ವಿಸ್ಮಯಕಾರಿ ವಿನ್ಯಾಸದ ಹೀಮೊಗ್ಲೋಬಿನ್ ಅಣು
ವಿಸ್ಮಯಕಾರಿ ವಿನ್ಯಾಸದ ಹೀಮೊಗ್ಲೋಬಿನ್ ಅಣು
“ಉಸಿರಾಡುವುದು ಬಹಳ ಸರಳ ಎಂದನಿಸಿದರೂ ಜೀವವಿದೆಯೆಂದು ತೋರಿಸಿಕೊಡುವ ಈ ಅತೀ ಸರಳ ಕ್ರಿಯೆಯನ್ನು ಸೂಕ್ಷ್ಮವಾಗಿ ನೋಡಿದಾಗ ಅದು ತುಂಬ ಜಟಿಲವಾದದ್ದೆಂದು ತಿಳಿದುಬರುತ್ತದೆ. ವಿಧವಿಧವಾದ ಪರಮಾಣುಗಳ ನಡುವಿನ ಪರಸ್ಪರ ಕ್ರಿಯೆಯಿಂದ ಅದು ಸಾಧ್ಯವಾಗುತ್ತದೆ. ಇದೆಲ್ಲವೂ ಒಂದು ಸಂಕೀರ್ಣವಾದ ಅಣುವಿನೊಳಗೆ ನಡೆಯುತ್ತದೆ.” —ಮ್ಯಾಕ್ಸ್ ಎಫ್. ಪೆರುಟ್ಸ್, ಹೀಮೊಗ್ಲೋಬಿನ್ ಅಣುವಿನ ಅಧ್ಯಯನಕ್ಕಾಗಿ 1962ರಲ್ಲಿ ಕೊಡಲಾದ ನೊಬೆಲ್ ಪ್ರಶಸ್ತಿಯ ಪಾಲುಗಾರ.
ಉಸಿರಾಡುವುದು ಎಷ್ಟು ಸುಲಭವೆಂದರೆ ಅದರ ಬಗ್ಗೆ ನಾವು ಯಾರೂ ಯೋಚಿಸುವುದಿಲ್ಲ. ಆದರೆ ಅದಿಲ್ಲದೇ ನಾವು ಬದುಕಲಾರೆವು. ಹಾಗಿದ್ದರೂ ಈ ಉಸಿರಾಟ ಸಹ ಮಾನವ ಹೀಮೊಗ್ಲೋಬಿನ್ ಅಣು ಇಲ್ಲದೆ ಯಾವ ಪ್ರಯೋಜನಕ್ಕೂ ಬಾರದು. ನಮ್ಮ ಸೃಷ್ಟಿಕರ್ತನ ಒಂದು ಮೇರುಕೃತಿಯಾದ ಈ ಹೀಮೊಗ್ಲೋಬಿನ್ ಅಣು ಮಾನವರಲ್ಲಿರುವ 30,000 ಕೋಟಿ ಕೆಂಪು ರಕ್ತ ಕಣಗಳಲ್ಲಿ ಪ್ರತಿಯೊಂದರಲ್ಲೂ ಇದೆ. ಇದು ದೇಹದಾದ್ಯಂತ ಇರುವ ಅಂಗಾಂಶಗಳಿಗೆ ಶ್ವಾಸಕೋಶಗಳಿಂದ ಆಮ್ಲಜನಕವನ್ನು ರವಾನಿಸುತ್ತದೆ. ಹೀಮೊಗ್ಲೋಬಿನ್ ಇಲ್ಲದಿದ್ದರೆ ಕೆಲವೇ ಕ್ಷಣಗಳಲ್ಲಿ ನಮ್ಮ ಪ್ರಾಣ ಹೋಗಬಲ್ಲದು.
