ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ತಮ್ಮ ನಂಬಿಕೆಗಾಗಿ ಅವರಿಗೆ ಪ್ರತಿಫಲ ಸಿಕ್ಕಿತು

ತಮ್ಮ ನಂಬಿಕೆಗಾಗಿ ಅವರಿಗೆ ಪ್ರತಿಫಲ ಸಿಕ್ಕಿತು

ರಾಜ್ಯ ಘೋಷಕರು ವರದಿಮಾಡುತ್ತಾರೆ

ತಮ್ಮ ನಂಬಿಕೆಗಾಗಿ ಅವರಿಗೆ ಪ್ರತಿಫಲ ಸಿಕ್ಕಿತು

ಅಪೊಸ್ತಲ ಪೌಲನ ನಂಬಿಕೆಯು ಎದ್ದುಕಾಣುವಂತಹದ್ದಾಗಿತ್ತು ಮತ್ತು ಅಂತಹದ್ದೇ ನಂಬಿಕೆಯನ್ನು ಬೆಳೆಸಿಕೊಳ್ಳುವಂತೆ ಅವನು ತನ್ನ ಜೊತೆವಿಶ್ವಾಸಿಗಳಿಗೆ ಉತ್ತೇಜನ ನೀಡಿದನು. “ದೇವರ ಬಳಿಗೆ ಬರುವವನು ದೇವರು ಇದ್ದಾನೆ, ಮತ್ತು ತನ್ನನ್ನು ಹುಡುಕುವವರಿಗೆ ಪ್ರತಿಫಲವನ್ನು ಕೊಡುತ್ತಾನೆ ಎಂದು ನಂಬುವದು ಅವಶ್ಯ” ಎಂದು ಅವನು ಹೇಳಿದನು. (ಇಬ್ರಿಯ 11:6) ಮೊಸಾಂಬೀಕ್‌ ದೇಶದಿಂದ ಬಂದ ಈ ಮುಂದಿನ ಅನುಭವಗಳು, ಯೆಹೋವನು ಬಲವಾದ ನಂಬಿಕೆಗೆ ಯಾವ ರೀತಿಯಲ್ಲಿ ಪ್ರತಿಫಲವನ್ನು ಕೊಡುತ್ತಾನೆ ಮತ್ತು ಶ್ರದ್ಧಾಪೂರ್ವಕ ಪ್ರಾರ್ಥನೆಗಳಿಗೆ ಹೇಗೆ ಉತ್ತರಿಸುತ್ತಾನೆ ಎಂಬುದನ್ನು ತೋರಿಸುತ್ತವೆ.

• ನೀಯಸ ಎಂಬ ಉತ್ತರ ಪ್ರಾಂತದಲ್ಲಿರುವ ಒಬ್ಬ ವಿಧವಾ ಸಹೋದರಿಯು, ತನ್ನ ಆರು ಮಂದಿ ಮಕ್ಕಳೊಂದಿಗೆ “ದೇವರ ಜೀವನ ಮಾರ್ಗ” ಎಂಬ ಜಿಲ್ಲಾ ಅಧಿವೇಶನಕ್ಕೆ ಹೋಗುವುದರ ಕುರಿತು ತೀರ ಚಿಂತಿತಳಾಗಿದ್ದಳು. ಸ್ಥಳಿಕ ಮಾರುಕಟ್ಟೆಯಲ್ಲಿ ಸಾಮಾನುಗಳನ್ನು ಮಾರುವುದೇ ಅವಳ ಆದಾಯದ ಏಕಮಾತ್ರ ಮೂಲವಾಗಿತ್ತು. ಅಧಿವೇಶನದ ದಿನಾಂಕವು ಹತ್ತಿರವಾದಂತೆ, ಅವಳು ಮತ್ತು ಅವಳ ಕುಟುಂಬವು ಅಧಿವೇಶನಕ್ಕೆ ಹೋಗುವುದಕ್ಕೆ ಬೇಕಾಗುವಷ್ಟು ಹಣ ಮಾತ್ರ ಅವಳ ಕೈಯಲ್ಲಿ ಇತ್ತು. ಆದರೂ ಯೆಹೋವನು ತಮ್ಮ ಅಗತ್ಯಗಳನ್ನು ಪೂರೈಸುವನೆಂಬ ಭರವಸೆಯನ್ನಿಡಲು ಅವಳು ನಿಶ್ಚಯಿಸಿದಳು ಮತ್ತು ಅಧಿವೇಶನಕ್ಕೆ ಹಾಜರಾಗಲು ಯೋಜನೆಗಳನ್ನು ಮಾಡತೊಡಗಿದಳು.

