ನಿಮ್ಮ ಸಮರ್ಪಣೆಗನುಸಾರ ನೀವು ಜೀವಿಸುತ್ತಿದ್ದೀರೋ?
ನಿಮ್ಮ ಸಮರ್ಪಣೆಗನುಸಾರ ನೀವು ಜೀವಿಸುತ್ತಿದ್ದೀರೋ?
“ನೀವು ಯಾವ ಕೆಲಸವನ್ನು ಮಾಡಿದರೂ ಅದನ್ನು ಮನುಷ್ಯರಿಗೋಸ್ಕರವೆಂದು ಮಾಡದೆ ಕರ್ತನಿಗೋಸ್ಕರವೇ [“ಯೆಹೋವನಿಗೋಸ್ಕರವೇ,” Nw] ಎಂದು ಮನಃಪೂರ್ವಕವಾಗಿ ಮಾಡಿರಿ.”—ಕೊಲೊಸ್ಸೆ 3:23.
1. ಐಹಿಕ ಅರ್ಥದಲ್ಲಿ, “ಸಮರ್ಪಣೆ” ಎಂಬ ಶಬ್ದವು ಏನನ್ನು ಸೂಚಿಸುತ್ತದೆ?
ಕ್ರೀಡಾಪಟುಗಳು ಹೇಗೆ ಅತ್ಯುತ್ತಮ ಪ್ರದರ್ಶನವನ್ನು ನೀಡಬಲ್ಲರು? ತಮ್ಮ ಶರೀರ ಹಾಗೂ ಮನಸ್ಸನ್ನು ಸಂಪೂರ್ಣವಾಗಿ ತರಬೇತಿಗೊಳಿಸುವ ಕಟ್ಟುಪಾಡಿಗೆ ಒಳಗಾಗುವ ಮೂಲಕ ಟೆನಿಸ್, ಕಾಲ್ಚೆಂಡಾಟ, ಬಾಸ್ಕೆಟ್ಬಾಲ್, ಬೇಸ್ಬಾಲ್, ಓಟ, ಗಾಲ್ಫ್ ಅಥವಾ ಇತರ ಕ್ರೀಡೆಗಳಲ್ಲಿ, ಅತ್ಯುತ್ತಮ ಆಟಗಾರರು ಕೀರ್ತಿಯ ಶಿಖರವನ್ನೇರುತ್ತಾರೆ. ತಾವು ಆಯ್ಕೆಮಾಡಿರುವ ಕ್ರೀಡೆಯಲ್ಲಿ ಸಾಧ್ಯವಾದಷ್ಟು ಹೆಚ್ಚು ಮಟ್ಟಿಗೆ ನಿಪುಣರಾಗಲಿಕ್ಕಾಗಿ ಅವರು ಈ ಕಟ್ಟುಪಾಡಿಗೆ ಒಳಗಾಗುತ್ತಾರೆ. ಇದಕ್ಕಾಗಿ ಶಾರೀರಿಕ ಹಾಗೂ ಮಾನಸಿಕ ಸಿದ್ಧತೆಯು ಪ್ರಮುಖ ಆದ್ಯತೆಯಾಗಿದೆ. ಬೈಬಲಿಗನುಸಾರ ಸಮರ್ಪಣೆಯ ಕುರಿತು ಆಲೋಚಿಸುವಾಗ, ಈ ರೀತಿಯ ಕಟ್ಟುಪಾಡು ನಮ್ಮ ಮನಸ್ಸಿನಲ್ಲಿರಬೇಕೋ?
2. ಬೈಬಲಿಗನುಸಾರ “ಸಮರ್ಪಣೆ” ಎಂಬುದರ ಅರ್ಥವೇನಾಗಿದೆ? ದೃಷ್ಟಾಂತಿಸಿರಿ.
2 ಬೈಬಲಿಗನುಸಾರ “ಸಮರ್ಪಣೆ” ಎಂಬ ಶಬ್ದದ ಅರ್ಥವೇನು? “ಸಮರ್ಪಣೆ” ಎಂಬುದು “ಪ್ರತ್ಯೇಕವಾಗಿಡು; ಪ್ರತ್ಯೇಕಿಸಲ್ಪಡು; ಬೇರ್ಪಡಿಸು” ಎಂಬ ಅರ್ಥದ ಹೀಬ್ರು ಕ್ರಿಯಾಪದದಿಂದ ಬಂದಿದೆ. * ಪುರಾತನ ಇಸ್ರಾಯೇಲಿನಲ್ಲಿ, “ಸಮರ್ಪಣೆಯ ಪವಿತ್ರ ಸಂಕೇತ”ವಾಗಿದ್ದ (NW) ಮುಂಡಾಸನ್ನು ಮಹಾಯಾಜಕನಾಗಿದ್ದ ಆರೋನನು ಧರಿಸಿಕೊಂಡಿದ್ದನು. ಇದು ಚೊಕ್ಕ ಬಂಗಾರದಿಂದ ತಯಾರಿಸಲ್ಪಟ್ಟಿರುವಂತಹ ಒಂದು ಹೊಳೆಯುವ ತಗಡಾಗಿದ್ದು, “ಪಾವಿತ್ರ್ಯವು ಯೆಹೋವನಿಗೆ ಮೀಸಲು” (NW) ಎಂಬ ಹೀಬ್ರು ನುಡಿಗಳು ಅದರ ಮೇಲೆ ಕೆತ್ತಲ್ಪಟ್ಟಿದ್ದವು. ಆಲಯವನ್ನು ಅಪವಿತ್ರಗೊಳಿಸುವ ಯಾವುದೇ ಕೆಲಸವನ್ನು ಮಾಡದಿರುವಂತೆ ಇದು ಮಹಾಯಾಜಕನಿಗೆ ಒಂದು ಜ್ಞಾಪನವಾಗಿ ಕಾರ್ಯನಡಿಸಲಿತ್ತು. ಏಕೆಂದರೆ ಅವನು ‘ತನ್ನ ದೇವರ ಅಭಿಷೇಕತೈಲವನ್ನು ತಲೆಯ ಮೇಲೆ ಹೊಯಿಸಿಕೊಂಡು ಪ್ರತಿಷ್ಠಿತನಾಗಿದ್ದನು.’—ವಿಮೋಚನಕಾಂಡ 29:6; 39:30; ಯಾಜಕಕಾಂಡ 21:12.
3. ಯಾವ ರೀತಿಯಲ್ಲಿ ಸಮರ್ಪಣೆಯು ನಮ್ಮ ನಡತೆಯ ಮೇಲೆ ಪರಿಣಾಮ ಬೀರಬೇಕು?
3 ಸಮರ್ಪಣೆಯು ಒಂದು ಗಂಭೀರವಾದ ವಿಷಯವಾಗಿದೆ ಎಂಬುದನ್ನು ನಾವು ಈ ಸನ್ನಿವೇಶದಿಂದ ತಿಳಿದುಕೊಳ್ಳಸಾಧ್ಯವಿದೆ. ದೇವರ ಸೇವಕರೋಪಾದಿ ಸ್ವಯಂಪ್ರೇರಿತರಾಗಿ ಗುರುತಿಸಿಕೊಳ್ಳುವುದನ್ನು ಇದು ಅರ್ಥೈಸುತ್ತದೆ, ಮತ್ತು ಶುದ್ಧ ನಡತೆಯನ್ನು ಅಗತ್ಯಪಡಿಸುತ್ತದೆ. ಆದುದರಿಂದ, “ನಾನು ಪರಿಶುದ್ಧನಾಗಿರುವದರಿಂದ ನೀವೂ ಪರಿಶುದ್ಧರಾಗಿರಬೇಕು” ಎಂದು ಯೆಹೋವನು ಹೇಳುತ್ತಾನೆ ಎಂದು ಅಪೊಸ್ತಲ ಪೇತ್ರನು ಏಕೆ ಉದ್ಧರಿಸಿ ಹೇಳಿದನು ಎಂಬುದನ್ನು ನಾವು ಗಣ್ಯಮಾಡಸಾಧ್ಯವಿದೆ. (1 ಪೇತ್ರ 1:15, 16) ಸಮರ್ಪಿತ ಕ್ರೈಸ್ತರಾಗಿರುವ ನಮ್ಮ ಮೇಲೆ, ನಮ್ಮ ಸಮರ್ಪಣೆಗನುಸಾರ ಜೀವಿಸುವ ಹಾಗೂ ಕಡೇ ತನಕ ನಂಬಿಗಸ್ತರಾಗಿ ಉಳಿಯುವಂತಹ ಗಂಭೀರವಾದ ಜವಾಬ್ದಾರಿಯಿದೆ. ಆದರೆ ಕ್ರೈಸ್ತ ಸಮರ್ಪಣೆಯಲ್ಲಿ ಏನು ಒಳಗೂಡಿದೆ?—ಯಾಜಕಕಾಂಡ 19:2; ಮತ್ತಾಯ 24:13.
