊಳ್ಳಲು ಕಲಿಸಿ. ನಿಮ್ಮ ಮಕ್ಕಳು ತಮ್ಮಲ್ಲಿರುವುದನ್ನು ಇತರರೊಂದಿಗೆ ಹಂಚಿಕೊಳ್ಳುವಂತೆ ಉತ್ತೇಜಿಸಿ ಹಾಗೂ ದೇವರ ಘನಕ್ಕಾಗಿ ಕ್ರಮವಾಗಿ ಸ್ವಲ್ಪವನ್ನು ಬದಿಗಿಡುವಂತೆ ಕಲಿಸಿ.