ನಿಜವಾದ ಸಂತೋಷವನ್ನು ಹೇಗೆ ಕಂಡುಕೊಳ್ಳುವುದು?
ನಿಜವಾದ ಸಂತೋಷವನ್ನು ಹೇಗೆ ಕಂಡುಕೊಳ್ಳುವುದು?
ಬೌದ್ಧ ಮತದ ಒಬ್ಬ ಮುಖಂಡರಾದ ದಲೈ ಲಾಮಾ ಹೇಳಿದ್ದು: “ಸಂತೋಷವನ್ನು ಹುಡುಕುವುದೇ ನಮ್ಮ ಜೀವನದ ಮೂಲ ಉದ್ದೇಶವಾಗಿದೆ ಎಂದು ನಾನು ನಂಬುತ್ತೇನೆ.” ಮನಸ್ಸು ಹಾಗೂ ಹೃದಯವನ್ನು ತರಬೇತಿಗೊಳಿಸುವ ಮೂಲಕ ಅಥವಾ ಶಿಸ್ತುಗೊಳಿಸುವ ಮೂಲಕ ಸಂತೋಷವನ್ನು ಪಡೆದುಕೊಳ್ಳಬಹುದು ಎಂದು ತಾನು ನಂಬುತ್ತೇನೆಂದು ತದನಂತರ ವಿವರಿಸಿದರು. ಅವರು ಹೇಳಿದ್ದು: “ಸಂಪೂರ್ಣವಾದ ಸಂತೋಷವನ್ನು ಗಳಿಸಲು ಬೇಕಾದ ಮೂಲಭೂತ ಸಾಧನ ಮನಸ್ಸು ಮಾತ್ರವೇ.” ದೇವರಲ್ಲಿ ನಂಬಿಕೆಯನ್ನಿಡುವುದು ಅನಾವಶ್ಯಕವಾದದ್ದು ಎಂಬುದು ಅವರ ಅನಿಸಿಕೆ. *
ಇದಕ್ಕೆ ತದ್ವಿರುದ್ಧವಾಗಿ, ಯೇಸುವನ್ನು ಪರಿಗಣಿಸಿರಿ. ಇವನಿಗೆ ದೇವರಲ್ಲಿ ಬಲವಾದ ನಂಬಿಕೆಯಿತ್ತು ಮತ್ತು ಶತಮಾನಗಳಿಂದ ಇವನ ಬೋಧನೆಗಳು ಕೋಟ್ಯಂತರ ಜನರ ಜೀವನದ ಮೇಲೆ ಪರಿಣಾಮ ಬೀರಿವೆ. ಮಾನವನ ಸಂತೋಷದಲ್ಲಿ ಯೇಸು ಆಸಕ್ತನಾಗಿದ್ದನು. ತನ್ನ ಪ್ರಸಿದ್ಧವಾದ ಪರ್ವತ ಪ್ರಸಂಗವನ್ನು ಅವನು ಒಂಬತ್ತು ಧನ್ಯವಾಕ್ಯಗಳಿಂದ ಪ್ರಾರಂಭಿಸಿದನು. ಆ ಒಂಬತ್ತು ಅಭಿವ್ಯಕ್ತಿಗಳು “. . . ಸಂತೋಷಿತನು” ಎಂದು ಕೊನೆಗೊಳ್ಳುತ್ತವೆ. (ಮತ್ತಾಯ 5:1-12, NW) ಅದೇ ಪ್ರಸಂಗದಲ್ಲಿ ತನ್ನ ಕೇಳುಗರು ತಮ್ಮ ಮನಸ್ಸು ಹಾಗೂ ಹೃದಯಗಳನ್ನು ಪರೀಕ್ಷಿಸಿ, ಶುದ್ಧೀಕರಿಸಿ, ಶಿಸ್ತುಗೊಳಿಸಬೇಕೆಂದು ಅವನು ಬೋಧಿಸಿದನು. ಮತ್ತು ಹಿಂಸಾತ್ಮಕ, ಅನೈತಿಕ ಹಾಗೂ ಸ್ವಾರ್ಥ ಯೋಚನೆಗಳನ್ನು ತೆಗೆದುಹಾಕಿ, ಶಾಂತವಾದ, ಶುದ್ಧವಾದ ಹಾಗೂ ಪ್ರೀತಿಭರಿತ ಯೋಚನೆಗಳನ್ನು ಮನಸ್ಸಿನಲ್ಲಿ ತುಂಬಿಸಬೇಕೆಂದು ಬೋಧಿಸಿದನು. (ಮತ್ತಾಯ 5:21, 22, 27, 28; 6:19-21) ತದನಂತರ ಅವನ ಶಿಷ್ಯರಲ್ಲೊಬ್ಬನು ಪ್ರೋತ್ಸಾಹಿಸಿದಂತೆ, ನಾವು “ಯಾವಾವದು ಸತ್ಯವೂ ಮಾನ್ಯವೂ ನ್ಯಾಯವೂ ಶುದ್ಧವೂ ಪ್ರೀತಿಕರವೂ ಮನೋಹರವೂ ಆಗಿದೆಯೋ, ಯಾವದು ಸದ್ಗುಣವಾಗಿದೆಯೋ, ಯಾವದು ಕೀರ್ತಿಗೆ ಯೋಗ್ಯವೋ, ಅವೆಲ್ಲವುಗಳನ್ನೂ ಲಕ್ಷ್ಯಕ್ಕೆ ತಂದು”ಕೊಳ್ಳಬೇಕು.—ಫಿಲಿಪ್ಪಿ 4:8.
