ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನೀವು ಒಬ್ಬ “ಪ್ರಾಯಸ್ಥ” ಕ್ರೈಸ್ತರಾಗಿದ್ದೀರೋ?

ನೀವು ಒಬ್ಬ “ಪ್ರಾಯಸ್ಥ” ಕ್ರೈಸ್ತರಾಗಿದ್ದೀರೋ?

ನೀವು ಒಬ್ಬ “ಪ್ರಾಯಸ್ಥ” ಕ್ರೈಸ್ತರಾಗಿದ್ದೀರೋ?

“ನಾನು ಬಾಲಕನಾಗಿದ್ದಾಗ ಬಾಲಕನ ಮಾತುಗಳನ್ನಾಡಿದೆನು, ಬಾಲಕನ ಸುಖದುಃಖಗಳನ್ನು ಅನುಭವಿಸಿದೆನು, ಬಾಲಕನ ಆಲೋಚನೆಗಳನ್ನು ಮಾಡಿಕೊಂಡೆನು” ಎಂದು ಅಪೊಸ್ತಲ ಪೌಲನು ಬರೆದನು. ನಾವೆಲ್ಲರೂ ಒಂದಲ್ಲ ಒಂದು ಸಮಯದಲ್ಲಿ ನಿಸ್ಸಹಾಯಕ ಶಿಶುಗಳಾಗಿದ್ದೆವು ನಿಜ. ಆದರೆ ನಾವು ಶಿಶುಗಳಾಗಿಯೇ ಉಳಿಯಲಿಲ್ಲ. ಇದರ ಬಗ್ಗೆ ಪೌಲನು ಹೇಳಿದ್ದು: “ಪ್ರಾಯಸ್ಥನಾದ ಮೇಲೆ ಬಾಲ್ಯದವುಗಳನ್ನು ಬಿಟ್ಟುಬಿಟ್ಟೆನು.”—1 ಕೊರಿಂಥ 13:11.

ಅದೇ ರೀತಿಯಲ್ಲಿ, ಎಲ್ಲ ಕ್ರೈಸ್ತರು ಮೊದಮೊದಲು ಆತ್ಮಿಕವಾಗಿ ಶಿಶುಗಳಾಗಿರುತ್ತಾರೆ. ಆದರೆ ಕಾಲ ಕಳೆದಂತೆ, ಎಲ್ಲರೂ “ನಂಬಿಕೆಯಿಂದಲೂ ದೇವಕುಮಾರನ ವಿಷಯವಾದ ನಿಷ್ಕೃಷ್ಟ ಜ್ಞಾನದಿಂದಲೂ ಉಂಟಾಗುವ ಐಕ್ಯವನ್ನು ಹೊಂದಿ ಪ್ರಾಯಸ್ಥರಾಗಿ ಕ್ರಿಸ್ತನ ಪರಿಪೂರ್ಣತೆಯ ಪ್ರಮಾಣವನ್ನು” ಪಡೆದುಕೊಳ್ಳಸಾಧ್ಯವಿದೆ. (ಎಫೆಸ 4:13, NW) 1 ಕೊರಿಂಥ 14:20ರಲ್ಲಿ ನಮಗೆ ಈ ರೀತಿಯ ಬುದ್ಧಿವಾದವು ಕೊಡಲ್ಪಟ್ಟಿದೆ: ‘ಸಹೋದರರೇ, ಬುದ್ಧಿಯ ವಿಷಯದಲ್ಲಿ ಬಾಲಕರಾಗಿರಬೇಡಿರಿ; . . . ಬುದ್ಧಿಯ ವಿಷಯದಲ್ಲಿ ಪ್ರಾಯಸ್ಥರಾಗಿರಿ.’

ಪ್ರಾಯಸ್ಥ ಕ್ರೈಸ್ತರಿರುವುದು ನಿಜವಾಗಿಯೂ ಇಂದು ದೇವಜನರಿಗೆ ಒಂದು ವರವಾಗಿದೆ. ಅದರಲ್ಲೂ ವಿಶೇಷವಾಗಿ ಅನೇಕ ಹೊಸಬರು ನಮ್ಮ ಮಧ್ಯೆ ಇರುವುದರಿಂದ ಪ್ರಾಯಸ್ಥ ಕ್ರೈಸ್ತರು ಒಂದು ವರವಾಗಿದ್ದಾರೆ. ಸಭೆಯೊಂದು ಸ್ಥಿರವಾಗಿ ನಿಲ್ಲುವಂತೆ ಪ್ರಾಯಸ್ಥ ಕ್ರೈಸ್ತರು ಸಹಾಯಮಾಡುತ್ತಾರೆ. ಅವರು ಯಾವುದೇ ಸಭೆಯ ಜೊತೆ ಸಹವಾಸಮಾಡುತ್ತಿರಲಿ, ಅವರಿಗೆ ಅದರ ಬಗ್ಗೆ ಸಕಾರಾತ್ಮಕ ಮನೋಭಾವವಿರುತ್ತದೆ.

