ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧಿಕಾರಕ್ಕೆ ಗೌರವ—ಏಕೆ ಪ್ರಾಮುಖ್ಯ?

ಅಧಿಕಾರಕ್ಕೆ ಗೌರವ—ಏಕೆ ಪ್ರಾಮುಖ್ಯ?

ಅಧಿಕಾರಕ್ಕೆ ಗೌರವ—ಏಕೆ ಪ್ರಾಮುಖ್ಯ?

ನಮ್ಮ ಕುಟುಂಬಕ್ಕೆ ಬೆದರಿಕೆಯನ್ನು ಹಾಕುವ ಅಥವಾ ಆಸ್ತಿಪಾಸ್ತಿಯನ್ನು ಕದ್ದುಕೊಳ್ಳುವ ಪಾತಕಿಗಳನ್ನು ಪೊಲೀಸರು ದಸ್ತಗಿರಿಮಾಡುವಾಗ, ಅವರಿಗಿರುವ ಅಧಿಕಾರಕ್ಕಾಗಿ ನಾವು ಕೃತಜ್ಞರಾಗಿರುವುದಿಲ್ಲವೇ? ಅದೇ ರೀತಿಯಲ್ಲಿ, ಸಮಾಜವನ್ನು ರಕ್ಷಿಸುವುದಕ್ಕಾಗಿ ಪಾತಕಿಗಳನ್ನು ಶಿಕ್ಷಿಸುವ ಅಧಿಕಾರವು ನ್ಯಾಯಾಲಯಕ್ಕಿರುವುದಕ್ಕಾಗಿ ನಾವು ಗಣ್ಯತೆಯುಳ್ಳವರಾಗಿರುವುದಿಲ್ಲವೇ?

ಅಷ್ಟು ಮಾತ್ರವಲ್ಲ ರಸ್ತೆದುರಸ್ತಿ, ಒಳಚರಂಡಿ ವ್ಯವಸ್ಥೆ, ಶಿಕ್ಷಣದಂಥ ಇನ್ನಿತರ ಉಪಯುಕ್ತ ಸಾರ್ವಜನಿಕ ಸೇವಾಸೌಲಭ್ಯಗಳನ್ನು ಕೂಡ ನಾವು ನೆನಪುಮಾಡಿಕೊಳ್ಳಬಹುದು. ಈ ಎಲ್ಲಾ ಸೇವಾಸೌಲಭ್ಯಗಳು ಸಾಮಾನ್ಯವಾಗಿ ಸರ್ಕಾರವು ವಿಧಿಸುವ ತೆರಿಗೆಯ ಹಣದಿಂದಲೇ ನಮಗೆ ದೊರಕುತ್ತವೆ. ಆದುದರಿಂದ, ಅಧಿಕಾರದಲ್ಲಿರುವವರಿಗೆ ಗೌರವವನ್ನು ಕೊಡುವುದು ಬಹಳ ಪ್ರಾಮುಖ್ಯವಾಗಿದೆ. ಇದನ್ನು ಅಂಗೀಕರಿಸುವುದರಲ್ಲಿ ನಿಜ ಕ್ರೈಸ್ತರು ಮುಂದಿದ್ದಾರೆ. ಆದರೆ, ಇಂಥ ಗೌರವವನ್ನು ಎಷ್ಟರ ಮಟ್ಟಿಗೆ ತೋರಿಸಬೇಕು? ನಮ್ಮ ಜೀವನದ ಬೇರೆ ಯಾವ ಕ್ಷೇತ್ರಗಳಲ್ಲಿಯೂ ಅಧಿಕಾರಕ್ಕೆ ಗೌರವವನ್ನು ಕೊಡುವುದು ಅವಶ್ಯಕವಾಗಿದೆ?

ಸಮಾಜದಲ್ಲಿ ಪ್ರಜಾಧಿಕಾರವನ್ನು ಹೊಂದಿರುವವರು

ಕ್ರೈಸ್ತರಾಗಿರಲಿ ಅಥವಾ ಇಲ್ಲದಿರಲಿ, ಪ್ರತಿಯೊಬ್ಬರು ಪ್ರಜಾಧಿಕಾರಿಗಳನ್ನು ಗೌರವಿಸಬೇಕೆಂದು ಬೈಬಲು ಹೇಳುತ್ತದೆ. ಏಕೆಂದರೆ, ಅವರು ಸಮಾಜಕ್ಕಾಗಿ ಒಳಿತನ್ನು ಮಾಡುವವರಾಗಿದ್ದಾರೆ. ಈ ವಿಷಯದ ಕುರಿತು ಕ್ರೈಸ್ತ ಅಪೊಸ್ತಲ ಪೌಲನು, ರೋಮಿನಲ್ಲಿದ್ದ ತನ್ನ ಜೊತೆ ವಿಶ್ವಾಸಿಗಳಿಗೆ ಪತ್ರವನ್ನು ಬರೆದನು. ಅವನು ಆ ಪತ್ರದಲ್ಲಿ ಏನು ಹೇಳುತ್ತಾನೆ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಉಪಯುಕ್ತವಾಗಿದೆ. ಅವನ ಸಲಹೆಗಳು ರೋಮಾಪುರ 13:1-7ರಲ್ಲಿ ದಾಖಲಾಗಿದೆ.

