ನಮ್ಮ ದಿನಕ್ಕಾಗಿರುವ ದೇವರ ಪ್ರವಾದನ ವಾಕ್ಯಕ್ಕೆ ಗಮನಕೊಡಿರಿ
ನಮ್ಮ ದಿನಕ್ಕಾಗಿರುವ ದೇವರ ಪ್ರವಾದನ ವಾಕ್ಯಕ್ಕೆ ಗಮನಕೊಡಿರಿ
“ನರಪುತ್ರನೇ, ಇದು ಮಂದಟ್ಟಾಗಿರಲಿ, ಇದು ಅಂತ್ಯಕಾಲದಲ್ಲಿ ನೆರವೇರುವ ಕನಸು.”—ದಾನಿಯೇಲ 8:17.
1. ನಮ್ಮ ದಿನದ ಕುರಿತು ಮಾನವರೆಲ್ಲರೂ ಏನನ್ನು ತಿಳಿದುಕೊಳ್ಳಬೇಕೆಂದು ಯೆಹೋವನು ಬಯಸುತ್ತಾನೆ?
ಯೆಹೋವನು ಮುಂದೆ ನಡೆಯಲಿಕ್ಕಿರುವ ಘಟನೆಗಳ ತಿಳಿವಳಿಕೆಯನ್ನು ತನ್ನಲ್ಲೇ ಇಟ್ಟುಕೊಳ್ಳುವುದಿಲ್ಲ. ಬದಲಿಗೆ, ಆತನು ರಹಸ್ಯಗಳನ್ನು ತಿಳಿಯಪಡಿಸುವವನಾಗಿದ್ದಾನೆ. ವಾಸ್ತವದಲ್ಲಿ, ನಾವು “ಅಂತ್ಯಕಾಲದಲ್ಲಿ” ಜೀವಿಸುತ್ತಾ ಇದ್ದೇವೆಂಬ ವಿಷಯವನ್ನು ಎಲ್ಲರೂ ತಿಳಿದುಕೊಳ್ಳಬೇಕೆಂದು ಆತನು ಬಯಸುತ್ತಾನೆ. ಈಗ ಭೂಮಿಯಲ್ಲಿ ಜೀವಿಸುತ್ತಿರುವ 600 ಕೋಟಿ ಜನರಿಗೆ ಅದು ಎಷ್ಟು ಪ್ರಾಮುಖ್ಯವಾದ ವಾರ್ತೆಯಾಗಿದೆ!
2. ಜನರು ಮಾನವಕುಲದ ಭವಿಷ್ಯತ್ತಿನ ಬಗ್ಗೆ ಚಿಂತಿತರಾಗಿರುವುದು ಏಕೆ?
2 ಈ ಲೋಕವು ಅದರ ಅಂತ್ಯವನ್ನು ಸಮೀಪಿಸಿರುವುದು ಆಶ್ಚರ್ಯಕರವಾದ ಸಂಗತಿಯೊ? ಮಾನವನು ಚಂದ್ರನ ಮೇಲೆ ನಡೆದಾಡಸಾಧ್ಯವಾದರೂ, ಅನೇಕ ಸ್ಥಳಗಳಲ್ಲಿ ಅವನು ಈ ಭೂಗ್ರಹದ ಬೀದಿಗಳಲ್ಲಿ ನಿರ್ಭಯವಾಗಿ ನಡೆದಾಡಸಾಧ್ಯವಿಲ್ಲ. ಅವನು ಒಂದು ಮನೆಯನ್ನು ಎಲ್ಲ ರೀತಿಯ ಆಧುನಿಕ ಸೌಕರ್ಯಗಳಿಂದ ಸಜ್ಜುಗೊಳಿಸಸಾಧ್ಯವಾದರೂ, ಕುಟುಂಬಗಳಲ್ಲಿ ಉಂಟಾಗುತ್ತಿರುವ ಒಡಕುಗಳನ್ನು ತಡೆಯಸಾಧ್ಯವಿಲ್ಲ. ಅವನು ಸಮಾಚಾರ ಯುಗವನ್ನು ಆರಂಭಿಸಸಾಧ್ಯವಾದರೂ, ಒಟ್ಟಾಗಿ ಶಾಂತಿಯಿಂದ ಜೀವಿಸುವಂತೆ ಜನರಿಗೆ ಕಲಿಸಸಾಧ್ಯವಿಲ್ಲ. ನಾವು ಅಂತ್ಯಕಾಲದಲ್ಲಿ ಜೀವಿಸುತ್ತಾ ಇದ್ದೇವೆಂಬ ಹೇರಳವಾದ ಶಾಸ್ತ್ರೀಯ ಪುರಾವೆಗಳಿಗೆ ಈ ವೈಫಲ್ಯಗಳು ಪುಷ್ಟಿಯನ್ನು ನೀಡುತ್ತವೆ.
3. “ಅಂತ್ಯಕಾಲ” ಎಂಬ ಪದವು ಪ್ರಪ್ರಥಮ ಬಾರಿ ಭೂಮಿಯ ಮೇಲೆ ಯಾವಾಗ ಉಪಯೋಗಿಸಲ್ಪಟ್ಟಿತು?
3 “ಅಂತ್ಯಕಾಲದಲ್ಲಿ” ಎಂಬ ಗಮನ ಸೆಳೆಯುವ ಈ ಮಾತುಗಳು, ಸುಮಾರು 2,600 ವರ್ಷಗಳ ಹಿಂದೆ ಗಬ್ರಿಯೇಲ ದೇವದೂತನಿಂದ ಮೊದಲಾಗಿ ಉಪಯೋಗಿಸಲ್ಪಟ್ಟವು. ಭಯಭ್ರಾಂತನಾಗಿದ್ದ ದೇವರ ಪ್ರವಾದಿಯು ಗಬ್ರಿಯೇಲನ ಈ ಮಾತುಗಳನ್ನು ಕೇಳಿಸಿಕೊಂಡನು: “ನರಪುತ್ರನೇ, ಇದು ಮಂದಟ್ಟಾಗಿರಲಿ, ಇದು ಅಂತ್ಯಕಾಲದಲ್ಲಿ ನೆರವೇರುವ ಕನಸು.”—ದಾನಿಯೇಲ 8:17.
ಇದೇ “ಅಂತ್ಯಕಾಲ”!
4. ಬೈಬಲು ಇನ್ಯಾವ ಬೇರೆ ವಿಧಗಳಲ್ಲಿ ಅಂತ್ಯಕಾಲಕ್ಕೆ ಸೂಚಿಸಿ ಮಾತಾಡುತ್ತದೆ?
4 “ಅಂತ್ಯಕಾಲ” ಮತ್ತು “ಕ್ಲುಪ್ತವಾದ ಅಂತ್ಯಕಾಲ” ಎಂಬ ಅಭಿವ್ಯಕ್ತಿಗಳು, ಆರು ಬಾರಿ ದಾನಿಯೇಲನ ಪುಸ್ತಕದಲ್ಲಿ ಕಾಣಸಿಗುತ್ತವೆ. (ದಾನಿಯೇಲ 8:17, 19; 11:35, 40; 12:4, 9) ಅವು ಅಪೊಸ್ತಲ ಪೌಲನಿಂದ ಮುಂತಿಳಿಸಲ್ಪಟ್ಟ “ಕಡೇ ದಿವಸ”ಗಳಿಗೆ ಅನ್ವಯಿಸುತ್ತವೆ. (2 ತಿಮೊಥೆಯ 3:1-5) ಅದೇ ಸಮಯಾವಧಿಯನ್ನು ಯೇಸು ಕ್ರಿಸ್ತನು, ಸಿಂಹಾಸನವೇರಿದ ಸ್ವರ್ಗೀಯ ರಾಜನಾಗಿ ಬರುವ ತನ್ನ “ಸಾನ್ನಿಧ್ಯ”ಕ್ಕೆ ಸೂಚಿಸಿದನು.—ಮತ್ತಾಯ 24:37-39, NW.
5, 6. ಅಂತ್ಯಕಾಲದಲ್ಲಿ ಯಾರು ‘ಅತ್ತಿತ್ತ ತಿರುಗಿದ್ದಾರೆ,’ ಮತ್ತು ಇದರ ಫಲಿತಾಂಶವೇನಾಗಿದೆ?
5ದಾನಿಯೇಲ 12:4 ಹೇಳುವುದು: “ದಾನಿಯೇಲನೇ, ನೀನು ಈ ಮಾತುಗಳನ್ನು ಮುಚ್ಚಿಡು, ಅವುಗಳನ್ನು ಬರೆಯುವ ಗ್ರಂಥಕ್ಕೆ ಮುದ್ರೆಹಾಕು; ಅಂತ್ಯಕಾಲದ ವರೆಗೆ ಮರೆಯಾಗಿರಲಿ; ಬಹು ಜನರು ಅತ್ತಿತ್ತ ತಿರುಗುವರು, ತಿಳುವಳಿಕೆಯು ಹೆಚ್ಚುವದು.” ದಾನಿಯೇಲನು ಬರೆದ ಹೆಚ್ಚಿನ ವಿಷಯಗಳು ಮುಚ್ಚಿಡಲ್ಪಟ್ಟು, ಶತಮಾನಗಳ ವರೆಗೆ ಮಾನವನ ತಿಳುವಳಿಕೆಗೆ ಬಾರದೆ ಇದ್ದವು. ಆದರೆ ಇಂದಿನ ಕುರಿತೇನು?
