ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬಹುಕಾಲ ಹುಡುಕಿ ಕಂಡುಕೊಂಡದ್ದು

ಬಹುಕಾಲ ಹುಡುಕಿ ಕಂಡುಕೊಂಡದ್ದು

ಬಹುಕಾಲ ಹುಡುಕಿ ಕಂಡುಕೊಂಡದ್ದು

“ಯೆಹೋವ? ಯಾರು ಆ ಯೆಹೋವ?” ಎಂದು ಎಂಟು ವರ್ಷದ ಸಿಲ್ವಿಯಾ ಕೇಳಿದಳು. ಆ ಹೆಸರನ್ನು ಸಿಲ್ವಿಯಾಳ ಸ್ನೇಹಿತೆಯು ಆರ್ಮಿನಿಯನ್‌ ಭಾಷೆಯ ಬೈಬಲಿನಿಂದ ತೋರಿಸಿದ್ದಳು. ಆ ಬೈಬಲನ್ನು ಆಕೆಯ ಮನೆಯಲ್ಲಿ ಒಂದು ನಿಕ್ಷೇಪವಾಗಿ ಪರಿಗಣಿಸಲಾಗುತ್ತಿತ್ತು. ಆ ಹೆಸರಿನ ಕುರಿತು ಸಿಲ್ವಿಯಾ ಅಕ್ಕಪಕ್ಕದಲ್ಲಿ ವಾಸಿಸುತ್ತಿದ್ದವರ ಬಳಿ ಕೇಳಿದಳು. ಆದರೆ, ಅವಳು ವಾಸಿಸುತ್ತಿದ್ದ ಆರ್ಮಿನಿಯಾದ ಎರೆವಾನ್‌ ಎಂಬ ಸ್ಥಳದಲ್ಲಿ ಯೆಹೋವನು ಯಾರೆಂದು ಯಾರಿಗೂ ಗೊತ್ತಿರಲಿಲ್ಲ. ಅವಳ ಹೆತ್ತವರಿಗೂ ಗೊತ್ತಿರಲಿಲ್ಲ, ಶಿಕ್ಷಕರಿಗೂ ಗೊತ್ತಿರಲಿಲ್ಲ, ಅಷ್ಟೇ ಏಕೆ, ಸ್ಥಳಿಕ ಚರ್ಚಿನ ಪಾದ್ರಿಗಳಿಗೂ ಗೊತ್ತಿರಲಿಲ್ಲ.

ಸಿಲ್ವಿಯಾ ದೊಡ್ಡವಳಾದಳು, ಶಾಲೆಯನ್ನೂ ಮುಗಿಸಿದಳು ನಂತರ ಒಂದು ಕೆಲಸವು ಕೂಡ ಸಿಕ್ಕಿತು. ಆದರೆ, ಯೆಹೋವ ಮಾತ್ರ ಯಾರೆಂದು ಅವಳಿಗೆ ಆಗಲೂ ಗೊತ್ತಾಗಲಿಲ್ಲ. ಯೌವನವು ತುಂಬಿತುಳುಕುತ್ತಿದ್ದ ವಯಸ್ಸಿನಲ್ಲಿ ಸಿಲ್ವಿಯಾ ಆರ್ಮಿನಿಯಾದಿಂದ ಓಡಿಹೋಗಬೇಕಾಯಿತು. ಹೀಗೆ ತಪ್ಪಿಸಿಕೊಂಡ ಸ್ವಲ್ಪ ಸಮಯದ ನಂತರ, ಆಕೆ ಪೋಲೆಂಡಿನಲ್ಲಿ ಇನ್ನಿತರ ನಿರಾಶ್ರಿತರೊಂದಿಗೆ ಒಂದು ಸಣ್ಣ ಕೋಣೆಯಲ್ಲಿ ವಾಸಿಸತೊಡಗಿದಳು. ಅವಳ ಕೋಣೆಯಲ್ಲಿದ್ದವರಲ್ಲಿ ಒಬ್ಬಳನ್ನು ಭೇಟಿಯಾಗಲು ಕ್ರಮವಾಗಿ ಸಂದರ್ಶಕರು ಬರುತ್ತಿದ್ದರು. ಒಂದು ದಿನ ಸಿಲ್ವಿಯಾ ಅವಳನ್ನು “ಯಾರದು ಆ ನಿನ್ನ ಅತಿಥಿಗಳು” ಎಂದು ಕೇಳಿದಳು. ಅದಕ್ಕುತ್ತರವಾಗಿ, “ಅವರು ಯೆಹೋವನ ಸಾಕ್ಷಿಗಳು. ಬೈಬಲನ್ನು ಕಲಿಸುವುದಕ್ಕಾಗಿ ಇಲ್ಲಿಗೆ ಬರುತ್ತಾರೆ” ಎಂದು ಅವಳು ಹೇಳಿದಳು.

