ದೇವರ ಆತ್ಮವು ಇಂದು ಹೇಗೆ ಕೆಲಸಮಾಡುತ್ತಿದೆ?
ದೇವರ ಆತ್ಮವು ಇಂದು ಹೇಗೆ ಕೆಲಸಮಾಡುತ್ತಿದೆ?
ಅವನು ಹುಟ್ಟುವಾಗಲೇ ಕುಂಟನಾಗಿದ್ದನು. ದೇವಾಲಯಕ್ಕೆ ಬರುವವರಿಂದ ಭಿಕ್ಷೆ ಬೇಡುವುದಕ್ಕಾಗಿ ಅವನು ಪ್ರತಿ ದಿನ ಸುಂದರದ್ವಾರವೆಂಬ ಬಾಗಿಲಿನಲ್ಲಿ ಕುಳಿತುಕೊಂಡಿರುತ್ತಿದ್ದನು. ಆದರೆ ಒಂದು ದಿನ ಈ ಅಶಕ್ತ ಭಿಕ್ಷುಕನು, ಕೇವಲ ಕೆಲವೊಂದು ಚಿಕ್ಕ ನಾಣ್ಯಗಳಿಗಿಂತಲೂ ಎಷ್ಟೋ ಹೆಚ್ಚು ಅಮೂಲ್ಯವಾದ ಒಂದು ಕೊಡುಗೆಯನ್ನು ಪಡೆದುಕೊಂಡನು. ಅವನು ವಾಸಿಯಾದನು!—ಅ. ಕೃತ್ಯಗಳು 3:2-8.
ಅಪೊಸ್ತಲ ಪೇತ್ರ ಮತ್ತು ಯೋಹಾನರು, ಅವನನ್ನು ‘ಎತ್ತಿದರು.’ ಆಗ “ಅವನ ಕಾಲುಗಳಿಗೂ ಹರಡುಗಳಿಗೂ ಬಲಬಂತು.” ಹೀಗಿದ್ದರೂ ಅವರು ಆ ವಾಸಿಮಾಡುವಿಕೆಯ ಕೀರ್ತಿಯನ್ನು ತಮಗಾಗಿ ತೆಗೆದುಕೊಳ್ಳಲಿಲ್ಲ. ಯಾಕೆ? ಸ್ವತಃ ಪೇತ್ರನೇ ವಿವರಿಸಿದ್ದು: “ಇಸ್ರಾಯೇಲ್ ಜನರೇ, ನೀವು ಯಾಕೆ ಇದಕ್ಕೆ ಆಶ್ಚರ್ಯಪಡುತ್ತೀರಿ? ನೀವು ನಮ್ಮ ಮೇಲೆ ದೃಷ್ಟಿಯಿಟ್ಟು ನೋಡುವದೇನು? ನಾವು ಸ್ವಂತ ಶಕ್ತಿಯಿಂದಾಗಲಿ ದೇವಭಕ್ತಿಯಿಂದಾಗಲಿ ಇವನನ್ನು ನಡೆಯುವಂತೆ ಮಾಡಿದೆವೆಂದು ಭಾವಿಸಬೇಡಿರಿ.” ಹೌದು, ಇಂತಹ ಒಂದು ಅದ್ಭುತ ಕಾರ್ಯವನ್ನು ತಮ್ಮ ಸ್ವಂತ ಶಕ್ತಿಯಿಂದಲ್ಲ, ಬದಲಾಗಿ ದೇವರ ಪವಿತ್ರಾತ್ಮದಿಂದಲೇ ಮಾಡಲು ಸಾಧ್ಯವಾಯಿತೆಂಬುದನ್ನು ಪೇತ್ರ ಮತ್ತು ಯೋಹಾನರು ಅರಿತಿದ್ದರು.—ಅ. ಕೃತ್ಯಗಳು 3:7-16; 4:29-31.
ಆಗ ತಾನೇ ಹೊಸದಾಗಿ ಸ್ಥಾಪಿತವಾಗಿದ್ದ ಕ್ರೈಸ್ತ ಸಭೆಗೆ ದೇವರ ಬೆಂಬಲವಿತ್ತೆಂಬುದನ್ನು ತೋರಿಸಲಿಕ್ಕಾಗಿ ಅಂತಹ ‘ಮಹತ್ಕಾರ್ಯಗಳು’ ನಡೆಸಲ್ಪಟ್ಟಿದ್ದವು. (ಇಬ್ರಿಯ 2:4) ಆದರೆ ಅವುಗಳ ಉದ್ದೇಶವು ಪೂರೈಸಲ್ಪಟ್ಟ ನಂತರ ಅವು ‘ಇಲ್ಲದಂತಾಗುವವು’ ಎಂದು ಅಪೊಸ್ತಲ ಪೌಲನು ಹೇಳಿದನು. * (1 ಕೊರಿಂಥ 13:8) ಈ ಕಾರಣದಿಂದ, ಇಂದು ನಿಜ ಕ್ರೈಸ್ತ ಸಭೆಯಲ್ಲಿ ದೇವರು ಯಾವುದೇ ರೀತಿಯಲ್ಲಿ ವಾಸಿಮಾಡುವುದನ್ನು, ಪ್ರವಾದನಾತ್ಮಕ ಸಂದೇಶಗಳನ್ನು ನೀಡುವುದನ್ನು, ಅಥವಾ ದೆವ್ವಗಳನ್ನು ಬಿಡಿಸುವುದನ್ನು ನಾವು ನೋಡುವುದಿಲ್ಲ.
ಹಾಗಾದರೆ ಇಂದು ದೇವರ ಪವಿತ್ರಾತ್ಮವು ಯಾವುದೇ ರೀತಿಯಲ್ಲಿ ಕೆಲಸಮಾಡುವುದಿಲ್ಲವೆಂಬುದು ಇದರ ಅರ್ಥವೊ? ಖಂಡಿತವಾಗಿಯೂ ಇಲ್ಲ! ದೇವರ ಆತ್ಮವು ಪ್ರಥಮ ಶತಮಾನದಲ್ಲಿ ಸಕ್ರಿಯವಾಗಿದ್ದ ಮತ್ತು ನಮ್ಮ ದಿನದಲ್ಲಿ ಸಕ್ರಿಯವಾಗಿರುವ ಬೇರೆ ಕೆಲವೊಂದು ವಿಧಗಳನ್ನು ನಾವು ಪರಿಗಣಿಸೋಣ.