6 ಈ ಅಂತ್ಯಕಾಲದಲ್ಲಿ ಅನೇಕ ನಂಬಿಗಸ್ತ ಕ್ರೈಸ್ತರು, ದೇವರ ವಾಕ್ಯವಾದ ಬೈಬಲಿನ ಪುಟಗಳಲ್ಲಿರುವ ವಿಷಯಗಳನ್ನು ಹುಡುಕುತ್ತಾ ‘ಅತ್ತಿತ್ತ ತಿರುಗಿದ್ದಾರೆ.’ ಇದರಿಂದಾದ ಫಲಿತಾಂಶವೇನು? ಯೆಹೋವನು ಅವರ ಪ್ರಯತ್ನಗಳನ್ನು ಆಶೀರ್ವದಿಸಿರುವುದರಿಂದ, ಸತ್ಯ ಜ್ಞಾನವು ಸಮೃದ್ಧವಾಗಿ ದೊರೆತಿದೆ. ದೃಷ್ಟಾಂತಕ್ಕೆ, ಯೆಹೋವನ ಅಭಿಷಿಕ್ತ ಸಾಕ್ಷಿಗಳಿಗೆ ಒಳನೋಟವು ಅನುಗ್ರಹಿಸಲ್ಪಟ್ಟ ಕಾರಣ, ಯೇಸು ಕ್ರಿಸ್ತನು 1914ರಲ್ಲಿ ಸ್ವರ್ಗೀಯ ಅರಸನಾದನೆಂದು ಅವರು ತಿಳಿದುಕೊಳ್ಳಲು ಶಕ್ತರಾದರು. 2 ಪೇತ್ರ 1:19-21ರಲ್ಲಿ ದಾಖಲಿಸಲ್ಪಟ್ಟ ಅಪೊಸ್ತಲನ ಮಾತುಗಳಿಗನುಸಾರ, ಇಂತಹ ಅಭಿಷಿಕ್ತರು ಮತ್ತು ಅವರ ನಿಷ್ಠಾವಂತ ಒಡನಾಡಿಗಳು, ‘ಪ್ರವಾದನ ವಾಕ್ಯಕ್ಕೆ ಗಮನವನ್ನು ಕೊಡುತ್ತಿದ್ದಾರೆ’ ಮತ್ತು ಇದೇ ಆ ಅಂತ್ಯಕಾಲ ಎಂಬ ವಿಷಯದಲ್ಲಿ ಅವರಿಗೆ ಯಾವ ಸಂದೇಹವೂ ಇಲ್ಲ.
7. ದಾನಿಯೇಲ ಪುಸ್ತಕವನ್ನು ಯಾವ ಕೆಲವು ವೃತ್ತಾಂತಗಳು ಅಪೂರ್ವ ಪುಸ್ತಕವಾಗಿ ಮಾಡುತ್ತದೆ?
7 ದಾನಿಯೇಲನ ಪುಸ್ತಕವು ಅನೇಕ ವಿಧಗಳಲ್ಲಿ ಅಪೂರ್ವವಾಗಿದೆ. ಅದರಲ್ಲಿ, ರಾಜನೊಬ್ಬನು ತನ್ನ ಪಂಡಿತರನ್ನು ವಧಿಸುವ ಬೆದರಿಕೆಯೊಡ್ಡುವ ವಿಷಯವಿದೆ. ಅವರು ಅವನಿಗೆ ಬಿದ್ದ ನಿಗೂಢ ಕನಸು ಹಾಗೂ ಅದರ ವಿವರಣೆಯನ್ನು ನೀಡಲು ಅಸಮರ್ಥರಾಗಿರುವುದೇ ಇದಕ್ಕೆ ಕಾರಣವಾಗಿದೆ, ಆದರೆ ಯೆಹೋವನ ಪ್ರವಾದಿಯು ತಕ್ಕ ವಿವರಣೆಯನ್ನು ನೀಡುತ್ತಾನೆ. ಅತಿ ಎತ್ತರವಾಗಿದ್ದ ಒಂದು ಪ್ರತಿಮೆಯನ್ನು ಆರಾಧಿಸಲು ನಿರಾಕರಿಸಿದ ಮೂವರು ಯುವಕರನ್ನು, ನಿತ್ಯಕ್ಕಿಂತ ಹೆಚ್ಚಾಗಿ ಉರಿಸಲ್ಪಟ್ಟ ಆವಿಗೆಯೊಳಗೆ ಹಾಕಲಾಗುತ್ತದೆ. ಆದರೆ ಅವರು ಪಾರಾಗಿ ಉಳಿಯುತ್ತಾರೆ. ಒಂದು ಔತಣದ ಸಮಯದಲ್ಲಿ, ಅರಮನೆಯ ಗೋಡೆಯ ಮೇಲೆ ರಹಸ್ಯಮಯವಾದ ಪದಗಳನ್ನು ಬರೆಯುತ್ತಿದ್ದ ಒಂದು ಹಸ್ತವನ್ನು ನೂರಾರು ಜನರು ನೋಡುತ್ತಾರೆ. ದುಷ್ಟ ಒಳಸಂಚುಗಾರರು ಒಬ್ಬ ವೃದ್ಧನನ್ನು ಸಿಂಹಗಳ ಗವಿಯೊಳಗೆ ಹಾಕಿಸುತ್ತಾರಾದರೂ, ಅವನು ಯಾವುದೇ ಹಾನಿಯಿಲ್ಲದೆ ಅಲ್ಲಿಂದ ಹೊರಬರುತ್ತಾನೆ. ಒಂದು ದರ್ಶನದಲ್ಲಿ ನಾಲ್ಕು ಮೃಗಗಳನ್ನು ನೋಡಲಾಗುತ್ತದೆ, ಮತ್ತು ಅಂತ್ಯಕಾಲದ ವರೆಗೆ ವ್ಯಾಪಿಸುವ ಪ್ರವಾದನಾತ್ಮಕ ಸೂಚಿತಾರ್ಥಗಳನ್ನು ಅವುಗಳಿಗೆ ನೀಡಲಾಗುತ್ತದೆ.
8, 9. ದಾನಿಯೇಲ ಪುಸ್ತಕವು, ವಿಶೇಷವಾಗಿ ಈಗ ಅಂದರೆ, ಅಂತ್ಯಕಾಲದಲ್ಲಿ ನಮಗೆ ಹೇಗೆ ಪ್ರಯೋಜನವನ್ನು ತರಬಲ್ಲದು?
8 ಸ್ಪಷ್ಟವಾಗಿಯೇ, ಈ ದಾನಿಯೇಲ ಪುಸ್ತಕದಲ್ಲಿ ಎರಡು ಭಿನ್ನ ಎಳೆಗಳಿವೆ. ಒಂದು ಕಥಾ ರೂಪ, ಇನ್ನೊಂದು ಪ್ರವಾದನಾ ರೂಪ. ಈ ಎರಡೂ ಅಂಶಗಳು ನಮ್ಮ ನಂಬಿಕೆಯನ್ನು ಬಲಗೊಳಿಸಸಾಧ್ಯವಿದೆ. ಯಾರು ಯೆಹೋವ ದೇವರ ಕಡೆಗೆ ತಮ್ಮ ಯಥಾರ್ಥತೆಯನ್ನು ಕಾಪಾಡಿಕೊಳ್ಳುತ್ತಾರೋ ಅಂತಹವರನ್ನು ಆತನು ಆಶೀರ್ವದಿಸುತ್ತಾನೆ ಎಂಬುದನ್ನು ಕಥಾ ಭಾಗಗಳು ತೋರಿಸುತ್ತವೆ. ಇತಿಹಾಸದ ಪಥವು ಏನಾಗಿರುವುದೆಂದು ಯೆಹೋವನಿಗೆ ಸಹಸ್ರಾರು ವರ್ಷಗಳ ಮುಂಚೆಯೇ ತಿಳಿದಿದೆ ಎಂಬುದನ್ನು ಪ್ರವಾದನ ಭಾಗಗಳು ತೋರಿಸುವುದರಿಂದ ಅವು ನಮ್ಮ ನಂಬಿಕೆಯನ್ನು ಬಲಪಡಿಸುತ್ತವೆ.
