ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಿಜ್ಞಾನ ಮತ್ತು ಬೈಬಲ್‌ ಮಧ್ಯೆ ಹೊಂದಾಣಿಕೆ ಇದೆಯೇ?

ವಿಜ್ಞಾನ ಮತ್ತು ಬೈಬಲ್‌ ಮಧ್ಯೆ ಹೊಂದಾಣಿಕೆ ಇದೆಯೇ?

ಬೈಬಲಿನ ದೃಷ್ಟಿಕೋನ

ವಿಜ್ಞಾನ ಮತ್ತು ಬೈಬಲ್‌ ಮಧ್ಯೆ ಹೊಂದಾಣಿಕೆ ಇದೆಯೇ?

“ಒಮ್ಮೊಮ್ಮೆ ಒಂದು ಹೊಸ ವಿಷಯವನ್ನು ಕಂಡುಹಿಡಿದು ‘ಓ . . . ದೇವರು ಇದನ್ನು ಮಾಡಿದ್ದು ಹೀಗೆ!’ ಎಂದು ನನ್ನಲ್ಲಿ ಅಂದುಕೊಳ್ಳುವಾಗಲೇ ನನ್ನ ವೈಜ್ಞಾನಿಕ ಕ್ಷೇತ್ರ ಅರ್ಥವತ್ತಾದದ್ದೂ ಸಂತಸದಾಯಕವೂ ಆಗುತ್ತದೆ.” —ಹೆನ್ರಿ ಶಾಫರ್‌, ರಸಾಯನಶಾಸ್ತ್ರ ಪ್ರೊಫೆಸರ್‌.

ವಿಜ್ಞಾನವು ನಮಗೆ ವಿಶ್ವವನ್ನೂ ಅದರಲ್ಲಿರುವ ವಿಷಯಗಳನ್ನೂ ಅರ್ಥಮಾಡಿಕೊಳ್ಳಲು ತುಂಬಾ ಸಹಾಯಮಾಡಿ, ಅದರಲ್ಲಿರುವ ಕ್ರಮಬದ್ಧತೆ, ನಿಖರತೆ ಮತ್ತು ಸಂಕೀರ್ಣತೆಯನ್ನು ತೋರಿಸಿಕೊಡುತ್ತದೆ. ಇದರಿಂದಾಗಿ ಅನೇಕರು ಅಪಾರ ಬುದ್ಧಿಮತ್ತೆ, ಶಕ್ತಿಯುಳ್ಳ ದೇವರೊಬ್ಬನಿದ್ದಾನೆಂದು ಗ್ರಹಿಸುತ್ತಾರೆ. ಅವರ ದೃಷ್ಟಿಯಲ್ಲಿ ವಿಜ್ಞಾನವು ವಿಶ್ವ ಮತ್ತು ಅದರಲ್ಲಿರುವವುಗಳ ಬಗ್ಗೆ ಬರೇ ವಿವರಗಳನ್ನು ಮಾತ್ರವಲ್ಲ ದೇವರ ವ್ಯಕ್ತಿತ್ವವನ್ನೂ ಪ್ರಕಟಪಡಿಸುತ್ತದೆ.

ಮೇಲಿನ ದೃಷ್ಟಿಕೋನಕ್ಕೆ ಬೈಬಲ್‌ ಹೇರಳ ಆಧಾರ ಕೊಡುತ್ತದೆ. ರೋಮನ್ನರಿಗೆ 1:20 ಹೇಳುವುದು: “[ದೇವರ] ಅದೃಶ್ಯ ಗುಣಗಳು ಲೋಕವು ಸೃಷ್ಟಿಯಾದಂದಿನಿಂದ ಸ್ಪಷ್ಟವಾಗಿ ಕಂಡುಬರುತ್ತವೆ. ಏಕೆಂದರೆ ಸೃಷ್ಟಿಮಾಡಲ್ಪಟ್ಟವುಗಳಿಂದ ಆತನ ಅನಂತ ಶಕ್ತಿ ಮತ್ತು ದೇವತ್ವವನ್ನು ಸಹ ಗ್ರಹಿಸಲಾಗುತ್ತದೆ.” ಅಂತೆಯೇ ಕೀರ್ತನೆ 19:1, 2 ಹೇಳುವುದು: “ಆಕಾಶವು ದೇವರ ಪ್ರಭಾವವನ್ನು ಪ್ರಚುರಪಡಿಸುತ್ತದೆ; ಗಗನವು ಆತನ ಕೈಕೆಲಸವನ್ನು ತಿಳಿಸುತ್ತದೆ. ದಿನವು ದಿನಕ್ಕೆ ಪ್ರಕಟಿಸುತ್ತಿರುವದು; ರಾತ್ರಿಯು ರಾತ್ರಿಗೆ ಅರುಹುತ್ತಿರುವದು.” ಈ ಎಲ್ಲಾ ಅದ್ಭುತಗಳಿದ್ದರೂ ವಿಶ್ವವು ನಮ್ಮ ನಿರ್ಮಾಣಿಕನ ಬಗ್ಗೆ ತಿಳಿಸುವುದು ಕೆಲವೇ ವಿಷಯಗಳನ್ನು.

