ನಿಷೇಧದ ಕೆಳಗಿರುವಾಗ ಬೈಬಲ್ ಸಾಹಿತ್ಯವನ್ನು ಮುದ್ರಿಸುವುದು
ನಿಷೇಧದ ಕೆಳಗಿರುವಾಗ ಬೈಬಲ್ ಸಾಹಿತ್ಯವನ್ನು ಮುದ್ರಿಸುವುದು
ಮಲ್ಕಮ್ ಜಿ. ವೇಲ್ರಿಂದ ಹೇಳಲ್ಪಟ್ಟ ಪ್ರಕಾರ
“ಚಿಲ್ಡ್ರೆನ್ ಪುಸ್ತಕವನ್ನು ಮುದ್ರಿಸು.” ಈ ಆಶ್ಚರ್ಯಕರ ಆದೇಶವು ನನಗೆ ಸಿಕ್ಕಿದ್ದು, ಯೆಹೋವನ ಸಾಕ್ಷಿಗಳ ಆಸ್ಟ್ರೇಲಿಯದ ಬ್ರಾಂಚ್ ಮೇಲ್ವಿಚಾರಕರಿಂದ 2 ನೆಯ ಲೋಕ ಯುದ್ಧದ ಸಮಯದಲ್ಲಿ, ಅಮೆರಿಕದ ಮಿಸ್ಸೂರಿಯ ಸೈಂಟ್ ಲೂಯಿಯಲ್ಲಿ ಆಗಸ್ಟ್ 10, 1941 ರ ಅಧಿವೇಶನದಲ್ಲಿ ಆ ಪುಸ್ತಕದ ಬಿಡುಗಡೆಯಾದ ಸ್ವಲ್ಪ ಸಮಯದಲ್ಲೇ. ಆ ಆದೇಶವು ಆಶ್ಚರ್ಯಕರವಾಗಿತ್ತು ಏಕೆ?
ಒಳ್ಳೇದು, ನಮ್ಮ ಸಾರುವ ಕೆಲಸವು ಜನವರಿ 1941 ರಲ್ಲಿ ಶಾಸನಬಾಹಿರವಾಗಿತ್ತಾದರ್ದಿಂದ ಒಂದು ಸೀಮಿತ ರೀತಿಯಲ್ಲಿ ಮುದ್ರಿಸುವುದನ್ನು ಮುಂದುವರಿಸುವುದು ಕೂಡ ಪಂಥಾಹ್ವಾನವಾಗುತ್ತಿತ್ತು. ಅದಲ್ಲದೆ, ಚಿಲ್ಡ್ರನ್ ಪುಸ್ತಕವು 384 ಪುಟಗಳ ಪೂರಾ-ಬಣ್ಣದ ಚಿತ್ರಗಳುಳ್ಳದ್ದಾಗಿತ್ತು. ನಮ್ಮ ಮುದ್ರಣ ಉಪಕರಣವನ್ನು ಊರ್ಜಿತಗೊಳಿಸಬೇಕಿತ್ತು, ಕಾಗದದ ಅಭಾವವಿತ್ತು, ಮತ್ತು ಬೌಂಡ್ ಪುಸ್ತಕಗಳನ್ನು ತಯಾರಿಸಲು ಸಿಬ್ಬಂದಿಗೆ ತರಬೇತು ಇರಲಿಲ್ಲ.
ನಿಷೇಧದ ಕೆಳಗಿರುವಾಗ ಮುದ್ರಿಸುವುದರಲ್ಲಿ ನಾವು ಹೇಗೆ ಯಶಸ್ವಿಗಳಾದೆವೆಂದು ತಿಳಿಸುವ ಮೊದಲು, ಮುದ್ರಣ ಕಾರ್ಯಗತಿಯ ಮೇಲ್ವಿಚಾರಕನಾಗಿ ಅಸ್ಟ್ರೇಲಿಯನ್ ಬ್ರಾಂಚ್ ಆಫೀಸ್ನೊಂದಿಗೆ ಸೇವೆಮಾಡಲು ಬಂದದ್ದು ಹೇಗೆಂಬದನ್ನು ನಿಮಗೆ ಹೇಳುತ್ತೇನೆ.
ಆರಂಭದ ಹಿನ್ನೆಲೆ
ಎಲ್ಲಿ 1914 ರಲ್ಲಿ ನಾನು ಜನಿಸಿದೆನೋ ಆ ವಿಕ್ಟೋರಿಯದ ಸಮೃದ್ಧ ಶಹರವಾದ ಬಲ್ಲಾರಟ್ನಲ್ಲಿ, ನನ್ನ ತಂದೆಯು ಒಂದು ಮುದ್ರಣ ವ್ಯಾಪಾರದ ಮಾಲಕರಾಗಿದ್ದರು. ಹೀಗೆ ತಂದೆಯ ಪ್ರಿಂಟರಿಯಲ್ಲಿ ಕೆಲಸಮಾಡುತ್ತಾ ನಾನು ಮುದ್ರಣ ವ್ಯಾಪಾರವನ್ನು ಕಲಿತುಕೊಂಡೆನು. ಚರ್ಚ್ ಆಫ್ ಇಂಗ್ಲೆಂಡ್ನ ಚಟುವಟಿಕೆಗಳಲ್ಲಿ ಸಹ, ಚರ್ಚ್ ಗಾಯಕವೃಂದದಲ್ಲಿ ಹಾಡುತ್ತಾ ಮತ್ತು ಚರ್ಚ್ ಗಂಟೆಗಳನ್ನು ಬಾರಿಸುತ್ತಾ, ನಾನು ಒಳಗೂಡಿದ್ದೆ. ಸಂಡೇ ಸ್ಕೂಲ್ನಲ್ಲಿ ಕಲಿಸುವ ಪ್ರತೀಕ್ಷೆ ಕೂಡ ನನಗಿತ್ತು ಆದರೆ, ಇದರ ಕುರಿತು ಮನಸ್ಸಿನಲ್ಲಿ ಆತಂಕವಿತ್ತು.