“ಸತ್ಯದ ಆತ್ಮ”
ದೇವರ ಪವಿತ್ರಾತ್ಮದ ಒಂದು ಕೆಲಸವು, ಮಾಹಿತಿಯನ್ನು ನೀಡುವುದು, ಜ್ಞಾನೋದಯಗೊಳಿಸುವುದು, ಸತ್ಯಗಳನ್ನು ಪ್ರಕಟಪಡಿಸುವುದೇ ಆಗಿದೆ. ತನ್ನ ಮರಣಕ್ಕೆ ಸ್ವಲ್ಪ ಸಮಯದ ಮುಂಚೆ ಯೇಸು ತನ್ನ ಶಿಷ್ಯರಿಗೆ ಹೇಳಿದ್ದು: “ನಾನು ನಿಮಗೆ ಹೇಳಬೇಕಾದದ್ದು ಇನ್ನೂ ಬಹಳ ಉಂಟು; ಆದರೆ ಸದ್ಯಕ್ಕೆ ಅದನ್ನು ಹೊರಲಾರಿರಿ. ಸತ್ಯದ ಆತ್ಮನು ಬಂದಾಗ ಆತನು ನಿಮ್ಮನ್ನು ನಡಿಸಿಕೊಂಡು ಹೋಗಿ ಸಕಲ ವಿಷಯದಲ್ಲಿಯೂ ಸತ್ಯಕ್ಕೆ ಸೇರಿಸುವನು.”—ಯೋಹಾನ 16:12, 13.
ಸಾ.ಶ. 33ರ ಪಂಚಾಶತ್ತಮದ ದಿನದಂದು ಸುಮಾರು 120 ಶಿಷ್ಯರು ಯೆರೂಸಲೇಮಿನ ಒಂದು ಮೇಲಣ ಕೋಣೆಯಲ್ಲಿ ಒಟ್ಟುಗೂಡಿದ್ದು, ಪವಿತ್ರಾತ್ಮದಿಂದ ದೀಕ್ಷಾಸ್ನಾನಗೊಳಿಸಲ್ಪಟ್ಟಾಗ, ಅವರ ಮೇಲೆ ‘ಸತ್ಯದ ಆತ್ಮವು’ ಸುರಿಸಲ್ಪಟ್ಟಿತು. (ಅ. ಕೃತ್ಯಗಳು 2:1-4) ಪಂಚಾಶತ್ತಮದ ಆ ವಾರ್ಷಿಕ ಉತ್ಸವಕ್ಕೆ ಹಾಜರಾಗಿದ್ದವರಲ್ಲಿ ಅಪೊಸ್ತಲ ಪೇತ್ರನೂ ಒಬ್ಬನಾಗಿದ್ದನು. ಪವಿತ್ರಾತ್ಮಭರಿತನಾಗಿ ಪೇತ್ರನು “ಎದ್ದು ನಿಂತು” ಯೇಸುವಿನ ಕುರಿತಾದ ಕೆಲವೊಂದು ಸತ್ಯಗಳನ್ನು ವಿವರಿಸಿದನು ಅಥವಾ ಸ್ಪಷ್ಟೀಕರಿಸಿದನು. ಉದಾಹರಣೆಗಾಗಿ, “ನಜರೇತಿನ ಯೇಸು” ಹೇಗೆ ‘ದೇವರ ಬಲಗೈಯಿಂದ ಉನ್ನತಸ್ಥಾನಕ್ಕೆ ಏರಿಸಲ್ಪಟ್ಟನು’ ಎಂಬುದನ್ನು ಅವನು ವಿವರವಾಗಿ ತಿಳಿಸಿದನು. (ಅ. ಕೃತ್ಯಗಳು 2:14, 22, 33) “ನೀವು ಶಿಲುಬೆಗೆ ಹಾಕಿಸಿದ ಈ ಯೇಸುವನ್ನೇ ದೇವರು ಒಡೆಯನನ್ನಾಗಿಯೂ ಕ್ರಿಸ್ತನನ್ನಾಗಿಯೂ ಮಾಡಿದ್ದಾನೆಂಬದು ಇಸ್ರಾಯೇಲ್ ಕುಲದವರಿಗೆಲ್ಲಾ ನಿಸ್ಸಂದೇಹವಾಗಿ ತಿಳಿದಿರಲಿ” ಎಂದು ಪೇತ್ರನು ತನಗೆ ಕಿವಿಗೊಡುತ್ತಿದ್ದ ಯೆಹೂದ್ಯರಿಗೆ ಧೈರ್ಯದಿಂದ ಘೋಷಿಸುವಂತೆಯೂ ದೇವರಾತ್ಮವು ಅವನನ್ನು ಪ್ರಚೋದಿಸಿತು. (ಅ. ಕೃತ್ಯಗಳು 2:36) ಪೇತ್ರನ ಆತ್ಮಪ್ರೇರಿತ ಸಂದೇಶದ ಪರಿಣಾಮದಿಂದಾಗಿ, ಸುಮಾರು ಮೂರು ಸಾವಿರ ವ್ಯಕ್ತಿಗಳು ‘ಅವನ ಮಾತಿಗೆ ಒಪ್ಪಿಕೊಂಡು’ ದೀಕ್ಷಾಸ್ನಾನವನ್ನು ಪಡೆದುಕೊಂಡರು. ಈ ರೀತಿಯಲ್ಲಿ, ದೇವರ ಪವಿತ್ರಾತ್ಮವು ಅವರನ್ನು ಸತ್ಯದ ಕಡೆಗೆ ಮಾರ್ಗದರ್ಶಿಸಲು ಸಹಾಯಮಾಡಿತು.—ಅ. ಕೃತ್ಯಗಳು 2:37-41.
ದೇವರ ಪವಿತ್ರಾತ್ಮವು, ಒಬ್ಬ ಶಿಕ್ಷಕನಂತೆ ಮತ್ತು ನೆನಪುಮಾಡುವವನಂತೆಯೂ ಕೆಲಸಮಾಡಿತು. ಯೇಸು ಹೇಳಿದ್ದು: “ಆ ಸಹಾಯಕನು ಅಂದರೆ ನನ್ನ ಹೆಸರಿನಲ್ಲಿ ತಂದೆಯು ಕಳುಹಿಸಿಕೊಡುವ ಪವಿತ್ರಾತ್ಮನೇ ನಿಮಗೆ ಎಲ್ಲವನ್ನು ಉಪದೇಶಿಸಿ ನಾನು ನಿಮಗೆ ಹೇಳಿದ್ದನ್ನೆಲ್ಲಾ ನಿಮ್ಮ ನೆನಪಿಗೆ ತರುವನು.”—ಯೋಹಾನ 14:26.
