ನಾನ್ಯಾರು?
ಯುವಜನರ ಪ್ರಶ್ನೆ
ನಾನ್ಯಾರು?
ಬ್ರಾಡ್ ಬರುತ್ತಿರುವುದನ್ನು ಮೈಕಲ್ ನೋಡಿ, ಈಗೇನಾಗುವುದೋ ಎಂದು ಭಯಪಡುತ್ತಾನೆ. “ಹೇ ಮೈಕಿ, ಇದನ್ನು ಸೇದಿ ನೋಡು!” ಎನ್ನುತ್ತಾ ಕೈ ಮುಂದೆ ಚಾಚುತ್ತಾನೆ ಬ್ರಾಡ್. ಬ್ರಾಡ್ ಕೈತೆರೆದಾಗ ಮೈಕಲ್ ಏನು ನೆನಸಿದ್ದನೊ ಅದನ್ನೇ ಅಂದರೆ ಮಾರಿವಾನ ಸಿಗರೇಟನ್ನು ನೋಡುತ್ತಾನೆ. ಅದನ್ನು ತೆಗೆದುಕೊಳ್ಳಲು ಅವನಿಗೆ ಮನಸ್ಸಿಲ್ಲದಿದ್ದರೂ ತನ್ನ ಸಮವಯಸ್ಕರ ಮುಂದೆ ಹೇಡಿಯಾಗಲೂ ಅವನಿಗೆ ಇಷ್ಟವಿಲ್ಲ. ಹಾಗಾಗಿ ಮೆಲ್ಲನೆ “ಇನ್ನೊಮ್ಮೆ ಯಾವಾಗಲಾದರೂ ನೋಡೋಣ. . . . ಆಯ್ತಾ?” ಎಂದು ಹೇಳುತ್ತಾನೆ.
ಬ್ರಾಡ್ ಬರುತ್ತಿರುವುದನ್ನು ನೋಡಿದ ಜೆಸ್ಸಿಕಳಾದರೋ ಆಗಲೇ ಸಂಭವಿಸಲಿಕ್ಕಿದ್ದ ವಿಷಯಕ್ಕಾಗಿ ಸಿದ್ಧಳಾಗಿದ್ದಾಳೆ. “ಹೇ ಜೆಸ್, ಇದನ್ನು ಸೇದಿ ನೋಡು!” ಎಂದನ್ನುತ್ತಾನೆ ಬ್ರಾಡ್. ಬ್ರಾಡ್ ಕೈತೆರೆದಾಗ ಜೆಸ್ಸಿಕ ಏನು ನೆನಸಿದ್ದಳೊ ಅದನ್ನೇ ಅಂದರೆ ಮಾರಿವಾನ ಸಿಗರೇಟನ್ನು ನೋಡುತ್ತಾಳೆ. ದೃಢಸಂಕಲ್ಪದಿಂದ “ಬೇಡ, ಥ್ಯಾಂಕ್ಸ್,” ಎಂದನ್ನುತ್ತಾಳೆ ಜೆಸ್ಸಿಕ. “ಮಾರಿವಾನ ಸೇದುವುದು ಆರೋಗ್ಯಕ್ಕೆ ಹಾನಿಕರ ಆದ್ದರಿಂದ ನಾನದನ್ನು ಸೇದಲ್ಲ. ಅಲ್ಲದೆ, ಬ್ರಾಡ್, ನಿನ್ನಂಥ ಜಾಣ ಸಿಗರೇಟ್ ಸೇದುತ್ತಾನಂತ ನಾನು ನೆನಸಿರಲಿಲ್ಲ!”
