‘ನಿನ್ನನ್ನೂ ನಿನ್ನ ಉಪದೇಶ ಕೇಳುವವರನ್ನೂ ರಕ್ಷಿಸು’
‘ನಿನ್ನನ್ನೂ ನಿನ್ನ ಉಪದೇಶ ಕೇಳುವವರನ್ನೂ ರಕ್ಷಿಸು’
“ನಿನ್ನ ವಿಷಯದಲ್ಲಿಯೂ ನಿನ್ನ ಉಪದೇಶದ ವಿಷಯದಲ್ಲಿಯೂ ಎಚ್ಚರಿಕೆಯಾಗಿರು. . . . ಹೀಗಿರುವದರಿಂದ ನಿನ್ನನ್ನೂ ನಿನ್ನ ಉಪದೇಶ ಕೇಳುವವರನ್ನೂ ರಕ್ಷಿಸುವಿ.”—1 ತಿಮೊಥೆಯ 4:16.
1, 2. ಜೀವ ರಕ್ಷಿಸುವ ಕೆಲಸವನ್ನು ಮುಂದುವರಿಸುತ್ತಿರುವಂತೆ ನಿಜ ಕ್ರೈಸ್ತರನ್ನು ಯಾವುದು ಪ್ರಚೋದಿಸುತ್ತದೆ?
ಉತ್ತರ ಥಾಯ್‌ಲೆಂಡ್‌ನಿಂದ ಬಹಳ ದೂರದಲ್ಲಿ ಪ್ರತ್ಯೇಕವಾದ ಒಂದು ಹಳ್ಳಿಯಿದೆ. ಆ ಹಳ್ಳಿಯಲ್ಲಿ ಯೆಹೋವನ ಸಾಕ್ಷಿಗಳಾಗಿರುವ ಒಬ್ಬ ವಿವಾಹಿತ ದಂಪತಿಯು, ತಾವು ಇತ್ತೀಚೆಗೆ ಕಲಿತಿರುವ ಲಾಹು ಭಾಷೆಯಲ್ಲಿ ಅಲ್ಲಿನ ಗುಡ್ಡಗಾಡಿನ ಬುಡಕಟ್ಟಿನವರೊಂದಿಗೆ ಮಾತಾಡಲು ಪ್ರಯತ್ನಿಸುತ್ತಾರೆ. ಏಕೆಂದರೆ, ಅವರು ಆ ಗ್ರಾಮೀಣ ಜನರಿಗೆ ದೇವರ ರಾಜ್ಯದ ಸುವಾರ್ತೆಯನ್ನು ಹೇಳಲು ಬಯಸಿದ್ದರು.
2 “ಗಮನ ಸೆಳೆಯುವ ಈ ಜನರ ಮಧ್ಯೆ ಸಾಕ್ಷಿ ಕಾರ್ಯದಲ್ಲಿ ನಮಗೆ ಸಿಗುತ್ತಿರುವ ಆನಂದವೂ, ತೃಪ್ತಿಯೂ ವರ್ಣಿಸಲಸಾಧ್ಯ. ನಾವು ನಿಜವಾಗಿಯೂ ಪ್ರಕಟನೆ 14:6, 7 ವಚನಗಳ ನೆರವೇರಿಕೆಯಲ್ಲಿ ಒಳಗೂಡಿದ್ದೇವೆಂದು ನಮಗನಿಸುತ್ತದೆ. ಅಂದರೆ, ನಿತ್ಯ ಶುಭವರ್ತಮಾನವನ್ನು ‘ಸಕಲ ಜನಾಂಗ ಕುಲ [“ಬುಡಕಟ್ಟು ಜನರಿಗೆ,” NW] ಪ್ರಜೆಗಳವರಿಗೂ ಸಕಲ ಭಾಷೆಗಳನ್ನಾಡುವವರಿಗೂ’ ಸಾರುತ್ತಿದ್ದೇವೆ. (ಓರೆ ಅಕ್ಷರಗಳು ನಮ್ಮವು.) ಸುವಾರ್ತೆಯು ಇನ್ನೂ ವ್ಯಾಪಿಸದಿರುವ ಕೆಲವೊಂದು ಸೀಮಾಪ್ರದೇಶಗಳಿವೆ. ಖಂಡಿತವಾಗಿಯೂ ಅವುಗಳಲ್ಲಿ ಈ ಹಳ್ಳಿಯು ಒಂದಾಗಿದೆ. ನಮಗೆ ಎಷ್ಟೊಂದು ಬೈಬಲ್ ಅಧ್ಯಯನಗಳಿವೆ ಎಂದರೆ ಅವುಗಳೆಲ್ಲವನ್ನೂ ನಡೆಸಲು ನಮಗೆ ಸಾಧ್ಯವಾಗುತ್ತಿಲ್ಲ” ಎಂದು ಗಂಡನು ಹೇಳುತ್ತಾನೆ. ಹೌದು, ಈ ದಂಪತಿಯು ತಮ್ಮನ್ನು ಮಾತ್ರವಲ್ಲ, ತಮಗೆ ಕಿವಿಗೊಡುವವರನ್ನು ಸಹ ರಕ್ಷಿಸುವ ನಿರೀಕ್ಷೆಯುಳ್ಳವರಾಗಿದ್ದಾರೆ ಎಂಬುದರಲ್ಲಿ ಸಂದೇಹವೇ ಇಲ್ಲ. ಕ್ರೈಸ್ತರಾಗಿರುವ ನಾವೆಲ್ಲರೂ ಕೂಡ ಇದನ್ನೇ ಮಾಡಲು ಬಯಸುತ್ತೇವಲ್ಲವೇ?
‘ನಿಮ್ಮ ವಿಷಯದಲ್ಲಿ ಎಚ್ಚರಿಕೆಯಾಗಿರಿ’
3. ರಕ್ಷಣೆಯನ್ನು ಹೊಂದಲು ಇತರರಿಗೆ ಸಹಾಯಮಾಡಬೇಕಾದರೆ ನಾವು ಮೊದಲು ಏನು ಮಾಡಬೇಕು?
3 ಅಪೊಸ್ತಲ ಪೌಲನು ತಿಮೊಥೆಯನಿಗೆ, “ನಿನ್ನ ವಿಷಯದಲ್ಲಿಯೂ ನಿನ್ನ ಉಪದೇಶದ ವಿಷಯದಲ್ಲಿಯೂ ಎಚ್ಚರಿಕೆಯಾಗಿರು” ಎಂದು ಬುದ್ಧಿವಾದ ಹೇಳಿದನು. ಇದು ಕ್ರೈಸ್ತರೆಲ್ಲರಿಗೂ ಅನ್ವಯಿಸುತ್ತದೆ. (1 ತಿಮೊಥೆಯ ) ಏಕೆಂದರೆ, ರಕ್ಷಣೆಯನ್ನು ಹೊಂದಲು ನಾವು ಇತರರಿಗೆ ಸಹಾಯಮಾಡಬೇಕಾದರೆ, ನಾವು ಮೊದಲು ನಮ್ಮ ವಿಷಯದಲ್ಲಿ ಎಚ್ಚರಿಕೆಯುಳ್ಳವರಾಗಿರಬೇಕು. ಆದರೆ ಅದನ್ನು ನಾವು ಹೇಗೆ ಮಾಡಬಹುದು? ಮೊದಲಾಗಿ, ನಾವು ಜೀವಿಸುತ್ತಿರುವ ಸಮಯಗಳ ಕುರಿತು ಎಚ್ಚರಿಕೆಯುಳ್ಳವರಾಗಿರಬೇಕು. ಈ ಕಾರಣಕ್ಕಾಗಿಯೇ, ‘ಯುಗದ ಸಮಾಪ್ತಿಯು’ ಯಾವಾಗ ಆರಂಭವಾಗುವುದು ಎಂಬುದನ್ನು ತಿಳಿದುಕೊಳ್ಳುವಂತೆ ಯೇಸು ತನ್ನ ಶಿಷ್ಯರಿಗೆ ಒಂದು ಸಂಘಟಿತ ಸೂಚನೆಯನ್ನು ಕೊಟ್ಟಿದ್ದನು. ಆದರೆ, ಅಂತ್ಯವು ನಿಖರವಾಗಿ ಯಾವ ಗಳಿಗೆಯಲ್ಲಿ ಬರುವುದೆಂದು ಯೇಸು ನಮಗೆ ತಿಳಿಸಲಿಲ್ಲ. ( 4:16ಮತ್ತಾಯ 24:3, 36) ಹೀಗಿರುವುದರಿಂದ ಈ ವಿಷಯವನ್ನು ತಿಳಿದುಕೊಂಡಿರುವ ನಾವು ಹೇಗೆ ನಡೆದುಕೊಳ್ಳಬೇಕು?
4. (ಎ) ಈ ವ್ಯವಸ್ಥೆಗೆ ಉಳಿದಿರುವ ಸಮಯದ ಕುರಿತು ನಮ್ಮ ಮನೋಭಾವ ಹೇಗಿರಬೇಕು? (ಬಿ) ಯಾವ ರೀತಿಯ ಮನೋಭಾವವನ್ನು ನಾವು ತೊರೆಯಬೇಕು?
