ಯೆಹೋವನು ನಿಮ್ಮನ್ನು ಹೇಗೆ ನೆನಪುಮಾಡಿಕೊಳ್ಳುವನು?
ಯೆಹೋವನು ನಿಮ್ಮನ್ನು ಹೇಗೆ ನೆನಪುಮಾಡಿಕೊಳ್ಳುವನು?
“ನನ್ನ ದೇವರೇ, . . . ನನ್ನ ಹಿತಕ್ಕಾಗಿ ನೆನಪುಮಾಡಿಕೋ.” ಈ ರೀತಿಯ ಮಾತುಗಳಲ್ಲಿ ನೆಹೆಮೀಯನು ಅನೇಕ ಸಾರಿ ದೇವರಿಗೆ ಮೊರೆಯಿಟ್ಟನು. (ನೆಹೆಮೀಯ 5:19; 13:14, 31) ಜನರು ಸಂಕಷ್ಟದ ಸಮಯವನ್ನು ಹಾದುಹೋಗುತ್ತಿರುವಾಗ, ಈ ರೀತಿಯ ಅಭಿವ್ಯಕ್ತಿಗಳಲ್ಲಿ ದೇವರಲ್ಲಿ ಮೊರೆಯಿಡುವುದು ಸ್ವಾಭಾವಿಕ.
ತಮ್ಮನ್ನು ನೆನಪುಮಾಡಿಕೊಳ್ಳುವಂತೆ ಜನರು ದೇವರಿಗೆ ಮೊರೆಯಿಡುವಾಗ ಅವರ ಮನಸ್ಸಿನಲ್ಲಿರುವುದಾದರೂ ಏನು? ಸ್ಪಷ್ಟವಾಗಿಯೇ, ದೇವರು ಕೇವಲ ತಮ್ಮ ಹೆಸರುಗಳನ್ನು ಜ್ಞಾಪಿಸಿಕೊಳ್ಳುವುದಕ್ಕಿಂತಲೂ ಹೆಚ್ಚಿನದ್ದನ್ನು ಮಾಡುವಂತೆ ಅವರು ನಿರೀಕ್ಷಿಸುತ್ತಾರೆ. ನಿಸ್ಸಂದೇಹವಾಗಿಯೂ ಅವರು ಯೇಸುವಿನ ಪಕ್ಕದಲ್ಲಿ ಕಂಬಕ್ಕೇರಿಸಲ್ಪಟ್ಟಿದ್ದ ಒಬ್ಬ ಪಾತಕಿಯಂತೆಯೇ ಆಶಿಸುತ್ತಾರೆ. ಅವನು ಇನ್ನೊಬ್ಬನಂತಿರದೆ, ಯೇಸುವಿನಲ್ಲಿ ಬೇಡಿಕೊಂಡದ್ದು: “ನೀನು ನಿನ್ನ ರಾಜ್ಯವನ್ನು ಪಡೆದವನಾಗಿ ಬರುವಾಗ ನನ್ನನ್ನು ನೆನಸಿಕೋ.” ಯೇಸು ತನ್ನನ್ನು ಯಾರೆಂದು ನೆನಪಿಸಿಕೊಳ್ಳುವುದು ಮಾತ್ರವಲ್ಲ, ತನಗಾಗಿ ಏನನ್ನಾದರೂ ಮಾಡುವಂತೆ, ಅಂದರೆ ತನ್ನನ್ನು ಪುನರುಜ್ಜೀವಿಸುವಂತೆಯೂ ಅವನು ಬಯಸಿದನು.—ಲೂಕ 23:42.