ಮೇಲಿನ ಸನ್ನಿವೇಶಗಳಲ್ಲಿ ಜೆಸ್ಸಿಕ ಒತ್ತಡವನ್ನು ಪ್ರತಿರೋಧಿಸಲು ಹೆಚ್ಚು ಶಕ್ತಳಾದದ್ದು ಹೇಗೆ? ಹೇಗಂದರೆ ಮೈಕಲ್‌ನಲ್ಲಿ ಇಲ್ಲದಿರುವಂಥ ಒಂದು ವಿಷಯ ಆಕೆಯಲ್ಲಿದೆ. ಅದೇನು ಎಂದು ನಿಮಗೆ ತಿಳಿದಿದೆಯೋ? ಅದು ಒಂದು ಗುರುತು. ಹೆಸರು ಮತ್ತು ಫೋಟೋ ಇರುವ ಗುರುತಿನ ಚೀಟಿ ಅದಲ್ಲ. ಬದಲಾಗಿ, ನೀವ್ಯಾರು ಮತ್ತು ನಿಮ್ಮ ನಿಲುವೇನು ಎನ್ನುವುದನ್ನು ಸ್ವತಃ ನಿಮಗೆ ತಿಳಿಸುವ ಆಂತರಿಕ ಪ್ರಜ್ಞೆಯೇ ಆ ಗುರುತು. ಆ ಜ್ಞಾನದಿಂದ ಸನ್ನದ್ಧರಾಗಿ ನೀವು, ತಪ್ಪನ್ನು ಮಾಡುವ ಪ್ರಲೋಭನೆಗಳು ಬಂದಾಗ ಅವುಗಳನ್ನು ನೇರವಾಗಿ ನಿರಾಕರಿಸುವಿರಿ. ಹೀಗೆ ನಿಮ್ಮ ಜೀವನವನ್ನು ಇತರರು ನಿಯಂತ್ರಿಸುವಂತೆ ಬಿಡುವ ಬದಲಾಗಿ ನೀವೇ ನಿಯಂತ್ರಿಸುವಿರಿ. ಅಂಥ ಆತ್ಮವಿಶ್ವಾಸವನ್ನು ಹೇಗೆ ಬೆಳೆಸಿಕೊಳ್ಳಬಲ್ಲಿರಿ? ಮೊದಲಾಗಿ ಕೆಳಗಿನ ಪ್ರಶ್ನೆಗಳನ್ನು ಉತ್ತರಿಸುವುದು ಉತ್ತಮ.
1 ನನ್ನಲ್ಲಿರುವ ಶಕ್ತಿಸಾಮರ್ಥ್ಯಗಳು ಯಾವುವು?
ತಿಳಿಯುವ ಮಹತ್ವ: ನಿಮ್ಮಲ್ಲಿರುವ ಸಾಮರ್ಥ್ಯಗಳು ಮತ್ತು ಒಳ್ಳೇ ಗುಣಗಳನ್ನು ತಿಳಿದಿರುವುದು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.
ಗಮನಿಸಿ: ಪ್ರತಿಯೊಬ್ಬರಲ್ಲೂ ಬೇರೆ ಬೇರೆ ಪ್ರತಿಭೆ, ಕೌಶಲಗಳಿವೆ. ಉದಾಹರಣೆಗೆ, ಕೆಲವರು ಕಲೆ ಇಲ್ಲವೇ ಸಂಗೀತದಲ್ಲಿ ಪ್ರತಿಭೆಯುಳ್ಳವರು, ಇನ್ನಿತರರು ಕ್ರೀಡೆಯಲ್ಲಿ ಉತ್ತಮರು. ರಾಕೆಲ್ ಎಂಬಾಕೆ ಕಾರ್ ರಿಪೇರಿಯಲ್ಲಿ ತುಂಬ ಕುಶಲಳು. * ಆಕೆ ಹೇಳುವುದು, “ನಾನು ಮೆಕ್ಯಾನಿಕ್ ಆಗಬೇಕೆಂದು ಸುಮಾರು 15 ವರ್ಷ ಪ್ರಾಯದಿಂದಲೇ ಬಯಸಿದ್ದೆ.”
ಬೈಬಲ್ ಉದಾಹರಣೆ: ಯೇಸುವಿನ ಶಿಷ್ಯನಾದ ಪೌಲನು ಬರೆದದ್ದು: “ನಾನು ಮಾತಿನಲ್ಲಿ ನಿಪುಣನಲ್ಲದಿದ್ದರೂ ಜ್ಞಾನದಲ್ಲಿ ನಿಪುಣನಾಗಿದ್ದೇನೆ ಎಂಬುದಂತೂ ನಿಶ್ಚಯ.” (2 ಕೊರಿಂಥ 11:6) ಬೈಬಲ್‌ನ ಒಳ್ಳೇ ತಿಳುವಳಿಕೆಯಿದ್ದ ಕಾರಣ ಇತರರು ಸವಾಲೆಸೆದಾಗ ದೃಢವಾಗಿ ನಿಲ್ಲಲು ಪೌಲನು ಶಕ್ತನಾದನು. ಅವರ ನಕಾರಾತ್ಮಕ ಮನೋಭಾವ ತನ್ನ ದೃಢಸಂಕಲ್ಪವನ್ನು ಅಲುಗಾಡಿಸುವಂತೆ ಪೌಲನು ಬಿಡಲಿಲ್ಲ.—2 ಕೊರಿಂಥ 10:10; 11:5.
