ಸೇವೆಮಾಡುವಂತೆ ಪ್ರಚೋದಿಸಲ್ಪಟ್ಟದ್ದು
ಸೇವೆಮಾಡುವಂತೆ ಪ್ರಚೋದಿಸಲ್ಪಟ್ಟದ್ದು
ತಮ್ಮ ಜೀವನವನ್ನು ಅನುಭವಿಸಬೇಕಾದ ಪ್ರಾಯದಲ್ಲಿರುವ 24 ವಿವಾಹಿತ ದಂಪತಿಗಳು, ತಮ್ಮ ಕುಟುಂಬಗಳನ್ನು, ಸ್ನೇಹಿತರನ್ನು, ಹಾಗೂ ಚಿರಪರಿಚಿತ ಪರಿಸರಗಳನ್ನು ಬಿಟ್ಟು, ವಿದೇಶಗಳಲ್ಲಿ ಮಿಷನೆರಿ ಸೇವೆಯನ್ನು ಆರಂಭಿಸುವಂತೆ ಯಾವುದು ಅವರನ್ನು ಪ್ರಚೋದಿಸಿರಬಹುದು? ಪಾಪುವ ನ್ಯೂ ಗಿನಿ ಹಾಗೂ ಟೈವಾನ್ನಂತಹ ಸ್ಥಳಗಳಿಗೆ, ಆಫ್ರಿಕನ್ ಹಾಗೂ ಲ್ಯಾಟಿನ್ ಅಮೆರಿಕನ್ ದೇಶಗಳಿಗೆ ಹೋಗಲು ಅವರು ಏಕೆ ಸಂತೋಷಿಸುತ್ತಿರಬಹುದು? ಸಾಹಸಪ್ರಿಯರಾಗಿರುವ ಕಾರಣದಿಂದಾಗಿರಬಹುದೋ? ಖಂಡಿತವಾಗಿಯೂ ಇಲ್ಲ. ಅದಕ್ಕೆ ಬದಲಾಗಿ, ದೇವರು ಹಾಗೂ ನೆರೆಯವರ ಕಡೆಗಿನ ನಿಜವಾದ ಪ್ರೀತಿಯಿಂದ ಅವರು ಪ್ರಚೋದಿಸಲ್ಪಟ್ಟಿದ್ದಾರೆ.—ಮತ್ತಾಯ 22:37-39.
ಈ ವಿವಾಹಿತ ದಂಪತಿಗಳು ಯಾರು? ಇವರು ವಾಚ್ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಡ್ನ 109ನೆಯ ತರಗತಿಯ ಪದವೀಧರರೇ ಆಗಿದ್ದಾರೆ. 2000 ಇಸವಿಯ ಸೆಪ್ಟೆಂಬರ್ 9ನೆಯ ಶನಿವಾರದಂದು, ನ್ಯೂ ಯಾರ್ಕಿನ ಪ್ಯಾಟರ್ಸನ್ನಲ್ಲಿರುವ ವಾಚ್ಟವರ್ ಎಡ್ಯುಕೇಷನಲ್ ಸೆಂಟರ್ನಲ್ಲಿ ಹಾಗೂ ಬೇರೆ ಸ್ಥಳಗಳಲ್ಲಿ (ಸ್ಯಾಟೆಲೈಟ್ ಲೊಕೇಷನ್ಸ್) ಒಟ್ಟು 5,198 ಮಂದಿ ಒಟ್ಟುಗೂಡಿದ್ದರು. ಪದವೀಧರರು ಸಫಲ ಮಿಷನೆರಿಗಳಾಗಿ ಸೇವೆಸಲ್ಲಿಸುವಂತೆ ಸಹಾಯಮಾಡಬಲ್ಲ ಪ್ರೀತಿಪರ ಸಲಹೆಗೆ ಕಿವಿಗೊಡಲಿಕ್ಕಾಗಿಯೇ ಇವರು ಕೂಡಿಬಂದಿದ್ದರು.
ಸ್ಟೀವನ್ ಲೆಟ್ ಎಂಬುವವರು ಈ ಕಾರ್ಯಕ್ರಮದ ಅಧ್ಯಕ್ಷರಾಗಿದ್ದರು. ಇವರು ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿಯ ಟೀಚಿಂಗ್ ಕಮಿಟಿಯ ಸದಸ್ಯರು. ಇವರು ಮತ್ತಾಯ 5:13ರ ಮೇಲಾಧಾರಿತವಾದ, “ನೀವು ಭೂಮಿಗೆ ಉಪ್ಪಾಗಿದ್ದೀರಿ” ಎಂಬ ವಿಷಯದ ಕುರಿತು ಮಾತಾಡಿದರು. ಯೇಸುವಿನ ಮಾತುಗಳು ಖಂಡಿತವಾಗಿಯೂ ಪದವಿಯನ್ನು ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಅನ್ವಯವಾಗುತ್ತವೆ ಎಂದು ಸಹೋದರ ಲೆಟ್ ವಿವರಿಸಿದರು. ಉದಾಹರಣೆಗೆ, ಒಂದು ಪದಾರ್ಥವನ್ನು ನಾಲಿಗೆಗೆ ರುಚಿಕರವಾಗಿ ಮಾಡುವಂತಹ ಗುಣ ಉಪ್ಪಿಗಿದೆ. ತದ್ರೀತಿಯಲ್ಲಿ, ಮಿಷನೆರಿಗಳು ತಮ್ಮ ಪರಿಣಾಮಕಾರಿ ಸಾಕ್ಷಿಕಾರ್ಯದ ಮೂಲಕ, ಸಾಂಕೇತಿಕ ಅರ್ಥದಲ್ಲಿ ಉಪ್ಪಿನಂತಿದ್ದಾರೆ.
