ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರು ಸೈತಾನನನ್ನು ಏಕೆ ನಾಶಮಾಡಿಲ್ಲ?

ದೇವರು ಸೈತಾನನನ್ನು ಏಕೆ ನಾಶಮಾಡಿಲ್ಲ?

ಬೈಬಲಿನ ದೃಷ್ಟಿಕೋನ

ದೇವರು ಸೈತಾನನನ್ನು ಏಕೆ ನಾಶಮಾಡಿಲ್ಲ?

ಇನ್ನೊಬ್ಬರ ಕಷ್ಟನೋವುಗಳನ್ನು ನೀಗಿಸಲು ನಿಮಗೆ ಸಾಧ್ಯವಿರುವುದಾದರೆ ಏನು ಮಾಡುವಿರಿ? ನೀಗಿಸುವಿರಲ್ಲವೇ? ನೈಸರ್ಗಿಕ ವಿಪತ್ತಿನ ಸಮಯದಲ್ಲಿ ಪರಿಹಾರ ಕೆಲಸಗಾರರು ತಮಗೆ ಪರಿಚಯವೇ ಇಲ್ಲದವರ ಕಷ್ಟಗಳನ್ನು ನೀಗಿಸಲು ಮತ್ತು ಜೀವರಕ್ಷಿಸಲು ಧಾವಿಸುತ್ತಾರೆ. ಹೀಗಿರುವಾಗ, ‘ಮಾನವರ ಅಪಾರ ಕಷ್ಟಸಂಕಷ್ಟಗಳಿಗೆ ಕಾರಣನಾದ ಸೈತಾನನನ್ನು ದೇವರು ಏಕೆ ಬೇಗನೆ ನಾಶಮಾಡುವುದಿಲ್ಲ?’ ಎಂದು ಯಾರಾದರೂ ಕೇಳಬಹುದು.

ಈ ಪ್ರಶ್ನೆಯನ್ನು ಉತ್ತರಿಸಲಿಕ್ಕಾಗಿ ಇದನ್ನು ಊಹಿಸಿಕೊಳ್ಳಿ: ವಿದೇಶದ ಕೋರ್ಟ್‌ನಲ್ಲಿ ಒಂದು ದೊಡ್ಡ ಮೊಕದ್ದಮೆ ನಡೆಯುತ್ತಾ ಇದೆ. ವಿಚಾರಣೆಗೊಳಗಾಗಿರುವ ಕೊಲೆಗಾರನು ಏನಾದರೂ ಮಾಡಿ ಅದನ್ನು ತಡೆಯಬೇಕೆಂದಿದ್ದಾನೆ. ಅದಕ್ಕಾಗಿ ಅವನು ಆ ನ್ಯಾಯಾಧೀಶ ಅಪ್ರಾಮಾಣಿಕನೂ ನ್ಯಾಯಾಲಯವನ್ನು ಸರಿಯಾಗಿ ನಡೆಸುವುದಿಲ್ಲವೆಂದೂ ಹೇಳುತ್ತಾನೆ. ಅಲ್ಲದೆ ಜ್ಯೂರಿ ಸದಸ್ಯರಿಗೆ ನ್ಯಾಯಾಧೀಶ ಲಂಚಕೊಟ್ಟಿದ್ದಾನೆಂದೂ ಹೇಳುತ್ತಾನೆ. ಆದ್ದರಿಂದ ಈ ಸಂಬಂಧದಲ್ಲಿ ನ್ಯಾಯಾಧೀಶನೂ ಆ ಕೊಲೆಗಾರನೂ ತಮ್ಮ ತಮ್ಮ ಸಾಕ್ಷಿಗಳನ್ನು ಪ್ರಸ್ತುತಪಡಿಸುತ್ತಾರೆ.