ಇದಕ್ಕೆ ಕಾರಣ ನಿರ್ದಿಷ್ಟ ಚರ್ಚ್ ಬೋಧನೆಗಳ ಕುರಿತು ನನಗಿದ್ದ ಗಂಭೀರವಾದ ಪ್ರಶ್ನೆಗಳೇ. ಅವುಗಳಲ್ಲಿ ತ್ರಯೈಕ್ಯ, ನರಕಾಗ್ನಿ, ಮತ್ತು ಮಾನವ ಆತ್ಮದ ಅಮರತ್ವ ಸೇರಿದ್ದವು ಮತ್ತು
ನನಗೆ ಯಾರೂ ಸಮರ್ಪಕವಾದ ಉತ್ತರಗಳನ್ನು ಕೊಡಲಿಲ್ಲ. ತಮ್ಮನ್ನು ಯೆಹೋವನ ಸಾಕ್ಷಿಗಳೆಂದು ಕರೆಯುತ್ತಿದ್ದ ಒಂದು ಚಿಕ್ಕ ಧಾರ್ಮಿಕ ಗುಂಪಿನ ಕುರಿತು ನಮ್ಮ ಪಾದ್ರಿಯು ಆಗಿಂದಾಗ್ಗೆ ಕೋಪದಿಂದ ಮಾತಾಡುತ್ತಿದ್ದದ್ದು ಸಹ ನನ್ನನ್ನು ತಬ್ಬಿಬ್ಬುಗೊಳಿಸಿತ್ತು. ಅಂಥ ಒಂದು ನಿಕೃಷ್ಟ ಗುಂಪು 40,000 ಜನರ ಒಂದು ಶಹರಕ್ಕೆ ಅಷ್ಟು ಚಿಂತೆಯನ್ನು ತರಬೇಕಾದರೂ ಯಾಕೆಂದು ನಾನು ಯೋಚಿಸಿದ್ದೆನು.ಒಂದು ಭಾನುವಾರ ಸಂಜೆಯ ಆರಾಧನೆಯ ನಂತರ ನಾನು ಚರ್ಚಿನ ಹೊರಗೆ ನಿಂತಿದ್ದಾಗ, ಸಮೀಪದ ಮೆತೊಡಿಸ್ಟ್ ಚರ್ಚಿನಿಂದ ಹುಡುಗಿಯರ ಒಂದು ಗುಂಪು ಹಾದುಹೋಯಿತು. ಅವರಲ್ಲಿ ಒಬ್ಬಳೊಂದಿಗೆ ನಾನು ಸ್ನೇಹಸಲ್ಲಾಪ ಪ್ರಾರಂಭಿಸಿದೆನು. ಅವಳ ಹೆಸರು ಲೂಸಿ, ಮತ್ತು ಕೊನೆಗೆ ತನ್ನ ಹೆತ್ತವರನ್ನು ಭೇಟಿಯಾಗಲು ನನ್ನನ್ನು ಆಕೆ ತನ್ನ ಮನೆಗೆ ಆಮಂತ್ರಿಸಿದಳು. ಆಕೆಯ ತಾಯಿ ವೇರ ಕ್ಲಾಗನ್, ಯೆಹೋವನ ಸಾಕ್ಷಿಗಳಲ್ಲಿ ಒಬ್ಬಳೆಂದು ಕೇಳಿದಾಗ ನನಗಾದ ಆಶ್ಚರ್ಯವನ್ನು ಊಹಿಸಿಕೊಳ್ಳಿರಿ. ನಮ್ಮ ನಡುವೆ ಅನೇಕ ಸಚೇತನ ಬೈಬಲ್ ಚರ್ಚೆಗಳಾದವು, ಮತ್ತು ಅವಳಂದ ವಿಷಯಗಳು ನಿಜವಾಗಿ ಸಮಂಜಸವಾಗಿ ಕಂಡವು.
ಕೊಂಚ ಸಮಯದಲ್ಲೇ ಲೂಸಿ ಮತ್ತು ನಾನು ಮದುವೆಯಾದೆವು, ಮತ್ತು 1939 ರೊಳಗೆ ವಿಕ್ಟೋರಿಯದ ರಾಜಧಾನಿ ಮೆಲ್ಬರ್ನ್ನಲ್ಲಿ ವಾಸಿಸತೊಡಗಿದೆವು. ಲೂಸಿ ಒಬ್ಬ ಯೆಹೋವನ ಸಾಕ್ಷಿಯಾಗಿ ಪರಿಣಮಿಸಿದ್ದರೂ, ನಾನಿನ್ನೂ ನಿರ್ಣಯಿಸಲಾರದಿದ್ದೆನು. ಆದರೆ ಆ ವರ್ಷದ ಸಪ್ಟಂಬರದಲ್ಲಿ 2 ನೆಯ ಲೋಕ ಯುದ್ಧವು ಆರಂಭಗೊಂಡಾಗ, ಶಾಸ್ತ್ರಗ್ರಂಥದಲ್ಲಿ ನಾನು ಕಲಿತ ವಿಷಯಗಳ ಕುರಿತು ನಾನು ಗಂಭೀರವಾಗಿ ಯೋಚಿಸ ತೊಡಗಿದೆನು. ಜನವರಿ 1941 ರಲ್ಲಿ ಯೆಹೋವನ ಸಾಕ್ಷಿಗಳ ಕಾರ್ಯದ ನಿಷೇಧವು, ನಿಜವಾಗಿಯೂ ನಾನು ನಿರ್ಣಯಿಸುವಂತೆ ಸಹಾಯಮಾಡಿತು. ನಾನು ಯೆಹೋವ ದೇವರಿಗೆ ನನ್ನ ಜೀವನವನ್ನು ಸಮರ್ಪಿಸಿಕೊಂಡೆನು ಮತ್ತು ಆನಂತರ ಬೇಗನೆ ನನಗೆ ದೀಕ್ಷಾಸ್ನಾನವಾಯಿತು.
ನಮ್ಮ ಜೀವಿತಗಳಲ್ಲಿ ಗಮನಾರ್ಹ ಬದಲಾವಣೆಗಳು
ಆ ಸಮಯದಲ್ಲಿ ನಾವು ಮೆಲ್ಬರ್ನ್ನಲ್ಲಿ ಒಂದು ಆರಾಮಕರ ವಸತಿಯನ್ನು ಬಾಡಿಗೆ ಹಿಡಿದಿದ್ದೆವು. ಆದರೂ, ತುಸು ಸಮಯದೊಳಗೆ, ಹಲವಾರು ಬೇರೆ ಸಾಕ್ಷಿಗಳಿದ್ದ ಮನೆಗೆ ಸ್ಥಳಬದಲಾಯಿಸುವಂತೆ ನಾವು ಆಮಂತ್ರಿಸಲ್ಪಟ್ಟೆವು. ನಾವು ನಮ್ಮ ಮಲಗುವ ಕೋಣೆಯ ಪೀಠೋಪಕರಣಗಳನ್ನು ಬಿಟ್ಟು ಬೇರೆಲ್ಲವನ್ನು ಮಾರಿಬಿಟ್ಟೆವು ಮತ್ತು ಪಯನೀಯರ್ ಹೋಮ್ ಎಂದು ಕರೆಯಲ್ಪಟ್ಟಿದ್ದ ಸ್ಥಳವನ್ನು ಸೇರಿದೆವು. ನಾನು ಪ್ರಿಂಟರ್ ಆಗಿ ಕೆಲಸಮಾಡುವುದನ್ನು ಮುಂದರಿಸಿದೆನು ಮತ್ತು ಆ ಮನೆಯನ್ನು ನಡಿಸುವ ಖರ್ಚಿನೆಡೆಗೆ ನೆರವನ್ನೀಯಲು ಶಕ್ತನಾದೆನು. ಬೇರೆ ಗಂಡಂದಿರು ಸಹ ಹಾಗೆಯೇ ಮಾಡಿದ್ದರು. ಫಲಿತಾಂಶವಾಗಿ, ನಮ್ಮ ಪತ್ನಿಯರು ಪೂರ್ಣ-ಸಮಯದ ಸಾರುವ ಚಟುವಟಿಕೆಯಲ್ಲಿ ಭಾಗವಹಿಸಲು ಶಕ್ತರಾದರು, ಮತ್ತು ನಾವು ಪುರುಷರು, ಸಂಜೆಗಳಲ್ಲಿ ಮತ್ತು ವಾರಾಂತ್ಯಗಳಲ್ಲಿ ಅವರೊಂದಿಗೆ ಸೌವಾರ್ತಿಕ ಸೇವೆಯಲ್ಲಿ ಮತ್ತು ಕ್ರೈಸ್ತ ಕೂಟಗಳಲ್ಲಿ ಪಾಲಿಗರಾದೆವು.
