“ಯೆಹೋವನನ್ನೂ ಆತನ ಬಲವನ್ನೂ ಹುಡುಕಿರಿ”
“ಯೆಹೋವನನ್ನೂ ಆತನ ಬಲವನ್ನೂ ಹುಡುಕಿರಿ”
“ಯೆಹೋವನು ಭೂಲೋಕದ ಎಲ್ಲಾ ಕಡೆಗಳಲ್ಲಿಯೂ ದೃಷ್ಟಿಯನ್ನು ಪ್ರಸರಿಸುತ್ತಾ ತನ್ನ ಕಡೆಗೆ ಯಥಾರ್ಥಮನಸ್ಸುಳ್ಳವರ ರಕ್ಷಣೆಗಾಗಿ ತನ್ನ ಪ್ರತಾಪವನ್ನು [“ಬಲವನ್ನು,” NW] ತೋರ್ಪಡಿಸುತ್ತಾನೆ.”—2 ಪೂರ್ವಕಾಲವೃತ್ತಾಂತ 16:9.
1. ಶಕ್ತಿ ಎಂದರೇನು ಮತ್ತು ಮನುಷ್ಯರು ಅದನ್ನು ಹೇಗೆ ಬಳಸಿದ್ದಾರೆ?
ಶಕ್ತಿ ಎಂಬ ಈ ಪದವು ಅನೇಕ ವಿಷಯಗಳನ್ನು ಅರ್ಥೈಸಬಲ್ಲದು. ಅದು ಇತರರ ಮೇಲಣ ನಿಯಂತ್ರಣಶಕ್ತಿ, ಅಧಿಕಾರದ ಶಕ್ತಿ ಅಥವಾ ಪ್ರಭಾವ; ಕ್ರಿಯೆಗೈಯುವ ಅಥವಾ ಪರಿಣಾಮವನ್ನು ಉಂಟುಮಾಡುವ ಸಾಮರ್ಥ್ಯ; ಶಾರೀರಿಕ ಕಸುವು (ಬಲ); ಅಥವಾ ಮಾನಸಿಕ ಹಾಗೂ ನೈತಿಕ ಸಾರ್ಥಕತೆಯಂತಹ ವಿಷಯಗಳಾಗಿರಬಹುದು. ಅಧಿಕಾರದ ಶಕ್ತಿಯ ಬಳಕೆಯ ವಿಷಯದಲ್ಲಿ ಮಾನವರಿಗೆ ಒಳ್ಳೆಯ ಹೆಸರಿಲ್ಲ. ರಾಜಕಾರಿಣಿಗಳ ಕೈಯಲ್ಲಿರುವ ಅಧಿಕಾರದ ಶಕ್ತಿಯ ಕುರಿತು ಮಾತಾಡುತ್ತಾ, ಇತಿಹಾಸಕಾರನಾದ ಲಾರ್ಡ್ ಆ್ಯಕ್ಟನ್ ಹೇಳಿದ್ದು: “ಅಧಿಕಾರದ ಶಕ್ತಿಯು ಭ್ರಷ್ಟಗೊಳಿಸುತ್ತದೆ, ಮತ್ತು ಸಂಪೂರ್ಣ ಅಧಿಕಾರದ ಶಕ್ತಿಯು ಸಂಪೂರ್ಣವಾಗಿ ಭ್ರಷ್ಟಗೊಳಿಸುತ್ತದೆ.” ಲಾರ್ಡ್ ಆ್ಯಕ್ಟನ್‌ನ ಮಾತುಗಳ ಸತ್ಯಾಸತ್ಯತೆಯನ್ನು ತೋರಿಸುವ ಉದಾಹರಣೆಗಳಿಂದ ಆಧುನಿಕ ಇತಿಹಾಸವು ತುಂಬಿತುಳುಕುತ್ತಿದೆ. 20ನೇ ಶತಮಾನದಲ್ಲಿ, ಹಿಂದೆಂದಿಗಿಂತಲೂ ಹೆಚ್ಚಾಗಿ ‘ಒಬ್ಬನು ಮತ್ತೊಬ್ಬನ ಮೇಲೆ ಅಧಿಕಾರನಡಿಸಿ ಅವನಿಗೆ ಹಾನಿಯನ್ನುಂಟುಮಾಡಿದ್ದಾನೆ.’ (ಪ್ರಸಂಗಿ 8:9) ಭ್ರಷ್ಟ ನಿರಂಕುಶ ಪ್ರಭುಗಳು ತಮ್ಮ ಅಧಿಕಾರದ ಶಕ್ತಿಯನ್ನು ಅತಿಯಾಗಿ ದುರುಪಯೋಗಿಸಿದ್ದಾರೆ ಮತ್ತು ಕೋಟ್ಯಂತರ ಜೀವಗಳನ್ನು ಹೊಸಕಿಹಾಕಿದ್ದಾರೆ. ಪ್ರೀತಿ, ವಿವೇಕ ಮತ್ತು ನ್ಯಾಯದಿಂದ ನಿಯಂತ್ರಿಸಲ್ಪಟ್ಟಿರದ ಅಧಿಕಾರದ ಶಕ್ತಿಯು ಅಪಾಯಕಾರಿಯಾಗಿದೆ.
2. ಯೆಹೋವನು ತನ್ನ ಶಕ್ತಿಯನ್ನು ಬಳಸುವ ವಿಧದ ಮೇಲೆ ಇನ್ನಿತರ ದೈವಿಕ ಗುಣಗಳು ಹೇಗೆ ಪ್ರಭಾವವನ್ನು ಬೀರುತ್ತವೆ ಎಂಬುದನ್ನು ವಿವರಿಸಿರಿ.
2 ಮಾನವರಿಗೆ ಅಸದೃಶವಾಗಿ, ದೇವರು ತನ್ನ ಶಕ್ತಿಯನ್ನು ಯಾವಾಗಲೂ ಒಳ್ಳೆಯದಕ್ಕಾಗಿಯೇ ಉಪಯೋಗಿಸುತ್ತಾನೆ. “ಯೆಹೋವನು ಭೂಲೋಕದ ಎಲ್ಲಾ ಕಡೆಗಳಲ್ಲಿಯೂ ದೃಷ್ಟಿಯನ್ನು ಪ್ರಸರಿಸುತ್ತಾ ತನ್ನ ಕಡೆಗೆ ಯಥಾರ್ಥಮನಸ್ಸುಳ್ಳವರ ರಕ್ಷಣೆಗಾಗಿ ತನ್ನ ಪ್ರತಾಪವನ್ನು [“ಬಲವನ್ನು,” NW] ತೋರ್ಪಡಿಸುತ್ತಾನೆ.” (2 ಪೂರ್ವಕಾಲವೃತ್ತಾಂತ 16:9) ಯೆಹೋವನು ತನ್ನ ಶಕ್ತಿಯನ್ನು ನಿಯಂತ್ರಿತ ರೀತಿಯಲ್ಲಿ ಪ್ರಯೋಗಿಸುತ್ತಾನೆ. ದೇವರ ತಾಳ್ಮೆಯು ದುಷ್ಟರನ್ನು ನಾಶಮಾಡುವುದರಿಂದ ಆತನನ್ನು ತಡೆಯುತ್ತದೆ ಮತ್ತು ಇದು ಪಶ್ಚಾತ್ತಾಪಪಡುವಂತೆ ಅವರಿಗೆ ಸಮಯಾವಕಾಶವನ್ನು ನೀಡುತ್ತದೆ. ಆತನ ಪ್ರೀತಿಯು, ನೀತಿವಂತರೂ ಅನೀತಿವಂತರೂ ಆದ ಎಲ್ಲ ಜನರ ಮೇಲೆ ಸೂರ್ಯನು ಪ್ರಕಾಶಿಸುವಂತೆ ಮಾಡಲು ಆತನನ್ನು ಪ್ರಚೋದಿಸುತ್ತದೆ. ಮರಣಾಧಿಕಾರಿಯಾಗಿರುವ ಪಿಶಾಚನಾದ ಸೈತಾನನನ್ನು ಕಟ್ಟಕಡೆಗೆ ನಾಶಗೊಳಿಸಲು ತನ್ನ ಅಸೀಮಿತ ಶಕ್ತಿಯನ್ನು ಉಪಯೋಗಿಸುವಂತೆ ನ್ಯಾಯವು ಆತನನ್ನು ಪ್ರೇರಿಸುವುದು.—ಮತ್ತಾಯ 5:44, 45; ಇಬ್ರಿಯ 2:14; 2 ಪೇತ್ರ 3:9.
3. ದೇವರ ಬಲಾಢ್ಯ ಶಕ್ತಿಯು ಆತನ ಮೇಲೆ ಭರವಸೆಯನ್ನಿಡುವುದಕ್ಕಾಗಿ ಒಂದು ಕಾರಣವಾಗಿದೆ ಏಕೆ?
