ಏಕೆ ಆತ್ಮತ್ಯಾಗವುಳ್ಳವರಾಗಿರಬೇಕು?
ಏಕೆ ಆತ್ಮತ್ಯಾಗವುಳ್ಳವರಾಗಿರಬೇಕು?
ಬಿಲ್ ಒಬ್ಬ ಕುಟುಂಬಸ್ಥನಾಗಿದ್ದು ಸುಮಾರು 50 ವರ್ಷ ಪ್ರಾಯದವನಾಗಿದ್ದಾನೆ. ಇವನು ಬಿಲ್ಡಿಂಗ್ ಟೆಕ್ನಾಲಜಿಯ ಶಿಕ್ಷಕನಾಗಿದ್ದಾನೆ. ವರ್ಷ ಪೂರ್ತಿ, ಯೆಹೋವನ ಸಾಕ್ಷಿಗಳ ರಾಜ್ಯ ಸಭಾಗೃಹವನ್ನು ಕಟ್ಟಲಿಕ್ಕಾಗಿ ಪ್ಲ್ಯಾನ್ಗಳನ್ನು ಮಾಡುವುದಕ್ಕೆ ಮತ್ತು ಕಟ್ಟುವ ಕೆಲಸದಲ್ಲಿ ಸಹಾಯಮಾಡಲು ಹಲವಾರು ವಾರಗಳನ್ನು ಕಳೆಯುತ್ತಾನೆ. ಇದನ್ನು ಅವನು ಸ್ವಂತ ಹಣದಿಂದ ಮಾಡುತ್ತಾನೆ. ಎಮಾ ಸುಶಿಕ್ಷಿತಳೂ ದಕ್ಷಳೂ ಆದ ಅವಿವಾಹಿತೆ. ಇವಳಿಗೆ 22 ವರ್ಷ ವಯಸ್ಸು. ವೈಯಕ್ತಿಕ ಗುರಿಗಳನ್ನು ಬೆನ್ನಟ್ಟುವ ಹಾಗೂ ಆಸೆಆಕಾಂಕ್ಷೆಗಳನ್ನು ತಣಿಸಿಕೊಳ್ಳುವ ಬದಲು, ಅವಳು ಪ್ರತಿ ತಿಂಗಳು 70ಕ್ಕಿಂತಲೂ ಹೆಚ್ಚಿನ ತಾಸುಗಳನ್ನು ಒಬ್ಬ ಶುಶ್ರೂಷಕಳೋಪಾದಿ ಕಳೆಯುತ್ತಾಳೆ. ಬೈಬಲನ್ನು ಇತರರು ಅರ್ಥಮಾಡಿಕೊಳ್ಳುವಂತೆ ಅವಳು ಜನರಿಗೆ ಸಹಾಯಮಾಡುತ್ತಾಳೆ. ಮೊರಸ್ ಮತ್ತು ಬೆಟಿ ಕೆಲಸದಿಂದ ನಿವೃತ್ತರಾಗಿದ್ದಾರೆ. ಈಗ ಅವರು ಜೀವನವನ್ನು ಆರಾಮವಾಗಿ ಕಳೆಯದೆ, ಇತರರಿಗೆ ಸಹಾಯಮಾಡಲು ಮನಸ್ಸುಮಾಡಿದ್ದಾರೆ ಮತ್ತು ಇದಕ್ಕಾಗಿ ಅವರು ಮತ್ತೊಂದು ದೇಶಕ್ಕೆ ಸ್ಥಳಾಂತರಿಸಿದ್ದಾರೆ. ಈಗ ಅವರ ಗುರಿಯು, ಈ ಭೂಮಿಗಾಗಿರುವ ದೇವರ ಉದ್ದೇಶದ ಕುರಿತು ಜನರಿಗೆ ತಿಳಿಸುವುದೇ ಆಗಿದೆ.
ಇವರೆಲ್ಲರು ತಾವು ವಿಶೇಷ ವ್ಯಕ್ತಿಗಳೋ ಇಲ್ಲವೇ ಅಸಾಧಾರಣವಾದ ವ್ಯಕ್ತಿಗಳೋ ಎಂದು ನೆನಸುವುದಿಲ್ಲ. ಅವರು ಎಲ್ಲರಂತೆ ಸಾಮಾನ್ಯ ಜನರಾಗಿದ್ದು, ಯಾವುದು ಸರಿಯೆಂದು ತೋರುತ್ತದೋ ಅದನ್ನು ಮಾಡುವವರಾಗಿದ್ದಾರೆ. ಅವರು ತಮ್ಮ ಸಮಯ, ಶಕ್ತಿ, ಸಾಮರ್ಥ್ಯ, ಮತ್ತು ಸಂಪನ್ಮೂಲಗಳನ್ನು ಇತರರ ಒಳಿತಿಗಾಗಿ ಏಕೆ ಉಪಯೋಗಿಸುತ್ತಾರೆ? ದೇವರ ಕಡೆಗೆ ಮತ್ತು ನೆರೆಹೊರೆಯವರ ಕಡೆಗೆ ಅವರಿಗಿರುವ ಆಳವಾದ ಪ್ರೀತಿಯೇ ಅವರನ್ನು ಪ್ರಚೋದಿಸುತ್ತದೆ. ಈ ಒಂದು ಪ್ರೀತಿಯೇ ಆತ್ಮತ್ಯಾಗದ ಮನೋಭಾವವನ್ನು ತೋರಿಸುವಂತೆ ಇವರನ್ನು ಪ್ರಚೋದಿಸಿದೆ.
