ನನ್ನ ಆರೋಗ್ಯ ಏಕೆ ನೋಡಿಕೊಳ್ಳಬೇಕು?
ಯುವಜನರ ಪ್ರಶ್ನೆ
ನನ್ನ ಆರೋಗ್ಯ ಏಕೆ ನೋಡಿಕೊಳ್ಳಬೇಕು?
ನೀವು ಸಾಧಿಸಬೇಕೆಂದಿರುವ ಗುರಿಗೆ ✔ ಹಾಕಿ.
❍ ತೂಕ ಕಡಿಮೆಮಾಡಬೇಕು
❍ ಅಂದ ಹೆಚ್ಚಿಸಬೇಕು
❍ ದೇಹಬಲ ಹೆಚ್ಚಿಸಬೇಕು
❍ ಚುರುಕಾಗಬೇಕು
❍ ಚಿಂತೆ ಕಡಿಮೆಮಾಡಬೇಕು
❍ ಕೋಪಕ್ಕೆ ಕಡಿವಾಣ ಹಾಕಬೇಕು
❍ ಆತ್ಮವಿಶ್ವಾಸ ಹೆಚ್ಚಿಸಬೇಕು
ನಿಮ್ಮ ಹೆತ್ತವರು, ಒಡಹುಟ್ಟಿದವರು ಯಾರಾಗಿರಬೇಕೆಂದು, ನೀವೆಲ್ಲಿ ವಾಸಿಸಬೇಕೆಂದು ಒಬ್ಬ ಯುವ ವ್ಯಕ್ತಿಯಾದ ನೀವು ಆಯ್ಕೆ ಮಾಡುವಂತಿಲ್ಲ. ಆದರೆ ನಿಮ್ಮ ಆರೋಗ್ಯದ ವಿಷಯದಲ್ಲಿ ಹಾಗಲ್ಲ. ಅದು ನೀವು ಆಯ್ಕೆ ಮಾಡುವ ಜೀವನಶೈಲಿಯ ಮೇಲೆ ಹೊಂದಿಕೊಂಡಿರುತ್ತದೆ. *
‘ನನಗೇನು ಅಷ್ಟು ವಯಸ್ಸಾಗಿಲ್ಲ. ಆರೋಗ್ಯದ ಬಗ್ಗೆ ಈಗಲೇ ಯಾಕೆ ತಲೆಕೆಡಿಸಿಕೊಳ್ಳಲಿ?’ ಎಂದು ನೀವು ಕೇಳಬಹುದು. ಮೇಲೆ ಕೊಡಲಾದ ಗುರಿಗಳ ಪಟ್ಟಿ ನೋಡಿದಿರಾ? ಯಾವುದಕ್ಕೆಲ್ಲ ಟಿಕ್ ಹಾಕಿದ್ದೀರಿ? ಅದರಲ್ಲಿ ಪ್ರತಿಯೊಂದು ಗುರಿಯನ್ನು ತಲುಪಬೇಕಾದರೆ ನಿಮಗೆ ಒಳ್ಳೇ ಆರೋಗ್ಯ ಬೇಕೇ ಬೇಕು.
“ಗೋದಿಯಿಂದ ತಯಾರಿಸಿದ, ಕೊಬ್ಬಿನಾಂಶ ಮತ್ತು ಸಕ್ಕರೆ ಇಲ್ಲದ ಆಹಾರವನ್ನು ಪ್ರತಿ ದಿನ ತಿಂದು ಬದುಕಲು ನನ್ನಿಂದ ಮಾತ್ರ ಸಾಧ್ಯವಿಲ್ಲಪ್ಪಾ” ಎನ್ನುತ್ತಾಳೆ 17 ವರ್ಷದ ಅಂಬಿಕಾ. * ನಿಮಗೂ ಹಾಗನಿಸುತ್ತಿದೆಯಾ? ಹಾಗಿದ್ದರೆ ಚಿಂತೆ ಮಾಡಬೇಡಿ. ನೀವೇನೂ ‘ಫಿಟ್ನೆಸ್’ ಬಗ್ಗೆ ತಲೆಬಿಸಿ ಮಾಡಬೇಕಾಗಿಲ್ಲ, ಸಿಹಿತಿಂಡಿಗಳನ್ನು ಬಿಡಬೇಕಾಗಿಲ್ಲ ಇಲ್ಲವೆ ಪ್ರತಿವಾರ ಬಹಳ ದೂರ ಓಡಿ ದೇಹ ದಂಡಿಸಿಕೊಳ್ಳಬೇಕಾಗಿಯೂ ಇಲ್ಲ. ನೀವು ಕೆಲವೇ ಸರಳ ಸ್ವಾಸ್ಥ್ಯ ಸೂತ್ರಗಳನ್ನು ಅನುಸರಿಸಿದರೆ ಸಾಕು, ಚೆನ್ನಾಗಿ ಕಾಣುವಿರಿ, ಉಲ್ಲಾಸಿತರಾಗುವಿರಿ ಮತ್ತು ಚುರುಕಾಗಿರುವಿರಿ. ಇದನ್ನೇ ನಿಮ್ಮ ಪ್ರಾಯದ ಇತರರು ಹೇಗೆ ಮಾಡಿದ್ದಾರೆಂದು ನೋಡೋಣ.
