ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನನ್ನ ಅಗತ್ಯವಿದ್ದಲ್ಲೆಲ್ಲ ಸೇವೆಸಲ್ಲಿಸುವುದು

ನನ್ನ ಅಗತ್ಯವಿದ್ದಲ್ಲೆಲ್ಲ ಸೇವೆಸಲ್ಲಿಸುವುದು

ಜೀವನ ಕಥೆ

ನನ್ನ ಅಗತ್ಯವಿದ್ದಲ್ಲೆಲ್ಲ ಸೇವೆಸಲ್ಲಿಸುವುದು

ಜೇಮ್ಸ್‌ ಬಿ. ಬೆರಿ ಹೇಳಿದಂತೆ

ಅದು 1939ನೆಯ ಇಸವಿಯಾಗಿತ್ತು. ಮಹಾ ಆರ್ಥಿಕ ಕುಸಿತದಿಂದಾಗಿ, ಅಮೆರಿಕದಲ್ಲಿನ ಜೀವಿತವು ಕಷ್ಟಕರವಾಗಿತ್ತು. ಅಲ್ಲದೆ, ಯುದ್ಧದ ಕಾರ್ಮೋಡಗಳು ಯೂರೋಪಿನಾದ್ಯಂತ ಕವಿಯುತ್ತಿದ್ದವು. ನನ್ನ ತಮ್ಮನಾದ ಬೆನೆಟ್‌ ಮತ್ತು ನಾನು ಮಿಸ್ಸಿಸಿಪಿಯಲ್ಲಿದ್ದ ನಮ್ಮ ಮನೆಯಿಂದ, ಟೆಕ್ಸಾಸ್‌ನ ಹೌಸ್ಟನ್‌ ವರೆಗೆ ಕೆಲಸಕ್ಕಾಗಿ ಹುಡುಕುತ್ತಾ ಪ್ರಯಾಣಿಸಿದೆವು.

ಬೇಸಗೆಕಾಲದ ಅಂತ್ಯವಾಗುತ್ತಿದ್ದಂತೆ ಒಂದು ದಿನ, ರೇಡಿಯೊವಿನಿಂದ ನಾವು ಒಂದು ಭಾವೋತ್ಪಾದಕ ಪ್ರಕಟನೆಯನ್ನು ಕೇಳಿಸಿಕೊಂಡೆವು: ಹಿಟ್ಲರನ ಸೇನೆಗಳು ಪೋಲೆಂಡಿನೊಳಗೆ ನುಗ್ಗಿದ್ದವು ಎಂಬುದೇ. “ಅರ್ಮಗೆದೋನ್‌ ಶುರುವಾಯಿತು!” ಎಂದು ನನ್ನ ತಮ್ಮ ಉದ್ಗರಿಸಿದನು. ಆ ಕೂಡಲೇ ನಾವು ನಮ್ಮ ಕೆಲಸಗಳಿಗೆ ರಾಜೀನಾಮೆ ಕೊಟ್ಟೆವು. ನಾವು ಅತಿ ಹತ್ತಿರದಲ್ಲಿದ್ದ ರಾಜ್ಯ ಸಭಾಗೃಹಕ್ಕೆ ಹೋಗಿ, ಅಲ್ಲಿ ನಮ್ಮ ಪ್ರಪ್ರಥಮ ಕೂಟಕ್ಕೆ ಹಾಜರಾದೆವು. ಈ ರಾಜ್ಯ ಸಭಾಗೃಹಕ್ಕೆ ನಾವೇಕೆ ಹೋದೆವು? ಇದನ್ನು ಅರ್ಥಮಾಡಿಕೊಳ್ಳಲು ನಾನು ಆರಂಭದಿಂದ ಶುರುಮಾಡುತ್ತೇನೆ.

ನಾನು 1915ರಲ್ಲಿ, ಮಿಸ್ಸಿಸಿಪಿಯ ಹೀಬ್ರನ್‌ನಲ್ಲಿ ಜನಿಸಿದೆ. ನಾವು ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿದ್ದೆವು. ಆ ಸಮಯದಲ್ಲಿ ಬೈಬಲ್‌ ವಿದ್ಯಾರ್ಥಿಗಳೆಂದು ಕರೆಯಲಾಗುತ್ತಿದ್ದ ಯೆಹೋವನ ಸಾಕ್ಷಿಗಳು, ವರ್ಷಕ್ಕೊಮ್ಮೆಯಾದರೂ ಆ ಕ್ಷೇತ್ರಕ್ಕೆ ಬಂದು, ಯಾವುದೇ ವ್ಯಕ್ತಿಯ ಮನೆಯಲ್ಲಿ ಒಂದು ಭಾಷಣಕ್ಕಾಗಿ ಏರ್ಪಡಿಸುತ್ತಿದ್ದರು. ಫಲಿತಾಂಶವಾಗಿ, ನನ್ನ ಹೆತ್ತವರ ಬಳಿ ಅನೇಕ ಬೈಬಲ್‌ ಪ್ರಕಾಶನಗಳಿದ್ದವು. ಈ ಪುಸ್ತಕಗಳಲ್ಲಿ, ನರಕದಲ್ಲಿ ಬೆಂಕಿಯಿಲ್ಲ, ಆತ್ಮವು ಸಾಯುತ್ತದೆ, ನೀತಿವಂತರು ಭೂಮಿಯ ಮೇಲೆ ಸದಾಕಾಲ ಜೀವಿಸುವರು ಎಂಬಂಥ ಸಂಗತಿಗಳನ್ನು ಕಲಿಸಲಾಯಿತು. ಬೆನೆಟ್‌ ಮತ್ತು ನಾನು ಈ ಸಂಗತಿಗಳನ್ನು ನಂಬಲಾರಂಭಿಸಿದೆವು. ಆದರೆ, ಇದಕ್ಕಿಂತಲೂ ಎಷ್ಟೋ ಹೆಚ್ಚನ್ನು ನಾವು ಕಲಿಯಲಿಕ್ಕಿತ್ತು. ನಾನು ಶಾಲೆ ಮುಗಿಸಿದ ಸ್ವಲ್ಪ ಸಮಯಾನಂತರ, ನನ್ನ ತಮ್ಮ ಮತ್ತು ನಾನು ಕೆಲಸಕ್ಕಾಗಿ ಹುಡುಕುತ್ತಾ ಟೆಕ್ಸಾಸ್‌ಗೆ ಹೊರಟೆವು.

ಬಹಳಷ್ಟು ಪ್ರಯತ್ನಮಾಡಿದ ನಂತರ ನಾವು ಕೊನೆಗೆ ಸಾಕ್ಷಿಗಳನ್ನು ರಾಜ್ಯ ಸಭಾಗೃಹದಲ್ಲಿ ಸಂಪರ್ಕಿಸಲು ಶಕ್ತರಾದೆವು. ನೀವು ಪಯನೀಯರರೊ ಎಂದು ಅವರು ನಮಗೆ ಕೇಳಿದರು. ಒಬ್ಬ ಪಯನೀಯರನೆಂದರೆ, ಯೆಹೋವನ ಸಾಕ್ಷಿಗಳಲ್ಲಿ ಪೂರ್ಣ ಸಮಯದ ಶುಶ್ರೂಷಕನೆಂದು ನಮಗೆ ಗೊತ್ತಿರಲಿಲ್ಲ. ನೀವು ಸಾರಲಿಕ್ಕಾಗಿ ಹೋಗಲು ಬಯಸುತ್ತೀರೊ ಎಂದು ಅನಂತರ ಅವರು ನಮಗೆ ಕೇಳಿದರು. “ಖಂಡಿತ!” ಎಂದು ನಾವು ಉತ್ತರಿಸಿದೆವು. ಈ ಸಾರುವ ಕೆಲಸವನ್ನು ಹೇಗೆ ಮಾಡಬೇಕೆಂಬುದನ್ನು ನಮಗೆ ತೋರಿಸಲಿಕ್ಕಾಗಿ, ಅವರು ನಮ್ಮೊಂದಿಗೆ ಯಾರನ್ನಾದರೂ ಕಳುಹಿಸುವರೆಂದು ನಾವು ನೆನಸಿದೆವು. ಆದರೆ ಆದದ್ದೇ ಬೇರೆ. ಅವರು ಟೆರಿಟೊರಿಯ ಒಂದು ನಕ್ಷೆಯನ್ನು ನಮ್ಮ ಕೈಗಿತ್ತು, “ಅಲ್ಲಿ ಸೇವೆ ಮಾಡಿ!” ಎಂದು ಹೇಳಿದರು. ಹೇಗೆ ಸಾರಬೇಕೆಂಬುದರ ಕುರಿತಾಗಿ ಬೆನೆಟ್‌ ಮತ್ತು ನನಗೆ ಏನೂ ಗೊತ್ತಿರಲಿಲ್ಲ, ಮತ್ತು ನಾವು ಪೇಚಾಟದಲ್ಲಿ ಸಿಲುಕಲು ಇಷ್ಟಪಡಲಿಲ್ಲ. ಕೊನೆಗೆ ನಾವು, ನಮಗೆ ಕೊಡಲ್ಪಟ್ಟಿದ್ದ ಆ ಟೆರಿಟೊರಿಯ ನಕ್ಷೆಯನ್ನು ಅಂಚೆ ಮೂಲಕ ಆ ಸಭೆಗೇ ಕಳುಹಿಸಿ, ಮಿಸ್ಸಿಸಿಪಿಗೆ ಹಿಂದಿರುಗಿ ಹೋದೆವು!