ಪವಿತ್ರಾತ್ಮವು ಒಬ್ಬ ಶಿಕ್ಷಕನೋಪಾದಿ ಹೇಗೆ ಕೆಲಸಮಾಡಿತು? ಶಿಷ್ಯರು ಈ ಹಿಂದೆ ಯೇಸುವಿನಿಂದ ಕೇಳಿಸಿಕೊಂಡಿದ್ದರೂ ಯೋಹಾನ 18:36; ಅ. ಕೃತ್ಯಗಳು 1:6) ಸಾ.ಶ. 33ರ ಪಂಚಾಶತ್ತಮದ ದಿನದಂದು ಪವಿತ್ರಾತ್ಮವು ಸುರಿಸಲ್ಪಟ್ಟ ನಂತರವೇ ಅಪೊಸ್ತಲರು ಯೇಸುವಿನ ಆ ಮಾತುಗಳ ಅರ್ಥವನ್ನು ಸಂಪೂರ್ಣವಾಗಿ ಗ್ರಹಿಸಲು ಶಕ್ತರಾದರೆಂಬುದು ಸುವ್ಯಕ್ತ.
ಪೂರ್ಣವಾಗಿ ಅರ್ಥಮಾಡಿಕೊಂಡಿರದಂತಹ ಸಂಗತಿಗಳ ಕಡೆಗೆ ದೇವರ ಆತ್ಮವು ಅವರ ಮನಸ್ಸನ್ನು ತೆರೆಯಿತು. ಉದಾಹರಣೆಗಾಗಿ, ಯೇಸುವಿನ ವಿಚಾರಣೆಯ ಸಮಯದಲ್ಲಿ ಅವನು ಯೂದಾಯದ ರೋಮನ್ ದೇಶಾಧಿಪತಿಯಾದ ಪೊಂತ್ಯ ಪಿಲಾತನಿಗೆ “ನನ್ನ ರಾಜ್ಯವು ಈ ಲೋಕದ್ದಲ್ಲ” ಎಂದು ಹೇಳಿದನೆಂಬುದು ಅಪೊಸ್ತಲರಿಗೆ ಗೊತ್ತಿತ್ತು. ಆದರೂ, ಸುಮಾರು 40 ದಿನಗಳ ಬಳಿಕ ಯೇಸುವಿನ ಸ್ವರ್ಗಾರೋಹಣವಾಗುತ್ತಿದ್ದ ಸಮಯದಲ್ಲಿ ಕೂಡ, ಅಪೊಸ್ತಲರಿಗೆ ಆ ರಾಜ್ಯವು ಇದೇ ಭೂಮಿಯ ಮೇಲೆ ಸ್ಥಾಪಿಸಲ್ಪಡುವುದು ಎಂಬ ತಪ್ಪಭಿಪ್ರಾಯವಿತ್ತು. (ಯೇಸುವಿನ ಅನೇಕ ಬೋಧನೆಗಳನ್ನು ಜ್ಞಾಪಕಕ್ಕೆ ತರುವ ಮೂಲಕವೂ ದೇವರಾತ್ಮವು ನೆನಪುಮಾಡುವವನಂತೆ ಕೆಲಸಮಾಡಿತು. ಉದಾಹರಣೆಗಾಗಿ, ಕ್ರಿಸ್ತನ ಮರಣ ಮತ್ತು ಪುನರುತ್ಥಾನದ ಕುರಿತಾದ ಪ್ರವಾದನೆಗಳು, ಪವಿತ್ರಾತ್ಮದ ಸಹಾಯದಿಂದ ಅವರಿಗೆ ಈಗ ಸರಿಯಾದ ರೀತಿಯಲ್ಲಿ ಅರ್ಥವಾದವು. (ಮತ್ತಾಯ 16:21; ಯೋಹಾನ 12:16) ಯೇಸುವಿನ ಬೋಧನೆಗಳನ್ನು ಪುನಃ ಜ್ಞಾಪಕಕ್ಕೆ ತರುವ ಮೂಲಕ, ಆ ಅಪೊಸ್ತಲರು ಅರಸರು, ದಂಡಾಧಿಕಾರಿಗಳು, ಮತ್ತು ಧಾರ್ಮಿಕ ಮುಖಂಡರ ಮುಂದೆ ತಮ್ಮ ನಿಲುವನ್ನು ವಿವರಿಸಲು ಶಕ್ತರಾದರು.—ಮಾರ್ಕ 13:9-11; ಅ. ಕೃತ್ಯಗಳು 4:5-20.
ಇನ್ನೂ ಹೆಚ್ಚಾಗಿ, ದೇವರ ಪವಿತ್ರಾತ್ಮವು ಆದಿ ಕ್ರೈಸ್ತರನ್ನು ಶುಶ್ರೂಷೆಯಲ್ಲಿ ಫಲಪ್ರದವಾದ ಕ್ಷೇತ್ರಕ್ಕೆ ನಿರ್ದೇಶಿಸಲು ಸಹಾಯಮಾಡಿತು. (ಅ. ಕೃತ್ಯಗಳು 16:6-10) ಇಡೀ ಮಾನವಕುಲದ ಪ್ರಯೋಜನಕ್ಕಾಗಿ, ದೇವರ ವಾಕ್ಯವಾದ ಬೈಬಲನ್ನು ಬರೆಯುವುದರಲ್ಲಿ ಪಾಲ್ಗೊಳ್ಳುವಂತೆಯೂ ದೇವರ ಆತ್ಮವು ಆದಿ ಕ್ರೈಸ್ತರನ್ನು ಪ್ರೇರಿಸಿತು. (2 ತಿಮೊಥೆಯ 3:16) ಸ್ಪಷ್ಟವಾಗಿಯೇ, ಪ್ರಥಮ ಶತಮಾನದಲ್ಲಿ ಪವಿತ್ರಾತ್ಮವು ನಾನಾ ವಿಧಗಳಲ್ಲಿ ಸಕ್ರಿಯವಾಗಿತ್ತು. ಕೇವಲ ಅದ್ಭುತಗಳನ್ನು ನಡೆಸಲಿಕ್ಕಾಗಿ ಅದು ಒದಗಿಸಲ್ಪಟ್ಟಿರಲಿಲ್ಲ.
