ಮಾಟದ ಕುರಿತು ನಿಮಗೇನು ಗೊತ್ತು?
ಮಾಟದ ಕುರಿತು ನಿಮಗೇನು ಗೊತ್ತು?
ಮಾಟ ಎಂದೊಡನೆ ನಿಮ್ಮ ಮನಸ್ಸಿನಲ್ಲಿ ಯಾವ ವಿಚಾರಗಳು ಮೂಡಿಬರುತ್ತವೆ?
ಇದು ಮೂಲತಃ ಮೂಢನಂಬಿಕೆಯಿಂದ ಕೂಡಿದ ಭ್ರಾಂತಿಯಾಗಿರುವುದರಿಂದ ಅದನ್ನು ಗಂಭೀರವಾಗಿ ತೆಗೆದುಕೊಳ್ಳಬಾರದು ಎಂದು ಅನೇಕರಿಗೆ ಅನಿಸುತ್ತದೆ. ಅವರಿಗನುಸಾರ, ಮಾಟ ಕೇವಲ ಕಾಲ್ಪನಿಕ ಲೋಕದ ಕಥಾವಸ್ತುವಾಗಿದ್ದು ಅದರಲ್ಲಿ, ಮುಸುಕಿರುವ ಜೋಲಂಗಿಗಳನ್ನು ಧರಿಸಿರುವ ಮಾಟಗಾತಿಯರು, ಕುದಿಯುತ್ತಿರುವ ಒಂದು ಹಂಡೆಗೆ ಬಾವಲಿಗಳ ರೆಕ್ಕೆಗಳನ್ನು ಜೋಡಿಸುತ್ತಾರೆ. ಇವರು ಜನರನ್ನು ಕಪ್ಪೆಗಳನ್ನಾಗಿ ಮಾಡುತ್ತಾ, ರಾತ್ರಿ ಸಮಯದಲ್ಲಿ ಪೊರಕೆಗಳ ಮೇಲೆ ಕುಳಿತು ಆಕಾಶದಲ್ಲಿ ತೇಲುತ್ತಾ, ವಿಕಾರವಾಗಿ ಅಟ್ಟಹಾಸದಿಂದ ನಗುತ್ತಿರುತ್ತಾರೆ.
ಆದರೆ ಇನ್ನೂ ಕೆಲವರಿಗೆ ಮಾಟವೆನ್ನುವುದು ತಮಾಷೆಯಲ್ಲ. ಮಾಟಮಾಡುವವರು ನಿಜವಾಗಿಯೂ ಇದ್ದಾರೆ ಮತ್ತು ಅವರು ಬೇರೆಯವರ ಜೀವಿತಗಳನ್ನು ಪ್ರಭಾವಿಸಬಲ್ಲರೆಂದು ಲೋಕದ ಜನಸಂಖ್ಯೆಯಲ್ಲಿ ಅರ್ಧಕ್ಕಿಂತಲೂ ಹೆಚ್ಚು ಮಂದಿ ನಂಬುತ್ತಾರೆಂದು ಕೆಲವು ಸಂಶೋಧಕರು ಹೇಳುತ್ತಾರೆ. ಮಾಟವು ಕೆಟ್ಟದ್ದಾಗಿದ್ದು, ಅಪಾಯಕರವೂ ತುಂಬ ಭಯಾನಕವೂ ಆದ ಸಂಗತಿಯಾಗಿದೆಯೆಂದು ಕೋಟಿಗಟ್ಟಲೆ ಜನರು ನಂಬುತ್ತಾರೆ. ಉದಾಹರಣೆಗಾಗಿ, ಆಫ್ರಿಕಾದ ಧರ್ಮದ ಕುರಿತ ಒಂದು ಪುಸ್ತಕವು ತಿಳಿಸುವುದು: “ಕೆಡುಕನ್ನುಂಟುಮಾಡುವ ಮಂತ್ರವಿದ್ಯೆ, ಐಂದ್ರಜಾಲಿಕ ವಿದ್ಯೆ ಮತ್ತು ಮಾಟದ ಕಾರ್ಯವಿಧಾನ ಹಾಗೂ ಅವುಗಳ ಅಪಾಯಗಳಲ್ಲಿನ ನಂಬಿಕೆಯು, ಆಫ್ರಿಕದವರ ಜೀವಿತದಲ್ಲಿ ಆಳವಾಗಿ ಬೇರೂರಿದೆ. . . . ಅವರ ಸಮಾಜದಲ್ಲಿ ತೀರ ಹೆಚ್ಚಾಗಿ ದ್ವೇಷಿಸಲ್ಪಡುವ ಜನರು, ಮಾಟಮಾಡುವವರು ಮತ್ತು ಮಾಂತ್ರಿಕರಾಗಿದ್ದಾರೆ. ಈಗಲೂ ಕೆಲವೊಂದು ಸ್ಥಳಗಳಲ್ಲಿ ಮತ್ತು ಸಂದರ್ಭಗಳಲ್ಲಿ ಸಮಾಜದ ಜನರು ಅವರನ್ನು ಹೊಡೆದು ಸಾಯಿಸಿದ್ದಾರೆ.”
