ದೈವಿಕ ವಿವೇಕ—ಅದು ಹೇಗೆ ವ್ಯಕ್ತವಾಗುತ್ತದೆ?
ದೈವಿಕ ವಿವೇಕ—ಅದು ಹೇಗೆ ವ್ಯಕ್ತವಾಗುತ್ತದೆ?
“ಜ ನರು ಬಡವನ ಜ್ಞಾನವನ್ನು [“ವಿವೇಕವನ್ನು,” NW] ತಾತ್ಸಾರಮಾಡಿ ಅವನ ಮಾತುಗಳನ್ನು ಗಮನಿಸರು.” ಒಬ್ಬ ಬಡವನಾದ, ಆದರೆ ನಮ್ರ ಮನುಷ್ಯನ ಕಥೆಯನ್ನು ವಿವೇಕಿ ರಾಜನಾದ ಸೊಲೊಮೋನನು ಈ ಮಾತುಗಳಿಂದ ಮುಕ್ತಾಯಗೊಳಿಸಿದನು. ಆ ಮನುಷ್ಯನು ಇಡೀ ಪಟ್ಟಣವನ್ನು ನಾಶವಾಗುವುದರಿಂದ ತಪ್ಪಿಸಿದನು. ಆದರೂ ದುಃಖಕರವಾದ ಸಂಗತಿಯೆಂದರೆ, “ಆ ಬಡ ಜ್ಞಾನಿಯನ್ನು ಯಾರೂ ಸ್ಮರಿಸಲಿಲ್ಲ.”—ಪ್ರಸಂಗಿ 9:14-16.
ಇಂದು ಮನುಷ್ಯರು ಬಡಜನರನ್ನು ತುಚ್ಛವಾಗಿ ನೋಡುತ್ತಾರೆ. ಈ ಬಡಜನರು ಎಷ್ಟೇ ಒಳ್ಳೆಯ ಕಾರ್ಯಗಳನ್ನು ಮಾಡಿರುವುದಾದರೂ ಇದು ಅವರ ಕಣ್ಣಿಗೆ ಕಾಣುವುದೇ ಇಲ್ಲ. ಯೇಸುವಿನ ವಿಷಯದಲ್ಲೂ ಇದೇ ಸಂಭವಿಸಿತು. ಯೆಶಾಯನು ಯೇಸುವಿನ ಕುರಿತಾಗಿ ಹೀಗೆ ಪ್ರವಾದಿಸಿದ್ದನು: “ಅವನು ಧಿಕ್ಕರಿಸಲ್ಪಟ್ಟವನು, ಮನುಷ್ಯರು ಸೇರಿಸಿಕೊಳ್ಳದವನು, ಸಂಕಷ್ಟಕ್ಕೊಳಗಾದವನು, ವ್ಯಾಧಿಪೀಡಿತನು.” (ಯೆಶಾಯ 53:3) ಯೇಸುವಿಗೆ ಕೇವಲ ಅವನ ದಿನದಲ್ಲಿದ್ದ ಮುಖಂಡರಿಗಿದ್ದಂತಹ ಅಂತಸ್ತು ಇಲ್ಲವೇ ಸ್ಥಾನಮಾನ ಇದ್ದಿಲ್ಲವೆಂಬ ಕಾರಣಕ್ಕಾಗಿ ಯೇಸುವನ್ನು ಕೆಲವರು ತುಚ್ಛೀಕರಿಸಿದರು. ಆದರೂ, ಪಾಪಿ ಮನುಷ್ಯರಿಗಿಂತಲೂ ಎಷ್ಟೋ ಹೆಚ್ಚು ಉತ್ಕೃಷ್ಟವಾದ ವಿವೇಕವು ಅವನಲ್ಲಿತ್ತು. ಈ ‘ಬಡಗಿಯ ಮಗನು’ ಇಷ್ಟೊಂದು ವಿವೇಕವುಳ್ಳವನು ಮತ್ತು ಇಷ್ಟೊಂದು ಶಕ್ತಿಶಾಲಿ ಕಾರ್ಯಗಳನ್ನು ಮಾಡಿದನು ಎಂಬುದನ್ನು ಅಂಗೀಕರಿಸಲು ಯೇಸುವಿನ ಹುಟ್ಟಿದೂರಿನ ಜನರು ನಿರಾಕರಿಸಿದರು. ಅದು ಎಂತಹ ಒಂದು ದೊಡ್ಡ ತಪ್ಪಾಗಿತ್ತು! “ಅವರು ಆತನನ್ನು ನಂಬದೆಹೋದದರಿಂದ ಆತನು ಅಲ್ಲಿ ಅನೇಕ ಮಹತ್ಕಾರ್ಯಗಳನ್ನು ಮಾಡಲಿಲ್ಲ” ಎಂದು ಯೇಸುವಿನ ಬಗ್ಗೆ ಆ ವೃತ್ತಾಂತವು ಹೇಳುತ್ತದೆ. ಆ ಜನರು ಎಂತಹ ಒಂದು ಸುವರ್ಣಾವಕಾಶವನ್ನು ಕಳೆದುಕೊಂಡರು!—ಮತ್ತಾಯ 13:54-58.
ನಾವು ಸಹ ಅದೇ ತಪ್ಪನ್ನು ಮಾಡದಿರೋಣ. “ಜ್ಞಾನವು [“ವಿವೇಕವು,” NW] ತನ್ನ ಕೆಲಸಗಳಿಂದ ಜ್ಞಾನವೇ [“ವಿವೇಕ,” NW] ಎಂದು ಗೊತ್ತಾಗುವದು” ಎಂದು ಯೇಸು ಹೇಳಿದನು. ದೇವರ ಕೆಲಸವನ್ನು ಮಾಡುತ್ತಿರುವವರು ಮತ್ತು ಸ್ವರ್ಗೀಯ ಜ್ಞಾನವನ್ನು ಇತರರಿಗೆ ಹಂಚುತ್ತಿರುವವರು ಇತರರಿಗಿಂತ ಭಿನ್ನವಾಗಿ ಎದ್ದುಕಾಣುತ್ತಾರೆ. ಅದು ಅವರಿಗಿರುವ ಸ್ಥಾನಮಾನ ಇಲ್ಲವೇ ಅಂತಸ್ತಿನಿಂದಲ್ಲ ಬದಲಾಗಿ, ಅವರು ತೋರಿಸುವ “ಒಳ್ಳೇ ಫಲ”ಗಳಿಂದಲೇ, ಅಂದರೆ ಬೈಬಲ್ ಆಧಾರಿತ ನಂಬಿಕೆ ಹಾಗೂ ಅವರ ಕ್ರಿಯೆಗಳಿಂದಲೇ.—ಮತ್ತಾಯ 7:18-20; 11:19.