ಅಗಲುವುದಕ್ಕೆ ಮುಂಚೆ ಉತ್ತೇಜನ
ತದನಂತರ ಸಹೋದರ ಲೆಟ್, ಬಹಳ ದೀರ್ಘ ಸಮಯದಿಂದಲೂ ಯೆಹೋವನ ಸೇವೆಮಾಡುತ್ತಿರುವಂತಹ ಕೆಲವು ಸೇವಕರನ್ನು ಪರಿಚಯಿಸಿದರು. ಈ ಸಹೋದರರು ಸಂಕ್ಷಿಪ್ತವಾದ ಹಾಗೂ ಪ್ರಚೋದನಾತ್ಮಕವಾದ ಆತ್ಮಿಕ ಭಾಷಣಗಳನ್ನು ಕೊಟ್ಟರು. ಇವರಲ್ಲಿ ಮೊದಲಿಗರು ಜಾನ್ ವಿಸ್ಚಕ್ ಆಗಿದ್ದು, ಇವರು ರೈಟಿಂಗ್ ಡಿಪಾರ್ಟ್ಮೆಂಟ್ನಲ್ಲಿ ಸೇವೆಮಾಡುತ್ತಿದ್ದಾರೆ. “ಅತಿ ಚಿಕ್ಕ ಕೀರ್ತನೆಯು ಮಿಷನೆರಿ ಆತ್ಮವನ್ನು ಪ್ರಚೋದಿಸುತ್ತದೆ” ಎಂಬುದು ಅವರ ಭಾಷಣದ ಮುಖ್ಯ ವಿಷಯವಾಗಿದ್ದು, ಇದು ಕೀರ್ತನೆ 117ನೆಯ ಅಧ್ಯಾಯದ ಮೇಲಾಧಾರಿತವಾಗಿತ್ತು. ಇಂದು, ಯೆಹೋವನ ಕುರಿತು ಮತ್ತು ಆತನ ರಾಜ್ಯದ ಕುರಿತು, ‘ಸರ್ವಜನಾಂಗಗಳಿಗೆ’ ಮತ್ತು ‘ಸಮಸ್ತಪ್ರಜೆಗಳಿಗೆ’ ಸಾಕ್ಷಿಯನ್ನು ನೀಡುವ ಅಗತ್ಯವು ಲೋಕವ್ಯಾಪಕವಾಗಿದೆ. “ಯಾಹುವಿಗೆ ಸ್ತೋತ್ರ”ವನ್ನು ಸಲ್ಲಿಸುವಂತೆ ಇತರರನ್ನು ಉತ್ತೇಜಿಸುವ ಮೂಲಕ, ಕೀರ್ತನೆ 117ರಲ್ಲಿ ಹೇಳಲ್ಪಟ್ಟಿರುವ ವಿಷಯವನ್ನು ಪೂರೈಸುವಂತೆ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಲಾಯಿತು.
ಇದಾದ ಬಳಿಕ, ಆಡಳಿತ ಮಂಡಲಿಯ ಸದಸ್ಯರಾಗಿರುವ ಗೈ ಪಿಯರ್ಸ್ ಅವರನ್ನು ಅಧ್ಯಕ್ಷರು ಪರಿಚಯಿಸಿದರು. “ಸಂದರ್ಭಕ್ಕೆ ತಕ್ಕಂತೆ ಹೊಂದಿಕೊಳ್ಳಿರಿ, ಆದರೆ ದೃಢಚಿತ್ತರಾಗಿರಿ” ಎಂಬ ವಿಷಯದ ಕುರಿತು ಇವರು ಮಾತಾಡಿದರು. ದೇವರ ವಾಕ್ಯವು ದೃಢವಾದದ್ದಾಗಿದೆ. ಧರ್ಮೋಪದೇಶಕಾಂಡ 32:4ರಲ್ಲಿ (NW) ಯೆಹೋವ ದೇವರನ್ನು ಬಂಡೆ ಎಂದು ಕರೆಯಲಾಗಿದೆ. ಆದರೂ ಆತನ ವಾಕ್ಯವು ಸಂದರ್ಭಕ್ಕೆ ತಕ್ಕಂತೆ ಹೊಂದಿಕೊಳ್ಳುವ ಅವಕಾಶವನ್ನು ನೀಡುತ್ತದೆ. ಯಾವ ಅರ್ಥದಲ್ಲಿ ಎಂದರೆ, ಆತನ ವಾಕ್ಯವು ಎಲ್ಲ ಭಾಷಾ ಗುಂಪುಗಳು ಹಾಗೂ ಸಂಸ್ಕೃತಿಗಳ ಜನರಿಗಾಗಿ, ಅಂದರೆ ಸರ್ವ ಮಾನವಕುಲಕ್ಕಾಗಿ ಬರೆಯಲ್ಪಟ್ಟದ್ದಾಗಿದೆ. ದೇವರ ವಾಕ್ಯದ ಸಂದೇಶವು ಜನರ ಹೃದಮನಗಳ ಮೇಲೆ ಪರಿಣಾಮ ಬೀರುವಂತೆ ಮಾಡಲಿಕ್ಕಾಗಿ, ಅದರ ಕುರಿತಾದ ಸುವಾರ್ತೆಯನ್ನು ಸಾರುವಂತೆ ವಿದ್ಯಾರ್ಥಿಗಳಿಗೆ ಬುದ್ಧಿವಾದ ಹೇಳಲಾಯಿತು. (2 ಕೊರಿಂಥ 4:2) “ಸರಿಯಾದ ಮೂಲತತ್ವಗಳ ವಿಷಯದಲ್ಲಿ ದೃಢನಿಶ್ಚಿತರಾಗಿರಿ, ಆದರೆ ಸಂದರ್ಭಕ್ಕೆ ತಕ್ಕಂತೆ ಹೊಂದಿಕೊಳ್ಳಿರಿ. ನೀವು ನೇಮಕವನ್ನು ಪಡೆದಿರುವಂತಹ ಸ್ಥಳಗಳಲ್ಲಿರುವ ಜನರ ಸಂಸ್ಕೃತಿಯು ಭಿನ್ನವಾಗಿರುವುದರಿಂದ, ಅವರನ್ನು ಕೀಳಾಗಿ ಕಾಣಬೇಡಿರಿ” ಎಂದು ಸಹೋದರ ಪಿಯರ್ಸ್ ಸಲಹೆ ನೀಡಿದರು.
