ನಾನು ಶಾಲೆಗೆ ಹೋಗುವುದನ್ನು ಬಿಟ್ಟುಬಿಡಬೇಕಾ?
ಯುವಜನರ ಪ್ರಶ್ನೆ
ನಾನು ಶಾಲೆಗೆ ಹೋಗುವುದನ್ನು ಬಿಟ್ಟುಬಿಡಬೇಕಾ?
ಯಾವ ತರಗತಿಯಲ್ಲಿ ನೀವು ಶಾಲೆ ಬಿಡಬೇಕೆಂಬುದು ನಿಮ್ಮ ಅನಿಸಿಕೆ?
....
ನಿಮ್ಮ ಹೆತ್ತವರ ಅಭಿಪ್ರಾಯವೇನು?
....
ಮೇಲಿನ ಎರಡೂ ಉತ್ತರಗಳು ಒಂದೇ ಆಗಿವೆಯೋ? ಇರಬಹುದು. ನೀವು ಆ ತರಗತಿಯನ್ನು ಇನ್ನೂ ತಲಪಿರಲಿಕ್ಕಿಲ್ಲ. ಹಾಗಿದ್ದರೂ ಒಮ್ಮೊಮ್ಮೆ ನಿಮಗೆ ಶಾಲೆ ಬಿಟ್ಟುಬಿಡೋಣ ಎಂದು ಅನಿಸುತ್ತಿರಬಹುದು. ಕೆಳಗೆ ಕೊಡಲಾಗಿರುವ ಹೇಳಿಕೆಗಳಲ್ಲಿ ಯಾವುದು ನಿಮ್ಮ ಅನಿಸಿಕೆಯನ್ನು ಹೋಲುತ್ತದೆ?
● “ಕೆಲವೊಮ್ಮೆ ನನಗೆ ಎಷ್ಟು ತಲೆಬಿಸಿ ಆಗುತ್ತಿತ್ತೆಂದರೆ ಬೆಳಗ್ಗೆ ಏಳಲು ಮನಸ್ಸಾಗುತ್ತಿರಲಿಲ್ಲ. ‘ಸ್ಕೂಲಿಗೆ ಹೋಗಿ ಮುಂದೆ ನನಗೆ ಯಾವ ಪ್ರಯೋಜನಕ್ಕೂ ಬಾರದ್ದನ್ನೆಲ್ಲ ಯಾಕೆ ಕಲಿಯಬೇಕು?’ ಎಂದು ನೆನಸುತ್ತಿದ್ದೆ.”—ರೂಪಾಲಿ.
● “ಎಷ್ಟೋ ಸಲ ನನಗೆ ಶಾಲೆ ಬೋರ್ ಅನಿಸಿ ಅದನ್ನು ಬಿಟ್ಟು ಕೆಲಸಕ್ಕೆ ಸೇರಲು ತುಂಬ ಮನಸ್ಸಾಗಿತ್ತು. ಶಾಲೆಯಿಂದ ನನಗೇನೂ ಪ್ರಯೋಜನ ಆಗುತ್ತಿಲ್ಲ, ಅದರ ಬದಲು ಕೆಲಸಕ್ಕಾದರೂ ಹೋದರೆ ನಾಲ್ಕು ಕಾಸು ಕೈಗೆ ಬರುತ್ತೆ ಎಂದು ಅನಿಸುತ್ತಿತ್ತು.”—ಜಾನ್.
● “ಪ್ರತಿದಿನ ನಾನು ನಾಲ್ಕುನಾಲ್ಕು ಗಂಟೆ ಕೂತು ಹೋಮ್‌ವರ್ಕ್ ಮಾಡುತ್ತಿದ್ದೆ! ಎಸೈನ್‌ಮೆಂಟ್, ಪ್ರಾಜೆಕ್ಟ್, ಟೆಸ್ಟ್‌ಗಳ ಹೊರೆ ನನ್ನ ಮೇಲಿತ್ತು. ಅದೂ ಒಂದರ ಹಿಂದೆ ಒಂದು ಇರುತ್ತಿತ್ತು. ನನ್ನಿಂದ ಅದನ್ನೆಲ್ಲ ಮಾಡಲಿಕ್ಕಾಗಲ್ಲ, ಅವುಗಳಿಂದ ಮುಕ್ತಿ ಬೇಕಂತ ಅನಿಸುತ್ತಿತ್ತು.”—ಸಂಧ್ಯಾ.
● “ನಮ್ಮ ಶಾಲೆಗೆ ಬಾಂಬ್ ಬೆದರಿಕೆ ಇತ್ತು, ಮೂರು ಆತ್ಮಹತ್ಯಾ ಪ್ರಯತ್ನ ನಡೆದವು, ಒಬ್ಬರು ಆತ್ಮಹತ್ಯೆ ಮಾಡಿಕೊಂಡರು, ಅಷ್ಟೇ ಅಲ್ಲ ಗ್ಯಾಂಗ್‌ಗಳು ಹಿಂಸಾಚಾರ ನಡೆಸುತ್ತಿದ್ದವು. ಇದನ್ನೆಲ್ಲ ಹದ್ದುಬಸ್ತಿಗೆ ತರುವವರೇ ಇರಲಿಲ್ಲ, ನನಗಂತೂ ಶಾಲೆ ಬಿಟ್ಟುಬಿಡಬೇಕೆಂದು ಅನಿಸುತ್ತಿತ್ತು.”—ರೋಸ್.
ನಿಮಗೂ ಇಂಥ ಸವಾಲುಗಳು ಬಂದಿವೆಯೋ? ಹಾಗಿರುವಲ್ಲಿ ಯಾವ ಸನ್ನಿವೇಶದಿಂದಾಗಿ ನೀವು ಶಾಲೆಯನ್ನು ಬಿಟ್ಟುಬಿಡಲು ಮನಸ್ಸು ಮಾಡಿದ್ದೀರಿ?
....