ನಮ್ಮ ದಿನಗಳಲ್ಲಿ ಪವಿತ್ರಾತ್ಮದ ಕೆಲಸ
ತದ್ರೀತಿಯಲ್ಲಿ ಪವಿತ್ರಾತ್ಮವು ನಮ್ಮ ದಿನಗಳಲ್ಲಿರುವ ಸತ್ಯ ಕ್ರೈಸ್ತರ ಪರವಾಗಿ ಕೆಲಸಮಾಡಿದೆ. ಇದು 19ನೆಯ ಶತಮಾನದ ಕೊನೆಯ ಭಾಗದಲ್ಲಿ, ಅಮೆರಿಕದ ಪೆನ್ಸಿಲ್ವೇನಿಯಾದಲ್ಲಿ ಆ್ಯಲಿಗೆನಿ ಎಂಬ ಸ್ಥಳದಲ್ಲಿದ್ದ ಬೈಬಲ್ ವಿದ್ಯಾರ್ಥಿಗಳ ಚಿಕ್ಕ ಗುಂಪಿನವರಿಗೆ ಸುವ್ಯಕ್ತವಾಯಿತು. ಈ ಶ್ರದ್ಧಾಪೂರ್ವಕ ಬೈಬಲ್ ವಿದ್ಯಾರ್ಥಿಗಳು, “ಸತ್ಯ”ವನ್ನು ತಿಳಿದುಕೊಳ್ಳಲು ಹಾತೊರೆದರು.—ಯೋಹಾನ 8:32; 16:13.
ಈ ಗುಂಪಿನ ಒಬ್ಬ ಸದಸ್ಯರಾಗಿದ್ದ ಚಾರ್ಲ್ಸ್ ಟೇಸ್ ರಸಲರು ಆತ್ಮಿಕ ಸತ್ಯಕ್ಕಾಗಿ ತಾವು ನಡೆಸುತ್ತಿದ್ದ ಅನ್ವೇಷಣೆಯ ಕುರಿತಾಗಿ ಹೇಳಿದ್ದು: “ತಡೆಯಾಗಿರಬಹುದಾದ ಯಾವುದೇ ರೀತಿಯ ಪೂರ್ವಾಭಿಪ್ರಾಯವನ್ನು ನನ್ನ ಹೃದಮನಗಳಿಂದ ತೆಗೆದುಹಾಕಲು ಶಕ್ತನಾಗುವಂತೆ ಮತ್ತು ಸರಿಯಾದ ತಿಳುವಳಿಕೆಯನ್ನು ಪಡೆದುಕೊಳ್ಳಲಿಕ್ಕಾಗಿ ಆತನ ಆತ್ಮದಿಂದ ನಡೆಸಲ್ಪಡುವಂತೆ . . . ನಾನು ಪ್ರಾರ್ಥಿಸಿದೆ.” ದೇವರು ಈ ನಮ್ರ ಪ್ರಾರ್ಥನೆಯನ್ನು ಉತ್ತರಿಸಿದನು.
ರಸಲ್ ಮತ್ತು ಅವರ ಸಂಗಡಿಗರು ಶಾಸ್ತ್ರಗಳಲ್ಲಿರುವ ತಮ್ಮ ಅನ್ವೇಷಣೆಯನ್ನು ಶ್ರದ್ಧಾಪೂರ್ವಕವಾಗಿ ನಡೆಸಿದಂತೆ, ಅನೇಕ ವಿಷಯಗಳು ಸ್ಪಷ್ಟವಾದವು. “ಅನೇಕ ಶತಮಾನಗಳಿಂದ ವಿವಿಧ ಪಂಥಗಳು ಮತ್ತು ಗುಂಪುಗಳು ಬೈಬಲಿನ ಬೋಧನೆಗಳನ್ನು ವಿಭಜಿಸಿ, ಸ್ವಲ್ಪ ಅಥವಾ ಹೆಚ್ಚು ಪ್ರಮಾಣದಲ್ಲಿ ಮಾನವ ಊಹಾಪೋಹಗಳನ್ನು ಮತ್ತು ದೋಷಗಳನ್ನು ಅವುಗಳೊಂದಿಗೆ ಬೆರಸಿದ್ದರೆಂಬುದನ್ನು ನಾವು ಕಂಡುಹಿಡಿದೆವು” ಎಂದು ರಸಲರು ವಿವರಿಸಿದರು. ಇದರಿಂದಾಗಿ, ಅವರು ಹೇಳಿದಂತೆ “ಸತ್ಯದ ಸ್ಥಳಾಂತರೀಕರಣ” ಆಯಿತು. ಅನೇಕ ಶತಮಾನಗಳಿಂದ ಕ್ರೈಸ್ತಪ್ರಪಂಚದೊಳಗೆ ನುಸುಳಿದ್ದ ವಿಧರ್ಮಿ ಬೋಧನೆಗಳ ಸಂಗ್ರಹದಡಿಯಲ್ಲಿ ಶಾಸ್ತ್ರೀಯ ಸತ್ಯಗಳು ಹೂಳಲ್ಪಟ್ಟವು. ಆದರೆ ಸತ್ಯವನ್ನು ತಿಳಿದುಕೊಂಡು ಅದನ್ನು ಘೋಷಿಸಲು ರಸಲರು ದೃಢಸಂಕಲ್ಪವನ್ನು ಮಾಡಿದ್ದರು.
ಝಾಯನ್ಸ್ ವಾಚ್‌ಟವರ್ ಆ್ಯಂಡ್ ಹೆರಾಲ್ಡ್ ಆಫ್ ಕ್ರೈಸ್ಟ್ಸ್ ಪ್ರೆಸೆನ್ಸ್ ಪತ್ರಿಕೆಯ ಪುಟಗಳ ಮೂಲಕ, ರಸಲ್ ಮತ್ತು ಅವರ ಸಂಗಡಿಗರು, ದೇವರನ್ನು ತಪ್ಪಾಗಿ ಪ್ರತಿನಿಧಿಸುವ ಸುಳ್ಳು ಧಾರ್ಮಿಕ ಬೋಧನೆಗಳನ್ನು ಧೈರ್ಯದಿಂದ ಖಂಡಿಸಿದರು. ಜನಸಾಮಾನ್ಯ ಧಾರ್ಮಿಕ ಅಭಿಪ್ರಾಯಕ್ಕೆ ವಿರುದ್ಧವಾಗಿ, ಆತ್ಮವು ಸಾಯುತ್ತದೆ, ನಾವು ಸತ್ತಾಗ ಸಮಾಧಿಗೆ ಹೋಗುತ್ತೇವೆ, ಮತ್ತು ಯೆಹೋವನು ಏಕಮಾತ್ರ ಸತ್ಯ ದೇವರಾಗಿದ್ದಾನೆ ಮತ್ತು ಈ ಕಾರಣದಿಂದ ದೇವರು ತ್ರಯೈಕ್ಯದ ಭಾಗವಾಗಿಲ್ಲವೆಂಬುದನ್ನು ಅವರು ಗ್ರಹಿಸಿದರು.