ಪೌಲನು ರೋಮ್‌ ದೇಶದ ನಾಗರಿಕನಾಗಿದ್ದನು. ಆಗ ರೋಮ್‌ ಲೋಕಶಕ್ತಿಯಾಗಿತ್ತು. ಸುಮಾರು ಸಾ.ಶ. 56ರಲ್ಲಿ ಬರೆಯಲ್ಪಟ್ಟ ಪತ್ರದಲ್ಲಿ ಪೌಲನು, ರೋಮಿನಲ್ಲಿದ್ದ ಕ್ರೈಸ್ತರಿಗೆ ಆದರ್ಶ ನಾಗರಿಕರಾಗಿರುವಂತೆ ಬುದ್ಧಿಹೇಳಿದನು. ಅವನು ಬರೆದದ್ದು: “ಪ್ರತಿ ಮನುಷ್ಯನು ತನ್ನ ಮೇಲಿರುವ ಅಧಿಕಾರಿಗಳಿಗೆ ಅಧೀನನಾಗಿರಲಿ; ಯಾಕಂದರೆ ದೇವರಿಂದ ಹೊರತು ಒಬ್ಬರಿಗೂ ಅಧಿಕಾರವಿರುವದಿಲ್ಲ; ಇರುವ ಅಧಿಕಾರಿಗಳು ದೇವರಿಂದ ನೇಮಿಸಲ್ಪಟ್ಟವರು.”

ಈ ವಚನದಲ್ಲಿ ಪೌಲನು, ದೇವರು ಅನುಮತಿಸಿರುವುದರಿಂದಲೇ ಮಾನವ ಅಧಿಕಾರವು ಅಸ್ತಿತ್ವದಲ್ಲಿದೆ ಎಂಬುದನ್ನು ವಿವರಿಸುತ್ತಾನೆ. ಆ ಅರ್ಥದಲ್ಲಿ ನೋಡುವಾಗ, ದೇವರ ಮೂಲ ಉದ್ದೇಶದ ಚೌಕಟ್ಟಿನೊಳಗೆ ಪ್ರಜಾಧಿಕಾರವನ್ನು ವಹಿಸಿಕೊಂಡಿರುವವರು ಸೀಮಿತ ಅಧಿಕಾರವನ್ನು ಹೊಂದಿರುತ್ತಾರೆ. ಆದುದರಿಂದ, “ಅಧಿಕಾರಕ್ಕೆ ಎದುರುಬೀಳುವವನು ದೇವರ ನೇಮಕವನ್ನು ಎದುರಿಸುತ್ತಾನೆ” ಎಂದು ಬೈಬಲು ಹೇಳುತ್ತದೆ.

ನಾಗರಿಕರು ಒಳ್ಳೇ ಕೆಲಸಗಳನ್ನು ಮಾಡುವಾಗ ಸರ್ಕಾರದ ಅಧಿಕಾರಿಗಳು ಅವರನ್ನು ಹೊಗಳುತ್ತಾರೆ. ಅದೇ ರೀತಿಯಲ್ಲಿ, ತಪ್ಪು ಮಾಡುವಾಗ ಅದೇ ಅಧಿಕಾರಿಗಳು ಶಿಕ್ಷೆಯನ್ನು ಕೂಡ ವಿಧಿಸುತ್ತಾರೆ. ಆದುದರಿಂದ, ಕೆಟ್ಟ ಕೆಲಸಗಳನ್ನು ಮಾಡುವವರು, ‘ದಂಡನೆಯನ್ನು ವಿಧಿಸುವ’ ಅಧಿಕಾರವಿರುವ ಪ್ರಜಾಧಿಕಾರಿಗಳಿಗೆ ಭಯಪಡಲು ಸಾಕಷ್ಟು ಕಾರಣಗಳಿವೆ. ಸರ್ಕಾರದ ಅಧಿಕಾರಿಗಳು “ದೇವರ ಸೇವಕ”ರಾಗಿರುವುದರಿಂದ ಹಾಗೆ ಮಾಡುತ್ತಾರೆ.

ಪೌಲನು ತನ್ನ ತರ್ಕವನ್ನು ಈ ರೀತಿ ಹೇಳುವ ಮೂಲಕ ಮುಕ್ತಾಯಗೊಳಿಸುತ್ತಾನೆ: “ದಂಡನೆಯಾದೀತೆಂದು ಮಾತ್ರವಲ್ಲದೆ ಮನಸ್ಸಿಗೆ ನ್ಯಾಯವಾಗಿ ತೋರುವದರಿಂದಲೂ ಅವನಿಗೆ ಅಧೀನನಾಗುವದು ಅವಶ್ಯ. ಈ ಕಾರಣದಿಂದಲೇ ನೀವು ಕಂದಾಯವನ್ನು ಕೂಡ ಕೊಡುತ್ತೀರಿ. ಯಾಕಂದರೆ ಕಂದಾಯ ಎತ್ತುವವರು ದೇವರ ಉದ್ಯೋಗಿಗಳಾಗಿದ್ದು ಆ ಕೆಲಸದಲ್ಲಿಯೇ ನಿರತರಾಗಿರುತ್ತಾರೆ.”

