“ಬೈಬಲಿನ ಕುರಿತು ನಿಮಗೆ ಬಹಳಷ್ಟು ವಿಷಯಗಳು ತಿಳಿದಿವೆ”
ರಾಜ್ಯ ಘೋಷಕರು ವರದಿಮಾಡುತ್ತಾರೆ
“ಬೈಬಲಿನ ಕುರಿತು ನಿಮಗೆ ಬಹಳಷ್ಟು ವಿಷಯಗಳು ತಿಳಿದಿವೆ”
ಹನ್ನೆರಡು ವರ್ಷ ಪ್ರಾಯದ ಯೇಸು ಯೆರೂಸಲೇಮಿನಲ್ಲಿದ್ದ ಧಾರ್ಮಿಕ ಮುಖಂಡರೊಂದಿಗೆ ಧೈರ್ಯದಿಂದ ಮಾತಾಡಿದಾಗ, “ಆತನು ಆಡಿದ ಮಾತುಗಳನ್ನು ಕೇಳಿದವರೆಲ್ಲರು ಆತನ ಬುದ್ಧಿಗೂ ಉತ್ತರಗಳಿಗೂ ಆಶ್ಚರ್ಯಪಟ್ಟರು.” (ಲೂಕ 2:47) ತದ್ರೀತಿಯಲ್ಲಿ ಇಂದು ಯೆಹೋವನ ಎಳೆಯ ಸೇವಕರಲ್ಲಿ ಅನೇಕರು, ದೇವರ ಕುರಿತು ಹಾಗೂ ಬೈಬಲಿನ ಕುರಿತು ಧೈರ್ಯದಿಂದ ತಮ್ಮ ಶಿಕ್ಷಕರೊಂದಿಗೆ ಮತ್ತು ಸಹಪಾಠಿಗಳೊಂದಿಗೆ ಮಾತಾಡುತ್ತಾರೆ. ಇದರಿಂದಾಗಿ ಅವರು ಅನೇಕವೇಳೆ ಸಂತೋಷಕರ ಫಲಿತಾಂಶಗಳನ್ನು ಪಡೆದುಕೊಳ್ಳುತ್ತಾರೆ.
ದಾನಿಯೇಲ 9:24-27ರಲ್ಲಿ ಕಂಡುಬರುವ ವರ್ಷಗಳ 70 ವಾರಗಳ ಕುರಿತಾದ ಬೈಬಲ್ ಪ್ರವಾದನೆಯ ಬಗ್ಗೆ ಚರ್ಚೆ ನಡೆಯುತ್ತಿದ್ದ ಒಂದು ತರಗತಿಯಲ್ಲಿ, 14 ವರ್ಷದ ಟಿಫನೀಯೂ ಇದ್ದಳು. ಈ ವಚನಗಳ ಕುರಿತು ಶಿಕ್ಷಕನು ಕೆಲವು ನಿಜಾಂಶಗಳನ್ನು ತಿಳಿಸಿ, ಕೂಡಲೆ ಆ ವಿಷಯವನ್ನು ತೇಲಿಸಿಬಿಡಲು ಪ್ರಯತ್ನಿಸಿದನು.
