ನಾಚಿಕೆಯ ಚಿಪ್ಪಿನೊಳಗಿಂದ ಹೊರಬರಲು ನನಗೆ ಸಹಾಯಸಿಕ್ಕಿತು
ಜೀವನ ಕಥೆ
ನಾಚಿಕೆಯ ಚಿಪ್ಪಿನೊಳಗಿಂದ ಹೊರಬರಲು ನನಗೆ ಸಹಾಯಸಿಕ್ಕಿತು
ರೂತ್ ಎಲ್. ಉಲ್ರಿಕ್ ಹೇಳಿದಂತೆ
ಉಮ್ಮಳಿಸಿ ಬರುತ್ತಿದ್ದ ದುಃಖವನ್ನು ತಡೆಯಲಾಗದೆ, ಅಲ್ಲಿಯೇ ಆ ಪಾದ್ರಿಯ ಮನೆಬಾಗಿಲಲ್ಲೇ ನಾನು ಅತ್ತುಬಿಟ್ಟೆ. ಯಾಕೆಂದರೆ ಆ ಪಾದ್ರಿಯು, ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯ ಪ್ರಥಮ ಅಧ್ಯಕ್ಷರಾಗಿದ್ದ ಚಾರ್ಲ್ಸ್ ಟಿ. ರಸಲರ ವಿರುದ್ಧ ಸುಳ್ಳು ಆರೋಪಗಳ ಸುರಿಮಳೆಗೈದಿದ್ದನು. ಆಗ ನಾನು ಇನ್ನೂ ಒಬ್ಬ ಯುವತಿಯಾಗಿದ್ದೆ. ಆದರೆ ನಾನು ಜನರನ್ನು ಏಕೆ ಭೇಟಿಮಾಡುತ್ತಿದ್ದೆ ಎಂಬುದನ್ನು ಮೊದಲು ವಿವರಿಸುವೆ.
ನಾನು ಅಮೆರಿಕದ ನೆಬ್ರಾಸ್ಕದಲ್ಲಿನ ಒಂದು ಫಾರ್ಮ್ನಲ್ಲಿ, ತುಂಬ ಧಾರ್ಮಿಕವಾಗಿದ್ದ ಒಂದು ಕುಟುಂಬದಲ್ಲಿ 1910ರಲ್ಲಿ ಜನಿಸಿದೆ. ನಾವು ಕುಟುಂಬವಾಗಿ ಪ್ರತಿದಿನ ಬೆಳಗ್ಗೆ ಮತ್ತು ಸಾಯಂಕಾಲದ ವೇಳೆಯಲ್ಲಿ, ಊಟದ ನಂತರ ಒಟ್ಟುಗೂಡಿ ಬೈಬಲನ್ನು ಓದುತ್ತಿದ್ದೆವು. ತಂದೆಯವರು, ನಮ್ಮ ಫಾರ್ಮ್ನಿಂದ ಸುಮಾರು ಆರು ಕಿಲೊಮೀಟರ್ ದೂರದಲ್ಲಿದ್ದ ವಿನ್ಸೈಡ್ ಎಂಬ ಚಿಕ್ಕ ಪಟ್ಟಣದಲ್ಲಿ ಮೆತೊಡಿಸ್ಟ್ ಚರ್ಚಿನ ಸಂಡೇ ಸ್ಕೂಲ್ ಸೂಪರಿಂಟೆಂಡೆಂಟ್ ಆಗಿದ್ದರು. ನಮ್ಮ ಬಳಿ ಒಂದು ಕುದುರೆಗಾಡಿ ಇತ್ತು. ಮತ್ತು ಇದಕ್ಕೆ ಪರದೆಗಳುಳ್ಳ ಕಿಟಕಿಗಳಿದ್ದವು. ಆದುದರಿಂದ ಹವಾಮಾನವು ಹೇಗೇ ಇರಲಿ, ನಾವು ಆದಿತ್ಯವಾರ ಬೆಳಗ್ಗೆ ಚರ್ಚಿಗೆ ಹೋಗುತ್ತಿದ್ದೆವು.
ನಾನು ಸುಮಾರು ಎಂಟು ವರ್ಷದವಳಾಗಿದ್ದಾಗ, ನನ್ನ ಪುಟ್ಟ ತಮ್ಮ ಪೋಲಿಯೊ ಪೀಡಿತನಾದ. ಅವನ ಚಿಕಿತ್ಸೆಗಾಗಿ ಅಮ್ಮ ಅವನನ್ನು ಐಅವ ರಾಜ್ಯದಲ್ಲಿದ್ದ ಒಂದು ಚಿಕಿತ್ಸಾಲಯಕ್ಕೆ ಕರೆದುಕೊಂಡುಹೋದರು. ಅವರು ಹಗಲೂರಾತ್ರಿ ನನ್ನ ತಮ್ಮನ ಆರೈಕೆಮಾಡಿದರೂ, ಅವನು ಅಲ್ಲಿ ತೀರಿಹೋದ. ಆದರೆ ಅಷ್ಟರೊಳಗೆ ಅಲ್ಲಿ ಐಅವದಲ್ಲಿ ಅಮ್ಮ ಒಬ್ಬ ಬೈಬಲ್ ವಿದ್ಯಾರ್ಥಿಯನ್ನು (ಆ ಸಮಯದಲ್ಲಿ ಯೆಹೋವನ ಸಾಕ್ಷಿಗಳನ್ನು ಹೀಗೆ ಕರೆಯಲಾಗುತ್ತಿತ್ತು) ಭೇಟಿಯಾದರು. ಅವರು ಅನೇಕ ಸಲ ಭೇಟಿಯಾಗಿ ಚರ್ಚೆಮಾಡಿದರು ಮತ್ತು ಅಮ್ಮ ಆ ಮಹಿಳೆಯೊಂದಿಗೆ ಬೈಬಲ್ ವಿದ್ಯಾರ್ಥಿಗಳ ಕೆಲವೊಂದು ಕೂಟಗಳಿಗೂ ಹಾಜರಾದರು.
ಅಮ್ಮ ಮನೆಗೆ ಹಿಂದಿರುಗಿದಾಗ, ವಾಚ್ಟವರ್ ಸೊಸೈಟಿಯಿಂದ ಪ್ರಕಾಶಿಸಲ್ಪಟ್ಟಿದ್ದ ಸ್ಟಡೀಸ್ ಇನ್ ದ ಸ್ಕ್ರಿಪ್ಚರ್ಸ್ನ ಹಲವಾರು ಸಂಪುಟಗಳನ್ನು ತಮ್ಮೊಂದಿಗೆ ತಂದಿದ್ದರು. ಮತ್ತು ಈ ಬೈಬಲ್ ವಿದ್ಯಾರ್ಥಿಗಳು ಸತ್ಯವನ್ನು ಕಲಿಸುತ್ತಿದ್ದಾರೆ, ಅಷ್ಟುಮಾತ್ರವಲ್ಲ ಮಾನವ ಆತ್ಮದ ಅಮರತ್ವ ಹಾಗೂ ದುಷ್ಟರ ನಿತ್ಯ ಯಾತನೆಯಂತಹ ಬೋಧನೆಗಳು ಸುಳ್ಳಾಗಿವೆ ಎಂಬುದನ್ನು ಅವರು ಬೇಗನೆ ಮನಗಂಡರು.—ಆದಿಕಾಂಡ 2:7; ಪ್ರಸಂಗಿ 9:5, 10; ಯೆಹೆಜ್ಕೇಲ 18:4.
