ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಇಜ್ರೇಲಿನಲ್ಲಿ ಅವರು ಏನನ್ನು ಕಂಡುಹಿಡಿದಿದ್ದಾರೆ?

ಇಜ್ರೇಲಿನಲ್ಲಿ ಅವರು ಏನನ್ನು ಕಂಡುಹಿಡಿದಿದ್ದಾರೆ?

ಇಜ್ರೇಲಿನಲ್ಲಿ ಅವರು ಏನನ್ನು ಕಂಡುಹಿಡಿದಿದ್ದಾರೆ?

ಅನೇಕ ಶತಮಾನಗಳಿಂದ ಇಜ್ರೇಲ್‌ ಎಂಬ ಪುರಾತನ ನಗರವು ಪಾಳುಬಿದ್ದಿದೆ. ಒಂದು ಕಾಲದಲ್ಲಿ ಇದು ಬೈಬಲಿನ ಇತಿಹಾಸದಲ್ಲಿ ಬಹಳ ಪ್ರಸಿದ್ಧವಾದ ನಗರವಾಗಿತ್ತು. ಈಗ ಅದು ಆ ವೈಭವವನ್ನು ಕಳೆದುಕೊಂಡು, ಒಂದು ದಿಬ್ಬದೋಪಾದಿ ಮಣ್ಣಲ್ಲಿ ಮಣ್ಣಾಗಿ ಹೋಗಿದೆ. ಇತ್ತೀಚಿನ ವರ್ಷಗಳಲ್ಲಿ ಪ್ರಾಕ್ತನಶಾಸ್ತ್ರಜ್ಞರು ಇಜ್ರೇಲಿನ ಭಗ್ನಾವಶೇಷಗಳನ್ನು ಪರೀಕ್ಷೆಮಾಡಿ ನೋಡಲು ಪ್ರಾರಂಭಿಸಿದ್ದಾರೆ. ಇವುಗಳು ಬೈಬಲ್‌ ವೃತ್ತಾಂತಗಳ ಬಗ್ಗೆ ಏನನ್ನು ಪ್ರಕಟಪಡಿಸುತ್ತವೆ?

ಬೈಬಲಿನಲ್ಲಿ ಇಜ್ರೇಲ್‌

ಇಜ್ರೇಲ್‌ ಕಣಿವೆಯ ಪೂರ್ವ ದಿಕ್ಕಿನಲ್ಲಿರುವ ಇಜ್ರೇಲ್‌, ಪುರಾತನ ಇಸ್ರಾಯೇಲ್‌ ದೇಶದ ಭಾರಿ ಫಲವತ್ತಾದ ಪ್ರದೇಶಗಳಲ್ಲಿ ಒಂದಾಗಿತ್ತು. ಈ ಕಣಿವೆಯ ಉತ್ತರ ಭಾಗದಲ್ಲಿ ಮೋರೆ ಗುಡ್ಡವಿತ್ತು. ಇಲ್ಲಿ ಮಿದ್ಯಾನ್ಯರು, ನ್ಯಾಯಾಧಿಪತಿಯಾದ ಗಿದ್ಯೋನ್‌ ಮತ್ತು ಅವನ ಪಡೆಗಳ ಮೇಲೆ ಆಕ್ರಮಣಮಾಡಲು ಸಿದ್ಧರಾಗುತ್ತಿದ್ದಾಗ ಪಾಳೆಯಹೂಡಿದ್ದರು. ಸ್ವಲ್ಪ ಪೂರ್ವ ದಿಕ್ಕಿಗೆ ಗಿಲ್ಬೋವ ಬೆಟ್ಟದ ತಪ್ಪಲಿನಲ್ಲಿ ಹರೋದಿನ ಬುಗ್ಗೆಯಿದೆ. ಯೆಹೋವನು ಬಲಶಾಲಿಯಾದ ಮಿಲಿಟರಿ ಶಕ್ತಿಯಿಲ್ಲದೆ ತನ್ನ ಜನರನ್ನು ವಿಮೋಚಿಸುವ ತನ್ನ ಸಾಮರ್ಥ್ಯವನ್ನು ತೋರಿಸುವ ಸಲುವಾಗಿ, ಸಾವಿರಾರು ಜನರುಳ್ಳ ಗಿದ್ಯೋನನ ಸೇನೆಯನ್ನು ಕೇವಲ 300 ಮಂದಿಗೆ ಕಡಿಮೆಮಾಡಿದ್ದು ಇದೇ ಸ್ಥಳದಲ್ಲಿ. (ನ್ಯಾಯಸ್ಥಾಪಕರು 7:1-25; ಜೆಕರ್ಯ 4:6) ಹತ್ತಿರದಲ್ಲಿರುವ ಗಿಲ್ಬೋವ ಬೆಟ್ಟದಲ್ಲಿ, ಇಸ್ರಾಯೇಲಿನ ಪ್ರಥಮ ರಾಜನಾದ ಸೌಲನು ಗಮನಾರ್ಹವಾದಂತಹ ಕದನದಲ್ಲಿ ಫಿಲಿಷ್ಟಿಯರಿಂದ ಸೋಲಿಸಲ್ಪಟ್ಟನು. ಈ ಕದನದಲ್ಲಿಯೇ ಯೋನಾತಾನನು ಮತ್ತು ಸೌಲನ ಇತರ ಪುತ್ರರಲ್ಲಿ ಇಬ್ಬರು ಕೊಲ್ಲಲ್ಪಟ್ಟರು ಹಾಗೂ ಸ್ವತಃ ಸೌಲನು ಆತ್ಮಹತ್ಯೆಯನ್ನು ಮಾಡಿಕೊಂಡನು.—1 ಸಮುವೇಲ 31:1-5.