ಉತ್ತಮ ಆಹಾರ—ಉತ್ತಮ ರೂಪ
ನಮ್ಮ ಆಹಾರ ಸೇವನೆ ಹಿತಮಿತವಾಗಿರಬೇಕು ಎಂದು ಬೈಬಲ್ ಹೇಳುತ್ತದೆ. ‘ಹೊಟ್ಟೆ ಬಿರಿಯುವಷ್ಟು ಮುಕ್ಕಬೇಡ’ ಎನ್ನುತ್ತದೆ ಜ್ಞಾನೋಕ್ತಿ 23:20. (ಕಂಟೆಂಪರರಿ ಇಂಗ್ಲಿಷ್ ವರ್ಷನ್) ಈ ಮಾತನ್ನು ಪಾಲಿಸುವುದು ಯಾವಾಗಲೂ ಸುಲಭವಾಗಿರಲಿಕ್ಕಿಲ್ಲ.
● “ಹೆಚ್ಚಿನ ಹದಿವಯಸ್ಕರಂತೆ ನನಗೂ ಹಸಿವೆ ಜಾಸ್ತಿ. ನನ್ನ ಹೊಟ್ಟೆ ದೊಡ್ಡ ಗುಡಾಣ ಅಂತ ಅಪ್ಪಅಮ್ಮ ಯಾವಾಗಲೂ ಹೇಳುತ್ತಿರುತ್ತಾರೆ.”—ಆಶಿಶ್, 15.
● “ಕೆಲವೊಂದು ತಿನಿಸುಗಳಿಂದ ಹಾನಿಯಾಗುತ್ತಿರುವುದು ನನಗೆ ಕಾಣಿಸುತ್ತಿಲ್ಲ, ಆದ್ದರಿಂದ ಅದು ಆರೋಗ್ಯಕ್ಕೆ ಕೆಟ್ಟದ್ದೆಂದು ನನಗನಿಸುತ್ತಿಲ್ಲ.”—ದೀಪಿಕಾ, 19.
ನಿಮ್ಮ ಆಹಾರಪಥ್ಯದ ಬಗ್ಗೆ ಏನು? ಹೊಟ್ಟೆಬಾಯಿ ಕಟ್ಟಬೇಕಾಗಿದೆಯಾ? ನಿಮ್ಮ
ಸಮಪ್ರಾಯದವರು ತಮಗೆ ಪ್ರಯೋಜನವಾದ ಕೆಲವು ವಿಷಯಗಳನ್ನು ಈ ಕೆಳಗೆ ಹೇಳಿದ್ದಾರೆ.ಹೊಟ್ಟೆ ಹೇಳುವುದನ್ನು ಕೇಳಿ. “ಮೊದಲೆಲ್ಲ ಯಾವುದರಲ್ಲಿ ಎಷ್ಟೆಷ್ಟು ಕ್ಯಾಲೊರಿ ಇದೆಯೆಂದು ಲೆಕ್ಕಮಾಡಿ ತಿನ್ನುತ್ತಿದ್ದೆ. ಈಗ ಹಾಗಲ್ಲ. ಹೊಟ್ಟೆ ತುಂಬಿತು ಎಂದನಿಸಿದ ಕೂಡಲೆ ತಿನ್ನುವುದನ್ನು ನಿಲ್ಲಿಸುತ್ತೇನೆ” ಎಂದು 19 ವರ್ಷದ ಜಾಸ್ಮಿನ್ ಹೇಳುತ್ತಾಳೆ.
