ಅಪ್ಪಂದಿರಿಗೆ ಒಂದಿಷ್ಟು ಸಲಹೆಗಳು
ಮುಖಪುಟ ಲೇಖನ
ಅಪ್ಪಂದಿರಿಗೆ ಒಂದಿಷ್ಟು ಸಲಹೆಗಳು
“ನಾನು ಎಲ್ಲಿ ತಪ್ಪಿಹೋದೆ” ಅನ್ನೋ ಪ್ರಶ್ನೆ ದಕ್ಷಿಣ ಆಫ್ರಿಕದಲ್ಲಿರೋ ಮೈಕಲ್ * ಎಂಬವರನ್ನು ಕಾಡುತ್ತಿತ್ತು. ಒಳ್ಳೇ ಅಪ್ಪನಾಗಿರೋಕೆ ಅವರು ಮಾಡಿದ ಪ್ರಯತ್ನ ಅಷ್ಟಿಷ್ಟಲ್ಲ. ಆದರೆ 19 ವರ್ಷ ವಯಸ್ಸಿನ ತನ್ನ ಮೊಂಡು ಹಠಮಾರಿ ಮಗನ ಬಗ್ಗೆ ಯೋಚಿಸುವಾಗೆಲ್ಲ ತಾನು ನಿಜವಾಗ್ಲೂ ಒಳ್ಳೇ ಅಪ್ಪನಾ ಅನ್ನೋ ಯೋಚನೆ ಬರುತ್ತಿತ್ತು ಅವರಿಗೆ.
ಇದಕ್ಕೆ ವ್ಯತಿರಿಕ್ತ ಸ್ಪೇನ್‌ನಲ್ಲಿರೋ ಟೆರಿ ಅನ್ನುವವರು. ಅವರು ಒಳ್ಳೇ ಅಪ್ಪನಾಗಿರೋಕೆ ಮಾಡಿದ ಪ್ರಯತ್ನ ಫಲಕಂಡಿತು. ಅವರ ಬಗ್ಗೆ ಅವರ ಮಗ ಆ್ಯಂಡ್ರೂ ಹೇಳೋದನ್ನು ಕೇಳಿ: “ನನ್ನ ಜೀವನದ ಆರಂಭ ಘಟ್ಟದ ಸವಿನೆನಪುಗಳೆಂದರೆ ನಾನು ಅಪ್ಪ ಜೊತೆಯಾಗಿ ಸಮಯ ಕಳೆದದ್ದು. ಅವರು ನನಗೆ ಏನಾದರೂ ಓದಿ ಹೇಳುತ್ತಿದ್ದರು, ನನ್ನ ಜೊತೆ ಆಟ ಆಡುತ್ತಿದ್ದರು. ಕೆಲವೊಮ್ಮೆ ನಾವಿಬ್ಬರೇ ಸಮಯ ಕಳೆಯೋ ಹಾಗೆ ಎಲ್ಲಾದರೂ ಹೊರಗೆ ಕರೆದುಕೊಂಡು ಹೋಗುತ್ತಿದ್ದರು. ಕಲಿಯೋದನ್ನು ಸ್ವಾರಸ್ಯಕರವಾಗಿ ಮಾಡುತ್ತಿದ್ದರು.”
