“ನಿನ್ನ ಹೊಕ್ಕುಳಿಗೆ ವಾಸಿಕಾರಕ”
“ನಿನ್ನ ಹೊಕ್ಕುಳಿಗೆ ವಾಸಿಕಾರಕ”
ಮನುಷ್ಯರಿಗೆ ಬರುವ ಅನೇಕ ರೋಗಗಳು ಭಯ, ದುಃಖ, ಹೊಟ್ಟೆಕಿಚ್ಚು, ಅಸಮಾಧಾನ, ದ್ವೇಷ ಹಾಗೂ ಅಪರಾಧಿಭಾವದಂತಹ ಮಾನಸಿಕ ಒತ್ತಡಗಳಿಂದಲೇ ಉಂಟಾಗುತ್ತದೆ ಎಂದು ನಂಬಲಾಗಿದೆ. ಇದರ ನೋಟದಲ್ಲಿ ಬೈಬಲಿನ ಈ ಹೇಳಿಕೆಯು ಎಷ್ಟು ಸಾಂತ್ವನದಾಯಕವಾಗಿದೆ: “ಯೆಹೋವನ ಭಯವೇ, ನಿನ್ನ ಹೊಕ್ಕುಳಿಗೆ ವಾಸಿಕಾರಕ ಹಾಗೂ ನಿನ್ನ ಎಲುಬುಗಳಿಗೆ ಚೈತನ್ಯಕಾರಿ” (NW).—ಜ್ಞಾನೋಕ್ತಿ 3:7, 8.
ಎಲುಬುಗಳು ದೇಹಕ್ಕೆ ಆಧಾರವನ್ನು ಕೊಡುತ್ತವೆ. ಹೀಗೆ, ವ್ಯಕ್ತಿಯೊಬ್ಬನ ಆಳವಾದ ಅನಿಸಿಕೆಗಳನ್ನು ಹಾಗೂ ಭಾವನೆಗಳನ್ನು ಬಾಧಿಸುವ ವಿಷಯಕ್ಕೆ ರೂಪಕಾಲಂಕಾರವಾಗಿ ಬೈಬಲು ‘ಎಲುಬುಗಳನ್ನು’ ಎಂಬ ಪದವನ್ನು ಉಪಯೋಗಿಸುತ್ತದೆ. ಆದರೆ ಯೆಹೋವನ ಭಯವು “ನಿನ್ನ ಹೊಕ್ಕುಳಿಗೆ” ಹೇಗೆ “ವಾಸಿಕಾರಕ”ವಾಗಿರಲು ಸಾಧ್ಯವಿದೆ?
ಈ ವಚನದಲ್ಲಿ ತಿಳಿಸಲ್ಪಟ್ಟಿರುವ ‘ಹೊಕ್ಕುಳು’ ಎಂಬ ಈ ಪದದ ಬಗ್ಗೆ ಬೇರೆ ಬೇರೆ ಅಭಿಪ್ರಾಯಗಳನ್ನು ಬೈಬಲಿನ ವಿದ್ವಾಂಸರು ಕೊಡುತ್ತಾರೆ. “ಹೊಕ್ಕುಳು ದೇಹದ ಮಧ್ಯಭಾಗದಲ್ಲಿ” ಇರುವುದರಿಂದ ಅದು ಎಲ್ಲ ಮುಖ್ಯವಾದ ಅಂಗಗಳನ್ನು ಪ್ರತಿನಿಧಿಸಬಹುದು ಎಂದು ಒಬ್ಬ ವ್ಯಾಖ್ಯಾನಕಾರನು ಹೇಳುತ್ತಾನೆ. ಯೆಹೆಜ್ಕೇಲ 16:4ರಲ್ಲಿ ಉಪಯೋಗಿಸಿರುವಂತೆ, ‘ಹೊಕ್ಕುಳು,’ ಹೊಕ್ಕುಳು ಬಳ್ಳಿಯನ್ನು ಅರ್ಥೈಸಬಹುದು ಎಂದು ಇನ್ನೊಬ್ಬ ವಿದ್ವಾಂಸರ ಅನಿಸಿಕೆ. ಅದರ ಅರ್ಥವು ಇದಾಗಿರುವಲ್ಲಿ, ನಿಸ್ಸಹಾಯಕ ಭ್ರೂಣವು ಪೋಷಣೆಗಾಗಿ ತನ್ನ ತಾಯಿಯನ್ನು ಸಂಪೂರ್ಣವಾಗಿ ಅವಲಂಬಿಸಿರುವಂತೆಯೇ, ದೇವರ ಮೇಲೆ ಆತುಕೊಳ್ಳುವ ಅಗತ್ಯವನ್ನು ಜ್ಞಾನೋಕ್ತಿ 3:8 ಹೇಳುತ್ತಿರಬಹುದು. ಇಲ್ಲಿ ತಿಳಿಸಲ್ಪಟ್ಟಿರುವ ‘ಹೊಕ್ಕುಳು’ ದೇಹದ ಸ್ನಾಯುಗಳು ಹಾಗೂ ಸ್ನಾಯುರಜ್ಜುಗಳನ್ನು ಸೂಚಿಸುತ್ತಿರಬಹುದು ಎಂಬುದು ಇನ್ನೊಂದು ಅಭಿಪ್ರಾಯ. ಈ ವಚನದ ಪೂರ್ವಾಪರದ ದೃಷ್ಟಿಯಲ್ಲಿ, ಇದು ಕೇವಲ ದೇಹದ ಗಟ್ಟಿ ಅಂಗಾಂಶಗಳಾದ “ಎಲುಬು”ಗಳೊಂದಿಗೆ ಮೃದು ಅಂಗಾಂಶಗಳ ವೈದೃಶ್ಯವಾಗಿರಬಹುದು.
ಸರಿಯಾದ ಅರ್ಥವು ಏನೇ ಆಗಿರಲಿ, ಒಂದಂತೂ ಸತ್ಯ: ಯೆಹೋವನಿಗೆ ಪೂಜ್ಯಭಾವನೆಯ ಭಯವನ್ನು ತೋರಿಸುವುದು ವಿವೇಕದ ಮಾರ್ಗವಾಗಿದೆ. ದೇವರ ವಾಕ್ಯಕ್ಕೆ ಅನುಸಾರವಾಗಿ ನಡೆಯುವುದರಿಂದ ಈಗ ನಾವು ಶಾರೀರಿಕ ಸ್ವಾಸ್ಥ್ಯವನ್ನು ಹೊಂದಬಹುದು. ಮಾತ್ರವಲ್ಲ, ಇದು ನಮಗೆ ಯೆಹೋವನ ಅನುಗ್ರಹವನ್ನು ತರುವುದು. ಇದು ಬರಲಿರುವ ಆತನ ಹೊಸ ಲೋಕದಲ್ಲಿ ಶಾರೀರಿಕವಾಗಿ ಹಾಗೂ ಮಾನಸಿಕವಾಗಿ ಆರೋಗ್ಯವಾಗಿರುವಂತಹ ನಿತ್ಯಜೀವಕ್ಕೆ ನಮ್ಮನ್ನು ನಡೆಸುವುದು.—ಯೆಶಾಯ 33:24; ಪ್ರಕಟನೆ 21:4; 22:2.
[ಪುಟ 32ರಲ್ಲಿರುವ ಚಿತ್ರ ಕೃಪೆ]
Dr. G. Moscoso/SPL/Photo Researchers