ಹಾನಿಕರ ಆಹಾರವನ್ನು ದೂರವಿಡಿ. “ಸಿಹಿ ಪಾನೀಯ ಕುಡಿಯುವುದನ್ನು ನಿಲ್ಲಿಸಿದ ಮೇಲೆ ಒಂದೇ ತಿಂಗಳಲ್ಲಿ ನನ್ನ ತೂಕ 5 ಕಿಲೋ ಕಡಿಮೆಯಾಗಿದೆ!” ಎಂದು 21 ವರ್ಷದ ಪೀಟರ್ ಹೇಳುತ್ತಾನೆ.
ತಿನ್ನುವ ಅಭ್ಯಾಸಗಳನ್ನು ಸರಿಪಡಿಸಿ. “ನಾನು ಎರಡನೇ ಸುತ್ತು ಊಟ ತೆಗೆದುಕೊಳ್ಳದಂತೆ ನೋಡಿಕೊಳ್ಳುತ್ತೇನೆ” ಎನ್ನುತ್ತಾಳೆ 19 ವರ್ಷದ ಈಶಾ.
ಯಶಸ್ಸಿನ ಗುಟ್ಟು: ಊಟ ತಪ್ಪಿಸಬೇಡಿ. ತಪ್ಪಿಸಿದರೆ ತುಂಬ ಹಸಿವಾಗಿ ಮಿತಿಮೀರಿ ತಿನ್ನುವಿರಿ.
ಹೆಚ್ಚು ವ್ಯಾಯಾಮ ಮಾಡಿ—ಉಲ್ಲಾಸಿತರಾಗಿ
“ದೈಹಿಕ ತರಬೇತಿಯು . . . ಪ್ರಯೋಜನಕರವಾಗಿದೆ” ಎನ್ನುತ್ತದೆ ಬೈಬಲ್. (1 ತಿಮೊಥೆಯ 4:8) ಆದರೆ ಇಂದು ಅನೇಕ ಯುವಜನರಿಗೆ ವ್ಯಾಯಾಮ ಮಾಡುವುದೆಂದರೆ ಅಷ್ಟಕ್ಕಷ್ಟೆ.
● “ನಾನು ಹೈಸ್ಕೂಲಿನಲ್ಲಿದ್ದಾಗ ಎಷ್ಟೋ ಮಕ್ಕಳು ವ್ಯಾಯಾಮ ಪರೀಕ್ಷೆಯಲ್ಲಿ ಫೇಲಾಗುತ್ತಿದ್ದರು! ಹಾಗಾಗಬಾರದಿತ್ತು ಏಕೆಂದರೆ ವ್ಯಾಯಾಮ ಮಾಡುವುದು ಊಟಮಾಡುವಷ್ಟೇ ಸುಲಭ.”—ರಿಚರ್ಡ್, 21.
● “ಹೊರಗೆ ಸುಡುಸುಡು ಬಿಸಿಲಿನಲ್ಲಿ ಓಡಿ ಬೆವತು ಸುಸ್ತಾಗುವುದಕ್ಕಿಂತ ಅದನ್ನೇ ಒಳಗೆ ಕೂತು ವಿಡಿಯೋ ಗೇಮ್ನಲ್ಲಿ ಮಾಡಬಹುದಲ್ಲ ಎಂದು ಕೆಲವರು ನೆನಸುತ್ತಾರೆ.”—ರುತು, 22.
‘ವ್ಯಾಯಾಮ’ ಎಂಬ ಪದ ಕೇಳಿದೊಡನೆ ನಿಮಗೆ ಸುಸ್ತಾಗಿ ಬಿಡುತ್ತದಾ? ಹಾಗಿರುವಲ್ಲಿ, ಉತ್ತಮ ವ್ಯಾಯಾಮ ರೂಢಿಯನ್ನು ಬೆಳೆಸಿಕೊಳ್ಳುವುದರಿಂದ ಸಿಗುವ ಮೂರು ಪ್ರತಿಫಲಗಳನ್ನು ಇಲ್ಲಿ ನೋಡೋಣ.
ಪ್ರತಿಫಲ #1. ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. “ನಿನಗೆ ವ್ಯಾಯಾಮ ಮಾಡಲಿಕ್ಕೆ ಸಮಯ ಇಲ್ಲ ಅನ್ನುತ್ತಿಯಾ ಆದರೆ ಆಮೇಲೆ ಕಾಯಿಲೆ ಬಿದ್ದಾಗ ಸಮಯ ಹಾಳಾಗುತ್ತಿದೆ ಎಂದು ಕೈಕೈ ಹಿಸುಕುತ್ತಿಯಾ ನೋಡು ಎಂದು ಡ್ಯಾಡಿ ಯಾವಾಗಲೂ ಹೇಳುತ್ತಿದ್ದರು” ಎನ್ನುತ್ತಾಳೆ 19 ವರ್ಷದ ಪ್ರಾಚೀ.
