ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಕ್ರೈಸ್ತ” ಎಂಬ ಪದವು ತನ್ನ ಅರ್ಥವನ್ನು ಕಳೆದುಕೊಳ್ಳುತ್ತಿದೆಯೋ?

“ಕ್ರೈಸ್ತ” ಎಂಬ ಪದವು ತನ್ನ ಅರ್ಥವನ್ನು ಕಳೆದುಕೊಳ್ಳುತ್ತಿದೆಯೋ?

“ಕ್ರೈಸ್ತ” ಎಂಬ ಪದವು ತನ್ನ ಅರ್ಥವನ್ನು ಕಳೆದುಕೊಳ್ಳುತ್ತಿದೆಯೋ?

ಕ್ರೈ ಸ್ತನಾಗಿ ಇರುವುದರ ಅರ್ಥವೇನು? ನೀವು ಈ ಪ್ರಶ್ನೆಗೆ ಹೇಗೆ ಉತ್ತರವನ್ನು ಕೊಡುವಿರಿ? ಬೇರೆ ಬೇರೆ ದೇಶಗಳ ಕೆಲವು ಜನರಿಗೆ ಇದೇ ಪ್ರಶ್ನೆಯನ್ನು ಕೇಳಲಾಯಿತು ಮತ್ತು ಅವರು ಹೇಳಿದ ಉತ್ತರಗಳಲ್ಲಿ ಕೆಲವನ್ನು ಆರಿಸಿ ನಾವಿಲ್ಲಿ ಕೊಡುತ್ತಿದ್ದೇವೆ:

“ಯೇಸುವನ್ನು ಹಿಂಬಾಲಿಸುವುದು ಮತ್ತು ಅವನನ್ನು ಅನುಕರಿಸುವುದು.”

“ಒಳ್ಳೆಯ ವ್ಯಕ್ತಿಯಾಗಿ ಇರುವುದು ಮತ್ತು ಒಳ್ಳೆಯ ವಿಷಯಗಳನ್ನು ಇತರರೊಂದಿಗೆ ಹಂಚಿಕೊಳ್ಳುವುದು.”

“ಕ್ರಿಸ್ತನನ್ನು ಕರ್ತನನ್ನಾಗಿ ಮತ್ತು ರಕ್ಷಕನನ್ನಾಗಿ ಸ್ವೀಕರಿಸುವುದು.”

“ಮಾಸ್‌ಗೆ ಹೋಗುವುದು, ಜಪಮಾಲೆಯನ್ನು ಉಪಯೋಗಿಸುತ್ತಾ ಪ್ರಾರ್ಥನೆಗಳನ್ನು ಮಾಡುವುದು ಮತ್ತು ಕ್ರಿಸ್ತನ ಮರಣ ಭೋಜನದ ಪವಿತ್ರ ರೊಟ್ಟಿ ಮತ್ತು ದ್ರಾಕ್ಷಾರಸವನ್ನು ತೆಗೆದುಕೊಳ್ಳುವುದು.”

“ಒಬ್ಬ ಕ್ರೈಸ್ತನಾಗಲು ಚರ್ಚಿಗೆ ಹೋಗುವ ಅಗತ್ಯವಿದೆ ಎಂಬುದನ್ನು ನಾನು ನಂಬುವುದಿಲ್ಲ.”

ಶಬ್ದಕೋಶಗಳು ಸಹ ದಿಗ್ಭ್ರಮೆಗೊಳಿಸುವ ಬಹಳಷ್ಟು ವ್ಯಾಖ್ಯಾನಗಳನ್ನು ಕೊಡುತ್ತವೆ. ವಾಸ್ತವದಲ್ಲಿ, ಬಹಳ ಪರಿಶ್ರಮದಿಂದ ಅಧ್ಯಯನಿಸಿದ ಒಂದು ಪರಾಮರ್ಶೆಯ ಪುಸ್ತಕವು, “ಕ್ರೈಸ್ತ” ಎಂಬ ಪದದ ಕೆಳಗೆ ಹತ್ತು ಅರ್ಥಗಳನ್ನು ಕೊಡುತ್ತದೆ. ಅದರಲ್ಲಿ “ಯೇಸು ಕ್ರಿಸ್ತನ ಧರ್ಮವನ್ನು ನಂಬುವುದು ಅಥವಾ ಆ ಧರ್ಮಕ್ಕೆ ಸೇರಿದವನಾಗಿ” ಇರುವುದರಿಂದ ಹಿಡಿದು, “ಸಭ್ಯ ಅಥವಾ ಒಪ್ಪಲ್ಪಡುವ ವ್ಯಕ್ತಿ” ಆಗಿರುವುದರ ವರೆಗಿನ ವ್ಯಾಖ್ಯಾನಗಳು ಇವೆ. ಹೀಗಾಗಿ ಕ್ರೈಸ್ತನಾಗಿರುವುದರ ಅರ್ಥವೇನೆಂಬುದನ್ನು ವಿವರಿಸಲು ಅನೇಕರಿಗೆ ಸಾಧ್ಯವಿಲ್ಲದಿರುವುದು ಸಹಜವೇ ಆಗಿದೆ.