ಅನಂತರ ಸ್ವಲ್ಪದರಲ್ಲಿಯೇ, ನಮ್ಮನ್ನು ಸಿಡ್ನಿಗೆ ಬರುವಂತೆ ಆಮಂತ್ರಿಸಿದ ಪತ್ರವೊಂದು ವಾಚ್ಟವರ್ ಸೊಸೈಟಿಯ ಬ್ರಾಂಚ್ ಆಫೀಸಿನಿಂದ ನನ್ನ ಹೆಂಡತಿಗೆ ಮತ್ತು ನನಗೆ ಸಿಕ್ಕಿತು. ನಾವು ನಮ್ಮ ಮಲಗುವ ಕೋಣೆಯ ಪೀಠೋಪಕರಣಗಳನ್ನು ಮಾರಿ ನಮಗಿದ್ದ ಕೆಲವು ಸಾಲಗಳನ್ನು ತೀರಿಸಿದೆವು, ಆದರೆ, ಸಿಡ್ನಿಗೆ ಹೋಗಲು ರೈಲುಗಾಡಿಯ ಖರ್ಚಿಗಾಗಿ ಲೂಸಿಯ ನಿಶಿತ್ಚಾರ್ಥದ ಉಂಗುರವನ್ನು ಮಾರಬೇಕಾಯಿತು!
ಯುದ್ಧಕಾಲದ ನಿರ್ಬಂಧಗಳು ಮತ್ತು ಇತ್ತೀಚೆಗೆ ಹಾಕಲ್ಪಟ್ಟ ನಿಷೇಧದ ಕಾರಣ, ಪರದೇಶದಿಂದ ಯಾವ ಬೈಬಲ್ ಯಾ ಬೈಬಲ್ ಸಾಹಿತ್ಯವನ್ನು ಆಮದು ಮಾಡುವಂತಿರಲಿಲ್ಲ. ಈ ಕಾರಣದಿಂದಾಗಿ ಆಸ್ಟ್ರೇಲಿಯನ್ ಬ್ರಾಂಚ್ ಆಫೀಸು ಒಂದು ಭೂಗತ ಪ್ರಿಂಟಿಂಗ್ ಕಾರ್ಯಗತಿಯನ್ನು ಸ್ಥಾಪಿಸಿ, ಆತ್ಮಿಕ ಅಹಾರದ ಹೊನಲನ್ನು ಮುಂದುವರಿಸಲು ನಿರ್ಣಯಿಸಿತು, ಮತ್ತು ಆ ಕೆಲಸದ ಮೇಲ್ವಿಚಾರಣೆ ನಡಿಸಲು ನನ್ನನ್ನು ಆಮಂತ್ರಿಸಲಾಗಿತ್ತು. ಆಸ್ಟ್ರೇಲಿಯನ್ ಬ್ರಾಂಚ್ ಪ್ರಿಂಟರಿಯಲ್ಲಿ ಸುಮಾರು 60 ವರ್ಷ ಸೇವೆಮಾಡಿದ್ದ ಸ್ಕಾಟ್ಲೆಂಡಿನ ಜಾರ್ಜ್ ಗಿಬ್, ಇವರ ಸಂಗಡ ಕೆಲಸ ಮಾಡುವ ಸುಯೋಗವು ನನ್ನದಾಯಿತು. * “ಚಿಲ್ಡ್ರೆನ್ ಪುಸ್ತಕವನ್ನು ಮುದ್ರಿಸು” ಎಂಬ ಆದೇಶವನ್ನು ನಾನು ಪಡೆದದ್ದು ಆಗಲೇ.
ಮುದ್ರಣ ಉಪಕರಣವನ್ನು ಮರಳಿಪಡೆಯುವುದು
ಆ ವಿಶೇಷ ಘಟನಾವಳಿಗಳ ಯುದ್ಧ ವರ್ಷಗಳಲ್ಲಿ ನಮಗಾದ ಉದ್ರೇಕಿಸುವ, ಕೆಲವೊಮ್ಮೆ ನವಿರೇಳಿಸುವ ಅನುಭವಗಳಾದರೋ ಆನೇಕ. ದೃಷ್ಟಾಂತಕ್ಕೆ, ನಮ್ಮ ಪ್ರಿಂಟಿಂಗ್ ಕಾರ್ಯಗತಿಯನ್ನು ಪ್ರಾರಂಭಿಸುವುದಕ್ಕೆ ಉಪಕರಣಗಳು ನಮಗೆ ಬೇಕಾಗಿದ್ದವು. ಸೀಮಿತ ಮುದ್ರಣವನ್ನು ಮಾಡಲು ಯುದ್ಧಪೂರ್ವ ವರ್ಷಗಳಲ್ಲಿ ನಾವು ಏನನ್ನು ಬಳಸುತ್ತಿದ್ದೆವೋ ಅದು ಸರಕಾರಿ ಅಧಿಕಾರಿಗಳಿಂದ ಜಫ್ತಾಗಿತ್ತು, ಮತ್ತು ಈಗ ಸೊಸೈಟಿಯ ಚಿಕ್ಕ ಛಾಪಖಾನೆಗೆ ಬೀಗಹಾಕಿ, ಕಾವಲಿಡಲಾಗಿತ್ತು. ಭೂಗತ ಮುದ್ರಣಕ್ಕಾಗಿ ತಕ್ಕದಾದ ಸ್ಥಳಗಳಿಗೆ ಒಯ್ಯಲು ಆ ಉಪಕರಣವನ್ನು ನಾವು ಹೊರತೆಗೆಯುವುದಾದರೂ ಹೇಗೆ?
ಶಸ್ತ್ರಸಜ್ಜಿತ ಕಾವಲುಗಾರರು, ಸರದಿಯಲ್ಲಿ ಕೆಲಸಮಾಡುತ್ತಾ, ಸೊಸೈಟಿಯ ಆಸ್ತಿಯನ್ನು ದಿನದ 24 ತಾಸೂ ಕಾಯುತ್ತಿದ್ದರು. ಆದರೂ, ಹಿಂದಿನ ಗೋಡೆಗಳಲ್ಲೊಂದು ಕೊಂಚವೇ-ಬಳಸಲ್ಪಡುತ್ತಿದ್ದ ರೈಲ್ವೆ ಕಂಬಿದಾರಿಯ ಅಂಚಿನಲ್ಲಿತ್ತು. ಹೀಗೆ ರಾತ್ರಿಯಲ್ಲಿ, ಯೆಹೆಜ್ಕೇಲ 12:5-7 ನ್ನು ನೆನಪಿಸುವ ವಿಧಾನಗಳನ್ನುಪಯೋಗಿಸಿ, ಕೆಲವು ಸಾಹಸಿಗ ಬೆತೆಲ್ ಕೆಲಸಗಾರರು ಕೆಲವು ಇಟ್ಟಿಗೆಗಳನ್ನು ಕಳಚಿ ಗೋಡೆಯ ಮೂಲಕ ಒಳಗೆ ಪ್ರವೇಶಿಸಿದರು. ಒಮ್ಮೆ ಒಳಗೆ ಸೇರಿದಾಗ, ಕಳಚಿದ ಇಟ್ಟಿಗೆಗಳನ್ನು ಪತ್ತೆಹಚ್ಚದಂತೆ ಹಿಂದೆ ಗೋಡೆಗಿಟ್ಟರು. ಸುಮಾರು ಎರಡು ವಾರಗಳ ತನಕ ಈ ರಾತ್ರಿವೇಳೆಯ ಧಾಳಿಗಳನ್ನು ಮಾಡುವ ಮೂಲಕ, ಒಂದು ಚಿಕ್ಕ ಮುದ್ರಣ ಯಂತ್ರ, ಒಂದು ಲಿನೊಟೈಪ್, ಮತ್ತು ಕೆಲವು ಬೇರೆ ಮೆಶಿನುಗಳನ್ನು ಜಾಗರೂಕತೆಯಿಂದ ಬಿಚ್ಚಿದರು. ಅನಂತರ ಸದ್ದಿಲ್ಲದೆ ಆ ಸಾಮಾನುಗಳನ್ನು, ಉದ್ಯುಕ್ತ ಕಾವಲುಗಾರರ ಕಣ್ಣಮುಂದೆಯೇ ಹೊರಗೆ ಸಾಗಿಸಿದರು!
