ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಚನ ಹಾಗೂ ಅಧ್ಯಯನಕ್ಕಾಗಿ ಸಮಯವನ್ನು ಕೊಂಡುಕೊಳ್ಳುವುದು

ವಾಚನ ಹಾಗೂ ಅಧ್ಯಯನಕ್ಕಾಗಿ ಸಮಯವನ್ನು ಕೊಂಡುಕೊಳ್ಳುವುದು

ವಾಚನ ಹಾಗೂ ಅಧ್ಯಯನಕ್ಕಾಗಿ ಸಮಯವನ್ನು ಕೊಂಡುಕೊಳ್ಳುವುದು

“ಈ ದಿನಗಳು ಕೆಟ್ಟವುಗಳಾಗಿರುವುದರಿಂದ, ನಿಮಗೋಸ್ಕರ ಸೂಕ್ತವಾದ ಸಮಯವನ್ನು ಕೊಂಡುಕೊಳ್ಳಿರಿ.”​—⁠ಎಫೆಸ 5:⁠16, NW.

1. ಕೆಲಸಗಳನ್ನು ಮಾಡಲಿಕ್ಕಾಗಿ ನಮ್ಮ ಸಮಯವನ್ನು ನಿಗದಿಪಡಿಸುವುದು ಏಕೆ ವಿವೇಕಯುತವಾದದ್ದಾಗಿದೆ, ಮತ್ತು ನಾವು ನಮ್ಮ ಸಮಯವನ್ನು ಉಪಯೋಗಿಸುವ ವಿಧವು, ನಮ್ಮ ಬಗ್ಗೆ ಏನನ್ನು ಪ್ರಕಟಪಡಿಸಸಾಧ್ಯವಿದೆ?

“ಸಮಯದ ತಕ್ಕ ಉಪಯೋಗದಿಂದ ಸಮಯದ ಉಳಿತಾಯ” ಮಾಡಬಹುದು ಎಂದು ಹೇಳಲಾಗುತ್ತದೆ. ಮಾಡಬೇಕಾದ ಕೆಲಸಗಳನ್ನು ಮಾಡಲಿಕ್ಕಾಗಿ ಸಮಯವನ್ನು ನಿಗದಿಪಡಿಸುವಂತಹ ಒಬ್ಬ ವ್ಯಕ್ತಿಯು, ತನ್ನ ಸಮಯದಿಂದ ಹೆಚ್ಚು ಲಾಭವನ್ನು ಪಡೆದುಕೊಳ್ಳುತ್ತಾನೆ. ಜ್ಞಾನಿ ಅರಸನಾದ ಸೊಲೊಮೋನನು ಬರೆದುದು: “ಪ್ರತಿಯೊಂದು ಕಾರ್ಯಕ್ಕೂ ಕಾಲವು ಕ್ಲುಪ್ತವಾಗಿದೆ; ಆಕಾಶದ ಕೆಳಗೆ ನಡೆಯುವ ಒಂದೊಂದು ಕೆಲಸಕ್ಕೂ ತಕ್ಕ ಸಮಯವುಂಟು.” (ಪ್ರಸಂಗಿ 3:⁠1) ಸಮಯದ ವಿಷಯದಲ್ಲಿ ನೋಡುವುದಾದರೆ, ನಮ್ಮೆಲ್ಲರಿಗೂ ಸಮಾನವಾಗಿ ದಿನಕ್ಕೆ 24 ಗಂಟೆಗಳು ಕೊಡಲ್ಪಟ್ಟಿವೆ; ಆದರೆ ನಾವು ಅದನ್ನು ಹೇಗೆ ಉಪಯೋಗಿಸುತ್ತೇವೆ ಎಂಬುದು ನಮ್ಮ ಕೈಯಲ್ಲಿದೆ. ನಾವು ಯಾವ ವಿಷಯಗಳಿಗೆ ಆದ್ಯತೆ ನೀಡುತ್ತೇವೆ ಎಂಬುದು ಮತ್ತು ನಮ್ಮ ಸಮಯವನ್ನು ಹೇಗೆ ಹಂಚಿಕೊಳ್ಳುತ್ತೇವೆ ಎಂಬುದು, ನಾವು ಯಾವುದಕ್ಕೆ ಹೆಚ್ಚಿನ ಮಹತ್ವವನ್ನು ಕೊಡುತ್ತೇವೆ ಎಂಬುದನ್ನು ಪ್ರಕಟಪಡಿಸುತ್ತದೆ.​—⁠ಮತ್ತಾಯ 6:⁠21.

2. (ಎ) ಯೇಸು ತನ್ನ ಪರ್ವತ ಪ್ರಸಂಗದಲ್ಲಿ ನಮ್ಮ ಆತ್ಮಿಕ ಆವಶ್ಯಕತೆಯ ಕುರಿತು ಏನೆಂದು ಹೇಳಿದನು? (ಬಿ) ಯಾವ ಸ್ವಪರೀಕ್ಷೆಯನ್ನು ನಾವು ಮಾಡಿಕೊಳ್ಳಬೇಕಾಗಿದೆ?

2 ನಾವು ತಿನ್ನುವುದರಲ್ಲಿ ಹಾಗೂ ನಿದ್ರಿಸುವುದರಲ್ಲಿ ಸಮಯವನ್ನು ಕಳೆಯಲೇಬೇಕಾಗಿದೆ, ಏಕೆಂದರೆ ಇವು ನಮ್ಮ ಭೌತಿಕ ಆವಶ್ಯಕತೆಗಳನ್ನು ಪೂರೈಸುತ್ತವೆ. ಆದರೆ ನಮ್ಮ ಆತ್ಮಿಕ ಆವಶ್ಯಕತೆಗಳ ಕುರಿತಾಗಿ ಏನು? ಈ ಆವಶ್ಯಕತೆಗಳನ್ನು ಸಹ ತೃಪ್ತಿಪಡಿಸಬೇಕು ಎಂಬುದು ನಮಗೆ ಗೊತ್ತಿದೆ. ತನ್ನ ಪರ್ವತ ಪ್ರಸಂಗದಲ್ಲಿ ಯೇಸು ಹೇಳಿದ್ದು: “ತಮ್ಮ ಆತ್ಮಿಕ ಆವಶ್ಯಕತೆಗಳ ಪ್ರಜ್ಞೆಯುಳ್ಳವರು ಸಂತೋಷಿತರು.” (ಮತ್ತಾಯ 5:​3, NW) ಆದುದರಿಂದಲೇ, ಬೈಬಲ್‌ ವಾಚನ ಹಾಗೂ ಅಧ್ಯಯನಕ್ಕಾಗಿ ಸಮಯವನ್ನು ಮೀಸಲಾಗಿಡುವುದರ ಪ್ರಮುಖತೆಯನ್ನು, “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ವರ್ಗವು ನಮಗೆ ಕ್ರಮವಾಗಿ ಜ್ಞಾಪಿಸುತ್ತದೆ. (ಮತ್ತಾಯ 24:45) ಇದು ಎಷ್ಟು ಪ್ರಾಮುಖ್ಯವಾದದ್ದಾಗಿದೆ ಎಂಬುದನ್ನು ನೀವು ಗ್ರಹಿಸಬಹುದಾದರೂ, ಬೈಬಲನ್ನು ಓದಲು ಹಾಗೂ ಅದರ ಅಧ್ಯಯನಮಾಡಲು ನಿಮಗೆ ಸಾಕಷ್ಟು ಸಮಯ ಸಿಗುವುದಿಲ್ಲ ಎಂದು ನಿಮಗನಿಸಬಹುದು. ಹೀಗಿರುವುದರಿಂದ, ದೇವರ ವಾಕ್ಯದ ವಾಚನ, ವೈಯಕ್ತಿಕ ಅಧ್ಯಯನ, ಹಾಗೂ ಮನನಕ್ಕಾಗಿ ನಮ್ಮ ಜೀವಿತದಲ್ಲಿ ಸಮಯವನ್ನು ಮಾಡಿಕೊಳ್ಳಲಿಕ್ಕಾಗಿರುವ ಮಾರ್ಗಗಳು ಹಾಗೂ ಮೂಲಗಳನ್ನು ನಾವು ಪರೀಕ್ಷಿಸೋಣ.

ಬೈಬಲ್‌ ವಾಚನ ಮತ್ತು ಅಧ್ಯಯನಕ್ಕಾಗಿ ಸಮಯವನ್ನು ಕಂಡುಕೊಳ್ಳುವುದು

3, 4. (ಎ) ನಮ್ಮ ಸಮಯದ ಉಪಯೋಗದ ಕುರಿತು ಅಪೊಸ್ತಲ ಪೌಲನು ಯಾವ ಸಲಹೆಯನ್ನು ಕೊಟ್ಟನು, ಮತ್ತು ಇದರಲ್ಲಿ ಏನು ಒಳಗೂಡಿದೆ? (ಬಿ) ‘ನಮಗೋಸ್ಕರ ಸೂಕ್ತವಾದ ಸಮಯವನ್ನು ಕೊಂಡುಕೊಳ್ಳುವಂತೆ’ ಪೌಲನು ನಮಗೆ ಸಲಹೆ ಕೊಟ್ಟಾಗ, ಅವನು ಏನನ್ನು ಅರ್ಥೈಸಿದನು?