ಹೀಮೊಗ್ಲೋಬಿನ್ ಅಣುಗಳು ಸರಿಯಾದ ಸಮಯದಲ್ಲಿ
ಆಮ್ಲಜನಕದ ಪುಟ್ಟ ಅಣುಗಳನ್ನು ಹಿಡಿದು, ನಿರ್ದಿಷ್ಟ ಸಮಯದ ವರೆಗೆ ಅವುಗಳನ್ನು ಹಾಗೆಯೇ ಹಿಡಿದಿಟ್ಟು, ತಕ್ಕ ಸಮಯದಲ್ಲಿ ಅವುಗಳನ್ನು ಬಿಡುಗಡೆಮಾಡಬೇಕು. ಇವೆಲ್ಲವನ್ನು ಅವು ನಿರ್ವಹಿಸುವುದಾದರೂ ಹೇಗೆ? ಇದಕ್ಕಾಗಿ ಅಣುಗಳು ಹಲವಾರು ವಿಸ್ಮಯಕಾರಿ ಕೆಲಸಗಳನ್ನು ಮಾಡಬೇಕಾಗುತ್ತದೆ.ಪುಟ್ಟಪುಟ್ಟ ಅಣು “ಟ್ಯಾಕ್ಸಿಗಳು”
ಪ್ರತಿಯೊಂದು ಹೀಮೊಗ್ಲೋಬಿನ್ ಅಣುವನ್ನು ಒಂದು ಪುಟ್ಟ ಟ್ಯಾಕ್ಸಿ ಎಂದು ಎಣಿಸಿ. ಈ ಟ್ಯಾಕ್ಸಿಗೆ ನಾಲ್ಕು ಬಾಗಿಲು. ಅದರೊಳಗೆ ನಾಲ್ಕು “ಪ್ರಯಾಣಿಕರು” ಮಾತ್ರ ಕುಳಿತುಕೊಳ್ಳಬಹುದು. ಈ ಟ್ಯಾಕ್ಸಿಗೆ ಚಾಲಕನ ಅಗತ್ಯವಿಲ್ಲ. ಏಕೆಂದರೆ ಅದನ್ನು ಹೊತ್ತುಕೊಂಡು ಹೋಗುತ್ತಿರುವುದು ಸಂಚಾರಿ ಕಂಟೇನರ್. ಕೆಂಪು ರಕ್ತ ಕಣವೇ ಈ ಕಂಟೇನರ್. ಅದರೊಳಗೆ ಹೀಮೊಗ್ಲೋಬಿನ್ ಅಣುಗಳು ತುಂಬಿರುತ್ತವೆ.
ಈ ಕಂಟೇನರ್‌ಗಳು “ವಿಮಾನ ನಿಲ್ದಾಣದಲ್ಲಿ” ಪ್ರಯಾಣಿಕರಿಗಾಗಿ ಕಾಯುತ್ತಾ ನಿಂತಿರುತ್ತವೆಂದು ನೆನಸಿ. ಈ ವಿಮಾನ ನಿಲ್ದಾಣ ಶ್ವಾಸಕೋಶಗಳ ಗಾಳಿಗೂಡುಗಳಾಗಿವೆ. ನಾವು ಶ್ವಾಸ ತೆಗೆದುಕೊಳ್ಳುವಾಗ ಗಾಳಿಗೂಡುಗಳಲ್ಲಿ ‘ಪ್ರಯಾಣಿಕರು’ ಅಂದರೆ ಆಮ್ಲಜನಕದ ಅಣುಗಳ ಹಿಂಡು ಬಂದಿಳಿಯುತ್ತವೆ. ಆಗತಾನೇ ಆಗಮಿಸಿದ ಈ ಅಣುಗಳು ಟ್ಯಾಕ್ಸಿಗಾಗಿ ಹುಡುಕುತ್ತಾ ಕೂಡಲೇ “ಕಂಟೇನರ್‌ಗಳು” ಅಂದರೆ ಕೆಂಪು ರಕ್ತ ಕಣಗಳೊಳಗೆ ಸೇರಿಬಿಡುತ್ತವೆ. ಈ ಸಮಯದಲ್ಲಿ ಕೆಂಪು ರಕ್ತ ಕಣಗಳೊಳಗಿರುವ ‘ಹೀಮೊಗ್ಲೋಬಿನ್ ಟ್ಯಾಕ್ಸಿಗಳ’ ಬಾಗಿಲುಗಳು ತೆರೆದಿರುವುದಿಲ್ಲ. ಆದರೂ ಆಮ್ಲಜನಕದ ಒಂದು ಅಣು ಹೀಮೊಗ್ಲೋಬಿನ್ ಟ್ಯಾಕ್ಸಿಯೊಳಗೆ ಹೇಗಾದರೂ ತೂರಿ ಅದರೊಳಗೆ ಕುಳಿತುಕೊಳ್ಳುತ್ತದೆ. ಇಲ್ಲಿಂದ ಹೀಮೊಗ್ಲೋಬಿನ್ ಅಣುವಿನ ಪ್ರಯಾಣ ಆರಂಭವಾಗುತ್ತದೆ.