ಆದ್ದರಿಂದ, ತೆರಿಗೆಯನ್ನು ಗೊತ್ತುಮಾಡುವ ಮತ್ತು ಅದನ್ನು ವಿನಿಯೋಗಿಸುವ ಜವಾಬ್ದಾರಿಯು ಸರ್ಕಾರದ ಅಧಿಕಾರಿಗಳಿಗಿದೆಯೇ ಹೊರತು ತೆರಿಗೆ ಕಟ್ಟುವವರಿಗಲ್ಲ. ಈ ವಿಷಯದಲ್ಲಿ ಒಬ್ಬ ಕ್ರೈಸ್ತನು ಪ್ರಾಮಾಣಿಕ ನಾಗರಿಕನಾಗಿರುವ ಮೂಲಕ ಒಳ್ಳೇ ಮನಸ್ಸಾಕ್ಷಿಯನ್ನು ಕಾಪಾಡಿಕೊಳ್ಳುತ್ತಾನೆ. ಏಕೆಂದರೆ, ತಾನು ಸರ್ಕಾರಕ್ಕೆ ತೆರಬೇಕಾದ ಕಂದಾಯವನ್ನು ಸರಿಯಾಗಿ ಕಟ್ಟುವ ಮೂಲಕ, ಅವನು ಸಮಾಜದ ಮಟ್ಟಗಳನ್ನು ಎತ್ತಿಹಿಡಿಯುತ್ತಾನಲ್ಲದೆ, ದೇವರ ಆವಶ್ಯಕತೆಗಳನ್ನು ಕೂಡ ಪೂರೈಸುತ್ತಾನೆ.

ಕುಟುಂಬದಲ್ಲಿ ಅಧಿಕಾರವನ್ನು ಹೊಂದಿರುವವರು

ಮನೆಯಲ್ಲಿ ಅಧಿಕಾರವನ್ನು ಹೊಂದಿರುವವರ ಕುರಿತೇನು? ನಮಗೆಲ್ಲಾ ಗೊತ್ತಿರುವಂತೆ ಪುಟ್ಟ ಮಗುವು ಹೆತ್ತವರ ಗಮನವನ್ನು ಸೆಳೆಯುವುದಕ್ಕಾಗಿ ಅನೇಕವೇಳೆ ಅಳುತ್ತದೆ, ಕೆಲವೊಮ್ಮೆ ಅರಚುತ್ತದೆ ಸಹ. ಆದರೆ, ಬುದ್ಧಿವಂತ ಹೆತ್ತವರಿಗೆ ಮಗುವಿನ ನಿಜವಾದ ಅಗತ್ಯಗಳೇನು ಎಂಬುದು ಗೊತ್ತಿರುತ್ತದೆ. ಆದ್ದರಿಂದ, ಮಗು ಮುನಿಸಿಕೊಂಡಿದೆ ಎಂಬ ಕಾರಣಕ್ಕಾಗಿ ಅದು ತಮ್ಮನ್ನು ನಿಯಂತ್ರಿಸುವಂತೆ ಹೆತ್ತವರು ಬಿಡಲಾರರು. ಇನ್ನೂ ಕೆಲವು ಮಕ್ಕಳು ಬೆಳೆದು ದೊಡ್ಡವರಾಗುತ್ತಿದ್ದಂತೆ, ಅವರದೇ ರಾಜ್ಯವೆಂಬಂತೆ ಹೆತ್ತವರು ಅವರನ್ನು ಬಿಟ್ಟುಬಿಟ್ಟಿರುತ್ತಾರೆ. ಇದರ ಪರಿಣಾಮವಾಗಿ ಅವರು ತಮ್ಮ ಮನಬಂದಂತೆ ನಡೆಯುತ್ತಿರುತ್ತಾರೆ. ಅನುಭವದ ಕೊರತೆಯಿಂದಾಗಿ, ಅವರು ಪಾತಕ ಇಲ್ಲವೇ ಇನ್ನಿತರ ತಪ್ಪಾದ ಕೆಲಸಗಳಲ್ಲಿ ತೊಡಗಬಹುದು. ಇಂಥವರು ಮನೆಯ ಶಾಂತಿಯನ್ನು ಮಾತ್ರವಲ್ಲ, ಸಮಾಜದ ಶಾಂತಿಯನ್ನು ಸಹ ಎಷ್ಟರ ಮಟ್ಟಿಗೆ ಕದಡುತ್ತಾರೆಂಬುದು ಅನೇಕ ಅಧಿಕಾರಿಗಳಿಗೆ ಚೆನ್ನಾಗಿಯೇ ತಿಳಿದಿದೆ.

“ಕಾಲಮಿಂಚಿ ಹೋದ ಮೇಲೆ ಅನೇಕ ಹೆತ್ತವರ ಕಣ್ಣು ತೆರೆಯುತ್ತದೆ. ಆದ್ದರಿಂದ, ಮಕ್ಕಳನ್ನು ಶಿಸ್ತುಗೊಳಿಸುವ ಕೆಲಸವು ಅವರು ಹುಟ್ಟಿದ ಕ್ಷಣದಿಂದಲೇ ಪ್ರಾರಂಭವಾಗಬೇಕು” ಎಂದು ರಾಸ್‌ಲಿಂಡ್‌ ಮೈಲ್ಸ್‌ ಎಂಬ ಲೇಖಕಿ, ಚಿಲ್ಡ್ರನ್‌ ವಿ ಡಿಸರ್ವ್‌ ಎಂಬ ತಮ್ಮ ಪುಸ್ತಕದಲ್ಲಿ ಹೇಳುತ್ತಾರೆ. ಲಾಲನೆಪಾಲನೆ ಮಾಡುವ ಸಮಯದಿಂದಲೇ, ಮಕ್ಕಳಿಗೆ ಪ್ರೀತಿಯೊಂದಿಗೆ ಶಿಸ್ತನ್ನು ಸಹ ಕೊಡಬೇಕಾಗಿದೆ. ಮತ್ತು ಅವರನ್ನು ತಿದ್ದುವಾಗ ಹೆತ್ತವರು ಯಾವಾಗಲೂ ಸಮಂಜಸವಾದ ಶಿಸ್ತಿನ ಕ್ರಮವನ್ನು ಕೈಗೊಳ್ಳಬೇಕು. ಆಗ ಮಕ್ಕಳು ಕೂಡ ತಮ್ಮ ಮೇಲೆ ಹೆತ್ತವರಿಗಿರುವ ಅಧಿಕಾರವನ್ನು ಅಂಗೀಕರಿಸುವರು. ಮತ್ತು ಹೆತ್ತವರ ತಿದ್ದುಪಾಟಿನ ಹಿಂದಿರುವ ಪ್ರೀತಿಯನ್ನು ಕೂಡ ಅರ್ಥಮಾಡಿಕೊಳ್ಳುವರು.