ಬೈಬಲು ಇಜ್ರೇಲಿನ ಪುರಾತನ ನಗರದ ಕುರಿತಾಗಿ ಉಲ್ಲೇಖಿಸುವಾಗಲೆಲ್ಲಾ ಎದ್ದುಕಾಣುವಂತಹ ಭಿನ್ನಸ್ವಭಾವಗಳನ್ನು ತೋರಿಸುತ್ತದೆ. ಈ ಉಲ್ಲೇಖಗಳು, ಇಸ್ರಾಯೇಲ್‌ ದೇಶದ ರಾಜರ ಅಧಿಕಾರದ ದುರುಪಯೋಗ ಮತ್ತು ಧರ್ಮಭ್ರಷ್ಟತೆಯನ್ನು ಮಾತ್ರವಲ್ಲದೆ, ಯೆಹೋವನ ಸೇವಕರ ನಂಬಿಗಸ್ತಿಕೆ ಮತ್ತು ಹುರುಪಿನ ಕುರಿತು ಸಹ ತಿಳಿಸುತ್ತವೆ. ಸಾ.ಶ.ಪೂ. ಹತ್ತನೇ ಶತಮಾನದ ಕೊನೆಯಾರ್ಧದಲ್ಲಿ ಇಸ್ರಾಯೇಲಿನ ಹತ್ತು ಕುಲಗಳ ಉತ್ತರ ರಾಜ್ಯದ ರಾಜನಾದ ಅಹಾಬನು, ಸಮಾರ್ಯವು ತನ್ನ ಅಧಿಕೃತ ರಾಜಧಾನಿಯಾಗಿದ್ದರೂ, ತನ್ನ ಅರಮನೆಯನ್ನು ಕಟ್ಟಿಸಿದ್ದು ಈ ಇಜ್ರೇಲಿನಲ್ಲಿಯೇ. (1 ಅರಸು 21:1) ಯೆಹೋವನ ಪ್ರವಾದಿಯಾದ ಎಲೀಯನು ಅಹಾಬನ ವಿದೇಶಿ ಪತ್ನಿಯಾದ ಈಜೆಬೆಲಳಿಂದ ಮರಣದ ಬೆದರಿಕೆಗಳನ್ನು ಪಡೆದುಕೊಂಡಿದ್ದು ಇಲ್ಲಿಯೇ. ಎಲೀಯನು ಕರ್ಮೆಲ್‌ ಬೆಟ್ಟದ ಮೇಲೆ ನಿಜ ದೇವರು ಯಾರೆಂಬ ಪರೀಕ್ಷೆಯನ್ನು ನಡೆಸಿದ ಬಳಿಕ, ಬಾಳನ ಪ್ರವಾದಿಗಳನ್ನು ನಿರ್ಭಯವಾಗಿ ಹತಿಸಿದ ಕಾರಣ ಈಜೆಬೆಲಳು ಬಹಳ ಕೋಪಗೊಂಡಿದ್ದಳು.—1 ಅರಸು 18:36–19:2.

ಅನಂತರ ಇಜ್ರೇಲಿನಲ್ಲಿ ಒಂದು ಅಪರಾಧವು ನಡೆಯಿತು. ಇಜ್ರೇಲಿನವನಾದ ನಾಬೋತನನ್ನು ಕೊಲೆಮಾಡಲಾಯಿತು. ರಾಜನಾದ ಅಹಾಬನು ನಾಬೋತನ ದ್ರಾಕ್ಷೇತೋಟದ ಮೇಲೆ ದುರಾಸೆಪಟ್ಟನು. ಆ ದ್ರಾಕ್ಷೇತೋಟವನ್ನು ತನಗೆ ಕೊಡುವಂತೆ ರಾಜನು ತಗಾದೆಮಾಡಿದಾಗ, “ನಾನು ಪಿತ್ರಾರ್ಜಿತಸ್ವಾಸ್ತ್ಯವನ್ನು ನಿನಗೆ ಮಾರದಂತೆ ಯೆಹೋವನು ನನ್ನನ್ನು ತಡೆಯಲಿ” ಎಂದು ನಾಬೋತನು ನಿಷ್ಠೆಯಿಂದ ಉತ್ತರಿಸಿದನು. ಈ ತತ್ತ್ವನಿಷ್ಠ ಉತ್ತರವು ಅಹಾಬನಿಗೆ ಬಹಳ ಅಸಂತೋಷವನ್ನು ಉಂಟುಮಾಡಿತು. ರಾಜನ ಗಂಟುಮೋರೆಯನ್ನು ನೋಡಿ, ರಾಣಿ ಈಜೆಬೆಲಳು ಒಂದು ಸೋಗಿನ ವಿಚಾರಣೆಯನ್ನು ಏರ್ಪಡಿಸಿ, ನಾಬೋತನ ಮೇಲೆ ದೈವನಿಂದೆಯ ಅಪರಾಧವನ್ನು ಹೊರಿಸಿದಳು. ಅಮಾಯಕನಾದ ನಾಬೋತನನ್ನು ದೋಷಿಯೆಂದು ಆರೋಪಿಸಿ, ಕಲ್ಲೆಸೆದು ಕೊಲ್ಲಲಾಯಿತು. ಹೀಗೆ ರಾಜನು ಅವನ ದ್ರಾಕ್ಷೇತೋಟವನ್ನು ವಶಪಡಿಸಿಕೊಂಡನು.—1 ಅರಸು 21:1-16.

ಈ ದುಷ್ಕೃತ್ಯದಿಂದಾಗಿ ಎಲೀಯನು ಹೀಗೆ ಪ್ರವಾದಿಸಿದನು: “ನಾಯಿಗಳು ಇಜ್ರೇಲ್‌ ಪಟ್ಟಣದ ಗೋಡೆಯ ಬಳಿಯಲ್ಲಿ ಆಕೆಯ ಶವವನ್ನು ತಿನ್ನುವವು.” ಆ ಪ್ರವಾದಿಯು ಮುಂದುವರಿಸಿದ್ದು: “ಅಹಾಬನ ಮನೆಯವರಲ್ಲಿ ಊರೊಳಗೆ ಸಾಯುವಂಥವರನ್ನು ನಾಯಿಗಳೂ . . . ತಿಂದುಬಿಡುವವು. . . . ಹೆಂಡತಿಯಾದ ಈಜೆಬೆಲಳಿಂದ ಪ್ರೇರಿತನಾಗಿ ಯೆಹೋವನ ದೃಷ್ಟಿಯಲ್ಲಿ ಕೆಟ್ಟದ್ದಾಗಿರುವದನ್ನು ಮಾಡುವದಕ್ಕೆ ತನ್ನನ್ನೇ ಮಾರಿಬಿಟ್ಟ ಅಹಾಬನಂಥ ದುಷ್ಟನು ಇನ್ನೊಬ್ಬನಿರಲಿಲ್ಲ.” ಆದರೆ ಎಲೀಯನು ಯೆಹೋವನ ನ್ಯಾಯತೀರ್ಪನ್ನು ಪ್ರಕಟಪಡಿಸಿದಾಗ ಅಹಾಬನು ನಮ್ರತೆಯನ್ನು ತೋರಿಸಿದ ಕಾರಣ, ಅಹಾಬನ ಜೀವಮಾನದ ಅವಧಿಯಲ್ಲಿ ಈ ಶಿಕ್ಷೆಯು ಬರುವುದಿಲ್ಲವೆಂದು ಯೆಹೋವನು ಘೋಷಿಸಿದನು. (1 ಅರಸು 21:23-29) ಎಲೀಯನ ಉತ್ತರಾಧಿಕಾರಿಯಾದ ಎಲೀಷನ ದಿನಗಳಲ್ಲಿ ಯೇಹು ಇಸ್ರಾಯೇಲಿನ ರಾಜನಾಗಿ ಅಭಿಷೇಕಿಸಲ್ಪಟ್ಟನು ಎಂದು ಬೈಬಲಿನ ವೃತ್ತಾಂತವು ವಿವರಿಸುತ್ತಾ ಮುಂದುವರಿಯುತ್ತದೆ. ಯೇಹು ಇಜ್ರೇಲಿಗೆ ಹೋದಾಗ, ಈಜೆಬೆಲಳನ್ನು ಅವಳ ಅರಮನೆಯ ಕಿಟಕಿಯಿಂದ ಹೊರತಳ್ಳುವಂತೆ ಆಜ್ಞಾಪಿಸಿದನು. ಮತ್ತು ಅವಳನ್ನು ಕುದುರೆಗಳು ತುಳಿದುಬಿಟ್ಟವು. ಅನಂತರ, ಬೀದಿ ನಾಯಿಗಳು ಅವಳ ತಲೆಬುರುಡೆ, ಕೈಕಾಲುಗಳನ್ನು ಹೊರತುಪಡಿಸಿ ಇನ್ನೆಲ್ಲವನ್ನೂ ತಿಂದುಬಿಟ್ಟಿದ್ದವೆಂಬುದನ್ನು ಕಂಡುಹಿಡಿಯಲಾಯಿತು. (2 ಅರಸು 9:30-37) ಇಜ್ರೇಲಿಗೆ ನೇರವಾಗಿ ಸಂಬಂಧಿಸಿರುವ ಅಂತಿಮ ಬೈಬಲ್‌ ಘಟನೆಯು ಅಹಾಬನ 70 ಮಂದಿ ಪುತ್ರರ ವಧೆಯಾಗಿತ್ತು. ಯೇಹು ಅವರ ತಲೆಗಳನ್ನು ಹೆಬ್ಬಾಗಿಲಿನ ಹತ್ತಿರ ಎರಡು ರಾಶಿಗಳನ್ನಾಗಿ ಮಾಡಿ, ಅನಂತರ ಅಹಾಬನ ಧರ್ಮಭ್ರಷ್ಟ ಆಳ್ವಿಕೆಯೊಂದಿಗೆ ಒಳಗೊಂಡಿದ್ದ ಸರದಾರರು ಮತ್ತು ಪುರೋಹಿತರನ್ನು ಕೊಂದುಹಾಕಿದನು.—2 ಅರಸು 10:6-11.