ಬೈಬಲ್‌ ಸತ್ಯವನ್ನು ನಮ್ಮದಾಗಿಸುವುದು

ನಾವು ಮನೆಗೆ ಹಿಂತೆರಳಿದ ನಂತರ, ಕಡಿಮೆಪಕ್ಷ ಒಂದು ವರ್ಷದ ವರೆಗೆ ದಿನಾಲೂ ಸಾಕ್ಷಿಗಳ ಪ್ರಕಾಶನಗಳನ್ನು ಓದಿದೆವು. ನಮ್ಮ ಮನೆಯಲ್ಲಿ ವಿದ್ಯುಚ್ಛಕ್ತಿಯಿರಲಿಲ್ಲ. ಆದುದರಿಂದ ನಾವು ರಾತ್ರಿ ಸಮಯದಲ್ಲಿ ಬೆಂಕಿಯ ಬೆಳಕಿನಲ್ಲಿ ಓದುತ್ತಿದ್ದೆವು. ಆ ದಿನಗಳಲ್ಲಿ ಸಂಚರಣಾ ಮೇಲ್ವಿಚಾರಕರು ಯೆಹೋವನ ಸಾಕ್ಷಿಗಳ ಸಭೆಗಳನ್ನು ಮತ್ತು ದೂರದಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ಸಾಕ್ಷಿಗಳನ್ನು ಸಂದರ್ಶಿಸಿ ಅವರನ್ನು ಆತ್ಮಿಕವಾಗಿ ಬಲಪಡಿಸುತ್ತಿದ್ದರು. ಇಂಥವರಲ್ಲಿ ಒಬ್ಬರಾದ ಟೆಡ್‌ ಕ್ಲೈನ್‌ರವರು ನಮ್ಮ ಸಭೆಯನ್ನು ಸಂದರ್ಶಿಸಿದರು. ಅವರು ನನ್ನೊಂದಿಗೆ ಮತ್ತು ಬೆನೆಟ್‌ನೊಂದಿಗೆ ಮನೆಯಿಂದ ಮನೆಯ ಸಾರುವ ಕೆಲಸದಲ್ಲಿ ಜೊತೆಗೂಡುತ್ತಿದ್ದರು. ಅನೇಕ ಸಲ, ಅವರು ನಮ್ಮಿಬ್ಬರನ್ನೂ ಜೊತೆಯಾಗಿ ಕರೆದುಕೊಂಡು ಹೋಗುತ್ತಿದ್ದರು. ಪಯನೀಯರ್‌ ಕೆಲಸವೆಂದರೇನು ಎಂಬುದನ್ನು ಅವರು ನಮಗೆ ವಿವರಿಸಿ ಹೇಳಿದರು.

ಅವರೊಂದಿಗಿನ ಸಹವಾಸವು, ನಾವು ದೇವರ ಸೇವೆಯನ್ನು ಹೆಚ್ಚಿಸುವುದರ ಕುರಿತಾಗಿ ಗಂಭೀರವಾಗಿ ಯೋಚಿಸುವಂತೆ ಮಾಡಿತು. ಆದುದರಿಂದ 1940ರ ಏಪ್ರಿಲ್‌ 18ರಂದು ಸಹೋದರ ಕ್ಲೈನ್‌ರವರು ಬೆನೆಟ್‌, ನನ್ನ ತಂಗಿ ವೆಲ್ವಾ ಮತ್ತು ನನಗೆ ದೀಕ್ಷಾಸ್ನಾನ ಕೊಟ್ಟರು. ದೀಕ್ಷಾಸ್ನಾನದ ಸಮಯದಲ್ಲಿ ನಮ್ಮ ಹೆತ್ತವರು ಉಪಸ್ಥಿತರಿದ್ದರು, ಮತ್ತು ಅವರಿಗೆ ನಾವು ತೆಗೆದುಕೊಂಡ ನಿರ್ಧಾರವು ಸಂತೋಷ ತಂದಿತು. ಸುಮಾರು ಎರಡು ವರ್ಷಗಳ ಬಳಿಕ, ಅವರು ಸಹ ದೀಕ್ಷಾಸ್ನಾನ ಪಡೆದುಕೊಂಡರು. ಅವರಿಬ್ಬರು ತಮ್ಮ ಮರಣಪರ್ಯಂತ, ಅಂದರೆ ತಂದೆಯವರು 1956 ಮತ್ತು ಅಮ್ಮ 1975ರ ವರೆಗೆ ದೇವರಿಗೆ ನಂಬಿಗಸ್ತರಾಗಿ ಉಳಿದರು.

ನೀನು ಪಯನೀಯರ್‌ ಸೇವೆ ಮಾಡಬಹುದೊ ಎಂದು ಸಹೋದರ ಕ್ಲೈನ್‌ ನನ್ನನ್ನು ಕೇಳಿದಾಗ, ನನಗೆ ಮನಸ್ಸಿದೆ, ಆದರೆ ನನ್ನ ಬಳಿ ಹಣವಿಲ್ಲ, ಬಟ್ಟೆಗಳಿಲ್ಲ ಏನೂ ಇಲ್ಲವೆಂದು ಹೇಳಿದೆ. “ಅದರ ಕುರಿತು ಚಿಂತಿಸಬೇಡ, ನಾನು ಅದೆಲ್ಲವನ್ನು ನೋಡಿಕೊಳ್ಳುವೆ” ಎಂದು ಹೇಳಿದರು. ಮತ್ತು ಅವರು ಹಾಗೆಯೇ ಮಾಡಿದರು. ಮೊದಲು ಅವರು, ಪಯನೀಯರ್‌ ಸೇವೆಗಾಗಿರುವ ನನ್ನ ಅರ್ಜಿಯನ್ನು ಕಳುಹಿಸಿದರು. ಅನಂತರ ಅವರು ನನ್ನನ್ನು ತಮ್ಮೊಂದಿಗೆ ಸುಮಾರು 300 ಕಿಲೊಮೀಟರುಗಳಷ್ಟು ದೂರದಲ್ಲಿರುವ ನ್ಯೂ ಆರ್ಲಿಯನ್ಸ್‌ಗೆ ಕರೆದುಕೊಂಡು ಹೋದರು. ಅಲ್ಲಿ ಒಂದು ರಾಜ್ಯ ಸಭಾಗೃಹದ ಮೇಲಿದ್ದ ಕೆಲವೊಂದು ಒಳ್ಳೆಯ ಅಪಾರ್ಟ್‌ಮೆಂಟ್‌ಗಳನ್ನು ತೋರಿಸಿದರು. ಅವು ಪಯನೀಯರರಿಗಾಗಿದ್ದವು. ಸ್ವಲ್ಪ ಸಮಯದೊಳಗೆಯೇ ನಾನು ಅಲ್ಲಿಗೆ ಸ್ಥಳಾಂತರಿಸಿದೆ ಮತ್ತು ಒಬ್ಬ ಪಯನೀಯರನೋಪಾದಿ ನನ್ನ ಜೀವನ ವೃತ್ತಿಯನ್ನು ಆರಂಭಿಸಿದೆ. ನ್ಯೂ ಆರ್ಲಿಯನ್ಸ್‌ನಲ್ಲಿದ್ದ ಸಾಕ್ಷಿಗಳು ಪಯನೀಯರರಿಗೆ ಬಟ್ಟೆ, ಹಣ ಮತ್ತು ಊಟವನ್ನು ಕೊಡುವ ಮೂಲಕ ಸಹಾಯಮಾಡಿದರು. ದಿನದ ಸಮಯದಲ್ಲಿ, ಸಹೋದರರು ಆಹಾರವನ್ನು ತಂದು, ಬಾಗಿಲಿನ ಬಳಿ ಬಿಟ್ಟುಹೋಗುತ್ತಿದ್ದರು, ಇಲ್ಲವೇ ನೇರವಾಗಿ ಫ್ರಿಡ್ಜ್‌ನಲ್ಲಿಡುತ್ತಿದ್ದರು. ಹತ್ತಿರದಲ್ಲೇ ಇದ್ದ ಒಂದು ರೆಸ್ಟೊರೆಂಟಿನ ಮಾಲೀಕರಾಗಿದ್ದ ಒಬ್ಬ ಸಹೋದರರು, ಆ ದಿನ ಉಳಿದಿದ್ದ ಮಾಂಸ, ಬ್ರೆಡ್‌, ಚಿಲಿ, ಮತ್ತು ಕಡುಬುಗಳಂತಹ ತಾಜಾ ಆಹಾರವನ್ನು ತೆಗೆದುಕೊಂಡು ಹೋಗಲು, ರೆಸ್ಟೊರೆಂಟ್‌ ಮುಚ್ಚಿಕೊಳ್ಳುವ ಸಮಯದಲ್ಲಿ ಬರುವಂತೆ ಹೇಳುತ್ತಿದ್ದರು.

