ಶವದಹನಕ್ಕೆ ಆಕ್ಷೇಪವಿದೆಯೇ?
ಬೈಬಲಿನ ದೃಷ್ಟಿಕೋನ
ಶವದಹನಕ್ಕೆ ಆಕ್ಷೇಪವಿದೆಯೇ?
ಶವದಹನ ಅಂದರೆ ಶವವನ್ನು ಸುಟ್ಟು ಬೂದಿಮಾಡುವುದು ಮೃತನ ಶರೀರ ಮತ್ತು ಸ್ಮರಣೆಗೆ ಅಗೌರವ ತರುತ್ತದೆಂದು ಕೆಲವರು ಭಾವಿಸುತ್ತಾರೆ. ಅದು ವಿಧರ್ಮಿ ಮೂಲದಿಂದ ಬಂದಿರುವುದರಿಂದ ದೇವಾರಾಧಕರು ಎಣಿಸಿಕೊಳ್ಳುವವರು ಅದನ್ನು ವರ್ಜಿಸಬೇಕೆಂಬುದು ಅವರ ತರ್ಕ. ಶವದಹನವು ಮಾನವ ಕಳೇಬರವನ್ನು ಗೌರವಾನ್ವಿತ ವಿಧದಲ್ಲಿ ತೊಲಗಿಸುವ ನಿಜವಾದ ಅಪೇಕ್ಷಣೀಯ ಹಾಗೂ ಗೌರವದ ವಿಧಾನ ಎಂಬುದು ಇತರರ ನಂಬಿಕೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಬೈಬಲ್ ಕಾಲದಲ್ಲಿ ಮೃತರನ್ನು ಹೂಣಿಡುವುದು ವಾಡಿಕೆಯಾಗಿತ್ತು. ದೃಷ್ಟಾಂತಕ್ಕೆ, ಅಬ್ರಹಾಮನು ತನ್ನ ಪತ್ನಿಯಾದ ಸಾರಳನ್ನು ಒಂದು ಗವಿಯಲ್ಲಿ ಸಮಾಧಿಮಾಡಿದನು. ಯೇಸುವಿನ ದೇಹವನ್ನು ಬಂಡೆಯಲ್ಲಿ ತೋಡಿದ್ದ ಸಮಾಧಿಯಲ್ಲಿ ಹೂಣಿಡಲಾಯಿತು. (ಆದಿಕಾಂಡ 23:9; ಮತ್ತಾಯ 27:60) ಆದರೆ ಮಾನವ ಶವವನ್ನು ತೊಲಗಿಸುವ ಒಂದೇ ಅಪೇಕ್ಷಣೀಯ ವಿಧವು ಹೂಣಿಡುವಿಕೆಯೆಂದು ಬೈಬಲ್ ಹೇಳುತ್ತದೆಯೆ? ದೇವರ ಪೂರ್ವಕಾಲದ ಸೇವಕರು ಶವದಹನಕ್ಕೆ ಆಕ್ಷೇಪವನ್ನೆತ್ತಿದ್ದರೆಂದು ಇದು ತೋರಿಸುತ್ತದೆಯೆ?
ದೈವಿಕ ಅಸಮ್ಮತಿಯ ಸೂಚನೆಯೆ?