ಹಾಗಂತ ಒಳ್ಳೇ ಅಪ್ಪ ಆಗೋದು ಅಷ್ಟು ಸುಲಭದ ಮಾತಲ್ಲ. ಆದರೆ ಬೈಬಲ್‌ನಲ್ಲಿರೋ ಕೆಲವೊಂದು ಸೂತ್ರಗಳು ಸಹಾಯಮಾಡುತ್ತೆ. ಅವನ್ನು ಪಾಲಿಸಿದರೆ ತಮಗೂ ಕುಟುಂಬಕ್ಕೂ
ತುಂಬ ಒಳಿತಾಗುತ್ತೆ ಅನ್ನೋದು ಹಲವಾರು ಅಪ್ಪಂದಿರ ಅನುಭವ. ಬನ್ನಿ ಆ ಸೂತ್ರಗಳಲ್ಲಿ ಕೆಲವೊಂದನ್ನು ತಿಳಿದುಕೊಳ್ಳೋಣ.1. ಕುಟುಂಬಕ್ಕೆ ಅಂತ ಸಮಯಮಾಡಿಕೊಳ್ಳಿ
ನಿಮ್ಮ ಮಕ್ಕಳ ಮೇಲೆ ನಿಮಗೆ ತುಂಬ ಪ್ರೀತಿ ಇದೆ ಅನ್ನೋದನ್ನು ಹೇಗೆ ವ್ಯಕ್ತಪಡಿಸಬಹುದು? ನೀವು ನಿಮ್ಮ ಮಕ್ಕಳಿಗಂತ ತುಂಬ ವಿಷಯಗಳನ್ನು ಮಾಡುತ್ತಿದ್ದೀರ. ಅವರಿಗಾಗಿ ಹಗಲು ರಾತ್ರಿ ದುಡಿಯುತ್ತೀರ. ಇದನ್ನೆಲ್ಲ ಮಾಡ್ತಿರೋದು ಮಕ್ಕಳ ಮೇಲೆ ನಿಮಗೆ ಪ್ರೀತಿ ಇರೋದ್ರಿಂದನೇ ಅಲ್ವಾ. ಇಷ್ಟೆಲ್ಲ ಮಾಡಿ ಅವರ ಜೊತೆ ಸಾಕಷ್ಟು ಸಮಯ ಕಳೆಯದೇ ಹೋದರೆ ಅವರಿಗೆ ಹೇಗೆ ಅನಿಸಬಹುದು? ಅವರಿಗಿಂತ ನಿಮಗೆ ನಿಮ್ಮ ಕೆಲಸ, ಸ್ನೇಹಿತರು, ಹವ್ಯಾಸ ಇವೇ ಮುಖ್ಯ ಅನ್ನೋ ಅನಿಸಿಕೆ ಬಂದುಬಿಡುತ್ತೆ.
ಒಬ್ಬ ತಂದೆ ಯಾವಾಗಿಂದ ಮಕ್ಕಳ ಜೊತೆ ಸಮಯ ಕಳೆಯಲು ಶುರುಮಾಡಬೇಕು? ಸಾಮಾನ್ಯವಾಗಿ ತಾಯಿ ತನ್ನ ಮಗು ಹೊಟ್ಟೆಯಲ್ಲಿ ಇರುವಾಗಲೇ ಅದರ ಜೊತೆ ಒಳ್ಳೇ ಬಂಧ ಬೆಸೆಯುತ್ತಾಳೆ. 16 ವಾರಗಳಲ್ಲೇ ಗರ್ಭಸ್ಥ ಶಿಶು ಕೇಳಿಸಿಕೊಳ್ಳಲು ಶುರುಮಾಡುತ್ತೆ ಎನ್ನಲಾಗುತ್ತೆ. ಹಾಗಾಗಿ ಈ ಹಂತದಲ್ಲೇ ತಂದೆ ಮಗು ಜೊತೆ ಒಳ್ಳೇ ಸಂಬಂಧವನ್ನು ಬೆಸೆಯಲು ಶುರುಮಾಡಬಹುದು. ಮಗುವಿನ ಹೃದಯಬಡಿತ ಕೇಳಿಸಿಕೊಳ್ಳಿ, ಅದರ ಒದೆತವನ್ನು ಮುಟ್ಟಿ ನೋಡಿ, ಅದರ ಜೊತೆ ಮಾತಾಡಿ, ಹಾಡಿ.