3 ನಾವು ಜೀವಿಸುತ್ತಿರುವಂತಹ ಸಮಯವನ್ನು ಪರಿಗಣಿಸುವಾಗ, ನಾವೆಲ್ಲರೂ ಅಪೊಸ್ತಲ ಪೌಲನ ಮಾತುಗಳಿಗೆ ಕಿವಿಗೊಡಬೇಕಾಗಿದೆ: “ನೀವು ನಡಕೊಳ್ಳುವ ರೀತಿಯನ್ನು ಕುರಿತು ಚೆನ್ನಾಗಿ ನೋಡಿಕೊಳ್ಳಿರಿ. ಜ್ಞಾನವಿಲ್ಲದವರಾಗಿರದೆ ಜ್ಞಾನವಂತರಾಗಿರ್ರಿ. ಈ ದಿನಗಳು ಕೆಟ್ಟವುಗಳಾಗಿವೆ; ಆದದರಿಂದ ಕಾಲವನ್ನು ಸುಮ್ಮನೆ ಕಳಕೊಳ್ಳದೆ ಅದನ್ನು ಬೆಲೆಯುಳ್ಳದ್ದೆಂದು ಉಪಯೋಗಿಸಿಕೊಳ್ಳಿರಿ [“ಈ ದಿನಗಳು ಕೆಟ್ಟವುಗಳಾಗಿರುವುದರಿಂದ, ನಿಮಗೋಸ್ಕರ ಸೂಕ್ತವಾದ ಸಮಯವನ್ನು ಕೊಂಡುಕೊಳ್ಳಿರಿ,” NW]. ಮತ್ತು ಬುದ್ಧಿಹೀನರಾಗಿ ನಡೆಯದೆ ಯೆಹೋವನ ಚಿತ್ತವೇನೆಂಬದನ್ನು ವಿಚಾರಿಸಿ ತಿಳಿದವರಾಗಿರ್ರಿ.” (ಎಫೆಸ 5:​15-17) ಈ ಸಲಹೆಯು, ಸಮರ್ಪಿತ ಕ್ರೈಸ್ತರಾಗಿರುವ ನಮ್ಮ ಜೀವಿತದ ಪ್ರತಿಯೊಂದು ಅಂಶವನ್ನು ಒಳಗೊಳ್ಳುತ್ತದೆ ಎಂಬುದರಲ್ಲಿ ಸಂದೇಹವಿಲ್ಲ. ಅಂದರೆ ಪ್ರಾರ್ಥನೆಗಾಗಿ, ಅಧ್ಯಯನಕ್ಕಾಗಿ, ಕೂಟಗಳಿಗಾಗಿ, ಹಾಗೂ ‘ರಾಜ್ಯದ ಸುವಾರ್ತೆಯನ್ನು’ ಸಾರುವುದರಲ್ಲಿ ಸಾಧ್ಯವಿರುವಷ್ಟು ಮಟ್ಟಿಗೆ ಪಾಲ್ಗೊಳ್ಳಲಿಕ್ಕಾಗಿ ಸಮಯವನ್ನು ಕಂಡುಕೊಳ್ಳುವುದು ಇದರಲ್ಲಿ ಒಳಗೂಡಿದೆ.​—⁠ಮತ್ತಾಯ 24:14; 28:​19, 20.

4 ಇಂದು ಯೆಹೋವನ ಸೇವಕರಲ್ಲಿ ಅನೇಕರು, ಬೈಬಲ್‌ ವಾಚನ ಹಾಗೂ ಗಹನವಾದ ಅಧ್ಯಯನಕ್ಕಾಗಿ ಸಮಯವನ್ನು ಬದಿಗಿರಿಸುವುದನ್ನು ಕಷ್ಟಕರವಾದದ್ದಾಗಿ ಕಂಡುಕೊಳ್ಳುತ್ತಾರೆ. ನಮಗಿರುವ 24 ಗಂಟೆಗೆ ಇನ್ನೊಂದು ತಾಸನ್ನು ನಾವು ಕೂಡಿಸಸಾಧ್ಯವಿಲ್ಲ ಎಂಬುದಂತೂ ಖಂಡಿತ. ಆದುದರಿಂದ ಪೌಲನ ಸಲಹೆಗೆ ಬೇರೇನೋ ಅರ್ಥವಿರಬೇಕು. ಏಕೆಂದರೆ, ಗ್ರೀಕ್‌ ಭಾಷೆಯಲ್ಲಿ ‘ಸೂಕ್ತವಾದ ಸಮಯವನ್ನು ಕೊಂಡುಕೊಳ್ಳುವುದು’ ಎಂಬ ವಾಕ್ಸರಣಿಯು, ಯಾವುದೋ ವಿಷಯವನ್ನು ತ್ಯಾಗಮಾಡಿ ಸಮಯವನ್ನು ಖರೀದಿಸುವ ಅರ್ಥವನ್ನು ಕೊಡುತ್ತದೆ. ಡಬ್ಲ್ಯೂ. ಇ. ವೈನ್‌ರವರು ತಮ್ಮ ಎಕ್ಸ್‌ಪೊಸಿಟೊರಿ ಡಿಕ್ಷನೆರಿಯಲ್ಲಿ ಈ ವಾಕ್ಸರಣಿಗೆ ಈ ಅರ್ಥವನ್ನು ಕೊಡುತ್ತಾರೆ: “ಕೈತಪ್ಪಿಹೋಗುವ ಅವಕಾಶಗಳನ್ನು ಪುನಃ ಪಡೆಯಸಾಧ್ಯವಿಲ್ಲದಿರುವುದರಿಂದ, ಪ್ರತಿಯೊಂದು ಅವಕಾಶವನ್ನು ಅತ್ಯುತ್ತಮವಾಗಿ ಸದುಪಯೋಗಿಸಿಕೊಳ್ಳುವುದು.” ಬೈಬಲ್‌ ವಾಚನ ಹಾಗೂ ಅಧ್ಯಯನಕ್ಕಾಗಿ ನಾವು ಎಲ್ಲಿಂದ ಹಾಗೂ ಹೇಗೆ ಸೂಕ್ತವಾದ ಸಮಯವನ್ನು ಕೊಂಡುಕೊಳ್ಳಸಾಧ್ಯವಿದೆ?

ನಾವು ಆದ್ಯತೆಗಳನ್ನಿಡಬೇಕು

5. ನಾವು ಏಕೆ ‘ಉತ್ತಮ ಕಾರ್ಯಗಳು ಯಾವವೆಂದು ವಿವೇಚಿಸುವವರಾಗಿರಬೇಕು’ ಮತ್ತು ಹೇಗೆ?

5 ನಮ್ಮ ಐಹಿಕ ಕರ್ತವ್ಯಗಳ ಜೊತೆಗೆ, ನಾವು ಅನೇಕ ರೀತಿಯ ಆತ್ಮಿಕ ಕೆಲಸಗಳನ್ನೂ ನಿಭಾಯಿಸಲಿಕ್ಕಿದೆ. ಯೆಹೋವನ ಸಮರ್ಪಿತ ಸೇವಕರಾಗಿರುವ ನಮಗೆ, “ಕರ್ತನ ಸೇವೆಯಲ್ಲಿ ಬಹಳಷ್ಟನ್ನು ಮಾಡಲಿಕ್ಕಿದೆ.” (1 ಕೊರಿಂಥ 15:​58, NW) ಈ ಕಾರಣದಿಂದಲೇ ಪೌಲನು ಫಿಲಿಪ್ಪಿಯದಲ್ಲಿರುವ ಕ್ರೈಸ್ತರಿಗೆ “ಉತ್ತಮ ಕಾರ್ಯಗಳು ಯಾವವೆಂದು ನೀವು ವಿವೇಚಿಸುವವರಾಗಬೇಕೆಂದು” ಬೋಧಿಸಿದನು. (ಫಿಲಿಪ್ಪಿ 1:10) ನಾವು ಆದ್ಯತೆಗಳನ್ನಿಡಬೇಕು ಎಂಬುದೇ ಇದರ ಅರ್ಥವಾಗಿದೆ. ಪ್ರಾಪಂಚಿಕ ವಿಷಯಗಳಿಗಿಂತಲೂ ಹೆಚ್ಚಾಗಿ ಆತ್ಮಿಕ ವಿಷಯಗಳಿಗೆ ನಾವು ಯಾವಾಗಲೂ ಆದ್ಯತೆ ನೀಡಬೇಕು. (ಮತ್ತಾಯ 6:​31-33) ಆದರೂ, ನಮ್ಮ ಆತ್ಮಿಕ ಆವಶ್ಯಕತೆಗಳನ್ನು ಪೂರೈಸುವುದರಲ್ಲಿ ಸಮತೂಕ ಮನೋಭಾವದವರಾಗಿರುವ ಅಗತ್ಯವಿದೆ. ನಮ್ಮ ಕ್ರೈಸ್ತ ಜೀವಿತದ ಬೇರೆ ಬೇರೆ ಕೆಲಸಗಳ ನಡುವೆ ನಾವು ಸಮಯವನ್ನು ಹೇಗೆ ಹಂಚಿಕೊಳ್ಳುತ್ತಿದ್ದೇವೆ? ಒಬ್ಬ ಕ್ರೈಸ್ತನು ಗಮನ ಕೊಡಬೇಕಾಗಿರುವ “ಉತ್ತಮ ಕಾರ್ಯಗಳ”ಲ್ಲಿ, ವೈಯಕ್ತಿಕ ಅಧ್ಯಯನ ಹಾಗೂ ಬೈಬಲ್‌ ವಾಚನವನ್ನು ಹೆಚ್ಚಾಗಿ ಅಲಕ್ಷಿಸಲಾಗುತ್ತದೆ ಎಂದು ಸಂಚರಣ ಮೇಲ್ವಿಚಾರಕರು ವರದಿಸುತ್ತಾರೆ.