ತಕ್ಕ ಸಮಯದಲ್ಲಿ ಬೇರೆ ಮೂಲಗಳಿಂದ ಅಧಿಕ ಉಪಕರಣಗಳನ್ನು ನಾವು ಪಡೆದುಕೊಂಡೆವು, ಬೇಗನೆ ಸಿಡ್ನಿಯಲ್ಲೆಲ್ಲೂ ವಿವಿಧ ಸ್ಥಳಗಳಲ್ಲಿ ಪೂರ್ಣ ಭರದಿಂದ ಕೆಲಸಮಾಡುವ ಭೂಗತ ಮುದ್ರಣ ಕಾರ್ಯಗತಿ ನಮಗಿತ್ತು. ಹೀಗೆ ನಾವು, ಚಿಲ್ಡ್ರೆನ್ ಪುಸ್ತಕವನ್ನು ಮಾತ್ರವಲ್ಲ ಪೂರ್ಣ-ಗಾತ್ರದ ಪುಸ್ತಕಗಳಾದ ದ ನ್ಯೂ ವರ್ಲ್ಡ್, “ದ ಟ್ರೂತ್ ಷಲ್ ಮೇಕ್ ಯು ಫ್ರೀ,” ಮತ್ತು ದ ಕಿಂಗ್ಡಂ ಈಸ್ ಎಟ್ ಹ್ಯಾಂಡ್, ಹಾಗೂ 1942, 1943, 1944, ಮತ್ತು 1945 ರ ಯೆಹೋವನ ಸಾಕ್ಷಿಗಳ ವರ್ಷಪುಸ್ತಕಗಳನ್ನು ಮುದ್ರಿಸಲು ಮತ್ತು ಬೈಂಡ್ಮಾಡಲು ಶಕ್ತರಾದೆವು. ಅದಲ್ಲದೆ, ಆ ಯುದ್ಧ ವರ್ಷಗಳ ನಿಷೇಧದ ಸಮಯದಲ್ಲಿ, ಆಸ್ಟ್ರೇಲಿಯದಲ್ಲಿಲ್ಲಾ ಯೆಹೋವನ ಸಾಕ್ಷಿಗಳು ದ ವಾಚ್ಟವರ್ ನ ಒಂದೇ ಒಂದು ಸಂಚಿಕೆಯನ್ನಾದರೂ ಎಂದೂ ಕಳಕೊಳ್ಳಲಿಲ್ಲ. ಇದು ಯೆಹೋವನ ಹಸ್ತವೆಂದೂ ಮೋಟಲವ್ಲೆಂಬದಕ್ಕೆ ಒಂದು ಅತಿ ವೈಯಕ್ತಿಕ ರೀತಿಯಲ್ಲಿ ನಮಗೆ ಆಶ್ವಾಸನೆ ಕೊಟ್ಟಿತು.—ಯೆಶಾಯ 59:1.
ಅನಿರೀಕ್ಷಿತ ಸಂದರ್ಶನಗಳನ್ನು ನಿಭಾಯಿಸುವುದು
ಯುದ್ಧ ಸಮಯದ ಭಾರಿ ದೋಷ ವಿಮರ್ಶನಾಧಿಕಾರದ ಅವಧಿಯಲ್ಲಿ, ವ್ಯಾಪಾರಿ ಛಾಪಖಾನೆಗಳು ಸರಕಾರಿ ಅಧಿಕಾರಿಗಳಿಂದ, ಅವುಗಳಲ್ಲಿ ಏನು ಮುದ್ರಿಸಲಾಗುತ್ತದೆಂದು ಪರೀಕ್ಷಿಸಲು ಆಗಿಂದಾಗ್ಗೆ ಅನಿರೀಕ್ಷಿತವಾಗಿ ಸಂದರ್ಶಿಸಲ್ಪಡುತ್ತಿದ್ದವು. ಆದುದರಿಂದ, ನಮ್ಮ ಮರೆಮಾಡಲ್ಪಟ್ಟ ಛಾಪಖಾನೆಯೊಂದು ಮುನ್ನೆಚ್ಚರಿಕೆ ಕೊಡುವ ಸಲಕರಣೆಯಿಂದ, ಸ್ವಾಗತಕಾರಳ ಎಟಕಿಗೆ ಸುಲಭವಾಗಿ ನಿಲುಕುವ ನೆಲದ ಮೇಲಿನ ಗುಂಡಿಯಿಂದ ಜೋಡಿಸಲ್ಪಟ್ಟಿತ್ತು. ಅವಳಿಗೆ ಗುರುತಿಲ್ಲದ ಅಥವಾ ಇನ್ಸ್ಪೆಕ್ಟರೋ ಏನೋ ಎಂದು ಸಂದೇಹಕೊಡುವ ಯಾರಾದರೂ ಮೆಟ್ಟಲುಗಳನ್ನೇರಿ ಬಂದಾಗಲೆಲ್ಲಾ, ಅವಳು ಗುಂಡಿಯನ್ನೊತ್ತುತ್ತಿದ್ದಳು.
ಗುಂಡಿಯು ಒತ್ತಲ್ಪಟ್ಟಾಗ, ಸಹೋದರರು ಎಲ್ಲಾ ಕಡೆಗಳಿಂದ ಕಿಟಿಕಿಗಳ ಮೂಲಕ ಪಾರಾಗುವುದು ಒಂದು ದೊಡ್ಡ ನೋಟವಾಗಿತ್ತು! ತಯಾರಾಗುತ್ತಿದ್ದ ವಾಚ್ಟವರ್ ಅಥವಾ ಬೇರೆ ಬೈಬಲ್ ಸಾಹಿತ್ಯದ ಯಾವುದೇ ಮುದ್ರಿತ ಶೀಟುಗಳನ್ನು ಬೇಗನೆ ಮರೆಸಿಡಲು, ಉದ್ಯೋಗಿಗಳಾಗಿ ದಾಖಲೆಯಾಗಿದ್ದ ಕೆಲಸಗಾರರು ಹಿಂದೆ ಉಳಿಯುತ್ತಿದ್ದರು. ಇದನ್ನು ಮಾಡಲು, ಇತರ ವ್ಯಾಪಾರ ಗಿರಾಕಿಗಳಿಗಾಗಿ ತಯಾರಾಗುತ್ತಿರುವ ಬೇರೆ ಪ್ರಕಾಶನಗಳ ಅದೇ ಗಾತ್ರದ ಮುದ್ರಿತ ಹಾಳೆಗಳನ್ನು ಅವರು ಬಳಸುತ್ತಿದ್ದರು.