ಬೈಬಲ್ ಸೂತ್ರ: ಪ್ರಾಚೀನ ಕಾಲದಲ್ಲಿ ಮಕ್ಕಳಿಗೆ ಶಿಕ್ಷಣ ಕೊಡುವುದರಲ್ಲಿ ಅಪ್ಪಂದಿರ ಪಾತ್ರ ಹಿರಿದು. ಮಕ್ಕಳ ಜೊತೆ ಸಮಯ ಕಳೆಯುವ ನಿಯಮ ಮಾಡಿಕೊಳ್ಳುವಂತೆ ಬೈಬಲ್‌ನಲ್ಲಿ ಉತ್ತೇಜನವಿದೆ. ಅದು ಯಾವ ವಚನವೆಂದರೆ ಧರ್ಮೋಪದೇಶಕಾಂಡ 6:6, 7. ಅದು ಹೇಳುತ್ತೆ: “ನಾನು ಈಗ ನಿಮಗೆ ತಿಳಿಸುವ ಮಾತುಗಳು ನಿಮ್ಮ ಹೃದಯದಲ್ಲಿರಬೇಕು. ಇವುಗಳನ್ನು ನಿಮ್ಮ ಮಕ್ಕಳಿಗೆ ಅಭ್ಯಾಸಮಾಡಿಸಿ ಮನೆಯಲ್ಲಿ ಕೂತಿರುವಾಗಲೂ ದಾರಿನಡೆಯುವಾಗಲೂ ಮಲಗುವಾಗಲೂ ಏಳುವಾಗಲೂ ಇವುಗಳ ವಿಷಯದಲ್ಲಿ ಮಾತಾಡಬೇಕು.”
2. ಆಲಿಸಿ
ಮಕ್ಕಳ ಜೊತೆ ಒಳ್ಳೇ ಸಂವಾದ ನಡೆಯಬೇಕಾ ಹಾಗಾದರೆ ನೀವು ಅವರ ಮಾತನ್ನು ಚೆನ್ನಾಗಿ ಆಲಿಸಬೇಕು. ಅರ್ಧಂಬರ್ಧ ಕೇಳಿಸಿಕೊಂಡು ದುಡುಕಬೇಡಿ. ಪೂರ್ತಿ ಕೇಳಿಸಿಕೊಳ್ಳುವ ಕಲೆಯನ್ನು ಮೈಗೂಡಿಸಿಕೊಳ್ಳಿ.
ನೀವು ಮುಂಗೋಪಿಯಾಗಿದ್ದರೆ ಮಕ್ಕಳು ತಮ್ಮ ಭಾವನೆಗಳನ್ನು ಹೇಳಿಕೊಳ್ಳುವುದಕ್ಕೆ ಹಿಂಜರಿಯಬಹುದು. ಸಮಾಧಾನದಿಂದ ಆಲಿಸುವಾಗ ನೀವು ಅವರ ಬಗ್ಗೆ ಕಾಳಜಿ ವಹಿಸುತ್ತೀರಿ ಅನ್ನೋ ಭರವಸೆ ಮಕ್ಕಳಲ್ಲಿ ಮೂಡುತ್ತೆ. ಆಗ ಅವರು ಬಿಚ್ಚು ಮನಸ್ಸಿನಿಂದ ತಮ್ಮ ಭಾವನೆ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಾರೆ.