ನಿಜವಾದ ಸಂತೋಷವು ಬೇರೆಯವರೊಂದಿಗಿರುವ ಸಂಬಂಧದಲ್ಲೂ ಒಳಗೂಡಿದೆಯೆಂಬುದನ್ನು ಯೇಸು ಅರಿತಿದ್ದನು. ಮಾನವರಾಗಿರುವ ನಾವು ಸ್ವಭಾವತಃ ಸಂಘಜೀವಿಗಳಾಗಿದ್ದೇವೆ. ಆದುದರಿಂದ, ನಮ್ಮನ್ನು ನಾವೇ ಪ್ರತ್ಯೇಕಿಸಿಕೊಳ್ಳುವುದರಿಂದ ಅಥವಾ ನಮ್ಮ ಸುತ್ತಲೂ ಇರುವವರೊಂದಿಗೆ ಸತತವಾಗಿ ಜಗಳವಾಡುವುದರಿಂದ ನಾವು ನಿಜವಾಗಿಯೂ ಸಂತೋಷವುಳ್ಳವರಾಗಿರಲು ಸಾಧ್ಯವಿಲ್ಲ. ನಮ್ಮನ್ನು ಇತರರು ಪ್ರೀತಿಸುತ್ತಾರೆ ಎಂಬ ಅನಿಸಿಕೆಯಿಂದ ಹಾಗೂ ಇತರರನ್ನು ನಾವು ಪ್ರೀತಿಸುವುದರಿಂದ ಸಂತೋಷದಿಂದಿರಬಹುದು. ಯೇಸು ಬೋಧಿಸಿದಂತೆ, ಇಂತಹ ಪ್ರೀತಿಗೆ ಮೂಲಭೂತವಾದದ್ದು ದೇವರೊಂದಿಗಿನ ನಮ್ಮ ಸಂಬಂಧವೇ ಆಗಿದೆ. ಪ್ರಾಮುಖ್ಯವಾಗಿ ಇಲ್ಲಿ, ಯೇಸುವಿನ ಬೋಧನೆ ದಲೈ ಲಾಮಾನ ಬೋಧನೆಯಿಂದ ಭಿನ್ನವಾಗುತ್ತದೆ. ಏಕೆಂದರೆ ದೇವರಿಂದ ಸ್ವತಂತ್ರರಾಗಿ ಮಾನವರು ನಿಜವಾಗಿಯೂ ಸಂತೋಷದಿಂದಿರಸಾಧ್ಯವಿಲ್ಲ ಎಂದು ಯೇಸು ಬೋಧಿಸಿದನು. ಏಕೆ?—ಮತ್ತಾಯ 4:4; 22:37-39.
ನಿಮ್ಮ ಆತ್ಮಿಕ ಅಗತ್ಯಗಳ ಕುರಿತು ಆಲೋಚಿಸಿರಿ
ಧನ್ಯವಾಕ್ಯಗಳಲ್ಲೊಂದು “ತಮ್ಮ ಆತ್ಮಿಕ ಅಗತ್ಯದ ಪ್ರಜ್ಞೆಯುಳ್ಳವರು ಸಂತೋಷಿತರು” ಎಂದಾಗಿದೆ. (ಮತ್ತಾಯ 5:3, NW) ಇದನ್ನು ಯೇಸು ಏಕೆ ಹೇಳಿದನು? ಏಕೆಂದರೆ ಮೃಗಗಳಂತಿರದೆ ನಾವು ಆತ್ಮಿಕ ಅಗತ್ಯಗಳುಳ್ಳವರಾಗಿದ್ದೇವೆ. ದೇವರ ಸ್ವರೂಪದಲ್ಲಿ ಸೃಷ್ಟಿಸಲ್ಪಟ್ಟಿರುವ ಕಾರಣ, ಒಂದಿಷ್ಟು ಮಟ್ಟಿಗೆ ಪ್ರೀತಿ, ನ್ಯಾಯ, ಕರುಣೆ, ಹಾಗೂ ವಿವೇಕದಂತಹ ದೈವಿಕ ಗುಣಗಳನ್ನು ಬೆಳೆಸಿಕೊಳ್ಳುವ ಸ್ಥಿತಿಯಲ್ಲಿದ್ದೇವೆ. (ಆದಿಕಾಂಡ 1:27; ಮೀಕ 6:8; 1 ಯೋಹಾನ 4:8) ನಮ್ಮ ಆತ್ಮಿಕ ಆವಶ್ಯಕತೆಗಳಲ್ಲಿ, ನಮ್ಮ ಜೀವನದಲ್ಲಿ ಉದ್ದೇಶ ಹೊಂದಿರುವುದು ಸಹ ಒಳಗೂಡಿದೆ.
ಇಂತಹ ಆತ್ಮಿಕ ಆವಶ್ಯಕತೆಗಳನ್ನು ನಾವು ಹೇಗೆ ಪೂರೈಸಬಹುದು? ಮಂತ್ರಪಠಣದೊಂದಿಗೆ ಮಾಡುವ ಧ್ಯಾನದಿಂದಲೋ ಅಥವಾ ಕೇವಲ ಆತ್ಮಪರಿಶೋಧನೆಯಿಂದಲೋ ಅಲ್ಲ. ಬದಲಾಗಿ, ಯೇಸು ಹೇಳಿದ್ದು: “ಮನುಷ್ಯನು ರೊಟ್ಟಿತಿಂದ ಮಾತ್ರದಿಂದ ಬದುಕುವದಿಲ್ಲ, ದೇವರ ಬಾಯಿಂದ ಹೊರಡುವ ಪ್ರತಿಯೊಂದು ಮಾತಿನಿಂದಲೂ ಬದುಕುವನು.” (ಮತ್ತಾಯ 4:4) ನಮ್ಮ ಜೀವಕ್ಕೆ ಅತ್ಯಾವಶ್ಯಕವಾದ ‘ಪ್ರತಿಯೊಂದು ಮಾತಿಗೂ’ ದೇವರೇ ಮೂಲನಾಗಿದ್ದಾನೆ ಎಂದು ಯೇಸು ಹೇಳಿದನು ಎಂಬುದನ್ನು ಗಮನಿಸಿರಿ. ಕೆಲವು ಪ್ರಶ್ನೆಗಳನ್ನು ಉತ್ತರಿಸಲು ದೇವರು ಮಾತ್ರ ನಮಗೆ ಸಹಾಯಮಾಡಬಲ್ಲನು. ಜೀವನದ ಉದ್ದೇಶ ಹಾಗೂ ಸಂತೋಷದ ಮಾರ್ಗದ ಕುರಿತು ಹೊಸ ಹೊಸ ಸಿದ್ಧಾಂತಗಳು ತೀವ್ರಗತಿಯಲ್ಲಿ ಹೆಚ್ಚುತ್ತಿರುವುದರಿಂದ, ಪ್ರಾಮುಖ್ಯವಾಗಿ ಇಂದು ಈ ಒಳನೋಟವು ಸಮಯೋಚಿತವಾಗಿದೆ. ಓದುಗರಿಗೆ ಆರೋಗ್ಯ, ಐಶ್ವರ್ಯ ಹಾಗೂ ಸಂತೋಷವನ್ನು ವಾಗ್ದಾನಿಸುವಂತಹ ಪುಸ್ತಕಗಳಿಗಾಗಿ ಪುಸ್ತಕದಂಗಡಿಗಳು ಪ್ರತ್ಯೇಕ ವಿಭಾಗಗಳನ್ನೇ ಮೀಸಲಾಗಿಟ್ಟಿವೆ. ನಿರ್ದಿಷ್ಟವಾಗಿ ಸಂತೋಷದ ಬಗ್ಗೆ ಮಾಹಿತಿಯನ್ನು ನೀಡುವಂತಹ ಇಂಟರ್‌ನೆಟ್ ಸೈಟ್‌ಗಳು ನಿರ್ಮಿಸಲ್ಪಟ್ಟಿವೆ.
