ದ್ವೇಷವೆಂಬ ಪಿಡುಗು
ದ್ವೇಷವೆಂಬ ಪಿಡುಗು
“ಜನರು, ತಾವು ದ್ವೇಷಿಸುವಂತಹವರನ್ನು ಎಂದೂ ಅರ್ಥಮಾಡಿಕೊಳ್ಳುವುದಿಲ್ಲ.”—ಜೇಮ್ಸ್ ರಸಲ್ ಲೊವೆಲ್, ಪ್ರಬಂಧಕಾರ ಮತ್ತು ರಾಯಭಾರಿ.
ಇಂದು ನಾವು ಎಲ್ಲೆಲ್ಲೂ ದ್ವೇಷವನ್ನೇ ನೋಡಬಹುದು. ಪೂರ್ವ ಟಿಮೋರ್, ಕೊಸಾವೊ, ಲೈಬೀರಿಯಾ, ಲಿಟಲ್‌ಟನ್ ಮತ್ತು ಸಾರಯೆವೊ ಎಂಬ ದೇಶಗಳ ಹೆಸರುಗಳು ಹಾಗೂ ನಿಯೊ ನಾಸಿ, ಸ್ಕಿನ್‌ಹೆಡ್, ಮತ್ತು ಬಿಳಿ ಜಾತೀಯವಾದಿ ಎಂಬಂತಹ ಪದಗಳು ನಮ್ಮ ಮನಸ್ಸಿನಲ್ಲಿ ಅಚ್ಚೊತ್ತಲ್ಪಟ್ಟಿವೆ. ಅಷ್ಟುಮಾತ್ರವಲ್ಲದೆ, ಸುಟ್ಟು ಕರಕಲಾಗಿರುವ ದೇಹಗಳು, ಹೊಸತಾಗಿ ಅಗೆಯಲಾಗಿರುವ ಸಾಮೂಹಿಕ ಸಮಾಧಿಗಳು ಮತ್ತು ಶವಗಳ ಚಿತ್ರಗಳು ನಮ್ಮ ಕಣ್ಮುಂದೆ ಸುಳಿದಾಡುತ್ತಾ ಇರುತ್ತವೆ.
ದ್ವೇಷ, ಜಗಳ ಮತ್ತು ಹಿಂಸಾಚಾರವಿಲ್ಲದಿರುವ ಒಂದು ಭವಿಷ್ಯತ್ತಿನ ಕುರಿತಾದ ಕನಸುಗಳೆಲ್ಲವೂ ನುಚ್ಚುನೂರಾಗಿವೆ. ಮಾಜಿ ಫ್ರೆಂಚ್ ಅಧ್ಯಕ್ಷರ ಹೆಂಡತಿಯಾದ ಡ್ಯಾನಿಯೇಲಾ ಮಿಟರೆಂಡ್‌ರವರು, ತಮ್ಮ ಯುವ ಪ್ರಾಯವನ್ನು ಸ್ಮರಿಸಿಕೊಳ್ಳುತ್ತಾ ಹೇಳಿದ್ದು: “ಜನರು, ತಾವು ಭರವಸೆಯನ್ನಿಡಬಹುದಾದ ಸಹೋದರತ್ವದ ಒಂದು ಸಮಾಜದಲ್ಲಿ ಸ್ವತಂತ್ರರಾಗಿ ಜೀವಿಸುವುದರ, ಮನಶ್ಶಾಂತಿಯಿಂದ ಹಾಗೂ ಬೇರೆಯವರೊಂದಿಗೆ ಶಾಂತಿಯಿಂದ ಜೀವಿಸುವ ಕನಸನ್ನು ಕಾಣುತ್ತಿದ್ದರು; ತಮ್ಮನ್ನು ಪರಾಮರಿಸುವ ಒಂದು ಪ್ರಬಲವಾದ ಮತ್ತು ಉದಾರಭಾವದ ಜಗತ್ತಿನಲ್ಲಿ ಒಳ್ಳೆಯ ಆರೋಗ್ಯದಿಂದ, ಶಾಂತಿಸಮಾಧಾನದಿಂದ ಮತ್ತು ಘನತೆಯಿಂದ ಬಾಳುವ ಕನಸನ್ನು ಅವರು ಕಂಡರು.” ಆದರೆ ಈ ಎಲ್ಲ ಆದರ್ಶ ಕನಸುಗಳಿಗೆ ಏನಾಯಿತು? ಡ್ಯಾನಿಯೇಲಾರವರು ದುಃಖದಿಂದ ಹೇಳಿದ್ದು: “ಇಂದು, ಅರ್ಧ ಶತಮಾನದ ಬಳಿಕ ಆ ನಮ್ಮ ಕನಸುಗಳಿಗೆ ಕಲ್ಲುಹಾಕಲಾಗಿದೆ ಎಂಬುದು ಒಪ್ಪತಕ್ಕ ಸಂಗತಿಯೇ.”
