ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕೆಲಸಮಾಡಲು ಪೆಸಿಫಿಕ್‌ ಸಾಗರದ್ವೀಪಗಳಿಗೆ ಹೊರಟವರು!

ಕೆಲಸಮಾಡಲು ಪೆಸಿಫಿಕ್‌ ಸಾಗರದ್ವೀಪಗಳಿಗೆ ಹೊರಟವರು!

ಕೆಲಸಮಾಡಲು ಪೆಸಿಫಿಕ್‌ ಸಾಗರದ್ವೀಪಗಳಿಗೆ ಹೊರಟವರು!

ಆಸ್ಟ್ರೇಲಿಯದ ಬ್ರಿಸ್ಬೆನ್‌ ಮತ್ತು ಸಿಡ್ನಿ ವಿಮಾನನಿಲ್ದಾಣಗಳಲ್ಲಿ, ಪ್ರಯಾಣಿಕರು ಕಾದುಕುಳಿತುಕೊಳ್ಳುವ ಸ್ಥಳಗಳು ಎಂದಿಗಿಂತಲೂ ಹೆಚ್ಚಿನ ಸಡಗರದಿಂದ ಗಿಜಿಗುಟ್ಟುತ್ತಿದ್ದವು. 46 ಮಂದಿಯ ಒಂದು ಗುಂಪು ವಿಮಾನಯಾನಕ್ಕಾಗಿ ತಯಾರಾಗಿತ್ತು. ಇವರೆಲ್ಲರು ನ್ಯೂ ಸೀಲೆಂಡ್‌, ಹವಾಯೀ ಮತ್ತು ಅಮೆರಿಕದಿಂದ ಬರುವ ಇನ್ನಿತರ 39 ಮಂದಿಯನ್ನು ಸಮೋವ ದ್ವೀಪದಲ್ಲಿ ಭೇಟಿಯಾಗಲಿದ್ದರು. ಆದರೆ ಇವರೆಲ್ಲರ ಲಗೇಜು ಸ್ವಲ್ಪ ಅಸಾಧಾರಣವಾದದ್ದಾಗಿತ್ತು. ಒಂದು ಸುಂದರವಾದ ಪೆಸಿಫಿಕ್‌ ದ್ವೀಪಕ್ಕೆ ಹೋಗುತ್ತಿರುವಾಗ ಸಾಮಾನ್ಯವಾಗಿ ಯಾರೊಬ್ಬರೂ ಕೊಂಡಯ್ಯದಂತಹ ವಸ್ತುಗಳು ಇವರ ಬಳಿ ಇದ್ದವು. ಅಂದರೆ ಇವರ ಲಗೇಜಿನಲ್ಲಿ ಹೆಚ್ಚಾಗಿ ಸುತ್ತಿಗೆಗಳು, ಗರಗಸಗಳು ಮತ್ತು ಡ್ರಿಲ್ಲಿಂಗ್‌ ಮಷೀನ್‌ಗಳು, ಹೀಗೆ ಕೆಲಸದ ಉಪಕರಣಗಳೇ ತುಂಬಿದ್ದವು. ಏಕೆ? ಏಕೆಂದರೆ ಅವರು ಅಲ್ಲಿಗೆ ಹೋಗುತ್ತಿದ್ದ ಉದ್ದೇಶವು ಸಹ ಸ್ವಲ್ಪ ಅಸಾಧಾರಣವಾದದ್ದಾಗಿತ್ತು.

ಇವರೆಲ್ಲರೂ ತಮ್ಮ ಸ್ವಂತ ಖರ್ಚಿನಲ್ಲಿ ಪ್ರಯಾಣಿಸುವವರಾಗಿದ್ದರು. ಯೆಹೋವನ ಸಾಕ್ಷಿಗಳ ಆಸ್ಟ್ರೇಲಿಯದ ಬ್ರಾಂಚ್‌ ಆಫೀಸಿನಲ್ಲಿರುವ ರೀಜನಲ್‌ ಇಂಜನಿಯರಿಂಗ್‌ ಆಫೀಸ್‌ ಮೇಲ್ವಿಚಾರದ ಕೆಳಗೆ ಒಂದು ಕಟ್ಟಡನಿರ್ಮಾಣದ ಕಾರ್ಯಕ್ರಮದಲ್ಲಿ ಇವರು ಸಂಬಳ ಪಡೆಯದೆ, ಸ್ವಯಂಸೇವಕರಾಗಿ ಎರಡು ವಾರಗಳ ವರೆಗೆ ಪೆಸಿಫಿಕ್‌ ದ್ವೀಪಗಳಲ್ಲಿ ಕೆಲಸಮಾಡಲು ಹೋಗುತ್ತಿದ್ದರು. ಆ ಕಟ್ಟಡನಿರ್ಮಾಣ ಕಾರ್ಯಕ್ರಮಕ್ಕೆ ಬೇಕಾಗುವ ಹಣವು, ಸ್ವಯಂಪ್ರೇರಿತ ಕಾಣಿಕೆಗಳಿಂದ ಬರುತ್ತಿತ್ತು. ಪೆಸಿಫಿಕ್‌ ಸಾಗರದ್ವೀಪಗಳಲ್ಲಿ ಯೆಹೋವನ ಸಾಕ್ಷಿಗಳ ಸಭೆಗಳು ಶೀಘ್ರವಾಗಿ ಬೆಳೆಯುತ್ತಿವೆ. ಆದುದರಿಂದ ಆ ಕಾರ್ಯಕ್ರಮದಲ್ಲಿ ಈ ಸಭೆಗಳಿಗಾಗಿ ರಾಜ್ಯ ಸಭಾಗೃಹಗಳು, ಅಸೆಂಬ್ಲಿ ಹಾಲ್‌ಗಳು, ಮಿಷನೆರಿ ಗೃಹಗಳು ಮತ್ತು ಬ್ರಾಂಚ್‌ ಕಟ್ಟಡಗಳು ಅಥವಾ ಭಾಷಾಂತರಗಾರರಿಗಾಗಿ ಆಫೀಸುಗಳನ್ನು ಕಟ್ಟುವುದು ಸೇರಿದೆ. ಈ ನಿರ್ಮಾಣ ಯೋಜನೆಯಲ್ಲಿ ಕೆಲಸಮಾಡುವ ಕೆಲವರನ್ನು ನಾವೀಗ ಭೇಟಿಯಾಗೋಣ. ಇವರೆಲ್ಲರೂ ತಮ್ಮ ಸ್ವಂತ ದೇಶಗಳಲ್ಲಿನ ರಾಜ್ಯ ಸಭಾಗೃಹ ನಿರ್ಮಾಣ ತಂಡಗಳಲ್ಲಿ ಕೆಲಸಮಾಡಿದವರಾಗಿದ್ದಾರೆ.