ದೊಂಬಿ ಹಿಂಸಾಚಾರವನ್ನು ಎದುರಿಸುವುದು

ಸಮಯಾನಂತರ, ಪಯನೀಯರ್‌ ಸೇವೆಗಾಗಿ ನಾನು ಮಿಸ್ಸಿಸಿಪಿಯ ಜಾಕ್ಸನ್‌ ಎಂಬ ಸ್ಥಳಕ್ಕೆ ನೇಮಿಸಲ್ಪಟ್ಟೆ. ನನ್ನ ಯುವ ಸಂಗಡಿಗನು ಮತ್ತು ನಾನು ಅಲ್ಲಿ ಒಂದಿಷ್ಟು ದೊಂಬಿ ಹಿಂಸಾಚಾರವನ್ನು ಎದುರಿಸಿದೆವು. ಆ ಸ್ಥಳದಲ್ಲಿ, ನಿಯಮವನ್ನು ಜಾರಿಗೆ ತರಬೇಕಾದವರೇ, ಈ ದೊಂಬಿಗಳನ್ನು ಬೆಂಬಲಿಸುತ್ತಿರುವಂತೆ ತೋರಿತು! ನಮ್ಮ ಮುಂದಿನ ನೇಮಕವಾಗಿದ್ದ, ಮಿಸ್ಸಿಸಿಪಿಯ ಕೊಲಂಬಸ್‌ನಲ್ಲೂ ಇದೇ ರೀತಿ ಆಯಿತು. ನಾವು ಎಲ್ಲ ಜಾತಿ ಮತ್ತು ರಾಷ್ಟ್ರದವರ ಜನರಿಗೆ ಸಾರುತ್ತಿದ್ದದರಿಂದ, ಕೆಲವು ಬಿಳಿಯರು ನಮ್ಮನ್ನು ದ್ವೇಷಿಸುತ್ತಿದ್ದರು. ನಾವು ರಾಜ್ಯದ್ರೋಹಿಗಳಾಗಿದ್ದೇವೆಂದು ಅನೇಕರು ನಂಬುತ್ತಿದ್ದರು. ಅಮೆರಿಕನ್‌ ಲೀಜನ್‌ ಎಂಬ, ತುಂಬ ದೇಶಪ್ರೇಮವುಳ್ಳ ಒಂದು ಸಂಸ್ಥೆಯ ಮುಖಂಡನಿಗೂ ಇದೇ ಅಭಿಪ್ರಾಯವಿತ್ತು. ಆದುದರಿಂದ ನಮ್ಮ ಮೇಲೆ ಆಕ್ರಮಣ ಮಾಡುವಂತೆ ಅವನು ಹಲವಾರು ಬಾರಿ, ಕೋಪಿಷ್ಠ ದೊಂಬಿಗಳನ್ನು ಕೆರಳಿಸಿದನು.

ಕೊಲಂಬಸ್‌ನಲ್ಲಿ, ನಾವು ಬೀದಿಯಲ್ಲಿ ಪತ್ರಿಕೆಗಳನ್ನು ನೀಡುತ್ತಿದ್ದಾಗ, ಒಂದು ದೊಂಬಿಯು ನಮ್ಮನ್ನು ಬೆನ್ನಟ್ಟಿಕೊಂಡು ಬಂತು. ಇದು, ಕೊಲಂಬಸ್‌ನಲ್ಲಿ ನಮ್ಮ ಮೇಲೆ ನಡೆದ ಪ್ರಪ್ರಥಮ ಆಕ್ರಮಣವಾಗಿತ್ತು. ಅವರು ನಮ್ಮನ್ನು ಅಂಗಡಿಯೊಂದರ ದಪ್ಪಗಾಜಿನ ಕಿಟಕಿಯ ಬಳಿ ಹಿಂದೂಡಿದರು. ಏನಾಗುತ್ತಿದೆಯೆಂದು ನೋಡಲು ಜನಸಂದಣಿಯು ನೆರೆದುಬಂತು. ಸ್ವಲ್ಪ ಸಮಯದಲ್ಲಿ, ಪೊಲೀಸರು ಅಲ್ಲಿಗೆ ಬಂದು, ನಮ್ಮನ್ನು ನ್ಯಾಯಾಲಯಕ್ಕೆ ಕರೆದುಕೊಂಡು ಹೋದರು. ಈ ದೊಂಬಿಯು, ನಮ್ಮನ್ನು ನ್ಯಾಯಾಲಯದ ವರೆಗೂ ಹಿಂಬಾಲಿಸುತ್ತಾ ಬಂತು. ಮತ್ತು ಅಲ್ಲಿದ್ದ ಎಲ್ಲ ಅಧಿಕಾರಿಗಳ ಮುಂದೆ ಘೋಷಿಸಿದ್ದೇನೆಂದರೆ, ಒಂದುವೇಳೆ ನಾವು ಇಂಥಿಂಥ ತಾರೀಖಿನೊಳಗೆ ಪಟ್ಟಣವನ್ನು ಬಿಟ್ಟುಹೋದರೆ ನಾವು ಜೀವಂತವಾಗಿ ಹೋಗಬಹುದು. ಆದರೆ ಆ ತಾರೀಖಿನ ನಂತರ ನಮಗೆ ಹಾನಿಮಾಡಲಾಗುವುದು, ಮತ್ತು ಪ್ರಾಯಶಃ ನಮ್ಮ ಹೆಣವೇ ಹೊರಹೋಗುವುದು! ಸ್ವಲ್ಪ ಸಮಯಕ್ಕಾಗಿ ಆ ಪಟ್ಟಣವನ್ನು ಬಿಟ್ಟುಹೋಗುವುದು ಒಳ್ಳೇದೆಂದು ನಾವು ನೆನಸಿದೆವು. ಆದರೆ ಕೆಲವು ವಾರಗಳ ಬಳಿಕ, ನಾವು ಹಿಂದಿರುಗಿ ಬಂದು ಸಾರುವಿಕೆಯನ್ನು ಪುನಃ ಆರಂಭಿಸಿದೆವು.

ಇದಾದ ಸ್ವಲ್ಪದರಲ್ಲೇ, ಎಂಟು ಮಂದಿಯ ಒಂದು ಗ್ಯಾಂಗ್‌ ನಮ್ಮ ಮೇಲೆರಗಿ, ತಮ್ಮ ಎರಡು ಕಾರುಗಳೊಳಗೆ ನಮ್ಮನ್ನು ಬಲವಂತದಿಂದ ಒಳತಳ್ಳಿದರು. ಅವರು ನಮ್ಮನ್ನು ಕಾಡಿಗೆ ಕೊಂಡೊಯ್ದು, ನಮ್ಮ ಬಟ್ಟೆಗಳನ್ನು ಕಿತ್ತೊಗೆದರು. ಮತ್ತು ನನ್ನ ಬೆಲ್ಟ್‌ನಿಂದಲೇ ನಮ್ಮಿಬ್ಬರಿಗೂ 30, 30 ಏಟುಗಳನ್ನು ಕೊಟ್ಟರು! ಅವರ ಬಳಿ ಬಂದೂಕುಗಳಿದ್ದವು ಮತ್ತು ಹಗ್ಗಗಳೂ ಇದ್ದವು. ನಾವು ಹೆದರಿಹೋಗಿದ್ದೇವೆಂದು ನಾನು ಹೇಳಲೇಬೇಕು. ಅವರು ನಮ್ಮನ್ನು ಕಟ್ಟಿಹಾಕಿ, ನದಿಗೆ ತಳ್ಳುವರೆಂದು ನಾನು ನೆನಸಿದ್ದೆ. ಆದರೆ ಅವರು ಹಾಗೆ ಮಾಡಲಿಲ್ಲ. ಅವರು ನಮ್ಮ ಸಾಹಿತ್ಯವನ್ನು ಹರಿದು, ಚೆದರಿಸಿದರು. ಮತ್ತು ನಮ್ಮ ಫೋನೋಗ್ರಾಫ್‌ ಅನ್ನು ಸಹ ಒಂದು ಮರದ ಕಾಂಡಕ್ಕೆ ಬಡಿದು ಚೂರುಚೂರು ಮಾಡಿದರು.

ನಮಗೆ ಚಡಿಯೇಟನ್ನು ಕೊಟ್ಟ ನಂತರ, ನಾವು ನಮ್ಮ ಬಟ್ಟೆಗಳನ್ನು ಧರಿಸುವಂತೆ, ಮತ್ತು ಹಿಂದಿರುಗಿ ನೋಡದೆ, ಆ ಕಾಡಿನಲ್ಲಿದ್ದ ದಾರಿಯಲ್ಲಿ ಮುಂದಕ್ಕೆ ನಡೆಯುತ್ತಾ ಇರುವಂತೆ ಹೇಳಿದರು. ನಾವು ಹಾಗೆ ನಡೆಯುತ್ತಾ ಇದ್ದಾಗ, ನಾವು ಹಿಂದಕ್ಕೆ ನೋಡುವ ಧೈರ್ಯವನ್ನು ಮಾಡಲಿಲ್ಲ. ಯಾಕೆಂದರೆ ಹಾಗೆ ಮಾಡುವಲ್ಲಿ ಅವರು ಖಂಡಿತವಾಗಿಯೂ ನಮ್ಮನ್ನು ಗುಂಡಿಕ್ಕಿ ಸಾಯಿಸುವರು, ಆದರೆ ಅವರು ಮಾತ್ರ ಶಿಕ್ಷೆಯಿಂದ ಪಾರಾಗುವರೆಂದು ನಾವು ನಿಜವಾಗಿಯೂ ನೆನಸಿದೆವು! ಆದರೆ ಕೆಲವೊಂದು ನಿಮಿಷಗಳ ಬಳಿಕ, ಅವರು ಕಾರಿನಲ್ಲಿ ಹೋಗುತ್ತಿರುವ ಶಬ್ದವನ್ನು ಕೇಳಿಸಿಕೊಂಡೆವು.