ವಿಜ್ಞಾನಕ್ಕಿರುವ ಇತಿಮಿತಿಗಳು

ದೇವರ ಕುರಿತ ಎಷ್ಟೋ ಸತ್ಯಗಳನ್ನು ವಿಜ್ಞಾನದಿಂದ ಕಲಿಯಸಾಧ್ಯವಿಲ್ಲ. ಉದಾಹರಣೆಗೆ, ಒಬ್ಬ ವಿಜ್ಞಾನಿ ಚಾಕಲೇಟ್‌ ಕೇಕ್‌ನಲ್ಲಿರುವ ಒಂದೊಂದು ಅಣುವನ್ನೂ ವರ್ಣಿಸಶಕ್ತನು. ಆದರೆ ಅವನ ವಿಶ್ಲೇಷಣೆಯು ಆ ಕೇಕ್‌ ಯಾಕಾಗಿ, ಯಾರಿಗಾಗಿ ತಯಾರಿಸಲಾಗಿದೆ ಎಂದು ತಿಳಿಯಪಡಿಸುವುದೋ? ಅನೇಕರು ಹೆಚ್ಚು ಮಹತ್ವವೆಂದೆಣಿಸುವ ಇಂಥ ಪ್ರಶ್ನೆಗಳಿಗೆ ಉತ್ತರ ತಿಳಿಯಬೇಕಾದರೆ ಕೇಕನ್ನು ತಯಾರಿಸಿದ ವ್ಯಕ್ತಿಯನ್ನೇ ವಿಜ್ಞಾನಿ ಕೇಳಬೇಕು.

ಅಂತೆಯೇ ವಿಜ್ಞಾನ “ನಿಜಾಂಶಭರಿತ ಸಾಕಷ್ಟು ಮಾಹಿತಿ ಕೊಡುತ್ತದೆ. ಆದರೆ ನಮಗೆ ಮುಖ್ಯವಾಗಿ ಬೇಕಾಗಿರುವ ಮಾಹಿತಿಯನ್ನು ಅದು ಕೊಡುವುದಿಲ್ಲ.” ಈ ಮಾಹಿತಿಯಲ್ಲಿ “ದೇವರು ಮತ್ತು ಆತನ ಅನಂತತೆ” ಎಂಬಂಥ ವಿಷಯಗಳು ಸೇರಿವೆ ಎಂದು ಬರೆದರು ಆಸ್ಟ್ರಿಯದ ಭೌತವಿಜ್ಞಾನಿ ಹಾಗೂ ನೊಬೆಲ್‌ ಪ್ರಶಸ್ತಿ ವಿಜೇತರಾದ ಇರ್ವಿನ್‌ ಸ್ಕ್ರೋಡಿಂಗರ್‌. ಉದಾಹರಣೆಗೆ, ದೇವರು ಮಾತ್ರವೇ ಕೆಳಗಿನ ಪ್ರಶ್ನೆಗಳನ್ನು ಉತ್ತರಿಸಶಕ್ತನು: ಈ ವಿಶ್ವ ಯಾಕಿದೆ? ನಮ್ಮ ಗ್ರಹದಲ್ಲಿ ಬುದ್ಧಿಜೀವಿಗಳಾದ ಮನುಷ್ಯರು ಸೇರಿದಂತೆ ಅಪಾರ ಜೀವಸಂಕುಲ ಏಕಿದೆ? ದೇವರು ಸರ್ವಶಕ್ತನಾಗಿದ್ದರೆ ಲೋಕದಲ್ಲಿ ದುಷ್ಟತನ, ನೋವುನರಳಾಟವನ್ನು ಯಾಕೆ ಅನುಮತಿಸಿದ್ದಾನೆ? ಸತ್ತವರಿಗೆ ಏನಾದರೂ ನಿರೀಕ್ಷೆ ಇದೆಯೇ?