ಮ್ಯಾಕ್ಸ್‌ ಎಂಬುವರು, ಆಸ್ಟ್ರೇಲಿಯದ ನ್ಯೂ ಸೌತ್‌ ವೇಲ್ಸ್‌ನಲ್ಲಿರುವ ಕೌವ್ರಾದಿಂದ ಬಂದವರು. ಕಟ್ಟಡಕ್ಕೆ ಛಾವಣಿ ಹಾಕುವುದು ಅವರ ಕೆಲಸವಾಗಿದೆ. ಇವರು ವಿವಾಹಿತರಾಗಿದ್ದು, ಐದು ಮಂದಿ ಮಕ್ಕಳ ತಂದೆಯಾಗಿದ್ದಾರೆ. ಅವರೊಂದಿಗೆ ಕೆಲಸಮಾಡುವ ಇನ್ನೊಬ್ಬರ ಹೆಸರು, ರಾಯ್‌. ಇವರು ನ್ಯೂ ಸೀಲೆಂಡಿನ ಮೌಂಟ್‌ ಮೌನ್‌ಗಾನುಯ್‌ನಿಂದ ಬಂದಿದ್ದ ಒಬ್ಬ ಪೆಯಿಂಟರ್‌ ಮತ್ತು ಗೋಡೆಗಳಿಗೆ ಪ್ಲಾಸ್ಟರ್‌ ಹಚ್ಚುವವರಾಗಿದ್ದಾರೆ. ಇವರು ಸಹ ವಿವಾಹಿತರಾಗಿದ್ದಾರೆ ಮತ್ತು ಇವರಿಗೆ ನಾಲ್ಕು ಮಂದಿ ಮಕ್ಕಳಿದ್ದಾರೆ. ಆರ್ನಾಲ್ಡ್‌ ಎಂಬವರು ಹವಾಯೀಯಿಂದ ಬಂದಿದ್ದಾರೆ. ಅವರಿಗೆ ಇಬ್ಬರು ಗಂಡುಮಕ್ಕಳಿದ್ದಾರೆ ಮತ್ತು ಅವರೊಬ್ಬ ಪಯನೀಯರ್‌ ಅಥವಾ ಪೂರ್ಣ ಸಮಯದ ಶುಶ್ರೂಷಕರೂ ಆಗಿದ್ದಾರೆ. ಮ್ಯಾಕ್ಸ್‌ ಮತ್ತು ರಾಯ್‌ರಂತೆ, ಆರ್ನಾಲ್ಡ್‌ ಸಹ ತಮ್ಮ ಸ್ವಂತ ಸಭೆಯಲ್ಲಿ ಒಬ್ಬ ಹಿರಿಯರಾಗಿದ್ದಾರೆ. ಈ ಪುರುಷರು, ಮತ್ತು ಈ ಕಾರ್ಯಕ್ರಮದಲ್ಲಿ ಒಳಗೂಡಿರುವ ಹೆಚ್ಚಿನವರು ಸ್ವಯಂಸೇವಕರಾಗಿದ್ದಾರೆ. ಆದರೆ ಅವರಿಗೆ ಬೇರೇನೂ ಕೆಲಸವಿಲ್ಲ ಎಂಬ ಕಾರಣಕ್ಕಾಗಿ ಅವರು ಈ ಕೆಲಸಮಾಡುತ್ತಿಲ್ಲ. ಅದಕ್ಕೆ ಬದಲಾಗಿ, ಅವರು ಮತ್ತು ಅವರ ಕುಟುಂಬಗಳು ಅಗತ್ಯವನ್ನು ನೋಡಿ, ತಮ್ಮಿಂದ ಸಾಧ್ಯವಿರುವಷ್ಟು ಸಹಾಯವನ್ನು ಮಾಡಲು ಬಯಸುತ್ತಾರೆ.

ಬಹುರಾಷ್ಟ್ರೀಯ ಕಾರ್ಮಿಕರು ಒಂದು ಅತ್ಯಾವಶ್ಯಕ ಅಗತ್ಯವನ್ನು ಪೂರೈಸುತ್ತಾರೆ

ಇವರೆಲ್ಲರ ಕೌಶಲಗಳು ಮತ್ತು ಸೇವೆಯ ಅಗತ್ಯವಿದ್ದ ಒಂದು ಸ್ಥಳವು, ಟುವಾಲು ಆಗಿತ್ತು. ಇದು ಸುಮಾರು 10,500 ಜನರುಳ್ಳ ಒಂದು ಪೆಸಿಫಿಕ್‌ ದೇಶವಾಗಿದೆ. ಈ ದೇಶವು, ಭೂಮಧ್ಯರೇಖೆಯ ಹತ್ತಿರದಲ್ಲಿ ಮತ್ತು ಸಮೋವ ದ್ವೀಪದ ವಾಯವ್ಯ ದಿಕ್ಕಿನಲ್ಲಿ ತುಂಬ ದೂರದಲ್ಲಿರುವ ಒಂಬತ್ತು ಹವಳ ದಿಬ್ಬಗಳ ಒಂದು ಗುಂಪಿನಲ್ಲಿ ನೆಲೆಸಿದೆ. ಪ್ರತಿಯೊಂದು ದ್ವೀಪ ಅಥವಾ ಹವಳ ದಿಬ್ಬದ ಸರಾಸರಿ ಚದರಳತೆಯು 2.5 ಕಿಲೊಮೀಟರ್‌ಗಳಾಗಿವೆ. 1994ರೊಳಗೆ, ಅಲ್ಲಿದ್ದ 61 ಮಂದಿ ಸಾಕ್ಷಿಗಳಿಗೆ ತುರ್ತಾಗಿ ಒಂದು ಹೊಸ ರಾಜ್ಯ ಸಭಾಗೃಹ ಮತ್ತು ಭಾಷಾಂತರಗಾರರಿಗಾಗಿ ಹೆಚ್ಚು ದೊಡ್ಡದಾದ ಆಫೀಸ್‌ ಬೇಕಾಗಿತ್ತು.