3 ನಮ್ಮ ಸ್ವರ್ಗೀಯ ತಂದೆಯ ಭಯಭಕ್ತಿಯನ್ನು ಉಂಟುಮಾಡುವ ಶಕ್ತಿಯು, ಆತನ ವಾಗ್ದಾನಗಳಲ್ಲೂ ಆತನ ಸಂರಕ್ಷಣೆಯಲ್ಲೂ ನಂಬಿಕೆ ಹಾಗೂ ಭರವಸೆಯನ್ನಿಡಲು ಒಂದು ಕಾರಣವನ್ನು ಕೊಡುತ್ತದೆ. ಒಂದು ಪುಟ್ಟ ಮಗು ಆಗಂತುಕರ ಮಧ್ಯೆಯಿದ್ದರೆ, ತನ್ನ ತಂದೆಯ ಕೈಯನ್ನು ಬಿಗಿಯಾಗಿ ಹಿಡಿದುಕೊಳ್ಳುವಾಗಲೇ ಅದಕ್ಕೆ ಸುರಕ್ಷಿತ ಅನಿಸಿಕೆಯಾಗುತ್ತದೆ. ಏಕೆಂದರೆ ತಂದೆಯು ತನಗೆ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳುವನು ಎಂದು ಆ ಮಗುವಿಗೆ ತಿಳಿದಿರುತ್ತದೆ. ಅದೇ ರೀತಿಯಲ್ಲಿ “ರಕ್ಷಿಸಲು ಸಮರ್ಥನಾದ” ನಮ್ಮ ಸ್ವರ್ಗೀಯ ತಂದೆಯೊಂದಿಗೆ ನಾವು ನಡೆಯುವುದಾದರೆ, ನಮಗೆ ಯಾವುದೇ ಶಾಶ್ವತ ಹಾನಿಯಾಗದಂತೆ ಆತನು ನೋಡಿಕೊಳ್ಳುವನು. (ಯೆಶಾಯ 63:1; ಮೀಕ 6:8) ಮತ್ತು ಒಬ್ಬ ಒಳ್ಳೆಯ ತಂದೆಯೋಪಾದಿ ಯೆಹೋವನು ಯಾವಾಗಲೂ ತನ್ನ ವಾಗ್ದಾನಗಳನ್ನು ನೆರವೇರಿಸುತ್ತಾನೆ. ಆತನ ‘ಮಾತು ಉದ್ದೇಶಿಸಿದ್ದನ್ನು ಕೈಗೂಡಿಸಿದ ಹೊರತು ಆತನ ಕಡೆಗೆ ವ್ಯರ್ಥವಾಗಿ ಹಿಂದಿರುಗುವದಿಲ್ಲ’ ಎಂಬುದನ್ನು ಆತನ ಅಸೀಮಿತ ಶಕ್ತಿಯು ಖಾತ್ರಿಪಡಿಸುತ್ತದೆ.—ಯೆಶಾಯ 55:11; ತೀತ 1:2.
4, 5. (ಎ) ಅರಸನಾದ ಆಸನು ಯೆಹೋವನಲ್ಲಿ ಸಂಪೂರ್ಣವಾಗಿ ಭರವಸೆಯನ್ನಿಟ್ಟಾಗ ಏನು ಸಂಭವಿಸಿತು? (ಬಿ) ನಮ್ಮ ಸಮಸ್ಯೆಗಳಿಗೆ ನಾವು ಮಾನವ ಪರಿಹಾರಗಳ ಮೇಲೆ ಆತುಕೊಳ್ಳುವಲ್ಲಿ ಏನು ಸಂಭವಿಸಬಹುದು?
4 ನಮ್ಮ ಸ್ವರ್ಗೀಯ ತಂದೆಯ ಸಂರಕ್ಷಣೆಯ ಕುರಿತಾದ ಅರಿವನ್ನು ಕಳೆದುಕೊಳ್ಳದೇ ಇರುವಂತೆ ದೃಢನಿಶ್ಚಯಮಾಡುವುದು ಏಕೆ ಅಷ್ಟೊಂದು ಪ್ರಾಮುಖ್ಯವಾಗಿದೆ? ಏಕೆಂದರೆ, ಕೆಲವೊಮ್ಮೆ ಸನ್ನಿವೇಶಗಳು ನಮ್ಮ ಮೇಲೆ ಎಷ್ಟರ ಮಟ್ಟಿಗೆ ಒತ್ತಡವನ್ನು ತರಬಹುದೆಂದರೆ, ನಮಗೆ ನಿಜವಾದ ಸುರಕ್ಷತೆಯು ಎಲ್ಲಿ ಸಿಗುತ್ತದೆ ಎಂಬುದನ್ನೇ ನಾವು ಮರೆತುಬಿಡಸಾಧ್ಯವಿದೆ. ಯಾವಾಗಲೂ ಯೆಹೋವನಲ್ಲಿ ಭರವಸೆಯನ್ನಿಡುತ್ತಿದ್ದ ಅರಸನಾದ ಆಸನ ಉದಾಹರಣೆಯಿಂದ ನಾವಿದನ್ನು ನೋಡಸಾಧ್ಯವಿದೆ. ಅವನ ಆಳ್ವಿಕೆಯ ಸಮಯದಲ್ಲಿ, ಐಥಿಯೋಪ್ಯರ ಹತ್ತು ಲಕ್ಷ ಸೈನಿಕರ ಬಲಿಷ್ಠ ಸೈನ್ಯವು ಯೆಹೂದದ ಮೇಲೆ ಆಕ್ರಮಣಮಾಡಿತು. ತನ್ನ ಶತ್ರುಗಳ ಮಿಲಿಟರಿ ಶಕ್ತಿಯನ್ನು ನೋಡಿ, ಆಸನು ದೇವರಿಗೆ ಪ್ರಾರ್ಥಿಸಿದ್ದು: “ಯೆಹೋವನೇ, ಬಲಿಷ್ಠನು ಬಲಹೀನನ ಮೇಲೆ ಬೀಳುವಲ್ಲಿ ನಿನ್ನ ಹೊರತು ರಕ್ಷಕನಿಲ್ಲ. ನಮ್ಮ ದೇವರಾದ ಯೆಹೋವನೇ, ನಮ್ಮನ್ನು ರಕ್ಷಿಸು, ನಿನ್ನಲ್ಲಿ ಭರವಸವಿಟ್ಟು ನಿನ್ನ ಹೆಸರಿನಲ್ಲಿ ಈ ಮಹಾಸಮೂಹಕ್ಕೆ ವಿರೋಧವಾಗಿ ಯುದ್ಧಕ್ಕೆ ಬಂದೆವಲ್ಲಾ. ಯೆಹೋವನೇ, ನಮ್ಮ ದೇವರು ನೀನು. ನರರು ನಿನ್ನನ್ನು ಎದುರಿಸಿ ಗೆಲ್ಲಬಾರದು.” 2 ಪೂರ್ವಕಾಲವೃತ್ತಾಂತ 14:11) ಅರಸನಾದ ಆಸನ ಭಿನ್ನಹಕ್ಕೆ ಯೆಹೋವನು ಕಿವಿಗೊಟ್ಟು, ಒಂದು ನಿರ್ಣಾಯಕವಾದ ವಿಜಯವನ್ನು ಅವನಿಗೆ ಕೊಟ್ಟನು.
(5 ಆದರೆ ನಂಬಿಗಸ್ತ ಸೇವೆಯ ಅನೇಕ ವರ್ಷಗಳ ಅನಂತರ, ಯೆಹೋವನ ರಕ್ಷಣೆಯ ಶಕ್ತಿಯಲ್ಲಿ ಆಸನಗಿದ್ದ ಭರವಸೆಯು ತತ್ತರಿಸಿತು. ಇಸ್ರಾಯೇಲಿನ ಉತ್ತರ ರಾಜ್ಯದಿಂದ ಬಂದ ಮಿಲಿಟರಿ ಬೆದರಿಕೆಯನ್ನು ವಿಮುಖಗೊಳಿಸಲಿಕ್ಕಾಗಿ, ಅವನು ಸಹಾಯಕ್ಕಾಗಿ ಅರಾಮ್ಯರ ಕಡೆಗೆ ತಿರುಗಿದನು. (2 ಪೂರ್ವಕಾಲವೃತ್ತಾಂತ 16:1-3) ಅರಾಮ್ಯರ ಅರಸನಾದ ಬೆನ್ಹದದನಿಗೆ ಅವನು ಕೊಟ್ಟ ಲಂಚವು, ಇಸ್ರಾಯೇಲು ಯೆಹೂದಕ್ಕೆ ಒಡ್ಡಿದ ಬೆದರಿಕೆಯನ್ನು ಹಿಂತೆಗೆದುಕೊಳ್ಳುವಂತೆ ಮಾಡಿತಾದರೂ, ಅರಾಮ್ಯರೊಂದಿಗೆ ಆಸನು ಮಾಡಿದ ಒಡಂಬಡಿಕೆಯು ಯೆಹೋವನಲ್ಲಿ ಅವನಿಗಿದ್ದ ಭರವಸೆಯ ಕೊರತೆಯನ್ನು ವ್ಯಕ್ತಪಡಿಸಿತು. ಪ್ರವಾದಿಯಾದ ಹನಾನಿ ಅವನಿಗೆ ನೇರವಾಗಿ ಹೇಳಿದ್ದು: “ಕೂಷ್ಯಲೂಬ್ಯರ ಸೈನ್ಯವು ಅಪರಿಮಿತ ರಥಾಶ್ವಬಲಗಳುಳ್ಳ ಮಹಾಸೈನ್ಯವಲ್ಲವೋ! ನೀನು ಯೆಹೋವನ ಮೇಲೆ ಆತುಕೊಂಡದರಿಂದ ಆತನು ಅದನ್ನು ನಿನ್ನ ಕೈಗೆ ಒಪ್ಪಿಸಿಕೊಟ್ಟನು.” (2 ಪೂರ್ವಕಾಲವೃತ್ತಾಂತ 16:7, 8) ಆದರೂ ಆಸನು ಈ ಗದರಿಕೆಯನ್ನು ಅಲಕ್ಷಿಸಿದನು. (2 ಪೂರ್ವಕಾಲವೃತ್ತಾಂತ 16:9-12) ಸಮಸ್ಯೆಗಳನ್ನು ಎದುರಿಸುವಾಗ, ಮಾನವ ಪರಿಹಾರಗಳ ಮೇಲೆ ನಾವು ಆತುಕೊಳ್ಳದಿರೋಣ. ಅದಕ್ಕೆ ಬದಲಾಗಿ, ದೇವರಲ್ಲಿ ಭರವಸೆಯನ್ನಿಡೋಣ, ಏಕೆಂದರೆ ಮನುಷ್ಯರ ಶಕ್ತಿಯ ಮೇಲೆ ಭರವಸೆಯಿಡುವುದು ಖಂಡಿತವಾಗಿಯೂ ನಿರಾಶೆಗೆ ನಡೆಸುವುದು.—ಕೀರ್ತನೆ 146:3-5.