ಇನ್ನೊಂದು ಸಂದರ್ಭದಲ್ಲಿ, ಕ್ರೋಧದಿಂದ ಕುದಿಯುತ್ತಿದ್ದ ಒಂದು ದೊಂಬಿಯು ನಮ್ಮನ್ನು ಅಟ್ಟಿಸಿಕೊಂಡು ಬಂತು. ಅವರಿಂದ ತಪ್ಪಿಸಿಕೊಳ್ಳಲಿಕ್ಕಾಗಿ ನಾವು ನಮ್ಮ ಬಟ್ಟೆಗಳನ್ನು ನಮ್ಮ ಕುತ್ತಿಗೆಗಳ ಸುತ್ತ ಕಟ್ಟಿ, ಒಂದು ನದಿಯನ್ನು ಈಜಿ ದಾಟಬೇಕಾಯಿತು. ಅದರ ನಂತರ ಸ್ವಲ್ಪ ಸಮಯದೊಳಗೆ, ನಮ್ಮನ್ನು ರಾಜ್ಯದ್ರೋಹದ ಆರೋಪದ ಮೇಲೆ ದಸ್ತಗಿರಿ ಮಾಡಲಾಯಿತು. ವಿಚಾರಣೆಯು ನಡೆಯುವ ಮುಂಚೆ ನಾವು ಮೂರು ವಾರಗಳನ್ನು ಸೆರೆಮನೆಯಲ್ಲಿ ಕಳೆಯಬೇಕಾಯಿತು. ಈ ಘಟನೆಯು ಕೊಲಂಬಸ್‌ನಲ್ಲಿ ತುಂಬ ಪ್ರಚಾರವನ್ನು ಪಡೆಯಿತು. ಹತ್ತಿರದಲ್ಲಿದ್ದ ಒಂದು ಕಾಲೇಜಿನ ವಿದ್ಯಾರ್ಥಿಗಳು ಇದಕ್ಕೆ ಹಾಜರಾಗುವಂತೆ ಕಾಲೇಜಿನಿಂದ ಬೇಗ ಹೊರಬರಲೂ ಅನುಮತಿಸಲ್ಪಟ್ಟರು. ಆ ದಿನವು ಬಂದಾಗ, ನ್ಯಾಯಾಲಯವು ಕಿಕ್ಕಿರಿದಿತ್ತು. ಕೇವಲ ನಿಂತುಕೊಳ್ಳಲಿಕ್ಕಾಗಿ ಮಾತ್ರ ಸ್ಥಳವಿತ್ತು! ಸರಕಾರದ ಪರವಾಗಿ ಸಾಕ್ಷಿಯನ್ನು ಕೊಡುವವರಲ್ಲಿ, ಇಬ್ಬರು ಸೌವಾರ್ತಿಕರು, ನಗರಾಧ್ಯಕ್ಷನು ಮತ್ತು ಪೋಲಿಸರಿದ್ದರು.

ನಮ್ಮನ್ನು ಪ್ರತಿನಿಧಿಸಲಿಕ್ಕಾಗಿ ಜಿ. ಸಿ. ಕ್ಲಾರ್ಕ್‌ ಮತ್ತು ಅವರ ಸಂಗಡಿಗನನ್ನು ಕಳುಹಿಸಲಾಯಿತು. ಸಾಕ್ಷ್ಯ ಇಲ್ಲದಿದ್ದಕ್ಕಾಗಿ ನಮ್ಮ ಮೇಲಿದ್ದ ರಾಜ್ಯದ್ರೋಹದ ಆರೋಪಗಳನ್ನು ವಜಾಮಾಡುವಂತೆ ಅವರು ಕೇಳಿಕೊಂಡರು. ಸಹೋದರ ಕ್ಲಾರ್ಕ್‌ರೊಂದಿಗೆ ಕೆಲಸಮಾಡುತ್ತಿದ್ದ ವಕೀಲನು, ಯೆಹೋವನ ಸಾಕ್ಷಿಯಾಗಿರದಿದ್ದರೂ, ನಮ್ಮ ಪರವಾಗಿ ಪ್ರಬಲವಾದ ಹೇಳಿಕೆಗಳನ್ನು ಮಾಡಿದನು. ಒಂದು ಹಂತದಲ್ಲಿ ಅವರು ನ್ಯಾಯಾಧೀಶರಿಗೆ ಹೇಳಿದ್ದು: “ಯೆಹೋವನ ಸಾಕ್ಷಿಗಳು ಹುಚ್ಚರೆಂದು ಜನರು ಹೇಳುತ್ತಾರೆ. ಹುಚ್ಚರೊ? ಹಾಗೆ ನೋಡುವುದಾದರೆ, ಥಾಮಸ್‌ ಎಡಿಸನ್‌ ಹುಚ್ಚನೆಂದು ಹೇಳಲಾಗುತ್ತಿತ್ತು!” ಅನಂತರ ಅವರು ಒಂದು ಬಲ್ಬ್‌ ಕಡೆಗೆ ಕೈತೋರಿಸುತ್ತಾ, ಹೇಳಿದ್ದು: “ಆದರೆ ಆ ಬಲ್ಬನ್ನು ನೋಡಿ!” ಆ ಬಲ್ಬಿನ ಆವಿಷ್ಕಾರ ಮಾಡಿದ ಎಡಿಸನ್‌ ಹುಚ್ಚನೆಂದು ಕೆಲವರು ನೆನಸಿದ್ದಿರಬಹುದು, ಆದರೆ ಅವನ ಸಾಧನೆಗಳ ಬಗ್ಗೆ ಯಾರೂ ಚಕಾರವೆತ್ತಲು ಸಾಧ್ಯವಿರಲಿಲ್ಲ.

ಸಾಕ್ಷ್ಯವನ್ನು ಕೇಳಿದ ನಂತರ, ಅಧ್ಯಕ್ಷತೆ ವಹಿಸುತ್ತಿದ್ದ ಸರ್ಕಿಟ್‌ ನ್ಯಾಯಾಧೀಶರು, ಫಿರ್ಯಾದಿಗೆ ಹೇಳಿದ್ದು: “ರಾಜ್ಯದ್ರೋಹದ ಕುರಿತಾಗಿ ಒಂದು ಚಿಕ್ಕ ಸಾಕ್ಷ್ಯವೂ ನಿಮ್ಮ ಬಳಿಯಿಲ್ಲ. ಅವರಿಗೆ ಈ ಕೆಲಸವನ್ನು ಮಾಡುವ ಹಕ್ಕಿದೆ. ನಿಮಗೆ ಸರಿಯಾದ ಸಾಕ್ಷ್ಯ ಸಿಗುವ ತನಕ, ಅವರನ್ನು ಪುನಃ ಈ ನ್ಯಾಯಾಲಯಕ್ಕೆ ತಂದು, ಸರಕಾರದ ಸಮಯ, ಹಣ ಹಾಗೂ ನನ್ನ ಸಮಯವನ್ನೂ ಹಾಳುಮಾಡಬೇಡಿ!” ನಮಗೆ ವಿಜಯವು ಸಿಕ್ಕಿತ್ತು!

ಆದರೆ ತದನಂತರ, ನ್ಯಾಯಾಧೀಶನು ನಮ್ಮನ್ನು ತನ್ನ ಕೋಣೆಗೆ ಕರೆಯಿಸಿದನು. ಇಡೀ ಪಟ್ಟಣವೇ ತನ್ನ ನಿರ್ಣಯದ ವಿರುದ್ಧವಿದೆಯೆಂದು ಅವನಿಗೆ ತಿಳಿದಿತ್ತು. ಆದುದರಿಂದ ಅವನು ನಮ್ಮನ್ನು ಎಚ್ಚರಿಸಿದ್ದು: “ನಾನು ಏನನ್ನು ಹೇಳಿದೆನೊ ಅದು ಕಾನೂನಿಗನುಸಾರವಾದದ್ದಾಗಿತ್ತು. ಆದರೆ ನಿಮಗಿಬ್ಬರಿಗೂ ನನ್ನ ವೈಯಕ್ತಿಕ ಸಲಹೆಯೇನೆಂದರೆ, ಇಲ್ಲಿಂದ ಹೊರಟುಹೋಗಿ, ಇಲ್ಲದಿದ್ದಲ್ಲಿ ಅವರು ನಿಮ್ಮನ್ನು ಕೊಂದುಹಾಕುವರು!” ಅವನು ಸರಿಯಾದದ್ದನ್ನೇ ಹೇಳುತ್ತಿದ್ದನೆಂದು ನಮಗೆ ತಿಳಿದಿತ್ತು, ಆದುದರಿಂದ ನಾವು ಆ ಪಟ್ಟಣವನ್ನು ಬಿಟ್ಟುಹೋದೆವು.

ಅಲ್ಲಿಂದ ಹೊರಟು, ನಾನು ಟೆನ್ನಿಸಿಯ ಕ್ಲಾರ್ಕಸ್ವಿಲ್‌ನಲ್ಲಿ ವಿಶೇಷ ಪಯನೀಯರರೋಪಾದಿ ಸೇವೆಸಲ್ಲಿಸುತ್ತಿದ್ದ ಬೆನೆಟ್‌ ಮತ್ತು ವೆಲ್ವಾರನ್ನು ಜೊತೆಗೂಡಿದೆ. ಕೆಲವು ತಿಂಗಳುಗಳ ಬಳಿಕ ನಮ್ಮನ್ನು ಕೆಂಟಕಿಯ ಪ್ಯಾರಿಸ್‌ ನಗರಕ್ಕೆ ನೇಮಿಸಲಾಯಿತು. ಒಂದೂವರೆ ವರ್ಷದ ನಂತರ, ನಾವು ಇನ್ನೇನು ಒಂದು ಸಭೆಯನ್ನು ಆರಂಭಿಸಲಿದ್ದೆವು. ಅಷ್ಟರೊಳಗೆ ಬೆನೆಟ್‌ ಮತ್ತು ನಾನು ತುಂಬ ವಿಶೇಷವಾದ ಆಮಂತ್ರಣವೊಂದನ್ನು ಪಡೆದೆವು.