ಬೈಬಲ್ ಸೂತ್ರ: ಬೈಬಲ್‌ನಲ್ಲಿರೋ ಸಲಹೆಗಳು ನಮ್ಮ ಬದುಕಿನ ಬೇರೆ ಬೇರೆ ಕ್ಷೇತ್ರಗಳಿಗೆ ಪ್ರಯೋಜನಕರ ಅನ್ನೋದು ಸಾಬೀತಾಗಿರುವ ವಿಷಯ. ಉದಾಹರಣೆಗೆ ಬೈಬಲ್‌ನ ಒಂದು ಸಲಹೆ ಹೀಗಿದೆ: “ಪ್ರತಿಯೊಬ್ಬನು ಕಿವಿಗೊಡುವುದರಲ್ಲಿ ಶೀಘ್ರನೂ ಮಾತಾಡುವುದರಲ್ಲಿ ದುಡುಕದವನೂ ಕೋಪಿಸುವುದರಲ್ಲಿ ನಿಧಾನಿಯೂ ಆಗಿರಬೇಕು.” (ಯಾಕೋಬ 1:19) ಈ ಸಲಹೆಯನ್ನು ಅಪ್ಪಂದಿರು ಪಾಲಿಸುವುದಾದರೆ ಮಕ್ಕಳ ಜೊತೆ ಒಳ್ಳೇ ಸಂವಾದ ಮಾಡಕ್ಕಾಗುತ್ತೆ.
3. ಪ್ರೀತಿಯಿಂದ ಶಿಸ್ತು ನೀಡಿ ಮತ್ತು ಶ್ಲಾಘಿಸಿ
ನಿಮಗೆ ಎಷ್ಟೇ ಕೋಪ ಬಂದಿದ್ದರೂ ಶಿಸ್ತನ್ನು ಪ್ರೀತಿಯಿಂದ ಕೊಡಿ. ಅದು ಸಲಹೆ ಇರಬಹುದು, ತಿದ್ದುವುದು ಇರಬಹುದು, ಶಿಕ್ಷಣದ ವಿಷಯದಲ್ಲಿ ಇರಬಹುದು, ಅಗತ್ಯ ಬಿದ್ದಾಗ ಕೊಡೋ ಶಿಕ್ಷೆಯಿರಬಹುದು ಏನೇ ಇರಲಿ ಅದು ಅವರ ಒಳ್ಳೇದಕ್ಕಾಗಿನೇ ಅಂತ ಮನವರಿಕೆ ಮಾಡಿಸಬೇಕು. ಆ ಶಿಸ್ತಿನ ಹಿಂದೆ ಇರೋ ಪ್ರೀತಿ ಅವರಿಗೆ ಗೊತ್ತಾಗಬೇಕು.
ನೀವು ಕೊಡೋ ಶಿಸ್ತಿನಿಂದ ಒಳ್ಳೇ ಫಲಿತಾಂಶ ಸಿಗಬೇಕಾದರೆ ಆಗಾಗ್ಗೆ ಮಕ್ಕಳನ್ನು ಹೊಗಳಿ. “ಸಮಯೋಚಿತವಾದ ಮಾತುಗಳು ಬೆಳ್ಳಿಯ ನಕಾಸಿಯಲ್ಲಿ ಖಚಿತವಾದ ಬಂಗಾರದ ಹಣ್ಣುಗಳಿಗೆ ಸಮಾನ” ಅನ್ನುತ್ತೆ ಬೈಬಲ್‌ನ ಒಂದು ನಾಣ್ಣುಡಿ. (ಜ್ಞಾನೋಕ್ತಿ 25:11) ಶ್ಲಾಘನೆ ಮಗುವಿನಲ್ಲಿ ಒಳ್ಳೇ ವ್ಯಕ್ತಿತ್ವವನ್ನು ರೂಪಿಸುತ್ತೆ. ಪ್ರಾಮಾಣಿಕವಾಗಿ ಹೊಗಳುವಾಗ ಭರವಸೆ ಹೆಚ್ಚಾಗುತ್ತೆ. ಅಪ್ಪಂದಿರು ಆಗ್ಗಿಂದಾಗ್ಗೆ ಶ್ಲಾಘಿಸುವುದಾದರೆ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚುತ್ತೆ. ಯಾವತ್ತೂ ಒಳ್ಳೇದನ್ನೇ ಮಾಡಬೇಕು ಅನ್ನೋ ಸ್ಫೂರ್ತಿ ತುಂಬುತ್ತೆ.