ನಿಮ್ಮನ್ನೇ ವಿಶ್ಲೇಷಿಸಿಕೊಳ್ಳಿ. ನಿಮ್ಮಲ್ಲಿರುವ ಯಾವುದಾದರೂ ಒಂದು ಪ್ರತಿಭೆ ಇಲ್ಲವೇ ಕೌಶಲವನ್ನು ಕೆಳಗಡೆ ಬರೆಯಿರಿ.
.....
ನಿಮ್ಮ ಒಂದು ಒಳ್ಳೇ ಗುಣವನ್ನು ತಿಳಿಸಿ. (ಉದಾಹರಣೆಗೆ, ನೀವು
ಪರಿಗಣನೆಯುಳ್ಳವರೊ? ಉದಾರಿಗಳೊ? ಭರವಸಾರ್ಹರೊ? ಕಾಲನಿಷ್ಠೆಯುಳ್ಳವರೊ?).....
“ನಾನು ಯಾವಾಗಲೂ ಜನರಿಗೆ ನೆರವಾಗಲು ಪ್ರಯತ್ನಿಸುತ್ತೇನೆ. ಯಾರಾದರೂ ನನ್ನೊಂದಿಗೆ ಮಾತಾಡಲು ಬಯಸುವಲ್ಲಿ, ನಾನು ಎಷ್ಟೇ ಕಾರ್ಯಮಗ್ನಳಾಗಿದ್ದರೂ ಸರಿ ನನ್ನ ಕೆಲಸವನ್ನು ನಿಲ್ಲಿಸಿ ಅವರಿಗೆ ಕಿವಿಗೊಡುತ್ತೇನೆ.”—ಬ್ರಿಯಾನ್.
ನಿಮ್ಮ ಒಂದು ಒಳ್ಳೇ ಗುಣವನ್ನು ಗುರುತಿಸಲು ನಿಮಗೆ ಕಷ್ಟವಾಗುತ್ತಿರುವಲ್ಲಿ, ಬಾಲ್ಯಕ್ಕಿಂತ ಈಗ ಯಾವ ಒಂದು ವಿಷಯದಲ್ಲಿ ಅಭಿವೃದ್ಧಿಮಾಡಿದ್ದೀರಿ ಎಂಬುದರ ಬಗ್ಗೆ ಯೋಚಿಸಿ ಒಂದು ವಿಧದ ಬಗ್ಗೆ ಯೋಚಿಸಿ, ತದನಂತರ ಅದನ್ನು ಕೆಳಗಡೆ ಬರೆಯರಿ.—ಉದಾಹರಣೆಗಳಿಗಾಗಿ, “ನಿಮ್ಮ ಸಮಪ್ರಾಯದವರು ಏನನ್ನುತ್ತಾರೆ?” ಎಂಬ ಚೌಕ ನೋಡಿ.
......
2 ನನ್ನ ಬಲಹೀನತೆಗಳೇನು?
ತಿಳಿಯುವ ಮಹತ್ವ: ದುರ್ಬಲ ಕೊಂಡಿಯು ಗಟ್ಟಿಮುಟ್ಟಾದ ಸರಪಣಿಯನ್ನೂ ತುಂಡರಿಸುವಂತೆ ನಿಮ್ಮ ಬಲಹೀನತೆಗಳು ನಿಮ್ಮ ಗುರುತನ್ನು ತಕ್ಷಣವೇ ಹಾಳುಮಾಡಬಲ್ಲವು.