ಈ ಪ್ರಶ್ನೆಗಳನ್ನು ದೇವರು ಉತ್ತರಿಸಿದ್ದಾನೋ? ಹೌದು, ಉತ್ತರಗಳನ್ನು ಆತನು ಬೈಬಲಿನಲ್ಲಿ ಕೊಟ್ಟಿರುತ್ತಾನೆ. (2 ತಿಮೊಥೆಯ 3:16) ‘ಆದರೆ ಬೈಬಲು ನಿಜವಾಗಿ ದೇವರ ಗ್ರಂಥವೆಂದು ನಾನು ಹೇಗೆ ನಂಬಲಿ?’ ಎಂದು ನೀವು ಕೇಳಬಹುದು. ದೇವರು ನಿರ್ಮಿಸಿದ ವಿಷಯಗಳು ಮತ್ತು ಆತನೇ ಬೈಬಲಿನಲ್ಲಿ ಬರೆಸಿರುವ ವಿಷಯಗಳು ಒಂದಕ್ಕೊಂದು ವಿರುದ್ಧವಾಗಿರಲು ಸಾಧ್ಯವಿಲ್ಲ. ಹೀಗಿರಲಾಗಿ ನಮ್ಮ ಸುತ್ತಲಿನ ವಿಶ್ವದ ಬಗ್ಗೆ ಬೈಬಲ್‌ ಹೇಳುವ ಸಂಗತಿಗಳು ವೈಜ್ಞಾನಿಕ ಸತ್ಯಗಳೊಂದಿಗೆ ಹೊಂದಿಕೆಯಲ್ಲಿರಲೇಬೇಕು. ಬೈಬಲ್‌ ಮತ್ತು ವಿಜ್ಞಾನದ ಮಧ್ಯೆ ಅಂಥ ಹೊಂದಾಣಿಕೆ ಇದೆಯೋ? ಕೆಲವು ಉದಾಹರಣೆಗಳನ್ನು ನೋಡೋಣ.

ವಿಜ್ಞಾನ ಕಂಡುಹಿಡಿಯುವುದಕ್ಕೂ ಮುಂಚೆ

ಬೈಬಲ್‌ ಬರೆಯಲ್ಪಡುತ್ತಿದ್ದ ಸಮಯದಲ್ಲಿ ಜನರು ಏನು ನಂಬುತ್ತಿದ್ದರೆಂದರೆ ಈ ಲೋಕ ಬೇರೆಬೇರೆ ದೇವದೇವತೆಗಳ ನೆಲೆಬೀಡು ಹಾಗೂ ಈ ದೇವತೆಗಳೇ ಸೂರ್ಯ, ಚಂದ್ರ, ಹವಾಮಾನ, ಭೂಮಿಯ ಫಲವತ್ತತೆ ಇತ್ಯಾದಿಗಳನ್ನು ನಿಯಂತ್ರಿಸುತ್ತಾರೆ ಹೊರತು ಪ್ರಕೃತಿ ನಿಯಮಗಳಲ್ಲ. ಆದರೆ ದೇವರ ಪ್ರಾಚೀನ ಹೀಬ್ರು ಪ್ರವಾದಿಗಳು ಹಾಗೆ ನಂಬುತ್ತಿರಲಿಲ್ಲ. ಯೆಹೋವ ದೇವರು ವಿಶ್ವವನ್ನೂ ಅದರಲ್ಲಿರುವುದನ್ನೂ ನೇರವಾಗಿ ನಿಯಂತ್ರಿಸಶಕ್ತನೆಂದೂ ಅದನ್ನು ಕೆಲವು ಸಂದರ್ಭಗಳಲ್ಲಿ ಮಾಡಿದ್ದನೆಂದೂ ಅವರಿಗೆ ಗೊತ್ತಿತ್ತು ನಿಶ್ಚಯ. (ಯೆಹೋಶುವ 10:12-14; 2 ಅರಸುಗಳು 20:9-11) ಆದರೆ, ದೇವರ ಪ್ರವಾದಿಗಳು “[ಪೌರಾಣಿಕ ದೇವದೇವತೆಗಳು] ಈ ವಿಶ್ವವನ್ನು ನಿಯಂತ್ರಿಸುತ್ತಿವೆ ಎಂಬ ನಂಬಿಕೆಯನ್ನು ತೊರೆದುಬಿಡುವ ಅಗತ್ಯವೇ ಇರಲಿಲ್ಲ. ಯಾಕೆಂದರೆ ಅವರೆಂದೂ ಆ ದೇವತೆಗಳನ್ನು ನಂಬಿಯೇ ಇರಲಿಲ್ಲ. ಅವರನ್ನು ಆ ಮೂಢನಂಬಿಕೆಯಿಂದ ಕಾಪಾಡಿದ್ದು ಭೂಮ್ಯಾಕಾಶಗಳ ನಿರ್ಮಾಣಿಕನಾದ ಒಬ್ಬನೇ ಸತ್ಯ ದೇವರಿದ್ದಾನೆಂಬ ನಂಬಿಕೆಯೇ” ಎನ್ನುತ್ತಾರೆ ಇಂಗ್ಲೆಂಡಿನ ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದಲ್ಲಿ ಗಣಿತ ಪ್ರೊಫೆಸರರಾಗಿರುವ ಜಾನ್‌ ಲೆನಕ್ಸ್‌.