ಬೈಬಲ್ ಸೂತ್ರ: “ತಂದೆಗಳೇ, ನಿಮ್ಮ ಮಕ್ಕಳು ಮನಗುಂದಿಹೋಗದಂತೆ ಅವರನ್ನು ಕೆಣಕುತ್ತಾ ಇರಬೇಡಿ.”—ಕೊಲೊಸ್ಸೆ 3:21.
4. ನಿಮ್ಮ ಹೆಂಡತಿಯನ್ನು ಪ್ರೀತಿಸಿ ಗೌರವಿಸಿ
ಒಬ್ಬ ಗಂಡನಾಗಿ ನಿಮ್ಮ ಜವಾಬ್ದಾರಿಯನ್ನು ನಿರ್ವಹಿಸುವ ರೀತಿ ನಿಮ್ಮ ಮಕ್ಕಳ ಮೇಲೆ ಪರಿಣಾಮ ಬೀರುತ್ತೆ. ‘ನಿಮ್ಮ ಹೆಂಡತಿಯನ್ನು ಗೌರವಿಸುವ ಮೂಲಕ ನಿಮ್ಮ ಮಕ್ಕಳಿಗೆ ಒಳ್ಳೇ ಮಾದರಿ ಇಡಬೇಕು. ತಂದೆ ತಾಯಿ ಒಬ್ಬರನ್ನೊಬ್ಬರು ಗೌರವಿಸುವುದನ್ನು ಮಕ್ಕಳು ನೋಡುವಾಗ ಖುಷಿಪಡುತ್ತಾರೆ. ತಮ್ಮನ್ನೂ ಪ್ರೀತಿಸುತ್ತಾರೆ ಅನ್ನೋ ಭರವಸೆ ಮಕ್ಕಳಲ್ಲಿ ತುಂಬುತ್ತೆ.’—ಮಕ್ಕಳ ಬೆಳವಣಿಗೆಯಲ್ಲಿ ತಂದೆಯ ಪಾತ್ರ. *
ಬೈಬಲ್ ಸೂತ್ರ: “ಗಂಡಂದಿರೇ, . . . ನಿಮ್ಮನಿಮ್ಮ ಹೆಂಡತಿಯರನ್ನು ಪ್ರೀತಿಸುತ್ತಾ ಇರಿ. . . . ನಿಮ್ಮಲ್ಲಿ ಪ್ರತಿಯೊಬ್ಬನು ವೈಯಕ್ತಿಕವಾಗಿ ತನ್ನನ್ನು ಪ್ರೀತಿಸಿಕೊಳ್ಳುವಂತೆಯೇ ತನ್ನ ಹೆಂಡತಿಯನ್ನೂ ಪ್ರೀತಿಸಲಿ.”—ಎಫೆಸ 5:25, 33.
5. ದೇವರನ್ನು ಪ್ರೀತಿಸಿ ಅದನ್ನು ಮಕ್ಕಳಿಗೂ ಕಲಿಸಿ
ದೇವರನ್ನು ಮನಸಾರೆ ಪ್ರೀತಿಸುವ ಅಪ್ಪಂದಿರ ಬಳಿ ಮಕ್ಕಳಿಗೆ ಕೊಡಲು ಬೆಲೆಬಾಳುವ ಆಸ್ತಿಯಿದೆ. ಏನಂತ ಯೋಚಿಸುತ್ತಿದ್ದೀರಾ? ದೇವರೊಟ್ಟಿಗೆ ಅತ್ಯಾಪ್ತ ಸಂಬಂಧ ಬೆಳೆಸಿಕೊಳ್ಳಲು ಮಕ್ಕಳಿಗೆ ಕೊಡುವ ನೆರವೇ ಅದು.