ಹೀಮೊಗ್ಲೋಬಿನ್ ಅಣುವಿನಲ್ಲಿ ಈಗ ಒಂದು ಅತ್ಯಾಶ್ಚರ್ಯ ನಡೆಯುತ್ತದೆ. ಅದು ತನ್ನ ಆಕಾರವನ್ನು ಬದಲಾಯಿಸಲಾರಂಭಿಸುತ್ತದೆ. ಹೀಮೊಗ್ಲೋಬಿನ್ ಟ್ಯಾಕ್ಸಿಯೊಳಗೆ ಮೊದಲ ಪ್ರಯಾಣಿಕ ತೂರಿದ ಕೂಡಲೇ ಆ ಟ್ಯಾಕ್ಸಿಯ ಎಲ್ಲ ನಾಲ್ಕು “ಬಾಗಿಲುಗಳು” ತೆರೆದುಕೊಳ್ಳುತ್ತವೆ. ಆಗ ಉಳಿದ ಮೂರು ಪ್ರಯಾಣಿಕರಿಗೆ ಸುಲಭವಾಗಿ ಟ್ಯಾಕ್ಸಿಯನ್ನು ಪ್ರವೇಶಿಸಲು ಸಾಧ್ಯವಾಗುತ್ತದೆ. ಈ ಪ್ರಕ್ರಿಯೆಯನ್ನು ‘ಕೋಆಪರೇಟಿವಿಟಿ’ ಎನ್ನುತ್ತಾರೆ. ಇದೆಷ್ಟು ವೇಗದಿಂದ ವ್ಯವಸ್ಥಿತವಾಗಿ ನಡೆಯುತ್ತದೆಂದರೆ ನಾವು ಒಮ್ಮೆ ಉಸಿರೆಳೆದಾಗ, ಕೆಂಪು ರಕ್ತ ಕಣದೊಳಗಿನ ಎಲ್ಲ ಟ್ಯಾಕ್ಸಿಗಳಲ್ಲಿನ “ಸೀಟುಗಳಲ್ಲಿ” ಶೇ. 95ರಷ್ಟು ತುಂಬಿಬಿಡುತ್ತವೆ. ಒಂದು ಕೆಂಪು ರಕ್ತ ಕಣದೊಳಗಿರುವ 25 ಕೋಟಿಗಿಂತ ಹೆಚ್ಚು ಹೀಮೊಗ್ಲೋಬಿನ್ ಅಣುಗಳು ಒಟ್ಟಿನಲ್ಲಿ ಸುಮಾರು 100 ಕೋಟಿ ಆಮ್ಲಜನಕದ ಅಣುಗಳನ್ನು ಹೊರಬಲ್ಲವು! ಈ ಅಮೂಲ್ಯವಾದ ಆಮ್ಲಜನಕವನ್ನು ಅಗತ್ಯವಿರುವ ಅಂಗಾಂಶಗಳಿಗೆ ರವಾನಿಸಲು ಟ್ಯಾಕ್ಸಿಗಳನ್ನು ಹೊತ್ತುಕೊಂಡಿರುವ ಕಂಟೇನರ್ ಕೂಡಲೇ ಹೊರಡುತ್ತದೆ. ಆದರೆ ನೀವು ಹೀಗೆ ಯೋಚಿಸುತ್ತಿರಬಹುದು: ‘ಕೆಂಪು ರಕ್ತ ಕಣದೊಳಗಿನ ಆಮ್ಲಜನಕದ ಅಣುಗಳು ಅಂಗಾಂಶಗಳಿಗೆ ತಲಪುವ ಮುಂಚೆಯೇ ಹೊರಬರುವುದಿಲ್ಲವಲ್ಲ, ಅದು ಹೇಗೆ?’
