ಕೀಟಗಳಿಗಾಗಿ ‘ಫಾಸ್ಟ್-ಫುಡ್’
ಕೀಟಗಳಿಗಾಗಿ ‘ಫಾಸ್ಟ್-ಫುಡ್’
● ತುಂಬ ಕ್ಯಾಲೊರಿ ಇರುವ ಸಿದ್ಧ ಆಹಾರವನ್ನು ಕಂಡಾಕ್ಷಣ ಕೀಟಗಳು ಮುಗಿಬಿದ್ದು ಗಬಗಬನೆ ತಿಂದುಬಿಡುತ್ತವೆ. ಅವುಗಳಿಗೆ ಇಂಥ ಆಹಾರ ಸಿಗುವುದು ಹೂಗೊಂಡೆಗಳಲ್ಲೇ. ಈ ಹೂವುಗಳು ಫಾಸ್ಟ್-ಫುಡ್ ರೆಸ್ಟಾರೆಂಟ್‌ಗಳಂತೆ ಉಜ್ವಲ ಬಣ್ಣಗಳ ಮೂಲಕ ತಮ್ಮ ಇರುವನ್ನು ಸಾರುತ್ತವೆ. ಈ ಆಕರ್ಷಕ ಹೂವುಗಳೆಡೆಗೆ ಸೆಳೆಯಲ್ಪಟ್ಟು ಕೀಟಗಳು ಅವುಗಳ ಮೇಲೆ ಬಂದು ಕೂತು ಪರಾಗವನ್ನು ಬಾಯಾಡಿಸುತ್ತವೆ ಇಲ್ಲವೆ ಮಕರಂದವನ್ನು ಹೀರುತ್ತವೆ.
ಈ ಶೀತರಕ್ತದ ಜೀವಿಗಳು ತಣ್ಣಗಿನ ರಾತ್ರಿಯಿಂದಾಗಿ ಜಡವಾಗುತ್ತವೆ. ಅವುಗಳನ್ನು ಚುರುಕುಗೊಳಿಸಲು ಸೂರ್ಯನ ಶಾಖ ಬೇಕು. ಕೀಟಗಳಿಗೆ ಅನೇಕ ಹೂವುಗಳಿಂದ ಎರಡೆರಡು ಲಾಭ. ಪೌಷ್ಟಿಕ ಆಹಾರದ ಜೊತೆಗೆ ಬಿಸಿಲು ಕಾಯಿಸಿಕೊಳ್ಳಲು ಒಂದು ತಾಣವೂ ಸಿಗುತ್ತದೆ. ಇದಕ್ಕೊಂದು ಉದಾಹರಣೆ ನೋಡೋಣ.
ಯುರೋಪ್ ಮತ್ತು ಉತ್ತರ ಅಮೆರಿಕ ಖಂಡದ ಹೆಚ್ಚಿನ ಭಾಗಗಳಲ್ಲಿ ‘ಆಕ್ಸ್-ಐ ಡೇಯ್ಸಿ’ (ಸೇವಂತಿಗೆ ಜಾತಿಯ ಹೂವು) ಎಂಬ ಸಾಮಾನ್ಯ ಹೂವೊಂದು ಬೆಳೆಯುತ್ತದೆ. ಅದೇನು ಅಷ್ಟು ವಿಶೇಷವಾಗಿ ತೋರದಿದ್ದರೂ ಸ್ವಲ್ಪ ಸಮಯ ಹತ್ತಿರದಿಂದ ನೋಡಿದರೆ ಅದರಲ್ಲಿ ತುಂಬ ಚಟುವಟಿಕೆ ನಡೆಯುತ್ತಿರುವುದನ್ನು ಗಮನಿಸುವಿರಿ. ಈ ಡೇಯ್ಸಿ ಹೂವು ಕೀಟಗಳಿಗೆ ತಮ್ಮ ದಿನವನ್ನು ಆರಂಭಿಸಲು ಹೇಳಿಮಾಡಿಸಿದಂಥ ತಾಣದಂತಿದೆ. ಅದರ ಬಿಳಿ ದಳಗಳು ಸೂರ್ಯನ ಶಾಖವನ್ನು ಪ್ರತಿಬಿಂಬಿಸುತ್ತವೆ. ಅದರ ಹಳದಿಬಣ್ಣದ ಗೊಂಡೆಯು ಕೀಟಗಳಿಗೆ ಒಂದು ಒಳ್ಳೇ ವಿಶ್ರಾಂತಿತಾಣವಾಗಿದ್ದು, ಅವು ಅಲ್ಲಿ ಸೌರಶಕ್ತಿಯನ್ನು ಹೀರಬಲ್ಲವು. *