ಆಂಟೊನಿಯೊರವರಿಗೆ (ಇವರೊಬ್ಬರು ಯೆಹೋವನ ಸಾಕ್ಷಿ. ಇವರಿಗೆ ಆರು ಮಕ್ಕಳಿದ್ದಾರೆ) ಮಗಳು ಒಂದು ಪತ್ರ ಬರೆದಳು. “ಯೆಹೋವ ದೇವರನ್ನು, ನೆರೆಯವರನ್ನು, ಸ್ವತಃ ನನ್ನನ್ನು ಪ್ರೀತಿಸಲು ಕಲಿಸಿಕೊಟ್ಟಿದ್ದಕ್ಕೆ ಒಟ್ಟಾರೆ ಹೇಳೋದಾದರೆ ನನ್ನನ್ನು ಒಳ್ಳೇ ವ್ಯಕ್ತಿಯನ್ನಾಗಿ ಮಾಡಿದಕ್ಕೆ ತುಂಬ ಥ್ಯಾಂಕ್ಸ್ ಪಪ್ಪಾ. ನಿಮಗೆ ಯೆಹೋವ ದೇವರ ಮೇಲೆ ಎಷ್ಟು ಪ್ರೀತಿ ಇತ್ತು, ನನ್ನ ಬಗ್ಗೆ ಎಷ್ಟು ಕಾಳಜಿ ಇತ್ತು ಅನ್ನೋದು ನನಗೆ ಚೆನ್ನಾಗಿ ಗೊತ್ತಿದೆ. ನಿಮ್ಮ ಬದುಕಿನಲ್ಲಿ ಯೆಹೋವ ದೇವರಿಗೆ ಆದ್ಯತೆ ಕೊಟ್ಟಿದ್ದಕ್ಕೆ ಮತ್ತು ಮಕ್ಕಳನ್ನು ದೇವರ ಕೊಡುಗೆ ಅಂತ ಪರಿಗಣಿಸಿದ್ದಕ್ಕೆ ತುಂಬ ತುಂಬ ಥ್ಯಾಂಕ್ಸ್ ಪಪ್ಪಾ!”
ಬೈಬಲ್ ಸೂತ್ರ: “ನೀವು ನಿಮ್ಮ ದೇವರಾದ ಯೆಹೋವನನ್ನು ಪೂರ್ಣಹೃದಯದಿಂದಲೂ ಪೂರ್ಣಪ್ರಾಣದಿಂದಲೂ ಪೂರ್ಣಶಕ್ತಿಯಿಂದಲೂ ಪ್ರೀತಿಸಬೇಕು. ನಾನು ಈಗ ನಿಮಗೆ ತಿಳಿಸುವ ಮಾತುಗಳು ನಿಮ್ಮ ಹೃದಯದಲ್ಲಿರಬೇಕು.”—ಧರ್ಮೋಪದೇಶಕಾಂಡ 6:5, 6.
ಒಬ್ಬ ತಂದೆಯ ಜವಾಬ್ದಾರಿಯಲ್ಲಿ ಈ ಐದು ಅಂಶಗಳಿಗಿಂತ ಇನ್ನು ಜಾಸ್ತಿ ವಿಷಯಗಳಿವೆ. ನಿಜಹೇಳಬೇಕಂದ್ರೆ ಈ ಲೋಕದಲ್ಲಿ ಯಾರೂ ಪರಿಪೂರ್ಣ ತಂದೆ ಇಲ್ಲ. ಆದರೆ ಈ ಲೇಖನದಲ್ಲಿ ತಿಳಿಸಿರುವ ಸಲಹೆ ಸೂಚನೆಗಳನ್ನು ನಿಮ್ಮ ಕೈಲಾದಷ್ಟು ಪಾಲಿಸುವಲ್ಲಿ ನೀವು ಖಂಡಿತ ಒಬ್ಬ ಒಳ್ಳೇ ಅಪ್ಪನಾಗಿ ನಿಮ್ಮ ಪಾತ್ರ ನಿರ್ವಹಿಸಲು ಸಾಧ್ಯ. * ◼ (g13-E 03)
[ಪಾದಟಿಪ್ಪಣಿಗಳು]
^ ಈ ಲೇಖನದಲ್ಲಿ ಕೆಲವು ಹೆಸರುಗಳನ್ನು ಬದಲಿಸಲಾಗಿದೆ.