ಕುಟುಂಬದಲ್ಲಿರುವವರ ಅಧಿಕಾರದ ಕುರಿತು ಬೈಬಲಿನಲ್ಲಿ ಹೇರಳವಾದ ಮಾಹಿತಿಯು ಇದೆ. ಜ್ಞಾನೋಕ್ತಿ ಪುಸ್ತಕದಲ್ಲಿ, ಜ್ಞಾನಿಯಾದ ಸೊಲೊಮೋನನು ದೇವಭಕ್ತಿಯುಳ್ಳ ಹೆತ್ತವರಲ್ಲಿರುವ ಒಗ್ಗಟ್ಟಿನ ಕಡೆಗೆ ಮಕ್ಕಳ ಗಮನವನ್ನು ಸೆಳೆಯುತ್ತಾನೆ. ಅವರು ಹೇಳುವುದು: “ಮಗನೇ, ನಿನ್ನ ತಂದೆಯ ಉಪದೇಶವನ್ನು ಕೇಳು, ನಿನ್ನ ತಾಯಿಯ ಬೋಧನೆಯನ್ನು ತೊರೆಯಬೇಡ.” (ಜ್ಞಾನೋಕ್ತಿ 1:8) ಹೆತ್ತವರಿಬ್ಬರೂ ತಮ್ಮ ಮಕ್ಕಳ ಮುಂದೆ ನ್ಯಾಯಬದ್ಧವಾದ ಹಾಗೂ ಒಗ್ಗಟ್ಟಿನ ಶಿಸ್ತಿನ ಕ್ರಮವನ್ನು ಕಾಪಾಡಿಕೊಳ್ಳಬೇಕು. ಆಗ ಮಕ್ಕಳು ಕೂಡ ಹೆತ್ತವರ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳುವರು. ಮತ್ತು ತಮ್ಮಿಂದ ಅವರು ಏನನ್ನು ಬಯಸುತ್ತಾರೆ ಎಂಬುದನ್ನು ತಿಳಿದುಕೊಳ್ಳುವರು. ಇಲ್ಲದಿದ್ದರೆ, ಮಕ್ಕಳು ತಮ್ಮ ಇಚ್ಛೆ ಪೂರೈಸಲ್ಪಡುವಂತೆ ಮಾಡುವುದಕ್ಕಾಗಿ ಹೆತ್ತವರೊಬ್ಬರ ಇಚ್ಛೆಗೆ ವಿರುದ್ಧವಾಗಿ ನಡೆಯಲು ಮತ್ತೊಬ್ಬರ ಮನವೊಲಿಸಲು ಪ್ರಯತ್ನಿಸುವರು. ಆದರೆ, ಹೆತ್ತವರ ಅಧಿಕಾರವು ಒಗ್ಗಟ್ಟಿನಿಂದ ಪ್ರಯೋಗಿಸಲ್ಪಡುವಾಗ ಯುವ ಮಕ್ಕಳಿಗೆ ಅದು ಒಂದು ಭದ್ರತೆಯಾಗಿರುತ್ತದೆ.

ತನ್ನ ಮಕ್ಕಳ ಕುರಿತು ಮಾತ್ರವಲ್ಲ, ತನ್ನ ಹೆಂಡತಿಯ ಆತ್ಮಿಕ ಕ್ಷೇಮವನ್ನು ನೋಡಿಕೊಳ್ಳುವುದು ಸಹ ಮನೆಯ ಯಜಮಾನನ ಆದ್ಯ ಕರ್ತವ್ಯವಾಗಿದೆ ಎಂದು ಬೈಬಲ್‌ ಹೇಳುತ್ತದೆ. ಇದನ್ನು ತಲೆತನ ಅಥವಾ ಒಡೆತ  ಎಂದು ವರ್ಣಿಸಲಾಗಿದೆ. ಈ ಒಡೆತನದ ಅಧಿಕಾರವನ್ನು ಹೇಗೆ ಚಲಾಯಿಸಬೇಕು? ಅದಕ್ಕೆ ಉತ್ತರವನ್ನು ಕೊಡುತ್ತಾ, ಕ್ರಿಸ್ತನು ಸಭೆಯ ಶಿರಸ್ಸಾಗಿರುವಂತೆಯೇ ಗಂಡನು ಹೆಂಡತಿಗೆ ಶಿರಸ್ಸಾಗಿದ್ದಾನೆ ಎಂದು ಪೌಲನು ಹೇಳುತ್ತಾನೆ. ನಂತರ ಪೌಲನು ಕೂಡಿಸುತ್ತಾ ಹೇಳುವುದು: “ಪುರುಷರೇ, ಕ್ರಿಸ್ತನು ಸಭೆಯನ್ನು [ತನ್ನ ಆತ್ಮಿಕ ಮದಲಗಿತ್ತಿ] ಪ್ರೀತಿಸಿದ ಪ್ರಕಾರವೇ ನಿಮ್ಮನಿಮ್ಮ ಹೆಂಡತಿಯರನ್ನು ಪ್ರೀತಿಸಿರಿ.” (ಎಫೆಸ 5:25) ಮನೆಯ ಯಜಮಾನನು ಯೇಸುವಿನ ಮಾದರಿಯನ್ನು ಅನುಕರಿಸುತ್ತಾ, ಪ್ರೀತಿಯಿಂದ ತನ್ನ ಅಧಿಕಾರವನ್ನು ಚಲಾಯಿಸುವಾಗ ಅವನು ತನ್ನ ಹೆಂಡತಿಯಿಂದ “ಆಳವಾದ ಗೌರವವನ್ನು,” (NW) ಸಂಪಾದಿಸಿಕೊಳ್ಳುತ್ತಾನೆ. ಅಂಥವರ ಮಕ್ಕಳು ಕೂಡ, ತಮ್ಮ ಹೆತ್ತವರಿಗಿರುವ ದೇವದತ್ತ ಅಧಿಕಾರವನ್ನು ಅರ್ಥಮಾಡಿಕೊಳ್ಳುವರು ಮತ್ತು ಅಂಥ ಅಧಿಕಾರವನ್ನು ಅಂಗೀಕರಿಸುವ ಇಚ್ಛೆ ಕೂಡ ಅವರಿಗಿರುವುದು.—ಎಫೆಸ 6:1-3.