ಈ ಉಷ್ಣವಲಯದ ಪೆಸಿಫಿಕ್‌ ಕ್ಷೇತ್ರದಲ್ಲಿ, ಪದೇ ಪದೇ ಬಿರುಗಾಳಿಗಳು ಮತ್ತು ಸುಂಟರಗಾಳಿಗಳು ಬೀಸುತ್ತಿರುವುದರಿಂದ, ಅವುಗಳನ್ನು ಎದುರಿಸಿನಿಲ್ಲುವಂತಹ ರೀತಿಯ ಕಟ್ಟಡಗಳನ್ನು ವಿನ್ಯಾಸಿಸಿ, ಕಟ್ಟಬೇಕಾಗುತ್ತದೆ. ಆದರೆ ಸಮಸ್ಯೆಯೇನೆಂದರೆ, ಈ ದ್ವೀಪಗಳಲ್ಲಿ ಉತ್ತಮ ಗುಣಮಟ್ಟದ ನಿರ್ಮಾಣ ಸಾಮಾಗ್ರಿಗಳು ಸಿಗುವುದು ಕಷ್ಟ. ಇದಕ್ಕೆ ಪರಿಹಾರವೇನು? ಆಸ್ಟ್ರೇಲಿಯದಿಂದ ಪ್ರತಿಯೊಂದು ವಸ್ತುವನ್ನೂ ಕಂಟೇನರ್‌ಗಳಲ್ಲಿ ಹಡಗಿನ ಮೂಲಕ ತರಿಸಲಾಯಿತು. ಅಂದರೆ, ಛಾವಣಿಯ ಸಾಮಾಗ್ರಿ, ಛಾವಣಿ ಆಸರೆಕಟ್ಟು, ಪೀಠೋಪಕರಣ, ಪರದೆಗಳು, ಪಾಯಿಖಾನೆಗಾಗಿ ಬೇಕಾದಂತಹ ಸಾಮಾಗ್ರಿಗಳು, ಶವರ್‌ ಸ್ನಾನಕ್ಕಾಗಿ ನಳಿಕೆಗಳು, ಮತ್ತು ತಿರುಪು ಮೊಳೆಗಳು ಹಾಗೂ ಸಾಧಾರಣ ಮೊಳೆಗಳನ್ನು ಸಹ ತರಿಸಲಾಯಿತು.

ಈ ವಸ್ತುಗಳು ಅಲ್ಲಿ ತಲಪುವ ಮುಂಚೆ, ಒಂದು ಚಿಕ್ಕ ತಂಡವು ಮುಂಚಿತವಾಗಿಯೇ ಆ ನಿವೇಶನದಲ್ಲಿ ಸ್ವಲ್ಪ ಸಿದ್ಧತೆಗಳನ್ನು ಮಾಡಿ, ಅಸ್ತಿವಾರವನ್ನು ಹಾಕಿಬಿಟ್ಟಿತು. ಆನಂತರ ಕಟ್ಟಡಗಳನ್ನು ಕಟ್ಟುವ, ಬಣ್ಣ ಹಚ್ಚುವ ಮತ್ತು ಸಜ್ಜುಗೊಳಿಸುವ ಕೆಲಸವನ್ನು ಮಾಡಲಿಕ್ಕಾಗಿ ಅಂತಾರಾಷ್ಟ್ರೀಯ ಕಾರ್ಮಿಕರು ಬಂದರು.

ಟುವಾಲುವಿನಲ್ಲಿ ಈ ಎಲ್ಲ ಕೆಲಸವು ನಡೆಯುತ್ತಿರುವುದನ್ನು ನೋಡಿ, ಅಲ್ಲಿನ ಸ್ಥಳಿಕ ಪಾದ್ರಿಯ ಕೋಪ ನೆತ್ತಿಗೇರಿತು. ಈ ಸಾಕ್ಷಿಗಳು “ಬಾಬೆಲ್‌ ಗೋಪುರವನ್ನು” ಕಟ್ಟುತ್ತಿದ್ದಾರೆಂದು ಅವನು ರೇಡಿಯೊ ಮೂಲಕ ಘೋಷಣೆ ಮಾಡಿದನು! ಆದರೆ ಸತ್ಯ ಸಂಗತಿಯೇನಾಗಿತ್ತು? “ಬೈಬಲ್‌ನಲ್ಲಿ ತಿಳಿಸಲ್ಪಟ್ಟಿರುವ ಬಾಬೆಲ್‌ ಗೋಪುರವನ್ನು ಜನರು ಕಟ್ಟುತ್ತಿದ್ದಾಗ, ದೇವರು ಅವರ ಭಾಷೆಯನ್ನು ಗಲಿಬಿಲಿಗೊಳಿಸಿದ್ದರಿಂದ ಅವರು ಒಬ್ಬರನ್ನೊಬ್ಬರನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿರಲಿಲ್ಲ. ಆದುದರಿಂದ ಅವರ ಆ ಗೋಪುರದ ಕೆಲಸವು ಅರ್ಧದಲ್ಲೇ ನಿಂತುಹೋಯಿತು” ಎಂದು ಗ್ರೇಮಿ ಎಂಬ ಸ್ವಯಂ ಸೇವಕರು ಹೇಳುತ್ತಾರೆ. (ಆದಿಕಾಂಡ 11:1-9) “ಆದರೆ ಯೆಹೋವ ದೇವರೊಂದಿಗೆ ಕೆಲಸಮಾಡುವಾಗ ಸಂಗತಿಯು ಬೇರೆಯಾಗಿರುತ್ತದೆ. ಭಾಷೆ ಮತ್ತು ಸಾಂಸ್ಕೃತಿಕ ಭಿನ್ನತೆಗಳ ನಡುವೆಯೂ, ಕಟ್ಟಡ ನಿರ್ಮಾಣ ಯೋಜನೆಗಳು ಯಾವಾಗಲೂ ಪೂರ್ಣಗೊಳ್ಳುತ್ತವೆ.” ಈ ಯೋಜನೆಯು ಸಹ ಎರಡೇ ವಾರಗಳಲ್ಲಿ ಮುಗಿಸಲ್ಪಟ್ಟಿತು. 163 ಮಂದಿಯೊಂದಿಗೆ ಪ್ರಧಾನ ಮಂತ್ರಿಯವರ ಹೆಂಡತಿಯೂ ಸಹ, ಸಮರ್ಪಣೆಯ ಕಾರ್ಯಕ್ರಮಕ್ಕೆ ಹಾಜರಾದರು.