ಆತ್ಮತ್ಯಾಗದ ಮನೋಭಾವ ಅಂದರೇನು? ಆತ್ಮತ್ಯಾಗವುಳ್ಳವರಾಗಿರಬೇಕು ಅಂದರೆ, ಒಬ್ಬನು ಸನ್ಯಾಸಿ ಜೀವನವನ್ನು ನಡೆಸಬೇಕೆಂದೇನಲ್ಲ. ನಮ್ಮ ಸಂತೋಷ, ನೆಮ್ಮದಿ, ತೃಪ್ತಿಯನ್ನು ಕಸಿದುಕೊಳ್ಳುವಂತಹ ರೀತಿಯಲ್ಲಿ ನಮ್ಮನ್ನು ಸಂಪೂರ್ಣವಾಗಿ ತೊರೆಯುವುದನ್ನು ಇದು ಅರ್ಥೈಸುವುದಿಲ್ಲ. ಶಾರ್ಟರ್ ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷ್ನೆರಿ ಹೇಳುವಂತೆ, ಆತ್ಮತ್ಯಾಗವು “ಕರ್ತವ್ಯದ ನಿಮಿತ್ತ ಇಲ್ಲವೇ ಇತರರ ಹಿತಕ್ಕಾಗಿ ಒಬ್ಬನು ತನ್ನ ಸ್ವಂತ ಅಭಿರುಚಿ, ಸಂತೋಷ, ಹಾಗೂ ಆಸೆಆಕಾಂಕ್ಷೆಗಳನ್ನು ಬಿಟ್ಟುಕೊಡುವುದೇ” ಆಗಿದೆ.
ಯೇಸು ಕ್ರಿಸ್ತ—ಅತ್ಯುತ್ತಮ ಉದಾಹರಣೆ
ದೇವರ ಒಬ್ಬನೇ ಮಗನಾದ ಯೇಸು ಕ್ರಿಸ್ತನು ಆತ್ಮತ್ಯಾಗದ ಮನೋಭಾವವನ್ನು ತೋರಿಸಿದ ಅತ್ಯುತ್ತಮ ಉದಾಹರಣೆಯಾಗಿದ್ದಾನೆ. ಅವನು ಮಾನವನಾಗಿ ಈ ಭೂಮಿಗೆ ಬರುವ ಮುಂಚೆ, ಅವನ ಜೀವನದಲ್ಲಿ ಸುಖಸಂತೃಪ್ತಿಯು ತುಂಬಿತುಳುಕುತ್ತಿದ್ದಿರಬಹುದು. ಏಕೆಂದರೆ, ಅವನಿಗೆ ತನ್ನ ತಂದೆಯೊಂದಿಗೆ ಮತ್ತು ಆತ್ಮಿಕ ಜೀವಿಗಳೊಡನೆ ಅತ್ಯಂತ ನಿಕಟವಾದ ಒಡನಾಟವಿತ್ತು. ಅಲ್ಲದೆ, ಅವನು “ಶಿಲ್ಪಿಯಾಗಿದ್ದುಕೊಂಡು” ತನ್ನ ಸಾಮರ್ಥ್ಯಗಳನ್ನು ಜಟಿಲವೂ ರೋಚಕವೂ ಆದ ಕೆಲಸಗಳಲ್ಲಿ ಉಪಯೋಗಿಸಿದನು. (ಜ್ಞಾನೋಕ್ತಿ 8:30, 31) ಈ ಭೂಮಿಯಲ್ಲಿ ಅತ್ಯಂತ ಧನಿಕ ವ್ಯಕ್ತಿ ಸಹ ಆನಂದಿಸದ ಒಂದು ಅತ್ಯುತ್ಕೃಷ್ಟ ಜೀವನವನ್ನು ಅವನು ಆನಂದಿಸಿದನು. ಸ್ವರ್ಗದಲ್ಲಿ ಯೆಹೋವ ದೇವರ ನಂತರ, ಯೇಸುವಿಗೆ ಉನ್ನತಕ್ಕೇರಿಸಲ್ಪಟ್ಟ ಹಾಗೂ ಸುಯೋಗವುಳ್ಳ ದ್ವಿತೀಯ ಸ್ಥಾನವಿತ್ತು.