ಹಾಗಾದರೆ, ತಮ್ಮ ಜೀವನ ಸಂಗಾತಿಯನ್ನು ಕಳೆದುಕೊಂಡಿರುವರು ಹಾಗೂ ಒಂಟಿ ಹೆತ್ತವರು ಈ ಸಮಸ್ಯೆಯನ್ನು ಹೇಗೆ ನಿಭಾಯಿಸಬಲ್ಲರು? ಅಂಥವರು ತಂದೆಯಾಗಿದ್ದರೂ ಸರಿ ಅಥವಾ ತಾಯಿಯಾಗಿದ್ದರೂ ಸರಿ, ತಮ್ಮ ಮಕ್ಕಳೊಂದಿಗೆ ಮಾತಾಡುವಾಗ ಯೆಹೋವ ಮತ್ತು ಯೇಸುಕ್ರಿಸ್ತನ ಅಧಿಕಾರವನ್ನು ಉಪಯೋಗಿಸಬಹುದು. ಯೇಸು ತನ್ನ ತಂದೆಯ ಹಾಗೂ ಪ್ರೇರಿತ ವಚನಗಳ ಸಹಾಯದಿಂದ ಯಾವಾಗಲೂ ಅಧಿಕಾರಯುಕ್ತವಾಗಿ ಮಾತಾಡಿದನು.—ಮತ್ತಾಯ 4:1-10; 7:29; ಯೋಹಾನ 5:19, 30; 8:28.

ಮಕ್ಕಳು ಎದುರಿಸುವ ಸಮಸ್ಯೆಗಳ ಕುರಿತು ಬೈಬಲ್‌ ಬಹುಮೂಲ್ಯವಾದ ತತ್ತ್ವಗಳನ್ನು ಒದಗಿಸುತ್ತದೆ. ಅವುಗಳನ್ನು ಬೈಬಲಿನಲ್ಲಿ ಕಂಡುಹಿಡಿದು ಅನುಸರಿಸುವಾಗ, ಒಬ್ಬ ಹೆತ್ತವನು ತನ್ನ ಮಕ್ಕಳಿಗೆ ಪ್ರೀತಿಪೂರ್ವಕವಾದ ಹಾಗೂ ಹೆಚ್ಚು ಉಪಯುಕ್ತಕರವಾದ ಸಲಹೆಗಳನ್ನು ಕೊಡಬಲ್ಲನು. (ಆದಿಕಾಂಡ 6:22; ಜ್ಞಾನೋಕ್ತಿ 13:20; ಮತ್ತಾಯ 6:33; 1 ಕೊರಿಂಥ 15:33; ಫಿಲಿಪ್ಪಿ 4:8, 9) ಶಾಸ್ತ್ರವಚನಗಳಿಗಿರುವ ಅಧಿಕಾರವನ್ನು ಗೌರವಿಸುವುದರಿಂದ ಸಿಗುವ ಪ್ರಯೋಜನಗಳನ್ನು ತಮ್ಮ ಮಕ್ಕಳು ಗಣ್ಯಮಾಡಬೇಕಾದರೆ, ಹೆತ್ತವರು ಮಕ್ಕಳನ್ನು ತರಬೇತುಗೊಳಿಸುವುದಕ್ಕಾಗಿಯೇ ತಯಾರಿಸಲ್ಪಟ್ಟಿರುವ ನಿರ್ದಿಷ್ಟ ಬೈಬಲಾಧಾರಿತ ಲೇಖನಗಳನ್ನು ತೆಗೆದು ಓದಬಹುದು. *