ಯೆಹೋವನು ನೀಡುವಂತಹ ಶಕ್ತಿಗಾಗಿ ಹುಡುಕಿರಿ
6. ನಾವೇಕೆ ‘ಯೆಹೋವನನ್ನೂ ಆತನ ಬಲವನ್ನೂ ಹುಡುಕಬೇಕು’?
6 ಯೆಹೋವನು ತನ್ನ ಸೇವಕರಿಗೆ ಶಕ್ತಿಯನ್ನು ಕೊಡಬಲ್ಲನು ಮಾತ್ರವಲ್ಲ ಅವರನ್ನು ಸಂರಕ್ಷಿಸಲೂ ಶಕ್ತನು. “ಯೆಹೋವನನ್ನೂ ಆತನ ಬಲವನ್ನೂ ಹುಡುಕಿರಿ” ಎಂದು ಬೈಬಲು ನಮ್ಮನ್ನು ಪ್ರೇರೇಪಿಸುತ್ತದೆ. (ಕೀರ್ತನೆ 105:4, NW) ಏಕೆ? ಏಕೆಂದರೆ ದೇವರ ಶಕ್ತಿಯ ಸಹಾಯದಿಂದ ನಾವು ಕೆಲಸಗಳನ್ನು ಮಾಡುವಾಗ, ನಮ್ಮ ಅಧಿಕಾರದ ಶಕ್ತಿಯು ಇತರರಿಗೆ ಹಾನಿಮಾಡುವಂತಹ ರೀತಿಯಲ್ಲಲ್ಲ, ಬದಲಿಗೆ ಅವರಿಗೆ ಪ್ರಯೋಜನವಾಗುವಂತಹ ರೀತಿಯಲ್ಲಿ ಉಪಯೋಗಿಸಲ್ಪಡುವುದು. ‘ಯೆಹೋವನ ಶಕ್ತಿಯಿಂದ’ ಅನೇಕ ಅದ್ಭುತಕಾರ್ಯಗಳನ್ನು ಮಾಡಿದ ಯೇಸು ಕ್ರಿಸ್ತನಿಗಿಂತಲೂ ಉತ್ತಮವಾದ ಮಾದರಿಯನ್ನು ನಾವು ಇನ್ನೆಲ್ಲಿಯೂ ಕಂಡುಕೊಳ್ಳಲಾರೆವು. (ಲೂಕ 5:17, NW) ಯೇಸು ಒಬ್ಬ ಧನಿಕ, ಪ್ರಖ್ಯಾತ ಇಲ್ಲವೇ ಮಹಾ ಶಕ್ತಿಶಾಲಿ ರಾಜನಾಗಲಿಕ್ಕಾಗಿ ತನ್ನನ್ನೇ ತೊಡಗಿಸಿಕೊಳ್ಳಬಹುದಾಗಿತ್ತು. (ಲೂಕ 4:5-7) ಅದಕ್ಕೆ ಬದಲಾಗಿ, ಅವನು ದೇವರು ಕೊಟ್ಟಂತಹ ಶಕ್ತಿಯನ್ನು ತರಬೇತಿಯನ್ನು ನೀಡಲಿಕ್ಕೂ ಶಿಕ್ಷಣಕೊಡುವುದಕ್ಕೂ ಸಹಾಯನೀಡಲಿಕ್ಕೂ ವಾಸಿಮಾಡಲಿಕ್ಕೂ ಉಪಯೋಗಿಸಿದನು. (ಮಾರ್ಕ 7:37; ಯೋಹಾನ 7:46) ನಮಗಾಗಿ ಎಂತಹ ಒಂದು ಉತ್ತಮ ಮಾದರಿ!
7. ನಮ್ಮ ಸ್ವಂತ ಬಲದಿಂದಲ್ಲ, ಅದಕ್ಕೆ ಬದಲಾಗಿ ದೇವರ ಬಲದಿಂದ ಕೆಲಸಗಳನ್ನು ಮಾಡುವಾಗ ಯಾವ ಮುಖ್ಯ ಗುಣವನ್ನು ನಾವು ಬೆಳೆಸಿಕೊಳ್ಳುತ್ತೇವೆ?
7 ಅಷ್ಟುಮಾತ್ರವಲ್ಲ, ‘ದೇವರಿಂದ ಹೊಂದಿದ ಶಕ್ತಿ’ಯಲ್ಲಿ ನಾವು ಕೆಲಸಗಳನ್ನು ಮಾಡುವಾಗ, ಇದು ನಾವು ದೀನಭಾವದವರಾಗಿರುವಂತೆ ಸಹಾಯಮಾಡುತ್ತದೆ. (1 ಪೇತ್ರ 4:11) ಅಧಿಕಾರದ ಶಕ್ತಿಗಾಗಿ ಹಾತೊರೆಯುವವರು ದುರಹಂಕಾರಿಗಳಾಗುತ್ತಾರೆ. ಉದಾಹರಣೆಗೆ, ಅಶ್ಶೂರದ ಅರಸನಾದ ಏಸರ್ಹದ್ದೋನನು ಜಂಬದಿಂದ ಘೋಷಿಸಿದ್ದು: “ನಾನು ಬಲಶಾಲಿ, ನಾನು ಅತಿ ಬಲಶಾಲಿ, ನಾನು ಮಹಾಪುರುಷ, ನಾನು ಬೃಹದಾಕಾರವುಳ್ಳವನು, ನಾನು ದೈತ್ಯಾಕಾರನು.” ಆದರೆ ಅದಕ್ಕೆ ವ್ಯತಿರಿಕ್ತವಾಗಿ ಯೆಹೋವನು, “ಬಲಿಷ್ಠರನ್ನು ನಾಚಿಕೆಪಡಿಸುವದಕ್ಕಾಗಿ ಈ ಲೋಕದ ಬಲಹೀನರನ್ನು ಆರಿಸಿಕೊಂಡಿದ್ದಾನೆ.” ಆದುದರಿಂದ, ಒಬ್ಬ ಸತ್ಕ್ರೈಸ್ತನು ಹೆಚ್ಚಳಪಡುವುದಾದರೆ, ಅವನು ಯೆಹೋವನಲ್ಲಿ ಹೆಚ್ಚಳಪಡುತ್ತಾನೆ. ಏಕೆಂದರೆ, ತಾನು ಏನನ್ನು ಮಾಡಿ ಪೂರೈಸಿದ್ದೇನೋ ಅದು ತನ್ನ ಸ್ವಂತ ಶಕ್ತಿಯಿಂದಲ್ಲ ಎಂಬುದು ಅವನಿಗೆ ಗೊತ್ತಿದೆ. ನಾವು ‘ದೇವರ ತ್ರಾಣವುಳ್ಳ ಹಸ್ತದ ಕೆಳಗೆ ನಮ್ಮನ್ನು ತಗ್ಗಿಸಿಕೊಳ್ಳುವಲ್ಲಿ’ ನಿಜವಾಗಿಯೂ ಮೇಲಕ್ಕೆತ್ತಲ್ಪಡುವೆವು.—1 ಕೊರಿಂಥ 1:26-31; 1 ಪೇತ್ರ 5:6.
8. ಯೆಹೋವನ ಶಕ್ತಿಯನ್ನು ಪಡೆದುಕೊಳ್ಳಲು ಮೊದಲಾಗಿ ನಾವೇನು ಮಾಡತಕ್ಕದ್ದು?
