ಸೂತ್ರ 1 ಸರಿಯಾದ ಆದ್ಯತೆಗಳನ್ನಿಡಿ
ಸೂತ್ರ 1 ಸರಿಯಾದ ಆದ್ಯತೆಗಳನ್ನಿಡಿ
‘ಹೆಚ್ಚು ಪ್ರಮುಖವಾದ ವಿಷಯಗಳನ್ನು ಖಚಿತಪಡಿಸಿಕೊಳ್ಳಿ.’ —ಫಿಲಿಪ್ಪಿ 1:10.
ಅರ್ಥವೇನು? ಯಶಸ್ವೀ ವೈವಾಹಿಕ ಜೀವನ ನಡೆಸುತ್ತಿರುವ ದಂಪತಿಗಳು ತಮ್ಮ ಸಂಗಾತಿಯ ಅಗತ್ಯಗಳಿಗೆ ಮೊದಲ ಸ್ಥಾನ ಕೊಡುತ್ತಾರೆ. ಅನಂತರವೇ ತಮಗೆ, ತಮ್ಮ ಕೆಲಸಕ್ಕೆ, ಸೊತ್ತಿಗೆ, ಸ್ನೇಹಿತರಿಗೆ ಅಷ್ಟೇ ಅಲ್ಲ ಸಂಬಂಧಿಕರಿಗೆ ಗಮನಕೊಡುತ್ತಾರೆ. ಪತಿಪತ್ನಿ ಪರಸ್ಪರರ ಒಡನಾಟದಲ್ಲಿ ಮತ್ತು ಮಕ್ಕಳೊಂದಿಗೆ ತುಂಬ ಸಮಯ ಕಳೆಯುತ್ತಾರೆ. ಕುಟುಂಬದ ಒಳಿತಿಗಾಗಿ ತ್ಯಾಗಗಳನ್ನು ಮಾಡಲು ಇಬ್ಬರೂ ಸಿದ್ಧರಿರುತ್ತಾರೆ.—ಫಿಲಿಪ್ಪಿ 2:4.
ಪ್ರಾಮುಖ್ಯವೇಕೆ? ಕುಟುಂಬಕ್ಕೆ ಬೈಬಲ್ ತುಂಬ ಮಹತ್ತ್ವ ಕೊಡುತ್ತದೆ. ವಾಸ್ತವದಲ್ಲಿ, ಕುಟುಂಬಕ್ಕೆ ಅಗತ್ಯವಿರುವುದನ್ನು ಒದಗಿಸದವನು “ನಂಬದವನಿಗಿಂತ ಕಡೆ” ಎಂದು ಅದು ಹೇಳುತ್ತದೆ. (1 ತಿಮೊಥೆಯ 5:8) ಆದರೆ ಕುಟುಂಬಕ್ಕೆ ಆದ್ಯತೆ ಕೊಡುತ್ತಿದ್ದವರು ಸಮಯ ಕಳೆದಂತೆ ಬದಲಾಗಬಹುದು. ಉದಾಹರಣೆಗೆ, ಕುಟುಂಬ ಸಲಹೆಗಾರರೊಬ್ಬರು ತಾವು ನಡೆಸಿದ ಸಮಾವೇಶಕ್ಕೆ ಹಾಜರಾದವರಲ್ಲಿ ಹೆಚ್ಚಿನವರಿಗೆ ಕುಟುಂಬಕ್ಕಿಂತ ಉದ್ಯೋಗವೇ ಸರ್ವಸ್ವವಾಗಿತ್ತು ಎಂಬುದನ್ನು ಗಮನಿಸಿದರು. ಈ ಜನರು ಸಮಾವೇಶಕ್ಕೆ ಹಾಜರಾದದ್ದರ ಉದ್ದೇಶ? ‘ಉದ್ಯೋಗದಲ್ಲೇ ಮುಳುಗಿರಲು ಸಾಧ್ಯವಾಗುವಂತೆ ಕುಟುಂಬ ಸಮಸ್ಯೆಗಳನ್ನು ಚಿಟಿಕೆ ಹೊಡೆಯುವುದರೊಳಗೆ ಬಗೆಹರಿಸುವ ವಿಧಾನಗಳನ್ನು ಕಲಿತು, ಕುಟುಂಬ ವಿಚಾರವನ್ನು ಹೇಗಾದರೂ ತಲೆಯಿಂದ ಹೊರಹಾಕುವುದೇ ಆಗಿತ್ತು’ ಎನ್ನುತ್ತಾರೆ ಆ ಸಲಹೆಗಾರ. ಇದರಿಂದ ನಾವೇನು ಕಲಿಯಬಹುದು? ಕುಟುಂಬಕ್ಕೆ ಆದ್ಯತೆ ಕೊಡುತ್ತೇವೆಂದು ಹೇಳುವುದು ಸುಲಭ, ಮಾಡುವುದು ಕಷ್ಟ.