ಆದರೂ, ಈ ಕ್ಷೇತ್ರಗಳಲ್ಲಿ ಮಾನವ ಆಲೋಚನೆಗಳು ಅನೇಕ ವೇಳೆ ತಪ್ಪಾಗಿ ಮಾರ್ಗದರ್ಶಿಸಲ್ಪಟ್ಟಿವೆ. ಇವು ಸ್ವಾರ್ಥಪರ ಬಯಕೆಗಳಿಗೆ ಅಥವಾ ಅಹಂಭಾವಕ್ಕೆ ಒತ್ತಾಸೆ ನೀಡುತ್ತವೆ. ಇವು ಸೀಮಿತವಾದ ಜ್ಞಾನ ಹಾಗೂ ಅನುಭವದ ಮೇಲೆ ಅವಲಂಬಿಸಿವೆ ಮತ್ತು ಹಲವಾರು ಭಾರಿ ಸುಳ್ಳಾದ ವಿಷಯಗಳ ಮೇಲೆ ಆಧಾರಿಸಿರುತ್ತವೆ. ಉದಾಹರಣೆಗೆ, ಸ್ವ-ಸಹಾಯ ಪುಸ್ತಕಗಳ ಬರಹಗಾರರ ಬೆಳೆಯುತ್ತಿರುವ ಪ್ರವೃತ್ತಿಯೇನೆಂದರೆ ತಮ್ಮ ಪುಸ್ತಕಗಳನ್ನು “ವಿಕಾಸವಾದ ಮನಶಾಸ್ತ್ರದ” ತತ್ತ್ವದ ಮೇಲಾಧರಿಸಿ ಬರೆಯುವುದೇ ಆಗಿದೆ. ಇದರ ಪ್ರಕಾರ, ಮನುಷ್ಯನು ಪ್ರಾಣಿಯಿಂದ ಬಂದವನೆಂದು ಹೇಳಲ್ಪಡುವ ಕಾರಣ ಮಾನವನ ಭಾವನೆಗಳು ಪಾಶವ ವಂಶದಲ್ಲಿ ಬೇರೂರಿದ್ದಾಗಿದೆ ಎಂದು ನಂಬಲ್ಪಡುತ್ತದೆ. ಸತ್ಯವೇನೆಂದರೆ, ನಮ್ಮ ಸೃಷ್ಟಿಕರ್ತನ ಪಾತ್ರವನ್ನು ನಿರಾಕರಿಸುವಂತಹ ಯಾವುದೇ ತತ್ತ್ವದ ಮೇಲಾಧರಿಸಿ ಸಂತೋಷವನ್ನು ಕಂಡುಹಿಡಿಯಲು ಮಾಡುವ ಯಾವುದೇ ಪ್ರಯತ್ನವು ನಿಷ್ಫಲವಾದದ್ದಾಗಿದೆ. ಮತ್ತು ಇದು ಸಂಪೂರ್ಣವಾದ ಆಶಾಭಂಗಕ್ಕೆ ನಡೆಸುವುದು. ಒಬ್ಬ ಪುರಾತನ ಪ್ರವಾದಿಯು ಹೇಳಿದ್ದು: “ಜ್ಞಾನಿಗಳು ಆಶಾಭಂಗಪಟ್ಟು . . . ಇಗೋ, ಯೆಹೋವನ ಮಾತನ್ನು ನಿರಾಕರಿಸಿದರು; ಅವರ ಜ್ಞಾನವು ಎಷ್ಟರದು?”—ಯೆರೆಮೀಯ 8:9.
ಯೆಹೋವ ದೇವರು ನಮ್ಮ ರಚನೆಯನ್ನು ಅರಿತವನಾಗಿದ್ದಾನೆ ಮತ್ತು ನಮ್ಮನ್ನು ನಿಜವಾಗಿಯೂ ಯಾವುದು ಸಂತೋಷಗೊಳಿಸುವುದೆಂಬುದನ್ನು ಬಲ್ಲವನಾಗಿದ್ದಾನೆ. ಮನುಷ್ಯನು ಭೂಮಿಯಲ್ಲಿ ಏಕೆ ಸೃಷ್ಟಿಸಲ್ಪಟ್ಟನು ಮತ್ತು ಭವಿಷ್ಯತ್ತಿನಲ್ಲಿ ಏನು ಕಾದಿದೆ ಎಂಬುದನ್ನು ಅರಿತವನಾಗಿದ್ದು, ಆ ವಿಚಾರವನ್ನು ಬೈಬಲಿನಲ್ಲಿ ದಾಖಲಿಸುವುದರ ಮೂಲಕ ಅದನ್ನು ನಮ್ಮೊಂದಿಗೆ ಹಂಚಿಕೊಳ್ಳುತ್ತಾನೆ. ಆ ಪ್ರೇರಿತ ಪುಸ್ತಕದಲ್ಲಿ ಅವನು ತಿಳಿಸುವಂಥ ವಿಷಯಗಳು, ನಿತ್ಯಜೀವಕ್ಕೆ ಯೋಗ್ಯರಾದಂಥ ವ್ಯಕ್ತಿಗಳು ಪ್ರತಿಕ್ರಿಯಿಸುವಂತೆ ಪ್ರಚೋದಿಸುತ್ತದೆ ಮತ್ತು ಅವರಿಗೆ ಸಂತೋಷವನ್ನು ಉಂಟುಮಾಡುತ್ತದೆ. (ಲೂಕ 10:21; ಯೋಹಾನ 8:32) ಯೇಸುವಿನ ಇಬ್ಬರು ಶಿಷ್ಯರ ವಿಷಯದಲ್ಲೂ ಹೀಗೆಯೇ ಸಂಭವಿಸಿತು. ಅವನ ಮರಣದಿಂದಾಗಿ ಅವರು ದುಃಖಿತರಾಗಿದ್ದರು. ಮಾನವಕುಲದ ರಕ್ಷಣೆಗಾಗಿರುವ ದೇವರ ಉದ್ದೇಶದಲ್ಲಿ ತನಗಿದ್ದ ಪಾತ್ರದ ಕುರಿತು ಪುನರುತ್ಥಿತ ಯೇಸುವಿನ ಬಾಯಿಂದಲೇ ನೇರವಾಗಿ ಕೇಳಿದ ನಂತರ, “ಆತನು ದಾರಿಯಲ್ಲಿ ನಮ್ಮ ಸಂಗಡ ಮಾತಾಡಿದಾಗಲೂ ಗ್ರಂಥಗಳ ಅರ್ಥವನ್ನು ನಮಗೆ ಬಿಚ್ಚಿಹೇಳಿದಾಗಲೂ ನಮ್ಮ ಹೃದಯವು ನಮ್ಮಲ್ಲಿ ಕುದಿಯಿತಲ್ಲವೇ” ಎಂದು ಹೇಳಿದರು.—ಲೂಕ 24:32.