8 ನಾವು ದೇವರಿಂದ ಶಕ್ತಿಯನ್ನು ಹೇಗೆ ಪಡೆದುಕೊಳ್ಳಸಾಧ್ಯವಿದೆ? ಮೊದಲಾಗಿ, ನಾವು ಅದನ್ನು ಪ್ರಾರ್ಥನೆಯಲ್ಲಿ ಕೇಳಿಕೊಳ್ಳಬೇಕು. ಪವಿತ್ರಾತ್ಮಕ್ಕಾಗಿ ಬೇಡಿಕೊಳ್ಳುವವರಿಗೆ ಅದನ್ನು ತನ್ನ ತಂದೆಯು ಕೊಡುವನೆಂದು ಯೇಸು ತನ್ನ ಶಿಷ್ಯರಿಗೆ ಆಶ್ವಾಸನೆಯನ್ನು ನೀಡಿದನು. (ಲೂಕ 11:10-13) ಯೇಸುವಿನ ಕುರಿತು ಸಾಕ್ಷಿನೀಡುವುದನ್ನು ನಿಲ್ಲಿಸಲು ಆಜ್ಞಾಪಿಸಿದ ಧಾರ್ಮಿಕ ಮುಖಂಡರಿಗೆ ಮಣಿಯುವ ಬದಲಾಗಿ, ದೇವರಿಗೆ ವಿಧೇಯತೆಯನ್ನು ತೋರಿಸಲು ಆಯ್ಕೆಮಾಡಿಕೊಂಡ ಕ್ರಿಸ್ತನ ಶಿಷ್ಯರಲ್ಲಿ, ಇದು ಶಕ್ತಿಯನ್ನು ಹೇಗೆ ತುಂಬಿಸಿತು ಎಂಬುದನ್ನು ತುಸು ಪರಿಗಣಿಸಿರಿ. ಅವರು ಯೆಹೋವನ ಸಹಾಯಕ್ಕಾಗಿ ಮೊರೆಯಿಟ್ಟಾಗ, ಅವರ ಪ್ರಾಮಾಣಿಕವಾದ ಪ್ರಾರ್ಥನೆಯು ಉತ್ತರಿಸಲ್ಪಟ್ಟಿತು. ಮತ್ತು ಸುವಾರ್ತೆಯನ್ನು ಧೈರ್ಯದಿಂದ ಸಾರುತ್ತಾ ಇರುವಂತೆ ಪವಿತ್ರಾತ್ಮವು ಅವರಿಗೆ ಶಕ್ತಿಯನ್ನು ನೀಡಿತು.—ಅ. ಕೃತ್ಯಗಳು 4:19, 20, 29-31, 33.
9. ಆತ್ಮಿಕ ಬಲದ ಎರಡನೆಯ ಮೂಲವನ್ನು ಹೆಸರಿಸಿರಿ ಮತ್ತು ಅದರ ಪರಿಣಾಮಕಾರಿತ್ವವನ್ನು ತೋರಿಸಲು ಶಾಸ್ತ್ರೀಯ ಉದಾಹರಣೆಯೊಂದನ್ನು ತಿಳಿಸಿರಿ.
9 ಎರಡನೆಯದಾಗಿ, ನಾವು ಆತ್ಮಿಕ ಬಲವನ್ನು ಬೈಬಲಿನಿಂದ ಪಡೆದುಕೊಳ್ಳಸಾಧ್ಯವಿದೆ. (ಇಬ್ರಿಯ 4:12) ಅರಸನಾದ ಯೋಷೀಯನ ಕಾಲದಲ್ಲಿ ದೇವರ ವಾಕ್ಯದ ಶಕ್ತಿಯು ಎದ್ದುಕಾಣುವಂತಹದ್ದಾಗಿತ್ತು. ಯೆಹೂದದ ಈ ರಾಜನು ತನ್ನ ದೇಶದಿಂದ ಈಗಾಗಲೇ ವಿಧರ್ಮಿ ವಿಗ್ರಹಗಳನ್ನು ತೆಗೆದುಹಾಕಿದ್ದರೂ, ದೇವಾಲಯದಲ್ಲಿ ಅನಿರೀಕ್ಷಿತವಾಗಿ ಕಂಡುಹಿಡಿಯಲ್ಪಟ್ಟ ಯೆಹೋವನ ನಿಯಮಶಾಸ್ತ್ರವು ಈ ಶುದ್ಧೀಕರಣವನ್ನು ಇನ್ನೂ ತೀವ್ರಗೊಳಿಸುವಂತೆ ಅವನನ್ನು ಪ್ರಚೋದಿಸಿತು. * ಯೋಷೀಯನೇ ಖುದ್ದಾಗಿ ನಿಯಮಶಾಸ್ತ್ರವನ್ನು ಜನರಿಗೆ ಓದಿ ತಿಳಿಸಿದ ನಂತರ, ಇಡೀ ಜನಾಂಗವು ಯೆಹೋವನೊಂದಿಗೆ ಒಂದು ಒಡಂಬಡಿಕೆಯನ್ನು ಮಾಡಿತು. ಅಷ್ಟುಮಾತ್ರವಲ್ಲದೆ, ವಿಗ್ರಹಾರಾಧನೆಯ ವಿರುದ್ಧ ಇನ್ನೂ ಹೆಚ್ಚು ಹುರುಪಿನ ಎರಡನೆಯ ಕಾರ್ಯಾಚರಣೆಯು ಆರಂಭವಾಯಿತು. ಯೋಷೀಯನು ಕೈಗೊಂಡ ಸುಧಾರಣೆಯ ಉತ್ತಮ ಫಲಿತಾಂಶವು, ‘ಅವನ ಜೀವಮಾನದಲ್ಲೆಲ್ಲಾ ಅವರು ತಮ್ಮ ಪಿತೃಗಳ ದೇವರಾದ ಯೆಹೋವನನ್ನು ಬಿಡದೆ ಹಿಂಬಾಲಿಸಿದ್ದೇ’ ಆಗಿತ್ತು.—2 ಪೂರ್ವಕಾಲವೃತ್ತಾಂತ 34:33.
10. ಯೆಹೋವನಿಂದ ಬಲವನ್ನು ಪಡೆದುಕೊಳ್ಳುವ ಮೂರನೆಯ ವಿಧವು ಯಾವುದಾಗಿದೆ, ಮತ್ತು ಅದು ಏಕೆ ಮಹತ್ತ್ವದ್ದಾಗಿದೆ?
10 ಮೂರನೆಯದಾಗಿ, ಕ್ರೈಸ್ತ ಸಹವಾಸದ ಮುಖಾಂತರ ನಾವು ಯೆಹೋವನಿಂದ ಬಲವನ್ನು ಪಡೆದುಕೊಳ್ಳುತ್ತೇವೆ. ‘ಪ್ರೀತಿಸುತ್ತಿರಬೇಕೆಂತಲೂ ಸತ್ಕಾರ್ಯಮಾಡಬೇಕೆಂತಲೂ ಒಬ್ಬರನ್ನೊಬ್ಬರು ಪ್ರೇರೇಪಿಸಲಿಕ್ಕಾಗಿ’ ಮತ್ತು ಒಬ್ಬರು ಇನ್ನೊಬ್ಬರಿಗೆ ಪ್ರೋತ್ಸಾಹವನ್ನು ನೀಡಲಿಕ್ಕಾಗಿ ಕೂಟಗಳಿಗೆ ಕ್ರಮವಾಗಿ ಹಾಜರಾಗುವಂತೆ ಪೌಲನು ಕ್ರೈಸ್ತರಿಗೆ ಉತ್ತೇಜನವನ್ನು ನೀಡಿದನು. (ಇಬ್ರಿಯ 10:24, 25) ಪೇತ್ರನು ಸೆರೆಮನೆಯಿಂದ ಅದ್ಭುತಕರವಾಗಿ ಬಿಡುಗಡೆಗೊಳಿಸಲ್ಪಟ್ಟಾಗ, ಅವನು ತನ್ನ ಸಹೋದರರೊಂದಿಗೆ ಇರಲು ಇಷ್ಟಪಟ್ಟನಾದುದರಿಂದ, “ಅನೇಕರು ಕೂಡಿಬಂದು ಪ್ರಾರ್ಥನೆಮಾಡುತ್ತಿದ್ದ” ಮಾರ್ಕನೆನಿಸಿಕೊಳ್ಳುವ ಯೋಹಾನನ ತಾಯಿಯಾದ ಮರಿಯಳ ಮನೆಗೆ ನೇರವಾಗಿ ಹೋದನು. (ಅ. ಕೃತ್ಯಗಳು 12:12) ಖಂಡಿತವಾಗಿಯೂ ಅವರೆಲ್ಲರೂ ತಮ್ಮ ತಮ್ಮ ಮನೆಗಳಲ್ಲಿಯೇ ಇದ್ದುಕೊಂಡು ಪ್ರಾರ್ಥನೆ ಮಾಡಬಹುದಾಗಿತ್ತು. ಆದರೆ ಅವರೆಲ್ಲರೂ ಆ ಕಠಿನ ಸಮಯದಲ್ಲೂ ಕೂಡಿಬಂದು ಪ್ರಾರ್ಥನೆಮಾಡಲು ಮತ್ತು ಪರಸ್ಪರರಿಗೆ ಉತ್ತೇಜನವನ್ನು ನೀಡಲು ಆಯ್ಕೆಮಾಡಿದರು. ಪೌಲನು ರೋಮ್ ದೇಶಕ್ಕೆ ಮಾಡಿದ ಸುದೀರ್ಘ ಹಾಗೂ ಅಪಾಯಕಾರಿ ಪ್ರಯಾಣದ ಕೊನೆಯಲ್ಲಿ, ಅವನು ಪೊತಿಯೋಲದಲ್ಲಿರುವ ಕೆಲವು ಸಹೋದರರನ್ನು ಮತ್ತು ಅವನನ್ನು ಸಂಧಿಸಲಿಕ್ಕಾಗಿ ಪ್ರಯಾಣಿಸಿ ಬಂದಿದ್ದ ಇತರರನ್ನು ಅನಂತರ ಭೇಟಿಯಾದನು. ಆ ಸಮಯದಲ್ಲಿ ಅವನು ಹೇಗೆ ಪ್ರತಿಕ್ರಿಯಿಸಿದನು? “ಪೌಲನು ಅವರನ್ನು [ಅನಂತರ ಭೇಟಿಯಾದವರನ್ನು] ನೋಡಿ ದೇವರ ಸ್ತೋತ್ರವನ್ನು ಮಾಡಿ ಧೈರ್ಯಗೊಂಡನು.” (ಅ. ಕೃತ್ಯಗಳು 28:13-15) ಪುನಃ ಒಮ್ಮೆ ಜೊತೆ ಕ್ರೈಸ್ತರೊಂದಿಗೆ ಇರುವುದರ ಮೂಲಕ ಅವನು ಬಲಗೊಳಿಸಲ್ಪಟ್ಟನು. ನಾವು ಸಹ ನಮ್ಮ ಜೊತೆ ಕ್ರೈಸ್ತರೊಂದಿಗಿನ ಒಡನಾಟದಿಂದ ಬಲವನ್ನು ಪಡೆದುಕೊಳ್ಳುತ್ತೇವೆ. ಒಬ್ಬರು ಇನ್ನೊಬ್ಬರೊಂದಿಗೆ ಸಹವಾಸಿಸಲು ನಮಗೆ ಸ್ವಾತಂತ್ರ್ಯವಿದ್ದು, ಹಾಗೆ ಮಾಡಲು ಶಕ್ತರಾಗುವಷ್ಟರ ತನಕ, ನಾವು ನಿತ್ಯಜೀವಕ್ಕೆ ಹೋಗುವ ಇಕ್ಕಟ್ಟಾದ ದಾರಿಯಲ್ಲಿ ಒಬ್ಬರೇ ನಡೆದುಹೋಗಲು ಪ್ರಯತ್ನಿಸಬಾರದು.—ಜ್ಞಾನೋಕ್ತಿ 18:1; ಮತ್ತಾಯ 7:14.