ಕ್ರೈಸ್ತ ಸಭೆಯಲ್ಲಿ ಅಧಿಕಾರವನ್ನು ಹೊಂದಿರುವವರು

“ಈತನು ಪ್ರಿಯನಾಗಿರುವ ನನ್ನ ಮಗನು; ಈತನನ್ನು ನಾನು ಮೆಚ್ಚಿದ್ದೇನೆ; ಈತನ ಮಾತನ್ನು ಕೇಳಿರಿ.” (ಮತ್ತಾಯ 17:5) ಈ ಮಾತುಗಳನ್ನು, ದೈವಿಕ ಅಧಿಕಾರದೊಂದಿಗೆ ಮಾತನಾಡುತ್ತಿದ್ದ ಯೇಸು ಕ್ರಿಸ್ತನ ಕುರಿತು ಸ್ವತಃ ಯೆಹೋವನೇ ನುಡಿದಿದ್ದನು. ಆತನು ಹೇಳಿರುವುದನ್ನು ಸುವಾರ್ತೆಯ ನಾಲ್ಕೂ ಪುಸ್ತಕಗಳಲ್ಲಿ ಬರೆಯಲ್ಪಟ್ಟಿವೆ. ಅದನ್ನು ನಾವು ಸುಲಭವಾಗಿ ತೆಗೆದು ನೋಡಬಹುದು.

ಸ್ವರ್ಗಾರೋಹಣವಾಗುವುದಕ್ಕೆ ಸ್ವಲ್ಪ ಸಮಯಕ್ಕೆ ಮುಂಚೆ, ಯೇಸು ಕ್ರಿಸ್ತನು ತನ್ನ ಶಿಷ್ಯರಿಗೆ ಹೀಗೆ ಹೇಳಿದನು: “ಪರಲೋಕದಲ್ಲಿಯೂ ಭೂಲೋಕದಲ್ಲಿಯೂ ಎಲ್ಲಾ ಅಧಿಕಾರವು ನನಗೆ ಕೊಡಲ್ಪಟ್ಟದೆ.” (ಮತ್ತಾಯ 28:18) ಸಭೆಯ ಶಿರಸ್ಸಾಗಿರುವ ಯೇಸು ಕ್ರಿಸ್ತನು, ತನ್ನ ಹೆಜ್ಜೆಜಾಡನ್ನು ಅನುಸರಿಸುತ್ತಿರುವ ಭೂಮಿಯಲ್ಲಿರುವ ಅಭಿಷಿಕ್ತ ಅನುಯಾಯಿಗಳ ಮೇಲೆ ಹೆಚ್ಚು ಗಮನವಿಟ್ಟಿರುತ್ತಾನೆ. ಅಷ್ಟುಮಾತ್ರವಲ್ಲ, ಸಾ.ಶ. 33ರ ಪಂಚಾಶತ್ತಮ ದಿನದಂದು ಪವಿತ್ರಾತ್ಮವು ಸುರಿಸಲ್ಪಟ್ಟಂದಿನಿಂದ, ಅವರನ್ನು ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳಾಗಿ’ ಸತ್ಯವನ್ನು ತಿಳಿಯಪಡಿಸುವ ಸಾಧನವಾಗಿಯೂ ಉಪಯೋಗಿಸಿದ್ದಾನೆ. (ಮತ್ತಾಯ 24:45-47; ಅ. ಕೃತ್ಯಗಳು 2:1-36) ಕ್ರೈಸ್ತ ಸಭೆಯನ್ನು ಬಲಪಡಿಸುವ ಸಲುವಾಗಿ ಇವೆಲ್ಲವನ್ನು ಮಾಡಲು ಅವನು ಹೇಗೆ ಶಕ್ತನಾಗಿದ್ದಾನೆ? “ಆತನು ಉನ್ನತಸ್ಥಾನಕ್ಕೆ ಏರಿದಾಗ . . . ಮನುಷ್ಯರಿಗೆ ದಾನಗಳನ್ನು” ಕೊಟ್ಟನು. (ಎಫೆಸ 4:8) ಈ ‘ಮನುಷ್ಯರಲ್ಲಿರುವ ದಾನಗಳು’ ಬೇರೆ ಯಾರೂ ಅಲ್ಲ, ಕ್ರೈಸ್ತ ಹಿರಿಯರೇ ಆಗಿದ್ದಾರೆ. ಇವರು ಪವಿತ್ರಾತ್ಮದಿಂದ ನೇಮಿಸಲ್ಪಟ್ಟಿದ್ದಾರೆ ಹಾಗೂ ತಮ್ಮ ಜೊತೆ ವಿಶ್ವಾಸಿಗಳ ಆತ್ಮಿಕ ಅಗತ್ಯಗಳನ್ನು ಪೂರೈಸುವುದಕ್ಕಾಗಿ ಇವರಿಗೆ ಅಧಿಕಾರವು ಕೊಡಲ್ಪಟ್ಟಿದೆ.—ಅ. ಕೃತ್ಯಗಳು 20:28.