ಪ್ರಾಕ್ತನಶಾಸ್ತ್ರಜ್ಞರು ಏನನ್ನು ಕಂಡುಕೊಂಡಿದ್ದಾರೆ?

1990ರಲ್ಲಿ ಇಜ್ರೇಲಿನ ನಿವೇಶನದ ಭೂಶೋಧನೆಮಾಡಲು ಒಂದು ಜಂಟಿಕಾರ್ಯಯೋಜನೆಯು ಆರಂಭವಾಯಿತು. (ಡೇವಿಡ್‌ ಉಸಿಷ್‌ಕಿನ್‌ರವರಿಂದ ಪ್ರತಿನಿಧಿಸಲ್ಪಟ್ಟ) ಟೆಲ್‌ ಅವಿವ್‌ನ ಇನ್‌ಸ್ಟಿಟ್ಯೂಟ್‌ ಆಫ್‌ ಆರ್ಕಿಯಾಲಜಿ ಮತ್ತು (ಜಾನ್‌ ವುಡ್‌ಹೆಡ್‌ರವರಿಂದ ಪ್ರತಿನಿಧಿಸಲ್ಪಟ್ಟ) ಯೆರೂಸಲೇಮಿನ ಬ್ರಿಟಿಷ್‌ ಸ್ಕೂಲ್‌ ಆಫ್‌ ಆರ್ಕಿಯಾಲಜಿ ಅದರಲ್ಲಿ ಭಾಗವಹಿಸಿದವು. 1990-96ರ ವರ್ಷಗಳಲ್ಲಿ ಸುಮಾರು ಏಳು ಕಾಲಗಳ ತನಕ (ಪ್ರತಿ ಕಾಲವೂ ಆರು ವಾರಗಳನ್ನು ಒಳಗೊಂಡಿತ್ತು) ಸುಮಾರು 80ರಿಂದ 100 ಸ್ವಯಂಸೇವಕರು ಆ ಸ್ಥಳದಲ್ಲಿ ಕೆಲಸ ಮಾಡಿದರು.

ಪ್ರಾಕ್ತನಶಾಸ್ತ್ರವು ಕಾರ್ಯನಡಿಸುವ ಆಧುನಿಕ ರೀತಿಯು, ಪೂರ್ವಕಲ್ಪಿತ ವಿಚಾರಧಾರೆಗಳು ಹಾಗೂ ಸಿದ್ಧಾಂತಗಳ ಮೇಲೆ ಆಧಾರಿಸದೆ, ಒಂದು ನಿವೇಶನದಲ್ಲಿರುವ ಪುರಾವೆಯನ್ನು ಅದರ ಸ್ವಂತ ಗುಣದೋಷದ ಆಧಾರದ ಮೇಲೆ ಪರೀಕ್ಷೆಮಾಡಿ ನೋಡುವುದೇ ಆಗಿದೆ. ಆದುದರಿಂದ, ಬೈಬಲ್‌ ದೇಶಗಳ ಬಗ್ಗೆ ಅಧ್ಯಯನವನ್ನು ನಡೆಸುತ್ತಿರುವ ಪ್ರಾಕ್ತನಶಾಸ್ತ್ರಜ್ಞರಿಗೆ ಶಾಸ್ತ್ರಗಳಲ್ಲಿರುವ ವೃತ್ತಾಂತವು ಅಂತಿಮ ನುಡಿಯಾಗಿರುವುದಿಲ್ಲ. ಇತರ ಎಲ್ಲ ಮೂಲಗಳನ್ನು ಮತ್ತು ಪ್ರಾಕೃತಿಕ ಪುರಾವೆಯನ್ನು ಪರಿಗಣಿಸಿ, ಜಾಗರೂಕತೆಯಿಂದ ತೂಗಿನೋಡಬೇಕಾಗಿದೆ. ಆದರೆ, ಜಾನ್‌ ವುಡ್‌ಹೆಡ್‌ ಹೇಳುವಂತೆ, ಇಜ್ರೇಲಿನ ಕುರಿತು ಬೈಬಲಿನ ಕೆಲವೊಂದು ಅಧ್ಯಾಯಗಳಲ್ಲಿ ಉಲ್ಲೇಖವಿರುವುದನ್ನು ಬಿಟ್ಟರೇ ಇನ್ಯಾವುದೇ ಪ್ರಾಚೀನ ಲಿಖಿತ ಪುರಾವೆಯಿಲ್ಲ. ಆದುದರಿಂದ ಮಾಡಲಾಗುವ ಯಾವುದೇ ಶೋಧನೆಗೆ ಬೈಬಲಿನ ವೃತ್ತಾಂತಗಳು ಮತ್ತು ಕಾಲಗಣನೆಯು ಅತ್ಯಾವಶ್ಯಕವಾಗಿವೆ. ಪ್ರಾಕ್ತನಶಾಸ್ತ್ರಜ್ಞರ ಪ್ರಯತ್ನಗಳು ಏನನ್ನು ಹೊರಗೆಡಹಿವೆ?