ಫಿಲಿಪ್ಪಿ 2:7) ಮಾನವನಾಗುವ ಮೂಲಕ ಮತ್ತು ಸೈತಾನನಿಂದಾದ ಹಾನಿಯನ್ನು ಸಂಪೂರ್ಣವಾಗಿ ಸರಿಪಡಿಸಲಿಕ್ಕಾಗಿ ತನ್ನ ಜೀವವನ್ನು ಪ್ರಾಯಶ್ಚಿತ್ತವಾಗಿ ನೀಡುವ ಮೂಲಕ ಅವನು ತನ್ನ ವೈಯಕ್ತಿಕ ಲಾಭಗಳನ್ನು ಮನಃಪೂರ್ವಕವಾಗಿ ಬಿಟ್ಟುಕೊಟ್ಟನು. (ಆದಿಕಾಂಡ 3:1-7; ಮಾರ್ಕ 10:45) ಪಿಶಾಚನಾದ ಸೈತಾನನ ಶಕ್ತಿಯ ಕೆಳಗಿರುವ ಒಂದು ಲೋಕದಲ್ಲಿ, ಪಾಪಿ ಮನುಷ್ಯರ ನಡುವೆ ಅವನು ಬಂದು ಜೀವಿಸಬೇಕಾಗಿತ್ತು. (1 ಯೋಹಾನ 5:19) ಸೌಕರ್ಯದ ಅಭಾವಗಳನ್ನು ಮತ್ತು ಅನನುಕೂಲತೆಯನ್ನು ಅವನು ತಾಳಿಕೊಳ್ಳಬೇಕಿತ್ತು. ಏನೇ ಆಗಲಿ ತನ್ನ ತಂದೆಯ ಚಿತ್ತವನ್ನು ಮಾಡಿಯೇ ತೀರುತ್ತೇನೆ ಎಂಬ ದೃಢನಿಶ್ಚಯ ಯೇಸು ಕ್ರಿಸ್ತನಲ್ಲಿತ್ತು. (ಮತ್ತಾಯ 26:39; ಯೋಹಾನ 5:30; 6:38) ಇದು ಯೇಸುವಿನ ಪ್ರೀತಿ ಹಾಗೂ ನಿಷ್ಠೆಯನ್ನು ಕೊನೆಯ ತನಕ ಪರೀಕ್ಷಿಸಿತು. ಅವನು ಎಷ್ಟರ ಮಟ್ಟಿಗೆ ಆತ್ಮತ್ಯಾಗವುಳ್ಳವನಾಗಿದ್ದನು? “ತನ್ನನ್ನು ತಗ್ಗಿಸಿಕೊಂಡು ಮರಣವನ್ನು ಅಂದರೆ ಶಿಲುಬೆಯ ಮರಣವನ್ನಾದರೂ ಹೊಂದುವಷ್ಟು ವಿಧೇಯನಾದನು” ಎಂದು ಅಪೊಸ್ತಲ ಪೌಲನು ಹೇಳುತ್ತಾನೆ.—ಫಿಲಿಪ್ಪಿ 2:8.
ಆದರೂ, ದೇವರ ಮಗನು “ತನ್ನನ್ನು ಬರಿದು ಮಾಡಿಕೊಂಡು ದಾಸನ ರೂಪವನ್ನು ಧರಿಸಿಕೊಂಡು ಮನುಷ್ಯರಿಗೆ ಸದೃಶನಾದನು.” (‘ಈ ಮನಸ್ಸು ನಿಮ್ಮಲ್ಲಿಯೂ ಇರಲಿ’
ಯೇಸುವಿನ ಉದಾಹರಣೆಯನ್ನು ಅನುಸರಿಸಲು ನಮಗೆ ಉತ್ತೇಜನವನ್ನು ನೀಡಲಾಗಿದೆ. “ಕ್ರಿಸ್ತ ಯೇಸುವಿನಲ್ಲಿದ್ದಂಥ ಮನಸ್ಸು ನಿಮ್ಮಲ್ಲಿಯೂ ಇರಲಿ” ಎಂದು ಅಪೊಸ್ತಲನು ಪ್ರಚೋದಿಸಿದನು. (ಫಿಲಿಪ್ಪಿ 2:5) ಇದನ್ನು ನಾವು ಹೇಗೆ ಮಾಡಸಾಧ್ಯವಿದೆ? ಒಂದು ವಿಧವು, ‘ಸ್ವಹಿತವನ್ನು ಮಾತ್ರ ನೋಡದೆ ಪರಹಿತವನ್ನು ಸಹ ನೋಡುವ’ ಮೂಲಕವೇ ಆಗಿದೆ. (ಫಿಲಿಪ್ಪಿ 2:4) ನಿಜವಾದ ಪ್ರೀತಿಯು “ಸ್ವಪ್ರಯೋಜನವನ್ನು ಚಿಂತಿಸುವದಿಲ್ಲ.”—1 ಕೊರಿಂಥ 13:5.
