ಮಹಾಶಕ್ತನಾಗಿರುವ ಯೆಹೋವನು
ಮಹಾಶಕ್ತನಾಗಿರುವ ಯೆಹೋವನು
“ಆತನು ಅತಿ ಬಲಾಢ್ಯನೂ ಮಹಾಶಕ್ತನೂ ಆಗಿರುವದರಿಂದ ಅವುಗಳೊಳಗೆ ಒಂದೂ ಕಡಿಮೆಯಾಗದು.”—ಯೆಶಾಯ 40:26.
1, 2. (ಎ) ನಾವೆಲ್ಲರೂ ಯಾವ ಭೌತಿಕ ಶಕ್ತಿಯ ಮೂಲದ ಮೇಲೆ ಅವಲಂಬಿಸುತ್ತೇವೆ? (ಬಿ) ಯೆಹೋವನು ಸಕಲ ಶಕ್ತಿಯ ಮೂಲನಾಗಿರುವುದು ಏಕೆ ಎಂಬುದನ್ನು ವಿವರಿಸಿರಿ.
ಶಕ್ತಿಯನ್ನು ಒಂದು ಮಾಮೂಲಿಯಾದ ವಿಷಯವೆಂದೆಣಿಸುತ್ತಾ ನಮ್ಮಲ್ಲಿ ಅನೇಕರು ಅದಕ್ಕೆ ಗಮನಕೊಡದೆ ಇರುತ್ತೇವೆ. ಉದಾಹರಣೆಗೆ, ನಮಗೆ ಬೆಳಕು ಹಾಗೂ ಶಾಖವನ್ನು ನೀಡುವಂತಹ ವಿದ್ಯುಚ್ಛಕ್ತಿಗೆ ಅಥವಾ ನಮ್ಮಲ್ಲಿರುವಂತಹ ಯಾವುದೇ ಇಲೆಕ್ಟ್ರಿಕ್ ಸಾಧನವನ್ನು ಸುಲಭವಾಗಿ ಪ್ಲಗ್ ಮಾಡಬಹುದಾದ ವಿಷಯಕ್ಕೆ ನಾವು ಅಷ್ಟಾಗಿ ಗಮನವನ್ನು ಕೊಡುವುದಿಲ್ಲ. ವಿದ್ಯುಚ್ಛಕ್ತಿ ಇಲ್ಲದೇ ಮಾನವನ ಪ್ರತಿಯೊಂದು ನಗರದಲ್ಲಿನ ಕೆಲಸವು ಹೆಚ್ಚುಕಡಿಮೆ ಸ್ಥಗಿತಗೊಳ್ಳುವುದು ಎಂಬ ಸಂಗತಿಯು, ವಿದ್ಯುತ್ ಕಡಿತವಾದಾಗಲೇ ನಮ್ಮ ಮನಸ್ಸಿಗೆ ನಾಟುತ್ತದೆ. ನಾವು ಅವಲಂಬಿಸಿರುವ ಹೆಚ್ಚಿನಾಂಶ ವಿದ್ಯುಚ್ಛಕ್ತಿಯು, ಭೂಮಿಯ ಅತ್ಯಂತ ಭರವಸಾರ್ಹ ಶಕ್ತಿಯ ಮೂಲವಾದ ಸೂರ್ಯನಿಂದ ನಾವು ಪರೋಕ್ಷವಾಗಿ ಪಡೆದುಕೊಳ್ಳುತ್ತೇವೆ. * ಭೂಮಿಗೆ ಜೀವಪೋಷಕ ಶಕ್ತಿಯನ್ನು ಸುರಿಸುತ್ತಾ, ಈ ಸೌರಮಂಡಲದ ರಿಯಾಕ್ಟರ್ ಪ್ರತಿಯೊಂದು ಸೆಕೆಂಡಿಗೆ ಸುಮಾರು 50 ಲಕ್ಷ ಟನ್‌ಗಳಷ್ಟು ನ್ಯೂಕ್ಲಿಯರ್ ಇಂಧನವನ್ನು ವಿನಿಯೋಗಿಸುತ್ತದೆ.
2 ಇಷ್ಟೆಲ್ಲ ಸೌರಶಕ್ತಿಯು ಎಲ್ಲಿಂದ ಬರುತ್ತದೆ? ಈ ಸ್ವರ್ಗೀಯ ಶಕ್ತಿಯ ಕೇಂದ್ರವನ್ನು ಸೃಷ್ಟಿಸಿದಾತನು ಯಾರು? ಖಂಡಿತವಾಗಿಯೂ ಯೆಹೋವ ದೇವರೇ. ಆತನ ಬಗ್ಗೆ ತಿಳಿಸುತ್ತಾ, ಕೀರ್ತನೆ 74:16 ಹೇಳುವುದು: “ಸೂರ್ಯಾದಿ ಜ್ಯೋತಿರ್ಮಂಡಲಗಳ ನಿರ್ಮಾಣಕನು ನೀನು.” ಹೌದು, ಎಲ್ಲ ಜೀವಗಳ ಮೂಲನು ಯೆಹೋವನಾಗಿರುವಂತೆಯೇ, ಎಲ್ಲ ಶಕ್ತಿಯ ಮೂಲನೂ ಆತನೇ ಆಗಿದ್ದಾನೆ. (ಕೀರ್ತನೆ 36:9) ಆತನ ಶಕ್ತಿಯನ್ನು ನಾವೆಂದಿಗೂ ಮಾಮೂಲಿಯೆಂದು ಉಪೇಕ್ಷಿಸಬಾರದು. ಸೂರ್ಯನಕ್ಷತ್ರಗಳಂತಹ ಆಕಾಶಕಾಯಗಳನ್ನು ಕಣ್ಣೆತ್ತಿ ನೋಡುವಂತೆ ಹಾಗೂ ಅವುಗಳು ಹೇಗೆ ಅಸ್ತಿತ್ವಕ್ಕೆ ಬಂದವು ಎಂಬುದರ ಕುರಿತು ಮನನಮಾಡುವಂತೆ ನಮಗೆ ಪ್ರವಾದಿಯಾದ ಯೆಶಾಯನ ಮುಖಾಂತರ ಯೆಹೋವನು ಮರುಜ್ಞಾಪಿಸುತ್ತಾನೆ. “ನಿಮ್ಮ ಕಣ್ಣುಗಳನ್ನು ಮೇಲಕ್ಕೆತ್ತಿಕೊಂಡು ನೋಡಿರಿ! ಈ ನಕ್ಷತ್ರಗಳನ್ನು ಸೃಷ್ಟಿಸಿದಾತನು ಯಾರು? ಈ ಸೈನ್ಯವನ್ನು ಲೆಕ್ಕಕ್ಕೆ ಸರಿಯಾಗಿ ಮುಂದರಿಸುತ್ತಾನಲ್ಲಾ; ಎಲ್ಲವನ್ನೂ ಹೆಸರೆತ್ತಿ ಕರೆಯುತ್ತಾನೆ; ಆತನು ಅತಿ ಬಲಾಢ್ಯನೂ ಮಹಾಶಕ್ತನೂ ಆಗಿರುವದರಿಂದ ಅವುಗಳೊಳಗೆ ಒಂದೂ ಕಡಿಮೆಯಾಗದು.”—ಯೆಶಾಯ 40:26; ಯೆರೆಮೀಯ 32:17.
3. ಯೆಹೋವನ ಶಕ್ತಿಯ ತೋರ್ಪಡಿಸುವಿಕೆಗಳಿಂದ ನಾವು ಹೇಗೆ ಪ್ರಯೋಜನವನ್ನು ಪಡೆದುಕೊಳ್ಳುತ್ತೇವೆ?
3 ಯೆಹೋವನು ಮಹಾಶಕ್ತನಾಗಿರುವ ಕಾರಣ, ನಮ್ಮ ಜೀವಗಳು ಯಾವುದರ ಕೀರ್ತನೆ 28:6-9; ಯೆಶಾಯ 50:2) ಯೆಹೋವನಿಗೆ ಸೃಷ್ಟಿಸಲು ಹಾಗೂ ವಿಮೋಚಿಸಲು, ತನ್ನ ಜನರನ್ನು ರಕ್ಷಿಸಲು ಮತ್ತು ತನ್ನ ಶತ್ರುಗಳನ್ನು ನಾಶಪಡಿಸಲಿಕ್ಕಿರುವ ಶಕ್ತಿಯ ಬಗ್ಗೆ, ಪ್ರಮಾಣವನ್ನು ನೀಡುವ ಉದಾಹರಣೆಗಳಿಂದ ಬೈಬಲು ತುಂಬಿತುಳುಕುತ್ತದೆ.