ಕೋಟೆಯ ಅವಶೇಷಗಳು ಹಾಗೂ ಮಣ್ಣಿನ ಪಾತ್ರೆಗಳನ್ನು ಅಗೆದುತೆಗೆಯುತ್ತಿದ್ದಂತೆ, ಈ ಅವಶೇಷಗಳು ಕಬ್ಬಿಣದ ಯುಗ ಎಂದು ಕರೆಯಲ್ಪಡುವ ಸಮಯದವುಗಳಾಗಿದ್ದವೆಂಬುದು ಆರಂಭದಿಂದಲೇ ಸ್ಪಷ್ಟವಾಯಿತು. ಇದು ಬಹಳ ನಿಖರವಾಗಿ ಬೈಬಲಿನಲ್ಲಿ ಉಲ್ಲೇಖಿಸಲ್ಪಟ್ಟಿರುವ ಇಜ್ರೇಲಿನ ಸಮಯಕ್ಕೆ ಸೂಚಿಸಿತು. ಆದರೆ ಭೂಶೋಧನೆಗಳು ಮುಂದುವರಿದಂತೆ, ಅಲ್ಲಿ ಅನೇಕ ಆಶ್ಚರ್ಯಗಳು ಕಾದಿದ್ದವು. ಮೊದಲನೆಯದ್ದು ಆ ಸ್ಥಳದ ಪ್ರಮಾಣ ಮತ್ತು ಬೃಹತ್‌ ಗಾತ್ರದ ಕೋಟೆಯ ಅವಶೇಷಗಳಾಗಿದ್ದವು. ಇಸ್ರಾಯೇಲ್‌ ರಾಜ್ಯದ ರಾಜಧಾನಿಯಾದ ಪುರಾತನ ಸಮಾರ್ಯದಲ್ಲಿದ್ದಷ್ಟೇ ಕೋಟೆಗಳುಳ್ಳ ಸ್ಥಳವನ್ನು ಪ್ರಾಕ್ತನಶಾಸ್ತ್ರಜ್ಞರು ಎದುರುನೋಡುತ್ತಿದ್ದರು. ಆದರೆ ಅವರು ಅಗೆಯುವುದನ್ನು ಮುಂದುವರಿಸಿದಂತೆ, ಇಜ್ರೇಲ್‌ ಅದಕ್ಕಿಂತಲೂ ಬಹಳ ದೊಡ್ಡದ್ದಾಗಿದ್ದದ್ದು ಕಂಡುಬಂತು. ಅದಕ್ಕೆ 1,000 ಅಡಿ ಉದ್ದ, 500 ಅಡಿ ಅಗಲದ ಗೋಡೆಗಳಿದ್ದವು ಮತ್ತು ಕೋಟೆಯ ಒಳಗಿನ ವಿಸ್ತೀರ್ಣವು, ಆ ಸಮಯಾವಧಿಯಿಂದ ಇಸ್ರಾಯೇಲಿನಲ್ಲಿ ಕಂಡುಹಿಡಿಯಲ್ಪಟ್ಟ ಇನ್ನಿತರ ಯಾವುದೇ ನಗರಕ್ಕಿಂತಲೂ ಮೂರು ಪಟ್ಟು ಹೆಚ್ಚಾಗಿತ್ತು. ಅದು ಬತ್ತಿಹೋಗಿದ್ದ ಕಂದಕದಿಂದ ಸುತ್ತುವರಿಯಲ್ಪಟ್ಟಿತ್ತು ಮತ್ತು ಈ ಕಂದಕವು ಕೋಟೆಗಳಿಂದ ಸುಮಾರು 35 ಅಡಿ ಆಳದಲ್ಲಿತ್ತು. ಪ್ರೊಫೆಸರ್‌ ಉಸಿಷ್‌ಕಿನ್‌ರವರಿಗನುಸಾರ, ಈ ಕಂದಕವು ಬೈಬಲ್‌ ಸಮಯಗಳಲ್ಲಿ ಪೂರ್ವೋದಾಹರಣೆಯಿಲ್ಲದ ಒಂದು ಅಂಶವಾಗಿತ್ತು. “ಕ್ರೂಸೇಡರ್‌ಗಳ ಸಮಯದ ತನಕ ಇಸ್ರಾಯೇಲಿನಲ್ಲಿ ಇಂತಹದ್ದನ್ನು ನಾವು ಕಂಡುಕೊಳ್ಳುವುದಿಲ್ಲ” ಎಂದು ಅವರು ಹೇಳಿದರು.

ಇನ್ನೊಂದು ಅನಿರೀಕ್ಷಿತ ಅಂಶವು ಆ ನಗರದ ಮಧ್ಯಭಾಗದಲ್ಲಿ ಬೃಹತ್‌ ಪ್ರಮಾಣದ ಕಟ್ಟಡಗಳಿಲ್ಲದಿರುವುದೇ ಆಗಿದೆ. ಆ ನಗರವನ್ನು ನಿರ್ಮಿಸುವಾಗ ಅತ್ಯಧಿಕ ಪ್ರಮಾಣದ ಕೆಮ್ಮಣ್ಣನ್ನು ಕೋಟೆಯ ಆವರಣದೊಳಕ್ಕೆ ತರಲಾಯಿತು ಮತ್ತು ಅದನ್ನು ಎತ್ತರಕ್ಕೇರಿಸಲ್ಪಟ್ಟ ಸಮತಟ್ಟು ಮೇಲ್ಮೈಯನ್ನು ರಚಿಸಲು ಉಪಯೋಗಿಸಲಾಯಿತು. ಇದು ಒಂದು ರೀತಿಯ ಎತ್ತರಕ್ಕೇರಿಸಲ್ಪಟ್ಟ ಪೀಠ ಅಥವಾ ವೇದಿಕೆಯಾಗಿತ್ತು. ಈ ಎದ್ದುಕಾಣುವ ಪೀಠವು, ಇಜ್ರೇಲ್‌ ರಾಜರ ನಿವಾಸಸ್ಥಾನಕ್ಕಿಂತಲೂ ಹೆಚ್ಚಿನದ್ದಾಗಿತ್ತು ಎಂಬುದರ ಪುರಾವೆಯಾಗಿದ್ದಿರಸಾಧ್ಯವಿದೆ ಎಂದು ಟೆಲ್‌ ಇಜ್ರೇಲ್‌ನಲ್ಲಿನ ಭೂಶೋಧನೆಗಳ ಕುರಿತು ಸೆಕೆಂಡ್‌ ಪ್ರಿಲಿಮಿನರಿ ರಿಪೋರ್ಟ್‌ ಹೇಳುತ್ತದೆ. ಅದು ಹೇಳಿದ್ದು: “ಎಲ್ಲಿ ರಾಜಮನೆತನದ ರಥಗಳು ಹಾಗೂ ಅಶ್ವಸೈನ್ಯಗಳನ್ನು ಇಡಲ್ಪಟ್ಟು, ತರಬೇತಿಯನ್ನು ಕೊಡಲಾಗುತ್ತಿತ್ತೊ ಆ ಇಜ್ರೇಲ್‌ . . . ಒಮ್ರೈಡ್‌ [ಒಮ್ರಿ ಮತ್ತು ಅವನ ಸಂತಾನದವರು] ರಾಜರ ಕಾಲದಲ್ಲಿ ರಾಜಮನೆತನದ ಇಸ್ರಾಯೇಲ್ಯ ಸೈನ್ಯಗಳ ಮಿಲಿಟರಿ ಕೇಂದ್ರವಾಗಿತ್ತು ಎಂಬುದನ್ನು ತಿಳಿಸಲು ನಾವು ಇಚ್ಛಿಸುತ್ತೇವೆ.” ಆ ಸಮಯದಲ್ಲಿ ಮಧ್ಯ ಪೂರ್ವದಲ್ಲೇ ಅತಿ ದೊಡ್ಡದ್ದಾಗಿದ್ದ ರಥಾಸೇನೆಯ ಮಿಲಿಟರಿ ಶಕ್ತಿಯನ್ನು ಪ್ರದರ್ಶಿಸಲಿಕ್ಕಾಗಿ ಇದು ಒಂದು ರೀತಿಯ ಪರೇಡ್‌ ಮೈದಾನವಾಗಿದ್ದಿರಸಾಧ್ಯವಿತ್ತು ಎಂದು ಎತ್ತರಕ್ಕೇರಿಸಲ್ಪಟ್ಟ ಪೀಠದ ಗಾತ್ರ ಹಾಗೂ ಆವರಣವನ್ನು ನೋಡಿ ವುಡ್‌ಹೆಡ್‌ ಊಹಿಸುತ್ತಾರೆ.