ಈ ರೀತಿಯಲ್ಲಿ ಸುಳ್ಳು ಬೋಧನೆಗಳ ಬಯಲುಗೊಳಿಸುವಿಕೆಯು, ಕ್ರೈಸ್ತಪ್ರಪಂಚದ ಪಾದ್ರಿ ವರ್ಗದವರ ಕೋಪವನ್ನೆಬ್ಬಿಸಿತು. ತಮ್ಮ ಪ್ರಭಾವಶಾಲಿ ಸ್ಥಾನಗಳನ್ನು ಕಾಪಾಡಿಕೊಳ್ಳಲು ತವಕಿಸುತ್ತಾ, ಅನೇಕ ಕ್ಯಾಥೊಲಿಕ್ ಮತ್ತು ಪ್ರಾಟೆಸ್ಟಂಟ್ ಪಾದ್ರಿಗಳು, ರಸಲರ ಹೆಸರಿಗೆ ಮಸಿಬಳಿಯುವ ಗುರಿಯೊಂದಿಗೆ ಚಳವಳಿಗಳನ್ನು ಏರ್ಪಡಿಸಿದರು. ಆದರೆ ರಸಲ್ ಮತ್ತು ಅವರ ಸಂಗಡಿಗರು ಬಿಟ್ಟುಕೊಡಲಿಲ್ಲ. ಭರವಸೆಯೊಂದಿಗೆ ಅವರು ಮಾರ್ಗದರ್ಶನಕ್ಕಾಗಿ ದೇವರ ಆತ್ಮಕ್ಕಾಗಿ ಕೋರಿದರು. “ನಮ್ಮ ವಿಮೋಚಕನು, ಮಧ್ಯಸ್ಥಗಾರನು, ಮತ್ತು ತಲೆಯಾಗಿರುವ ಯೇಸುವಿನಿಂದ ಹಾಗೂ ಸೂಚನೆಯ ಮೇರೆಗೆ ಕಳುಹಿಸಲ್ಪಟ್ಟಿರುವ ತಂದೆಯ ಪವಿತ್ರಾತ್ಮವು, ನಮ್ಮ ಉಪದೇಶಕನಾಗಿರುವುದು ಎಂಬುದು ನಮ್ಮ ಕರ್ತನ ಆಶ್ವಾಸನೆಯಾಗಿದೆ” ಎಂದು ರಸಲರು ಹೇಳಿದರು. ಮತ್ತು ಖಂಡಿತವಾಗಿಯೂ ಪವಿತ್ರಾತ್ಮವು ಉಪದೇಶವನ್ನು ಕೊಟ್ಟಿತು! ಈ ಪ್ರಾಮಾಣಿಕ ಬೈಬಲ್ ವಿದ್ಯಾರ್ಥಿಗಳು ಬೈಬಲಿನಿಂದ ಸತ್ಯದ ನಿರ್ಮಲವಾದ ನೀರುಗಳನ್ನು ಸೇವಿಸುವುದನ್ನು ಮತ್ತು ಲೋಕವ್ಯಾಪಕವಾಗಿ ಅವುಗಳನ್ನು ಘೋಷಿಸುವುದನ್ನು ಮುಂದುವರಿಸಿದರು.—ಪ್ರಕಟನೆ 22:17.
ಇಂದು ಯೆಹೋವನ ಸಾಕ್ಷಿಗಳ ಆಧುನಿಕ ದಿನದ ಸಂಸ್ಥೆಯು, ಒಂದು ಶತಮಾನಕ್ಕಿಂತಲೂ ಹೆಚ್ಚು ಸಮಯದಿಂದ ದೇವರ ಪವಿತ್ರಾತ್ಮದ ಮಾರ್ಗದರ್ಶನಕ್ಕೆ ಸಿದ್ಧಮನಸ್ಸಿನಿಂದ ಸ್ಪಂದಿಸಿದೆ. ಯೆಹೋವನ ಆತ್ಮವು, ಸಾಕ್ಷಿಗಳ ಆತ್ಮಿಕ ದೃಷ್ಟಿಯನ್ನು ಪ್ರಗತಿಪರವಾಗಿ ಬೆಳಗಿಸುತ್ತಿರುವಾಗ, ಅವರು ಸದ್ಯೋಚಿತ ತಿಳುವಳಿಕೆಗೆ ಹೊಂದಿಕೊಳ್ಳಲು ಬೇಕಾಗಿರುವ ಹೊಂದಾಣಿಕೆಗಳನ್ನು ಸಿದ್ಧಮನಸ್ಸಿನಿಂದ ಮಾಡುತ್ತಾರೆ.—ಜ್ಞಾನೋಕ್ತಿ 4:18.
‘ನನ್ನ ಸಾಕ್ಷಿಗಳಾಗಿರುವಿರಿ’
ಯೇಸು ತನ್ನ ಶಿಷ್ಯರಿಗೆ ಹೀಗಂದಾಗ, ದೇವರ ಪವಿತ್ರಾತ್ಮದ ಮತ್ತೊಂದು ವ್ಯಕ್ತಪಡಿಸುವಿಕೆಯನ್ನು ಗುರುತಿಸಿದನು: “ಪವಿತ್ರಾತ್ಮ ನಿಮ್ಮ ಮೇಲೆ ಬರಲು ನೀವು ಬಲವನ್ನು ಹೊಂದಿ . . . ಭೂಲೋಕದ ಕಟ್ಟಕಡೆಯ ವರೆಗೂ ಸಾಕ್ಷಿಗಳಾಗಿರಬೇಕು.” (ಅ. ಕೃತ್ಯಗಳು 1:8) ತನ್ನ ಶಿಷ್ಯರು ತಮ್ಮ ದೇವನೇಮಿತ ಕೆಲಸವನ್ನು ನಡೆಸಲಿಕ್ಕೋಸ್ಕರ ಅವರಲ್ಲಿ “ಬಲ” ಮತ್ತು “ಪವಿತ್ರಾತ್ಮ”ವನ್ನು ತುಂಬಿಸುವೆನೆಂದು ಯೇಸು ಮಾಡಿದ ವಾಗ್ದಾನವು ಇಂದೂ ಅನ್ವಯಿಸುತ್ತದೆ.