ಮೇಲೆ ಅವಲಂಬಿಸಿರುತ್ತವೊ ಆ ಬೆಳಕು ಹಾಗೂ ಶಾಖವನ್ನು ಸೂರ್ಯನು ಒದಗಿಸುತ್ತಾ ಇರುವನು ಎಂಬುದರ ಕುರಿತು ನಾವು ನಿಶ್ಚಿಂತರಾಗಿರಸಾಧ್ಯವಿದೆ. ಆದರೆ, ನಾವು ನಮ್ಮ ಮೂಲಭೂತ ಶಾರೀರಿಕ ಅಗತ್ಯಗಳಿಗಿಂತಲೂ ಹೆಚ್ಚಿನ ವಿಷಯಗಳಿಗಾಗಿ ದೇವರ ಶಕ್ತಿಯ ಮೇಲೆ ಆತುಕೊಳ್ಳುತ್ತೇವೆ. ಪಾಪ ಮತ್ತು ಮರಣದಿಂದ ನಮ್ಮ ವಿಮೋಚನೆ, ನಮ್ಮ ಭವಿಷ್ಯತ್ತಿನ ನಿರೀಕ್ಷೆ, ಮತ್ತು ಯೆಹೋವನಲ್ಲಿರುವ ನಮ್ಮ ಭರವಸೆ, ಇವೆಲ್ಲವೂ ಆತನು ಪ್ರಯೋಗಿಸುವ ಶಕ್ತಿಗೆ ಬೇರ್ಪಡಿಸಲಾಗದಂತಹ ರೀತಿಯಲ್ಲಿ ಜೋಡಿಸಲ್ಪಟ್ಟಿವೆ. (ದೇವರ ಶಕ್ತಿಯು ಆತನ ಸೃಷ್ಟಿಯಲ್ಲಿ ವ್ಯಕ್ತವಾಗುತ್ತದೆ
4. (ಎ) ರಾತ್ರಿ ಸಮಯದಲ್ಲಿ ಆಕಾಶವನ್ನು ನೋಡುವುದರಿಂದ ದಾವೀದನು ಹೇಗೆ ಪ್ರಭಾವಿಸಲ್ಪಟ್ಟನು? (ಬಿ) ದೈವಿಕ ಶಕ್ತಿಯ ಬಗ್ಗೆ ಆಕಾಶಕಾಯಗಳು ಏನನ್ನು ಹೊರಗೆಡಹುತ್ತವೆ?
4 ನಮ್ಮ ಸೃಷ್ಟಿಕರ್ತನ “ನಿತ್ಯಶಕ್ತಿಯೂ ದೇವತ್ವವೂ ಜಗದುತ್ಪತ್ತಿ ಮೊದಲುಗೊಂಡು ಆತನು ಮಾಡಿದ ಸೃಷ್ಟಿಗಳ ಮೂಲಕ ಬುದ್ಧಿಗೆ ಗೊತ್ತಾಗಿ ಕಾಣಬರುತ್ತವೆ” ಎಂಬುದಾಗಿ ಅಪೊಸ್ತಲ ಪೌಲನು ವಿವರಿಸುತ್ತಾನೆ. (ರೋಮಾಪುರ 1:20) ಶತಮಾನಗಳ ಹಿಂದೆ, ಕೀರ್ತನೆಗಾರನಾದ ದಾವೀದನು ಒಬ್ಬ ಕುರುಬನೋಪಾದಿ ರಾತ್ರಿಯ ಸಮಯದಲ್ಲಿ ಅನೇಕ ಬಾರಿ ಆಕಾಶದ ಕಡೆಗೆ ನೋಡಿ, ವಿಶ್ವದ ಭವ್ಯತೆಯನ್ನೂ ಅದರ ನಿರ್ಮಾಣಿಕನ ಸಾಮರ್ಥ್ಯವನ್ನೂ ನೋಡಿ ಬೆರಗಾಗಿದ್ದಿರಬಹುದು. ಅವನು ಬರೆದುದು: “ನಿನ್ನ ಕೈಕೆಲಸವಾಗಿರುವ ಆಕಾಶಮಂಡಲವನ್ನೂ ನೀನು ಉಂಟುಮಾಡಿದ ಚಂದ್ರನಕ್ಷತ್ರಗಳನ್ನೂ ನಾನು ನೋಡುವಾಗ—ಮನುಷ್ಯನು ಎಷ್ಟು ಮಾತ್ರದವನು, ಅವನನ್ನು ನೀನು ಯಾಕೆ ನೆನಸಬೇಕು? ಮಾನವನು ಎಷ್ಟರವನು, ಅವನಲ್ಲಿ ಯಾಕೆ ಲಕ್ಷ್ಯವಿಡಬೇಕು?” (ಕೀರ್ತನೆ 8:3, 4) ದಾವೀದನು ಆಕಾಶಕಾಯಗಳ ಬಗ್ಗೆ ಸೀಮಿತ ಜ್ಞಾನವುಳ್ಳವನಾಗಿದ್ದರೂ, ನಮ್ಮ ವಿಶಾಲವಾದ ವಿಶ್ವದ ಸೃಷ್ಟಿಕರ್ತನಿಗೆ ಹೋಲಿಸುವಾಗ ತಾನು ತೀರ ನಿಕೃಷ್ಟನು ಎಂಬ ಅರಿವು ಅವನಿಗಿತ್ತು. ಇಂದು, ಈ ವಿಶ್ವದ ಅಗಾಧತೆ ಹಾಗೂ ಅದನ್ನು ಪೋಷಿಸುವ ಶಕ್ತಿಯ ಬಗ್ಗೆ ಖಗೋಳಶಾಸ್ತ್ರಜ್ಞರು ಬಹಳಷ್ಟನ್ನು ತಿಳಿದುಕೊಂಡಿದ್ದಾರೆ. ಉದಾಹರಣೆಗೆ, ಸೂರ್ಯನು ಪ್ರತಿ ಸೆಕೆಂಡಿಗೆ 10,000 ಕೋಟಿ ಮೆಗಾಟನ್‌ಗಳಷ್ಟು ಟಿ.ಎನ್.ಟಿ ಪ್ರಬಲ ಸಿಡಿಮದ್ದಿನ ಸ್ಫೋಟಕ್ಕೆ ಸಮಾನವಾದ ಶಕ್ತಿಯನ್ನು ಹೊರಸೂಸುತ್ತಾನೆ ಎಂದು ಅವರು ಹೇಳುತ್ತಾರೆ. * ಆ ಶಕ್ತಿಯ ಒಂದು ಚಿಕ್ಕ ಅಂಶ ಮಾತ್ರ ಈ ಭೂಮಿಗೆ ಬಂದು ತಲಪುತ್ತದಾದರೂ, ಅದು ನಮ್ಮ ಗ್ರಹದ ಮೇಲಿರುವ ಸಕಲ ಜೀವವನ್ನು ಪೋಷಿಸುತ್ತದೆ. ಆದರೂ, ನಮ್ಮ ಸೂರ್ಯನು ತಾನೇ ಆಕಾಶದಲ್ಲಿರುವ ಅತ್ಯಂತ ಶಕ್ತಿಶಾಲಿ ನಕ್ಷತ್ರವಾಗಿರುವುದಿಲ್ಲ. ಸೂರ್ಯನು ಇಡೀ ದಿನ ಪ್ರಸರಿಸುವ ಶಕ್ತಿಯನ್ನು ಕೆಲವು ನಕ್ಷತ್ರಗಳು ಒಂದೇ ಸೆಕೆಂಡಿನಲ್ಲಿ ಪ್ರಸರಿಸುತ್ತವೆ. ಹಾಗಾದರೆ, ಇಂತಹ ಆಕಾಶಕಾಯಗಳನ್ನು ಸೃಷ್ಟಿಸಿದಾತನ ಕೈಯಲ್ಲಿ ಎಷ್ಟೊಂದು ಶಕ್ತಿಯಿರಬಹುದೆಂಬುದನ್ನು ಸ್ವಲ್ಪ ಊಹಿಸಿನೋಡಿ! ಎಲೀಹು ತಕ್ಕದ್ದಾಗಿಯೇ ಉದ್ಗರಿಸಿದ್ದು: “ಇಂಥ ಸರ್ವಶಕ್ತನನ್ನು ನಾವು ಕಂಡುಹಿಡಿಯಲಾರೆವು; ಆತನ ಪರಾಕ್ರಮವು ಬಹಳ.”—ಯೋಬ 37:23.
5. ಯೆಹೋವನ ಕಾರ್ಯಗಳಲ್ಲಿ ಆತನ ಶಕ್ತಿಯ ಯಾವ ಪುರಾವೆಯನ್ನು ನಾವು ಕಂಡುಕೊಳ್ಳುತ್ತೇವೆ?