ಗಮನಿಸಿ: ಯಾರೂ ಪರಿಪೂರ್ಣರಲ್ಲ. (ರೋಮನ್ನರಿಗೆ 3:23) ಪ್ರತಿಯೊಬ್ಬರಲ್ಲೂ ಅವರು ಬದಲಾಯಿಸಲು ಇಷ್ಟಪಡುವ ಪ್ರವೃತ್ತಿ ಇದ್ದೇ ಇರುತ್ತದೆ. “ಚಿಕ್ಕಪುಟ್ಟ ವಿಷಯಗಳಿಗೆಲ್ಲ ನಾನೇಕೆ ಕಿರಿಕಿರಿಗೊಳ್ಳುತ್ತೇನೆ?” ಎಂದು ಕೇಳುತ್ತಾಳೆ ಸೇಜಾ ಎಂಬ ಹುಡುಗಿ. “ತೀರಾ ಚಿಕ್ಕ ವಿಷಯಕ್ಕೂ ರೇಗಿ, ತಕ್ಷಣವೇ ಭಾವನೆಗಳ ಮೇಲಿನ ನಿಯಂತ್ರಣವನ್ನು ನಾನು ಕಳೆದುಕೊಳ್ಳುತ್ತೇನೆ!”
ಬೈಬಲ್ ಉದಾಹರಣೆ: ಪೌಲನಿಗೆ ತನ್ನ ಬಲಹೀನತೆಗಳು ತಿಳಿದಿದ್ದವು. ಅವನು ಬರೆದದ್ದು: “ನನ್ನ ಹೃದಯದೊಳಗೆ ನಾನು ದೇವರ ನಿಯಮದಲ್ಲಿ ನಿಜವಾಗಿಯೂ ಆನಂದಿಸುವವನಾಗಿದ್ದೇನೆ. ಆದರೆ ನನ್ನ ಅಂಗಗಳಲ್ಲಿ ಇನ್ನೊಂದು ನಿಯಮವಿರುವುದನ್ನು ನಾನು ನೋಡುತ್ತೇನೆ; ಅದು ನನ್ನ ಮನಸ್ಸಿನ ನಿಯಮಕ್ಕೆ ವಿರುದ್ಧವಾಗಿ ಹೋರಾಡಿ ನನ್ನ ಅಂಗಗಳಲ್ಲಿರುವ ಪಾಪದ ನಿಯಮಕ್ಕೆ ನನ್ನನ್ನು ಸೆರೆಯವನನ್ನಾಗಿ ಮಾಡುತ್ತಿದೆ.”—ರೋಮನ್ನರಿಗೆ 7:22, 23.
ನಿಮ್ಮನ್ನೇ ವಿಶ್ಲೇಷಿಸಿಕೊಳ್ಳಿ. ನೀವು ಯಾವ ಬಲಹೀನತೆಯನ್ನು ನಿಯಂತ್ರಿಸಲು ಕಲಿಯಬೇಕಾಗಿದೆ?
.....
“ಪ್ರಣಯಾತ್ಮಕ ಚಲನಚಿತ್ರಗಳನ್ನು ನೋಡಿದ ಬಳಿಕ ನನಗೆ ಸ್ವಲ್ಪ ಬೇಸರವಾಗುತ್ತದೆ, ನಾನು ಯಾರನ್ನಾದರೂ ಪ್ರೀತಿಸಬೇಕೆಂಬ ಬಯಕೆ ನನ್ನಲ್ಲಿ ಹುಟ್ಟುವುದನ್ನು ಗಮನಿಸಿದ್ದೆ. ಆದರೆ ನಾನು ಅಂಥ ಮನೋರಂಜನೆಯನ್ನು ನೋಡಬಾರದೆಂದು ನನಗೀಗ ತಿಳಿದಿದೆ.”—ಬ್ರಿಜೆಟ್.
3 ನನ್ನ ಗುರಿಗಳೇನು?
ತಿಳಿಯುವ ಮಹತ್ವ: ನಿಮಗೆ ಗುರಿಗಳಿರುವಾಗ ನಿಮ್ಮ ಜೀವನಕ್ಕೆ ಸ್ಪಷ್ಟ ಮಾರ್ಗ ಹಾಗೂ ಉದ್ದೇಶವಿರುತ್ತದೆ. ನೀವೇನು ಮಾಡಲು ನಿರ್ಣಯಿಸಿದ್ದೀರೊ ಅದನ್ನು ಸಾಧಿಸುವುದಕ್ಕೆ ಜನರಾಗಲಿ ಸನ್ನಿವೇಶಗಳಾಗಲಿ ಅಡ್ಡಿಯಾಗುವಂತೆ ನೀವು ಬಿಡಲಾರಿರಿ.