ಪ್ರತಿಫಲ #2. ಮನಸ್ಸನ್ನು ಪ್ರಶಾಂತಗೊಳಿಸುವ ರಾಸಾಯನಿಕಗಳನ್ನು ಮೆದುಳು ಸ್ರವಿಸುತ್ತದೆ. “ತಲೆಯಲ್ಲಿ ನೂರಾರು ಯೋಚನೆಗಳು ತುಂಬಿರುವಾಗ ಓಡುವುದರಿಂದ ನನ್ನ ಮನಸ್ಸು ಹಗುರವಾಗುತ್ತದೆ. ದೇಹದಲ್ಲಿ ನವಚೈತನ್ಯ ತುಂಬುತ್ತದೆ, ಮನಸ್ಸು ನಿರಾಳವಾಗುತ್ತದೆ” ಎನ್ನುತ್ತಾಳೆ 16ರ ಹರೆಯದ ಎಮಿಲಿ.
ಪ್ರತಿಫಲ #3. ಒಳ್ಳೇ ಮಜಾ ಇರುತ್ತದೆ. “ಮನೆಯ ಹೊರಗೆ ಹೋಗಿ ವ್ಯಾಯಾಮ ಮಾಡುವುದು ನನಗೆ ತುಂಬ ಇಷ್ಟ. ಆದ್ದರಿಂದ ದೂರ ದೂರದ ವರೆಗೆ ನಡೆಯುವುದು, ಈಜುವುದು, ಸೈಕಲ್ ತುಳಿಯುವುದು ಇವೆಲ್ಲ ನನ್ನ ವ್ಯಾಯಾಮದಲ್ಲಿ ಸೇರಿದೆ” ಎನ್ನುತ್ತಾಳೆ 22 ವರ್ಷದ ರುತು.
ಯಶಸ್ಸಿನ ಗುಟ್ಟು: ವಾರದಲ್ಲಿ ಮೂರು ಸಲ ಕನಿಷ್ಠಪಕ್ಷ 20 ನಿಮಿಷವಾದರೂ ನಿಮಗಿಷ್ಟವಾದ ವ್ಯಾಯಾಮ ಮಾಡಿ.
ಚೆನ್ನಾಗಿ ನಿದ್ರಿಸಿ—ಚುರುಕಾಗಿರುವಿರಿ
“ಗಾಳಿಯನ್ನು ಹಿಂದಟ್ಟುವ ವ್ಯರ್ಥ ಪ್ರಯಾಸದ ಬೊಗಸೆಗಿಂತಲೂ ನೆಮ್ಮದಿಯ [“ವಿಶ್ರಾಂತಿಯ,” NW] ಸೇರೆಯೇ ಲೇಸು” ಎನ್ನುತ್ತದೆ ಬೈಬಲ್. (ಪ್ರಸಂಗಿ 4:6) ನಿದ್ದೆ ಕಡಿಮೆಯಾದರೆ ನೀವು ಮಾಡುವ ಯಾವುದೇ ಕೆಲಸದ ಗುಣಮಟ್ಟವೂ ಕಡಿಮೆಯಾಗುತ್ತದೆ.
● “ಚೆನ್ನಾಗಿ ನಿದ್ದೆ ಮಾಡದಿದ್ದರೆ ನನಗೆ ಏನನ್ನೂ ಸರಿಯಾಗಿ ಮಾಡಲಿಕ್ಕಾಗುವುದಿಲ್ಲ. ಏಕಾಗ್ರತೆ ಇರುವುದಿಲ್ಲ.”—ಪ್ರಾಚೀ, 19.
● “ಮಧ್ಯಾಹ್ನ 2 ಗಂಟೆಯಾಗುವಷ್ಟರಲ್ಲಿ ಎಷ್ಟು ಆಯಾಸ ಆಗಿರುತ್ತೆ ಎಂದರೆ ಬಿಟ್ಟರೆ ಅಲ್ಲೇ ನಿದ್ದೆ ಹೋಗುತ್ತೇನೆ.”—ಕಾರುಣ್ಯ, 19.