ಆದರೆ ಅಪ್ಪ ಇದರಿಂದ ತುಂಬ ಅಸಂತುಷ್ಟರಾಗಿದ್ದರು ಮತ್ತು ಬೈಬಲ್ ವಿದ್ಯಾರ್ಥಿಗಳ ಕೂಟಗಳಿಗೆ ಹಾಜರಾಗಲು ಅಮ್ಮ ಮಾಡುತ್ತಿದ್ದ ಪ್ರಯತ್ನಗಳನ್ನು ವಿರೋಧಿಸುತ್ತಿದ್ದರು. ಆದರೆ ಅವರು ಯಾವಾಗಲೂ
ನನ್ನನ್ನು, ನನ್ನ ಅಣ್ಣ ಕ್ಲಾರೆನ್ಸ್ನನ್ನು ತಮ್ಮೊಂದಿಗೆ ಚರ್ಚಿಗೆ ಕೊಂಡೊಯ್ಯುತ್ತಿದ್ದರು. ಆದರೆ ಅಪ್ಪ ಮನೆಯಲ್ಲಿ ಇಲ್ಲದಿರುವಾಗಲೆಲ್ಲಾ, ಅಮ್ಮ ನಮ್ಮೊಂದಿಗೆ ಬೈಬಲ್ ಅಭ್ಯಾಸ ನಡೆಸುತ್ತಿದ್ದರು. ಹೀಗೆ ಮಕ್ಕಳಾದ ನಮಗೆ, ಬೈಬಲಿನ ಬೋಧನೆಗಳ ಹಾಗೂ ಚರ್ಚಿನ ಬೋಧನೆಗಳ ಮಧ್ಯೆ ಇದ್ದ ವ್ಯತ್ಯಾಸವನ್ನು ಹೋಲಿಸಿನೋಡಲು ಒಂದು ಒಳ್ಳೆಯ ಅವಕಾಶವಿತ್ತು.ಕ್ಲಾರೆನ್ಸ್ ಮತ್ತು ನಾನು ಚರ್ಚಿನಲ್ಲಿ ನಡೆಯುತ್ತಿದ್ದ ಸಂಡೇ ಸ್ಕೂಲಿಗೆ ಕ್ರಮವಾಗಿ ಹೋಗುತ್ತಿದ್ದೆವು. ಅವನು ಶಿಕ್ಷಕಿಗೆ ಪ್ರಶ್ನೆಗಳನ್ನು ಕೇಳುತ್ತಿದ್ದನು, ಆದರೆ ಅವರಿಗೆ ಉತ್ತರವನ್ನೇ ಕೊಡಲಾಗುತ್ತಿರಲಿಲ್ಲ. ಮನೆಗೆ ಹಿಂದಿರುಗಿದ ಮೇಲೆ, ನಾವು ಇದನ್ನು ತಾಯಿಗೆ ಹೇಳುತ್ತಿದ್ದೆವು ಮತ್ತು ಈ ವಿಷಯಗಳ ಕುರಿತು ತುಂಬ ಹೊತ್ತಿನ ವರೆಗೂ ನಮ್ಮೊಳಗೆ ಚರ್ಚೆಗಳು ನಡೆಯುತ್ತಿದ್ದವು. ಕೊನೆಯಲ್ಲಿ, ನಾನು ಚರ್ಚನ್ನು ಬಿಟ್ಟು, ಅಮ್ಮನೊಂದಿಗೆ ಬೈಬಲ್ ವಿದ್ಯಾರ್ಥಿಗಳ ಕೂಟಗಳಿಗೆ ಹೋಗಲಾರಂಭಿಸಿದೆ ಮತ್ತು ಸ್ವಲ್ಪ ಸಮಯದೊಳಗೆ ಕ್ಲಾರೆನ್ಸ್ ಸಹ ನಮ್ಮ ಜೊತೆಗೂಡಿದನು.
ನಾಚಿಕೆಯ ಚಿಪ್ಪಿನೊಳಗಿಂದ ಹೊರಬರುವುದು
ಸೆಪ್ಟೆಂಬರ್ 1922ರಲ್ಲಿ ಅಮ್ಮ ಮತ್ತು ನಾನು ಓಹಾಯೋವಿನ ಸೀಡರ್ ಪಾಯಿಂಟ್ನಲ್ಲಿ ನಡೆದ ಬೈಬಲ್ ವಿದ್ಯಾರ್ಥಿಗಳ ಒಂದು ಸ್ಮರಣೀಯ ಅಧಿವೇಶನಕ್ಕೆ ಹಾಜರಾದೆವು. ಆ ಸಮಯದಲ್ಲಿ ವಾಚ್ ಟವರ್ ಸೊಸೈಟಿಯ ಅಧ್ಯಕ್ಷರಾಗಿದ್ದ ಜೋಸೆಫ್ ಎಫ್. ರದರ್ಫರ್ಡ್, ಹಾಜರಿದ್ದ 18,000ಕ್ಕಿಂತಲೂ ಹೆಚ್ಚಿನ ಜನರಿಗೆ, “ರಾಜನನ್ನು ಮತ್ತು ರಾಜ್ಯವನ್ನು ಪ್ರಕಟಿಸಿರಿ” ಎಂಬ ಬ್ಯಾನರ್ ಮೇಲಿನ ಮಾತುಗಳ ಮೂಲಕ ಪ್ರೋತ್ಸಾಹಿಸಿದರು. ಆ ದೊಡ್ಡ ಬ್ಯಾನರ್ ಅನಾವರಣಗೊಳ್ಳುತ್ತಿರುವ ದೃಶ್ಯವು ನನ್ನ ಮನಸ್ಸಿನಲ್ಲಿ ಈಗಲೂ ಹಚ್ಚಹಸಿರಾಗಿದೆ. ಇದರಿಂದಾಗಿ, ನಾನು ತುಂಬ ಪ್ರಭಾವಿತಳಾದೆ ಮತ್ತು ದೇವರ ರಾಜ್ಯದ ಸುವಾರ್ತೆಯನ್ನು ಇತರರಿಗೆ ತಿಳಿಸುವುದು ಎಷ್ಟು ತುರ್ತಾಗಿದೆಯೆಂಬ ಭಾವನೆಯು ನನ್ನಲ್ಲಿ ಮೂಡಿತು.—ಮತ್ತಾಯ 6:9, 10; 24:14.
1922ರಿಂದ 1928ರ ವರೆಗೆ ನಡೆದ ಅಧಿವೇಶನಗಳಲ್ಲಿ ಅನೇಕ ಠರಾವುಗಳನ್ನು ಅನುಮೋದಿಸಲಾಯಿತು. ಮತ್ತು ಆ ಸಂದೇಶಗಳನ್ನು ಕಿರುಹೊತ್ತಗೆಗಳಲ್ಲಿ ಮುದ್ರಿಸಲಾಯಿತು. ಲೋಕದಾದ್ಯಂತ ಬೈಬಲ್ ವಿದ್ಯಾರ್ಥಿಗಳು ಇವುಗಳನ್ನು ಕೋಟಿಗಟ್ಟಲೆ ಜನರಿಗೆ ವಿತರಿಸಿದರು. ನಾನು ಕಡ್ಡಿಯಂತೆ ಉದ್ದವಾಗಿ ಇದ್ದುದರಿಂದ ಎಲ್ಲರೂ ನನ್ನನ್ನು ಗ್ರೇಹೌಂಡ್ (ಒಂದು ವಿಧದ ಬೇಟೆನಾಯಿ) ಎಂದು ಕರೆಯುತ್ತಿದ್ದರು ಮತ್ತು ನಾನು ತುಂಬ ಹುರುಪಿನಿಂದ ಈ ಮುದ್ರಿತ ಸಂದೇಶಗಳನ್ನು ಮನೆಯಿಂದ ಮನೆಗೆ ಹೋಗಿ ವಿತರಿಸಿದೆ. ನನಗೆ ನಿಜವಾಗಿಯೂ ಈ ಕೆಲಸ ತುಂಬ ಇಷ್ಟವಾಯಿತು. ಆದರೆ ಮನೆಮನೆಗಳಲ್ಲಿ ಮಾತಾಡುವುದು, ಅಂದರೆ ದೇವರ ರಾಜ್ಯದ ಕುರಿತಾಗಿ ವೈಯಕ್ತಿಕವಾಗಿ ತಿಳಿಸುವುದು, ಆಗಲೂ ನನಗೆ ಕಷ್ಟಕರವಾಗಿತ್ತು.