ಈ ದೀರ್ಘ ವಿಚಾರಣೆಯಿಂದಾಗಿ ಎಲ್ಲರಿಗೆ ತುಂಬ ತೊಂದರೆಯಾಗುತ್ತದೆಂದು ನ್ಯಾಯಾಧೀಶನಿಗೆ ಗೊತ್ತಿದೆ. ಮೊಕದ್ದಮೆಯನ್ನು ವಿನಾಕಾರಣ ವಿಳಂಬಿಸದೆ ಮುಗಿಸುವುದು ಅವನ ಅಪೇಕ್ಷೆ. ಆದರೂ, ಮುಂದೆಂದಾದರೂ ತದ್ರೀತಿಯ ಮೊಕದ್ದಮೆಗಳು ಬಂದರೆ ಸೂಕ್ತ ತೀರ್ಪನ್ನು ಕೊಡಲಿಕ್ಕಾಗಿ ಇದನ್ನು ಪೂರ್ವನಿದರ್ಶನ ಅಥವಾ ಮಾದರಿಯಾಗಿಡುವ ಉದ್ದೇಶದಿಂದ ಎರಡೂ ಪಕ್ಷಗಳಿಗೆ ತಮ್ಮ ತಮ್ಮ ವಾದಗಳನ್ನು ಮುಂದಿಡಲು ಸಾಕಷ್ಟು ಸಮಯ ಕೊಡಲೇಬೇಕೆಂದು ಅವನು ಗ್ರಹಿಸುತ್ತಾನೆ.

ಈ ದೃಷ್ಟಾಂತವು, “ಘಟಸರ್ಪ,” “ಸರ್ಪ,” “ಪಿಶಾಚ” ಎಂದೂ ಕರೆಯಲಾಗಿರುವ ಸೈತಾನನು, “ಭೂಲೋಕದಲ್ಲೆಲ್ಲಾ ಸರ್ವೋನ್ನತ”ನಾದ ಯೆಹೋವನಿಗೆ ಹಾಕಿದ ಸವಾಲಿಗೆ ಹೇಗೆ ಸಂಬಂಧಿಸುತ್ತದೆ? (ಪ್ರಕಟನೆ 12:9; ಕೀರ್ತನೆ 83:18) ಸೈತಾನನು ನಿಜವಾಗಿ ಯಾರು? ಯೆಹೋವ ದೇವರ ಮೇಲೆ ಅವನು ಯಾವ ಆರೋಪಗಳನ್ನು ಹೊರಿಸಿದ್ದಾನೆ? ಅಲ್ಲದೆ, ದೇವರು ಅವನನ್ನು ಯಾವಾಗ ನಾಶಮಾಡುವನು?

ನೈತಿಕ ಪೂರ್ವನಿದರ್ಶನ ಏಕೆ?

ಸೈತಾನನೆಂಬ ಈ ಪಿಶಾಚನು ಆರಂಭದಲ್ಲಿ ಒಬ್ಬ ದೇವದೂತನಾಗಿದ್ದ. ಅವನು ಪರಿಪೂರ್ಣ ಅದೃಶ್ಯ ಆತ್ಮಜೀವಿಯಾಗಿದ್ದ. (ಯೋಬ 1:6, 7) ಆದರೆ ಮನುಷ್ಯರು ತನ್ನನ್ನು ಆರಾಧಿಸಬೇಕು ಎಂಬ ಸ್ವಾರ್ಥಪರ ಹೆಬ್ಬಯಕೆಯ ಹುಚ್ಚು ಅವನಿಗೆ ಹಿಡಿಯಿತು. ಆದ್ದರಿಂದ ದೇವರು ವಿಧೇಯತೆಗೆ ಅರ್ಹನಲ್ಲ ಎಂದು ಪರೋಕ್ಷವಾಗಿ ಆರೋಪಿಸುತ್ತಾ ಆತನ ಆಳುವ ಹಕ್ಕಿಗೆ ಸವಾಲೆಸೆದನು. ಹೀಗೆ ಅವನು ತನ್ನನ್ನು ಪಿಶಾಚನನ್ನಾಗಿ ಮಾಡಿಕೊಂಡ. ಆಶೀರ್ವಾದಗಳನ್ನು ಕೊಟ್ಟು ಕೈಬಿಸಿ ಮಾಡಿದಾಗ ಮಾತ್ರ ಮಾನವರು ದೇವರ ಸೇವೆಮಾಡುತ್ತಾರೆಂಬ ಅಪಾದನೆಯನ್ನೂ ಹಾಕಿದನು. ವೈಯಕ್ತಿಕವಾಗಿ ಕಷ್ಟಸಂಕಷ್ಟ ಬಂದಾಗ ಎಲ್ಲ ಜನರು ತಮ್ಮ ನಿರ್ಮಾಣಿಕನನ್ನು ‘ದೂಷಿಸಿಯೇ ದೂಷಿಸುವರು’ ಎಂದು ಅವನು ವಾದಿಸಿದನು.—ಯೋಬ 1:8-11; 2:4, 5.