ನೀವೀಗ ಶಾಲೆ ಬಿಡುವ ಬಗ್ಗೆ ಗಂಭೀರವಾಗಿ ಯೋಚಿಸುತ್ತಿರಬಹುದು. ನೀವೀಗ ಸಾಕಷ್ಟು ಪ್ರಬುದ್ಧರೂ ವಿದ್ಯಾವಂತರೂ ಆಗಿದ್ದೀರೆಂಬ ಕಾರಣಕ್ಕಾಗಿ ಶಾಲೆ ಬಿಡುತ್ತಿದ್ದೀರೋ ಅಥವಾ ಶಾಲೆಯೇ ಇಷ್ಟವಿಲ್ಲ ಎಂಬ ಕಾರಣಕ್ಕಾಗಿ ಬಿಡುತ್ತಿದ್ದೀರೋ?
ಶಾಲೆ ಬಿಟ್ಟುಬಿಡುವುದರಿಂದ ಒಳಿತಾಗುವುದೇ?
ನಿಮಗೆ ಗೊತ್ತೇ, ಕೆಲವು ದೇಶಗಳಲ್ಲಿ ಮಕ್ಕಳು 5ರಿಂದ 8 ವರ್ಷಗಳ ಶಾಲಾ ಶಿಕ್ಷಣ ಪಡೆದರೂ ಸಾಕು. ಆದರೆ ಇನ್ನಿತರ ಕಡೆಗಳಲ್ಲಿ 10ರಿಂದ 12 ವರ್ಷಗಳ ವರೆಗೆ ಶಾಲಾ ವಿದ್ಯಾಭ್ಯಾಸ ಪಡೆಯುವುದು ಕಡ್ಡಾಯ. ಆದ್ದರಿಂದ ಇಂತಿಷ್ಟೇ ವಯಸ್ಸಿನ ಅಥವಾ ತರಗತಿಯ ವರೆಗೆ ಶಾಲೆಗೆ ಹೋಗಬೇಕೆಂಬ ನಿಯಮ ಎಲ್ಲ ದೇಶಗಳಲ್ಲಿ ಅನ್ವಯವಾಗುವುದಿಲ್ಲ.
ಅಷ್ಟೇ ಅಲ್ಲ ಕೆಲವು ದೇಶಗಳಲ್ಲಿ ಮಕ್ಕಳು ಶಾಲೆಗೆ ಹೋಗದೆ ಮನೆಯಲ್ಲೇ ಕುಳಿತು ಕೆಲವು ಅಥವಾ ಎಲ್ಲ ವಿಷಯಗಳ ವಿದ್ಯಾಭ್ಯಾಸ ಮಾಡಬಹುದು. ಹೀಗೆ ತಮ್ಮ ಹೆತ್ತವರ ಅನುಮತಿ ಮತ್ತು ಸಹಕಾರದಿಂದ ಕಲಿತ ವಿದ್ಯಾರ್ಥಿಗಳು ಶಾಲೆ ಬಿಟ್ಟವರೆಂದು ಹೇಳಲಾಗದು.
ನೀವೀಗ ಶಾಲಾ ಶಿಕ್ಷಣವನ್ನಾಗಲಿ ಮನೆಯಲ್ಲೇ ವಿದ್ಯಾಭ್ಯಾಸ ಮಾಡುವುದನ್ನಾಗಲಿ ಅರ್ಧಕ್ಕೆ ನಿಲ್ಲಿಸಿಬಿಡುವ ಯೋಚನೆ ಮಾಡುತ್ತಿರುವಲ್ಲಿ ಕೆಳಗಿನ ಪ್ರಶ್ನೆಗಳನ್ನು ನಿಮ್ಮಲ್ಲೇ ಕೇಳಿಕೊಳ್ಳತಕ್ಕದ್ದು:
ಇದರ ಬಗ್ಗೆ ಯಾವ ಕಾನೂನಿದೆ? ಈ ಮುಂಚೆ ನೋಡಿದಂತೆ, ಒಬ್ಬ ವಿದ್ಯಾರ್ಥಿ ಎಷ್ಟು ಶಾಲಾ ವಿದ್ಯಾಭ್ಯಾಸ ಪಡೆಯಬೇಕೆಂಬುದರ ಕುರಿತು ಒಂದೊಂದು ದೇಶದಲ್ಲಿ ಒಂದೊಂದು ಕಾನೂನಿದೆ. ನೀವಿರುವ ದೇಶದ ಕಾನೂನಿಗನುಸಾರ ಕನಿಷ್ಠ ಪಕ್ಷ ಎಷ್ಟು ಶಾಲಾ ವಿದ್ಯಾಭ್ಯಾಸ ಪಡೆಯಬೇಕು? ಅದನ್ನು ನೀವು ಮುಗಿಸಿದ್ದೀರೋ? ಒಂದುವೇಳೆ ನೀವು ಅಲ್ಲಿಯ ವರೆಗೆ ಶಾಲಾ ವಿದ್ಯಾಭ್ಯಾಸ ಮಾಡದೆ ಅರ್ಧಕ್ಕೆ ನಿಲ್ಲಿಸಿದರೆ ‘ಮೇಲಧಿಕಾರಿಗಳಿಗೆ ಅಧೀನರಾಗಿರಿ’ ಎಂಬ ಬೈಬಲ್ ಸಲಹೆಯನ್ನು ಅಲಕ್ಷಿಸಿದಂತಾಗುತ್ತದೆ.—ರೋಮನ್ನರಿಗೆ 13:1.