ಮಿಷನೆರಿ ಸೇವೆ

ವಾಚ್‌ಟವರ್‌ ಬೈಬಲ್‌ ಸ್ಕೂಲ್‌ ಆಫ್‌ ಗಿಲ್ಯಡ್‌ನ ಎರಡನೆಯ ತರಗತಿಯನ್ನು ಹಾಜರಾಗುವ ಆಮಂತ್ರಣವನ್ನು ನಾವು ನೋಡಿದಾಗ, ನಾವು ಹೀಗೆ ನೆನಸಿದೆವು: ‘ಅವರು ಏನೊ ತಪ್ಪು ಮಾಡಿದ್ದಿರಬೇಕು! ಇಲ್ಲದಿದ್ದಲ್ಲಿ, ಮಿಸ್ಸಿಸಿಪ್ಪಿಯಿಂದ ಬಂದಿರುವ ಇಬ್ಬರು ಸಾಮಾನ್ಯ, ಯುವ ಹುಡುಗರನ್ನು ಅವರು ಆ ಶಾಲೆಗೆ ಯಾಕಾದರೂ ಆಮಂತ್ರಿಸುತ್ತಿದ್ದರು?’ ಅವರಿಗೆ ಶಿಕ್ಷಿತ ವ್ಯಕ್ತಿಗಳೇ ಬೇಕಾಗಿದ್ದಾರೆಂದು ನಾವು ಯೋಚಿಸುತ್ತಿದ್ದೆವು. ಹಾಗಿದ್ದರೂ ನಾವು ಅಲ್ಲಿಗೆ ಹೋದೆವು. ಆ ತರಗತಿಯಲ್ಲಿ 100 ಮಂದಿ ವಿದ್ಯಾರ್ಥಿಗಳಿದ್ದರು, ಮತ್ತು ಆ ಶಾಲೆಯು 5 ತಿಂಗಳುಗಳ ಅವಧಿಯದ್ದಾಗಿತ್ತು. ಪದವಿಪ್ರಾಪ್ತಿ ದಿನವು 1944ರ ಜನವರಿ 31 ಆಗಿತ್ತು. ನಾವು ಒಂದು ವಿದೇಶಿ ಕ್ಷೇತ್ರದಲ್ಲಿ ಸೇವೆಸಲ್ಲಿಸಲಿಕ್ಕಾಗಿ ತುದಿಗಾಲ ಮೇಲೆ ನಿಂತಿದ್ದೆವು. ಆದರೆ ಆ ಸಮಯದಲ್ಲಿ, ಪಾಸ್‌ಪೋರ್ಟ್‌ ಮತ್ತು ವೀಸಾ ಪಡೆಯಲು ತುಂಬ ಸಮಯ ತಗಲುತ್ತಿತ್ತು. ಆದುದರಿಂದ ವಿದ್ಯಾರ್ಥಿಗಳನ್ನು ತಾತ್ಕಾಲಿಕವಾಗಿ ಅಮೆರಿಕದಲ್ಲೇ ಕೆಲಸಮಾಡಲು ನೇಮಿಸಲಾಗುತ್ತಿತ್ತು. ಸ್ವಲ್ಪ ಸಮಯದ ವರೆಗೆ ಆಲಬಾಮಾ ಮತ್ತು ಜಾರ್ಜಿಯದಲ್ಲಿ ಪಯನೀಯರರೋಪಾದಿ ಸೇವೆಸಲ್ಲಿಸಿದ ನಂತರ, ಕೊನೆಗೆ ಬೆನೆಟ್‌ ಮತ್ತು ನಾನು ನಮ್ಮ ನೇಮಕವನ್ನು ಪಡೆದೆವು. ಅದು ವೆಸ್ಟ್‌ ಇಂಡಿಸ್‌ನ ಬಾರ್ಬಡೋಸ್‌ ಆಗಿತ್ತು.

ಎರಡನೆಯ ವಿಶ್ವ ಯುದ್ಧವು ನಡೆಯುತ್ತಾ ಇತ್ತು. ಮತ್ತು ಯೆಹೋವನ ಸಾಕ್ಷಿಗಳ ಕೆಲಸ ಹಾಗೂ ಸಾಹಿತ್ಯವು, ಬಾರ್ಬಡೋಸ್‌ ಅನ್ನು ಸೇರಿಸಿ ಅನೇಕ ಸ್ಥಳಗಳಲ್ಲಿ ನಿಷೇಧಿಸಲ್ಪಟ್ಟಿತ್ತು. ನಾವು ಅಲ್ಲಿ ತಲಪಿದಾಗ, ಅಲ್ಲಿನ ಕಸ್ಟಮ್‌ ಅಧಿಕಾರಿಗಳು ನಮ್ಮ ಲಗೇಜನ್ನು ತೆರೆದು, ಪರೀಕ್ಷಿಸಿದರು. ನಾವು ಅದರಲ್ಲಿ ಅಡಗಿಸಿಟ್ಟಿದ್ದ ಸಾಹಿತ್ಯವು ಅವರ ಕೈಗೆ ಸಿಕ್ಕಿತು. ‘ಇನ್ನು ನಮ್ಮ ಕಥೆ ಮುಗಿಯಿತು’ ಎಂದು ನಾವು ನೆನಸಿದೆವು. ಆದರೆ ಅದಕ್ಕೆ ಬದಲಾಗಿ, ಒಬ್ಬ ಅಧಿಕಾರಿಯು ನಮಗೆ ಇಷ್ಟನ್ನೇ ಹೇಳಿದನು: “ನಿಮ್ಮ ಲಗೇಜನ್ನು ಪರೀಕ್ಷಿಸಬೇಕಾದದ್ದಕ್ಕಾಗಿ ನಾವು ಕ್ಷಮೆಯಾಚಿಸುತ್ತೇವೆ; ಈ ಸಾಹಿತ್ಯದಲ್ಲಿ ಕೆಲವೊಂದು ಬಾರ್ಬಡೋಸ್‌ನಲ್ಲಿ ನಿಷೇಧಿಸಲ್ಪಟ್ಟಿದೆ.” ನಾವು ಪ್ಯಾಕ್‌ ಮಾಡಿದಂತಹ ಪ್ರತಿಯೊಂದೂ ಸಾಹಿತ್ಯದೊಂದಿಗೆ ನಾವು ಬಾರ್ಬಡೋಸ್‌ ಅನ್ನು ಪ್ರವೇಶಿಸುವಂತೆ ಅವನು ಅನುಮತಿಸಿದನು! ಅನಂತರ ನಾವು ಸರಕಾರಿ ಅಧಿಕಾರಿಗಳಿಗೆ ಸಾಕ್ಷಿಯನ್ನು ಕೊಟ್ಟಾಗ, ನಮ್ಮ ಸಾಹಿತ್ಯವನ್ನು ಏಕೆ ನಿಷೇಧಿಸಲಾಗಿದೆ ಎಂಬುದು ತಮಗೇ ತಿಳಿದಿಲ್ಲವೆಂದು ಹೇಳಿದರು. ಕೆಲವು ತಿಂಗಳುಗಳ ಬಳಿಕ, ನಿಷೇಧವನ್ನು ತೆಗೆದುಹಾಕಲಾಯಿತು.

ಬಾರ್ಬಡೋಸ್‌ ಕ್ಷೇತ್ರದಲ್ಲಿ ನಮಗೆ ತುಂಬ ಯಶಸ್ಸು ಸಿಕ್ಕಿತ್ತು. ನಮ್ಮಿಬ್ಬರಲ್ಲಿ ಒಬ್ಬೊಬ್ಬರಿಗೆ ಕಡಿಮೆಪಕ್ಷ 15 ಬೈಬಲ್‌ ಅಭ್ಯಾಸಗಳಿದ್ದವು. ಮತ್ತು ಹೆಚ್ಚಿನ ವಿದ್ಯಾರ್ಥಿಗಳು ಆತ್ಮಿಕವಾಗಿ ಪ್ರಗತಿಯನ್ನು ಮಾಡಿದರು. ಕೆಲವರು ಸಭಾ ಕೂಟಗಳಿಗೂ ಬರುವುದನ್ನು ನೋಡಿ ನಮಗೆ ತುಂಬ ಸಂತೋಷವಾಗುತ್ತಿತ್ತು. ಆದರೆ ಸ್ವಲ್ಪ ಸಮಯದಿಂದ ಸಾಹಿತ್ಯವು ನಿಷೇಧಿಸಲ್ಪಟ್ಟಿದ್ದರಿಂದ, ಅಲ್ಲಿನ ಸಹೋದರರಿಗೆ ಕೂಟಗಳು ಹೇಗೆ ನಡೆಸಲ್ಪಡಬೇಕೆಂಬುದರ ಕುರಿತಾಗಿ ಸದ್ಯದ ತಿಳುವಳಿಕೆ ಇರಲಿಲ್ಲ. ಹೀಗಿದ್ದರೂ, ಸ್ವಲ್ಪ ಸಮಯದೊಳಗೆಯೇ, ಅನೇಕ ಸಮರ್ಥ ಸಹೋದರರನ್ನು ನಾವು ತರಬೇತಿಗೊಳಿಸಲು ಶಕ್ತರಾದೆವು. ನಮ್ಮ ವಿದ್ಯಾರ್ಥಿಗಳಲ್ಲಿ ಅನೇಕರು ಕ್ರೈಸ್ತ ಶುಶ್ರೂಷೆಯಲ್ಲಿ ಪಾಲ್ಗೊಳ್ಳುವಂತೆ ಸಹಾಯಮಾಡುವ ಮತ್ತು ಸಭೆಯು ಬೆಳೆಯುತ್ತಾ ಹೋಗುವುದನ್ನು ನೋಡುವ ಆನಂದವು ನಮಗೆ ಸಿಕ್ಕಿತ್ತು.