ಬೈಬಲ್ ಸತ್ಯವು ನಮ್ಮ ಜೀವನವನ್ನು ಮಾರ್ಗದರ್ಶಿಸುವಂತೆ ನಾವು ಅನುಮತಿಸುವಾಗ ಇಂತಹ ಆನಂದವು ಇನ್ನೂ ಹೆಚ್ಚುತ್ತದೆ. ಈ ಸಂಬಂಧದಲ್ಲಿ, ಸಂತೋಷವನ್ನು ಒಂದು ಕಾಮನ ಬಿಲ್ಲಿಗೆ ಹೋಲಿಸಬಹುದು. ಸನ್ನಿವೇಶಗಳು ಅನುಕೂಲಕರವಾಗಿರುವಾಗ ಅದು ಕಾಣಿಸಿಕೊಳ್ಳುತ್ತದೆ. ಆದರೆ ಪರಿಸ್ಥಿತಿ ಅತ್ಯುತ್ತಮವಾಗಿರುವಾಗ ಅದು ಇನ್ನೂ ಪ್ರಜ್ವಲಿಸುತ್ತಾ ಎರಡೆರಡಾಗಿ ಕಾಣಿಸುತ್ತದೆ. ಬೈಬಲ್ ಬೋಧನೆಗಳ ಅನುಸರಣೆಯು ಹೇಗೆ ಹೆಚ್ಚಿನ ಸಂತೋಷವನ್ನು ಕೊಡುತ್ತದೆ ಎಂಬುದನ್ನು ಕೆಲವು ಉದಾಹರಣೆಗಳ ಮೂಲಕ ನಾವು ನೋಡೋಣ.
ನಿಮ್ಮ ಜೀವನವನ್ನು ಸರಳವಾಗಿಡಿರಿ
ಮೊದಲಾಗಿ, ಐಶ್ವರ್ಯದ ಕುರಿತು ಯೇಸು ಕೊಟ್ಟ ಬುದ್ಧಿವಾದವನ್ನು ಪರಿಗಣಿಸಿರಿ. ಐಶ್ವರ್ಯದ ಬೆನ್ನಟ್ಟುವಿಕೆಗೆ ಜೀವನದಲ್ಲಿ ಪ್ರಥಮ ಸ್ಥಾನವನ್ನು ಕೊಡುವುದರ ವಿರುದ್ಧ ಬುದ್ಧಿವಾದವನ್ನು ಹೇಳಿದ ನಂತರ, ಒಂದು ಗಮನಾರ್ಹವಾದ ಹೇಳಿಕೆಯನ್ನು ಅವನು ಮಾಡಿದನು. ಅವನು ಹೇಳಿದ್ದು: “ಹೀಗಿರುವಲ್ಲಿ ನಿನ್ನ ಕಣ್ಣು ನೆಟ್ಟಗಿದ್ದರೆ [“ಸರಳವಾಗಿದ್ದರೆ,” NW] ನಿನ್ನ ದೇಹವೆಲ್ಲಾ ಬೆಳಕಾಗಿರುವದು.” (ಮತ್ತಾಯ 6:19-22) ಮೂಲಭೂತವಾಗಿ, ನಾವು ಕಟ್ಟಾಸೆಯಿಂದ ಐಶ್ವರ್ಯ, ಅಧಿಕಾರ, ಅಥವಾ ಜನರು ತಮಗಾಗಿ ಇಟ್ಟುಕೊಳ್ಳುವಂತಹ ಇನ್ನಿತರ ಯಾವುದೇ ಗುರಿಯನ್ನು ಬೆನ್ನಟ್ಟುವುದಾದರೆ, ಅತಿ ಪ್ರಾಮುಖ್ಯವುಳ್ಳ ವಿಷಯಗಳನ್ನು ನಾವು ಕಳೆದುಕೊಳ್ಳುವೆವು. ಏಕೆಂದರೆ, ಯೇಸು ಇನ್ನೊಂದು ಸಂದರ್ಭದಲ್ಲಿ ಹೇಳಿದಂತೆ, “ಒಬ್ಬನಿಗೆ ಎಷ್ಟು ಆಸ್ತಿಯಿದ್ದರೂ ಅದು ಅವನಿಗೆ ಜೀವಾಧಾರವಾಗುವದಿಲ್ಲ.” (ಲೂಕ 12:15) ದೇವರೊಂದಿಗಿನ ನಮ್ಮ ಸಂಬಂಧ, ಕುಟುಂಬದ ಹಿತಾಸಕ್ತಿಗಳು, ಮತ್ತು ಅದಕ್ಕೆ ಸಂಬಂಧಿಸಿದ ಇನ್ನಿತರ ವಿಷಯಗಳಂತಹ ನಿಜವಾಗಿಯೂ ಪ್ರಾಮುಖ್ಯವಾಗಿರುವ ವಿಷಯಗಳಿಗೆ ನಾವು ಪ್ರಥಮ ಸ್ಥಾನವನ್ನು ಕೊಡುವುದಾದರೆ, ಆಗ ನಮ್ಮ “ಕಣ್ಣು” “ಸರಳವಾಗಿ”ರುವುದು, ಅಂದರೆ ನಿರ್ಮಲವಾಗಿರುವುದು.
ಗಮನಿಸಿ, ಇಲ್ಲಿ ಯೇಸು ಸಂನ್ಯಾಸವನ್ನೋ ಅಥವಾ ಅತಿರೇಕ ಸ್ವಾರ್ಥತ್ಯಾಗವನ್ನೋ ಶಿಫಾರಸ್ಸುಮಾಡುತ್ತಿಲ್ಲ. ಸ್ವತಃ ಯೇಸುವೇ ಒಬ್ಬ ಸಂನ್ಯಾಸಿಯಾಗಿರಲಿಲ್ಲ. (ಮತ್ತಾಯ 11:19; ಯೋಹಾನ 2:1-11) ಆದರೆ ತಮ್ಮ ಜೀವನವು ಕೇವಲ ಐಶ್ವರ್ಯವನ್ನು ಶೇಖರಿಸಲು ಸಿಕ್ಕಿದಂಥ ಒಂದು ಅವಕಾಶವೆಂಬ ದೃಷ್ಟಿಕೋನವುಳ್ಳವರು ಜೀವವನ್ನು ಗಳಿಸಲು ತಪ್ಪಿಹೋಗುತ್ತಾರೆಂದು ಅವನು ಕಲಿಸಿದನು.