ಅದು ಹೇಗೆಂದರೆ, ಆಮ್ಲಜನಕದ ಅಣುಗಳು ಹೀಮೊಗ್ಲೋಬಿನ್ ಅಣುವನ್ನು ಸೇರಿದಾಕ್ಷಣ ಅದರಲ್ಲಿನ ಕಬ್ಬಿಣದ ಪರಮಾಣುಗಳಿಗೆ ಅಂಟಿಕೊಳ್ಳುತ್ತವೆ. ಸಾಮಾನ್ಯವಾಗಿ ಆಮ್ಲಜನಕ ಮತ್ತು ಕಬ್ಬಿಣ ನೀರಿನೊಂದಿಗೆ ಕೂಡಿದಾಗ ಏನಾಗುತ್ತದೆಂದು ನೀವು ನೋಡಿರಬಹುದು. ಕಬ್ಬಿಣದ ಆಕ್ಸೈಡ್ ಉಂಟಾಗುತ್ತದೆ ಅಂದರೆ ಆಮ್ಲಜನಕವು ಒಂದು ಸ್ಫಟಿಕದಲ್ಲಿ ಬಂಧಿಯಾಗಿ ಕಬ್ಬಿಣಕ್ಕೆ ತುಕ್ಕುಹಿಡಿಯುತ್ತದೆ. ಹೀಗಿರುವಾಗ ಕೆಂಪು ರಕ್ತ ಕಣದಲ್ಲಿನ ನೀರಿನಂಥ ಪರಿಸರದಲ್ಲಿ ತುಕ್ಕುಹಿಡಿಯದೆ ಕಬ್ಬಿಣ ಹಾಗೂ ಆಮ್ಲಜನಕವನ್ನು ಕೂಡಿಸುವ ಮತ್ತು ಪ್ರತ್ಯೇಕಿಸುವ ಕೆಲಸವನ್ನು ಹೀಮೊಗ್ಲೋಬಿನ್ ಅಣು ನಿರ್ವಹಿಸುವುದು ಹೇಗೆ?
ಇನ್ನಷ್ಟು ಸೂಕ್ಷ್ಮವಾಗಿ ಗಮನಿಸಿದಾಗ . . .
ಮೇಲಿನ ಪ್ರಶ್ನೆಗೆ ಉತ್ತರ ತಿಳಿಯಲು ಹೀಮೊಗ್ಲೋಬಿನ್ ಅಣುವನ್ನು ಇನ್ನಷ್ಟು ಸೂಕ್ಷ್ಮವಾಗಿ ಪರಿಶೀಲಿಸೋಣ. ಈ ಅಣುವಿನಲ್ಲಿ ಜಲಜನಕ, ಇಂಗಾಲ, ಸಾರಜನಕ, ಗಂಧಕ, ಆಮ್ಲಜನಕದ ಸುಮಾರು 10,000 ಪರಮಾಣುಗಳಿವೆ. ಇವೆಲ್ಲವೂ ಕಬ್ಬಿಣದ 4 ಪರಮಾಣುಗಳ ಸುತ್ತ ಜೋಡಿಸಲ್ಪಟ್ಟಿವೆ. ಕಬ್ಬಿಣದ ಬರೀ ನಾಲ್ಕು ಪರಮಾಣುಗಳಿಗೆ ಇಷ್ಟೊಂದು ಆಸರೆ ಏಕೆ?
ಕಬ್ಬಿಣದ ಈ ನಾಲ್ಕು ಪರಮಾಣುಗಳಲ್ಲಿ ವಿದ್ಯುದಾವೇಶ ಇದೆ. ಅಯಾನುಗಳೆಂದು ಕರೆಯಲಾಗುವ ಈ ವಿದ್ಯುದಾವೇಶವುಳ್ಳ ಪರಮಾಣುಗಳನ್ನು ಸ್ವತಂತ್ರವಾಗಿ ಚಲಿಸುವಂತೆ ಬಿಟ್ಟರೆ ಜೀವಕೋಶಗಳೊಳಗೆ ತುಂಬ ಹಾನಿ ಮಾಡಬಲ್ಲವು. ಹೀಗಿರುವುದರಿಂದ ಈ ನಾಲ್ಕು ಕಬ್ಬಿಣದ ಅಯಾನುಗಳಲ್ಲಿ ಪ್ರತಿಯೊಂದನ್ನು ಒಂದು ಸಂರಕ್ಷಣಾತ್ಮಕ ಫಲಕದ ಮಧ್ಯೆ ಹಿಡಿದಿಡಲಾಗುತ್ತದೆ. * ಈ ನಾಲ್ಕು ಫಲಕಗಳನ್ನು ಹೀಮೊಗ್ಲೋಬಿನ್ ಅಣುವಿನೊಳಗೆ ಜೋಡಿಸಲಾಗುತ್ತದೆ. ಇದನ್ನು ಜೋಡಿಸಲಾಗಿರುವ ವಿಧ ಹೇಗಿದೆಯೆಂದರೆ ಕಬ್ಬಿಣದ ಅಯಾನುಗಳನ್ನು ಆಮ್ಲಜನಕದ ಅಣುಗಳು ತಲಪಬಲ್ಲವು ಆದರೆ ನೀರಿನ ಅಣುಗಳು ತಲಪಲಾರವು. ನೀರಿಲ್ಲದೆ, ತುಕ್ಕಿನ ಸ್ಫಟಿಕಗಳು ಉಂಟಾಗುವುದಿಲ್ಲ.