ಒಂದು ಕುಟುಂಬವನ್ನು ಪೋಷಿಸುವುದು

ನಾನು ಬಾರ್ಬಡೋಸ್‌ನಲ್ಲಿ ಸುಮಾರು 18 ತಿಂಗಳುಗಳ ವರೆಗೆ ಇದ್ದೆ. ಆ ಬಳಿಕ, ನನಗೆ ಶಸ್ತ್ರಚಿಕಿತ್ಸೆಯ ಅಗತ್ಯವಿದ್ದದರಿಂದ ನಾನು ಅಮೆರಿಕಕ್ಕೆ ಹಿಂದಿರುಗಬೇಕಾಯಿತು. ಅಲ್ಲಿದ್ದಾಗ ನಾನು ಡಾರಥಿ ಎಂಬ ಹೆಸರಿನ ಒಬ್ಬ ಸಾಕ್ಷಿಯನ್ನು ಮದುವೆಯಾದೆ. ನಾನು ಅವಳೊಂದಿಗೆ ಈ ಮುಂಚೆ ಪತ್ರವ್ಯವಹಾರವನ್ನು ನಡೆಸುತ್ತಾ ಇದ್ದೆ. ನನ್ನ ಹೆಂಡತಿ ಮತ್ತು ನಾನು ಫ್ಲಾರಿಡದ ಟಾಲ್ಲಾಹಾಸ್ಸೀಯಲ್ಲಿ ಪಯನೀಯರ್‌ ಸೇವೆಯನ್ನು ಮಾಡಿದೆವು. ಆದರೆ ಆರು ತಿಂಗಳುಗಳ ನಂತರ ನಾವು ಕೆಂಟಕಿಯ ಲೂಯಿವಿಲ್ಲಕ್ಕೆ ಸ್ಥಳಾಂತರಿಸಿದೆವು. ಅಲ್ಲಿ ಒಬ್ಬ ಸಾಕ್ಷಿಯು ನನಗೊಂದು ಉದ್ಯೋಗವನ್ನು ನೀಡಿದನು. ನನ್ನ ತಮ್ಮ ಬೆನೆಟ್‌, ಬಾರ್ಬಡೋಸ್‌ನಲ್ಲೇ ಅನೇಕ ವರ್ಷಗಳ ವರೆಗೆ ಸೇವೆ ಸಲ್ಲಿಸಿದನು. ಅನಂತರ ಅವನು ಜೊತೆ ಮಿಷನೆರಿಯೊಬ್ಬಳನ್ನು ಮದುವೆಯಾಗಿ, ಆ ದ್ವೀಪಗಳಲ್ಲಿ ಸಂಚರಣಾ ಕೆಲಸದಲ್ಲಿ ತೊಡಗಿದ್ದನು. ಕಟ್ಟಕಡೆಗೆ, ಅವನು ಆರೋಗ್ಯದ ಕಾರಣಗಳಿಗಾಗಿ ಅಮೆರಿಕಕ್ಕೆ ಹಿಂದಿರುಗಬೇಕಾಯಿತು. 1990ರಲ್ಲಿ ಬೆನೆಟ್‌ ತನ್ನ 73ನೆಯ ವಯಸ್ಸಿನಲ್ಲಿ ಸಾಯುವ ವರೆಗೂ, ಸ್ಪ್ಯಾನಿಷ್‌ ಭಾಷೆಯನ್ನಾಡುವ ಸಭೆಗಳ ಸೇವೆಮಾಡುವುದನ್ನು ಅವರಿಬ್ಬರೂ ಮುಂದುವರಿಸಿದ್ದರು.

1950ರಲ್ಲಿ, ಡಾರಥಿ ನಮ್ಮ ಪ್ರಥಮ ಮಗುವಿಗೆ ಜನ್ಮನೀಡಿದಳು. ಅದೊಂದು ಹೆಣ್ಣುಮಗುವಾಗಿತ್ತು ಮತ್ತು ನಾವು ಅವಳಿಗೆ ಡ್ಯಾರಲ್‌ ಎಂಬ ಹೆಸರನ್ನಿಟ್ಟೆವು. ಒಟ್ಟಿನಲ್ಲಿ ನಮಗೆ ಐದು ಮಂದಿ ಮಕ್ಕಳಾದವು. ನಮ್ಮ ಎರಡನೆಯ ಮಗ ಡೆರಿಕ್‌, ಎರಡೂವರೆ ವರ್ಷ ಪ್ರಾಯದಲ್ಲಿ, ಸ್ಪೈನಲ್‌ ಮೆನಿಂಜೈಟಿಸ್‌ನಿಂದಾಗಿ ತೀರಿಹೋದನು. ಆದರೆ ಲೆಸ್ಲಿ 1956ರಲ್ಲಿ ಹುಟ್ಟಿದನು ಮತ್ತು ಅವನನ್ನು ಹಿಂಬಾಲಿಸಿ, 1958ರಲ್ಲಿ ಈವ್‌ರೆಟ್‌ ಹುಟ್ಟಿದನು. ನಮ್ಮ ಮಕ್ಕಳನ್ನು ಬೈಬಲ್‌ ಸತ್ಯದ ಮಾರ್ಗದಲ್ಲಿ ಪೋಷಿಸಲು ಡಾರಥಿ ಮತ್ತು ನಾನು ಪ್ರಯಾಸಪಟ್ಟೆವು. ಪ್ರತಿ ವಾರವೂ ಕುಟುಂಬ ಬೈಬಲ್‌ ಅಭ್ಯಾಸ ಕಾರ್ಯಕ್ರಮವು ನಡೆಯುವಂತೆ ನಾವು ಯಾವಾಗಲೂ ಪ್ರಯತ್ನಿಸಿದ್ದೇವೆ. ಮತ್ತು ಈ ಅಭ್ಯಾಸವು ಎಲ್ಲ ಮಕ್ಕಳಿಗೆ ಆಸಕ್ತಿದಾಯಕವಾಗಿರುವಂತೆ ಮಾಡಿದ್ದೇವೆ. ಡ್ಯಾರಲ್‌, ಲೆಸ್ಲಿ ಮತ್ತು ಇವರೆಟ್‌ ಇನ್ನೂ ಎಳೆಯರಾಗಿದ್ದಾಗಲೇ, ನಾವು ಪ್ರತಿ ವಾರ ಅವರಿಗೆ ಪ್ರಶ್ನೆಗಳನ್ನು ಕೊಡುತ್ತಿದ್ದೆವು. ಅವರು ಅದರ ಕುರಿತಾಗಿ ಸಂಶೋಧನೆ ಮಾಡಿ ಮುಂದಿನ ವಾರ ಉತ್ತರವನ್ನು ಕೊಡಬೇಕಾಗಿತ್ತು. ಮತ್ತು ಅವರು ಮನೆಯಿಂದ ಮನೆಗೆ ಸಾರುತ್ತಿರುವ ಹಾಗೆ ಮನೆಯಲ್ಲೇ ನಟನೆಮಾಡುತ್ತಿದ್ದರು. ಅವರಲ್ಲಿ ಒಬ್ಬನು ಬಟ್ಟೆಗಳ ಕಪಾಟಿನೊಳಗೆ ಹೋಗಿ, ಮನೆಯವನಾಗಿರುವಂತೆ ನಟಿಸುತ್ತಿದ್ದನು. ಇನ್ನೊಬ್ಬನು ಹೊರಗೆ ನಿಂತು, ಬಾಗಿಲು ತಟ್ಟುತ್ತಿದ್ದನು. ಒಬ್ಬರನ್ನೊಬ್ಬರು ಹೆದರಿಸಲಿಕ್ಕಾಗಿ ಅವರು ನಗಿಸುವಂಥ ಪಂಕ್ತಿಗಳನ್ನು ಹೇಳುತ್ತಿದ್ದರು. ಇದು ಸಾರುವ ಕೆಲಸಕ್ಕಾಗಿ ಅವರಲ್ಲಿ ಪ್ರೀತಿಯನ್ನು ಬೆಳೆಸಲು ಸಹಾಯಮಾಡಿತು. ನಾವು ಸಹ ಅವರೊಂದಿಗೆ ಕ್ರಮವಾಗಿ ಸಾರುತ್ತಿದ್ದೆವು.