ಶವದಹನವು ದೇವರ ಮೆಚ್ಚಿಗೆಗೆ ಅಪಾತ್ರರಾಗಿ ಸತ್ತ ಕೆಲವರ ಅಂತ್ಯಗತಿಯೆಂದು ಬೈಬಲು ಹಲವಾರು ಕಡೆಗಳಲ್ಲಿ ತೋರಿಸುವಂತೆ ಕಾಣಬಹುದು. ಉದಾಹರಣೆಗೆ, ಯೆಹೋವನ ಯಾಜಕನ ಮಗಳೊಬ್ಬಳು ವೇಶ್ಯೆಯಾಗುವಲ್ಲಿ ಮೋಶೆಯ ಧರ್ಮಶಾಸ್ತ್ರಾನುಸಾರ ಆಕೆಗೆ ಮರಣಶಿಕ್ಷೆಯಾಗುತ್ತಿತ್ತು. ಆದರೆ ಆಕೆಯ ಶವವನ್ನು ಹೂಣಿಡದೆ ‘ಬೆಂಕಿಯಿಂದ ಸುಟ್ಟುಬಿಡಬೇಕಿತ್ತು.’ (ಯಾಜಕಕಾಂಡ 20:10; 21:9) ಹಾಗೆಯೇ, ಇಸ್ರಾಯೇಲ್ಯರು ಆಯಿ ಎಂಬ ಪಟ್ಟಣದಲ್ಲಿ ಆಕಾನನ ಮತ್ತು ಅವನ ಕುಟುಂಬದ ಅವಿಧೇಯತೆಯ ಫಲವಾಗಿ ಸೋತುಹೋದಾಗ ಆ ಊರಿನವರು ಅವರನ್ನು ಕಲ್ಲೆಸೆದು “ಬೆಂಕಿಯಿಂದ ಸುಟ್ಟುಬಿಟ್ಟರು.” (ಯೆಹೋಶುವ 7:25) ದೇವರ ಮೆಚ್ಚಿಗೆಗೆ ಅಪಾತ್ರರಾದ ಇಂಥ ಕೆಲವರಿಗೆ ಈ ರೀತಿಯ ಅಂತ್ಯಕ್ರಿಯೆಯನ್ನು ಮಾಡಲಾಗುತ್ತಿತ್ತೆಂದು ಕೆಲವು ವಿದ್ವಾಂಸರು ಹೇಳುತ್ತಾರೆ. ಹೂಣಿಡುವಿಕೆಯು ಯೋಗ್ಯವಾದ ಅಂತ್ಯಕ್ರಿಯೆಯಾಗಿ ಪರಿಗಣಿಸಲ್ಪಡುತ್ತಿತ್ತು ಆದ್ದರಿಂದ ದುಷ್ಟರಿಗೆ ಅದು ದೊರೆಯುತ್ತಿರಲಿಲ್ಲ.
ಅಲ್ಲದೆ, ಯೋಷೀಯ ರಾಜನು ಯೆಹೂದದಿಂದ ವಿಗ್ರಹಾರಾಧನೆಯನ್ನು ತೊಲಗಿಸಲು ಪ್ರಯತ್ನಿಸಿದಾಗ, ಬಾಳನಿಗೆ ಯಜ್ಞಮಾಡಿದ್ದ ಯಾಜಕರ ಸಮಾಧಿಗಳನ್ನು ಒಡೆದು ಅವರ ಎಲುಬುಗಳನ್ನು ಆ ಯಜ್ಞವೇದಿಗಳ ಮೇಲೆ ಸುಟ್ಟುಬಿಟ್ಟನು. (2 ಪೂರ್ವಕಾಲವೃತ್ತಾಂತ 34:4, 5) ಇಂಥ ದೃಷ್ಟಾಂತಗಳು, ಯಾರ ಕಳೇಬರಗಳು ಸುಡಲ್ಪಡುತ್ತವೊ ಅಂಥವರ ಮೇಲೆ ದೇವರ ಅಸಮ್ಮತಿ ನೆಲೆಸಿದೆಯೆಂದು ಸೂಚಿಸುತ್ತವೆಯೆ? ಇಲ್ಲ. ಇನ್ನೊಂದು ಬೈಬಲ್ ವೃತ್ತಾಂತವನ್ನು ಪರಿಗಣಿಸಿರಿ.