ಇಂದು ದ್ವೇಷದ ಪುನರಾಗಮನವನ್ನು ಅಲಕ್ಷಿಸಲು ಸಾಧ್ಯವೇ ಇಲ್ಲ. ಅದು ಹೆಚ್ಚು ವ್ಯಾಪಕವಾಗಿದೆ, ಮತ್ತು ಹೆಚ್ಚು ಎದ್ದುಕಾಣುವ ರೀತಿಗಳಲ್ಲಿ ತೋರಿಬರುತ್ತಿದೆ. ಈ ಹಿಂದೆ ಕೋಟಿಗಟ್ಟಲೆ ಜನರು ತಮಗಿರುವ ವ್ಯಕ್ತಿಗತ ಭದ್ರತೆಗೆ ಅಷ್ಟೊಂದು ಗಮನಕೊಡುತ್ತಿರಲಿಲ್ಲ. ಆದರೆ ಆ ಭದ್ರತೆಯ ಅನಿಸಿಕೆಯು, ಇಂದು ಹೆಚ್ಚಾಗುತ್ತಿರುವ ಉದ್ದೇಶರಹಿತ ದ್ವೇಷದ ಕೃತ್ಯಗಳಿಂದಾಗಿ ಕಡಿಮೆಯಾಗುತ್ತಾ ಇದೆ. ಯಾವುದೇ ಒಂದು ದ್ವೇಷದ ಕೃತ್ಯವು ಹಿಂದಿನ ಕೃತ್ಯಕ್ಕಿಂತ ಹೆಚ್ಚು ಘೋರವಾಗಿರುವಂತೆ ತೋರುತ್ತದೆ. ನಮ್ಮ ಸ್ವಂತ ಮನೆ ಅಥವಾ ದೇಶದಲ್ಲಿಯೇ ಅಂತಹ ದ್ವೇಷವು ಇರದೇ ಇದ್ದರೂ, ಬೇರಾವುದೊ ಸ್ಥಳದಲ್ಲಿ ಅದು ಇದ್ದೇ ಇದೆ. ಅದರ ಕುರಿತಾದ ಒಂದಲ್ಲ ಒಂದು ಘಟನೆಯನ್ನು ನಾವು ಪ್ರತಿದಿನವೂ, ಟಿವಿ ವಾರ್ತೆಗಳಲ್ಲಿ ಮತ್ತು ಸದ್ಯದ ಘಟನೆಗಳ ಕುರಿತಾದ ಪ್ರಸರಣಗಳಲ್ಲಿ ನೋಡುತ್ತೇವೆ. ಈಗೀಗ ಅದು ಇಂಟರ್‌ನೆಟ್‌ಗೂ ಪಸರಿಸಿದೆ. ಕೆಲವೊಂದು ಉದಾಹರಣೆಗಳನ್ನು ಪರಿಗಣಿಸಿರಿ.
ಗತ ದಶಕದಲ್ಲಿ, ರಾಷ್ಟ್ರೀಯತೆಯ ಭಾವನೆಯು ಹಿಂದೆಂದಿಗಿಂತಲೂ ಹೆಚ್ಚಿನ ಮಟ್ಟಕ್ಕೆ ಏರಿತು. ಅಂತಾರಾಷ್ಟ್ರೀಯ ವ್ಯವಹಾರಗಳಿಗಾಗಿರುವ ಹಾರ್ವಾಡ್ ಸೆಂಟರ್‌ನ ನಿರ್ದೇಶಕರಾದ ಜೋಸೇಫ್ ಎಸ್. ನೈ ಜೂನಿಯರ್ ಹೇಳಿದ್ದು: “ರಾಷ್ಟ್ರೀಯತೆಯ ಭಾವನೆಯು, ಲೋಕದ ಹೆಚ್ಚಿನ ಭಾಗಗಳಲ್ಲಿ ಕುಂದುತ್ತಿಲ್ಲ ಬದಲಾಗಿ ಹೆಚ್ಚೆಚ್ಚು ಬಲವಾಗುತ್ತಾ ಇದೆ. ಇಂದು ಲೋಕವು ಒಂದೇ ಒಂದು ಗುಂಪಾಗಿರುವ ಬದಲಿಗೆ, ಅನೇಕ ಪ್ರತ್ಯೇಕ ಗುಂಪುಗಳಾಗಿ ವಿಭಾಗಿಸಲ್ಪಟ್ಟಿದೆ. ಇದರಿಂದಾಗಿ, ಜಗಳಗಳು ಮತ್ತು ಯುದ್ಧಗಳ ಸಾಧ್ಯತೆಗಳು ಹೆಚ್ಚುತ್ತಿವೆ.”