4. ಸಮರ್ಪಣೆಯ ಹಂತವನ್ನು ನಾವು ಹೇಗೆ ಮುಟ್ಟುತ್ತೇವೆ, ಮತ್ತು ಇದನ್ನು ಯಾವುದಕ್ಕೆ ಹೋಲಿಸಸಾಧ್ಯವಿದೆ?
4 ಯೆಹೋವ ದೇವರು, ಆತನ ಉದ್ದೇಶಗಳು ಮತ್ತು ಯೇಸು ಕ್ರಿಸ್ತನು ಹಾಗೂ ಈ ಉದ್ದೇಶಗಳಲ್ಲಿ ಅವನು ವಹಿಸುವ ಪಾತ್ರದ ಕುರಿತಾದ ನಿಷ್ಕೃಷ್ಟ ಜ್ಞಾನವನ್ನು ನಾವು ಪಡೆದುಕೊಂಡ ಬಳಿಕ, ನಮ್ಮ ಪೂರ್ಣ ಹೃದಯ, ಬುದ್ಧಿ, ಪ್ರಾಣ ಹಾಗೂ ಶಕ್ತಿಯಿಂದ ದೇವರ ಸೇವೆಯನ್ನು ಮಾಡುವ ವೈಯಕ್ತಿಕ ನಿರ್ಧಾರವನ್ನು ನಾವು ಮಾಡಿದೆವು. (ಮಾರ್ಕ 8:34; 12:30; ಯೋಹಾನ 17:3) ಇದನ್ನು ಒಂದು ವೈಯಕ್ತಿಕ ಪ್ರತಿಜ್ಞೆಯಾಗಿ, ದೇವರಿಗೆ ಮಾಡಿಕೊಂಡ ಸಂಪೂರ್ಣ ಸಮರ್ಪಣೆಯಾಗಿ ಪರಿಗಣಿಸಬಹುದು. ಭಾವನಾತ್ಮಕ ಚಂಚಲತೆಯ ಕಾರಣದಿಂದ ನಾವು ಸಮರ್ಪಣೆಯನ್ನು ಮಾಡಿಕೊಳ್ಳಲಿಲ್ಲ. ಬದಲಾಗಿ, ನಮ್ಮ ವಿವೇಚನಾ ಸಾಮರ್ಥ್ಯವನ್ನು ಉಪಯೋಗಿಸಿ, ಜಾಗರೂಕತೆಯಿಂದ ಹಾಗೂ ಪ್ರಾರ್ಥನಾಪೂರ್ವಕವಾಗಿ ಈ ಹೆಜ್ಜೆಯನ್ನು ತೆಗೆದುಕೊಂಡೆವು. ಆದುದರಿಂದ, ಇದು ಒಂದು ತಾತ್ಕಾಲಿಕ ನಿರ್ಧಾರವಲ್ಲ. ಒಬ್ಬ ವ್ಯಕ್ತಿಯು ಒಂದು ಹೊಲವನ್ನು ಉಳಲು ಆರಂಭಿಸುತ್ತಾನೆ ಎಂದಿಟ್ಟುಕೊಳ್ಳಿ. ಇದರಲ್ಲಿ ಬಹಳ ಶ್ರಮದ ಕೆಲಸವು ಒಳಗೂಡಿರುವುದರಿಂದ ಅಥವಾ ಕೊಯ್ಲಿನ ಸಮಯ ತುಂಬ ದೂರವಿದೆ ಎಂಬ ಅನಿಸಿಕೆಯಿಂದ, ಅಥವಾ ಕೊಯ್ಲು ಯಾವಾಗ ಬರುತ್ತದೆ ಎಂಬುದು ನಿಶ್ಚಿತವಾಗಿ ಗೊತ್ತಿಲ್ಲ ಎಂಬ ಕಾರಣದಿಂದ ತನ್ನ ಕೆಲಸವನ್ನು ಅರ್ಧಕ್ಕೇ ನಿಲ್ಲಿಸುವ ವ್ಯಕ್ತಿಯಂತೆ ನಾವಿರಸಾಧ್ಯವಿಲ್ಲ. ಕಷ್ಟದಲ್ಲಿಯೂ ಸುಖದಲ್ಲಿಯೂ ಏಕಪ್ರಕಾರವಾಗಿ ದೇವಪ್ರಭುತ್ವ ಜವಾಬ್ದಾರಿಯ ‘ನೇಗಿಲಿನ ಮೇಲೆ ತಮ್ಮ ಕೈಯನ್ನು ಹಾಕಿರುವಂತಹ’ ಕೆಲವರ ಉದಾಹರಣೆಗಳನ್ನು ಪರಿಗಣಿಸಿರಿ.—ಲೂಕ 9:62; ರೋಮಾಪುರ 12:1, 2.
ಅವರು ತಮ್ಮ ಸಮರ್ಪಣೆಯನ್ನು ತೊರೆಯಲಿಲ್ಲ
5. ಯಾವ ರೀತಿಯಲ್ಲಿ ಯೆರೆಮೀಯನು ದೇವರ ಒಬ್ಬ ಸಮರ್ಪಿತ ಸೇವಕನ ಅತ್ಯುತ್ತಮ ಉದಾಹರಣೆಯಾಗಿದ್ದನು?
5 ಯೆರೂಸಲೇಮಿನಲ್ಲಿ ಯೆರೆಮೀಯನ ಪ್ರವಾದನಾತ್ಮಕ ಶುಶ್ರೂಷೆಯು 40 ವರ್ಷಗಳಿಗಿಂತಲೂ (ಸಾ.ಶ.ಪೂ. 647-607) ಹೆಚ್ಚಿನ ಕಾಲಾವಧಿಯ ವರೆಗೆ ನಡೆಯಿತು. ಮತ್ತು ಇದು ಸುಲಭವಾದ ನೇಮಕವೇನಾಗಿರಲಿಲ್ಲ. ತನ್ನ ಇತಿಮಿತಿಗಳ ಅರಿವು ಅವನಿಗಿತ್ತು. (ಯೆರೆಮೀಯ 1:2-6) ಪ್ರತಿ ದಿನ ಯೆಹೂದದ ನಿರ್ದಾಕ್ಷಿಣ್ಯ ಪ್ರಕೃತಿಯ ಜನರೊಂದಿಗೆ ವ್ಯವಹರಿಸಲು ಧೈರ್ಯ ಹಾಗೂ ತಾಳ್ಮೆಯ ಅಗತ್ಯ ಅವನಿಗಿತ್ತು. (ಯೆರೆಮೀಯ 18:18; 38:4-6) ಆದರೂ, ಯೆರೆಮೀಯನು ಯೆಹೋವ ದೇವರಲ್ಲಿ ಭರವಸೆಯಿಟ್ಟನು. ಆದುದರಿಂದ, ಅವನು ನಿಜವಾಗಿಯೂ ದೇವರ ಸಮರ್ಪಿತ ಸೇವಕನಾಗಿ ಪರಿಣಮಿಸುವಂತೆ ಯೆಹೋವನು ಅವನನ್ನು ಬಲಪಡಿಸಿದನು.—ಯೆರೆಮೀಯ 1:18, 19.
6. ಅಪೊಸ್ತಲ ಯೋಹಾನನು ನಮಗೋಸ್ಕರ ಯಾವ ಮಾದರಿಯನ್ನಿಟ್ಟಿದ್ದಾನೆ?