ಮೊದಲು ಟಿಫನೀ ತನ್ನ ಕೈಯನ್ನು ಮೇಲೆತ್ತಲು ಹಿಂಜರಿದಳು. ನಂತರ ಅವಳು ಹೇಳಿದ್ದು: “ಆದರೆ ಏಕೋ ಗೊತ್ತಿಲ್ಲ ಆ ವಚನಗಳು ಪೂರ್ಣ ರೀತಿಯಲ್ಲಿ ವಿವರಿಸಲ್ಪಡಲಿಲ್ಲ ಎಂಬ ವಿಚಾರದಿಂದಾಗಿ ನನಗೆ ತುಂಬ ಕಸಿವಿಸಿಯಾಯಿತು. ಮತ್ತು ನನಗೇ ಅರಿವಿಲ್ಲದೆ ನನ್ನ ಕೈ ಮೇಲೆ ಹೋಯಿತು.” ಅಧಿಕಾಂಶ ವಿದ್ಯಾರ್ಥಿಗಳಿಗೆ ಈ ವಚನಗಳನ್ನು ಅರ್ಥಮಾಡಿಕೊಳ್ಳುವುದು ತುಂಬ ಕಷ್ಟಕರವಾಗಿತ್ತು. ಹಾಗಿದ್ದರೂ, ಈ ವಿಷಯದ ಬಗ್ಗೆ ಹೇಳಲು ಬಯಸುವವರು ತರಗತಿಯಲ್ಲಿ ಒಬ್ಬರಾದರೂ ಇದ್ದಾರೆಂಬುದನ್ನು ಕಂಡು ನನ್ನ ಶಿಕ್ಷಕನು ಆಶ್ಚರ್ಯಚಕಿತನಾದನು.
ಆ ಪ್ರವಾದನೆಯನ್ನು ವಿವರಿಸುವಂತಹ ಅವಕಾಶವು ಸಿಕ್ಕಿದೊಡನೆ ಟಿಫನೀಯು ಎದ್ದುನಿಂತು, ಯಾವುದೇ ಟಿಪ್ಪಣಿಯ ಸಹಾಯವಿಲ್ಲದೆ ನಿರರ್ಗಳವಾಗಿ ಮಾತಾಡಿದಳು. ಅವಳು ತನ್ನ ಮಾತುಗಳನ್ನು ಮುಗಿಸಿದಾಗ, ಇಡೀ ತರಗತಿಯಲ್ಲಿ ನೀರವತೆಯಿತ್ತು. ಆಗ ಟಿಫನೀಗೆ ಸ್ವಲ್ಪ ಹೆದರಿಕೆಯಾಯಿತು. ಆದರೆ ಸ್ವಲ್ಪ ಸಮಯದ ಬಳಿಕ, ಇಡೀ ತರಗತಿಯು ತುಂಬ ಸಮಯದ ವರೆಗೆ ಜೋರಾಗಿ ಚಪ್ಪಾಳೆ ತಟ್ಟಿತು.
“ಟಿಫನೀ, ನೀನು ಹೇಳಿದ ಸಂಗತಿಯು ತುಂಬ ಮನಮುಟ್ಟುವಂತಹದ್ದು” ಎಂದು ಶಿಕ್ಷಕನು ಪುನಃ ಪುನಃ ಹೇಳಿದನು. ಆ ವಚನಗಳಿಗೆ ಇನ್ನೂ ಹೆಚ್ಚಿನ ಅರ್ಥವಿರಲೇಬೇಕು ಎಂಬುದು ನನಗೆ ಗೊತ್ತಿತ್ತು, ಆದರೂ ನನಗೆ ಇದರ ಬಗ್ಗೆ ತುಂಬ ಸ್ಪಷ್ಟವಾಗಿ ವಿವರಿಸಿದ ಪ್ರಥಮ ವ್ಯಕ್ತಿ ಟಿಫನೀಯೇ ಎಂಬುದನ್ನು ಅವನು ಒಪ್ಪಿಕೊಂಡನು. ತರಗತಿಯು ಮುಗಿಯುತ್ತಿರುವಾಗ, ಬೈಬಲಿನ ಬಗ್ಗೆ ನಿನಗೆ ಇಷ್ಟೊಂದು ವಿಷಯಗಳು ಹೇಗೆ ಗೊತ್ತು ಎಂದು ಅವನು ಟಿಫನೀಯನ್ನು ಕೇಳಿದನು.
ಅದಕ್ಕೆ ಅವಳು “ನಾನು ಯೆಹೋವನ ಸಾಕ್ಷಿಗಳಲ್ಲಿ ಒಬ್ಬಳಾಗಿದ್ದೇನೆ. ಮತ್ತು ನನ್ನ ಹೆತ್ತವರು ಆ ಪ್ರವಾದನೆಯ ಬಗ್ಗೆ ಅನೇಕಬಾರಿ ವಿವರಿಸಿದಾಗಲೇ ನನಗೆ ಅದು ಅರ್ಥವಾಯಿತು” ಎಂದು ಉತ್ತರಿಸಿದಳು.