ಕೀಟಗಳನ್ನು ಸೆಳೆಯುವಂಥ ಇನ್ನೊಂದು ಸಂಗತಿಯೇನೆಂದರೆ ಡೇಯ್ಸಿ ಗೊಂಡೆಯು ಪರಾಗ, ಮಕರಂದದಿಂದ ತುಂಬಿರುತ್ತದೆ. ಈ ಪೌಷ್ಟಿಕ ಆಹಾರವೆಂದರೆ ಕೀಟಗಳಿಗೆ ಪಂಚಪ್ರಾಣ. ಹೊಟ್ಟೆತುಂಬ ನಾಷ್ಟ ಹಾಗೂ ಬಿಸಿಲಿಗೆ ಮೈಯೊಡ್ಡಲು ಕೀಟಗಳಿಗೆ ಇದಕ್ಕಿಂತ ಉತ್ತಮ ಸ್ಥಳ ಬೇಕೇ?
ಹೀಗೆ, ಈ ‘ಆಕ್ಸ್-ಐ ಡೇಯ್ಸಿ’ ಹೂಗೊಂಡೆಗಳ ಮೇಲೆ ಕೂತುಕೊಳ್ಳಲು ಕೀಟಗಳು ಇಡೀ ದಿನ ಬರುತ್ತಾ ಇರುತ್ತವೆ. ಅದರಲ್ಲಿ ಜೀರುಂಡೆಗಳು, ರಂಗುರಂಗಿನ ಚಿಟ್ಟೆಗಳು, ಶೀಲ್ಡ್ ಬಗ್ಸ್ ಎಂಬ ಕೀಟಗಳು, ಚಿಮ್ಮಂಡೆಗಳು ಮತ್ತು ಪ್ರತಿಯೊಂದು ವಿಧದ ನೊಣಗಳನ್ನು ನೋಡಬಹುದು. ಆದರೆ ನೀವು ಗಮನಿಸದೇ ಹೋದಲ್ಲಿ, ಕೀಟಗಳಿಗಾಗಿರುವ ಈ ವಿಸ್ಮಯಕಾರಿ ‘ಫಾಸ್ಟ್-ಫುಡ್ ರೆಸ್ಟಾರೆಂಟ್‌ಗಳು’ ಎಂದೂ ಕಣ್ಣಿಗೆ ಬೀಳಲಿಕ್ಕಿಲ್ಲ.
ಆದುದರಿಂದ ಮುಂದಿನ ಬಾರಿ ನೀವು ಹಳ್ಳಿಗಾಡು ಪ್ರದೇಶಕ್ಕೆ ಹೋದಾಗ, ಅಷ್ಟಾಗಿ ಕಣ್ಣಿಗೆ ಬೀಳದ ಈ ಡೇಯ್ಸಿ ಹೂವುಗಳನ್ನು ನೋಡಲು ಸ್ವಲ್ಪ ಪ್ರಯತ್ನ ಮಾಡಬಲ್ಲಿರಾ? ಹಾಗೆ ಮಾಡುವಲ್ಲಿ, ಅವುಗಳೆಲ್ಲವನ್ನೂ ರಚಿಸಿದ ಸೃಷ್ಟಿಕರ್ತನಿಗಾಗಿರುವ ನಿಮ್ಮ ಕೃತಜ್ಞತೆಯು ಇನ್ನಷ್ಟು ಹೆಚ್ಚಾಗುವುದು. (g10-E 03)
[ಪಾದಟಿಪ್ಪಣಿ]
^ ಕೆಲವು ಹೂವುಗಳ ಮೇಲ್ಮೈಯಲ್ಲಿನ ತಾಪಮಾನವು, ಸುತ್ತಮುತ್ತಲ ಪರಿಸರಕ್ಕಿಂತ ಹಲವಾರು ಡಿಗ್ರಿ ಹೆಚ್ಚು ಬಿಸಿ ಆಗಿರುತ್ತದೆಂದು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ.