ಒಳ್ಳೆಯ ಬುದ್ಧಿವಾದವು ನಿಮಗೆ ಎಲ್ಲಿ ಸಿಗಬಹುದು?
ಒಳ್ಳೆಯ ಬುದ್ಧಿವಾದವು ನಿಮಗೆ ಎಲ್ಲಿ ಸಿಗಬಹುದು?
“ಬುದ್ಧಿವಾದ ಉದ್ಯಮವು” ಈಗ ಕೋಟಿಗಟ್ಟಲೆ ಡಾಲರುಗಳ ಒಂದು ದೊಡ್ಡ ವ್ಯಾಪಾರವಾಗಿಬಿಟ್ಟಿದೆ. ಜನರು ಸಹಾಯಕ್ಕಾಗಿ ಪರದಾಡುತ್ತಿದ್ದಾರೆ. ಮಾನಸಿಕ ಆರೋಗ್ಯ ವೃತ್ತಿಗಾರರಾಗಿರುವ ಹೆನ್ಸ್ ಲೇಮ್ಯಾನ್ ಹೇಳಿದ್ದು: “[ಇಂದಿನ ಸಮಾಜದ] ಶೈಕ್ಷಣಿಕ ಹಾಗೂ ಸಾಮಾಜಿಕ ವ್ಯವಸ್ಥೆಯಲ್ಲಿ ಕೊರತೆಗಳಿವೆ. ಒಂದು ಕಾಲದಲ್ಲಿ ಧಾರ್ಮಿಕ ಮೌಲ್ಯಗಳು ಹೇಗಿದ್ದವೋ ಈಗ ಅವು ಹಾಗಿಲ್ಲ. ಕುಟುಂಬಗಳು ಸ್ಥಿರವಾಗಿಲ್ಲ . . . , ಮತ್ತು ಇದರಿಂದಾಗಿ ಜನರು ತಡಕಾಡುತ್ತಿದ್ದಾರೆ.” ಎರಿಕ್ ಮೈಸಲ್ ಎಂಬ ಲೇಖಕನು ಹೇಳುವುದು: “ಒಂದು ಸಮಯದಲ್ಲಿ, ಮಾನಸಿಕ, ಆತ್ಮಿಕ ಮತ್ತು ಶಾರೀರಿಕ ಸಮಸ್ಯೆಗಳಿಗೆ ಸಹಾಯವನ್ನು ಪಡೆದುಕೊಳ್ಳಲು ಜನರು ತಮ್ಮ ಕುಲದ ಮಾಂತ್ರಿಕನ ಬಳಿ, ಇಲ್ಲವೇ ಪಾದ್ರಿ ಅಥವಾ ಕುಟುಂಬ ವೈದ್ಯನ ಬಳಿ ಹೋಗುತ್ತಿದ್ದರು, ಆದರೆ ಈಗ ಪರಿಹಾರಗಳಿಗಾಗಿ ಅವರು ಸ್ವಸಹಾಯದ ಪುಸ್ತಕಗಳ ಕಡೆಗೆ ತಿರುಗುತ್ತಿದ್ದಾರೆ.”
ಭ ರಾಟೆಯಿಂದ ನಡೆಯುತ್ತಿರುವ ಈ ಉದ್ಯಮದ ಮೇಲೆ ತನಿಖೆ ನಡೆಸಲು ದಿ ಅಮೆರಿಕನ್ ಸೈಕಲಾಜಿಕಲ್ ಅಸೊಸಿಯೇಷನ್ ಒಂದು ತಂಡವನ್ನು ನೇಮಿಸಿತು. “ಈ ಸ್ವಸಹಾಯದ ಪುಸ್ತಕಗಳಿಗೆ, ಪ್ರತಿಯೊಬ್ಬ ವ್ಯಕ್ತಿ ತನ್ನನ್ನು ಮತ್ತು ಇತರರನ್ನು ಅರ್ಥಮಾಡಿಕೊಳ್ಳುವಂತೆ ಸಹಾಯಮಾಡುವ ಭಾರೀ ಸಾಮರ್ಥ್ಯವಿದ್ದರೂ . . . , ಅವುಗಳು ತಮ್ಮ ಮಾರಾಟವನ್ನು ಹೆಚ್ಚಿಸುವ ಉದ್ದೇಶದಿಂದ ಕೊಡುವ ಹೇಳಿಕೆಗಳು ಮತ್ತು ಅವುಗಳ ಶಿರೋನಾಮಗಳು ಅತಿಶಯಿಸಲ್ಪಟ್ಟವುಗಳೂ, ಭಾವೋದ್ರೇಕಕಾರಿಯೂ ಆಗಿರುತ್ತವೆ.” ಟೊರಾಂಟೊ ಸ್ಟಾರ್ ವಾರ್ತಾಪತ್ರಿಕೆಯ ಒಬ್ಬ ಬರಹಗಾರನು ಹೇಳುವುದು: “ಧಾರ್ಮಿಕ ಮತ್ತು ಆತ್ಮಿಕ ರೀತಿಯಲ್ಲಿ ಸಿಗುವ ಖೋಟಾ ಬುದ್ಧಿವಾದಗಳ ಕುರಿತು ನಿಮಗೆ ತಿಳಿದಿರಲಿ. . . . ತೀರ ಅಲ್ಪ ಸಮಯದಲ್ಲಿ, ತೀರ ಕಡಿಮೆ ಪ್ರಯತ್ನ ಅಥವಾ ಸ್ವ-ಶಿಸ್ತಿನೊಂದಿಗೆ ತೀರ ಹೆಚ್ಚನ್ನು ಗಳಿಸಸಾಧ್ಯವಿದೆಯೆಂದು ಹೇಳುವ ಎಲ್ಲ ರೀತಿಯ ಸ್ವಸಹಾಯದ ಪುಸ್ತಕಗಳು, ಟೇಪುಗಳು ಅಥವಾ ಸೆಮೀನಾರ್‌ಗಳ ಕುರಿತಾಗಿ ಎಚ್ಚರಿಕೆಯನ್ನು ವಹಿಸಿರಿ.” ಸಹಾಯದ ಅಗತ್ಯವಿರುವವರಿಗೆ ನಿಜವಾಗಿಯೂ ಬೆಂಬಲವನ್ನು ನೀಡಲು ಪ್ರಯತ್ನಿಸುವ ಅನೇಕ ಜನರಿದ್ದಾರೆಂಬುದು ನಿಜ. ಆದರೆ, ದುಃಖಕರವಾದ ವಾಸ್ತವಾಂಶವೇನೆಂದರೆ, ನೀತಿನಿಷ್ಠೆಗಳಿಲ್ಲದ ಹಲವಾರು ವ್ಯಕ್ತಿಗಳು ಯಾವುದೇ ನಿಜವಾದ ಸಹಾಯ ಅಥವಾ ಪರಿಹಾರವನ್ನು ನೀಡದೆ, ಜನರ ಒಂಟಿತನ ಮತ್ತು ಕಷ್ಟಾನುಭವವನ್ನು ದುರುಪಯೋಗಿಸಿಕೊಳ್ಳುತ್ತಿದ್ದಾರೆ.
ಹಾಗಾದರೆ ನಾವು ಭರವಸೆಯಿಡಬಹುದಾದ, ಸಹಾಯದ ಪ್ರಧಾನ ಮೂಲವು ಯಾವುದಾಗಿದೆ? ಯಾವಾಗಲೂ ಒಳ್ಳೆಯ ಫಲಿತಾಂಶಗಳನ್ನು ತರುವ ವ್ಯಾವಹಾರಿಕ ಸಲಹೆಯನ್ನು ನಾವು ಎಲ್ಲಿ ಕಂಡುಕೊಳ್ಳಬಹುದು?
ವಿಫಲವಾಗದಂತಹ ಮಾರ್ಗದರ್ಶನದ ಉಗಮ
19ನೆಯ ಶತಮಾನದ ಅಮೆರಿಕದ ಸೌವಾರ್ತಿಕ ಹೆನ್ರಿ ವಾರ್ಡ್ ಬೀಚರ್ ಹೇಳಿದ್ದು: “ಬೈಬಲು ನಿಮಗೆ ದೇವರಿಂದ ಬಂದಿರುವ ನಾವಿಕ ನಕ್ಷೆಯಾಗಿದೆ. ಅದು ನಿಮಗೆ ಸರಿಯಾದ ದಿಕ್ಕಿನಲ್ಲಿ ಹೋಗುವಂತೆ, ಹಡಗುನಷ್ಟವಾಗದಂತೆ, ಮತ್ತು ಬಂದರು ಎಲ್ಲಿದೆಯೆಂಬುದನ್ನು ತೋರಿಸಲು, ಅಷ್ಟುಮಾತ್ರವಲ್ಲದೆ ಬಂಡೆಗಳು ಅಥವಾ ಮರಳು ದಿಬ್ಬಗಳಿಂದ ಹಡಗು ನೆಲಕಚ್ಚದೆ ಸುರಕ್ಷಿತವಾಗಿ ಬಂದರಿಗೆ ಹೋಗಿ ತಲಪುವಂತೆ ಸಹಾಯಮಾಡುವುದು.” ಇನ್ನೊಬ್ಬ ವ್ಯಕ್ತಿಯು ಬೈಬಲಿನ ಕುರಿತಾಗಿ ಹೇಳಿದ್ದು: “ಯಾವುದೇ ವ್ಯಕ್ತಿ ಶಾಸ್ತ್ರವಚನಗಳನ್ನು ಮೀರಿಸಸಾಧ್ಯವಿಲ್ಲ; ಈ ಪುಸ್ತಕವು ವರ್ಷಗಳು ಸಂದಂತೆ ಹೆಚ್ಚು ವಿಸ್ತಾರಗೊಳ್ಳುತ್ತಾ ಆಳವಾಗುತ್ತದೆ.” ಮಾರ್ಗದರ್ಶನದ ಈ ಉಗಮಕ್ಕೆ ನೀವೇಕೆ ಗಂಭೀರವಾದ ಗಮನವನ್ನು ಕೊಡಬೇಕು?
ತನ್ನ ಅರ್ಹತೆಯನ್ನು ಸೂಚಿಸುತ್ತಾ ಬೈಬಲ್ ಹೀಗೆ ಹೇಳುತ್ತದೆ: “ದೈವಪ್ರೇರಿತವಾದ ಪ್ರತಿಯೊಂದು ಶಾಸ್ತ್ರವು ಉಪದೇಶಕ್ಕೂ ಖಂಡನೆಗೂ ತಿದ್ದುಪಾಟಿಗೂ ನೀತಿಶಿಕ್ಷೆಗೂ ಉಪಯುಕ್ತವಾಗಿದೆ. ಅದರಿಂದ ದೇವರ ಮನುಷ್ಯನು ಪ್ರವೀಣನಾಗಿ ಸಕಲಸತ್ಕಾರ್ಯಕ್ಕೆ ಸನ್ನದ್ಧನಾಗುವನು.” (2 ತಿಮೊಥೆಯ 3:16, 17) ಬೈಬಲಿನಲ್ಲಿರುವ ವಿಷಯಗಳು, ಸಾಕ್ಷಾತ್ ಜೀವದ ಬುಗ್ಗೆಯಾಗಿರುವ ಯೆಹೋವ ದೇವರಿಂದ ಬಂದವುಗಳಾಗಿವೆ. (ಕೀರ್ತನೆ 36:9) ಆದುದರಿಂದ, ಕೀರ್ತನೆ 103:14 ನಮಗೆ ಜ್ಞಾಪಕ ಹುಟ್ಟಿಸುವಂತೆ, ಆತನು ನಮ್ಮ ರಚನೆಯನ್ನು ಚೆನ್ನಾಗಿ ಬಲ್ಲವನಾಗಿದ್ದಾನೆ: “ಆತನು ನಮ್ಮ ಪ್ರಕೃತಿಯನ್ನು ಬಲ್ಲನು; ನಾವು ಧೂಳಿಯಾಗಿದ್ದೇವೆಂಬದನ್ನು ನೆನಪುಮಾಡಿಕೊಳ್ಳುತ್ತಾನೆ.” (ಕೀರ್ತನೆ 103:14) ಹೀಗೆ, ನಮಗೆ ಬೈಬಲಿನ ಮೌಲ್ಯದ ಕುರಿತು ಪೂರ್ಣ ಭರವಸೆಯಿರಸಾಧ್ಯವಿದೆ.
ವಾಸ್ತವದಲ್ಲಿ, ಬೈಬಲಿನಲ್ಲಿ ಹಲವಾರು ಮೂಲತತ್ವಗಳು ಮತ್ತು ಮಾರ್ಗದರ್ಶನಗಳಿವೆ. ಇವುಗಳನ್ನು ನಾವು ಯಾವುದೇ ಪರಿಸ್ಥಿತಿಯಲ್ಲಿ ಅನ್ವಯಿಸಿಕೊಂಡರೂ ನಮಗೆ ಪ್ರಯೋಜನವಾಗುವುದು. ದೇವರು ನಮಗೆ ಬೈಬಲಿನ ಮೂಲಕ, “ಇದೇ ಮಾರ್ಗ, ಇದರಲ್ಲೇ ನಡೆಯಿರಿ” ಎಂದು ಹೇಳುತ್ತಾನೆ. (ಯೆಶಾಯ 30:21) ಬೈಬಲು ಇಂದು ಜನರ ಅಗತ್ಯಗಳನ್ನು ನಿಜವಾಗಿ ಪೂರೈಸಬಲ್ಲದೊ? ನಾವು ನೋಡೋಣ.
ಬೈಬಲ್ ನಮ್ಮ ಈ ಅಗತ್ಯಗಳನ್ನು ಪೂರೈಸುತ್ತದೆ
ಚಿಂತೆಗಳನ್ನು ನಿಭಾಯಿಸುವುದರಲ್ಲಿ. ಬೈಬಲ್ ನಮಗನ್ನುವುದು: “ಯಾವ ಸಂಬಂಧವಾಗಿಯೂ ಚಿಂತೆಮಾಡದೆ ಸರ್ವವಿಷಯದಲ್ಲಿ ದೇವರ ಮುಂದೆ ಕೃತಜ್ಞತಾಸ್ತುತಿಯನ್ನೂ ಪ್ರಾರ್ಥನೆವಿಜ್ಞಾಪನೆಗಳನ್ನೂ ಮಾಡುತ್ತಾ ನಿಮಗೆ ಬೇಕಾದದ್ದನ್ನು ತಿಳಿಯಪಡಿಸಿರಿ. ಆಗ ಎಲ್ಲಾ ಗ್ರಹಿಕೆಯನ್ನು ಮೀರುವ ದೇವಶಾಂತಿಯು ನಿಮ್ಮ ಹೃದಯಗಳನ್ನೂ ಯೋಚನೆಗಳನ್ನೂ ಕ್ರಿಸ್ತ ಯೇಸುವಿನಲ್ಲಿ ಕಾಯುವದು.” (ಫಿಲಿಪ್ಪಿ 4:6, 7) ಆರ್ಥಿಕ ಬಿಕ್ಕಟ್ಟು, ಲೈಂಗಿಕ ಮತ್ತು ಶಾಬ್ದಿಕ ದೌರ್ಜನ್ಯ, ಅಥವಾ ಪ್ರಿಯ ವ್ಯಕ್ತಿಯೊಬ್ಬನ ಮರಣದೊಂದಿಗೆ ಸಂಬಂಧಿಸಿರುವ ಭಾವನಾತ್ಮಕ ಚಿಂತೆಗಳನ್ನು ನಿಭಾಯಿಸುವುದರಲ್ಲಿ ಪ್ರಾರ್ಥನೆಯು ಪರಿಣಾಮಕಾರಿಯಾಗಿ ರುಜುವಾಗಿದೆಯೊ? ಈ ಮುಂದಿನ ಅನುಭವವನ್ನು ಪರಿಗಣಿಸಿರಿ.
ತಮ್ಮ ಮಗಳ ಮೇಲೆ ಲೈಂಗಿಕ ದೌರ್ಜನ್ಯವೆಸಗಲ್ಪಟ್ಟಿತ್ತು ಎಂಬುದನ್ನು ತಿಳಿದುಕೊಂಡ ಜ್ಯಾಕಿ ಒಪ್ಪಿಕೊಂಡದ್ದು: “ಸ್ವಂತ ಮಗಳನ್ನು ಸಂರಕ್ಷಿಸದೇ ಹೋದೆನಲ್ಲ ಎಂಬ ಅಪರಾಧಿಭಾವವು ನನ್ನನ್ನು ಕಿತ್ತುತಿನ್ನುತ್ತಿತ್ತು. ವ್ಯಥೆ, ತೀವ್ರ ಅಸಮಾಧಾನ ಮತ್ತು ಕೋಪದಂತಹ ಅನಿಸಿಕೆಗಳೊಂದಿಗೆ ನಾನು ಸೆಣಸಾಡಬೇಕಾಯಿತು. ಈ ಅನಿಸಿಕೆಗಳು ನನ್ನ ಬದುಕನ್ನೇ ಹಾಳುಮಾಡಲಾರಂಭಿಸಿದವು. ನನ್ನ ಹೃದಯವನ್ನು ಯೆಹೋವನೇ ಕಾಪಾಡಬೇಕು ಎಂಬಂತಹ ಸ್ಥಿತಿಯಲ್ಲಿ ನಾನಿದ್ದೆ.” ಫಿಲಿಪ್ಪಿ 4:6, 7ನ್ನು ಪುನಃ ಪುನಃ ಓದಿದ ನಂತರ, ಅವಳು ಅದರ ಸಲಹೆಯನ್ನು ಅನ್ವಯಿಸಿಕೊಳ್ಳಲು ತುಂಬ ಪ್ರಯಾಸಪಟ್ಟಳು. “ನಾನು ಪ್ರತಿ ದಿನ ಪ್ರಾರ್ಥಿಸುತ್ತಾ, ನಕಾರಾತ್ಮಕ ಭಾವನೆಗಳಿಂದ ಸಂಪೂರ್ಣವಾಗಿ ಕುಸಿದುಹೋಗದಂತೆ ನಾನು ಕೇಳಿಕೊಳ್ಳುತ್ತಾ ಇದ್ದೆ. ಮತ್ತು ಒಂದು ಶಾಂತ ಹಾಗೂ ಆನಂದಿತ ಹೃದಯವನ್ನು ವಿಕಸಿಸಿಕೊಳ್ಳುವಂತೆ ಯೆಹೋವನು ನನಗೆ ಸಹಾಯಮಾಡಿದನು. ನಿಜವಾಗಿಯೂ ನಾನು ಆಂತರಿಕ ಶಾಂತಿಯನ್ನು ಅನುಭವಿಸಿದೆ” ಎಂದು ಜ್ಯಾಕಿ ಹೇಳುತ್ತಾಳೆ.