ಗಮನಿಸಿ: ನೀವು ಟ್ಯಾಕ್ಸಿಯೊಳಕ್ಕೆ ಕುಳಿತಾಗ ಇಂಧನ ಖಾಲಿಯಾಗುವ ವರೆಗೆ ಒಂದೇ ವಠಾರದಲ್ಲಿ ಸುತ್ತುತ್ತಿರುವಂತೆ ಚಾಲಕನಿಗೆ ಹೇಳುವಿರೊ? ಅದು ಮೂರ್ಖತನ. ಮಾತ್ರವಲ್ಲ ವ್ಯರ್ಥ ಖರ್ಚು ಸಹ! ಗುರಿಗಳು ಜೀವನದಲ್ಲಿ ಯಶಸ್ಸನ್ನು ಗಳಿಸುವಂತೆ ನಿಮಗೆ ಸಹಾಯ ಮಾಡುವವು. ನಿಮಗೆ ಎಲ್ಲೊ ಹೋಗಲಿಕ್ಕಿದೆ ಮತ್ತು ಅಲ್ಲಿ ಹೇಗೆ ತಲುಪಬೇಕೆಂಬ ಯೋಜನೆ ನಿಮ್ಮ ಬಳಿಯೇ ಇದೆ.
ಬೈಬಲ್ ಉದಾಹರಣೆ: ಪೌಲನು ಬರೆದದ್ದು: “ನಾನು ಗೊತ್ತುಗುರಿಯಿಲ್ಲದೆ ಓಡುತ್ತಿಲ್ಲ.” (1 ಕೊರಿಂಥ 9:26) ಜೀವನವೆಂಬ ಪ್ರವಾಹದಲ್ಲಿ ಸಿಲುಕಿಬಿದ್ದು ದಿಕ್ಕುತಪ್ಪುವ ಬದಲಾಗಿ, ಪೌಲನು ಗುರಿಗಳನ್ನಿಟ್ಟನು ಮತ್ತು ಅವುಗಳಿಗನುಸಾರ ಜೀವಿಸಿದನು.—ಫಿಲಿಪ್ಪಿ 3:12-14.
ನಿಮ್ಮನ್ನೇ ವಿಶ್ಲೇಷಿಸಿಕೊಳ್ಳಿ. ಬರುವ ವರ್ಷದೊಳಗಾಗಿ ನೀವು ಮುಟ್ಟಬಯಸುವ ಮೂರು ಗುರಿಗಳನ್ನು ಕೆಳಗೆ ಬರೆಯಿರಿ.
1 .....
2 .....
3 .....
ಈಗ ಮೇಲಿನವುಗಳಲ್ಲಿ ನಿಮಗೆ ಹೆಚ್ಚು ಮುಖ್ಯವಾಗಿರುವ ಗುರಿಯೊಂದನ್ನು ಆರಿಸಿಕೊಳ್ಳಿ, ಅದನ್ನು ಸಾಧಿಸಲಾರಂಭಿಸಲಿಕ್ಕಾಗಿ ಈಗ ನೀವೇನು ಮಾಡಬಹುದೆಂದು ಬರೆಯಿರಿ.
.....
“ನಾನು ಕಾರ್ಯಮಗ್ನನಿಲ್ಲದಿದ್ದರೆ, ಗೊತ್ತುಗುರಿಯಿಲ್ಲದೆ ಸುಳಿದಾಡುತ್ತಿರುತ್ತೇನೆ. ಗುರಿಗಳನ್ನು ಹೊಂದಿರುವುದು ಮತ್ತು ಅದನ್ನು ಸಾಧಿಸಲು ಪ್ರಯತ್ನಿಸುವುದು ಉತ್ತಮ.”—ಹೋಸೆ.
4 ನನ್ನ ನಿಶ್ಚಿತಾಭಿಪ್ರಾಯಗಳೇನು?