11. ‘ಸಾಮಾನ್ಯವಾದುದಕ್ಕಿಂತಲೂ ಅತೀತವಾದ ಬಲವು’ ನಿಜವಾಗಿಯೂ ಆವಶ್ಯಕವಾಗಿರುವ ಕೆಲವು ಸಂದರ್ಭಗಳನ್ನು ತಿಳಿಸಿರಿ.
11 ಕ್ರಮವಾದ ಪ್ರಾರ್ಥನೆ, ದೇವರ ವಾಕ್ಯದ ಅಧ್ಯಯನ ಹಾಗೂ ಜೊತೆ ವಿಶ್ವಾಸಿಗಳೊಂದಿಗಿನ ಸಹವಾಸದ ಮೂಲಕ, ನಾವು ‘ಕರ್ತನನ್ನೂ ಆತನ ಅತ್ಯಧಿಕವಾದ ಶಕ್ತಿಯನ್ನೂ ಆಶ್ರಯಿಸಿಕೊಂಡವರಾಗಿ ಬಲಗೊಳ್ಳುತ್ತೇವೆ.’ (ಎಫೆಸ 6:10) ನಮಗೆಲ್ಲರಿಗೂ ‘ಕರ್ತನ ಶಕ್ತಿ’ ಬೇಕಾಗಿದೆ ಎಂಬುದರಲ್ಲಿ ಒಂದಿನಿತೂ ಸಂದೇಹವಿಲ್ಲ. ಕೆಲವರು ನಿತ್ರಾಣಗೊಳಿಸುವ ಕಾಯಿಲೆಗಳಿಂದ, ವೃದ್ಧಾಪ್ಯದ ವಿಧ್ವಂಸಕ ಪರಿಣಾಮಗಳಿಂದ ಅಥವಾ ಜೀವನ ಸಂಗಾತಿಯ ಮೃತ್ಯುವಿನಿಂದ ಕಷ್ಟಾನುಭವಿಸುತ್ತಾರೆ. (ಕೀರ್ತನೆ 41:3) ಇನ್ನೂ ಕೆಲವರು ಅವಿಶ್ವಾಸಿ ಸಂಗಾತಿಯ ವಿರೋಧವನ್ನು ಸಹಿಸಿಕೊಳ್ಳುತ್ತಾರೆ. ಹೆತ್ತವರು, ಅದರಲ್ಲೂ ವಿಶೇಷವಾಗಿ ಏಕ ಹೆತ್ತವರು ಕುಟುಂಬವೊಂದನ್ನು ನೋಡಿಕೊಳ್ಳುತ್ತಿರುವಾಗಲೇ ಪೂರ್ಣ ಸಮಯದ ಉದ್ಯೋಗ ಮಾಡುವುದು ಆಯಾಸಗೊಳಿಸುವಂತಹ ಜವಾಬ್ದಾರಿಯಾಗಿದೆ ಎಂಬುದನ್ನು ಕಂಡುಕೊಳ್ಳಬಹುದು. ಸಮಾನಸ್ಥರ ಒತ್ತಡಕ್ಕೆ ಮಣಿಯದೇ ಇರಲಿಕ್ಕಾಗಿ ಹಾಗೂ ಅಮಲೌಷಧ ಮತ್ತು ಅನೈತಿಕತೆಯಿಂದ ದೂರವಿರಲಿಕ್ಕಾಗಿ ಯುವ ಕ್ರೈಸ್ತರಿಗೆ ಶಕ್ತಿಯ ಅಗತ್ಯವಿದೆ. ಇಂತಹ ಪಂಥಾಹ್ವಾನಗಳನ್ನು ಎದುರಿಸಲು “ಸಾಮಾನ್ಯವಾದುದಕ್ಕಿಂತಲೂ ಅತೀತವಾದ ಬಲ”ಕ್ಕಾಗಿ ಯೆಹೋವನಿಗೆ ಮೊರೆಯಿಡುವುದರಲ್ಲಿ ಯಾರೊಬ್ಬರೂ ಹಿಂಜರಿಯಬಾರದು.—2 ಕೊರಿಂಥ 4:7, NW.
‘ಸೋತವನಿಗೆ ತ್ರಾಣವನ್ನು ಅನುಗ್ರಹಿಸುವುದು’
12. ಕ್ರೈಸ್ತ ಶುಶ್ರೂಷೆಯಲ್ಲಿ ಯೆಹೋವನು ನಮಗೆ ಹೇಗೆ ಪುಷ್ಟಿಯನ್ನು ನೀಡುತ್ತಾನೆ?
12 ಯೆಹೋವನ ಸೇವಕರು ಶುಶ್ರೂಷೆಯಲ್ಲಿ ಪಾಲ್ಗೊಳ್ಳುತ್ತಿರುವಾಗ ಆತನು ಅವರಿಗೆ ಶಕ್ತಿಯನ್ನು ನೀಡುತ್ತಾನೆ. ಯೆಶಾಯನ ಪ್ರವಾದನೆಯಲ್ಲಿ ನಾವು ಓದುವುದು: “ಸೋತವನಿಗೆ ತ್ರಾಣವನ್ನು ಅನುಗ್ರಹಿಸಿ ನಿರ್ಬಲನಿಗೆ ಬಹು ಬಲವನ್ನು ದಯಪಾಲಿಸುತ್ತಾನೆ. . . . ಯೆಹೋವನನ್ನು ನಿರೀಕ್ಷಿಸುವವರೋ ಹೊಸ ಬಲವನ್ನು ಹೊಂದುವರು; ಹದ್ದುಗಳಂತೆ ರೆಕ್ಕೆಗಳನ್ನು ಚಾಚಿಕೊಂಡು [ಏರುವರು]; ಓಡಿ ದಣಿಯರು, ನಡೆದು ಬಳಲರು.” (ಯೆಶಾಯ 40:29-31) ಅಪೊಸ್ತಲ ಪೌಲನು ತನ್ನ ಶುಶ್ರೂಷೆಯನ್ನು ಪೂರೈಸಲು ವೈಯಕ್ತಿಕವಾಗಿ ಶಕ್ತಿಯನ್ನು ಪಡೆದುಕೊಂಡನು. ಇದರ ಫಲವಾಗಿ, ಅವನ ಶುಶ್ರೂಷೆಯು ಫಲಪ್ರದವಾಗಿತ್ತು. ಥೆಸಲೊನೀಕದಲ್ಲಿರುವ ಕ್ರೈಸ್ತರಿಗೆ ಅವನು ಬರೆದುದು: “ನಾವು ಸಾರಿದ ಸುವಾರ್ತೆಯು ನಿಮ್ಮಲ್ಲಿ ಬರೀ ಮಾತಾಗಿ ಬಾರದೆ ಶಕ್ತಿಯೊಡನೆಯೂ ಪವಿತ್ರಾತ್ಮದೊಡನೆಯೂ ಬಹು ನಿಶ್ಚಯದೊಡನೆಯೂ ಬಂತೆಂಬದನ್ನೂ ಬಲ್ಲೆವು.” (1 ಥೆಸಲೊನೀಕ 1:5) ಅವನ ಸಾರುವಿಕೆ ಹಾಗೂ ಕಲಿಸುವಿಕೆಯು ಅವನಿಗೆ ಕಿವಿಗೊಟ್ಟವರ ಜೀವಿತಗಳನ್ನು ಮಹತ್ತರವಾಗಿ ಬದಲಾಯಿಸುವ ಶಕ್ತಿಯನ್ನು ಹೊಂದಿದ್ದವು.