4 ನಮ್ಮಲ್ಲಿ ಪ್ರತಿಯೊಬ್ಬರು ಈ ಪ್ರಶ್ನೆಗಳನ್ನು ಕೇಳಿಕೊಳ್ಳಬಹುದು: ‘ಈ ದುಷ್ಟ ವ್ಯವಸ್ಥೆಗಾಗಿ ಉಳಿದಿರುವ ಸಮಯವನ್ನು ನನ್ನ ಹಾಗೂ ನನ್ನ ಮಾತಿಗೆ ಕಿವಿಗೊಡುವವರ ರಕ್ಷಣೆಗಾಗಿ ನಾನು ಉಪಯೋಗಿಸುತ್ತಿದ್ದೇನೋ? ಅಥವಾ “ಹೇಗಿದ್ದರೂ, ಅಂತ್ಯ ಯಾವಾಗ ಬರುತ್ತದೆ ಎಂಬುದು ನಮಗೆ ಗೊತ್ತಿಲ್ಲ. ಹಾಗಿದ್ದ ಮೇಲೆ, ನಾನು ಯಾಕೆ ಅದರ ಬಗ್ಗೆ ತಲೆಕೆಡಿಸಿಕೊಳ್ಳಬೇಕು” ಎಂದು ನೆನಸುತ್ತಿದ್ದೇನೋ?’ ಎರಡನೆಯ ಹೇಳಿಕೆಯಂಥ ಮನೋಭಾವವು ಬಹಳ ಅಪಾಯಕಾರಿ. ಏಕೆಂದರೆ, ಇದು ಯೇಸು ನೀಡಿದ ಎಚ್ಚರಿಕೆಗೆ ತದ್ವಿರುದ್ಧವಾಗಿದೆ. ಅದೇನೆಂದರೆ: “ನೀವು ಸಹ ಸಿದ್ಧವಾಗಿರ್ರಿ; ನೀವು ನೆನಸದ ಗಳಿಗೆಯಲ್ಲಿ ಮನುಷ್ಯಕುಮಾರನು ಬರುತ್ತಾನೆ.” (ಮತ್ತಾಯ 24:44) ಆದ್ದರಿಂದ, ಈ ಲೋಕವು ಕೊಡುವ ಭದ್ರತೆ ಮತ್ತು ತೃಪ್ತಿಗಾಗಿ ಆಶಿಸುವುದಕ್ಕೋ ಅಥವಾ ಯೆಹೋವನ ಸೇವೆಯಲ್ಲಿ ನಮ್ಮ ಹುರುಪನ್ನು ಕಳೆದುಕೊಳ್ಳುವುದಕ್ಕೋ ಖಂಡಿತವಾಗಿಯೂ ಇದು ಸಮಯವಲ್ಲ.—ಲೂಕ 21:34-36.
5. ಕ್ರಿಸ್ತಪೂರ್ವ ಸಮಯಗಳಲ್ಲಿದ್ದ ಸಾಕ್ಷಿಗಳು ಯಾವ ರೀತಿಯ ಮಾದರಿಯನ್ನು ಇಟ್ಟಿದ್ದಾರೆ?
5 ನಾವು ನಮ್ಮ ವಿಷಯದಲ್ಲಿ ಎಚ್ಚರಿಕೆಯುಳ್ಳವರಾಗಿದ್ದೇವೆ ಇಬ್ರಿಯ 11:13; 12:1.
ಎಂಬುದನ್ನು ತೋರಿಸುವ ಇನ್ನೊಂದು ವಿಧಾನವು, ನಂಬಿಗಸ್ತ ಕ್ರೈಸ್ತರಾಗಿ ತಾಳಿಕೊಳ್ಳುವುದಾಗಿದೆ. ಕ್ರಿಸ್ತಪೂರ್ವ ಸಮಯಗಳಲ್ಲಿದ್ದ ದೇವರ ಸೇವಕರು, ಬಿಡುಗಡೆಯು ಶೀಘ್ರದಲ್ಲೇ ಸಿಗುವುದೋ ಅಥವಾ ತುಂಬ ತಡವಾಗಿ ಸಿಗುವುದೋ ಎಂಬುದರ ಕುರಿತು ಹೆಚ್ಚು ಚಿಂತೆಮಾಡಲಿಲ್ಲ. ಅದಕ್ಕೆ ಬದಲಾಗಿ ಅವರು ತಾಳ್ಮೆಯಿಂದ ಇದ್ದರು. ಹೇಬೆಲ, ಹನೋಕ, ನೋಹ, ಅಬ್ರಹಾಮ, ಮತ್ತು ಸಾರಳ ಉದಾಹರಣೆಗಳನ್ನು ಉಲ್ಲೇಖಿಸಿದ ನಂತರ ಪೌಲನು ಹೇಳುವುದು: “ಇವರೆಲ್ಲರು ವಾಗ್ದಾನದ ಫಲಗಳನ್ನು ಹೊಂದದೆ ಅವುಗಳನ್ನು ದೂರದಿಂದ ನೋಡಿ ಉಲ್ಲಾಸದೊಡನೆ ವಂದಿಸಿ ನಂಬಿಕೆಯುಳ್ಳವರಾಗಿ ಮೃತರಾದರು. ತಾವು ಭೂಮಿಯ ಮೇಲೆ ಪರದೇಶದವರೂ ಪ್ರವಾಸಿಗಳೂ ಆಗಿದ್ದೇವೆಂದು ಒಪ್ಪಿಕೊಂಡರು.” ಹೌದು, ಅವರು ಸುಖದ ಜೀವನಕ್ಕಾಗಿ ಅರಸುತ್ತಾ, ಅದರ ಆಶಾಪಾಶಗಳ ಮೋಹಗಳಿಗೆ ತಮ್ಮನ್ನು ಸಿಕ್ಕಿಸಿಕೊಳ್ಳಲೂ ಇಲ್ಲ ಅಥವಾ ತಮ್ಮ ಸುತ್ತಮುತ್ತಲಿದ್ದ ಅನೈತಿಕ ಸುಖಭೋಗಗಳ ಒತ್ತಡಗಳಿಗೆ ಮಣಿಯಲೂ ಇಲ್ಲ. ಅದಕ್ಕೆ ಬದಲಾಗಿ ಅವರು “ವಾಗ್ದಾನದ ಫಲಗಳನ್ನು” ಹೊಂದುವುದಕ್ಕಾಗಿ ಕಾತುರದಿಂದ ಮುನ್ನೋಡಿದರು.—6. ರಕ್ಷಣೆಯ ಕುರಿತು ಪ್ರಥಮ ಶತಮಾನದ ಕ್ರೈಸ್ತರಿಗಿದ್ದ ದೃಷ್ಟಿಕೋನವು ಅವರ ಜೀವನ ರೀತಿಯನ್ನು ಯಾವ ರೀತಿಯಲ್ಲಿ ಪ್ರಭಾವಿಸಿತು?
6 ಪ್ರಥಮ ಶತಮಾನದಲ್ಲಿದ್ದ ಕ್ರೈಸ್ತರೂ ಕೂಡ ತಮ್ಮನ್ನು ‘ಪರದೇಶಿಗಳಂತೆ’ ವೀಕ್ಷಿಸಿದರು. (1 ಪೇತ್ರ 2:11) ಈ ನಿಜ ಕ್ರೈಸ್ತರು ಸಾ.ಶ. 70ರಲ್ಲಿ ಯೆರೂಸಲೇಮಿನ ನಾಶನದಿಂದ ರಕ್ಷಿಸಲ್ಪಟ್ಟ ನಂತರವೂ ತಮ್ಮ ಸಾರುವ ಕೆಲಸವನ್ನು ನಿಲ್ಲಿಸಲಿಲ್ಲ ಇಲ್ಲವೇ ಅವರು ತಮ್ಮ ಪ್ರಾಪಂಚಿಕ ಜೀವನಕ್ಕೆ ಹಿಂದಿರುಗಲಿಲ್ಲ. ನಂಬಿಗಸ್ತರಾಗಿ ಉಳಿಯುವವರಿಗೆ ಒಂದು ಮಹಾ ರಕ್ಷಣೆಯು ಕಾದಿದೆಯೆಂದು ಅವರಿಗೆ ಗೊತ್ತಿತ್ತು. ನಿಜ ಹೇಳಬೇಕೆಂದರೆ, ಸಾ.ಶ. 98ರಲ್ಲೂ ಸಹ ಅಪೊಸ್ತಲ ಯೋಹಾನನು ಬರೆದುದು: “ಲೋಕವೂ ಅದರ ಆಶೆಯೂ ಗತಿಸಿ ಹೋಗುತ್ತವೆ; ಆದರೆ ದೇವರ ಚಿತ್ತವನ್ನು ನೆರವೇರಿಸುವವನು ಎಂದೆಂದಿಗೂ ಇರುವನು.”—1 ಯೋಹಾನ 2:17, 28.
7. ಆಧುನಿಕ ಕಾಲದಲ್ಲಿ ಯೆಹೋವನ ಸಾಕ್ಷಿಗಳು ತಾಳ್ಮೆಯನ್ನು ಹೇಗೆ ಪ್ರದರ್ಶಿಸಿದ್ದಾರೆ?