ನನ್ನ ತಾಯಿ ಪ್ರತಿ ವರ್ಷ ನಮ್ಮ ಬಂಧುಬಳಗದವರನ್ನು ಆಮಂತ್ರಿಸುತ್ತಿದ್ದರು. ನಾನು ಎಷ್ಟೊಂದು ನಾಚಿಕೆಪಡುತ್ತಿದ್ದೆನೆಂದರೆ, ಅವರು ಬರುವುದನ್ನು ನೆನಸಿಕೊಂಡರೇ ನಾನು ಭಯದಿಂದ ಕಂಪಿಸುತ್ತಿದ್ದೆ. ಅವರು ಬಂದಾಗ, ನಾನು ನನ್ನ ಮಲಗುವ ಕೋಣೆಯೊಳಗಿಂದ ಆಚೆ ಬರುತ್ತಿರಲಿಲ್ಲ. ಒಂದು ಸಲ, ಅಮ್ಮ ಇಡೀ ಕುಟುಂಬದ ಫೋಟೋವನ್ನು ತೆಗೆಯಬೇಕೆಂದಿದ್ದರು ಮತ್ತು ನನಗೆ ಹೊರಗೆ ಬರುವಂತೆ ಹೇಳಿದರು. ಆದರೆ ಅವರೊಂದಿಗೆ ಜೊತೆಗೂಡಲು ನನಗೆ ಮನಸ್ಸಿರಲಿಲ್ಲ. ಆಗ ಅವರು ಹೆಚ್ಚುಕಡಿಮೆ ನನ್ನನ್ನು ಕೋಣೆಯಿಂದ ಎಳೆದುಕೊಂಡೇ ಹೊರತಂದಾಗ, ನಾನು ಕಿರುಚಿಕೊಳ್ಳುತ್ತಾ ಇದ್ದೆ.
ಆದರೆ ಒಂದು ದಿನ ನಾನು ಮನಸ್ಸನ್ನು ಗಟ್ಟಿಮಾಡಿಕೊಂಡು ಒಂದು ಬ್ಯಾಗ್ನಲ್ಲಿ ಕೆಲವು ಬೈಬಲ್ ಸಾಹಿತ್ಯಗಳನ್ನು ಹಾಕಿಕೊಂಡೆ. “ನಾನು
ಅದನ್ನು ಮಾಡಲಾರೆ” ಎಂದು ನಾನು ನನ್ನಲ್ಲೇ ಹೇಳಿಕೊಳ್ಳುತ್ತಾ ಇದ್ದೆ. ಆದರೆ ಮರುಕ್ಷಣವೇ, “ನಾನು ಅದನ್ನು ಮಾಡಲೇಬೇಕು” ಎಂದು ಹೇಳಿಕೊಳ್ಳುತ್ತಾ ಇದ್ದೆ. ಕೊನೆಗೂ ನಾನು ಸಾರುವ ಕೆಲಸಕ್ಕಾಗಿ ಹೊರಟುಬಿಟ್ಟೆ. ನಾನು ಧೈರ್ಯಮಾಡಿ ಹೊರಟದ್ದಕ್ಕಾಗಿ ನನಗೆ ಅನಂತರ ತುಂಬ ಸಂತೋಷವಾಯಿತು. ಆ ಕೆಲಸವನ್ನು ಮಾಡುವುದಕ್ಕಿಂತಲೂ, ಅದನ್ನು ಮಾಡಿಬಿಟ್ಟೆ ಎಂಬುದರಲ್ಲೇ ನನಗೆ ಅತಿ ಹೆಚ್ಚಿನ ಆನಂದವು ಸಿಕ್ಕಿತು. ನಾನು ಆರಂಭದಲ್ಲಿ ತಿಳಿಸಿದ ಪಾದ್ರಿಯ ಭೇಟಿಯಾಗಿ ನಾನು ಅಳುತ್ತಾ ಅಲ್ಲಿಂದ ಬಂದ ಪ್ರಸಂಗವು ಆಗಲೇ ಆಗಿತ್ತು. ಸಮಯವು ಉರುಳಿದಂತೆ, ನಾನು ಯೆಹೋವನ ಸಹಾಯದಿಂದ ಮನೆಗಳಲ್ಲಿ ಜನರೊಂದಿಗೆ ಮಾತಾಡಲು ಶಕ್ತಳಾದೆ ಮತ್ತು ನನ್ನ ಆನಂದವು ನೂರ್ಮಡಿಯಾಯಿತು. ಅನಂತರ 1925ರಲ್ಲಿ, ನೀರಿನ ದೀಕ್ಷಾಸ್ನಾನದ ಮೂಲಕ ನಾನು ನನ್ನ ಸಮರ್ಪಣೆಯನ್ನು ಸಂಕೇತಿಸಿದೆ.ಪೂರ್ಣ ಸಮಯದ ಶುಶ್ರೂಷೆಯನ್ನು ಆರಂಭಿಸುವುದು
ನಾನು 18 ವರ್ಷದವಳಾಗಿದ್ದಾಗ, ನನ್ನ ದೊಡ್ಡಮ್ಮನಿಂದ ನಾನು ಪಿತ್ರಾರ್ಜಿತವಾಗಿ ಪಡೆದುಕೊಂಡ ಹಣದಲ್ಲಿ ಒಂದು ಕಾರನ್ನು ಖರೀದಿಸಿದೆ ಮತ್ತು ಪಯನೀಯರ್ ಸೇವೆ, ಅಂದರೆ ಪೂರ್ಣ ಸಮಯದ ಶುಶ್ರೂಷೆಯನ್ನು ಆರಂಭಿಸಿದೆ. ಎರಡು ವರ್ಷಗಳ ಬಳಿಕ, ಅಂದರೆ 1930ರಲ್ಲಿ, ನನ್ನ ಜೊತೆಗಾರ್ತಿ ಮತ್ತು ನಾನು ಸಾರುವ ನೇಮಕವೊಂದನ್ನು ಸ್ವೀಕರಿಸಿದೆವು. ಅಷ್ಟರೊಳಗೆ ಕ್ಲಾರೆನ್ಸ್ ಸಹ ಪಯನೀಯರ್ ಸೇವೆಯನ್ನು ಆರಂಭಿಸಿದ್ದ. ತದನಂತರ ಸ್ವಲ್ಪ ಸಮಯದೊಳಗೆ ಅವನು, ನ್ಯೂ ಯಾರ್ಕ್ ಬ್ರೂಕ್ಲಿನ್ನಲ್ಲಿರುವ ಯೆಹೋವನ ಸಾಕ್ಷಿಗಳ ಮುಖ್ಯ ಕಾರ್ಯಾಲಯ ಅಂದರೆ ಬೆತೆಲ್ನಲ್ಲಿ ಸೇವೆಸಲ್ಲಿಸುವ ಆಮಂತ್ರಣವನ್ನು ಸ್ವೀಕರಿಸಿ ಅಲ್ಲಿಗೆ ಹೋದ.
ಸುಮಾರು ಆ ಸಮಯದಲ್ಲಿಯೇ ನನ್ನ ಹೆತ್ತವರು ಬೇರ್ಪಟ್ಟರು. ಆದುದರಿಂದ ಅಮ್ಮ ಮತ್ತು ನಾನು ಒಂದು ಟ್ರೇಲರ್ ಮನೆಯನ್ನು ಕಟ್ಟಿಸಿಕೊಂಡು, ಜೊತೆಯಾಗಿ ಪಯನೀಯರ್ ಸೇವೆಯನ್ನು ಮಾಡಿದೆವು. ಆಗಲೇ ಅಮೆರಿಕದಲ್ಲಿ, ಆರ್ಥಿಕ ಮತ್ತು ಕೈಗಾರಿಕಾ ಕುಸಿತವು ಆರಂಭವಾಯಿತು. ಪಯನೀಯರ್ ಸೇವೆಯನ್ನು ಮುಂದುವರಿಸುವುದು ಒಂದು ದೊಡ್ಡ ಸವಾಲಾಯಿತು. ಆದರೂ ನಾವು ಅದನ್ನು ಬಿಡುವುದಿಲ್ಲವೆಂಬ ದೃಢನಿರ್ಣಯವನ್ನು ಮಾಡಿದೆವು. ಬೈಬಲ್ ಸಾಹಿತ್ಯದ ಬದಲಿಗೆ ಜನರಿಂದ ಕೋಳಿಗಳು, ಮೊಟ್ಟೆಗಳು, ಮತ್ತು ತೋಟದ ಉತ್ಪನ್ನ ಹಾಗೂ ಹಳೆಯ ಬ್ಯಾಟರಿಗಳು ಮತ್ತು ಬೇಡದಿದ್ದ ಅಲ್ಯೂಮಿನಿಯಂನಂತಹ ವಸ್ತುಗಳನ್ನು ಸಹ ನಾವು ತೆಗೆದುಕೊಂಡೆವು. ನಮ್ಮ ಕಾರಿನ ಪೆಟ್ರೋಲ್ ಖರ್ಚಿಗೆ ಮತ್ತು ಇನ್ನಿತರ ಖರ್ಚುಗಳಿಗಾಗಿ ಹಣವನ್ನು ಪಡೆದುಕೊಳ್ಳಲು ಈ ಬ್ಯಾಟರಿಗಳು ಮತ್ತು ಅಲ್ಯೂಮಿನಿಯಂ ಅನ್ನು ನಾವು ಮಾರುತ್ತಿದ್ದೆವು. ಹಣ ಉಳಿತಾಯ ಮಾಡಲಿಕ್ಕಾಗಿ, ನಾನೇ ಸ್ವತಃ ಕಾರಿಗೆ ಗ್ರೀಸ್ ಹಚ್ಚಲು ಮತ್ತು ಎಣ್ಣೆಯನ್ನು ಬದಲಾಯಿಸಲು ಸಹ ಕಲಿತುಕೊಂಡೆ. ಯೆಹೋವನು ಕೊಟ್ಟ ಮಾತಿಗನುಸಾರವಾಗಿ, ಅಡಚಣೆಗಳನ್ನು ದಾಟಿ ಮುಂದೆಹೋಗುವಂತೆ ನಮ್ಮ ಮಾರ್ಗವನ್ನು ಸರಾಗಗೊಳಿಸುವುದನ್ನು ನಾವು ನೋಡಿದೆವು.—ಮತ್ತಾಯ 6:33.
ಮಿಷನೆರಿ ನೇಮಕಗಳಿಗೆ ಹೊರಡುವುದು
1946ರಲ್ಲಿ, ನಾನು ವಾಚ್ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಡ್ನ ಏಳನೆಯ ತರಗತಿಗೆ ಹಾಜರಾಗುವಂತೆ ಆಮಂತ್ರಿಸಲ್ಪಟ್ಟೆ. ಆ ಶಾಲೆಯು, ನ್ಯೂ ಯಾರ್ಕ್ನ ಸೌತ್ ಲಾನ್ಸಿಂಗ್ ಬಳಿ ಇತ್ತು. ಅಷ್ಟರೊಳಗೆ ಅಮ್ಮ ಮತ್ತು ನಾನು 15 ವರ್ಷಗಳ ವರೆಗೆ ಜೊತೆಯಾಗಿ ಪಯನೀಯರ್ ಸೇವೆಯನ್ನು ಮಾಡಿದ್ದೆವು. ಹೀಗಿದ್ದರೂ ಮಿಷನೆರಿ ಕೆಲಸಕ್ಕಾಗಿ ತರಬೇತಿಯನ್ನು ಪಡೆದುಕೊಳ್ಳಲು ನನಗೆ ಸಿಕ್ಕಿದ ಅವಕಾಶಕ್ಕೆ ಅವರು ಅಡ್ಡಬರಲು ಇಷ್ಟಪಡಲಿಲ್ಲ. ಆದುದರಿಂದ ಗಿಲ್ಯಡ್ ಶಾಲೆಗೆ ಹೋಗುವ ಸುಯೋಗವನ್ನು ಸ್ವೀಕರಿಸುವಂತೆ ಅವರು ನನ್ನನ್ನು ಉತ್ತೇಜಿಸಿದರು. ಅಲ್ಲಿ ಪದವಿಪ್ರಾಪ್ತಳಾದ ಬಳಿಕ, ಇಲಿನೋಯಿ ಪಿಯೊರಿಯದ ಮಾರ್ತಾ ಹೆಸ್ ಎಂಬವಳು ನನ್ನ ಜೊತೆಗಾರ್ತಿಯಾದಳು. ಇನ್ನಿಬ್ಬರು ಜೊತೆಗಾರ್ತಿಯರೊಂದಿಗೆ ನಾವು ಬೇರೆ ದೇಶಕ್ಕೆ ನೇಮಕವನ್ನು ಪಡೆದುಕೊಳ್ಳುವ ವರೆಗೆ, ಒಂದು ವರ್ಷ ಓಹಾಯೊವಿನ ಕ್ಲೀವ್ಲ್ಯಾಂಡಲ್ಲಿ ಸೇವೆಮಾಡುವಂತೆ ನೇಮಿಸಲ್ಪಟ್ಟೆವು.
ಮತ್ತು ಆ ನೇಮಕವು ನಮಗೆ 1947ರಲ್ಲಿ ಸಿಕ್ಕಿತು. ಮಾರ್ತಾ ಮತ್ತು ನನ್ನನ್ನು ಹವಾಯಿ ದೇಶಕ್ಕೆ ನೇಮಿಸಲಾಯಿತು. ಈ ದ್ವೀಪಗಳೊಳಗೆ ಪ್ರವೇಶಿಸುವುದು ಸುಲಭವಾಗಿದ್ದದ್ದರಿಂದ, ಅಮ್ಮ ಸಹ ನಮ್ಮೊಂದಿಗೆ ಬಂದರು ಮತ್ತು ಹತ್ತಿರದಲ್ಲಿದ್ದ ಹಾನಾಲೂಲೂ ನಗರದಲ್ಲಿ ವಾಸಿಸಿದರು. ಅವರ ಆರೋಗ್ಯವು ಹದಗೆಡುತ್ತಾ ಇದ್ದುದ್ದರಿಂದ, ನನ್ನ ಮಿಷನೆರಿ ಚಟುವಟಿಕೆಗಳೊಂದಿಗೆ ನಾನು ತಾಯಿಗೂ ಸಹಾಯಮಾಡುತ್ತಿದ್ದೆ. ಅವರು 1956ರಲ್ಲಿ ಹವಾಯೀಯಲ್ಲಿ 77 ವರ್ಷ ಪ್ರಾಯದವರಾಗಿರುವಾಗ ತೀರಿಹೋದರು. ಅಲ್ಲಿಯ ವರೆಗೆ ನಾನು ಅವರನ್ನು ನೋಡಿಕೊಳ್ಳಲು ಶಕ್ತಳಾದೆ. ನಾವು ಹವಾಯೀಗೆ ಬಂದಾಗ, ಅಲ್ಲಿ ಸುಮಾರು 130 ಸಾಕ್ಷಿಗಳಿದ್ದರು. ಆದರೆ ಅಮ್ಮ ಸಾಯುವ ಸಮಯದರೊಳಗೆ 1,000ಕ್ಕಿಂತಲೂ ಹೆಚ್ಚು ಮಂದಿ ಇದ್ದರು ಮತ್ತು ಅಲ್ಲಿ ಇನ್ನು ಮುಂದೆ ಮಿಷನೆರಿಗಳ ಅಗತ್ಯವಿರಲಿಲ್ಲ.