ಈ ನಂಬಿಕೆ ಅವರನ್ನು ಮೂಢನಂಬಿಕೆಯಿಂದ ಹೇಗೆ ಕಾಪಾಡಿತು? ಒಂದನೇದಾಗಿ, ವಿಶ್ವವನ್ನು ನಿಖರ ನಿಯಮಗಳ ಅಂದರೆ ಕಟ್ಟಳೆಗಳ ಮೂಲಕ ನಿಯಂತ್ರಿಸುತ್ತೇನೆಂದು ಸತ್ಯ ದೇವರು ಅವರಿಗೆ ಪ್ರಕಟಿಸಿದನು. ಉದಾಹರಣೆಗೆ, 3,500ಕ್ಕಿಂತಲೂ ಹೆಚ್ಚು ವರ್ಷಗಳ ಹಿಂದೆ ಯೆಹೋವ ದೇವರು ತನ್ನ ಭಕ್ತ ಯೋಬನಿಗೆ “ಖಗೋಲದ ಕಟ್ಟಳೆಗಳನ್ನು ತಿಳಿದುಕೊಂಡಿದ್ದೀಯೋ?” ಎಂದು ಕೇಳಿದನು. (ಯೋಬ 38:33) ಪ್ರವಾದಿ ಯೆರೆಮೀಯನು ಕ್ರಿ.ಪೂ. 7ನೇ ಶತಮಾನದಲ್ಲಿ “ಭೂಮ್ಯಾಕಾಶಗಳ ಕಟ್ಟಳೆಗಳ” ಬಗ್ಗೆ ಬರೆದಿದ್ದನು.—ಯೆರೆಮೀಯ 33:25.

ಆದ್ದರಿಂದ, ಪ್ರಾಚೀನ ಕಾಲದಲ್ಲಿ ಜೀವಿಸಿದ ಮತ್ತು ಬೈಬಲ್‌ ಪ್ರವಾದಿಗಳ ಬರಹಗಳ ಮೇಲೆ ನಂಬಿಕೆಯಿಟ್ಟಿದ್ದ ಎಲ್ಲ ಜನರಿಗೆ ಈ ವಿಶ್ವವನ್ನು ಪೌರಾಣಿಕ, ಚಂಚಲಚಿತ್ತದ ದೇವತೆಗಳು ನಿಯಂತ್ರಿಸುವುದಿಲ್ಲ ಬದಲಿಗೆ ಮನುಷ್ಯರು ಅಧ್ಯಯನ ಮಾಡಿ ಅರ್ಥಮಾಡಿಕೊಳ್ಳಬಲ್ಲ ನಿಯಮಗಳು ನಿಯಂತ್ರಿಸುತ್ತವೆ ಎಂದು ತಿಳಿದಿತ್ತು. ಹಾಗಾಗಿ ದೇವಭಯವಿದ್ದ ಆ ಜನರು ಸೃಷ್ಟಿವಸ್ತುಗಳಾದ ಸೂರ್ಯ, ಚಂದ್ರ, ನಕ್ಷತ್ರಗಳನ್ನು ಪೂಜಿಸುತ್ತಿರಲೂ ಇಲ್ಲ ಅವುಗಳ ಬಗ್ಗೆ ಮೂಢನಂಬಿಕೆಯೂ ಅವರಲ್ಲಿರಲಿಲ್ಲ. (ಧರ್ಮೋಪದೇಶಕಾಂಡ 4:15-19) ಬದಲಾಗಿ ಅವರು ದೇವರ ಸೃಷ್ಟಿಯನ್ನು ಆತನ ವಿವೇಕ, ಶಕ್ತಿ ಮತ್ತು ಇತರ ಗುಣಗಳನ್ನು ತಿಳಿಯಪಡಿಸುವ ಅಧ್ಯಯನ ವಿಷಯವಾಗಿ ಕಂಡರು.—ಕೀರ್ತನೆ 8:3-9; ಜ್ಞಾನೋಕ್ತಿ 3:19, 20.