7 ಈ ಆಧುನಿಕ ಕಾಲದಲ್ಲೂ ಯೆಹೋವನ ಸಾಕ್ಷಿಗಳು ಸಾರುವ ಕೆಲಸದಲ್ಲಿ ನಿರತರಾಗಿದ್ದಾರೆ. ಅವರು ಕ್ರೂರ ಹಿಂಸೆಯನ್ನು ಅನುಭವಿಸಿದ್ದರೂ ಸಾರುವುದನ್ನು ನಿಲ್ಲಿಸಿಲ್ಲ. ಹಾಗಾದರೆ, ಅವರ ತಾಳ್ಮೆಯು ನಿಷ್ಫಲವಾಗಿದೆಯೇ? ಖಂಡಿತವಾಗಿಯೂ ಇಲ್ಲ. ಏಕೆಂದರೆ, “ಕಡೇ ವರೆಗೂ ತಾಳುವವನು ರಕ್ಷಣೆಹೊಂದುವನು” ಎಂಬ ಭರವಸೆಯನ್ನು ಯೇಸು ನಮಗೆ ನೀಡಿದ್ದಾನೆ. ಈ ಲೋಕದ ಅಂತ್ಯದವರೆಗೂ ತಾಳಿಕೊಳ್ಳಬೇಕಾಗಿದ್ದರೂ ಸರಿ ಅಥವಾ ನಮ್ಮ ಮರಣದವರೆಗೂ ತಾಳಿಕೊಳ್ಳಬೇಕಾಗಿದ್ದರೂ ಸರಿ, ನಂಬಿಗಸ್ತರಾಗಿ ಸತ್ತಿರುವ ತನ್ನ ಸೇವಕರನ್ನು ಯೆಹೋವನು ಪುನರುತ್ಥಾನ ಮಾಡುವ ಮೂಲಕ ನೆನಪುಮಾಡಿಕೊಳ್ಳುವನು ಮತ್ತು ಅವರಿಗೆ ಪ್ರತಿಫಲವನ್ನು ಕೊಡುವನು.—ಮತ್ತಾಯ 24:13; ಇಬ್ರಿಯ 6:10.
8. ಹಿಂದೆ ಜೀವಿಸಿದ್ದ ಕ್ರೈಸ್ತರು ತೋರಿಸಿದ ತಾಳ್ಮೆಗಾಗಿ ನಾವು ಹೇಗೆ ಗಣ್ಯತೆಯನ್ನು ತೋರಿಸಬಹುದು?
8 ಹಿಂದೆ ಜೀವಿಸಿದ್ದ ನಂಬಿಗಸ್ತ ಕ್ರೈಸ್ತರು ತಮ್ಮ ಸ್ವಂತ ರಕ್ಷಣೆಯ ಕುರಿತು ಮಾತ್ರವೇ ಅಲ್ಲ ಇತರರ ಕುರಿತು ಕೂಡ ಚಿಂತಿಸುವವರಾಗಿದ್ದರು ಎಂಬುದಕ್ಕಾಗಿ ನಾವು ಸಂತೋಷಪಡಬೇಕು. ಏಕೆಂದರೆ, ಅವರ ಪ್ರಯತ್ನಗಳಿಂದಲೇ ನಾವು ಇಂದು ದೇವರ ರಾಜ್ಯದ ಕುರಿತು ಕಲಿತುಕೊಂಡಿದ್ದೇವೆ. ಮತ್ತು “ನೀವು ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; . . . ನಾನು ನಿಮಗೆ ಆಜ್ಞಾಪಿಸಿದ್ದನ್ನೆಲ್ಲಾ ಕಾಪಾಡಿಕೊಳ್ಳುವದಕ್ಕೆ ಅವರಿಗೆ ಉಪದೇಶ ಮಾಡಿರಿ” ಎಂಬ ಯೇಸುವಿನ ಆಜ್ಞೆಯನ್ನು ಅವರು ತಾಳ್ಮೆಯಿಂದ ಪಾಲಿಸಿದ್ದಕ್ಕಾಗಿ ನಾವು ಆಭಾರಿಗಳಾಗಿದ್ದೇವೆ. (ಮತ್ತಾಯ 28:19, 20) ಆದ್ದರಿಂದ, ಸಾರುವ ಕೆಲಸದಲ್ಲಿ ಭಾಗಿಗಳಾಗುವ ಅವಕಾಶ ನಮ್ಮ ಮುಂದಿರುವವರೆಗೂ, ದೇವರ ರಾಜ್ಯದ ಕುರಿತು ಇನ್ನೂ ಕೇಳಿಸಿಕೊಂಡಿರದ ಜನರಿಗೆ ಸಾರುವ ಮೂಲಕ ನಾವು ನಮ್ಮ ಗಣ್ಯತೆಯನ್ನು ತೋರಿಸೋಣ. ಆದರೆ, ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ಸಾರುವ ಕೆಲಸವು ಕೇವಲ ಮೊದಲ ಹೆಜ್ಜೆಯಾಗಿದೆ ಅಷ್ಟೇ.
‘ನಿಮ್ಮ ಉಪದೇಶದ ವಿಷಯದಲ್ಲಿ ಎಚ್ಚರಿಕೆಯಾಗಿರಿ’
9. ಬೈಬಲ್ ಅಭ್ಯಾಸಗಳನ್ನು ಆರಂಭಿಸಲು ಸಕಾರಾತ್ಮಕ ಮನೋಭಾವವು ಹೇಗೆ ಸಹಾಯಮಾಡಬಲ್ಲದು?
9 ನಮ್ಮ ನೇಮಕದಲ್ಲಿ ಕೇವಲ ಸಾರುವ ಕೆಲಸವು ಮಾತ್ರ ಸೇರಿಲ್ಲ, ಕಲಿಸುವುದು ಸಹ ಸೇರಿದೆ. ಯೇಸು ನಮಗೆ ಆಜ್ಞಾಪಿಸಿದ್ದನ್ನೆಲ್ಲಾ ಜನರು ಪಾಲಿಸುವಂತೆ ನಾವು ಅವರಿಗೆ ಕಲಿಸಬೇಕೆಂದು ಅವನು ಆದೇಶಿಸಿದ್ದಾನೆ. ನಿಜ, ಕೆಲವು ಕ್ಷೇತ್ರಗಳಲ್ಲಿ, ಯೆಹೋವನ ಕುರಿತು ಕಲಿಯಲು ಇಚ್ಛೆಯುಳ್ಳವರಾಗಿರುವಂತೆ ತೋರುವ ಕೆಲವು ಜನರಿರಬಹುದು. ಆದರೆ, ಇಡೀ ಕ್ಷೇತ್ರವೇ ನಿಷ್ಪ್ರಯೋಜಕವೆಂಬ ಭಾವನೆಯು ನಮಗಿರಬಾರದು. ಅಂಥ ಭಾವನೆಯು ಹೊಸ ಬೈಬಲ್ ಅಭ್ಯಾಸಗಳನ್ನು ಪ್ರಾರಂಭಿಸಲು ನಮ್ಮ ಪ್ರಯತ್ನಗಳಿಗೆ ಅಡ್ಡಿಯಾಗಿರಸಾಧ್ಯವಿದೆ. ಇವೆಟ್ ಎಂಬ ಒಬ್ಬ ಪಯನೀಯರಳ ಅನುಭವವನ್ನು ತೆಗೆದುಕೊಳ್ಳಿ. ಯಾರೂ ಸಂದೇಶವನ್ನು ಕೇಳುವುದಿಲ್ಲವೆಂದು ಹೇಳಲಾಗುತ್ತಿದ್ದ ಕ್ಷೇತ್ರದಲ್ಲಿ ಅವಳು ಸೇವೆಸಲ್ಲಿಸುತ್ತಿದ್ದಳು, ಆದ್ದರಿಂದ ಇವೆಟ್ ಆ ಕ್ಷೇತ್ರಕ್ಕೆ ಬರುತ್ತಿದ್ದ ಸಂದರ್ಶಕರನ್ನು ಭೇಟಿಮಾಡಿದಳು. ಅವರು ಆ ಕ್ಷೇತ್ರದ ಜನರಂತಿರದೆ ಬೈಬಲಿನ ಸಂದೇಶಕ್ಕೆ ಒಳ್ಳೇ ರೀತಿಯಲ್ಲಿ ಪ್ರತಿಕ್ರಿಯಿಸಿದರು. ಇದರಿಂದಾಗಿ ಇವೆಟ್ ಮನೆ ಬೈಬಲ್ ಅಭ್ಯಾಸಗಳನ್ನು ಪ್ರಾರಂಭಿಸಿದಳು. ಸ್ವಲ್ಪ ಸಮಯದ ನಂತರ ಆ ಕ್ಷೇತ್ರದ ಬಗ್ಗೆ ತನಗಿದ್ದ ಮನೋಭಾವವನ್ನು ಬದಲಾಯಿಸಿಕೊಂಡಳು. ಬೈಬಲನ್ನು ಕಲಿಯಲು ಇಷ್ಟಪಡುತ್ತಿದ್ದ ಜನರು ಇವೆಟಳಿಗೂ ಸಿಕ್ಕಿದ್ದರು.
10. ಬೈಬಲಿನ ಬೋಧಕರಾಗಿ ನಮ್ಮ ಮುಖ್ಯ ಪಾತ್ರವೇನು?