ನಮ್ಮ ಶಾರೀರಿಕ ಬೆಳವಣಿಗೆಯು ತನ್ನಿಂದ ತಾನೇ ಆಗುತ್ತದೆ. ಆದರೆ ಆತ್ಮಿಕ ಬೆಳವಣಿಗೆಯಾದರೋ ಸಮಯ ಹಾಗೂ ಪ್ರಯತ್ನದ ಮೂಲಕವೇ ಆಗುತ್ತದೆ. ಪೌಲನ ದಿನದಲ್ಲಿ, ಕೆಲವು ಕ್ರೈಸ್ತರು “ಪೂರ್ಣವಾದ ತಿಳುವಳಿಕೆಗೆ [“ಪ್ರೌಢತೆಗೆ,” NW] ಸಾಗುತ್ತಾ” ಹೋಗಲು ತಪ್ಪಿಹೋದರು. ಇವರು ಅನೇಕ ವರ್ಷಗಳಿಂದ ದೇವರಿಗೆ ಸೇವೆಸಲ್ಲಿಸುತ್ತಿದ್ದರಾದರೂ ಸಹ ತಪ್ಪಿಹೋದರು. (ಇಬ್ರಿಯ 5:12; 6:2) ನಿಮ್ಮ ಕುರಿತಾಗಿ ಏನು? ನೀವು ಯೆಹೋವನಿಗೆ ಅನೇಕ ವರ್ಷಗಳಿಂದ ಸೇವೆಸಲ್ಲಿಸುತ್ತಿರಲಿ ಇಲ್ಲವೇ ಸ್ವಲ್ಪ ಸಮಯದಿಂದ ಸೇವೆಸಲ್ಲಿಸುತ್ತಿರಲಿ, ನೀವು ನಿಮ್ಮ ಕುರಿತಾಗಿಯೇ ಪ್ರಾಮಾಣಿಕವಾಗಿ ಪರೀಕ್ಷಿಸಿಕೊಳ್ಳಬೇಕಾಗಿದೆ. (2 ಕೊರಿಂಥ 13:5) ಹಾಗಾದರೆ, ನೀವು ಪ್ರೌಢ ಇಲ್ಲವೇ ಪ್ರಾಯಸ್ಥ ಕ್ರೈಸ್ತರಾಗಿದ್ದೀರೋ? ಆಗಿರದಿರುವಲ್ಲಿ, ಅಂತಹ ಒಬ್ಬ ವ್ಯಕ್ತಿಯಾಗಲು ನೀವು ಏನು ಮಾಡಸಾಧ್ಯವಿದೆ?

‘ಬುದ್ಧಿಯ ವಿಷಯದಲ್ಲಿ ಪ್ರಾಯಸ್ಥರಾಗಿರಿ’

ಆತ್ಮಿಕವಾಗಿ ಶಿಶುಗಳಾಗಿರುವವರು, ಸುಲಭವಾಗಿ “ದುರ್ಜನರ ವಂಚನೆಗೂ ದುರ್ಬೋಧಕರ ಕುಯುಕ್ತಿಗೂ ಒಳಬಿದ್ದು ನಾನಾ ಉಪದೇಶಗಳಿಂದ ಕಂಗೆಟ್ಟು ಗಾಳಿಯಿಂದ ಅತ್ತಿತ್ತ ನೂಕಿಸಿ”ಕೊಳ್ಳುತ್ತಾರೆ. ಆದುದರಿಂದ ಪೌಲನು ಪ್ರೇರೇಪಿಸಿದ್ದು: ‘ಪ್ರೀತಿಯಿಂದ . . . ಬೆಳೆದು ಎಲ್ಲಾ ವಿಷಯಗಳಲ್ಲಿಯೂ ಕ್ರಿಸ್ತನ ಐಕ್ಯವನ್ನು ಹೊಂದುತ್ತಾ ಬರೋಣ.’ (ಎಫೆಸ 4:14, 15) ಒಬ್ಬನು ಹಾಗೆ ಮಾಡಲು ಹೇಗೆ ಸಾಧ್ಯವಿದೆ? ಇಬ್ರಿಯ 5:14 ಹೇಳುವುದು: “ಗಟ್ಟಿಯಾದ ಆಹಾರವು ಪ್ರಾಯಸ್ಥರಿಗೋಸ್ಕರ ಅಂದರೆ ಜ್ಞಾನೇಂದ್ರಿಯಗಳನ್ನು ಸಾಧನೆಯಿಂದ ಶಿಕ್ಷಿಸಿಕೊಂಡು ಇದು ಒಳ್ಳೇದು ಅದು ಕೆಟ್ಟದ್ದು ಎಂಬ ಭೇದವನ್ನು ತಿಳಿದವರಿಗೋಸ್ಕರವಾಗಿದೆ.”