ದೇವರು ಬಲಪ್ರಯೋಗ ಮಾಡಿ ಸೈತಾನನನ್ನು ಏದೆನ್‌ ತೋಟದಲ್ಲೇ ನಾಶಮಾಡಿಬಿಡುತ್ತಿದ್ದರೆ ಆ ದೋಷಾರೋಪಗಳಿಗೆ ಉತ್ತರ ಸಿಗುತ್ತಿರಲಿಲ್ಲ. ಆ ಆರೋಪಗಳು ಸತ್ಯವಿರಬಹುದೇನೊ ಎಂಬ ಭಾವನೆ ಕೆಲವರಲ್ಲಿ ಮೂಡಸಾಧ್ಯವಿತ್ತು. ಆದ್ದರಿಂದ ಪರಮಾಧಿಕಾರಿಯಾದ ದೇವರು ಪ್ರೇಕ್ಷಕರೆಲ್ಲರ ಮನಸ್ಸಿನಲ್ಲಿರುವ ಪ್ರಶ್ನೆಗಳನ್ನು ಬಗೆಹರಿಸಲು ಕಾನೂನುರೀತ್ಯ ವಿಚಾರಣೆಗೆ ಚಾಲನೆನೀಡಿದನು.

ಎರಡೂ ಪಕ್ಷಗಳು ಸಾಕ್ಷಿಗಳನ್ನು ತಂದು ವ್ಯಾಜ್ಯದಲ್ಲಿ ತಮ್ಮ ತಮ್ಮ ಪಕ್ಷದ ಪರವಾಗಿ ಸಾಕ್ಷ್ಯ ಕೊಡಬೇಕೆಂದು ಯೆಹೋವ ದೇವರು ತನ್ನ ಮೂಲತತ್ತ್ವಗಳಿಗೆ ಹಾಗೂ ಪರಿಪೂರ್ಣ ನ್ಯಾಯಕ್ಕೆ ಹೊಂದಿಕೆಯಲ್ಲಿ ಸೂಚಿಸಿದನು. ಇದಕ್ಕೆ ಅನುಮತಿಸಲಾದ ಸಮಯವು ಆದಾಮನ ವಂಶಸ್ಥರಿಗೆ ಜೀವಿಸಲು ಮತ್ತು ದೇವರ ಪರವಾಗಿ ತಮ್ಮ ಸಾಕ್ಷಿ ಕೊಡಲು ಅವಕಾಶವನ್ನು ಕೊಟ್ಟಿದೆ. ದೇವರ ಮೇಲಿನ ಪ್ರೀತಿಯ ಕಾರಣ ಸಂಕಟಗಳ ಮಧ್ಯೆಯೂ ಸಮಗ್ರತೆ ಕಾಪಾಡಿಕೊಳ್ಳುವ ಮೂಲಕ ಈ ಸಾಕ್ಷ್ಯಕೊಟ್ಟಿದ್ದಾರೆ.

ಇನ್ನೆಷ್ಟು ಹೆಚ್ಚು ಸಮಯ?