ಫಿಲಿಷ್ಟಿಯರು ಇಸ್ರಾಯೇಲಿನ ರಾಜ ಸೌಲನನ್ನು ಯುದ್ಧದಲ್ಲಿ ಸೋಲಿಸಿದಾಗ ಅವರು ತಿರಸ್ಕಾರದಿಂದ ಅವನ ಮತ್ತು ಅವನ ಮೂವರು ಮಕ್ಕಳ ಶವಗಳನ್ನು ಬೇತ್ಷೆಯಾನಿನ ಗೋಡೆಗಳಲ್ಲಿ ತೂಗಹಾಕಿದರು. ಈ ಶವಗಳಿಗೆ ತೋರಿಸಿದ ಅಗೌರವದ ಬಗ್ಗೆ ಕೇಳಿದ ಯಾಬೆಷ್ ಗಿಲ್ಯಾದಿನ ಇಸ್ರಾಯೇಲ್ ನಿವಾಸಿಗಳು ಅವುಗಳನ್ನು ಇಳಿಸಿ, ಸುಟ್ಟು, ಆ ಬಳಿಕ ಎಲುಬುಗಳನ್ನು ಹೂಣಿಟ್ಟರು. (1 ಸಮುವೇಲ 31:2, 8-12) ಮೇಲ್ನೋಟಕ್ಕೆ, ಈ ವೃತ್ತಾಂತವು ಶವದಹನದ ವಿಷಯದಲ್ಲಿರುವ ನಕಾರಾತ್ಮಕ ಅರ್ಥವನ್ನು ದೃಢಪಡಿಸಬಹುದು. ಏಕೆಂದರೆ ಸೌಲನು ಸಹ ದುಷ್ಟನಾಗಿದ್ದನು. ಯೆಹೋವನ ಅಭಿಷಿಕ್ತನಾಗಿದ್ದ ದಾವೀದನೊಂದಿಗೆ ಅವನು ಹೋರಾಡಿ ದೈವಿಕ ಅನುಗ್ರಹವಿಲ್ಲದವನಾಗಿ ಸತ್ತನು.
ಆದರೂ, ಸೌಲನ ಪಕ್ಕದಲ್ಲಿ ಯಾರು ಕೂಡ ಸತ್ತಿದ್ದರೆಂಬುದನ್ನು ಗಮನಿಸಿ. ಸೌಲನಂತೆಯೇ ಕೊಲ್ಲಲ್ಪಟ್ಟವನು ಅವನ ಪುತ್ರರಲ್ಲಿ ಒಬ್ಬನಾಗಿದ್ದ ಯೋನಾತಾನನು. ಅವನು ಕೆಟ್ಟವನಾಗಿರಲಿಲ್ಲ. ಬದಲಾಗಿ ಯೋನಾತಾನನು ದಾವೀದನ ಆಪ್ತಮಿತ್ರನೂ ಸಹಾಯಕನೂ ಆಗಿದ್ದನು. ಯೋನಾತಾನನನ್ನು ಇಸ್ರಾಯೇಲ್ಯರು ಗುರುತು ಹಿಡಿದು ಹೇಳಿದ್ದು: ಇವನು “ದೇವರ ಸಹಾಯದಿಂದ” ಕೆಲಸ ಮಾಡಿದವನು. (1 ಸಮುವೇಲ 14:45) ಯಾಬೆಷ್ ಗಿಲ್ಯಾದಿನವರು ಮಾಡಿದ ಈ ಕಾರ್ಯ ದಾವೀದನಿಗೆ ತಿಳಿದು ಬಂದಾಗ, ಅವನು ಅವರನ್ನು ಶ್ಲಾಘಿಸಿ ಅವರು ಮಾಡಿದ ಕಾರ್ಯಕ್ಕೆ ಹೀಗೆ ಧನ್ಯವಾದವನ್ನು ನುಡಿದನು: “ನೀವು ಕರುಣೆಯಿಂದ ನಿಮ್ಮ ಒಡೆಯನಾದ ಸೌಲನ ಶವವನ್ನು ಸಮಾಧಿಮಾಡಿದ್ದಕ್ಕಾಗಿ ನಿಮಗೆ ಯೆಹೋವನ ಆಶೀರ್ವಾದವುಂಟಾಗಲಿ. ಆತನ ಕೃಪಾಸತ್ಯತೆಗಳು ನಿಮ್ಮೊಂದಿಗಿರಲಿ.” ಸೌಲನ ಮತ್ತು ಯೋನಾತಾನನ ಶವಗಳನ್ನು ಸುಟ್ಟದ್ದು ದಾವೀದನನ್ನು ಬೇಸರಗೊಳಿಸಲಿಲ್ಲ ಎಂಬುದು ಸ್ಪಷ್ಟ.—2 ಸಮುವೇಲ 2:4-6.