ಪ್ರೌಢ ಜನರು ಬೈಬಲಿನ ತತ್ತ್ವಗಳನ್ನು ಉಪಯೋಗಿಸುತ್ತಾರೆ ಇಲ್ಲವೇ ಅವರಿಗೆ ಇದರಲ್ಲಿ ಅನುಭವವಿರುತ್ತದೆ. ಈ ಕಾರಣದಿಂದ ಅವರು ತಮ್ಮ ಬುದ್ಧಿಶಕ್ತಿಗಳನ್ನು ತರಬೇತುಗೊಳಿಸಿಕೊಳ್ಳುತ್ತಾರೆ. ಅಂದರೆ, ಒಬ್ಬನು ದಿನಬೆಳಗಾಗುವುದರಲ್ಲಿ ಪ್ರೌಢನಾಗುವುದಿಲ್ಲ, ಬದಲಾಗಿ ಆತ್ಮಿಕವಾಗಿ ಒಬ್ಬನು ಬೆಳೆಯಲಿಕ್ಕಾಗಿ ಸಮಯವು ತಗಲುತ್ತದೆ. ಆದುದರಿಂದ, ಆತ್ಮಿಕವಾಗಿ ಬೆಳೆಯಲು ನೀವು ವೈಯಕ್ತಿಕ ಅಧ್ಯಯನ ಮಾಡಸಾಧ್ಯವಿದೆ. ವಿಶೇಷವಾಗಿ, ದೇವರ ವಾಕ್ಯದ ಆಳವಾದ ವಿಷಯಗಳನ್ನು ನೀವು ಅಧ್ಯಯನಮಾಡಬಹುದು. ಇತ್ತೀಚೆಗೆ ಕಾವಲಿನಬುರುಜು ಪತ್ರಿಕೆಯು ಅನೇಕ ಆಳವಾದ ವಿಷಯಗಳ ಕುರಿತಾಗಿ ಚರ್ಚಿಸಿತು. ಇಂತಹ ಲೇಖನಗಳಲ್ಲಿರುವ “ಕೆಲವು ಮಾತುಗಳು ತಿಳಿಯುವದಕ್ಕೆ ಕಷ್ಟವಾಗಿವೆ” ಎಂದ ಮಾತ್ರಕ್ಕೆ, ಈ ಪ್ರೌಢ ಜನರು ಅವುಗಳನ್ನು ಬಿಟ್ಟುಬಿಡುವುದಿಲ್ಲ. (2 ಪೇತ್ರ 3:16) ಅದಕ್ಕೆ ಬದಲಾಗಿ, ಇವರು ಇಂತಹ ಗಟ್ಟಿಯಾದ ಆಹಾರವನ್ನು ಅತ್ಯಾತುರದಿಂದ ಸೇವಿಸುತ್ತಾರೆ!

ಹುರುಪುಳ್ಳ ಸೌವಾರ್ತಿಕರು ಹಾಗೂ ಶಿಕ್ಷಕರು

ಯೇಸು ತನ್ನ ಶಿಷ್ಯರಿಗೆ ಈ ನಿರ್ದೇಶನವನ್ನು ನೀಡಿದನು: “ನೀವು ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; ಅವರಿಗೆ ತಂದೆಯ, ಮಗನ, ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನಮಾಡಿಸಿ.” (ಮತ್ತಾಯ 28:19, 20) ಸಾರುವ ಕೆಲಸದಲ್ಲಿ ಹುರುಪಿನಿಂದ ಭಾಗವಹಿಸುವುದು ಸಹ ನಿಮ್ಮ ಆತ್ಮಿಕ ಬೆಳವಣಿಗೆಗೆ ಉತ್ತೇಜನವನ್ನು ನೀಡಸಾಧ್ಯವಿದೆ. ನಿಮ್ಮ ಪರಿಸ್ಥಿತಿಗಳು ಅನುಮತಿಸಿದ ಹಾಗೆ, ನೀವೇಕೆ ಅದರಲ್ಲಿ ಪೂರ್ಣವಾಗಿ ಪಾಲ್ಗೊಳ್ಳಲು ಪ್ರಯತ್ನಿಸಬಾರದು?—ಮತ್ತಾಯ 13:23.

ಕೆಲವೊಮ್ಮೆ, ಜೀವನದಲ್ಲಿ ಎದುರಾಗುವ ಕಷ್ಟತೊಂದರೆಗಳು, ಒತ್ತಡಗಳು, ಸಾರುವ ಕೆಲಸಕ್ಕಾಗಿ ಸಮಯವನ್ನು ಕಂಡುಕೊಳ್ಳಲು ಕಷ್ಟಕರವನ್ನಾಗಿ ಮಾಡುತ್ತವೆ. ಆದರೂ, ಸಾರುವವರೋಪಾದಿ ನೀವು ‘ಹೆಣಗಾಡುವ’ ಮೂಲಕ ‘ಸುವಾರ್ತೆಗೆ’ ಹೆಚ್ಚು ಪ್ರಮುಖತೆಯನ್ನು ತೋರಿಸುತ್ತೀರಿ. (ಲೂಕ 13:24; ರೋಮಾಪುರ 1:16) ಆಗ ನಿಮ್ಮನ್ನು “ನಂಬಿಗಸ್ತರಿಗೆ ಮಾದರಿಯಾಗಿ” (NW) ನೋಡಬಹುದು.—1 ತಿಮೊಥೆಯ 4:12.