ತೀರ ಚಿಕ್ಕ ವಯಸ್ಸಿನಲ್ಲೇ ತುಂಬ ಐಶ್ವರ್ಯವಂತರಾದವರ ಕುರಿತು ತಿಳಿಸುತ್ತಾ, ಅಮೆರಿಕದ ಸಾನ್ ಫ್ರಾನ್‌ಸಿಸ್ಕೋದ ಒಬ್ಬ ಮನಶ್ಚಿಕಿತ್ಸಕರು ಹೇಳಿದ್ದೇನೆಂದರೆ, ಹಣ ಅವರ “ಒತ್ತಡ ಹಾಗೂ ಗಲಿಬಿಲಿಯ ಬೇರು ಆಗಿದೆ.” ಅವರು ಕೂಡಿಸಿ ಹೇಳಿದ್ದು, ಇಂತಹ ಜನರು “ಎರಡು ಅಥವಾ ಮೂರು ಮನೆಗಳನ್ನು, ಕಾರನ್ನು ಖರೀದಿಸುತ್ತಾರೆ, ವಸ್ತುಗಳಿಗಾಗಿ ಹಣವನ್ನು ಖರ್ಚುಮಾಡುತ್ತಾರೆ. ಮತ್ತು ಇದೆಲ್ಲವೂ ಅವರಿಗೆ ಬೇಕಾದದ್ದನ್ನು ಕೊಡದಿರುವಾಗ [ಅಂದರೆ ಅವರನ್ನು ಸಂತೋಷಗೊಳಿಸದಿರುವಾಗ] ಅವರು ಮನಗುಂದಿದವರಾಗುತ್ತಾರೆ. ತಮ್ಮ ಜೀವಿತದೊಂದಿಗೆ ಏನು ಮಾಡಬೇಕೆಂದು ಗೊತ್ತಿಲ್ಲದೆ, ಶೂನ್ಯಭಾವನೆಯುಳ್ಳವರೂ, ಅನಿಶ್ಚಿತರೂ ಆಗುತ್ತಾರೆ.” ಇದಕ್ಕೆ ವ್ಯತಿರಿಕ್ತವಾಗಿ, ಯೇಸುವಿನ ಸಲಹೆಗೆ ಕಿವಿಗೊಟ್ಟು ಭೌತಿಕವಾಗಿ ಒಂದು ಸರಳವಾದ ಜೀವನವನ್ನು ನಡೆಸಿ ಮತ್ತು ಆತ್ಮಿಕ ವಿಷಯಗಳಿಗಾಗಿ ಸಮಯವನ್ನು ಬದಿಗಿಡುವವರು ಸಂತೋಷವನ್ನು ಕಂಡುಹಿಡಿಯಲು ಹೆಚ್ಚಿನ ಸಾಧ್ಯತೆಗಳಿವೆ.
ಟಾಮ್, ಹವಾಯಿನಲ್ಲಿ ವಾಸಿಸುವ ಒಬ್ಬ ವಾಸ್ತುಶಿಲ್ಪಿಯಾಗಿದ್ದಾರೆ. ಪೆಸಿಫಿಕ್ ದ್ವೀಪಗಳಲ್ಲಿರುವ ಜನರಿಗೆ ಆರಾಧನೆಯ ಸ್ಥಳಗಳನ್ನು ಕಟ್ಟಿಕೊಡುವುದರಲ್ಲಿ ಸಹಾಯಮಾಡಲು ತಾವಾಗಿಯೇ ಮುಂದೆಬಂದರು. ಅಲ್ಲಿನ ಜನರು ಭೌತಿಕ ರೀತಿಯಲ್ಲಿ ಸಂಪದ್ಭರಿತರಾಗಿಲ್ಲ. ಆದರೆ ಈ ನಮ್ರ ಜನರಲ್ಲಿ ಟಾಮ್ ಏನನ್ನೋ ಗಮನಿಸಿದರು. ಅವರು ಹೇಳಿದ್ದು: “ಈ ದ್ವೀಪಗಳಲ್ಲಿರುವ ನನ್ನ ಕ್ರೈಸ್ತ ಸಹೋದರ ಸಹೋದರಿಯರು ನಿಜವಾಗಿಯೂ ಸಂತೋಷವುಳ್ಳವರಾಗಿದ್ದರು. ಸಂತೋಷದ ರಹಸ್ಯವು ಹಣ ಮತ್ತು ಸಂಪತ್ತಿನಲ್ಲಿ ಇಲ್ಲ ಎಂಬುದನ್ನು ಅವರನ್ನು ನೋಡಿದಾಗ ನನಗೆ ಸ್ಪಷ್ಟವಾಗಿ ಮನದಟ್ಟಾಯಿತು.” ಆ ದ್ವೀಪಗಳಲ್ಲಿ ತನ್ನೊಂದಿಗೆ ಕೆಲಸ ಮಾಡಿದ ಇತರ ಸ್ವಯಂಸೇವಕರು ಸಂತೃಪ್ತಿಯಿಂದಿರುವುದನ್ನೂ ಅವರು ಗಮನಿಸಿದರು. “ಅವರಿಗೆ ಮನಸ್ಸಿದ್ದಲ್ಲಿ ತುಂಬ ಹಣವನ್ನು ಮಾಡಬಹುದಿತ್ತು,” ಎಂದು ಟಾಮ್ ಹೇಳುತ್ತಾರೆ. “ಆದರೆ ಅವರು ಆತ್ಮಿಕ ವಿಷಯಗಳನ್ನು ಮೊದಲ ಸ್ಥಾನದಲ್ಲಿಡಲು ಮತ್ತು ಒಂದು ಸರಳವಾದ ಜೀವನ-ಶೈಲಿಯನ್ನು ಇಟ್ಟುಕೊಳ್ಳಲು ಆರಿಸಿಕೊಂಡಿದ್ದಾರೆ.” ಇವರೆಲ್ಲರ ಮಾದರಿಯಿಂದ ಪ್ರಭಾವಿತರಾಗಿ, ಟಾಮ್ ತಮ್ಮ ಕುಟುಂಬಕ್ಕೆ ಹಾಗೂ ಆತ್ಮಿಕ ಬೆನ್ನಟ್ಟುವಿಕೆಗಳಿಗೆ ಹೆಚ್ಚು ಸಮಯವನ್ನು ಅರ್ಪಿಸಲು ಶಕ್ತರಾಗುವಂತೆ ತಮ್ಮ ಜೀವನವನ್ನು ಸರಳೀಕರಿಸಿದರು. ಅವರು ತೆಗೆದುಕೊಂಡ ಈ ಹೆಜ್ಜೆಯನ್ನು ಅವರು ಕಿಂಚಿತ್ತೂ ವಿಷಾದಿಸುವುದಿಲ್ಲ.