ಆದರೆ ಪಾಶ್ಚಾತ್ಯ ದೇಶಗಳಲ್ಲಿ, ಮಾಟವು ಗೌರವಾನ್ವಿತವಾದ ಒಂದು ಹೊಸ ಮುಖವಾಡವನ್ನು ಧರಿಸಿಕೊಂಡಿದೆ. ಮಾಟದ ಕುರಿತು ಜನರಿಗಿದ್ದ ಭಯವನ್ನು ಕಡಿಮೆಗೊಳಿಸಲಿಕ್ಕಾಗಿ ಪುಸ್ತಕಗಳು, ಟಿವಿ ಮತ್ತು ಚಲನಚಿತ್ರಗಳು ಬಹಳ ಸಹಾಯಮಾಡಿವೆ. ಡೇವಿಡ್ ಡೇವಿಸ್ ಎಂಬ ಮನೋರಂಜನಾ ವಿಶ್ಲೇಷಕನು ಗಮನಿಸುವುದು: “ಇದ್ದಕ್ಕಿದ್ದಂತೆ ಮಾಟಗಾರರು, ಹೆಚ್ಚು ಯೌವನಸ್ಥರೂ, ಹೆಚ್ಚು ಆಕರ್ಷಕರೂ ಆಗಿಬಿಟ್ಟಿದ್ದಾರೆ. ಹಾಲಿವುಡ್ ಚಿತ್ರೋದ್ಯಮವು, ಸದ್ಯದ ಪ್ರವೃತ್ತಿಗಳನ್ನು ಗಮನಿಸುವುದರಲ್ಲಿ ತುಂಬ ಚುರುಕಾಗಿದೆ. . . . ಮಾಟಮಾಡುವವರನ್ನು ಹೆಚ್ಚು ಆಕರ್ಷಕರನ್ನಾಗಿಯೂ ಪ್ರೀತಿಪಾತ್ರರನ್ನಾಗಿಯೂ ಮಾಡುವ ಮೂಲಕ, ಅದು ಮಹಿಳೆಯರು ಮತ್ತು ಚಿಕ್ಕ ಮಕ್ಕಳನ್ನು ಸೇರಿಸಿ, ಅತ್ಯಧಿಕ ಸಂಖ್ಯೆಯ ಪ್ರೇಕ್ಷಕರನ್ನು ತನ್ನೆಡೆಗೆ ಸೆಳೆಯಬಲ್ಲದು.” ಸದ್ಯದ ಯಾವುದೇ ಪ್ರವೃತ್ತಿಯನ್ನು ಒಂದು ಲಾಭದಾಯಕ ವ್ಯಾಪಾರವನ್ನಾಗಿ ಮಾಡುವುದು ಹೇಗೆಂಬುದು ಹಾಲಿವುಡ್‌ಗೆ ಚೆನ್ನಾಗಿ ತಿಳಿದಿದೆ.