6 ನಂಬಿಗಸ್ತನಾಗಿದ್ದ ಅಪೊಸ್ತಲ ಯೋಹಾನನ ಕುರಿತಾಗಿ ಏನು? ಅವನು ‘ದೇವರ ವಾಕ್ಯಕ್ಕೋಸ್ಕರ ಹಾಗೂ ಯೇಸುವಿನ ವಿಷಯವಾದ ಸಾಕ್ಷಿಗೋಸ್ಕರ’ ತನ್ನ ವೃದ್ಧಾಪ್ಯದಲ್ಲಿ ಪತ್ಮೋಸ್ ದ್ವೀಪದಲ್ಲಿ ದೇಶಭ್ರಷ್ಟನಾಗಿದ್ದನು. (ಪ್ರಕಟನೆ 1:9) ಅವನು ತಾಳಿಕೊಂಡನು ಮತ್ತು ಸುಮಾರು 60 ವರ್ಷಗಳ ವರೆಗೆ ಒಬ್ಬ ಕ್ರೈಸ್ತನೋಪಾದಿ ತನ್ನ ಸಮರ್ಪಣೆಗನುಸಾರ ಜೀವಿಸಿದನು. ರೋಮನ್ ಸೈನ್ಯಗಳಿಂದ ಯೆರೂಸಲೇಮ್ ನಾಶಕ್ಕೊಳಗಾದ ಸಮಯಕ್ಕಿಂತಲೂ ಬಹಳ ನಂತರದ ಸಮಯದ ವರೆಗೆ ಬದುಕಿದ್ದನು. ಒಂದು ಸುವಾರ್ತಾ ಪುಸ್ತಕವನ್ನು, ಮೂರು ಪ್ರೇರಿತ ಪತ್ರಗಳನ್ನು ಮತ್ತು ಯಾವುದರಲ್ಲಿ ಅವನು ಅರ್ಮಗೆದೋನ್ ಯುದ್ಧವನ್ನು ಮುಂಗಂಡನೋ ಆ ಪ್ರಕಟನೆ ಪುಸ್ತಕವನ್ನು ಬರೆಯುವಂತಹ ಸುಯೋಗ ಅವನಿಗೆ ಸಿಕ್ಕಿತು. ತನ್ನ ಜೀವಮಾನಕಾಲದಲ್ಲಿ ಅರ್ಮಗೆದೋನ್ ಬರುವುದಿಲ್ಲ ಎಂಬುದು ಅವನಿಗೆ ತಿಳಿದುಬಂದಾಗ ಅವನು ತನ್ನ ಸಮರ್ಪಣೆಗನುಸಾರ ಜೀವಿಸುವುದನ್ನು ನಿಲ್ಲಿಸಿದನೊ? ಅವನು ಉದಾಸೀನಭಾವವನ್ನು ತೋರಿಸಲಾರಂಭಿಸಿದನೋ? ಖಂಡಿತವಾಗಿಯೂ ಇಲ್ಲ. ತನ್ನ ಮರಣದ ತನಕ ಯೋಹಾನನು ನಂಬಿಗಸ್ತನಾಗಿ ಉಳಿದನು. ಏಕೆಂದರೆ ‘ನೇಮಿತ ಸಮಯವು ಸಮೀಪವಾಗಿತ್ತಾದರೂ,’ ತನಗಾದ ದರ್ಶನಗಳು ಸಮಯಾನಂತರ ನೆರವೇರುವವು ಎಂಬುದು ಅವನಿಗೆ ಗೊತ್ತಿತ್ತು.—ಪ್ರಕಟನೆ 1:3; ದಾನಿಯೇಲ 12:4.
ಸಮರ್ಪಣೆಯ ಆಧುನಿಕ ಉದಾಹರಣೆಗಳು
7. ಒಬ್ಬ ಸಹೋದರನು ಕ್ರೈಸ್ತ ಸಮರ್ಪಣೆಯ ವಿಷಯದಲ್ಲಿ ಹೇಗೆ ಅತ್ಯುತ್ತಮ ಮಾದರಿಯನ್ನಿಟ್ಟನು?
7 ಆಧುನಿಕ ಸಮಯದಲ್ಲಿ, ಸಾವಿರಾರು ಮಂದಿ ನಂಬಿಗಸ್ತ ಕ್ರೈಸ್ತರು ತಮ್ಮ ಸಮರ್ಪಣೆಗೆ ಭದ್ರವಾಗಿ ಅಂಟಿಕೊಂಡಿದ್ದಾರೆ; ಅರ್ಮಗೆದೋನ್ ಯುದ್ಧವನ್ನು ಕಣ್ಣಾರೆ ನೋಡಲು ಅವರಲ್ಲಿ ಕೆಲವರು ಈಗ ಬದುಕಿ ಉಳಿದಿಲ್ಲ. ಇಂತಹವರಲ್ಲಿ ಒಬ್ಬರು, ಇಂಗ್ಲೆಂಡ್ನ ಅರ್ನೆಸ್ಟ್ ಇ. ಬೇವರ್ ಆಗಿದ್ದಾರೆ. 1939ರಲ್ಲಿ, IIನೆಯ ಲೋಕ ಯುದ್ಧದ ಆರಂಭದಲ್ಲಿ ಅವರು ಯೆಹೋವನ ಸಾಕ್ಷಿಯಾದರು. ಮತ್ತು ಪೂರ್ಣ ಸಮಯದ ಶುಶ್ರೂಷೆಯನ್ನು ಆರಂಭಿಸಲಿಕ್ಕಾಗಿ ಅವರು ತುಂಬ ಏಳಿಗೆಹೊಂದುತ್ತಿದ್ದಂತಹ ಪ್ರೆಸ್ ಫೋಟೋಗ್ರಫಿ ವ್ಯಾಪಾರವನ್ನು ಬಿಟ್ಟುಬಿಟ್ಟರು. ಅವರು ತಮ್ಮ ಕ್ರೈಸ್ತ ತಾಟಸ್ಥ್ಯವನ್ನು ಕಾಪಾಡಿಕೊಂಡಿದ್ದರಿಂದ, ಎರಡು ವರ್ಷ ಸೆರೆವಾಸವನ್ನು ಅನುಭವಿಸಬೇಕಾಯಿತು. ಅವರ ಪತ್ನಿ ಹಾಗೂ ಮಕ್ಕಳು ನಿಷ್ಠೆಯಿಂದ ಅವರನ್ನು ಬೆಂಬಲಿಸಿದರು, ಮತ್ತು 1950ರಲ್ಲಿ ಅವರ ಮೂವರು ಮಕ್ಕಳು ನ್ಯೂ ಯಾರ್ಕಿನ ವಾಚ್ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಡ್ನ ಮಿಷನೆರಿ ತರಬೇತಿ ಶಾಲೆಗೆ ಹಾಜರಾದರು. ತಮ್ಮ ಸಾರುವ ಚಟುವಟಿಕೆಯಲ್ಲಿ ಸಹೋದರ ಬೇವರ್ ಎಷ್ಟು ಹುರುಪನ್ನು ತೋರಿಸುತ್ತಿದ್ದರೆಂದರೆ, ಅವರ ಸ್ನೇಹಿತರು ಅವರನ್ನು ಅರ್ಮಗೆದೋನ್ ಅರ್ನಿ ಎಂದು ಕರೆಯುತ್ತಿದ್ದರು. ಅವರು ನಿಷ್ಠೆಯಿಂದ ತಮ್ಮ ಸಮರ್ಪಣೆಗನುಸಾರ ಜೀವಿಸಿದರು, ಮತ್ತು 1986ರಲ್ಲಿ ಮರಣದ ತನಕ ಅವರು ದೇವರ ಅರ್ಮಗೆದೋನ್ ಯುದ್ಧದ ಸಾಮೀಪ್ಯದ ಕುರಿತು ಇತರರಿಗೆ ಸಾರಿದರು. ಅವರು ತಮ್ಮ ಸಮರ್ಪಣೆಯನ್ನು ದೇವರೊಂದಿಗಿನ ಸೀಮಿತ ಸಮಯದ ಒಪ್ಪಂದವಾಗಿ ಪರಿಗಣಿಸಲಿಲ್ಲ! *—1 ಕೊರಿಂಥ 15:58.
8, 9. (ಎ) ಫ್ರ್ಯಾಂಕೋ ಆಡಳಿತದ ಸಮಯದಲ್ಲಿ ಸ್ಪೆಯ್ನ್ನ ಅನೇಕ ಯುವಕರು ಯಾವ ಮಾದರಿಯನ್ನಿಟ್ಟರು? (ಬಿ) ಮತ್ತು ಯಾವ ಪ್ರಶ್ನೆಗಳು ಸೂಕ್ತವಾದವುಗಳಾಗಿವೆ?