ಅನಂತರ ಮಾರ್ತಾ ಮತ್ತು ನಾನು ವಾಚ್ಟವರ್ ಸೊಸೈಟಿಯಿಂದ ಒಂದು ಪತ್ರವನ್ನು ಪಡೆದುಕೊಂಡೆವು. ಅದರಲ್ಲಿ, ನಾವು ಜಪಾನಿಗೆ ಹೋಗುವಂತೆ ಕೇಳಿಕೊಳ್ಳಲಾಯಿತು. ನಮ್ಮ ಮೊದಲ ಚಿಂತೆ, ಈ ವಯಸ್ಸಿನಲ್ಲಿ ನಾವು ಜ್ಯಾಪನೀಸ್ ಭಾಷೆಯನ್ನು ಕಲಿಯಸಾಧ್ಯವೋ ಎಂಬುದಾಗಿತ್ತು. ಆಗ ನಾನು 48 ವರ್ಷದವಳಾಗಿದ್ದೆ ಮತ್ತು ಮಾರ್ತಾ ನನಗಿಂತ ಕೇವಲ ನಾಲ್ಕು ವರ್ಷ ಚಿಕ್ಕವಳಾಗಿದ್ದಳು. ಆದರೆ ನಾವು ಇದನ್ನು ಯೆಹೋವನ ಹಸ್ತದಲ್ಲಿ ಬಿಟ್ಟು, ಆ ನೇಮಕವನ್ನು ಸ್ವೀಕರಿಸಿದೆವು.
ನ್ಯೂ ಯಾರ್ಕ್ ನಗರದ ಯಾಂಕೀ ಸ್ಟೇಡಿಯಮ್ ಮತ್ತು ಪೊಲೊ ಗ್ರೌಂಡ್ಸ್ನಲ್ಲಿ 1958ರಲ್ಲಿ ನಡೆದ ಅಂತಾರಾಷ್ಟ್ರೀಯ ಅಧಿವೇಶನಗಳ ನಂತರ ನಾವು ಹಡಗಿನಲ್ಲಿ ಟೋಕಿಯೋ ನಗರಕ್ಕೆ ಹೊರಟೆವು. ನಾವು ಯೊಕೋಹಾಮ ಬಂದರನ್ನು ಸಮೀಪಿಸುತ್ತಿದ್ದಾಗ, ಒಂದು ತುಫಾನು
ಬೀಸಿತು. ಅಲ್ಲಿ ನಮ್ಮನ್ನು ಭೇಟಿಯಾಗಲು, ಡಾನ್ ಮತ್ತು ಮೇಬಲ್ ಹಾಸ್ಲೆಟ್, ಲಾಯ್ಡ್ ಮತ್ತು ಮೆಲ್ಬಾ ಬ್ಯಾರಿ ಹಾಗೂ ಇನ್ನಿತರ ಮಿಷನೆರಿಗಳು ಬಂದಿದ್ದರು. ಆ ಸಮಯದಲ್ಲಿ ಜಪಾನಿನಲ್ಲಿ ಕೇವಲ 1,124 ಸಾಕ್ಷಿಗಳಿದ್ದರು.ನಾವು ಅಲ್ಲಿ ತಲಪಿದೊಡನೆ, ಜ್ಯಾಪನೀಸ್ ಭಾಷೆಯನ್ನು ಕಲಿಯಲಾರಂಭಿಸಿದೆವು ಮತ್ತು ಮನೆಯಿಂದ ಮನೆಯ ಶುಶ್ರೂಷೆಯಲ್ಲಿ ತೊಡಗಿದೆವು. ಜ್ಯಾಪನೀಸ್ ಭಾಷೆಯ ನಮ್ಮ ನಿರೂಪಣೆಗಳನ್ನು ನಾವು ಇಂಗ್ಲಿಷ್ ಅಕ್ಷರಗಳಲ್ಲಿ ಬರೆದುಕೊಂಡು, ಅದನ್ನು ಓದಿ ಹೇಳುತ್ತಿದ್ದೆವು. ಇದಕ್ಕೆ ಮನೆಯವರು, “ಯೊರೊಷೀ ದೇಸೂ” ಅಥವಾ “ಕೇಕೊ ದೇಸೂ” ಎಂದು ಉತ್ತರಿಸುತ್ತಿದ್ದರು. ಇದರರ್ಥ, “ಒಳ್ಳೇದು” ಅಥವಾ “ಚೆನ್ನಾಗಿದೆ” ಎಂದಾಗಿರುತ್ತಿತ್ತು. ಆದರೆ ಮನೆಯವನಿಗೆ ಆಸಕ್ತಿ ಇದೆಯೊ ಇಲ್ಲವೊ ಎಂದು ನಮಗೆ ಯಾವಾಗಲೂ ಪತ್ತೆಹಚ್ಚಲು ಸಾಧ್ಯವಾಗುತ್ತಿರಲಿಲ್ಲ, ಯಾಕೆಂದರೆ ನಮ್ಮ ಸಂದೇಶವನ್ನು ನಿರಾಕರಿಸಲಿಕ್ಕಾಗಿಯೂ ಅದೇ ಪದಗಳನ್ನು ಉಪಯೋಗಿಸಲಾಗುತ್ತಿತ್ತು. ಈ ಪದಗಳ ಅರ್ಥವು, ಉಪಯೋಗಿಸಲ್ಪಟ್ಟ ಸ್ವರ ಅಥವಾ ವ್ಯಕ್ತಿಯ ಮುಖಭಾವದಿಂದ ಪತ್ತೆಹಚ್ಚಸಾಧ್ಯವಿತ್ತು. ಇದನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ನಮಗೆ ಸ್ವಲ್ಪ ಸಮಯ ಹಿಡಿಯಿತು.
ನನಗಾದ ಹೃದಯಸ್ಪರ್ಶಿ ಅನುಭವಗಳು
ನಾನು ಜ್ಯಾಪನೀಸ್ ಭಾಷೆಯನ್ನು ಕಲಿತುಕೊಳ್ಳಲು ಇನ್ನೂ ಒದ್ದಾಡುತ್ತಿದ್ದ ಸಮಯದಲ್ಲೇ, ಒಂದು ದಿನ ಮಿಟ್ಸೂಬಿಷಿ ಕಂಪೆನಿಯ ಹಾಸ್ಟೆಲನ್ನು ಸಂದರ್ಶಿಸಿದೆ. ಅಲ್ಲಿ ನಾನು 20 ವರ್ಷ ಪ್ರಾಯದ ಒಬ್ಬ ಸ್ತ್ರೀಯನ್ನು ಭೇಟಿಮಾಡಿದೆ. ಅವಳು ಬೈಬಲ್ ಜ್ಞಾನವನ್ನು ಪಡೆದುಕೊಳ್ಳುವುದರಲ್ಲಿ ಒಳ್ಳೇ ಪ್ರಗತಿ ಮಾಡಿ, 1966ರಲ್ಲಿ ದೀಕ್ಷಾಸ್ನಾನವನ್ನು ಪಡೆದುಕೊಂಡಳು. ಒಂದು ವರ್ಷದ ನಂತರ ಅವಳು ಪಯನೀಯರ್ ಸೇವೆಯನ್ನು ಆರಂಭಿಸಿ, ತದನಂತರ ಸ್ವಲ್ಪ ಸಮಯದೊಳಗೆಯೇ ಒಬ್ಬ ವಿಶೇಷ ಪಯನೀಯರಳೋಪಾದಿ ನೇಮಕ ಹೊಂದಿದಳು. ಅವಳು ಈಗಲೂ ಒಬ್ಬ ವಿಶೇಷ ಪಯನೀಯರಳಾಗಿದ್ದಾಳೆ. ಅವಳು ತನ್ನ ಯೌವನಕಾಲದಿಂದಲೂ ಪೂರ್ಣ ಸಮಯದ ಶುಶ್ರೂಷೆಯಲ್ಲಿ ತನ್ನ ಸಮಯ ಮತ್ತು ಶಕ್ತಿಯನ್ನು ಉಪಯೋಗಿಸಿಕೊಂಡಿರುವ ರೀತಿಯನ್ನು ನೋಡಿ ನನಗೆ ಯಾವಾಗಲೂ ಸ್ಫೂರ್ತಿ ಸಿಕ್ಕಿದೆ.