ಯಥಾರ್ಥವಂತರು

ಪ್ರೌಢತೆಗೆ ಬೆಳೆಯುವುದರಲ್ಲಿ ಯಥಾರ್ಥತೆಯನ್ನು ಕಾಪಾಡಿಕೊಳ್ಳಲು ಪ್ರಯತ್ನ ಪಡುವುದು ಸಹ ಒಳಗೂಡಿದೆ. ಕೀರ್ತನೆ 26:1ರಲ್ಲಿ ದಾವೀದನು ಘೋಷಿಸಿದ್ದು: “ಯೆಹೋವನೇ, ನನಗೋಸ್ಕರ ನ್ಯಾಯವನ್ನು ನಿರ್ಣಯಿಸು. ನಾನಾದರೋ ನಿರ್ದೋಷಿಯಾಗಿಯೇ [“ಯಥಾರ್ಥವಂತನಾಗಿ,” NW] ನಡೆದುಕೊಂಡಿದ್ದೇನೆ.” ಯಥಾರ್ಥತೆಯು, ನೈತಿಕ ಸ್ಥಿರತೆ ಹಾಗೂ ಸಂಪೂರ್ಣತೆಯನ್ನು ಸೂಚಿಸುತ್ತದೆ. ಆದರೆ ಇದರ ಅರ್ಥ ಪರಿಪೂರ್ಣವಾಗಿರುವುದು ಎಂದಲ್ಲ. ಉದಾಹರಣೆಗೆ, ದಾವೀದನೇ ಸ್ವತಃ ಅನೇಕ ಗಂಭೀರವಾದ ಪಾಪಗಳನ್ನು ಮಾಡಿದನು. ಆದರೂ ಅವನು ಖಂಡನೆಯನ್ನು ಸ್ವೀಕರಿಸಿ, ತನ್ನ ಮಾರ್ಗವನ್ನು ಸರಿಪಡಿಸಿಕೊಳ್ಳುವುದರ ಮುಖಾಂತರ, ತನ್ನ ಹೃದಯದಲ್ಲಿ ಇನ್ನೂ ಯೆಹೋವನ ಕಡೆಗೆ ನಿಜವಾದ ಪ್ರೀತಿಯಿದೆ ಎಂಬುದನ್ನು ಅವನು ತೋರಿಸಿದನು. (ಕೀರ್ತನೆ 26:2, 3, 6, 8, 11) ಯಥಾರ್ಥತೆಯೆಂದರೆ, ಸಂಪೂರ್ಣ ಹೃದಯದಿಂದ ಭಕ್ತಿಯನ್ನು ತೋರಿಸುವುದಾಗಿದೆ. ದಾವೀದನು ತನ್ನ ಮಗನಾದ ಸೊಲೊಮೋನನಿಗೆ ಹೇಳಿದ್ದು: ‘ನಿನ್ನ ತಂದೆಯ ದೇವರನ್ನು ಅರಿತುಕೊಂಡು ಸಂಪೂರ್ಣಹೃದಯದಿಂದ . . . ಆತನನ್ನೇ ಸೇವಿಸು.’—1 ಪೂರ್ವಕಾಲವೃತ್ತಾಂತ 28:9.

ಯಥಾರ್ಥತೆಯನ್ನು ಕಾಪಾಡಿಕೊಳ್ಳುವುದು “ಲೋಕದ ಭಾಗವಾಗಿರದೇ” (NW) ಇರುವುದನ್ನು ಒಳಗೂಡುತ್ತದೆ. ಅಂದರೆ, ರಾಜಕೀಯದಲ್ಲಿ ಮತ್ತು ಯುದ್ಧಗಳಲ್ಲಿ ಭಾಗವಹಿಸದೇ ಇರುವುದಾಗಿದೆ. (ಯೋಹಾನ 17:16) ಅಷ್ಟುಮಾತ್ರವಲ್ಲದೆ, ನೀವು ಭ್ರಷ್ಟ ಆಚಾರಗಳಿಂದ, ಅಂದರೆ ಜಾರತ್ವ, ವ್ಯಭಿಚಾರ, ಮತ್ತು ಮಾದಕ ಪದಾರ್ಥಗಳ ದುರುಪಯೋಗದಿಂದ ಸಹ ದೂರವಿರತಕ್ಕದ್ದು. (ಗಲಾತ್ಯ 5:19-21) ಯಥಾರ್ಥತೆಯನ್ನು ಕಾಪಾಡಿಕೊಳ್ಳುವುದು ಈ ವಿಷಯಗಳಿಂದ ದೂರವಿರುವುದಕ್ಕಿಂತಲೂ ಹೆಚ್ಚಿನ ವಿಷಯವನ್ನು ಒಳಗೂಡುತ್ತದೆ. ಸೊಲೋಮೋನನು ಎಚ್ಚರಿಸಿದ್ದು: “ಸತ್ತ ನೊಣಗಳಿಂದ ಗಂದಿಗನ ತೈಲವು ಕೊಳೆತು ನಾರುವದು; ಹಾಗೆಯೇ ಹುಚ್ಚುತನ ಸ್ವಲ್ಪವಾದರೂ ಜ್ಞಾನಮಾನಗಳನ್ನು ಮುಚ್ಚಿ ಮೀರುವದು.” (ಪ್ರಸಂಗಿ 10:1) ಹೌದು, “ಹುಚ್ಚುತನ” ಅಂದರೆ, ವಿರುದ್ಧ ಲಿಂಗದವರೊಂದಿಗೆ ಅಶ್ಲೀಲವಾದಂತಹ ಜೋಕ್‌ ಹೇಳುವುದು ಇಲ್ಲವೇ ಚೆಲ್ಲಾಟವಾಡುವುದು “ಜ್ಞಾನಮಾನಗಳನ್ನು” ಹೊಂದಿರುವವರು ಎಂಬ ಖ್ಯಾತಿಯನ್ನು ಹಾನಿಗೊಳಿಸಸಾಧ್ಯವಿದೆ. (ಯೋಬ 31:1) ಆದುದರಿಂದ, ನಿಮ್ಮ ನಡೆನುಡಿಯಲ್ಲಿ ಅತ್ಯುತ್ತಮ ಮಾದರಿಯನ್ನಿಡುವ ಮೂಲಕ ಪ್ರೌಢತೆಯನ್ನು ತೋರಿಸಿರಿ. “ದುಷ್ಟತನದ ಚಹರೆಯೂ” ನಿಮಲ್ಲಿರಬಾರದು.—1 ಥೆಸಲೊನೀಕ 5:22, ಕಿಂಗ್‌ ಜೇಮ್ಸ್‌ ವರ್ಷನ್‌.