ಪುನರುತ್ಥಾನಕ್ಕೆ ತಡೆಯಲ್ಲ
ಯೆಹೋವ ದೇವರು ಈಗ ಮರಣದಲ್ಲಿ ನಿದ್ರಿಸುತ್ತಿರುವ ಅನೇಕರನ್ನು ಜೀವಿತರಾಗಿ ಎಬ್ಬಿಸುವನೆಂದು ಬೈಬಲ್ ಸ್ಪಷ್ಟವಾಗಿ ಬೋಧಿಸುತ್ತದೆ. (ಪ್ರಸಂಗಿ 9:5, 10; ಯೋಹಾನ 5:28, 29) ಮೃತರು ಜೀವಿತರಾಗಿ ಹಿಂದಿರುಗುವ ಸಮಯವನ್ನು ಸೂಚಿಸುತ್ತ, ಬೈಬಲಿನ ಪ್ರಕಟನೆ ಅಥವಾ ಅಪಾಕಲಿಪ್ಸ್ ಪುಸ್ತಕ ಹೇಳುವುದು: “ಸಮುದ್ರವು ತನ್ನೊಳಗಿದ್ದ ಸತ್ತವರನ್ನು ಒಪ್ಪಿಸಿತು; ಮೃತ್ಯುವೂ ಪಾತಾಳವೂ ತಮ್ಮ ವಶದಲ್ಲಿದ್ದ ಸತ್ತವರನ್ನು ಒಪ್ಪಿಸಿದವು.” (ಪ್ರಕಟನೆ 20:13) ಒಬ್ಬ ವ್ಯಕ್ತಿಯ ಶವವು ಹೂಣಿಡಲ್ಪಟ್ಟಿರಲಿ, ಸುಡಲ್ಪಟ್ಟಿರಲಿ, ಸಮುದ್ರವಶವಾಗಿರಲಿ, ಕಾಡುಮೃಗಗಳಿಂದ ಭಕ್ಷಿಸಲ್ಪಟ್ಟಿರಲಿ ಇಲ್ಲವೆ ಪರಮಾಣು ಸ್ಫೋಟದಿಂದ ಆವೀಕರಿಸಲ್ಪಟ್ಟಿರಲಿ, ಸರ್ವಶಕ್ತ ದೇವರಿಗೆ ಅದನ್ನು ಸಜೀವವಾಗಿ ಎಬ್ಬಿಸಲು ಯಾವುದೂ ತಡೆಯಾಗಿರದು.
ಮೃತಶರೀರವನ್ನು ಏನು ಮಾಡಬೇಕೆಂಬ ಬಗೆಗೆ ಬೈಬಲ್ ನೇರವಾದ ಯಾವುದೇ ನಿರ್ದೇಶನವನ್ನು ನೀಡುವುದಿಲ್ಲ. ಶವದಹನವನ್ನು ಯೆಹೋವನು ಖಂಡಿಸಿರುವುದೂ ಇಲ್ಲ. ಆದರೆ ಶವಸಂಸ್ಕಾರದ ಏರ್ಪಾಡುಗಳು ಗೌರವಪೂರ್ಣವೂ ಘನತೆಯಳ್ಳದ್ದೂ ಆಗಿರಬೇಕೆಂಬುದು ಸ್ಪಷ್ಟ.