ಒಂದು ಗುಂಪಿನೋಪಾದಿ, ಯೆಹೋವನ ಸಾಕ್ಷಿಗಳು ತಮ್ಮ ಸಾರುವ ಚಟುವಟಿಕೆಗಳಿಗಾಗಿ ಸುಪ್ರಸಿದ್ಧರಾಗಿದ್ದಾರೆ. (ರೇಖಾಚೌಕವನ್ನು ನೋಡಿರಿ.) ವಾಸ್ತವದಲ್ಲಿ ಯೆಹೋವನ ಸಾಕ್ಷಿಗಳು 230ಕ್ಕಿಂತಲೂ ಹೆಚ್ಚು ದೇಶದ್ವೀಪಗಳಲ್ಲಿ ಸತ್ಯದ ಸಂದೇಶವನ್ನು ತಲಪಿಸುತ್ತಿದ್ದಾರೆ. ಊಹಿಸಸಾಧ್ಯವಿರುವ ಪ್ರತಿಯೊಂದು ಪರಿಸ್ಥಿತಿಯ ಕೆಳಗೆ ಯುದ್ಧದಿಂದ ಛಿದ್ರಗೊಂಡಿರುವ ಪ್ರದೇಶಗಳಲ್ಲಿಯೂ ತಮ್ಮ ಜೀವಗಳನ್ನೂ ಅಪಾಯಕೊಡ್ಡಿ, ಅವರು ದೇವರ ರಾಜ್ಯವನ್ನು ಬೆಂಬಲಿಸುವುದರಲ್ಲಿ ಧೈರ್ಯದಿಂದ ತಮ್ಮ ಧ್ವನಿಗಳನ್ನು ಕೂಡಿಸಿದ್ದಾರೆ. ಪವಿತ್ರಾತ್ಮವು ಇಂದು ಕೆಲಸಮಾಡುತ್ತಾ ಇದೆಯೆಂಬುದಕ್ಕೆ ಕ್ರೈಸ್ತ ಶುಶ್ರೂಷೆಗಾಗಿರುವ ಅವರ ಹುರುಪು ಬಲವಾದ ಸಾಕ್ಷ್ಯವನ್ನು ಕೊಡುತ್ತದೆ. ಮತ್ತು ಯೆಹೋವ ದೇವರು ಅವರ ಪ್ರಯತ್ನಗಳನ್ನು ಆಶೀರ್ವದಿಸುತ್ತಿದ್ದಾನೆಂಬುದು ಸುಸ್ಪಷ್ಟವಾಗಿ ತೋರಿಬರುತ್ತಿದೆ.
ಉದಾಹರಣೆಗಾಗಿ, ಕಳೆದ ವರ್ಷ ದೇವರ ರಾಜ್ಯದ ಸುವಾರ್ತೆಯನ್ನು ಸಾರುವುದರಲ್ಲಿ 100 ಕೋಟಿಗಿಂತಲೂ ಹೆಚ್ಚು ತಾಸುಗಳನ್ನು ಕಳೆಯಲಾಯಿತು. ಫಲಿತಾಂಶವೇನಾಗಿತ್ತು? ಸುಮಾರು 3,23,439 ಜನರು ತಾವು ದೇವರಿಗೆ ಮಾಡಿರುವ ಸಮರ್ಪಣೆಯನ್ನು ನೀರಿನ ದೀಕ್ಷಾಸ್ನಾನದ ಮೂಲಕ ಸಂಕೇತಿಸಿದರು. ಇದಕ್ಕೆ ಕೂಡಿಸುತ್ತಾ, ಹೊಸದಾಗಿ ಆಸಕ್ತರಾಗಿರುವ ಜನರೊಂದಿಗೆ 44,33,884 ಸಾಪ್ತಾಹಿಕ ಮನೆ ಬೈಬಲ್ ಅಭ್ಯಾಸಗಳನ್ನು ನಡೆಸಲಾಯಿತು. ಒಟ್ಟಿನಲ್ಲಿ, 2,46,07,741 ಪುಸ್ತಕಗಳು, 63,11,62,309 ಪತ್ರಿಕೆಗಳು ಮತ್ತು 6,34,95,728 ಬ್ರೋಷರುಗಳು ಮತ್ತು ಪುಸ್ತಿಕೆಗಳನ್ನು ನೀಡಲಾಯಿತು. ದೇವರಾತ್ಮವು ಕೆಲಸಮಾಡುತ್ತಿದೆಯೆಂಬುದಕ್ಕೆ ಇದು ಎಷ್ಟೊಂದು ಬಲವಾದ ಸಾಕ್ಷ್ಯ!
ದೇವರಾತ್ಮ ಮತ್ತು ನೀವು
ಒಬ್ಬ ವ್ಯಕ್ತಿಯು ಸುವಾರ್ತೆಗೆ ಚೆನ್ನಾಗಿ ಪ್ರತಿಕ್ರಿಯಿಸುವಾಗ, ದೇವರ ಮಟ್ಟಗಳಿಗನುಗುಣವಾಗಿ ತನ್ನ ಜೀವಿತವನ್ನು ಮಾರ್ಪಡಿಸಿಕೊಳ್ಳುವಾಗ, ಮತ್ತು ಪ್ರಾಯಶ್ಚಿತ್ತದ ಏರ್ಪಾಡಿನಲ್ಲಿ ತನ್ನ ನಂಬಿಕೆಯನ್ನು ವ್ಯಕ್ತಪಡಿಸುವಾಗ, ದೇವರ ಮುಂದೆ ಒಂದು ಶುದ್ಧ ನಿಲುವನ್ನು ಪಡೆದುಕೊಳ್ಳಲಿಕ್ಕಾಗಿ ಅವನ ಮುಂದೆ ಮಾರ್ಗವು ತೆರೆಯುತ್ತದೆ. ಅಂತಹವರಿಗೆ ಅಪೊಸ್ತಲ ಪೌಲನು ಹೇಳಿದ್ದು: ‘ದೇವರು ಪವಿತ್ರಾತ್ಮವರವನ್ನು ನಿಮಗೆ ದಯಪಾಲಿಸುತ್ತಾನೆ.’—1 ಥೆಸಲೊನೀಕ 4:7, 8; 1 ಕೊರಿಂಥ 6:9-11.