8 ಎಂದೂ ಕಡಿಮೆಯಾಗದಿರುವಂತಹ ಹುರುಪಿನ ಇನ್ನೊಂದು ಉದಾಹರಣೆಯು ಸ್ಪೆಯ್ನ್ ದೇಶದಿಂದ ಬಂದದ್ದಾಗಿದೆ. ಫ್ಯಾಂಕೋ ಆಡಳಿತದ ಸಮಯದಲ್ಲಿ, ನೂರಾರು ಮಂದಿ ಸಮರ್ಪಿತ ಯುವ ಸಾಕ್ಷಿಗಳು ಕ್ರೈಸ್ತ ತಾಟಸ್ಥ್ಯದ ನಿಲುವನ್ನು ತೆಗೆದುಕೊಂಡರು. ಅವರಲ್ಲಿ ಅನೇಕರು ಮಿಲಿಟರಿ ಸೆರೆಮನೆಗಳಲ್ಲಿ ಹತ್ತಕ್ಕಿಂತಲೂ ಹೆಚ್ಚು ವರ್ಷಗಳನ್ನು ಕಳೆದರು. ಕೇಸಸ್ ಮಾರ್ಟೀನ್ ಎಂಬ ಒಬ್ಬ ಸಾಕ್ಷಿಯು, ಸುಮಾರು 22 ವರ್ಷಗಳ ವರೆಗೆ ಸೆರೆಮನೆವಾಸವನ್ನು ಅನುಭವಿಸುವ ಶಿಕ್ಷೆಗೂ ಒಳಗಾದನು. ಉತ್ತರ ಆಫ್ರಿಕದ ಮಿಲಿಟರಿ ಸೆರೆಮನೆಯಲ್ಲಿ ಬಂಧನದಲ್ಲಿದ್ದಾಗ, ಅವನನ್ನು ಕ್ರೂರ ರೀತಿಯಲ್ಲಿ ಹೊಡೆಯಲಾಯಿತು. ಇದೆಲ್ಲವನ್ನೂ ತಾಳಿಕೊಳ್ಳುವುದು ಅಷ್ಟೇನೂ ಸುಲಭವಾಗಿರಲಿಲ್ಲವಾದರೂ, ಅವನು ಒಪ್ಪಂದವನ್ನು ಮಾಡಿಕೊಳ್ಳಲು ನಿರಾಕರಿಸಿದನು.
9 ಅನೇಕವೇಳೆ ಈ ಯುವಕರಿಗೆ ತಾವು ಯಾವಾಗ ಬಿಡುಗಡೆಮಾಡಲ್ಪಡುತ್ತೇವೆ ಎಂಬ ವಿಷಯದಲ್ಲಿ ಯಾವ ಕಲ್ಪನೆಯೂ ಇರಲಿಲ್ಲ. ಏಕೆಂದರೆ ಅವರು ಕ್ರಮಾನುಗತವಾಗಿ ಅನೇಕ ರೀತಿಯ ಶಿಕ್ಷೆಗಳಿಗೆ ಒಳಪಡಿಸಲ್ಪಟ್ಟರು. ಆದರೂ, ತಮ್ಮ ಸಮಗ್ರತೆಯನ್ನು ಅವರು ಕಾಪಾಡಿಕೊಂಡರು ಮತ್ತು ಬಂಧನದಲ್ಲಿದ್ದಾಗಲೂ ಶುಶ್ರೂಷೆಗಾಗಿರುವ ತಮ್ಮ ಹುರುಪನ್ನು ಕಾಪಾಡಿಕೊಂಡರು. 1973ರಲ್ಲಿ ಪರಿಸ್ಥಿತಿಯು ಸ್ವಲ್ಪಮಟ್ಟಿಗೆ ಉತ್ತಮಗೊಳ್ಳಲು ಆರಂಭಿಸಿದಾಗ, ತಮ್ಮ 30ಗಳ ಪ್ರಾಯದಲ್ಲಿದ್ದ ಈ ಸಾಕ್ಷಿಗಳಲ್ಲಿ ಅನೇಕರು ಸೆರೆಮನೆಯಿಂದ ಬಿಡುಗಡೆಮಾಡಲ್ಪಟ್ಟ ಕೂಡಲೆ ನೇರವಾಗಿ ಪೂರ್ಣ ಸಮಯದ ಶುಶ್ರೂಷೆಯನ್ನು ಪ್ರಾರಂಭಿಸಿದರು. ಅವರಲ್ಲಿ ಕೆಲವರು ವಿಶೇಷ ಪಯನೀಯರರು ಹಾಗೂ ಸಂಚರಣ ಮೇಲ್ವಿಚಾರಕರಾದರು. ಸೆರೆಮನೆಯಲ್ಲಿಯೂ ಅವರು ತಮ್ಮ ಸಮರ್ಪಣೆಗನುಸಾರ ಜೀವಿಸಿದರು, ಮತ್ತು ತಮ್ಮ ಬಿಡುಗಡೆಯ ನಂತರವೂ ಅವರಲ್ಲಿ ಕೆಲವರು ಇದೇ ರೀತಿ ಮುಂದುವರಿದರು. * ಇಂದು ನಮ್ಮ ಕುರಿತಾಗಿ ಏನು? ಈ ನಿಷ್ಠಾವಂತ ಜನರಂತೆ ನಾವು ಸಹ ನಮ್ಮ ಸಮರ್ಪಣೆಗೆ ನಂಬಿಗಸ್ತರಾಗಿದ್ದೇವೋ?—ಇಬ್ರಿಯ 10:32-34; 13:3.
ನಮ್ಮ ಸಮರ್ಪಣೆಯ ಕುರಿತಾದ ಯೋಗ್ಯ ನೋಟ
10. (ಎ) ನಮ್ಮ ಸಮರ್ಪಣೆಯನ್ನು ನಾವು ಹೇಗೆ ಪರಿಗಣಿಸಬೇಕು? (ಬಿ) ನಾವು ಯೆಹೋವನಿಗೆ ಮಾಡುವ ಸೇವೆಯನ್ನು ಆತನು ಹೇಗೆ ಪರಿಗಣಿಸುತ್ತಾನೆ?
10 ದೇವರ ಚಿತ್ತವನ್ನು ಮಾಡಲು ನಾವು ಆತನಿಗೆ ಮಾಡಿಕೊಂಡಿರುವ ಸಮರ್ಪಣೆಯನ್ನು ನಾವು ಹೇಗೆ ಪರಿಗಣಿಸುತ್ತೇವೆ? ಅದಕ್ಕೆ ನಮ್ಮ ಜೀವಿತದಲ್ಲಿ ಪ್ರಥಮ ಸ್ಥಾನವನ್ನು ಕೊಡುತ್ತೇವೋ? ನಮ್ಮ ಪರಿಸ್ಥಿತಿಗಳು ಹೇಗೇ ಇರಲಿ, ನಾವು ಎಳೆಯರಾಗಿರಲಿ ವೃದ್ಧರಾಗಿರಲಿ, ವಿವಾಹಿತರಾಗಿರಲಿ ಅವಿವಾಹಿತರಾಗಿರಲಿ, ಆರೋಗ್ಯವಂತರಾಗಿರಲಿ ಅನಾರೋಗಿಗಳಾಗಿರಲಿ, ನಮ್ಮ ಸನ್ನಿವೇಶಗಳೇನೇ ಇರಲಿ, ನಮ್ಮ ಸಮರ್ಪಣೆಗೆ ತಕ್ಕಂತೆ ಜೀವಿಸಲು ನಾವು ಶ್ರಮಿಸಬೇಕಾಗಿದೆ. ಒಬ್ಬ ವ್ಯಕ್ತಿಯ ಪರಿಸ್ಥಿತಿಯು ಅವನನ್ನು ಒಬ್ಬ ಪಯನೀಯರನಾಗಿ, ವಾಚ್ ಟವರ್ ಸೊಸೈಟಿಯ ಬ್ರಾಂಚ್ ಆಫೀಸಿನಲ್ಲಿ ಒಬ್ಬ ಸ್ವಯಂಸೇವಕನಾಗಿ, ಒಬ್ಬ ಮಿಷನೆರಿಯಾಗಿ, ಅಥವಾ ಸಂಚರಣ ಮೇಲ್ವಿಚಾರಕನಾಗಿ ಪೂರ್ಣ ಸಮಯದ ಶುಶ್ರೂಷೆಯನ್ನು ಮಾಡುವಂತೆ ಅನುಮತಿಸಬಹುದು. ಇನ್ನೊಂದು ಕಡೆಯಲ್ಲಿ, ಕೆಲವು ಹೆತ್ತವರು ತಮ್ಮ ಕುಟುಂಬದ ಭೌತಿಕ ಹಾಗೂ ಆತ್ಮಿಕ ಆವಶ್ಯಕತೆಗಳನ್ನು ಪೂರೈಸುವ ಕೆಲಸದಲ್ಲಿ ಮಗ್ನರಾಗಿರಬಹುದು. ಪೂರ್ಣ ಸಮಯದ ಸೇವಕನು ವ್ಯಯಿಸುವ ಅನೇಕ ತಾಸುಗಳಿಗೆ ಹೋಲಿಸುವಾಗ, ಪ್ರತಿ ತಿಂಗಳು ಕ್ಷೇತ್ರ ಸೇವೆಯಲ್ಲಿ ಇವರು ವ್ಯಯಿಸುವಂತಹ ಕೆಲವೇ ತಾಸುಗಳು ಯೆಹೋವನ ದೃಷ್ಟಿಯಲ್ಲಿ ಕಡಿಮೆ ಬೆಲೆಯದ್ದಾಗಿವೆಯೋ? ಖಂಡಿತವಾಗಿಯೂ ಇಲ್ಲ. ನಮ್ಮ ಬಳಿ ಇಲ್ಲದಿರುವುದನ್ನು ದೇವರು ಎಂದೂ ನಮ್ಮಿಂದ ನಿರೀಕ್ಷಿಸುವುದಿಲ್ಲ. ಅಪೊಸ್ತಲ ಪೌಲನು ಈ ಮೂಲತತ್ವವನ್ನು ತಿಳಿಸಿದನು: “ಒಬ್ಬನು ಕೊಡುವದಕ್ಕೆ ಮನಸ್ಸುಳ್ಳವನಾಗಿರುವಲ್ಲಿ ಅವನು ತನ್ನಲ್ಲಿ ಇರುವದಕ್ಕೆ ಅನುಸಾರವಾಗಿ ಕೊಟ್ಟರೆ ಅದು ಸಮರ್ಪಕವಾಗಿರುವದು; ಅವನಿಗೆ ಇಲ್ಲದ್ದನ್ನು ದೇವರು ಕೇಳಿಕೊಳ್ಳುವದಿಲ್ಲ.”—2 ಕೊರಿಂಥ 8:12.