ಹೀಗೆ ಮಾಡಿ. ನೀವು ನಿಮ್ಮ ಕುಟುಂಬಕ್ಕೆ ಆದ್ಯತೆ ಕೊಡುತ್ತಿದ್ದೀರೋ ಎಂದು ಪರಿಶೀಲಿಸಲು ಕೆಳಗಿನ ಪ್ರಶ್ನೆಗಳನ್ನು ಕೇಳಿಕೊಳ್ಳಿ.
◼ ನನ್ನ ಸಂಗಾತಿ ಇಲ್ಲವೆ ಮಕ್ಕಳು ನನ್ನೊಟ್ಟಿಗೆ ಮಾತಾಡಬೇಕೆಂದಾಗ ಆದಷ್ಟು ಬೇಗ ಅವರಿಗೆ ಗಮನಕೊಡುತ್ತೇನೋ?
◼ ನನ್ನ ಕೆಲಸಕಾರ್ಯಗಳ ಕುರಿತು ಇತರರೊಂದಿಗೆ ಮಾತಾಡುವಾಗ, ನಾನು ಕುಟುಂಬದೊಂದಿಗೆ ಸೇರಿ ಮಾಡುವ ವಿಷಯಗಳೇ ಹೆಚ್ಚಾಗಿ ಬರುತ್ತವೋ?
◼ ನನ್ನ ಕುಟುಂಬಕ್ಕೋಸ್ಕರ ಸಮಯ ಕೊಡಬೇಕಾದಾಗ, ಕೆಲಸದಲ್ಲಿ ಅಥವಾ ಇತರೆಡೆ ಸಿಗುವ ಹೆಚ್ಚಿನ ಜವಾಬ್ದಾರಿಯನ್ನು ನಿರಾಕರಿಸುತ್ತೇನೋ?
ಮೇಲಿನ ಪ್ರಶ್ನೆಗಳಿಗೆ ನಿಮ್ಮ ಉತ್ತರ ‘ಹೌದು’ ಎಂದಾದರೆ ನಿಮ್ಮ ಆದ್ಯತೆಗಳು ಸರಿಯಾಗಿವೆ ಎಂದು ನೀವು ಅಭಿಪ್ರಯಿಸಬಹುದು. ಆದರೆ ನಿಮ್ಮ ಕುರಿತ ಆ ಪ್ರಶ್ನೆಗಳಿಗೆ ನಿಮ್ಮ ಸಂಗಾತಿ ಮತ್ತು ಮಕ್ಕಳ ಉತ್ತರವೂ ‘ಹೌದು’ ಎಂದಾಗಿದೆಯೋ? ಇದು ನಿಮ್ಮ ಆದ್ಯತೆಗಳು ಸರಿಯಾಗಿವೆ ಎಂದು ತೋರಿಸುವ ಮಾನದಂಡ ಆಗಿರಬಲ್ಲದು. ಈ ಮಾತು ಮುಂದಿನ ಪುಟಗಳಲ್ಲಿ ಚರ್ಚಿಸಲಾಗಿರುವ ಯಶಸ್ಸಿನ ಇನ್ನಿತರ ಸೂತ್ರಗಳ ವಿಷಯದಲ್ಲೂ ಸತ್ಯ.
ದೃಢನಿರ್ಣಯ ಮಾಡಿ. ನಿಮ್ಮ ಕುಟುಂಬಕ್ಕೆ ಆದ್ಯತೆ ಕೊಡುತ್ತೀರೆಂದು ತೋರಿಸಲು ಒಂದೆರಡು ಮಾರ್ಗಗಳನ್ನು ಯೋಚಿಸಿ. (ಉದಾಹರಣೆಗೆ: ನಿಮ್ಮ ಸಂಗಾತಿ ಮತ್ತು ಮಕ್ಕಳಿಗೆ ಕೊಡಬೇಕಾದ ಸಮಯವನ್ನು ಕಬಳಿಸುವ ಚಟುವಟಿಕೆಗಳನ್ನು ಕಡಿಮೆಗೊಳಿಸಿ.)
ನೀವು ಮಾಡಿದ ನಿರ್ಣಯಗಳನ್ನು ನಿಮ್ಮ ಮನೆಮಂದಿಗೆ ತಿಳಿಸಿ. ಕುಟುಂಬಕ್ಕೋಸ್ಕರ ನೀವು ಬದಲಾವಣೆ ಮಾಡಲು ಸಿದ್ಧರೆಂದು ತಿಳಿದಾಗ ಅವರಿಗೂ ಹಾಗೆ ಮಾಡಲು ಮನಸ್ಸಾಗಬಹುದು. (g09-E 10)
[ಪುಟ 3ರಲ್ಲಿರುವ ಚಿತ್ರ]
ಸಂಗಾತಿ ಮತ್ತು ಮಕ್ಕಳಿಗೆ ಹೆಚ್ಚು ಆದ್ಯತೆ ಕೊಡುವವರೇ ವಿಜೇತರು