5 ದಾವೀದನಂತೆ ನಾವು ‘ದೇವರ ಕೃತಿಗಳಿಗಾಗಿ ಹುಡುಕುವಲ್ಲಿ’ ಆತನ ಶಕ್ತಿಯನ್ನು ಎಲ್ಲೆಲ್ಲೂ, ಅಂದರೆ ಮಾರುತದಲ್ಲಿ, ಅಲೆಗಳಲ್ಲಿ, ಗುಡುಗುಮಿಂಚುಗಳಲ್ಲಿ, ಭೋರ್ಗರೆಯುವ ನದಿಗಳಲ್ಲಿ ಹಾಗೂ ಭವ್ಯವಾದ ಪರ್ವತಗಳಲ್ಲಿ ನೋಡಸಾಧ್ಯವಿದೆ. (ಕೀರ್ತನೆ 111:2, NW; ಯೋಬ 26:12-14) ಅಷ್ಟುಮಾತ್ರವಲ್ಲ, ಯೆಹೋವನು ಯೋಬನಿಗೆ ಜ್ಞಾಪಿಸಿದಂತೆ, ಪ್ರಾಣಿಗಳು ಸಹ ಆತನ ಬಲಕ್ಕೆ ಸಾಕ್ಷ್ಯವನ್ನು ನೀಡುತ್ತವೆ. ಇವುಗಳಲ್ಲಿ ನೀರಾನೆ ಅಥವಾ ನೀರ್ಗುದುರೆಯು ಇದೆ. ಯೆಹೋವನು ಯೋಬನಿಗೆ ಹೇಳಿದ್ದು: “ಅದರ ಬಲವು ಸೊಂಟದಲ್ಲಿಯೂ . . . ಅದರ ಎಲುಬುಗಳು ಕಬ್ಬಿಣದ ಹಾರೆಗಳಂತೆಯೂ” ಇದೆ. (ಯೋಬ 40:15-18) ಕಾಡುಹೋರಿಯ ಭಯಹುಟ್ಟಿಸುವಂತಹ ಶಕ್ತಿಯು ಸಹ ಬೈಬಲ್ ಸಮಯಗಳಲ್ಲಿ ಪ್ರಸಿದ್ಧವಾಗಿತ್ತು. “ಸಿಂಹಗಳ ಬಾಯಿಂದಲೂ ಕಾಡುಕೋಣಗಳ [“ಕಾಡುಹೋರಿಗಳ,” NW] ಕೊಂಬುಗಳಿಂದಲೂ” ತನ್ನನ್ನು ಉಳಿಸುವಂತೆ ದಾವೀದನು ಪ್ರಾರ್ಥಿಸಿದನು.—ಕೀರ್ತನೆ 22:21; ಯೋಬ 39:9-11.
6. ಶಾಸ್ತ್ರವಚನಗಳಲ್ಲಿ ಹೋರಿ ಯಾವುದನ್ನು ಚಿತ್ರಿಸುತ್ತದೆ, ಮತ್ತು ಏಕೆ? (ಪಾದಟಿಪ್ಪಣಿಯನ್ನು ನೋಡಿ.)
6 ಹೋರಿಗಿರುವ ಶಕ್ತಿಯ ಕಾರಣ, ಅದನ್ನು ಬೈಬಲಿನಲ್ಲಿ * ಅಪೊಸ್ತಲ ಯೋಹಾನನು ನೋಡಿದಂತಹ ಯೆಹೋವನ ಸಿಂಹಾಸನದ ದರ್ಶನವು ನಾಲ್ಕು ಜೀವಿಗಳನ್ನು ಚಿತ್ರಿಸುತ್ತದೆ, ಅದರಲ್ಲಿ ಒಂದರ ಮುಖವು ಹೋರಿಯಂತಿತ್ತು. (ಪ್ರಕಟನೆ 4:6, 7) ಈ ಕೆರೂಬಿಯರು ಚಿತ್ರಿಸಿದಂತಹ ಯೆಹೋವನ ನಾಲ್ಕು ಪ್ರಮುಖ ಗುಣಗಳಲ್ಲಿ ಶಕ್ತಿಯೂ ಒಂದಾಗಿತ್ತು ಎಂಬುದು ಸುವ್ಯಕ್ತ. ಇತರ ಗುಣಗಳು ಪ್ರೀತಿ, ವಿವೇಕ, ಮತ್ತು ನ್ಯಾಯವಾಗಿದೆ. ಶಕ್ತಿಯು ದೇವರ ವ್ಯಕ್ತಿತ್ವದ ಬಹಳ ಪ್ರಾಮುಖ್ಯ ಅಂಶವಾಗಿರುವ ಕಾರಣ, ಆತನ ಶಕ್ತಿಯ ಕುರಿತು ಹಾಗೂ ಅದನ್ನು ಆತನು ಹೇಗೆ ಬಳಸುತ್ತಾನೆ ಎಂಬುದರ ಕುರಿತು ಸ್ಪಷ್ಟವಾಗಿ ತಿಳಿದುಕೊಳ್ಳುವುದು, ನಾವು ಆತನಿಗೆ ಹತ್ತಿರವಾಗುವಂತೆ ಮಾಡುವುದು ಮಾತ್ರವಲ್ಲ, ನಮಗಿರುವ ಯಾವುದೇ ಶಕ್ತಿಯನ್ನು ಉಪಯೋಗಿಸುವುದರಲ್ಲಿ ಆತನ ಮಾದರಿಯನ್ನು ಅನುಕರಿಸುವಂತೆ ಸಹಾಯಮಾಡುವುದು.—ಎಫೆಸ 5:1.
ಯೆಹೋವನ ಶಕ್ತಿಯ ಸಂಕೇತವಾಗಿ ಉಪಯೋಗಿಸಲಾಗಿದೆ.“ಸೇನಾಧೀಶ್ವರನೂ ಇಸ್ರಾಯೇಲ್ಯರ ಶೂರನೂ ಆಗಿರುವ ಯೆಹೋವನು”
7. ಒಳ್ಳೆಯತನವು ದುಷ್ಟತನವನ್ನು ಗೆಲ್ಲುವುದು ಎಂಬುದರ ಕುರಿತು ನಾವು ಹೇಗೆ ಖಚಿತರಾಗಿರಬಲ್ಲೆವು?
7 ಶಾಸ್ತ್ರವಚನಗಳಲ್ಲಿ ಯೆಹೋವನನ್ನು “ಸರ್ವಶಕ್ತನಾದ ದೇವರು” ಎಂದು ಕರೆಯಲಾಗಿದೆ. ಇದು ಆತನ ಶಕ್ತಿಯನ್ನು ನಾವು ಎಂದಿಗೂ ಅಲ್ಪವೆಂದೆಣಿಸಬಾರದು ಅಥವಾ ಆತನ ಶತ್ರುಗಳ ಮೇಲೆ ಜಯಸಾಧಿಸುವ ಆತನ ಸಾಮರ್ಥ್ಯವನ್ನು ಸಂದೇಹಿಸಬಾರದು ಎಂಬುದನ್ನು ನಮಗೆ ಮರುಜ್ಞಾಪಿಸುವ ಒಂದು ಬಿರುದಾಗಿದೆ. (ಆದಿಕಾಂಡ 17:1; ವಿಮೋಚನಕಾಂಡ 6:3) ಸೈತಾನನ ದುಷ್ಟ ವಿಷಯಗಳ ವ್ಯವಸ್ಥೆಯು ಭದ್ರವಾಗಿ ತಳವೂರಿರುವಂತೆ ತೋರಬಹುದಾದರೂ, ಯೆಹೋವನ ದೃಷ್ಟಿಯಲ್ಲಿ “ಜನಾಂಗಗಳು ಕಪಿಲೆಯಿಂದುದುರುವ ತುಂತುರಿನಂತೆಯೂ ತ್ರಾಸಿನ ತಟ್ಟೆಯ ದೂಳಿನ ಹಾಗೂ ಇರುತ್ತವೆ.” (ಯೆಶಾಯ 40:15) ಅಂತಹ ದೈವಿಕ ಶಕ್ತಿಯ ಕಾರಣದಿಂದಲೇ, ಒಳ್ಳೆಯತನವು ದುಷ್ಟತನವನ್ನು ಖಂಡಿತವಾಗಿಯೂ ಗೆಲ್ಲುವುದು ಎಂಬುದರಲ್ಲಿ ಸಂದೇಹವೇ ಇಲ್ಲ. ದುಷ್ಟತನವು ವ್ಯಾಪಕವಾಗಿರುವ ಈ ಸಮಯದಲ್ಲಿ, “ಸೇನಾಧೀಶ್ವರನೂ ಇಸ್ರಾಯೇಲ್ಯರ ಶೂರನೂ ಆಗಿರುವ ಯೆಹೋವನು” ದುಷ್ಟತನವನ್ನು ಸದಾಕಾಲಕ್ಕೂ ತೆಗೆದುಹಾಕುವನು ಎಂಬುದನ್ನು ತಿಳಿದುಕೊಳ್ಳುವುದರಲ್ಲಿ ನಾವು ಸಾಂತ್ವನವನ್ನು ಪಡೆದುಕೊಳ್ಳಸಾಧ್ಯವಿದೆ.—ಯೆಶಾಯ 1:24; ಕೀರ್ತನೆ 37:9, 10.