10 ಆಸಕ್ತಿ ತೋರಿಸುವ ಜನರಿಗೆ ಬೈಬಲ್ ಅಭ್ಯಾಸವನ್ನು ನೀಡಲು ಕೆಲವು ಕ್ರೈಸ್ತರು ಹಿಂಜರಿಯಬಹುದು. ಕಾರಣ, ಬೈಬಲ್ ಅಭ್ಯಾಸ ನಡೆಸುವಷ್ಟು ಸಾಮರ್ಥ್ಯ ತಮ್ಮಲ್ಲಿಲ್ಲವೆಂದು ಅವರಿಗನಿಸಬಹುದು. ನಿಜ, ನಮ್ಮೆಲ್ಲರ ಸಾಮರ್ಥ್ಯವು ಒಂದೇ ರೀತಿಯದ್ದಾಗಿರುವುದಿಲ್ಲ. ಆದರೆ ದೇವರ ವಾಕ್ಯದ ಬೋಧಕರಾಗಲು ಒಬ್ಬನು ಪ್ರವೀಣನಾಗಿರುವ ಅವಶ್ಯಕತೆ ಇಲ್ಲ. ಏಕೆಂದರೆ, ಬೈಬಲಿನ ಸರಳ ಸಂದೇಶವು ಹೆಚ್ಚು ಶಕ್ತಿಯುತವಾಗಿದೆ. ಮತ್ತು ಯೇಸು ಹೇಳಿದಂತೆ ಕುರಿಯಂತಹ ಜನರು ನಿಜ ಕುರುಬನ ಸ್ವರವನ್ನು ಕೇಳಿಸಿಕೊಳ್ಳುವಾಗ ಅದಕ್ಕೆ ಓಗೊಡುವರು. ಆದ್ದರಿಂದ, ನಮ್ಮಿಂದ ಎಷ್ಟು ಸ್ಪಷ್ಟವಾಗಿ ಹೇಳಸಾಧ್ಯವಾಗುವುದೋ ಅಷ್ಟು ಸ್ಪಷ್ಟವಾಗಿ ನಾವು ಒಳ್ಳೇ ಕುರುಬನ ಸಂದೇಶವನ್ನು ಹೇಳಿದರೆ ಸಾಕು.—ಯೋಹಾನ 10:4, 14.
11. ಒಬ್ಬ ಬೈಬಲ್ ವಿದ್ಯಾರ್ಥಿಗೆ ಸಹಾಯಮಾಡುವುದರಲ್ಲಿ ನೀವು ಹೇಗೆ ಹೆಚ್ಚು ಪರಿಣಾಮಕಾರಿಯಾಗಿರಬಲ್ಲಿರಿ?
11 ಹಾಗಾದರೆ, ಯೇಸುವಿನ ಸಂದೇಶವನ್ನು ಹೆಚ್ಚು ಪರಿಣಾಮಕಾರಿಯಾಗಿ ಜನರಿಗೆ ಹೇಗೆ ಹೇಳಬಹುದು? ಮೊದಲು, ನೀವು ಮಾತಾಡಲಿರುವ ವಿಷಯದ ಕುರಿತು ಬೈಬಲ್ ಏನು ಹೇಳುತ್ತದೆ ಎಂಬುದರ ಕುರಿತು ಚಿರಪರಿಚಿತರಾಗಿರಿ. ಯಾವುದೇ ಒಂದು ವಿಷಯವನ್ನು ಬೇರೆಯವರಿಗೆ ಕಲಿಸುವುದಕ್ಕೆ ಮುಂಚೆ ಆ ವಿಷಯವನ್ನು ನೀವು ಸರಿಯಾಗಿ ಅರ್ಥಮಾಡಿಕೊಂಡಿರಬೇಕು. ಅವರೊಂದಿಗೆ ಅಭ್ಯಾಸಮಾಡುವಾಗ ಗಂಭೀರವಾಗಿರಿ. ಆದರೆ ಅದೇ ಸಮಯದಲ್ಲಿ ಸ್ನೇಹಪರ ವಾತಾವರಣವಿರುವಂತೆ ಜ್ಞಾನೋಕ್ತಿ 16:21.
ನೋಡಿಕೊಳ್ಳಿ. ಅಭ್ಯಾಸ ಮಾಡುವಾಗ ವಿದ್ಯಾರ್ಥಿಯೊಂದಿಗೆ ಚಿಕ್ಕ ಮಕ್ಕಳು ಸೇರಿರುವಾಗ, ಅವರು ಸರಿಯಾಗಿ ಕಲಿಯಬೇಕಾದರೆ ನಿರಾತಂಕರಾಗಿರುವಂತೆ ನೋಡಿಕೊಳ್ಳಿ ಮತ್ತು ಅವರನ್ನು ಗೌರವಿಸಿ ಅವರೊಂದಿಗೆ ದಯೆಯಿಂದ ವರ್ತಿಸಿ.—12. ನೀವು ಕಲಿಸುತ್ತಿರುವ ವಿಷಯವನ್ನು ವಿದ್ಯಾರ್ಥಿಯು ಅರ್ಥಮಾಡಿಕೊಳ್ಳುತ್ತಿದ್ದಾನೆಂದು ಹೇಗೆ ಖಚಿತಪಡಿಸಿಕೊಳ್ಳುವಿರಿ?
12 ಒಬ್ಬ ಕಲಿಸುವವರಾಗಿರುವ ನೀವು, ನಿಮ್ಮ ವಿದ್ಯಾರ್ಥಿಗೆ ಬರಿ ಪುಸ್ತಕ ಜ್ಞಾನವನ್ನು ಮಾತ್ರವೇ ನೀಡಿ, ಅದನ್ನು ಅವರು ಕಂಠಪಾಠ ಮಾಡಿ ಹೇಳುವುದನ್ನು ನೀವು ಬಯಸಲಾರಿರಿ, ಅಲ್ಲವೇ? ಹಾಗಾದರೆ, ಅವರು ಏನನ್ನು ಕಲಿಯುತ್ತಿದ್ದಾರೋ ಅದನ್ನು ಅರ್ಥಮಾಡಿಕೊಳ್ಳುವಂತೆ ಅವರಿಗೆ ಸಹಾಯಮಾಡಿ. ನೀವು ಕಲಿಸುತ್ತಿರುವ ವಿಷಯಗಳನ್ನು ವಿದ್ಯಾರ್ಥಿಯು ಎಷ್ಟರ ಮಟ್ಟಿಗೆ ಅರ್ಥಮಾಡಿಕೊಳ್ಳುತ್ತಾನೆ ಎಂಬುದು, ಶಿಕ್ಷಣ ಮತ್ತು ಅವನ ಜೀವನದಲ್ಲಾಗಿರುವ ಅನುಭವಗಳು ಮತ್ತು ಬೈಬಲಿನ ಕುರಿತು ಅವನಿಗೆ ತಿಳಿದಿರುವಂತಹ ವಿಷಯಗಳ ಮೇಲೆ ಅವಲಂಬಿಸಿರುತ್ತದೆ. ಆದುದರಿಂದ, ನಿಮ್ಮನ್ನು ನೀವೇ ಹೀಗೆ ಪ್ರಶ್ನಿಸಿಕೊಳ್ಳಿ, ‘ಅಭ್ಯಾಸದ ವಿಷಯದಲ್ಲಿ ಕೊಡಲ್ಪಟ್ಟಿರುವ ವಚನಗಳ ತಾತ್ಪರ್ಯವನ್ನು ಅವನು ಅರ್ಥಮಾಡಿಕೊಳ್ಳುತ್ತಿದ್ದಾನೋ?’ ಹಾಗೂ ಕೆಲವು ಪ್ರಶ್ನೆಗಳಿಗೆ ಸರಿ ಅಥವಾ ತಪ್ಪು ಎಂಬ ಉತ್ತರಕ್ಕಿಂತ ಹೆಚ್ಚಿನ ವಿವರಣೆಯು ಬೇಕಾಗಿರುತ್ತದೆ. ಅಂಥ ಪ್ರಶ್ನೆಗಳನ್ನು ಕೇಳುವ ಮೂಲಕ ವಿದ್ಯಾರ್ಥಿಯ ಬುದ್ಧಿಸಾಮರ್ಥ್ಯವನ್ನು ಪರೀಕ್ಷಿಸಿ. (ಲೂಕ 9:18-20) ಇನ್ನೊಂದು ಕಡೆ, ಕೆಲವು ವಿದ್ಯಾರ್ಥಿಗಳು ತಮಗೆ ಕಲಿಸುತ್ತಿರುವವರ ಬಳಿ ಪ್ರಶ್ನೆಗಳನ್ನು ಕೇಳುವುದಕ್ಕೇ ಹಿಂಜರಿಯುತ್ತಾರೆ. ಇದರಿಂದಾಗಿ, ಅವರು ತಮಗೆ ಕಲಿಸಲಾಗುವ ವಿಷಯಗಳನ್ನು ಪೂರ್ತಿಯಾಗಿ ಅರ್ಥಮಾಡಿಕೊಳ್ಳದೆ ಎಲ್ಲದಕ್ಕೂ ತಲೆಯಾಡಿಸಬಹುದು. ಆದ್ದರಿಂದ, ಪ್ರಶ್ನೆಗಳನ್ನು ಕೇಳುವಂತೆ ಮತ್ತು ಯಾವುದೇ ಒಂದು ವಿಷಯವು ಅರ್ಥವಾಗದಿದ್ದಾಗ, ಸುಮ್ಮನಿರದೆ ಅದನ್ನು ಕೇಳುವಂತೆ ಕೂಡ ಅವರನ್ನು ಪ್ರೋತ್ಸಾಹಿಸಿ.—ಮಾರ್ಕ 4:10; 9:32, 33.
13. ವಿದ್ಯಾರ್ಥಿಯು ಒಬ್ಬ ಬೋಧಕನಾಗುವಂತೆ ನೀವು ಹೇಗೆ ಸಹಾಯಮಾಡಬಹುದು?