ಈ ಕಾರಣಕ್ಕಾಗಿಯೇ ಅಪೊಸ್ತಲ ಪೌಲನು ಹೀಗೆ ಬುದ್ಧಿಹೇಳುತ್ತಾನೆ: “ನಿಮಗೆ ದೇವರ ವಾಕ್ಯವನ್ನು ತಿಳಿಸಿದ ನಿಮ್ಮ ಸಭಾನಾಯಕರನ್ನು ಜ್ಞಾಪಕಮಾಡಿಕೊಳ್ಳಿರಿ; ಅವರು ಯಾವ ರೀತಿಯಿಂದ ನಡೆದುಕೊಂಡು ಪ್ರಾಣಬಿಟ್ಟರೆಂಬದನ್ನು ಆಲೋಚಿಸಿರಿ; ಅವರ ನಂಬಿಕೆಯನ್ನು ಅನುಸರಿಸಿರಿ.” ಈ ನಂಬಿಗಸ್ತ ಕ್ರೈಸ್ತರು ಯೇಸು ಕ್ರಿಸ್ತನ ಹೆಜ್ಜೆಗಳನ್ನು ನಿಕಟವಾಗಿ ಅನುಸರಿಸುವುದರಿಂದ, ಅವರ ನಂಬಿಕೆಯನ್ನು ಅನುಸರಿಸುವುದು ಬುದ್ಧಿವಂತಿಕೆಯಾಗಿದೆ. ಅನಂತರ ಪೌಲನು ಕೂಡಿಸುತ್ತಾ ಹೇಳುವುದು: “ನಿಮ್ಮ ಸಭಾನಾಯಕರ ಮಾತನ್ನು ಕೇಳಿರಿ, ಅವರಿಗೆ ಅಧೀನರಾಗಿರಿ. [“ನಿಮ್ಮ ಮೇಲೆ ಅವರಿಗಿರುವ ಅಧಿಕಾರವನ್ನು ಯಾವಾಗಲೂ ಅಂಗೀಕರಿಸಿರಿ,” ಆಂಪ್ಲಿಫೈಡ್‌ ಬೈಬಲ್‌] ಅವರು ಲೆಕ್ಕ ಒಪ್ಪಿಸಬೇಕಾದವರಾಗಿ ನಿಮ್ಮ ಆತ್ಮಗಳನ್ನು ಕಾಯುವವರಾಗಿದ್ದಾರೆ. ಅವರು ವ್ಯಸನಪಡದೆ ಸಂತೋಷದಿಂದ ಇದನ್ನು ಮಾಡುವಂತೆ ನೋಡಿರಿ; ಅವರು ವ್ಯಸನದಿಂದಿರುವದು ನಿಮಗೆ ಪ್ರಯೋಜನಕರವಾದದ್ದಲ್ಲ.”—ಇಬ್ರಿಯ 13:7, 17.

ಸಭೆಯ ಹಿರಿಯರು ಕೊಡುವ ಮಾರ್ಗದರ್ಶನವನ್ನು ತಿರಸ್ಕರಿಸುವಾಗ ಏನು ಸಂಭವಿಸುತ್ತದೆ? ಆರಂಭಕಾಲದ ಕ್ರೈಸ್ತ ಸಭೆಯಲ್ಲಿದ್ದ ಕೆಲವರು ಇದನ್ನೇ ಮಾಡಿದರು. ಅದರ ಪರಿಣಾಮವಾಗಿ ನಂತರ ಅವರು ಧರ್ಮಭ್ರಷ್ಟರಾದರು. ಹುಮೆನಾಯನೂ ಪಿಲೇತರೆಂಬ ವ್ಯಕ್ತಿಗಳು ಸತ್ಯವನ್ನು ಬುಡಮೇಲು ಮಾಡುವವರಾಗಿದ್ದರು ಮತ್ತು ಅವರ ಹರಟೆ ಮಾತುಗಳು ‘ಪವಿತ್ರವಾದುದನ್ನು ಕೆಡಿಸಿದವು’ (NW) ಎಂಬುದಾಗಿ ಹೇಳಲಾಗಿದೆ. ಅವರು ಹೇಳಿಕೊಂಡು ತಿರುಗುತ್ತಿದ್ದ ವಿಷಯಗಳಲ್ಲಿ ಒಂದು, ಆತ್ಮಿಕ ಅಥವಾ ಸೂಚಕ ಅರ್ಥದಲ್ಲಿ ಪುನರುತ್ಥಾನವು ಆಗಿಹೋಗಿದೆ. ಆದುದರಿಂದ ಭವಿಷ್ಯದಲ್ಲಿ ದೇವರ ರಾಜ್ಯದ ಕೆಳಗೆ ಬೇರೆ ಯಾವುದೇ ಪುನರುತ್ಥಾನವಿಲ್ಲವೆಂದು ಅವರು ಹೇಳುತ್ತಿದ್ದರು.—2 ತಿಮೊಥೆಯ 2:16-18.

ನೇಮಿಸಲ್ಪಟ್ಟಿದ್ದ ಅಧಿಕಾರದ ಸ್ಥಾನದಲ್ಲಿದ್ದವರು ಸಹಾಯಕ್ಕಾಗಿ ಮುಂದೆ ಬಂದರು. ಹೇಗೆಂದರೆ, ಕ್ರೈಸ್ತ ಹಿರಿಯರು ಅಂಥ ವಾದಗಳು ತಪ್ಪೆಂದು ಖಡಾಖಂಡಿತವಾಗಿ ಹೇಳಲು ಶಕ್ತರಾಗಿದ್ದರು. ಏಕೆಂದರೆ ಅವರು ಶಾಸ್ತ್ರವಚನಗಳ ಅಧಿಕಾರವನ್ನು ಉಪಯೋಗಿಸಿದರು. (2 ತಿಮೊಥೆಯ 3:16, 17) “ಸತ್ಯಕ್ಕೆ ಸ್ತಂಭವೂ ಆಧಾರವೂ ಆಗಿದೆ” ಎಂದು ವರ್ಣಿಸಲಾಗಿರುವ ಇಂದಿನ ಕ್ರೈಸ್ತ ಸಭೆಯ ವಿಷಯದಲ್ಲೂ ಇದು ಸತ್ಯವಾಗಿದೆ. (1 ತಿಮೊಥೆಯ 3:15) ಆದುದರಿಂದ, ಬೈಬಲಿನ ಪುಟಗಳಲ್ಲಿ ಸಂರಕ್ಷಿಸಲ್ಪಟ್ಟಿರುವ “ಸ್ವಸ್ಥಬೋಧನಾವಾಕ್ಯಗಳನ್ನು” ಸೂರೆಮಾಡುವಂತೆ ಸುಳ್ಳುಬೋಧನೆಗಳನ್ನು ಅನುಮತಿಸಲಾಗದು.—2 ತಿಮೊಥೆಯ 1:13, 14.