ತಿಳಿಯುವ ಮಹತ್ವ: ನಿಶ್ಚಿತಾಭಿಪ್ರಾಯಗಳಿಲ್ಲದಿರುವಲ್ಲಿ ನೀವು ಸ್ಪಷ್ಟ ನಿರ್ಣಯಗಳನ್ನು ಮಾಡಲಾರಿರಿ. ನೀವು ನಿಮ್ಮ ಸಮಾನಸ್ಥರೊಂದಿಗೆ ಹೊಂದಿಕೊಂಡು ಹೋಗಲಿಕ್ಕಾಗಿ ಗೋಸುಂಬೆಯಂತೆ ಬಣ್ಣ ಬದಲಾಯಿಸುತ್ತಾ ಇರುವಿರಿ. ಇದು ತಾನೇ ನಿಮಗೆ ನಿಮ್ಮ ಸ್ವಂತದ್ದಾದ ಗುರುತಿಲ್ಲ ಎನ್ನುವುದರ ಸೂಚನೆ.
ಗಮನಿಸಿ: “ದೇವರ ಉತ್ತಮವಾದ, ಸ್ವೀಕೃತವಾದ ಮತ್ತು ಪರಿಪೂರ್ಣವಾದ ಚಿತ್ತವು ಯಾವುದೆಂದು ಪರಿಶೋಧಿಸಿ ತಿಳಿದುಕೊಳ್ಳುವಂತೆ” ಬೈಬಲ್ ಕ್ರೈಸ್ತರನ್ನು ಪ್ರೋತ್ಸಾಹಿಸುತ್ತದೆ. (ರೋಮನ್ನರಿಗೆ 12:2) ಇತರರು ಏನೇ ಮಾಡಲಿ ನಿಮ್ಮ ಕ್ರಿಯೆಗಳು ನಿಮ್ಮ ನಿಶ್ಚಿತಾಭಿಪ್ರಾಯಗಳ ಮೇಲಾಧರಿತವಾಗಿರುವಲ್ಲಿ ನೀವು ನಿಮ್ಮ ಗುರುತಿಗೆ ಹೊಂದಿಕೆಯಲ್ಲಿ ಜೀವಿಸುತ್ತಿದ್ದೀರಿ ಎಂದರ್ಥ.
ಬೈಬಲ್ ಉದಾಹರಣೆ: ಕುಟುಂಬ ಸದಸ್ಯರು ಮತ್ತು ಜೊತೆ ಆರಾಧಕರಿಂದ ಬೇರ್ಪಡಿಸಲ್ಪಟ್ಟರೂ ದೇವರ ನಿಯಮಗಳನ್ನು ಪಾಲಿಸಲು ಪ್ರವಾದಿ ದಾನಿಯೇಲನು ಹದಿವಯಸ್ಸಿನಲ್ಲೇ ‘ನಿಶ್ಚಯಿಸಿದ್ದನು.’ (ದಾನಿಯೇಲ 1:8) ಹೀಗೆ ಮಾಡುವ ಮೂಲಕ ಅವನು ತನ್ನ ಗುರುತಿಗೆ ಹೊಂದಿಕೆಯಲ್ಲಿ ಜೀವಿಸಿದನು. ತನ್ನ ನಿಶ್ಚಿತಾಭಿಪ್ರಾಯಗಳಿಗನುಸಾರ ಅವನು ಜೀವಿಸಿದನು.
ನಿಮ್ಮನ್ನೇ ವಿಶ್ಲೇಷಿಸಿಕೊಳ್ಳಿ. ನಿಮ್ಮ ನಿಶ್ಚಿತಾಭಿಪ್ರಾಯಗಳೇನು? ಉದಾಹರಣೆಗೆ:
● ನೀವು ದೇವರನ್ನು ನಂಬುತ್ತೀರೊ? ಹೌದಾಗಿರುವಲ್ಲಿ, ಏಕೆ? ಆತನ ಅಸ್ತಿತ್ವವನ್ನು ನೀವು ನಿಶ್ಚಿತಾಭಿಪ್ರಾಯದಿಂದ ನಂಬಲು ಯಾವ ಪುರಾವೆಯಿದೆ?