13 ವಿದ್ಯಾರ್ಥಿಯು ಒಬ್ಬ ಉತ್ತಮ ಬೋಧಕನಾಗುವಂತೆ ಮಾಡುವುದು ಬೈಬಲ್ ಅಭ್ಯಾಸದ ಒಂದು ಮುಖ್ಯ ಉದ್ದೇಶವಾಗಿದೆ. (ಗಲಾತ್ಯ 6:6) ಆ ಉದ್ದೇಶವನ್ನು ಮನಸ್ಸಿನಲ್ಲಿಟ್ಟುಕೊಂಡು, ಅಭ್ಯಾಸದ ಪುನರ್ವಿಮರ್ಶೆ ಮಾಡುವಾಗ, ವಿದ್ಯಾರ್ಥಿಯು ತಾನು ಕಲಿತ ಯಾವುದಾದರೂ ಒಂದು ಅಂಶವನ್ನು, ಯಾರೋ ಒಬ್ಬ ವ್ಯಕ್ತಿಗೆ ಮೊದಲ ಬಾರಿ ಸರಳವಾದ ಶಬ್ದಗಳಲ್ಲಿ ಹೇಳುವ ರೀತಿಯಲ್ಲಿ ಅದನ್ನು ನಿಮಗೆ ವಿವರಿಸುವಂತೆ ನೀವು ಅವನನ್ನು ಕೇಳಬಹುದು. ತದನಂತರ, ವಿದ್ಯಾರ್ಥಿಯು ಕ್ಷೇತ್ರಸೇವೆಯಲ್ಲಿ ಭಾಗವಹಿಸಲು ಅರ್ಹನಾದಾಗ, ಅವನನ್ನು ನಿಮ್ಮ ಜೊತೆ ಕರೆದುಕೊಂಡು ಹೋಗಬಹುದು. ಏಕೆಂದರೆ, ಈಗಾಗಲೇ ಅವನಿಗೆ ನಿಮ್ಮ ಪರಿಚಯವಿರುವುದರಿಂದ ನಿಮ್ಮೊಂದಿಗೆ ಕೆಲಸಮಾಡಲು ಅವನಿಗೆ ಹಿತವೆನ್ನಿಸಬಹುದು. ಅವನು ಯಾರ ಸಹಾಯವು ಇಲ್ಲದೇ ಸ್ವತಃ ಕ್ಷೇತ್ರಸೇವೆಗೆ ಹೋಗಲು ಸಿದ್ಧನಾಗುವ ವರೆಗೂ ನಿಮ್ಮೊಂದಿಗೆ ಕೆಲಸಮಾಡುವ ಅನುಭವವು ಅವನಲ್ಲಿ ಆತ್ಮವಿಶ್ವಾಸವನ್ನು ತುಂಬುವುದು.
ಯೆಹೋವನ ಸ್ನೇಹಿತನಾಗುವಂತೆ ನಿಮ್ಮ ವಿದ್ಯಾರ್ಥಿಗೆ ಸಹಾಯಮಾಡಿ
14. ಒಬ್ಬ ಬೋಧಕರಾಗಿರುವ ನಿಮ್ಮ ಮುಖ್ಯ ಉದ್ದೇಶವೇನು ಹಾಗೂ ಆ ಉದ್ದೇಶವನ್ನು ಸಾಧಿಸಲು ಯಾವುದು ಸಹಾಯಮಾಡುವುದು?
14 ವಿದ್ಯಾರ್ಥಿಯು ಯೆಹೋವನ ಸ್ನೇಹವನ್ನು ಸಂಪಾದಿಸಿಕೊಳ್ಳುವಂತೆ ಸಹಾಯಮಾಡುವುದೇ ಪ್ರತಿಯೊಬ್ಬ ಕ್ರೈಸ್ತ ಬೋಧಕನ ಮೂಲ ಉದ್ದೇಶವಾಗಿದೆ. ಇದನ್ನು ಸಾಧಿಸಬೇಕಾದರೆ ಕೇವಲ ನುಡಿಯೊಂದೇ ಸಾಲದು, ಒಳ್ಳೇ ಆದರ್ಶವೂ ಬೇಕು. ಒಳ್ಳೇ ಆದರ್ಶದೊಂದಿಗೆ ಕಲಿಸುವಾಗ ವಿಷಯಗಳು ವಿದ್ಯಾರ್ಥಿಗಳ ಹೃದಯಗಳನ್ನು ಹೆಚ್ಚು ಆಳವಾಗಿ ನಾಟುವವು. ನುಡಿಗಿಂತ ನಡೆಯೇ ಮೇಲು. ಇದು ವಿಶೇಷವಾಗಿ ವಿದ್ಯಾರ್ಥಿಯ ಹೃದಯದಲ್ಲಿ ನೈತಿಕ ಗುಣಗಳನ್ನು ನಾಟಿಸುವ ಮತ್ತು ಹುರುಪನ್ನು ತುಂಬಿಸುವ ವಿಷಯದಲ್ಲಿ ಸತ್ಯವಾಗಿದೆ. ನಿಮ್ಮ ನಡೆನುಡಿಯು ಯೆಹೋವನೊಂದಿಗಿರುವ ಒಳ್ಳೇ ಸಂಬಂಧದಿಂದಲೇ ಹೊರಹೊಮ್ಮುತ್ತಿದೆ ಎಂಬುದನ್ನು ವಿದ್ಯಾರ್ಥಿಯು ನೋಡುವುದಾದರೆ, ಅವನು ಸಹ ಅಂಥ ಒಂದು ಸಂಬಂಧವನ್ನು ಯೆಹೋವನೊಂದಿಗೆ ಬೆಳೆಸಿಕೊಳ್ಳುವಂತೆ ಇನ್ನೂ ಹೆಚ್ಚಾಗಿ ಪ್ರಚೋದಿಸಲ್ಪಡುವನು.
15. (ಎ) ವಿದ್ಯಾರ್ಥಿಯು ಒಳ್ಳೇ ಉದ್ದೇಶದೊಂದಿಗೆ ಯೆಹೋವನನ್ನು ಸೇವಿಸುವುದು ಏಕೆ ಪ್ರಾಮುಖ್ಯವಾಗಿದೆ? (ಬಿ) ವಿದ್ಯಾರ್ಥಿಯು ಆತ್ಮಿಕ ಪ್ರಗತಿಯನ್ನು ಮುಂದುವರಿಸುವಂತೆ ನೀವು ಹೇಗೆ ಸಹಾಯಮಾಡಬಲ್ಲಿರಿ?
15 ನಿಮ್ಮ ವಿದ್ಯಾರ್ಥಿಯು ಯೆಹೋವನನ್ನು ಪ್ರೀತಿಸುವುದರಿಂದಲೇ ಆತನ ಸೇವೆಮಾಡಬೇಕೇ ಹೊರತು ಕೇವಲ ಅರ್ಮಗೆದ್ದೋನ್‌ನಲ್ಲಿ ನಾಶವಾಗಬಾರದೆಂಬುದಕ್ಕಾಗಿ ಸೇವೆಮಾಡುವುದನ್ನು ನೀವು ಬಯಸಲಾರಿರಿ, ಅಲ್ಲವೇ? ಹಾಗಾದರೆ ಪ್ರೀತಿಯಿಂದ ಯೆಹೋವನನ್ನು ಸೇವಿಸುವಂಥ ಒಂದು ಒಳ್ಳೇ ಉದ್ದೇಶವನ್ನು ವಿಕಸಿಸಿಕೊಳ್ಳುವಂತೆ ಅವರಿಗೆ ಸಹಾಯಮಾಡಿ. ಹಾಗೆ ಮಾಡುವುದಾದರೆ ಮಾತ್ರ, ನೀವು ನಿಮ್ಮ ವಿದ್ಯಾರ್ಥಿಯ ನಂಬಿಕೆಯನ್ನು ಅಗ್ನಿನಿರೋಧಕ ವಸ್ತುಗಳಿಂದ ಕಟ್ಟುವಿರಿ. ಆಗ ಅವರ ನಂಬಿಕೆಯು ಯಾವುದೇ ಪರೀಕ್ಷೆಯನ್ನು ಎದುರಿಸಿ ನಿಲ್ಲುವುದು. (1 ಕೊರಿಂಥ 3:10-15) ನಿಮ್ಮನ್ನು ಅಥವಾ ಇನ್ನೊಬ್ಬ ವ್ಯಕ್ತಿಯನ್ನು ಅನುಕರಿಸಬೇಕೆಂಬ ಮಿತಿಮೀರಿದ ಆಸೆಯು ವಿದ್ಯಾರ್ಥಿಯಲ್ಲಿರುವುದು ತಪ್ಪಾಗಿದೆ. ಯಾಕೆಂದರೆ ಅದು ಅಕ್ರೈಸ್ತ ಪ್ರಭಾವಗಳನ್ನು ಎದುರಿಸಿ ನಿಲ್ಲಲು ಬಲವನ್ನೋ, ಇಲ್ಲವೇ ಸರಿಯಾದ್ದದ್ದನ್ನು ಮಾಡಲು ಧೈರ್ಯವನ್ನೋ ವಿದ್ಯಾರ್ಥಿಗೆ ಕೊಡಲಾರದು. ನೀವು ಅವನಿಗೆ ಯಾವಾಗಲೂ ಬೋಧಕರಾಗಿರಲಾರಿರಿ ಎಂಬುದನ್ನು ಮನಸ್ಸಿನಲ್ಲಿಡಿ. ಆದ್ದರಿಂದ, ನಿಮಗೆ ಅವಕಾಶವಿರುವಾಗಲೇ ಅವನು ದೇವರ ವಾಕ್ಯವನ್ನು ಪ್ರತಿನಿತ್ಯವೂ ಓದುವಂತೆ ಮತ್ತು ಅದರ ಕುರಿತು ಯೋಚಿಸುವ ಮೂಲಕ ಯೆಹೋವನಿಗೆ ಹೆಚ್ಚೆಚ್ಚು ನಿಕಟವಾಗುವಂತೆ ಪ್ರೋತ್ಸಾಹಿಸಿರಿ. ಹೀಗೆ ಮಾಡುವುದಾದರೆ, ನೀವು ಅವನೊಂದಿಗೆ ಅಭ್ಯಾಸವನ್ನು ಮುಗಿಸಿದ ನಂತರವೂ ಬೈಬಲಿನಲ್ಲಿರುವ ಮತ್ತು ಬೈಬಲಾಧಾರಿತ ಪ್ರಕಾಶನಗಳಲ್ಲಿರುವ ‘ಸ್ವಸ್ಥಬೋಧನಾವಾಕ್ಯಗಳ ಮಾದರಿಯನ್ನು’ ಅರಗಿಸಿಕೊಳ್ಳುವುದರಲ್ಲಿ ಅವನು ಮುಂದುವರಿಯುತ್ತಾ ಇರುವನು.—2 ತಿಮೊಥೆಯ 1:13.