6. ಐಹಿಕ ಉದ್ಯೋಗ ಅಥವಾ ಮನೆಗೆಲಸದ ವಿಷಯಕ್ಕೆ ಬರುವಾಗ, ಸೂಕ್ತವಾದ ಸಮಯವನ್ನು ಕೊಂಡುಕೊಳ್ಳುವುದರಲ್ಲಿ ಯಾವುದನ್ನು ಒಳಗೂಡಿಸಸಾಧ್ಯವಿದೆ?

6 ಇಷ್ಟರ ತನಕ ನಾವು ನೋಡಿರುವಂತೆ, ಸೂಕ್ತವಾದ ಸಮಯವನ್ನು ಕೊಂಡುಕೊಳ್ಳುವುದರಲ್ಲಿ, “ಪ್ರತಿಯೊಂದು ಅವಕಾಶವನ್ನು ಅತ್ಯುತ್ತಮವಾಗಿ ಸದುಪಯೋಗಿಸಿಕೊಳ್ಳುವುದು” ಒಳಗೂಡಿದೆ. ಆದುದರಿಂದ, ನಮ್ಮ ಬೈಬಲ್‌ ವಾಚನ ಹಾಗೂ ಅಧ್ಯಯನ ಹವ್ಯಾಸಗಳು ಕ್ರಮವಾಗಿಲ್ಲದಿರುವಲ್ಲಿ, ನಮ್ಮ ಸಮಯವು ಹೇಗೆ ವ್ಯಯಿಸಲ್ಪಡುತ್ತಿದೆ ಎಂಬುದನ್ನು ಕಂಡುಕೊಳ್ಳಲು ವೈಯಕ್ತಿಕ ಪರೀಕ್ಷೆಯನ್ನು ಮಾಡಿಕೊಳ್ಳುವುದು ಒಳ್ಳೇದು. ನಮ್ಮ ಐಹಿಕ ಉದ್ಯೋಗವು ತುಂಬ ಕಷ್ಟಕರವಾಗಿದ್ದು, ನಮ್ಮ ಸಮಯ ಹಾಗೂ ಶಕ್ತಿಯನ್ನು ಕಬಳಿಸಿಬಿಡುವಂಥದ್ದಾಗಿರುವಲ್ಲಿ, ನಾವು ಈ ವಿಷಯದ ಕುರಿತು ಯೆಹೋವನ ಬಳಿ ಪ್ರಾರ್ಥನೆಯಲ್ಲಿ ಬೇಡಿಕೊಳ್ಳತಕ್ಕದ್ದು. (ಕೀರ್ತನೆ 55:22) ಇದು, ಯೆಹೋವನ ಆರಾಧನೆಗೆ ಸಂಬಂಧಿಸಿದ ಪ್ರಮುಖ ಕೆಲಸಗಳನ್ನು ಮಾಡಲಿಕ್ಕಾಗಿ ನಮಗೆ ಹೆಚ್ಚು ಸಮಯವು ಸಿಗುವಂತೆ ನಮ್ಮ ಕೆಲಸದಲ್ಲಿ ಹೊಂದಾಣಿಕೆಗಳನ್ನು ಮಾಡಿಕೊಳ್ಳಲು ಸಹಾಯಮಾಡಬಹುದು. ಇದಲ್ಲದೆ, ಸ್ತ್ರೀಯರ ಕೆಲಸವು ಎಂದೂ ಮುಗಿಯುವುದಿಲ್ಲ ಎಂದು ಸೂಕ್ತವಾಗಿಯೇ ಹೇಳಲಾಗುತ್ತದೆ. ಆದುದರಿಂದ, ಕ್ರೈಸ್ತ ಸ್ತ್ರೀಯರು ಸಹ ಸರಿಯಾದ ಆದ್ಯತೆಗಳನ್ನಿಡಬೇಕು ಮತ್ತು ಬೈಬಲ್‌ ವಾಚನ ಹಾಗೂ ಗಂಭೀರವಾದ ಅಧ್ಯಯನಕ್ಕಾಗಿ ನಿಗದಿತ ಸಮಯವನ್ನು ಮೀಸಲಾಗಿಡಬೇಕು.

7, 8. (ಎ) ವಾಚನ ಹಾಗೂ ಅಧ್ಯಯನಕ್ಕಾಗಿ ನಾವು ಯಾವ ಚಟುವಟಿಕೆಗಳಿಂದ ಸಮಯವನ್ನು ಕೊಂಡುಕೊಳ್ಳಸಾಧ್ಯವಿದೆ? (ಬಿ) ಮನೋರಂಜನೆಯ ಉದ್ದೇಶವೇನು, ಮತ್ತು ಇದನ್ನು ನೆನಪಿನಲ್ಲಿಟ್ಟುಕೊಳ್ಳುವುದು ನಾವು ಆದ್ಯತೆಗಳನ್ನು ಇಡುವಂತೆ ಹೇಗೆ ಸಹಾಯಮಾಡಸಾಧ್ಯವಿದೆ?

7 ಸಾಮಾನ್ಯವಾಗಿ, ನಮ್ಮಲ್ಲಿ ಹೆಚ್ಚಿನವರು ಅನಗತ್ಯವಾದ ಚಟುವಟಿಕೆಗಳನ್ನು ಬದಿಗಿರಿಸಿ, ಅಧ್ಯಯನಕ್ಕಾಗಿ ಸಮಯವನ್ನು ಕೊಂಡುಕೊಳ್ಳಸಾಧ್ಯವಿದೆ. ಈ ವಿಷಯದಲ್ಲಿ ನಾವು ಸ್ವತಃ ಹೀಗೆ ಕೇಳಿಕೊಳ್ಳಬಹುದು: ‘ಐಹಿಕ ಪತ್ರಿಕೆಗಳನ್ನು ಅಥವಾ ವಾರ್ತಾಪತ್ರಿಕೆಗಳನ್ನು ಓದುವುದರಲ್ಲಿ, ಟೆಲಿವಿಷನ್‌ ಕಾರ್ಯಕ್ರಮಗಳನ್ನು ನೋಡುವುದರಲ್ಲಿ, ಸಂಗೀತವನ್ನು ಕೇಳಿಸಿಕೊಳ್ಳುವುದರಲ್ಲಿ, ಇಲ್ಲವೇ ವಿಡಿಯೋ ಆಟಗಳನ್ನು ಆಡುವುದರಲ್ಲಿ ನಾನೆಷ್ಟು ಸಮಯವನ್ನು ಕಳೆಯುತ್ತೇನೆ? ಬೈಬಲ್‌ ವಾಚನದಲ್ಲಿ ಕಳೆಯುವುದಕ್ಕಿಂತಲೂ ಹೆಚ್ಚಿನ ಸಮಯವನ್ನು ನಾನು ಕಂಪ್ಯೂಟರಿನ ಮುಂದೆ ಕಳೆಯುತ್ತೇನೋ?’ ಪೌಲನು ಹೇಳುವುದು: “ಬುದ್ಧಿಹೀನರಾಗಿ ನಡೆಯದೆ ಯೆಹೋವನ ಚಿತ್ತವೇನೆಂಬದನ್ನು ವಿಚಾರಿಸಿ ತಿಳಿದವರಾಗಿರ್ರಿ.” (ಎಫೆಸ 5:17) ಅನೇಕ ಸಾಕ್ಷಿಗಳು ಟೆಲಿವಿಷನ್‌ ಕಾರ್ಯಕ್ರಮವನ್ನು ನೋಡುವುದರಲ್ಲಿ ಬಹಳಷ್ಟು ಸಮಯವನ್ನು ಕಳೆಯುತ್ತಿರುವ ಕಾರಣದಿಂದಲೇ, ವೈಯಕ್ತಿಕ ಅಧ್ಯಯನ ಹಾಗೂ ಬೈಬಲ್‌ ವಾಚನಕ್ಕಾಗಿ ಅವರಿಗೆ ಸಾಕಷ್ಟು ಸಮಯವು ದೊರಕುತ್ತಿಲ್ಲ ಎಂಬಂತೆ ತೋರುತ್ತದೆ.​—⁠ಕೀರ್ತನೆ 101:3; 119:​37, 47, 48.