ಹೀಮೊಗ್ಲೋಬಿನ್ ಅಣುವಿನಲ್ಲಿನ ಕಬ್ಬಿಣವು ತನ್ನಷ್ಟಕ್ಕೆ ಆಮ್ಲಜನಕವನ್ನು ಬಂಧಿಸಲು ಅಥವಾ ಬಿಡುಗಡೆಮಾಡಲು ಸಾಧ್ಯವಿಲ್ಲ. ಹಾಗೆಯೇ ವಿದ್ಯುದಾವೇಶವುಳ್ಳ ಈ ನಾಲ್ಕು ಕಬ್ಬಿಣದ ಪರಮಾಣುಗಳು ಇಲ್ಲದಿದ್ದರೆ ಹೀಮೊಗ್ಲೋಬಿನ್‌ನ ಉಳಿದೆಲ್ಲ ಅಂಶಗಳು ನಿಷ್ಪ್ರಯೋಜಕ. ಅಷ್ಟುಮಾತ್ರವಲ್ಲ ಕಬ್ಬಿಣದ ಈ ಅಯಾನುಗಳು ಹೀಮೊಗ್ಲೋಬಿನ್ ಅಣುವಿನೊಳಗೆ ಸರಿಯಾಗಿ ಜೋಡಿಸಲ್ಪಟ್ಟಿರಬೇಕು. ಆಗಮಾತ್ರ ರಕ್ತಪ್ರವಾಹದಲ್ಲಿ ಆಮ್ಲಜನಕದ ರವಾನೆ ಸರಾಗವಾಗಿ ಸಾಗಬಲ್ಲದು.
ಆಮ್ಲಜನಕದ ಬಿಡುಗಡೆ
ಒಂದು ಕೆಂಪು ರಕ್ತ ಕಣ ಅಪಧಮನಿಗಳಿಂದ ಹೊರಟು ಅಂಗಾಂಶಗಳಲ್ಲಿರುವ ಪುಟ್ಟ ಲೋಮನಾಳಗಳೊಳಗೆ ಬಂದು ಸೇರುವಾಗ
ಆ ರಕ್ತ ಕಣ ಹೊಸ ಪರಿಸರಕ್ಕೆ ಕಾಲಿಡುತ್ತದೆ. ಶ್ವಾಸಕೋಶಗಳಲ್ಲಿದ್ದ ಶಾಖಕ್ಕಿಂತ ಈ ಪರಿಸರದಲ್ಲಿ ಶಾಖ ಹೆಚ್ಚು. ಇಲ್ಲಿ ಆಮ್ಲಜನಕವು ಕಡಿಮೆಯಿದೆ ಮತ್ತು ರಕ್ತ ಕಣದ ಸುತ್ತಲಿನ ಇಂಗಾಲದ ಡೈಆಕ್ಸೈಡ್‌ನಿಂದಾಗಿ ಆಮ್ಲೀಯತೆ ಹೆಚ್ಚಾಗಿರುತ್ತದೆ. ಇದೆಲ್ಲವೂ ಕೆಂಪು ರಕ್ತ ಕಣದಲ್ಲಿರುವ ಹೀಮೊಗ್ಲೋಬಿನ್ ಅಣುಗಳಿಗೆ ಅಂದರೆ ಟ್ಯಾಕ್ಸಿಗಳಿಗೆ ಅದರೊಳಗಿನ ಅಮೂಲ್ಯ ಪ್ರಯಾಣಿಕರನ್ನು ಇಳಿಸಲು ಅಂದರೆ ಆಮ್ಲಜನಕವನ್ನು ಬಿಡುಗಡೆಗೊಳಿಸಲು ಹಸಿರು ನಿಶಾನೆ ಕೊಡುತ್ತದೆ.ಹೀಮೊಗ್ಲೋಬಿನ್ ಅಣು ಆಮ್ಲಜನಕದ ಅಣುಗಳನ್ನು ಬಿಡುಗಡೆಮಾಡಿದ ಮೇಲೆ ಪುನಃ ತನ್ನ ಆಕಾರ ಬದಲಾಯಿಸುತ್ತದೆ ಅಂದರೆ ಅದರ “ಬಾಗಿಲುಗಳು ಮುಚ್ಚಿಹೋಗುತ್ತವೆ.” ಇದರಿಂದಾಗಿ, ಅಂಗಾಂಶಗಳಿಗೆ ಅತ್ಯಗತ್ಯವಾಗಿರುವ ಆಮ್ಲಜನಕವು ಹೀಮೊಗ್ಲೋಬಿನ್ ಅಣುವಿನ ಹೊರಗೆ ಉಳಿದುಬಿಡುತ್ತದೆ. ‘ಬಾಗಿಲು ಮುಚ್ಚಿಹೋಗುವುದರಿಂದ’ ಅಪ್ಪಿತಪ್ಪಿಯೂ ಆಮ್ಲಜನಕವು ಹೀಮೊಗ್ಲೋಬಿನ್ ಅಣುವಿನ ಮೂಲಕ ಶ್ವಾಸಕೋಶಗಳಿಗೆ ಹಿಂದಿರುಗಿ ಹೋಗಲಾರದು. ಆದರೆ ಇಂಗಾಲದ ಡೈಆಕ್ಸೈಡ್ ಅನ್ನು ಈ ಹೀಮೊಗ್ಲೋಬಿನ್ ಅಣು ಕೂಡಲೇ ಹತ್ತಿಸಿಕೊಂಡು ಶ್ವಾಸಕೋಶಕ್ಕೆ ಕೊಂಡೊಯ್ಯುತ್ತದೆ.
ಈಗ ಆಮ್ಲಜನಕವಿಲ್ಲದ ಕೆಂಪು ರಕ್ತ ಕಣಗಳು ಶ್ವಾಸಕೋಶಗಳನ್ನು ತಲಪುತ್ತವೆ. ಅಲ್ಲಿ ಹೀಮೊಗ್ಲೋಬಿನ್ ಅಣುಗಳು ಇಂಗಾಲದ ಡೈಆಕ್ಸೈಡ್ ಅನ್ನು ಬಿಡುಗಡೆಮಾಡಿ ಜೀವಪೋಷಕ ಆಮ್ಲಜನಕವನ್ನು ಪುನಃ ತುಂಬಿಸಿಕೊಳ್ಳುತ್ತವೆ. ಕೆಂಪು ರಕ್ತ ಕಣದ ಸುಮಾರು 120 ದಿನಗಳ ಜೀವಿತಾವಧಿಯಲ್ಲಿ ಈ ಪ್ರಕ್ರಿಯೆ ಎಷ್ಟೋ ಸಾವಿರ ಸಲ ಪುನರಾವರ್ತನೆಗೊಳ್ಳುತ್ತದೆ.
ಹೀಮೊಗ್ಲೋಬಿನ್ ಅಣು ಸಾಮಾನ್ಯವಾದದ್ದೇನಲ್ಲ ಎಂಬುದು ನಿಚ್ಚಳ. ಈ ಲೇಖನದ ಆರಂಭದಲ್ಲೇ ತಿಳಿಸಲಾದಂತೆ ಅದೊಂದು “ಸಂಕೀರ್ಣವಾದ ಅಣು.” ಇದು, ನಾವು ಜೀವದಿಂದಿರಲು ಅತ್ಯಾವಶ್ಯಕವಾದ ಅತ್ಯದ್ಭುತ ಹಾಗೂ ಕರಾರುವಾಕ್ಕಾಗಿ ನಡೆಯುವ ಮೈಕ್ರೋ ಇಂಜಿನಿಯರಿಂಗ್ ಕೃತಿಯಾಗಿದೆ. ಇದನ್ನು ರಚಿಸಿದ ನಮ್ಮ ಸೃಷ್ಟಿಕರ್ತನ ಬಗ್ಗೆ ನಮ್ಮಲ್ಲಿ ಖಂಡಿತ ವಿಸ್ಮಯ ಹಾಗೂ ಕೃತಜ್ಞತಾಭಾವ ಉಕ್ಕುತ್ತದೆ! (g10-E 09)
[ಪಾದಟಿಪ್ಪಣಿ]
^ ಈ ಫಲಕ ‘ಹೀಮ್’ ಎಂದು ಕರೆಯಲಾಗುವ ಒಂದು ಪ್ರತ್ಯೇಕ ಅಣು. ಇದು ಪ್ರೋಟೀನ್ ಅಲ್ಲ ಬದಲಾಗಿ ಹೀಮೊಗ್ಲೋಬಿನ್‌ನಲ್ಲಿನ ಪ್ರೋಟೀನ್ ರಚನೆಯ ಒಂದು ಭಾಗ.
