ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಆತ್ಮಿಕ ಪರದೈಸ್‌ ಅದೇನು?

ಆತ್ಮಿಕ ಪರದೈಸ್‌ ಅದೇನು?

ಆತ್ಮಿಕ ಪರದೈಸ್‌ ಅದೇನು?

ಬ್ರಸಿಲ್‌ನಲ್ಲಿನ ಒಂದು ಚಿಕ್ಕ ನಗರದಲ್ಲಿ ಗಸ್ಟಾವೊ ಹುಟ್ಟಿಬೆಳೆದನು. * ಮುಂದೊಂದು ದಿನ ನಂಬಿಗಸ್ತ ಮನುಷ್ಯರು ಇದೇ ಭೂಮಿಯ ಮೇಲೆ ಪರದೈಸಿನಲ್ಲಿ ಪರಿಪೂರ್ಣ ಜೀವನದಲ್ಲಿ ಆನಂದಿಸುವುದು ದೇವರ ಉದ್ದೇಶವಾಗಿದೆ ಎಂಬುದರ ಬಗ್ಗೆ ಅವನಿಗೆ ಏನೂ ತಿಳಿದಿರಲಿಲ್ಲ. ಅದಕ್ಕೆ ಬದಲಾಗಿ, ಎಲ್ಲ ಒಳ್ಳೇ ಜನರು ಮರಣಾನಂತರ ಸ್ವರ್ಗಕ್ಕೆ ಹೋಗುತ್ತಾರೆಂದು ಅವನಿಗೆ ಚಿಕ್ಕಂದಿನಿಂದಲೂ ಕಲಿಸಲಾಗಿತ್ತು. (ಪ್ರಕಟನೆ 21:​3, 4) ಅವನಿಗೆ ತಿಳಿದಿರದಿದ್ದ ಇನ್ನೊಂದು ವಿಷಯವೂ ಇತ್ತು. ಅದೇನೆಂದರೆ, ಅವನು ಈಗಲೂ ಒಂದು ಆತ್ಮಿಕ ಪರದೈಸಿನಲ್ಲಿ ಇರಸಾಧ್ಯವಿದೆ.

ಆ ಆತ್ಮಿಕ ಪರದೈಸಿನ ಕುರಿತಾಗಿ ನೀವು ಕೇಳಿದ್ದೀರೊ? ಅದೇನು ಮತ್ತು ಅದರ ಭಾಗವಾಗಿರಲು ಏನು ಆವಶ್ಯಕ ಎಂಬುದು ನಿಮಗೆ ಗೊತ್ತಿದೆಯೊ? ನಿಜವಾಗಿ ಸಂತೋಷದಿಂದಿರಲು ಬಯಸುವ ಯಾವುದೇ ವ್ಯಕ್ತಿಯು ಆ ಪರದೈಸಿನ ಕುರಿತಾಗಿ ತಿಳಿದುಕೊಳ್ಳಬೇಕು.

ಆ ಆತ್ಮಿಕ ಪರದೈಸನ್ನು ಕಂಡುಹಿಡಿಯುವುದು

ಒಬ್ಬ ವ್ಯಕ್ತಿಯು ಈಗಲೂ ಪರದೈಸಿನಲ್ಲಿ ಜೀವಿಸಸಾಧ್ಯವಿದೆ ಎಂದು ಹೇಳಿದರೆ ಅದು ಖಂಡಿತವಾಗಿಯೂ ಅಸಾಧ್ಯವಾಗಿರುವಂತೆ ತೋರಬಹುದು. ಯಾಕೆಂದರೆ ಇಂದು ಈ ಲೋಕವು ಒಂದು ಪರದೈಸಾಗಿಲ್ಲ. “ಆ ಮೇಲೆ ತಿರಿಗಿ ದೃಷ್ಟಿಸಿ ಲೋಕದಲ್ಲಿನ ಹಿಂಸೆಗಳನ್ನೆಲ್ಲಾ ನೋಡಿದೆನು; ಆಹಾ, ಹಿಂಸೆಗೊಂಡವರ ಕಣ್ಣೀರು ಏನೆಂದು ಹೇಳಲಿ! ಸಂತಯಿಸುವವರು ಯಾರೂ ಇರಲಿಲ್ಲ; ಹಿಂಸಕರಿಗೆ ಬಹು ಬಲ; ಸಂತಯಿಸುವವರೋ ಒಬ್ಬರೂ ಇರಲಿಲ್ಲ” ಎಂದು ಒಬ್ಬ ಪ್ರಾಚೀನ ಹೀಬ್ರು ಅರಸನ ಮಾತುಗಳ ಸತ್ಯತೆಯನ್ನು ಅನೇಕರು ನೋಡಿ ಅನುಭವಿಸಿದ್ದಾರೆ. (ಪ್ರಸಂಗಿ 4:1) ಕೋಟಿಗಟ್ಟಲೆ ಜನರು ಭ್ರಷ್ಟ ರಾಜಕೀಯ, ಧಾರ್ಮಿಕ, ಮತ್ತು ಆರ್ಥಿಕ ವ್ಯವಸ್ಥೆಗಳಡಿಯಲ್ಲಿ ನರಳುತ್ತಿದ್ದಾರೆ. ಅವರಿಗೆ ಯಾವುದೇ ರೀತಿಯ ಉಪಶಮನವಿಲ್ಲ, ಮತ್ತು ಅವರನ್ನು ‘ಸಂತಯಿಸುವವರು’ ಯಾರೂ ಇಲ್ಲ. ಇನ್ನಿತರರು, ಆವಶ್ಯಕ ವಸ್ತುಗಳನ್ನು ಖರೀದಿಸಲಿಕ್ಕಾಗಿ, ತಮ್ಮ ಮಕ್ಕಳನ್ನು ಬೆಳೆಸಲಿಕ್ಕಾಗಿ ಒದ್ದಾಡುತ್ತಿರುತ್ತಾರೆ ಹಾಗೂ ಜೀವನದ ಗಾಡಿಯನ್ನು ಮುಂದಕ್ಕೆ ತಳ್ಳಲು ಇನ್ನು ಎಷ್ಟೋ ಸಂಗತಿಗಳನ್ನು ಮಾಡುತ್ತಾರೆ. ಇಂಥವರಿಗೂ ಒಬ್ಬ ಸಾಂತ್ವನಗಾರನು, ಅಂದರೆ ತಮ್ಮ ಹೊರೆಯನ್ನು ಒಂದಿಷ್ಟು ಹಗುರಗೊಳಿಸುವವನ ಅಗತ್ಯವಿದೆ. ಈ ಎಲ್ಲ ಜನರಿಗೂ, ಸದ್ಯದ ಜೀವನವು ಖಂಡಿತವಾಗಿಯೂ ಪರದೈಸಿನ ಜೀವನವಾಗಿಲ್ಲ.