11. ನಮ್ಮ ರಕ್ಷಣೆಯು ಯಾವುದರ ಮೇಲೆ ಹೊಂದಿಕೊಂಡಿದೆ?
ರೋಮಾಪುರ 3:23, 24; ಯಾಕೋಬ 2:17, 18, 24.
11 ಏನೇ ಆಗಲಿ, ನಾವು ಮಾಡಬಹುದಾದ ಕೆಲಸದ ಮೇಲೆ ನಮ್ಮ ರಕ್ಷಣೆಯು ಹೊಂದಿಕೊಂಡಿಲ್ಲ, ಬದಲಾಗಿ ನಮ್ಮ ಕರ್ತನಾಗಿರುವ ಯೇಸು ಕ್ರಿಸ್ತನ ಮೂಲಕ ಯೆಹೋವನು ನೀಡುವಂತಹ ಅಪಾತ್ರ ದಯೆಯ ಮೇಲೆ ಹೊಂದಿಕೊಂಡಿದೆ. ಪೌಲನು ಸ್ಪಷ್ಟವಾಗಿ ವಿವರಿಸಿದ್ದು: “ಎಲ್ಲರೂ ಪಾಪಮಾಡಿ ದೇವರ ಮಹಿಮೆಯನ್ನು ಹೊಂದದೆ ಹೋಗಿದ್ದಾರೆ. ಅವರು ನೀತಿವಂತರೆಂದು ನಿರ್ಣಯ ಹೊಂದುವದು ದೇವರ ಉಚಿತಾರ್ಥವಾದ ಕೃಪೆಯಿಂದಲೇ ಕ್ರಿಸ್ತ ಯೇಸುವಿನಿಂದಾದ ಪಾಪ ವಿಮೋಚನೆಯ ಮೂಲಕವಾಗಿ ಆಗುವದು.” ಆದರೂ, ನಮ್ಮ ಕೆಲಸಗಳು, ದೇವರ ವಾಗ್ದಾನಗಳಲ್ಲಿನ ನಮ್ಮ ಕ್ರಿಯಾಶೀಲ ನಂಬಿಕೆಯ ರುಜುವಾತುಗಳಾಗಿವೆ.—12. ನಾವು ಯಾವುದೇ ಹೋಲಿಕೆಗಳನ್ನು ಮಾಡಬಾರದು ಏಕೆ?
12 ದೇವರ ಸೇವೆಯಲ್ಲಿ ನಾವು ಎಷ್ಟು ಸಮಯವನ್ನು ಕಳೆಯುತ್ತೇವೆ, ಎಷ್ಟು ಬೈಬಲ್ ಸಾಹಿತ್ಯವನ್ನು ನೀಡುತ್ತೇವೆ ಅಥವಾ ಎಷ್ಟು ಬೈಬಲ್ ಅಭ್ಯಾಸಗಳನ್ನು ನಡಿಸುತ್ತೇವೆ ಎಂಬ ವಿಷಯದಲ್ಲಿ ನಾವು ಇತರರೊಂದಿಗೆ ಹೋಲಿಸಿನೋಡುವ ಅಗತ್ಯವಿಲ್ಲ. (ಗಲಾತ್ಯ 6:3, 4) ಕ್ರೈಸ್ತ ಶುಶ್ರೂಷೆಯಲ್ಲಿ ನಾವು ಏನನ್ನೇ ಸಾಧಿಸಲಿ, ನಾವೆಲ್ಲರೂ ಯೇಸುವಿನ ದೀನ ಮಾತುಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು: “ನೀವು ನಿಮಗೆ ಅಪ್ಪಣೆಯಾಗಿರುವದನ್ನೆಲ್ಲಾ ಮಾಡಿದ ಮೇಲೆ—ನಾವು ಆಳುಗಳು, ಪ್ರಯೋಜನವಿಲ್ಲದವರು, ಮಾಡಬೇಕಾದದ್ದನ್ನೇ ಮಾಡಿದ್ದೇವೆ ಅನ್ನಿರಿ.” (ಲೂಕ 17:10) ನಮಗೆ ‘ಅಪ್ಪಣೆಯಾಗಿರುವದನ್ನೆಲ್ಲಾ’ ಮಾಡಿದ್ದೇವೆ ಎಂದು ನಾವು ಎಷ್ಟು ಬಾರಿ ನಿಜವಾಗಿಯೂ ಹೇಳಸಾಧ್ಯವಿದೆ? ಆದುದರಿಂದ, ಈಗ ಏಳುವ ಪ್ರಶ್ನೆಯೇನೆಂದರೆ, ದೇವರಿಗೆ ನಾವು ಮಾಡುವ ಸೇವೆಯ ಗುಣಮಟ್ಟವು ಹೇಗಿರಬೇಕು?—2 ಕೊರಿಂಥ 10:17, 18.
ಪ್ರತಿ ದಿನವನ್ನು ಅಮೂಲ್ಯವಾದದ್ದಾಗಿ ಮಾಡುವುದು
13. ನಮ್ಮ ಸಮರ್ಪಣೆಗನುಸಾರ ನಡೆಯುತ್ತಿರುವಾಗ ನಮಗೆ ಯಾವ ಮನೋಭಾವದ ಅಗತ್ಯವಿದೆ?
13 ಹೆಂಡತಿಯರು, ಗಂಡಂದಿರು, ಮಕ್ಕಳು, ಹೆತ್ತವರು ಮತ್ತು ಸೇವಕರಿಗೆ ಸಲಹೆಯನ್ನು ಕೊಟ್ಟ ಬಳಿಕ, ಪೌಲನು ಬರೆಯುವುದು: “ನೀವು ಯಾವ ಕೆಲಸವನ್ನು ಮಾಡಿದರೂ ಅದನ್ನು ಮನುಷ್ಯರಿಗೋಸ್ಕರವೆಂದು ಮಾಡದೆ ಕರ್ತನಿಗೋಸ್ಕರವೇ [“ಯೆಹೋವನಿಗೋಸ್ಕರವೇ,” NW] ಎಂದು ಮನಃಪೂರ್ವಕವಾಗಿ ಮಾಡಿರಿ; ಕರ್ತನಿಂದ [“ಯೆಹೋವನಿಂದ,” NW] ಪರಲೋಕ ಬಾಧ್ಯತೆಯೆಂಬ ಪ್ರತಿಫಲವನ್ನು ಹೊಂದುವೆವೆಂದು ತಿಳಿದಿದ್ದೀರಲ್ಲಾ, ನೀವು ಕರ್ತನಾದ ಕ್ರಿಸ್ತನಿಗೇ ದಾಸರಾಗಿದ್ದೀರಿ.” (ಕೊಲೊಸ್ಸೆ 3:23, 24) ಯೆಹೋವನ ಸೇವೆಯಲ್ಲಿ ನಾವು ಪೂರೈಸುವ ಸಂಗತಿಗಳ ಮೂಲಕ ಇತರರನ್ನು ಪ್ರಭಾವಿಸಲಿಕ್ಕಾಗಿ ನಾವು ಸೇವೆಮಾಡುತ್ತಿಲ್ಲ. ಯೇಸು ಕ್ರಿಸ್ತನ ಮಾದರಿಯನ್ನು ಅನುಸರಿಸುವ ಮೂಲಕ ದೇವರ ಸೇವೆಯನ್ನು ಮಾಡಲು ನಾವು ಪ್ರಯತ್ನಿಸುತ್ತಿದ್ದೇವೆ. ಯೇಸು ತನ್ನ ಅಲ್ಪಾವಧಿಯ ಭೂಶುಶ್ರೂಷೆಯನ್ನು ತುಂಬ ಜರೂರಿ ಮನೋಭಾವದಿಂದ ಮಾಡಿದನು.—1 ಪೇತ್ರ 2:21.