ನೀವು ಸಹ ಇಂತಹದ್ದೇ ಪರಿಸ್ಥಿತಿಯಲ್ಲಿ ಸಿಕ್ಕಿಬೀಳಬಹುದು. ಆಗ ಅದನ್ನು ನಿಮಗೆ ನಿಯಂತ್ರಿಸಲೂ ಸಾಧ್ಯವಿರುವುದಿಲ್ಲ ಅಥವಾ ಬಗೆಹರಿಸಲೂ ಸಾಧ್ಯವಿರುವುದಿಲ್ಲ, ಅಷ್ಟುಮಾತ್ರವಲ್ಲದೆ ಅದು ನಿಮಗೆ ತುಂಬ ಭಾವನಾತ್ಮಕ ಚಿಂತೆಗಳನ್ನು ತರುತ್ತದೆ. ಪ್ರಾರ್ಥನೆಮಾಡಲು ಬೈಬಲು ಕೊಡುವ ಬುದ್ಧಿವಾದವನ್ನು ಪಾಲಿಸುವ ಮೂಲಕ, ನೀವು ಅದನ್ನು ಪರಿಣಾಮಕಾರಿಯಾಗಿ ನಿಭಾಯಿಸಬಹುದು. ಕೀರ್ತನೆಗಾರನು ನಮ್ಮನ್ನು ಈ ಮಾತುಗಳೊಂದಿಗೆ ಉತ್ತೇಜಿಸುತ್ತಾನೆ: “ನಿನ್ನ ಭೂಯಾತ್ರೆಯ ಚಿಂತೆಯನ್ನು ಯೆಹೋವನಿಗೆ ವಹಿಸಿಬಿಟ್ಟು ಭರವಸದಿಂದಿರು; ಆತನೇ ಅದನ್ನು ಸಾಗಿಸುವನು.”—ಕೀರ್ತನೆ 37:5.
ಉತ್ತೇಜನವನ್ನು ಪಡೆದುಕೊಳ್ಳುವುದರಲ್ಲಿ. ಕೀರ್ತನೆಗಾರನು ಈ ಗಣ್ಯತೆಯ ಅಭಿವ್ಯಕ್ತಿಯನ್ನು ಮಾಡಿದನು: “ಯೆಹೋವನೇ, ನಿನ್ನ ನಿವಾಸವು ನನಗೆ ಎಷ್ಟೋ ಪ್ರಿಯ; ನಿನ್ನ ಪ್ರಭಾವಸ್ಥಾನವು ನನಗೆ ಇಷ್ಟ. ನನ್ನ ಪಾದವು ಸಮಭೂಮಿಯಲ್ಲಿ ನಿಂತಿದೆ; ಕೂಡಿದ ಸಭೆಗಳಲ್ಲಿ ಯೆಹೋವನನ್ನು ಕೊಂಡಾಡುವೆನು.” (ಕೀರ್ತನೆ 26:8, 12) ನಾವು ಯೆಹೋವನನ್ನು ಆರಾಧಿಸಲು ಜೊತೆಯಾಗಿ ಕೂಡಿಬರುವಂತೆ ಬೈಬಲು ನಮಗೆ ಉತ್ತೇಜಿಸುತ್ತದೆ. ಈ ಸಹವಾಸವು ನಿಮ್ಮ ಅಗತ್ಯಗಳನ್ನು ಹೇಗೆ ಪೂರೈಸಬಲ್ಲದು? ಬೇರೆಯವರಿಗೆ ಇದರ ಬಗ್ಗೆ ಹೇಗನಿಸಿದೆ?