ನಿಷ್ಠಾವಂತರು

ಪ್ರಾಯಸ್ಥ ಕ್ರೈಸ್ತನು ನಿಷ್ಠಾವಂತನಾಗಿದ್ದಾನೆ ಸಹ. ಎಫೆಸ 4:23, 24ರಲ್ಲಿ ನಾವು ಓದುವಂತೆ, ಅಪೊಸ್ತಲ ಪೌಲನು ಕ್ರೈಸ್ತರಿಗೆ ಬುದ್ಧಿವಾದವನ್ನು ನೀಡುವುದು: “ನೂತನಸ್ವಭಾವವನ್ನು ಧರಿಸಿಕೊಳ್ಳಿರಿ. ಆ ಸ್ವಭಾವವು ದೇವರ ಹೋಲಿಕೆಯ ಮೇರೆಗೆ ಸತ್ಯಾನುಗುಣವಾದ ನೀತಿಯುಳ್ಳದ್ದಾಗಿಯೂ ದೇವಭಯವುಳ್ಳದ್ದಾಗಿಯೂ [“ನಿಷ್ಠೆಯಲ್ಲಿ,” NW] ನಿರ್ಮಿಸಲ್ಪಟ್ಟಿದೆ.” ಗ್ರೀಕ್‌ ಶಾಸ್ತ್ರವಚನಗಳಲ್ಲಿ, “ನಿಷ್ಠೆ” ಎಂಬುದಕ್ಕಾಗಿರುವ ಮೂಲ ಭಾಷೆಯ ಪದವು ಪವಿತ್ರತೆ, ನೀತಿ, ಹಾಗೂ ಪೂಜ್ಯಭಾವನೆಯ ಅರ್ಥವನ್ನು ಹೊಂದಿದೆ. ನಿಷ್ಠಾವಂತನು ಶ್ರದ್ಧಾಳು, ಭಕ್ತಿಯುಳ್ಳ ವ್ಯಕ್ತಿಯಾಗಿದ್ದಾನೆ. ಅವನು ದೇವರ ಕಡೆಗೆ ತನಗಿರುವ ಎಲ್ಲ ಕರ್ತವ್ಯಗಳನ್ನು ಜಾಗರೂಕವಾಗಿ ಪೂರೈಸುತ್ತಾನೆ.

ಅಂತಹ ನಿಷ್ಠೆಯನ್ನು ಬೆಳೆಸಿಕೊಳ್ಳಬಹುದಾದ ಕೆಲವು ವಿಧಗಳಾವುವು? ಒಂದು ವಿಧವು, ನಿಮ್ಮ ಸ್ಥಳಿಕ ಸಭೆಯ ಹಿರಿಯರೊಂದಿಗೆ ಸಹಕರಿಸುವುದೇ ಆಗಿದೆ. (ಇಬ್ರಿಯ 13:17) ಕ್ರಿಸ್ತನು ಕ್ರೈಸ್ತ ಸಭೆಯ ನೇಮಿಸಲ್ಪಟ್ಟ ಶಿರಸ್ಸಾಗಿದ್ದಾನೆ ಎಂಬುದನ್ನು ಗ್ರಹಿಸುತ್ತಾ, ಪ್ರೌಢ ಕ್ರೈಸ್ತರು “ಸಭೆಯನ್ನು ಪರಿಪಾಲಿಸುವದಕ್ಕಾಗಿ” ನೇಮಿಸಲ್ಪಟ್ಟವರಿಗೆ ನಿಷ್ಠಾವಂತರಾಗಿರುತ್ತಾರೆ. (ಅ. ಕೃತ್ಯಗಳು 20:28) ನೇಮಿಸಲ್ಪಟ್ಟ ಹಿರಿಯರ ಅಧಿಕಾರಕ್ಕೆ ಸವಾಲನ್ನೆಸೆಯುವುದು ಇಲ್ಲವೇ ಅವರ ಅಧಿಕಾರವನ್ನು ಬುಡಮೇಲು ಮಾಡುವುದು ಎಷ್ಟು ಅನುಚಿತವಾಗಿರುವುದು! “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಹಾಗೂ “ಹೊತ್ತುಹೊತ್ತಿಗೆ” ಆತ್ಮಿಕ “ಆಹಾರ”ವನ್ನು ನೀಡಲು ಉಪಯೋಗಿಸಲ್ಪಡುತ್ತಿರುವ ಮಾಧ್ಯಮಗಳಿಗೆ ಸಹ ನಾವು ನಿಷ್ಠಾವಂತರಾಗಿರತಕ್ಕದ್ದು. (ಮತ್ತಾಯ 24:45) ಕಾವಲಿನಬುರುಜು ಮತ್ತು ಇನ್ನಿತರ ಪ್ರಕಾಶನಗಳಲ್ಲಿ ಕಂಡುಬರುವ ಮಾಹಿತಿಯನ್ನು ಓದಿ, ಜೀವಿತದಲ್ಲಿ ಅನ್ವಯಿಸಿಕೊಳ್ಳಲು ಕಾತುರರಾಗಿರಿ.