ನನ್ನ ಶೈಕ್ಷಣಿಕ ಗುರಿಗಳನ್ನು ತಲಪಿದ್ದೇನೋ? ಯಾವ ಗುರಿಗಳನ್ನು ಸಾಧಿಸಲಿಕ್ಕಾಗಿ ವಿದ್ಯಾಭ್ಯಾಸ ಪಡೆಯುತ್ತಿದ್ದೀರಿ? ಅದರ ಬಗ್ಗೆ ಯೋಚಿಸಲಿಲ್ಲವೇ? ಯೋಚಿಸುವುದು ಒಳ್ಳೇದು! ಇಲ್ಲದಿದ್ದರೆ, ಎಲ್ಲಿಗೆ ಹೋಗಬೇಕೆಂದು ನಿರ್ಧರಿಸದೆ ರೈಲು ಹತ್ತಿರುವ ಪ್ರಯಾಣಿಕನಂತಾಗುವಿರಿ. ಆದ್ದರಿಂದ ನಿಮ್ಮ ಹೆತ್ತವರೊಂದಿಗೆ ಕುಳಿತು ಪುಟ 28ರಲ್ಲಿರುವ “ನನ್ನ ಶೈಕ್ಷಣಿಕ ಗುರಿಗಳು” ಎಂಬ ವರ್ಕ್ ಶೀಟನ್ನು ತುಂಬಿಸಿ. ಇದನ್ನು ಮಾಡುವುದರಿಂದ ನಿಮ್ಮ ಗುರಿಯತ್ತ ಸಾಗಲು ಮತ್ತು ಎಲ್ಲಿಯ ವರೆಗೆ ಶಾಲಾ ಶಿಕ್ಷಣವನ್ನು ಮಾಡಬೇಕೆಂಬದನ್ನು ಯೋಜಿಸುವಂತೆ ನಿಮಗೂ ನಿಮ್ಮ ಹೆತ್ತವರಿಗೂ ನೆರವಾಗುವುದು.—ಜ್ಞಾನೋಕ್ತಿ 21:5.
ನೀವು ಎಲ್ಲಿಯ ವರೆಗೆ ಕಲಿಯಬೇಕೆಂಬುದರ ಬಗ್ಗೆ ಶಿಕ್ಷಕರೂ ಇತರರೂ ಸಲಹೆಸೂಚನೆ ಕೊಡುವರೆಂಬುದರಲ್ಲಿ ಸಂಶಯವಿಲ್ಲ. ಆದರೆ ಅಂತಿಮ ತೀರ್ಮಾನ ತೆಗೆದುಕೊಳ್ಳುವ ಅಧಿಕಾರ ನಿಮ್ಮ ಹೆತ್ತವರಿಗಿದೆ. (ಜ್ಞಾನೋಕ್ತಿ 1:8; ಕೊಲೊಸ್ಸೆ 3:20) ಅವರೊಂದಿಗೆ ಸೇರಿ ನೀವೇ ಇಟ್ಟ ಶೈಕ್ಷಣಿಕ ಗುರಿಗಳನ್ನು ಮುಟ್ಟದೆ ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿಬಿಡುವುದು ವಿವೇಕದ ಕೆಲಸವಲ್ಲ.
ನಾನು ಯಾವ ಕಾರಣಕ್ಕಾಗಿ ಶಾಲೆ ಬಿಡುತ್ತಿದ್ದೇನೆ? ಆತ್ಮವಂಚನೆ ಮಾಡಿಕೊಳ್ಳಬೇಡಿ. (ಯೆರೆಮೀಯ 17:9) ತಾನು ಮಾಡುವ ಕೆಲಸ ಸ್ವಾರ್ಥಕ್ಕಾಗಿದ್ದರೂ ಅದಕ್ಕೆ ಒಳ್ಳೊಳ್ಳೆ ಕಾರಣಗಳನ್ನು ಕೊಡುವುದು ಮಾನವನ ಹುಟ್ಟುಗುಣ.—ಯಾಕೋಬ 1:22.
ಶಾಲಾ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಲು ನಿಮಗೆ ನಿಸ್ವಾರ್ಥ ಕಾರಣಗಳಿರುವಲ್ಲಿ ಅವನ್ನು ಕೆಳಗೆ ಬರೆಯಿರಿ.
....
ಶಾಲೆಯನ್ನು ಬಿಟ್ಟುಬಿಡಲು ನಿಮಗಿರುವ ಸ್ವಾರ್ಥ ಕಾರಣಗಳನ್ನು ಇಲ್ಲಿ ಬರೆಯಿರಿ.
....
ಯಾವ ನಿಸ್ವಾರ್ಥ ಕಾರಣಗಳನ್ನು ಬರೆದಿದ್ದೀರಿ? ಕುಟುಂಬಕ್ಕೆ ಆರ್ಥಿಕ ನೆರವನ್ನು ನೀಡುವ ಇಲ್ಲವೆ ಸ್ವಯಂಸೇವಕರಾಗುವ ಉದ್ದೇಶದಂಥ ಕಾರಣಗಳು ಅದರಲ್ಲಿ ಒಳಗೂಡಿರಬಹುದು. ಸ್ವಾರ್ಥ ಕಾರಣಗಳೆಂದರೆ, ಟೆಸ್ಟ್‌ಗಳಿಂದ ಇಲ್ಲವೆ ಹೋಮ್‌ವರ್ಕ್ ತಪ್ಪಿಸಿಕೊಳ್ಳುವುದು ಆಗಿರಬಹುದು. ಶಾಲೆ ಬಿಡುವ ನಿರ್ಧಾರಕ್ಕೆ ನಿಮ್ಮನ್ನು ಪ್ರೇರಿಸಿದ ಕಾರಣ ನಿಸ್ವಾರ್ಥವೋ ಸ್ವಾರ್ಥಪರವೋ? ಇದನ್ನೀಗ ಕಂಡುಹಿಡಿಯೋಣ.
ನೀವು ಬರೆದಿರುವ ಕಾರಣಗಳ ಮೇಲೆ ಪುನಃ ಕಣ್ಣು ಹಾಯಿಸಿ. ಅವುಗಳಿಗೆ 1-5ರ ಒಳಗಿನ ಸಂಖ್ಯೆ ಕೊಟ್ಟು ಪ್ರಾಮಾಣಿಕವಾಗಿ ಅಳೆಯಿರಿ. (1 ಸಂಖ್ಯೆ ಕಡಿಮೆ ಮಹತ್ವವನ್ನೂ, 5 ಅತಿ ಹೆಚ್ಚು ಮಹತ್ವವನ್ನೂ ಸೂಚಿಸಬೇಕು). ಸಮಸ್ಯೆಗಳಿಂದ ತಪ್ಪಿಸಿಕೊಳ್ಳಲಿಕ್ಕಾಗಿ ಮಾತ್ರ ನೀವು ಶಾಲೆ ಬಿಡುತ್ತಿರುವಲ್ಲಿ ನಿಮಗೆ ತೊಂದರೆಗಳಾಗುವ ಸಾಧ್ಯತೆ ಇದೆ.