^ ಒಂದುವೇಳೆ ಮಕ್ಕಳು ತನ್ನ ಮೊದಲ ಹೆಂಡತಿಯ ಮಕ್ಕಳಾಗಿದ್ದರೂ ಈಗಿರುವ ಹೆಂಡತಿಯನ್ನು ಮರ್ಯಾದೆ ಗೌರವದಿಂದ ಉಪಚರಿಸಬೇಕು. ಆಗ ಮಕ್ಕಳು ಸಹ ಈ ಮಲತಾಯಿಯೊಂದಿಗೆ ಒಳ್ಳೇ ಸಂಬಂಧ ಬೆಸೆಯಲು ನೆರವಾಗುತ್ತೆ.
^ ಕುಟುಂಬ ಜೀವನಕ್ಕೆ ಸಂಬಂಧಿಸಿದ ಹೆಚ್ಚಿನ ಸೂತ್ರಗಳಿಗಾಗಿ ಕುಟುಂಬ ಸಂತೋಷದ ರಹಸ್ಯ ಅನ್ನೋ ಪುಸ್ತಕ ನೋಡಿ. ಇದು www.dan124.com ವೆಬ್ ಸೈಟ್‌ನಲ್ಲೂ ಲಭ್ಯ.
[ಪುಟ 6ರಲ್ಲಿರುವ ಚೌಕ/ಚಿತ್ರ]
ಒಳ್ಳೇ ತಂದೆ— ಮಕ್ಕಳ ಜೊತೆ ಸಮಯ ಕಳೆಯುತ್ತಾರೆ
ಬಾರ್ಬಡೋಸ್ ದೇಶದ ಸಿಲ್ವಾನ್ ಎಂಬವರು ಹೆಂಡತಿ ಮತ್ತು ಹದಿಹರೆಯದ ಮೂರು ಗಂಡು ಮಕ್ಕಳೊಂದಿಗೆ ನ್ಯೂಯಾರ್ಕ್ ನಗರದಲ್ಲಿ ನೆಲೆಸಿದ್ದಾರೆ. ಇವರು ಬಸ್ ಚಾಲಕರಾಗಿರುವುದರಿಂದ ಸಮಯ ಹೊಂದಿಸಿಕೊಳ್ಳುವುದು ತುಂಬ ಕಷ್ಟ. ಇವರಿಗೆ ಮಧ್ಯಾಹ್ನ ಮೂರು ಗಂಟೆಯಿಂದ ಬೆಳಗಿನ ಜಾವ ಮೂರು ಅಥವಾ ನಾಲ್ಕು ಗಂಟೆ ವರೆಗೂ ಕೆಲಸ ಇರುತ್ತೆ. ಗುರುವಾರ, ಶುಕ್ರವಾರ ರಜೆ. ಶನಿವಾರ, ಭಾನುವಾರ ರಾತ್ರಿ ಪಾಳಿ. ಆದರೂ ಸಮಯ ಹೊಂದಿಸಿಕೊಂಡು ಮಕ್ಕಳ ಜೊತೆ ಸಮಯ ಕಳೆಯುತ್ತಾರೆ.
“ಈ ರೀತಿ ಸಮಯ ಹೊಂದಿಸಿಕೊಳ್ಳೋದು ಅಷ್ಟು ಸುಲಭವಲ್ಲ ಆದ್ರೂ ಪ್ರಯತ್ನಿಸ್ತೀನಿ. ನನ್ನ ಮೂರು ಮಕ್ಕಳ ಜೊತೆನೂ ಸಮಯ ಕಳೆಯಬೇಕಾಗುತ್ತೆ. ಗುರುವಾರ ಮಧ್ಯಾಹ್ನ ನನ್ನ ಹಿರಿಯ ಮಗ ಶಾಲೆ ಮುಗಿಸಿ ಮನೆಗೆ ಬಂದ್ಮೇಲೆ ಅವತ್ತಿಡೀ ಅವನ ಜೊತೆ ಸಮಯ ಕಳಿತೀನಿ. ಶುಕ್ರವಾರ ಎರಡನೇ ಮಗನ ಜೊತೆ. ಭಾನುವಾರ ಬೆಳಿಗ್ಗೆ ನನ್ನ ಚಿಕ್ಕ ಮಗನಿಗೆ ಮೀಸಲು.”