ಈ ನಿರ್ಮಾಣ ಯೋಜನೆಯ ಸೂಪರ್‌ವೈಸರ್‌ರಾಗಿದ್ದ ಡಗ್‌ ಎಂಬುವರು, ತಮ್ಮ ಆ ಕೆಲಸದ ಕುರಿತಾಗಿ ಜ್ಞಾಪಿಸಿಕೊಳ್ಳುತ್ತಾ ಹೇಳಿದ್ದು: “ಬೇರೆ ಬೇರೆ ದೇಶಗಳಿಂದ ಬಂದ ಸ್ವಯಂಸೇವಕರೊಂದಿಗೆ ಕೆಲಸಮಾಡುವುದು ನಿಜವಾಗಿಯೂ ಆನಂದಮಯವಾಗಿತ್ತು. ನಮ್ಮಲ್ಲಿ ಪ್ರತಿಯೊಬ್ಬರು ಕೆಲಸಗಳನ್ನು ಬೇರೆ ಬೇರೆ ರೀತಿಗಳಲ್ಲಿ ಮಾಡಿದೆವು, ಬೇರೆ ಬೇರೆ ಪದಗಳನ್ನು ಉಪಯೋಗಿಸಿದೆವು, ಮತ್ತು ನಮ್ಮಲ್ಲಿ ಬೇರೆ ಬೇರೆ ರೀತಿಯ ಅಳತೆ ಪ್ರಮಾಣಗಳಿದ್ದವು. ಆದರೂ ಇದರಲ್ಲಿ ನಮಗೆ ಯಾವುದರಿಂದಲೂ ತೊಂದರೆಯಾಗಲಿಲ್ಲ.” ಇಷ್ಟರೊಳಗೆ ಅವರು ಅನೇಕ ನಿರ್ಮಾಣ ಯೋಜನೆಗಳಲ್ಲಿ ಕೆಲಸಮಾಡಿರಲಾಗಿ, ಅವರು ಮತ್ತೂ ಹೇಳಿದ್ದು: “ಇದೆಲ್ಲವೂ ನನ್ನ ಮನಸ್ಸಿನಲ್ಲಿ ಒಂದು ಸಂಗತಿಯನ್ನು ಅಚ್ಚೊತ್ತುತ್ತದೆ. ಅದೇನೆಂದರೆ, ಈ ಭೂಮಿಯ ಮೇಲೆ ಯಾವುದೇ ಸ್ಥಳದಲ್ಲಿ, ಅಂದರೆ ಆ ನಿವೇಶನವು ಯಾವುದೇ ಮೂಲೆಯಲ್ಲಿರಲಿ ಅಥವಾ ಎಷ್ಟೇ ದುರ್ಗಮವಾದದ್ದಾಗಿರಲಿ ಯೆಹೋವನ ಜನರು ಆತನ ಬೆಂಬಲದೊಂದಿಗೆ ಒಂದು ಕಟ್ಟಡವನ್ನು ಕಟ್ಟಬಲ್ಲರು. ನಮ್ಮಲ್ಲಿ ಅನೇಕ ಪ್ರತಿಭಾವಂತ ಜನರಿದ್ದಾರೆ ನಿಜ, ಆದರೆ ಆ ಕೆಲಸವನ್ನು ಸಾಧ್ಯಗೊಳಿಸುವಂಥದ್ದು ಯೆಹೋವನ ಆತ್ಮವೇ ಆಗಿದೆ.”