ಗಿಲ್ಯಡ್ ಶಿಕ್ಷಕರಲ್ಲಿ ಒಬ್ಬರಾಗಿರುವ ಕಾರ್ಲ್ ಆ್ಯಡಮ್ಸ್, ಸುಮಾರು 53 ವರ್ಷಗಳಿಂದ ಜಾಗತಿಕ ಮುಖ್ಯಕಾರ್ಯಾಲಯದಲ್ಲಿ ಯೋಹಾನ 8:29; 10:16.
ಸೇವೆಮಾಡುತ್ತಿದ್ದಾರೆ. ಇವರು “ನೀವು ಇಲ್ಲಿಂದ ಎಲ್ಲಿಗೆ ಹೋಗುವಿರಿ?” ಎಂಬ ಆಲೋಚನಾಪ್ರೇರಕ ವಿಷಯದ ಕುರಿತು ಮಾತಾಡಿದರು. 24 ದಂಪತಿಗಳು ಲೋಕವ್ಯಾಪಕವಾಗಿರುವ 20 ಬೇರೆ ಬೇರೆ ದೇಶಗಳಿಗೆ ಹೋಗಿ ಮಿಷನೆರಿಗಳಾಗಿ ಸೇವೆಮಾಡುವ ತಮ್ಮ ನೇಮಕವನ್ನು ಸ್ವೀಕರಿಸಿದರು ಎಂಬುದು ನಿಜ. ಆದರೆ, ನೀವು ನಿಮ್ಮ ನೇಮಿತ ದೇಶಕ್ಕೆ ಹೋಗಿ, ಅದನ್ನು ನೋಡಿದ ಬಳಿಕ, ಅಲ್ಲಿ ಏನು ಮಾಡುವಿರಿ? ಎಂಬ ಪ್ರಶ್ನೆಯು ಕೇಳಲ್ಪಟ್ಟಿತು. ಸಾಮಾನ್ಯವಾಗಿ ಜನರು ಹೊಸ ಸ್ಥಳಗಳಿಗೆ ಹೋಗಲು ಮತ್ತು ಹೊಸ ಹೊಸ ಕೆಲಸಗಳನ್ನು ಮಾಡಲು ಬಯಸುತ್ತಾರೆ. ಆದರೂ ಅವರು ತಮ್ಮ ಸಂತೋಷಕ್ಕೋಸ್ಕರ ಇದೆಲ್ಲವನ್ನೂ ಮಾಡಲು ಪ್ರಯತ್ನಿಸುತ್ತಾರೆ. ಆದರೆ ಮಿಷನೆರಿಗಳ ವಿಷಯದಲ್ಲಿ ಹೀಗಿಲ್ಲ. ಈ ವಿದ್ಯಾರ್ಥಿಗಳು ಯೆಹೋವನಿಂದ ನೇಮಕವನ್ನು ಪಡೆದುಕೊಳ್ಳುತ್ತಾರೆ, ಮತ್ತು ಎಲ್ಲಿ ಅವರು ನಿಸ್ವಾರ್ಥಭಾವದಿಂದ ತನ್ನ “ಕುರಿಗಳ” ಆರೈಕೆಮಾಡುವಂತೆ ಆತನು ಬಯಸುತ್ತಾನೋ ಅದೇ ಸ್ಥಳಗಳಿಗೆ ಹೋಗುತ್ತಾರೆ. ಇವರು ಪುರಾತನ ಇಸ್ರಾಯೇಲ್ಯರಂತಿರಲು ಬಯಸುವುದಿಲ್ಲ. ಏಕೆಂದರೆ, ಆ ಇಸ್ರಾಯೇಲ್ಯರು ಸ್ವಾರ್ಥಿಗಳಾಗಿದ್ದು, ಸರ್ವ ಮಾನವಕುಲವನ್ನು ಆಶೀರ್ವದಿಸಲಿಕ್ಕಾಗಿ ಯೆಹೋವನಿಂದ ಉಪಯೋಗಿಸಲ್ಪಡುವ ಸದವಕಾಶವನ್ನು ಕಳೆದುಕೊಂಡರು. ಈ ವಿದ್ಯಾರ್ಥಿಗಳಾದರೋ, ಯೇಸು ಕ್ರಿಸ್ತನ ಮಾದರಿಯನ್ನು ಅನುಸರಿಸಬೇಕು. ಏಕೆಂದರೆ ಅವನು ಯಾವಾಗಲೂ ನಿಸ್ವಾರ್ಥಭಾವದಿಂದ ತನ್ನ ತಂದೆಯ ಚಿತ್ತವನ್ನು ಮಾಡಿದನು. ಅಷ್ಟುಮಾತ್ರವಲ್ಲ, ತಾನು ಎದುರಿಸಿದ ಪ್ರತಿಯೊಂದು ಸನ್ನಿವೇಶದಲ್ಲೂ ಅವನು ದೇವರಿಗೆ ವಿಧೇಯನಾದನು.