ದೇವರಾತ್ಮವನ್ನು ಹೊಂದಿರುವುದರಿಂದ ಅನೇಕ ಉತ್ತಮ ಆಶೀರ್ವಾದಗಳು ಫಲಿಸುತ್ತವೆ. ಯಾವ ರೀತಿಯ ಆಶೀರ್ವಾದಗಳು? ದೇವರ ಪ್ರೇರಿತ ವಾಕ್ಯವು ಹೇಳುವುದು: “ದೇವರಾತ್ಮನಿಂದ ಉಂಟಾಗುವ ಫಲವೇನಂದರೆ—ಪ್ರೀತಿ ಸಂತೋಷ ಸಮಾಧಾನ ದೀರ್ಘಶಾಂತಿ ದಯೆ ಉಪಕಾರ ನಂಬಿಕೆ ಸಾಧುತ್ವ ಶಮೆದಮೆ ಇಂಥವುಗಳೇ.” (ಗಲಾತ್ಯ 5:22, 23) ಆದುದರಿಂದ, ದೇವರ ಪವಿತ್ರಾತ್ಮವು ಒಳ್ಳೇದನ್ನು ಮಾಡಲಿಕ್ಕಾಗಿ ಒಂದು ಪ್ರಭಾವಶಾಲಿಯಾದ ಶಕ್ತಿಯಾಗಿದ್ದು, ದೈವಿಕ ಗುಣಗಳನ್ನು ಪ್ರದರ್ಶಿಸಲು ಒಬ್ಬನನ್ನು ಶಕ್ತಗೊಳಿಸುತ್ತದೆ.
ಇದಕ್ಕೆ ಕೂಡಿಸಿ, ನೀವು ಬೈಬಲನ್ನು ಓದಿ, ನೀವು ಕಲಿತುಕೊಳ್ಳುವಂತಹ ವಿಷಯಗಳನ್ನು ಅನ್ವಯಿಸುವಲ್ಲಿ, ವಿವೇಕ, ಜ್ಞಾನ, ಒಳನೋಟ, ತೀರ್ಮಾನ ಶಕ್ತಿ ಮತ್ತು ಆಲೋಚನಾ ಸಾಮರ್ಥ್ಯದಲ್ಲಿ ಬೆಳೆಯುವಂತೆ ದೇವರಾತ್ಮವು ನಿಮಗೆ ಸಹಾಯಮಾಡಬಲ್ಲದು. ರಾಜ ಸೊಲೊಮೋನನು ಮನುಷ್ಯರನ್ನು ಮೆಚ್ಚಿಸಲು ಪ್ರಯತ್ನಿಸುವ ಬದಲು ದೇವರನ್ನು ಮೆಚ್ಚಿಸಲು ಪ್ರಯತ್ನಿಸಿದ್ದರಿಂದ, “ಜ್ಞಾನವಿವೇಕಗಳನ್ನೂ ಮನೋವಿಶಾಲತೆಯನ್ನೂ” ಪಡೆದುಕೊಂಡನು. (1 ಅರಸು 4:29) ಯೆಹೋವನು ಸೊಲೊಮೋನನಿಗೆ ಪವಿತ್ರಾತ್ಮವನ್ನು ಕೊಟ್ಟನು. ಆದುದರಿಂದ, ಇಂದು ಸಹ ತನ್ನನ್ನು ಮೆಚ್ಚಿಸಲು ಪ್ರಯತ್ನಿಸುವವರಿಗೆ ಆತನು ತನ್ನ ಪವಿತ್ರಾತ್ಮವನ್ನು ಕೊಡದೆ ಇರಲಾರನು.
ದೇವರ ಪವಿತ್ರಾತ್ಮವು ಕ್ರೈಸ್ತರಿಗೆ ಸೈತಾನನನ್ನು ಮತ್ತು ದೆವ್ವಗಳನ್ನು, ಈ ದುಷ್ಟ ವಿಷಯಗಳ ವ್ಯವಸ್ಥೆಯನ್ನು ಮತ್ತು ತಮ್ಮ ಅಪರಿಪೂರ್ಣ ಶರೀರದ ಪಾಪಪೂರ್ಣ ಪ್ರವೃತ್ತಿಗಳ ವಿರುದ್ಧ ಹೋರಾಡುವಂತೆಯೂ ಸಹಾಯಮಾಡುವುದು. ಇದು ಹೇಗೆ ಸಾಧ್ಯ? ಅಪೊಸ್ತಲ ಪೌಲನು ಉತ್ತರಿಸುವುದು: “ನನ್ನನ್ನು ಬಲಪಡಿಸುವಾತನಲ್ಲಿದ್ದುಕೊಂಡು ಎಲ್ಲಕ್ಕೂ ಶಕ್ತನಾಗಿದ್ದೇನೆ.” (ಫಿಲಿಪ್ಪಿ 4:13) ಪವಿತ್ರಾತ್ಮವು ಕಷ್ಟಗಳನ್ನು ಅಥವಾ ಶೋಧನೆಗಳನ್ನು ತೆಗೆದುಹಾಕುವುದಿಲ್ಲ, ಆದರೆ ಅವುಗಳನ್ನು ತಾಳಿಕೊಳ್ಳುವಂತೆ ನಿಮಗೆ ಖಂಡಿತವಾಗಿಯೂ ಸಹಾಯಮಾಡಬಲ್ಲದು. ದೇವರಾತ್ಮದ ಮೇಲೆ ಆತುಕೊಳ್ಳುವ ಮೂಲಕ, ಯಾವುದೇ ತೊಂದರೆ ಅಥವಾ ಸಂಕಷ್ಟದೊಂದಿಗೆ ವ್ಯವಹರಿಸಲು ಬೇಕಾಗಿರುವ “ಬಲಾಧಿಕ್ಯ”ವನ್ನು ನಾವು ಪಡೆದುಕೊಳ್ಳಬಲ್ಲೆವು.—2 ಕೊರಿಂಥ 4:7; 1 ಕೊರಿಂಥ 10:13.
ಎಲ್ಲ ಸಾಕ್ಷ್ಯವನ್ನು ಪರಿಗಣಿಸುವಾಗ, ದೇವರಾತ್ಮವು ಇಂದು ಕೂಡ ಕೆಲಸಮಾಡುತ್ತಿದೆಯೆಂಬುದರ ಬಗ್ಗೆ ಕಿಂಚಿತ್ತೂ ಸಂದೇಹವಿರಲಾರದು. ಆತನ ಭವ್ಯವಾದ ಉದ್ದೇಶಗಳ ಕುರಿತಾಗಿ ಸಾಕ್ಷಿಯನ್ನು ಕೊಡಲು ಯೆಹೋವನ ಆತ್ಮವು ಆತನ ಸೇವಕರಿಗೆ ಶಕ್ತಿಯನ್ನು ಕೊಡುತ್ತದೆ. ಅದು ಆತ್ಮಿಕ ಬೆಳಕಿನ ಪ್ರಕಾಶಗಳನ್ನು ಕೊಡುತ್ತಾ ಮುಂದುವರಿಯುತ್ತಿದೆ. ಮತ್ತು ನಮ್ಮ ನಂಬಿಕೆಯನ್ನು ಬಲಪಡಿಸುತ್ತಾ, ನಾವು ನಮ್ಮ ಸೃಷ್ಟಿಕರ್ತನಿಗೆ ನಿಷ್ಠಾವಂತರಾಗಿರುವಂತೆ ಸಹಾಯಮಾಡುತ್ತಿದೆ. ದೇವರು ಇಂದು ತನ್ನ ನಂಬಿಗಸ್ತ ಸೇವಕರಿಗೆ ಪವಿತ್ರಾತ್ಮವನ್ನು ಕೊಡುವ ತನ್ನ ಮಾತನ್ನು ಉಳಿಸಿಕೊಂಡಿರುವುದಕ್ಕಾಗಿ ನಾವೆಷ್ಟು ಕೃತಜ್ಞರಾಗಿರಬೇಕು!