8. ಯಾವ ಸ್ವರ್ಗೀಯ ಸೇನೆಗಳು ಯೆಹೋವನ ಅಧೀನದಲ್ಲಿವೆ, ಮತ್ತು ಅವುಗಳ ಶಕ್ತಿಯ ಯಾವ ಪುರಾವೆಯು ನಮ್ಮಲ್ಲಿದೆ?
8 ಬೈಬಲಿನಲ್ಲಿ ಸುಮಾರು 285 ಬಾರಿ ಕಂಡುಬರುವ ‘ಸೇನಾಧೀಶ್ವರನಾದ ಯೆಹೋವನು’ ಎಂಬ ಅಭಿವ್ಯಕ್ತಿಯು ತಾನೇ, ದೇವರ ಶಕ್ತಿಯ ಇನ್ನೊಂದು ಮರುಜ್ಞಾಪನವಾಗಿದೆ. ಇಲ್ಲಿ ಸೂಚಿಸಲ್ಪಟ್ಟಿರುವ ‘ಸೇನೆಯು’ ಯೆಹೋವನ ಅಧೀನದಲ್ಲಿರುವ ಸ್ವರ್ಗೀಯ ಆತ್ಮಿಕ ಜೀವಿಗಳ ಸಮೂಹವಾಗಿದೆ. (ಕೀರ್ತನೆ 103:20, 21; 148:2) ಇವರಲ್ಲಿ ಕೇವಲ ಒಬ್ಬ ದೇವದೂತನು ಒಂದೇ ರಾತ್ರಿಯಲ್ಲಿ, ಯೆರೂಸಲೇಮಿಗೆ ಬೆದರಿಕೆಯನ್ನೊಡ್ಡುತ್ತಿದ್ದ 1,85,000 ಅಶ್ಶೂರ್ಯ ಸೈನಿಕರನ್ನು ಸಂಹಾರಮಾಡಿದನು. (2 ಅರಸು 19:35) ಯೆಹೋವನ ಸ್ವರ್ಗೀಯ ಸೇನೆಗಳ ಶಕ್ತಿಯನ್ನು ನಾವು ಗ್ರಹಿಸುವುದಾದರೆ, ವಿರೋಧಿಗಳಿಗೆ ನಾವು ಸುಲಭವಾಗಿ ಹೆದರಲಾರೆವು. ಪ್ರವಾದಿಯಾದ ಎಲೀಷನು ತನ್ನನ್ನು ಹುಡುಕುತ್ತಿದ್ದ ಇಡೀ ಸೈನ್ಯದ ಮಧ್ಯೆ ಸಿಕ್ಕಿಬಿದ್ದಾಗಲೂ ಚಿಂತಿತನಾಗಿರಲಿಲ್ಲ, ಏಕೆಂದರೆ ತನ್ನ ಸೇವಕನಿಗೆ ಅಸದೃಶವಾಗಿ, ಅವನು ತನ್ನನ್ನು ಬೆಂಬಲಿಸುತ್ತಿದ್ದ ಸ್ವರ್ಗೀಯ ಸೈನ್ಯಗಳ ಮಹಾ ಸಮೂಹವನ್ನು ತನ್ನ ನಂಬಿಕೆಯ ಕಣ್ಣುಗಳಿಂದ ನೋಡಸಾಧ್ಯವಿತ್ತು.—2 ಅರಸು 6:15-17.
9. ಯೇಸುವಿನಂತೆ ದೈವಿಕ ರಕ್ಷಣೆಯಲ್ಲಿ ನಮಗೆ ಏಕೆ ಭರವಸೆಯಿರಬೇಕು?
9 ಕತ್ತಿ ಮತ್ತು ದೊಣ್ಣೆಗಳಿಂದ ಸಜ್ಜಿತವಾದ ಗುಂಪೊಂದನ್ನು ಯೇಸು ಗೆತ್ಸೇಮನೆ ತೋಟದಲ್ಲಿ ಎದುರುಗೊಂಡಾಗ ಅವನು ಸಹ ಇದೇ ರೀತಿಯಲ್ಲಿ ದೇವದೂತರ ಬೆಂಬಲದ ಅರಿವುಳ್ಳವನಾಗಿದ್ದನು. ಪೇತ್ರನಿಗೆ ಅವನ ಕತ್ತಿಯನ್ನು ಒರೆಯಲ್ಲಿ ಸೇರಿಸುವಂತೆ ಹೇಳಿದ ಬಳಿಕ, ಅವಶ್ಯಬಿದ್ದರೆ “ಹನ್ನೆರಡು ಗಣಗಳಿಗಿಂತ ಹೆಚ್ಚು ಮಂದಿ ದೇವದೂತರನ್ನು” ಕಳುಹಿಸಿಕೊಡುವಂತೆ ತನ್ನ ತಂದೆಗೆ ಭಿನ್ನಹಿಸಸಾಧ್ಯವೆಂದು ಯೇಸು ಅವನಿಗೆ ಹೇಳಿದನು. (ಮತ್ತಾಯ 26:47, 52, 53) ದೇವರ ಬಳಿಯಿರುವ ಸ್ವರ್ಗೀಯ ಸೇನೆಗಳಿಗಾಗಿ ನಮಗೂ ಇದೇ ರೀತಿಯ ಗಣ್ಯತೆಯಿರುವುದಾದರೆ, ನಾವು ಸಹ ದೈವಿಕ ಬೆಂಬಲದಲ್ಲಿ ಸಂಪೂರ್ಣ ಭರವಸೆಯನ್ನಿಡುವೆವು. ಅಪೊಸ್ತಲ ಪೌಲನು ಬರೆದುದು: “ಹಾಗಾದರೆ ಈ ವಿಷಯಗಳಲ್ಲಿ ನಾವು ಏನು ಹೇಳೋಣ? ದೇವರು ನಮ್ಮ ಕಡೆ ಇದ್ದರೆ ನಮ್ಮನ್ನು ಎದುರಿಸುವವರು ಯಾರು?”—ರೋಮಾಪುರ 8:31.
10. ಯಾರ ಪರವಾಗಿ ಯೆಹೋವನು ತನ್ನ ಶಕ್ತಿಯನ್ನು ಉಪಯೋಗಿಸುತ್ತಾನೆ?
10 ಹಾಗಾದರೆ, ಯೆಹೋವನ ರಕ್ಷಣೆಯಲ್ಲಿ ನಂಬಿಕೆಯನ್ನಿಡುವುದಕ್ಕೆ ನಮಗೆ ಅನೇಕ ಕಾರಣಗಳು ಇವೆ. ಆತನು ತನ್ನ ಶಕ್ತಿಯನ್ನು ಯಾವಾಗಲೂ ಒಳ್ಳೆಯದಕ್ಕಾಗಿಯೇ ಉಪಯೋಗಿಸುತ್ತಾನೆ ಮಾತ್ರವಲ್ಲ, ತನ್ನ ಇತರ ಗುಣಗಳಾದ ನ್ಯಾಯ, ವಿವೇಕ ಹಾಗೂ ಪ್ರೀತಿಯೊಂದಿಗೆ ಹೊಂದಿಕೆಯಲ್ಲಿಯೂ ಇದನ್ನು ಪ್ರಯೋಗಿಸುತ್ತಾನೆ. (ಯೋಬ 37:23; ಯೆರೆಮೀಯ 10:12) ಶಕ್ತಿಶಾಲಿ ವ್ಯಕ್ತಿಗಳು ತಮ್ಮ ಸ್ವಾರ್ಥ ಲಾಭಕ್ಕಾಗಿ ಬಡವರನ್ನು ಮತ್ತು ನಮ್ರಭಾವದ ವ್ಯಕ್ತಿಗಳನ್ನು ಪದೇ ಪದೇ ಕಾಲಿನ ಕೆಳಗೆ ಹಾಕಿ ತುಳಿದುಹಾಕುವಾಗ, ಯೆಹೋವನಾದರೋ ‘ದೀನರನ್ನು ಧೂಳಿಯಿಂದ ಎಬ್ಬಿಸುತ್ತಾನೆ’ ಮತ್ತು ಅವರನ್ನು ‘ರಕ್ಷಿಸಲು ಸಮರ್ಥನಾಗಿದ್ದಾನೆ.’ (ಕೀರ್ತನೆ 113:5-7; ಯೆಶಾಯ 63:1) ವಿನೀತಳೂ ನಮ್ರಳೂ ಆಗಿದ್ದ ಯೇಸುವಿನ ತಾಯಿಯಾದ ಮರಿಯಳಿಗೆ ತಿಳಿದುಬಂದಂತೆ, “ಶಕ್ತನಾಗಿರುವಾತನು” ಅಹಂಕಾರಿಗಳನ್ನು ತಗ್ಗಿಸಿ, ದೀನರನ್ನು ಉನ್ನತಕ್ಕೇರಿಸುತ್ತಾ, ತನಗೆ ಭಯಪಡುವವರ ಪರವಾಗಿ ತನ್ನ ಶಕ್ತಿಯನ್ನು ನಿಸ್ವಾರ್ಥವಾಗಿ ಬಳಸುತ್ತಾನೆ.—ಲೂಕ 1:46-53.