ನಗರದ ಹೆಬ್ಬಾಗಿಲಿನ ಹತ್ತಿರ ಅಗೆದುತೆಗೆಯಲ್ಪಟ್ಟಿರದ ಅವಶೇಷಗಳು ಪ್ರಾಕ್ತನಶಾಸ್ತ್ರಜ್ಞರಿಗೆ ವಿಶೇಷ ಆಸಕ್ತಿಯ ವಿಷಯವಾಗಿದೆ. ಅವು ಕಡಿಮೆಪಕ್ಷ ನಾಲ್ಕು ಕೋಣೆಗಳುಳ್ಳ ಹೆಬ್ಬಾಗಿಲಿನ ಪ್ರವೇಶದ್ವಾರವನ್ನು ತೋರಿಸುತ್ತವೆ. ಆದರೆ ಎಷ್ಟೋ ಶತಮಾನಗಳಿಂದ ಆ ಸ್ಥಳದಲ್ಲಿರುವ ಶಿಲೆಗಳನ್ನು ಕೊಳ್ಳೆಹೊಡೆದಿರುವ ಕಾರಣ, ಕಂಡುಹಿಡಿತಗಳು ಅಪೂರ್ಣವಾಗಿವೆ. ಪರಿಮಾಣಗಳಲ್ಲಿ ಮೆಗಿದ್ದೋ, ಹಾಚೋರ್‌, ಮತ್ತು ಗೆಜೆರ್‌ನಲ್ಲಿ ಕಂಡುಕೊಳ್ಳಲ್ಪಟ್ಟ ಹೆಬ್ಬಾಗಿಲುಗಳಂತೆಯೇ ಇರುವ ಆರು ಕೋಣೆಗಳುಳ್ಳ ಹೆಬ್ಬಾಗಿಲಿಗೆ ಈ ಅವಶೇಷಗಳು ಕೈತೋರಿಸುತ್ತವೆ ಎಂದು ವುಡ್‌ಹೆಡ್‌ ನೆನಸುತ್ತಾರೆ. *

ಮಿಲಿಟರಿ ದೃಷ್ಟಿಕೋನದಿಂದ ಹಾಗೂ ಪ್ರಾಕೃತಿಕವಾಗಿಯೂ ಇಷ್ಟೊಂದು ಉತ್ತಮವಾದಂತಹ ಸ್ಥಳದಲ್ಲಿದ್ದ ಈ ನಗರದ ಅಲ್ಪಾಯುಷ್ಯವನ್ನು ಪ್ರಾಕ್ತನಶಾಸ್ತ್ರದ ಕಂಡುಹಿಡಿತಗಳು ತೋರಿಸುತ್ತವೆ. ಇದು ಆಶ್ಚರ್ಯಗೊಳಿಸುವಂತಹ ಸಂಗತಿಯಾಗಿದೆ. ಬಹಳ ಭದ್ರವಾದ ನಗರದೋಪಾದಿ ಇಜ್ರೇಲ್‌ ಸ್ವಲ್ಪ ಸಮಯದ ವರೆಗೆ ಮಾತ್ರ, ಅಂದರೆ ಕೆಲವೊಂದು ದಶಕಗಳ ವರೆಗೆ ಮಾತ್ರ ಅಸ್ತಿತ್ವದಲ್ಲಿತ್ತು ಎಂದು ವುಡ್‌ಹೆಡ್‌ ಒತ್ತಿಹೇಳುತ್ತಾರೆ. ಇದು ಇಸ್ರಾಯೇಲಿನಲ್ಲಿರುವ ಇನ್ನೂ ಅನೇಕ ಪ್ರಮುಖ ಬೈಬಲ್‌ ಸ್ಥಳಗಳಾದ ಮೆಗಿದ್ದೋ, ಹಾಚೋರ್‌, ಮತ್ತು ರಾಜಧಾನಿಯಾದ ಸಮಾರ್ಯಕ್ಕಿಂತ ಭಿನ್ನವಾಗಿದೆ. ಇವುಗಳನ್ನು ವಿವಿಧ ಕಾಲಾವಧಿಗಳಲ್ಲಿ ಪದೇ ಪದೇ ಪುನರ್‌ನಿರ್ಮಿಸಲಾಯಿತು, ವಿಸ್ತರಿಸಲಾಯಿತು ಮತ್ತು ನಿವಾಸಿಸಲಿಕ್ಕಾಗಿ ಉಪಯೋಗಿಸಲಾಯಿತು. ಆದರೆ ಇಷ್ಟೊಂದು ಉತ್ತಮವಾದ ಸ್ಥಳವು ಇಷ್ಟೊಂದು ಬೇಗ ಏಕೆ ಮಣ್ಣಲ್ಲಿ ಮಣ್ಣಾಗಿ ಬೆರೆತುಹೋಯಿತು? ಅಹಾಬನು ಮತ್ತು ಅವನ ಮನೆತನವು ಜನಾಂಗದ ಸಂಪನ್ಮೂಲಗಳನ್ನು ದುಂದುವೆಚ್ಚ ಮಾಡಿದ ಕಾರಣ ಆರ್ಥಿಕ ಕುಸಿತವನ್ನು ಉಂಟುಮಾಡಿತ್ತೆಂದು ವುಡ್‌ಹೆಡ್‌ ಊಹಿಸುತ್ತಾರೆ. ಇದು ಇಜ್ರೇಲಿನ ಅತಿ ಬೃಹತ್‌ ಗಾತ್ರ ಹಾಗೂ ಅದಕ್ಕಿದ್ದ ಶಕ್ತಿಯಿಂದ ವ್ಯಕ್ತವಾಗುತ್ತದೆ. ಯೇಹುವಿನ ಕೈಕೆಳಗಿದ್ದ ಹೊಸ ಆಳ್ವಿಕೆಯು ಅಹಾಬನ ಹೆಸರಿನೊಂದಿಗೆ ಸಂಬಂಧವನ್ನು ಕಡಿದುಹಾಕಲು ಬಯಸಿತು ಮತ್ತು ಹೀಗೆ ಆ ನಗರವನ್ನೇ ತೊರೆದುಬಿಟ್ಟಿರಬಹುದು.