ಸ್ವಾತಂತ್ರ್ಯವನ್ನು ಅಪೇಕ್ಷಿಸುವ ಪ್ರವೃತ್ತಿ

ಇಂದು, ಒಂದೇ ಚರ್ಚನ್ನು ಉಪಯೋಗಿಸುತ್ತಿರುವವರ ಮಧ್ಯೆಯೂ ಅಂದರೆ, ಕ್ರೈಸ್ತರೆಂದು ಹೇಳಿಕೊಳ್ಳುವವರ ಮಧ್ಯೆಯೂ, ಬೈಬಲ್‌ ದೇವರಿಂದ ಪ್ರೇರಿಸಲ್ಪಟ್ಟಿದೆ ಎಂಬ ಬೋಧನೆ, ವಿಕಾಸವಾದದ ಸಿದ್ಧಾಂತ, ರಾಜಕೀಯದಲ್ಲಿ ಚರ್ಚಿನ ಒಳಗೂಡುವಿಕೆ ಮತ್ತು ಒಬ್ಬನ ನಂಬಿಕೆಯನ್ನು ಇತರರೊಂದಿಗೆ ಹಂಚಿಕೊಳ್ಳುವುದೆಂಬ ಕೆಲವು ವಿಷಯಗಳ ಮೇಲೆ ಬಹಳಷ್ಟು ಭಿನ್ನಾಭಿಪ್ರಾಯಗಳಿರುವುದು ಸ್ಪಷ್ಟವಾಗಿ ತೋರಿಬರುತ್ತದೆ. ಗರ್ಭಪಾತ, ಸಲಿಂಗೀಕಾಮ ಮತ್ತು ಮದುವೆಯಾಗದೆ ಒಟ್ಟಿಗೆ ಜೀವಿಸುವುದೆಂಬ ಕೆಲವು ನೈತಿಕ ವಿವಾದಗಳು ವಾಗ್ವಾದದ ಮುಖ್ಯ ವಿಷಯಗಳಾಗಿವೆ. ಇದಕ್ಕೆಲ್ಲ, ಸ್ವಾತಂತ್ರವನ್ನು ಅಪೇಕ್ಷಿಸುವ ಪ್ರವೃತ್ತಿಯೇ ಕಾರಣವಾಗಿದೆ ಎಂಬುದರಲ್ಲಿ ಸಂದೇಹವಿಲ್ಲ.

ದೃಷ್ಟಾಂತಕ್ಕಾಗಿ, “ಬಹಿರಂಗವಾಗಿ ಸಲಿಂಗೀಕಾಮವನ್ನು ನಡೆಸುವ ಪುರುಷನನ್ನು ಚರ್ಚಿನ ಆಡಳಿತ ಮಂಡಲಿಗೆ ಹಿರಿಯನಾಗಿ ಚುನಾಯಿಸುವ” ಪರವಾಗಿ ಒಂದು ಪ್ರಾಟೆಸ್ಟಂಟ್‌ ಚರ್ಚಿನ ನ್ಯಾಯಸ್ಥಾನವು ಮತ ಹಾಕಿ, ಇದು ಚರ್ಚಿನ ಒಂದು ಹಕ್ಕು ಎಂಬ ಸಮರ್ಥನೆಯನ್ನು ಇತ್ತೀಚೆಗೆ ನೀಡಿತು ಎಂಬುದಾಗಿ ಕ್ರಿಶ್ಚಿಯನ್‌ ಸೆಂಚುರಿ ಎಂಬ ಪತ್ರಿಕೆಯು ವರದಿಸಿತು. ಕ್ರಿಸ್ತನಲ್ಲಿ ನಂಬಿಕೆ ಇಡುವುದು ರಕ್ಷಣೆಗೆ ಮುಖ್ಯವಲ್ಲ ಎಂದು ಸಹ ಕೆಲವು ದೇವತಾಶಾಸ್ತ್ರಜ್ಞರು ಹೇಳುತ್ತಾರೆ. ನ್ಯೂ ಯಾರ್ಕ್‌ ಟೈಮ್ಸ್‌ನಲ್ಲಿ ಪ್ರಕಾಶಿಸಲಾದ ಒಂದು ವರದಿಯು ಹೇಳಿದಂತೆ, ಯೆಹೂದ್ಯರು, ಮುಸ್ಲಿಮರು ಮತ್ತು ಇತರರು ಸಹ “[ಕ್ರೈಸ್ತರಂತೆ] ಸ್ವರ್ಗಕ್ಕೆ ಹೋಗುವ ಸಾಧ್ಯತೆ ಇದೆ” ಎಂದು ಈ ದೇವತಾಶಾಸ್ತ್ರಜ್ಞರು ನಂಬುತ್ತಾರೆ.