ಅಮೆರಿಕದಲ್ಲಿ ಶೀಘ್ರವಾಗಿ ಬೆಳೆಯುತ್ತಿರುವ ಆತ್ಮಿಕ ಆಂದೋಲನಗಳಲ್ಲಿ ಮಾಟವು ಒಂದಾಗಿಬಿಟ್ಟಿದೆಯೆಂದು ಕೆಲವರು ಹೇಳುತ್ತಾರೆ. ಅಭಿವೃದ್ಧಿಹೊಂದಿರುವ ದೇಶಗಳಲ್ಲಿ, ಅಧಿಕಾಧಿಕ ಸಂಖ್ಯೆಯ ಜನರು, ಸ್ತ್ರೀಸಮಾನತಾವಾದಿ ಆಂದೋಲನಗಳಿಂದ ಪ್ರೇರಿತರಾಗಿ ಮತ್ತು ಪ್ರಮುಖ ಧರ್ಮಗಳಿಂದ ನಿರಾಶೆಗೊಂಡು, ವಿವಿಧ ರೀತಿಯ ಮಾಟಗಳಿಂದ ಆತ್ಮಿಕ ತೃಪ್ತಿಯನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತಾರೆ. ವಾಸ್ತವದಲ್ಲಿ ಎಷ್ಟೊಂದು ರೀತಿಯ ಮಾಟ ಇದೆಯೆಂದರೆ, “ಮಾಟಗಾರ” ಎಂಬ ಪದದ ಅರ್ಥದ ಕುರಿತೂ ಜನರಿಗೆ ಭಿನ್ನಾಭಿಪ್ರಾಯಗಳಿವೆ. ಆದರೆ ಅನೇಕವೇಳೆ ಮಾಟಗಾರರೆಂದು ಪ್ರತಿಪಾದಿಸುವವರು, ತಮಗೆ “ವಿಕ”ದೊಂದಿಗೆ ಸಂಬಂಧವಿದೆಯೆಂದು ಹೇಳುತ್ತಾರೆ. ಇದನ್ನು ಒಂದು ಶಬ್ದಕೋಶವು, “ಕ್ರೈಸ್ತಪೂರ್ವ ಸಮಯದ ಪಾಶ್ಚಾತ್ಯ ಯೂರೋಪಿನಲ್ಲಿ ತನ್ನ ಮೂಲವನ್ನು ಹೊಂದಿದ್ದ ಮತ್ತು 20ನೆಯ ಶತಮಾನದಲ್ಲಿ ಉಜ್ಜೀವಿಸುತ್ತಿರುವ ಒಂದು ವಿಧರ್ಮಿ ಪ್ರಾಕೃತ ಧರ್ಮ” ಎಂದು ಅರ್ಥನಿರೂಪಿಸುತ್ತದೆ. * ಫಲಸ್ವರೂಪವಾಗಿ, ಅನೇಕರು ತಮ್ಮನ್ನು ವಿಧರ್ಮಿಗಳು ಅಥವಾ ನವ ವಿಧರ್ಮಿಗಳು (ನಿಯೋಪೇಗನ್ಸ್) ಎಂದು ಕರೆದುಕೊಳ್ಳುತ್ತಾರೆ.