ಈ ದ್ವೀಪದಲ್ಲಿರುವ ಸಾಕ್ಷಿ ಕುಟುಂಬಗಳು, ಈ ಸ್ವಯಂಸೇವಕರಿಗಾಗಿ ಆಹಾರ ಮತ್ತು ವಸತಿಸೌಕರ್ಯವನ್ನು ಕೊಡುವಂತೆಯೂ ದೇವರಾತ್ಮವು ಪ್ರಚೋದಿಸುತ್ತದೆ. ಇದನ್ನು ಮಾಡಲು ಕೆಲವೊಂದು ಕುಟುಂಬಗಳು ದೊಡ್ಡ ತ್ಯಾಗಗಳನ್ನೇ ಮಾಡುತ್ತವೆ. ಮತ್ತು ಅವರಿಂದ ಇಂತಹ ಅತಿಥಿಸತ್ಕಾರವನ್ನು ಪಡೆಯುವವರು ಅದನ್ನು ತುಂಬ ಗಣ್ಯಮಾಡುತ್ತಾರೆ. ಆಸ್ಟ್ರೇಲಿಯದ ಮೆಲ್ಬರ್ನ್‌ನಿಂದ ಬಂದಿರುವ ಕೆನ್‌ ಎಂಬವರು, ಫ್ರೆಂಚ್‌ ಪೊಲಿನೇಷಿಯದಲ್ಲಿ ಇಂತಹದ್ದೊಂದು ಯೋಜನೆಯಲ್ಲೇ ಕೆಲಸಮಾಡಿದ್ದರು. ಅವರು ಗಮನಿಸುವುದು: “ನಾವು ಕೆಲಸಗಾರರಾಗಿ ಬಂದರೂ, ನಮ್ಮನ್ನು ರಾಜರೋಪಾದಿ ಉಪಚರಿಸಲಾಯಿತು.” ಸಾಧ್ಯವಿರುವಲ್ಲೆಲ್ಲಾ ಸ್ಥಳಿಕ ಸಾಕ್ಷಿಗಳು ಸಹ ನಿರ್ಮಾಣ ಕೆಲಸದಲ್ಲಿ ಸಹಾಯವನ್ನು ಮಾಡುತ್ತಾರೆ. ಸಾಲೊಮೊನ್‌ ಐಲೆಂಡ್ಸ್‌ಗಳಲ್ಲಿ, ಮಹಿಳೆಯರು ಕಾಂಕ್ರೀಟನ್ನು ಕೈಯಿಂದ ಕಲಸಿಕೊಡುತ್ತಿದ್ದರು! ಮಳೆಯಿಂದ ನೆನೆದಿರುವ ಎತ್ತರವಾದ ಪರ್ವತಗಳ ಮೇಲ್ಭಾಗಕ್ಕೆ ಹೋಗಿ, ನೂರು ಮಂದಿ ಸ್ತ್ರೀಪುರುಷರು 40ಕ್ಕಿಂತಲೂ ಹೆಚ್ಚು ಟನ್ನುಗಳಷ್ಟು ಮರವನ್ನು ಎತ್ತಿತಂದರು. ಅದಕ್ಕೆ ಯುವ ಜನರು ಸಹ ಸಹಾಯಮಾಡಿದರು. ಈ ಮುಂಚೆ ತಿಳಿಸಲ್ಪಟ್ಟಿರುವ ರಾಯ್‌ ಜ್ಞಾಪಿಸಿಕೊಳ್ಳುವುದು: “ಒಂದೇ ಸಮಯದಲ್ಲಿ ಎರಡು ಅಥವಾ ಮೂರು ಸಿಮೆಂಟ್‌ ಚೀಲಗಳನ್ನು ಎತ್ತಿಕೊಂಡು ತರುತ್ತಿದ್ದ ಒಬ್ಬ ಯುವ ಸಹೋದರನ ನೆನಪು ನನಗಿದೆ. ಬಿಸಿಲಿರಲಿ, ಮಳೆಯಿರಲಿ ಅವನು ಮಾತ್ರ ಜಲ್ಲಿಕಲ್ಲುಗಳನ್ನು ಎತ್ತಿಹಾಕುವ ಕೆಲಸವನ್ನು ಮಾಡುತ್ತಾ ಇದ್ದನು.”

ಸ್ಥಳಿಕ ಸಾಕ್ಷಿಗಳು ಕೆಲಸದಲ್ಲಿ ಪಾಲ್ಗೊಳ್ಳುವುದರಿಂದ ಇನ್ನೊಂದು ಪ್ರಯೋಜನವೂ ಇದೆ. ಸಮೋವದಲ್ಲಿರುವ ವಾಚ್‌ಟವರ್‌ ಸೊಸೈಟಿಯ ಬ್ರಾಂಚ್‌ ಆಫೀಸು ವರದಿಸುವುದು: “ಆ ದ್ವೀಪದಲ್ಲಿರುವ ಸಹೋದರರು, ರಿಪೇರಿ ಕೆಲಸ ಮತ್ತು ನಿರ್ಮಾಣ ಕೆಲಸದ ಕೌಶಲಗಳನ್ನು ಕಲಿತುಕೊಂಡಿದ್ದಾರೆ. ಇದು ಮುಂದೆ ಎಂದಾದರೂ ರಾಜ್ಯ ಸಭಾಗೃಹಗಳನ್ನು ಕಟ್ಟಬೇಕಾದಾಗ, ಮತ್ತು ಚಂಡಮಾರುತದ ನಂತರ ದುರಸ್ತಿ ಕೆಲಸವನ್ನು ಮಾಡಬೇಕಾದಾಗ ಉಪಯೋಗಕ್ಕೆ ಬರಬಹುದು. ಅಷ್ಟುಮಾತ್ರವಲ್ಲದೆ, ಆ ಸಮುದಾಯದಲ್ಲಿ ಒಂದು ಉದ್ಯೋಗವನ್ನು ಪಡೆಯುವುದು ಕಷ್ಟಕರವಾಗಿದೆ. ಆದುದರಿಂದ ಇದು ಅವರ ಹೊಟ್ಟೆಪಾಡಿಗಾಗಿಯೂ ಸಹಾಯಮಾಡಬಹುದು.”

