ಮನಶ್ಶಾಂತಿ ಎಲ್ಲಿ ಸಿಗುವುದು?
ಮನಶ್ಶಾಂತಿ ಎಲ್ಲಿ ಸಿಗುವುದು?
ಮೊದಲ ಲೇಖನದಲ್ಲಿ ತಿಳಿಸಿದ್ದ ಥಿರೋನ ಕಾಲಕ್ಕೂ ನಮ್ಮ ಕಾಲಕ್ಕೂ ಬಹಳ ವ್ಯತ್ಯಾಸವಿದೆ. ಅಂಥ ವ್ಯತ್ಯಾಸಗಳಲ್ಲಿ ಒಂದು ಪ್ರಮುಖ ವ್ಯತ್ಯಾಸವೆಂದರೆ, ಥಿರೋನ ಕಾಲದಲ್ಲಿ ಮನಶ್ಶಾಂತಿಯನ್ನು ಬಯಸುತ್ತಿದ್ದವರಿಗೆ ಸಲಹೆ ನೀಡುವವರು ಯಾರೂ ಇರಲಿಲ್ಲ. ಆದರೆ ನಮ್ಮ ಕಾಲದಲ್ಲಿ ಅಂಥವರಿಗೆ ಬರವೇ ಇಲ್ಲ. ಮನೋಶಾಸ್ತ್ರಜ್ಞರಿಂದ ಹಿಡಿದು ಸ್ವ-ಸಹಾಯಕ ಪುಸ್ತಕಗಳನ್ನು ಬರೆಯುವ ಲೇಖಕರ ವರೆಗೂ ಎಲ್ಲರೂ ಸಲಹೆಗಳನ್ನು ನೀಡುವವರೇ. ಅಷ್ಟೇ ಏಕೆ, ವಾರ್ತಾಪತ್ರಿಕೆಗಳ ಪತ್ರಿಕಾಲೇಖಕರು ಕೂಡ ತಮಗೆ ಹೊಳೆಯುವ ವಿಚಾರಗಳನ್ನು ನೀಡುತ್ತಿರುತ್ತಾರೆ. ಇವರು ಕೊಡುವ ಸಲಹೆಗಳು ಕ್ಷಣಿಕವಾದ ಪರಿಹಾರಗಳನ್ನು ನೀಡಬಹುದಾದರೂ, ಶಾಶ್ವತವಾದ ಪರಿಹಾರಗಳಿಗೆ ಇದಕ್ಕಿಂತಲೂ ಹೆಚ್ಚು ಪರಿಣಾಮಕಾರಿಯಾದ ಸಲಹೆಗಳ ಅಗತ್ಯವಿದೆ. ಇಂತಹ ಸಲಹೆಗಳನ್ನೇ ಹಿಂದಿನ ಲೇಖನದಲ್ಲಿ ತಿಳಿಸಲಾಗಿರುವ ವ್ಯಕ್ತಿಗಳು ಕಂಡುಕೊಂಡಿದ್ದಾರೆ.
ಆ್ಯ ನ್ಟೋನಿಯೊ, ಮಾರ್ಕೋಸ್, ಗೆರ್ಸನ್, ವೆನಿಯಾ, ಮಾರ್ಸೆಲೋ ಇವರೆಲ್ಲರೂ ವಿಭಿನ್ನ ಹಿನ್ನೆಲೆಗಳಿಂದ ಬಂದವರಾಗಿದ್ದರು. ಅದೇ ರೀತಿಯಲ್ಲಿ ಅವರ ಸಮಸ್ಯೆಗಳು ಕೂಡ ಭಿನ್ನ ಭಿನ್ನವಾಗಿದ್ದವು. ಆದರೆ ಅವರಲ್ಲಿ ಕಡಿಮೆಪಕ್ಷ ಮೂರು ವಿಷಯಗಳು ಸಾಮಾನ್ಯವಾಗಿದ್ದವು. ಮೊದಲನೆಯದಾಗಿ, ಒಂದು ಸಮಯದಲ್ಲಿ ಅವರು ‘ಲೋಕದಲ್ಲಿ ಯಾವ ನಿರೀಕ್ಷೆಯಿಲ್ಲದವರೂ ದೇವರನ್ನರಿಯದವರೂ ಆಗಿದ್ದರು.’ (ಎಫೆಸ 2:12) ಎರಡನೆಯದಾಗಿ, ಅವರೆಲ್ಲರೂ ಮನಶ್ಶಾಂತಿಗಾಗಿ ಹಾತೊರೆಯುತ್ತಿದ್ದರು. ಮೂರನೆಯದಾಗಿ, ಅವರೆಲ್ಲರೂ ಯೆಹೋವನ ಸಾಕ್ಷಿಗಳೊಂದಿಗೆ ಬೈಬಲ್ ಅಧ್ಯಯನವನ್ನು ಮಾಡಿದ ನಂತರ, ತಾವು ಬಯಸುತ್ತಿದ್ದ ಮನಶ್ಶಾಂತಿಯನ್ನು ಕಂಡುಕೊಂಡರು. ಅವರು ತಮ್ಮ ಬೈಬಲ್ ಅಧ್ಯಯನವನ್ನು ಮುಂದುವರಿಸಿದಂತೆ, ದೇವರು ತಮ್ಮ ಕುರಿತು ಚಿಂತಿಸುತ್ತಾನೆ ಎಂಬುದನ್ನು ಅರಿತುಕೊಂಡರು. ಹೌದು, ಪೌಲನು ತನ್ನ ಸಮಯದಲ್ಲಿದ್ದ ಅಥೇನೆಯವರಿಗೆ ಹೇಳಿದಂತೆ ದೇವರು “ನಮ್ಮಲ್ಲಿ ಒಬ್ಬನಿಗೂ ದೂರವಾದವನಲ್ಲ.” (ಅ. ಕೃತ್ಯಗಳು 17:27) ಈ ವಿಷಯವನ್ನು ಮಂದಟ್ಟು ಮಾಡಿಕೊಳ್ಳುವುದೇ ಮನಶ್ಶಾಂತಿಯನ್ನು ಕಂಡುಕೊಳ್ಳಲು ಒಂದು ಬಹುಮುಖ್ಯ ಅಂಶವಾಗಿದೆ.