9 ದಾನಿಯೇಲನಿಂದ ದಾಖಲಿಸಲ್ಪಟ್ಟ ಹಲವಾರು ಪ್ರವಾದನೆಗಳು ದೇವರ ರಾಜ್ಯದ ಕಡೆಗೆ ನಮ್ಮ ಗಮನವನ್ನು ಸೆಳೆಯುತ್ತವೆ. ಇಂತಹ ಪ್ರವಾದನೆಗಳ ನೆರವೇರಿಕೆಯನ್ನು ನಾವು ಗಮನಿಸಿದಂತೆ, ನಮ್ಮ ನಂಬಿಕೆಯು ಹಾಗೂ ನಾವು ಅಂತ್ಯಕಾಲದಲ್ಲಿ ಜೀವಿಸುತ್ತಾ ಇದ್ದೇವೆಂಬ ನಮ್ಮ ವಿಶ್ವಾಸವು ಬಲಗೊಳಿಸಲ್ಪಡುತ್ತದೆ. ಆದರೆ, ದಾನಿಯೇಲ ಎಂಬ ಹೆಸರುಳ್ಳ ಪುಸ್ತಕದಲ್ಲಿ ದಾಖಲಿಸಲ್ಪಟ್ಟ ಪ್ರವಾದನೆಗಳು, ಆ ಘಟನೆಗಳು ನೆರವೇರಿದ ಮೇಲೆಯೇ ಬರೆಯಲ್ಪಟ್ಟವೆಂದು ಕೆಲವು ವಿಮರ್ಶಕರು ಟೀಕಿಸುತ್ತಾರೆ. ಇಂತಹ ಪ್ರತಿಪಾದನೆಗಳು ಸತ್ಯವಾಗಿದ್ದರೆ, ಅಂತ್ಯಕಾಲದ ಕುರಿತು ದಾನಿಯೇಲ ಪುಸ್ತಕವು ಮುಂತಿಳಿಸಿದ ವಿಷಯಗಳ ಬಗ್ಗೆ ಇದು ಗಂಭೀರವಾದ ಪ್ರಶ್ನೆಗಳನ್ನು ಎಬ್ಬಿಸುವುದು. ಸಂದೇಹವಾದಿಗಳು ಈ ಪುಸ್ತಕದ ಕಥಾ ಭಾಗಗಳ ಕುರಿತು ಸಹ ಪ್ರಶ್ನೆಯೆಬ್ಬಿಸುತ್ತಾರೆ. ವಿಷಯವು ಹೀಗಿರುವುದರಿಂದ, ನಾವೇ ಪರಿಶೀಲಿಸಿ ನೋಡೋಣ.
ವಿಚಾರಣೆಯ ಕಟಕಟೆಯಲ್ಲಿ!
10. ಯಾವ ಅರ್ಥದಲ್ಲಿ ದಾನಿಯೇಲ ಪುಸ್ತಕದ ಮೇಲೆ ಆರೋಪ ಹೊರಿಸಲಾಗಿದೆ?
10 ನ್ಯಾಯಾಲಯದಲ್ಲಿ ನಡೆಯುತ್ತಿರುವ ಒಂದು ವಿಚಾರಣೆಗೆ ನೀವು ಬಂದಿದ್ದೀರೆಂದು ಊಹಿಸಿಕೊಳ್ಳಿರಿ. ವಂಚನೆಯ ವಿಷಯದಲ್ಲಿ ಪ್ರತಿವಾದಿಯು ದೋಷಿಯೆಂದು ವಕೀಲನು ಪಟ್ಟುಹಿಡಿಯುತ್ತಾನೆ. ಅದೇ ರೀತಿಯಲ್ಲಿ, ದಾನಿಯೇಲ ಪುಸ್ತಕವು, ಸಾ.ಶ.ಪೂ. ಏಳನೆಯ ಮತ್ತು ಆರನೆಯ ಶತಮಾನಗಳಲ್ಲಿ ಬದುಕಿದ್ದ ಒಬ್ಬ ಇಬ್ರಿಯ ಪ್ರವಾದಿಯಿಂದ ಬರೆಯಲ್ಪಟ್ಟ ವಿಶ್ವಾಸಾರ್ಹ ಗ್ರಂಥವೆಂದು ತನ್ನನ್ನು ಸಾದರಪಡಿಸಿಕೊಳ್ಳುತ್ತದೆ. ಆದರೆ ಈ ಪುಸ್ತಕವು ಮೋಸವೆಂದು ವಿಮರ್ಶಕರು ವಾದಿಸುತ್ತಾರೆ. ಹಾಗಾದರೆ, ಈ ಪುಸ್ತಕದ ಒಂದು ಕಥಾ ಭಾಗವು ಐತಿಹಾಸಿಕ ನಿಜಾಂಶದೊಂದಿಗೆ ಹೊಂದಿಕೊಳ್ಳುತ್ತದೊ ಇಲ್ಲವೊ ಎಂಬುದನ್ನು ನಾವು ಮೊದಲಾಗಿ ನೋಡೋಣ.
11, 12. ಬೇಲ್ಶಚ್ಚರನು ಕೇವಲ ಒಬ್ಬ ಕಾಲ್ಪನಿಕ ವ್ಯಕ್ತಿಯೆಂಬ ಆರೋಪಕ್ಕೆ ಏನು ಸಂಭವಿಸಿತು?
11 ಯಾವುದನ್ನು ನಾವು ಕಾಣೆಯಾಗಿರುವ ಸಾಮ್ರಾಟನ ಮೊಕದ್ದಮೆಯೆಂದು ಕರೆಯಬಹುದೋ ಅದನ್ನು ಈಗ ಪರಿಗಣಿಸಿರಿ. ಸಾ.ಶ.ಪೂ. 539ರಲ್ಲಿ, ಬಾಬೆಲ್ ಪಟ್ಟಣವು ಸೋಲಿಸಲ್ಪಟ್ಟಾಗ, ಬೇಲ್ಶಚ್ಚರನು ಬಾಬೆಲಿನಲ್ಲಿ ರಾಜ್ಯಭಾರವನ್ನು ನಡೆಸುತ್ತಿದ್ದನೆಂದು ದಾನಿಯೇಲ 5ನೆಯ ಅಧ್ಯಾಯವು ತಿಳಿಯಪಡಿಸುತ್ತದೆ. ವಿಮರ್ಶಕರು ಈ ಅಂಶದ ಮೇಲೆ ಸವಾಲೊಡ್ಡಿದ್ದಾರೆ, ಏಕೆಂದರೆ ಬೈಬಲನ್ನು ಬಿಟ್ಟು ಬೇರೆಲ್ಲಿಯೂ ಬೇಲ್ಶಚ್ಚರನ ಹೆಸರು ಕಂಡುಬರುವುದಿಲ್ಲ. ಅವನ ಬದಲು ನೆಬೊನೈಡಸ್‌ನನ್ನು ಬಾಬೆಲಿನ ಅರಸರಲ್ಲಿ ಕೊನೆಯವನೆಂದು ಪುರಾತನ ಇತಿಹಾಸಕಾರರು ಗುರುತಿಸುತ್ತಾರೆ.
12 ಆದರೆ 1854ನೇ ಇಸವಿಯಲ್ಲಿ, ಸದ್ಯದ ಇರಾಕ್ ದೇಶದ ಊರ್ ಎಂಬ ಪುರಾತನ ಬಬಿಲೋನ್ಯ ಪಟ್ಟಣದ ಅವಶೇಷಗಳನ್ನು ಅಗೆದಾಗ, ಕೆಲವು ಚಿಕ್ಕಪುಟ್ಟ ಜೇಡಿಮಣ್ಣಿನ ಸಿಲಿಂಡರ್‌ಗಳು ದೊರೆತವು. ಈ ಬೆಣೆಲಿಪಿ ದಾಖಲೆಗಳಲ್ಲಿ, “ನನ್ನ ಹಿರಿಯ ಮಗನಾದ ಬೇಲ್ಶಚ್ಚರ”ನಿಗೆ ಎಂಬುದಾಗಿ ರಾಜ ನೆಬೊನೈಡಸ್ ಸೂಚಿಸಿ ಬರೆದ ಒಂದು ಬೇಡಿಕೆಯೂ ಒಳಗೂಡಿತ್ತು. ದಾನಿಯೇಲ ಪುಸ್ತಕದ ಬೇಲ್ಶಚ್ಚರನೇ ಇವನೆಂದು, ವಿಮರ್ಶಕರು ಸಹ ಒಪ್ಪಲೇಬೇಕಾಯಿತು. ಹೀಗೆ ಕಾಣೆಯಾಗಿದ್ದ ಸಾಮ್ರಾಟನು ನಿಜವಾಗಿಯೂ ಕಾಣೆಯಾಗಿರಲಿಲ್ಲ, ಐಹಿಕ ಗ್ರಂಥಗಳಲ್ಲಿ ಅವನ ಉಲ್ಲೇಖವಿರಲಿಲ್ಲ ಅಷ್ಟೇ. ದಾನಿಯೇಲನ ಬರಹಗಳು ನಿಜವಾಗಿಯೂ ವಿಶ್ವಾಸಾರ್ಹವಾಗಿವೆ ಎಂಬುದಕ್ಕಿರುವ ಅನೇಕ ರುಜುವಾತುಗಳಲ್ಲಿ ಇದು ಕೇವಲ ಒಂದಾಗಿದೆ. ದಾನಿಯೇಲ ಪುಸ್ತಕವು ಖಂಡಿತವಾಗಿಯೂ ದೇವರ ಪ್ರವಾದನ ವಾಕ್ಯದ ಭಾಗವಾಗಿದ್ದು, ಈಗ, ಅಂದರೆ ಅಂತ್ಯಕಾಲದಲ್ಲಿ ನಮ್ಮ ಜಾಗರೂಕವಾದ ಪರಿಶೀಲನೆಗೆ ಯೋಗ್ಯವಾಗಿದೆ ಎಂಬುದನ್ನು ಇಂತಹ ಪ್ರಮಾಣವು ತೋರಿಸುತ್ತದೆ.