ಶಾಲೆ ಬಿಡುವುದರಿಂದ ಆಗುವ ಕೆಡುಕುಗಳೇನು?
ಶಾಲಾ ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿಬಿಡುವುದು, ನೀವು ಇಳಿಯಬೇಕಾದ ನಿಲ್ದಾಣ ಬರುವ ಮುಂಚೆಯೇ ಚಲಿಸುತ್ತಿರುವ ರೈಲಿನಿಂದ ಹಾರಿದಂತೆ ಇದೆ. ಆ ರೈಲಿನಲ್ಲಿ ಸೌಕರ್ಯ ಸರಿಯಿರಲಿಕ್ಕಿಲ್ಲ, ಪ್ರಯಾಣಿಕರೂ ಸ್ನೇಹಮಯಿಗಳು ಆಗಿರಲಿಕ್ಕಿಲ್ಲ. ಹಾಗೆಂದು ರೈಲಿನಿಂದ ಹಾರಿದರೆ ತಲಪಬೇಕಾದ ಜಾಗಕ್ಕೆ ನೀವು
ಹೋಗಿ ಸೇರುವುದಿಲ್ಲ ಮಾತ್ರವಲ್ಲ ನಿಮಗೆ ಗಂಭೀರ ಗಾಯಗಳೂ ಆಗಬಹುದು. ಹಾಗೇ ನೀವು ಶಾಲೆ ಬಿಟ್ಟರೆ ನಿಮ್ಮ ಶೈಕ್ಷಣಿಕ ಗುರಿಗಳನ್ನು ಮುಟ್ಟಲಾರಿರಿ. ಅದರ ಜೊತೆಗೆ ನಿರೀಕ್ಷಿತ ಮತ್ತು ಅನಿರೀಕ್ಷಿತ ಸಮಸ್ಯೆಗಳನ್ನು ನೀವಾಗಿಯೇ ಮೈಮೇಲೆ ಎಳೆದುಕೊಂಡ ಹಾಗಾಗುವುದು. ಕೆಲವೊಂದು ಸಮಸ್ಯೆಗಳು ಇಲ್ಲಿವೆ:ನಿರೀಕ್ಷಿತ ಸಮಸ್ಯೆಗಳು ನಿಮಗೆ ಕೆಲಸ ಸಿಗುವುದು ಬಹಳ ಕಷ್ಟವಾಗಬಹುದು. ಒಂದುವೇಳೆ ಸಿಕ್ಕಿದರೂ ಶಾಲಾ ವಿದ್ಯಾಭ್ಯಾಸ ಮುಗಿಸಿರುತ್ತಿದ್ದರೆ ಸಂಪಾದಿಸಬಹುದಾದ ಸಂಬಳಕ್ಕಿಂತ ತೀರ ಕಡಿಮೆ ಸಂಬಳ ಸಿಗಬಹುದು. ಜೀವನದ ಮೂಲಭೂತ ಅವಶ್ಯಕತೆಗಳನ್ನು ಪೂರೈಸಲಿಕ್ಕೂ ನೀವು ಹೊತ್ತು ಮೀರಿ ದುಡಿಯಬೇಕಾಗಿ ಬರಬಹುದು. ಅದೂ ನಿಮ್ಮ ಶಾಲೆಯಲ್ಲಿರುವ ವಾತಾವರಣಕ್ಕಿಂತ ತುಂಬ ಕೆಟ್ಟದಾದ ಪರಿಸರದಲ್ಲಿ.
ಅನಿರೀಕ್ಷಿತ ಸಮಸ್ಯೆಗಳು ಸಂಶೋಧನೆ ತೋರಿಸುವಂತೆ ಶಾಲೆಯನ್ನು ಅರ್ಧಕ್ಕೆ ಬಿಟ್ಟವರ ಆರೋಗ್ಯ ಸಾಧಾರಣ ಮಟ್ಟದ್ದಾಗಿರುವ, ಚಿಕ್ಕ ಪ್ರಾಯದಲ್ಲೇ ಹೆತ್ತವರಾಗುವ, ತಪ್ಪುಕೆಲಸ ಮಾಡಿ ಜೈಲು ಸೇರುವ, ಸರಕಾರದಿಂದ ಪ್ರಾಯೋಜಿತವಾದ ಸವಲತ್ತುಗಳ ಮೇಲೆಯೇ ಅವಲಂಬಿಸಿ ಜೀವನ ನಡೆಸುವ ಸಾಧ್ಯತೆ ಹೆಚ್ಚಿರುತ್ತದೆ.
ಶಾಲಾ ವಿದ್ಯಾಭ್ಯಾಸವನ್ನು ಮುಗಿಸಿದರೆ ಈ ಸಮಸ್ಯೆಗಳಿರುವುದಿಲ್ಲ ಎಂಬ ಖಾತ್ರಿ ಇಲ್ಲ ನಿಜ. ಹಾಗಿದ್ದರೂ ಶಾಲೆಯನ್ನು ಅರ್ಧಕ್ಕೆ ಬಿಟ್ಟು ಸುಮ್ಮನೆ ನಿಮ್ಮ ಕಾಲಿಗೆ ನೀವೇ ಯಾಕೆ ಕೊಡಲಿ ಹಾಕಿಕೊಳ್ಳಬೇಕು?