ತನ್ನ ಆರು ಮಂದಿ ಮಕ್ಕಳೊಂದಿಗೆ ಅವಳು ರೈಲನ್ನು ಹತ್ತಿದಳು. ಪ್ರಯಾಣದ ಸಮಯದಲ್ಲಿ ಕಂಡಕ್ಟರನು ಟಿಕೆಟ್‌ಗಾಗಿ ಅವಳ ಬಳಿ ಬಂದನು. ಅವಳು ಹಾಕಿಕೊಂಡಿದ್ದ ಬ್ಯಾಡ್ಜ್‌ ಕಾರ್ಡನ್ನು ನೋಡಿ, ಇದು ಯಾವ ರೀತಿಯ ಗುರುತಾಗಿದೆ ಎಂದು ಅವನು ಕೇಳಿದನು. ಯೆಹೋವನ ಸಾಕ್ಷಿಗಳ ಜಿಲ್ಲಾ ಅಧಿವೇಶನಕ್ಕೆ ಹಾಜರಾಗುತ್ತಿರುವ ಒಬ್ಬ ಪ್ರತಿನಿಧಿಯೋಪಾದಿ ಇದು ತನ್ನನ್ನು ಗುರುತಿಸುತ್ತದೆಂದು ಆ ಸಹೋದರಿಯು ಅವನಿಗೆ ವಿವರಿಸಿದಳು. “ಈ ಅಧಿವೇಶನವು ಎಲ್ಲಿ ನಡೆಯಲಿದೆ?” ಎಂದು ಕಂಡಕ್ಟರ್‌ ಕೇಳಿದನು. ಅಧಿವೇಶನವು ಸುಮಾರು 300 ಕಿಲೋಮೀಟರುಗಳಷ್ಟು ದೂರದಲ್ಲಿರುವ ನಾಂಪುಲ ಪ್ರಾಂತದಲ್ಲಿ ನಡೆಯಲಿದೆ ಎಂಬುದನ್ನು ತಿಳಿದುಕೊಂಡ ಅವನು ಆಶ್ಚರ್ಯವಾಗುವಂತಹ ರೀತಿಯಲ್ಲಿ, ಸಾಮಾನ್ಯವಾಗಿ ತೆಗೆದುಕೊಳ್ಳಲಾಗುವ ಟಿಕೆಟ್‌ ದರದಲ್ಲಿ ಅರ್ಧದಷ್ಟು ಹಣವನ್ನು ಮಾತ್ರ ತೆಗೆದುಕೊಂಡನು! ಉಳಿದ ಅರ್ಧ ಹಣದಲ್ಲಿ ಅವನು ಅವಳಿಗೂ ಅವಳ ಕುಟುಂಬಕ್ಕೂ ಹಿಂದಿರುಗಿ ಬರಲಿಕ್ಕಾಗಿ ಬೇಕಾಗಿದ್ದ ಟಿಕೇಟುಗಳನ್ನು ಕೊಟ್ಟನು. ಯೆಹೋವನಲ್ಲಿ ಭರವಸೆಯನ್ನಿಟ್ಟದ್ದಕ್ಕಾಗಿ ಅವಳು ಎಷ್ಟು ಸಂತೋಷಪಟ್ಟಳು!—ಕೀರ್ತನೆ 121:1, 2.