14. ಕಡೇ ದಿವಸಗಳ ವಿಷಯದಲ್ಲಿ ಪೇತ್ರನು ಯಾವ ಎಚ್ಚರಿಕೆಯನ್ನು ಕೊಟ್ಟನು?
14 ಅಪೊಸ್ತಲ ಪೇತ್ರನು ಸಹ ಜರೂರಿ ಮನೋಭಾವವನ್ನು ತೋರ್ಪಡಿಸಿದನು. ಕಡೇ ದಿವಸಗಳಲ್ಲಿ ತಮ್ಮ ದುರಾಶೆಗಳ ಪ್ರಕಾರ ನಡೆಯುವ ಕುಚೋದ್ಯಗಾರರು, ಅಂದರೆ ಧರ್ಮಭ್ರಷ್ಟರು ಮತ್ತು ಸಂಶಯಸ್ವಭಾವದವರು, ಕ್ರಿಸ್ತನ ಪ್ರತ್ಯಕ್ಷತೆಯ ವಿಷಯದಲ್ಲಿ ಪ್ರಶ್ನೆಗಳನ್ನು ಎಬ್ಬಿಸುವರು ಎಂದು ತನ್ನ ಎರಡನೆಯ ಪತ್ರದಲ್ಲಿ ಎಚ್ಚರಿಸಿದನು. ಆದರೂ, ಪೇತ್ರನು ಹೇಳಿದ್ದು: “ಕರ್ತನು [“ಯೆಹೋವನು,” NW] ತನ್ನ ವಾಗ್ದಾನವನ್ನು ನೆರವೇರಿಸುವದಕ್ಕೆ ತಡಮಾಡುತ್ತಾನೆಂಬದಾಗಿ ಕೆಲವರು ಅರ್ಥಮಾಡಿಕೊಳ್ಳುವ ಪ್ರಕಾರ ಆತನು ತಡಮಾಡುವವನಲ್ಲ. ಯಾವನಾದರೂ ನಾಶವಾಗುವದರಲ್ಲಿ ಆತನು ಇಷ್ಟಪಡದೆ ಎಲ್ಲರೂ ತನ್ನ ಕಡೆಗೆ ತಿರುಗಿಕೊಳ್ಳಬೇಕೆಂದು ಅಪೇಕ್ಷಿಸುವವನಾಗಿದ್ದು ನಿಮ್ಮ ವಿಷಯದಲ್ಲಿ ದೀರ್ಘಶಾಂತಿಯುಳ್ಳವನಾಗಿದ್ದಾನೆ. ಆದರೂ ಕರ್ತನ [“ಯೆಹೋವನ,” NW] ದಿನವು ಕಳ್ಳನು ಬರುವಂತೆ ಬರುತ್ತದೆ.” ಹೌದು, ಯೆಹೋವನ ದಿನವು ನಿಶ್ಚಯವಾಗಿಯೂ ಬರುತ್ತದೆ. ಆದುದರಿಂದ, ದೇವರ ವಾಗ್ದಾನದಲ್ಲಿ ನಮ್ಮ ನಂಬಿಕೆಯು ಎಷ್ಟು ನಿಶ್ಚಿತವಾಗಿದೆ ಮತ್ತು ದೃಢವಾದದ್ದಾಗಿದೆ ಎಂಬ ವಿಷಯದ ಬಗ್ಗೆ ನಾವು ಹೆಚ್ಚು ಗಮನಕೊಡಬೇಕು.—2 ಪೇತ್ರ 3:3, 4, 9, 10.
15. ನಮ್ಮ ಜೀವಿತದ ಪ್ರತಿಯೊಂದು ದಿನವನ್ನು ನಾವು ಹೇಗೆ ಪರಿಗಣಿಸಸಾಧ್ಯವಿದೆ?
15 ಶುದ್ಧಮನಸ್ಸಾಕ್ಷಿಯಿಂದ ನಮ್ಮ ಸಮರ್ಪಣೆಗನುಸಾರ ಜೀವಿಸಬೇಕಾದರೆ, ಪ್ರತಿ ದಿನವನ್ನು ನಾವು ಯೆಹೋವನ ಸ್ತುತಿಗಾಗಿ ಉಪಯೋಗಿಸಬೇಕು. ಪ್ರತಿ ದಿನದ ಅಂತ್ಯದಲ್ಲಿ, ದೇವರ ಹೆಸರಿನ ಪವಿತ್ರೀಕರಣಕ್ಕೆ ಹಾಗೂ ರಾಜ್ಯದ ಸುವಾರ್ತೆಯ ಸಾರುವಿಕೆಗೆ ಇಂದು ಯಾವ ರೀತಿಯಲ್ಲಿ ನಾವು ಸಹಾಯಮಾಡಿದೆವು ಎಂದು ನಾವು ಪರೀಕ್ಷಿಸಸಾಧ್ಯವಿದೆಯೋ? ನಮ್ಮ ಶುದ್ಧ ನಡತೆ, ಭಕ್ತಿವೃದ್ಧಿಮಾಡುವಂತಹ ಸಂಭಾಷಣೆ, ಅಥವಾ ಕುಟುಂಬ ಹಾಗೂ ಸ್ನೇಹಿತರಿಗಾಗಿರುವ ಪ್ರೀತಿಯ ಕಾಳಜಿಯ ಮೂಲಕ ದೇವರ ಹೆಸರಿನ ಪವಿತ್ರೀಕರಣಕ್ಕೆ ಸಹಾಯಮಾಡಿರಬಹುದು. ಲಭ್ಯವಿರುವ ಸಂದರ್ಭಗಳನ್ನು ನಾವು ನಮ್ಮ ಕ್ರೈಸ್ತ ನಿರೀಕ್ಷೆಯನ್ನು ಇತರರೊಂದಿಗೆ ಹಂಚಿಕೊಳ್ಳಲಿಕ್ಕಾಗಿ ಉಪಯೋಗಿಸಿದೆವೋ? ದೇವರ ವಾಗ್ದಾನಗಳ ಕುರಿತು ಗಂಭೀರವಾಗಿ ಆಲೋಚಿಸುವಂತೆ ನಾವು ಯಾರಿಗಾದರೂ ಸಹಾಯಮಾಡಿದ್ದೇವೋ? ಪ್ರತಿ ದಿನ ನಾವು ಆತ್ಮಿಕ ರೀತಿಯಲ್ಲಿ ಅಮೂಲ್ಯವಾದ ಏನನ್ನಾದರೂ ಸಂಗ್ರಹಿಸೋಣ ಮತ್ತು ಗಣನೀಯ ಪ್ರಮಾಣದ ಆತ್ಮಿಕ ಬ್ಯಾಂಕ್ ಅಕೌಂಟನ್ನು ಹೆಚ್ಚಿಸುತ್ತಾ ಇರೋಣ.—ಮತ್ತಾಯ 6:20; 1 ಪೇತ್ರ 2:12; 3:15; ಯಾಕೋಬ 3:13.
ನಿಮ್ಮ ದೃಷ್ಟಿಯು ಸ್ಪಷ್ಟವಾಗಿರಲಿ
16. ಯಾವ ರೀತಿಯಲ್ಲಿ ಸೈತಾನನು ದೇವರಿಗೆ ಮಾಡಿರುವ ನಮ್ಮ ಸಮರ್ಪಣೆಯನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಾನೆ?