ಯೆಹೋವ ಎಂಬ ಹೆಸರನ್ನು ಕೇಳಿದ ಆ ಕ್ಷಣವೇ ಸಿಲ್ವಿಯಾಳ ಹೃದಯವು ಪುಳಕಿತಗೊಂಡಿತು. ಅಂತು ಕೊನೆಗೂ, ಯೆಹೋವನು ಯಾರು ಮತ್ತು ಆತನು ಎಂಥ ಪ್ರೇಮಮಯಿಯಾದ ದೇವರು ಎಂಬುದನ್ನು ಕಲಿತುಕೊಳ್ಳಲು ಅವಳು ಪ್ರಾರಂಭಿಸಿದಳು. ಆದರೆ, ಸ್ವಲ್ಪ ಸಮಯದರೊಳಗಾಗಿ ಅವಳು ಪೋಲೆಂಡ್‌ ದೇಶವನ್ನು ಬಿಟ್ಟುಹೋಗಬೇಕಾಯಿತು. ಬಾಲ್ಟಿಕ್‌ ಸಮುದ್ರದಾಚೆಗೆ ಇರುವ ಡೆನ್ಮಾರ್ಕ್‌ನಲ್ಲಿ ಆಶ್ರಯವನ್ನು ಪಡೆದುಕೊಂಡಳು. ಅವಳು ತನ್ನೊಂದಿಗೆ ಕೆಲವೇ ವಸ್ತುಗಳನ್ನು ಕೊಂಡೊಯ್ದಳು. ಆದರೆ ಅದರಲ್ಲಿ ಒಂದು, ಯೆಹೋವನ ಸಾಕ್ಷಿಗಳು ಪ್ರಕಾಶಿಸಿದ್ದ ಬೈಬಲ್‌ ಪ್ರಕಾಶನವಾಗಿತ್ತು. ಆ ಪ್ರಕಾಶನದ ಹಿಂದಿನ ಪುಟದಲ್ಲಿ, ವಾಚ್‌ಟವರ್‌ ಸೊಸೈಟಿಯ ಬ್ರಾಂಚ್‌ ಆಫೀಸುಗಳ ವಿಳಾಸಗಳ ಪಟ್ಟಿಯಿರುವುದನ್ನು ಅವಳು ನೋಡಿದಳು. ಅದು ಅವಳ ಬಹುಮೂಲ್ಯವಾದ ಆಸ್ತಿಯಾಗಿತ್ತು. ಏಕೆಂದರೆ, ಅದು ಯೆಹೋವನೊಂದಿಗೆ ಸಂಬಂಧವನ್ನು ಇಟ್ಟುಕೊಳ್ಳುವುದಕ್ಕಾಗಿರುವ ಜೀವನಾಡಿಯಾಗಿತ್ತು!