13, 14. ನೆಬೂಕದ್ನೆಚ್ಚರನು ಯಾರಾಗಿದ್ದನು, ಮತ್ತು ಯಾವ ಸುಳ್ಳು ದೇವತೆಗೆ ಅವನು ವಿಶೇಷವಾಗಿ ತನ್ನ ಧಾರ್ಮಿಕ ಭಕ್ತಿಯನ್ನು ಸಲ್ಲಿಸಿದನು?
13 ದಾನಿಯೇಲ ಪುಸ್ತಕವೆಂಬ ನೇಯ್ದ ಬಟ್ಟೆಯಲ್ಲಿ, ಲೋಕ ಶಕ್ತಿಗಳ ಮುನ್ನಡೆ ಮತ್ತು ಅವುಗಳ ಅರಸರಲ್ಲಿ ಕೆಲವರ ಕೃತ್ಯಗಳ ಕುರಿತಾದ ಪ್ರವಾದನೆಗಳು ಹೆಣೆಯಲ್ಪಟ್ಟಿವೆ. ಇಂತಹ ಅರಸರಲ್ಲಿ ಒಬ್ಬನನ್ನು, ಒಂದು ಸಾಮ್ರಾಜ್ಯವನ್ನು ಕಟ್ಟಿದ ಯುದ್ಧವೀರನೆಂದು ಕರೆಯಬಹುದು. ಬಾಬೆಲಿನ ಯುವರಾಜನೋಪಾದಿ, ಅವನು ಮತ್ತು ಅವನ ಸೈನಿಕರು ಕರ್ಕೆಮೀಷಿನಲ್ಲಿ ಐಗುಪ್ತದ ಫರೋಹ ನೆಕೋವಿನ ಸೈನ್ಯಗಳನ್ನು ಧ್ವಂಸಮಾಡಿಬಿಟ್ಟರು. ಆದರೆ ತನ್ನ ತಂದೆಯ ಮರಣದ ಸುದ್ದಿಯನ್ನು ಕೇಳಿದ ಈ ವಿಜೇತ ರಾಜಕುಮಾರನು ತನ್ನ ಸೇನಾಪತಿಗಳಿಗೆ ಈ ಬೆನ್ನಟ್ಟುವಿಕೆಗಳನ್ನು ವಹಿಸಿ ಮನೆಗೆ ಹಿಂದಿರುಗಿದನು. ತನ್ನ ತಂದೆಯಾದ ನೆಬೊಪೊಲಾಸರನು ನಂತರ ಯುವ ನೆಬೂಕದ್ನೆಚ್ಚರನು ಸಾ.ಶ.ಪೂ. 624ರಲ್ಲಿ ಸಿಂಹಾಸನವನ್ನೇರಿದನು. ಅವನು ತನ್ನ ಆಳ್ವಿಕೆಯ 43 ವರ್ಷಗಳ ಸಮಯಾವಧಿಯಲ್ಲಿ, ಹಿಂದೊಮ್ಮೆ ಅಶ್ಶೂರ್ಯದ ವಶದಲ್ಲಿದ್ದ ಕ್ಷೇತ್ರಗಳನ್ನು ಸ್ವಾಧೀನಪಡಿಸಿಕೊಂಡನು ಮಾತ್ರವಲ್ಲ ಸಿರಿಯದಿಂದ ಹಿಡಿದು ಪಶ್ಚಿಮದಲ್ಲಿನ ಪ್ಯಾಲೆಸ್ಟೀನ್ ಹಾಗೂ ಐಗುಪ್ತದ ಗಡಿಯ ತನಕ ತನ್ನ ಆಧಿಪತ್ಯವನ್ನು ವಿಸ್ತರಿಸಿದನು.
14 ನೆಬೂಕದ್ನೆಚ್ಚರನು ತನ್ನ ಧಾರ್ಮಿಕ ಭಕ್ತಿಯನ್ನು, ಬಾಬೆಲಿನ ಪ್ರಮುಖ ದೇವತೆಯಾಗಿದ್ದ ಮಾರ್ದೂಕನಿಗೆ ಸಲ್ಲಿಸಿದನು. ತನ್ನ ಎಲ್ಲ ವಿಜಯಗಳಿಗಾಗಿ ಮಾರ್ದೂಕನೇ ಕಾರಣನೆಂದು ನೆನಸಿದ ಅರಸನು, ಅವನಿಗೇ ಕೀರ್ತಿ ಸಲ್ಲಿಸಿದನು. ಬಾಬೆಲಿನಲ್ಲಿ ನೆಬೂಕದ್ನೆಚ್ಚರನು ಮಾರ್ದೂಕನಿಗಾಗಿ ಹಾಗೂ ಇತರ ದೇವದೇವತೆಗಳಿಗಾಗಿ ದೇವಾಲಯಗಳನ್ನು ಕಟ್ಟಿಸಿ, ಅವುಗಳನ್ನು ಹೆಚ್ಚೆಚ್ಚು ಅಂದಗೊಳಿಸಿದನು. ಬಾಬೆಲಿನ ಈ ಅರಸನು ದೂರಾ ಬೈಲಿನಲ್ಲಿ ಸ್ಥಾಪಿಸಿದ ಬಂಗಾರದ ಪ್ರತಿಮೆಯು ಸಹ ಮಾರ್ದೂಕನಿಗೋಸ್ಕರ ಪ್ರತಿಷ್ಠಾಪಿಸಲ್ಪಟ್ಟಿದ್ದಿರಬಹುದು. (ದಾನಿಯೇಲ 3:1, 2) ಅಷ್ಟೇ ಅಲ್ಲ, ನೆಬೂಕದ್ನೆಚ್ಚರನು ತನ್ನ ಮಿಲಿಟರಿ ಚಲನೆಗಳನ್ನು ಯೋಜಿಸಲಿಕ್ಕಾಗಿ, ಅತ್ಯಧಿಕವಾಗಿ ಕಣಿಕೇಳುವಿಕೆಯನ್ನೇ ಅವಲಂಬಿಸಿದ್ದಂತೆ ತೋರುತ್ತದೆ.
15, 16. ಬಬಿಲೋನ್ಯ ಪಟ್ಟಣಕ್ಕಾಗಿ ನೆಬೂಕದ್ನೆಚ್ಚರನು ಏನು ಮಾಡಿದನು, ಮತ್ತು ಅದರ ಪ್ರಖ್ಯಾತಿಯ ಬಗ್ಗೆ ಅವನು ಜಂಬಕೊಚ್ಚಿಕೊಂಡಾಗ ಏನು ಸಂಭವಿಸಿತು?
15 ನೆಬೂಕದ್ನೆಚ್ಚರನ ತಂದೆಯು ಬೃಹದಾಕಾರದ ಜೋಡಿ ಗೋಡೆಗಳನ್ನು ಕಟ್ಟಿಸಲು ಆರಂಭಿಸಿದನಾದರೂ ನೆಬೂಕದ್ನೆಚ್ಚರನೇ ಅವುಗಳನ್ನು ಪೂರ್ಣಗೊಳಿಸುವ ಮೂಲಕ, ಆ ರಾಜಧಾನಿ ಪಟ್ಟಣವನ್ನು ದುರ್ಗಮವಾದದ್ದಾಗಿ ಮಾಡಿದನು. ಸ್ವದೇಶದ ಗಿರಿವನಗಳಿಗಾಗಿ ಹಂಬಲಿಸುತ್ತಿದ್ದ ತನ್ನ ಮೇದ್ಯ ರಾಣಿಯ ಆಸೆಯನ್ನು ಪೂರೈಸಲಿಕ್ಕಾಗಿ, ನೆಬೂಕದ್ನೆಚ್ಚರನು ತೂಗುದೋಟವನ್ನು ಕಟ್ಟಿಸಿದನೆಂದು ಹೇಳಲಾಗುತ್ತದೆ. ಇದು, ಪುರಾತನ ಲೋಕದ ಏಳು ಅದ್ಭುತಗಳಲ್ಲಿ ಒಂದಾಗಿದೆ. ಅವನು ಬಾಬೆಲನ್ನು ಆ ಸಮಯದ ಅತಿ ಎತ್ತರದ ಗೋಡೆಗಳುಳ್ಳ ಪಟ್ಟಣವಾಗಿ ಮಾಡಿದನು. ಸುಳ್ಳಾರಾಧನೆಯ ಕೇಂದ್ರವಾಗಿದ್ದ ಆ ಪಟ್ಟಣದ ಬಗ್ಗೆ ಅವನೆಷ್ಟು ಹೆಮ್ಮೆಪಟ್ಟುಕೊಂಡನು!