ಹಾಗಾದರೆ ಆತ್ಮಿಕ ಪರದೈಸ್‌ ಎಲ್ಲಿದೆ? “ಪರದೈಸ್‌” ಎಂದು ಭಾಷಾಂತರಿಸಲ್ಪಟ್ಟಿರುವ ಗ್ರೀಕ್‌ ಹಾಗೂ ಹೀಬ್ರೂ ಪದಗಳೆಲ್ಲವೂ ಒಂದು ಉದ್ಯಾನ ಅಥವಾ ತೋಟ, ವಿಶ್ರಾಂತಿಗಾಗಿ ಮತ್ತು ಚೈತನ್ಯತುಂಬಿಸಲಿಕ್ಕಾಗಿರುವ ಒಂದು ಶಾಂತಿಪೂರ್ಣ ಸ್ಥಳ ಎಂಬ ಅರ್ಥವುಳ್ಳವುಗಳಾಗಿವೆ. ಮುಂದೊಂದು ದಿನ ಈ ಭೂಮಿಯು ಪಾಪವಿಲ್ಲದ ಮಾನವ ಜಾತಿಗಾಗಿ ಒಂದು ಅಕ್ಷರಾರ್ಥ ಪರದೈಸಾಗಲಿದೆ, ಒಂದು ಉದ್ಯಾನದಂಥ ಮನೆಯಾಗಲಿದೆ ಎಂದು ಬೈಬಲ್‌ ವಾಗ್ದಾನಿಸುತ್ತದೆ. (ಕೀರ್ತನೆ 37:​10, 11) ಇದನ್ನು ಮನಸ್ಸಿನಲ್ಲಿಟ್ಟವರಾಗಿ, ಒಂದು ಆತ್ಮಿಕ ಪರದೈಸವು ನೋಟಕ್ಕೆ ಹಿತಕರ ಮತ್ತು ಮನಸ್ಸಿಗೆ ನೆಮ್ಮದಿತರುವಂಥ ಪರಿಸರವಾಗಿದೆಯೆಂಬುದನ್ನು ನಾವು ನೋಡಬಹುದು. ಇದು ಜೊತೆಮಾನವರೊಂದಿಗೂ ದೇವರೊಂದಿಗೂ ಶಾಂತಿಯನ್ನು ಅನುಭವಿಸುವಂತೆ ಅನುಮತಿಸುವುದು. ಇಂದು ಅಂಥ ಒಂದು ಪರದೈಸ್‌ ಅಸ್ತಿತ್ವದಲ್ಲಿದೆ ಮತ್ತು ಅದರಲ್ಲಿನ ಜನರ ಸಂಖ್ಯೆಯು ಬೆಳೆಯುತ್ತಾ ಇದೆ. ಇದನ್ನು ಗಸ್ಟಾವೊ ಕೂಡ ಕಂಡುಹಿಡಿದನು.

12 ವರ್ಷ ಪ್ರಾಯದಲ್ಲೇ ಗಸ್ಟಾವೊ, ಒಬ್ಬ ರೋಮನ್‌ ಕ್ಯಾಥೊಲಿಕ್‌ ಪಾದ್ರಿಯಾಗಲು ಬಯಸಿದನು. ತನ್ನ ಹೆತ್ತವರ ಒಪ್ಪಿಗೆಯೊಂದಿಗೆ ಅವನೊಂದು ಧಾರ್ಮಿಕ ಸೆಮಿನರಿಯಲ್ಲಿ ಭರ್ತಿಯಾದನು. ಅಲ್ಲಿ ಅವನು ಸಂಗೀತ, ನಾಟಕಕಲೆ ಮತ್ತು ರಾಜಕೀಯದಲ್ಲಿ ಒಳಗೊಂಡನು. ಯುವಜನರನ್ನು ಆಕರ್ಷಿಸಲಿಕ್ಕಾಗಿ ಚರ್ಚು ಇದೆಲ್ಲವನ್ನು ಪ್ರವರ್ಧಿಸುತ್ತಾ ಇತ್ತು. ಒಬ್ಬ ಪಾದ್ರಿಯು ತನ್ನನ್ನು ಜನರಿಗಾಗಿ ಅರ್ಪಿಸಿಕೊಳ್ಳಬೇಕು ಮತ್ತು ಮದುವೆಯಾಗಲಾರನು ಎಂಬುದು ಅವನಿಗೆ ತಿಳಿದಿತ್ತು. ಹೀಗಿದ್ದರೂ, ಕೆಲವು ಪಾದ್ರಿಗಳು ಮತ್ತು ಸೆಮಿನರಿಯಲ್ಲಿ ತನಗೆ ಪರಿಚಯವಿದ್ದ ಕೆಲವರು ಅನೈತಿಕ ಕೆಲಸಗಳಲ್ಲಿ ತೊಡಗಿದ್ದರು. ಇಂತಹ ವಾತಾವರಣದಿಂದಾಗಿ, ಗಸ್ಟಾವೊ ಸ್ವಲ್ಪ ಸಮಯದೊಳಗೆ ತುಂಬ ಕುಡಿಯಲಾರಂಭಿಸಿದನು. ಅವನು ಆತ್ಮಿಕ ಪರದೈಸನ್ನು ಕಂಡುಕೊಂಡಿರಲಿಲ್ಲವೆಂಬುದು ಸ್ಪಷ್ಟ.

ಒಂದು ದಿನ ಗಸ್ಟಾವೊ, ಒಂದು ಬೈಬಲ್‌ ಕಿರುಹೊತ್ತಗೆಯನ್ನು ಓದಿದನು. ಅದರಲ್ಲಿ ಭೂಮಿಯ ಮೇಲಿನ ಪರದೈಸಿನ ಕುರಿತಾಗಿ ತಿಳಿಸಲಾಗಿತ್ತು. ಅದನ್ನು ಓದಿದ ನಂತರ ಅವನು ಜೀವಿತದ ಉದ್ದೇಶದ ಕುರಿತಾಗಿ ಯೋಚಿಸಲಾರಂಭಿಸಿದನು. ಅವನು ಹೇಳುವುದು: “ನಾನು ಬೈಬಲನ್ನು ಹೆಚ್ಚು ಓದಲಾರಂಭಿಸಿದೆ. ಅದರೆ ನನಗೆ ಅದರಲ್ಲಿ ಏನೂ ಅರ್ಥವಾಗುತ್ತಿರಲಿಲ್ಲ. ದೇವರಿಗೆ ಒಂದು ಹೆಸರಿದೆ ಎಂಬುದೂ ನನಗೆ ಅದರಿಂದ ಗೊತ್ತಾಗಲಿಲ್ಲ.” ಅವನು ಸೆಮಿನರಿಯನ್ನು ಬಿಟ್ಟನು ಮತ್ತು ಬೈಬಲನ್ನು ಅರ್ಥಮಾಡಿಕೊಳ್ಳಲಿಕ್ಕಾಗಿ ಸಹಾಯವನ್ನು ಪಡೆಯಲು ಯೆಹೋವನ ಸಾಕ್ಷಿಗಳ ಬಳಿ ಹೋದನು. ತದನಂತರ ಅವನು ಬೇಗನೆ ಪ್ರಗತಿಯನ್ನು ಮಾಡಿ, ತನ್ನ ಜೀವನವನ್ನು ದೇವರಿಗೆ ಸಮರ್ಪಿಸಿದನು. ಈಗ ಗಸ್ಟಾವೊ ಆತ್ಮಿಕ ಪರದೈಸಿನ ಕುರಿತಾಗಿ ಕಲಿಯುತ್ತಿದ್ದನು.