ಬೈಬಲಿನ ಕುರಿತು ಅವಳಿಗಿರುವ ಜ್ಞಾನವನ್ನು ನೋಡಿ ಅವಳ ಸಹಪಾಠಿಗಳು ಸಹ ತುಂಬ ಆಶ್ಚರ್ಯಗೊಂಡರು. ಒಬ್ಬ ವಿದ್ಯಾರ್ಥಿನಿಯು ಟಿಫನೀಗೆ ಹೇಳಿದ್ದು: “ಯೆಹೋವನ ಸಾಕ್ಷಿಗಳಾದ ನೀವು ಮನೆಯಿಂದ ಮನೆಗೆ ಏಕೆ ಹೋಗುತ್ತೀರಿ ಎಂಬುದು ಈಗ ನನಗೆ ತಿಳಿಯಿತು; ಏಕೆಂದರೆ ಬೈಬಲಿನ ಕುರಿತು ನಿಮಗೆ ಬಹಳಷ್ಟು ವಿಷಯಗಳು ತಿಳಿದಿವೆ.” ಇತರರು ಅವಳ ನಂಬಿಕೆಗಳ ಕುರಿತು ಇನ್ನೆಂದಿಗೂ ಅವಳನ್ನು ಟೀಕಿಸುವುದಿಲ್ಲ ಎಂದು ಮಾತುಕೊಟ್ಟರು.
ತನ್ನ ಅನುಭವದ ಕುರಿತು ಟಿಫನೀ ತನ್ನ ಹೆತ್ತವರಿಗೆ ಹೇಳಿದಾಗ, ನಿತ್ಯಜೀವಕ್ಕೆ ನಡೆಸುವ ಜ್ಞಾನ ಪುಸ್ತಕವನ್ನು ಶಿಕ್ಷಕನಿಗೆ ಕೊಡುವಂತೆ ಅವರು ಅವಳಿಗೆ ಸಲಹೆ ನೀಡಿದರು. ಆದುದರಿಂದ, ಅವಳು ಆ ಪುಸ್ತಕವನ್ನು ತನ್ನ ಶಿಕ್ಷಕನಿಗೆ ಕೊಟ್ಟು, ಅದರಲ್ಲಿ ದಾನಿಯೇಲನ ಪ್ರವಾದನೆಯನ್ನು ವಿವರಿಸುವ ಭಾಗವನ್ನು ತೋರಿಸಿದಾಗ, ಅವನು ಅದನ್ನು ಮನಃಪೂರ್ವಕವಾಗಿ ಸ್ವೀಕರಿಸಿ, ಉಪಕಾರ ಹೇಳಿದನು.
ನಿಜವಾಗಿಯೂ, ದೇವರ ಕುರಿತು ಮತ್ತು ಬೈಬಲಿನ ಕುರಿತು ತಮ್ಮ ಹೆತ್ತವರು ಏನನ್ನು ಕಲಿಸಿದ್ದಾರೋ ಅದರ ಬಗ್ಗೆ ಚಿಕ್ಕಪ್ರಾಯದ ಕ್ರೈಸ್ತ ಮಕ್ಕಳು ಧೈರ್ಯದಿಂದ ಮಾತಾಡುವಾಗ, ಅವರು ಯೆಹೋವನಿಗೆ ಸ್ತುತಿ ಹಾಗೂ ಮಹಿಮೆಯನ್ನು ತರುತ್ತಾರೆ ಮತ್ತು ಸ್ವತಃ ಆಶೀರ್ವಾದವನ್ನು ಪಡೆದುಕೊಳ್ಳುತ್ತಾರೆ.—ಮತ್ತಾಯ 21:15, 16.