ಸಂತೋಷ ಹಾಗೂ ಆತ್ಮಗೌರವ
ಸಂತೋಷಕ್ಕೆ, ವೈಯಕ್ತಿಕ ಘನತೆ ಅಥವಾ ಆತ್ಮಗೌರವವೆಂಬ ಭಾವನೆಯು ಅತ್ಯಾವಶ್ಯಕ. ಮಾನವ ಅಪರಿಪೂರ್ಣತೆ ಹಾಗೂ ಅದರಿಂದುಂಟಾಗುವ ದೌರ್ಬಲ್ಯಗಳಿಂದಾಗಿ, ಕೆಲವರಿಗೆ ತಮ್ಮ ಕುರಿತೇ ಒಂದು ನಕಾರಾತ್ಮಕ ಮನೋಭಾವವಿದೆ. ಮತ್ತು ಅನೇಕರಿಗೆ, ಇಂತಹ ಅನಿಸಿಕೆ ತಮ್ಮ ಬಾಲ್ಯಾವಸ್ಥೆಯಿಂದಲೇ ಇರುತ್ತದೆ. ಆಳವಾಗಿ ಬೇರೂರಿರುವ ಭಾವನೆಗಳನ್ನು ತೆಗೆದುಹಾಕುವುದು ಕಷ್ಟಕರವಾಗಿರಬಹುದು. ಆದರೆ ಹೀಗೆ ಮಾಡುವುದು ಅಸಾಧ್ಯವಾದದ್ದಲ್ಲ. ಇದಕ್ಕೆ ಪರಿಹಾರ ದೇವರ ವಾಕ್ಯವನ್ನು ಅನ್ವಯಿಸಿಕೊಳ್ಳುವುದರ ಮೇಲೆ ಅವಲಂಬಿಸಿದೆ.
ಸೃಷ್ಟಿಕರ್ತನಿಗೆ ನಮ್ಮ ಕುರಿತು ಏನು ಅನಿಸುತ್ತದೆ ಎಂಬುದನ್ನು ಬೈಬಲು ವಿವರಿಸುತ್ತದೆ. ನಮ್ಮ ಕುರಿತಾಗಿ ಯಾವನೇ ಮನುಷ್ಯನಿಗಿರುವ ಅಭಿಪ್ರಾಯಕ್ಕಿಂತಲೂ, ನಮ್ಮ ಸ್ವಂತ ಅಭಿಪ್ರಾಯಕ್ಕಿಂತಲೂ ದೇವರ ಅಭಿಪ್ರಾಯವೇ ಹೆಚ್ಚು ಪ್ರಾಮುಖ್ಯವಾದದ್ದಲ್ಲವೋ? ಪ್ರೀತಿಯ ಪ್ರತಿರೂಪವಾಗಿರುವ ದೇವರು, ನಮ್ಮೆಡೆಗೆ ಯಾವುದೇ ಪೂರ್ವಾಭಿಪ್ರಾಯ ಅಥವಾ ಹಗೆಯ ಭಾವನೆಯಿಲ್ಲದೆ ನೋಡುತ್ತಾನೆ. ಈಗಾಗಲೇ ನಾವೇನಾಗಿದ್ದೇವೆ, ಅಷ್ಟುಮಾತ್ರವಲ್ಲದೆ ಮುಂದೆ ನಾವೇನಾಗಸಾಧ್ಯವಿದೆ ಎಂಬುದನ್ನೂ ಆತನು ನೋಡುತ್ತಾನೆ. (1 ಸಮುವೇಲ 16:7; 1 ಯೋಹಾನ 4:8) ಸತ್ಯಾಂಶವೆಂದರೆ, ತನ್ನನ್ನು ಮೆಚ್ಚಿಸಲು ಬಯಸುವವರೆಲ್ಲರ ಕುಂದುಕೊರತೆಗಳೇನೇ ಇರಲಿ, ಆತನು ಅವರನ್ನು ಅಮೂಲ್ಯವಾಗಿ ಹೌದು, ಅತಿಪ್ರಿಯರೆಂದೆಣಿಸುತ್ತಾನೆ.—ದಾನಿಯೇಲ 9:23; ಹಗ್ಗಾಯ 2:7.
ಆದರೆ, ದೇವರು ನಮ್ಮ ದೌರ್ಬಲ್ಯಗಳನ್ನು ಮತ್ತು ನಾವು ಮಾಡುವ ಯಾವುದೇ ಪಾಪಗಳನ್ನು ಅಲಕ್ಷಿಸುತ್ತಾನೆ ಎಂಬುದು ಇದರರ್ಥವಲ್ಲ. ನಾವು ಸರಿಯಾದದ್ದನ್ನೇ ಮಾಡಲು ಪ್ರಯಾಸಪಡಬೇಕೆಂಬುದನ್ನು ಆತನು ನಮ್ಮಿಂದ ನಿರೀಕ್ಷಿಸುತ್ತಾನೆ ಮತ್ತು ನಾವು ಹಾಗೆ ಮಾಡುವಾಗ ನಮ್ಮನ್ನು ಬೆಂಬಲಿಸುತ್ತಾನೆ. (ಲೂಕ 13:24) ಆದರೂ ಬೈಬಲ್ ಹೇಳುತ್ತದೆ: “ತಂದೆಯು ಮಕ್ಕಳನ್ನು ಕನಿಕರಿಸುವಂತೆ ಯೆಹೋವನು ತನ್ನಲ್ಲಿ ಭಯಭಕ್ತಿಯುಳ್ಳವರನ್ನು ಕನಿಕರಿಸುತ್ತಾನೆ.” ಅದು ಕೂಡಿಸಿ ಹೇಳುವುದು: “ಕರ್ತನೇ, ಯಾಹುವೇ, ನೀನು ಪಾಪಗಳನ್ನು ಎಣಿಸುವದಾದರೆ ನಿನ್ನ ಮುಂದೆ ಯಾರು ನಿಂತಾರು? ನೀನು ಪಾಪವನ್ನು ಕ್ಷಮಿಸುವವನಾದ್ದರಿಂದ ಮನುಷ್ಯರ ಭಯಭಕ್ತಿಗೆ ನೀನೇ ಪಾತ್ರನು.”—ಕೀರ್ತನೆ 103:13; 130:3, 4.