ಬೈಬಲ್ ಸತ್ಯಕ್ಕಾಗಿ ದೃಢವಾದ ನಿಲುವನ್ನು ತೆಗೆದುಕೊಳ್ಳುವುದು ಒಂದು ಪಂಥಾಹ್ವಾನವಾಗಿದೆ. ಮತ್ತು ಕ್ರೈಸ್ತರಲ್ಲದ ಒಂದು ಸಮಾಜದಲ್ಲಿ ಜೀವಿಸುವ ಜನರಿಗೆ ಇದು ವಿಶೇಷವಾಗಿ ಒಂದು ದೊಡ್ಡ ಸವಾಲೇ ಸರಿ. ಆದರೂ, ಸಾವಿರಾರು ಮಂದಿ ಈ ಸವಾಲನ್ನು ಎದುರಿಸಿದ್ದಾರೆ. ಇವರಲ್ಲಿ ಕೆಲವರೊಂದಿಗೆ ನಾನು ಬೈಬಲನ್ನು ಅಭ್ಯಾಸಿಸಿದ್ದೇನೆ. ಇವರು, ಸಾಮಾನ್ಯವಾಗಿ ಜಪಾನೀಯರ ಮನೆಗಳಲ್ಲಿ ನೋಡಸಾಧ್ಯವಿರುವ, ಬೌದ್ಧ ಅ. ಕೃತ್ಯಗಳು 19:18-20.
ವೇದಿಗಳು ಮತ್ತು ಶಿಂಟೊ ಹಲಗೆಗಳನ್ನು, ಇವು ತುಂಬ ದುಬಾರಿಯಾಗಿ ಇರುವುದಾದರೂ ತೆಗೆದುಹಾಕಿದ್ದಾರೆ. ಹೀಗೆ ಮಾಡುವುದು ತಮ್ಮ ಮೃತ ಪೂರ್ವಜರಿಗೆ ಅಗೌರವವನ್ನು ತೋರಿಸುತ್ತದೆಂದು ಕೆಲವು ಸಂಬಂಧಿಕರು ಕೆಲವೊಮ್ಮೆ ಅಪಾರ್ಥಮಾಡಿಕೊಳ್ಳುವುದರಿಂದ, ಹೀಗೆ ಮಾಡಲು ಹೊಸಬರಿಗೆ ತುಂಬ ಧೈರ್ಯ ಬೇಕಾಗುತ್ತದೆ. ಅವರ ಈ ದಿಟ್ಟ ಹೆಜ್ಜೆಗಳು, ಸುಳ್ಳು ಧರ್ಮದೊಂದಿಗೆ ಸಂಬಂಧಿಸಿದ ವಸ್ತುಗಳನ್ನು ತೆಗೆದುಹಾಕಿದ ಆರಂಭದ ಕ್ರೈಸ್ತರನ್ನು ನೆನಪಿಗೆ ತರುತ್ತವೆ.—ಒಬ್ಬ ಗೃಹಿಣಿಯಾಗಿದ್ದ ಬೈಬಲ್ ವಿದ್ಯಾರ್ಥಿನಿಯ ನೆನಪು ನನಗಿದೆ. ಅವಳು ತನ್ನ ಕುಟುಂಬದೊಂದಿಗೆ ಟೋಕಿಯೋ ಬಿಟ್ಟು ಬೇರೊಂದು ಜಾಗಕ್ಕೆ ಸ್ಥಳಾಂತರಿಸಲಿದ್ದಳು. ವಿಧರ್ಮಿ ಆರಾಧನೆಯೊಂದಿಗೆ ಯಾವುದೇ ರೀತಿಯಲ್ಲಿ ಸಂಬಂಧಿಸಿರುವ ವಸ್ತುಗಳಿಂದ ಮುಕ್ತವಾಗಿರುವ ಒಂದು ಹೊಸ ಮನೆಯನ್ನು ಅವಳು ಪ್ರವೇಶಿಸಲು ಬಯಸಿದಳು. ಆದುದರಿಂದ ಅವಳು ತನ್ನ ಇಚ್ಛೆಯನ್ನು ಗಂಡನಿಗೆ ವ್ಯಕ್ತಪಡಿಸಿದಳು ಮತ್ತು ಅವನು ಯಾವುದೇ ತಕರಾರು ಮಾಡದೆ ಅದಕ್ಕೆ ಸಹಕರಿಸಿದನು. ಇದನ್ನು ಆ ಬೈಬಲ್ ವಿದ್ಯಾರ್ಥಿನಿಯು ನನಗೆ ಸಂತೋಷದಿಂದ ಹೇಳಿದಳು, ಆದರೆ ಆಗ ಅವಳು ತಾನು ಖರೀದಿಸಿದ್ದ ಒಂದು ದೊಡ್ಡ, ಬೆಲೆಬಾಳುವ ಅಮೃತಶಿಲೆಯ ಕಲಶವನ್ನು ಪ್ಯಾಕ್ ಮಾಡಿಟ್ಟದ್ದನ್ನು ಥಟ್ಟನೇ ಜ್ಞಾಪಿಸಿಕೊಂಡಳು. ಇದು ಮನೆಗೆ ಶುಭಕಾರಕವಾಗಿದೆ ಎಂದು ಹೇಳಲಾಗುತ್ತಿತ್ತಾದುದರಿಂದ ಅವಳು ಇದನ್ನು ಖರೀದಿಸಿದ್ದಳು. ಆದರೆ ಸುಳ್ಳು ಧರ್ಮದೊಂದಿಗೆ ಅದಕ್ಕಿರುವ ಸಂಬಂಧಗಳ ಕುರಿತಾಗಿ ಅವಳು ಸಂದೇಹಪಟ್ಟದ್ದರಿಂದ, ಅದನ್ನು ಸುತ್ತಿಗೆಯಿಂದ ಹೊಡೆದು ಚೂರುಚೂರುಮಾಡಿ, ಎಸೆದುಬಿಟ್ಟಳು.
ಈ ಮಹಿಳೆ ಮತ್ತು ಇತರರು, ಸುಳ್ಳು ಧರ್ಮದೊಂದಿಗೆ ಸಂಬಂಧವಿರುವ ಬೆಲೆಬಾಳುವ ವಸ್ತುಗಳನ್ನು ಹಿಂದೆಮುಂದೆ ನೋಡದೆ ತೆಗೆದುಹಾಕಿ, ಧೈರ್ಯದಿಂದ ಯೆಹೋವನ ಸೇವೆಯಲ್ಲಿ ಹೊಸ ಜೀವನವೊಂದನ್ನು ಆರಂಭಿಸುವುದನ್ನು ನೋಡುವುದೇ, ನನಗೆ ಬಹಳ ಪ್ರತಿಫಲದಾಯಕವೂ ತೃಪ್ತಿದಾಯಕವೂ ಆದ ಅನುಭವವಾಗಿರುತ್ತದೆ. ಜಪಾನಿನಲ್ಲಿ ಮಿಷನೆರಿಯೋಪಾದಿ 40ಕ್ಕಿಂತಲೂ ಹೆಚ್ಚು ವರ್ಷಗಳನ್ನು ಆನಂದಿಸಲು ಶಕ್ತಳಾಗಿರುವುದಕ್ಕಾಗಿ ನಾನು ಯಾವಾಗಲೂ ಯೆಹೋವನಿಗೆ ಉಪಕಾರವನ್ನು ಹೇಳುತ್ತೇನೆ.