ಇಂದಿನ ಅನೇಕ ವಿಜ್ಞಾನಿಗಳಂತೆ ಪ್ರಾಚೀನ ಹೀಬ್ರು ಜನರು ಕೂಡ ವಿಶ್ವಕ್ಕೆ ಆರಂಭ ಇದೆಯೆಂದು ನಂಬಿದ್ದರು. “ಆದಿಯಲ್ಲಿ ದೇವರು ಆಕಾಶವನ್ನೂ ಭೂಮಿಯನ್ನೂ ಉಂಟುಮಾಡಿದನು” ಎನ್ನುತ್ತದೆ ಆದಿಕಾಂಡ 1:1. ಅಲ್ಲದೆ ಸುಮಾರು 3,500 ವರ್ಷಗಳ ಹಿಂದೆ ದೇವರು ತನ್ನ ಭಕ್ತನಾದ ಯೋಬನಿಗೆ ಭೂಮಿ ಅಂತರಿಕ್ಷದಲ್ಲಿ ‘ಯಾವ ಆಧಾರವೂ ಇಲ್ಲದೆ ತೂಗುತ್ತಿದೆ’ ಎಂದು ತಿಳಿಸಿದನು. (ಯೋಬ 26:7) ಕೊನೆಗೆ 2,500ಕ್ಕಿಂತಲೂ ಹೆಚ್ಚು ವರ್ಷಗಳ ಹಿಂದೆ ಪ್ರವಾದಿ ಯೆಶಾಯನು ಭೂಮಿಯನ್ನು ಮಂಡಲ ಅಥವಾ ವೃತ್ತ ಎಂದನು.—ಯೆಶಾಯ 40:22.

ಹೌದು, ವಿಶ್ವದ ಬಗ್ಗೆ ವಿಜ್ಞಾನ ತಿಳಿಸುವ ಸತ್ಯಗಳಿಗೂ ಬೈಬಲಿಗೂ ಹೊಂದಾಣಿಕೆಯಿದೆ. ನಿಜವೇನೆಂದರೆ, ಈ ಎರಡು ಅಧ್ಯಯನ ಕ್ಷೇತ್ರಗಳಲ್ಲಿ ಹೊಂದಾಣಿಕೆಗಿಂತಲೂ ಹೆಚ್ಚಾಗಿ ಅವು ಅಂದವಾದ ಪೂರಕವೂ ಆಗಿವೆ. ಇವುಗಳಲ್ಲಿ ಒಂದನ್ನು ನಿರ್ಲಕ್ಷಿಸುವುದೂ ದೇವರ ಕುರಿತು ತಿಳಿಯುವುದನ್ನು ನಿರ್ಲಕ್ಷಿಸುವುದಕ್ಕೆ ಸಮಾನ.—ಕೀರ್ತನೆ 119:105; ಯೆಶಾಯ 40:26. (g11-E 02)

ಈ ಬಗ್ಗೆ ಯೋಚಿಸಿದ್ದೀರೋ?

● ಸೃಷ್ಟಿ ದೇವರ ಬಗ್ಗೆ ಏನು ತಿಳಿಸುತ್ತದೆ?—ರೋಮನ್ನರಿಗೆ 1:20.

● ದೇವರ ಕುರಿತ ಯಾವ ಸತ್ಯಗಳನ್ನು ವಿಜ್ಞಾನದಿಂದ ಕಲಿಯಸಾಧ್ಯವಿಲ್ಲ?—2 ತಿಮೊಥೆಯ 3:16.

● ಸತ್ಯ ದೇವರ ಪ್ರಾಚೀನಕಾಲದ ಪ್ರವಾದಿಗಳಿಗೆ ಸೃಷ್ಟಿಯ ಬಗ್ಗೆ ಮೂಢನಂಬಿಕೆಗಳಿರಲಿಲ್ಲವೇಕೆ?—ಯೆರೆಮೀಯ 33:25.

[ಪುಟ 19ರಲ್ಲಿರುವ ಸಂಕ್ಷಿಪ್ತ ವಿವರಣೆ]

ನಿಖರ ನಿಯಮಗಳು—‘ಭೂಮ್ಯಾಕಾಶಗಳ ಕಟ್ಟಳೆಗಳು’ ವಿಶ್ವವನ್ನು ನಿಯಂತ್ರಿಸುತ್ತಿವೆ.—ಯೆರೆಮೀಯ 33:25