ದೇವರ ಹೆಸರಿಗಾಗಿ ಒಂದು ಪ್ರಜೆ

ದೇವರ ಹೆಸರು ಯೆಹೋವ ಆಗಿದೆ ಮತ್ತು ಅದು ಒಬ್ಬ ಬೈಬಲ್‌ ವಿದ್ಯಾರ್ಥಿಗೆ ಕೇವಲ ಮಾಹಿತಿಯ ಅಂಶವಾಗಿರುವುದಿಲ್ಲ ಎಂಬುದನ್ನು ಗಸ್ಟಾವೊ ಕಲಿತುಕೊಂಡನು. (ವಿಮೋಚನಕಾಂಡ 6:3) ಅದು ಸತ್ಯಾರಾಧನೆಯ ಒಂದು ಮುಖ್ಯ ಭಾಗವಾಗಿದೆ. ಯೇಸು ಸಹ ತನ್ನ ಹಿಂಬಾಲಕರಿಗೆ ಹೀಗೆ ಪ್ರಾರ್ಥಿಸುವಂತೆ ಕಲಿಸಿದನು: “ಪರಲೋಕದಲ್ಲಿರುವ ನಮ್ಮ ತಂದೆಯೇ, ನಿನ್ನ ನಾಮವು ಪರಿಶುದ್ಧವೆಂದು ಎಣಿಸಲ್ಪಡಲಿ.” (ಮತ್ತಾಯ 6:​9, 10) ಕ್ರೈಸ್ತರಾಗಿದ್ದ ಅನ್ಯಜನಾಂಗದವರ ಕುರಿತಾಗಿ ಮಾತಾಡುತ್ತಾ, ಶಿಷ್ಯನಾದ ಯಾಕೋಬನು ಹೇಳಿದ್ದು: ‘ದೇವರು . . . ಅನ್ಯಜನರನ್ನು ಕಟಾಕ್ಷಿಸಿನೋಡಿ ತನ್ನ ಹೆಸರಿಗಾಗಿ ಅವರೊಳಗಿಂದ ಒಂದು ಪ್ರಜೆಯನ್ನು ಆರಿಸಿಕೊಂಡನು.’ (ಅ. ಕೃತ್ಯಗಳು 15:14) ಪ್ರಥಮ ಶತಮಾನದಲ್ಲಿ, ‘ಆತನ ಹೆಸರಿಗಾಗಿದ್ದ ಪ್ರಜೆಯು’ ಕ್ರೈಸ್ತ ಸಭೆಯಾಗಿತ್ತು. ಇಂದು ದೇವರ ಹೆಸರಿಗಾಗಿ ಒಂದು ಪ್ರಜೆ ಇದೆಯೊ? ಹೌದು, ಇದ್ದಾರೆ. ಮತ್ತು ಅವರು ಯೆಹೋವನ ಸಾಕ್ಷಿಗಳಾಗಿದ್ದಾರೆಂದು ಗಸ್ಟಾವೊಗೆ ತಿಳಿದುಬಂತು.

ಯೆಹೋವನ ಸಾಕ್ಷಿಗಳು 235 ದೇಶಗಳಲ್ಲಿ ಮತ್ತು ಟೆರಿಟೊರಿಗಳಲ್ಲಿ ಸಕ್ರಿಯರಾಗಿ ಕೆಲಸಮಾಡುತ್ತಿದ್ದಾರೆ. ಅವರ ಸಂಖ್ಯೆ ಸುಮಾರು 60 ಲಕ್ಷ ಆಗಿದೆ ಮತ್ತು ಇನ್ನೂ 80 ಲಕ್ಷ ಮಂದಿ ಆಸಕ್ತ ಜನರು ಅವರ ಕೂಟಗಳಿಗೆ ಹಾಜರಾಗಿದ್ದಾರೆ. ಅವರು ಬಹಿರಂಗವಾಗಿ ನಡೆಸುವ ಶುಶ್ರೂಷೆಯ ಕೆಲಸಕ್ಕಾಗಿ ಎಲ್ಲೆಲ್ಲೂ ಪ್ರಸಿದ್ಧರಾಗಿದ್ದಾರೆ. ಮತ್ತು ಈ ಕೆಲಸದ ಮೂಲಕ, “ಪರಲೋಕ ರಾಜ್ಯದ ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುವದು” ಎಂಬ ಯೇಸುವಿನ ಮಾತುಗಳನ್ನು ಅವರು ಪೂರೈಸುತ್ತಾರೆ. (ಮತ್ತಾಯ 24:14) ಯೆಹೋವನ ಸಾಕ್ಷಿಗಳ ನಡುವೆ ತಾನೊಂದು ಆತ್ಮಿಕ ಪರದೈಸನ್ನು ಕಂಡುಕೊಂಡಿದ್ದೇನೆಂದು ಗಸ್ಟಾವೊಗೆ ಅನಿಸಿದ್ದೇಕೆ? ಅವನು ಹೇಳುವುದು: “ನಾನು ಲೋಕದಲ್ಲಿ, ವಿಶೇಷವಾಗಿ ಸೆಮಿನರಿಯಲ್ಲಿ ಏನನ್ನು ನೋಡಿದ್ದೇನೊ ಮತ್ತು ಯೆಹೋವನ ಸಾಕ್ಷಿಗಳ ನಡುವೆ ಏನನ್ನು ನೋಡಿದೆನೊ ಅದನ್ನು ಹೋಲಿಸಿ ನೋಡಿದೆ. ನಾನು ಕಂಡುಹಿಡಿದ ಅತಿ ದೊಡ್ಡ ವ್ಯತ್ಯಾಸವು, ಸಾಕ್ಷಿಗಳಲ್ಲಿ ಇದ್ದ ಪ್ರೀತಿಯೇ.”

ಯೆಹೋವನ ಸಾಕ್ಷಿಗಳ ಕುರಿತಾಗಿ ಇತರರೂ ಅದೇ ರೀತಿ ಹೇಳುತ್ತಾರೆ. ಬ್ರಸಿಲಿನ ಒಬ್ಬ ಯುವ ಮಹಿಳೆಯಾದ ಮೀರ್ಯಮಳು ಹೇಳಿದ್ದು: “ಸಂತೋಷಿತಳಾಗಿರುವುದು ಎಂದರೇನೆಂಬುದು ನನಗೆ ಗೊತ್ತಿರಲಿಲ್ಲ. ನನ್ನ ಕುಟುಂಬದಲ್ಲೂ ನಾನು ಸಂತೋಷಿತಳಾಗಿರಲಿಲ್ಲ. ನಾನು ಪ್ರೀತಿಯನ್ನು ಕ್ರಿಯೆಯಲ್ಲಿ ಮೊತ್ತಮೊದಲ ಬಾರಿ ನೋಡಿದ್ದು, ಯೆಹೋವನ ಸಾಕ್ಷಿಗಳ ನಡುವೆಯೇ.” ಕ್ರಿಸ್ಟಿಯನ್‌ ಎಂಬ ಒಬ್ಬ ವ್ಯಕ್ತಿಯು ಹೇಳಿದ್ದು: “ನಾನು ಆಗಾಗ್ಗೆ ಪ್ರೇತಾತ್ಮವಾದದಲ್ಲಿ ಕೈಹಾಕುತ್ತಿದ್ದೆ. ಆದರೆ ಧರ್ಮವು ನನಗೆ ಒಂದು ಪ್ರಾಮುಖ್ಯ ವಿಷಯವಾಗಿರಲಿಲ್ಲ. ಸಮಾಜದಲ್ಲಿ ನನಗಿದ್ದ ಸ್ಥಾನ ಮತ್ತು ಒಬ್ಬ ಇಂಜಿನಿಯರನೋಪಾದಿ ನನಗಿದ್ದ ಕೆಲಸವೇ ನನಗೆ ಬೇರೆಲ್ಲದಕ್ಕಿಂತಲೂ ಪ್ರಾಮುಖ್ಯವಾದ ವಿಷಯಗಳಾಗಿದ್ದವು. ಆದರೂ, ನನ್ನ ಹೆಂಡತಿ ಯೆಹೋವನ ಸಾಕ್ಷಿಗಳೊಂದಿಗೆ ಬೈಬಲನ್ನು ಅಭ್ಯಾಸಮಾಡಲು ಆರಂಭಿಸಿದಾಗ, ನಾನು ಅವಳಲ್ಲಾದ ವ್ಯತ್ಯಾಸವನ್ನು ನೋಡಿದೆ. ಅವಳನ್ನು ಭೇಟಿಮಾಡುತ್ತಿದ್ದ ಕ್ರೈಸ್ತ ಸ್ತ್ರೀಯರಲ್ಲಿದ್ದ ಆನಂದ ಮತ್ತು ಹುರುಪನ್ನು ನೋಡಿಯೂ ನಾನು ಪ್ರಭಾವಿತನಾದೆ.” ಯೆಹೋವನ ಸಾಕ್ಷಿಗಳ ಕುರಿತಾಗಿ ಜನರು ಏಕೆ ಈ ಎಲ್ಲಾ ಸಂಗತಿಗಳನ್ನು ಹೇಳುತ್ತಾರೆ?