ಯೆಹೋವನು ತನ್ನ ಸೇವಕರಿಗೆ ತನ್ನ ಶಕ್ತಿಯನ್ನು ತೋರ್ಪಡಿಸುತ್ತಾನೆ
11. ಸಾ.ಶ.ಪೂ. 1513ರಲ್ಲಿ ಇಸ್ರಾಯೇಲ್ಯರು ದೇವರ ಶಕ್ತಿಯ ಯಾವ ಸಾಕ್ಷ್ಯವನ್ನು ಕಣ್ಣಾರೆ ನೋಡಿದರು?
11 ಅನೇಕ ಸಂದರ್ಭಗಳಲ್ಲಿ ಯೆಹೋವನು ತನ್ನ ಸೇವಕರಿಗೆ ತನ್ನ ಬಲವನ್ನು ತೋರ್ಪಡಿಸಿದ್ದಾನೆ. ಅವುಗಳಲ್ಲಿ ಒಂದು, ಸಾ.ಶ.ಪೂ. 1513ರಲ್ಲಿ ಸೀನಾಯಿ ಬೆಟ್ಟದ ಮೇಲಾಗಿತ್ತು. ಅದೇ ವರ್ಷದಲ್ಲಿ ಇಸ್ರಾಯೇಲ್ಯರು ದೇವರ ಶಕ್ತಿಯ ಹೃದಯಂಗಮ ಪುರಾವೆಯನ್ನು ಈಗಾಗಲೇ ನೋಡಿದ್ದರು. ಹತ್ತು ವಿಧ್ವಂಸಕ ಬಾಧೆಗಳು ಯೆಹೋವನ ಮಹಾ ಬಲವನ್ನು ಹಾಗೂ ಐಗುಪ್ತ ದೇವರ ಶಕ್ತಿಹೀನತೆಯನ್ನು ಹೊರಗೆಡಹಿದ್ದವು. ಅದಾದ ನಂತರ, ಕೆಂಪು ಸಮುದ್ರವನ್ನು ಅದ್ಭುತಕರವಾದ ರೀತಿಯಲ್ಲಿ ದಾಟಿದ್ದು ಹಾಗೂ ಫರೋಹನ ಸೈನ್ಯದ ನಾಶನವು ದೈವಿಕ ಶಕ್ತಿಯ ಬಗ್ಗೆ ಇನ್ನೂ ಹೆಚ್ಚಿನ ಪುರಾವೆಯನ್ನು ನೀಡಿದವು. ಮೂರು ತಿಂಗಳುಗಳ ಬಳಿಕ, ಸೀನಾಯಿ ಬೆಟ್ಟದ ತಪ್ಪಲಲ್ಲಿ ಯೆಹೋವನು ಇಸ್ರಾಯೇಲ್ಯರಿಗೆ ‘ಎಲ್ಲಾ ಜನಾಂಗಗಳಲ್ಲಿ ಸ್ವಕೀಯಜನರಾಗುವಂತೆ’ ಕರೆಕೊಟ್ಟನು. ಅವರು ಆತನಿಗೆ ಭಾಷೆಕೊಟ್ಟದ್ದು: “ಯೆಹೋವನು ಹೇಳಿದಂತೆಯೇ ಮಾಡುವೆವು.” (ವಿಮೋಚನಕಾಂಡ 19:5, 8) ಅನಂತರ, ಯೆಹೋವನು ತೀರ ಸ್ಪಷ್ಟವಾಗಿ ತನ್ನ ಶಕ್ತಿಯನ್ನು ತೋರ್ಪಡಿಸಿದನು. ಗುಡುಗುಮಿಂಚು ಹಾಗೂ ತುತೂರಿಯ ಮಹಾಶಬ್ದದ ಮಧ್ಯೆ, ಸೀನಾಯಿ ಬೆಟ್ಟವು ಹೊಗೆಯನ್ನು ಉಗುಳಿ ಕಂಪಿಸಿತು. ದೂರದಲ್ಲಿ ನಿಂತಿದ್ದ ಜನರೆಲ್ಲರೂ ಭಯಭೀತರಾದರು. ಆದರೆ, ಮಹಾಶಕ್ತಿಶಾಲಿಯೂ ಒಬ್ಬನೇ ಸತ್ಯ ದೇವರೂ ಆಗಿರುವ ಯೆಹೋವನಿಗೆ ವಿಧೇಯರಾಗುವಂತೆ ಅವರನ್ನು ಪ್ರಚೋದಿಸುವಂತಹ ದೈವಿಕ ಭಯವನ್ನು ಈ ಅನುಭವವು ಅವರಿಗೆ ಕಲಿಸಬೇಕೆಂದು ಮೋಶೆಯು ಅವರಿಗೆ ಹೇಳಿದನು.—ವಿಮೋಚನಕಾಂಡ 19:16-19; 20:18-20.
12, 13. ಯಾವ ಪರಿಸ್ಥಿತಿಗಳು ಎಲೀಯನು ತನ್ನ ನೇಮಕವನ್ನು ಬಿಟ್ಟುಹೋಗುವಂತೆ ಮಾಡಿದವು, ಆದರೆ ಯೆಹೋವನು ಅವನನ್ನು ಹೇಗೆ ಬಲಪಡಿಸಿದನು?
12 ಹಲವಾರು ಶತಮಾನಗಳ ಅನಂತರ, ಎಲೀಯನ ಸಮಯದಲ್ಲಿ, ಸೀನಾಯಿ ಬೆಟ್ಟದಲ್ಲಿ ದೈವಿಕ ಶಕ್ತಿಯ ಮತ್ತೊಂದು ಪ್ರದರ್ಶನವಾಯಿತು. ದೇವರ ಶಕ್ತಿಯ ಕಾರ್ಯವನ್ನು ಆ ಪ್ರವಾದಿಯು ಈಗಾಗಲೇ ನೋಡಿದ್ದನು. ಇಸ್ರಾಯೇಲ್ ಜನಾಂಗದ ಧರ್ಮಭ್ರಷ್ಟತೆಯ ಕಾರಣ, ದೇವರು ಸುಮಾರು ಮೂರುವರೆ ವರ್ಷಗಳ ತನಕ ‘ಆಕಾಶವನ್ನು ಮುಚ್ಚಿಬಿಟ್ಟನು.’ (2 ಪೂರ್ವಕಾಲವೃತ್ತಾಂತ 7:13) ಅದರಿಂದಾಗಿ ಪರಿಣಮಿಸಿದ ಬರಗಾಲದ ಸಮಯದಲ್ಲಿ, ಕೆರೀತ್‌ಹಳ್ಳದಲ್ಲಿ ಎಲೀಯನಿಗೆ ಕಾಗೆಗಳು ಆಹಾರವನ್ನು ತಂದುಕೊಟ್ಟವು ಮತ್ತು ಅನಂತರ ಅವನಿಗೆ ಆಹಾರವನ್ನು ಒದಗಿಸಲಿಕ್ಕಾಗಿ, ವಿಧವೆಯೊಬ್ಬಳ ಬಳಿಯಿದ್ದ ಒಂದು ಹಿಡಿ ಹಿಟ್ಟು ಮತ್ತು ಸ್ವಲ್ಪ ಎಣ್ಣೆ ಅದ್ಭುತಕರವಾದ ರೀತಿಯಲ್ಲಿ ಹೆಚ್ಚಿಸಲ್ಪಟ್ಟಿತು. ಈ ವಿಧವೆಯ ಮಗನನ್ನು ಪುನರುತ್ಥಾನಗೊಳಿಸುವುದಕ್ಕೂ ಯೆಹೋವನು ಎಲೀಯನಿಗೆ ಶಕ್ತಿಯನ್ನು ದಯಪಾಲಿಸಿದನು. ಅಂತಿಮವಾಗಿ, ಕರ್ಮೆಲ್ ಬೆಟ್ಟದ ಮೇಲೆ ದೇವತ್ವದ ಕುರಿತಾದ ನಾಟಕೀಯ ಪರೀಕ್ಷೆಯ ಸಮಯದಲ್ಲಿ, ಆಕಾಶದಿಂದ ಬೆಂಕಿಯು ಬಂದು, ಎಲೀಯನ ಯಜ್ಞವನ್ನು ದಹಿಸಿಬಿಟ್ಟಿತು. (1 ಅರಸು 17:4-24; 18:36-40) ಆದರೂ ಅದಾದ ಸ್ವಲ್ಪ ಸಮಯದಲ್ಲೇ, ಈಜೆಬೆಲಳು ಅವನಿಗೆ ಜೀವಬೆದರಿಕೆಯನ್ನೊಡ್ಡಿದಾಗ ಅವನು ಭಯಪಟ್ಟು ನಿರುತ್ಸಾಹಗೊಂಡನು. (1 ಅರಸು 19:1-4) ಒಬ್ಬ ಪ್ರವಾದಿಯೋಪಾದಿ ತನ್ನ ಕೆಲಸವು ಇಲ್ಲಿಗೆ ಮುಗಿಯಿತು ಎಂದು ನೆನಸಿ ಅವನು ಆ ದೇಶದಿಂದ ಓಡಿಹೋದನು. ಅವನಿಗೆ ಪುನರಾಶ್ವಾಸನೆಯನ್ನು ಮತ್ತು ಬಲವನ್ನು ನೀಡಲು, ಯೆಹೋವನು ದಯಾಭರಿತನಾಗಿ ತನ್ನ ದೈವಿಕ ಶಕ್ತಿಯನ್ನು ಅವನಿಗೆ ವೈಯಕ್ತಿಕವಾಗಿ ತೋರ್ಪಡಿಸಿದನು.