[ಪಾದಟಿಪ್ಪಣಿಗಳು]
^ ಪ್ಯಾರ. 4 1971, ಆಗಸ್ಟ್ 15ರ ದ ವಾಚ್‌ಟವರ್ ಪತ್ರಿಕೆಯ 501-5 ಪುಟಗಳಲ್ಲಿರುವ “ಪವಿತ್ರಾತ್ಮದ ಚಮತ್ಕಾರದ ವರಗಳು ಏಕೆ ನಿಂತುಹೋಗಿವೆ?” ಎಂಬ ಲೇಖನವನ್ನು ನೋಡಿರಿ.
[ಪುಟ 10ರಲ್ಲಿರುವ ಚೌಕ]
ಯೆಹೋವನ ಸಾಕ್ಷಿಗಳ ಕುರಿತು ಇತರರು ಏನು ಹೇಳುತ್ತಾರೆ?
“ಇತರ ಚರ್ಚುಗಳು ಜನರು ತಮ್ಮ ಬಳಿಗೆ ಬರುವಂತೆ ಮಾಡಲು ಸಮಾಲೋಚಕರನ್ನು ಬಾಡಿಗೆಗೆ ಇಟ್ಟುಕೊಳ್ಳುತ್ತಿವೆ ಅಥವಾ ಸಲಿಂಗೀಕಾಮ ಮತ್ತು ಗರ್ಭಪಾತದಂತಹ ಆಧುನಿಕ ದಿನದ ವಾದಾಂಶಗಳೊಂದಿಗೆ ಸೆಣಸಾಡುತ್ತಿವೆ. ಆದರೆ ಅದೇ ಸಮಯದಲ್ಲಿ ಸಾಕ್ಷಿಗಳು, ಬದಲಾಗುತ್ತಿರುವ ಜಗತ್ತಿನೊಂದಿಗೆ ಯಾವುದೇ ರೀತಿಯಲ್ಲಿ ಸಂಧಾನವನ್ನು ಮಾಡಿಕೊಳ್ಳುವುದಿಲ್ಲ. ಅವರು ಈಗಲೂ ವ್ಯವಸ್ಥಿತ ರೀತಿಯಲ್ಲಿ ಇಡೀ ಭೂಮ್ಯಾದ್ಯಂತ ತಮ್ಮ ಸಾರುವ ಕಾರ್ಯಾಚರಣೆಯನ್ನು ಮುಂದುವರಿಸುತ್ತಿದ್ದಾರೆ.”—ಅಮೆರಿಕದಲ್ಲಿರುವ ಕ್ಯಾಲಿಫೋರ್ನಿಯದ ಆರೆಂಜ್ ಕೌಂಟಿಯ ದ ಆರೆಂಜ್ ಕೌಂಟಿ ರೆಜಿಸ್ಟರ್ ವಾರ್ತಾಪತ್ರಿಕೆ.
“ತಮ್ಮ ನಂಬಿಕೆಯನ್ನು ಹಬ್ಬಿಸುವ ವಿಷಯದಲ್ಲಿ, ಯೆಹೋವನ ಸಾಕ್ಷಿಗಳಷ್ಟು . . . ಹುರುಪುಳ್ಳ ಪಂಗಡಗಳು ಇರುವುದೇ ತೀರ ಕಡಿಮೆ.”—ಅಮೆರಿಕದಲ್ಲಿ ಇಂಡಿಯಾನಾ, ಕೊಲಂಬಸ್‌ನ ದ ರಿಪಬ್ಲಿಕ್ ವಾರ್ತಾಪತ್ರಿಕೆ.
“ಬೈಬಲಿನ ಮೂಲತತ್ವಗಳನ್ನು ಅನ್ವಯಿಸಿಕೊಳ್ಳುತ್ತಾ, ‘ಸುವಾರ್ತೆ’ಯೊಂದಿಗೆ ಮನೆಯಿಂದ ಮನೆಗೆ ಹೋಗುವವರು ಅವರು ಮಾತ್ರ.”—ಝಶೀ ಲಿಟರಾಟ್ಸ್‌ಕ್ಯಿ, ಪೋಲೆಂಡ್.
“ಇತಿಹಾಸದಲ್ಲಿ ಎಂದೂ ನಡೆಸಲ್ಪಟ್ಟಿರದ ಅತ್ಯಂತ ಮಹಾನ್ ಸಾರುವ ಕಾರ್ಯಾಚರಣೆಯ ಮೂಲಕ ಯೆಹೋವನ ಸಾಕ್ಷಿಗಳು ಯೆಹೋವನ ಸಂದೇಶವನ್ನು ಲೋಕದಲ್ಲೆಲ್ಲಾ ಹಬ್ಬಿಸಿದ್ದಾರೆ.”—ಅಮೆರಿಕದ ಪೆನ್ಸಿಲ್ವೇನಿಯದಲ್ಲಿ ಟಮಕ್ವಾ ನ್ಯೂಸ್-ಅಬ್ಸರ್‌ವರ್ ವಾರ್ತಾಪತ್ರಿಕೆ.
[ಪುಟ 9ರಲ್ಲಿರುವ ಚಿತ್ರಗಳು]
ದೇವರ ಪವಿತ್ರಾತ್ಮವು ನಮ್ಮನ್ನು ಆತ್ಮಿಕವಾಗಿ ಜ್ಞಾನೋದಯಗೊಳಿಸುತ್ತದೆ,
. . . ಉತ್ತಮವಾದ ಕ್ರೈಸ್ತ ಗುಣಗಳನ್ನು ಪ್ರವರ್ಧಿಸುತ್ತದೆ,
. . . ಮತ್ತು ಲೋಕವ್ಯಾಪಕ ಸಾರುವ ಕೆಲಸದಲ್ಲಿ ನಮ್ಮನ್ನು ಬೆಂಬಲಿಸುತ್ತದೆ