ಇಂದು ಶಾಂತಿಯಿಲ್ಲದಿರಲು ಕಾರಣವೇನು?
ಇಂದು ಪ್ರಪಂಚದಲ್ಲಿ ವ್ಯಕ್ತಿಗಳ ಜೀವನದಲ್ಲಿ ಅಥವಾ ಜನರ ನಡುವೆ ಶಾಂತಿಯಿಲ್ಲದಿರುವುದಕ್ಕೆ ಎರಡು ಮುಖ್ಯ ಕಾರಣಗಳನ್ನು ಬೈಬಲ್ ನೀಡುತ್ತದೆ. ಮೊದಲನೆಯ ಕಾರಣವನ್ನು ಯೆರೆಮೀಯ 10:23ರಲ್ಲಿ ವಿವರಿಸಲಾಗಿದೆ: “ಮಾನವನ ಮಾರ್ಗವು ಅವನ ಸ್ವಾಧೀನದಲ್ಲಿಲ್ಲ . . . ಮನುಷ್ಯನು ನಡೆದಾಡುತ್ತಾ ಸರಿಯಾದ ಕಡೆಗೆ ತನ್ನ ಹೆಜ್ಜೆಯನ್ನಿಡಲಾರನು.” ಹಾಗಾಗಿ, ಯಾರ ಸಹಾಯವೂ ಇಲ್ಲದೆ ತನ್ನ ಸ್ವಂತ ಜೀವನವನ್ನು ಸರಿಯಾದ ಮಾರ್ಗದಲ್ಲಿ ನಡೆಸಲು, ಮಾನವನಿಗೆ ವಿವೇಕವೋ ಅಥವಾ ದೂರದೃಷ್ಟಿಯೋ ಇಲ್ಲ. ಆದುದರಿಂದ ದೇವರು ಮಾತ್ರ ಅವನಿಗೆ ಬೇಕಾಗಿರುವಂತಹ ನಿಜವಾದ ಸಹಾಯವನ್ನು ಒದಗಿಸಶಕ್ತನಾಗಿದ್ದಾನೆ. ದೇವರ ಮಾರ್ಗದರ್ಶನವನ್ನು ಅರಸದ ಮಾನವರು ಎಂದೂ ನಿರಂತರ ಶಾಂತಿಯನ್ನು ಕಂಡುಕೊಳ್ಳಲು ಸಾಧ್ಯವಿಲ್ಲ. ಶಾಂತಿಯಿಲ್ಲದಿರುವುದಕ್ಕೆ ಎರಡನೇ ಕಾರಣವನ್ನು ನಾವು ಅಪೊಸ್ತಲ ಯೋಹಾನನ ಮಾತುಗಳಲ್ಲಿ ನೋಡಬಹುದು: “ಲೋಕವೆಲ್ಲವು ಕೆಡುಕನ ವಶದಲ್ಲಿ ಬಿದ್ದಿದೆ.” (1 ಯೋಹಾನ 5:19) ಆದ್ದರಿಂದ, ದೈವಿಕ ಮಾರ್ಗದರ್ಶನವಿಲ್ಲದೆ ಶಾಂತಿಯನ್ನು ಕಂಡುಕೊಳ್ಳುವುದಕ್ಕಾಗಿ ಮಾನವನು ಮಾಡುವ ಎಲ್ಲ ಪ್ರಯತ್ನಗಳು, ಅದೃಶ್ಯವಾಗಿರುವುದಾದರೂ ಅಸ್ತಿತ್ವದಲ್ಲಿರುವ ಹಾಗೂ ಬಹಳ ಶಕ್ತಿಶಾಲಿಯಾಗಿರುವ ‘ಕೆಡುಕನಾದ’ ಸೈತಾನನಿಂದ ಮುರಿಯಲ್ಪಡುತ್ತಲೇ ಇರುವವು.
ಇಂದು, ಬಹುತೇಕ ಮಂದಿ ದೇವರ ಮಾರ್ಗದರ್ಶನೆಯನ್ನು ಅರಸುವುದಿಲ್ಲ ಮತ್ತು ಲೋಕದಲ್ಲಿ ಸೈತಾನನು ತುಂಬ ಕ್ರಿಯಾಶೀಲನಾಗಿದ್ದಾನೆ. ಈ ಎರಡೂ ಕಾರಣಗಳಿಂದ ಇಡೀ ಮಾನವಕುಲವು ಶೋಚನೀಯ ಸ್ಥಿತಿಯಲ್ಲಿದೆ. ಇದನ್ನು ಅಪೊಸ್ತಲ ಪೌಲನು ಚೆನ್ನಾಗಿ ವರ್ಣಿಸುತ್ತಾನೆ: “ಜಗತ್ತೆಲ್ಲಾ ಇಂದಿನ ವರೆಗೂ ನರಳುತ್ತಾ ಪ್ರಸವವೇದನೆಪಡುತ್ತಾ ಇರುತ್ತದೆ.” (ರೋಮಾಪುರ 8:22) ಈ ಹೇಳಿಕೆಯನ್ನು ಯಾರು ತಾನೆ ಅಲ್ಲಗಳೆಯಲು ಸಾಧ್ಯವಿದೆ? ಇಂದು, ಶ್ರೀಮಂತ ಹಾಗೂ ಬಡ ರಾಷ್ಟ್ರಗಳಲ್ಲೆರಡರಲ್ಲೂ ಕೌಟುಂಬಿಕ ಸಮಸ್ಯೆಗಳು, ಪಾತಕ, ಅನ್ಯಾಯ, ವ್ಯಕ್ತಿತ್ವಗಳ ಘರ್ಷಣೆ, ಅನಿಶ್ಚಿತ ಆರ್ಥಿಕ ಪರಿಸ್ಥಿತಿ, ಬುಡಕಟ್ಟು ಮತ್ತು ಜನಾಂಗೀಯ ಕಲಹಗಳು, ದಬ್ಬಾಳಿಕೆ, ಅನಾರೋಗ್ಯ ಹಾಗೂ ಇನ್ನಿತರ ವಿಷಯಗಳು ಜನರ ಮನಶ್ಶಾಂತಿಯನ್ನು ಕಸಿದುಕೊಳ್ಳುತ್ತವೆ.