ಡೆನ್ಮಾರ್ಕ್‌ ದೇಶದಲ್ಲಿ ಸಿಲ್ವಿಯಾಳನ್ನು ನಿರಾಶ್ರಿತರ ಶಿಬಿರಕ್ಕೆ ಕೊಂಡೊಯ್ಯಲಾಯಿತು. ಅಲ್ಲಿ ಯೆಹೋವನ ಸಾಕ್ಷಿಗಳನ್ನು ಕಂಡುಕೊಳ್ಳುವುದಕ್ಕಾಗಿ ಕೂಡಲೇ ಪ್ರಯತ್ನವನ್ನು ಶುರುಮಾಡಿದಳು. ಡೆನ್ಮಾರ್ಕ್‌ ದೇಶದ ವಾಚ್‌ಟವರ್‌ ಸೊಸೈಟಿಯ ಬ್ರಾಂಚ್‌ ಆಫೀಸ್‌ ಹೊಲ್‌ಬೆಕ್‌ ಎಂಬ ಪಟ್ಟಣದಲ್ಲಿದೆ ಎಂದು ತನ್ನ ಬಳಿ ಇದ್ದ ವಿಳಾಸಗಳ ಪಟ್ಟಿಯಿಂದ ತಿಳಿದುಕೊಂಡಿದ್ದಳು. ಆದರೆ, ಅದು ಎಲ್ಲಿದೆ ಎಂದು ಅವಳಿಗೆ ಗೊತ್ತಿರಲಿಲ್ಲ. ಸಿಲ್ವಿಯಾಳನ್ನು ಅಲ್ಲಿಂದ ಇನ್ನೊಂದು ಶಿಬಿರಕ್ಕೆ ರೈಲಿನಲ್ಲಿ ವರ್ಗಾಯಿಸಲಾಯಿತು. ಅಲ್ಲಿಗೆ ಹೋಗುತ್ತಿರುವಾಗ, ರೈಲು ಹೊಲ್‌ಬೆಕ್‌ ಪಟ್ಟಣವನ್ನು ಹಾದು ಹೋಯಿತು! ಆಗ, ಮತ್ತೊಮ್ಮೆ ಅವಳ ಹೃದಯವು ಆನಂದದಿಂದ ಪುಳಕಿತಗೊಂಡಿತು.

ಅದಾದ ಸ್ವಲ್ಪ ಸಮಯದ ಬಳಿಕ, ಸೂರ್ಯನು ಪ್ರಕಾಶಮಾನವಾಗಿದ್ದ ದಿನದಂದು ಸಿಲ್ವಿಯಾ ಹೊಲ್‌ಬೆಕ್‌ ಪಟ್ಟಣಕ್ಕೆ ಹೋಗುವುದಕ್ಕಾಗಿ ರೈಲು ಹತ್ತಿದಳು. ರೈಲು ನಿಲ್ದಾಣದಿಂದ ಬ್ರಾಂಚ್‌ ಆಫೀಸಿಗೆ ಕಾಲ್ನಡಿಗೆಯಲ್ಲಿ ಹೋದಳು. ಆಗ ಅವಳಿಗೆ ಅನಿಸಿದ್ದನ್ನು ನೆನಪುಮಾಡಿಕೊಳ್ಳುತ್ತಾ ಸಿಲ್ವಿಯಾ ಹೇಳುವುದು: “ನಾನು ತೋಟವನ್ನು ಪ್ರವೇಶಿಸಿದಂತೆ ಒಂದು ಬೆಂಚಿನ ಮೇಲೆ ಕುಳಿತುಕೊಂಡೆ. ಆಗ, ನನಗೆ ನಾನೇ ಹೀಗೆ ಹೇಳಿಕೊಂಡೆ, ‘ಇದು ನಿಜವಾಗಿಯೂ ಪ್ರಮೋದವನವೇ!’” ನಂತರ, ಬ್ರಾಂಚ್‌ ಆಫೀಸಿನಲ್ಲಿ ಅವಳಿಗೆ ಆದರದ ಸ್ವಾಗತವನ್ನು ನೀಡಲಾಯಿತು. ಕೊನೆಗೂ ಅವಳಿಗೆ ಬೈಬಲ್‌ ಅಭ್ಯಾಸ ಮಾಡುವ ಅವಕಾಶ ಸಿಕ್ಕಿತು.