ಆತ್ಮಿಕ ಪರದೈಸ್‌​—ಅದೇನು?

ಯೆಹೋವನ ಸಾಕ್ಷಿಗಳನ್ನು ಬೇರೆಲ್ಲರಿಂದಲೂ ಪ್ರತ್ಯೇಕಗೊಳಿಸುವ ಒಂದು ಸಂಗತಿಯು, ಬೈಬಲ್‌ ಜ್ಞಾನಕ್ಕಾಗಿರುವ ಅವರ ಗಣ್ಯತೆಯೇ ಆಗಿದೆ. ಬೈಬಲ್‌ ಸತ್ಯವಾಗಿದೆ ಮತ್ತು ದೇವರ ವಾಕ್ಯವಾಗಿದೆ ಎಂಬುದನ್ನು ಅವರು ನಂಬುತ್ತಾರೆ. ಆದುದರಿಂದಲೇ, ಅವರು ತಮ್ಮ ಧರ್ಮದ ಮೂಲಭೂತ ವಿಷಯಗಳನ್ನು ತಿಳಿದುಕೊಂಡು, ತೃಪ್ತರಾಗಿ ಸುಮ್ಮನಿರುವುದಿಲ್ಲ. ಅವರಿಗೆ ಸತತವಾಗಿ ಮುಂದುವರಿಯುವ ವೈಯಕ್ತಿಕ ಅಭ್ಯಾಸ ಮತ್ತು ಬೈಬಲ್‌ ವಾಚನದ ಕಾರ್ಯಕ್ರಮವಿದೆ. ಒಬ್ಬ ವ್ಯಕ್ತಿಯು ಯೆಹೋವನ ಸಾಕ್ಷಿಗಳೊಂದಿಗೆ ಎಷ್ಟು ಹೆಚ್ಚು ಸಮಯ ಸಹವಾಸಮಾಡುತ್ತಾನೊ, ಬೈಬಲ್‌ನಲ್ಲಿ ಪ್ರಕಟಿಸಲ್ಪಟ್ಟಿರುವ ದೇವರ ಮತ್ತು ಆತನ ಚಿತ್ತದ ಕುರಿತಾಗಿ ಅವನು ಅಷ್ಟೇ ಹೆಚ್ಚಿನ ವಿಷಯಗಳನ್ನು ಕಲಿಯುತ್ತಾನೆ.

ಅಂಥ ಜ್ಞಾನವು, ಜನರಿಂದ ಸಂತೋಷವನ್ನು ದೋಚಿಕೊಳ್ಳುವ ಮೂಢನಂಬಿಕೆಗಳು ಮತ್ತು ಹಾನಿಕರ ವಿಚಾರಗಳಂಥ ಸಂಗತಿಗಳಿಂದ ಯೆಹೋವನ ಸಾಕ್ಷಿಗಳನ್ನು ಮುಕ್ತಗೊಳಿಸುತ್ತದೆ. ಯೇಸು ಹೇಳಿದ್ದು: “ಸತ್ಯವು ನಿಮ್ಮನ್ನು ಬಿಡುಗಡೆಮಾಡುವದು.” ಮತ್ತು ಇದು ಸತ್ಯವೆಂದು ಯೆಹೋವನ ಸಾಕ್ಷಿಗಳು ಕಂಡುಕೊಂಡಿದ್ದಾರೆ. (ಯೋಹಾನ 8:32) ಒಂದು ಸಮಯದಲ್ಲಿ ಪ್ರೇತಾತ್ಮವಾದವನ್ನು ಆಚರಿಸುತ್ತಿದ್ದ ಫರ್ನಾಂಡೊ ಎಂಬವನು ಹೇಳುವುದು: “ನಿತ್ಯಜೀವದ ಕುರಿತಾಗಿ ಕಲಿಯುವುದು ನನಗೆ ತುಂಬ ನೆಮ್ಮದಿಯನ್ನು ಕೊಟ್ಟಿತು. ಯಾಕೆಂದರೆ ಒಂದೊ ನಾನು ಇಲ್ಲವೇ ನನ್ನ ಹೆತ್ತವರು ಸಾಯುವೆವು ಎಂಬ ಹೆದರಿಕೆ ನನ್ನನ್ನು ಸದಾ ಕಾಡುತ್ತಿತ್ತು.” ಆದರೆ ಸತ್ಯವು, ಸತ್ತವರ ಆತ್ಮಗಳು ಮತ್ತು ಮರಣಾನಂತರದ ಜೀವಿತದ ಕುರಿತಾದ ಭಯದಿಂದ ಫರ್ನಾಂಡೋನನ್ನು ಬಿಡುಗಡೆಗೊಳಿಸಿತು.

ಬೈಬಲ್‌ನಲ್ಲಿ ಪರದೈಸಿನಲ್ಲಿನ ಜೀವನವನ್ನು ದೇವರ ಜ್ಞಾನದೊಂದಿಗೆ ಸಮೀಪವಾಗಿ ಜೋಡಿಸಲಾಗಿದೆ. ಪ್ರವಾದಿಯಾದ ಯೆಶಾಯನು ಹೇಳಿದ್ದು: “ನನ್ನ ಪರಿಶುದ್ಧ ಪರ್ವತದಲ್ಲೆಲ್ಲಾ ಯಾರೂ ಕೇಡು ಮಾಡುವದಿಲ್ಲ, ಯಾರೂ ಹಾಳುಮಾಡುವದಿಲ್ಲ; ಸಮುದ್ರದಲ್ಲಿ ನೀರು ಹೇಗೋ ಹಾಗೆಯೇ ಭೂಮಿಯಲ್ಲಿ ಯೆಹೋವನ ಜ್ಞಾನವು ತುಂಬಿಕೊಂಡಿರುವದು.”​—ಯೆಶಾಯ 11:9.