ಆದುದರಿಂದ ದೇವರ ದೃಷ್ಟಿಕೋನದಿಂದ ನಿಮ್ಮನ್ನೇ ನೋಡಲು ಕಲಿತುಕೊಳ್ಳಿ. ದೇವರನ್ನು ಪ್ರೀತಿಸುವವರು—ತಮ್ಮನ್ನು ತಾವೇ ಯೋಗ್ಯವಿಲ್ಲದವರೆಂದು ಭಾವಿಸುವುದಾದರೂ ಆತನಿಗೆ ಅತಿಪ್ರಿಯರಾಗಿದ್ದಾರೆ ಮತ್ತು ಇಂಥವರಲ್ಲಿ ಆತನಿಗೆ ಭರವಸೆಯಿದೆ ಎಂಬ ಅರಿವು ಒಬ್ಬ ವ್ಯಕ್ತಿಯ ಸಂತೋಷವನ್ನು ಹೆಚ್ಚಿಸಲು ಹೆಚ್ಚಿನದ್ದನ್ನು ಮಾಡುವುದು.—1 ಯೋಹಾನ 3:19, 20.
ನಿರೀಕ್ಷೆ—ಸಂತೋಷಕ್ಕೆ ಅತ್ಯಾವಶ್ಯಕ
ಸಕಾರಾತ್ಮಕ ಮನಶಾಸ್ತ್ರ ಎಂಬ ಇತ್ತೀಚಿನ ಜನಪ್ರಿಯ ವಿಚಾರಭಾವಕ್ಕನುಸಾರ, ಸಕಾರಾತ್ಮಕ ಯೋಚನೆ ಹಾಗೂ ಒಬ್ಬನ ವೈಯಕ್ತಿಕ ಸಾಮರ್ಥ್ಯಗಳ ಮೇಲೆ ಕೇಂದ್ರೀಕರಿಸುವ ಮೂಲಕ ಬೆಳೆಸಿಕೊಳ್ಳಲ್ಪಡುವ ಆಶಾವಾದವು ಸಂತೋಷಕ್ಕೆ ನಡೆಸಬಲ್ಲದು. ಜೀವನದ ಕುರಿತು ಹಾಗೂ ಭವಿಷ್ಯದ ಕುರಿತಾದ ಒಂದು ಆಶಾವಾದಿ ನೋಟವು ಸಂತೋಷವನ್ನು ಹೆಚ್ಚಿಸುತ್ತದೆ ಎಂಬುದನ್ನು ಹೆಚ್ಚಿನವರು ಒಪ್ಪಿಕೊಳ್ಳುವರು. ಹೀಗಿದ್ದರೂ, ಇಂತಹ ಆಶಾವಾದಿ ನೋಟವು ನಿಜಾಂಶಗಳ ಮೇಲೆ ಆಧರಿಸಿರಬೇಕೇ ಹೊರತು, ನೆರವೇರಲು ಅಸಾಧ್ಯವಾದಂತಹ ಬರಿಯ ಹಾರೈಕೆಗಳ ಮೇಲಲ್ಲ. ಅಲ್ಲದೆ, ಜನರಿಂದ ಸಂತೋಷವನ್ನು ಕಸಿದುಕೊಳ್ಳುವಂತಹ ಯುದ್ಧ, ಹಸಿವೆ, ರೋಗ, ಮಾಲಿನ್ಯ, ವೃದ್ಧಾಪ್ಯ, ಅನಾರೋಗ್ಯ ಇಲ್ಲವೆ ಮರಣವನ್ನು ಎಷ್ಟೇ ಆಶಾವಾದವು ಅಥವಾ ಸಕಾರಾತ್ಮಕ ಆಲೋಚನೆಯು ತೆಗೆದುಹಾಕಲು ಸಾಧ್ಯವಿಲ್ಲ. ಆದರೂ, ಆಶಾವಾದಕ್ಕೆ ತನ್ನದೇ ಆದ ಸ್ಥಾನವಿದೆ.
ಆಸಕ್ತಿಕರವಾಗಿ, ಬೈಬಲ್ ಆಶಾವಾದವೆಂಬ ಶಬ್ದವನ್ನು ಉಪಯೋಗಿಸುವುದಿಲ್ಲ. ಅದು ನಿರೀಕ್ಷೆ ಎಂಬ ಇನ್ನೂ ಬಲವಾದ ಶಬ್ದವನ್ನು ಉಪಯೋಗಿಸುತ್ತದೆ. ಬೈಬಲಿನಲ್ಲಿ ಉಪಯೋಗಿಸಲ್ಪಟ್ಟಿರುವ “ನಿರೀಕ್ಷೆ” ಎಂಬ ಪದವನ್ನು, “ಯೋಗ್ಯವಾದ ಮತ್ತು ನಿಶ್ಚಿತವಾದ ನಿರೀಕ್ಷಣೆ, . . . ಒಳ್ಳೇದಾಗುವುದೆಂಬುದರ ಸಂತೋಷಭರಿತ ಎದುರುನೋಡುವಿಕೆಯಾಗಿದೆ” ಎಂದು ವೈನ್ಸ್ ಕಂಪ್ಲೀಟ್ ಎಕ್ಸ್‌ಪಾಸಿಟರಿ ಡಿಕ್ಷನರಿ ವಿವರಿಸುತ್ತದೆ. ಬೈಬಲ್‌ನಲ್ಲಿ ಉಪಯೋಗಿಸಲ್ಪಟ್ಟಿರುವಂತೆ ನಿರೀಕ್ಷೆಯು, ಒಂದು ಪರಿಸ್ಥಿತಿಯ ಕುರಿತಾದ ಆಶಾವಾದಿ ನೋಟಕ್ಕಿಂತ ಹೆಚ್ಚನ್ನು ಒಳಗೂಡುತ್ತದೆ. ಒಬ್ಬನ ನಿರೀಕ್ಷೆಯು ಯಾವುದರ ಮೇಲೆ ಸ್ಥಿರವಾಗಿದೆಯೋ ಅದಕ್ಕೂ ಅನ್ವಯಿಸುತ್ತದೆ. (ಎಫೆಸ 4:5; 1 ಪೇತ್ರ 1:3) ಉದಾಹರಣೆಗೆ, ಹಿಂದಿನ ಪ್ಯಾರಗ್ರಾಫ್‌ನಲ್ಲಿ ತಿಳಿಸಲ್ಪಟ್ಟಿರುವ ಅಪೇಕ್ಷಣೀಯವಲ್ಲದ ವಿಷಯಗಳು ಶೀಘ್ರದಲ್ಲಿ ಇಲ್ಲದೆ ಹೋಗುವವು ಎಂಬುದು ಕ್ರೈಸ್ತ ನಿರೀಕ್ಷೆಯಾಗಿದೆ. (ಕೀರ್ತನೆ 37:9-11, 29) ಆದರೆ ಇದರಲ್ಲಿ ಇನ್ನೂ ಹೆಚ್ಚಿನದ್ದು ಒಳಗೂಡಿದೆ.