8 ಎಲ್ಲ ಸಮಯದಲ್ಲಿ ಅಧ್ಯಯನ ಮಾಡುವುದು ನಮಗೆ ಸಾಧ್ಯವಿಲ್ಲ ಹಾಗೂ ನಮಗೆ ಮನೋರಂಜನೆಯ ಅಗತ್ಯವಿದೆ ಎಂದು ಕೆಲವರು ಹೇಳಬಹುದು. ಇದು ನಿಜವಾಗಿರುವುದಾದರೂ, ನಾವು ಮನೋರಂಜನೆಯಲ್ಲಿ ಎಷ್ಟು ಸಮಯವನ್ನು ಕಳೆಯುತ್ತೇವೆ ಎಂಬುದನ್ನು ಪರಿಗಣಿಸಿ, ಅದನ್ನು ಬೈಬಲ್‌ ವಾಚನ ಮತ್ತು ಅಧ್ಯಯನದಲ್ಲಿ ಕಳೆಯುವ ಸಮಯದೊಂದಿಗೆ ಹೋಲಿಸುವುದು ಒಳ್ಳೇದಾಗಿರುವುದು. ಇದರ ಫಲಿತಾಂಶವು ನಮಗೆ ಆಶ್ಚರ್ಯವನ್ನುಂಟುಮಾಡಬಹುದು. ಮನೋರಂಜನೆ ಹಾಗೂ ವಿರಾಮವು ಅಗತ್ಯವಾಗಿರುವುದಾದರೂ, ಅದನ್ನು ತಕ್ಕ ಸ್ಥಾನದಲ್ಲಿಡಬೇಕು. ಏಕೆಂದರೆ, ಆತ್ಮಿಕ ಚಟುವಟಿಕೆಗಳನ್ನು ಪುನಃ ಆರಂಭಿಸಲಿಕ್ಕಾಗಿ ನಮ್ಮನ್ನು ಚೈತನ್ಯಗೊಳಿಸುವುದೇ ಮನೋರಂಜನೆ ಹಾಗೂ ವಿರಾಮದ ಉದ್ದೇಶವಾಗಿದೆ. ಟೆಲಿವಿಷನ್‌ನಲ್ಲಿ ಬರುವ ಅನೇಕ ಕಾರ್ಯಕ್ರಮಗಳು ಹಾಗೂ ವಿಡಿಯೋ ಆಟಗಳು ಒಬ್ಬ ವ್ಯಕ್ತಿಯನ್ನು ತುಂಬ ದಣಿಸಿಬಿಡುತ್ತವೆ. ಆದರೆ ದೇವರ ವಾಕ್ಯವನ್ನು ಓದುವುದು ಹಾಗೂ ಅಧ್ಯಯನಮಾಡುವುದು ಚೈತನ್ಯಕರವೂ ಬಲಗೊಳಿಸುವಂತಹದ್ದೂ ಆಗಿದೆ.​—⁠ಕೀರ್ತನೆ 19:​7, 8.

ಕೆಲವರು ಅಧ್ಯಯನಕ್ಕಾಗಿ ಸಮಯವನ್ನು ಮಾಡಿಕೊಳ್ಳುವ ವಿಧ

9. ಪ್ರತಿನಿತ್ಯ ಶಾಸ್ತ್ರಗಳನ್ನು ಪರೀಕ್ಷಿಸುವುದು​—⁠1999 ಎಂಬ ಪುಸ್ತಿಕೆಯಲ್ಲಿ ಕೊಡಲ್ಪಟ್ಟಿರುವ ಸಲಹೆಯನ್ನು ಅನುಸರಿಸುವುದರಿಂದ ಯಾವ ಪ್ರಯೋಜನಗಳು ಸಿಗುತ್ತವೆ?

9ಪ್ರತಿನಿತ್ಯ ಶಾಸ್ತ್ರಗಳನ್ನು ಪರೀಕ್ಷಿಸುವುದು ಎಂಬ ಪುಸ್ತಿಕೆಯ 1999ನೆಯ ಸಂಪುಟದ ಮುನ್ನುಡಿಯು ಹೀಗೆ ಹೇಳುತ್ತದೆ: “ದೈನಿಕ ವಚನವನ್ನು ಮತ್ತು ಪುಸ್ತಿಕೆಯಲ್ಲಿರುವ ಹೇಳಿಕೆಗಳನ್ನು ಬೆಳಗ್ಗಿನ ಸಮಯದಲ್ಲಿ ಪರಿಶೀಲಿಸುವುದು ಅತ್ಯಂತ ಪ್ರಯೋಜನಕಾರಿ ಆಗಿರಬಲ್ಲದು. ಇದು ಮಹಾ ಉಪದೇಶಕನಾದ ಯೆಹೋವನೇ ನಿಮ್ಮನ್ನು ಮುಂಜಾನೆ ಆತನ ಬೋಧನೆಗಳೊಂದಿಗೆ ಎಬ್ಬಿಸುತ್ತಿರುವನೊ ಎಂಬಂತೆ ನಿಮಗನಿಸಬಹುದು. ಪ್ರತಿನಿತ್ಯ ಬೆಳಗ್ಗೆ ಯೆಹೋವನ ಬೋಧನೆಗಳಿಂದ ಯೇಸು ಕ್ರಿಸ್ತನು ಪ್ರಯೋಜನ ಹೊಂದುತ್ತಿರುವುದಾಗಿ ಪ್ರವಾದನಾತ್ಮಕವಾಗಿ ಹೇಳಲಾಗಿದೆ: ‘ಯೆಹೋವನು . . . ಬೆಳಬೆಳಗೂ ನನ್ನನ್ನು ಎಚ್ಚರಿಸಿ ಶಿಕ್ಷಿತರಂತೆ ನಾನು ಕೇಳುವ ಹಾಗೆ ನನ್ನ ಕಿವಿಯನ್ನು ಜಾಗರಗೊಳಿಸುತ್ತಾನೆ.’ ಇಂಥ ಬೋಧನೆಗಳು ಯೇಸುವಿಗೆ ‘ಶಿಕ್ಷಿತರ ನಾಲಿಗೆಯನ್ನು’ ನೀಡಿದ ಕಾರಣ, ‘ಬಳಲಿಹೋದವರನ್ನು ಮಾತುಗಳಿಂದ ಸುಧಾರಿಸುವುದಕ್ಕೆ ಬಲ್ಲವನಾಗುವಂತೆ’ ಅವನನ್ನು ಶಕ್ತಗೊಳಿಸಿದವು. (ಯೆಶಾ. 30:20; 50:4; ಮತ್ತಾ. 11:​28-30) ಪ್ರತಿದಿನ ಬೆಳಗ್ಗೆ ದೇವರ ವಾಕ್ಯದಿಂದ ಬರುವ ಸಮಯೋಚಿತ ಸಲಹೆಗಳಿಗೆ ಕಿವಿಗೊಡುವ ಮೂಲಕ ಎಚ್ಚರಗೊಳ್ಳುವುದರಿಂದ, ಅದು ನಿಮ್ಮ ಸ್ವಂತ ಸಮಸ್ಯೆಗಳನ್ನು ನಿಭಾಯಿಸುವಂತೆ ಸಹಾಯಮಾಡುವುದು ಮಾತ್ರವಲ್ಲ, ಇತರರಿಗೂ ಸಹಾಯಮಾಡುವಂತೆ ‘ಶಿಕ್ಷಿತರ ನಾಲಿಗೆಯಿಂದ’ ನಿಮ್ಮನ್ನು ಸಜ್ಜುಗೊಳಿಸುವುದು.” *

10. ಕೆಲವರು ಬೈಬಲ್‌ ವಾಚನ ಹಾಗೂ ಅಧ್ಯಯನಕ್ಕಾಗಿ ಹೇಗೆ ಸಮಯವನ್ನು ಮಾಡಿಕೊಳ್ಳುತ್ತಾರೆ, ಮತ್ತು ಇದರಿಂದ ಯಾವ ಪ್ರಯೋಜನಗಳು ಸಿಗುತ್ತವೆ?