[ಪುಟ 25ರಲ್ಲಿರುವ ಚೌಕ/ಕೋಷ್ಟಕ]
ನಿಮ್ಮ ಹೀಮೊಗ್ಲೋಬಿನ್ ಪ್ರಮಾಣದೆಡೆ ಗಮನಕೊಡಿ!
“ರಕ್ತದಲ್ಲಿ ಕಬ್ಬಿಣಾಂಶದ ಕೊರತೆಯಿದೆ” ಎಂದು ಸಾಮಾನ್ಯವಾಗಿ ಬಳಸಲಾಗುವ ಅಭಿವ್ಯಕ್ತಿಯ ನಿಜಾರ್ಥ ರಕ್ತದಲ್ಲಿ ಹೀಮೊಗ್ಲೋಬಿನ್‌ನ ಕೊರತೆಯಿದೆ ಎಂದಾಗಿದೆ. ಹೀಮೊಗ್ಲೋಬಿನ್ ಅಣುವಿಗೆ ಅಗತ್ಯವಾಗಿರುವ ಕಬ್ಬಿಣದ ನಾಲ್ಕು ಪರಮಾಣುಗಳು ಅದರಲ್ಲಿ ಇಲ್ಲದಿದ್ದಲ್ಲಿ ಅದರಲ್ಲಿರುವ ಉಳಿದ 10,000 ಪರಮಾಣುಗಳು ನಿಷ್ಪ್ರಯೋಜಕ. ಹೀಗಿರುವಾಗ ಆರೋಗ್ಯಪೂರ್ಣ ಆಹಾರವನ್ನು ಸೇವಿಸುವ ಮೂಲಕ ಸಾಕಷ್ಟು ಕಬ್ಬಿಣಾಂಶ ಪಡೆಯುವುದು ಪ್ರಾಮುಖ್ಯ. ಇಲ್ಲಿರುವ ಚಾರ್ಟ್‌ನಲ್ಲಿ ಕಬ್ಬಿಣಾಂಶ ಅಧಿಕವಿರುವ ಕೆಲವೊಂದು ಆಹಾರಪದಾರ್ಥಗಳ ಪಟ್ಟಿಯನ್ನು ಕೊಡಲಾಗಿದೆ.
ಕಬ್ಬಿಣಾಂಶ ಅಧಿಕವಿರುವ ಆಹಾರವನ್ನು ಸೇವಿಸುವುದಲ್ಲದೆ ಈ ಮುಂದಿನ ಸಲಹೆಯನ್ನೂ ಪಾಲಿಸತಕ್ಕದ್ದು: 1. ನಿಯಮಿತವಾಗಿ ಸೂಕ್ತ ವ್ಯಾಯಾಮ ಮಾಡಬೇಕು. 2. ಧೂಮಪಾನ ಮಾಡಬಾರದು. 3. ಧೂಮಪಾನಿಗಳು ಸೇದಿ, ಬಿಡುವ ಹೊಗೆಯಿಂದ ದೂರವಿರಬೇಕು. ಸಿಗರೇಟ್ ಹೊಗೆ ಹಾಗೂ ಇನ್ನಿತರ ವಿಧದ ತಂಬಾಕಿನ ಹೊಗೆ ಏಕೆ ತುಂಬ ಅಪಾಯಕಾರಿ?