—ಗಿಲ್ಯಡ್ ಸ್ಕೂಲ್ನ ರೆಜಿಸ್ಟ್ರಾರ್ ಆಗಿರುವ ವಾಲಸ್ ಲಿವರೆನ್ಸ್ ಅವರು, “ದೇವರ ಅಗಾಧವಾದ ವಿಷಯಗಳನ್ನು ನಿಕ್ಷೇಪದಂತೆ ಕಾಪಾಡಿಕೊಳ್ಳಿರಿ” ಎಂಬ ಮುಖ್ಯ ವಿಷಯದ ಬಗ್ಗೆ ಮಾತಾಡಿದರು. ಅನೇಕವೇಳೆ ಶಾಸ್ತ್ರವಚನಗಳು ದೇವರ ವಾಕ್ಯವನ್ನು ಸಂಪತ್ತಿಗೆ, ರತ್ನಕ್ಕೆ, ಅಮೂಲ್ಯ ಲೋಹಗಳಿಗೆ ಹಾಗೂ ತುಂಬ ಬೆಲೆಬಾಳುವ ವಸ್ತುಗಳಿಗೆ ಹೋಲಿಸುತ್ತವೆ. ನಾವು “ದೈವಜ್ಞಾನವನ್ನು” ಕಂಡುಕೊಳ್ಳಬೇಕಾದರೆ, “ನಿಕ್ಷೇಪ”ವನ್ನು ಹುಡುಕುವಂತಹ ರೀತಿಯಲ್ಲಿ ಅದನ್ನು ಹುಡುಕಬೇಕು ಎಂದು ಜ್ಞಾನೋಕ್ತಿ 2:1-5ನೆಯ ವಚನಗಳು ತೋರಿಸುತ್ತವೆ. ವಿದ್ಯಾರ್ಥಿಗಳು ತಮ್ಮ ಹೊಸ ನೇಮಕಗಳಲ್ಲಿ ಸೇವೆಮಾಡುತ್ತಿರುವಾಗ, ದೇವರ ಅಗಾಧವಾದ ವಿಷಯಗಳನ್ನು ಪರಿಶೋಧಿಸುತ್ತಾ ಇರುವಂತೆ ಭಾಷಣಕರ್ತರು ಅವರನ್ನು ಉತ್ತೇಜಿಸಿದರು. ಸಹೋದರ ಲಿವರೆನ್ಸ್ ಸ್ಪಷ್ಟವಾಗಿ ಹೀಗೆ ತಿಳಿಸಿದರು: “ಇದು ವ್ಯಾವಹಾರಿಕವಾದದ್ದಾಗಿದೆ, ಏಕೆಂದರೆ ಇದು ಯೆಹೋವನ ಮೇಲಿನ ನಿಮ್ಮ ನಂಬಿಕೆ ಹಾಗೂ ಭರವಸೆಯನ್ನು ಇನ್ನಷ್ಟು ಹೆಚ್ಚಿಸುವುದು. ಮತ್ತು ನಿಮ್ಮ ನೇಮಕಕ್ಕೆ ಬಲವಾಗಿ ಅಂಟಿಕೊಳ್ಳುವ ನಿಮ್ಮ ನಿರ್ಧಾರವನ್ನು ಇನ್ನಷ್ಟು ಬಲಗೊಳಿಸುವುದು. ನೀವು ದೇವರ ಉದ್ದೇಶಗಳನ್ನು ಇತರರಿಗೆ ವಿವರಿಸುವಾಗ, ದೃಢಭರವಸೆಯಿಂದ ಮಾತಾಡುವಂತೆ ಹಾಗೂ ತುಂಬ ಪರಿಣಾಮಕಾರಿ ಶಿಕ್ಷಕರಾಗುವಂತೆ ನಿಮಗೆ ಸಹಾಯಮಾಡುವುದು.”