16 ಕ್ರೈಸ್ತರಿಗೆ ಹೆಚ್ಚು ಕಷ್ಟಕರವಾಗುತ್ತಿರುವಂತಹ ಸಮಯಗಳಲ್ಲಿ ನಾವು ಜೀವಿಸುತ್ತಿದ್ದೇವೆ. ಸೈತಾನನು ಮತ್ತು ಅವನ ಬೆಂಬಲಿಗರು, ಒಳ್ಳೇದು ಹಾಗೂ ಕೆಟ್ಟದ್ದು, ಶುದ್ಧವಾದದ್ದು ಹಾಗೂ ಅಶುದ್ಧವಾದದ್ದು, ನೈತಿಕತೆ ಹಾಗೂ ಅನೈತಿಕತೆ, ಸದಾಚಾರ ಹಾಗೂ ದುರಾಚಾರದ ನಡುವಿನ ವ್ಯತ್ಯಾಸವನ್ನು ಅಸ್ಪಷ್ಟಗೊಳಿಸಲು ಪ್ರಯತ್ನಿಸುತ್ತಿದ್ದಾರೆ. (ರೋಮಾಪುರ 1:24-28; 16:17-19) ಸೈತಾನನು, ಟಿವಿ ರಿಮೋಟ್ ಕಂಟ್ರೋಲ್ನ ಮೂಲಕ ಅಥವಾ ಕಂಪ್ಯೂಟರ್ ಕೀಬೋರ್ಡ್ನ (ಇಂಟರ್ನೆಟ್ನ ಉಪಯೋಗ) ಮೂಲಕ ತುಂಬ ಸುಲಭವಾಗಿ ನಮ್ಮ ಹೃದಮನಗಳನ್ನು ಮಲಿನಗೊಳಿಸಿಕೊಳ್ಳುವಂತೆ ಮಾಡಿದ್ದಾನೆ. ಇದರಿಂದ ನಮ್ಮ ಆತ್ಮಿಕ ದೃಷ್ಟಿಯು ಅಸ್ಪಷ್ಟವಾಗಬಹುದು ಅಥವಾ ನಾಭಿ ತಪ್ಪಬಹುದು, ಮತ್ತು ಅವನ ತಂತ್ರೋಪಾಯಗಳನ್ನು ಅರ್ಥಮಾಡಿಕೊಳ್ಳಲು ನಾವು ತಪ್ಪಿಹೋಗಬಹುದು. ಒಂದುವೇಳೆ ನಮ್ಮ ಆತ್ಮಿಕ ಮೌಲ್ಯಗಳೊಂದಿಗೆ ನಾವು ರಾಜಿಮಾಡಿಕೊಳ್ಳುವುದಾದರೆ, ನಮ್ಮ ಸಮರ್ಪಣೆಗನುಸಾರ ಜೀವಿಸಲು ಮಾಡಿರುವ ನಿರ್ಧಾರವು ಬಲಹೀನವಾಗಿ, “ನೇಗಿಲಿನ” ಮೇಲಿನ ನಮ್ಮ ಹಿಡಿತವು ಸಡಿಲಗೊಳ್ಳಸಾಧ್ಯವಿದೆ.—ಲೂಕ 9:62; ಫಿಲಿಪ್ಪಿ 4:8.
17. ದೇವರೊಂದಿಗಿನ ನಮ್ಮ ಸಂಬಂಧವನ್ನು ಕಾಪಾಡಿಕೊಳ್ಳುವಂತೆ ಪೌಲನ ಸಲಹೆಯು ನಮಗೆ ಹೇಗೆ ಸಹಾಯಮಾಡಬಲ್ಲದು?
17 ಆದುದರಿಂದ, ಥೆಸಲೊನೀಕದಲ್ಲಿರುವ ಸಭೆಗೆ ಪೌಲನು ಬರೆದ ಮಾತುಗಳು ತುಂಬ ಸಮಯೋಚಿತವಾದವುಗಳಾಗಿವೆ: “ದೇವರ ಚಿತ್ತವೇನಂದರೆ ನೀವು ಶುದ್ಧರಾಗಿರಬೇಕೆಂಬದೇ. ಆದದರಿಂದ ಹಾದರಕ್ಕೆ ದೂರವಾಗಿರಬೇಕು. ದೇವರನ್ನರಿಯದ ಅನ್ಯಜನಗಳಂತೆ ಕಾಮಾಭಿಲಾಷೆಗೆ ಒಳಪಡದೆ ನಿಮ್ಮಲ್ಲಿ ಪ್ರತಿಯೊಬ್ಬನು ಪವಿತ್ರವಾದ ಮನಸ್ಸಿನಿಂದಲೂ ಘನತೆಯಿಂದಲೂ ಧರ್ಮಪತ್ನಿಯನ್ನು ಸಂಪಾದಿಸಿಕೊಳ್ಳಲು ತಿಳಿಯಬೇಕು.” (1 ಥೆಸಲೊನೀಕ 4:3-5) ಅನೈತಿಕತೆಯು, ದೇವರಿಗೆ ತಾವು ಮಾಡಿಕೊಂಡ ಸಮರ್ಪಣೆಯನ್ನು ಅಲಕ್ಷಿಸಿದ ಕೆಲವರನ್ನು ಕ್ರೈಸ್ತ ಸಭೆಯಿಂದ ಬಹಿಷ್ಕರಿಸಲ್ಪಡುವಂತೆ ಮಾಡಿದೆ. ಅವರು ದೇವರೊಂದಿಗಿನ ತಮ್ಮ ಸಂಬಂಧವು ಬಲಹೀನಗೊಳ್ಳುವಂತೆ ಬಿಟ್ಟುಕೊಟ್ಟಿದ್ದಾರೆ; ಹೀಗೆ ಅವರ ಜೀವಿತಗಳಲ್ಲಿ ಆತನಿಗೆ ಮಹತ್ವದ ಸ್ಥಾನವನ್ನು ಕೊಟ್ಟಿಲ್ಲ. ಆದರೂ, ಪೌಲನು ಹೇಳಿದ್ದು: “ದೇವರು ನಮ್ಮನ್ನು ಬಂಡತನಕ್ಕೆ ಕರೆಯದೆ ಶುದ್ಧರಾಗಿರುವದಕ್ಕೆ ಕರೆದನು. ಹೀಗಿರಲು ಈ ಮಾತನ್ನು ತಾತ್ಸಾರಮಾಡುವವನು ಮನುಷ್ಯನನ್ನು ತಿರಸ್ಕರಿಸುವದು ಮಾತ್ರವಲ್ಲದೆ ಪವಿತ್ರಾತ್ಮವರವನ್ನು ನಿಮಗೆ ದಯಪಾಲಿಸುವ ದೇವರನ್ನೂ ತಿರಸ್ಕರಿಸುತ್ತಾನೆ.”—1 ಥೆಸಲೊನೀಕ 4:7, 8.
ನಿಮ್ಮ ದೃಢನಿರ್ಧಾರವೇನು?
18. ನಮ್ಮ ದೃಢನಿರ್ಧಾರವು ಏನಾಗಿರಬೇಕು?
18 ಯೆಹೋವ ದೇವರಿಗೆ ನಾವು ಮಾಡಿಕೊಂಡಿರುವ ನಮ್ಮ ಸಮರ್ಪಣೆಯ ಗಂಭೀರತೆಯನ್ನು ನಾವು ಪರಿಗಣಿಸುವಲ್ಲಿ, ನಾವು ಯಾವ ನಿರ್ಧಾರವನ್ನು ಮಾಡತಕ್ಕದ್ದು? ನಮ್ಮ ನಡತೆ ಹಾಗೂ ನಮ್ಮ ಶುಶ್ರೂಷೆಯ ವಿಷಯದಲ್ಲಿ ಒಳ್ಳೇ ಮನಸ್ಸಾಕ್ಷಿಯನ್ನು ಕಾಪಾಡಿಕೊಳ್ಳುವುದೇ ನಮ್ಮ ದೃಢನಿರ್ಧಾರವಾಗಿರಬೇಕು. ಪೇತ್ರನು ಬುದ್ಧಿಹೇಳಿದ್ದು: “ಒಳ್ಳೇ ಮನಸ್ಸಾಕ್ಷಿಯುಳ್ಳವರಾಗಿರಿ; ಆಗ ಕ್ರಿಸ್ತನಲ್ಲಿರುವ ನಿಮ್ಮ ಒಳ್ಳೇ ನಡವಳಿಕೆಯನ್ನು ಕುರಿತು ಬೈಯುವವರು ನಿಮ್ಮನ್ನು ನಿಂದಿಸುವದಕ್ಕೆ ನಾಚಿಕೆಪಡುವರು.” (1 ಪೇತ್ರ 3:16) ನಮ್ಮ ಕ್ರೈಸ್ತ ನಡತೆಯ ಕಾರಣ ನಾವು ಕಷ್ಟವನ್ನು ಅನುಭವಿಸಬೇಕಾಗಬಹುದು ಮತ್ತು ನಿಂದೆಯನ್ನು ಎದುರಿಸಬೇಕಾಗಬಹುದು; ದೇವರಿಗೆ ನಂಬಿಕೆ ಹಾಗೂ ನಿಷ್ಠೆಯನ್ನು ತೋರಿಸಿದ ಕಾರಣ ಕ್ರಿಸ್ತನಿಗೂ ಇದೇ ರೀತಿ ಆಯಿತು. “ಕ್ರಿಸ್ತನು ಶರೀರದಲ್ಲಿ ಬಾಧೆಪಟ್ಟದ್ದರಿಂದ ನೀವು ಸಹ ಆತನಿಗಿದ್ದ ಭಾವವನ್ನೇ ಹಿಡಿದುಕೊಳ್ಳಿರಿ. ಯಾಕಂದರೆ ಶರೀರದಲ್ಲಿ ಬಾಧೆಪಟ್ಟವನು ಪಾಪದ ವಶದಿಂದ ತಪ್ಪಿಸಿಕೊಂಡವನಾಗಿರು”ವನು ಎಂದು ಪೇತ್ರನು ಹೇಳಿದನು.—1 ಪೇತ್ರ 4:1.