16 “ನಾನು ಕಟ್ಟಿಸಿಕೊಂಡಿರುವದು ಇಗೋ, ಮಹಾಪಟ್ಟಣವಾದ ಈ ಬಾಬೆಲ್” ಎಂದು ಒಂದು ದಿನ ನೆಬೂಕದ್ನೆಚ್ಚರನು ಜಂಬಕೊಚ್ಚಿಕೊಂಡನು. ದಾನಿಯೇಲ 4:30-36ಕ್ಕನುಸಾರ, ‘ಈ ಮಾತು ರಾಜನ ಬಾಯಿಂದ ಹೊರಡುತ್ತಿರುವಾಗಲೇ’ ಅವನಿಗೆ ಹುಚ್ಚುಹಿಡಿಯಿತು. ದಾನಿಯೇಲನು ಮುಂತಿಳಿಸಿದ್ದಂತೆಯೇ, ಏಳು ವರ್ಷಗಳ ವರೆಗೆ ಆಳ್ವಿಕೆಯನ್ನು ನಡೆಸಲು ಅವನು ಅಸಮರ್ಥನಾಗಿ ಹುಲ್ಲು ತಿಂದನು. ತದನಂತರ ಅವನಿಗೆ ರಾಜ್ಯವು ಪುನಃ ದೊರಕಿತು. ಇದೆಲ್ಲದರ ಪ್ರವಾದನ ಮಹತ್ವವೇನೆಂದು ನೀವು ಬಲ್ಲಿರೊ? ಅದರ ಪ್ರಧಾನ ನೆರವೇರಿಕೆಯು ನಮ್ಮನ್ನು ಈ ಅಂತ್ಯಕಾಲಕ್ಕೆ ಹೇಗೆ ತರುತ್ತದೆ ಎಂಬುದನ್ನು ನೀವು ವಿವರಿಸಬಲ್ಲಿರೊ?
ಪ್ರವಾದನೆಯ ಎಳೆಗಳನ್ನು ಪರಿಗಣಿಸುವುದು
17. ಲೋಕ ಅರಸನೋಪಾದಿ ನೆಬೂಕದ್ನೆಚ್ಚರನು ತನ್ನ ಆಳ್ವಿಕೆಯ ಎರಡನೆಯ ವರ್ಷದಲ್ಲಿದ್ದಾಗ, ದೇವರು ಅವನಿಗೆ ನೀಡಿದ ಪ್ರವಾದನಾತ್ಮಕ ಕನಸನ್ನು ನೀವು ಹೇಗೆ ವರ್ಣಿಸುವಿರಿ?
17 ಈಗ, ದಾನಿಯೇಲ ಪುಸ್ತಕದಲ್ಲಿರುವ ಕೆಲವು ಪ್ರವಾದನೆಯ ಎಳೆಗಳನ್ನು ನಾವು ಪರಿಗಣಿಸೋಣ. ಲೋಕ ಅರಸನೋಪಾದಿ, ನೆಬೂಕದ್ನೆಚ್ಚರನ ಆಳ್ವಿಕೆಯ ಎರಡನೆಯ ವರ್ಷದಲ್ಲಿ (ಸಾ.ಶ.ಪೂ. 606/605), ಅವನಿಗೆ ಭಯಂಕರವಾದ ಕನಸೊಂದು ದಾನಿಯೇಲ 2ನೆಯ ಅಧ್ಯಾಯಕ್ಕನುಸಾರ, ಆ ಕನಸು ಒಂದು ಅದ್ಭುತಪ್ರತಿಮೆಯನ್ನು ಒಳಗೊಂಡಿತ್ತು. ಆ ಪ್ರತಿಮೆಗೆ ಬಂಗಾರದ ತಲೆ, ಬೆಳ್ಳಿಯ ಎದೆತೋಳುಗಳು, ತಾಮ್ರದ ಹೊಟ್ಟೆಸೊಂಟಗಳು, ಕಬ್ಬಿಣದ ಕಾಲುಗಳು, ಕಬ್ಬಿಣ ಮಿಶ್ರಿತ ಮಣ್ಣಿನ ಪಾದಗಳಿದ್ದವು. ಆ ಪ್ರತಿಮೆಯ ವಿಭಿನ್ನ ಭಾಗಗಳು ಏನನ್ನು ಪ್ರತಿನಿಧಿಸಿದವು?
ಬೀಳುವಂತೆ ದೇವರು ಮಾಡಿದನು.18. ಕನಸಿನ ಪ್ರತಿಮೆಯ ಬಂಗಾರದ ತಲೆ, ಬೆಳ್ಳಿಯ ಎದೆತೋಳುಗಳು ಮತ್ತು ಕಬ್ಬಿಣದ ಹೊಟ್ಟೆಸೊಂಟಗಳು ಏನನ್ನು ಪ್ರತಿನಿಧಿಸಿದವು?
18 ಯೆಹೋವನ ಪ್ರವಾದಿಯು ನೆಬೂಕದ್ನೆಚ್ಚರನಿಗೆ ಹೇಳಿದ್ದು: “ಅರಸೇ, . . . ನೀನೇ ಆ ಬಂಗಾರದ ತಲೆ.” (ದಾನಿಯೇಲ 2:37, 38) ಬಾಬೆಲ್ ಸಾಮ್ರಾಜ್ಯವನ್ನು ಆಳಿದ ರಾಜವಂಶದ ಮುಖ್ಯಸ್ಥನು ನೆಬೂಕದ್ನೆಚ್ಚರನಾಗಿದ್ದನು. ಬಾಬೆಲನ್ನು ಮೇದ್ಯ ಪಾರಸಿಯ ರಾಜವಂಶವು ಕೆಳಗುರುಳಿಸಿತು. ಈ ರಾಜವಂಶವು ಪ್ರತಿಮೆಯ ಬೆಳ್ಳಿಯ ಎದೆತೋಳುಗಳನ್ನು ಪ್ರತಿನಿಧಿಸಿತು. ತದನಂತರ, ತಾಮ್ರದ ಹೊಟ್ಟೆಸೊಂಟಗಳನ್ನು ಪ್ರತಿನಿಧಿಸಿದ ಗ್ರೀಕ್ ಸಾಮ್ರಾಜ್ಯವು ಅಧಿಕಾರಕ್ಕೆ ಬಂತು. ಈ ಲೋಕ ಶಕ್ತಿಯು ಹೇಗೆ ಆರಂಭಗೊಂಡಿತು?
19, 20. ಮಹಾ ಅಲೆಕ್ಸಾಂಡರನು ಯಾರಾಗಿದ್ದನು, ಮತ್ತು ಗ್ರೀಸ್ ದೇಶವನ್ನು ಒಂದು ಲೋಕ ಶಕ್ತಿಯಾಗಿ ಮಾಡುವುದರಲ್ಲಿ ಅವನು ಯಾವ ಪಾತ್ರವನ್ನು ವಹಿಸಿದನು?
19 ಸಾ.ಶ.ಪೂ. ನಾಲ್ಕನೆಯ ಶತಮಾನದಲ್ಲಿ, ದಾನಿಯೇಲ ಪುಸ್ತಕದ ಪ್ರವಾದನೆಯ ನೆರವೇರಿಕೆಯಲ್ಲಿ ಒಬ್ಬ ಯುವ ಪುರುಷನು ಒಂದು ಮಹತ್ವದ ಪಾತ್ರವನ್ನು ವಹಿಸಿದನು. ಅವನು ಸಾ.ಶ.ಪೂ. 356ರಲ್ಲಿ ಜನಿಸಿದನು ಮತ್ತು ಇವನನ್ನು ಲೋಕವು ಮಹಾ ಅಲೆಕ್ಸಾಂಡರ್ ಎಂದು ಕರೆಯಿತು. ಸಾ.ಶ.ಪೂ. 336ರಲ್ಲಿ ತನ್ನ ತಂದೆಯಾದ ಫಿಲಿಪ್ಪನ ಕೊಲೆಯ ನಂತರ, 20 ವರ್ಷ ಪ್ರಾಯದ ಅಲೆಕ್ಸಾಂಡರನು ಮ್ಯಾಸಿಡೋನಿಯದ ಸಿಂಹಾಸನಕ್ಕೆ ಉತ್ತರಾಧಿಕಾರಿಯಾದನು.