ಗಿಲ್ಯಡ್ ಸ್ಕೂಲ್ನ ಲಾರೆನ್ಸ್ ಬೋವನ್ ಎಂಬ ಇನ್ನೊಬ್ಬ ಶಿಕ್ಷಕರು, ಒಂದು ಕ್ಲಾಸ್ರೂಮ್ನ ಸೆಟ್ಟಿಂಗ್ ಅನ್ನು ಉಪಯೋಗಿಸುತ್ತಾ ತಮ್ಮ ಭಾಗವನ್ನು ನಿರ್ವಹಿಸಿದರು. ಕಳೆದ ಐದು ತಿಂಗಳುಗಳಲ್ಲಿ ವಿದ್ಯಾರ್ಥಿಗಳ ಸೇವಾ ಚಟುವಟಿಕೆಯನ್ನು ಯೆಹೋವನು ಹೇಗೆ ಆಶೀರ್ವದಿಸಿದನು ಎಂಬುದನ್ನು ಅವರು ಪುನರ್ವಿಮರ್ಶಿಸಿದರು. ಸಹೋದರ ಬೋವನ್ ಅವರು, ಎಫೆಸದಲ್ಲಿನ ತನ್ನ ಸಾರ್ವಜನಿಕ ಸೇವೆಯ ಕುರಿತಾಗಿ ಅ. ಕೃತ್ಯಗಳು 20:20ರಲ್ಲಿ ಪೌಲನು ಬರೆದ ಮಾತುಗಳನ್ನು ಉಪಯೋಗಿಸಿ ಮಾತಾಡಿದರು. ಜನರಿಗೆ ಸಾಕ್ಷಿನೀಡಲಿಕ್ಕಾಗಿ ಸಿಕ್ಕಿದ ಪ್ರತಿಯೊಂದು ಅವಕಾಶವನ್ನು ಪೌಲನು ಸದುಪಯೋಗಿಸಿಕೊಂಡನು ಎಂಬುದನ್ನು ಅವರು ಒತ್ತಿಹೇಳಿದರು. ಅಪೊಸ್ತಲ ಪೌಲನಂತೆಯೇ, ನಮ್ಮ ದಿನಗಳಲ್ಲಿಯೂ ದೇವರ ಹಾಗೂ ನೆರೆಯವರ ಕಡೆಗಿನ ಪ್ರೀತಿಯಿಂದ ಪ್ರಚೋದಿತರಾಗಿರುವ ಜನರಿದ್ದಾರೆ. ಇವರು ಬೇರೆಯವರೊಂದಿಗೆ ಸತ್ಯದ ಕುರಿತು ಮಾತಾಡಲು ಹಾಗೂ ದೇವರ ವಾಕ್ಯದ ಶಕ್ತಿಯು ಇತರರಲ್ಲಿ ಕಾರ್ಯನಡಿಸುವಂತೆ ಸಹಾಯಮಾಡಲು ಸಿಗುವ ಪ್ರತಿಯೊಂದು ಅವಕಾಶವನ್ನೂ ಸದುಪಯೋಗಿಸಿಕೊಳ್ಳುತ್ತಾರೆ ಎಂಬುದನ್ನು ವಿದ್ಯಾರ್ಥಿಗಳ ಅನುಭವಗಳು ರುಜುಪಡಿಸಿದವು. ಇದರ ಫಲಿತಾಂಶವಾಗಿ ಯೆಹೋವನು ಅವರನ್ನು ಹೇರಳವಾಗಿ ಆಶೀರ್ವದಿಸುವನು.
ಅನುಭವಸ್ಥ ಸಹೋದರರ ಮಾತುಗಳು
ಈ ಗಿಲ್ಯಡ್ ಕ್ಲಾಸಿನಲ್ಲಿರುವ ವಿದ್ಯಾರ್ಥಿಗಳು, ತಮ್ಮ ಶಾಲಾವಧಿಯ ಸಮಯದಲ್ಲಿ ವಿಶೇಷ ರೀತಿಯ ಇನ್ನೊಂದು ಸುಯೋಗದಲ್ಲಿ ಆನಂದಿಸಿದರು. ಅದೇನೆಂದರೆ, 23 ದೇಶಗಳಿಂದ ಬಂದಿದ್ದ ಬ್ರಾಂಚ್ ಕಮಿಟಿಯ ಸದಸ್ಯರೊಂದಿಗೆ ಸಹವಾಸಿಸುವ ಅವಕಾಶವು ಇವರಿಗೆ ಸಿಕ್ಕಿತು. ಈ ಬ್ರಾಂಚ್ ಕಮಿಟಿಯ ಸದಸ್ಯರು, ವಿಶೇಷ ತರಬೇತಿಗಾಗಿ ಪ್ಯಾಟರ್ಸನ್ ಎಡ್ಯುಕೇಷನಲ್ ಸೆಂಟರ್ಗೆ ಆಗಮಿಸಿದ್ದರು. ತದನಂತರ, ಸರ್ವಿಸ್ ಡಿಪಾರ್ಟ್ಮೆಂಟ್ನಲ್ಲಿ ಕೆಲಸಮಾಡುತ್ತಿರುವ ವೀವರ್ ಹಾಗೂ ಮರ್ಟನ್ ಕ್ಯಾಂಪ್ಬೆಲ್ ಎಂಬ ಸಹೋದರರು, ಬ್ರಾಂಚ್ ಕಮಿಟಿಯ ಬೇರೆ ಬೇರೆ ಸದಸ್ಯರೊಂದಿಗೆ ಇಂಟರ್ವ್ಯೂಗಳನ್ನು ನಡೆಸಿದರು; ಇವರಲ್ಲಿ ಕೆಲವರು ಸ್ವತಃ ಗಿಲ್ಯಡ್ ಪದವೀಧರರಾಗಿದ್ದರು. ಈ ಅನುಭವಸ್ಥ ಮಿಷನೆರಿಗಳ ಅನುಭವಗಳನ್ನು ಕೇಳಿಸಿಕೊಳ್ಳುವುದು, ವಿದ್ಯಾರ್ಥಿಗಳಿಗೆ, ಅವರ ಕುಟುಂಬಗಳಿಗೆ ಹಾಗೂ ಸ್ನೇಹಿತರಿಗೆ ತುಂಬ ಉತ್ತೇಜನದಾಯಕವಾಗಿತ್ತು.