19. ನಮ್ಮ ಕುರಿತು ಏನು ಹೇಳಲ್ಪಡುವಂತೆ ನಾವು ಬಯಸುತ್ತೇವೆ?
19 ನಮ್ಮ ಸಮರ್ಪಣೆಗನುಸಾರ ಜೀವಿಸಲು ನಾವು ಮಾಡಿರುವ ದೃಢನಿರ್ಧಾರವು, ಆತ್ಮಿಕವಾಗಿ, ನೈತಿಕವಾಗಿ, ಮತ್ತು ಶಾರೀರಿಕವಾಗಿ ಅಸ್ವಸ್ಥವಾಗಿರುವ ಸೈತಾನನ ಲೋಕದ ಆಕರ್ಷಣೆಗಳಿಂದ ನಮ್ಮನ್ನು ಸಂರಕ್ಷಿಸುವುದು. ಅಷ್ಟುಮಾತ್ರವಲ್ಲ, ದೇವರ ಅನುಗ್ರಹವೂ ನಮಗಿದೆ ಎಂಬ ಭರವಸೆ ನಮ್ಮಲ್ಲಿ ಮೂಡುವದು. ಸೈತಾನನು ಹಾಗೂ ಅವನ ಬೆಂಬಲಿಗರು ನೀಡಸಾಧ್ಯವಿರುವ ಎಲ್ಲದಕ್ಕಿಂತಲೂ ಇದು ಹೆಚ್ಚು ಅಮೂಲ್ಯವಾದದ್ದಾಗಿದೆ. ಹೀಗೆ, ಮೊದಲ ಬಾರಿ ನಾವು ಸತ್ಯದ ಕುರಿತು ತಿಳಿದುಕೊಂಡಾಗ ನಮಗಿದ್ದ ಪ್ರೀತಿಯನ್ನು ನಾವೀಗ ಕಳೆದುಕೊಂಡಿದ್ದೇವೆ ಎಂದು ಎಂದಿಗೂ ಹೇಳದಿರುವಂತಾಗಲಿ. ಅದಕ್ಕೆ ಬದಲಾಗಿ, ಪ್ರಥಮ ಶತಮಾನದಲ್ಲಿ ಥುವತೈರದ ಸಭೆಯಲ್ಲಿದ್ದವರ ಕುರಿತು ಹೇಳಲಾದಂತೆಯೇ ನಮ್ಮ ಕುರಿತು ಹೇಳುವಂತಾಗಲಿ: “ನಿನ್ನ ಕೃತ್ಯಗಳನ್ನೂ ನಿನ್ನ ಪ್ರೀತಿಯನ್ನೂ ನಂಬಿಕೆಯನ್ನೂ ಪರೋಪಕಾರವನ್ನೂ ತಾಳ್ಮೆಯನ್ನೂ ಬಲ್ಲೆನು; ಇದಲ್ಲದೆ ನಿನ್ನ ಕಡೇ ಕೃತ್ಯಗಳು ನಿನ್ನ ಮೊದಲಿನ ಕೃತ್ಯಗಳಿಗಿಂತ ಹೆಚ್ಚಾದವುಗಳೆಂದು ಬಲ್ಲೆನು.” (ಪ್ರಕಟನೆ 2:4, 18, 19) ಹೌದು, ನಮ್ಮ ಸಮರ್ಪಣೆಯ ವಿಷಯದಲ್ಲಿ ನಾವು ಉಗುರುಬೆಚ್ಚಗಿನವರಾಗಿ ಇರದಿರೋಣ. ಅದಕ್ಕೆ ಬದಲಾಗಿ, ನಾವು “ಆಸಕ್ತಚಿತ್ತರಾಗಿದ್ದು” ಅಂತ್ಯದ ತನಕ ಹುರುಪಿನಿಂದ ಮುಂದುವರಿಯೋಣ. ಏಕೆಂದರೆ ಅಂತ್ಯವು ಸಮೀಪವಾಗಿದೆ.—ರೋಮಾಪುರ 12:11; ಪ್ರಕಟನೆ 3:15, 16.
[ಪಾದಟಿಪ್ಪಣಿಗಳು]
^ ಪ್ಯಾರ. 2 ಏಪ್ರಿಲ್ 15, 1987ರ ಕಾವಲಿನಬುರುಜು (ಇಂಗ್ಲಿಷ್) ಪತ್ರಿಕೆಯ 31ನೆಯ ಪುಟವನ್ನು ನೋಡಿರಿ.
^ ಪ್ಯಾರ. 7 ಅರ್ನೆಸ್ಟ್ ಬೇವರ್ ಅವರ ಕುರಿತಾದ ವಿವರವಾದ ಮಾಹಿತಿಗಾಗಿ, ಮಾರ್ಚ್ 15, 1980ರ ಕಾವಲಿನಬುರುಜು (ಇಂಗ್ಲಿಷ್) ಪತ್ರಿಕೆಯ, 8-11ನೆಯ ಪುಟಗಳನ್ನು ನೋಡಿರಿ.
^ ಪ್ಯಾರ. 9 ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿಸಲ್ಪಟ್ಟ, 1978 ಯಿಯರ್ಬುಕ್ ಆಫ್ ಜೆಹೋವಾಸ್ ವಿಟ್ನೆಸಸ್ ಪುಸ್ತಕದ 156-8, 201-18ನೆಯ ಪುಟಗಳನ್ನು ನೋಡಿರಿ.
ನಿಮಗೆ ಜ್ಞಾಪಕವಿದೆಯೊ?
• ಸಮರ್ಪಣೆಯಲ್ಲಿ ಏನು ಒಳಗೂಡಿದೆ?
• ದೇವರ ಸಮರ್ಪಿತ ಸೇವಕರ ಯಾವ ಪುರಾತನ ಹಾಗೂ ಆಧುನಿಕ ಉದಾಹರಣೆಗಳನ್ನು ನಾವು ಅನುಸರಿಸುವುದು ಯೋಗ್ಯವಾದದ್ದಾಗಿದೆ?
• ದೇವರಿಗೆ ನಾವು ಮಾಡುವ ಸೇವೆಯನ್ನು ಹೇಗೆ ಪರಿಗಣಿಸಬೇಕು?
• ದೇವರಿಗೆ ನಾವು ಮಾಡಿಕೊಂಡಿರುವ ಸಮರ್ಪಣೆಯ ವಿಷಯದಲ್ಲಿ ನಮ್ಮ ದೃಢನಿರ್ಧಾರವು ಏನಾಗಿರಬೇಕು?
[ಅಧ್ಯಯನ ಪ್ರಶ್ನೆಗಳು]
[ಪುಟ 15ರಲ್ಲಿರುವ ಚಿತ್ರ]
ಕ್ರೂರ ರೀತಿಯಲ್ಲಿ ಉಪಚರಿಸಲ್ಪಟ್ಟರೂ ಯೆರೆಮೀಯನು ನಂಬಿಗಸ್ತನಾಗಿ ಉಳಿದನು
[ಪುಟ 16ರಲ್ಲಿರುವ ಚಿತ್ರ]
ಒಬ್ಬ ಹುರುಪಿನ ಕ್ರೈಸ್ತರೋಪಾದಿ ಅರ್ನೆಸ್ಟ್ ಬೇವರ್ ಅವರು ತಮ್ಮ ಮಕ್ಕಳಿಗೋಸ್ಕರ ಒಳ್ಳೆಯ ಮಾದರಿಯನ್ನಿಟ್ಟರು
[ಪುಟ 17ರಲ್ಲಿರುವ ಚಿತ್ರ]
ಸ್ಪೆಯ್ನ್ನ ಸೆರೆಮನೆಗಳಲ್ಲಿದ್ದ ನೂರಾರು ಯುವ ಸಾಕ್ಷಿಗಳು ತಮ್ಮ ಸಮಗ್ರತೆಯನ್ನು ಕಾಪಾಡಿಕೊಂಡರು
[ಪುಟ 18ರಲ್ಲಿರುವ ಚಿತ್ರಗಳು]
ಪ್ರತಿ ದಿನ ನಾವು ಆತ್ಮಿಕ ರೀತಿಯಲ್ಲಿ ಸಕಾರಾತ್ಮಕವಾಗಿರುವ ಏನನ್ನಾದರೂ ಸಂಗ್ರಹಿಸೋಣ