ಯೆಶಾಯನಿಂದ ಮುಂತಿಳಿಸಲ್ಪಟ್ಟ ಆ ಶಾಂತಿಯನ್ನು ತರಲು ಕೇವಲ ಜ್ಞಾನವಷ್ಟೇ ಸಾಕಾಗುವುದಿಲ್ಲವೆಂಬುದು ನಿಜ. ಕಲಿತಂಥ ವಿಷಯಕ್ಕನುಗುಣವಾಗಿ ಕ್ರಿಯೆಗೈಯುವುದು ಹೆಚ್ಚು ಪ್ರಾಮುಖ್ಯ. ಫರ್ನಾಂಡೊ ಹೀಗಂದನು: “ಒಬ್ಬ ವ್ಯಕ್ತಿಯು ಆತ್ಮದ ಫಲಗಳನ್ನು ಬೆಳೆಸಿಕೊಳ್ಳುವಾಗ, ಅವನು ಆತ್ಮಿಕ ಪರದೈಸಿಗೆ ಏನನ್ನೊ ಕೂಡಿಸುತ್ತಾನೆ.” ಫರ್ನಾಂಡೊ ಇಲ್ಲಿ, ಅಪೊಸ್ತಲ ಪೌಲನ ಮಾತುಗಳಿಗೆ ಸೂಚಿಸಿ ಮಾತಾಡುತ್ತಿದ್ದನು. ಒಬ್ಬ ಕ್ರೈಸ್ತನು ಬೆಳೆಸಿಕೊಳ್ಳಬೇಕಾದ ಒಳ್ಳೆಯ ಗುಣಗಳನ್ನೇ ಪೌಲನು ‘ದೇವರಾತ್ಮದ ಫಲ’ ಎಂದು ಕರೆದನು. ಆ ಫಲಗಳನ್ನು ಅವನು ಹೀಗೆ ಪಟ್ಟಿಮಾಡಿದನು: “ಪ್ರೀತಿ ಸಂತೋಷ ಸಮಾಧಾನ ದೀರ್ಘಶಾಂತಿ ದಯೆ ಉಪಕಾರ ನಂಬಿಕೆ ಸಾಧುತ್ವ ಶಮೆದಮೆ.”​—ಗಲಾತ್ಯ 5:22, 23.

ಯಾವ ಸಮುದಾಯದಲ್ಲಿ ಜನರು ಇಂಥ ಗುಣಗಳನ್ನು ವಿಕಸಿಸಲು ಪ್ರಯತ್ನಿಸುತ್ತಾರೊ, ಅಂಥ ಸಮುದಾಯದಲ್ಲಿ ಸಹವಾಸಮಾಡುವಾಗ ನಿಜವಾಗಿಯೂ ಒಂದು ಪರದೈಸಿನಲ್ಲಿದ್ದಂತೆ ಅನಿಸುವುದೇಕೆ ಎಂಬುದನ್ನು ನೀವು ಈಗ ಅರ್ಥಮಾಡಬಲ್ಲಿರೊ? ಪ್ರವಾದಿಯಾದ ಚೆಫನ್ಯನು ಮುಂತಿಳಿಸಿದಂತಹ ಆತ್ಮಿಕ ಪರದೈಸವು ಅಂಥ ಜನರ ನಡುವೆ ಇರುವುದು. ಅವನಂದದ್ದು: “[ಅವರು] ಅನ್ಯಾಯವನ್ನು ಮಾಡರು, ಸುಳ್ಳಾಡರು; ಅವರ ಬಾಯಲ್ಲಿ, ಮೋಸದ ನಾಲಿಗೆಯು ಇರದು; [ಮಂದೆಯಂತೆ] ಮೇದು ಮಲಗಿಕೊಳ್ಳುವರು, ಅವರನ್ನು ಯಾರೂ ಹೆದರಿಸರು.”​—ಚೆಫನ್ಯ 3:13.

ಪ್ರೀತಿಯ ಅತಿ ಪ್ರಮುಖ ಪಾತ್ರ

ಪೌಲನು ತಿಳಿಸಿದಂಥ ಆತ್ಮದ ಫಲಗಳಲ್ಲಿ ಮೊದಲನೆಯದು ಪ್ರೀತಿ ಎಂಬುದನ್ನು ನೀವು ಗಮನಿಸಿರಬಹುದು. ಬೈಬಲ್‌ ಈ ಗುಣದ ಕುರಿತಾಗಿ ಬಹಳಷ್ಟನ್ನು ತಿಳಿಸುತ್ತದೆ. ಯೇಸು ಹೇಳಿದ್ದು: “ನಿಮ್ಮೊಳಗೆ ಒಬ್ಬರ ಮೇಲೊಬ್ಬರಿಗೆ ಪ್ರೀತಿಯಿದ್ದರೆ ಎಲ್ಲರೂ ನಿಮ್ಮನ್ನು ನನ್ನ ಶಿಷ್ಯರೆಂದು ತಿಳುಕೊಳ್ಳುವರು.” (ಯೋಹಾನ 13:35) ಯೆಹೋವನ ಸಾಕ್ಷಿಗಳು ಯಾವುದೇ ತಪ್ಪನ್ನು ಮಾಡದ ಪರಿಪೂರ್ಣ ಜನರಲ್ಲ ನಿಜ. ಹೇಗೆ ಯೇಸುವಿನ ಅಪೊಸ್ತಲರ ನಡುವೆ ಇತ್ತೊ ಹಾಗೆಯೇ, ಅವರೊಳಗೂ ಕೆಲವೊಮ್ಮೆ ಮನಸ್ತಾಪಗಳು ಇರುತ್ತವೆ. ಆದರೆ ವಾಸ್ತವದಲ್ಲಿ ಅವರು ಪರಸ್ಪರರನ್ನು ನಿಜವಾಗಿಯೂ ಪ್ರೀತಿಸುತ್ತಾರೆ, ಮತ್ತು ಈ ಗುಣವನ್ನು ವಿಕಸಿಸಿಕೊಳ್ಳಲು ಅವರು ಪವಿತ್ರಾತ್ಮದ ಬೆಂಬಲಕ್ಕಾಗಿ ಪ್ರಾರ್ಥಿಸುತ್ತಾರೆ.

ಇದರ ಫಲಿತಾಂಶವಾಗಿ, ಅವರ ಸಹವಾಸವು ಅಪೂರ್ವವಾದದ್ದು. ಅವರೊಳಗೆ ಯಾವುದೇ ರೀತಿಯ ಬಣ ಪದ್ಧತಿ ಅಥವಾ ವಿಭಜನಾತ್ಮಕ ರಾಷ್ಟ್ರೀಯತೆಯು ಇಲ್ಲ. ವಾಸ್ತವದಲ್ಲಿ, 20ನೆಯ ಶತಮಾನದ ಕೊನೆಯ ವರ್ಷಗಳಲ್ಲಿ ಕುಲಸಂಬಂಧಿತ ಹತ್ಯೆ ಮತ್ತು ಜಾತೀಯ ಸಂಹಾರವು ನಡೆದಂಥ ಸ್ಥಳಗಳಲ್ಲಿದ್ದ ಸಾಕ್ಷಿಗಳು ತಮ್ಮ ಸ್ವಂತ ಜೀವವನ್ನು ಅಪಾಯಕ್ಕೊಳಪಡಿಸಿ ಪರಸ್ಪರರ ಜೀವಗಳನ್ನು ಸಂರಕ್ಷಿಸಿದರು. ಅವರು ‘ಸಕಲ ಜನಾಂಗ ಕುಲ ಪ್ರಜೆಗಳು, ಸಕಲ ಭಾಷೆಗಳನ್ನಾಡುವವರು’ ಆಗಿದ್ದರೂ, ಅವರು ಐಕ್ಯರಾಗಿರುತ್ತಾರೆ. ಇದನ್ನು ನೀವು ಪ್ರತ್ಯಕ್ಷವಾಗಿ ನೋಡುವ ವರೆಗೂ ನಂಬಲಿಕ್ಕೆ ಕಷ್ಟವಾಗಬಹುದು.​—ಪ್ರಕಟನೆ 7:9.