ಶಾಲೆ ಬಿಡದೆ ಇರುವುದರ ಪ್ರಯೋಜನಗಳು
ಒಂದು ಟೆಸ್ಟ್‌ನಲ್ಲಿ ಫೇಲಾದಿರಿ ಅಥವಾ ಒಂದು ದಿನ ಶಾಲೆಯಲ್ಲಿ ಕಷ್ಟ ಆಯಿತು ಎಂಬ ಕಾರಣಕ್ಕಾಗಿ ಶಾಲೆ ಬಿಟ್ಟುಬಿಡೋಣ ಎಂದು ನಿಮಗನಿಸಬಹುದು. ನಿಮ್ಮ ಸದ್ಯದ ಸಮಸ್ಯೆಯೇ ದೊಡ್ಡದಾಗಿ ತೋರಿ ಭವಿಷ್ಯದ್ದನ್ನು ಮುಂದೆ ನೋಡಿದರಾಯಿತು ಎಂದು ಅನಿಸಬಹುದು. ಆದರೆ ಸುಲಭವೆಂದು ತೋರುವ ಈ ಮಾರ್ಗವನ್ನು ಆಯ್ದುಕೊಳ್ಳುವ ಮುಂಚೆ ಲೇಖನದ ಆರಂಭದಲ್ಲಿ ತಿಳಿಸಲಾದ ವಿದ್ಯಾರ್ಥಿಗಳ ಈ ಕೆಳಗಿನ ಹೇಳಿಕೆಗಳನ್ನು ಒಮ್ಮೆ ಪರಿಗಣಿಸಿ. ಅವರು ಶಾಲೆ ಬಿಡುವ ಬಗ್ಗೆ ಯೋಚಿಸಿದ್ದರೂ ಹಾಗೆ ಮಾಡದೆ ಮುಂದುವರಿಸಿದ್ದರಿಂದ ಅವರಿಗಾದ ಪ್ರಯೋಜನದ ಬಗ್ಗೆ ಓದಿ.
● “ನಾನು ತಾಳ್ಮೆ ಕಲಿತೆ, ಮನೋಬಲವೂ ಹೆಚ್ಚಾಗಿದೆ. ನಾನೇನು ಮಾಡುತ್ತಿದ್ದೇನೋ ಅದನ್ನು ಆನಂದಿಸಬೇಕಾದರೆ ನನ್ನ ಸ್ವಂತ ಮನೋಭಾವವನ್ನು ಸರಿಹೊಂದಿಸಬೇಕೆಂದು ಕಲಿತೆ. ಶಾಲಾ ಶಿಕ್ಷಣ ಮುಂದುವರಿಸಿದ್ದರಿಂದ ಚಿತ್ರಕಲೆಯಲ್ಲಿ ನನ್ನ ಕೌಶಲವನ್ನು ಹರಿತಗೊಳಿಸಿದ್ದೇನೆ. ಇದನ್ನು ಶಾಲಾ ಶಿಕ್ಷಣ ಮುಗಿದ ಮೇಲೆ ಬಳಸಿಕೊಳ್ಳುವೆ.”—ರೂಪಾಲಿ.
● “ನಾನು ಸ್ವಲ್ಪ ಕಷ್ಟಪಟ್ಟು ಓದಿದರೆ ನಾನಿಟ್ಟ ಗುರಿಗಳನ್ನು ಸಾಧಿಸಬಲ್ಲೆ ಎಂದು ನನಗೀಗ ಗೊತ್ತಾಗಿದೆ. ಈಗ ತಾಂತ್ರಿಕ ತರಬೇತಿಯ ಕೋರ್ಸ್ ಮಾಡುತ್ತಿದ್ದೇನೆ. ಅದು ನನಗಿಷ್ಟವಾದ ಪ್ರೆಸ್ ಮೆಕಾನಿಕ್ ಕೆಲಸಕ್ಕೆ ಸಹಾಯ ಮಾಡಲಿರುವುದರಿಂದ ಬಹಳ ಪ್ರಾಯೋಗಿಕವಾದದ್ದು.”—ಜಾನ್.
● “ಸಮಸ್ಯೆಗಳು ತರಗತಿ ಒಳಗೆ ಇರಲಿ ಬೇರೆಲ್ಲೇ ಬರಲಿ ಅವನ್ನು ನಿಭಾಯಿಸಲು ನಾನು ಶಾಲೆಯಿಂದ ಕಲಿತಿದ್ದೇನೆ. ಶಿಕ್ಷಣಕ್ಕೆ, ಸಮಾಜಕ್ಕೆ, ಜೀವನಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಕಲಿಯುವುದರಿಂದ ಪ್ರಬುದ್ಧಳಾಗಲು ನೆರವಾಗಿದೆ.”—ಸಂಧ್ಯಾ.
● “ಕೆಲಸದ ಸ್ಥಳದಲ್ಲಿ ಬರುವ ಸವಾಲುಗಳಿಗೆ ನನ್ನನ್ನು ಸಿದ್ಧಗೊಳಿಸಲು ಶಾಲೆ ಸಹಾಯ ಮಾಡಿದೆ. ಅಲ್ಲದೆ ಶಾಲೆಯಲ್ಲಿ ಎದುರಾದ ಎಷ್ಟೋ ಸನ್ನಿವೇಶಗಳು ನನ್ನ ಧಾರ್ಮಿಕ ನಂಬಿಕೆಗಳಿಗಿರುವ ಕಾರಣಗಳ ಬಗ್ಗೆ ಅಧ್ಯಯನ ಮಾಡುವಂತೆ ಮಾಡಿದವು. ಹೀಗೆ ನನ್ನ ಆಧ್ಯಾತ್ಮಿಕತೆ ಬಲಗೊಂಡಿದೆ.”—ರೋಸ್.