16. ನಿಮ್ಮ ವಿದ್ಯಾರ್ಥಿಯು ಹೃದಯದಾಳದಿಂದ ಪ್ರಾರ್ಥಿಸುವಂತೆ ನೀವು ಹೇಗೆ ಸಹಾಯಮಾಡಬಹುದು?
16 ನಿಮ್ಮ ವಿದ್ಯಾರ್ಥಿಗೆ ಹೃದಯದಾಳದಿಂದ ಪ್ರಾರ್ಥನೆ ಮಾಡುವುದನ್ನು ಕಲಿಸುವ ಮೂಲಕವೂ ಕೂಡ, ಯೆಹೋವನೊಂದಿಗೆ ಹತ್ತಿರವಾಗಲು ಸಹಾಯಮಾಡಬಹುದು. ಇದನ್ನು ನೀವು ಹೇಗೆ ಮಾಡಬಹುದು? ಯೇಸುವಿನ ಮಾದರಿ ಪ್ರಾರ್ಥನೆಯನ್ನು ಮತ್ತು ಬೈಬಲಿನಲ್ಲಿ ದಾಖಲಾಗಿರುವ ಇನ್ನಿತರ ಅನೇಕ ಹೃತ್ಪೂರ್ವಕ ಪ್ರಾರ್ಥನೆಗಳ ಕಡೆಗೆ ವಿದ್ಯಾರ್ಥಿಯ ಗಮನವನ್ನು ಸೆಳೆಯುವ ಮೂಲಕ ನೀವು ಅದನ್ನು ಮಾಡಬಹುದು. ಉದಾಹರಣೆಗೆ, ಕೀರ್ತನೆಗಳಲ್ಲಿ ದಾಖಲಾಗಿರುವ ಪ್ರಾರ್ಥನೆಗಳನ್ನು ನೀವು ತೋರಿಸಬಹುದು. (ಕೀರ್ತನೆ 17, 86, 143; ಮತ್ತಾಯ 6:9, 10) ಇದರೊಂದಿಗೆ ಅಭ್ಯಾಸವನ್ನು ಆರಂಭಿಸುವಾಗ ಮತ್ತು ಮುಗಿಸುವಾಗ ನೀವು ಮಾಡುವ ಪ್ರಾರ್ಥನೆಯನ್ನು ವಿದ್ಯಾರ್ಥಿಯು ಕೇಳಿಸಿಕೊಳ್ಳುವಾಗ, ಯೆಹೋವನಿಗಾಗಿ ನಿಮಗಿರುವ ಭಾವನೆಗಳನ್ನು ಅವನು ತಿಳಿದುಕೊಳ್ಳುವನು. ಆದ್ದರಿಂದ, ನಿಮ್ಮ ಪ್ರಾರ್ಥನೆಗಳು ಯಾವಾಗಲೂ ಪ್ರಾಮಾಣಿಕವೂ ಮುಚ್ಚುಮರೆಯಿಲ್ಲದವುಗಳೂ ಆಗಿರಬೇಕು. ಮತ್ತು ಅವು ಆತ್ಮಿಕ ಮತ್ತು ಭಾವನಾತ್ಮಕ ಸಮತೋಲನದಿಂದ ಕೂಡಿರಬೇಕು.
ನಿಮ್ಮ ಮಕ್ಕಳನ್ನು ರಕ್ಷಿಸುವುದಕ್ಕಾಗಿ ಕೆಲಸಮಾಡಿ
17. ರಕ್ಷಣೆಯ ಮಾರ್ಗದಲ್ಲಿ ಮಕ್ಕಳು ಉಳಿಯುವಂತೆ ಹೆತ್ತವರು ಅವರಿಗೆ ಹೇಗೆ ಸಹಾಯಮಾಡಬಹುದು?
17 ನಾವು ರಕ್ಷಿಸಲು ಬಯಸುವ ಜನರಲ್ಲಿ, ನಮ್ಮ ಕುಟುಂಬದವರೂ ಸೇರಿರುವುದು ಖಂಡಿತ. ಕ್ರೈಸ್ತ ಹೆತ್ತವರ ಬಹುತೇಕ ಮಂದಿ ಮಕ್ಕಳು ನಿಷ್ಠಾವಂತರೂ ಮತ್ತು ‘ನಂಬಿಕೆಯಲ್ಲಿ ದೃಢರೂ ಆಗಿದ್ದಾರೆ.’ ಇನ್ನೂ ಕೆಲವರಲ್ಲಿ ಸತ್ಯವು ಹೃದಯದಲ್ಲಿ ಆಳವಾಗಿ ಬೇರೂರದೇ ಇರಬಹುದು. (1 ಪೇತ್ರ 5:9; ಎಫೆಸ 3:17; ಕೊಲೊಸ್ಸೆ 2:7) ಇವರಲ್ಲಿ ಅನೇಕ ಯುವಜನರು ಯೌವನಕ್ಕೆ ಕಾಲಿಡುತ್ತಿರುವಂತೆ ಕ್ರೈಸ್ತ ಮಾರ್ಗವನ್ನು ತೊರೆದುಬಿಡುತ್ತಾರೆ. ನೀವು ಒಂದು ವೇಳೆ ಕ್ರೈಸ್ತ ಹೆತ್ತವರಾಗಿರುವಲ್ಲಿ, ನಿಮ್ಮ ಮಕ್ಕಳಿಗೆ ಇಂಥ ಪರಿಸ್ಥಿತಿಯು ಬರದಂತಿರಲು ಏನು ಮಾಡಬಹುದು? ಮೊದಲಾಗಿ, ಒಂದು ಸಂತೋಷಕರವಾದ ಕುಟುಂಬ ವಾತಾವರಣವನ್ನು ಸೃಷ್ಟಿಸಲು ಶ್ರಮಿಸಬೇಕು. ಒಂದು ಒಳ್ಳೇ ಕುಟುಂಬ ಜೀವನವು, ಅಧಿಕಾರದ ಕುರಿತು ಉತ್ತಮ ದೃಷ್ಟಿಕೋನವನ್ನು ಹೊಂದಿರಲು ಮತ್ತು ಸರಿಯಾದ ಮೌಲ್ಯಗಳಿಗೆ ಗಣ್ಯತೆಯನ್ನು ತೋರಿಸಲು ಹಾಗೂ ಇತರರೊಂದಿಗೆ ಒಂದು ಒಳ್ಳೇ ಸಂಬಂಧವನ್ನು ಇಟ್ಟುಕೊಳ್ಳಲು ತಳಪಾಯವಾಗಿರುತ್ತದೆ. (ಇಬ್ರಿಯ 12:9) ಆದ್ದರಿಂದ, ಕುಟುಂಬದಲ್ಲಿರುವವರ ಮಧ್ಯೆ ಇರುವ ಆತ್ಮೀಯ ಬಂಧವು ಒಂದು ಫಲವತ್ತಾದ ನೆಲದಂತಿರುತ್ತದೆ. ಅಂಥ ಒಂದು ವಾತಾವರಣವು ಯೆಹೋವನೊಂದಿಗೆ ಸ್ನೇಹವನ್ನು ಬೆಳೆಸಿಕೊಳ್ಳುವಂತೆ ಒಂದು ಮಗುವಿಗೆ ಸಹಾಯಮಾಡುತ್ತದೆ. (ಕೀರ್ತನೆ 22:10) ಬಲವಾದ ಕುಟುಂಬಗಳು ಯಾವುದೇ ವಿಷಯವನ್ನು ಒಗ್ಗಟ್ಟಿನಿಂದ ಮಾಡುತ್ತವೆ. ಒಂದು ವೇಳೆ ಹೆತ್ತವರು ತಮ್ಮ ಸ್ವಂತ ಪ್ರಯೋಜನಕ್ಕಾಗಿ ಉಪಯೋಗಿಸಬಹುದಾದ ಸಮಯವನ್ನು ತ್ಯಾಗಮಾಡಬೇಕಾಗಿದ್ದರೂ ಅವರು ಅದನ್ನು ಮಾಡುವರು. ಈ ರೀತಿಯಾಗಿ ನಿಮ್ಮ ಮಾದರಿಯ ಮೂಲಕ, ನಿಮ್ಮ ಮಕ್ಕಳು ತಮ್ಮ ಜೀವನದಲ್ಲಿ ಸರಿಯಾದ ನಿರ್ಣಯಗಳನ್ನು ಮಾಡುವಂತೆ ನೀವು ಕಲಿಸಸಾಧ್ಯವಿದೆ. ಹೆತ್ತವರೇ, ನಿಮ್ಮ ಮಕ್ಕಳು ನಿಮ್ಮಿಂದ ಬಯಸುವುದು ಭೌತಿಕ ವಸ್ತುಗಳನ್ನಲ್ಲ, ಬದಲಾಗಿ ನಿಮ್ಮನ್ನು. ಅಂದರೆ, ನಿಮ್ಮ ಸಮಯ, ನಿಮ್ಮ ಶಕ್ತಿ, ಮತ್ತು ನಿಮ್ಮ ಪ್ರೀತಿ ಅವರಿಗೆ ಬೇಕಾಗಿದೆ. ಇದನ್ನು ನಿಮ್ಮ ಮಕ್ಕಳಿಗೆ ನೀವು ಕೊಡುತ್ತಿದ್ದೀರೋ?