ಹಿತಚಿಂತನೆಯನ್ನು ತೋರಿಸುವ ಜನರು ಬೇರೆಯವರಿಗೆ ಸೇವೆಯನ್ನು ಸಲ್ಲಿಸುವಾಗ ಸ್ವಾರ್ಥರಹಿತರಾಗಿ ತಮ್ಮನ್ನು ತಾವೇ ಸಮರ್ಪಿಸಿಕೊಳ್ಳುತ್ತಾರೆ. ಆದರೆ ಇಂದು, ಅನೇಕ ಜನರು ಸ್ವಾರ್ಥಿಗಳಾಗಿದ್ದಾರೆ. ಈ ಲೋಕದಲ್ಲಿ ನಾ-ಮುಂದು ತಾ-ಮುಂದು ಎಂಬ ಜನರೇ ತುಂಬಿತುಳುಕುತ್ತಿದ್ದಾರೆ. ಲೋಕದಲ್ಲಿರುವ ಈ ರೀತಿಯ ಮನೋಭಾವದಿಂದ ನಮ್ಮನ್ನು ನಾವು ಕಾಪಾಡಿಕೊಳ್ಳಬೇಕು. ಇಲ್ಲದಿದ್ದರೆ ಇದು ನಮ್ಮ ದೃಷ್ಟಿಕೋನ ಮತ್ತು ಮನೋಭಾವವನ್ನು ರೂಪಿಸುವುದರಲ್ಲಿ ಸಫಲವಾಗುತ್ತದೆ ಮತ್ತು ಇದು ನಮ್ಮ ಸ್ವಂತ ಆಸೆಆಕಾಂಕ್ಷೆಗಳನ್ನು ಅತಿ ಮುಖ್ಯವಾದದ್ದನ್ನಾಗಿ ಮಾಡಸಾಧ್ಯವಿದೆ. ಆಗ ನಾವೇನೇ ಮಾಡಲಿ, ಅದು ನಮ್ಮ ಸಮಯ, ಶಕ್ತಿ, ಸಂಪನ್ಮೂಲಗಳನ್ನು ಯಾವ ರೀತಿಯಲ್ಲಿ ವ್ಯಯಿಸುತ್ತೇವೆ ಎಂಬುದೆಲ್ಲವೂ ಸ್ವಾರ್ಥದಿಂದ ಆಳಲ್ಪಡುತ್ತದೆ. ಆದುದರಿಂದ ನಾವು ಈ ಪ್ರಭಾವದ ವಿರುದ್ಧ ಹೋರಾಡಬೇಕಾಗಿರುತ್ತದೆ.
ಕೆಲವೊಮ್ಮೆ ಸದುದ್ದೇಶವುಳ್ಳ ಸಲಹೆಯು ಸಹ ನಮ್ಮ ಆತ್ಮತ್ಯಾಗದ ಮನೋಭಾವವನ್ನು ಕುಗ್ಗಿಸಸಾಧ್ಯವಿದೆ. ಯೇಸುವಿನ ಆತ್ಮತ್ಯಾಗದಿಂದ ಆಗುವ ಪರಿಣಾಮವನ್ನು ಅರಿತ ಅಪೊಸ್ತಲ ಪೇತ್ರನು “ಸ್ವಾಮೀ, ದೇವರು ನಿನ್ನನ್ನು ಕಾಯಲಿ” ಎಂದು ಹೇಳಿದನು. (ಮತ್ತಾಯ 16:22) ಯೇಸು ತನ್ನ ತಂದೆಯ ಸಾರ್ವಭೌಮತೆ ಹಾಗೂ ಮನುಕುಲದ ರಕ್ಷಣೆಗಾಗಿ ಎಷ್ಟೊಂದು ಆತ್ಮತ್ಯಾಗವನ್ನು ಮಾಡುತ್ತಿದ್ದನೆಂದರೆ ಅದು ಅವನನ್ನು ಮರಣಕ್ಕೆ ನಡೆಸಲಿತ್ತು ಎಂಬುದು ಪೇತ್ರನನ್ನು ಬಹಳ ವ್ಯಾಕುಲಗೊಳಿಸಿತ್ತು. ಆದುದರಿಂದಲೇ ಅವನು ಯೇಸುವಿಗೆ ಇಂತಹ ಹೆಜ್ಜೆಯನ್ನು ತೆಗೆದುಕೊಳ್ಳದಂತೆ ಬುದ್ಧಿ ಹೇಳಲು ಪ್ರಯತ್ನಿಸಿದನು.
‘ನಿಮ್ಮನ್ನು ನಿರಾಕರಿಸಿ’
ಇದಕ್ಕೆ ಯೇಸು ಯಾವ ರೀತಿಯಲ್ಲಿ ಪ್ರತಿಕ್ರಿಯಿಸಿದನು? ವೃತ್ತಾಂತವು ಹೀಗೆ ಹೇಳುತ್ತದೆ: “ಆತನು ಹಿಂತಿರುಗಿಕೊಂಡು ತನ್ನ ಶಿಷ್ಯರನ್ನು ನೋಡಿ ಪೇತ್ರನಿಗೆ—ಸೈತಾನನೇ, ನನ್ನ ಮುಂದೆ ನಿಲ್ಲಬೇಡ, ನಡೆ, ನಿನ್ನ ಯೋಚನೆ ಮನುಷ್ಯರ ಯೋಚನೆಯೇ ಹೊರತು ದೇವರದಲ್ಲ ಎಂದು ಗದರಿಸಿ ಹೇಳಿದನು.” ಆ ಮೇಲೆ ಆತನು ತನ್ನ ಶಿಷ್ಯರ ಜೊತೆಗೆ ಜನರ ಗುಂಪನ್ನೂ ಹತ್ತಿರ ಕರೆದು ಅವರಿಗೆ ಹೇಳಿದ್ದೇನಂದರೆ: “ಯಾವನಿಗಾದರೂ ನನ್ನ ಹಿಂದೆ ಬರುವದಕ್ಕೆ ಮನಸ್ಸಿದ್ದರೆ ಅವನು ತನ್ನನ್ನು ನಿರಾಕರಿಸಿ ತನ್ನ ಶಿಲುಬೆಯನ್ನು ಹೊತ್ತುಕೊಂಡು ನನ್ನ ಹಿಂದೆ ಬರಲಿ.”—ಮಾರ್ಕ 8:33, 34.