“ಆದಿಗಿಂತ ಅಂತ್ಯವು ಲೇಸು; ಹಮ್ಮುಗಾರನಿಗಿಂತ ತಾಳ್ಮೆಯುಳ್ಳವನು ಉತ್ತಮ” ಅಂದನು ಬುದ್ಧಿವಂತ ರಾಜ ಸೊಲೊಮೋನ. (ಪ್ರಸಂಗಿ 7:8) ಸಮಸ್ಯೆ ಬಂತೆಂದು ಶಾಲೆಯನ್ನು ಬಿಟ್ಟುಬಿಡುವ ಬದಲು ತಾಳ್ಮೆಯಿಂದ ಆ ಸಮಸ್ಯೆಗಳನ್ನು ಜಯಿಸಿ. ಹೀಗೆ ಮಾಡಿದರೆ ಅಂತ್ಯಫಲ ಒಳ್ಳೇದಾಗುವುದನ್ನು ನೀವೇ ನೋಡುವಿರಿ. (g10-E 11)
“ಯುವಜನರ ಪ್ರಶ್ನೆ” ಲೇಖನಮಾಲೆಯ ಹೆಚ್ಚಿನ ಲೇಖನಗಳು www.watchtower.org/ype ವೆಬ್‌ಸೈಟ್‌ನಲ್ಲಿವೆ
ಯೋಚಿಸಿ ನೋಡಿ
● ನಿಮ್ಮ ಶಾಲಾ ಸಮಯವನ್ನು ಸದುಪಯೋಗಿಸಲು ಅಲ್ಪಾವಧಿಯ ಶೈಕ್ಷಣಿಕ ಗುರಿಗಳು ಹೇಗೆ ನೆರವಾಗುವುವು?
● ಶಾಲಾ ಶಿಕ್ಷಣದ ನಂತರ ನೀವು ಯಾವ ರೀತಿಯ ಕೆಲಸವನ್ನು ಕೈಗೆತ್ತಿಕೊಳ್ಳಲು ಇಷ್ಟಪಡುತ್ತೀರೆಂಬದರ ಬಗ್ಗೆ ಈಗಲೇ ಸ್ವಲ್ಪ ಯೋಚಿಸುವುದು ಪ್ರಾಮುಖ್ಯವೇಕೆ?
[ಪುಟ 27ರಲ್ಲಿರುವ ಚೌಕ/ಚಿತ್ರಗಳು]
ನಿಮ್ಮ ಸಮಪ್ರಾಯದವರು ಏನನ್ನುತ್ತಾರೆ?
“ನನಗೆ ಪುಸ್ತಕ-ಪ್ರೇಮ ಹುಟ್ಟಿದ್ದು ಸ್ಕೂಲಲ್ಲೇ. ಒಬ್ಬ ವ್ಯಕ್ತಿಯ ಯೋಚನಾಲಹರಿ, ಭಾವನೆಗಳನ್ನು ಓದಿ ಅರ್ಥಮಾಡಿಕೊಳ್ಳುವುದು ಒಂದು ಅದ್ಭುತ ಸಂಗತಿ.”
“ಸಮಯವನ್ನು ನಿರ್ವಹಿಸುವ ವಿಷಯದಲ್ಲಿ ನನಗೆ ಸ್ವಲ್ಪ ಪ್ರಾಬ್ಲಮ್ ಇದೆ. ಸ್ಕೂಲಿಗೆ ಹೋಗದಿರುತ್ತಿದ್ದರೆ ನಾನು ಹೇಗಿರುತ್ತಿದ್ದೆನೋ? ನಿರ್ದಿಷ್ಟ ಕೆಲಸಗಳನ್ನು ನಿತ್ಯವೂ ತಪ್ಪದೆ ಮಾಡಲು, ಶೆಡ್ಯೂಲ್ ಪಾಲಿಸಲು, ಮುಖ್ಯ ಕೆಲಸಗಳನ್ನು ಮೊದಲು ಮಾಡಿಮುಗಿಸಲು ನನಗೆ ಸ್ಕೂಲ್ ಕಲಿಸುತ್ತಿದೆ.”
[ಚಿತ್ರಗಳು]
ಎಸ್ಮೆ
ಕ್ರಿಸ್ಟಫರ್
[ಪುಟ 28ರಲ್ಲಿರುವ ಚೌಕ]
ನನ್ನ ಶೈಕ್ಷಣಿಕ ಗುರಿಗಳು
ಒಂದು ಉದ್ಯೋಗ ಪಡೆದು ನಿಮ್ಮನ್ನೂ ನಿಮ್ಮ ಕುಟುಂಬವನ್ನೂ ನೋಡಿಕೊಳ್ಳಲು ನಿಮ್ಮನ್ನು ಸಿದ್ಧಪಡಿಸುವುದರಲ್ಲಿ ಶಿಕ್ಷಣ ಬಹುಮುಖ್ಯ ಪಾತ್ರ ವಹಿಸುತ್ತದೆ. (2 ಥೆಸಲೊನೀಕ 3:10, 12) ನೀವು ಯಾವ ರೀತಿಯ ಕೆಲಸ ಮಾಡಬೇಕೆಂದೂ ಅದಕ್ಕಾಗಿ ತಯಾರಿಸಲು ನಿಮ್ಮ ಶಾಲಾ ಸಮಯವನ್ನು ಹೇಗೆ ಸದುಪಯೋಗಿಸಿಕೊಳ್ಳಬೇಕೆಂದೂ ಯೋಚಿಸಿದ್ದೀರೋ? ನಿಮ್ಮ ಶಿಕ್ಷಣ ನಿಮ್ಮನ್ನು ಸರಿಯಾದ ದಿಕ್ಕಿನಲ್ಲಿ ನಡೆಸುತ್ತಿದೆಯೋ ಇಲ್ಲವೋ ಎಂಬುದನ್ನು ತಿಳಿಯಲು ನಿಮಗೆ ಕೆಳಗಿನ ಪ್ರಶ್ನೆಗಳು ಸಹಾಯ ಮಾಡುವವು:
ನನ್ನ ಸಾಮರ್ಥ್ಯಗಳೇನು? (ಉದಾ: ಜನರೊಂದಿಗೆ ಚೆನ್ನಾಗಿ ಬೆರೆಯುತ್ತೀರೋ? ಕರಕುಶಲ ಅಥವಾ ರಿಪೇರಿ ಮುಂತಾದ ಕೈಯಿಂದ ಮಾಡುವ ಕೆಲಸಗಳೆಂದರೆ ನಿಮಗೆ ತುಂಬ ಇಷ್ಟವೋ? ಸಮಸ್ಯೆಯನ್ನು ಕಂಡುಹಿಡಿದು ಪರಿಹರಿಸುವುದರಲ್ಲಿ ನಿಪುಣರೋ?)