ಮನಶ್ಶಾಂತಿಯನ್ನು ಎಲ್ಲಿ ಕಂಡುಕೊಳ್ಳಬಹುದು?
ಆ್ಯನ್ಟೋನಿಯೊ, ಮಾರ್ಕೋಸ್, ಗೆರ್ಸನ್, ವೆನಿಯಾ, ಮಾರ್ಸೆಲೋ ಇವರೆಲ್ಲರೂ ತಮ್ಮ ಜೀವನವನ್ನೇ ಪರಿವರ್ತಿಸಿದಂತಹ ವಿಷಯಗಳನ್ನು ದೇವರ ವಾಕ್ಯವಾದ ಬೈಬಲಿನ ಅಭ್ಯಾಸದಿಂದ ಕಲಿತುಕೊಂಡರು. ಅವರು ಕಲಿತುಕೊಂಡ ಒಂದು ವಿಷಯವೇನೆಂದರೆ, ಈ ಜಗತ್ತಿನ ಪರಿಸ್ಥಿತಿಯು ಒಂದು ದಿನ ಖಂಡಿತ ಬದಲಾಗುವುದು ಎಂಬುದೇ. ಇದು, ಎಲ್ಲವೂ ಕೊನೆಯಲ್ಲಿ ಸರಿಯಾಗಿಬಿಡುವುದು ಎಂದು ಹೇಳುವ ಒಂದು ರೀತಿಯ ಅನಿಶ್ಚಿತ ನಿರೀಕ್ಷೆಯಲ್ಲ. ಬದಲಿಗೆ, ಒಂದು ನೈಜವಾದ ಹಾಗೂ ದೃಢವಾದ ಭರವಸೆಯ ಮೇಲೆ ಆಧಾರಿತವಾದ ನಿರೀಕ್ಷೆಯಾಗಿದೆ. ಏಕೆಂದರೆ ಮಾನವಕುಲಕ್ಕಾಗಿ ದೇವರು ಒಂದು ಉದ್ದೇಶವನ್ನಿಟ್ಟಿದ್ದಾನೆ ಮತ್ತು ನಾವು ಆತನ ಚಿತ್ತವನ್ನು ಮಾಡುವುದಾದರೆ ಈಗಲೂ ಆ ಉದ್ದೇಶದಿಂದ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಈ ವ್ಯಕ್ತಿಗಳು ಕೂಡ ತಾವು ಬೈಬಲಿನಿಂದ ಕಲಿತಂಥ ವಿಷಯಗಳನ್ನು ತಮ್ಮ ಜೀವನದಲ್ಲಿ ಅನ್ವಯಿಸಿಕೊಂಡರು. ಅದರ ನಿಮಿತ್ತ ಅವರ ಜೀವನದಲ್ಲಿ ಸುಧಾರಣೆಗಳಾದವು. ತಾವು ನೆನಸಿದ್ದಕ್ಕಿಂತಲೂ ಹೆಚ್ಚಿನ ಶಾಂತಿ ಮತ್ತು ಸಮಾಧಾನವನ್ನು ಅವರು ಕಂಡುಕೊಂಡರು.
ಆ್ಯನ್ಟೋನಿಯೊ ಈಗ ಕಾರ್ಮಿಕರ ಹೋರಾಟಗಳಲ್ಲಿ ಮತ್ತು ಪ್ರತಿಭಟನೆಗಳಲ್ಲಿ ಭಾಗವಹಿಸುವುದಿಲ್ಲ. ಏಕೆಂದರೆ, ಈ ರೀತಿಯ ಹೋರಾಟಗಳಿಂದ ತರಲ್ಪಡುವ ಸುಧಾರಣೆಗಳು ಕೇವಲ ಸೀಮಿತವಾದವು ಹಾಗೂ ತಾತ್ಕಾಲಿಕವಾದದ್ದಾಗಿವೆ ಎಂಬುದನ್ನು ಅವನು ತಿಳಿದುಕೊಂಡಿದ್ದಾನೆ. ಈ ಮಾಜಿ ಕಾರ್ಮಿಕ ನಾಯಕನು, ಈಗ ದೇವರ ರಾಜ್ಯದ ಕುರಿತು ಕಲಿತುಕೊಂಡಿದ್ದಾನೆ. ಲಕ್ಷಾಂತರ ಜನರು ಕರ್ತನ (ಅಥವಾ, ನಮ್ಮ ತಂದೆಯೇ) ಪ್ರಾರ್ಥನೆಯನ್ನು ಪಠಿಸುವಾಗ ಮತ್ತು ದೇವರಿಗೆ “ನಿನ್ನ ರಾಜ್ಯವು ಬರಲಿ” ಎಂದು ಹೇಳುವಾಗ, ಅವರು ಆ ರಾಜ್ಯಕ್ಕಾಗಿಯೇ ಪ್ರಾರ್ಥಿಸುತ್ತಿದ್ದಾರೆ. (ಮತ್ತಾಯ 6:10) ದೇವರ ರಾಜ್ಯವು ಮಾನವಕುಲಕ್ಕೆ ನಿಜವಾದ ಶಾಂತಿಯನ್ನು ತರುವ ಒಂದು ನಿಜವಾದ ಸ್ವರ್ಗೀಯ ಸರ್ಕಾರವಾಗಿದೆ ಎಂಬುದನ್ನು ಆ್ಯನ್ಟೋನಿಯೊ ಕಲಿತುಕೊಂಡನು.