ಬೈಬಲ್ ಸುಸಂಗತವಾಗಿ ತೋರಿಸುವುದೇನೆಂದರೆ, ದೇವರ ವಿಷಯದಲ್ಲಿ “ನೆನಪುಮಾಡಿಕೊಳ್ಳುವುದು” ಎಂಬುದರ ಅರ್ಥವು, ಸಕಾರಾತ್ಮಕವಾಗಿ ಕ್ರಿಯೆಗೈಯುವುದಾಗಿದೆ. ಉದಾಹರಣೆಗೆ, 150 ದಿನಗಳ ವರೆಗೆ ಇಡೀ ಭೂಮಿಯು ಜಲಪ್ರಳಯದ ನೀರಿನಿಂದ ತುಂಬಿ ಹರಿಯುತ್ತಿದ್ದಾಗ, ‘ದೇವರು ನೋಹನನ್ನು . . . ನೆನಪಿಗೆ ತಂದುಕೊಂಡು ಭೂಲೋಕದ ಮೇಲೆ ಗಾಳಿಬೀಸುವಂತೆ ಮಾಡಲಾಗಿ ನೀರು ತಗ್ಗಿತು.’ (ಆದಿಕಾಂಡ 8:1) ಶತಮಾನಗಳ ನಂತರ, ಫಿಲಿಷ್ಟಿಯರಿಂದ ಕುರುಡಾಗಿಸಲ್ಪಟ್ಟು, ಕಬ್ಬಿಣದ ಬೇಡಿಗಳಿಂದ ಬಂಧಿಸಲ್ಪಟ್ಟಿದ್ದ ಸಂಸೋನನು ಪ್ರಾರ್ಥಿಸಿದ್ದು: “ಯೆಹೋವನೇ, ದಯವಿಟ್ಟು ಈ ಸಾರಿ ನನ್ನನ್ನು ನೆನಪಿಸಿಕೋ ಮತ್ತು ನನ್ನನ್ನು ಒಮ್ಮೆ ಬಲಪಡಿಸು” (NW). ಸಂಸೋನನು ದೇವರ ವೈರಿಗಳಿಗೆ ಮುಯ್ಯಿ ತೀರಿಸುವಂತೆ ಯೆಹೋವನು ಅವನಿಗೆ ಅತಿಮಾನುಷ ಶಕ್ತಿಯನ್ನು ಕೊಡುವ ಮೂಲಕ ಅವನನ್ನು ನೆನಪಿಸಿಕೊಂಡನು. (ನ್ಯಾಯಸ್ಥಾಪಕರು 16:28-30) ನೆಹೆಮೀಯನ ವಿಷಯದಲ್ಲಿ, ಯೆಹೋವನು ಅವನ ಪ್ರಯತ್ನಗಳನ್ನು ಆಶೀರ್ವದಿಸಿದನು ಮತ್ತು ಹೀಗೆ ಯೆರೂಸಲೇಮಿನಲ್ಲಿ ಸತ್ಯಾರಾಧನೆಯು ಪುನಃಸ್ಥಾಪಿಸಲ್ಪಟ್ಟಿತು.
“ಪೂರ್ವದಲ್ಲಿ ಬರೆದದ್ದೆಲ್ಲಾ ನಮ್ಮನ್ನು ಉಪದೇಶಿಸುವದಕ್ಕಾಗಿ ಬರೆಯಲ್ಪಟ್ಟಿತು. ನಾವು ಓದಿ ಸ್ಥಿರಚಿತ್ತವನ್ನೂ ಆದರಣೆಯನ್ನೂ ಹೊಂದಿ ರಕ್ಷಣೆಯ ನಿರೀಕ್ಷೆಯುಳ್ಳವರಾಗಿರುವಂತೆ ಆ ಗ್ರಂಥಗಳು ಬರೆಯಲ್ಪಟ್ಟವು” ಎಂದು ಅಪೊಸ್ತಲ ಪೌಲನು ಬರೆದನು. (ರೋಮಾಪುರ 15:4) ಯೆಹೋವನ ಗತಕಾಲದ ಸೇವಕರಂತೆ ನಾವೂ ಯೆಹೋವನ ಚಿತ್ತವನ್ನು ಮಾಡಲು ಪ್ರಯಾಸಪಡುವ ಮೂಲಕ ಆತನನ್ನು ನೆನಪಿಸಿಕೊಳ್ಳುವಲ್ಲಿ, ಯೆಹೋವನು ನಮ್ಮ ಅನುದಿನದ ಅಗತ್ಯಗಳನ್ನು ಪೂರೈಸಲು ಸಹಾಯಮಾಡುವನು. ಅಷ್ಟುಮಾತ್ರವಲ್ಲ, ನಮಗೆ ಎದುರಾಗುವ ಪರೀಕ್ಷೆಗಳಲ್ಲಿ ಒತ್ತಾಸೆಯಾಗಿದ್ದು, ಭಕ್ತಿಹೀನರ ಮೇಲೆ ತನ್ನ ನ್ಯಾಯತೀರ್ಪನ್ನು ತರುವಾಗ ನಮ್ಮನ್ನು ಕಾಪಾಡುವ ಮೂಲಕ ಆತನು ನೆನಪುಮಾಡಿಕೊಳ್ಳುವನು ಎಂಬ ಭರವಸೆ ನಮಗಿರಸಾಧ್ಯವಿದೆ.—ಮತ್ತಾಯ 6:33; 2 ಪೇತ್ರ 2:9.