20 ಸಾ.ಶ.ಪೂ. 334ರ ಮೇ ತಿಂಗಳಿನ ಆರಂಭದಲ್ಲಿ, ಅಲೆಕ್ಸಾಂಡರನು ವಿಜಯದ ದಂಡಯಾತ್ರೆಯನ್ನು ಆರಂಭಿಸಿದನು. ಅವನಲ್ಲಿದ್ದ 30,000 ಮಂದಿ ಕಾಲಾಳುಗಳು ಹಾಗೂ 5,000 ಅಶ್ವ ಸೈನ್ಯವು ಚಿಕ್ಕದಾಗಿದ್ದರೂ ಬಹಳ ದಕ್ಷವಾಗಿತ್ತು. ಸಾ.ಶ.ಪೂ. 334ರಲ್ಲಿ, ಏಷ್ಯಾ ಮೈನರ್ (ಈಗಿನ ಟರ್ಕಿ)ನ ವಾಯುವ್ಯ ದಿಕ್ಕಿನಲ್ಲಿರುವ ಗ್ರ್ಯಾನಿಕಸ್ ನದಿಯ ಬಳಿ, ಅಲೆಕ್ಸಾಂಡರನು ಪಾರಸಿಯರ ವಿರುದ್ಧ ತನ್ನ ಪ್ರಪ್ರಥಮ ಕದನವನ್ನು ಗೆದ್ದನು. ಸಾ.ಶ.ಪೂ. 326ರೊಳಗಾಗಿ, ಪಟ್ಟುಬಿಡದ ಈ ವಿಜೇತನು, ಪಾರಸಿಯರ ಮೇಲೆ ಜಯಸಾಧಿಸಿ, ಆಧುನಿಕ ದಿನದ ಪಾಕಿಸ್ತಾನದಲ್ಲಿರುವ ಸಿಂಧೂ ನದಿಯಷ್ಟು ಪೂರ್ವದ ವರೆಗೆ ತನ್ನ ರಾಜ್ಯಾಡಳಿತವನ್ನು ವಿಸ್ತರಿಸಿದನು. ಆದರೆ ಬಾಬೆಲಿನಲ್ಲಿದ್ದಾಗ ತನ್ನ ಕೊನೆಯ ಕದನದಲ್ಲಿ ಅವನು ಸೋತುಹೋದನು. ಸಾ.ಶ.ಪೂ. 323ರ ಜೂನ್ 13ರಂದು, 32 ವರ್ಷ ಹಾಗೂ 8 ತಿಂಗಳುಗಳ ವರೆಗೆ ಮಾತ್ರ ಜೀವಿಸಿದ ಅಲೆಕ್ಸಾಂಡರನು, ಅತ್ಯಂತ ಪ್ರಬಲ ವೈರಿಯಾದ ಮರಣಕ್ಕೆ ಶರಣಾಗತನಾದನು. (1 ಕೊರಿಂಥ 15:55) ಅವನ ವಿಜಯಗಳ ಕಾರಣ, ದಾನಿಯೇಲನ ಪ್ರವಾದನೆಯಲ್ಲಿ ಮುಂತಿಳಿಸಲಾದಂತೆ, ಗ್ರೀಸ್ ಒಂದು ಲೋಕ ಶಕ್ತಿಯಾಗಿ ಪರಿಣಮಿಸಿತ್ತು.
21. ರೋಮ್ ಸಾಮ್ರಾಜ್ಯದ ಜೊತೆಗೆ ಬೇರೆ ಯಾವ ಲೋಕ ಶಕ್ತಿಯನ್ನು ಆ ಕನಸಿನ ಪ್ರತಿಮೆಯ ಕಬ್ಬಿಣದ ಕಾಲುಗಳು ಚಿತ್ರಿಸಿದವು?
21 ಈ ಅದ್ಭುತಪ್ರತಿಮೆಯ ಕಬ್ಬಿಣದ ಕಾಲುಗಳು ಏನನ್ನು ಪ್ರತಿನಿಧಿಸಿದವು? ಅದು ಗ್ರೀಕ್ ಸಾಮ್ರಾಜ್ಯವನ್ನು ನುಚ್ಚುನೂರುಗೊಳಿಸಿದ ಕಬ್ಬಿಣದಂತಹ ರೋಮ್ ಸಾಮ್ರಾಜ್ಯವನ್ನು ಪ್ರತಿನಿಧಿಸಿತು. ಯೇಸು ಕ್ರಿಸ್ತನಿಂದ ಘೋಷಿಸಲ್ಪಟ್ಟ ದೇವರ ರಾಜ್ಯಕ್ಕೆ ಯಾವ ಗೌರವವನ್ನೂ ತೋರಿಸದ ರೋಮನರು, ಸಾ.ಶ. 33ರಲ್ಲಿ ಅವನನ್ನು ಯಾತನಾ ಕಂಭದ ಮೇಲೆ ಮರಣಕ್ಕೊಪ್ಪಿಸಿದರು. ಸತ್ಯ ಕ್ರೈಸ್ತತ್ವವನ್ನು ನುಚ್ಚುನೂರುಗೊಳಿಸಲು, ರೋಮ್ ಯೇಸುವಿನ ಶಿಷ್ಯರನ್ನು ಹಿಂಸಿಸಿತು. ಆದರೂ, ನೆಬೂಕದ್ನೆಚ್ಚರನ ಕನಸಿನ ಪ್ರತಿಮೆಯಲ್ಲಿ ಕಂಡುಬಂದ ಆ ಕಬ್ಬಿಣದ ಕಾಲುಗಳು, ರೋಮ್ ಸಾಮ್ರಾಜ್ಯವನ್ನು ಮಾತ್ರವಲ್ಲ ಅದರ ರಾಜಕೀಯ ಶಾಖೆಗಳನ್ನು, ಅಂದರೆ ಆ್ಯಂಗ್ಲೋ ಅಮೆರಿಕನ್ ಲೋಕ ಶಕ್ತಿಯನ್ನೂ ಪ್ರತಿನಿಧಿಸಿದವು.
22. ನಾವು ಅಂತ್ಯಕಾಲದಲ್ಲಿ ಇದ್ದೇವೆಂಬುದನ್ನು ಮನಗಾಣಿಸಲು ಈ ಕನಸಿನ ಪ್ರತಿಮೆಯು ನಮಗೆ ಹೇಗೆ ಸಹಾಯ ಮಾಡುತ್ತದೆ?
22 ನಾವು ಅಂತ್ಯಕಾಲದಲ್ಲಿ ಜೀವಿಸುತ್ತಾ ಇದ್ದೇವೆಂಬುದು ಜಾಗರೂಕವಾದ ಅಧ್ಯಯನದಿಂದ ತಿಳಿದುಬರುತ್ತದೆ, ಏಕೆಂದರೆ ನಾವು ಆ ಕನಸಿನ ಪ್ರತಿಮೆಯ ಕಬ್ಬಿಣ ಹಾಗೂ ಜೇಡಿಮಣ್ಣಿನಿಂದ ಮಿಶ್ರಿತವಾದ ಕಾಲುಗಳ ಹಂತವನ್ನು ತಲಪಿದ್ದೇವೆ. ಈಗಿನ ಕೆಲವು ಸರಕಾರಗಳು ಕಬ್ಬಿಣದಂತಿವೆ ಇಲ್ಲವೆ ನಿರಂಕುಶಾಧಿಕಾರ ಉಳ್ಳವುಗಳಾಗಿವೆ. ಇನ್ನೂ ಕೆಲವು ಸರಕಾರಗಳು ಜೇಡಿಮಣ್ಣಿನಂತಿವೆ. “ಮಾನವಕುಲದ ಸಂತತಿ”ಯವರು ಯಾವುದರಿಂದ ಮಾಡಲ್ಪಟ್ಟಿದ್ದಾರೊ ಆ ಜೇಡಿಮಣ್ಣು ದುರ್ಬಲವಾಗಿದ್ದರೂ, ತಮ್ಮ ಮೇಲೆ ಅಧಿಕಾರ ನಡೆಸುತ್ತಿರುವ ಸರಕಾರಗಳು ತಮ್ಮ ಅಭಿಪ್ರಾಯಗಳಿಗೂ ಕಿವಿಗೊಡಬೇಕೆಂದು ಸಾಮಾನ್ಯ ಜನರು ಬಯಸುತ್ತಾರೆ. ಅವರ ಬೇಡಿಕೆಗಳಿಗೆ ಈ ಕಬ್ಬಿಣದಂತಹ ಆಳ್ವಿಕೆಗಳು ಕಿವಿಗೊಡುವ ಹಂಗಿಗೊಳಗಾಗಿವೆ. (ದಾನಿಯೇಲ 2:43; ಯೋಬ 10:9) ಆದರೆ, ಕಬ್ಬಿಣವನ್ನು ಜೇಡಿಮಣ್ಣಿನೊಂದಿಗೆ ಒಂದುಗೂಡಿಸುವುದು ಅಸಾಧ್ಯವಾಗಿರುವಂತೆಯೇ, ನಿರಂಕುಶ ಪ್ರಭುತ್ವ ಹಾಗೂ ಸಾಮಾನ್ಯ ಜನರ ನಡುವೆ ಹೊಂದಾಣಿಕೆಯನ್ನು ತರುವುದು ಅಸಾಧ್ಯವಾಗಿದೆ. ಬಹು ಬೇಗನೆ, ರಾಜಕೀಯವಾಗಿ ಛಿದ್ರಗೊಂಡಿರುವ ಈ ಲೋಕಕ್ಕೆ ದೇವರ ರಾಜ್ಯವು ಅಂತ್ಯವನ್ನು ತರುವುದು.—ದಾನಿಯೇಲ 2:44.