ಮಾರ್ಕೊಸ್, ವಿವಾಹದ ಕುರಿತು ಬೈಬಲ್ ಕೊಡುವ ವಿವೇಕಯುತ ಸಲಹೆಗಳನ್ನು ತನ್ನ ಜೀವನದಲ್ಲಿ ಕಾರ್ಯರೂಪಕ್ಕೆ ಹಾಕಲು ಕಲಿತುಕೊಂಡನು. ಇದರ ಪರಿಣಾಮವಾಗಿ, ಈ ಮಾಜಿ ರಾಜಕಾರಣಿಯು ಈಗ ತನ್ನ ಹೆಂಡತಿಯೊಂದಿಗೆ ಪುನಃ ಒಂದುಗೂಡಿ ಕುಟುಂಬ ಜೀವನವನ್ನು ಸಂತೋಷಿಸುತ್ತಿದ್ದಾನೆ. ದೇವರ ರಾಜ್ಯವು ದುರಾಶೆ ಮತ್ತು ಸ್ವಾರ್ಥದಿಂದ ಕೂಡಿರುವ ಈ ಲೋಕ ವ್ಯವಸ್ಥೆಯನ್ನು ತೆಗೆದುಹಾಕಿ, ಒಂದು ಉತ್ತಮ ಪರಿಸ್ಥಿತಿಯನ್ನು ಶೀಘ್ರದಲ್ಲೇ ತರಲಿರುವ ಸಮಯಕ್ಕಾಗಿ ಅವನು ಕೂಡ ಕಾಯುತ್ತಿದ್ದಾನೆ. ಅವನು ಕರ್ತನ ಪ್ರಾರ್ಥನೆಯಲ್ಲಿರುವ “ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರಲಿ” ಎಂಬ ವಾಕ್ಯದ ಆಳವಾದ ಅರ್ಥವನ್ನು ತಿಳಿದುಕೊಂಡಿದ್ದಾನೆ. (ಮತ್ತಾಯ 6:10ಬಿ) ದೇವರ ಚಿತ್ತವು ಭೂಮಿಯಲ್ಲಿ ನೆರವೇರುವಾಗ ಮಾನವರು ಹಿಂದೆಂದೂ ಅನುಭವಿಸಿರದ ರೀತಿಯಲ್ಲಿ ಒಂದು ಉತ್ತಮ ಗುಣಮಟ್ಟದ ಜೀವನವನ್ನು ಅನುಭವಿಸುವರು.
ಗೆರ್ಸೆನನ ಕುರಿತೇನು? ಅವನು ಇನ್ನೆಂದೂ ಅಲೆಮಾರಿಯಾಗಿರದೆ, ಕಳ್ಳತನವನ್ನು ಕೂಡ ಬಿಟ್ಟುಬಿಟ್ಟಿದ್ದಾನೆ. ಈ ಮಾಜಿ ಬೀದಿ ಹುಡುಗನ ಜೀವನಕ್ಕೆ ಈಗ ಒಂದು ಅರ್ಥವಿದೆ. ಏಕೆಂದರೆ, ಇತರರು ಮನಶ್ಶಾಂತಿಯನ್ನು ಕಂಡುಕೊಳ್ಳುವಂತೆ ಸಹಾಯಮಾಡಲು ಅವನು ತನ್ನ ಶಕ್ತಿಯನ್ನೆಲ್ಲಾ ಉಪಯೋಗಿಸುತ್ತಿದ್ದಾನೆ. ಈ ಎಲ್ಲಾ ಅನುಭವಗಳು ತೋರಿಸುವಂತೆ, ಬೈಬಲನ್ನು ಅಭ್ಯಾಸಮಾಡುವುದರಿಂದ ಮತ್ತು ಅದರಲ್ಲಿ
ಕೊಡಲ್ಪಟ್ಟಿರುವ ಸಲಹೆಗಳನ್ನು ಅನ್ವಯಿಸುವುದರಿಂದ ಒಬ್ಬ ವ್ಯಕ್ತಿಯ ಜೀವನವು ಉತ್ತಮವಾಗಬಲ್ಲದು.ಗೊಂದಲಮಯವಾದ ಲೋಕದಲ್ಲಿ ಮನಶ್ಶಾಂತಿ
ದೇವರ ಚಿತ್ತವನ್ನು ನೆರವೇರಿಸುವುದರಲ್ಲಿ ಬಹುಮುಖ್ಯವಾದ ಚಾರಿತ್ರಿಕ ವ್ಯಕ್ತಿ ಯೇಸುಕ್ರಿಸ್ತನಾಗಿದ್ದಾನೆ. ಜನರು ಯೆಹೋವನ ಸಾಕ್ಷಿಗಳ ಜೊತೆ ಬೈಬಲನ್ನು ಅಭ್ಯಾಸಮಾಡುವಾಗ ಅವನ ಕುರಿತು ಹೆಚ್ಚೆಚ್ಚು ವಿಷಯಗಳನ್ನು ತಿಳಿದುಕೊಳ್ಳುತ್ತಾರೆ. ಅವನು ಹುಟ್ಟಿದ ರಾತ್ರಿಯಂದು ದೇವದೂತರು, “ಮೇಲಣಲೋಕಗಳಲ್ಲಿ ದೇವರಿಗೆ ಮಹಿಮೆ, ಭೂಲೋಕದಲ್ಲಿ ಮನುಷ್ಯರೊಳಗೆ ಸಮಾಧಾನ ದೇವರು ಅವರಿಗೆ ಒಲಿಯುತ್ತಾನೆ” ಎಂದು ದೇವರನ್ನು ಕೊಂಡಾಡಿದರು. (ಲೂಕ 2:14) ಅಲ್ಲದೆ, ಯೇಸು ಬೆಳೆದು ದೊಡ್ಡವನಾದಾಗ, ಜನರ ಜೀವನದಲ್ಲಿ ಸುಧಾರಣೆಗಳನ್ನು ತರುವುದರ ಕುರಿತು ಹೆಚ್ಚು ಚಿಂತಿತನಾಗಿದ್ದನು. ಅವನು ಅವರ ಭಾವನೆಗಳನ್ನು ಅರ್ಥಮಾಡಿಕೊಂಡನು ಮತ್ತು ರೋಗಿಗಳಿಗೆ ಹಾಗೂ ನೊಂದುಬೆಂದಿದ್ದ ವ್ಯಕ್ತಿಗಳಿಗೆ ಬಹಳ ಅನುಕಂಪವನ್ನು ತೋರಿಸಿದನು. ಮತ್ತು ದೇವದೂತರ ಮಾತುಗಳಿಗೆ ಹೊಂದಿಕೆಯಲ್ಲಿ ದೀನರಿಗೆ ಸ್ವಲ್ಪ ಮಟ್ಟಿಗೆ ಮನಶ್ಶಾಂತಿಯನ್ನು ನೀಡಿದನು. ತನ್ನ ಶೂಶ್ರೂಷೆಯ ಕೊನೆಯಲ್ಲಿ ಅವನು ತನ್ನ ಶಿಷ್ಯರಿಗೆ ಹೀಗೆ ಹೇಳಿದನು: “ಶಾಂತಿಯನ್ನು ನಿಮಗೆ ಬಿಟ್ಟುಹೋಗುತ್ತೇನೆ, ನನ್ನಲ್ಲಿರುವಂಥ ಶಾಂತಿಯನ್ನು ನಿಮಗೆ ಕೊಡುತ್ತೇನೆ; ಲೋಕವು ಕೊಡುವ ರೀತಿಯಿಂದ ನಾನು ನಿಮಗೆ ಕೊಡುವದಿಲ್ಲ. ನಿಮ್ಮ ಹೃದಯವು ಕಳವಳಗೊಳ್ಳದಿರಲಿ, ಹೆದರದಿರಲಿ.”—ಯೋಹಾನ 14:27.