ಅಂಥ ಒಂದು ಸಂದರ್ಶನದ ಸಮಯದಲ್ಲಿ, ಇಬ್ಬರು ಇನ್ಸ್ಪೆಕ್ಟರರು, ಆಗ ಇನ್ನೂ ದೊಡ್ಡ-ಗಾತ್ರದ ಹಾಳೆಗಳಲ್ಲಿದ್ದ ಕಾಮಿಕ್ ಪುಸ್ತಕಗಳ ಮೇಲೆ ಕೂತುಕೊಂಡರು, ಆದರೆ ಅದರಡಿಯಲ್ಲಿ ಹಿಂದಿನ ರಾತ್ರಿ ಮುದ್ರಿಸಲ್ಪಟ್ಟಿದ್ದ ವಾಚ್ಟವರ್ ಪತ್ರಿಕೆಗಳ ಹಾಳೆಗಳಿದ್ದವು. ಶಹರದ ಇನ್ನೊಂದು ಭಾಗದಲ್ಲಿದ್ದ ಛಾಪಖಾನೆಯಲ್ಲಿ ನಾವು ವ್ಯಾಪಾರದ ಮುದ್ರಣಗಳನ್ನು ದಿನದಲ್ಲಿ ನಡಿಸುತ್ತಿದ್ದೆವು ಮತ್ತು ವಾಚ್ಟವರ್ ಪ್ರಕಾಶನಗಳನ್ನು ರಾತ್ರಿಯಲ್ಲಿ ಮತ್ತು ವಾರಾಂತ್ಯಗಳಲ್ಲಿ ಮುದ್ರಿಸುತ್ತಿದ್ದೆವು.
ನಮ್ಮ ಕಾಗದ ಅಗತ್ಯತೆಗಳನ್ನು ತುಂಬಿಸುವುದು
ಮುದ್ರಣಕ್ಕಾಗಿ ಕಾಗದವನ್ನು ಪಡೆಯುವುದು ಒಂದು ದೊಡ್ಡ ಸಮಸ್ಯೆಯಾಗಿತ್ತು. ಆದರೂ, ಯುದ್ಧದ ಸಮಯದಲ್ಲಿ ವ್ಯಾಪಾರದ ಇಳಿತದ ಕಾರಣ ಪೂರ್ಣ ಕಾಗದದ ಹಿಸ್ಸೆಯ ಆವಶ್ಯಕತೆ ಇಲ್ಲದ ಕೆಲವು ದೊಡ್ಡ ಛಾಪಖಾನೆಗಳು ತಮ್ಮ ಮಿಗುತಾಯಗಳನ್ನು—ನಿಶ್ಚಯವಾಗಿ ಯಾವಾಗಲೂ ಉಬ್ಬಿದ ಬೆಲೆಗೆ—ಮಾರಲು ಸಿದ್ಧರಾಗಿರುತ್ತಿದ್ದರು. ಒಂದು ಸಂದರ್ಭದಲ್ಲಾದರೋ ಇನ್ನೊಂದು ಮೂಲದಿಂದ ನಮಗೆ ಕಾಗದ ಸಿಕ್ಕಿತು.
ಆಸ್ಟ್ರೇಲಿಯದಿಂದ ಬರುತ್ತಿದ್ದ ಒಂದು ಸರಕಿನ ಹಡಗದಲ್ಲಿ ಕಂದುಬಣ್ಣದ ಕಾಗದದ ದೊಡ್ಡ ಮಾಲು ಇತ್ತು, ಆದರೆ ಸಮುದ್ರದಲ್ಲಿ ಹಡಗಿಗೆ ಹಾನಿಯಾದ ಕಾರಣ ನೀರು ಹೆಚ್ಚಿನ ಕಾಗದದೊಳಗೆ ಸ್ರವಿಸಿತ್ತು. ಇಡೀ ಮಾಲನ್ನು ಹರಾಜಿಗೆ ಹಾಕಲಾಯಿತು, ಮತ್ತು ತೀರ ಅನೀರಿಕ್ಷಿತವಾಗಿ, ಹರಾಜಿನಲ್ಲಿ ಬೆಲೆಕೂಗಿದವರು ನಾವೊಬ್ಬರೇ.
ಅದನ್ನು ತೀರ-ತಗ್ಗಿದ ಬೆಲೆಯಲ್ಲಿ ಖರೀದಿಸಲು ಇದು ನಮ್ಮನ್ನು ಶಕ್ತರಾಗಿ ಮಾಡಿತು. ನಾವು ಕಾಗದವನ್ನು ಬಿಸಿಲಲ್ಲಿ ಒಣಗಿಸಿದೆವು, ಹೀಗೆ ಅದರಲ್ಲಿ ಹೆಚ್ಚಿನದನ್ನು ಕಾಪಾಡಿದೆವು, ಅನಂತರ ನಾವದನ್ನು ನಮ್ಮ ಮುದ್ರಣ ಯಂತ್ರಕ್ಕೆ ಸರಿಬೀಳುವಂತೆ ಹಾಳೆಗಳಾಗಿ ಕತ್ತರಿಸಿದೆವು.ಕಂದು ಬಣ್ಣದ ಕಾಗದವನ್ನು ನಾವು ಹೇಗೆ ಉಪಯೋಗಿಸುವೆವು? ನಾವು ಭಾವಿಸಿದೆವು, ಮತ್ತು ಸರಿಯಾಗಿಯೇ, ಏನಂದರೆ ಕಾಮಿಕ್-ಪುಸ್ತಕದ ವಾಚಕರು ಬಣ್ಣದ ಕಾಗದದ ಮೇಲೆ ತಮ್ಮ ಕಾಮಿಕ್ಗಳಲ್ಲಿ ಮತ್ತೂ ಆನಂದಿಸುವರು. ಹೀಗೆ, ಕಾಮಿಕ್ ಪುಸ್ತಕಗಳಿಗಾಗಿ ಗೊತ್ತುಮಾಡಿದ ಬಿಳಿ ಕಾಗದವನ್ನು ನಾವು ವಾಚ್ಟವರ್ ಮತ್ತು ಸೊಸೈಟಿಯ ಇತರ ಪ್ರಕಾಶನಗಳನ್ನು ಮುದ್ರಿಸಲು ಉಪಯೋಗಿಸಿದೆವು.