ಪದವಿಯನ್ನು ಪಡೆದುಕೊಳ್ಳುತ್ತಿರುವ ವಿದ್ಯಾರ್ಥಿಗಳು, ತಮ್ಮ ವಿದೇಶೀ ನೇಮಕಗಳಿಗೆ ಹೊಂದಿಕೊಳ್ಳುವಂತೆ ಸಹಾಯಮಾಡಲಿಕ್ಕಾಗಿ ಕೊಡಲ್ಪಟ್ಟ ಬುದ್ಧಿಮಾತುಗಳಲ್ಲಿ ಕೆಲವು ಈ ಕೆಳಗಿನಂತಿದ್ದವು: “ಯಾವಾಗಲೂ ಸಕಾರಾತ್ಮಕ ಮನೋಭಾವವುಳ್ಳವರಾಗಿರಿ. ತುಂಬ ವಿಚಿತ್ರವಾದ ಯಾವುದೇ ಘಟನೆಯ ಅನುಭವ ನಿಮಗಾಗುವಲ್ಲಿ ಅಥವಾ ಅದು ನಿಮಗೆ ಅರ್ಥವಾಗದಿದ್ದಲ್ಲಿ, ನಿರಾಶರಾಗಬೇಡಿ. ಯೆಹೋವನ ಮೇಲೆ ಆತುಕೊಳ್ಳಿರಿ”; “ನಿಮ್ಮ ಬಳಿ ಏನಿದೆಯೋ ಅದರಲ್ಲೇ ತೃಪ್ತಿಯನ್ನು ಪಡೆದುಕೊಳ್ಳಿರಿ, ಮತ್ತು ಜೀವನಕ್ಕೆ ಅಗತ್ಯವಾಗಿರುವುದನ್ನು ಯೆಹೋವನು ಖಂಡಿತವಾಗಿಯೂ ಒದಗಿಸುವನು ಎಂಬ ಭರವಸೆ ನಿಮಗಿರಲಿ.” ಇನ್ನಿತರ ಹೇಳಿಕೆಗಳು, ವಿದ್ಯಾರ್ಥಿಗಳು ತಮ್ಮ ನೇಮಕದಲ್ಲಿ ಆನಂದವನ್ನು ಕಾಪಾಡಿಕೊಳ್ಳುವಂತೆ ಸಹಾಯಮಾಡುವುದರ ಮೇಲೆ ಕೇಂದ್ರೀಕೃತವಾಗಿದ್ದವು. ಆ ಅಭಿವ್ಯಕ್ತಿಗಳಲ್ಲಿ ಕೆಲವು ಹೀಗಿದ್ದವು: “ನೀವು ನೇಮಕ ಪಡೆದಿರುವ ದೇಶವನ್ನು ನಿಮ್ಮ ಸ್ವಂತ ದೇಶದೊಂದಿಗೆ ಹೋಲಿಸಿ ನೋಡಬೇಡಿರಿ”; “ಸ್ಥಳಿಕ ಭಾಷೆಯನ್ನು ಮಾತಾಡಲು ಕಲಿಯಿರಿ. ಮತ್ತು ನೀವು ಜನರೊಂದಿಗೆ ಸಂವಾದಿಸಲು ಸಾಧ್ಯವಾಗುವಂತೆ ಆ ಭಾಷೆಯನ್ನು ಸ್ಪಷ್ಟವಾಗಿ ಮಾತಾಡಿರಿ”; “ಅಲ್ಲಿನ ಜನರ ಸಂಪ್ರದಾಯಗಳು ಹಾಗೂ ಸಂಸ್ಕೃತಿಯನ್ನು ಕಲಿತುಕೊಳ್ಳಿರಿ. ಏಕೆಂದರೆ, ನಿಮ್ಮ ನೇಮಕಕ್ಕೆ ಭದ್ರವಾಗಿ ಅಂಟಿಕೊಳ್ಳುವಂತೆ ಇದು ನಿಮಗೆ ಸಹಾಯಮಾಡುವುದು.” ಹೊಸ ಮಿಷನೆರಿಗಳಿಗೆ ಈ ಹೇಳಿಕೆಗಳು ನಿಜವಾಗಿಯೂ ತುಂಬ ಪ್ರೋತ್ಸಾಹದಾಯಕವಾಗಿದ್ದವು.