ಇಷ್ಟರ ವರೆಗೆ ಅಗೆದುತೆಗೆಯಲ್ಪಟ್ಟಿರುವ ಎಲ್ಲ ಪುರಾವೆಯು, ಇಜ್ರೇಲ್‌ ಕಬ್ಬಿಣ ಯುಗದ ಸಮಯಾವಧಿಯಲ್ಲಿ ಒಂದು ದೊಡ್ಡ ಇಸ್ರಾಯೇಲ್ಯ ಕೇಂದ್ರವಾಗಿತ್ತು ಎಂಬುದನ್ನು ದೃಢಪಡಿಸುತ್ತದೆ. ಅಹಾಬನು ಮತ್ತು ಈಜೆಬೆಲಳಿಗಾಗಿ ಇದು ಪ್ರಮುಖ ರಾಜನಿವಾಸವಾಗಿತ್ತು ಎಂಬ ಬೈಬಲಿನ ವರ್ಣನೆಯೊಂದಿಗೆ ಇದರ ಗಾತ್ರ ಹಾಗೂ ಕೋಟೆಗಳು ಹೊಂದಿಕೆಯಲ್ಲಿವೆ. ಈ ಸಮಯಾವಧಿಯಲ್ಲಿ ಕಡಿಮೆ ಜನರು ವಾಸಿಸುತ್ತಿದ್ದಂತಹ ಸೂಚನೆಗಳು ಆ ನಗರದ ಬಗ್ಗೆ ಬೈಬಲಿನ ವೃತ್ತಾಂತಗಳೊಂದಿಗೆ ಹೋಲುತ್ತವೆ: ಅಹಾಬನ ಆಳ್ವಿಕೆಯ ಸಮಯದಲ್ಲಿ ಅದು ಧಿಗ್ಗನೇ ಖ್ಯಾತಿಯ ಶಿಖರಕ್ಕೇರಿತು ಮತ್ತು ಯೆಹೋವನ ಆಜ್ಞೆಗನುಸಾರ, ಯೇಹು ‘ಇಜ್ರೇಲಿನಲ್ಲಿ ಉಳಿದ ಅಹಾಬನ ಕುಟುಂಬದವರನ್ನೂ ಅವನ ಸರದಾರರು, ಆಪ್ತಮಿತ್ರರು, ಪುರೋಹಿತರನ್ನೂ ಸಂಹರಿಸಿ; ಒಬ್ಬನನ್ನೂ ಉಳಿಸದೇ’ ಹೋದಾಗ ಅದು ಕೆಳಗುರುಳಿಸಲ್ಪಟ್ಟಿತು.—2 ಅರಸು 10:11.

ಇಜ್ರೇಲಿನ ಕಾಲಗಣನೆ

“ಪ್ರಾಕ್ತನಶಾಸ್ತ್ರದಲ್ಲಿ ಕಾಲದ ಕುರಿತಾಗಿ ನಿಖರವಾದ ಆಧಾರವನ್ನು ಕಂಡುಹಿಡಿಯುವುದು ತೀರ ಕಷ್ಟ” ಎಂಬುದನ್ನು ಜಾನ್‌ ವುಡ್‌ಹೆಡ್‌ ಒಪ್ಪಿಕೊಳ್ಳುತ್ತಾರೆ. ಆದುದರಿಂದ, ಪ್ರಾಕ್ತನಶಾಸ್ತ್ರಜ್ಞರು ಏಳು ವರ್ಷಗಳ ಭೂಶೋಧನೆಗಳ ಫಲಿತಾಂಶಗಳನ್ನು ಪರೀಕ್ಷಿಸಿನೋಡುತ್ತಿರುವಂತೆ, ಇವುಗಳನ್ನು ಇತರ ಪ್ರಾಕ್ತನಶಾಸ್ತ್ರಕ್ಕೆ ಸಂಬಂಧಿಸಿದ ಸ್ಥಳಗಳಲ್ಲಿ ಕಂಡುಕೊಳ್ಳಲ್ಪಟ್ಟ ಭೂಶೋಧನೆಗಳೊಂದಿಗೆ ಹೋಲಿಸಿನೋಡುತ್ತಾರೆ. ಇದು ಮರುಪರೀಕ್ಷೆ ಹಾಗೂ ವಾಗ್ವಾದಕ್ಕೆ ಎಡೆಮಾಡಿಕೊಟ್ಟಿದೆ. ಅದು ಏಕೆ? ಏಕೆಂದರೆ 1960ಗಳ ಹಾಗೂ 1970ಗಳ ಆದಿಭಾಗದಲ್ಲಿ ಮೆಗಿದ್ದೋ ಸ್ಥಳದಲ್ಲಿ ಇಸ್ರಾಯೇಲ್‌ ದೇಶದ ಪ್ರಾಕ್ತನಶಾಸ್ತ್ರಜ್ಞನಾದ ಯಿಗೆಯೆಲ್‌ ಯಾಡೀನ್‌ ಭೂಶೋಧನೆಗಳನ್ನು ಮಾಡಿದ್ದಂದಿನಿಂದ, ಅವನು ರಾಜ ಸೊಲೊಮೋನನ ಸಮಯದ ಕೋಟೆಗಳನ್ನು ಹಾಗೂ ಹೆಬ್ಬಾಗಿಲುಗಳನ್ನು ಕಂಡುಹಿಡಿದಿದ್ದಾನೆ ಎಂಬುದು ಪ್ರಾಕ್ತನಶಾಸ್ತ್ರಜ್ಞರ ಲೋಕದಲ್ಲಿ ದೃಢೀಕರಿಸಲ್ಪಟ್ಟಿರುವ ಸಂಗತಿಯಾಗಿತ್ತು. ಆದರೆ ಈಗ, ಇಜ್ರೇಲಿನಲ್ಲಿ ಕಂಡುಹಿಡಿಯಲ್ಪಟ್ಟಿರುವ ಕೋಟೆಯ ಅವಶೇಷಗಳು, ಮಣ್ಣಿನ ಪಾತ್ರೆಗಳು, ಮತ್ತು ಹೆಬ್ಬಾಗಿಲುಗಳು ಈ ಅಭಿಪ್ರಾಯಗಳನ್ನು ಕೆಲವರು ಪ್ರಶ್ನಿಸುವಂತೆ ಮಾಡುತ್ತಿವೆ.

ಉದಾಹರಣೆಗೆ, ಇಜ್ರೇಲಿನಲ್ಲಿ ಕಂಡುಕೊಳ್ಳಲ್ಪಟ್ಟ ಮಣ್ಣಿನ ಪಾತ್ರೆಗಳು, ಯಾಡೀನ್‌ ಅವರು ಸೊಲೊಮೋನನ ಆಳ್ವಿಕೆಯೊಂದಿಗೆ ಜೋಡಿಸಿದ ಮೆಗಿದ್ದೋದಲ್ಲಿನ ಅವಶೇಷಕ್ಕೆ ತದ್ರೂಪದ್ದಾಗಿವೆ. ಹೆಬ್ಬಾಗಿಲಿನ ವಿನ್ಯಾಸ ಹಾಗೂ ಎರಡು ಸ್ಥಳಗಳ ಪರಿಮಾಣಗಳು ತದ್ರೂಪದ್ದಾಗಿವೆ, ಒಂದೇ ತೆರನಾದದ್ದಾಗಿವೆಯೆಂದೂ ಹೇಳಬಹುದು. “ಈ ಎಲ್ಲ ಪುರಾವೆಯು ಒಂದೋ ಇಜ್ರೇಲನ್ನು ಸೊಲೊಮೋನನ ಸಮಯಕ್ಕೆ ಕರೆದುಕೊಂಡುಹೋಗುತ್ತದೆ ಇಲ್ಲವೇ ಈ ಬೇರೆ ನಿವೇಶನಗಳನ್ನು [ಮೆಗಿದ್ದೋ ಮತ್ತು ಹಾಚೋರ] ಅಹಾಬನ ಸಮಯಕ್ಕೆ ಮುಂದೆತರುತ್ತದೆ” ಎಂದು ವುಡ್‌ಹೆಡ್‌ ಹೇಳುತ್ತಾರೆ. ಬೈಬಲು ಇಜ್ರೇಲನ್ನು ಅಹಾಬನ ಸಮಯಾವಧಿಯೊಂದಿಗೆ ಸ್ಪಷ್ಟವಾಗಿ ಜೋಡಿಸುವುದರಿಂದ, ಈ ಅವಶೇಷಗಳು ಅಹಾಬನ ಆಳ್ವಿಕೆಯ ಸಮಯವನ್ನು ಪ್ರತಿಬಿಂಬಿಸುತ್ತವೆ ಎಂಬುದನ್ನು ಒಪ್ಪಿಕೊಳ್ಳುವುದು ಸಮಂಜಸವಾಗಿದೆ ಎಂಬುದು ಇವರ ದೃಷ್ಟಿಕೋನವಾಗಿದೆ. ಡೇವಿಡ್‌ ಉಶಿಷ್‌ಕಿನ್‌ ಸಮ್ಮತಿಸುವುದು: “ಸೊಲೋಮೋನನು ಮೆಗಿದ್ದೋವನ್ನು ಕಟ್ಟಿದನು ಎಂದು ಬೈಬಲು ಹೇಳುತ್ತದಾದರೂ, ಆ ಹೆಬ್ಬಾಗಿಲುಗಳನ್ನು ಅವನು ತಾನೇ ಕಟ್ಟಿದನು ಎಂಬುದಾಗಿ ಹೇಳುವುದಿಲ್ಲ.”

ಇಜ್ರೇಲಿನ ಇತಿಹಾಸವನ್ನು ತಿಳಿದುಕೊಳ್ಳಸಾಧ್ಯವಿದೆಯೋ?

ಈ ಪ್ರಾಕ್ತನಶಾಸ್ತ್ರದ ಕಂಡುಹಿಡಿತಗಳು ಮತ್ತು ಅದರಿಂದಾಗಿ ಉದ್ಭವಿಸಿರುವ ವಾಗ್ವಾದವು, ಇಜ್ರೇಲ್‌ ಅಥವಾ ಸೊಲೊಮೋನನ ಕುರಿತಾದ ಬೈಬಲಿನ ವೃತ್ತಾಂತದ ಮೇಲೆ ಸಂದೇಹವನ್ನು ಉಂಟುಮಾಡುತ್ತದೋ? ವಾಸ್ತವದಲ್ಲಿ, ಈ ಪ್ರಾಕ್ತನಶಾಸ್ತ್ರ ವಿವಾದವು ಬೈಬಲಿನ ವೃತ್ತಾಂತವನ್ನು ನೇರವಾಗಿ ಪ್ರಭಾವಿಸುವುದಿಲ್ಲ. ಬೈಬಲ್‌ ಕಥನಕ್ಕಿಂತಲೂ ವಿಭಿನ್ನವಾದ ಆಧಾರದ ಮೇಲೆ ಪ್ರಾಕ್ತನಶಾಸ್ತ್ರವು ಇತಿಹಾಸವನ್ನು ಪರೀಕ್ಷಿಸುತ್ತದೆ. ಅದು ವಿಭಿನ್ನ ಪ್ರಶ್ನೆಗಳನ್ನು ಎಬ್ಬಿಸುತ್ತದೆ ಮತ್ತು ಅದಕ್ಕೆ ವಿಭಿನ್ನವಾದ ಮಹತ್ತ್ವವಿದೆ. ಬೈಬಲ್‌ ವಿದ್ಯಾರ್ಥಿ ಮತ್ತು ಪ್ರಾಕ್ತನಶಾಸ್ತ್ರಜ್ಞನನ್ನು ಸರಿಸುಮಾರು ಸಮಾನಾಂತರವಾದ ಮಾರ್ಗಗಳಲ್ಲಿ ಹೋಗುತ್ತಿರುವ ಪ್ರಯಾಣಿಕರಿಗೆ ಹೋಲಿಸಸಾಧ್ಯವಿದೆ. ಒಬ್ಬ ಪ್ರಯಾಣಿಕನು ರಸ್ತೆಯಲ್ಲಿ ವಾಹನವನ್ನು ಚಲಾಯಿಸಿಕೊಂಡು ಹೋಗುತ್ತಿದ್ದಾನೆ, ಮತ್ತೊಬ್ಬ ಪ್ರಯಾಣಿಕನು ಪಾದಾಚಾರಿಗಳ ಪಥದಲ್ಲಿ ನಡೆದುಕೊಂಡು ಹೋಗುತ್ತಿದ್ದಾನೆ. ಅವರ ಗುರಿ ಮತ್ತು ಆಸಕ್ತಿಗಳು ಬೇರೆ ಬೇರೆಯಾಗಿವೆ. ಆದರೂ ಅವರ ದೃಷ್ಟಿಕೋನಗಳು ಪರಸ್ಪರ ವಿರುದ್ಧವಾಗಿರುವ ಬದಲು ಅನೇಕ ವೇಳೆ ಪರಸ್ಪರ ಪೂರಕವಾಗಿರುತ್ತವೆ. ಆ ಇಬ್ಬರು ಪ್ರಯಾಣಿಕರ ಅಭಿಪ್ರಾಯಗಳನ್ನು ಹೋಲಿಸುವುದರಿಂದ ಅತ್ಯಾಕರ್ಷಕ ಒಳನೋಟಗಳನ್ನು ಪಡೆದುಕೊಳ್ಳಲು ಸಹಾಯವಾಗಸಾಧ್ಯವಿದೆ.