10 ಪ್ರತಿದಿನ ಬೆಳಗ್ಗೆ ದೈನಂದಿನ ವಚನವನ್ನು ಹಾಗೂ ಹೇಳಿಕೆಗಳನ್ನು ಓದುವ ಮೂಲಕ ಹಾಗೂ ಬೈಬಲನ್ನು ಓದುವ ಅಥವಾ ಅಧ್ಯಯನ ಮಾಡುವ ಮೂಲಕ ಅನೇಕ ಕ್ರೈಸ್ತರು ಈ ಸಲಹೆಯನ್ನು ಅನುಸರಿಸುತ್ತಾರೆ. ಫ್ರಾನ್ಸ್‌ನಲ್ಲಿ, ಒಬ್ಬ ನಂಬಿಗಸ್ತ ಪಯನೀಯರ್‌ ಸಹೋದರಿಯು ಪ್ರತಿದಿನ ಬೆಳಗ್ಗೆ ಬೇಗನೆ ಎದ್ದು, 30 ನಿಮಿಷ ಬೈಬಲನ್ನು ಓದುತ್ತಾಳೆ. ಅನೇಕ ವರ್ಷಗಳಿಂದ ಹೀಗೆ ವಾಚನವನ್ನು ಮುಂದುವರಿಸುವಂತೆ ಅವಳಿಗೆ ಯಾವುದು ಸಹಾಯಮಾಡಿದೆ? ಅವಳು ಹೇಳುವುದು: “ಇದರಿಂದ ನಾನು ತುಂಬ ಪ್ರಚೋದಿತಳಾಗಿದ್ದೇನೆ, ಮತ್ತು ಏನೇ ಅಡಚಣೆ ಬಂದರೂ ಸರಿ ನಾನು ನನ್ನ ಬೈಬಲ್‌ ವಾಚನದ ಕಾರ್ಯತಖ್ತೆಯನ್ನು ಮಾತ್ರ ಕಟ್ಟುನಿಟ್ಟಾಗಿ ಪಾಲಿಸುತ್ತೇನೆ!” ಬೈಬಲ್‌ ವಾಚನಕ್ಕಾಗಿ ನಾವು ಯಾವುದೇ ಸಮಯವನ್ನು ಆಯ್ದುಕೊಳ್ಳುವುದಾದರೂ, ನಮ್ಮ ಕಾರ್ಯತಖ್ತೆಯನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಅತಿ ಪ್ರಾಮುಖ್ಯವಾದದ್ದಾಗಿದೆ. ಯೂರೋಪ್‌ ಹಾಗೂ ಉತ್ತರ ಆಫ್ರಿಕದಲ್ಲಿ 40 ವರ್ಷಗಳಿಗಿಂತಲೂ ಹೆಚ್ಚಿನ ಸಮಯದಿಂದ ಪಯನೀಯರ್‌ ಸೇವೆಮಾಡುತ್ತಿರುವ ರನೆ ಮೀಕ ಹೇಳುವುದು: “ಪ್ರತಿ ವರ್ಷ ಬೈಬಲನ್ನು ಸಂಪೂರ್ಣವಾಗಿ ಓದಿಮುಗಿಸುವುದು 1950ರಿಂದ ನನ್ನ ಗುರಿಯಾಗಿದೆ. ಇಷ್ಟರ ತನಕ ನಾನು 49 ಬಾರಿ ಬೈಬಲನ್ನು ಸಂಪೂರ್ಣವಾಗಿ ಓದಿಮುಗಿಸಿದ್ದೇನೆ. ನನ್ನ ಸೃಷ್ಟಿಕರ್ತನೊಂದಿಗೆ ನಿಕಟ ಸಂಬಂಧವನ್ನು ಕಾಪಾಡಿಕೊಳ್ಳಲು ಇದು ಅತ್ಯಗತ್ಯವಾದದ್ದು ಎಂಬುದೇ ನನ್ನ ಅನಿಸಿಕೆ. ದೇವರ ವಾಕ್ಯದ ಕುರಿತು ಮನನಮಾಡುವುದು, ಯೆಹೋವನ ನ್ಯಾಯ ಹಾಗೂ ಆತನ ಇನ್ನಿತರ ಗುಣಗಳನ್ನು ಹೆಚ್ಚು ಉತ್ತಮವಾಗಿ ಅರ್ಥಮಾಡಿಕೊಳ್ಳಲು ಸಹಾಯಮಾಡುತ್ತದೆ. ಮತ್ತು ಇದು ಅದ್ಭುತಕರವಾದ ಬಲದ ಮೂಲವೂ ಆಗಿದೆ.” *

“ಹೊತ್ತುಹೊತ್ತಿಗೆ ಬೇಕಾದ ಆಹಾರದ ಸರಬರಾಯಿ”

11, 12. (ಎ) “ನಂಬಿಗಸ್ತನೂ ವಿವೇಕಿಯೂ ಆದಂಥ ಮನೆವಾರ್ತೆಯವ”ನಿಂದ ಯಾವ ಆತ್ಮಿಕ “ಆಹಾರದ ಸರಬರಾಯಿ” ಮಾಡಲ್ಪಡುತ್ತಿದೆ? (ಬಿ) ಆತ್ಮಿಕ “ಆಹಾರದ ಸರಬರಾಯಿ” ಹೊತ್ತುಹೊತ್ತಿಗೆ ಹೇಗೆ ಮಾಡಲ್ಪಡುತ್ತಿದೆ?

11 ಕ್ರಮವಾಗಿ ಊಟಮಾಡುವುದನ್ನು ರೂಢಿಮಾಡಿಕೊಳ್ಳುವುದರಿಂದ ಶಾರೀರಿಕ ಆರೋಗ್ಯವನ್ನು ಒಳ್ಳೇ ರೀತಿಯಲ್ಲಿ ಕಾಪಾಡಿಕೊಳ್ಳಸಾಧ್ಯವಿರುವಂತೆಯೇ, ಕ್ರಮವಾದ ಬೈಬಲ್‌ ಅಧ್ಯಯನ ಹಾಗೂ ವಾಚನವನ್ನು ಮಾಡುವ ಮೂಲಕ ಆತ್ಮಿಕ ಆರೋಗ್ಯವನ್ನು ಕಾಪಾಡಿಕೊಳ್ಳಸಾಧ್ಯವಿದೆ. ಲೂಕನ ಸುವಾರ್ತೆಯಲ್ಲಿ ನಾವು ಯೇಸುವಿನ ಈ ಮಾತುಗಳನ್ನು ಓದುತ್ತೇವೆ: “ಹೊತ್ತುಹೊತ್ತಿಗೆ ಅಶನಕ್ಕೆ ಬೇಕಾದದ್ದನ್ನು [“ಬೇಕಾದ ಆಹಾರದ ಸರಬರಾಯಿಯನ್ನು,” NW] ಅಳೆದುಕೊಡುವದಕ್ಕಾಗಿ ಯಜಮಾನನು ತನ್ನ ಮನೆಯವರ ಮೇಲೆ ನೇಮಿಸಿದ ನಂಬಿಗಸ್ತನೂ ವಿವೇಕಿಯೂ ಆಗಿರುವ ಮನೆವಾರ್ತೆಯವನು ಯಾರು?” (ಲೂಕ 12:42) 120ಕ್ಕಿಂತಲೂ ಹೆಚ್ಚು ವರ್ಷಗಳಿಂದ, ಕಾವಲಿನಬುರುಜು ಪತ್ರಿಕೆಯಲ್ಲಿ ಹಾಗೂ ಇನ್ನಿತರ ಬೈಬಲಾಧಾರಿತ ಪುಸ್ತಕಗಳು ಹಾಗೂ ಪ್ರಕಾಶನಗಳಲ್ಲಿ, ‘ಹೊತ್ತುಹೊತ್ತಿಗೆ ಬೇಕಾದ ಆತ್ಮಿಕ ಆಹಾರದ ಸರಬರಾಯಿ’ ಮಾಡಲ್ಪಡುತ್ತಿದೆ.

12 “ಹೊತ್ತುಹೊತ್ತಿಗೆ” ಎಂಬ ಅಭಿವ್ಯಕ್ತಿಯನ್ನು ಗಮನಿಸಿರಿ. ಸೂಕ್ತವಾದ ಸಮಯದಲ್ಲಿ, ನಮ್ಮ “ಬೋಧಕ”ನಾಗಿರುವ ಯೆಹೋವನು, ತನ್ನ ಮಗ ಹಾಗೂ ಆಳುವರ್ಗದ ಮೂಲಕ, ಶಾಸ್ತ್ರೀಯ ಸಿದ್ಧಾಂತಗಳು ಹಾಗೂ ನಡತೆಯ ವಿಷಯದಲ್ಲಿ ತನ್ನ ಜನರಿಗೆ ಮಾರ್ಗದರ್ಶನ ನೀಡಿದ್ದಾನೆ. ಇದು, “ನೀವು ಬಲಕ್ಕಾಗಲಿ ಎಡಕ್ಕಾಗಲಿ ತಿರುಗಿಕೊಳ್ಳುವಾಗ ಇದೇ ಮಾರ್ಗ, ಇದರಲ್ಲೇ ನಡೆಯಿರಿ” ಎಂದು ನಮಗೆ ಹೇಳುತ್ತಿರುವ ಒಂದು ಧ್ವನಿಯನ್ನು ನಾವೆಲ್ಲರೂ ಕೇಳಿಸಿಕೊಂಡಿದ್ದೇವೋ ಎಂಬಂತಿದೆ. (ಯೆಶಾಯ 30:​20, 21) ಅಷ್ಟುಮಾತ್ರವಲ್ಲ, ಪ್ರತಿಯೊಬ್ಬರು ಬೈಬಲನ್ನು ಹಾಗೂ ಬೈಬಲಿನ ಪ್ರಕಾಶನಗಳನ್ನು ಏಕಾಗ್ರತೆಯಿಂದ ಓದುವಾಗ, ಅಲ್ಲಿ ವ್ಯಕ್ತಪಡಿಸಲ್ಪಟ್ಟಿರುವ ವಿಷಯಗಳು ವಿಶೇಷವಾಗಿ ತಮಗೇ ನಿರ್ದೇಶಿಸಲ್ಪಟ್ಟಿವೆಯೋ ಎಂಬ ಅನಿಸಿಕೆ ಅವರಿಗಾಗುತ್ತದೆ. ಹೌದು, ದೈವಿಕ ಸಲಹೆ ಹಾಗೂ ಮಾರ್ಗದರ್ಶನವು ನಮಗೆ ಅಗತ್ಯವಿರುವಂತಹ ಸಮಯದಲ್ಲೇ ಲಭ್ಯಗೊಳಿಸಲ್ಪಡುವುದು. ಇದರಿಂದ ನಾವು ಶೋಧನೆಗಳನ್ನು ಎದುರಿಸಲು ಅಥವಾ ಒಂದು ವಿವೇಕಯುತ ನಿರ್ಧಾರವನ್ನು ಮಾಡಲು ಶಕ್ತರಾಗುತ್ತೇವೆ.