ಆ ಕಾನೂನುರೀತ್ಯ ವಿಚಾರಣೆ ನಡೆಯುತ್ತಿರುವಾಗ ಮಾನವರು ಕಷ್ಟ ಅನುಭವಿಸುತ್ತಿರುವರು ಎಂಬದನ್ನು ಯೆಹೋವ ದೇವರು ಬಲ್ಲನು. ಆದರೆ ಆ ಮೊಕದ್ದಮೆಯನ್ನು ಸಾಧ್ಯವಾದಷ್ಟು ಬೇಗನೆ ಮುಗಿಸಲು ಆತನು ದೃಢನಿರ್ಣಯ ಮಾಡಿದ್ದಾನೆ. ಬೈಬಲು ಆತನನ್ನು “ಕೋಮಲ ಕರುಣೆಯ ತಂದೆಯೂ ಸಕಲ ಸಾಂತ್ವನದ ದೇವರೂ” ಎಂದು ವರ್ಣಿಸುತ್ತದೆ. (2 ಕೊರಿಂಥ 1:3) ನಿಜವಾಗಿಯೂ, ‘ಸಕಲ ಸಾಂತ್ವನದ ದೇವರು’ ಸೈತಾನನನ್ನು ಅಗತ್ಯಕ್ಕಿಂತ ಹೆಚ್ಚು ಕಾಲ ಜೀವಿಸಲಿಕ್ಕಾಗಲಿ ಅವನ ದುಷ್ಪ್ರಭಾವದ ಪರಿಣಾಮಗಳು ಉಳಿಯುವುದಕ್ಕಾಗಲಿ ಬಿಡನು. ಇನ್ನೊಂದು ಕಡೆ, ವಿಶ್ವ ನ್ಯಾಯಾಲಯದ ಈ ಮೊಕದ್ದಮೆಯು ಪೂರ್ತಿಯಾಗಿ ಕೊನೆಗೊಳ್ಳದೇ ದೇವರು ಅವನನ್ನು ಅಕಾಲಿಕವಾಗಿಯೂ ನಾಶಮಾಡುವುದಿಲ್ಲ.

ಮೊಕದ್ದಮೆಯು ಕೊನೆಗೆ ಇತ್ಯರ್ಥವಾಗುವಾಗ, ಯೆಹೋವನಿಗಿರುವ ಆಳುವ ಹಕ್ಕು ನ್ಯಾಯಬದ್ಧ ಎಂಬುದು ಸಂಪೂರ್ಣವಾಗಿ ಸಮರ್ಥಿಸಲ್ಪಟ್ಟಿರುವುದು. ಸೈತಾನನ ವಿರುದ್ಧ ಈ ಕಾನೂನುಬದ್ಧ ಮೊಕದ್ದಮೆಯು ನಿತ್ಯನಿರಂತರಕ್ಕೂ ಒಂದು ಮಾನದಂಡವಾಗಿರುವುದು. ಮುಂದೆಂದಾದರೂ ತದ್ರೀತಿಯ ಸವಾಲು ಎದ್ದರೆ ಅದನ್ನು ಪುನಃ ವಿಚಾರಣೆ ಮಾಡುವ ಅಗತ್ಯವಿಲ್ಲ. ಸೈತಾನನ ಈ ಕೆಟ್ಟ ಉದಾಹರಣೆಯನ್ನು ಪೂರ್ವನಿದರ್ಶನವಾಗಿ ಬಳಸಬಹುದು.

ತಕ್ಕಕಾಲದಲ್ಲಿ ಯೆಹೋವ ದೇವರು ತನ್ನ ಪುತ್ರನಾದ ಯೇಸು ಕ್ರಿಸ್ತನಿಗೆ ಸೈತಾನನನ್ನೂ ಅವನ ಕೆಲಸಗಳನ್ನೂ ನಾಶಗೊಳಿಸಲು ಆದೇಶಿಸುವನು. ‘ಕ್ರಿಸ್ತನು ಎಲ್ಲ ಆಧಿಪತ್ಯವನ್ನೂ ಎಲ್ಲ ಅಧಿಕಾರವನ್ನೂ ಶಕ್ತಿಯನ್ನೂ ನಿರ್ಮೂಲಮಾಡಿದ ಮೇಲೆ ತನ್ನ ದೇವರೂ ತಂದೆಯೂ ಆಗಿರುವಾತನಿಗೆ ರಾಜ್ಯವನ್ನು ಒಪ್ಪಿಸಿಕೊಡುವನು. ಏಕೆಂದರೆ ದೇವರು ಎಲ್ಲ ವೈರಿಗಳನ್ನು ಅವನ ಪಾದಗಳ ಕೆಳಗೆ ಹಾಕುವ ತನಕ ಅವನು ಅರಸನಾಗಿ ಆಳುವುದು ಆವಶ್ಯಕ. ಕೊನೆಯ ಶತ್ರುವಾಗಿ ಮರಣವು ನಿರ್ಮೂಲಮಾಡಲ್ಪಡುವುದು’ ಎಂದು ಬೈಬಲ್‌ ತಿಳಿಸುತ್ತದೆ.—1 ಕೊರಿಂಥ 15:24-26.