• ತುಂಬ ಧಾರ್ಮಿಕ ಸ್ತ್ರೀಯಾಗಿದ್ದ ಒಬ್ಬಾಕೆಯು, ದೇವರನ್ನು ಆರಾಧಿಸುವ ಸರಿಯಾದ ಮಾರ್ಗವನ್ನು ತನಗೆ ತೋರಿಸುವಂತೆ ಸುಮಾರು 25 ವರ್ಷಗಳಿಂದಲೂ ಪ್ರಾರ್ಥಿಸುತ್ತಿದ್ದಳು. ಅವಳು ಹೋಗುತ್ತಿದ್ದ ಚರ್ಚು ಧಾರ್ಮಿಕ ವಿಧಿಗಳನ್ನು ಸಾಂಪ್ರದಾಯಿಕ ಸಂಸ್ಕಾರಗಳೊಂದಿಗೆ ಒಟ್ಟುಗೂಡಿಸುತ್ತಿತ್ತು, ಆದುದರಿಂದ ಅವಳಿಗೆ ಇಂತಹ ಒಂದು ಆರಾಧನಾ ರೀತಿಯು ದೇವರನ್ನು ಪ್ರಸನ್ನಗೊಳಿಸುತ್ತಿತ್ತೋ ಎಂಬ ಸಂದೇಹವಿತ್ತು.

ಅವಳು ಹೇಳುವುದು: “ಮತ್ತಾಯ 7:7ರಲ್ಲಿ ದಾಖಲಿಸಲ್ಪಟ್ಟ ಯೇಸುವಿನ ಮಾತುಗಳನ್ನು ನಾನು ಯಾವಾಗಲೂ ಜ್ಞಾಪಕದಲ್ಲಿಟ್ಟುಕೊಂಡಿದ್ದೆ. ಅದು ಹೇಳುವುದು: ‘ಬೇಡಿಕೊಳ್ಳಿರಿ, ನಿಮಗೆ ದೊರೆಯುವದು; ಹುಡುಕಿರಿ, ನಿಮಗೆ ಸಿಕ್ಕುವದು; ತಟ್ಟಿರಿ, ನಿಮಗೆ ತೆರೆಯುವದು.’ ಈ ಶಾಸ್ತ್ರವಚನವನ್ನು ಮನಸ್ಸಿನಲ್ಲಿಟ್ಟುಕೊಂಡು, ನನ್ನನ್ನು ಸತ್ಯಕ್ಕೆ ನಡೆಸುವಂತೆ ನಾನು ದೇವರಿಗೆ ದಿನಾಲೂ ಪ್ರಾರ್ಥಿಸುತ್ತಿದ್ದೆ. ಒಂದು ದಿವಸ ನಮ್ಮ ಚರ್ಚಿನ ಪಾಸ್ಟರ್‌, ಸ್ಥಳಿಕ ಮಾರುಕಟ್ಟೆಯಲ್ಲಿ ಕೆಲಸಮಾಡುವ ಎಲ್ಲರೂ ತಮ್ಮ ಕೆಲವೊಂದು ಸಾಮಾನುಗಳೊಂದಿಗೆ ನಿರ್ದಿಷ್ಟ ಮೊತ್ತದ ಹಣವನ್ನು ತರುವಂತೆ ಕೇಳಿಕೊಂಡನು. ಹೀಗೆ ಅವನು ಅವರಿಗೆ ಆಶೀರ್ವಾದವನ್ನು ನೀಡಲಿದ್ದನು. ಆದರೆ ನನಗೆ ಈ ವಿನಂತಿಯು ಶಾಸ್ತ್ರೀಯವಲ್ಲವೆಂದು ಅನಿಸಿತು, ಆದುದರಿಂದ ನಾನು ಏನನ್ನೂ ತರಲಿಲ್ಲ. ನಾನು ‘ದಾನವನ್ನು’ ತಂದಿಲ್ಲ ಎಂಬುದನ್ನು ಅರಿತುಕೊಂಡ ಆ ಪಾಸ್ಟರನು, ಚರ್ಚಿನ ಸದಸ್ಯರೆಲ್ಲರ ಮುಂದೆ ನನ್ನನ್ನು ಅವಮಾನಮಾಡಲಾರಂಭಿಸಿದನು. ಇಂತಹ ಒಂದು ವಿಧದಲ್ಲಿ ತನ್ನನ್ನು ಆರಾಧಿಸುವುದನ್ನು ದೇವರು ಇಷ್ಟಪಡುವುದಿಲ್ಲವೆಂದು ಆ ದಿನವೇ ನಾನು ಗ್ರಹಿಸಿದೆ, ಆದುದರಿಂದ ಚರ್ಚನ್ನು ಬಿಟ್ಟುಬಿಟ್ಟೆ. ಅದೇ ಸಮಯದಲ್ಲಿ, ನಾನು ಸತ್ಯವನ್ನು ಕಂಡುಕೊಳ್ಳಲಿಕ್ಕಾಗಿ ಎಡಬಿಡದೇ ಪ್ರಾರ್ಥಿಸಿದೆ.