ದೇವರ ಚಿತ್ತವನ್ನು ಮಾಡುವವರ ನಡುವೆ ಪರದೈಸ್‌

ಆತ್ಮಿಕ ಪರದೈಸಿನಲ್ಲಿ ಯಾವುದೇ ರೀತಿಯ ಲೋಭ, ಅನೈತಿಕತೆ ಮತ್ತು ಸ್ವಾರ್ಥಕ್ಕೆ ಸ್ಥಳವಿಲ್ಲ. ಕ್ರೈಸ್ತರಿಗೆ ಹೀಗೆ ಹೇಳಲಾಗಿದೆ: “ಇಹಲೋಕದ ನಡವಳಿಕೆಯನ್ನು ಅನುಸರಿಸದೆ ನೂತನಮನಸ್ಸನ್ನು ಹೊಂದಿಕೊಂಡು ಪರಲೋಕಭಾವದವರಾಗಿರಿ. ಹೀಗಾದರೆ ದೇವರ ಚಿತ್ತಕ್ಕನುಸಾರವಾದದ್ದು ಅಂದರೆ ಉತ್ತಮವಾದದ್ದೂ ಮೆಚ್ಚಿಕೆಯಾದದ್ದೂ ದೋಷವಿಲ್ಲದ್ದೂ ಯಾವ ಯಾವದೆಂದು ವಿವೇಚಿಸಿ ತಿಳುಕೊಳ್ಳುವಿರಿ.” (ರೋಮಾಪುರ 12:2) ನಾವು ಶುದ್ಧವಾದ, ನೈತಿಕ ಜೀವಿತಗಳನ್ನು ನಡೆಸಿ, ಇನ್ನಿತರ ವಿಧಗಳಲ್ಲಿ ದೇವರ ಚಿತ್ತವನ್ನು ಮಾಡುವಾಗ, ನಾವು ಆತ್ಮಿಕ ಪರದೈಸನ್ನು ಕಟ್ಟಲು ಸಹಾಯಮಾಡುತ್ತೇವೆ ಮತ್ತು ನಮ್ಮ ಸ್ವಂತ ಸಂತೋಷಕ್ಕೂ ಹೆಚ್ಚನ್ನು ಕೂಡಿಸುತ್ತೇವೆ. ಇದು ಸತ್ಯವೆಂದು ಕಾರ್ಲಾಳಿಗೆ ತಿಳಿದುಬಂತು. ಅವಳನ್ನುವುದು: “ಆರ್ಥಿಕ ರೀತಿಯಲ್ಲಿ ನಾನು ನನ್ನ ಸ್ವಂತ ಕಾಲುಗಳ ಮೇಲೆ ನಿಂತುಕೊಳ್ಳಲಿಕ್ಕಾಗಿ ಕಠಿನ ಪರಿಶ್ರಮ ಮಾಡುವಂತೆ ನನ್ನ ತಂದೆ ಕಲಿಸಿದರು. ವಿಶ್ವವಿದ್ಯಾನಿಲಯದ ವ್ಯಾಸಂಗವು ನನಗೆ ಭದ್ರತೆಯ ಅನಿಸಿಕೆಯನ್ನು ಕೊಟ್ಟರೂ, ಕುಟುಂಬದಲ್ಲಿನ ಐಕ್ಯದ ಕೊರತೆ ಮತ್ತು ಕೇವಲ ದೇವರ ವಾಕ್ಯದ ಜ್ಞಾನವು ನಮಗೆ ಕೊಡಬಲ್ಲ ಭದ್ರತೆಯ ಕೊರತೆಯು ನನಗೆ ತುಂಬ ಭಾಸವಾಗುತ್ತಿತ್ತು.”

ಆತ್ಮಿಕ ಪರದೈಸಿನಲ್ಲಿ ಆನಂದಿಸುವುದರಿಂದ, ಜೀವಿತದ ಸಮಸ್ಯೆಗಳು ಮಾಯವಾಗುವುದಿಲ್ಲ ನಿಜ. ಆದುದರಿಂದ ಕ್ರೈಸ್ತರು ಈಗಲೂ ಅಸ್ವಸ್ಥರಾಗುತ್ತಾರೆ. ಅವರು ಯಾವ ದೇಶದಲ್ಲಿ ಜೀವಿಸುತ್ತಿದ್ದಾರೊ ಅದು ಅಂತರ್ಯುದ್ಧದಲ್ಲಿ ಸಿಲುಕಿರಬಹುದು. ಅನೇಕರು ಬಡವರೂ ಆಗಿದ್ದಾರೆ. ಹೀಗಿದ್ದರೂ, ಆತ್ಮಿಕ ಪರದೈಸಿನ ಒಂದು ಮುಖ್ಯ ಭಾಗವಾಗಿರುವ, ಯೆಹೋವ ದೇವರೊಂದಿಗಿನ ಒಂದು ಆಪ್ತ ಸಂಬಂಧವು, ನಾವು ಬೆಂಬಲಕ್ಕಾಗಿ ಆತನ ಕಡೆಗೆ ನೋಡಬಲ್ಲೆವೆಂಬುದನ್ನು ಅರ್ಥೈಸುತ್ತದೆ. ನಾವು ‘ನಮ್ಮ ಚಿಂತಾಭಾರವನ್ನು ಆತನ ಮೇಲೆ ಹಾಕುವಂತೆ’ ಆತನು ನಮ್ಮನ್ನು ಆಮಂತ್ರಿಸುತ್ತಾನೆ. ಮತ್ತು ತಮ್ಮ ಅತಿ ಕಷ್ಟಕರವಾದ ಸನ್ನಿವೇಶಗಳಲ್ಲಿ ದೇವರು ತಮ್ಮನ್ನು ಅದ್ಭುತವಾಗಿ ಬೆಂಬಲಿಸಿರುವುದರ ಕುರಿತಾಗಿ ಅನೇಕರು ಸಾಕ್ಷಿಯನ್ನು ಕೊಡಬಲ್ಲರು. (ಕೀರ್ತನೆ 55:22; 86:​16, 17) ‘ಕಾರ್ಗತ್ತಲಿನ ಕಣಿವೆಯಲ್ಲೂ’ ತನ್ನ ಆರಾಧಕರೊಂದಿಗೆ ಇರುವ ವಾಗ್ದಾನವನ್ನು ದೇವರು ಮಾಡುತ್ತಾನೆ. (ಕೀರ್ತನೆ 23:4) ನಮ್ಮನ್ನು ಬೆಂಬಲಿಸಲಿಕ್ಕಾಗಿ ದೇವರು ಸದಾ ಸಿದ್ಧನಾಗಿದ್ದಾನೆಂಬ ಭರವಸೆಯು, ನಮ್ಮ “ಎಲ್ಲ ಗ್ರಹಿಕೆಯನ್ನು ಮೀರುವ ದೇವಶಾಂತಿ”ಯನ್ನು ಕಾಪಾಡಿಕೊಳ್ಳುವಂತೆ ಸಹಾಯಮಾಡುತ್ತದೆ. ಈ ದೇವಶಾಂತಿಯೇ, ಆತ್ಮಿಕ ಪರದೈಸಿನ ಕೀಲಿಕೈಯಾಗಿದೆ.​—ಫಿಲಿಪ್ಪಿ 4:7.