ಒಬ್ಬ ಸಮತಾವಾದಿಯು ಬಂಡವಾಳ ನೀತಿಯನ್ನು ಸಮರ್ಥಿಸುವುದನ್ನು ಅಥವಾ ಒಬ್ಬ ಪ್ರಜಾಪ್ರಭುತ್ವವಾದಿಯು ಸರ್ವಾಧಿಕಾರಿ ನೀತಿಯನ್ನು ಪ್ರವರ್ಧಿಸುವುದನ್ನು ಅಥವಾ ಒಬ್ಬ ಪರಿಸರವಾದಿಯು ಅರಣ್ಯನಾಶವನ್ನು ಬೆಂಬಲಿಸುತ್ತಿರುವುದನ್ನು ನಿಮಗೆ ಸಾಧ್ಯವಿರುವುದಾದರೆ ಊಹಿಸಿಕೊಳ್ಳಿರಿ. “ಅಂತಹ ವ್ಯಕ್ತಿಯು ನಿಜವಾಗಿಯೂ ಒಬ್ಬ ಸಮತಾವಾದಿಯಾಗಿರಲು, ಪ್ರಜಾಪ್ರಭುತ್ವವಾದಿಯಾಗಿರಲು ಇಲ್ಲವೇ ಪರಿಸರವಾದಿಯಾಗಿರಲು ಖಂಡಿತವಾಗಿಯೂ ಸಾಧ್ಯವೇ ಇಲ್ಲ” ಎಂದು ನೀವು ಹೇಳಬಹುದು ಮತ್ತು ನೀವು ಹಾಗೆ ಹೇಳುವುದರಲ್ಲಿ ಯಾವ ತಪ್ಪೂ ಇಲ್ಲ. ಆದರೂ, ಇಂದು ಕ್ರೈಸ್ತರೆಂದು ಹೇಳಿಕೊಳ್ಳುವವರ ವಿಭಿನ್ನ ದೃಷ್ಟಿಕೋನಗಳನ್ನು ನೀವು ಗಮನಿಸುವಾಗ, ಅವುಗಳಲ್ಲಿರುವ ನಂಬಿಕೆಗಳು ಒಂದಕ್ಕೊಂದು ವಿರುದ್ಧವಾಗಿವೆ ಮಾತ್ರವಲ್ಲ, ಕ್ರೈಸ್ತತ್ವದ ಸ್ಥಾಪಕನಾದ ಯೇಸು ಕ್ರಿಸ್ತನಿಂದ ಕಲಿಸಲ್ಪಟ್ಟ ಬೋಧನೆಗಳಿಗೂ ಅವು ಕೆಲವೊಮ್ಮೆ ವಿರುದ್ಧವಾಗಿರುತ್ತವೆ ಎಂಬುದು ನಿಮಗೆ ಸ್ಪಷ್ಟವಾಗುತ್ತದೆ. ಈ ವಿಭಿನ್ನ ದೃಷ್ಟಿಕೋನಗಳು ಕ್ರೈಸ್ತತ್ವದಲ್ಲಿರುವ ಭೇದಗಳ ಕುರಿತು ಏನನ್ನು ಹೇಳುತ್ತವೆ?—1 ಕೊರಿಂಥ 1:10.

ಕ್ರೈಸ್ತ ಬೋಧನೆಗಳನ್ನು ಕಾಲಕ್ಕೆ ತಕ್ಕಂತೆ ಬದಲಾಯಿಸುವ ಕೆಲಸಕ್ಕೆ ದೀರ್ಘವಾದ ಇತಿಹಾಸವಿದೆ ಮತ್ತು ನಾವಿದನ್ನು ಮುಂದೆ ನೋಡಲಿದ್ದೇವೆ. ದೇವರು ಮತ್ತು ಯೇಸು ಕ್ರಿಸ್ತನಿಗೆ ಇಂತಹ ಬದಲಾವಣೆಗಳ ಕುರಿತು ಹೇಗೆ ಅನಿಸುತ್ತದೆ? ಕ್ರಿಸ್ತನಲ್ಲಿ ಬೇರೂರದೆ ಇರುವ ಬೋಧನೆಗಳನ್ನು ಬೆಂಬಲಿಸಿ ಅದನ್ನು ತಮ್ಮ ಚರ್ಚಿನೊಳಗೆ ಸ್ವೀಕರಿಸುವವರು ತಮ್ಮನ್ನು ಕ್ರೈಸ್ತರೆಂದು ಯೋಗ್ಯವಾಗಿ ಹೇಳಿಕೊಳ್ಳಸಾಧ್ಯವಿದೆಯೋ? ಈ ಪ್ರಶ್ನೆಗಳನ್ನು ಮುಂದಿನ ಲೇಖನದಲ್ಲಿ ಪರಿಗಣಿಸಲಾಗುವುದು.