ಸಂತೋಷಕರವಾಗಿ, ಸುಂದರ ಉದ್ಯಾನದಂಥ ಪರಿಸ್ಥಿತಿಗಳು ಭೂವ್ಯಾಪಕವಾಗಿ ಇರುವವೆಂದು ಬೈಬಲ್‌ ವಾಗ್ದಾನಿಸುತ್ತದೆ. ದೇವರು ಆರಂಭದಲ್ಲಿ ಉದ್ದೇಶಿಸಿದಂತೆ ಜನರು ಆ ಶಾಂತಿಭರಿತ ಉದ್ಯಾನದಂಥ ಪರಿಸ್ಥಿತಿಗಳಲ್ಲಿ ಜೀವಿಸುವರು. “ಸಾತ್ವಿಕರು ಭೂಮಿಯನ್ನು ಸ್ವಾಧೀನಮಾಡಿಕೊಂಡು ಬಹಳ ಸಮಾಧಾನದಲ್ಲಿ ಆನಂದಪಡುವರು.” ಹೌದು, “ನೀತಿವಂತರು ಭೂಮಿಯನ್ನು ಸ್ವಾಧೀನಮಾಡಿಕೊಂಡು ಎಂದೆಂದಿಗೂ ಅದರಲ್ಲಿ ವಾಸವಾಗಿರುವರು.”—ಕೀರ್ತನೆ 37:11, 29, NIBV.

ದೇವರ ಸೇವಕರಿಗಿರುವ ಉಜ್ವಲ ಭವಿಷ್ಯದ ಕುರಿತು ಬೈಬಲು ವಿವರಿಸುವುದನ್ನು ಪರಿಗಣಿಸಿರಿ: “ಇಗೋ, ದೇವರ ಗುಡಾರವು ಮಾನವಕುಲದೊಂದಿಗೆ ಇದೆ; ಆತನು ಅವರೊಂದಿಗೆ ವಾಸಮಾಡುವನು ಮತ್ತು ಅವರು ಆತನ ಜನರಾಗಿರುವರು. ದೇವರು ತಾನೇ ಅವರೊಂದಿಗಿರುವನು. ಆತನು ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು; ಇನ್ನು ಮರಣವಿರುವುದಿಲ್ಲ; ಇನ್ನು ದುಃಖವಾಗಲಿ ಗೋಳಾಟವಾಗಲಿ ನೋವಾಗಲಿ ಇರುವುದಿಲ್ಲ. ಮೊದಲಿದ್ದ ಸಂಗತಿಗಳು ಗತಿಸಿಹೋಗಿವೆ.”—ಪ್ರಕಟನೆ 21:3, 4. (g10-E 12)

ಈ ಬಗ್ಗೆ ಯೋಚಿಸಿದ್ದೀರೋ?

● ಸೈತಾನನು ದೇವರ ಮತ್ತು ಮನುಷ್ಯರ ಮೇಲೆ ಯಾವ ಸುಳ್ಳಾರೋಪ ಹೊರಿಸಿದನು?—ಯೋಬ 1:8-11.

● ದೇವರು ತಕ್ಕ ಸಮಯದಲ್ಲಿ ಸೈತಾನನನ್ನು ನಾಶಗೊಳಿಸುವನೆಂದು ದೇವರ ಯಾವ ಗುಣಗಳಿಂದಾಗಿ ನಮಗೆ ಆಶ್ವಾಸನೆ ಸಿಗುತ್ತದೆ?—2 ಕೊರಿಂಥ 1:3.

● ಬೈಬಲು ಯಾವ ನಿರೀಕ್ಷೆ ಕೊಡುತ್ತದೆ?—ಪ್ರಕಟನೆ 21:3, 4.

[ಪುಟ 30ರಲ್ಲಿರುವ ಚಿತ್ರ]

ನೈತಿಕ ಪೂರ್ವನಿದರ್ಶನವನ್ನು ಇಡುವ ಒಂದು ಸೂಕ್ತ ತೀರ್ಪನ್ನು ಕೊಡಲು, ಎರಡೂ ಪಕ್ಷಗಳಿಗೆ ತಮ್ಮ ತಮ್ಮ ವಾದಗಳನ್ನು ಮುಂದಿಡಲು ಸಾಕಷ್ಟು ಸಮಯ ಕೊಡಲ್ಪಡಬೇಕು