● ದೇವರ ನೈತಿಕ ಮಟ್ಟಗಳು ನಿಮ್ಮ ಒಳಿತಿಗಾಗಿಯೇ ಇವೆಯೆಂದು ನೀವು ನಂಬುತ್ತೀರೊ? ಹೌದಾಗಿರುವಲ್ಲಿ, ಏಕೆ? ಉದಾಹರಣೆಗೆ, ಲೈಂಗಿಕತೆಯ ವಿಷಯದಲ್ಲಿ ಸಮಾನಸ್ಥರ “ಸ್ವಚ್ಛಂದ” ಜೀವನಶೈಲಿಗೆ ಅಂಟಿಕೊಳ್ಳುವುದಕ್ಕಿಂತ ದೇವರ ನಿಯಮಗಳಿಗೆ ವಿಧೇಯರಾಗುವುದರಲ್ಲಿ ಹೆಚ್ಚಿನ ಸಂತೋಷವಿದೆಯೆಂದು ಯಾವುದು ನಿಮ್ಮನ್ನು ಮನಗಾಣಿಸುತ್ತದೆ?
ಇವು ಕ್ಷಣಮಾತ್ರದಲ್ಲಿ ಉತ್ತರಿಸಬೇಕಾದ ಪ್ರಶ್ನೆಗಳಲ್ಲ. ನಿಮ್ಮ ನಂಬಿಕೆಗಳಿಗೆ ಕಾರಣಗಳೇನೆಂದು ತಿಳಿದುಕೊಳ್ಳಲು ಸಮಯ ತೆಗೆದುಕೊಳ್ಳಿ. ಹಾಗೆ ಮಾಡುವಲ್ಲಿ ಅವುಗಳನ್ನು ಸಮರ್ಥಿಸಲು ನೀವು ಹೆಚ್ಚು ಸಿದ್ಧರಾಗಿರುವಿರಿ.—ಜ್ಞಾನೋಕ್ತಿ 14:15; 1 ಪೇತ್ರ 3:15.
“ನಿಶ್ಚಿತಾಭಿಪ್ರಾಯ ಹೊಂದಿರದಿದ್ದಲ್ಲಿ ಶಾಲೆಯಲ್ಲಿ ಮಕ್ಕಳು ನಮ್ಮ ಮೇಲೆ ಒತ್ತಡಹೇರುತ್ತಾರೆ. ನನ್ನ ನಂಬಿಕೆಗಳ ವಿಷಯದಲ್ಲಿ ಅನಿಶ್ಚಯದಿಂದಿರಲು ನಾನು ಬಯಸುವುದಿಲ್ಲ. ಆದ್ದರಿಂದ ನನ್ನ ನಂಬಿಕೆಗಳಿಗೆ ಸ್ಪಷ್ಟ, ದೃಢ ಕಾರಣಗಳನ್ನು ಕಲಿತುಕೊಳ್ಳಲು ಪ್ರಯತ್ನಿಸಿದೆ. ಜನರಿಗೆ ಕೇವಲ, ‘ನಾನದನ್ನು ಮಾಡಲಾರೆ, ಅದು ನನ್ನ ಧರ್ಮಕ್ಕೆ ವಿರುದ್ಧ,’ ಎಂದು ಹೇಳುವುದಕ್ಕಿಂತ ‘ಇದು ಸರಿಯೆಂದು ನನಗೆ ಅನಿಸುವುದಿಲ್ಲ’ ಎಂದನ್ನುತ್ತಿದ್ದೆ. ಇವು ನನ್ನ ನಂಬಿಕೆಗಳು.”—ಡಾನ್ಯೇಲಾ.
ಈಗ ಹೇಳಿ, ನೀವು ಏನಾಗಿರಲು ಬಯಸುತ್ತೀರಿ? ಸ್ವಲ್ಪ ಗಾಳಿ ಬಂದರೂ ಹಾರಿಕೊಂಡು ಹೋಗುವ ತರಗೆಲೆಯಂತೆಯೊ ಅಥವಾ ಪ್ರಚಂಡ ಬಿರುಗಾಳಿಯನ್ನೂ ಎದುರಿಸಿ ನಿಲ್ಲಬಲ್ಲ ಮರದಂತೆಯೊ? ನಿಮ್ಮ ಗುರುತನ್ನು ಬಲಗೊಳಿಸಿರಿ. ಆಗ ನೀವು ಆ ದೃಢವಾದ ಮರದಂತಾಗುವಿರಿ ಮತ್ತು “ನಾನ್ಯಾರು?” ಎಂಬ ಪ್ರಶ್ನೆಗೆ ಉತ್ತರ ತಿಳಿಯುವಿರಿ. (g11-E 10)
“ಯುವಜನರ ಪ್ರಶ್ನೆ” ಸರಣಿಯ ಹೆಚ್ಚಿನ ಲೇಖನಗಳನ್ನು www.watchtower.org/ype ವೆಬ್‌ಸೈಟ್‌ನಲ್ಲಿ ಕಂಡುಕೊಳ್ಳಬಹುದು.