ಬೆಕಿ ತಿಳಿಸುವುದು: “ನನ್ನ ಹೆತ್ತವರು ಯೆಹೋವನ ಸಾಕ್ಷಿಗಳಲ್ಲ. ಆದುದರಿಂದ, ದೇವರ ಸೇವೆಗೆ ಸಂಬಂಧಿಸಿದ ಯಾವುದೇ ವಿಷಯವನ್ನು ನಾನು ಮಾಡಲು ಪ್ರಯತ್ನಿಸುವಾಗ ಅವರು ತುಂಬ ವಿರೋಧಿಸುತ್ತಾರೆ. ಈ ಕಾರಣದಿಂದ, ನಾನು ಕೂಟಗಳಿಗೆ ಬರಲಿಕ್ಕಾಗಿ ತುಂಬ ಪ್ರಯತ್ನಮಾಡಬೇಕು.” ಆದರೆ ಕ್ರೈಸ್ತ ಕೂಟಗಳಿಗೆ ಕ್ರಮವಾಗಿ ಹಾಜರಾಗಲಿಕ್ಕೆ ಪ್ರಯಾಸಪಟ್ಟಿರುವುದರಿಂದ ತನಗೆ ಅನೇಕ ಆಶೀರ್ವಾದಗಳು ಸಿಕ್ಕಿವೆಯೆಂದು ಬೆಕಿಗೆ ಅನಿಸುತ್ತದೆ. “ಕೂಟಗಳು ನನ್ನ ನಂಬಿಕೆಯನ್ನು ಬಲಪಡಿಸುತ್ತವೆ. ಆದುದರಿಂದಲೇ ನಾನು, ಪ್ರತಿದಿನವೂ ಒಬ್ಬ ವಿದ್ಯಾರ್ಥಿನಿಯಾಗಿ, ಒಬ್ಬ ಮಗಳಾಗಿ ಮತ್ತು ಯೆಹೋವನ ಒಬ್ಬ ಸೇವಕಿಯೋಪಾದಿ ನನಗೆ ಬರುವಂತಹ ಒತ್ತಡಗಳನ್ನು ಎದುರಿಸಿನಿಲ್ಲಬಲ್ಲೆ. ರಾಜ್ಯ ಸಭಾಗೃಹಕ್ಕೆ ಬರುವವರಿಗೂ ಶಾಲೆಯಲ್ಲಿನ ವಿದ್ಯಾರ್ಥಿಗಳಿಗೂ ಅಜಗಜಾಂತರವಿದೆ. ರಾಜ್ಯ ಸಭಾಗೃಹದಲ್ಲಿರುವವರು ತುಂಬ ಕಾಳಜಿವಹಿಸುತ್ತಾರೆ ಹಾಗೂ ಸಹಾಯಮಾಡುವವರಾಗಿದ್ದಾರೆ, ಮತ್ತು ನಮ್ಮ ಸಂಭಾಷಣೆಗಳು ಯಾವಾಗಲೂ ಉತ್ತೇಜನದಾಯಕವಾಗಿರುತ್ತವೆ. ಅವರು ನಿಜ ಸ್ನೇಹಿತರು ಖಂಡಿತ.”
ಹೌದು, ಜೊತೆಯಾಗಿ ಕೂಡಿಬರುವಂತೆ ಬೈಬಲ್ ಕೊಡುವ ಮಾರ್ಗದರ್ಶನವನ್ನು ಪಾಲಿಸುವ ಮೂಲಕ, ಉತ್ತೇಜನಕ್ಕಾಗಿರುವ ನಮ್ಮ ಅಗತ್ಯವನ್ನು ಯೆಹೋವನು ಪೂರೈಸುವಂತೆ ನಾವು ಅನುಮತಿಸುವೆವು. ಆಗ ಮಾತ್ರ ಕೀರ್ತನೆಗಾರನ ಮಾತುಗಳ ಸತ್ಯತೆಯನ್ನು ನಾವು ಅನುಭವಿಸುವೆವು: “ದೇವರು ನಮಗೆ ಆಶ್ರಯದುರ್ಗವಾಗಿದ್ದಾನೆ; ಆತನು ಇಕ್ಕಟ್ಟಿನಲ್ಲಿ ನಮಗೆ ವಿಶೇಷಸಹಾಯಕನು.”—ಕೀರ್ತನೆ 46:1.
ತೃಪ್ತಿದಾಯಕ ಮತ್ತು ಸಾರ್ಥಕ ಕೆಲಸಕ್ಕಾಗಿ. “ಸ್ಥಿರಚಿತ್ತರಾಗಿಯೂ ನಿಶ್ಚಲರಾಗಿಯೂ ಇರ್ರಿ. ನೀವು ಕರ್ತನ ಸೇವೆಯಲ್ಲಿ ಪಡುವ ಪ್ರಯಾಸವು ನಿಷ್ಫಲವಾಗುವದಿಲ್ಲವೆಂದು ತಿಳಿದು ಕರ್ತನ ಕೆಲಸವನ್ನು ಯಾವಾಗಲೂ ಅತ್ಯಾಸಕ್ತಿಯಿಂದ ಮಾಡುವವರಾಗಿರಿ.” (1 ಕೊರಿಂಥ 15:58) ‘ಕರ್ತನ ಸೇವೆಯು’ ನಿಜವಾಗಿ ತೃಪ್ತಿದಾಯಕವಾಗಿದೆಯೊ? ಕ್ರೈಸ್ತ ಶುಶ್ರೂಷೆಯು ಯಾವುದಾದರೂ ಸಾರ್ಥಕ ಉದ್ದೇಶವನ್ನು ಪೂರೈಸುತ್ತದೊ?