ಈ ಕಟ್ಟಡನಿರ್ಮಾಣ ಕಾರ್ಯಕ್ರಮದಿಂದ ಒಳ್ಳೆಯ ಸಾಕ್ಷಿ

ಕಾಲಿನ್‌ ಎಂಬವರು ಹೊನಿಯಾರಾದಲ್ಲಿ ಇದ್ದದ್ದರಿಂದ, ಸಾಲೊಮನ್‌ ಐಲೆಂಡ್ಸ್‌ನ ಅಸೆಂಬ್ಲಿ ಹಾಲ್‌ ಕಟ್ಟಲ್ಪಡುವುದನ್ನು ನೋಡಿದರು. ಅವರು ಎಷ್ಟು ಪ್ರಭಾವಿತರಾದರೆಂದರೆ, ಪಿಜಿನ್‌ ಇಂಗ್ಲಿಷ್‌ ಭಾಷೆಯಲ್ಲಿ ಅವರು ವಾಚ್‌ಟವರ್‌ ಸೊಸೈಟಿಯ ಸ್ಥಳಿಕ ಬ್ರಾಂಚ್‌ ಆಫೀಸಿಗೆ ಹೀಗೆ ಬರೆದರು: “ಒಂದೇ ಕುಟುಂಬದೋಪಾದಿ ಅವರೆಲ್ಲರೂ ಐಕ್ಯರಾಗಿದ್ದಾರೆ ಮತ್ತು ಯಾರೂ ಸಿಡುಕು ಸ್ವಭಾವದವರಾಗಿಲ್ಲ.” ಸ್ವಲ್ಪ ಸಮಯದ ನಂತರ ಅವರು, 40 ಕಿಲೊಮೀಟರ್‌ ದೂರದಲ್ಲಿರುವ ಅರೂಲಿಗೊ ಎಂಬ ತನ್ನ ಊರಿಗೆ ಹಿಂದಿರುಗಿದಾಗ, ತನ್ನ ಕುಟುಂಬದ ಸಹಾಯದೊಂದಿಗೆ ತಮ್ಮ ಸ್ವಂತ ರಾಜ್ಯ ಸಭಾಗೃಹವನ್ನು ಕಟ್ಟಿದರು. ನಂತರ ಅವರು ಆಫೀಸಿಗೆ ಇನ್ನೊಂದು ಸಂದೇಶವನ್ನು ಕಳುಹಿಸಿದರು: “ನಮ್ಮ ರಾಜ್ಯ ಸಭಾಗೃಹವು ತಯಾರಾಗಿದೆ. ಅದರಲ್ಲಿ ವೇದಿಕೆಯು ಇದೆ. ಆದುದರಿಂದ ಇಲ್ಲಿ ಕೆಲವೊಂದು ಕೂಟಗಳನ್ನು ನಡೆಸಬಹುದೊ?” ಕೂಟಗಳನ್ನು ನಡೆಸಲಿಕ್ಕಾಗಿ ತಡವಿಲ್ಲದೆ ಏರ್ಪಾಡುಗಳನ್ನು ಮಾಡಲಾಯಿತು ಮತ್ತು ಈಗ 60ಕ್ಕಿಂತಲೂ ಹೆಚ್ಚು ಮಂದಿ ಕ್ರಮವಾಗಿ ಕೂಟಗಳಿಗೆ ಹಾಜರಾಗುತ್ತಾರೆ.

ಯೂರೋಪಿಯನ್‌ ಯೂನಿಯನ್‌ನ ಒಬ್ಬ ಸಲಹೆಗಾರರು, ಟುವಾಲುವಿನಲ್ಲಿ ಈ ನಿರ್ಮಾಣ ಯೋಜನೆಯನ್ನು ನೋಡಿ ಹೀಗಂದರು: “ಈ ಮಾತನ್ನು ನಿಮಗೆ ಎಲ್ಲರೂ ಹೇಳುತ್ತಿರಬಹುದಾದರೂ, ನನಗಂತೂ ಇದು ಒಂದು ಅದ್ಭುತವೇ ಸರಿ!” ಕೆಲಸಮಾಡಲು ಬಂದಿದ್ದ ಒಬ್ಬ ಸ್ವಯಂಸೇವಕರಿಗೆ, ಟೆಲಿಫೋನ್‌ ಎಕ್ಸ್‌ಚೆಂಜ್‌ನಲ್ಲಿ ಕೆಲಸಮಾಡುತ್ತಿದ್ದ ಒಬ್ಬ ಸ್ತ್ರೀ ಕೇಳಿದ್ದು: “ನೀವೆಲ್ಲರೂ ಹೇಗೆ ಅಷ್ಟೊಂದು ಖುಷಿಯಿಂದಿದ್ದೀರಿ? ಇಲ್ಲಿ ಎಷ್ಟು ಶೆಕೆಯಿದೆಯಲ್ಲ!” ಕ್ರೈಸ್ತರು ಇಂತಹ ಒಂದು ಪ್ರಾಯೋಗಿಕವಾದ ಹಾಗೂ ಸ್ವತ್ಯಾಗದ ಕೆಲಸವನ್ನು ಮಾಡುತ್ತಿರುವುದನ್ನು ಅವರು ನೋಡುತ್ತಿರುವುದು ಇದೇ ಮೊದಲ ಬಾರಿ.

ತ್ಯಾಗಗಳನ್ನು ಮಾಡಿದ್ದಕ್ಕಾಗಿ ವಿಷಾದವಿಲ್ಲ

“ಹೆಚ್ಚಾಗಿ ಬಿತ್ತುವವನು ಹೆಚ್ಚಾಗಿ ಕೊಯ್ಯುವನು” ಎಂದು ಬೈಬಲ್‌ 2 ಕೊರಿಂಥ 9:6ರಲ್ಲಿ ಹೇಳುತ್ತದೆ. ಅಂತೆಯೇ, ಈ ಸ್ವಯಂಸೇವಕರು, ಅವರ ಕುಟುಂಬಗಳು ಮತ್ತು ಅವರ ಸಭೆಗಳು, ಪೆಸಿಫಿಕ್‌ ಪ್ರದೇಶದಲ್ಲಿರುವ ತಮ್ಮ ಜೊತೆ ಸಾಕ್ಷಿಗಳಿಗೆ ಸಹಾಯಮಾಡುವ ವಿಷಯದಲ್ಲಿ ಧಾರಾಳವಾಗಿ ಬಿತ್ತುತ್ತಾ ಇದ್ದಾರೆ. “ನನ್ನ ವಿಮಾನದ ಖರ್ಚಿನಲ್ಲಿ ತೃತೀಯಾಂಶಕ್ಕಿಂತಲೂ ಹೆಚ್ಚನ್ನು ನನ್ನ ಸಭೆಯೇ ಕೊಟ್ಟಿತು, ಮತ್ತು ನನ್ನೊಂದಿಗೆ ಬಂದ ನನ್ನ ಮೈದುನ 500 ಡಾಲರುಗಳನ್ನು ಕೊಟ್ಟನು” ಎಂದು ಸಿಡ್ನಿಯ ಬಳಿ, ಕಿನ್‌ಕಂಬರ್‌ ಎಂಬಲ್ಲಿಂದ ಬಂದಿರುವ ರಾಸ್‌ ಎಂಬ ಹಿರಿಯನು ಹೇಳುತ್ತಾನೆ. ಇನ್ನೊಬ್ಬ ಸ್ವಯಂಸೇವಕನು ತನ್ನ ಕಾರನ್ನು ಮಾರಿ, ಪ್ರಯಾಣಕ್ಕಾಗಿ ಹಣವನ್ನು ಪಡೆದನು. ಇನ್ನೊಬ್ಬನು ಸ್ವಲ್ಪ ಜಮೀನನ್ನು ಮಾರಿಬಿಟ್ಟನು. ಕೆವಿನ್‌ ಎಂಬವನಿಗೆ 900 ಡಾಲರುಗಳ ಕೊರತೆಯಿತ್ತು. ಆದುದರಿಂದ ಅವನು ತನ್ನ ಎರಡು ವರ್ಷ ಪ್ರಾಯದ 16 ಪಾರಿವಾಳಗಳನ್ನು ಮಾರಲು ನಿರ್ಣಯಿಸಿದನು. ಒಬ್ಬ ಪರಿಚಯಸ್ಥನ ಮೂಲಕ, ಆ ಪಾರಿವಾಳಗಳಿಗಾಗಿ ಸರಿಯಾಗಿ 900 ಡಾಲರುಗಳನ್ನು ಕೊಟ್ಟು ಖರೀದಿಸಿದ ಒಬ್ಬ ಗಿರಾಕಿಯನ್ನು ಕಂಡುಕೊಂಡನು!