[ಚಿತ್ರ]
[ಪುಟ 7ರಲ್ಲಿರುವ ಚೌಕ/ಚಿತ್ರ]
ಮಕ್ಕಳ ಮೆಚ್ಚುಗೆಯ ಮಾತುಗಳು
“ಪಪ್ಪಾ ನನ್ನ ಜೊತೆ ಆಟ ಆಡ್ತಾರೆ. ರಾತ್ರೀಲಿ ನನಗೆ ಕತೆ ಓದಿ ಹೇಳ್ತಾರೆ.” —ಸಿಯೆರ, ವಯಸ್ಸು 5.
“ನನ್ನ ಪಪ್ಪ ಹೇಗೆ ಗೊತ್ತಾ, ಎಲ್ಲರೂ ಜಾಲಿಯಾಗಿ ಆಟವಾಡಿದ ಮೇಲೆ ‘ಬನ್ನಿ ಬನ್ನಿ ಈಗ ಶುಚಿ ಮಾಡೋಣ’ ಅಂತ ಹೇಳುತ್ತಾರೆ. ಅದೇ ರೀತಿ ತುಂಬ ಕೆಲಸ ಮಾಡ್ತಿರುವಾಗ ‘ಬನ್ನಿ ಸ್ವಲ್ಪ ಹೊತ್ತು ಎಂಜಾಯ್ ಮಾಡೋಣ’ ಅಂತ ಕರೆದುಕೊಂಡು ಹೋಗುತ್ತಾರೆ.” —ಮೈಕೆಲ್ ವಯಸ್ಸು 10.
“ನನ್ನ ಪಪ್ಪನಿಗೆ ಎಷ್ಟೇ ಕೆಲಸ ಇದ್ರು ಮನೆಯಲ್ಲಿ ಅಮ್ಮನಿಗೆ ಸಹಾಯ ಮಾಡೋದ್ನ ಮಾತ್ರ ತಪ್ಪಿಸಲ್ಲ. ಇಷ್ಟು ವರ್ಷಗಳಾದ್ರು ಈಗ್ಲೂ ಕೆಲವೊಂದು ಸಲ ಅಮ್ಮನ ಕೂರಿಸಿ ಅಪ್ಪ ಅಡುಗೆ ಮಾಡ್ತಾರೆ, ಪಾತ್ರೆ ತೊಳಿತಾರೆ. ಮನೆ ಶುಚಿ ಮಾಡಕ್ಕೂ ಸಹಾಯಮಾಡ್ತಾರೆ, ಅಮ್ಮನನ್ನು ಪ್ರೀತಿ ಜತನದಿಂದ ನೋಡ್ಕೊಳ್ತಾರೆ.”—ಆ್ಯಂಡ್ರು, ವಯಸ್ಸು 32.
[ಚಿತ್ರ]
[ಪುಟ 4ರಲ್ಲಿರುವ ಚಿತ್ರ]
[ಪುಟ 5ರಲ್ಲಿರುವ ಚಿತ್ರ]
ಸಮಾಧಾನದಿಂದ ಪೂರ್ತಿ ವಿಷಯ ಆಲಿಸಿ
[ಪುಟ 6ರಲ್ಲಿರುವ ಚಿತ್ರ]
[ಪುಟ 7ರಲ್ಲಿರುವ ಚಿತ್ರ]