ಅಮೀಲಿಯ ತನ್ನ ಭಾವನೆಗಳನ್ನು ಹೀಗೆ ವ್ಯಕ್ತಪಡಿಸುತ್ತಾಳೆ: “ಬೇರ್ಪಡುವ ಹಂತಕ್ಕೆ ತಲಪಿದ್ದ ದಂಪತಿಯೊಂದಿಗೆ ನಾನು ಬೈಬಲನ್ನು ಅಭ್ಯಾಸಿಸಿದ್ದೇನೆ. ಬಹಳ ಕ್ರೂರವಾದ ರೀತಿಯಲ್ಲಿ ಕೊಲ್ಲಲ್ಪಟ್ಟಿದ್ದ ಹುಡುಗಿಯೊಬ್ಬಳ ತಾಯಿಗೂ ನಾನು ಸಹಾಯಮಾಡಿದ್ದೇನೆ. ಸತ್ತವರ ಸ್ಥಿತಿ ಹೇಗಿರುತ್ತದೆಂಬುದರ ಕುರಿತಾದ ಅನಿಶ್ಚಿತತೆಯಿಂದ ಆ ಸ್ತ್ರೀಯು ನೊಂದುಬೆಂದಿದ್ದಳು. ಈ ಎರಡೂ ಪರಿಸ್ಥಿತಿಗಳಲ್ಲಿ, ಬೈಬಲ್ ಸೂತ್ರಗಳ ಅನ್ವಯವು ಅವರ ಬದುಕಿನಲ್ಲಿ ಶಾಂತಿ ಮತ್ತು ನಿರೀಕ್ಷೆಯನ್ನು ತಂದಿತು. ಅವರಿಗೆ ಸಹಾಯಮಾಡುವುದರಲ್ಲಿ ನನಗೂ ಒಂದು ಪಾತ್ರವಿದ್ದುದರಿಂದ ಒಂದು ರೀತಿಯ ಆನಂದ ಹಾಗೂ ಸಂತೃಪ್ತಿಯ ಭಾವನೆ ನನಗಿದೆ.” ಸ್ಕಾಟ್ ಹೇಳುವುದು: “ನಿಮಗೆ ಕ್ಷೇತ್ರ ಸೇವೆಯಲ್ಲಿ ಒಂದು ಒಳ್ಳೆಯ ಅನುಭವವಾದಾಗ, ಒಂದು ಹೊಸ ಬೈಬಲ್ ಅಭ್ಯಾಸವನ್ನು ಆರಂಭಿಸಿದಾಗ, ಅಥವಾ ಅನೌಪಚಾರಿಕವಾಗಿ ಸಾಕ್ಷಿಕೊಡುವ ಸಂದರ್ಭದಲ್ಲಿ ಒಳ್ಳೆಯ ಫಲಿತಾಂಶವು ಸಿಗುವಾಗ, ನೀವು ಮುಂದೆ ಅನೇಕ ವರ್ಷಗಳ ವರೆಗೆ ಅದರ ಕುರಿತಾಗಿ ಮಾತಾಡುವಿರಿ. ಪ್ರತಿ ಬಾರಿ ನೀವು ಅದರ ಕುರಿತಾಗಿ ತಿಳಿಸುವಾಗ, ಆಗ ನಿಮಗಾದಂತಹ ಅನಿಸಿಕೆಗಳು ಮತ್ತು ರೋಮಾಂಚನವು ಮತ್ತೆ ಮತ್ತೆ ಮರುಕಳಿಸುತ್ತವೆ! ಅತ್ಯಂತ ಶ್ರೇಷ್ಠವಾದ ಮತ್ತು ಚಿರ ಆನಂದವು, ನಮ್ಮ ಶುಶ್ರೂಷೆಯಿಂದಲೇ ಸಿಗುತ್ತದೆ.”