ಇಂಟರ್ವ್ಯೂಗಳ ಬಳಿಕ, ಸಹೋದರ ಡೇವಿಡ್ ಸ್ಪ್ಲೇನ್ ಭಾಷಣವನ್ನು ಕೊಟ್ಟರು. ಇವರೂ ಒಬ್ಬ ಮಿಷನೆರಿಯಾಗಿದ್ದರು ಮತ್ತು 42ನೆಯ ಗಿಲ್ಯಡ್ ಕ್ಲಾಸಿನಿಂದ ಪದವಿಯನ್ನು ಪಡೆದವರಾಗಿದ್ದರು. ಈಗ ಇವರು ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿಯ ಒಬ್ಬ ಸದಸ್ಯರಾಗಿ ಸೇವೆಮಾಡುತ್ತಿದ್ದಾರೆ. ಇವರು “ವಿದ್ಯಾರ್ಥಿಗಳೋ ಅಥವಾ ಪದವೀಧರರೋ?” ಎಂಬ ಆಸಕ್ತಿದಾಯಕ ವಿಷಯದ ಕುರಿತು ಮಾತಾಡಿದರು. ಪದವಿಯನ್ನು ಪಡೆದುಕೊಳ್ಳುತ್ತಿರುವ ತರಗತಿಗೆ ಅವರು ಹೀಗೆ ಕೇಳಿದರು: “ನಿಮ್ಮ ಮಿಷನೆರಿ ನೇಮಕಕ್ಕೆ ಹೋಗುವಾಗ, ನಿಮ್ಮ ಬಗ್ಗೆ ನೀವು ಯಾವ ಅಭಿಪ್ರಾಯವನ್ನಿಟ್ಟುಕೊಳ್ಳುತ್ತೀರಿ? ಮಿಷನೆರಿ ಕೆಲಸದ ಬಗ್ಗೆ ಎಲ್ಲವನ್ನೂ ತಿಳಿದುಕೊಂಡಿರುವ ಪದವೀಧರರೆಂದೋ ಅಥವಾ ಇನ್ನೂ ಅತ್ಯಧಿಕ ವಿಷಯಗಳನ್ನು ತಿಳಿದುಕೊಳ್ಳಲಿಕ್ಕಿರುವ ವಿದ್ಯಾರ್ಥಿಗಳೆಂದೋ?” ವಿವೇಕಿಯಾದ ಒಬ್ಬ ಪದವೀಧರನಿಗೆ, ತಾನೊಬ್ಬ ವಿದ್ಯಾರ್ಥಿಯಾಗಿದ್ದೇನೆ ಎಂಬ ಅನಿಸಿಕೆಯಿರುತ್ತದೆ ಎಂದು ಸಹೋದರ ಸ್ಪ್ಲೇನ್ ಹೇಳಿದರು. ತಮ್ಮ ಮಿಷನೆರಿ ನೇಮಕದಲ್ಲಿ ತಾವು ಭೇಟಿಯಾಗುವ ಪ್ರತಿಯೊಬ್ಬ ವ್ಯಕ್ತಿಯಿಂದ ಏನನ್ನಾದರೂ ಕಲಿತುಕೊಳ್ಳಸಾಧ್ಯವಿದೆ ಎಂಬ ದೃಷ್ಟಿಕೋನವು ಮಿಷನೆರಿಗಳಿಗೆ ಇರಬೇಕು. (ಫಿಲಿಪ್ಪಿ 2:3) ವಿದ್ಯಾರ್ಥಿಗಳು ತಮ್ಮ ಜೊತೆ ಮಿಷನೆರಿಗಳು, ಬ್ರಾಂಚ್ ಆಫೀಸ್, ಮತ್ತು ಸ್ಥಳಿಕ ಸಭೆಯೊಂದಿಗೆ ನಿಕಟವಾಗಿ ಸಹಕರಿಸುವಂತೆ ಪ್ರೋತ್ಸಾಹಿಸಲಾಯಿತು. “ನಿಮ್ಮ ಅಂತಿಮ ಪರೀಕ್ಷೆಗಳಲ್ಲಿ ಪಾಸಾಗಿದ್ದೀರಿ, ಆದರೆ ನೀವಿನ್ನೂ ವಿದ್ಯಾರ್ಥಿಗಳೇ. ನೀವು ಕಲಿಯಲಿಕ್ಕಾಗಿಯೇ ಬಂದಿದ್ದೀರಿ ಎಂಬುದನ್ನು ಪ್ರತಿಯೊಬ್ಬರಿಗೂ ಸ್ಪಷ್ಟವಾಗಿ ತೋರ್ಪಡಿಸಿರಿ” ಎಂದು ಸಹೋದರ ಸ್ಪ್ಲೇನ್ ಉತ್ತೇಜಿಸಿದರು.
ಈ ಭಾಷಣದ ಬಳಿಕ, ವಿದ್ಯಾರ್ಥಿಗಳು ತಮ್ಮ ಡಿಪ್ಲೊಮಾಗಳನ್ನು ಪಡೆದುಕೊಂಡರು. ಮತ್ತು ಅವರ ನೇಮಕಗಳನ್ನು ಸಭಿಕರಿಗೆ ಪ್ರಕಟಿಸಲಾಯಿತು. ತದನಂತರ ತರಗತಿಯಲ್ಲಿದ್ದ ಒಬ್ಬರು ಪದವೀಧರರ ಪರವಾಗಿ ಒಂದು ಠರಾವನ್ನು ಓದಿದಾಗ, ಪದವಿಯನ್ನು ಪಡೆಯುತ್ತಿದ್ದ ವಿದ್ಯಾರ್ಥಿಗಳಿಗೆ ಇದು ಹೃದಯಸ್ಪರ್ಶಿ ಅನುಭವವಾಗಿತ್ತು. ಅದರಲ್ಲಿ, ದೇವರ ವಾಕ್ಯದಿಂದ ತಾವು ಕಲಿತಿರುವ ವಿಷಯಗಳು, ಪವಿತ್ರ ಸೇವೆಯಲ್ಲಿ ಮಹತ್ತರವಾದ ಕೆಲಸವನ್ನು ಮಾಡಲು ಪ್ರಚೋದಿಸುವಂತೆ ಅನುಮತಿಸುತ್ತೇವೆ ಎಂಬ ದೃಢನಿರ್ಧಾರವನ್ನು ವ್ಯಕ್ತಪಡಿಸಲಾಗಿತ್ತು.