ನಿಮ್ಮ ಕ್ರಿಯೆಗಳಿಂದ ಪ್ರೀತಿಯನ್ನು ತೋರಿಸಿರಿ

ಥೆಸಲೊನೀಕದಲ್ಲಿರುವ ಕ್ರೈಸ್ತರಿಗೆ ಪೌಲನು ಬರೆದುದು: “ಪರಸ್ಪರವಾದ ಪ್ರೀತಿ ನಿಮ್ಮೆಲ್ಲರಲ್ಲಿಯೂ ಹೆಚ್ಚುತ್ತಾ ಬರುತ್ತದೆ.” (2 ಥೆಸಲೊನೀಕ 1:3) ಆತ್ಮಿಕ ಬೆಳವಣಿಗೆಗೆ ಅತಿ ಮುಖ್ಯವಾದ ಅಂಶವು, ಪ್ರೀತಿಯಲ್ಲಿ ಬೆಳೆಯುವುದಾಗಿದೆ. ಯೋಹಾನ 13:35ರಲ್ಲಿರುವಂತೆ ಯೇಸು ಹೇಳಿದ್ದು: “ನಿಮ್ಮೊಳಗೆ ಒಬ್ಬರ ಮೇಲೊಬ್ಬರಿಗೆ ಪ್ರೀತಿಯಿದ್ದರೆ ಎಲ್ಲರೂ ನಿಮ್ಮನ್ನು ನನ್ನ ಶಿಷ್ಯರೆಂದು ತಿಳುಕೊಳ್ಳುವರು.” ಇಂತಹ ಸಹೋದರತ್ವದ ಪ್ರೀತಿಯು ಕೇವಲ ಭಾವನಾತ್ಮಕತೆಯಿಂದ ಗುರುತಿಸಲ್ಪಡುವುದಿಲ್ಲ. ವೈನ್ಸ್‌ ಎಕ್ಸ್‌ಪಾಸಿಟರಿ ಡಿಕ್ಷನೆರಿ ಆಫ್‌ ಓಲ್ಡ್‌ ಆ್ಯಂಡ್‌ ನ್ಯೂ ಟೆಸ್ಟಮೆಂಟ್‌ ವರ್ಡ್ಸ್‌ ಹೇಳುವುದು: “ಪ್ರೀತಿಯು ಗುರುತಿಸಲ್ಪಡುವುದು ಅದರಿಂದ ಹೊರಹೊಮ್ಮುವ ಕ್ರಿಯೆಗಳಿಂದಲೇ ಆಗಿದೆ.” ಹೌದು, ನೀವು ಪ್ರೀತಿಯನ್ನು ಕ್ರಿಯೆಗಳಲ್ಲಿ ತೋರಿಸುವಾಗ ಪ್ರೌಢತೆಗೆ ಸಾಗುತ್ತೀರಿ!

ಉದಾಹರಣೆಗೆ, ರೋಮಾಪುರ 15:7ರಲ್ಲಿ (NW) ನಾವು ಓದುವುದು: “ಒಬ್ಬರನ್ನೊಬ್ಬರು ಸ್ವಾಗತಿಸಿರಿ.” ನಿಮ್ಮ ಜೊತೆ ವಿಶ್ವಾಸಿಗಳಿಗೆ ಮತ್ತು ಸಭಾ ಕೂಟಗಳಿಗೆ ಬರುವ ಹೊಸಬರಿಗೆ ಆದರಣೀಯವಾಗಿ, ಉತ್ಸಾಹಹುರುಪಿನಿಂದ ಅಭಿವಂದನೆಯನ್ನು ಹೇಳುವುದು ಪ್ರೀತಿಯನ್ನು ತೋರಿಸುವ ಒಂದು ವಿಧವಾಗಿದೆ. ಅವರನ್ನು ವೈಯಕ್ತಿಕವಾಗಿ ತಿಳಿದುಕೊಳ್ಳಿರಿ. ಇತರರಲ್ಲಿ “ವೈಯಕ್ತಿಕ ಆಸಕ್ತಿ”ಯನ್ನು (NW) ತೋರಿಸಿರಿ. (ಫಿಲಿಪ್ಪಿ 2:4) ನೀವು ಅತಿಥಿಸತ್ಕಾರವನ್ನು ಸಹ ತೋರಿಸಬಹುದು. ಅಂದರೆ, ಬೇರೆ ಬೇರೆಯವರನ್ನು ನೀವು ನಿಮ್ಮ ಮನೆಗೆ ಆಮಂತ್ರಿಸಸಾಧ್ಯವಿದೆ. (ಅ. ಕೃತ್ಯಗಳು 16:14, 15) ಇತರರ ಅಪರಿಪೂರ್ಣತೆಗಳು ಕೆಲವೊಮ್ಮೆ ನಿಮ್ಮ ಪ್ರೀತಿಯ ಆಳವನ್ನು ಪರೀಕ್ಷಿಸಸಾಧ್ಯವಿದೆ. ಆದರೆ ‘ಪ್ರೀತಿಯಿಂದ ಒಬ್ಬರನ್ನೊಬ್ಬರು ಸಹಿಸಿಕೊಳ್ಳುವುದನ್ನು’ ನೀವು ಕಲಿತುಕೊಳ್ಳುವಾಗ, ನೀವು ಪ್ರಾಯಸ್ಥರಾಗುತ್ತಿದ್ದೀರಿ ಎಂಬುದನ್ನು ಇದು ತೋರಿಸುತ್ತದೆ.—ಎಫೆಸ 4:2.