“ವಿಮಾನದ ಟಿಕೇಟು ಮತ್ತು ಒಂದುವೇಳೆ ತಮ್ಮ ಐಹಿಕ ಕೆಲಸಕ್ಕೆ ಹೋಗುತ್ತಿದ್ದಲ್ಲಿ ಪಡೆಯಸಾಧ್ಯವಿದ್ದ ಸಂಬಳವನ್ನು ಸೇರಿಸಿದರೆ ಒಟ್ಟಿನಲ್ಲಿ ಸುಮಾರು 6,000 ಡಾಲರುಗಳಷ್ಟು ಆಗುತ್ತಿತ್ತು. ಇದೆಲ್ಲವೂ ಸಾರ್ಥಕವಾಗಿತ್ತೊ?” ಎಂದು ಡ್ಯಾನಿ ಮತ್ತು ಶೆರಲ್‌ರನ್ನು ಕೇಳಲಾಯಿತು. “ಖಂಡಿತವಾಗಿಯೂ ಹೌದು. ಆ ಎಲ್ಲ ಖರ್ಚು ಇಮ್ಮಡಿಯಾಗಿರುತ್ತಿದ್ದರೂ, ಅದು ಸಾರ್ಥಕವಾಗಿರುತ್ತಿತ್ತು” ಎಂದು ಅವರು ಉತ್ತರಿಸಿದರು. ನ್ಯೂ ಸೀಲೆಂಡ್‌ನ ನೆಲ್ಸನ್‌ನಿಂದ ಬಂದಿದ್ದ ಆ್ಯಲನ್‌ ಕೂಡಿಸಿದ್ದು: “ಟುವಾಲುವಿಗೆ ಹೋಗಲು ನಾನು ಖರ್ಚುಮಾಡಿದ ಹಣದೊಂದಿಗೆ, ನಾನು ಯೂರೋಪಿಗೆ ಹೋಗಿಯೂ ಸ್ವಲ್ಪ ಹಣವನ್ನು ಉಳಿಸಬಹುದಿತ್ತು. ಆದರೆ ನನಗೆ ಈ ಎಲ್ಲ ಆಶೀರ್ವಾದಗಳು ಸಿಗುತ್ತಿದ್ದವೊ, ಅಥವಾ ವಿಭಿನ್ನ ಹಿನ್ನಲೆಗಳ ಇಷ್ಟೊಂದು ಮಿತ್ರರು ಸಿಗುತ್ತಿದ್ದರೊ, ಇಲ್ಲವೇ ನನ್ನನ್ನು ಬಿಟ್ಟು ಬೇರೆಯವರಿಗಾಗಿ ಏನನ್ನಾದರೂ ಮಾಡುವ ಅವಕಾಶ ಸಿಗುತ್ತಿತ್ತೊ? ಖಂಡಿತವಾಗಿಯೂ ಇಲ್ಲ. ಅಷ್ಟುಮಾತ್ರವಲ್ಲದೆ, ಆ ದ್ವೀಪದಲ್ಲಿರುವ ನನ್ನ ಸಹೋದರರಿಗೆ ನಾನು ಏನನ್ನು ಕೊಟ್ಟೆನೊ, ಅದಕ್ಕಿಂತಲೂ ಎಷ್ಟೋ ಹೆಚ್ಚಿನದ್ದನ್ನು ಅವರು ನನಗೆ ಹಿಂದಿರುಗಿ ಕೊಟ್ಟರು.”