ದ್ವೇಷವು ಇನ್ನೂ ಬೇರೆ ರೀತಿಗಳಲ್ಲಿಯೂ ತೋರಿಸಲ್ಪಡುತ್ತದೆ. ಆದರೆ ಅದು ತುಂಬ ಸ್ಪಷ್ಟವಾಗಿ ಗೋಚರಿಸದೆ ಇರಬಹುದು. ಅಂದರೆ, ಒಂದು ದೇಶ ಅಥವಾ ಒಂದು ನೆರೆಹೊರೆಯ ಗಡಿಯೊಳಗೆ ಅವಿತುಕೊಂಡಿರಬಹುದು. ಉದಾಹರಣೆಗೆ, ಕೆನಡ ದೇಶದಲ್ಲಿ ಐದು ಮಂದಿ ಸ್ಕಿನ್‌ಹೆಡ್ಸ್, ಒಬ್ಬ ವೃದ್ಧ ಸಿಖ್ ವ್ಯಕ್ತಿಯನ್ನು ಕೊಂದುಹಾಕಿದರು. “ಜಾತೀಯ ಸಹಿಷ್ಣುತೆಗಾಗಿ ಪ್ರಶಂಸಿಸಲಾಗುತ್ತಿರುವ ಒಂದು ದೇಶದಲ್ಲಿ” ನಡೆದಿರುವ ಈ ಘಟನೆಯು, “ಕೆಲವರು ಹೇಳುವಂತೆ ದ್ವೇಷ ಪಾತಕಗಳು ಪುನರುದಯಿಸುತ್ತಿವೆ ಎಂಬುದನ್ನು ಎತ್ತಿತೋರಿಸಿತು.” ಜರ್ಮನಿಯಲ್ಲಿ, ಉಗ್ರವಾದಿಗಳು ನಡೆಸಿದಂತಹ ಜಾತೀಯ ದಾಳಿಗಳು 1997ಕ್ಕಿಂತ ಹಿಂದಿನ ವರ್ಷಗಳಲ್ಲಿ ಒಂದೇ ಸಮನೆ ಇಳಿಯುತ್ತಾ ಹೋದವು, ಆದರೆ ಪುನಃ 1997ರಲ್ಲಿ 27 ಪ್ರತಿಶತ ಏರಿದವು. “ಇದೊಂದು ನಿರಾಶಾದಾಯಕ ಸ್ಥಿತಿಯಾಗಿದೆ,” ಎಂದು ಒಳಾಡಳಿತ ಮಂತ್ರಿ ಮ್ಯಾನ್‌ಫ್ರೆಡ್ ಕ್ಯಾಂತರ್ ಹೇಳಿದರು.
ಉತ್ತರ ಆಲ್ಬೇನಿಯದಲ್ಲಿ, 6,000ಕ್ಕಿಂತಲೂ ಹೆಚ್ಚು ಮಂದಿ ಮಕ್ಕಳು ತಮ್ಮ ಸ್ವಂತ ಮನೆಗಳಲ್ಲಿ ಬಹುಮಟ್ಟಿಗೆ ಬಂಧಿಗಳಾಗಿದ್ದಾರೆಂದು ಒಂದು ವರದಿಯು ಹೊರಗೆಡಹಿತು. ತಮ್ಮ ಕುಟುಂಬದ ಶತ್ರುಗಳಿಂದ ಗುಂಡಿಕ್ಕಿ ಕೊಲ್ಲಲ್ಪಡುವ ಭಯದಿಂದಾಗಿ ಅವರನ್ನು ಹೀಗೆ ಮನೆಯಲ್ಲಿ ಬಂಧಿಸಿಡಲಾಗುತ್ತದೆ. ಈ ಮಕ್ಕಳು, ಮನೆತನಗಳ ನಡುವಿನ ಹಗೆತನಕ್ಕೆ ಬಲಿಗಳಾಗಿದ್ದಾರೆ. ಇದು “ಸಾವಿರಾರು ಕುಟುಂಬಗಳ ಜೀವಿತವನ್ನೇ ಸ್ಥಗಿತಗೊಳಿಸಿದೆ.” ಫೆಡರಲ್ ಬ್ಯೂರೋ ಆಫ್ ಇನ್‌ವೆಸ್ಟಿಗೇಷನ್ (ಎಫ್‌ಬಿಐ)ಗನುಸಾರ, “1998ರಲ್ಲಿ ಎಫ್‌ಬಿಐಗೆ ವರದಿ