ನಮ್ಮ ಸಂಪನ್ಮೂಲಗಳನ್ನು ಶುದ್ಧಾರಾಧನೆಯ ಬೆಂಬಲಕ್ಕಾಗಿ ಉಪಯೋಗಿಸುವುದು

ಪುರಾತನ ಸಮಯಗಳಲ್ಲಿ, ದೇವಜನರಲ್ಲಿ ಎಲ್ಲರೂ ಯೆಹೋವನ ಮಂದಿರಕ್ಕೆ ಬೆಂಬಲವನ್ನು ನೀಡಲಿಲ್ಲ. ಆದುದರಿಂದ ದೇವರು ತನ್ನ ಜನರನ್ನು ಪ್ರೇರಿಸಲಿಕ್ಕಾಗಿ ಹಗ್ಗಾಯ, ಮಲಾಕಿಯರಂತಹ ಪ್ರವಾದಿಗಳನ್ನು ಕಳುಹಿಸಿದನು. (ಹಗ್ಗಾಯ 1:2-6; ಮಲಾಕಿಯ 3:10) ಇಂದು, ಪ್ರೌಢ ಕ್ರೈಸ್ತರು ತಮ್ಮ ಸಂಪನ್ಮೂಲಗಳನ್ನು ಯೆಹೋವನ ಆರಾಧನೆಯನ್ನು ಬೆಂಬಲಿಸಲಿಕ್ಕಾಗಿ ಸಂತೋಷದಿಂದ ಬಳಸುತ್ತಾರೆ. 1 ಕೊರಿಂಥ 16:1, 2ರಲ್ಲಿರುವ ತತ್ತ್ವವನ್ನು ಅನುಸರಿಸುವ ಮೂಲಕ ಇಂತಹವರನ್ನು ಅನುಕರಿಸಿರಿ. ಅಂದರೆ, ಸಭೆಗೆ ಮತ್ತು ಯೆಹೋವನ ಸಾಕ್ಷಿಗಳ ಲೋಕವ್ಯಾಪಕ ಕಾರ್ಯಕ್ಕೆ ಕಾಣಿಕೆಯನ್ನು ನೀಡಲು ಕ್ರಮವಾಗಿ ‘ಸ್ವಲ್ಪ ಸ್ವಲ್ಪ ಕೂಡಿಸಿ’ ಇಡಿರಿ. ದೇವರ ವಾಕ್ಯವು ವಾಗ್ದಾನಿಸುವುದು: “ಹೆಚ್ಚಾಗಿ ಬಿತ್ತುವವನು ಹೆಚ್ಚಾಗಿ ಕೊಯ್ಯುವನು.”—2 ಕೊರಿಂಥ 9:6.

ನಿಮ್ಮ ಬಳಿಯಿರುವ ಸಮಯ ಹಾಗೂ ಶಕ್ತಿಯಂತಹ ಸಂಪನ್ಮೂಲಗಳನ್ನು ಸಹ ಕಡೆಗಣಿಸದಿರಿ. ಅಷ್ಟೇನೂ ಮಹತ್ತ್ವವಲ್ಲದ ಚಟುವಟಿಕೆಗಳಿಂದ “ಸಮಯವನ್ನು ಖರೀದಿಸಲು” (NW) ಪ್ರಯತ್ನಿಸಬೇಕು. (ಎಫೆಸ 5:15, 16; ಫಿಲಿಪ್ಪಿ 1:10) ಸಮಯವನ್ನು ಬಳಸುವುದರಲ್ಲಿ ಹೆಚ್ಚು ಸಮರ್ಥರಾಗಿರಲು ಕಲಿತುಕೊಳ್ಳಿರಿ. ಹೀಗೆ ಮಾಡುವಲ್ಲಿ, ಯೆಹೋವನ ಆರಾಧನೆಗೆ ಬೆಂಬಲವನ್ನು ನೀಡುವ ರಾಜ್ಯ ಸಭಾಗೃಹದ ಮೇಂಟೆನೆನ್ಸ್‌ ಪ್ರಾಜೆಕ್ಟ್‌ಗಳಲ್ಲಿ ಹಾಗೂ ಇನ್ನಿತರ ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯವಾಗುವುದು. ಈ ರೀತಿಯಲ್ಲಿ ನಿಮ್ಮ ಸಂಪನ್ಮೂಲಗಳನ್ನು ಬಳಸುವುದು, ನೀವು ಒಬ್ಬ ಪ್ರಾಯಸ್ಥ ಕ್ರೈಸ್ತರಾಗುತ್ತಿದ್ದೀರಿ ಎಂಬುದರ ಮತ್ತೊಂದು ಪುರಾವೆಯಾಗಿರುವುದು.

ಪ್ರೌಢತೆಗೆ ಸಾಗಿರಿ!