23. ಬೇಲ್ಶಚ್ಚರನ ಆಳ್ವಿಕೆಯ ಮೊದಲ ವರ್ಷದಲ್ಲಿ ದಾನಿಯೇಲನಿಗೆ ಬಿದ್ದ ಕನಸು ಹಾಗೂ ದರ್ಶನಗಳನ್ನು ನೀವು ಹೇಗೆ ವರ್ಣಿಸುವಿರಿ?
23ದಾನಿಯೇಲನ ಮನಸೆಳೆಯುವ ಪ್ರವಾದನೆಯ 7ನೆಯ ಅಧ್ಯಾಯವು ಸಹ, ನಮ್ಮನ್ನು ಅಂತ್ಯಕಾಲಕ್ಕೆ ಬರಮಾಡುತ್ತದೆ. ಬಾಬೆಲಿನ ಅರಸನಾದ ಬೇಲ್ಶಚ್ಚರನ ಆಳ್ವಿಕೆಯ ಮೊದಲನೆಯ ವರ್ಷದಲ್ಲಿ ನಡೆದ ಘಟನೆಯನ್ನು ಅದು ವರದಿಸುತ್ತದೆ. ತನ್ನ 70ರ ಪ್ರಾಯದಲ್ಲಿದ್ದ ದಾನಿಯೇಲನಿಗೆ, “ಹಾಸಿಗೆಯ ಮೇಲೆ ಸ್ವಪ್ನವಾಯಿತು, ಅವನ ಮನಸ್ಸಿನಲ್ಲಿ ಕನಸುಬಿತ್ತು.” ಆ ದರ್ಶನಗಳಿಂದ ಅವನೆಷ್ಟು ಭಯಭ್ರಾಂತನಾದನು! ‘ಅಲ್ಲಿ ನೋಡಿ’ ಎಂದು ಅವನು ಘೋಷಿಸುತ್ತಾನೆ. “ಚತುರ್ದಿಕ್ಕಿನ ಗಾಳಿಗಳೂ ಮಹಾ ಸಾಗರದ ಮೇಲೆ ರಭಸವಾಗಿ ಬೀಸಿ ಬಡಿಯುತ್ತಿದ್ದವು. ಒಂದಕ್ಕೊಂದು ವಿಲಕ್ಷಣವಾದ ನಾಲ್ಕು ದೊಡ್ಡ ಮೃಗಗಳು ಸಾಗರದೊಳಗಿಂದ ಬಂದವು.” (ದಾನಿಯೇಲ 7:1-8, 15) ಎಷ್ಟು ಅಸಾಧಾರಣವಾದ ಮೃಗಗಳು! ಮೊದಲನೆಯದು ರೆಕ್ಕೆಗಳುಳ್ಳ ಸಿಂಹವಾಗಿದೆ, ಎರಡನೆಯದು ಕರಡಿಯ ಹಾಗಿದೆ. ಅನಂತರ ನಾಲ್ಕು ರೆಕ್ಕೆಗಳು ಮತ್ತು ನಾಲ್ಕು ತಲೆಗಳುಳ್ಳ ಚಿರತೆಯು ಬರುತ್ತದೆ! ಅಸಾಧಾರಣ ಬಲವುಳ್ಳ ನಾಲ್ಕನೆಯ ಮೃಗಕ್ಕೆ, ಕಬ್ಬಿಣದ ದೊಡ್ಡ ಹಲ್ಲುಗಳು ಮತ್ತು ಹತ್ತು ಕೊಂಬುಗಳಿವೆ. ಆ ಹತ್ತು ಕೊಂಬುಗಳೊಳಗಿಂದ “ಚಿಕ್ಕ” ಕೊಂಬೊಂದು ಮೊಳೆಯುತ್ತದೆ. ಅದಕ್ಕೆ “ಮನುಷ್ಯನ ಕಣ್ಣುಗಳಂತಿರುವ ಕಣ್ಣುಗಳೂ ಬಡಾಯಿಕೊಚ್ಚಿಕೊಳ್ಳುವ ಬಾಯೂ ಇದ್ದವು.” ಎಂತಹ ಭಯಾನಕ ಜೀವಿಗಳು!
24. ದಾನಿಯೇಲ 7:9-14ಕ್ಕನುಸಾರ, ದಾನಿಯೇಲನು ಪರಲೋಕದಲ್ಲಿ ಏನು ನೋಡುತ್ತಾನೆ, ಮತ್ತು ಈ ದರ್ಶನವು ಏನನ್ನು ಸೂಚಿಸುತ್ತದೆ?
24 ಮುಂದೆ, ಪ್ರವಾದಿಯು ಪರಲೋಕದಲ್ಲಾಗುವ ದರ್ಶನಗಳನ್ನು ಕಾಣುತ್ತಾನೆ. (ದಾನಿಯೇಲ 7:9-14) “ಮಹಾವೃದ್ಧನಾದ” ಯೆಹೋವ ದೇವರು, ನ್ಯಾಯಾಧೀಶನೋಪಾದಿ ಮಹಿಮಾಭರಿತನಾಗಿ ಆಸೀನನಾಗಿದ್ದಾನೆ. “ಲಕ್ಷೋಪಲಕ್ಷ ದೂತರು ಆತನನ್ನು ಸೇವಿಸುತ್ತಿದ್ದರು, ಕೋಟ್ಯನುಕೋಟಿ ಕಿಂಕರರು ಆತನ ಮುಂದೆ ನಿಂತುಕೊಂಡಿದ್ದರು.” ಮೃಗಗಳಿಗೆ ಪ್ರತಿಕೂಲ ನ್ಯಾಯತೀರ್ಪನ್ನು ವಿಧಿಸುತ್ತಾ, ದೇವರು ಅವುಗಳಿಂದ ದೊರೆತನವನ್ನು ತೆಗೆದುಬಿಟ್ಟು, ನಾಲ್ಕನೆಯ ಮೃಗವನ್ನು ನಾಶಮಾಡುತ್ತಾನೆ. “ಸಕಲಜನಾಂಗ ಕುಲಭಾಷೆಗಳವರ” ಮೇಲೆ ಶಾಶ್ವತವಾದ ದೊರೆತನವನ್ನು ಮಾಡುವಂತೆ, ಅಧಿಕಾರವು “ಮನುಷ್ಯ ಕುಮಾರನಂತಿರು”ವವನಿಗೆ ಕೊಡಲಾಗುತ್ತದೆ. ಇದು ಅಂತ್ಯಕಾಲವನ್ನು ಸೂಚಿಸುತ್ತದೆ ಮಾತ್ರವಲ್ಲ, ಇಸವಿ 1914ರಲ್ಲಿ ಮನುಷ್ಯ ಕುಮಾರನಾದ ಯೇಸು ಕ್ರಿಸ್ತನು ಸಿಂಹಾಸನವನ್ನೇರಿದ ವಿಷಯವನ್ನೂ ಸೂಚಿಸುತ್ತದೆ.
25, 26. ನಾವು ದಾನಿಯೇಲ ಪುಸ್ತಕವನ್ನು ಓದಿದಂತೆ, ಯಾವ ಪ್ರಶ್ನೆಗಳು ಏಳಬಹುದು, ಮತ್ತು ಅವುಗಳನ್ನು ಉತ್ತರಿಸಲು ಯಾವ ಪ್ರಕಾಶನವು ನಿಮಗೆ ಸಹಾಯ ಮಾಡಬಲ್ಲದು?
25 ದಾನಿಯೇಲ ಪುಸ್ತಕದ ಓದುಗರಿಗೆ ಅನೇಕ ಪ್ರಶ್ನೆಗಳು ಏಳುವವು ಎಂಬುದರಲ್ಲಿ ಸಂದೇಹವೇ ಇಲ್ಲ. ದೃಷ್ಟಾಂತಕ್ಕೆ, ದಾನಿಯೇಲ 7ನೆಯ ಅಧ್ಯಾಯದಲ್ಲಿರುವ ಆ ನಾಲ್ಕು ಮೃಗಗಳು ಏನನ್ನು ಪ್ರತಿನಿಧಿಸುತ್ತವೆ? ದಾನಿಯೇಲ 9:24-27ರಲ್ಲಿರುವ ಆ ಪ್ರವಾದನಾತ್ಮಕ “ಎಪ್ಪತ್ತು ವಾರಗಳ” ಕುರಿತಾದ ವಿವರಣೆಯು ಏನಾಗಿದೆ? ದಾನಿಯೇಲ 11ನೆಯ ಅಧ್ಯಾಯ ಮತ್ತು ಅದರಲ್ಲಿರುವ “ಉತ್ತರರಾಜನ” ಮತ್ತು “ದಕ್ಷಿಣರಾಜನ” ನಡುವಿನ ಪ್ರವಾದನಾತ್ಮಕ ಹೋರಾಟದ ಕುರಿತೇನು? ಈ ರಾಜರ ವಿಷಯವಾಗಿ ನಾವು ಈ ಅಂತ್ಯಕಾಲದಲ್ಲಿ ಏನನ್ನು ನಿರೀಕ್ಷಿಸಸಾಧ್ಯವಿದೆ?