ಸಕ್ರಿಯ ಶುಶ್ರೂಷಕರಾಗಬೇಕೆಂಬ ಬೈಬಲಿನ ನಿರ್ದೇಶನವನ್ನು ಅನ್ವಯಿಸುವುದರಿಂದ, ಈ ವ್ಯಕ್ತಿಗಳು ತೃಪ್ತಿದಾಯಕ ಮತ್ತು ಸಾರ್ಥಕವಾದ ಕೆಲಸವನ್ನು ಪಡೆದುಕೊಂಡಿದ್ದಾರೆ. ನೀವು ಸಹ, ದೇವರ ಮಾರ್ಗಗಳು ಮತ್ತು ಸೂತ್ರಗಳ ಕುರಿತಾಗಿ ಬೇರೆಯವರಿಗೆ ಕಲಿಸುವಂತಹ ಈ ಕೆಲಸದಲ್ಲಿ ಪಾಲ್ಗೊಳ್ಳುವಂತೆ ಮತ್ತು ಅದೇ ಸಮಯದಲ್ಲಿ ಅದರಿಂದ ಪ್ರಯೋಜನ ಪಡೆದುಕೊಳ್ಳುವಂತೆ ನಾವು ನಿಮ್ಮನ್ನು ಆಮಂತ್ರಿಸುತ್ತೇವೆ.—ಯೆಶಾಯ 48:17; ಮತ್ತಾಯ 28:19, 20.
ದೇವರ ವಾಕ್ಯದಿಂದ ಲಾಭಪಡೆಯುವುದು
ನಿಸ್ಸಂದೇಹವಾಗಿಯೂ, ಇಂದಿನ ಲೋಕದಲ್ಲಿ ಒಳ್ಳೆಯ ಫಲಿತಾಂಶಗಳನ್ನು ತರುವಂತಹ ನಿರ್ದೇಶನಗಳ ಭರವಸಯೋಗ್ಯ ಉಗಮವು ಬೈಬಲಾಗಿದೆ. ನಾವು ಅದರಿಂದ ಪ್ರಯೋಜನ ಪಡೆದುಕೊಳ್ಳಲು ಸತತವಾಗಿ ಪ್ರಯತ್ನಿಸುವ ಅಗತ್ಯವಿದೆ. ನಾವದನ್ನು ಕ್ರಮವಾಗಿ ಓದಬೇಕು, ಅಭ್ಯಾಸಮಾಡಬೇಕು ಮತ್ತು ಅದರ ಕುರಿತು ಮನನ ಮಾಡಬೇಕು. ಪೌಲನು ಬುದ್ಧಿವಾದ ನೀಡಿದ್ದು: “ಈ ಕಾರ್ಯಗಳನ್ನು ಸಾಧಿಸಿಕೊಳ್ಳುವದರಲ್ಲಿ ಆಸಕ್ತನಾಗಿರು. ಇದರಿಂದ ನಿನ್ನ ಅಭಿವೃದ್ಧಿಯು ಎಲ್ಲರಿಗೂ ಪ್ರಸಿದ್ಧವಾಗುವದು.” (1 ತಿಮೊಥೆಯ 4:15; ಧರ್ಮೋಪದೇಶಕಾಂಡ 11:18-21) ಬೈಬಲಿನಲ್ಲಿರುವ ದೇವರ ಸಲಹೆಯನ್ನು ನೀವು ಅನ್ವಯಿಸಿಕೊಳ್ಳಲು ಶ್ರಮಿಸುವಲ್ಲಿ, ಖಂಡಿತವಾಗಿಯೂ ಯಶಸ್ಸನ್ನು ಪಡೆದುಕೊಳ್ಳುವಿರೆಂದು ದೇವರು ಖಾತ್ರಿನೀಡುತ್ತಾನೆ. ಆತನು ವಾಗ್ದಾನಿಸುವುದು: “ಪೂರ್ಣಮನಸ್ಸಿನಿಂದ ಯೆಹೋವನಲ್ಲಿ ಭರವಸವಿಡು. ನಿನ್ನ ಎಲ್ಲಾ ನಡವಳಿಯಲ್ಲಿ ಆತನ ಚಿತ್ತಕ್ಕೆ ವಿಧೇಯನಾಗಿರು; ಆತನೇ ನಿನ್ನ ಮಾರ್ಗಗಳನ್ನು ಸರಾಗಮಾಡುವನು.”—ಜ್ಞಾನೋಕ್ತಿ 3:5, 6.
[ಪುಟ 31ರಲ್ಲಿರುವ ಚಿತ್ರಗಳು]
ಬೈಬಲಿನ ಸಲಹೆಯನ್ನು ಪಾಲಿಸುವುದು, ಜೀವನವನ್ನು ತೃಪ್ತಿದಾಯಕವೂ ಸಾರ್ಥಕವೂ ಆದದ್ದಾಗಿ ಮಾಡುವುದು