ಮಾಡಲ್ಪಟ್ಟ 7,755 ದ್ವೇಷದ ಪಾತಕಗಳಲ್ಲಿ ಅರ್ಧಕ್ಕಿಂತಲೂ ಹೆಚ್ಚಿನವು, ಜಾತೀಯ ಪೂರ್ವಾಗ್ರಹದಿಂದಲೇ ನಡೆಸಲ್ಪಟ್ಟವು.” ಉಳಿದ ಪಾತಕಗಳು, ಧರ್ಮ, ಜನಾಂಗೀಯ ಅಥವಾ ರಾಷ್ಟ್ರೀಯ ಮೂಲ ಮತ್ತು ಅಂಗವಿಕಲತೆಗಳುಳ್ಳ ವ್ಯಕ್ತಿಗಳ ಕುರಿತಾದ ಪೂರ್ವಾಗ್ರಹದಿಂದಾಗಿ ನಡೆಸಲ್ಪಟ್ಟವು.ಇನ್ನೂ ಹೆಚ್ಚಾಗಿ, ವಾರ್ತಾಪತ್ರಿಕೆಗಳಲ್ಲಿ ಪ್ರತಿ ದಿನವೂ ಬರುವ ಮುಖ್ಯ ವಾರ್ತೆಯು, ಪರಕೀಯರ ಕಡೆಗಿನ ದ್ವೇಷದ ಕುರಿತಾಗಿ ಇರುತ್ತದೆ. ಇಂತಹ ದ್ವೇಷವು ವಿಶೇಷವಾಗಿ ನಿರಾಶ್ರಿತರ ವಿರುದ್ಧ ತೋರಿಸಲ್ಪಡುತ್ತದೆ. ಈಗ ಇಂತಹ ನಿರಾಶ್ರಿತರ ಸಂಖ್ಯೆಯು, 2 ಕೋಟಿ 10 ಲಕ್ಷವಾಗಿರುತ್ತದೆ. ದುಃಖಕರವಾದ ಸಂಗತಿಯೇನೆಂದರೆ, ವಿದೇಶೀಯರ ಕಡೆಗೆ ದ್ವೇಷವನ್ನು ತೋರಿಸುವವರಲ್ಲಿ ಅಧಿಕಾಂಶ ಮಂದಿ ಯುವ ಜನರಾಗಿದ್ದಾರೆ. ಮತ್ತು ಈ ಯುವ ಜನರನ್ನು ಪ್ರೋತ್ಸಾಹಿಸುತ್ತಿರುವವರು, ಬೇಜವಾಬ್ದಾರಿ ರಾಜಕೀಯ ವ್ಯಕ್ತಿಗಳು ಮತ್ತು ತಮ್ಮ ಆರೋಪವನ್ನು ಇತರರ ಮೇಲೆ ಹೊರಿಸಲಿಕ್ಕಾಗಿ ಹುಡುಕುತ್ತಿರುವ ಇತರ ಜನರಾಗಿದ್ದಾರೆ. ಅದೇ ಸಮಸ್ಯೆಯು, ಬಹಳ ಅಸ್ಪಷ್ಟವಾದ ರೀತಿಗಳಲ್ಲಿಯೂ ವ್ಯಕ್ತವಾಗುತ್ತದೆ. ಇದರಲ್ಲಿ, ತಮ್ಮಿಂದ ಭಿನ್ನರಾಗಿರುವ ಜನರ ಮೇಲೆ ಅಪನಂಬಿಕೆ, ಅವರ ಕಡೆಗೆ ಅಸಹಿಷ್ಣುತೆಯನ್ನು ತೋರಿಸುವುದು ಮತ್ತು ‘ಅವರೆಲ್ಲರೂ ಹೀಗೆಯೇ’ ಎಂದು ಅವರ ಇಡೀ ಜಾತಿಯ ಬಗ್ಗೆ ಒಂದು ನಿರ್ದಿಷ್ಟ ಅಭಿಪ್ರಾಯವನ್ನು ತಾಳುವುದು ಸೇರಿರುತ್ತದೆ.
ಆದರೆ ಈ ದ್ವೇಷವೆಂಬ ಪಿಡುಗಿನ ಕೆಲವೊಂದು ಕಾರಣಗಳು ಯಾವುವು? ಮತ್ತು ದ್ವೇಷವನ್ನು ಬೇರುಸಮೇತ ಕಿತ್ತುಹಾಕಲು ಏನನ್ನು ಮಾಡಸಾಧ್ಯವಿದೆ? ಮುಂದಿನ ಲೇಖನದಲ್ಲಿ ಈ ಪ್ರಶ್ನೆಗಳನ್ನು ಚರ್ಚಿಸಲಾಗುವುದು.
[ಪುಟ 3ರಲ್ಲಿರುವ ಚಿತ್ರ ಕೃಪೆ]
Daud/Sipa Press