ಅಲ್ಲಿ ಕೊಡಲ್ಪಟ್ಟ ಸಲಹೆಯು, ದೇವರಿಗೆ ಹಾಗೂ ನೆರೆಯವರಿಗೆ ಪ್ರೀತಿಯನ್ನು ತೋರಿಸುವ ಪದವೀಧರರ ದೃಢನಿರ್ಧಾರವನ್ನು ಇನ್ನಷ್ಟು ಬಲಗೊಳಿಸಿತು ಎಂಬುದನ್ನು ಹಾಜರಿದ್ದವರೆಲ್ಲರೂ ಒಪ್ಪಿಕೊಂಡರು ಎಂಬುದರಲ್ಲಿ ಸಂದೇಹವೇ ಇಲ್ಲ. ಅಷ್ಟುಮಾತ್ರವಲ್ಲ, ಇದು ವಿದ್ಯಾರ್ಥಿಗಳು ತಮ್ಮ ಮಿಷನೆರಿ ನೇಮಕದಲ್ಲಿರುವ ಜನರಿಗೆ ಆತ್ಮಿಕವಾಗಿ ಸಹಾಯಮಾಡುವ ವಿಷಯದಲ್ಲಿ ಹಿಂದೆಂದಿಗಿಂತಲೂ ಹೆಚ್ಚು ದೃಢನಿಶ್ಚಿತರಾಗಿರುವಂತೆ ಮಾಡಿತು.
[ಪುಟ 25ರಲ್ಲಿರುವ ಚೌಕ]
ತರಗತಿಯ ಸಂಖ್ಯಾಸಂಗ್ರಹಣಗಳು
ಪ್ರತಿನಿಧಿಸಲ್ಪಟ್ಟ ದೇಶಗಳ ಸಂಖ್ಯೆ: 10
ನೇಮಿಸಲ್ಪಟ್ಟ ದೇಶಗಳ ಸಂಖ್ಯೆ: 20
ವಿದ್ಯಾರ್ಥಿಗಳ ಸಂಖ್ಯೆ: 48
ಸರಾಸರಿ ಪ್ರಾಯ: 33.7
ಸತ್ಯದಲ್ಲಿ ಸರಾಸರಿ ವರ್ಷಗಳು: 16.2
ಪೂರ್ಣ ಸಮಯದ ಶುಶ್ರೂಷೆಯಲ್ಲಿ ಸರಾಸರಿ ವರ್ಷಗಳು: 12.5
[ಪುಟ 26ರಲ್ಲಿರುವ ಚಿತ್ರ]
ವಾಚ್ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಡ್ನಿಂದ ಪದವಿಯನ್ನು ಪಡೆದ 109ನೆಯ ತರಗತಿ
ಈ ಕೆಳಗಿರುವ ಪಟ್ಟಿಯಲ್ಲಿ, ಸಾಲುಗಳು ಮುಂದಿನಿಂದ ಹಿಂದಕ್ಕೆ ಎಣಿಸಲ್ಪಟ್ಟು, ಪ್ರತಿ ಸಾಲಿನಲ್ಲಿರುವ ಹೆಸರುಗಳು ಎಡದಿಂದ ಬಲಕ್ಕೆ ಪಟ್ಟಿಮಾಡಲ್ಪಟ್ಟಿವೆ.
(1) ಕಾಲಿನ್ಸ್, ಇ.; ಮೈಲ್ಸ್, ಎಲ್.; ಆಲ್ವರೇಡೊ, ಎ.; ಲೇಕ್, ಜೆ. (2) ವ್ಯಾನ್ ಡೂಸನ್, ಎಲ್.; ಬೀಹಾರಿ, ಎ.; ಹೇಕೀನನ್, ಏಚ್.; ಕೋಸ್, ಎಸ್.; ಸ್ಮಿತ್, ಏಚ್. (3) ಆ್ಯಶ್ಫರ್ಡ್, ಜೆ.; ಆ್ಯಶ್ಫರ್ಡ್, ಸಿ.; ಬೋರ್, ಸಿ.; ರಿಚರ್ಡ್, ಎಲ್.; ವಿಲ್ಬೀರ್ನ್, ಡಿ.; ಲೇಕ್, ಜೆ. (4) ಚೀಚೀ, ಕೆ.; ಚೀಚೀ, ಏಚ್.; ರಾಮಿರೆಸ್, ಎಮ್.; ಬೌಮಾನ್, ಡಿ.; ಬೆಕ, ಜಿ.; ರಾಮಿರೆಸ್, ಎ. (5) ವ್ಯಾನ್ ಡೂಸನ್, ಡಬ್ಲ್ಯೂ.; ಲಮಾಟ್ರ್, ಏಚ್.; ಪಿಸ್ಕೋ, ಜೆ.; ಕಟ್ಸ್, ಎಲ್.; ರಾಸಲ್, ಏಚ್.; ಜಾನ್ಸನ್, ಆರ್. (6) ಬೆಕರ್, ಎಫ್.; ಬೌಮಾನ್, ಡಿ.; ಜಾನ್ಸನ್, ಕೆ.; ಪೈಫರ್, ಎ.; ಮೇಸನ್, ಸಿ.; ಲಮಾಟ್ರ್, ಜೆ.; ಹೇಕೀನನ್, ಪಿ. (7) ಸ್ಮಿತ್, ಆರ್.; ರಾಸಲ್, ಜೆ.; ಕಾಲಿನ್ಸ್, ಎ.; ಪಿಸ್ಕೋ, ಡಿ.; ವಿಲ್ಬೀರ್ನ್, ಆರ್.; ಕೋಸ್, ಜಿ. (8) ಕಟ್ಸ್, ಬಿ.; ಬೋರ್, ಜೆ.; ಮೇಸನ್, ಎನ್.; ಪೈಫರ್, ಎಸ್.; ರಿಚರ್ಡ್, ಇ.; ಮೈಲ್ಸ್, ಬಿ.; ಆಲ್ವರೇಡೊ, ಆರ್.