13 ಎಲೀಯನು ಗುಹೆಯೊಂದರಲ್ಲಿ ಅಡಗಿಕೊಂಡಾಗ, ಯೆಹೋವನು ನಿಯಂತ್ರಿಸುವ ಶಕ್ತಿಗಳಲ್ಲಿ ಮೂರನ್ನು, ಅಂದರೆ ಒಂದು ದೊಡ್ಡ ಬಿರುಗಾಳಿ, ಭೂಕಂಪ ಹಾಗೂ ಕೊನೆಗೆ ಬೆಂಕಿಯ ಭಯಪ್ರೇರಕವಾದ ಪ್ರದರ್ಶನವನ್ನು ಅವನು ನೋಡಿದನು. ಆದರೂ, ಯೆಹೋವನು ಎಲೀಯನೊಂದಿಗೆ ‘ಮಂದಮಾರುತಶಬ್ದದಿಂದ’ ಮಾತಾಡಿದನು. ಅವನಿಗೆ ಮಾಡಲು ಇನ್ನೂ ಹೆಚ್ಚಿನ ಕೆಲಸವನ್ನು ಕೊಟ್ಟು, ಆ ದೇಶದಲ್ಲಿ ಇನ್ನೂ 7,000 ನಂಬಿಗಸ್ತ ಆರಾಧಕರು ತನಗಿದ್ದಾರೆಂದು ಯೆಹೋವನು ಅವನಿಗೆ ತಿಳಿಸಿದನು. (1 ಅರಸು 19:9-18) ಶುಶ್ರೂಷೆಯಲ್ಲಿ ನಮಗೇನಾದರೂ ಒಳ್ಳೆಯ ಫಲಿತಾಂಶಗಳು ಸಿಗದೇ ಹೋಗುವಲ್ಲಿ, ಆಗ ನಾವು ಎಲೀಯನಂತೆ ನಿರುತ್ಸಾಹಗೊಳ್ಳಬಹುದು. ಅಂತಹ ಸಮಯದಲ್ಲಿ “ಸಾಮಾನ್ಯವಾದುದಕ್ಕಿಂತಲೂ ಅತೀತವಾದ ಬಲ”ಕ್ಕಾಗಿ ನಾವು ಯೆಹೋವನಿಗೆ ಭಿನ್ನಹವನ್ನು ಮಾಡಸಾಧ್ಯವಿದೆ. ಇದು ಪಟ್ಟುಹಿಡಿದು ಸುವಾರ್ತೆಯನ್ನು ಸಾರುತ್ತಾ ಮುಂದುವರಿಯಲು ನಮಗೆ ಬೇಕಾದ ಶಕ್ತಿಯನ್ನು ನೀಡುವ ಒಂದು ಬಲವಾಗಿದೆ.—2 ಕೊರಿಂಥ 4:7, NW.
ಯೆಹೋವನ ವಾಗ್ದಾನಗಳ ನೆರವೇರಿಕೆಯ ಕುರಿತು ಆತನ ಶಕ್ತಿಯು ಖಾತ್ರಿನೀಡುತ್ತದೆ
14. ಯೆಹೋವನ ವೈಯಕ್ತಿಕ ಹೆಸರು ಯಾವುದನ್ನು ಹೊರಗೆಡಹುತ್ತದೆ ಮತ್ತು ಆತನ ಶಕ್ತಿಯು ಆತನ ಹೆಸರಿನೊಂದಿಗೆ ಹೇಗೆ ಸಂಬಂಧಿಸಿದೆ?
14 ಯೆಹೋವನ ಶಕ್ತಿಯು, ಆತನ ಹೆಸರು ಹಾಗೂ ಚಿತ್ತದ ನೆರವೇರಿಕೆಯೊಂದಿಗೂ ನಿಕಟವಾಗಿ ಸಂಬಂಧಿಸಿದೆ. “ಆತನು ಆಗಿಸುತ್ತಾನೆ” ಎಂಬ ಅರ್ಥವುಳ್ಳ ಯೆಹೋವ ಎಂಬ ಅಪೂರ್ವ ಹೆಸರು ತಾನೇ ತನ್ನ ವಾಗ್ದಾನಗಳನ್ನು ನೆರವೇರಿಸುವವನಾಗಲು ಆತನು ಏನಾಗಿ ಪರಿಣಮಿಸುವ ಅಗತ್ಯವಿದೆಯೊ ಅದಾಗುತ್ತಾನೆ ಎಂಬುದನ್ನು ಪ್ರಕಟಪಡಿಸುತ್ತದೆ. ದೇವರ ಉದ್ದೇಶಗಳು ನೆರವೇರಲು ಸಾಧ್ಯವಿಲ್ಲವೆಂದು ಸಂದೇಹವಾದಿಗಳು ನೆನಸಬಹುದಾದರೂ, ಅವುಗಳ ನೆರವೇರಿಕೆಯನ್ನು ಯಾರೂ ತಡೆಗಟ್ಟಲು ಸಾಧ್ಯವಿಲ್ಲ. ಒಮ್ಮೆ ಯೇಸು ತನ್ನ ಅಪೊಸ್ತಲರಿಗೆ ಹೇಳಿದಂತೆ “ದೇವರಿಗೆ ಎಲ್ಲವು ಸಾಧ್ಯ.”—ಮತ್ತಾಯ 19:26.
15. ಯೆಹೋವನಿಗೆ ಯಾವುದೂ ಅಸಾಧ್ಯವಾದುದಲ್ಲ ಎಂಬುದರ ಕುರಿತು ಅಬ್ರಹಾಮ ಹಾಗೂ ಸಾರಳು ಹೇಗೆ ಮರುಜ್ಞಾಪಿಸಲ್ಪಟ್ಟರು?