ಯೇಸು ಒಬ್ಬ ಜನೋಪಕಾರಿಗಿಂತಲೂ ಹೆಚ್ಚಿನವನಾಗಿದ್ದನು. ಅವನು ತನ್ನನ್ನು ಒಬ್ಬ ಕುರುಬನಿಗೆ ಹೋಲಿಸಿಕೊಂಡನು. ತನ್ನ ದೀನ ಹಿಂಬಾಲಕರನ್ನು ಕುರಿಗಳಿಗೆ ಹೋಲಿಸುತ್ತಾ ಅವನು ಹೀಗೆ ಹೇಳಿದನು: “ನಾನಾದರೋ ಅವುಗಳಿಗೆ ಜೀವವು ಇರಬೇಕೆಂತಲೂ ಅದು ಸಮೃದ್ಧಿಯಾಗಿ ಇರಬೇಕೆಂತಲೂ ಬಂದೆನು. ನಾನೇ ಒಳ್ಳೇ ಕುರುಬನು; ಒಳ್ಳೇ ಕುರುಬನು ತನ್ನ ಕುರಿಗಳಿಗೋಸ್ಕರ ತನ್ನ ಪ್ರಾಣವನ್ನು ಕೊಡುತ್ತಾನೆ.” (ಯೋಹಾನ 10:10, 11) ತಾನು ಚೆನ್ನಾಗಿರಬೇಕು ಮತ್ತು ಎಲ್ಲದರಲ್ಲೂ ತಾನು ಮುಂದಿರಬೇಕು ಎನ್ನುವ ಇಂದಿನ ಸ್ವಾರ್ಥ ನಾಯಕರೊಂದಿಗೆ ಯೇಸುವನ್ನು ಹೋಲಿಸುವಾಗ ಅವನು ಎಷ್ಟೊಂದು ಭಿನ್ನನಾಗಿದ್ದನು! ಏಕೆಂದರೆ, ಅವನು ತನ್ನ ಕುರಿಗಳಿಗಾಗಿ ತನ್ನ ಪ್ರಾಣವನ್ನೇ ಕೊಟ್ಟನು.
ಯೇಸು ನಮಗಾಗಿ ಮಾಡಿರುವ ತ್ಯಾಗದಿಂದ ನಾವು ಹೇಗೆ ಪ್ರಯೋಜನವನ್ನು ಪಡೆದುಕೊಳ್ಳಬಹುದು? ಅನೇಕರಿಗೆ ಈ ಮಾತುಗಳು ಚಿರಪರಿಚಿತವಾಗಿವೆ: “ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು; ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು ಆತನನ್ನು ಕೊಟ್ಟನು.” (ಯೋಹಾನ 3:16) ಯೇಸುವಿನಲ್ಲಿ ನಂಬಿಕೆಯನ್ನಿಡಬೇಕಾದರೆ, ಪ್ರಪ್ರಥಮವಾಗಿ ಅವನ ಮತ್ತು ಅವನ ತಂದೆಯಾದ ಯೆಹೋವನ ಕುರಿತ ಜ್ಞಾನವನ್ನು ತೆಗೆದುಕೊಳ್ಳಬೇಕಾಗಿದೆ. ದೇವರ ಮತ್ತು ಯೇಸು ಕ್ರಿಸ್ತನ ಕುರಿತ ಜ್ಞಾನವು, ಯೆಹೋವ ದೇವರೊಂದಿಗೆ ಅನ್ಯೋನ್ಯವಾದ ಸಂಬಂಧವನ್ನು ಹೊಂದಿರಲು ಸಹಾಯಮಾಡುವುದು. ಮತ್ತು ಇದು ತಾನೇ ಮನಶ್ಶಾಂತಿಯನ್ನು ಪಡೆದುಕೊಳ್ಳಲು ಸಹಾಯಮಾಡುವುದು.