ಏಕೆಂದರೆ ಆ ಹೊಗೆಯಲ್ಲಿ ಇಂಗಾಲದ ಮೊನೊಕ್ಸೈಡ್ ತುಂಬಿಕೊಂಡಿರುತ್ತದೆ. ಈ ವಿಷಕಾರಿ ಪದಾರ್ಥವನ್ನೇ ವಾಹನಗಳೂ ಉಗುಳುತ್ತವೆ. ಇಂಗಾಲದ ಮೊನೊಕ್ಸೈಡ್ ಆಕಸ್ಮಿಕ ಸಾವುಗಳಿಗೆ ಕಾರಣವಾಗಿದೆ ಮತ್ತು ಅದನ್ನು ಬಳಸಿ ಕೆಲವರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಆಮ್ಲಜನಕಕ್ಕಿಂತ 200 ಪಟ್ಟು ಹೆಚ್ಚು ವೇಗವಾಗಿ ಇಂಗಾಲದ ಮೊನೊಕ್ಸೈಡ್ ಹೀಮೊಗ್ಲೋಬಿನ್‌ನಲ್ಲಿನ ಕಬ್ಬಿಣದ ಪರಮಾಣುಗಳೊಂದಿಗೆ ಸೇರಿಕೊಳ್ಳುತ್ತದೆ. ಹೀಗೆ, ಒಬ್ಬ ವ್ಯಕ್ತಿ ಉಸಿರಾಡುವಾಗ ದೇಹದೊಳಗೆ ಹೋಗುವ ಆಮ್ಲಜನಕ ರಕ್ತಕ್ಕೆ ಸೇರದಂತೆ ಸಿಗರೇಟ್ ಹೊಗೆ ತಡೆಯೊಡ್ಡುತ್ತದೆ.
[ಕೋಷ್ಟಕ]
ಆಹಾರಪದಾರ್ಥ ಕಬ್ಬಿಣಾಂಶ (ಮಿ.ಗ್ರಾಮ್)
ಕೋಳಿಮಾಂಸ 25.0
ಅವಲಕ್ಕಿ 20.0
ಕೊತ್ತಂಬರಿ ಸೊಪ್ಪು 18.5
ಗೋಧಿಹಿಟ್ಟು 11.5
ಸೋಯಾಬೀನ್ 11.5
ಎಳ್ಳು 10.5
ಹಾಗಲಕಾಯಿ 9.4
ಹೆಸರು ಕಾಳು 7.3
ಕರಿಬೇವಿನ ಸೊಪ್ಪು 7.0
ನುಗ್ಗೆಕಾಯಿ 5.3
ಕ್ಯಾರೆಟ್ 2.2
[ಪುಟ 23ರಲ್ಲಿರುವ ರೇಖಾಕೃತಿ/ಚಿತ್ರ]
(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)
ಪ್ರೋಟೀನ್ ರಚನೆ
ಆಮ್ಲಜನಕ
ಕಬ್ಬಿಣದ ಪರಮಾಣು
ಹೀಮ್
ಶ್ವಾಸಕೋಶಗಳಲ್ಲಿನ ಆಮ್ಲಜನಕ-ಸಮೃದ್ಧ ಪರಿಸರದಲ್ಲಿ ಆಮ್ಲಜನಕದ ಒಂದು ಅಣು ಹೀಮೊಗ್ಲೋಬಿನ್‌ನೊಳಗೆ ಬಂಧಿತವಾಗುತ್ತದೆ
ಆಮ್ಲಜನಕದ ಒಂದು ಅಣು ಬಂಧಿತವಾದ ಬಳಿಕ ಹೀಮೊಗ್ಲೋಬಿನ್ ಅಣುವಿನ ಆಕಾರದಲ್ಲಾಗುವ ಚಿಕ್ಕ ಬದಲಾವಣೆಯಿಂದಾಗಿ ಆಮ್ಲಜನಕದ ಉಳಿದ ಮೂರು ಅಣುಗಳು ಬೇಗನೆ ಬಂಧಿತವಾಗುತ್ತವೆ
ಈ ಹೀಮೊಗ್ಲೋಬಿನ್ ಅಣುಗಳು ಶ್ವಾಸಕೋಶಗಳಿಂದ ಆಮ್ಲಜನಕವನ್ನು ಕೊಂಡೊಯ್ದು ದೇಹದಲ್ಲಿ ಅಗತ್ಯವಿರುವಲ್ಲೆಲ್ಲ ಬಿಡುಗಡೆಮಾಡುತ್ತದೆ