ಸ್ತ್ರೀಯರ ಮಹತ್ವದ ಪಾತ್ರವು
ಯುದ್ಧದ ವರ್ಷಗಳಲ್ಲಿ, ಆಸ್ಟ್ರೇಲಿಯದಲ್ಲಿ ಅನೇಕ ಕ್ರೈಸ್ತ ಸ್ತ್ರೀಯರು ಬೈಂಡಿಂಗ್ ಮಾಡುವ ಕೆಲಸವನ್ನು ಕಲಿತರು. ಒಂದು ಅತಿರೇಕ ಬೆಚ್ಚಗೆನ ಬೇಸಗೆಯ ಅಪರಾಹ್ಣದಲ್ಲಿ, ಅವರಲ್ಲಿ ಕೆಲವರು, ಸಿಡ್ನಿ ಉಪನಗರದ ಒಂದು ಒಳದಾರಿಯಲ್ಲಿ ನಾವು ಬಾಡಿಗೆಗೆ ತಕ್ಕೊಂಡಿದ್ದ ಒಂದು ಚಿಕ್ಕ ಗ್ಯಾರೆಜ್ನಲ್ಲಿ ಒಂಟಿಗರಾಗಿ ಕೆಲಸ ಮಾಡುತ್ತಿದ್ದರು. ಸುರಕ್ಷೆಯ ಕಾರಣಗಳಿಂದಾಗಿ, ಅವರು ಪ್ರತಿಯೊಂದು ಕಿಟಿಕಿ ಮತ್ತು ಬಾಗಲನ್ನು ಮುಚ್ಚಿದ್ದರು. ಅಂಟಿನ ಮಡಕೆಯು ಬಿಸಿಯಾದ, ನಾರುವ ಹೊಗೆಯನ್ನು ಹಾಯಿಸುತ್ತಿತ್ತು, ಮತ್ತು ಸೆಕೆಯು ಬಹುಮಟ್ಟಿಗೆ ತಡೆಯಲಾರದಷ್ಟಿತ್ತು. ಆದುದರಿಂದ ಅವರು ಬಟ್ಟೆ ಕಳಚಿ ಒಳಉಡುಪಿನಲ್ಲಿ ಉಳಿದರು.
ಥಟ್ಟನೆ, ಬಾಗಲು ತಟ್ಟುವಿಕೆ ಕೇಳಬಂತು. ಯಾರದು, ಎಂದು ಕ್ರೈಸ್ತ ಸಹೋದರಿಯರು ಕೂಗಿ ಕೇಳಿದರು ಮತ್ತು ಒಬ್ಬ ಸರಕಾರಿ ಲೇಬರ್ ಆಫೀಸರನು ಪ್ರತ್ಯುತ್ತರ ಕೊಟ್ಟನು. ಎಲ್ಲಿ ದುಡಿಮೆಯ ಅಗತ್ಯವಿತ್ತೋ ಆ ಯಾವುದೇ ಕ್ಷೇತ್ರಕ್ಕೆ ಜನರನ್ನು ಆದೇಶಿಸುವ ಯುದ್ಧಕಾಲದ ಅಧಿಕಾರಗಳಿದ್ದ ವಿಭಾಗದಿಂದ ಅವನು ಬಂದಿದ್ದನು. ಸೆಕೆಯ ಕಾರಣದಿಂದಾಗಿ ಅವರು ತಮ್ಮ ಒಳಉಡುಪಿನಲ್ಲಿ ಕೆಲಸ ಮಾಡುತ್ತಿರುವುದರಿಂದ ಅವನನ್ನೀಗ ಒಳಗೆ ಬಿಡಲಾರೆವೆಂದು ಸಹೋದರಿಯರು ಗಟ್ಟಿಯಾಗಿ ಉತ್ತರಿಸಿದರು.
ಆಫೀಸರನು ತುಸು ಹೊತ್ತು ಮೌನವಾದನು; ಅನಂತರ ಗಟ್ಟಿಯಾಗಿ, ಆ ಕ್ಷೇತ್ರದಲ್ಲಿ ತನಗೆ ಇನ್ನೊಂದು ಕೆಲಸವಿದೆ ಎಂದನು. ಮತ್ತು ತನ್ನ ತನಿಖೆಯನ್ನು ನಡಿಸಲು ಮಾರಣೆಯ ದಿನ ಹಿಂದೆಬರುವೆನೆಂದನು. ಆ ಕೂಡಲೇ ಈ ಕ್ರೈಸ್ತ ಸ್ತ್ರೀಯರು ನಮಗೆ ಟೆಲಿಫೋನ್ ಮಾಡಿದರು. ಮತ್ತು ನಾವು ಅದೇ ರಾತ್ರಿ ಒಂದು ಲಾರಿಯನ್ನು ಕಳುಹಿಸಿ, ಬೈಂಡಿಂಗ್ ಕೆಲಸದ ಎಲ್ಲಾ ವಸ್ತುಗಳನ್ನು ತೆಗೆದು, ಇನ್ನೊಂದು ಸ್ಥಳಕ್ಕೆ ಬದಲಾಯಿಸಿದೆವು.
ನಮ್ಮ ಭೂಗತ ಮುದ್ರಣ ಕೆಲಸದಲ್ಲಿ ಒಳಗೂಡಿದ್ದ ಹೆಚ್ಚಿನವರಿಗೆ ಮುದ್ರಣ ವ್ಯವಹಾರದಲ್ಲಿ ಕೆಲಸದ ಯಾವ ಪೂರ್ವಾನುಭವವೂ ಇರಲಿಲ್ಲ, ಆದುದರಿಂದ ನಿರ್ವಹಿಸಲ್ಪಟ್ಟ ವಿಷಯಗಳಿಗೆ ಬೇಕಾದ ಸಹಾಯ ಮತ್ತು ಮಾರ್ಗದರ್ಶನವನ್ನು ಯೆಹೋವನ ಆತ್ಮವು ಒದಗಿಸಿತ್ತೆಂಬದಕ್ಕೆ ನನ್ನ ಮನಸ್ಸಿನಲ್ಲಿ ಯಾವ ಸಂದೇಹವೂ ಉಳಿದಿರಲಿಲ್ಲ. ಅದರ ಭಾಗವಾಗಿರುವುದು ನನಗೆ ಮತ್ತು ಬೈಂಡರಿಯಲ್ಲಿ ಕೆಲಸಮಾಡುತ್ತಿದ್ದ ನನ್ನ ಪತ್ನಿ ಲೂಸಿಗೆ ಒಂದು ಮಹಾ ಸುಯೋಗವಾಗಿತ್ತು.