13. ವಿರೋಧದ ಮಧ್ಯದಲ್ಲೂ ಪಟ್ಟುಹಿಡಿಯಲು ಯೆರೆಮೀಯನಿಗೆ ಯಾವುದು ಬಲವನ್ನು ನೀಡಿತು?
ಯೆರೆಮೀಯ 20:9) ಇಷ್ಟೊಂದು ಸಂಕಷ್ಟದ ಸಮಯದಲ್ಲಿ ಅವನಿಗೆ ಯಾವುದು ನವಚೈತನ್ಯವುಳ್ಳ ಶಕ್ತಿಯನ್ನು ನೀಡಿತು? “ಯೆಹೋವನಾದರೋ ಭಯಂಕರಶೂರನಾಗಿ ನನ್ನ ಸಂಗಡ ಇದ್ದಾನೆ” ಎಂದು ಯೆರೆಮೀಯನು ಹೇಳಿದನು. (ಯೆರೆಮೀಯ 20:11) ತನ್ನ ಸಂದೇಶ ಹಾಗೂ ತನ್ನ ದೇವದತ್ತ ನೇಮಕದ ಮಹತ್ತ್ವದ ಬಗ್ಗೆ ಯೆರೆಮೀಯನಿಗಿದ್ದ ಅರಿವು, ಅವನು ಯೆಹೋವನ ಉತ್ತೇಜನಕ್ಕೆ ಸ್ಪಂದಿಸುವಂತೆ ಮಾಡಿತು.
13 ಹೀಗಿದ್ದರೂ, ಅನೇಕ ವರ್ಷಗಳಿಂದ ಪದೇ ಪದೇ ಪ್ರಚಾರಮಾಡಿ, ಜನರು ಸ್ಪಂದಿಸದಿರುವ ಟೆರಿಟೊರಿಯಲ್ಲಿ ನಾವು ಉದಾಸೀನ ಮನೋಭಾವದ ಜನರನ್ನು ಭೇಟಿಯಾಗುವಾಗ ಎದೆಗುಂದಸಾಧ್ಯವಿದೆ. ಜನರ ವಿರೋಧ, ಕುಚೋದ್ಯ ಹಾಗೂ ಉದಾಸೀನಭಾವದಿಂದ ಯೆರೆಮೀಯನು ತದ್ರೀತಿಯಲ್ಲಿ ನಿರುತ್ಸಾಹಗೊಂಡನು. “ನಾನು ಯೆಹೋವನ ವಿಷಯವನ್ನು ಪ್ರಕಟಿಸೆನು, ಆತನ ಹೆಸರಿನಲ್ಲಿ ಇನ್ನು ಮಾತಾಡೆನು” ಎಂದು ಅವನು ಮನಸ್ಸಿನಲ್ಲಿಯೇ ಅಂದುಕೊಂಡನು. ಆದರೆ ಅವನಿಗೆ ಸುಮ್ಮನಿರಲು ಸಾಧ್ಯವಾಗಲಿಲ್ಲ. ಅವನ ಸಂದೇಶವು “ಉರಿಯುವ ಬೆಂಕಿಯು [ಅವನ] ಎಲುಬುಗಳಲ್ಲಿ ಅಡಕವಾಗಿದೆಯೋ ಎಂಬಂತೆ” ಇತ್ತು. (ಘಾಸಿಗೊಳಿಸುವ ಶಕ್ತಿ ಹಾಗೂ ವಾಸಿಮಾಡುವ ಶಕ್ತಿ
14. (ಎ) ನಾಲಿಗೆಯು ಎಷ್ಟು ಶಕ್ತಿಶಾಲಿಯಾದ ಅಂಗವಾಗಿದೆ? (ಬಿ) ನಾಲಿಗೆಯು ಮಾಡಸಾಧ್ಯವಿರುವ ಹಾನಿಯನ್ನು ತೋರಿಸಲು ಕೆಲವು ಉದಾಹರಣೆಗಳನ್ನು ನೀಡಿರಿ.
14 ನಮ್ಮಲ್ಲಿರುವ ಎಲ್ಲ ಶಕ್ತಿಯು ದೇವರಿಂದ ನೇರವಾಗಿ ಬಂದದ್ದಾಗಿರುವುದಿಲ್ಲ. ಉದಾಹರಣೆಗೆ, ನಾಲಿಗೆಗೆ ಘಾಸಿಗೊಳಿಸುವ ಹಾಗೂ ವಾಸಿಮಾಡುವಂಥ ಎರಡೂ ಶಕ್ತಿಯಿದೆ. “ಜೀವನಮರಣಗಳು ನಾಲಿಗೆಯ ವಶ” ಎಂದು ಸೊಲೊಮೋನನು ಎಚ್ಚರಿಸುತ್ತಾನೆ. (ಜ್ಞಾನೋಕ್ತಿ 18:21) ಹವ್ವಳೊಂದಿಗಿನ ಸೈತಾನನ ಸಂಕ್ಷಿಪ್ತ ಸಂಭಾಷಣೆಯ ಫಲಿತಾಂಶಗಳು, ನುಡಿಗಳು ಎಷ್ಟೊಂದು ವ್ಯಾಪಕವಾದ ಹಾನಿಯನ್ನು ಉಂಟುಮಾಡಬಲ್ಲವು ಎಂಬುದನ್ನು ತೋರಿಸುತ್ತವೆ. (ಆದಿಕಾಂಡ 3:1-5; ಯಾಕೋಬ 3:5) ನಾವು ಸಹ ನಮ್ಮ ನಾಲಿಗೆಯಿಂದಾಗಿ ತುಂಬ ಹಾನಿಯನ್ನು ಉಂಟುಮಾಡಬಲ್ಲೆವು. ಯುವತಿಯೊಬ್ಬಳ ತೂಕದ ಬಗ್ಗೆ ಹೀನಾಯವಾಗಿ ಮಾತಾಡುವುದು ಅವಳನ್ನು ಆ್ಯನರೆಕ್ಸಿಯಾ (ಆಹಾರಮಾಂದ್ಯ) ವ್ಯಾಧಿಗೆ ತುತ್ತಾಗುವಂತೆ ಮಾಡಬಹುದು. ಸ್ವಲ್ಪವೂ ಯೋಚನೆ ಮಾಡದೇ ಯಾವುದೋ ಒಂದು ಸುಳ್ಳುಸುದ್ದಿಯನ್ನು ಹಬ್ಬಿಸುವುದು ಅಜೀವ ಪರ್ಯಂತದ ಒಂದು ಸ್ನೇಹವನ್ನು ಕಡಿದುಹಾಕಬಹುದು. ಹೌದು, ನಮ್ಮ ನಾಲಿಗೆಗೆ ಕಡಿವಾಣವನ್ನು ಹಾಕುವುದು ಆವಶ್ಯಕ.
15. ಆತ್ಮೋನ್ನತಿಮಾಡಲು ಹಾಗೂ ವಾಸಿಮಾಡಲು ನಮ್ಮ ನಾಲಿಗೆಯನ್ನು ನಾವು ಹೇಗೆ ಉಪಯೋಗಿಸಸಾಧ್ಯವಿದೆ?