ಯೇಸುವಿಗೆ ಈ ರೀತಿಯ ಬುದ್ಧಿವಾದವನ್ನು ಕೊಟ್ಟ ಸುಮಾರು 30 ವರ್ಷಗಳ ಅನಂತರ, ಆತ್ಮತ್ಯಾಗ ಅಂದರೇನು ಎಂಬುದು ತನಗೆ ಈಗ ಗೊತ್ತಿದೆ ಎಂಬುದನ್ನು ಪೇತ್ರನು ತೋರಿಸಿಕೊಟ್ಟನು. ಅವನು ತನ್ನ ಜೊತೆ ವಿಶ್ವಾಸಿಗಳಿಗೆ, ಪ್ರಯತ್ನಿಸುವುದನ್ನು ಬಿಟ್ಟುಬಿಡುವಂತೆ ಮತ್ತು ಸ್ವತಃ ತಮಗೆ ದಯೆತೋರಿಸಿಕೊಳ್ಳುವಂತೆ ಪ್ರೋತ್ಸಾಹಿಸಲಿಲ್ಲ. ಅದಕ್ಕೆ ಬದಲು, ಅವರು ತಮ್ಮ ಮನಸ್ಸನ್ನು ದೃಢಪಡಿಸಿಕೊಂಡು, ಹಿಂದೆ ತಮಗಿದ್ದ ದುರಾಶೆಗಳನ್ನು ಅನುಸರಿಸಿ ನಡೆಯದಂತೆ ಅವರಿಗೆ ಬುದ್ಧಿವಾದವನ್ನು ಹೇಳಿದನು. ಕಷ್ಟದೆಸೆಗಳ ಮಧ್ಯೆಯೂ, ಅವರು ದೇವರ ಚಿತ್ತವನ್ನು ಮಾಡುವದಕ್ಕೆ ಪ್ರಥಮ ಸ್ಥಾನ ಕೊಡಬೇಕಿತ್ತು.—1 ಪೇತ್ರ 1:6, 13, 14; 4:1, 2.
ಸ್ವತಃ ನಮ್ಮನ್ನು ಯೆಹೋವನಿಗೆ ಕೊಟ್ಟುಕೊಳ್ಳುವುದೇ ಅತ್ಯಂತ ಪ್ರತಿಫಲದಾಯಕ ಮಾರ್ಗವಾಗಿದೆ. ಯೇಸು ಕ್ರಿಸ್ತನನ್ನು ನಂಬಿಗಸ್ತಿಕೆಯಿಂದ ಅನುಸರಿಸಬೇಕು ಮತ್ತು ನಮ್ಮ ಕಾರ್ಯಕಲಾಪಗಳನ್ನು ದೇವರು ನಿರ್ದೇಶಿಸುವಂತೆ ಬಿಡಬೇಕು. ಇದರ ಸಂಬಂಧದಲ್ಲಿ ಪೌಲನು ಒಂದು ಉತ್ತಮ ಉದಾಹರಣೆಯಾಗಿದ್ದಾನೆ. ಅವನ ತುರ್ತಿನ ಪ್ರಜ್ಞೆ ಹಾಗೂ ಯೆಹೋವನ ಕಡೆಗೆ ಅವನಿಗಿದ್ದ ಕೃತಜ್ಞತೆಯು, ದೇವರ ಚಿತ್ತವನ್ನು ಮಾಡುವುದರಿಂದ ವಿಮುಖಗೊಳಿಸಸಾಧ್ಯವಿದ್ದ ಲೋಕದ ಆಸೆಆಕಾಂಕ್ಷೆಗಳನ್ನು ಇಲ್ಲವೇ ಪ್ರತೀಕ್ಷೆಗಳನ್ನು ತೊರೆಯುವಂತೆ ಮಾಡಿತು. “ನಾನಂತೂ ನನಗಿರುವದನ್ನು” ಇತರರ ಹಿತಚಿಂತನೆಗಾಗಿ “ಅತಿಸಂತೋಷದಿಂದ 2 ಕೊರಿಂಥ 12:15) ಪೌಲನು ತನ್ನ ಸಾಮರ್ಥ್ಯಗಳನ್ನು ತನ್ನ ಸ್ವಂತ ಹಿತಚಿಂತನೆಗಳಿಗಲ್ಲ, ದೈವಿಕ ಅಭಿರುಚಿಗಳನ್ನು ವಿಸ್ತರಿಸಲು ಉಪಯೋಗಿಸಿದನು.—ಅ. ಕೃತ್ಯಗಳು 20:24; ಫಿಲಿಪ್ಪಿ 3:8.