ಈ ನಿರ್ಮಾಣ ಕಾರ್ಯಕ್ರಮದ ಯಶಸ್ಸಿಗೆ ಕಾರಣವಾಗಿರುವ ಇನ್ನೊಂದು ಮುಖ್ಯಾಂಶವು, ಈ ಸ್ವಯಂಸೇವಕರ ಕುಟುಂಬಗಳ ಬೆಂಬಲವಾಗಿದೆ. ಕೆಲವು ಪತ್ನಿಯರು ತಮ್ಮ ಗಂಡಂದಿರೊಂದಿಗೆ ಹೋಗಲು ಮತ್ತು ಕಟ್ಟಡ ನಿವೇಶನದಲ್ಲಿ ಸಹಾಯಮಾಡಲೂ ಶಕ್ತರಾಗಿರುತ್ತಾರೆ. ಆದರೆ ಇನ್ನೂ ಕೆಲವರಿಗೆ ಶಾಲೆಗೆ ಹೋಗುವ ಮಕ್ಕಳಿದ್ದಾರೆ ಅಥವಾ ಕುಟುಂಬದ ವ್ಯಾಪಾರವನ್ನು ನೋಡಿಕೊಳ್ಳಬೇಕಾಗುತ್ತದೆ. ಆದುದರಿಂದ ಅವರು ತಮ್ಮ ಗಂಡಂದಿರೊಂದಿಗೆ ಹೋಗಲಾರರು. “ನಾನು ಇಲ್ಲದಿರುವಾಗ, ಮಕ್ಕಳನ್ನು ಮತ್ತು ಮನೆಯನ್ನು ನೋಡಿಕೊಳ್ಳಲು ನನ್ನ ಪತ್ನಿಯು ಸಿದ್ಧಳಾಗಿದ್ದಳು. ಇದು ನಾನು ಮಾಡಿದ ತ್ಯಾಗಕ್ಕಿಂತಲೂ ಹೆಚ್ಚು ದೊಡ್ಡ ತ್ಯಾಗವಾಗಿದೆ” ಎಂದು ಕ್ಲೇ ಹೇಳುತ್ತಾರೆ. ತಮ್ಮ ಹೆಂಡತಿಯರನ್ನು ತಮ್ಮೊಂದಿಗೆ ಕರೆದುಕೊಂಡು ಹೋಗಲಾಗದ ಗಂಡಂದಿರೆಲ್ಲರೂ ಖಂಡಿತವಾಗಿಯೂ ಈ ಮಾತುಗಳೊಂದಿಗೆ ಮನಃಪೂರ್ವಕವಾಗಿ ಸಮ್ಮತಿಸುವರು!

ಟುವಾಲುವಿನಲ್ಲಿನ ನಿರ್ಮಾಣ ಕೆಲಸವು ಮುಗಿದ ನಂತರ, ಈ ಸ್ವಯಂ ಸೇವಕರು, ಫಿಜಿ, ಟೊಂಗಾ, ಪ್ಯಾಪುವ ನ್ಯೂ ಗಿನೀ, ನ್ಯೂ ಕ್ಯಾಲೆಡೋನಿಯ ಮತ್ತು ಬೇರೆ ಸ್ಥಳಗಳಲ್ಲಿಯೂ ರಾಜ್ಯ ಸಭಾಗೃಹಗಳು, ಅಸೆಂಬ್ಲಿ ಹಾಲ್‌ಗಳು, ಮಿಷನೆರಿ ಗೃಹಗಳು ಮತ್ತು ಭಾಷಾಂತರಗಾರರಿಗಾಗಿ ಆಫೀಸುಗಳನ್ನು ನಿರ್ಮಿಸಿದ್ದಾರೆ. ದಕ್ಷಿಣ ಆಗ್ನೇಯ ಏಷಿಯದಲ್ಲಿ ಕೆಲವೊಂದು ಸ್ಥಳಗಳನ್ನು ಸೇರಿಸಿ, ಅನೇಕ ನಿರ್ಮಾಣ ಕೆಲಸಗಳಿಗಾಗಿ ಯೋಜನೆಗಳು ತಯಾರಾಗುತ್ತಾ ಇವೆ. ಆದರೆ ಇವೆಲ್ಲವುಗಳಿಗಾಗಿ ಸಾಕಷ್ಟು ಕೆಲಸಗಾರರಿರುವರೊ?

ಇದು ಒಂದು ಸಮಸ್ಯೆಯಾಗಿರಲಿಕ್ಕಿಲ್ಲ. ಏಕೆ? “ಅಂತಾರಾಷ್ಟ್ರೀಯ ಕಟ್ಟಡ ನಿರ್ಮಾಣ ಯೋಜನೆಗಳಲ್ಲಿ ಪಾಲ್ಗೊಂಡಿರುವ ಪ್ರತಿಯೊಬ್ಬ ವ್ಯಕ್ತಿಯು, ಮುಂದಿನ ಕಾರ್ಯಯೋಜನೆಯು ಸಿದ್ಧವಾಗುವಾಗ ತಮ್ಮನ್ನು ಕರೆಯುವಂತೆ ಕೇಳಿಕೊಂಡಿದ್ದಾರೆ” ಎಂದು ಹವಾಯೀ ಬ್ರಾಂಚ್‌ ಆಫೀಸು ಹೇಳುತ್ತದೆ. “ಇವರೆಲ್ಲರೂ ತಮ್ಮ ಮನೆಗೆ ಹಿಂದಿರುಗಿದ ಕೂಡಲೇ, ಈ ಕೆಲಸಕ್ಕಾಗಿ ಹಣವನ್ನು ಒಟ್ಟುಗೂಡಿಸಲು ಆರಂಭಿಸುತ್ತಾರೆ.” ಈ ರೀತಿಯ ನಿಸ್ವಾರ್ಥ ಸಮರ್ಪಣಾಭಾವಕ್ಕೆ ಯೆಹೋವನ ಹೇರಳವಾದ ಆಶೀರ್ವಾದವನ್ನು ಕೂಡಿಸುವಾಗ, ಈ ನಿರ್ಮಾಣ ಕಾರ್ಯಕ್ರಮವು ಖಂಡಿತವಾಗಿಯೂ ಸಫಲವಾಗುವುದು ಅಲ್ಲವೇ?

[ಪುಟ 9ರಲ್ಲಿರುವ ಚಿತ್ರ]

ನಿರ್ಮಾಣ ಕಾರ್ಯಕ್ಕಾಗಿ ಸಾಮಾಗ್ರಿಗಳು

[ಪುಟ 9ರಲ್ಲಿರುವ ಚಿತ್ರ]

ನಿವೇಶನದಲ್ಲಿ ಕೆಲಸಗಾರರ ತಂಡ

[ಪುಟ 10ರಲ್ಲಿರುವ ಚಿತ್ರ]

ನಿರ್ಮಾಣ ಕಾರ್ಯಗಳು ಮುಗಿದಾಗ, ದೇವರಾತ್ಮವು ಪೂರೈಸಿದಂತಹ ಕೆಲಸಕ್ಕಾಗಿ ನಾವು ಹರ್ಷಿಸಿದೆವು