15 ಆದರೂ, ನಾಲಿಗೆಯು ಒಳಿತನ್ನೂ ಉಂಟುಮಾಡಬಲ್ಲದು ಮತ್ತು ಹಾನಿಯನ್ನೂ ತಂದೊಡ್ಡಬಲ್ಲದು. ಬೈಬಲಿನ ಜ್ಞಾನೋಕ್ತಿಯು ಹೇಳುವುದು: “ಕತ್ತಿತಿವಿದ ಹಾಗೆ ದುಡುಕಿ ಮಾತಾಡುವವರುಂಟು; ಮತಿವಂತರ ಮಾತೇ ಮುದ್ದು.” (ಜ್ಞಾನೋಕ್ತಿ 12:18) ಬುದ್ಧಿವಂತ ಕ್ರೈಸ್ತರು ತಮ್ಮ ನಾಲಿಗೆಯ ಶಕ್ತಿಯನ್ನು, ಖಿನ್ನರಿಗೂ ವಿಯೋಗಿಗಳಿಗೂ ಸಾಂತ್ವನ ನೀಡಲಿಕ್ಕಾಗಿ ಉಪಯೋಗಿಸುತ್ತಾರೆ. ಸಮಾನಸ್ಥರ ಹಾನಿಕಾರಕ ಒತ್ತಡದ ವಿರುದ್ಧ ಸೆಣೆಸಾಡುತ್ತಿರುವ ಹದಿವಯಸ್ಕರಿಗೆ ಸಹಾನುಭೂತಿಯುಳ್ಳ ನುಡಿಗಳು ಉತ್ತೇಜನದಾಯಕವಾಗಿರುವವು. ಯೋಚನೆಮಾಡಿ ನುಡಿಯಲಾಗುವ ಮಾತುಗಳು, ವೃದ್ಧ ಸಹೋದರ ಸಹೋದರಿಯರ ಆವಶ್ಯಕತೆ ನಮಗೆ ಇನ್ನೂ ಇದೆ ಹಾಗೂ ನಾವು ಅವರನ್ನು ಈಗಲೂ ಪ್ರೀತಿಸುತ್ತೇವೆ ಎಂಬ ಪುನರಾಶ್ವಾಸನೆಯನ್ನು ನೀಡಸಾಧ್ಯವಿದೆ. ದಯಾಭರಿತ ನುಡಿಗಳು ಅಸ್ವಸ್ಥರ ಮನಕ್ಕೆ ಉಲ್ಲಾಸವನ್ನು ತರುವವು. ಎಲ್ಲಕ್ಕಿಂತಲೂ ಮಿಗಿಲಾಗಿ, ಕಿವಿಗೊಡುವವರಿಗೆಲ್ಲ ಶಕ್ತಿಶಾಲಿಯಾದ ರಾಜ್ಯ ಸಂದೇಶವನ್ನು ಹೇಳುವುದಕ್ಕೆ ನಾವು ನಮ್ಮ ನಾಲಿಗೆಯನ್ನು ಬಳಸಸಾಧ್ಯವಿದೆ. ನಮ್ಮ ಹೃದಯದಲ್ಲಿ ದೇವರ ವಾಕ್ಯವಿರುವಲ್ಲಿ, ನಾವು ಅದನ್ನು ಘೋಷಿಸಲು ಶಕ್ತರಾಗಿರುವೆವು. ಬೈಬಲು ಹೇಳುವುದು: “ಉಪಕಾರಮಾಡುವದಕ್ಕೆ ನಿನ್ನ ಕೈಲಾದಾಗ ಹೊಂದತಕ್ಕವರಿಗೆ ಅದನ್ನು ತಪ್ಪಿಸಬೇಡ.”—ಜ್ಞಾನೋಕ್ತಿ 3:27.
ಅಧಿಕಾರದ ಶಕ್ತಿಯ ಯೋಗ್ಯ ಬಳಕೆ
16, 17. ಹಿರಿಯರು, ಹೆತ್ತವರು, ಗಂಡಂದಿರು ಮತ್ತು ಹೆಂಡತಿಯರು ತಮ್ಮ ದೇವದತ್ತ ಅಧಿಕಾರವನ್ನು ಪ್ರಯೋಗಿಸುವಾಗ ಯೆಹೋವನನ್ನು ಹೇಗೆ ಅನುಕರಿಸಸಾಧ್ಯವಿದೆ?
16 ಯೆಹೋವನು ಸರ್ವಶಕ್ತನಾಗಿರುವುದಾದರೂ ಆತನು ಸಭೆಯನ್ನು ಪ್ರೀತಿಯಿಂದ ಆಳುತ್ತಾನೆ. (1 ಯೋಹಾನ 4:8) ಆತನನ್ನು ಅನುಕರಿಸುತ್ತಾ, ಕ್ರೈಸ್ತ ಮೇಲ್ವಿಚಾರಕರು ತಮ್ಮ ಅಧಿಕಾರವನ್ನು ದುರುಪಯೋಗಿಸದೆ, ದೇವರ ಹಿಂಡನ್ನು ಪ್ರೀತಿಯಿಂದ ನೋಡಿಕೊಳ್ಳಲು ಉಪಯೋಗಿಸುತ್ತಾರೆ. ಮೇಲ್ವಿಚಾರಕರಿಗೆ ಕೆಲವೊಮ್ಮೆ ‘ಖಂಡಿಸುವ, ಗದರಿಸುವ, ಎಚ್ಚರಿಸುವ’ ಅಗತ್ಯವಿರುತ್ತದೆ ಎಂಬುದು ಖಂಡಿತ. ಆದರೆ ಅವರು ಇದನ್ನು “ದೀರ್ಘಶಾಂತಿ ಮತ್ತು ಬೋಧಿಸುವ ಕಲೆಯೊಂದಿಗೆ” ಮಾಡುತ್ತಾರೆ. (2 ತಿಮೊಥೆಯ 4:2, NW) ಸಭೆಯಲ್ಲಿ ಅಧಿಕಾರದ ಸ್ಥಾನದಲ್ಲಿರುವವರಿಗೆ ಅಪೊಸ್ತಲ ಪೇತ್ರನು ಬರೆದ ಮಾತುಗಳ ಕುರಿತು ಹಿರಿಯರು ನಿರಂತರವಾಗಿ ಮನನ ಮಾಡುತ್ತಾರೆ. ಅದು ಹೇಳುವುದು: “ನಿಮ್ಮಲ್ಲಿರುವ ದೇವರ ಮಂದೆಯನ್ನು ಕಾಯಿರಿ. ಬಲಾತ್ಕಾರದಿಂದಲ್ಲ ದೇವರ ಚಿತ್ತದ ಪ್ರಕಾರ ಇಷ್ಟಪೂರ್ವಕವಾಗಿಯೂ ನೀಚವಾದ ದ್ರವ್ಯಾಶೆಯಿಂದಲ್ಲ ಸಿದ್ಧಮನಸ್ಸಿನಿಂದಲೂ, ಮೇಲ್ವಿಚಾರಣೆಮಾಡಿರಿ. ದೇವರು ನಿಮ್ಮ ವಶದಲ್ಲಿಟ್ಟಿರುವ ಸಭೆಗಳ ಮೇಲೆ ದೊರೆತನಮಾಡುವವರಂತೆ ನಡೆಯದೆ ಮಂದೆಗೆ ಮಾದರಿಯಾಗಿಯೇ ನಡೆದುಕೊಳ್ಳಿರಿ.”—1 ಪೇತ್ರ 5:2, 3; 1 ಥೆಸಲೊನೀಕ 2:7, 8.
17 ಹೆತ್ತವರು ಹಾಗೂ ಗಂಡಂದಿರು ಸಹ ಯೆಹೋವನಿಂದ ಅಧಿಕಾರವನ್ನು ಪಡೆದುಕೊಂಡಿದ್ದಾರೆ ಮತ್ತು ಈ ಶಕ್ತಿಯನ್ನು ಅವರು, ಸಹಾಯಮಾಡಲು, ಪೋಷಿಸಲು ಹಾಗೂ ಸಲಹಲು ಉಪಯೋಗಿಸತಕ್ಕದ್ದು. (ಎಫೆಸ 5:22, 28-30; 6:4) ಅಧಿಕಾರವನ್ನು ಪ್ರೀತಿಪರವಾದ ವಿಧದಲ್ಲಿ ಪರಿಣಾಮಕಾರಿಯಾಗಿ ಪ್ರಯೋಗಿಸಸಾಧ್ಯವಿದೆ ಎಂಬುದನ್ನು ಯೇಸುವಿನ ಉದಾಹರಣೆಯು ತೋರಿಸುತ್ತದೆ. ಶಿಸ್ತು ಸಮತೋಲನವುಳ್ಳದ್ದೂ ಸುಸಂಗತವಾದದ್ದೂ ಆಗಿರುವಲ್ಲಿ, ಮಕ್ಕಳು ಮನಗುಂದಿದವರಾಗುವುದಿಲ್ಲ. (ಕೊಲೊಸ್ಸೆ 3:21) ಕ್ರೈಸ್ತ ಗಂಡಂದಿರು ಪ್ರೀತಿಯಿಂದ ತಮ್ಮ ತಲೆತನವನ್ನು ನಿಭಾಯಿಸುವಲ್ಲಿ ಮತ್ತು ಹೆಂಡತಿಯರು ತಮ್ಮ ಗಂಡಂದಿರ ತಲೆತನಕ್ಕೆ ಆಳವಾದ ಗೌರವವನ್ನು ತೋರಿಸುವಲ್ಲಿ, ಹಾಗೂ ಹೆಂಡತಿಯರು ದಬ್ಬಾಳಿಕೆ ನಡೆಸಲಿಕ್ಕಾಗಿ ಅಥವಾ ಮೇಲುಗೈ ಸಾಧಿಸಲಿಕ್ಕಾಗಿ ದೇವದತ್ತ ಪರಿಧಿಯನ್ನು ದಾಟಿಹೋಗದಿರುವಲ್ಲಿ, ವಿವಾಹಗಳು ಬಲಪಡಿಸಲ್ಪಡುತ್ತವೆ.—ಎಫೆಸ 5:28, 33; 1 ಪೇತ್ರ 3:7.
18. (ಎ) ನಮ್ಮ ಕೋಪವನ್ನು ಹತೋಟಿಯಲ್ಲಿಡುವುದರಲ್ಲಿ ಯೆಹೋವನ ಮಾದರಿಯನ್ನು ನಾವು ಯಾವ ರೀತಿಯಲ್ಲಿ ಅನುಕರಿಸಬೇಕು? (ಬಿ) ಅಧಿಕಾರದಲ್ಲಿರುವವರು ತಮ್ಮ ಆರೈಕೆಯ ಕೆಳಗಿರುವವರ ಮನಸ್ಸಿನಲ್ಲಿ ಯಾವುದನ್ನು ತುಂಬಿಸಲು ಯತ್ನಿಸಬೇಕು?