ಆಧುನಿಕ ದಿನದ “ಅದ್ಭುತಗಳು”
70ಕ್ಕಿಂತಲೂ ಹೆಚ್ಚು ವರ್ಷಗಳ ಪೂರ್ಣ ಸಮಯದ ಶುಶ್ರೂಷೆಯ ಕುರಿತು ನಾನು ನೆನಸುವಾಗ, ಆಧುನಿಕ ದಿನದ ಅದ್ಭುತಗಳೆಂದು ನನಗನಿಸುವಂತಹ ವಿಷಯಗಳ ಕುರಿತು ನಾನು ಅಚ್ಚರಿಗೊಳ್ಳುತ್ತೇನೆ. ಯುವತಿಯಾಗಿದ್ದಾಗ ನಾಚಿಕೆಯಿಂದ ಮುದುರಿಕೊಳ್ಳುತ್ತಿದ್ದ ನಾನು, ಹೆಚ್ಚಿನವರು ಇಷ್ಟಪಡದಂತಹ ರಾಜ್ಯದ ಸಂದೇಶವನ್ನು ತಿಳಿಸಲು ಸ್ವತಃ ಜನರ ಬಳಿಗೆ ಹೋಗುವುದರಲ್ಲಿ ನನ್ನ ಇಡೀ ಜೀವನವನ್ನೇ ಕಳೆಯುವೆನೆಂದು ನಾನು ಕನಸ್ಸುಮನಸ್ಸಿನಲ್ಲೂ ನೆನಸಿರಲಿಲ್ಲ. ಆದರೆ ಇದನ್ನು ಕೇವಲ ನಾನು ಮಾಡಲು ಶಕ್ತಳಾಗಿದ್ದೇನೆ ಮಾತ್ರವಲ್ಲ, ನೂರಾರು ಇಲ್ಲವೇ ಸಾವಿರಾರು ಮಂದಿ ಇದನ್ನು ಮಾಡಿರುವುದನ್ನು ನಾನು ನೋಡಿದ್ದೇನೆ. ಅವರು ಇದನ್ನು ಎಷ್ಟು ಪರಿಣಾಮಕಾರಿಯಾದ ರೀತಿಯಲ್ಲಿ ಮಾಡಿದ್ದಾರೆಂದರೆ, ನಾನು 1958ರಲ್ಲಿ ಜಪಾನಿಗೆ ಆಗಮಿಸಿದಾಗ ಒಂದು ಸಾವಿರಕ್ಕಿಂತಲೂ
ಸ್ವಲ್ಪ ಹೆಚ್ಚು ಸಾಕ್ಷಿಗಳಿದ್ದರು, ಆದರೆ ಈಗ 2,22,000ಕ್ಕಿಂತಲೂ ಹೆಚ್ಚು ಸಾಕ್ಷಿಗಳಿದ್ದಾರೆ!ಮಾರ್ತಾ ಮತ್ತು ನಾನು ಮೊದಲಾಗಿ ಜಪಾನಿಗೆ ಆಗಮಿಸಿದಾಗ, ನಮಗೆ ಟೋಕಿಯೋದಲ್ಲಿದ್ದ ಬ್ರಾಂಚ್ ಆಫೀಸಿನಲ್ಲಿ ವಾಸಿಸಲು ಏರ್ಪಾಡು ಮಾಡಲಾಯಿತು. 1963ರಲ್ಲಿ, ಆ ನಿವೇಶನದಲ್ಲೇ ಒಂದು ಹೊಸ, ಆರು ಮಾಳಿಗೆಗಳ ಬ್ರಾಂಚ್ ಕಟ್ಟಡವನ್ನು ಕಟ್ಟಲಾಯಿತು ಮತ್ತು ಅಂದಿನಿಂದ ನಾವು ಅಲ್ಲೇ ಇದ್ದೇವೆ. ನವೆಂಬರ್ 1963ರಲ್ಲಿ, ನಮ್ಮ ಬ್ರಾಂಚ್ ಮೇಲ್ವಿಚಾರಕರಾದ ಲಾಯ್ಡ್ ಬ್ಯಾರಿಯವರ ಸಮರ್ಪಣೆಯ ಭಾಷಣಕ್ಕೆ ಹಾಜರಿದ್ದ 163 ಮಂದಿ ಪೈಕಿ ನಾವೂ ಇದ್ದೆವು. ಅಷ್ಟರೊಳಗೆ ಜಪಾನಿನಲ್ಲಿ ಸಾಕ್ಷಿಗಳ ಸಂಖ್ಯೆಯು 3,000ಕ್ಕೆ ಏರಿತ್ತು.
ರಾಜ್ಯ ಸಾರುವಿಕೆಯ ಕೆಲಸವು ಒಮ್ಮಿಂದೊಮ್ಮೆಲೆ ಅಭಿವೃದ್ಧಿಯಾಗಿ, 1972ರಲ್ಲಿ 14,000ಕ್ಕಿಂತಲೂ ಹೆಚ್ಚಿನ ಸಂಖ್ಯೆಯನ್ನು ತಲಪಿದ್ದನ್ನು ನೋಡಿ ಬಹಳ ಸಂತೋಷವಾಯಿತು. ಅದೇ ವರ್ಷ, ನುಮಾಝು ನಗರದಲ್ಲಿ ಹೊಸದಾಗಿ ವಿಸ್ತರಿಸಲ್ಪಟ್ಟ ಬ್ರಾಂಚ್ ಕಟ್ಟಡವು ಪೂರ್ಣಗೊಂಡಿತು. ಆದರೆ 1982ರೊಳಗೆ, ಜಪಾನಿನಲ್ಲಿ 68,000ಕ್ಕಿಂತಲೂ ಹೆಚ್ಚು ಮಂದಿ ರಾಜ್ಯ ಘೋಷಕರಿದ್ದರು ಮತ್ತು ಟೋಕಿಯೋವಿನಿಂದ ಸುಮಾರು 80 ಕಿಲೊಮೀಟರ್ ದೂರದಲ್ಲಿದ್ದ ಎಬೀನಾ ನಗರದಲ್ಲಿ ಹೆಚ್ಚು ದೊಡ್ಡದಾದ ಬ್ರಾಂಚನ್ನು ಕಟ್ಟಲಾಯಿತು.