....
ನನ್ನ ಸಾಮರ್ಥ್ಯಗಳನ್ನು ಬಳಸುವಂಥ ಯಾವ ಕೆಲಸಗಳನ್ನು ಮಾಡಬಲ್ಲೆ?
....
ನಾನು ವಾಸಿಸುತ್ತಿರುವ ಪ್ರದೇಶದಲ್ಲಿ ಯಾವ ಉದ್ಯೋಗಾವಕಾಶಗಳಿವೆ?
....
ಉದ್ಯೋಗಕ್ಕಾಗಿ ತಯಾರಾಗಲು ನಾನೀಗ ಯಾವ ಕೋರ್ಸ್‌ಗಳನ್ನು ತೆಗೆದುಕೊಳ್ಳುತ್ತಿದ್ದೇನೆ?
....
ನನ್ನ ಗುರಿಗಳನ್ನು ಹೆಚ್ಚು ಉತ್ತಮವಾಗಿ ಸಾಧಿಸಲು ಶಿಕ್ಷಣಕ್ಕೆ ಸಂಬಂಧಪಟ್ಟ ಯಾವ ಆಯ್ಕೆಗಳು ನನ್ನ ಮುಂದಿವೆ?
....
ನೆನಪಿಡಿ, ಮುಂದೆ ಉಪಯೋಗಕ್ಕೆ ಬರುವ ಶಿಕ್ಷಣ ಪಡೆಯುವುದಷ್ಟೇ ನಿಮ್ಮ ಗುರಿ. ಆದ್ದರಿಂದ ವಯಸ್ಕರ ಜವಾಬ್ದಾರಿಗಳಿಂದ ತಪ್ಪಿಸಿಕೊಳ್ಳುವ ಸಲುವಾಗಿ ಸದಾ ವಿದ್ಯಾರ್ಥಿಯಾಗಿಯೇ ಇದ್ದುಬಿಡಬೇಡಿ. ಹಾಗೆ ಮಾಡಿದರೆ ರೈಲಿನಿಂದ ಯಾವತ್ತೂ ಇಳಿಯದೆ ಅದರಲ್ಲೇ ಕುಳಿತುಕೊಳ್ಳುವ ಹಾಗಿರುವುದು.
[ಪುಟ 29ರಲ್ಲಿರುವ ಚೌಕ]
ಹೆತ್ತವರಿಗೊಂದು ಕಿವಿಮಾತು
“ನನ್ನ ಟೀಚರುಗಳು ಬೋರ್ ಹೊಡೆಸುತ್ತಾರೆ!” “ಒಂದು ರಾಶಿ ಹೋಮ್‌ವರ್ಕ್ ಕೊಡುತ್ತಾರೆ” “ಎಷ್ಟು ಕಷ್ಟಪಟ್ಟು ಓದಿದರೂ ಜಸ್ಟ್ ಪಾಸಾಗುತ್ತೇನೆ, ಆದ್ದರಿಂದ ಸುಮ್ಮನೆ ಯಾಕೆ ಒದ್ದಾಡಬೇಕು?” ಇಂಥೆಲ್ಲ ಹತಾಶೆಯಿಂದಾಗಿ ಕೆಲವು ಯುವಜನರು ತಮ್ಮ ಕಾಲ ಮೇಲೆ ನಿಲ್ಲಲು ಬೇಕಾದ ಕೌಶಲಗಳನ್ನು ಗಳಿಸಿಕೊಳ್ಳುವ ಮೊದಲೇ ಶಾಲೆ ಬಿಟ್ಟುಬಿಡಲು ಯೋಚಿಸುತ್ತಾರೆ. ನಿಮ್ಮ ಮಗನಿಗೊ ಮಗಳಿಗೊ ಈ ರೀತಿ ಅನಿಸಿದರೆ ನೀವೇನು ಮಾಡಬಲ್ಲಿರಿ?
ಶಿಕ್ಷಣದ ಕಡೆಗೆ ನಿಮ್ಮ ಸ್ವಂತ ಮನೋಭಾವವನ್ನು ಪರೀಕ್ಷಿಸಿಕೊಳ್ಳಿ. ನಿಮಗೆ ಶಾಲಾಜೀವನ ‘ಜೈಲುವಾಸ’ ಅಂತ ಅನಿಸಿತ್ತೊ? ಅಂದರೆ ಅದು ಮುಗಿಯುವ ವರೆಗೆ ಹೇಗಾದರೂ ದಿನ ತಳ್ಳಿ ನಿಮ್ಮ ಆಸಕ್ತಿಕರ ಗುರಿಗಳನ್ನು ಸಾಧಿಸುವ ದಿನಕ್ಕಾಗಿ ಕಾಯುತ್ತಿದ್ರೊ? ಹಾಗಿದ್ದರೆ, ನಿಮ್ಮ ಈ ಮನೋಭಾವವೇ ನಿಮ್ಮ ಮಕ್ಕಳಿಗೂ ಹತ್ತಿಕೊಳ್ಳಬಹುದು. ಆದರೆ ನಿಜ ಸಂಗತಿಯೇನೆಂದರೆ ಒಂದು ಒಳ್ಳೇ ಶಿಕ್ಷಣವು “ಪ್ರಾಯೋಗಿಕ ವಿವೇಕವನ್ನೂ ಯೋಚನಾ ಸಾಮರ್ಥ್ಯವನ್ನೂ” ಗಳಿಸಿಕೊಳ್ಳಲು ಮಕ್ಕಳಿಗೆ ನೆರವಾಗುತ್ತದೆ. ಈ ಗುಣಗಳು ಅವರು ಯಶಸ್ವೀ ವಯಸ್ಕರಾಗಲು ಅತ್ಯಗತ್ಯ.—ಜ್ಞಾನೋಕ್ತಿ 3:21, NW.