15 ಉದಾಹರಣೆಗೆ, ಒಮ್ಮೆ ಯೆಹೋವನು ಅಬ್ರಹಾಮ ಮತ್ತು ಸಾರಳಿಗೆ ಅವರ ಸಂತಾನವನ್ನು ಒಂದು ದೊಡ್ಡ ಜನಾಂಗವಾಗಿ ಮಾಡುವೆನೆಂದು ವಾಗ್ದಾನಿಸಿದನು. ಆದರೆ ಅವರು ಅನೇಕ ವರ್ಷಗಳ ವರೆಗೆ ಮಕ್ಕಳಿಲ್ಲದೆ ಇದ್ದರು. ಈ ವಾಗ್ದಾನವು ಸ್ವಲ್ಪ ಸಮಯದೊಳಗೆ ನೆರವೇರಲಿದೆ ಎಂದು ಯೆಹೋವನು ಹೇಳಿದಾಗ, ಅವರಿಬ್ಬರು ತೀರ ವೃದ್ಧರಾಗಿದ್ದರು ಮತ್ತು ಇದನ್ನು ಕೇಳಿ ಸಾರಳು ನಕ್ಕಳು. ಅದಕ್ಕೆ ಪ್ರತ್ಯುತ್ತರವಾಗಿ, “ಯೆಹೋವನಿಗೆ ಅಸಾಧ್ಯವಾದದ್ದುಂಟೋ?” ಎಂದು ದೇವದೂತನು ಹೇಳಿದನು. (ಆದಿಕಾಂಡ 12:1-3; 17:4-8; 18:10-14) ನಾಲ್ಕು ಶತಮಾನಗಳ ಅನಂತರ, ಈಗ ಒಂದು ದೊಡ್ಡ ಜನಾಂಗವಾಗಿ ಪರಿಣಮಿಸಿದ್ದ ಅಬ್ರಾಹಮನ ಸಂತತಿಯನ್ನು ಮೋಶೆಯು ಮೋವಾಬ್ಯರ ಮೈದಾನದಲ್ಲಿ, ಅಂತಿಮವಾಗಿ ಒಟ್ಟುಗೂಡಿಸಿದಾಗ, ದೇವರು ತನ್ನ ವಾಗ್ದಾನವನ್ನು ನೆರವೇರಿಸಿದ್ದನು ಎಂಬುದನ್ನು ಅವರಿಗೆ ಜ್ಞಾಪಕ ಹುಟ್ಟಿಸಿದನು. ಮೋಶೆಯು ಅವರಿಗೆ ಹೇಳಿದ್ದು: “ಆತನು ನಿಮ್ಮ ಪಿತೃಗಳನ್ನು ಪ್ರೀತಿಸಿ ಅವರ ತರುವಾಯ ಅವರ ಸಂತತಿಯವರಾದ ನಿಮ್ಮನ್ನೂ ಆದುಕೊಂಡು ಈಗ ನಮ್ಮ ಅನುಭವಕ್ಕೆ ಬಂದ ಪ್ರಕಾರ ನಿಮಗಿಂತ ಮಹಾಬಲಿಷ್ಠವಾದ ಜನಾಂಗಗಳನ್ನು ಹೊರಡಿಸಲೂ ಅವರ ದೇಶದಲ್ಲಿ ನಿಮ್ಮನ್ನು ಸೇರಿಸಿ ಆ ದೇಶವನ್ನು ನಿಮಗೇ ಸ್ವದೇಶವಾಗಿ ಕೊಡಲೂಬೇಕೆಂದು ಸಂಕಲ್ಪಿಸಿ ತಾನೇ ನಿಮ್ಮೊಂದಿಗಿದ್ದು ತನ್ನ ಅಪಾರಸಾಮರ್ಥ್ಯದಿಂದ ನಿಮ್ಮನ್ನು ಐಗುಪ್ತದೇಶದೊಳಗಿಂದ ಬರಮಾಡಿದನಲ್ಲಾ.”—ಧರ್ಮೋಪದೇಶಕಾಂಡ 4:37, 38.
16. ಸದ್ದುಕಾಯರು ಮೃತರ ಪುನರುತ್ಥಾನವನ್ನು ನಿರಾಕರಿಸುವ ತಪ್ಪನ್ನು ಏಕೆ ಮಾಡಿದರು?
16 ಶತಮಾನಗಳ ನಂತರ, ಪುನರುತ್ಥಾನದಲ್ಲಿ ನಂಬದಿದ್ದ ಸದ್ದುಕಾಯರನ್ನು ಯೇಸು ಖಂಡಿಸಿದನು. ದೇವರು ಸತ್ತವರನ್ನು ಪುನಃ ಜೀವಂತಗೊಳಿಸುವನು ಎಂಬ ಆತನ ವಾಗ್ದಾನವನ್ನು ಅವರೇಕೆ ನಂಬಲು ನಿರಾಕರಿಸಿದರು? ಯೇಸು ಅವರಿಗೆ ಹೇಳಿದ್ದು: “ನೀವು ಶಾಸ್ತ್ರವನ್ನಾದರೂ ದೇವರ ಶಕ್ತಿಯನ್ನಾದರೂ ತಿಳಿಯದೆ” ಇದ್ದೀರಿ. (ಮತ್ತಾಯ 22:29) ‘ಸಮಾಧಿಗಳಲ್ಲಿರುವವರೆಲ್ಲರು ಮನುಷ್ಯ ಕುಮಾರನ ಧ್ವನಿಯನ್ನು ಕೇಳಿ ಎದ್ದು ಹೊರಗೆ ಬರುವರು’ ಎಂದು ಶಾಸ್ತ್ರವಚನಗಳು ನಮಗೆ ಆಶ್ವಾಸನೆಯನ್ನು ನೀಡುತ್ತವೆ. (ಯೋಹಾನ 5:27-29) ಪುನರುತ್ಥಾನದ ಕುರಿತು ಬೈಬಲು ಏನು ಹೇಳುತ್ತದೆ ಎಂಬುದು ನಮಗೆ ತಿಳಿದಿರುವಲ್ಲಿ, ದೇವರ ಶಕ್ತಿಯಲ್ಲಿ ನಮಗಿರುವ ಭರವಸೆಯು ಮೃತರು ಎಬ್ಬಿಸಲ್ಪಡುವರು ಎಂಬುದನ್ನು ನಮಗೆ ಮನಗಾಣಿಸುವುದು. ದೇವರು “ಮರಣವನ್ನು ಶಾಶ್ವತವಾಗಿ ನಿರ್ನಾಮಮಾಡುವನು, . . . ಯೆಹೋವನೇ ಇದನ್ನು ನುಡಿದಿದ್ದಾನೆ.”—ಯೆಶಾಯ 25:8.
17. ಭವಿಷ್ಯತ್ತಿನ ಯಾವ ದಿನದಲ್ಲಿ ವಿಶೇಷವಾದೊಂದು ರೀತಿಯಲ್ಲಿ ಯೆಹೋವನಲ್ಲಿ ಭರವಸೆಯನ್ನಿಡುವುದು ಪ್ರಾಮುಖ್ಯವಾಗಿರುವುದು?
17 ಹತ್ತಿರದ ಭವಿಷ್ಯತ್ತಿನಲ್ಲಿ, ಪ್ರತಿಯೊಬ್ಬರು ವಿಶೇಷವಾದೊಂದು ರೀತಿಯಲ್ಲಿ ದೇವರ ರಕ್ಷಣೆಯ ಶಕ್ತಿಯಲ್ಲಿ ಭರವಸೆಯನ್ನಿಡಬೇಕಾದಂತಹ ಸಮಯವು ಬರುವುದು. ರಕ್ಷಣೆಯಿಲ್ಲದಿರುವಂತೆ ತೋರುವ ದೇವಜನರ ಮೇಲೆ ಪಿಶಾಚನಾದ ಸೈತಾನನು ಆಕ್ರಮಣಮಾಡಲು ಪ್ರಾರಂಭಿಸುವನು. (ಯೆಹೆಜ್ಕೇಲ 38:14-16) ಆಗ ನಮ್ಮ ಪರವಾಗಿ ಯೆಹೋವನು ತನ್ನ ಶಕ್ತಿಯನ್ನು ತೋರ್ಪಡಿಸುವನು ಮತ್ತು ಆಗ ಪ್ರತಿಯೊಬ್ಬರೂ ಈತನೇ ಯೆಹೋವನಾಗಿದ್ದಾನೆ ಎಂಬುದನ್ನು ತಿಳಿದುಕೊಳ್ಳಲೇಬೇಕು. (ಯೆಹೆಜ್ಕೇಲ 38:21-23) ಆ ನಿರ್ಣಾಯಕ ಸಮಯದಲ್ಲಿ ತತ್ತರಿಸದೇ ಇರಲಿಕ್ಕಾಗಿ, ಸರ್ವಶಕ್ತನಾದ ದೇವರಲ್ಲಿ ನಂಬಿಕೆ ಹಾಗೂ ಭರವಸೆಯನ್ನು ಕಟ್ಟಲು ಇದೇ ಸುಸಮಯವಾಗಿದೆ.
18. (ಎ) ಯೆಹೋವನ ಶಕ್ತಿಯ ಕುರಿತು ಮನನ ಮಾಡುವುದರಿಂದ ಯಾವ ಪ್ರಯೋಜನಗಳನ್ನು ನಾವು ಪಡೆದುಕೊಳ್ಳುತ್ತೇವೆ? (ಬಿ) ಮುಂದಿನ ಲೇಖನದಲ್ಲಿ ಯಾವ ಪ್ರಶ್ನೆಯನ್ನು ಚರ್ಚಿಸಲಾಗುವುದು?