ನಿಮಗೂ ನಿದ್ದೆ ಸಾಲುತ್ತಿಲ್ಲವಾ? ನಿಮ್ಮ ಸಮಪ್ರಾಯದವರು ಏನು ಮಾಡಿದ್ದಾರೆಂದು ಕೆಳಗೆ ಓದಿ ನೋಡಿ.
ತಡವಾಗಿ ಮಲಗಬೇಡಿ. “ಈಗೀಗ ನಾನು ತುಂಬ ಪ್ರಯತ್ನ ಮಾಡಿ ರಾತ್ರಿ ಬೇಗ ಮಲಗುತ್ತೇನೆ” ಎನ್ನುತ್ತಾಳೆ 18 ವರ್ಷದ ಕೃತಿಕಾ.
ಮಾತು ಕಡಿಮೆಮಾಡಿ. “ನನ್ನ ಫ್ರೆಂಡ್ಸ್ ಕೆಲವೊಮ್ಮೆ ರಾತ್ರಿ ತುಂಬ ಲೇಟಾಗಿ ಫೋನ್ ಮಾಡುತ್ತಾರೆ ಇಲ್ಲವೆಂದರೆ ಮೆಸೆಜ್ ಮಾಡುತ್ತಿರುತ್ತಾರೆ. ಆದರೆ ನಾನು ಈಚೀಚೆಗೆ ಜಾಸ್ತಿ ಹೊತ್ತು ಮಾತಾಡುವುದನ್ನು ನಿಲ್ಲಿಸಿ ಮಲಗಿಬಿಡುತ್ತೇನೆ” ಎನ್ನುತ್ತಾನೆ 21ರ ಹರೆಯದ ರಿಚರ್ಡ್.
ಮಲಗಲು ಏಳಲು ಸಮಯ ಗೊತ್ತುಪಡಿಸಿ. “ನಾನು ಪ್ರತಿರಾತ್ರಿ ಒಂದೇ ಸಮಯದಲ್ಲಿ ಮಲಗುತ್ತೇನೆ, ಬೆಳಗ್ಗೆ ಒಂದೇ ಸಮಯಕ್ಕೆ ಏಳಲು ಪ್ರಯತ್ನಿಸುತ್ತೇನೆ” ಎನ್ನುತ್ತಾಳೆ 20 ವರ್ಷದ ಜೆನಿಫರ್.
ಯಶಸ್ಸಿನ ಗುಟ್ಟು: ರಾತ್ರಿ 8-10 ತಾಸು ನಿದ್ದೆಮಾಡಿ.
ನಾವೀಗ ಪರಿಗಣಿಸಿದ ಮೂರು ಕ್ಷೇತ್ರಗಳಲ್ಲಿ ನೀವು ಯಾವುದಕ್ಕೆ ಹೆಚ್ಚು ಗಮನಹರಿಸಬೇಕೆಂದು ಅನಿಸುತ್ತಿದೆ?
❍ ಆಹಾರ ❍ ವ್ಯಾಯಾಮ ❍ ನಿದ್ದೆ
ಆ ಕ್ಷೇತ್ರದಲ್ಲಿ ಅಭಿವೃದ್ಧಿಮಾಡುವ ನಿಟ್ಟಿನಲ್ಲಿ ಒಂದು ಗುರಿಯನ್ನಿಟ್ಟು ಅದನ್ನು ಕೆಳಗೆ ಬರೆಯಿರಿ.
....