ಇಂದು ಲೋಕದಲ್ಲಿ ಅಧಿಕಾರಕ್ಕಿರುವ ಗೌರವವು ತೀವ್ರಗತಿಯಲ್ಲಿ ಕಣ್ಣರೆಯಾಗುತ್ತಿರುವುದಾದರೂ, ಕ್ರೈಸ್ತರಾದ ನಾವು ಸಮಾಜದಲ್ಲಿ, ಕುಟುಂಬದಲ್ಲಿ ಹಾಗೂ ಕ್ರೈಸ್ತ ಸಭೆಯಲ್ಲಿ ನಮ್ಮ ಪ್ರಯೋಜನಕ್ಕಾಗಿ ಇಡಲ್ಪಟ್ಟಿರುವ ಯೋಗ್ಯವಾದ ಅಧಿಕಾರಕ್ಕೆ ಮನ್ನಣೆಯನ್ನು ಕೊಡುವೆವು. ಅಧಿಕಾರಕ್ಕೆ ಗೌರವವನ್ನು ಕೊಡುವುದು, ಆರೋಗ್ಯದ ದೃಷ್ಟಿಯಲ್ಲಿ, ಮಾನಸಿಕ ಹಾಗೂ ಆತ್ಮಿಕ ದೃಷ್ಟಿಯಲ್ಲಿ ನಮ್ಮ ಒಳಿತಿಗಾಗಿಯೇ ಇದೆ. ಹಾಗಾಗಿ, ಅಂಥ ದೇವದತ್ತ ಅಧಿಕಾರವನ್ನು ಅಂಗೀಕರಿಸುತ್ತಾ ಅದಕ್ಕೆ ಗೌರವವನ್ನು ತೋರಿಸುವಾಗ, ಅತ್ಯಂತ ಉನ್ನತ ಅಧಿಕಾರದಲ್ಲಿರುವ ಯೆಹೋವನು ಮತ್ತು ಯೇಸು ಕ್ರಿಸ್ತನು ನಮ್ಮನ್ನು ರಕ್ಷಿಸುವರು. ಅದೂ ನಮ್ಮ ನಿತ್ಯ ಒಳಿತಿಗಾಗಿಯೇ.—ಕೀರ್ತನೆ 119:165; ಇಬ್ರಿಯ 12:9.

[ಪಾದಟಿಪ್ಪಣಿ]

^ ಪ್ಯಾರ. 17 ಯುವ ಜನರ ಪ್ರಶ್ನೆಗಳು—ಕಾರ್ಯಸಾಧಕ ಉತ್ತರಗಳು ಮತ್ತು ಕುಟುಂಬ ಸಂತೋಷದ ರಹಸ್ಯ ಎಂಬ ಪುಸ್ತಕಗಳನ್ನು ಓದಿನೋಡಿ. ಈ ಎರಡೂ ಪುಸ್ತಕಗಳು ವಾಚ್‌ಟವರ್‌ ಬೈಬಲ್‌ ಆ್ಯಂಡ್‌ ಟ್ರ್ಯಾಕ್ಟ್‌ ಸೊಸೈಟಿಯಿಂದ ಪ್ರಕಾಶಿಸಲ್ಪಟ್ಟಿವೆ.

[ಪುಟ 5ರಲ್ಲಿರುವ ಸಂಕ್ಷಿಪ್ತ ವಿವರಣೆ]

ಕುಟುಂಬದಲ್ಲಿರುವವರ ಅಧಿಕಾರದ ಕುರಿತು ಬೈಬಲಿನಲ್ಲಿ ಹೇರಳವಾದ ಮಾಹಿತಿಯೂ ಇದೆ

[ಪುಟ 6ರಲ್ಲಿರುವ ಚಿತ್ರ]

ಒಂಟಿ ಹೆತ್ತವರು ತಮ್ಮ ಮಕ್ಕಳೊಂದಿಗೆ ಮಾತಾಡುವಾಗ ಯೆಹೋವ ಮತ್ತು ಯೇಸುಕ್ರಿಸ್ತನ ಅಧಿಕಾರವನ್ನು ಉಪಯೋಗಿಸಬಹುದು

[ಪುಟ 7ರಲ್ಲಿರುವ ಚಿತ್ರಗಳು]

ಕ್ರೈಸ್ತರು ಕುಟುಂಬದಲ್ಲಿ, ಕ್ರೈಸ್ತ ಸಭೆಯಲ್ಲಿ ಹಾಗೂ ಸಮಾಜದಲ್ಲಿ ತಮ್ಮ ಪ್ರಯೋಜನಕ್ಕಾಗಿ ಇಡಲ್ಪಟ್ಟಿರುವ ಯೋಗ್ಯವಾದ ಅಧಿಕಾರಕ್ಕೆ ಮನ್ನಣೆಯನ್ನು ಕೊಡುತ್ತಾರೆ

[ಪುಟ 4ರಲ್ಲಿರುವ ಚಿತ್ರ ಕೃಪೆ]

Photo by Josh Mathes, Collection of the Supreme Court of the United States