ಒಳ್ಳೆಯ ಉಣ್ಣುವ ಹವ್ಯಾಸಗಳನ್ನು ಬೆಳೆಸಿಕೊಳ್ಳಿರಿ

13. ಆತ್ಮಿಕ ಆಹಾರವನ್ನು ಉಣ್ಣುವುದರಲ್ಲಿ ಕೆಲವರು ತೋರಿಸಿರುವ ಕೊರತೆಗಳಾವುವು?

13 ಹೊತ್ತುಹೊತ್ತಿಗೆ ಒದಗಿಸಲ್ಪಡುವ ಅಂತಹ ‘ಆಹಾರದ ಸರಬರಾಯಿಯಿಂದ’ ಪೂರ್ಣವಾದ ಪ್ರಯೋಜನಗಳನ್ನು ಪಡೆದುಕೊಳ್ಳಲಿಕ್ಕಾಗಿ, ನಾವು ಒಳ್ಳೆಯ ಉಣ್ಣುವ ಹವ್ಯಾಸಗಳನ್ನು ಬೆಳೆಸಿಕೊಳ್ಳುವ ಅಗತ್ಯವಿದೆ. ಬೈಬಲ್‌ ವಾಚನ ಹಾಗೂ ವೈಯಕ್ತಿಕ ಅಧ್ಯಯನಕ್ಕಾಗಿ ಒಂದು ಕ್ರಮವಾದ ಶೆಡ್ಯೂಲನ್ನು ಮಾಡಿಕೊಳ್ಳಬೇಕಾಗಿದೆ ಮತ್ತು ಆ ಶೆಡ್ಯೂಲನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗಿದೆ. ಆತ್ಮಿಕವಾಗಿ ಚೆನ್ನಾಗಿ ಉಣ್ಣುವ ಹವ್ಯಾಸಗಳು ನಿಮಗಿವೆಯೊ ಮತ್ತು ನೀವು ಗಹನವಾದ ವೈಯಕ್ತಿಕ ಅಧ್ಯಯನವನ್ನು ಕ್ರಮವಾಗಿ ಮಾಡುತ್ತೀರೋ? ಅಥವಾ ನಮಗೋಸ್ಕರ ಜಾಗರೂಕವಾಗಿ ಸಿದ್ಧಪಡಿಸಿರುವಂಥ ಆತ್ಮಿಕ ವಿಷಯಗಳ ಮೇಲೆ ಕೇವಲ ಕಣ್ಣೋಡಿಸುತ್ತೀರೋ, ಅಂದರೆ ಅವಸರವಸರವಾಗಿ ಓದುತ್ತೀರೋ ಅಥವಾ ಕೆಲವೊಮ್ಮೆ ಆತ್ಮಿಕ ಊಟಗಳನ್ನು ತಪ್ಪಿಸಿಕೊಳ್ಳುತ್ತೀರೋ? ಕ್ರಮವಾಗಿ ಆತ್ಮಿಕ ಆಹಾರವನ್ನು ಸೇವಿಸದಿರುವುದು, ಕೆಲವರ ನಂಬಿಕೆಯನ್ನು ಬಲಹೀನಗೊಳಿಸಿದೆ ಮತ್ತು ಕೆಲವರು ನಂಬಿಕೆಯಿಂದ ಬಿದ್ದುಹೋಗುವಂತೆ ಸಹ ಮಾಡಿದೆ.​—⁠1 ತಿಮೊಥೆಯ 1:19; 4:​15, 16.

14. ನಮಗೆ ಚಿರಪರಿಚಿತವಾಗಿ ಕಂಡುಬರಬಹುದಾದ ವಿಷಯವನ್ನು ಜಾಗರೂಕತೆಯಿಂದ ಅಭ್ಯಾಸಿಸುವುದು ಏಕೆ ಪ್ರಯೋಜನದಾಯಕವಾದದ್ದಾಗಿದೆ?

14 ತಮಗೆ ಮೂಲಭೂತ ಸಿದ್ಧಾಂತಗಳು ಗೊತ್ತಿವೆ, ಮತ್ತು ಎಲ್ಲ ಲೇಖನಗಳಲ್ಲಿ ಸಂಪೂರ್ಣವಾಗಿ ಹೊಸದಾಗಿರುವ ವಿಷಯಗಳೇನೂ ಕೊಡಲ್ಪಟ್ಟಿರುವುದಿಲ್ಲ ಎಂದು ಕೆಲವರು ಭಾವಿಸಬಹುದು. ಆದುದರಿಂದ, ಕ್ರಮವಾಗಿ ಅಭ್ಯಾಸಮಾಡುವುದು ಮತ್ತು ಕೂಟಗಳಿಗೆ ಹಾಜರಾಗುವುದು ಅನಗತ್ಯ ಎಂದು ಅವರು ನೆನಸಬಹುದು. ಆದರೆ, ನಾವು ಈಗಾಗಲೇ ಕಲಿತಿರುವ ವಿಷಯಗಳನ್ನು ಪುನಃ ನೆನಪಿಗೆ ತರುವ ಅಗತ್ಯವಿದೆ ಎಂದು ಬೈಬಲು ತೋರಿಸುತ್ತದೆ. (ಕೀರ್ತನೆ 119:​95, 99; 2 ಪೇತ್ರ 3:1; ಯೂದ 5) ಉದಾಹರಣೆಗೆ, ತುಂಬ ರುಚಿಕಟ್ಟಾಗಿ ಅಡಿಗೆಮಾಡುವ ಒಬ್ಬ ವ್ಯಕ್ತಿಯು, ಒಂದೇ ರೀತಿಯ ಮೂಲಪದಾರ್ಥಗಳಿಂದ ಬೇರೆ ಬೇರೆ ರೀತಿಯ ರುಚಿಕಟ್ಟಾದ ಆಹಾರವನ್ನು ತಯಾರಿಸುತ್ತಾನೆ. ಅದೇ ರೀತಿಯಲ್ಲಿ, ನಂಬಿಗಸ್ತ ಆಳುವರ್ಗವು ಬೇರೆ ಬೇರೆ ವಿಧಗಳಲ್ಲಿ ಪೋಷಕವಾದ ಆತ್ಮಿಕ ಆಹಾರವನ್ನು ಒದಗಿಸುತ್ತದೆ. ಕೆಲವೊಂದು ಲೇಖನಗಳಲ್ಲಿ ಬರುವಂತಹ ವಿಷಯಗಳು ಅನೇಕಬಾರಿ ಪುನರಾವರ್ತಿಸಲ್ಪಟ್ಟಿರುವುದಾದರೂ, ಅವುಗಳಲ್ಲಿ ಕೊಡಲ್ಪಡುವಂತಹ ಅತ್ಯುತ್ತಮ ಅಂಶಗಳನ್ನು ಗ್ರಹಿಸಲು ನಾವು ತಪ್ಪಿಹೋಗಬಾರದು. ನಿಜಾಂಶವೇನೆಂದರೆ, ನಾವು ಓದುವ ವಿಷಯದಿಂದ ನಾವು ಪಡೆದುಕೊಳ್ಳುವಂತಹ ಪ್ರಯೋಜನವು, ಆ ವಿಷಯವನ್ನು ಅಭ್ಯಾಸಿಸುವುದರಲ್ಲಿ ನಾವು ಎಷ್ಟು ಸಮಯವನ್ನು ಹಾಗೂ ಪ್ರಯತ್ನವನ್ನು ವಿನಿಯೋಗಿಸಿದ್ದೇವೆ ಎಂಬುದರ ಮೇಲೆ ಹೆಚ್ಚಿನ ಮಟ್ಟಿಗೆ ಹೊಂದಿಕೊಂಡಿರುತ್ತದೆ.