“ನನ್ನ ಕುರಿಗಳು ನನ್ನ ಸ್ವರಕ್ಕೆ ಕಿವಿಗೊಡುತ್ತವೆ; ನಾನು ಅವುಗಳನ್ನು ಬಲ್ಲೆನು; ಅವು ನನ್ನ ಹಿಂದೆ ಬರುತ್ತವೆ. ನಾನು ಅವುಗಳಿಗೆ ನಿತ್ಯಜೀವವನ್ನು ಕೊಡುತ್ತೇನೆ; ಅವು ಎಂದಿಗೂ ನಾಶವಾಗುವದೇ ಇಲ್ಲ; ಅವುಗಳನ್ನು ಯಾರೂ ನನ್ನ ಕೈಯೊಳಗಿಂದ ಕಸಕೊಳ್ಳರು,” ಎಂದು ಯೇಸು ಹೇಳಿದ್ದನು. (ಯೋಹಾನ 10:27, 28) ಇವು ಎಷ್ಟೊಂದು ಆದರಣೀಯ ಮತ್ತು ಸಾಂತ್ವನದ ಮಾತುಗಳಾಗಿವೆ! ಯೇಸು ಈ ಮಾತುಗಳನ್ನು ಸುಮಾರು ಎರಡು ಸಾವಿರ ವರ್ಷಗಳ ಹಿಂದೆ ಹೇಳಿದ್ದನೆಂಬುದೇನೋ ನಿಜ. ಆದರೆ ಅವು ಆಗ ಎಷ್ಟು ಪರಿಣಾಮಕಾರಿಯಾಗಿದ್ದವೋ ಇಂದು ಕೂಡ ಅಷ್ಟೇ ಪರಿಣಾಮಕಾರಿಯಾಗಿವೆ. ಯೇಸು ಈಗಲೂ ಜೀವಂತನಾಗಿದ್ದಾನೆ ಮತ್ತು ಕ್ರಿಯಾಶೀಲನಾಗಿದ್ದಾನೆ ಹಾಗೂ ಅವನು ದೇವರ ಸ್ವರ್ಗೀಯ ರಾಜ್ಯದಲ್ಲಿ ರಾಜನಾಗಿ ಸಿಂಹಾಸನಾರೂಢನಾಗಿದ್ದಾನೆ ಎಂಬುದನ್ನು ಎಂದೂ ಮರೆಯಬೇಡಿ. ಅವನು ಅನೇಕ ವರ್ಷಗಳ ಹಿಂದೆ ಭೂಮಿಯ ಮೇಲಿದ್ದಾಗ, ಮನಶ್ಶಾಂತಿಗಾಗಿ ಹಾತೊರೆಯುತ್ತಿದ್ದ ದೀನ ಜನರ ಕುರಿತು ಎಷ್ಟು ಚಿಂತಿತನಾಗಿದ್ದನೋ ಈಗಲೂ ಅಷ್ಟೇ ಚಿಂತಿತನಾಗಿದ್ದಾನೆ. ಅಷ್ಟೇ ಅಲ್ಲದೆ, ಈಗಲೂ ಅವನು ತನ್ನ ಕುರಿಗಳ ಕುರುಬನಾಗಿದ್ದಾನೆ. ನಾವು ಅವನನ್ನು ಹಿಂಬಾಲಿಸುವುದಾದರೆ, ಮನಶ್ಶಾಂತಿಯನ್ನು ಕಂಡುಕೊಳ್ಳುವಂತೆ ಅವನು ನಮಗೆ ಸಹಾಯಮಾಡುವನು. ಅದರಲ್ಲಿ ಹಿಂಸಾಚಾರ, ಯುದ್ಧ ಮತ್ತು ಪಾತಕಗಳಿಲ್ಲದಿರುವ ಸಂಪೂರ್ಣ ಶಾಂತಿಭರಿತವಾದ ಒಂದು ಭವಿಷ್ಯವನ್ನು ಕಂಡುಕೊಳ್ಳುವುದರಲ್ಲಿ ಒಂದು ದೃಢನಿಶ್ಚಯವಾದ ನಿರೀಕ್ಷೆಯನ್ನು ಹೊಂದಿರುವುದು ಸಹ ಸೇರಿದೆ.
ಯೆಹೋವನು ಯೇಸುವಿನ ಮೂಲಕ ನಮಗೆ ಖಂಡಿತವಾಗಿಯೂ ಸಹಾಯಮಾಡುವನು ಎಂಬುದನ್ನು ತಿಳಿದುಕೊಳ್ಳುವ ಮತ್ತು ಅದನ್ನು ನಂಬುವ ಮೂಲಕ ನಿಜವಾದ ಪ್ರಯೋಜನಗಳು ಸಿಗುವವು. ನಾವು ಈಗಾಗಲೇ ನಿಮಗೆ ಪರಿಚಯಿಸಿರುವ, ದೇವರು ತನ್ನನ್ನು ಮರೆತುಬಿಟ್ಟಿದ್ದಾನೆಂದು ನೆನಸಿದ್ದ ಮತ್ತು ಕುಟುಂಬದ ಅನೇಕ ಜವಾಬ್ದಾರಿಗಳನ್ನು ಹೊತ್ತುಕೊಂಡಿದ್ದ ವೇನಿಯಾಳ ನೆನಪು ನಿಮಗಿದೆಯೇ? ಅವಳಿಗೆ ಈಗ ಹಿಂದಿನ ಅನಿಸಿಕೆಗಳು ಇಲ್ಲ. ಏಕೆಂದರೆ ದೇವರು ತನ್ನ ಕುರಿತು ಕಾಳಜಿವಹಿಸುವವನಾಗಿದ್ದಾನೆ ಎಂಬುದನ್ನು ಅವಳು ತಿಳಿದುಕೊಂಡಿದ್ದಾಳೆ. ಆದುದರಿಂದ, ಅವಳು ಹೇಳುವುದು: “ದೇವರು ಒಬ್ಬ ನಿಜವಾದ ವ್ಯಕ್ತಿ ಮತ್ತು ಅವನಲ್ಲಿ ಪ್ರಿಯವಾದ ಗುಣಗಳಿವೆ ಎಂಬುದನ್ನು ನಾನು ಕಲಿತುಕೊಂಡೆ. ನಾವು ಜೀವಿಸಬೇಕೆಂಬುದಕ್ಕಾಗಿ ತನ್ನ ಒಬ್ಬನೇ ಮಗನನ್ನು ಕಳುಹಿಸುವಂತೆ ದೇವರ ಪ್ರೀತಿಯು ಆತನನ್ನು ಪ್ರೇರಿಸಿದೆ. ಆದ್ದರಿಂದ ಈ ಪ್ರೀತಿಯನ್ನು ಅರ್ಥಮಾಡಿಕೊಳ್ಳಬೇಕಾಗಿರುವುದು ಬಹಳ ಪ್ರಾಮುಖ್ಯ.”