ಬುದ್ಧಿಶಕ್ತಿಯುಳ್ಳ ಹಾಗೂ ಜ್ಞಾನವಂತರಾದ ಹಾಗೂ ಹುರುಪಿನಿಂದ ಪ್ರಚಾರಮಾಡುತ್ತಿರುವ, ಯಥಾರ್ಥತೆಯಲ್ಲಿ ಕುಂದಿಲ್ಲದ, ನಿಷ್ಠಾವಂತರೂ ಪ್ರೀತಿಪರರೂ ಆಗಿರುವ ಹಾಗೂ ರಾಜ್ಯ ಕೆಲಸಕ್ಕಾಗಿ ಬೆಂಬಲವನ್ನು ನೀಡಲು ಶಾರೀರಿಕವಾಗಿ ಹಾಗೂ ಭೌತಿಕವಾಗಿ ಸಹಾಯವನ್ನು ನೀಡಲು ಸಿದ್ಧಮನಸ್ಸನ್ನು ತೋರಿಸುವ ಸ್ತ್ರೀಪುರುಷರು ನಿಜವಾಗಿಯೂ ಒಂದು ವರವಾಗಿದ್ದಾರೆ. ಅಪೊಸ್ತಲ ಪೌಲನು ಹೀಗೆ ಪ್ರೋತ್ಸಾಹವನ್ನು ನೀಡಿದ್ದರಲ್ಲಿ ಯಾವುದೇ ಆಶ್ಚರ್ಯವಿಲ್ಲ: “ಕ್ರಿಸ್ತನ ವಿಷಯವಾದ ಪ್ರಥಮಬೋಧನೆಯನ್ನು ಕುರಿತು ಇನ್ನೂ ಮಾತಾಡದೆ ಪೂರ್ಣವಾದ ತಿಳುವಳಿಕೆಗೆ [“ಪ್ರೌಢತೆಗೆ,” NW] ಸಾಗುತ್ತಾ ಹೋಗೋಣ.”—ಇಬ್ರಿಯ 6:2.

ನೀವು ಒಬ್ಬ ಪ್ರಾಯಸ್ಥ ಕ್ರೈಸ್ತರಾಗಿದ್ದೀರೋ? ಇಲ್ಲವೇ ಆತ್ಮಿಕವಾಗಿ ಇನ್ನೂ ಒಬ್ಬ ಶಿಶುವಿನೋಪಾದಿಯೇ ಇದ್ದೀರೋ? (ಇಬ್ರಿಯ 5:13) ನೀವು ಯಾವುದೇ ಸ್ಥಿತಿಯಲ್ಲಿರಲಿ, ವೈಯಕ್ತಿಕ ಅಧ್ಯಯನ ಮಾಡಲು, ಸಾರುವಕಾರ್ಯದಲ್ಲಿ ಭಾಗವಹಿಸಲು, ಹಾಗೂ ನಿಮ್ಮ ಸಹೋದರರಿಗೆ ಪ್ರೀತಿಯನ್ನು ತೋರಿಸಲು ದೃಢಸಂಕಲ್ಪವನ್ನು ಮಾಡಿರಿ. ಪ್ರೌಢ ಸಹೋದರಸಹೋದರಿಯರಿಂದ ನೀಡಲ್ಪಡುವ ಯಾವುದೇ ಸಲಹೆ ಅಥವಾ ಶಿಸ್ತನ್ನು ಹೃದಯಪೂರ್ವಕವಾಗಿ ಸ್ವೀಕರಿಸಿ. (ಜ್ಞಾನೋಕ್ತಿ 8:33) ಕ್ರೈಸ್ತ ಜವಾಬ್ದಾರಿಯನ್ನು ಸಂಪೂರ್ಣವಾಗಿ ಹೊತ್ತುಕೊಳ್ಳಿರಿ. ಸಮಯ ಹಾಗೂ ಶ್ರಮದಿಂದ, ನೀವು ಸಹ “ನಂಬಿಕೆಯಿಂದಲೂ ದೇವಕುಮಾರನ ವಿಷಯವಾದ ನಿಷ್ಕೃಷ್ಟ ಜ್ಞಾನದಿಂದಲೂ ಉಂಟಾಗುವ ಐಕ್ಯವನ್ನು ಹೊಂದಿ ಪ್ರಾಯಸ್ಥರಾಗಿ ಕ್ರಿಸ್ತನ ಪರಿಪೂರ್ಣತೆಯ ಪ್ರಮಾಣವನ್ನು” ಪಡೆದುಕೊಳ್ಳಸಾಧ್ಯವಿದೆ.—ಎಫೆಸ 4:13, NW.

[ಪುಟ 27ರಲ್ಲಿರುವ ಸಂಕ್ಷಿಪ್ತ ವಿವರಣೆ]

ಸಭೆಯೊಂದು ಸ್ಥಿರವಾಗಿ ನಿಲ್ಲುವಂತೆ ಪ್ರಾಯಸ್ಥ ಕ್ರೈಸ್ತರು ಸಹಾಯಮಾಡುತ್ತಾರೆ. ಅವರಿಗೆ ಸಕಾರಾತ್ಮಕ ಮನೋಭಾವವಿದೆ

[ಪುಟ 29ರಲ್ಲಿರುವ ಚಿತ್ರ]

ಪ್ರೌಢ ವ್ಯಕ್ತಿಗಳು ಇತರರಲ್ಲಿ ಆಸಕ್ತಿಯನ್ನು ತೋರಿಸುವ ಮೂಲಕ ಸಭೆಯನ್ನು ಎತ್ತಿಕಟ್ಟುತ್ತಾರೆ