ವಾಚನ ಹಾಗೂ ಅಧ್ಯಯನದಿಂದ ಆತ್ಮಿಕ ಪ್ರಯೋಜನಗಳು

15. ಬೈಬಲ್‌ ವಾಚನ ಹಾಗೂ ಅಧ್ಯಯನವು, ದೇವರ ವಾಕ್ಯದ ಉತ್ತಮ ಶುಶ್ರೂಷಕರಾಗಿರುವಂತೆ ನಮಗೆ ಹೇಗೆ ಸಹಾಯಮಾಡುತ್ತದೆ?

15 ಬೈಬಲ್‌ ವಾಚನ ಹಾಗೂ ಅಧ್ಯಯನದಿಂದ ನಾವು ಪಡೆದುಕೊಳ್ಳಲಿರುವ ಪ್ರಯೋಜನಗಳನ್ನು ಲೆಕ್ಕಿಸಲು ಸಹ ಸಾಧ್ಯವಿಲ್ಲ. ಹೀಗೆ ಮಾಡುವುದರಿಂದ ನಾವು ನಮ್ಮ ಮೂಲಭೂತ ಕ್ರೈಸ್ತ ಜವಾಬ್ದಾರಿಗಳಲ್ಲಿ ಒಂದನ್ನು ಪೂರೈಸುವಂತೆ ಸಹಾಯ ಸಿಗುತ್ತದೆ. ಅದೇನೆಂದರೆ, ನಮ್ಮಲ್ಲಿ ಪ್ರತಿಯೊಬ್ಬರೂ ‘ವೈಯಕ್ತಿಕವಾಗಿ ಅವಮಾನಕ್ಕೆ ಗುರಿಯಾಗದ ಕೆಲಸದವರೂ ಸತ್ಯವಾಕ್ಯವನ್ನು ಸರಿಯಾಗಿ ಉಪದೇಶಿಸುವವರೂ’ ಆಗಿ ಪರಿಣಮಿಸಬಹುದು. (2 ತಿಮೊಥೆಯ 2:15) ನಾವು ಎಷ್ಟು ಹೆಚ್ಚು ಬೈಬಲನ್ನು ಓದಿ ಅದರ ಅಧ್ಯಯನವನ್ನು ಮಾಡುತ್ತೇವೋ ಅಷ್ಟು ಹೆಚ್ಚಾಗಿ ನಮ್ಮ ಮನಸ್ಸುಗಳು ದೇವರ ಆಲೋಚನೆಗಳಿಂದ ತುಂಬುತ್ತವೆ. ಆಗ, ಪೌಲನಂತೆ ನಾವು ಸಹ ಯೆಹೋವನ ಉದ್ದೇಶಗಳ ಅದ್ಭುತಕರ ಸತ್ಯತೆಯನ್ನು ‘ಶಾಸ್ತ್ರಾಧಾರದಿಂದ ಜನರ ಸಂಗಡ ವಾದಿಸಿ ಆಯಾ ವಚನಗಳ ಅರ್ಥವನ್ನು’ ವಿವರಿಸಲು ಶಕ್ತರಾಗುವೆವು. (ಅ. ಕೃತ್ಯಗಳು 17:​2, 3) ಅಷ್ಟುಮಾತ್ರವಲ್ಲ, ಇತರರಿಗೆ ಕಲಿಸುವುದರಲ್ಲಿನ ನಮ್ಮ ಜಾಣ್ಮೆಯು ಹೆಚ್ಚುತ್ತದೆ ಮತ್ತು ನಮ್ಮ ಸಂಭಾಷಣೆಗಳು, ಭಾಷಣಗಳು ಹಾಗೂ ಸಲಹೆಗಳು ಸಹ ಆತ್ಮಿಕವಾಗಿ ಹೆಚ್ಚು ಭಕ್ತಿವೃದ್ಧಿಯನ್ನು ಉಂಟುಮಾಡುವಂತಿರುವವು.​—⁠ಜ್ಞಾನೋಕ್ತಿ 1:⁠5.

16. ದೇವರ ವಾಕ್ಯದ ವಾಚನ ಹಾಗೂ ಅಧ್ಯಯನದಿಂದ ನಾವು ಯಾವ ವಿಧಗಳಲ್ಲಿ ವೈಯಕ್ತಿಕ ಪ್ರಯೋಜನಗಳನ್ನು ಪಡೆದುಕೊಳ್ಳುತ್ತೇವೆ?

16 ಇದಲ್ಲದೆ, ದೇವರ ವಾಕ್ಯವನ್ನು ಪರೀಕ್ಷಿಸಲಿಕ್ಕಾಗಿ ವಿನಿಯೋಗಿಸಲ್ಪಟ್ಟ ಸಮಯವು, ನಮ್ಮ ಜೀವಿತವನ್ನು ಯೆಹೋವನ ಮಾರ್ಗಗಳಿಗೆ ಅನುಸಾರವಾಗಿ ಹೊಂದಿಸಿಕೊಳ್ಳಲು ನಮ್ಮನ್ನು ಶಕ್ತರನ್ನಾಗಿ ಮಾಡುತ್ತದೆ. (ಕೀರ್ತನೆ 25:4; 119:​9, 10; ಜ್ಞಾನೋಕ್ತಿ 6:​20-23) ಇದು ದೀನಭಾವ, ನಿಷ್ಠೆ, ಹಾಗೂ ಸಂತೋಷಗಳಂತಹ ನಮ್ಮ ಆತ್ಮಿಕ ಗುಣಗಳನ್ನು ಇನ್ನಷ್ಟು ಬಲಗೊಳಿಸುವುದು. (ಧರ್ಮೋಪದೇಶಕಾಂಡ 17:​19, 20; ಪ್ರಕಟನೆ 1:⁠3) ಬೈಬಲ್‌ ವಾಚನ ಹಾಗೂ ಅಧ್ಯಯನದಿಂದ ಪಡೆದುಕೊಳ್ಳುವ ಜ್ಞಾನವನ್ನು ನಾವು ಅನ್ವಯಿಸಿಕೊಳ್ಳುವಾಗ, ನಮ್ಮ ಜೀವಿತಗಳಲ್ಲಿ ದೇವರಾತ್ಮವು ಸರಾಗವಾಗಿ ಹರಿಯುತ್ತಿರುವಂತೆ ನಮಗೆ ಅನಿಸುತ್ತದೆ. ಇದರ ಫಲಿತಾಂಶವಾಗಿ, ನಮ್ಮ ಜೀವಿತದಲ್ಲಿ ನಾವು ಆತ್ಮದ ಫಲಗಳನ್ನು ಅತ್ಯಧಿಕವಾಗಿ ಫಲಿಸುವೆವು.​—⁠ಗಲಾತ್ಯ 5:​22, 23.

17. ನಮ್ಮ ವೈಯಕ್ತಿಕ ಬೈಬಲ್‌ ವಾಚನ ಹಾಗೂ ಅಧ್ಯಯನದ ಪ್ರಮಾಣ ಹಾಗೂ ಗುಣಮಟ್ಟವು, ಯೆಹೋವನೊಂದಿಗಿನ ನಮ್ಮ ಸಂಬಂಧದ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

17 ಎಲ್ಲಕ್ಕಿಂತಲೂ ಪ್ರಾಮುಖ್ಯವಾಗಿ, ಇನ್ನಿತರ ಚಟುವಟಿಕೆಗಳನ್ನು ಬದಿಗೊತ್ತಿ, ದೇವರ ವಾಕ್ಯದ ವಾಚನ ಹಾಗೂ ಅಧ್ಯಯನಕ್ಕಾಗಿ ನಾವು ವಿನಿಯೋಗಿಸುವ ಸಮಯವು, ದೇವರೊಂದಿಗಿನ ನಮ್ಮ ಸಂಬಂಧದ ವಿಷಯದಲ್ಲಿ ಇನ್ನೂ ಹೆಚ್ಚು ಸಂಪದ್ಭರಿತವಾದ ಪ್ರಯೋಜನಗಳನ್ನು ತರುವುದು. ತನ್ನ ಜೊತೆ ಕ್ರೈಸ್ತರು “ಸಕಲ ಆತ್ಮೀಯ ಜ್ಞಾನವನ್ನೂ ಗ್ರಹಿಕೆಯನ್ನೂ ಹೊಂದಿ ಕರ್ತನ [ದೇವರ] ಚಿತ್ತದ ವಿಷಯವಾದ ತಿಳುವಳಿಕೆಯಿಂದ ತುಂಬಿಕೊಂಡು ಆತನಿಗೆ [ಯೆಹೋವನಿಗೆ] ಯೋಗ್ಯರಾಗಿ ನಡೆದು ಎಲ್ಲಾ ವಿಧದಲ್ಲಿ ಆತನನ್ನು ಸಂತೋಷಪಡಿಸುವವರಾಗಿರಬೇಕೆಂದು” ಪೌಲನು ಪ್ರಾರ್ಥಿಸಿದನು. (ಕೊಲೊಸ್ಸೆ 1:​9, 10) ತದ್ರೀತಿಯಲ್ಲಿ, ನಾವು ‘ಯೆಹೋವನಿಗೆ ಯೋಗ್ಯರಾಗಿ ನಡೆಯಬೇಕಾದರೆ,’ ನಾವು ‘ಸಕಲ ಆತ್ಮೀಯ ಜ್ಞಾನವನ್ನೂ ಗ್ರಹಿಕೆಯನ್ನೂ ಹೊಂದಿ, ಆತನ ಚಿತ್ತದ ವಿಷಯವಾದ ತಿಳುವಳಿಕೆಯಿಂದ ತುಂಬಿಕೊಂಡಿರಬೇಕು.’ ಆದುದರಿಂದ, ನಾವು ಯೆಹೋವನ ಆಶೀರ್ವಾದವನ್ನು ಹಾಗೂ ಅಂಗೀಕಾರವನ್ನು ಪಡೆದುಕೊಳ್ಳುವುದು, ಬಹಳಷ್ಟು ಮಟ್ಟಿಗೆ ನಮ್ಮ ವೈಯಕ್ತಿಕ ಬೈಬಲ್‌ ವಾಚನ ಹಾಗೂ ಅಧ್ಯಯನದ ಪ್ರಮಾಣ ಹಾಗೂ ಗುಣಮಟ್ಟದ ಮೇಲೆ ಹೊಂದಿಕೊಂಡಿದೆ ಎಂಬುದಂತೂ ಸ್ಪಷ್ಟ.