ನಂಬಿಗಸ್ತ ಮಾನವರು ಪ್ರಮೋದವನ ಭೂಮಿಯಲ್ಲಿ ಪರಿಪೂರ್ಣ ಜೀವವನ್ನು ಪಡೆದುಕೊಳ್ಳುವ ಸಮಯಕ್ಕಾಗಿ ಕ್ರೈಸ್ತರು ಮುನ್ನೋಡುತ್ತಿದ್ದಾರೆ. (ಲೂಕ 23:42, 43) ಆ ನಿರೀಕ್ಷೆಯ ಕುರಿತು ಸವಿವರವಾಗಿ ತಿಳಿಸುತ್ತಾ, ಪ್ರಕಟನೆ 21:3, 4 ಹೇಳುವುದು: “ಇಗೋ, ದೇವರ ನಿವಾಸವು ಮನುಷ್ಯರಲ್ಲಿ ಅದೆ; ಆತನು ಅವರೊಡನೆ ವಾಸಮಾಡುವನು, ಅವರು ಆತನಿಗೆ ಪ್ರಜೆಗಳಾಗಿರುವರು; . . . ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ; ಮೊದಲಿದ್ದದ್ದೆಲ್ಲಾ ಇಲ್ಲದೆ ಹೋಯಿತು.”
ಇಂತಹ ಒಂದು ಭವಿಷ್ಯತ್ತನ್ನು ಪಡೆದುಕೊಳ್ಳಲು ಎದುರುನೋಡುವ ಯಾವನೇ ಒಬ್ಬ ವ್ಯಕ್ತಿ, ಅವನ ಸದ್ಯದ ಪರಿಸ್ಥಿತಿಗಳು ಅಷ್ಟೇನೂ ಚೆನ್ನಾಗಿರದಿದ್ದರೂ ಸಂತೋಷದಿಂದಿರಲು ಎಲ್ಲ ಕಾರಣಗಳಿವೆ. (ಯಾಕೋಬ 1:12) ಆದುದರಿಂದ ಬೈಬಲನ್ನು ತನಿಖೆ ಮಾಡಿ, ಇದನ್ನು ಏಕೆ ನಂಬಬೇಕೆಂಬುದನ್ನು ನೀವೇಕೆ ಕಂಡುಹಿಡಿಯಬಾರದು? ದಿನಾಲು ಬೈಬಲನ್ನು ಓದುವುದರಲ್ಲಿ ಸಮಯವನ್ನು ಕಳೆಯುವುದರ ಮೂಲಕ ನಿಮ್ಮ ನಿರೀಕ್ಷೆಯನ್ನು ಬಲಪಡಿಸಿರಿ. ಹೀಗೆ ಮಾಡುವುದು ನಿಮ್ಮ ಆತ್ಮಿಕತೆಯನ್ನು ಸಮೃದ್ಧಗೊಳಿಸುವುದು, ಸಂತೋಷವನ್ನು ಕಸಿದುಕೊಳ್ಳುವಂತಹ ವಿಷಯಗಳಿಂದ ಜನರು ದೂರವಿರುವಂತೆ ಸಹಾಯ ಮಾಡುವುದು ಮತ್ತು ನಿಮ್ಮಲ್ಲಿ ಸಂತೃಪ್ತ ಭಾವನೆಯನ್ನು ಬೆಳೆಸಲು ನೆರವು ನೀಡುವುದು. ಹೌದು, ದೇವರ ಚಿತ್ತವನ್ನು ಮಾಡುವುದೇ ನಿಜವಾದ ಸಂತೋಷಕ್ಕೆ ನಡೆಸುವ ಅಂತಿಮ ರಹಸ್ಯವಾಗಿದೆ. (ಪ್ರಸಂಗಿ 12:13) ಬೈಬಲಿನ ಆಜ್ಞೆಗಳಿಗೆ ಅಧೀನರಾಗಿ ನಡೆದುಕೊಳ್ಳುವ ಹಾಗೆ ಕಟ್ಟಲ್ಪಟ್ಟಿರುವ ಜೀವನ, ಸಂತೋಷವುಳ್ಳ ಜೀವನವಾಗಿದೆ. ಏಕೆಂದರೆ ಯೇಸು ಹೇಳಿದ್ದು: “ದೇವರ ವಾಕ್ಯವನ್ನು ಕೇಳಿ ಅದಕ್ಕೆ ಸರಿಯಾಗಿ ನಡಕೊಳ್ಳುವವರೇ ಧನ್ಯರು [“ಸಂತೋಷಿತರು,” NW].”—ಲೂಕ 11:28.
[ಪಾದಟಿಪ್ಪಣಿ]
^ ಪ್ಯಾರ. 2 ಬೌದ್ಧ ಮತದವನಿಗೆ ದೇವರಲ್ಲಿ ನಂಬಿಕೆನ್ನಿಡುವುದು ಅವಶ್ಯಕವಾದದ್ದೇನಲ್ಲ.
[ಪುಟ 5ರಲ್ಲಿರುವ ಚಿತ್ರಗಳು]
ಸಂತೋಷವು ಐಶ್ವರ್ಯವನ್ನು ಶೇಖರಿಸುವುದರಿಂದಲೋ, ತಮ್ಮನ್ನು ತಾವೇ ಪ್ರತ್ಯೇಕಿಸಿಕೊಳ್ಳುವುದರಿಂದಲೋ ಅಥವಾ ಮಾನವನ ಸೀಮಿತ ಜ್ಞಾನದ ಮೇಲೆ ಭರವಸೆಯಿಡುವುದರಿಂದಲೋ ಸಿಗುವುದಿಲ್ಲ
[ಪುಟ 6ರಲ್ಲಿರುವ ಚಿತ್ರ]
ದೇವರ ವಾಕ್ಯಕ್ಕೆ ವಿಧೇಯತೆ ತೋರಿಸುವುದರ ಮೇಲೆ ಆಧರಿಸಿರುವ ಜೀವನವು ಸಂತೋಷವುಳ್ಳ ಜೀವನವಾಗಿದೆ
[ಪುಟ 7ರಲ್ಲಿರುವ ಚಿತ್ರ]
ಕ್ರೈಸ್ತ ನಿರೀಕ್ಷೆಯು ಒಬ್ಬ ವ್ಯಕ್ತಿಯನ್ನು ಸಂತೋಷಗೊಳಿಸುತ್ತದೆ