ವೆಚ್ಚಮಾಡುತ್ತೇನೆ” ಮತ್ತು “ನನ್ನನ್ನೇ ವೆಚ್ಚಮಾಡಿಕೊಳ್ಳುತ್ತೇನೆ” ಎಂದು ಅವನು ಹೇಳಿದನು. (ಅಪೊಸ್ತಲ ಪೌಲನಿಗಿದ್ದಂತಹ ದೃಷ್ಟಿಕೋನವು ನಮಗಿರುವಲ್ಲಿ ನಾವು ನಮ್ಮನ್ನು ಹೇಗೆ ಪರೀಕ್ಷಿಸಿಕೊಳ್ಳಸಾಧ್ಯವಿದೆ? ನಾವು ನಮ್ಮನ್ನು ಈ ರೀತಿಯಾಗಿ ಪ್ರಶ್ನಿಸಿಕೊಳ್ಳಬಹುದು: ನಾನು ನನ್ನ ಸಮಯ, ಶಕ್ತಿ, ಸಾಮರ್ಥ್ಯ ಹಾಗೂ ನನ್ನ ಸಂಪನ್ಮೂಲಗಳನ್ನು ಹೇಗೆ ಉಪಯೋಗಿಸುತ್ತಿದ್ದೇನೆ? ಇವುಗಳನ್ನು ಹಾಗೂ ಇತರ ಅಮೂಲ್ಯ ಕೊಡುಗೆಗಳನ್ನು ನನ್ನ ಸ್ವಂತ ಹಿತಚಿಂತನೆಗಳಿಗಾಗಿ ಮಾತ್ರವೇ ಉಪಯೋಗಿಸುತ್ತೇನೋ ಇಲ್ಲವೇ ಇತರರಿಗೆ ಸಹಾಯಮಾಡಲು ಉಪಯೋಗಿಸುತ್ತೇನೋ? ಬಹುಶಃ ಪೂರ್ಣಸಮಯದ ರಾಜ್ಯ ಘೋಷಕನೋಪಾದಿ, ಸುವಾರ್ತೆಯನ್ನು ಸಾರುವ ಜೀವರಕ್ಷಕ ಕಾರ್ಯದಲ್ಲಿ ಹೆಚ್ಚು ಪೂರ್ಣವಾಗಿ ಭಾಗವಹಿಸಲು ನಾನು ಯೋಚಿಸಿದ್ದೇನೋ? ರಾಜ್ಯ ಸಭಾಗೃಹವನ್ನು ಕಟ್ಟುವುದು ಇಲ್ಲವೇ ದುರಸ್ತಿ ಮಾಡುವಂತಹ ಕೆಲಸಗಳಲ್ಲಿ ನಾನು ಸಂಪೂರ್ಣವಾಗಿ ಒಳಗೂಡಸಾಧ್ಯವಿದೆಯೋ? ಅಗತ್ಯದಲ್ಲಿರುವವರಿಗೆ ಸಹಾಯವನ್ನು ಮಾಡಲು ಅವಕಾಶಗಳು ಸಿಕ್ಕಾಗ ಅದನ್ನು ಸದುಪಯೋಗಿಸುತ್ತಿದ್ದೇನೋ? ಅತ್ಯುತ್ತಮವಾದುದನ್ನು ನಾನು ಯೆಹೋವನಿಗೆ ಕೊಡುತ್ತಿದ್ದೇನೋ?—ಜ್ಞಾನೋಕ್ತಿ 3:9.
“ಕೊಡುವುದರಲ್ಲಿ ಹೆಚ್ಚಿನ ಸಂತೋಷ”
ಆದರೂ, ಆತ್ಮತ್ಯಾಗವುಳ್ಳವರಾಗಿರುವುದು ನಿಜವಾಗಿಯೂ ಬುದ್ಧಿವಂತರ ಲಕ್ಷಣವಾಗಿದೆಯೋ? ಹೌದು, ಖಂಡಿತವಾಗಿ! ಅಂತಹ ಒಂದು ಮನೋಭಾವವು ಹೇರಳವಾದ ಪ್ರತಿಫಲಗಳನ್ನು ತರುತ್ತದೆ ಎಂಬುದನ್ನು ತನ್ನ ಸ್ವಂತ ಅನುಭವದಿಂದ ಪೌಲನು ತಿಳಿದಿದ್ದನು. ಅದು ಅವನಿಗೆ ಅತ್ಯಾನಂದವನ್ನೂ ಆತ್ಮಸಂತೃಪ್ತಿಯನ್ನೂ ತಂದಿತು. ಎಫೆಸದ ಹಿರಿಯರನ್ನು ಮಿಲಟೆಸ್ನಲ್ಲಿ ಭೇಟಿಮಾಡಿದಾಗ ಅವರಿಗೆ ಇದನ್ನು ಅವನು ವಿವರಿಸಿದನು. ಪೌಲನು ಹೇಳಿದ್ದು: “ಎಲ್ಲಾ ವಿಷಯಗಳಲ್ಲಿ ನಾನು ನಿಮಗೆ ಮಾದರಿ ತೋರಿಸಿದ್ದೇನೆ. ನೀವೂ ಹಾಗೆಯೇ ದುಡಿದು ಬಲವಿಲ್ಲದವರಿಗೆ ಉಪಕಾರಮಾಡಬೇಕು; ಮತ್ತು—ತೆಗೆದುಕೊಳ್ಳುವದಕ್ಕಿಂತ ಕೊಡುವದೇ ಹೆಚ್ಚಿನ ಭಾಗ್ಯವೆಂಬದಾಗಿ [“ಕೊಡುವುದರಲ್ಲಿ ಹೆಚ್ಚಿನ ಸಂತೋಷವಿದೆ,” NW] ಕರ್ತನಾದ ಯೇಸು ತಾನೇ ಹೇಳಿದ ಮಾತುಗಳನ್ನು ನೆನಪಿನಲ್ಲಿಟ್ಟುಕೊಂಡಿರಬೇಕು.” (ಅ. ಕೃತ್ಯಗಳು 20:35) ಈ ರೀತಿಯ ಮನೋಭಾವವನ್ನು ತೋರಿಸುವುದರಿಂದ ಈಗಲೂ ಅತ್ಯಾನಂದವನ್ನು ಪಡೆಯಸಾಧ್ಯವಿದೆ ಎಂಬುದನ್ನು ಲಕ್ಷಾಂತರ ಜನರು ಕಂಡುಕೊಂಡಿದ್ದಾರೆ. ತಮ್ಮ ಸ್ವಂತ ಹಿತಚಿಂತನೆಗಳಿಗಿಂತಲೂ ಯೆಹೋವನ ಹಾಗೂ ಇತರರ ಹಿತಚಿಂತನೆಗೆ ಆದ್ಯತೆಯನ್ನು ಕೊಡುವವರಿಗೆ ಯೆಹೋವನು ಪ್ರತಿಫಲಗಳನ್ನು ನೀಡುವಾಗ, ಇದು ಮುಂದೆ ಭವಿಷ್ಯತ್ತಿನಲ್ಲೂ ನಮಗೆ ಬಹಳ ಸಂತೋಷವನ್ನು ತರುವುದು.—1 ತಿಮೊಥೆಯ 4:8-10.
ರಾಜ್ಯ ಸಭಾಗೃಹವನ್ನು ಕಟ್ಟುವುದರಲ್ಲಿ ಬೇರೆಯವರಿಗೆ ಸಹಾಯಮಾಡಲು ಏಕೆ ಇಷ್ಟೊಂದು ಶ್ರಮಪಡುತ್ತಿದ್ದೀಯಾ ಎಂದು ಬಿಲ್ ಅನ್ನು ಕೇಳಿದಾಗ, ಅವನು ಹೇಳಿದ್ದು: “ಚಿಕ್ಕಪುಟ್ಟ ಸಭೆಗಳಿಗೆ ಹೀಗೆ ಸಹಾಯಮಾಡುವುದರಲ್ಲಿ ನಾನು ಬಹಳಷ್ಟು ಸಂತೃಪ್ತಿಯನ್ನು ಪಡೆದುಕೊಳ್ಳುತ್ತೇನೆ. ನನ್ನಲ್ಲಿರುವ ಕುಶಲತೆಯನ್ನು ಮತ್ತು ಪರಿಣತಿಯನ್ನು ಈ ರೀತಿಯಲ್ಲಿ ಇತರರ ಒಳಿತಿಗಾಗಿ ಉಪಯೋಗಿಸುವುದರಲ್ಲಿ ನಾನು ಆನಂದಿಸುತ್ತೇನೆ.” ಎಮಾ ಸತ್ಯವನ್ನು ಇತರರಿಗೆ ಕಲಿಸುವುದರಲ್ಲಿ ತನ್ನ ಶಕ್ತಿ, ಸಾಮರ್ಥ್ಯಗಳನ್ನು ಏಕೆ ಉಪಯೋಗಿಸುತ್ತಾಳೆ? “ಇದೇ ನನಗೆ ಸರ್ವಸ್ವವಾಗಿತ್ತು. ಇನ್ನೂ ಯುವತಿಯಾಗಿದ್ದು, ಶಕ್ತಿಸಾಮರ್ಥ್ಯವನ್ನು ಹೊಂದಿದ್ದಾಗ,
ಯೆಹೋವನನ್ನು ಸಂತೋಷಪಡಿಸಲು ಮತ್ತು ಇತರರಿಗೆ ಸಹಾಯಮಾಡಲು ನನ್ನಿಂದಾದಷ್ಟು ಮಾಡಲು ನಾನು ಬಯಸಿದೆ. ಕೆಲವೊಂದು ಭೌತಿಕ ಲಾಭಗಳನ್ನು ತ್ಯಾಗಮಾಡುವುದು ನನ್ನ ಜೀವನದಲ್ಲಿ ಅಷ್ಟೇನೂ ದೊಡ್ಡದಾಗಿರಲಿಲ್ಲ. ಯೆಹೋವನು ನನಗೇನು ಮಾಡಿದ್ದಾನೋ ಅದಕ್ಕಾಗಿ ನಾನೇನು ಮಾಡಬೇಕಿತ್ತೋ ಅದನ್ನೇ ಮಾಡುತ್ತಿದ್ದೇನೆ.”