18. ಯೋಹಾನ 17:3ರಲ್ಲಿ ದಾಖಲಿಸಲ್ಪಟ್ಟಿರುವ ಯೇಸುವಿನ ಮಾತುಗಳನ್ನು ನಾವು ಅನುಸರಿಸುವಲ್ಲಿ, ಯಾವ ಆಶೀರ್ವಾದಗಳು ನಮ್ಮದಾಗುವವು?

18 “ಒಬ್ಬನೇ ಸತ್ಯದೇವರಾಗಿರುವ ನಿನ್ನನ್ನೂ ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನನ್ನೂ ತಿಳಿಯುವದೇ ನಿತ್ಯಜೀವವು.” (ಯೋಹಾನ 17:⁠3) ಇದು ಯೆಹೋವನ ಸಾಕ್ಷಿಗಳಿಂದ ವ್ಯಾಪಕವಾಗಿ ಉಪಯೋಗಿಸಲ್ಪಡುವ ಶಾಸ್ತ್ರವಚನಗಳಲ್ಲಿ ಒಂದಾಗಿದೆ. ಮತ್ತು ದೇವರ ವಾಕ್ಯವನ್ನು ಅಭ್ಯಾಸಿಸುವುದರ ಪ್ರಮುಖತೆಯನ್ನು ಗಣ್ಯಮಾಡುವಂತೆ ಇತರರಿಗೆ ಸಹಾಯಮಾಡಲಿಕ್ಕಾಗಿ ಈ ವಚನವನ್ನು ಉಪಯೋಗಿಸಲಾಗುತ್ತದೆ. ಆದುದರಿಂದ, ನಮ್ಮಲ್ಲಿ ಪ್ರತಿಯೊಬ್ಬರೂ ವೈಯಕ್ತಿಕವಾಗಿ ದೇವರ ವಾಕ್ಯದ ಅಧ್ಯಯನಮಾಡುವುದು ಖಂಡಿತವಾಗಿಯೂ ಅತಿ ಪ್ರಾಮುಖ್ಯವಾದದ್ದಾಗಿದೆ ಎಂಬುದರಲ್ಲಿ ಸಂಶಯವೇ ಇಲ್ಲ. ನಾವು ಭೂಮಿಯ ಮೇಲೆ ಸದಾಕಾಲ ಜೀವಿಸುವ ನಮ್ಮ ನಿರೀಕ್ಷೆಯು, ಯೆಹೋವ ದೇವರ ಹಾಗೂ ಆತನ ಮಗನಾದ ಯೇಸು ಕ್ರಿಸ್ತನ ಕುರಿತಾದ ಜ್ಞಾನದಲ್ಲಿ ಬೆಳೆಯುತ್ತಾ ಹೋಗುವುದರ ಮೇಲೆ ಅವಲಂಬಿಸಿದೆ. ಇದರ ಅರ್ಥವೇನು ಎಂಬುದರ ಕುರಿತು ತುಸು ಆಲೋಚಿಸಿರಿ. ಯೆಹೋವನ ಕುರಿತು ಹೆಚ್ಚೆಚ್ಚು ವಿಷಯಗಳನ್ನು ತಿಳಿದುಕೊಳ್ಳುವುದಕ್ಕೆ ಎಂದೂ ಕೊನೆಯೇ ಇಲ್ಲ, ಮತ್ತು ನಿತ್ಯತೆಯಲ್ಲಿಯೂ ನಾವು ಆತನ ಕುರಿತು ಕಲಿಯಸಾಧ್ಯವಿದೆ ಎಂಬುದೇ ಇದರ ಅರ್ಥವಾಗಿದೆ!​—⁠ಪ್ರಸಂಗಿ 3:11; ರೋಮಾಪುರ 11:⁠33.

[ಪಾದಟಿಪ್ಪಣಿಗಳು]

^ ಪ್ಯಾರ. 9 ವಾಚ್‌ಟವರ್‌ ಬೈಬಲ್‌ ಆ್ಯಂಡ್‌ ಟ್ರ್ಯಾಕ್ಟ್‌ ಸೊಸೈಟಿಯಿಂದ ಪ್ರಕಾಶಿತ.

^ ಪ್ಯಾರ. 10 ಕಾವಲಿನಬುರುಜು ಪತ್ರಿಕೆಯ ಮೇ 1, 1995ರ ಸಂಚಿಕೆಯ 20-1ನೆಯ ಪುಟಗಳಲ್ಲಿ ಪ್ರಕಾಶಿಸಲ್ಪಟ್ಟಿರುವ, “ಅವರು ಅದನ್ನು ಓದುವ ಸಮಯ ಮತ್ತು ಪ್ರಯೋಜನ ಪಡೆಯುವ ವಿಧ” ಎಂಬ ಲೇಖನವನ್ನು ನೋಡಿರಿ.

ಪುನರ್ವಿಮರ್ಶೆಯ ಪ್ರಶ್ನೆಗಳು

• ನಾವು ನಮ್ಮ ಸಮಯವನ್ನು ಉಪಯೋಗಿಸುವ ವಿಧವು, ನಮ್ಮ ಬಗ್ಗೆ ಏನನ್ನು ಪ್ರಕಟಪಡಿಸಸಾಧ್ಯವಿದೆ?

• ಯಾವ ಚಟುವಟಿಕೆಗಳಿಂದ ನಾವು ಬೈಬಲ್‌ ವಾಚನ ಹಾಗೂ ಅಧ್ಯಯನಕ್ಕಾಗಿ ಸಮಯವನ್ನು ಕೊಂಡುಕೊಳ್ಳಸಾಧ್ಯವಿದೆ?

• ನಮ್ಮ ಆತ್ಮಿಕ ಉಣ್ಣುವ ಹವ್ಯಾಸಗಳಿಗೆ ನಾವು ಏಕೆ ಗಮನವನ್ನು ಕೊಡಬೇಕು?

• ಶಾಸ್ತ್ರವಚನಗಳನ್ನು ಓದುವ ಮೂಲಕ ಹಾಗೂ ಅದರ ಅಧ್ಯಯನಮಾಡುವ ಮೂಲಕ ಯಾವ ಪ್ರಯೋಜನಗಳು ದೊರಕುತ್ತವೆ?

[ಅಧ್ಯಯನ ಪ್ರಶ್ನೆಗಳು]

[ಪುಟ 20, 21ರಲ್ಲಿರುವ ಚಿತ್ರಗಳು]

ಬೈಬಲನ್ನು ಕ್ರಮವಾಗಿ ಓದುವುದು ಹಾಗೂ ಅದರ ಅಧ್ಯಯನಮಾಡುವುದು, ‘ಸತ್ಯವಾಕ್ಯವನ್ನು ಸರಿಯಾಗಿ ಉಪದೇಶಿಸಲು’ ನಮ್ಮನ್ನು ಶಕ್ತರನ್ನಾಗಿ ಮಾಡುತ್ತದೆ

[ಪುಟ 23ರಲ್ಲಿರುವ ಚಿತ್ರಗಳು]

ನಮ್ಮ ಕಾರ್ಯಮಗ್ನ ಜೀವಿತದಲ್ಲಿ, ಬೇರೆ ಚಟುವಟಿಕೆಗಳೊಂದಿಗೆ ಆತ್ಮಿಕ ಬೆನ್ನಟ್ಟುವಿಕೆಗಳಿಗಾಗಿ ಸಮಯವನ್ನು ಮಾಡಿಕೊಳ್ಳುವುದು, ಅತ್ಯಧಿಕ ಪ್ರಯೋಜನಗಳನ್ನು ತರುತ್ತದೆ