18. ಹೆತ್ತವರು ತಮ್ಮ ಮಕ್ಕಳ ಮನಸ್ಸಿನಲ್ಲಿರುವ ಯಾವ ರೀತಿಯ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಹಿಡಿಯಲು ಸಹಾಯಮಾಡಬೇಕು?
18 ತಾವು ಕ್ರೈಸ್ತರಾಗಿದ್ದೇವೆಂದ ಮಾತ್ರಕ್ಕೆ ತಮ್ಮ ಮಕ್ಕಳು ಕೂಡ ತಮ್ಮಷ್ಟಕ್ಕೆ ತಾವೇ ಕ್ರೈಸ್ತರಾಗಿಬಿಡುವರೆಂದು ಹೆತ್ತವರು ಎಂದೂ ನೆನಸಬಾರದು. ಐದು ಮಂದಿ ಮಕ್ಕಳ ತಂದೆ ಹಾಗೂ ಹಿರಿಯನು ಆಗಿರುವ ಡ್ಯಾನಿಯೆಲ್ ಹೇಳುವುದು: “ಮಕ್ಕಳು ಶಾಲೆಯಲ್ಲಿ ಮತ್ತು ಬೇರೆ ಸ್ಥಳಗಳಿಂದ ಅನಿವಾರ್ಯವಾಗಿ ಕಲಿತುಕೊಳ್ಳುವ ಕೆಲವೊಂದು ವಿಷಯಗಳ ಕುರಿತು ಅವರ ಮನಸ್ಸಿನಲ್ಲಿ ಸಂದೇಹಗಳು ಹುಟ್ಟುತ್ತವೆ. ಅದನ್ನು ದೂರಮಾಡಲು ಹೆತ್ತವರು ಸಮಯ ತೆಗೆದುಕೊಳ್ಳಬೇಕು. ತಮ್ಮ ಪ್ರಶ್ನೆಗಳಿಗೆ ತಾವೇ ಉತ್ತರಗಳನ್ನು ಕಂಡುಹಿಡಿಯುವಂತೆ ಹೆತ್ತವರು ತಾಳ್ಮೆಯಿಂದ ಸಹಾಯಮಾಡಬೇಕು. ಅವರಿಗೆ ಈ ರೀತಿಯ ಪ್ರಶ್ನೆಗಳಿರಬಹುದು: ‘ನಾವು ನಿಜವಾಗಿಯೂ ಅಂತ್ಯದ ಸಮಯದಲ್ಲಿ ಜೀವಿಸುತ್ತಿದ್ದೇವೋ? ಒಂದೇ ಒಂದು ಸತ್ಯ ಧರ್ಮವಿದೆ ಎಂಬುದನ್ನು ನಾನು ಹೇಗೆ ತಿಳಿದುಕೊಳ್ಳಬಲ್ಲೆ? ಒಳ್ಳೇ ಸಹಪಾಠಿಯು ನಿಜವಾದ ಸ್ನೇಹಿತನಾಗಿರಸಾಧ್ಯವಿಲ್ಲ ಏಕೆ? ಮದುವೆಗೆ ಮುಂಚೆ ಸೆಕ್ಸ್ ತಪ್ಪೇ?’” ನಿಮ್ಮ ಮಕ್ಕಳ ಒಳಿತಿಗಾಗಿ ನೀವು ಮಾಡುವ ಪ್ರಯತ್ನಗಳನ್ನು ಯೆಹೋವನು ಖಂಡಿತವಾಗಿ ಆಶೀರ್ವದಿಸುವನು. ಏಕೆಂದರೆ ಅವನಿಗೂ ನಿಮ್ಮ ಮಕ್ಕಳ ಕುರಿತು ಕಾಳಜಿಯಿದೆ.
19. ಹೆತ್ತವರು ಸ್ವತಃ ತಮ್ಮ ಮಕ್ಕಳೊಂದಿಗೆ ಅಭ್ಯಾಸ ಮಾಡುವುದು ಏಕೆ ಉತ್ತಮವಾಗಿದೆ?
19 ಕೆಲವು ಹೆತ್ತವರು ತಮ್ಮ ಸ್ವಂತ ಮಕ್ಕಳೊಂದಿಗೆ ಅಭ್ಯಾಸ ಮಾಡಲು ಹಿಂಜರಿಯುತ್ತಾರೆ. ಏಕೆಂದರೆ ತಾವು ಅಷ್ಟು ಅರ್ಹರಲ್ಲವೆಂದು ಅವರಿಗೆ ಅನಿಸಬಹುದು. ಆದರೆ ನೀವು ಹಾಗೆ ನೆನಸುವ ಅಗತ್ಯ ಇಲ್ಲ. ಏಕೆಂದರೆ, ನಿಮ್ಮನ್ನು ಬಿಟ್ಟರೆ ನಿಮ್ಮ ಮಕ್ಕಳಿಗೆ ಬೇರೆ ಯಾರೂ ಚೆನ್ನಾಗಿ ಕಲಿಸಲು ಸಾಧ್ಯವಿಲ್ಲ. (ಎಫೆಸ 6:4) ನಿಮ್ಮ ಮಕ್ಕಳಿಗೆ ನೀವು ಕಲಿಸುವಾಗ ಅವರ ಮನಸ್ಸಿನಲ್ಲಿ ಏನಿದೆ ಎಂಬುದನ್ನು ತಿಳಿದುಕೊಳ್ಳಲು ನಿಮಗೆ ಅವಕಾಶ ಸಿಗುತ್ತದೆ. ಅವರು ಕೊಡುವ ಉತ್ತರಗಳು ಹೃದಯದಾಳದಿಂದ ಬರುತ್ತಿವೆಯೇ ಅಥವಾ ಕಾಟಾಚಾರಕ್ಕಾಗಿ ಕೊಡುತ್ತಿದ್ದಾರೆಯೇ? ಅವರು ಕಲಿಯುತ್ತಿರುವ ವಿಷಯಗಳನ್ನು ಅವರು ನಿಜವಾಗಿಯೂ ನಂಬುತ್ತಾರೆಯೇ? ಯೆಹೋವನು ಅವರಿಗೆ ಒಬ್ಬ ನಿಜವಾದ ವ್ಯಕ್ತಿಯಾಗಿದ್ದಾನೆಯೇ? ಇಂಥ ಮತ್ತು ಇತರ ಬಹುಮುಖ್ಯ ಪ್ರಶ್ನೆಗಳಿಗೆ ಉತ್ತರವನ್ನು ತಿಳಿದುಕೊಳ್ಳಬೇಕಾದರೆ ನಿಮ್ಮ ಮಕ್ಕಳೊಂದಿಗೆ ನೀವೇ ಅಭ್ಯಾಸಮಾಡಬೇಕು.—2 ತಿಮೊಥೆಯ 1:5.
20. ಹೆತ್ತವರು ಕುಟುಂಬ ಅಭ್ಯಾಸವನ್ನು ಹೇಗೆ ಹೆಚ್ಚು ಆನಂದಕರವಾಗಿಯೂ, ಪ್ರಯೋಜನಕರವಾಗಿಯೂ ಮಾಡಬಹುದು?
20 ಆದರೆ, ನಿಮ್ಮ ಮಕ್ಕಳೊಂದಿಗೆ ಒಮ್ಮೆ ಪ್ರಾರಂಭಿಸಿದ ಅಭ್ಯಾಸವನ್ನು ನೀವು ಹೇಗೆ ಮುಂದುವರಿಸಿಕೊಂಡು ಹೋಗುವಿರಿ? ಒಬ್ಬ ಹಿರಿಯನು ಹಾಗೂ ಒಬ್ಬ ಮಗ ಮತ್ತು ಮಗಳ ತಂದೆಯಾಗಿರುವ ಜೋಸೆಫ್ ಹೇಳುವುದು: “ಬೇರೆಲ್ಲ ಬೈಬಲ್ ಅಭ್ಯಾಸಗಳಂತೆ ಕುಟುಂಬ ಅಭ್ಯಾಸವು ಆನಂದಕರವಾಗಿರಬೇಕು. ಪ್ರತಿಯೊಬ್ಬರು ಅಭ್ಯಾಸಕ್ಕಾಗಿ ಎದುರುನೋಡುವಂತಿರಬೇಕು. ಅಂಥ ಅಭ್ಯಾಸವನ್ನು ನಮ್ಮ ಕುಟುಂಬದವರೊಂದಿಗೆ ಮಾಡಬೇಕಾದರೆ ಸಮಯದ ಕುರಿತು ಬಹಳ ಕಟ್ಟುನಿಟ್ಟಾಗಿರಬಾರದು. ಕೆಲವೊಮ್ಮೆ ಅಭ್ಯಾಸವು ಒಂದು ಗಂಟೆಯಷ್ಟು ಸಮಯ ತೆಗೆದುಕೊಳ್ಳಬಹುದು. ಎಂದಾದರೊಮ್ಮೆ ಕೇವಲ ಹತ್ತು ನಿಮಿಷ ಕೂಡ ತೆಗೆದುಕೊಳ್ಳಬಹುದು. ಆದರೆ ಅಭ್ಯಾಸವು ಹತ್ತು ನಿಮಿಷವಾಗಿರಲಿ ಅಥವಾ ಒಂದು ಗಂಟೆಯೇ ಆಗಿರಲಿ, ನಾವು ಅಭ್ಯಾಸವನ್ನಂತೂ ಖಂಡಿತ ಮಾಡುತ್ತೇವೆ. ಮಕ್ಕಳಿಗೆ ವಾರದಲ್ಲಿನ ಮುಖ್ಯಾಂಶವು, ನಮ್ಮ ಅಭ್ಯಾಸದ ಸಮಯದಲ್ಲಿ ಬೈಬಲ್ ಕಥೆಗಳ ನನ್ನ ಪುಸ್ತಕದಲ್ಲಿನ ಪಾತ್ರಗಳ ನಟನೆಯಾಗಿದೆ. * ನಾವು ಅವರಿಗಾಗಿ ಎಷ್ಟು ಪುಟಗಳನ್ನು ಓದುತ್ತೇವೆ ಎಂಬುದಕ್ಕಿಂತ, ಅವರು ಎಷ್ಟರ ಮಟ್ಟಿಗೆ ಅರ್ಥಮಾಡಿಕೊಳ್ಳುತ್ತಾರೆ ಮತ್ತು ಅದು ಅವರ ಮನಸ್ಸನ್ನು ಎಷ್ಟು ಆಳವಾಗಿ ಪ್ರಭಾವಿಸುತ್ತದೆ ಎಂಬುದು ಹೆಚ್ಚು ಪ್ರಾಮುಖ್ಯ.”
