ಮುಖಪುಟ ಲೇಖನ
ನಾನ್ಯಾಕೆ ಬದುಕಿರಬೇಕು?
ಡಯಾನ * ತುಂಬ ಜಾಣೆ. ಸ್ನೇಹಮಯಿ. ನಗು ನಗುತ್ತಾ ಎಲ್ಲರೊಂದಿಗೆ ಬೆರೆಯುವಂಥವಳು. ಆದರೆ ಈ ತರುಣಿಯ ನಗುಮುಖದ ಹಿಂದೆ ಒಳಗೊಳಗೆ ಕಿತ್ತು ತಿನ್ನುವ ಹತಾಶೆ. ‘ನಾನಿದ್ದು ಏನೂ ಪ್ರಯೋಜನವಿಲ್ಲ’ ಎಂಬ ಭಾವನೆಯಿಂದ ಕುಗ್ಗಿಹೋಗುತ್ತಾಳೆ. ದಿನಗಳಾದರೂ ವಾರಗಳಾದರೂ ಕೆಲವೊಮ್ಮೆ ತಿಂಗಳುಗಳಾದರೂ ಆ ಒಳಮನಸ್ಸಿನ ತಾಕಲಾಟದಿಂದ ಹೊರಬರಲು ಆಗುವುದಿಲ್ಲ. “ ‘ನನಗೆ ಸಾವಾದರೂ ಬರಬಾರದಾ?’ ಎಂದು ಯೋಚಿಸದ ದಿನವೇ ಇಲ್ಲ. ನಾನು ಸತ್ತರೆ ಭೂಮಿಗೆ ಭಾರ ಕಡಿಮೆ ಆಗುತ್ತೆ ಎಂದು ಅನಿಸುತ್ತದೆ” ಅನ್ನುತ್ತಾಳವಳು.
‘ನ್ಯಾಷನಲ್ ಕ್ರೈ೦ ರೆಕಾರ್ಡ್ ಬ್ಯೂರೋ ವರದಿಸಿದ ಪ್ರಕಾರ, 2012ರಲ್ಲಿ ಭಾರತದಲ್ಲಿ 1,35,445 ಜನ ಆತ್ಮಹತ್ಯೆ ಮಾಡಿಕೊಂಡರು. ಸರಾಸರಿ ಪ್ರತಿ ತಾಸಿಗೆ 15 ಜನ, ದಿನಕ್ಕೆ 371 ಜನ. ಇವರಲ್ಲಿ 242 ಪುರುಷರು, 129 ಸ್ತ್ರೀಯರು.’—ದ ಹಿಂದು ವಾರ್ತಾಪತ್ರಿಕೆ, 26 ಜೂನ್ 2013.
ತಾನೆಂದೂ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ, ಆದರೆ, ತಾನು ಬದುಕಿರುವುದರಲ್ಲಿ ಯಾವ ಅರ್ಥವೂ ಇಲ್ಲವೆಂದು ಆಗಾಗ ಅನಿಸುತ್ತದೆ ಎನ್ನುತ್ತಾಳೆ ಡಯಾನ. “ಯಾವುದಾದರೂ ಅಪಘಾತದಲ್ಲಿ ಸತ್ತುಹೋದರೆ ಸಾಕಪ್ಪ ಅಂದುಕೊಳ್ತೇನೆ. ಸಾವು ನನಗೆ ಶತ್ರುವಲ್ಲ, ಮಿತ್ರ ಎಂದನಿಸುತ್ತದೆ.”
ಇದೇ ರೀತಿಯ ತೊಳಲಾಟದಿಂದ ಅನೇಕ ಜನರು ಬೆಂದು ನೊಂದು ಹೋಗಿದ್ದಾರೆ. ಇಂಥ ಸಮಯದಲ್ಲಿ ಕೆಲವರಿಗೆ ಆತ್ಮಹತ್ಯೆಯ ಯೋಚನೆ ಮನದೊಳಗೆ ಸುಳಿದಿದೆ. ಇನ್ನು ಕೆಲವರು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ ಕೂಡ. ಪರಿಣತರು ಹೇಳುವ ಪ್ರಕಾರ, ಅಂಥವರಲ್ಲಿ ಹೆಚ್ಚಿನವರಿಗೆ ತಮ್ಮ ಜೀವನಕ್ಕೆ ಅಂತ್ಯ ಹಾಡಲು ಇಷ್ಟವಿರುವುದಿಲ್ಲ ಬದಲಿಗೆ ತಮಗಿರುವ ಸಂಕಷ್ಟವನ್ನು ಕೊನೆಗಾಣಿಸಲು ಬಯಸುತ್ತಾರೆ. ಸರಳವಾಗಿ ಹೇಳುವುದಾದರೆ, ಸಾಯಲು ತಮಗೆ ಕಾರಣ ಇದೆಯೆಂದು ಅನಿಸುವ ಅವರಿಗೆ ನಿಜವಾಗಿ ಬೇಕಿರುವುದು ಬದುಕಲಿಕ್ಕೊಂದು ಕಾರಣ.
ಸಾಯಲು ನೂರು ಕಾರಣಗಳಿರಬಹುದು. ಆದರೆ ಬದುಕಲಿಕ್ಕೆ ಇರುವ ಮೂರು ಕಾರಣಗಳನ್ನು ಮುಂದೆ ಗಮನಿಸಿ.
^ ಪ್ಯಾರ. 3 ಹೆಸರನ್ನು ಬದಲಾಯಿಸಲಾಗಿದೆ.