ದೇವರೊಂದಿಗಿರುವ ತನ್ನ ಸಂಬಂಧವು ನಿಜವಾದುದು ಎಂಬುದಕ್ಕೆ ಮಾರ್ಸೆಲೋ ಸಾಕ್ಷಿನೀಡುತ್ತಾನೆ. ಈ ಹಿಂದೆ ಪಾರ್ಟಿ ಹುಚ್ಚನಾಗಿದ್ದ
ಈ ವ್ಯಕ್ತಿ ಹೇಳುವುದು: “ಅನೇಕವೇಳೆ ಯುವಜನರಿಗೆ ಏನು ಮಾಡಬೇಕೆಂಬುದು ಗೊತ್ತಿರುವುದಿಲ್ಲ. ಹಾಗಾಗಿ, ಅವರು ತಮಗೆ ಹಾನಿಯನ್ನು ಉಂಟುಮಾಡಿಕೊಳ್ಳುತ್ತಾರೆ. ಕೆಲವರು ನನ್ನಂತೆಯೇ ಮಾದಕದ್ರವ್ಯಗಳ ಚಟಕ್ಕೆ ಬಲಿಯಾಗುತ್ತಾರೆ. ದೇವರ ಮತ್ತು ಆತನ ಮಗನ ಕುರಿತ ಸತ್ಯವನ್ನು ಕಲಿಯುವ ಅವಕಾಶ ನನಗೆ ಸಿಕ್ಕಿದಂತೆ, ಇನ್ನೂ ಅನೇಕರಿಗೆ ಸಿಗಲಿ ಎಂದು ನಾನು ಹಾರೈಸುತ್ತೇನೆ.”ಮಾರ್ಸೆಲೋ ಮತ್ತು ವೆನಿಯಾ ಇವರಿಬ್ಬರೂ ಬೈಬಲನ್ನು ಆಸಕ್ತಿಯಿಂದ ಅಭ್ಯಾಸ ಮಾಡಿದ್ದರಿಂದ ದೇವರಲ್ಲಿ ದೃಢವಾದ ನಂಬಿಕೆಯನ್ನು ಬೆಳೆಸಿಕೊಂಡರು. ಹಾಗೂ ತಮ್ಮ ಸಮಸ್ಯೆಗಳನ್ನು ಪರಿಹರಿಸಲು ಆತನಿಗಿರುವ ಸಿದ್ಧಮನಸ್ಸಿನಲ್ಲಿ ಭರವಸೆಯನ್ನು ಬೆಳೆಸಿಕೊಂಡರು. ಅವರು ಮಾಡಿದಂತೆ ನಾವು ಕೂಡ ಬೈಬಲನ್ನು ಅಭ್ಯಾಸಮಾಡಿ, ಅದರಲ್ಲಿ ಹೇಳಿರುವ ವಿಷಯಗಳನ್ನು ಅನುಸರಿಸುವುದಾದರೆ ಅವರಿಗೆ ಸಿಕ್ಕಿದ ಅಗಾಧ ಮನಶ್ಶಾಂತಿಯು ನಮಗೂ ಸಿಗುವುದು. ಆಗ, ಅಪೊಸ್ತಲ ಪೌಲನು ನೀಡಿದ ಪ್ರೋತ್ಸಾಹನೆಯ ಮಾತುಗಳು ನಮಗೂ ಅನ್ವಯವಾಗುವವು: “ಯಾವ ಸಂಬಂಧವಾಗಿಯೂ ಚಿಂತೆಮಾಡದೆ ಸರ್ವವಿಷಯದಲ್ಲಿ ದೇವರ ಮುಂದೆ ಕೃತಜ್ಞತಾಸ್ತುತಿಯನ್ನೂ ಪ್ರಾರ್ಥನೆವಿಜ್ಞಾಪನೆಗಳನ್ನೂ ಮಾಡುತ್ತಾ ನಿಮಗೆ ಬೇಕಾದದ್ದನ್ನು ತಿಳಿಯಪಡಿಸಿರಿ. ಆಗ ಎಲ್ಲಾ ಗ್ರಹಿಕೆಯನ್ನು ಮೀರುವ ದೇವಶಾಂತಿಯು ನಿಮ್ಮ ಹೃದಯಗಳನ್ನೂ ಯೋಚನೆಗಳನ್ನೂ ಕ್ರಿಸ್ತ ಯೇಸುವಿನಲ್ಲಿ ಕಾಯುವದು.”—ಫಿಲಿಪ್ಪಿ 4:6, 7.
ಇಂದು ನಿಜವಾದ ಶಾಂತಿಯನ್ನು ಕಂಡುಕೊಳ್ಳುವುದು
ಯೇಸುಕ್ರಿಸ್ತನು ಸತ್ಯಕ್ಕಾಗಿ ಹಸಿದಿರುವ ಜನರನ್ನು ಭೂಪ್ರಮೋದನದಲ್ಲಿ ನಿತ್ಯಜೀವಕ್ಕೆ ನಡೆಸುವ ಮಾರ್ಗದಲ್ಲಿ ನಡೆಸುತ್ತಿದ್ದಾನೆ. ಅವನು ದೇವರನ್ನು ಆರಾಧಿಸುವ ಶುದ್ಧಾರಾಧನೆಯ ಮಾರ್ಗದಲ್ಲಿ ಅವರನ್ನು ಮಾರ್ಗದರ್ಶಿಸುವಾಗ, ಅಂಥವರು ಬೈಬಲಿನಲ್ಲಿ ವರ್ಣಿಸಲ್ಪಟ್ಟಿರುವಂಥ ರೀತಿಯ ಶಾಂತಿಯನ್ನು ಅನುಭವಿಸುತ್ತಾರೆ. ಅದು ಹೇಳುವುದು: “ನನ್ನ ಜನರು ಸಮಾಧಾನನಿವಾಸದಲ್ಲಿಯೂ ನಿರ್ಭಯನಿಲಯಗಳಲ್ಲಿಯೂ ನೆಮ್ಮದಿಯ ಆಶ್ರಯಗಳಲ್ಲಿಯೂ ನೆಲೆಗೊಳ್ಳುವರು.” (ಯೆಶಾಯ 32:18) ಮತ್ತು ಇದು ಭವಿಷ್ಯದಲ್ಲಿ ಅವರು ಅನುಭವಿಸಲಿರುವ ಶಾಂತಿಯ ಮುನ್ರುಚಿಯಾಗಿದೆಯಷ್ಟೇ. ಅದರ ಕುರಿತು ನಾವು ಬೈಬಲಿನಲ್ಲಿ ಈ ರೀತಿಯಾಗಿ ಓದುತ್ತೇವೆ: “ದೀನರು ದೇಶವನ್ನು ಅನುಭವಿಸುವರು; ಅವರು ಮಹಾಸೌಖ್ಯದಿಂದ ಆನಂದಿಸುವರು. ನೀತಿವಂತರೋ ದೇಶವನ್ನು ಅನುಭವಿಸುವವರಾಗಿ ಅದರಲ್ಲಿ ಶಾಶ್ವತವಾಗಿ ವಾಸಿಸುವರು.”—ಕೀರ್ತನೆ 37:11, 29.