ನಮ್ಮ ಕಿರಿಯ ಪುತ್ರ, ಎಲ್ಟನ್‌ 1973ರಲ್ಲಿ ಜನಿಸಿದಾಗ, ಡಾರಥಿಯ ಪ್ರಾಯ ಸುಮಾರು 50ರಷ್ಟಾಗಿತ್ತು ಮತ್ತು ನಾನು 60ರ ಪ್ರಾಯಕ್ಕೆ ಹತ್ತಿರದಲ್ಲಿದ್ದೆ. ಆದುದರಿಂದ ಸಭೆಯಲ್ಲಿ ಎಲ್ಲರೂ ನಮ್ಮನ್ನು ಅಬ್ರಹಾಮ ಮತ್ತು ಸಾರಾ ಎಂದು ಕರೆಯುತ್ತಿದ್ದರು! (ಆದಿಕಾಂಡ 17:​15-17) ನಮ್ಮ ಹಿರಿಯ ಪುತ್ರರು ಎಲ್ಟನ್‌ನನ್ನು ತಮ್ಮೊಂದಿಗೆ ಸೇವೆಗೆ ಕೊಂಡುಹೋಗುತ್ತಿದ್ದರು. ಕುಟುಂಬಗಳು​—ಸಹೋದರರು, ಸಹೋದರಿಯರು, ಹೆತ್ತವರು ಮತ್ತು ಮಕ್ಕಳು ಜೊತೆಯಾಗಿ ಕೆಲಸಮಾಡುತ್ತಾ ಇತರರೊಂದಿಗೆ ಬೈಬಲ್‌ ಸತ್ಯಗಳನ್ನು ಹಂಚುವುದನ್ನು ನೋಡುವಾಗ ಅದು ಜನರಿಗೆ ಒಂದು ಬಲವಾದ ಸಾಕ್ಷಿಯನ್ನು ಕೊಟ್ಟಿತ್ತೆಂದು ನಮಗನಿಸುತ್ತದೆ. ಎಲ್ಟನ್‌ನ ಅಣ್ಣಂದಿರು ಸರದಿಗನುಸಾರ ಅವನನ್ನು ತಮ್ಮ ಭುಜಗಳ ಮೇಲೆ ಕುಳ್ಳಿರಿಸುತ್ತಿದ್ದರು ಮತ್ತು ಅವನ ಕೈಯಲ್ಲಿ ಒಂದು ಬೈಬಲ್‌ ಕಿರುಹೊತ್ತಗೆಯನ್ನು ಕೊಡುತ್ತಿದ್ದರು. ಜನರು ತಮ್ಮ ಬಾಗಿಲುಗಳನ್ನು ತೆರೆದಾಗ, ತನ್ನ ಅಣ್ಣನ ಭುಜಗಳ ಮೇಲೆ ಕುಳಿತುಕೊಂಡಿದ್ದ ಈ ಅಂದವಾದ ಪುಟ್ಟ ಹುಡುಗನನ್ನು ನೋಡಿ, ಹೆಚ್ಚಿನವರು ಕಿವಿಗೊಡುತ್ತಿದ್ದರು. ಅವರ ಸಂಭಾಷಣೆಯು ಮುಗಿದಾಗ, ಮನೆಯವನಿಗೆ ಆ ಕಿರುಹೊತ್ತಗೆಯನ್ನು ಕೊಟ್ಟು, ಕೆಲವೊಂದು ಮಾತುಗಳನ್ನಾಡುವಂತೆ ನಮ್ಮ ಹಿರಿಯ ಪುತ್ರರು ಎಲ್ಟನನಿಗೆ ಕಲಿಸಿದರು. ಈ ರೀತಿಯಲ್ಲಿ ಅವನು ಸಾರಲು ಆರಂಭಿಸಿದನು.

ಈ ಎಲ್ಲ ವರ್ಷಗಳಲ್ಲಿ, ಇತರರು ಯೆಹೋವನ ಕುರಿತಾಗಿ ತಿಳಿದುಕೊಳ್ಳುವಂತೆ ಸಹಾಯಮಾಡಲು ನಮಗೆ ಸಾಧ್ಯವಾಗಿದೆ. 1970ರ ಕೊನೆಯ ಭಾಗದಲ್ಲಿ, ನಾವು ಲೂಯಿಸ್‌ವಿಲ್ಲದಿಂದ ಕೆಂಟಕಿಯಲ್ಲಿರುವ ಶೆಲ್ಬಿವಿಲ್ಲಕ್ಕೆ ಸ್ಥಳಾಂತರಿಸಿದೆವು. ಯಾಕೆಂದರೆ ಅಲ್ಲಿ ನಾವು, ಅಗತ್ಯದಲ್ಲಿದ್ದ ಒಂದು ಸಭೆಯ ಸೇವೆಮಾಡಲು ಬಯಸಿದೆವು. ನಾವು ಅಲ್ಲಿದ್ದಾಗ, ಆ ಸಭೆಯು ಬೆಳೆಯುವುದನ್ನು ನೋಡಿದೆವು ಮಾತ್ರವಲ್ಲ, ಜಮೀನನ್ನು ಹುಡುಕಿ, ಒಂದು ರಾಜ್ಯ ಸಭಾಗೃಹವನ್ನು ಕಟ್ಟುವುದರಲ್ಲಿಯೂ ನಾವು ಸಹಾಯಮಾಡಿದೆವು. ಅನಂತರ, ಅಲ್ಲಿಂದ ಸ್ವಲ್ಪ ದೂರದಲ್ಲಿದ್ದ ಇನ್ನೊಂದು ಸಭೆಯಲ್ಲಿ ಸೇವೆಸಲ್ಲಿಸುವಂತೆ ನಮ್ಮನ್ನು ಕೇಳಿಕೊಳ್ಳಲಾಯಿತು.

ಕುಟುಂಬ ಜೀವಿತದ ಅನಿಶ್ಚಿತತೆಗಳು

ನಮ್ಮ ಎಲ್ಲ ಮಕ್ಕಳು ಯೆಹೋವನ ಮಾರ್ಗದಲ್ಲಿ ಮುಂದುವರಿದರೆಂದು ನಾನು ಹೇಳಲು ಇಚ್ಛಿಸುತ್ತೇನಾದರೂ, ಹಾಗೆ ಹೇಳಲಾರೆ. ಏಕೆಂದರೆ ಅವರು ದೊಡ್ಡವರಾಗಿ ಮನೆಬಿಟ್ಟು ಹೋದ ನಂತರ, ಬದುಕುಳಿದಿರುವ ನಮ್ಮ ನಾಲ್ಕು ಮಕ್ಕಳಲ್ಲಿ ಮೂವರು ಸತ್ಯವನ್ನು ಬಿಟ್ಟುಹೋದರು. ಆದರೆ ಅವರಲ್ಲಿ ಒಬ್ಬನಾದ ಇವರೆಟ್‌ ಮಾತ್ರ ನನ್ನ ಮಾದರಿಯನ್ನು ಅನುಸರಿಸುತ್ತಾ, ಪೂರ್ಣ ಸಮಯದ ಶುಶ್ರೂಷೆಯನ್ನು ಆರಂಭಿಸಿದನು. ಅನಂತರ ಅವನು ನ್ಯೂ ಯಾರ್ಕ್‌ನಲ್ಲಿರುವ ಯೆಹೋವನ ಸಾಕ್ಷಿಗಳ ಜಾಗತಿಕ ಮುಖ್ಯಕಾರ್ಯಾಲಯದಲ್ಲಿ ಸೇವೆಮಾಡಿದನು ಮತ್ತು 1984ರಲ್ಲಿ ಗಿಲ್ಯಡ್‌ ಶಾಲೆಯ 77ನೆಯ ತರಗತಿಗೆ ಹಾಜರಾಗುವ ಆಮಂತ್ರಣವನ್ನು ಪಡೆದನು. ಅಲ್ಲಿಂದ ಪದವಿಯನ್ನು ಪಡೆದ ನಂತರ ಅವನು ಪಶ್ಚಿಮ ಆಫ್ರಿಕದಲ್ಲಿರುವ ಸಿಯರ ಲಿಯೋನ್‌ನಲ್ಲಿನ ತನ್ನ ನೇಮಕಕ್ಕೆ ಹೋದನು. 1988ರಲ್ಲಿ ಅವನು ಬೆಲ್ಜಿಯಮ್‌ನವಳಾಗಿದ್ದ ಮಾರಿಯಾನ್‌ ಎಂಬ ಪಯನೀಯರಳನ್ನು ಮದುವೆಯಾದನು. ಅಂದಿನಿಂದ ಅವರಿಬ್ಬರೂ ಜೊತೆಯಾಗಿ ಮಿಷನೆರಿಗಳೋಪಾದಿ ಸೇವೆಸಲ್ಲಿಸಿದ್ದಾರೆ.