ಇದಾದ ಮೇಲೆ, ಅನೇಕಬಾರಿ ಅವಳನ್ನು ಒಂದು ಶಿಬಿರದಿಂದ ಇನ್ನೊಂದು ಶಿಬಿರಕ್ಕೆ ವರ್ಗಾಯಿಸಲಾಯಿತು. ಪ್ರತಿಸಾರಿಯು ಸಿಲ್ವಿಯಾ ಯೆಹೋವನ ಸಾಕ್ಷಿಗಳನ್ನು ಕಂಡುಹಿಡಿದು ಅವರೊಂದಿಗೆ ಪದೇ ಪದೇ ಬೈಬಲ್‌ ಅಭ್ಯಾಸವನ್ನು ಮಾಡಬೇಕಾಯಿತು. ಆದರೂ, ಎರಡು ವರ್ಷಗಳ ನಂತರ, ಯೆಹೋವನಿಗೆ ತನ್ನ ಜೀವನವನ್ನು ಸಮರ್ಪಿಸಿಕೊಳ್ಳುವಷ್ಟರ ಮಟ್ಟಿಗೆ ಅವಳು ಕಲಿತಿದ್ದಳು. ಅವಳಿಗೆ ದೀಕ್ಷಾಸ್ನಾನವಾಯಿತು. ಆ ಕೂಡಲೇ ಅವಳು ಪೂರ್ಣ ಸಮಯದ ಸೇವೆಯನ್ನು ಪ್ರಾರಂಭಿಸಿದಳು. 1998ರಲ್ಲಿ ಡೆನಿಷ್‌ ಅಧಿಕಾರಿಗಳು ಡೆನ್ಮಾರ್ಕ್‌ ದೇಶದಲ್ಲಿ ಅವಳಿಗೆ ಆಶ್ರಯವನ್ನು ನೀಡಿದರು.

ಸಿಲ್ವಿಯಾ ಈಗ 26 ವರ್ಷದವಳಾಗಿದ್ದಾಳೆ. ಮತ್ತು ಪ್ರಮೋದವನವನ್ನು ನೆನಪುಮಾಡಿಕೊಟ್ಟ ಸ್ಥಳದಲ್ಲೇ ಅವಳು ಈಗ ಕೆಲಸಮಾಡುತ್ತಿದ್ದಾಳೆ. ಅಂದರೆ, ಡೆನ್ಮಾರ್ಕ್‌ನಲ್ಲಿರುವ ಯೆಹೋವನ ಸಾಕ್ಷಿಗಳ ಬ್ರಾಂಚ್‌ ಆಫೀಸ್‌ನಲ್ಲೇ! ಅವಳು ಗತಕಾಲವನ್ನು ನೆನಪಿಸಿಕೊಳ್ಳತ್ತಾ ಹೇಳುವುದು: “ನಾನು ಏನು ಹೇಳಲಿ? ನಾನು ಚಿಕ್ಕ ಹುಡಿಗಿಯಾಗಿದ್ದಾಗಿನಿಂದ ಯೆಹೋವನಿಗಾಗಿ ಹುಡುಕುತ್ತಾ ಇದ್ದೆ. ಈಗ ನಾನು ಆತನನ್ನು ಕಂಡುಕೊಂಡಿದ್ದೇನೆ. ಆತನ ಸೇವೆಯಲ್ಲಿ ನನ್ನ ಜೀವನವನ್ನು ಕಳೆಯಬೇಕೆಂದು ಕನಸುಕಂಡಿದ್ದೇ, ಆದರೆ, ಇವತ್ತು ನಾನು ಬೆತೆಲಿನಲ್ಲಿದ್ದೇನೆ. ಬರಲಿರುವ ವರ್ಷಗಳಲ್ಲೂ ಕೂಡ ಇದು ನನ್ನ ಮನೆಯಾಗಿರುವುದು ಎಂದು ಆಶಿಸುತ್ತೇನೆ!”