ಈ ಕೆಲವು ಸರಳ ಸೂತ್ರಗಳನ್ನು ಅನುಸರಿಸಿದರೆ ನಿಮಗೆ ಲಾಭವಾಗುವುದೇ ಹೊರತು ನಷ್ಟವಾಗಲಾರದು. ಒಳ್ಳೇ ಆರೋಗ್ಯವಿದ್ದರೆ ನೀವು ಚೆನ್ನಾಗಿ ಕಾಣಿಸುವಿರಿ, ಉಲ್ಲಾಸಿತರಾಗಿರುವಿರಿ ಮತ್ತು ಚುರುಕಾಗಿರುವಿರಿ ಎಂಬುದನ್ನು ಮರೆಯಬೇಡಿ. ಜೀವನದಲ್ಲಿ ಎಲ್ಲ ವಿಷಯಗಳಲ್ಲಿ ಅಲ್ಲದಿದ್ದರೂ ನಿಮ್ಮ ಆರೋಗ್ಯದ ಮೇಲೆ ನಿಮಗೆ ಖಂಡಿತವಾಗಿಯೂ ಹಿಡಿತವಿದೆ. 19 ವರ್ಷದ ಈಶಾ ಹೇಳುವಂತೆ “ನಿಮ್ಮ ಆರೋಗ್ಯ ಒಬ್ಬ ವ್ಯಕ್ತಿಯ ಕೈಯಲ್ಲಿದೆ. ಅದು ನೀವೇ.” (g10-E 06)
“ಯುವ ಜನರ ಪ್ರಶ್ನೆ” ಲೇಖನಮಾಲೆಯ ಹೆಚ್ಚಿನ ಲೇಖನಗಳು www.watchtower.org/ype ವೆಬ್ಸೈಟ್ನಲ್ಲಿವೆ
[ಪಾದಟಿಪ್ಪಣಿಗಳು]
^ ಅನೇಕರ ಅನಾರೋಗ್ಯ, ವೈಕಲ್ಯಗಳು ತಮ್ಮ ಹತೋಟಿಯಲ್ಲಿಲ್ಲದ ಕಾರಣಗಳಿಂದಾಗಿ ಉಂಟಾಗಿರಬಹುದು. ಇದರಲ್ಲೊಂದು ಕಾರಣ ಆನುವಂಶೀಯತೆ ಆಗಿರಬಹುದು. ಅಂಥವರು ತಮ್ಮಿಂದ ಸಾಧ್ಯವಿರುವಂಥದ್ದನ್ನು ಮಾಡಿ ಸ್ವಲ್ಪಮಟ್ಟಿಗೆ ಉತ್ತಮವಾದ ಆರೋಗ್ಯ ಪಡೆಯಲು ಈ ಲೇಖನ ನೆರವಾಗಬಲ್ಲದು.
^ ಈ ಲೇಖನದಲ್ಲಿ ಕೆಲವು ಹೆಸರುಗಳನ್ನು ಬದಲಾಯಿಸಲಾಗಿದೆ.
ಯೋಚಿಸಿ
● ಆರೋಗ್ಯ ನೋಡಿಕೊಳ್ಳುವುದರಿಂದ ನಿಮ್ಮ ಆತ್ಮವಿಶ್ವಾಸ ಹೇಗೆ ಹೆಚ್ಚುತ್ತದೆ?
● ನಿಮ್ಮ ಆರೋಗ್ಯದ ವಿಷಯದಲ್ಲಿ ಹೇಗೆ ಸಮತೂಕದ ನೋಟವಿಡಬಲ್ಲಿರಿ?—ಫಿಲಿಪ್ಪಿ 4:5.
[ಪುಟ 24ರಲ್ಲಿರುವ ಚೌಕ/ಚಿತ್ರಗಳು]
ನಿಮ್ಮ ಸಮಪ್ರಾಯದವರು ಏನನ್ನುತ್ತಾರೆ?
“ಮನುಷ್ಯನ ದೇಹ ಕಾರ್ ಇದ್ದಂತೆ. ಅದರ ಒಡೆಯ ಎಷ್ಟು ನಿಗಾ ವಹಿಸುತ್ತಾನೋ ಅಷ್ಟೇ ಚೆನ್ನಾಗಿರುತ್ತದೆ. ನಾನು ವ್ಯಾಯಾಮ ಮಾಡಲು ಒಂದು ಕಾರಣ ಇದು.”
“ವ್ಯಾಯಾಮ ಮಾಡುವಾಗ ಯಾರಾದರೂ ಜೊತೆಗಿದ್ದರೆ ನಿಮ್ಮಲ್ಲಿ ಹುಮ್ಮಸ್ಸು ಇರುತ್ತದೆ. ಏಕೆಂದರೆ ಆ ವ್ಯಕ್ತಿಯನ್ನು ನಿರಾಶೆಗೊಳಿಸಲು ನಿಮಗೆ ಮನಸ್ಸಿರುವುದಿಲ್ಲ.”
“ವ್ಯಾಯಾಮ ಮಾಡುವಾಗ ನನಗೆ ತುಂಬ ಒಳ್ಳೇದನಿಸುತ್ತದೆ. ಅಲ್ಲದೆ ಅದರಿಂದಾಗಿ ನಾನು ಇನ್ನೂ ಚೆನ್ನಾಗಿ ಕಾಣಿಸುವಾಗ ಆತ್ಮವಿಶ್ವಾಸ ಹೆಚ್ಚಾಗುತ್ತದೆ.”
[ಚಿತ್ರಗಳು]
ಈತನ್
ಬ್ರಿಯಾನಾ
ಎಮಿಲಿ