[ಪಾದಟಿಪ್ಪಣಿ]
^ ಈ ಲೇಖನದಲ್ಲಿ ಕೆಲವು ಹೆಸರುಗಳನ್ನು ಬದಲಾಯಿಸಲಾಗಿದೆ.
[ಪುಟ 27ರಲ್ಲಿರುವ ಚೌಕ/ಚಿತ್ರಗಳು]
ನಿಮ್ಮ ಸಮಪ್ರಾಯದವರು ಏನನ್ನುತ್ತಾರೆ?
“ನಾನು ದೊಡ್ಡವನಾಗುತ್ತಾ ಬಂದಂತೆ, ನಾನು ಮಾಡುವ ನಿರ್ಣಯ ಚಿಕ್ಕದಾಗಿರಲಿ ದೊಡ್ಡದಾಗಿರಲಿ ಯಾವಾಗಲೂ ಎಲ್ಲ ಅಂಶಗಳನ್ನು ತೂಗಿನೋಡಲು ಹಾಗೂ ದೇವರನ್ನು ಅಸಂತೋಷಪಡಿಸುವ ಕೆಲಸಗಳಿಗೆ ಕೈಹಾಕದಿರಲು ಕಲಿತಿದ್ದೇನೆ.”
“ನಾನು ಚಿಕ್ಕವಳಿದ್ದಾಗ, ನನಗಿಂತ ಯಾರಾದರೂ ಭಿನ್ನರಾಗಿದ್ದರೆ ಅವರು ವಿಚಿತ್ರರೆಂದು ಎಣಿಸುತ್ತಿದ್ದೆ. ಆದರೆ ಈಗ, ಎಲ್ಲರೂ ಒಂದೇ ರೀತಿಯಾಗಿಲ್ಲದ್ದಕ್ಕಾಗಿ ತುಂಬ ಸಂತೋಷಪಡುತ್ತೇನೆ ಮತ್ತು ಇತರರ ದೃಷ್ಟಿಕೋನಗಳನ್ನು ತಿಳಿಯಲು ಆಸಕ್ತಳೂ ಆಗಿದ್ದೇನೆ.”
[ಚಿತ್ರಗಳು]
ಜೆರೆಮಾಯ
ಜೆನಿಫರ್
[ಪುಟ 28ರಲ್ಲಿರುವ ಚೌಕ]
ನಿಮ್ಮ ಹೆತ್ತವರನ್ನು ಕೇಳಿನೋಡಿ
ಯಾವ ಪ್ರತಿಭೆಗಳನ್ನು ನೀವು ನನ್ನಲ್ಲಿ ಕಾಣುತ್ತೀರಿ? ಯಾವ ಗುಣಗಳನ್ನು ನಾನು ಇನ್ನಷ್ಟು ಬೆಳೆಸಿಕೊಳ್ಳಬೇಕೆಂದು ನಿಮಗನಿಸುತ್ತದೆ? ದೇವರ ಮಟ್ಟಗಳಲ್ಲಿ ನಿಶ್ಚಿತಾಭಿಪ್ರಾಯವನ್ನು ನೀವು ಹೇಗೆ ಬಲಪಡಿಸಿದಿರಿ?
[ಪುಟ 28ರಲ್ಲಿರುವ ರೇಖಾಕೃತಿ]
(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)
ಶಕ್ತಿಸಾಮರ್ಥ್ಯಗಳು
ಬಲಹೀನತೆಗಳು
ಗುರಿಗಳು
ನಿಶ್ಚಿತಾಭಿಪ್ರಾಯಗಳು
[ಪುಟ 28ರಲ್ಲಿರುವ ಚಿತ್ರ]
ನೀವು ಬಲವಾದ ಗುರುತನ್ನು ಹೊಂದಿರುವಲ್ಲಿ, ಪ್ರಚಂಡ ಬಿರುಗಾಳಿಯನ್ನೂ ಎದುರಿಸಿ ನಿಲ್ಲುವ ಆಳವಾಗಿ ಬೇರೂರಿದ ಮರದಂತಿರುವಿರಿ