ಹಾಗಾದರೆ, ಇಂದು ನಮಗೆ ಮನಶ್ಶಾಂತಿಯು ಸಿಗುವುದೇ? ಖಂಡಿತವಾಗಿಯೂ. ಅಷ್ಟುಮಾತ್ರವಲ್ಲ, ಮಾನವರು ಹಿಂದೆಂದೂ ಅನುಭವಿಸಿರದಂಥ ರೀತಿಯ ಶಾಂತಿಯನ್ನು ವಿಧೇಯ ಮಾನವಕುಲಕ್ಕೆ ಶೀಘ್ರದಲ್ಲೇ ದೇವರು ದಯಪಾಲಿಸಲಿದ್ದಾನೆ. ಹಾಗಿರುವಾಗ, ನೀವು ಏಕೆ ಆತನಲ್ಲಿರುವ ಶಾಂತಿಯನ್ನು ನಿಮಗೆ ಕೊಡುವಂತೆ ಪ್ರಾರ್ಥಿಸಬಾರದು? ಶಾಂತಿಯನ್ನು ಕಸಿದುಕೊಳ್ಳುವಂಥ ಸಮಸ್ಯೆಗಳು ನಿಮಗಿರುವುದಾದರೆ, ಅರಸನಾದ ದಾವೀದನು ಪ್ರಾರ್ಥಿಸಿದಂತಹ ರೀತಿಯಲ್ಲಿ ಪ್ರಾರ್ಥಿಸಿರಿ: “ನನ್ನ ಮನೋವ್ಯಥೆಗಳನ್ನು ನಿವಾರಿಸು; ಸಂಕಟಗಳಿಂದ ನನ್ನನ್ನು ಬಿಡಿಸು. ನಾನು ಕುಗ್ಗಿರುವದನ್ನೂ ಕಷ್ಟಪಡುವದನ್ನೂ ನೋಡಿ ನನ್ನ ಎಲ್ಲಾ ಪಾಪಗಳನ್ನು ಪರಿಹರಿಸು.” (ಕೀರ್ತನೆ 25:17, 18) ದೇವರು ಅಂಥ ಪ್ರಾರ್ಥನೆಗಳಿಗೆ ಕಿವಿಗೊಡುವನು ಎಂಬುದರ ಕುರಿತು ಭರವಸೆಯುಳ್ಳವರಾಗಿರಿ. ಯಥಾರ್ಥ ಮನಸ್ಸಿನಿಂದ ಶಾಂತಿಯನ್ನು ಹರಸುವವರೆಲ್ಲರಿಗೂ ಆತನು ಅದನ್ನು ಧಾರಾಳವಾಗಿ ನೀಡುವನು. ಆತನು ಪ್ರೀತಿಯಿಂದ ನಮಗೆ ಈ ಆಶ್ವಾಸನೆಯನ್ನು ಕೊಡುತ್ತಾನೆ: “ಯೆಹೋವನಿಗೆ ಮೊರೆಯಿಡುವವರು, ಯಥಾರ್ಥವಾಗಿ ಮೊರೆಯಿಡುವದಾದರೆ ಆತನು ಹತ್ತಿರವಾಗಿಯೇ ಇದ್ದಾನೆ. ತನ್ನಲ್ಲಿ ಭಯಭಕ್ತಿಯುಳ್ಳವರ ಇಷ್ಟವನ್ನು ನೆರವೇರಿಸುತ್ತಾನೆ; ಅವರ ಕೂಗನ್ನು ಕೇಳಿ ರಕ್ಷಿಸುತ್ತಾನೆ.”—ಕೀರ್ತನೆ 145:18, 19.
[ಪುಟ 5ರಲ್ಲಿರುವ ಸಂಕ್ಷಿಪ್ತ ವಿವರಣೆ]
ಯಾರ ಸಹಾಯವೂ ಇಲ್ಲದೆ ತನ್ನ ಸ್ವಂತ ಜೀವನವನ್ನು ಸರಿಯಾದ ಮಾರ್ಗದಲ್ಲಿ ನಡೆಸಲು, ಮಾನವನಿಗೆ ವಿವೇಕವೋ ಅಥವಾ ದೂರದೃಷ್ಟಿಯೋ ಇಲ್ಲ. ಆದುದರಿಂದ ದೇವರು ಮಾತ್ರ ಅವನಿಗೆ ಬೇಕಾಗಿರುವಂತಹ ನಿಜವಾದ ಸಹಾಯವನ್ನು ಒದಗಿಸಶಕ್ತನಾಗಿದ್ದಾನೆ.
[ಪುಟ 6ರಲ್ಲಿರುವ ಸಂಕ್ಷಿಪ್ತ ವಿವರಣೆ]
ದೇವರ ಮತ್ತು ಯೇಸು ಕ್ರಿಸ್ತನ ಕುರಿತ ಜ್ಞಾನವು, ಯೆಹೋವ ದೇವರೊಂದಿಗೆ ಅನ್ಯೋನ್ಯವಾದ ಸಂಬಂಧವನ್ನು ಹೊಂದಿರಲು ಸಹಾಯಮಾಡುವುದು. ಮತ್ತು ಇದು ತಾನೇ ಮನಶ್ಶಾಂತಿಯನ್ನು ಪಡೆದುಕೊಳ್ಳಲು ಸಹಾಯಮಾಡುವುದು.
[ಪುಟ 7ರಲ್ಲಿರುವ ಚಿತ್ರ]
ಬೈಬಲಿನ ಸಲಹೆಯನ್ನು ಅನುಸರಿಸುವಾಗ ಅದು ಶಾಂತಿಭರಿತ ಸಂಸಾರ ಜೀವನಕ್ಕೆ ನೆರವಾಗುತ್ತದೆ