“ಕೊನೆಗೆ, ನಾನು ಧೈರ್ಯವನ್ನು ಒಟ್ಟುಗೂಡಿಸಿಕೊಂಡು, ಒಬ್ಬ ಯೆಹೋವನ ಸಾಕ್ಷಿಯಾಗಿರುವ ನನ್ನ ಸಂಬಂಧಿಕನನ್ನು ಸಂಪರ್ಕಿಸಿದೆ. ಅವನು ನನಗೆ ಒಂದು ಕಿರುಹೊತ್ತಗೆಯನ್ನು ಕೊಟ್ಟನು. ಇದನ್ನು ಓದಿದಾಕ್ಷಣವೇ ದೇವರು ನನ್ನ ಪ್ರಾರ್ಥನೆಗಳಿಗೆ ಉತ್ತರವನ್ನು ನೀಡುತ್ತಿದ್ದಾನೆ ಎಂಬುದನ್ನು ನಾನು ಗ್ರಹಿಸಿದೆ. ಸಕಾಲದಲ್ಲಿ, ನನ್ನ ಸಂಗಾತಿಯು ಸಹ ಬೈಬಲ್‌ ಸತ್ಯಗಳನ್ನು ಗಣ್ಯಮಾಡತೊಡಗಿದನು ಮತ್ತು ನಾವು ನಮ್ಮ ವಿವಾಹವನ್ನು ಕಾನೂನುಬದ್ಧಗೊಳಿಸಿದೆವು. ಆದರೆ ಅನಂತರ ನನ್ನ ಪತಿ ತೀರ ಅಸ್ವಸ್ಥರಾದರು. ಹೀಗಿದ್ದರೂ, ನಾವಿಬ್ಬರೂ ಪುನಃ ಪ್ರಮೋದವನದಲ್ಲಿ ಭೇಟಿಯಾಗಲು ಸಾಧ್ಯವಾಗುವಂತೆ ನಾನು ಸತ್ಯದ ಮಾರ್ಗದಲ್ಲಿ ಪಟ್ಟುಹಿಡಿದು ಮುಂದುವರಿಯುವಂತೆ ಅವರು ಸಾಯುವ ವರೆಗೂ ನನ್ನನ್ನು ಉತ್ತೇಜಿಸಿದರು.

“ನನ್ನ ಪ್ರಾರ್ಥನೆಗಳಿಗೆ ಉತ್ತರವನ್ನು ನೀಡಿದ್ದಕ್ಕಾಗಿ ಮತ್ತು ತನ್ನನ್ನು ಆರಾಧಿಸಲು ಸರಿಯಾದ ಮಾರ್ಗವನ್ನು ನನಗೆ ತೋರಿಸಿದ್ದಕ್ಕಾಗಿ ನಾನು ಯೆಹೋವನಿಗೆ ಸದಾ ಕೃತಜ್ಞಳು. ನನ್ನ ಎಂಟು ಮಂದಿ ಮಕ್ಕಳಲ್ಲಿ ಎಲ್ಲರೂ ಯೆಹೋವನ ಸಮರ್ಪಿತ ಸೇವಕರಾಗುವುದನ್ನು ನೋಡಲು ಶಕ್ತಳಾಗಿರುವುದರಿಂದಲೂ ನನ್ನ ಪ್ರಾರ್ಥನೆಗಳಿಗೆ ಉತ್ತರವು ಸಿಕ್ಕಿದೆ ಎಂದು ನಾನು ಹೇಳಬಲ್ಲೆ.”