ಆ ಕಷ್ಟಕರ ಸಮಯದಲ್ಲಿ ನಮ್ಮ ಕಾರ್ಯದ ಮೇಲ್ವಿಚಾರವು ನಡಿಸಲ್ಪಟ್ಟದ್ದು ಹೇಗೆ? ಯೆಹೋವನ ಸಾಕ್ಷಿಗಳ ಹಂಗಾಮಿ ಬ್ರಾಂಚ್ ಮೇಲ್ವಿಚಾರಕನು, ಸಿಡ್ನಿಯ ಹೊರಗೆ ಸುಮಾರು 100 ಕಿಲೊಮೀಟರ್ ದೂರದ ಒಂದು ಊರಲ್ಲಿ ವಾಸಿಸುವುದನ್ನು ಅವಶ್ಯಪಡಿಸಿದ ಒಂದು ನಿರ್ಬಂಧಕ ಹುಕುಮನ್ನು ಪಡೆದಿದ್ದನು. ಆ ಹುಕುಮು ಅವನನ್ನು ಆ ಊರಿನ ಮಧ್ಯದ 8 ಕಿಲೊಮೀಟರ್ ವ್ಯಾಸಾರ್ಧಕ್ಕಿಂತ ಹೊರಗೆ ಹೋಗಕೂಡದೆಂದು ವಿಧಿಸಿತ್ತು. ಕಾರಿಗೆ ತಿಂಗಳೊಂದಕ್ಕೆ 4 ಲೀಟರ್ ಪೆಟ್ರೋಲ್ ರೇಷ್ನ್ನಲ್ಲಿ ದೊರೆಯುತ್ತಿತ್ತು. ಆದರೆ ಸಹೋದರರು, ಕಾರಿನ ಹಿಂದೆ ಹೇರಲಾದ ಗ್ಯಾಸ್ ಉತ್ಪಾದಕವೆಂದು ಕರೆಯಲ್ಪಟ್ಟ ಒಂದು ಕೌಶಲದ ಏಕಮಾನವನ್ನು—ಸುಮಾರು ಅರ್ಧ ಟನ್ ಭಾರದ ವರ್ತುಲಾಕೃತಿಯ ಲೋಹದ ತಗಡಿನ ಸಂಪುಟವನ್ನು—ಸಂಶೋಧನೆಮಾಡಿದ್ದರು. ಕಾರ್ಬನ್ ಮಾನಾಕ್ಸೈಡ್ನ್ನು ಇಂಧನವಾಗಿ ಉತ್ಪಾದಿಸಿದ ಇದ್ದಲನ್ನು ಇದರಲ್ಲಿ ಸುಡಲಾಗುತ್ತಿತ್ತು. ಈ ರೀತಿಯಲ್ಲಿ ಪ್ರತಿವಾರ ಹಲವಾರು ರಾತ್ರಿಗಳಲ್ಲಿ, ಇತರ ಜವಾಬ್ದಾರ ಸಹೋದರರು ಮತ್ತು ನಾನು, ಮೇಲ್ವಿಚಾರಕನನ್ನು ಅವನು ಬಂದಿಯಾಗಿದ್ದ ಊರಿನ ಸಮೀಪದ ಒಣಗಿದ ಖಾರಿ ತಳದ ಮೇಲೆ ಪಯಣಿಸುತ್ತಾ ಭೇಟಿಯಾಗುತ್ತಿದ್ದೆವು. ಹೀಗೆ, ಗ್ಯಾಸ್ ಉತ್ಪಾದಕಕ್ಕೆ ಪುನಃ ಉರಿಹಾಕಿ ಹೊತ್ತಾರೆ ಬೇಗನೆ ಸಿಡ್ನಿಗೆ ಹಿಂತಿರುಗುವ ಮುಂಚೆ, ನಾವು ಅನೇಕ ವಿಷಯಗಳನ್ನು ಚರ್ಚಿಸಶಕ್ತರಾಗುತ್ತಿದ್ದೆವು.
ಕೊನೆಗೆ, ಯೆಹೋವನ ಸಾಕ್ಷಿಗಳ ಮೇಲಿನ ನಿಷೇಧವು ಆಸ್ಟ್ರೇಲಿಯದ ಹೈಕೋರ್ಟಿನ ಮುಂದೆ ಬಂತು. ನ್ಯಾಯಾಧೀಶರು ನಿಷೇಧವನ್ನು “ಅವಿಚಾರಕ, ವಿಚಿತ್ರವರ್ತನೆ, ಮತ್ತು ಪೀಡಿಸುವಿಕೆ” ಯಾಗಿ ಘೋಷಿಸಿದರು ಮತ್ತು ಯೆಹೋವನ ಸಾಕ್ಷಿಗಳನ್ನು ಯಾವುದೇ ದೇಶದ್ರೋಹದ ಚಟುವಟಿಕೆಯಿಂದ ಪೂರ್ಣ ದೋಷಮುಕ್ತರಾಗಿ ಮಾಡಿದರು. ನಾವು ಹೊರಗೆ ಬಂದು ನಮ್ಮ ನಿಯಮಬದ್ಧ ರಾಜ್ಯದ ಚಟುವಟಿಕೆಗಳನ್ನು ಮುಂದುವರಿಸಲು ಶಕ್ತರಾಗುವಂತೆ, ಇಡೀ ಹೈಕೋರ್ಟು ಈ ನಿರ್ಣಯವನ್ನು ಬೆಂಬಲಿಸಿತು.
ಅಧಿಕ ನೇಮಕಗಳು ಮತ್ತು ಆಶೀರ್ವಾದಗಳು
ಯುದ್ಧಾನಂತರ ನಮ್ಮ ಭೂಗತ ಮುದ್ರಣ ಕಾರ್ಯದಲ್ಲಿ ಕೆಲಸಮಾಡಿದ್ದ ಅನೇಕರು ಪಯನೀಯರ ಶುಶ್ರೂಷೆಯನ್ನು ಪ್ರಾರಂಭಿಸಿದರು. ಅವರಲ್ಲಿ ಕೆಲವರು ಅನಂತರ ನ್ಯೂ ಯಾರ್ಕ್ನಲ್ಲಿ ವಾಚ್ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಾದ್ಗೆ ಹೋದರು. ಲೂಸಿ ಮತ್ತು ನನಗೂ ಅದೇ ಗುರಿಯು ಮನಸ್ಸಿನಲ್ಲಿತ್ತು ಆದರೆ, ನಾವಾಗ ಒಂದು ಹೆಣ್ಣು ಮಗುವಿನ ಹೆತ್ತವರಾದೆವು. ಮತ್ತು ನಾನು ಮುದ್ರಣ ವ್ಯಾಪಾರಕ್ಕೆ ಹಿಂತಿರುಗಲು ನಿರ್ಧರಿಸಿದೆನು. ಯೆಹೋವನು ನಮಗೆ ರಾಜ್ಯದ ಅಭಿರುಚಿಗಳನ್ನು ಯಾವಾಗಲೂ ಪ್ರಥಮವಾಗಿಡುವಂತೆ ಸಹಾಯಮಾಡಲು ನಾವು ಪ್ರಾರ್ಥಿಸಿದ್ದೆವು ಮತ್ತು ಆತನು ಹಾಗೆಯೇ ಮಾಡಿದನು. ಮಾರಣೆ ದಿನವೇ ನಾನು ಇನ್ನೊಂದು ಶುಶ್ರೂಷಕ ನೇಮಕದಲ್ಲಿ ಒಳಗೂಡಿದೆನು.
ಬ್ರೂಕ್ಲಿನ್, ನ್ಯೂ ಯಾರ್ಕ್ನಲ್ಲಿ, ಈಗ ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿಯ ಒಬ್ಬ ಸದಸ್ಯರಾಗಿ ಸೇವೆ ಮಾಡುವ ಲೈಡ್ ಬೆರಿಯವರಿಂದ ನನಗೊಂದು ಫೋನ್ ಕರೆ ಬಂತು. ಆಗ ಅವರು ಸಿಡ್ನಿಯಲ್ಲಿ ಒಬ್ಬ ಸಂಚಾರ ಮೇಲ್ವಿಚಾರಕರಾಗಿದ್ದರು. ನಮ್ಮ ಮುಂದಿನ ಸಮ್ಮೇಳನದ ತಾರೀಖಿನ ಅರಿವು ನನಗಿದೆಯೇ ಎಂದವರು ಕೇಳಿದರು. ಹೌದೆಂದು ನಾನು ಉತ್ತರಿಸಿದಾಗ, ಅವರಂದದ್ದು: “ನೀನು ಊಟದ ಏರ್ಪಾಡುಗಳ ಮೇಲ್ವಿಚಾರಣೆ ಮಾಡುವಂತೆ ನಾವು ಬಯಸುತ್ತೇವೆ.”