ಆದರೆ ಈ ಏರ್ಪಾಡುಗಳನ್ನು ಮಾಡುವುದರಲ್ಲಿ ಒಬ್ಬನನ್ನು ಪ್ರಭಾವಿಸಬಹುದಾದ ವಿಷಯವು ಶವಸಂಸ್ಕಾರ ಪದ್ಧತಿಗಳನ್ನು ಸ್ಥಳೀಯ ಸಮುದಾಯವು ವೀಕ್ಷಿಸುವ ವಿಧವೇ. ಬೈಬಲ್ ಮೂಲತತ್ತ್ವಾನುಸಾರ ನಡೆಯುವವರು ಅನಾವಶ್ಯಕವಾಗಿ ತಮ್ಮ ನೆರೆಯವರನ್ನು ನೋಯಿಸುವ ಯಾವುದನ್ನೂ ನಿಶ್ಚಯವಾಗಿ ಮಾಡಬಯಸರು. ಇದಲ್ಲದೆ, ಆತ್ಮ ಅಮರ ಎಂಬಂಥ ಸುಳ್ಳು ಧಾರ್ಮಿಕ ಬೋಧನೆಯನ್ನು ಸೂಚಿಸಬಹುದಾದ ಪದ್ಧತಿಯಲ್ಲಿ ಭಾಗವಹಿಸುವುದೂ ಅವರಿಗೆ ಅನುಚಿತ. ಇವನ್ನು ಬಿಟ್ಟರೆ, ಒಬ್ಬನು ತನ್ನ ಮೃತದೇಹವನ್ನು ಇಲ್ಲವೆ ಇನ್ನೊಬ್ಬನ ಮೃತದೇಹವನ್ನು ಹೇಗೆ ತೆಗೆಯಬೇಕೆಂಬ ವಿಷಯವು ನಿಜವಾಗಿ ಅವನ ಸ್ವಂತ ಇಲ್ಲವೆ ಕುಟುಂಬದ ಇಚ್ಛೆಗೆ ಬಿಟ್ಟದ್ದು. (g 3/09)
ನೀವೇನು ಹೇಳುತ್ತೀರಿ?
◼ ಬೈಬಲಿನಲ್ಲಿ ತಿಳಿಸಿರುವ ಯಾವ ನಂಬಿಗಸ್ತ ಆರಾಧಕನ ಶವವನ್ನು ದಹಿಸಲಾಗಿತ್ತು?—1 ಸಮುವೇಲ 31:2, 12.
◼ ಸೌಲನ ಶವವನ್ನು ತೆಗೆದುಬಿಡಲು ಕ್ರಮಕೈಗೊಂಡವರೊಂದಿಗೆ ದಾವೀದನು ಹೇಗೆ ವರ್ತಿಸಿದನು?—2 ಸಮುವೇಲ 2:4-6.
◼ ಶವದಹನವು ತಾನೇ ಒಬ್ಬನನ್ನು ಪುನರುತ್ಥಾನಕ್ಕೆ ಅನರ್ಹನಾಗಿಸುವುದಿಲ್ಲವೆಂದು ಯಾವುದು ತೋರಿಸುತ್ತದೆ?—ಪ್ರಕಟನೆ 20:13.
[ಪುಟ 11ರಲ್ಲಿರುವ ಸಂಕ್ಷಿಪ್ತ ವಿವರಣೆ]
ಮೃತರ ಶರೀರವನ್ನು ಹೇಗೆ ತೆಗೆದುಬಿಡಬೇಕೆಂಬ ಯಾವ ನಿರ್ದಿಷ್ಟ ನಿರ್ದೇಶನವನ್ನೂ ಬೈಬಲ್ ಕೊಡುವುದಿಲ್ಲ