ಅಷ್ಟರೊಳಗೆ, ಟೋಕಿಯೋವಿನ ಮಧ್ಯಭಾಗದಲ್ಲಿ ಹಳೆಯ ಬ್ರಾಂಚ್ ಕಟ್ಟಡವನ್ನು ಜೀರ್ಣೋದ್ಧಾರಮಾಡಲಾಯಿತು. ಕಾಲಾನಂತರ, ಅದು ಜಪಾನಿನಲ್ಲಿ 40 ಅಥವಾ 50 ಅಥವಾ ಅದಕ್ಕಿಂತಲೂ ಹೆಚ್ಚು ವರ್ಷಗಳ ವರೆಗೆ ಸೇವೆಸಲ್ಲಿಸಿರುವ 20ಕ್ಕಿಂತಲೂ ಹೆಚ್ಚು ಮಿಷನೆರಿಗಳಿಗೆ ಒಂದು ಮಿಷನೆರಿ ಗೃಹವಾಯಿತು. ಈ ಮಿಷನೆರಿಗಳಲ್ಲಿ ನಾನು ಮತ್ತು ದೀರ್ಘಸಮಯದಿಂದ ನನ್ನ ಜೊತೆಗಾರ್ತಿಯಾಗಿರುವ ಮಾರ್ತಾ ಹೆಸ್ ಸಹ ಇದ್ದಾಳೆ. ಪತಿಪತ್ನಿಯರಾಗಿರುವ ಒಬ್ಬ ವೈದ್ಯ ಹಾಗೂ ನರ್ಸ್ ಸಹ ನಮ್ಮ ಜೊತೆಯಲ್ಲಿ ವಾಸಿಸುತ್ತಾರೆ. ಇವರು ನಮ್ಮ ವೈದ್ಯಕೀಯ ಅಗತ್ಯಗಳನ್ನು ಅಕ್ಕರೆಯಿಂದ ಪೂರೈಸುತ್ತಾ, ನಮ್ಮನ್ನು ನೋಡಿಕೊಳ್ಳುತ್ತಾರೆ. ಇತ್ತೀಚೆಗೆ ಇನ್ನೊಬ್ಬ ನರ್ಸ್ ಇಲ್ಲಿಗೆ ಬಂದಿದ್ದಾರೆ ಮತ್ತು ದಿನದ ಸಮಯದಲ್ಲಿ ಇವರಿಗೆ ಸಹಾಯಮಾಡಲು ಕ್ರೈಸ್ತ ಸಹೋದರಿಯರು ಬರುತ್ತಾರೆ. ಎಬೀನಾದಲ್ಲಿರುವ ಬೆತೆಲ್ ಕುಟುಂಬದ ಇಬ್ಬರು ಸದಸ್ಯರು, ಊಟಗಳನ್ನು ತಯಾರಿಸಲು ಮತ್ತು ನಮ್ಮ ಮನೆಯನ್ನು ಶುಚಿಗೊಳಿಸಲು ಸರದಿಗನುಸಾರ ಬರುತ್ತಾ ಇರುತ್ತಾರೆ. ಖಂಡಿತವಾಗಿಯೂ ಯೆಹೋವನು ನಮಗೆ ಒಳ್ಳೇದನ್ನು ಮಾಡಿದ್ದಾನೆ.—ಕೀರ್ತನೆ 34:8, 10.
ನನ್ನ ಮಿಷನೆರಿ ಜೀವನದಲ್ಲಿ ಬಹುಮುಖ್ಯವಾದ ಘಟನೆಯು, ಕಳೆದ ವರ್ಷದ ನವೆಂಬರ್ ತಿಂಗಳಿನಲ್ಲಿ ನಡೆಯಿತು. ಇದು, ಬಹುಕಾಲದಿಂದಲೂ ಮಿಷನೆರಿಗಳಾಗಿರುವ ನಾವು ವಾಸಿಸುತ್ತಿರುವ ಸದ್ಯದ ಕಟ್ಟಡವು ಸಮರ್ಪಣೆಯಾಗಿ ಸುಮಾರು 36 ವರ್ಷಗಳ ನಂತರ ನಡೆದ ಘಟನೆಯಾಗಿದೆ. ನವೆಂಬರ್ 13, 1999ರಂದು, ಎಬೀನಾದಲ್ಲಿ ವಾಚ್ ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯ ಜಪಾನ್ ಬ್ರಾಂಚಿನ ವಿಸ್ತೃತ ಕಟ್ಟಡಗಳ ಸಮರ್ಪಣೆಯ ಸಮಾರಂಭಕ್ಕೆ 37 ದೇಶಗಳಿಂದ ಸಾಕ್ಷಿಗಳು ಬಂದಿದ್ದರು. ದೀರ್ಘಸಮಯದಿಂದಲೂ ಸಾಕ್ಷಿಗಳಾಗಿರುವವರೊಂದಿಗೆ ಒಳಗೂಡಿ, ಹಾಜರಾದ ಈ 4,486 ಜನರ ನಡುವೆ ನಾನೂ ಇದ್ದೆ. ಸದ್ಯಕ್ಕೆ ಆ ಬ್ರಾಂಚ್ ಕುಟುಂಬದಲ್ಲಿ ಸುಮಾರು 650 ಮಂದಿ ಇದ್ದಾರೆ.
ನಾನು ಮನೆಯಿಂದ ಮನೆಗೆ ಬೈಬಲ್ ಸಂದೇಶಗಳನ್ನು ಅಂಜುತ್ತಾ ಅಳುಕುತ್ತಾ ಕೊಡಲು ಆರಂಭಿಸಿದಂದಿನಿಂದ, ಈಗ ಸುಮಾರು 80 ವರ್ಷಗಳ ವರೆಗೆ, ಯೆಹೋವನು ನನಗೆ ಒಬ್ಬ ಬಲವರ್ಧಕ ಸಹಾಯಕನಾಗಿರುತ್ತಾನೆ. ನಾಚಿಕೆಯ ಚಿಪ್ಪಿನೊಳಗಿಂದ ಹೊರಬರುವಂತೆ ಆತನು ನನಗೆ ಸಹಾಯಮಾಡಿದ್ದಾನೆ. ಯೆಹೋವನ ಮೇಲೆ ಭರವಸೆಯಿಡುವ ಯಾವುದೇ ವ್ಯಕ್ತಿಯನ್ನು, ನನ್ನಂತಹ ನಾಚಿಕೆ ಸ್ವಭಾವದವರನ್ನೂ, ಆತನು ಉಪಯೋಗಿಸಬಲ್ಲನೆಂದು ನಾನು ದೃಢವಾಗಿ ನಂಬುತ್ತೇನೆ. ಅಪರಿಚಿತರೊಂದಿಗೆ ನಮ್ಮ ದೇವರಾದ ಯೆಹೋವನ ಬಗ್ಗೆ ಮಾತಾಡುವುದರಲ್ಲಿ ನಾನೆಂತಹ ಸಂತೃಪ್ತಿಕರ ಜೀವನವನ್ನು ಆನಂದಿಸಿದ್ದೇನೆ!
[ಪುಟ 21ರಲ್ಲಿರುವ ಚಿತ್ರ]
ನನ್ನ ತಾಯಿ, ಮತ್ತು ನಮ್ಮನ್ನು ಭೇಟಿಮಾಡಲು ಬೆತೆಲ್ನಿಂದ ಬಂದಿದ್ದ ಕ್ಲಾರೆನ್ಸ್ನೊಂದಿಗೆ
[ಪುಟ 23ರಲ್ಲಿರುವ ಚಿತ್ರ]
ನ್ಯೂ ಯಾರ್ಕಿನ ಸೌತ್ ಲಾನ್ಸಿಂಗ್ನಲ್ಲಿರುವ ಗಿಲ್ಯಡ್ ಶಾಲೆಯ ಹುಲ್ಲುಹಾಸಿನ ಮೇಲೆ ಕುಳಿತು ಅಭ್ಯಾಸಮಾಡುತ್ತಿರುವ ನಮ್ಮ ತರಗತಿಯ ಸದಸ್ಯರು
[ಪುಟ 23ರಲ್ಲಿರುವ ಚಿತ್ರ]
ಎಡಬದಿ: ಹವಾಯಿಯಲ್ಲಿ ನಾನು, ಮಾರ್ತಾ ಹೆಸ್, ಮತ್ತು ತಾಯಿ
[ಪುಟ 24ರಲ್ಲಿರುವ ಚಿತ್ರ]
ಬಲಬದಿ: ನಮ್ಮ ಟೋಕಿಯೋ ಮಿಷನೆರಿ ಗೃಹದ ಸದಸ್ಯರು
[ಪುಟ 24ರಲ್ಲಿರುವ ಚಿತ್ರ]
ಕೆಳಗೆ: ದೀರ್ಘಸಮಯದಿಂದ ನನ್ನ ಜೊತೆಗಾರ್ತಿಯಾಗಿರುವ ಮಾರ್ತಾ ಹೆಸ್
[ಪುಟ 25ರಲ್ಲಿರುವ ಚಿತ್ರ]
ಎಬೀನಾದಲ್ಲಿ ವಿಸ್ತೃತವಾದ ಬ್ರಾಂಚ್ ಕಟ್ಟಡಗಳು, ಕಳೆದ ವರ್ಷ ನವೆಂಬರ್ನಲ್ಲಿ ಸಮರ್ಪಿಸಲ್ಪಟ್ಟವು