ಕಲಿಕೆಗೆ ಬೇಕಾದದ್ದನ್ನು ಒದಗಿಸಿ. ಒಳ್ಳೇ ಅಂಕಗಳನ್ನು ಪಡೆಯಲು ಸಾಧ್ಯವಿದ್ದರೂ ಅದನ್ನೀಗ ಪಡೆಯದಿರುವ ಮಕ್ಕಳಿಗೆ ಹೇಗೆ ಅಧ್ಯಯನ ಮಾಡಬೇಕೆಂದು ಗೊತ್ತಿರಲಿಕ್ಕಿಲ್ಲ. ಅಥವಾ ಅಧ್ಯಯನಕ್ಕೆ ಬೇಕಾದ ಸೂಕ್ತ ವಾತಾವರಣ ಅವರಿಗಿರಲಿಕ್ಕಿಲ್ಲ. ಕಲಿಕೆಗೆ ಅನುವು ಮಾಡಿಕೊಡಲು ನೀಟಾದ ಮೇಜು, ಸಾಕಷ್ಟು ಬೆಳಕು ಹಾಗೂ ಸಂಶೋಧನಾ ಸಾಮಾಗ್ರಿಗಳು ಇದ್ದರೆ ಒಳ್ಳೇದು. ನಿಮ್ಮ ಮಕ್ಕಳಿಗೆ ತರಬೇತಿ ನೀಡುವ ಮತ್ತು ಹೊಸ ವಿಚಾರಗಳ ಬಗ್ಗೆ ಪರ್ಯಾಲೋಚಿಸಲು ಬೇಕಾದ ಪರಿಸರವನ್ನು ಕಲ್ಪಿಸಿಕೊಡುವ ಮೂಲಕ ಅವರು ಶೈಕ್ಷಣಿಕ ಮತ್ತು ಆಧ್ಯಾತ್ಮಿಕ ಅಭಿವೃದ್ಧಿ ಮಾಡಲು ನೆರವಾಗಬಲ್ಲಿರಿ. —1 ತಿಮೊಥೆಯ 4:15.
ಆಸಕ್ತಿವಹಿಸಿ. ಅಧ್ಯಾಪಕರನ್ನು, ಸಲಹೆನೀಡುವವರನ್ನು ವೈರಿಗಳಂತೆ ಕಾಣಬೇಡಿ. ಅವರೊಂದಿಗೆ ಕೈಜೋಡಿಸಿ. ಅವರನ್ನು ಭೇಟಿಯಾಗಿ. ಅವರ ಹೆಸರು ತಿಳಿದುಕೊಂಡು ಪರಿಚಯ ಮಾಡಿಕೊಳ್ಳಿ. ನಿಮ್ಮ ಮಕ್ಕಳ ಗುರಿಗಳು ಮತ್ತು ಸಮಸ್ಯೆಗಳ ಬಗ್ಗೆ ಅವರೊಂದಿಗೆ ಮಾತಾಡಿ. ಒಳ್ಳೇ ಅಂಕಗಳನ್ನು ಪಡೆಯಲು ನಿಮ್ಮ ಮಗನಿಗೊ ಮಗಳಿಗೊ ಕಷ್ಟವಾಗುತ್ತಿರುವಲ್ಲಿ, ಅದಕ್ಕೆ ಕಾರಣವೇನೆಂದು ತಿಳಿಯಲು ಪ್ರಯತ್ನಿಸಿ. ಉದಾಹರಣೆಗೆ, ಉತ್ತಮ ಅಂಕಗಳನ್ನು ಪಡೆದರೆ ಇತರ ಮಕ್ಕಳು ದಬಾಯಿಸುವರೆಂದು ಹೆದರಿದ್ದಾರೋ? ಟೀಚರಿಂದ ಸಮಸ್ಯೆಯಾಗುತ್ತಿದೆಯೋ? ತೆಗೆದುಕೊಂಡ ಕೋರ್ಸ್ ಹೇಗಿದೆ? ಪಠ್ಯಕ್ರಮ ಅವರಲ್ಲಿರುವ ಬುದ್ಧಿಮತ್ತೆಯನ್ನು ಹರಿತಗೊಳಿಸುವಂತಿರಬೇಕು, ಹೊರೆಯಾಗಿರಬಾರದು. ಕಡಿಮೆ ಅಂಕಗಳಿಸಲು ಇನ್ನೊಂದು ಕಾರಣ ದೃಷ್ಟಿ ದೋಷ, ಕಲಿಕಾ ವಿಕಲತೆಯಂಥ ಆರೋಗ್ಯ ಸಮಸ್ಯೆಗಳೂ ಆಗಿರಬಹುದು.
ಮಕ್ಕಳ ಶೈಕ್ಷಣಿಕ ಹಾಗೂ ಆಧ್ಯಾತ್ಮಿಕ ತರಬೇತಿಯಲ್ಲಿ ನೀವೆಷ್ಟು ಹೆಚ್ಚು ಆಸಕ್ತಿ ವಹಿಸುತ್ತೀರೋ ಅವರು ಯಶಗಳಿಸುವ ಸಾಧ್ಯತೆಯೂ ಅಷ್ಟೇ ಹೆಚ್ಚು.—ಜ್ಞಾನೋಕ್ತಿ 22:6.
[ಪುಟ 29ರಲ್ಲಿರುವ ಚಿತ್ರ]
ಶಾಲೆ ಬಿಡುವುದು ನೀವು ಇಳಿಯುವ ನಿಲ್ದಾಣ ಬರುವ ಮುಂಚೆಯೇ ಚಲಿಸುತ್ತಿರುವ ರೈಲಿನಿಂದ ಹಾರಿದಂತೆ ಇರುತ್ತದೆ