21. ಹೆತ್ತವರು ಯಾವ ಸಮಯಗಳಲ್ಲಿ ತಮ್ಮ ಮಕ್ಕಳಿಗೆ ಕಲಿಸಬಹುದು?
21 ನಿಮ್ಮ ಮಕ್ಕಳಿಗೆ ಕಲಿಸುವುದು, ಕೇವಲ ಅಭ್ಯಾಸ ಮಾಡುವ ಸಮಯಾವಧಿಗಳಿಗೆ ಮಾತ್ರವೇ ಸೀಮಿತವಾಗಿಲ್ಲವೆಂಬುದೇನೋ ನಿಜ. (ಧರ್ಮೋಪದೇಶಕಾಂಡ 6:5-7) ಆರಂಭದಲ್ಲಿ ತಿಳಿಸಿದ ಥಾಯ್‌ಲೆಂಡಿನ ಸಾಕ್ಷಿಯು ಹೇಳುವುದು: “ಕ್ಷೇತ್ರಸೇವೆಗಾಗಿ ನಮ್ಮ ತಂದೆ, ನಮ್ಮನ್ನು ಸಭೆಯ ಟೆರಿಟೊರಿಯ ಮೂಲೆ ಮೂಲೆಗಳಿಗೂ ಸೈಕಲುಗಳಲ್ಲಿ ಕರೆದುಕೊಂಡು ಹೋಗುತ್ತಿದ್ದದ್ದು ಈಗಲೂ ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಖಂಡಿತವಾಗಿಯೂ, ನಮ್ಮ ಹೆತ್ತವರ ಒಳ್ಳೇ ಮಾದರಿ ಮತ್ತು ಅವರು ನಮಗೆ ಎಲ್ಲ ಸಂದರ್ಭಗಳಲ್ಲೂ ಕಲಿಸಿದ ವಿಧವೇ, ನಾವು ಪೂರ್ಣ ಸಮಯದ ಸೇವೆಯನ್ನು ಮಾಡುವಂತೆ ಸಹಾಯಮಾಡಿದೆ. ಅವರು ಕಲಿಸಿದ ಪಾಠಗಳು ನಿಜವಾಗಿಯೂ ಬಲವಾಗಿದ್ದವು. ಏಕೆಂದರೆ, ಈಗಲೂ ನಾನು ಮೂಲೆ ಮೂಲೆಗಳಲ್ಲಿರುವ ಕ್ಷೇತ್ರಗಳಲ್ಲಿ ಕೆಲಸಮಾಡುತ್ತಿದ್ದೇನೆ!”
22. ‘ನಿಮ್ಮ ವಿಷಯದಲ್ಲಿಯೂ ನಿಮ್ಮ ಉಪದೇಶದ ವಿಷಯದಲ್ಲಿಯೂ ಎಚ್ಚರಿಕೆಯಾಗಿರುವುದರ’ ಫಲಿತಾಂಶವೇನಾಗಿರುವುದು?
22 ಶೀಘ್ರದಲ್ಲೇ, ತಕ್ಕ ಸಮಯದಲ್ಲಿ ಯೇಸು ಈ ವ್ಯವಸ್ಥೆಯ ಮೇಲೆ ದೇವರ ನ್ಯಾಯತೀರ್ಪನ್ನು ತರುವನು. ಅದಾದ ಮೇಲೆ ಆ ವಿಶೇಷ ಘಟನೆಯು, ವಿಶ್ವವ್ಯಾಪಿ ಚರಿತ್ರೆಯೊಳಗೆ ಸೇರಿಬಿಡುವುದು. ಆದರೆ ಯೆಹೋವನ ಸೇವಕರು ಮಾತ್ರ ನಿತ್ಯ ರಕ್ಷಣೆಯನ್ನು ಮನಸ್ಸಿನಲ್ಲಿಟ್ಟುಕೊಂಡು ಆತನನ್ನು ಸೇವಿಸುತ್ತಾ ಮುಂದುವರಿಯುವರು. ಅವರಲ್ಲಿ ನೀವು ಮತ್ತು ನಿಮ್ಮ ಮಕ್ಕಳು ಹಾಗೂ ನಿಮ್ಮ ಬೈಬಲ್ ವಿದ್ಯಾರ್ಥಿಗಳು ಒಬ್ಬರಾಗಿರುವ ನಿರೀಕ್ಷೆ ನಿಮಗಿದೆಯೊ? ಹಾಗಾದರೆ, ಇದನ್ನು ನೆನಪಿನಲ್ಲಿಟ್ಟುಕೊಳ್ಳಿ: “ನಿನ್ನ ವಿಷಯದಲ್ಲಿಯೂ ನಿನ್ನ ಉಪದೇಶದ ವಿಷಯದಲ್ಲಿಯೂ ಎಚ್ಚರಿಕೆಯಾಗಿರು. ನೀನು ಈ ಕಾರ್ಯಗಳಲ್ಲಿ ನಿರತನಾಗಿರು; ಹೀಗಿರುವುದರಿಂದ ನಿನ್ನನ್ನೂ ನಿನ್ನ ಉಪದೇಶ ಕೇಳುವವರನ್ನೂ ರಕ್ಷಿಸುವಿ.”—1 ತಿಮೊಥೆಯ 4:16.
[ಪಾದಟಿಪ್ಪಣಿ]
^ ಪ್ಯಾರ. 20 ವಾಚ್‌ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿಸಲ್ಪಟ್ಟಿದೆ.
ನೀವು ವಿವರಿಸಬಲ್ಲಿರೋ?
• ದೇವರು ನ್ಯಾಯತೀರ್ಪನ್ನು ಯಾವ ಗಳಿಗೆಯಲ್ಲಿ ತರುವನೆಂದು ನಮಗೆ ಗೊತ್ತಿಲ್ಲದಿರುವುದರಿಂದ, ನಮ್ಮ ಮನೋಭಾವವು ಹೇಗಿರಬೇಕು?
• ‘ನಾವು ಉಪದೇಶಿಸುವ ವಿಷಯದಲ್ಲಿ ಎಚ್ಚರಿಕೆಯಾಗಿರುವ’ ವಿಧಗಳು ಯಾವುವು?
• ಒಬ್ಬ ಬೈಬಲ್ ವಿದ್ಯಾರ್ಥಿಯು ಯೆಹೋವನ ಸ್ನೇಹಿತನಾಗುವಂತೆ ನೀವು ಹೇಗೆ ಸಹಾಯಮಾಡಬಹುದು?
• ಹೆತ್ತವರು ತಮ್ಮ ಮಕ್ಕಳಿಗೆ ಕಲಿಸುವುದಕ್ಕಾಗಿ ಸಮಯ ತೆಗೆದುಕೊಳ್ಳುವುದು ಏಕೆ ಪ್ರಾಮುಖ್ಯವಾಗಿದೆ?
[ಅಧ್ಯಯನ ಪ್ರಶ್ನೆಗಳು]
[ಪುಟ 15ರಲ್ಲಿರುವ ಚಿತ್ರ]
ಗಂಭೀರವಾದ ಆದರೆ ಸ್ನೇಹಪರ ವಾತಾವರಣವು, ಚೆನ್ನಾಗಿ ಕಲಿಯಲು ಸಹಾಯಕಾರಿಯಾಗಿರುತ್ತದೆ
[ಪುಟ 18ರಲ್ಲಿರುವ ಚಿತ್ರ]
ಸೊಲೊಮೋನನು ಇಬ್ಬರು ಸೂಳೆಯರಿಗೆ ತೀರ್ಪುಕೊಟ್ಟ ಬೈಬಲ್ ಕಥೆಗಳನ್ನು ನಟಿಸುವುದು, ಕುಟುಂಬ ಅಭ್ಯಾಸಗಳನ್ನು ಹೆಚ್ಚು ಸಂತೋಷಕರವನ್ನಾಗಿ ಮಾಡುತ್ತದೆ