ಆತ್ಮಿಕ ಪರದೈಸಕ್ಕೆ ನಮ್ಮ ಕಾಣಿಕೆ

ಹೆಚ್ಚಿನ ಜನರಿಗೆ ಒಂದು ಉದ್ಯಾನ ಅಥವಾ ತೋಟಕ್ಕೆ ಹೋಗುವುದೆಂದರೆ ತುಂಬ ಖುಷಿ. ಅವರು ಅಲ್ಲಿ ಸುತ್ತಾಡಲು ಅಥವಾ ಬಹುಶಃ ಬೆಂಚಿನ ಮೇಲೆ ಕುಳಿತುಕೊಂಡು ಸುತ್ತುಮುತ್ತಲಿನ ಪರಿಸರವನ್ನು ಆನಂದಿಸಲು ಇಷ್ಟಪಡುತ್ತಾರೆ. ಅದೇ ರೀತಿಯಲ್ಲಿ ಅನೇಕರು ಯೆಹೋವನ ಸಾಕ್ಷಿಗಳೊಂದಿಗೆ ಸಹವಾಸಮಾಡುವುದರಲ್ಲಿ ಆನಂದಿಸುತ್ತಾರೆ. ಅವರೊಂದಿಗೆ ಸಹವಾಸಮಾಡುವುದು ತುಂಬ ಉಲ್ಲಾಸದಾಯಕ, ನೆಮ್ಮದಿದಾಯಕ ಮತ್ತು ನವಚೈತನ್ಯವನ್ನು ಉಂಟುಮಾಡುವಂಥದ್ದಾಗಿದೆ ಎಂಬುದನ್ನು ಅವರು ಕಂಡುಕೊಳ್ಳುತ್ತಾರೆ. ಆದರೆ ಒಂದು ಸುಂದರವಾದ ತೋಟವು ಸುಂದರವಾಗಿ ಉಳಿಯಬೇಕಾದರೆ, ಅದರ ಆರೈಕೆಮಾಡಿ ಕಾಪಾಡಿಕೊಳ್ಳುವ ಅಗತ್ಯವಿದೆ. ಅದೇ ರೀತಿಯಲ್ಲಿ, ಇಂದು ಒಂದು ಪರದೈಸಾಗಿರದ ಈ ಲೋಕದಲ್ಲಿ, ಆತ್ಮಿಕ ಪರದೈಸ್‌ ಅಸ್ತಿತ್ವದಲ್ಲಿರಲು ಏಕಮಾತ್ರ ಕಾರಣವೇನೆಂದರೆ ಯೆಹೋವನ ಸಾಕ್ಷಿಗಳು ಅದನ್ನು ಬೆಳೆಸುತ್ತಾರೆ ಮತ್ತು ದೇವರು ಅವರ ಪ್ರಯತ್ನಗಳನ್ನು ಆಶೀರ್ವದಿಸುತ್ತಾನೆ. ಆ ಪರದೈಸಿಗೆ ನೀವು ಹೇಗೆ ಒಂದು ಅರ್ಥಭರಿತ ಕಾಣಿಕೆಯನ್ನು ಕೊಡಬಹುದು?

ಮೊದಲನೆಯದಾಗಿ, ನೀವು ಯೆಹೋವನ ಸಾಕ್ಷಿಗಳ ಸಭೆಯೊಂದಿಗೆ ಸಹವಾಸವನ್ನು ಮಾಡಬೇಕಾಗಿದೆ. ಅವರೊಂದಿಗೆ ಬೈಬಲನ್ನು ಅಭ್ಯಾಸಿಸಬೇಕು ಮತ್ತು ಆತ್ಮಿಕ ಪರದೈಸಿನ ಆಧಾರವಾಗಿರುವ ಬೈಬಲ್‌ ಜ್ಞಾನವನ್ನು ಗಳಿಸಬೇಕು. ಕಾರ್ಲಾ ಗಮನಿಸಿದ್ದು: “ಆತ್ಮಿಕ ಆಹಾರವಿಲ್ಲದೆ ಆತ್ಮಿಕ ಪರದೈಸ್‌ ಇರಸಾಧ್ಯವಿಲ್ಲ.” ಇದರಲ್ಲಿ ದೇವರ ವಾಕ್ಯವನ್ನು ಕ್ರಮವಾಗಿ ಓದುವುದು ಮತ್ತು ನೀವು ಓದಿದಂಥ ವಿಷಯದ ಕುರಿತಾಗಿ ಯೋಚಿಸುವುದು ಸೇರಿರುತ್ತದೆ. ನೀವು ಗಳಿಸಿದಂತಹ ಜ್ಞಾನವು ನಿಮ್ಮನ್ನು ಯೆಹೋವ ದೇವರ ಸನಿಹಕ್ಕೆ ತರುವುದು ಮತ್ತು ನೀವು ಆತನನ್ನು ಪ್ರೀತಿಸಲಾರಂಭಿಸುವಿರಿ. ಅಲ್ಲದೆ, ನೀವು ಆತನೊಂದಿಗೆ ಪ್ರಾರ್ಥನೆಯಲ್ಲಿ ಮಾತಾಡಿ ಮಾರ್ಗದರ್ಶನವನ್ನು ಕೇಳಲು ಮತ್ತು ನೀವು ಆತನ ಚಿತ್ತವನ್ನು ಮಾಡುತ್ತಿರುವಾಗ ನಿಮ್ಮನ್ನು ಬೆಂಬಲಿಸಲು ಆತನ ಆತ್ಮಕ್ಕಾಗಿ ಕೇಳಲು ಕಲಿಯುವಿರಿ. ನಾವು ಪ್ರಾರ್ಥನೆಯಲ್ಲಿ ಪಟ್ಟುಹಿಡಿಯಬೇಕೆಂದು ಯೇಸು ನಮಗೆ ಹೇಳಿದನು. (ಲೂಕ 11:​9-13) ಅಪೊಸ್ತಲ ಪೌಲನು ಹೇಳಿದ್ದು: “ಎಡೆಬಿಡದೆ ಪ್ರಾರ್ಥನೆಮಾಡಿರಿ.” (1 ಥೆಸಲೊನೀಕ 5:17) ದೇವರು ನಮಗೆ ಕಿವಿಗೊಡುತ್ತಾನೆಂಬ ಪೂರ್ಣ ಭರವಸೆಯೊಂದಿಗೆ ಪ್ರಾರ್ಥನೆಯಲ್ಲಿ ದೇವರೊಂದಿಗೆ ಮಾತಾಡುವ ಸುಯೋಗವು, ಆತ್ಮಿಕ ಪರದೈಸಿನ ಒಂದು ಪ್ರಮುಖ ಭಾಗವಾಗಿದೆ.