ಪುರಾತನ ಕಾಲದ ಘಟನೆಗಳ ಹಾಗೂ ಜನರ ಕುರಿತಾದ ಲಿಖಿತ ದಾಖಲೆಯು ಬೈಬಲಿನಲ್ಲಿದೆ. ಆದರೆ ಪ್ರಾಕ್ತನಶಾಸ್ತ್ರವು, ಮಣ್ಣಿನಲ್ಲಿ ಇನ್ನೂ ಉಳಿದಿರುವ ಅವಶೇಷಗಳಿಂದ ಸಿಗುವ ಯಾವುದೇ ಸುಳಿವುಗಳನ್ನು ಪರೀಕ್ಷಿಸುವ ಮೂಲಕ ಈ ಘಟನೆಗಳ ಹಾಗೂ ಜನರ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತದೆ. ಆದರೆ, ಈ ಅವಶೇಷಗಳು ಸಾಮಾನ್ಯವಾಗಿ ತೀರ ಅಪೂರ್ಣವಾಗಿದ್ದು, ಬೇರೆ ಬೇರೆ ರೀತಿಯ ವ್ಯಾಖ್ಯಾನಗಳಿಗೆ ಒಳಗಾಗುತ್ತವೆ. ಇದರ ಬಗ್ಗೆ, ಅಮೀಹೀ ಮಸಾರ್‌ ಅವರು ಆರ್ಕಿಯಾಲಜಿ ಆಫ್‌ ದ ಲ್ಯಾಂಡ್‌ ಆಫ್‌ ದ ಬೈಬಲ್‌—10,000-586 ಬಿ.ಸಿ.ಈ ಎಂಬ ತಮ್ಮ ಪುಸ್ತಕದಲ್ಲಿ ಹೇಳುವುದು: “ಪ್ರಾಕ್ತನಶಾಸ್ತ್ರದ ಕೆಲಸವು . . . ಹೆಚ್ಚಿನಾಂಶ ಒಂದು ಕಲೆ ಹಾಗೂ ತರಬೇತು ಮತ್ತು ವೃತ್ತಿಪರ ಕೌಶಲದ ಸಮ್ಮಿಶ್ರಣವಾಗಿದೆ. ಯಾವುದೇ ಕಟ್ಟುನಿಟ್ಟಿನ ವಿಧಾನವು ಸಫಲತೆಯ ಖಾತ್ರಿಯನ್ನು ಕೊಡಸಾಧ್ಯವಿಲ್ಲ ಮತ್ತು ಅಲ್ಲಿನ ಮೇಲ್ವಿಚಾರಕರಲ್ಲಿ ನಮ್ಯ ಹಾಗೂ ಸೃಜನಾತ್ಮಕ ವಿಚಾರವು ಆವಶ್ಯಕ. ಪ್ರಾಕ್ತನಶಾಸ್ತ್ರಜ್ಞರ ವ್ಯಕ್ತಿತ್ವ, ಮೇಧಾಶಕ್ತಿ, ಮತ್ತು ಸಾಮಾನ್ಯ ಜ್ಞಾನವು ಅವರಿಗೆ ಸಿಗುವ ತರಬೇತಿ ಹಾಗೂ ಸಂಪನ್ಮೂಲಗಳಷ್ಟೇ ಪ್ರಾಮುಖ್ಯವಾಗಿರುತ್ತವೆ.”

ಇಜ್ರೇಲಿನಲ್ಲಿ ಒಂದು ದೊಡ್ಡ ಅರಮನೆ ಹಾಗೂ ಮಿಲಿಟರಿ ಕೇಂದ್ರವಿತ್ತು ಎಂಬುದನ್ನು ಪ್ರಾಕ್ತನಶಾಸ್ತ್ರವು ದೃಢೀಕರಿಸಿದೆ. ಬೈಬಲು ಹೇಳುವಂತೆಯೇ, ಇದು ಅಹಾಬನ ಆಳ್ವಿಕೆಯೊಂದಿಗೆ ಸರಿಹೊಂದುವ ಐತಿಹಾಸಿಕ ಸಮಯಾವಧಿಯಲ್ಲಿ ತೀರ ಅಲ್ಪಕಾಲಕ್ಕಾಗಿ ಅಸ್ತಿತ್ವದಲ್ಲಿತ್ತು. ಪ್ರಾಕ್ತನಶಾಸ್ತ್ರಜ್ಞರು ಮುಂಬರುವ ವರ್ಷಗಳಲ್ಲಿ ಅಧ್ಯಯನಮಾಡಲಿಕ್ಕಿರುವ ಇನ್ನೂ ಅನೇಕ ಕುತೂಹಲಕಾರಿ ಪ್ರಶ್ನೆಗಳು ಈಗ ಎಬ್ಬಿಸಲ್ಪಟ್ಟಿವೆ. ಆದರೆ ಪ್ರಾಕ್ತನಶಾಸ್ತ್ರಜ್ಞರು ಎಂದಿಗೂ ಹೇಳಸಾಧ್ಯವಿರದಂತಹ ರೀತಿಯಲ್ಲಿ, ದೇವರ ವಾಕ್ಯವಾದ ಬೈಬಲಿನ ಪುಟಗಳು ಸಂಪೂರ್ಣ ಕಥನವನ್ನು ಸ್ಫುಟವಾಗಿ ಹೇಳುವುದನ್ನು ಮುಂದುವರಿಸಿವೆ.

[ಪಾದಟಿಪ್ಪಣಿಗಳು]

^ ಪ್ಯಾರ. 13 ಆಗಸ್ಟ್‌ 15, 1988ರ ದ ವಾಚ್‌ಟವರ್‌ ಪತ್ರಿಕೆಯಲ್ಲಿರುವ “ಹೆಬ್ಬಾಗಿಲುಗಳ ರಹಸ್ಯ” ಎಂಬ ಲೇಖನವನ್ನು ನೋಡಿರಿ.

[ಪುಟ 26ರಲ್ಲಿರುವ ಚಿತ್ರಗಳು]

ಇಜ್ರೇಲಿನಲ್ಲಿ ಪ್ರಾಕ್ತನಶಾಸ್ತ್ರದ ಭೂಶೋಧನೆಗಳು

[ಪುಟ 28ರಲ್ಲಿರುವ ಚಿತ್ರ]

ಇಜ್ರೇಲಿನಲ್ಲಿ ಸಿಕ್ಕಿರುವ ಕಾನಾನ್ಯ ವಿಗ್ರಹ