18 ಯೆಹೋವನ ಶಕ್ತಿಯ ಕುರಿತು ಮನನಮಾಡುವುದಕ್ಕಾಗಿ ನಮಗೆ ಅನೇಕ ಕಾರಣಗಳಿವೆ ಎಂಬುದರಲ್ಲಿ ಎಳ್ಳಷ್ಟೂ ಸಂದೇಹವಿಲ್ಲ. ನಾವು ಆತನ ಕಾರ್ಯಗಳ ಕುರಿತು ಚಿಂತನೆಮಾಡುವಾಗ, ನಮ್ಮ ಮಹಾನ್ ಸೃಷ್ಟಿಕರ್ತನನ್ನು ಸ್ತುತಿಸಲು ಹಾಗೂ ವಿವೇಕವೂ ಪ್ರೀತಿಪರವೂ ಆದ ವಿಧದಲ್ಲಿ ತನ್ನ ಶಕ್ತಿಯನ್ನು ಬಳಸುತ್ತಿರುವುದಕ್ಕಾಗಿ ಆತನಿಗೆ ಧನ್ಯವಾದವನ್ನು ಅರ್ಪಿಸಲು ನಮ್ರಭಾವದ ಹೃದಯದಿಂದ ನಾವು ಪ್ರಚೋದಿಸಲ್ಪಡುತ್ತೇವೆ. ನಾವು ಸೇನಾಧೀಶ್ವರನಾದ ಯೆಹೋವನಲ್ಲಿ ಭರವಸೆಯನ್ನಿಡುವುದಾದರೆ ನಾವೆಂದೂ ಭಯಪಡಲಾರೆವು. ಆತನ ವಾಗ್ದಾನಗಳ ಮೇಲೆ ನಮಗಿರುವ ನಂಬಿಕೆಯು ಅಚಲವಾಗಿರುವುದು. ನಾವು ದೇವರ ಸ್ವರೂಪದಲ್ಲಿ ಸೃಷ್ಟಿಸಲ್ಪಟ್ಟಿದ್ದೇವೆ ಎಂಬುದು ಸಹ ಜ್ಞಾಪಕವಿರಲಿ. ಆದಕಾರಣ, ನಮ್ಮ ಬಳಿ ಸಹ ಶಕ್ತಿಯಿದೆ, ಆದರೆ ಸೀಮಿತ ಮಟ್ಟದಲ್ಲಿ ಮಾತ್ರ. ನಮ್ಮ ಶಕ್ತಿಯನ್ನು ಬಳಸುವ ವಿಧದಲ್ಲಿ ನಾವು ಹೇಗೆ ನಮ್ಮ ಸೃಷ್ಟಿಕರ್ತನನ್ನು ಅನುಕರಿಸಬಲ್ಲೆವು? ಇದನ್ನು ಮುಂದಿನ ಲೇಖನದಲ್ಲಿ ಚರ್ಚಿಸಲಾಗುವುದು.
[ಪಾದಟಿಪ್ಪಣಿಗಳು]
^ ಪ್ಯಾರ. 1 ಎಣ್ಣೆ ಮತ್ತು ಕಲ್ಲಿದ್ದಲುಗಳಂತಹ ಉರುವಲುಗಳು ತಮ್ಮ ಶಕ್ತಿಯನ್ನು ಸೂರ್ಯನಿಂದ ಪಡೆದುಕೊಳ್ಳುತ್ತವೆ ಎಂಬುದು ವ್ಯಾಪಕವಾದ ಅಭಿಪ್ರಾಯ. ಇವುಗಳು ವಿದ್ಯುತ್ ಕೇಂದ್ರಗಳ ಶಕ್ತಿಯ ಪ್ರಮುಖ ಮೂಲಗಳಾಗಿವೆ.
^ ಪ್ಯಾರ. 4 ಇದಕ್ಕೆ ವ್ಯತಿರಿಕ್ತವಾಗಿ, ಇಂದಿನ ವರೆಗೂ ಪರೀಕ್ಷೆಮಾಡಲ್ಪಟ್ಟಿರುವ ಅತ್ಯಂತ ಶಕ್ತಿಶಾಲಿ ನ್ಯೂಕ್ಲಿಯರ್ ಬಾಂಬು 57 ಮೆಗಾಟನ್‌ಗಳಷ್ಟು ಟಿ.ಎನ್.ಟಿ ಸಿಡಿಮದ್ದಿಗೆ ಸಮಾನವಾದ ಸ್ಫೋಟಕ ಶಕ್ತಿಯನ್ನು ಹೊಂದಿತ್ತು.
^ ಪ್ಯಾರ. 6 ಬೈಬಲಿನಲ್ಲಿ ಉಲ್ಲೇಖಿಸಲ್ಪಟ್ಟಿರುವ ಕಾಡುಹೋರಿಯು, ಕಾಡೆತ್ತುಗಳು (ಲ್ಯಾಟಿನ್ ಭಾಷೆಯಲ್ಲಿ ಯೂರಸ್) ಆಗಿದ್ದಿರಸಾಧ್ಯವಿದೆ. ಎರಡು ಸಾವಿರ ವರ್ಷಗಳ ಹಿಂದೆ, ಈ ರೀತಿಯ ಪ್ರಾಣಿಗಳು ಗಾಲ್ ದೇಶದಲ್ಲಿ (ಈಗ ಫ್ರಾನ್ಸ್) ಕಂಡುಬಂದವು ಮತ್ತು ಅವುಗಳ ಕುರಿತು ಜೂಲಿಯಸ್ ಸೀಸರ್ ಈ ರೀತಿಯಲ್ಲಿ ಬರೆದನು: “ಈ ಯೂರಿ ಗಾತ್ರದಲ್ಲಿ ಆನೆಗಿಂತ ಸ್ವಲ್ಪ ಚಿಕ್ಕದಾಗಿರುವುದಾದರೂ, ಅವುಗಳು ಸ್ವಭಾವದಲ್ಲಿ, ಬಣ್ಣದಲ್ಲಿ ಹಾಗೂ ದೇಹದ ರಚನೆಯಲ್ಲಿ ಹೋರಿಗಳಂತಿವೆ. ಅವುಗಳ ಶಕ್ತಿ ಹಾಗೂ ವೇಗವು ಮಹತ್ತಾದದ್ದು; ಮನುಷ್ಯನಾಗಲಿ ಪ್ರಾಣಿಯಾಗಲಿ ಒಮ್ಮೆ ಅವುಗಳ ಕಣ್ಣಿಗೆ ಬಿದ್ದವೆಂದರೆ, ಯಾವುದೇ ಕಾರಣಕ್ಕೂ ಅವುಗಳಿಗೆ ಹಾನಿಯನ್ನು ಮಾಡದೇ ಬಿಡುವುದಿಲ್ಲ.”
ಈ ಪ್ರಶ್ನೆಗಳನ್ನು ನೀವು ಉತ್ತರಿಸಬಲ್ಲಿರೋ?
• ಸೃಷ್ಟಿಯು ಯಾವ ರೀತಿಯಲ್ಲಿ ಯೆಹೋವನ ಶಕ್ತಿಗೆ ಸಾಕ್ಷ್ಯವನ್ನು ನೀಡುತ್ತದೆ?
• ತನ್ನ ಜನರಿಗೆ ಬೆಂಬಲವನ್ನು ನೀಡಲು ಯೆಹೋವನು ಯಾವ ಸೇನೆಗಳನ್ನು ಉಪಯೋಗಿಸಬಲ್ಲನು?
• ಯೆಹೋವನು ತನ್ನ ಶಕ್ತಿಯನ್ನು ತೋರ್ಪಡಿಸಿದ ಕೆಲವು ಸಂದರ್ಭಗಳು ಯಾವುವು?
• ಯೆಹೋವನು ತನ್ನ ವಾಗ್ದಾನಗಳನ್ನು ಖಂಡಿತವಾಗಿಯೂ ನೆರವೇರಿಸುವನು ಎಂಬುದರ ಕುರಿತು ನಮಗೆ ಯಾವ ಖಾತ್ರಿಯಿದೆ?
[ಅಧ್ಯಯನ ಪ್ರಶ್ನೆಗಳು]
[ಪುಟ 10ರಲ್ಲಿರುವ ಚಿತ್ರಗಳು]
“ನಿಮ್ಮ ಕಣ್ಣುಗಳನ್ನು ಮೇಲಕ್ಕೆತ್ತಿಕೊಂಡು ನೋಡಿರಿ! ಈ ನಕ್ಷತ್ರಗಳನ್ನು ಸೃಷ್ಟಿಸಿದಾತನು ಯಾರು?”
[ಕೃಪೆ]
Photo by Malin, © IAC/RGO 1991
[ಪುಟ 13ರಲ್ಲಿರುವ ಚಿತ್ರಗಳು]
ಯೆಹೋವನ ಶಕ್ತಿಯ ತೋರ್ಪಡಿಸುವಿಕೆಗಳ ಕುರಿತು ಮನನಮಾಡುವುದು, ಆತನ ವಾಗ್ದಾನಗಳಲ್ಲಿ ನಂಬಿಕೆಯನ್ನು ಕಟ್ಟುತ್ತದೆ