18 ಕುಟುಂಬದಲ್ಲಿ ಮತ್ತು ಸಭೆಯಲ್ಲಿ ಅಧಿಕಾರವನ್ನು ಹೊಂದಿರುವವರು ತಮ್ಮ ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದರಲ್ಲಿ ವಿಶೇಷವಾಗಿ ಜಾಗರೂಕರಾಗಿರತಕ್ಕದ್ದು. ಏಕೆಂದರೆ ಕೋಪವು ಮನಸ್ಸಿನಲ್ಲಿ ಪ್ರೀತಿಯನ್ನಲ್ಲ, ಬದಲಿಗೆ ಭಯವನ್ನು ಹುಟ್ಟಿಸುತ್ತದೆ. ಪ್ರವಾದಿಯಾದ ನಹೂಮನು ಹೇಳಿದ್ದು: “ಯೆಹೋವನು ದೀರ್ಘಶಾಂತನಾಗಿದ್ದರೂ [“ಮಂದಕೋಪಿಯು,” NW] ಆತನ ಶಕ್ತಿಯು ಅಪಾರ.” (ನಹೂಮ 1:3; ಕೊಲೊಸ್ಸೆ 3:19) ಕೋಪವನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಬಲದ ಒಂದು ಸೂಚನೆಯಾಗಿದೆ. ಆದರೆ ಕೋಪದಿಂದ ಕಿಡಿಕಾರುವುದು ಬಲಹೀನತೆಯ ಚಿಹ್ನೆಯಾಗಿದೆ. (ಜ್ಞಾನೋಕ್ತಿ 16:32) ಕುಟುಂಬದಲ್ಲಿಯೂ ಸಭೆಯಲ್ಲಿಯೂ ಯೆಹೋವನ ಕಡೆಗೆ ಪ್ರೀತಿ, ಒಬ್ಬರು ಇನ್ನೊಬ್ಬರ ಕಡೆಗೆ ಪ್ರೀತಿ, ಮತ್ತು ಸರಿಯಾದ ತತ್ತ್ವಗಳ ಕಡೆಗೆ ಪ್ರೀತಿಯನ್ನು ತುಂಬಿಸುವುದೇ ಗುರಿಯಾಗಿರುತ್ತದೆ. ಪ್ರೀತಿಯು ಐಕ್ಯದ ಅತ್ಯಂತ ಬಲವಾದ ಬಂಧವಾಗಿದೆ ಮತ್ತು ಸರಿಯಾದುದನ್ನು ಮಾಡಲಿಕ್ಕಾಗಿ ಬಲವಾದ ಪ್ರಚೋದನೆಯಾಗಿದೆ.—1 ಕೊರಿಂಥ 13:8, 13; ಕೊಲೊಸ್ಸೆ 3:14.
19. ಯೆಹೋವನು ಯಾವ ಸಾಂತ್ವನದಾಯಕ ಆಶ್ವಾಸನೆಯನ್ನು ನೀಡುತ್ತಾನೆ, ಮತ್ತು ಅದಕ್ಕೆ ನಾವು ಯಾವ ರೀತಿಯಲ್ಲಿ ಸ್ಪಂದಿಸಬೇಕು?
19 ಯೆಹೋವನನ್ನು ತಿಳಿದುಕೊಳ್ಳುವುದರ ಅರ್ಥ, ಆತನ ಶಕ್ತಿಯನ್ನು ಅಂಗೀಕರಿಸುವುದೇ ಆಗಿದೆ. ಯೆಶಾಯನ ಮುಖಾಂತರ ಯೆಹೋವನು ಹೇಳಿದ್ದು: “ನೀನು ಗ್ರಹಿಸಲಿಲ್ಲವೋ? ಕೇಳಲಿಲ್ಲವೋ? ಯೆಹೋವನು ನಿರಂತರದೇವರೂ ಭೂಮಿಯ ಕಟ್ಟಕಡೆಗಳನ್ನು ನಿರ್ಮಿಸಿದವನೂ ಆಗಿದ್ದಾನೆ; ಆತನು ದಣಿದು ಬಳಲುವದಿಲ್ಲ.” (ಯೆಶಾಯ 40:28) ಯೆಹೋವನ ಶಕ್ತಿಯು ಬರಿದುಮಾಡಲಾಗದ್ದಾಗಿದೆ. ನಾವು ನಮ್ಮ ಮೇಲೆ ಆತುಕೊಳ್ಳುವ ಬದಲು ದೇವರ ಮೇಲೆ ಆತುಕೊಳ್ಳುವುದಾದರೆ, ಆತನು ಎಂದಿಗೂ ನಮ್ಮ ಕೈಬಿಡಲಾರನು. ಆತನು ನಮಗೆ ಆಶ್ವಾಸನೆಯನ್ನೀಯುವುದು: “ನಾನೇ ನಿನ್ನೊಂದಿಗಿದ್ದೇನೆ; ದಿಗ್ಭ್ರಮೆಗೊಳ್ಳದಿರು, ನಾನೇ ನಿನ್ನ ದೇವರು; ನಾನು ನಿನ್ನನ್ನು ಬಲಪಡಿಸುತ್ತೇನೆ; ಹೌದು, ನಿನಗೆ ಸಹಾಯಕೊಡುತ್ತೇನೆ; ನನ್ನ ಧರ್ಮದ ಬಲಗೈಯನ್ನು ನಿನಗೆ ಆಧಾರಮಾಡುತ್ತೇನೆ.” (ಯೆಶಾಯ 41:10) ಆತನ ಪ್ರೀತಿಪರ ಕಾಳಜಿಗೆ ನಾವು ಯಾವ ರೀತಿಯಲ್ಲಿ ಸ್ಪಂದಿಸಬೇಕು? ಯೇಸುವಿನಂತೆ, ಯೆಹೋವನು ನಮಗೆ ಕೊಡುವಂತಹ ಯಾವುದೇ ರೀತಿಯ ಅಧಿಕಾರದ ಶಕ್ತಿಯನ್ನು ಯಾವಾಗಲೂ ಇತರರ ಸಹಾಯಕ್ಕಾಗಿ ಹಾಗೂ ಆತ್ಮೋನ್ನತಿಗಾಗಿ ನಾವು ಬಳಸೋಣ. ನಮ್ಮ ನಾಲಿಗೆಯು ಇತರರಿಗೆ ಹಾನಿಕರವಾಗಿರುವ ಬದಲು ವಾಸಿಕರವಾಗಿರುವಂತೆ ಅದಕ್ಕೆ ಕಡಿವಾಣ ಹಾಕೋಣ. ಅಷ್ಟುಮಾತ್ರವಲ್ಲದೆ, ನಾವು ಸದಾ ಆತ್ಮಿಕವಾಗಿ ಎಚ್ಚರವಾಗಿದ್ದು, ನಂಬಿಕೆಯಲ್ಲಿ ದೃಢವಾಗಿ ನಿಂತು, ನಮ್ಮ ಮಹಾನ್ ಸೃಷ್ಟಿಕರ್ತನಾದ ಯೆಹೋವ ದೇವರ ಶಕ್ತಿಯಲ್ಲಿ ಬಲಗೊಳ್ಳೋಣ.—1 ಕೊರಿಂಥ 16:13.
[ಪಾದಟಿಪ್ಪಣಿಗಳು]
^ ಪ್ಯಾರ. 9 ಶತಮಾನಗಳ ಹಿಂದೆ ದೇವಾಲಯದಲ್ಲಿಡಲ್ಪಟ್ಟಿದ್ದ ಮೋಶೆಯ ನಿಯಮಶಾಸ್ತ್ರದ ಮೂಲಪ್ರತಿಯನ್ನು ಯೆಹೂದ್ಯರು ಕಂಡುಹಿಡಿದಿದ್ದಿರಬಹುದು.
ನೀವು ವಿವರಿಸಬಲ್ಲಿರೋ?
• ಯೆಹೋವನು ತನ್ನ ಶಕ್ತಿಯನ್ನು ಹೇಗೆ ಬಳಸುತ್ತಾನೆ?
• ಯೆಹೋವನ ಶಕ್ತಿಯನ್ನು ನಾವು ಯಾವ ವಿಧಗಳಲ್ಲಿ ಪಡೆದುಕೊಳ್ಳಸಾಧ್ಯವಿದೆ?
• ನಾಲಿಗೆಯ ಶಕ್ತಿಯನ್ನು ಯಾವ ರೀತಿಯಲ್ಲಿ ಪ್ರಯೋಗಿಸಬೇಕು?
• ದೇವದತ್ತ ಅಧಿಕಾರವು ಹೇಗೆ ಒಂದು ಆಶೀರ್ವಾದವಾಗಿರಬಲ್ಲದು?
[ಅಧ್ಯಯನ ಪ್ರಶ್ನೆಗಳು]
[ಪುಟ 15ರಲ್ಲಿರುವ ಚಿತ್ರ]
ಯೇಸು ಇತರರಿಗೆ ಸಹಾಯ ನೀಡಲು ಯೆಹೋವನ ಬಲವನ್ನು ಉಪಯೋಗಿಸಿದನು
[ಪುಟ 17ರಲ್ಲಿರುವ ಚಿತ್ರಗಳು]
ನಮ್ಮ ಹೃದಯದಲ್ಲಿ ದೇವರ ವಾಕ್ಯವಿರುವಲ್ಲಿ, ನಾವು ಅದನ್ನು ಘೋಷಿಸಲು ಶಕ್ತರಾಗಿರುವೆವು