ಕಾಲ ಉರುಳಿದಂತೆ, ನೀವು ಕಲಿತಂಥ ವಿಷಯಗಳಿಂದಾಗಿ ನಿಮ್ಮ ಜೀವಿತವು ಹೆಚ್ಚು ಉತ್ತಮಗೊಳ್ಳುವುದು, ಮತ್ತು ನೀವು ಇತರರೊಂದಿಗೂ ಅದರ ಕುರಿತಾಗಿ ಮಾತಾಡಲು ಬಯಸುವಿರಿ. ಆಗ ನೀವು ಯೇಸುವಿನ ಈ ಆಜ್ಞೆಗೆ ವಿಧೇಯರಾಗಲು ಶಕ್ತರಾಗುವಿರಿ: “ನಿಮ್ಮ ಬೆಳಕು ಜನರ ಮುಂದೆ ಪ್ರಕಾಶಿಸಲಿ. ಹೀಗಾದರೆ ಅವರು ನಿಮ್ಮ ಒಳ್ಳೇ ಕ್ರಿಯೆಗಳನ್ನು ನೋಡಿ ಪರಲೋಕದಲ್ಲಿರುವ ನಿಮ್ಮ ತಂದೆಯನ್ನು ಕೊಂಡಾಡುವರು.” (ಮತ್ತಾಯ 5:16) ಯೆಹೋವ ದೇವರು ಮತ್ತು ಯೇಸು ಕ್ರಿಸ್ತನ ಕುರಿತಾದ ಜ್ಞಾನವನ್ನು ಇತರರೊಂದಿಗೆ ಹಂಚಿಕೊಳ್ಳುವುದು ಮತ್ತು ಅವರು ಮಾನವಕುಲದ ಕಡೆಗೆ ತೋರಿಸಿರುವ ಮಹಾ ಪ್ರೀತಿಯನ್ನು ಕೊಂಡಾಡುವುದು ತುಂಬ ಸಂತೋಷವನ್ನು ತರುತ್ತದೆ.

ಇಡೀ ಭೂಮಿಯು ಒಂದು ಪರದೈಸ್‌ ಆಗಲಿರುವ ಸಮಯವು ತುಂಬ ಹತ್ತಿರವಿದೆ. ಅದು, ಮಾಲಿನ್ಯದಿಂದ ಮುಕ್ತವಾಗಿರುವ ತೋಟದಂಥ ಸ್ಥಳವಾಗಿರುವುದು ಮತ್ತು ನಂಬಿಗಸ್ತ ಮಾನವಕುಲಕ್ಕಾಗಿ ಸೂಕ್ತವಾದ ಬೀಡಾಗಿರುವುದು. ಈ ‘ಕಠಿನಕಾಲಗಳಲ್ಲಿ’ ಆತ್ಮಿಕ ಪರದೈಸಿನ ಅಸ್ತಿತ್ವವು, ದೇವರ ಶಕ್ತಿಯ ಒಂದು ರುಜುವಾತಾಗಿದೆ. ಅಷ್ಟುಮಾತ್ರವಲ್ಲದೆ, ಅದು ಭವಿಷ್ಯದಲ್ಲಿ ದೇವರು ಏನನ್ನು ಮಾಡಸಾಧ್ಯವಿದೆ ಮತ್ತು ಏನನ್ನು ಸಾಧಿಸುವನು ಎಂಬುದರ ಮುನ್‌ಸಂಕೇತವಾಗಿದೆ.​—2 ತಿಮೊಥೆಯ 3:1.

ಈಗಲೂ, ಆತ್ಮಿಕ ಪರದೈಸಿನಲ್ಲಿ ಆನಂದಿಸುತ್ತಿರುವವರು, ಯೆಶಾಯ 49:10ರ ಆತ್ಮಿಕ ನೆರವೇರಿಕೆಯನ್ನು ಅನುಭವಿಸುತ್ತಿದ್ದಾರೆ: “ಅವರಿಗೆ ಹಸಿವೆ ಬಾಯಾರಿಕೆಗಳು ಆಗವು. ಝಳವೂ ಬಿಸಿಲೂ ಬಡಿಯವು; ಅವರನ್ನು ಕರುಣಿಸುವಾತನು ದಾರಿತೋರಿಸುತ್ತಾ ನೀರುಕ್ಕುವ ಒರತೆಗಳ ಬಳಿಯಲ್ಲಿ ನಡಿಸುವನು.” ಇದರ ಸತ್ಯತೆಯನ್ನು ಜೂಜೆ ತಿಳಿಸುವನು. ಅವನೊಬ್ಬ ಪ್ರಸಿದ್ಧ ಸಂಗೀತಗಾರನಾಗುವ ಕನಸನ್ನು ಕಾಣುತ್ತಿದ್ದನು. ಆದರೆ ಅವನು ಕ್ರೈಸ್ತ ಸಭೆಯೊಂದಿಗೆ ದೇವರ ಸೇವೆಯನ್ನು ಮಾಡುವುದರಲ್ಲಿ ಹೆಚ್ಚಿನ ತೃಪ್ತಿಯನ್ನು ಕಂಡುಕೊಂಡನು. ಅವನು ಹೇಳುವುದು: “ಈಗ ನನಗೊಂದು ಅರ್ಥಪೂರ್ಣ ಜೀವನವಿದೆ. ಕ್ರೈಸ್ತ ಸಹೋದರತ್ವದಲ್ಲಿ ನನಗೆ ಸುರಕ್ಷೆಯ ಭಾವನೆಯಿದೆ. ಮತ್ತು ನಾನು ಭರವಸೆಯನ್ನಿಡಬಲ್ಲ ಪ್ರೀತಿಯ ತಂದೆಯೋಪಾದಿ ನನಗೆ ಯೆಹೋವನ ಪರಿಚಯವಾಗಿದೆ.” ಜೂಜೆ ಹಾಗೂ ಅವನಂತೆಯೇ ಇನ್ನಿತರ ಲಕ್ಷಾಂತರ ಜನರ ಸಂತೋಷವು, ಕೀರ್ತನೆ 64:10ರಲ್ಲಿ ಚೆನ್ನಾಗಿ ವರ್ಣಿಸಲ್ಪಟ್ಟಿದೆ: “ಸದ್ಭಕ್ತರು ಯೆಹೋವನಲ್ಲಿ ಆನಂದಪಟ್ಟು ಆತನನ್ನೇ ಆಶ್ರಯಿಸಿಕೊಳ್ಳುವರು; ಸರಳಹೃದಯರೆಲ್ಲರೂ ಹಿಗ್ಗುವರು.” ಆ ಆತ್ಮಿಕ ಪರದೈಸಿನ ಎಷ್ಟೊಂದು ಉತ್ತಮ ವರ್ಣನೆ!

[ಪಾದಟಿಪ್ಪಣಿ]

^ ಪ್ಯಾರ. 2 ಈ ಲೇಖನದಲ್ಲಿ ಉಲ್ಲೇಖಿಸಲ್ಪಟ್ಟಿರುವವರು ನೈಜ ವ್ಯಕ್ತಿಗಳಾಗಿದ್ದಾರೆ. ಆದರೆ ಕೆಲವೊಂದು ಹೆಸರುಗಳನ್ನು ಬದಲಾಯಿಸಲಾಗಿದೆ.

[ಪುಟ 10ರಲ್ಲಿರುವ ಚಿತ್ರ]

ಆತ್ಮಿಕ ಪರದೈಸಿನಲ್ಲಿ ಆನಂದಿಸುತ್ತಿರುವಾಗ, ಅದನ್ನು ವಿಸ್ತರಿಸಲಿಕ್ಕಾಗಿಯೂ ಸಹಾಯಮಾಡೋಣ!