26 ಯೆಹೋವನು ಭೂಮಿಯಲ್ಲಿರುವ ತನ್ನ ಅಭಿಷಿಕ್ತ ಸೇವಕರಿಗೆ, ಅಂದರೆ ದಾನಿಯೇಲ 7:18ರಲ್ಲಿ “ಪರಾತ್ಪರನ ಭಕ್ತ”ರೆಂದು ಕರೆಯಲ್ಪಟ್ಟವರಿಗೆ ಇಂತಹ ವಿಷಯಗಳ ಕುರಿತು ಒಳನೋಟವನ್ನು ದಯಪಾಲಿಸಿದ್ದಾನೆ. ಅಲ್ಲದೆ, ಪ್ರವಾದಿಯಾದ ದಾನಿಯೇಲನ ಪ್ರೇರಿತ ಬರಹಗಳ ಹೆಚ್ಚಿನ ಒಳನೋಟವನ್ನು ನಾವೆಲ್ಲರೂ ಪಡೆದುಕೊಳ್ಳುವಂತೆ, “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಏರ್ಪಾಡುಗಳನ್ನು ಮಾಡಿದೆ. (ಮತ್ತಾಯ 24:45) ಅದು ಇತ್ತೀಚೆಗೆ ಬಿಡುಗಡೆಯಾದ ದಾನಿಯೇಲನ ಪ್ರವಾದನೆಗೆ ಗಮನಕೊಡಿರಿ! ಎಂಬ ಪುಸ್ತಕವೇ ಆಗಿದೆ. ಈ ಸೊಗಸಾದ ವರ್ಣರಂಜಿತ, 320 ಪುಟಗಳ ಪ್ರಕಾಶನವು, ದಾನಿಯೇಲ ಪುಸ್ತಕದ ಪ್ರತಿಯೊಂದು ಭಾಗವನ್ನು ಆವರಿಸುತ್ತದೆ. ಅದು ನಂಬಿಕೆಯನ್ನು ಬಲಪಡಿಸುವ ಪ್ರತಿಯೊಂದು ಪ್ರವಾದನೆಯನ್ನು ಮತ್ತು ಪ್ರಿಯ ಪ್ರವಾದಿಯಾದ ದಾನಿಯೇಲನಿಂದ ದಾಖಲಿಸಲ್ಪಟ್ಟ ಪ್ರತಿಯೊಂದು ಕಥನ ರೂಪವನ್ನು ಪರಿಗಣಿಸುತ್ತದೆ.
ನಮ್ಮ ದಿನಕ್ಕಾಗಿರುವ ನಿಜವಾದ ಅರ್ಥ
27, 28. (ಎ) ದಾನಿಯೇಲ ಪುಸ್ತಕದಲ್ಲಿರುವ ಪ್ರವಾದನೆಗಳ ನೆರವೇರಿಕೆಯ ಕುರಿತಾದ ನಿಜತ್ವವೇನು? (ಬಿ) ನಾವು ಯಾವ ಸಮಯದಲ್ಲಿ ಜೀವಿಸುತ್ತಾ ಇದ್ದೇವೆ, ಮತ್ತು ನಾವು ಏನು ಮಾಡುವವರಾಗಿರಬೇಕು?
27 ಒಂದು ಮಹತ್ವದ ಅಂಶವನ್ನು ಪರಿಗಣಿಸಿರಿ: ಕೆಲವೊಂದು ವಿವರಗಳನ್ನು ಹೊರತುಪಡಿಸಿ, ದಾನಿಯೇಲ ಪುಸ್ತಕದ ಎಲ್ಲ ಪ್ರವಾದನೆಗಳು ನೆರವೇರಿವೆ. ಉದಾಹರಣೆಗೆ, ದಾನಿಯೇಲ 2ನೇ ಅಧ್ಯಾಯದ ಕನಸಿನ ಪ್ರತಿಮೆಯಲ್ಲಿ, ಕಾಲಿನಿಂದ ಚಿತ್ರಿಸಲ್ಪಟ್ಟಿರುವ ಲೋಕ ಸನ್ನಿವೇಶವನ್ನು ನಾವು ಈಗ ನೋಡುತ್ತೇವೆ. ದಾನಿಯೇಲ 4ನೆಯ ಅಧ್ಯಾಯದ ಮರದ ಬುಡದಲ್ಲಿರುವ ಮೋಟಿಗೆ ಬಿಗಿದಿದ್ದ ಪಟ್ಟೆಯು, 1914ರಲ್ಲಿ ದೇವರ ಸ್ವರ್ಗೀಯ ರಾಜ್ಯದ ಸ್ಥಾಪನೆಯಿಂದ ತೆಗೆಯಲ್ಪಟ್ಟಿತು. ಹೌದು, ದಾನಿಯೇಲ 7ನೆಯ ಅಧ್ಯಾಯದಲ್ಲಿ ಮುಂತಿಳಿಸಲ್ಪಟ್ಟಂತೆ, ಆ ಸಮಯದಲ್ಲಿ ಮಹಾವೃದ್ಧನು ಮನುಷ್ಯಕುಮಾರನಿಗೆ ದೊರೆತನವನ್ನು ಕೊಟ್ಟನು.—ದಾನಿಯೇಲ 7:13, 14; ಮತ್ತಾಯ 16:27–17:9.
28ದಾನಿಯೇಲ 8ನೆಯ ಅಧ್ಯಾಯದಲ್ಲಿರುವ 2,300 ದಿನಗಳು ಮತ್ತು 12ನೆಯ ಅಧ್ಯಾಯದ 1,290 ದಿನಗಳು ಮತ್ತು 1,335 ದಿನಗಳ ಪ್ರವಾದನೆಗಳು ಈಗಾಗಲೇ ನೆರವೇರಿವೆ. ದಾನಿಯೇಲ 11ನೆಯ ಅಧ್ಯಾಯದ ಪರಿಶೀಲನೆಯು ಉತ್ತರ ಹಾಗೂ ದಕ್ಷಿಣ ರಾಜರ ನಡುವಿನ ಹೋರಾಟವು ಅಂತಿಮ ಹಂತಗಳಲ್ಲಿದೆ ಎಂಬುದನ್ನು ತೋರಿಸುತ್ತದೆ. ನಾವು ಅಂತ್ಯಕಾಲದಲ್ಲಿ ಇದ್ದೇವೆಂಬುದಕ್ಕೆ ಇವೆಲ್ಲವೂ ಶಾಸ್ತ್ರೀಯ ಪುರಾವೆಯನ್ನು ಕೂಡಿಸುತ್ತವೆ. ಕಾಲಪ್ರವಾಹದಲ್ಲಿ ನಮಗಿರುವ ಅಪೂರ್ವವಾದ ಸ್ಥಾನವನ್ನು ಪರಿಗಣಿಸುವಾಗ, ನಾವು ಏನು ಮಾಡಲು ನಿರ್ಧರಿಸಬೇಕು? ಯೆಹೋವ ದೇವರ ಪ್ರವಾದನ ವಾಕ್ಯಕ್ಕೆ ನಾವು ಗಮನಕೊಡಬೇಕು ಎಂಬುದರಲ್ಲಿ ಸಂದೇಹವೇ ಇಲ್ಲ.
ನೀವು ಹೇಗೆ ಉತ್ತರಿಸುವಿರಿ?
• ನಮ್ಮ ದಿನದ ಕುರಿತು ಮಾನವರೆಲ್ಲರೂ ಏನನ್ನು ತಿಳಿದುಕೊಳ್ಳಬೇಕೆಂದು ದೇವರು ಬಯಸುತ್ತಾನೆ?
• ದಾನಿಯೇಲ ಪುಸ್ತಕವು ನಮ್ಮ ನಂಬಿಕೆಯನ್ನು ಹೇಗೆ ಬಲಪಡಿಸಸಾಧ್ಯವಿದೆ?
• ನೆಬೂಕದ್ನೆಚ್ಚರನ ಕನಸಿನ ಪ್ರತಿಮೆಗೆ ಯಾವ ವೈಶಿಷ್ಟ್ಯಗಳಿದ್ದವು, ಮತ್ತು ಇವು ಏನನ್ನು ಸಂಕೇತಿಸಿದವು?
• ದಾನಿಯೇಲ ಪುಸ್ತಕದಲ್ಲಿರುವ ಪ್ರವಾದನೆಗಳ ನೆರವೇರಿಕೆಯ ಕುರಿತು ಯಾವ ವಿಷಯವು ಮಹತ್ತರವಾಗಿದೆ?
[ಅಧ್ಯಯನ ಪ್ರಶ್ನೆಗಳು]