ಇತಿಹಾಸದಾದ್ಯಂತ ಮಾಟಮಾಡುವವರನ್ನು ದ್ವೇಷಿಸಲಾಗಿದೆ, ಹಿಂಸಿಸಲಾಗಿದೆ, ಚಿತ್ರಹಿಂಸೆಗೆ ಗುರಿಪಡಿಸಲಾಗಿದೆ ಮಾತ್ರವಲ್ಲ, ಅವರನ್ನು ಕೊಂದೂ ಹಾಕಲಾಗಿದೆ. ಆದುದರಿಂದ, ಆಧುನಿಕ ಮಾಟಗಾರರು ತಮ್ಮ ಕುರಿತಾಗಿ ಜನರಿಗಿರುವ ಅಭಿಪ್ರಾಯವನ್ನು ಉತ್ತಮಗೊಳಿಸಲು ಕಾತುರರಾಗಿರುವುದು ಆಶ್ಚರ್ಯಗೊಳಿಸುವ ಸಂಗತಿಯೇನಲ್ಲ. ಒಂದು ಸಮೀಕ್ಷೆಯಲ್ಲಿ, ಅವರು ಸಾರ್ವಜನಿಕರಿಗೆ ಹೆಚ್ಚಾಗಿ ಯಾವ ಸಂದೇಶವನ್ನು ಕೊಡಲು ಬಯಸುವರೆಂದು ಮಾಟಮಾಡುವವರಿಗೆ ಕೇಳಲಾಯಿತು. ಅವರು ಕೊಟ್ಟ ಉತ್ತರವನ್ನು ಸಂಶೋಧಕಿ ಮಾರ್ಗೊ ಆ್ಯಡ್ಲರ್ ಈ ರೀತಿಯಲ್ಲಿ ಸಾರಾಂಶಿಸಿದರು: “ನಾವು ದುಷ್ಟರಲ್ಲ. ನಾವು ಪಿಶಾಚನನ್ನು ಆರಾಧಿಸುವುದಿಲ್ಲ. ನಾವು ಜನರಿಗೆ ಹಾನಿ ಮಾಡಲು ಅಥವಾ ಅವರನ್ನು ದುರ್ಮಾರ್ಗಕ್ಕೆ ಸೆಳೆಯಲು ಬಯಸುವುದಿಲ್ಲ. ನಾವು ಅಪಾಯಕಾರಿ ಜನರಲ್ಲ. ನಿಮ್ಮಂತೆ ನಾವೂ ಸಾಮಾನ್ಯ ಜನರೇ. ನಮಗೆ ಕುಟುಂಬಗಳಿವೆ, ಉದ್ಯೋಗಗಳಿವೆ, ನಿರೀಕ್ಷೆಗಳು ಮತ್ತು ಕನಸುಗಳಿವೆ. ನಾವು ಒಂದು ಪಂಥವಲ್ಲ. ವಿಚಿತ್ರ ಜನರೂ ಅಲ್ಲ. . . . ನೀವು ನಮಗೆ ಹೆದರಬೇಕಾಗಿಲ್ಲ. . . . ನೀವು ನೆನಸುವಂತೆ ನಾವು ನಿಮಗಿಂತ ಭಿನ್ನರಾಗಿಲ್ಲ.”
ಈ ಸಂದೇಶವನ್ನು ಹೆಚ್ಚೆಚ್ಚು ಜನರು ಸ್ವೀಕರಿಸುತ್ತಿದ್ದಾರೆ. ಆದರೆ ಮಾಟಮಾಡುವುದರ ಕುರಿತು ತಲೆಕೆಡಿಸಿಕೊಳ್ಳುವ ಆವಶ್ಯಕತೆಯಿಲ್ಲ ಎಂಬುದು ಇದರರ್ಥವೊ? ಈ ಪ್ರಶ್ನೆಯನ್ನು ನಾವು ಮುಂದಿನ ಲೇಖನದಲ್ಲಿ ಚರ್ಚಿಸೋಣ.
[ಪಾದಟಿಪ್ಪಣಿಗಳು]
^ ಪ್ಯಾರ. 6 ವಿಚ್‌ಕ್ರಾಫ್ಟ್ (ಮಾಟ) ಎಂಬ ಇಂಗ್ಲಿಷ್ ಪದವು, “ವಿಕೆ” ಮತ್ತು “ವಿಕ” ಎಂದು ಅನುಕ್ರಮವಾಗಿ ಹೆಣ್ಣು ಮತ್ತು ಗಂಡು ಮಾಟಗಾರರಿಗೆ ಸೂಚಿಸುವಂತಹ ಹಳೆಯ ಇಂಗ್ಲಿಷ್ ಭಾಷೆಯಿಂದ ಬಂದಿದೆ.