ಮೊರಸ್ ಮತ್ತು ಬೆಟಿ ತಮ್ಮ ಕುಟುಂಬದವರ ಪಾಲನೆಪೋಷಣೆಯಲ್ಲಿ ಇಷ್ಟೆಲ್ಲ ವರ್ಷಗಳ ತನಕ ಕಷ್ಟಪಟ್ಟು ದುಡಿದ ನಂತರ, ಜೀವನವನ್ನು ಆರಾಮವಾಗಿ ಕಳೆಯುವುದನ್ನು ಬಿಟ್ಟು, ಇತರರಿಗೆ ಸಹಾಯಮಾಡುತ್ತಿದ್ದೇವಲ್ಲಾ ಎಂದು ವಿಷಾದಪಡುವುದಿಲ್ಲ. ಈಗ ಅವರು ನಿವೃತ್ತರಾಗಿರುವುದರಿಂದ, ಉಪಯುಕ್ತವೂ ಅರ್ಥಭರಿತವೂ ಆದಂತಹ ಯಾವುದಾದರೂ ಕೆಲಸವನ್ನು ಮಾಡುತ್ತಾ ಮುಂದುವರಿಯಲು ಇಷ್ಟಪಡುತ್ತಾರೆ. “ನಾವು ಈಗ ಸುಮ್ಮನೇ ಕುಳಿತುಕೊಂಡಿರಲು ಇಷ್ಟಪಡುವುದಿಲ್ಲ. ಬೇರೆ ಒಂದು ದೇಶದಲ್ಲಿರುವ ಜನರಿಗೆ ಯೆಹೋವನ ಕುರಿತಾಗಿ ಕಲಿತುಕೊಳ್ಳುವಂತೆ ಸಹಾಯಮಾಡುವುದು, ಒಂದು ಉದ್ದೇಶಭರಿತವಾದ ಕೆಲಸವನ್ನು ಮಾಡುವದಕ್ಕೆ ನಮಗೆ ಅವಕಾಶವನ್ನು ನೀಡುತ್ತದೆ” ಎಂದು ಅವರು ಹೇಳುತ್ತಾರೆ.
ನೀವು ಸಹ ಆತ್ಮತ್ಯಾಗವುಳ್ಳವರಾಗಿರಲು ಮನಸ್ಸುಮಾಡಿದ್ದೀರೋ? ಇದು ಅಷ್ಟೇನೂ ಸುಲಭವಾಗಿರುವುದಿಲ್ಲ. ನಮ್ಮ ಅಪರಿಪೂರ್ಣ ಮಾನವ ಅಭಿಲಾಷೆಗಳ ಹಾಗೂ ದೇವರನ್ನು ಸಂತೋಷಪಡಿಸಬೇಕು ಎಂಬ ನಮ್ಮ ಉತ್ಕಟ ಇಚ್ಛೆಯ ಮಧ್ಯೆ ಯಾವಾಗಲೂ ಸಂಘರ್ಷವಿದ್ದೇ ಇರುತ್ತದೆ. (ರೋಮಾಪುರ 7:21-23) ಆದರೆ, ನಾವು ನಮ್ಮ ಜೀವಿತಗಳನ್ನು ಯೆಹೋವನು ನಿರ್ದೇಶಿಸುವಂತೆ ಬಿಡುವುದಾದರೆ, ನಾವು ಹೋರಾಟದಲ್ಲಿ ಗೆಲ್ಲಸಾಧ್ಯವಿದೆ. (ಗಲಾತ್ಯ 5:16, 17) ನಾವು ದೇವರ ಸೇವೆಯಲ್ಲಿ ತೋರಿಸಿರುವ ಆತ್ಮತ್ಯಾಗವನ್ನು ಆತನು ಜ್ಞಾಪಿಸಿಕೊಳ್ಳುವನು ಮತ್ತು ಅದಕ್ಕಾಗಿ ನಮ್ಮನ್ನು ಹೇರಳವಾಗಿ ಆಶೀರ್ವದಿಸುವನು. ಯೆಹೋವನು ಖಂಡಿತವಾಗಿಯೂ ‘ಪರಲೋಕದ ದ್ವಾರಗಳನ್ನು ತೆರೆದು ನಮ್ಮಲ್ಲಿ ಸ್ಥಳಹಿಡಿಯಲಾಗದಷ್ಟು ಸುವರವನ್ನು ಸುರಿಯುವನು.’—ಮಲಾಕಿಯ 3:10; ಇಬ್ರಿಯ 6:10.
[ಪುಟ 23ರಲ್ಲಿರುವ ಚಿತ್ರ]
ಯೇಸುವಿಗೆ ಆತ್ಮತ್ಯಾಗದ ಮನೋಭಾವವಿತ್ತು. ನಿಮಗೂ ಇದೆಯೋ?
[ಪುಟ 24ರಲ್ಲಿರುವ ಚಿತ್ರಗಳು]
ಪೌಲನು ರಾಜ್ಯ ಸಾರುವಿಕೆಯ ಕೆಲಸದಲ್ಲಿ ತನ್ನ ಗಮನವನ್ನು ಸಂಪೂರ್ಣವಾಗಿ ಕೇಂದ್ರೀಕರಿಸಿದನು