ಒಂದು ಕ್ಷಣ ಆಶ್ಚರ್ಯಚಕಿತನಾಗಿ, ತುಸು ಸ್ಥೈರ್ಯವಿಲ್ಲದೇ ನಾನು ನುಡಿದದ್ದು: “ನನ್ನ ಜೀಮಾನದಲ್ಲಿ ಆ ರೀತಿಯ ಕೆಲಸವನ್ನೆಂದೂ ಮಾಡಲಿಲ್ಲ.”
“ಒಳ್ಳೇದು, ಸಹೋದರ,” ತುಸು ಚೇಷೆಯ್ಟಿಂದಲೇ ಅವರಂದದ್ದು: “ಕಲಿಯಲಿಕ್ಕೆ ಇದೇ ತಕ್ಕ ಸಮಯ!” ನಾನು ಕಲಿತೇ ಬಿಟ್ಟೆ, ಮತ್ತು ಆಹಾರದೇರ್ಪಾಡಿನ ಮೇಲ್ವಿಚಾರಣೆಯನ್ನು, ದೊಡ್ಡ ಅಧಿವೇಶನಗಳಲ್ಲೂ, 40 ವರ್ಷಕ್ಕಿಂತಲೂ ಅಧಿಕ ಸಮಯದಿಂದ ನಡಿಸುವ ಸುಯೋಗವನ್ನು ಪಡೆಯುತ್ತಾ ಬಂದೆನು.
ವರ್ಷಗಳಲ್ಲಿ ನಮ್ಮ ವ್ಯಾಪಾರಿ ಪ್ರಿಂಟಿಂಗ್ ಉದ್ಯಮವು ವಿಸ್ತಾರಗೊಂಡಿತು ಮತ್ತು ಇದು ಹಲವಾರು ವಿದೇಶ ವ್ಯಾಪಾರ ಸಂಚಾರಗಳನ್ನು ನಡಿಸುವುದನ್ನು ಆವಶ್ಯಪಡಿಸಿತು. ನಾನು ಯಾವಾಗಲೂ ಇವನ್ನು ನ್ಯೂ ಯಾರ್ಕ್ ನಗರದಲ್ಲಿ ಮತ್ತು ಅಮೆರಿಕದ ಬೇರೆ ಕಡೆಗಳಲ್ಲಿ ಅಂತರಾಷ್ಟ್ರೀಯ ಅಧಿವೇಶನಗಳು ನಡೆಯುವ ಸಮಯಕ್ಕೆ ತಾಳೆಬೀಳುವಂತೆ ಏರ್ಪಡಿಸುತ್ತಿದ್ದೆನು. ಇದು ನನಗೆ ಅಧಿವೇಶನದ ವಿವಿಧ ವಿಭಾಗಗಳ, ವಿಶೇಷವಾಗಿ ಫುಡ್ ಸರ್ವಿಸ್ನ ಮೇಲ್ವಿಚಾರವಿದ್ದವರ ಸಂಗಡ ಸಮಯ ಕಳೆಯುವ ಸಂದರ್ಭವನ್ನು ಒದಗಿಸಿತು. ಹೀಗೆ, ಅಸ್ಟ್ರೇಲಿಯಕ್ಕೆ ಹಿಂದೆ ಬಂದಾಗ, ನಮ್ಮ ಅಧಿವೇಶನಗಳಲ್ಲಿ ಅಗತ್ಯತೆಗಳನ್ನು ನಿರ್ವಹಿಸಲು ನಾನು ಹೆಚ್ಚು ಶಕ್ತನಾಗುತ್ತಿದ್ದೆನು.
ನಮ್ಮ ವಯಸ್ಸು ಸಂದುವುದರೊಂದಿಗೆ, ನಾವು ಒಂದುವೇಳೆ ಸ್ವಲ್ಪ ತರುವಾಯ ಹುಟ್ಟಿದ್ದರೆ ಹೆಚ್ಚನ್ನು ಸಾಧಿಸಶಕ್ತರಾಗುತ್ತಿದ್ದೆವೋ ಏನೋ ಎಂದು ಕೆಲವು ಸಾರಿ ಲೂಸಿ ಮತ್ತು ನಾನು ಯೋಚಿಸುತ್ತೇವೆ. ಇನ್ನೊಂದು ಕಡೆ, ಅನುಕ್ರಮವಾಗಿ 1916 ಮತ್ತು 1914 ರಲ್ಲಿ ಜನಿಸಿದ ನಾವು, ಬೈಬಲ್ ಪ್ರವಾದನೆಗಳು ನಮ್ಮ ಕಣ್ಣಮುಂದೆಯೇ ಬಿಚ್ಚುವದನ್ನು ಕಂಡಿರುವುದು ಒಂದು ಆಶ್ಚರ್ಯಕರ ಸುಯೋಗವೆಂದು ಪರಿಗಣಿಸುತ್ತೇವೆ. ಮತ್ತು ಅನೇಕ ಜನರೊಂದಿಗೆ ಅಭ್ಯಾಸಮಾಡಿ, ಅವರಿಗೆ ಸತ್ಯವನ್ನು ಕಲಿಯುವಂತೆ ಸಹಾಯಮಾಡುವ ಮತ್ತು ಸ್ನಾನಿತ ಶುಶ್ರೂಷಕರಾಗಿ ಈಗ ಅವರು ಸೇವೆ ಮಾಡುವುದನ್ನು ಕಾಣುವ ಆಶೀರ್ವಾದಕ್ಕಾಗಿಯೂ ನಾವು ಯೆಹೋವನಿಗೆ ಉಪಕಾರ ಹೇಳುತ್ತೇವೆ. ವಿಶ್ವದ ಮಹಾ ಪರಮಾಧಿಕಾರಿಯೆಂದು ಆತನನ್ನು ಸದಾ ಅಂಗೀಕರಿಸುತ್ತಾ, ನಿತ್ಯ ನಿರಂತರಕ್ಕೂ ಆತನನ್ನು ಸೇವಿಸುತ್ತಾ ಮುಂದರಿಯಲು ಶಕ್ತರಾಗುವುದೇ ನಮ್ಮ ಪ್ರಾರ್ಥನೆಯಾಗಿದೆ.
[ಅಧ್ಯಯನ ಪ್ರಶ್ನೆಗಳು]
^ ಪ್ಯಾರ. 14 ನೋಡಿರಿ ದ ವಾಚ್ಟವರ್ ಸಪ್ಟಂಬರ್ 15, 1978, ಪುಟ 24-7.
[ಪುಟ 30 ರಲ್ಲಿರುವ ಚಿತ್ರಗಳು]
ಸಾತ್ಟ್ರ್ಫೀಲ್ಡ್ ಬೆತೆಲ್ನಲ್ಲಿ ಮುದ್ರಣ ವ್ಯವಸ್ಥಾಪನೆ, 1929-73
ಛಾಪಖಾನೆಯ ಹಿಂದಿನ ಗೋಡೆಯಿಂದ ಹೊರಗೆ ತೆಗೆದ ಪ್ರೆಸ್ಸುಗಳೊಂದರ ಪಕ್ಕದಲ್ಲಿ ಜಾರ್ಜ್ ಗಿಬ್ ನಿಂತಿರುವುದು