ನಮ್ಮ ಮೂರು ಮಂದಿ ಮಕ್ಕಳು, ಈಗ ತೃಪ್ತಿಯನ್ನು ತರುವಂಥ ಮತ್ತು ಭವಿಷ್ಯತ್ತಿನಲ್ಲಿ ಪ್ರಮೋದವನ ಭೂಮಿಯಲ್ಲಿ ನಿತ್ಯಜೀವದ ಸುಂದರವಾದ ನಿರೀಕ್ಷೆಯನ್ನು ನೀಡುವಂಥ ಜೀವನ ಮಾರ್ಗವನ್ನು ಬಿಟ್ಟುಬಿಟ್ಟದ್ದನ್ನು ನೋಡುವುದು ನಮಗೆ ತುಂಬ ನೋವನ್ನುಂಟುಮಾಡಿತು. ಇದನ್ನು ಯಾವುದೇ ಹೆತ್ತವರು ಅರ್ಥಮಾಡಿಕೊಳ್ಳಬಹುದು. ಕೆಲವೊಮ್ಮೆ, ತಪ್ಪೆಲ್ಲ ನನ್ನದೆಂದು ನೆನೆಸುತ್ತಿದ್ದೆ. ಆದರೆ ನನಗೆ ಈ ಸಂಗತಿಯಿಂದ ಒಂದಿಷ್ಟು ಸಾಂತ್ವನವು ಸಿಕ್ಕಿತು: ಯೆಹೋವನು ಪ್ರೀತಿ ಮತ್ತು ದಯೆಯೊಂದಿಗೆ ಶಿಸ್ತನ್ನು ನೀಡಿದರೂ ಮತ್ತು ಎಂದೂ ತಪ್ಪನ್ನೇ ಮಾಡದಿದ್ದರೂ, ಆತನ ಸ್ವಂತ ಆತ್ಮ ಸಂತಾನದವರಲ್ಲಿ ಕೆಲವರು ಅಥವಾ ದೇವದೂತರು ಆತನನ್ನು ಸೇವಿಸುವುದನ್ನು ನಿಲ್ಲಿಸಿದರು. (ಧರ್ಮೋಪದೇಶಕಾಂಡ 32:4; ಯೋಹಾನ 8:44; ಪ್ರಕಟನೆ 12:​4, 9) ಹೆತ್ತವರು ತಮ್ಮ ಮಕ್ಕಳನ್ನು ಯೆಹೋವನ ಮಾರ್ಗದಲ್ಲಿ ಬೆಳೆಸಲು ಎಷ್ಟೇ ಕಷ್ಟಪಟ್ಟು ಪ್ರಯತ್ನಿಸಲಿ, ಕೆಲವರಂತೂ ಸತ್ಯವನ್ನು ಸ್ವೀಕರಿಸಲು ನಿರಾಕರಿಸಬಹುದು ಎಂಬ ಅಭಿಪ್ರಾಯವು ಮನಸ್ಸಿನಲ್ಲಿ ಉಳಿದಿದೆ.

ಬಲವಾದ ಗಾಳಿಗಳಿಂದ ಅತ್ತಿತ್ತ ಬೀಸಲ್ಪಡುವ ಮರದಂತೆ, ನಮ್ಮ ಮುಂದೆ ಬರುವ ವಿಭಿನ್ನ ಕಷ್ಟಗಳು ಮತ್ತು ಸಮಸ್ಯೆಗಳಿಗೆ ನಾವು ಹೊಂದಿಕೊಂಡು ಹೋಗಬೇಕು. ಕ್ರಮದ ಬೈಬಲ್‌ ಅಭ್ಯಾಸವು ಮತ್ತು ಕೂಟದ ಹಾಜರಿಯು, ಹಾಗೆ ಹೊಂದಿಕೊಂಡು ಹೋಗಲಿಕ್ಕಾಗಿ ಮತ್ತು ಆತ್ಮಿಕವಾಗಿ ಬದುಕುಳಿಯಲಿಕ್ಕಾಗಿ ಬೇಕಾಗಿರುವ ಶಕ್ತಿಯನ್ನು ಕೊಟ್ಟಿವೆಯೆಂಬುದನ್ನು ನಾನು ಕಂಡುಹಿಡಿದಿದ್ದೇನೆ. ನಾನು ದಿನೇದಿನೇ ವೃದ್ಧನಾಗುತ್ತಾ ಹೋದಂತೆ ಮತ್ತು ನಾನು ಗತಕಾಲದಲ್ಲಿ ಮಾಡಿದಂತಹ ತಪ್ಪುಗಳನ್ನು ನೋಡುವಾಗ, ನಾನು ಅವುಗಳ ಸಕಾರಾತ್ಮಕ ಪಕ್ಕವನ್ನು ನೋಡಲು ಪ್ರಯತ್ನಿಸುತ್ತೇನೆ. ಏನೇ ಆದರೂ, ನಾವು ನಂಬಿಗಸ್ತರಾಗಿ ಉಳಿಯುವಲ್ಲಿ, ಅಂತಹ ಅನುಭವಗಳು ನಮ್ಮ ಆತ್ಮಿಕ ಬೆಳವಣಿಗೆಯನ್ನು ಹೆಚ್ಚಿಸುವವು ಅಷ್ಟೇ. ನಾವು ಜೀವಿತದ ನಕಾರಾತ್ಮಕ ಅಂಶಗಳಿಂದ ಪಾಠಗಳನ್ನು ಕಲಿತರೆ, ಅವುಗಳಲ್ಲಿ ನಿರ್ದಿಷ್ಟ ಸಕಾರಾತ್ಮಕ ಅಂಶಗಳು ಸಿಗುವವು.​—ಯಾಕೋಬ 1:​2, 3.

ನಾವು ಯೆಹೋವನ ಸೇವೆಯಲ್ಲಿ ಎಷ್ಟನ್ನು ಮಾಡಲು ಬಯಸುತ್ತೇವೊ ಅಷ್ಟನ್ನು ಮಾಡಲಿಕ್ಕಾಗಿ ಡಾರಥಿ ಮತ್ತು ನನ್ನಲ್ಲಿ ಆ ಆರೋಗ್ಯ ಅಥವಾ ಶಕ್ತಿ ಇಲ್ಲ. ಆದರೆ ನಮ್ಮ ಪ್ರಿಯ ಕ್ರೈಸ್ತ ಸಹೋದರ ಸಹೋದರಿಯರ ಬೆಂಬಲಕ್ಕಾಗಿ ನಾವು ಆಭಾರಿಗಳಾಗಿದ್ದೇವೆ. ನಾವು ಕೂಟಕ್ಕೆ ಹಾಜರಿರುವುದನ್ನು ಅವರು ಎಷ್ಟೊಂದು ಗಣ್ಯಮಾಡುತ್ತಾರೆಂಬುದನ್ನು ಬಹುಮಟ್ಟಿಗೆ ಪ್ರತಿಯೊಂದು ಕೂಟದಲ್ಲಿ ಸಹೋದರರು ನಮಗೆ ಹೇಳುತ್ತಾರೆ. ಮತ್ತು ಅವರಿಗೆ ಸಾಧ್ಯವಿರುವ ಎಲ್ಲ ವಿಧದಲ್ಲಿ ನಮಗೆ ಸಹಾಯಮಾಡುತ್ತಾರೆ​—ಮನೆಯಲ್ಲಿ ಮತ್ತು ಕಾರ್‌ನ ರಿಪೇರಿ ಕೆಲಸದಲ್ಲೂ.

ಕೆಲವೊಮ್ಮೆ ನಾವು ಆಕ್ಸಿಲಿಯರಿ ಪಯನೀಯರ್‌ ಸೇವೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತದೆ ಮತ್ತು ಆಸಕ್ತ ವ್ಯಕ್ತಿಗಳೊಂದಿಗೆ ಅಭ್ಯಾಸಗಳನ್ನು ನಡೆಸುತ್ತೇವೆ. ಆಫ್ರಿಕದಲ್ಲಿ ಸೇವೆಸಲ್ಲಿಸುತ್ತಿರುವ ನಮ್ಮ ಮಗನಿಂದ ಸುದ್ದಿ ಸಿಕ್ಕಿದಾಗ ನಮಗೆ ವಿಶೇಷವಾಗಿ ಆನಂದವಾಗುತ್ತದೆ. ನಾವಿಬ್ಬರು ಮಾತ್ರ ಇರುವುದಾದರೂ, ಈಗಲೂ ನಮ್ಮ ಕುಟುಂಬ ಬೈಬಲ್‌ ಅಭ್ಯಾಸವನ್ನು ನಡೆಸುತ್ತೇವೆ. ಯೆಹೋವನ ಸೇವೆಯಲ್ಲಿ ನಾವು ಇಷ್ಟೊಂದು ವರ್ಷಗಳನ್ನು ಕಳೆದದ್ದಕ್ಕಾಗಿ ಸಂತೋಷಿಸುತ್ತೇವೆ. ‘ಆತನ ನಾಮದ ವಿಷಯವಾಗಿ ತೋರಿಸಿದ ಪ್ರೀತಿಯನ್ನು ಆತನು ಮರೆಯುವುದಿಲ್ಲ’ ಎಂಬ ಆಶ್ವಾಸನೆಯನ್ನು ಆತನು ಕೊಡುತ್ತಾನೆ.​—ಇಬ್ರಿಯ 6:10.

[ಪುಟ 25ರಲ್ಲಿರುವ ಚಿತ್ರ]

ಟೆಡ್‌ ಕ್ಲೈನ್‌ರವರು 1940ರ ಏಪ್ರಿಲ್‌ 18ರಂದು, ವೆಲ್ವಾ, ಬೆನೆಟ್‌, ಮತ್ತು ನನಗೆ ದೀಕ್ಷಾಸ್ನಾನ ಕೊಡುತ್ತಿರುವುದು

[ಪುಟ 26ರಲ್ಲಿರುವ ಚಿತ್ರಗಳು]

1940ರ ಆದಿಭಾಗದಲ್ಲಿ ಮತ್ತು 1997ರಲ್ಲಿ ನನ್ನ ಹೆಂಡತಿ ಡಾರಥಿಯೊಂದಿಗೆ

[ಪುಟ 27ರಲ್ಲಿರುವ ಚಿತ್ರ]

ಬಾರ್ಬಡೊಸ್‌ನಲ್ಲಿನ ಒಂದು ಬಸ್‌ನ ಮೇಲೆ, “ಶಾಂತಿಯ ರಾಜಕುಮಾರ” ಎಂಬ ಬಹಿರಂಗ ಭಾಷಣದ ಜಾಹೀರಾತು

[ಪುಟ 27ರಲ್ಲಿರುವ ಚಿತ್ರ]

ಮಿಷನೆರಿ ಮನೆಯ ಮುಂದೆ, ನನ್ನ ತಮ್ಮ ಬೆನೆಟ್‌